ಶುಕ್ರವಾರ, ಸೆಪ್ಟೆಂಬರ್ 20, 2013

ಮದರ್ ತೆರೇಸಾ

ಮದರ್ ತೆರೇಸಾ ಅವರು ಹುಟ್ಟಿದ ದಿನಾಂಕ ತಿಳಿಯದು. ಆದರೆ ಮ್ಯಾಸಿಡೋನಿಯಾದ ಸ್ಕೊಪಿಯೆ ಊರಿನ ಚರ್ಚಿನಲ್ಲಿ ಅವರು ಕ್ರಿಸ್ತದೀಕ್ಷೆ ಪಡೆದ ಬಗ್ಗೆ ಉಲ್ಲೇಖವಿದ್ದು ಅದು ೧೯೧೦ ಆಗಸ್ಟ್ ೨೭ ಎಂದು ಹೇಳುತ್ತದೆ. ಹೆಚ್ಚಿನ ಜನ ಇದೇ ಅವರ ಜನ್ಮದಿನ ಎಂದು ತಿಳಿದಿದ್ದಾರೆ. ಆಗ ಅವರ ಹೆಸರು ಆಗ್ನೆಸ್ ಗೊನ್ಸಾ ಬೊಯಾಷಿಯು.
ಇಂಡಿಯಾ ದೇಶಕ್ಕೆ ಬಂದ ಅವರು ಹದಿನೇಳು ವರ್ಷಗಳ ಕಾಲ ಶಿಕ್ಷಕಿಯಾಗಿದ್ದರು. ೧೯೪೬ರ ಒಂದು ದಿನ ಬಡವರ ಮತ್ತು ರೋಗಿಗಳ ಹಿತ ಕಾಯುವಂತೆ ಅವರ ಅಂತರಾತ್ಮಕ್ಕೆ ಪ್ರೇರಣೆಯಾಯಿತು. ತಮ್ಮ ಒಳಹೃದಯದ ಕರೆಗೆ ಓಗೊಟ್ಟ ಅವರು ಶಿಕ್ಷಕ ವೃತ್ತಿಯನ್ನು ತೊರೆದು ತಮ್ಮದೇ ಒಂದು ಶುಶ್ರೂಷಾ ಕೇಂದ್ರವನ್ನು ಕಟ್ಟಿ ಕುರುಡರ, ಮುದುಕರ, ಅಂಗಹೀನರ, ಕೈಲಾಗದವರ ಮತ್ತು ಕುಷ್ಟರೋಗಿಗಳ ಸೇವೆಗೆಂದು ನಡುಗಟ್ಟಿ ನಿಂತರು. ಇವರ ಸೇವೆಯನ್ನು ಕಂಡು ೧೯೬೮ರಲ್ಲಿ ರೋಮ್ ನಗರವು ಕರೆದು ಸನ್ಮಾನಿಸಿತು. ೧೯೭೯ರಲ್ಲಿ ಪ್ರಖ್ಯಾತ ನೊಬೆಲ್ ಪ್ರಶಸ್ತಿಗೂ ಇವರು ಭಾಜನರಾದರು.

ಬಾಲ್ಯ
ರಿಪಬ್ಲಿಕ್ ಆಫ್ ಮ್ಯಾಸಿಡೋನಿಯಾದ ರಾಜಧಾನಿ ಸ್ಕೊಪಿಯೊ ಎಂಬಲ್ಲಿ ಜನಿಸಿದ ಇವರಿಗೆ ೧೯೧೦ರ ಆಗಸ್ಟ್ ೨೭ರಂದು ಕ್ರಿಸ್ತದೀಕ್ಷೆ ನೀಡಿ ಆಗ್ನೆಸ್ ಗೊನ್ಸಾ ಬೊಯಾಶಿಯು ಎಂದು ಹೆಸರಿಟ್ಟರು. ಅವರ ತಾಯ್ತಂದೆಯರು ಆಲ್ಬೇನಿಯನ್ ಜನಾಂಗದವರಾಗಿದ್ದು ತಂದೆಯು ಮನೆ ನಿರ್ಮಾಣ, ಔಷಧ ಮತ್ತು ಇತರ ಸರಕುಗಳ ವ್ಯಾಪಾರಿಯೂ ಆಗಿದ್ದರು. ಅವರು ಸ್ಥಳೀಯ ಚರ್ಚಿನ ಉತ್ಸುಕ ಸದಸ್ಯರಾಗಿದ್ದರಲ್ಲದೆ ಆಲ್ಬೇನಿಯದ ಸ್ವಾತಂತ್ರ್ಯಕ್ಕಾಗಿ ದನಿಯೆತ್ತಿದವರಲ್ಲಿ ಗುರುತಿಸಿಕೊಂಡಿದ್ದರು.
೧೯೧೯ರಲ್ಲಿ ಆಗ್ನೆಸರು ತಮ್ಮ ಎಂಟನೇ ವಯಸ್ಸಿನಲ್ಲಿದ್ದಾಗ ತಂದೆಯವರು ಇದ್ದಕ್ಕಿದ್ದಂತೆ ನಿಗೂಢ ರೀತಿಯಲ್ಲಿ ತೀರಿಕೊಂಡರು. ಆನಂತರದ ದಿನಗಳಲ್ಲಿ ಆಗ್ನೆಸರು ತಮ್ಮ ತಾಯಿಯೊಂದಿಗೆ ಅತೀವ ಒಡನಾಟ ಬೆಳೆಸಿಕೊಂಡು ಚರ್ಚಿನ ಕಾರ್ಯಗಳಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡರಲ್ಲದೆ ಸಹನೆ ಅನುಕಂಪಗಳನ್ನು ರೂಢಿಸಿಕೊಂಡರು.
ಅಷ್ಟೇನೂ ಶ್ರೀಮಂತರಲ್ಲದಿದ್ದರೂ ಅವರ ತಾಯಿಯು ಊರಿನ ಬಡಬಗ್ಗರಿಗೆ ಊಟ ಹಾಕುತ್ತಿದ್ದರು. "ಮಗಳೇ ಒಂದೇ ತುತ್ತನ್ನಾದರೂ ಎಲ್ಲರೊಂದಿಗೆ ಹಂಚಿಕೊಂಡು ತಿನ್ನು" ಎಂದು ಅವರು ಹೇಳುತ್ತಿದ್ದರು.

ದೈವಕರೆ
ಆಗ್ನೆಸ್ ಶಿಕ್ಷಣ ಮೊದಲು ಕಾನ್ವೆಂಟ್ ಶಾಲೆಯಲ್ಲೂ ಆಮೇಲೆ ಸರ್ಕಾರೀ ಶಾಲೆಯಲ್ಲೂ ನಡೆಯಿತು. ಒಳ್ಳೆ ಕಂಠವಿದ್ದ ಆಕೆ ಸ್ಥಳೀಯ ಗಾನವೃಂದದಲ್ಲಿ ಸಕ್ರಿಯಳಾಗಿದ್ದಳು. ಸ್ಕೊಪಿಯೆ ಊರಿನವರು ವರ್ಷಕ್ಕೊಮ್ಮೆ ಸಮೀಪದ ಬೆಟ್ಟಕ್ಕೆ ಧಾರ್ಮಿಕ ಯಾತ್ರೆ ನಡೆಸುತ್ತಿದ್ದರು. ೧೨ನೇ ವಯಸ್ಸಿನಲ್ಲಿ ಇಂಥ ಒಂದು ಯಾತ್ರೆಯಲ್ಲಿ ಪಾಲ್ಗೊಂಡ ಆಗ್ನೆಸಳಿಗೆ ದೇವರು ತನ್ನ ಸೇವೆಗೆ ಕರೆಯುತ್ತಿರುವಂತೆ ಭಾಸವಾಯಿತು. ಆರು ವರ್ಷಗಳಾದ ಮೇಲೆ ಅಂದರೆ ೧೯೨೮ರಲ್ಲಿ ಆಕೆ ತಾನು ಸಂನ್ಯಾಸಿನಿಯಾಗಲು ನಿರ್ಧರಿಸಿ ಅಯರ್ಲೆಂಡಿಗೆ ತೆರಳಿ ಲೊರೆಟೊ ಕನ್ಯಾಮಠ ಸೇರಿದರುಅಲ್ಲಿ ಆಕೆಗೆ ಸಿಸ್ಟರ್ ಮೇರಿ ತೆರೇಸಾ ಎಂದು ಹೆಸರಿಡಲಾಯಿತು. ಅಲ್ಲಿಂದಾಚೆಗೆ ಅವರು ತಮ್ಮ ತಾಯಿಯನ್ನಾಗಲೀ ಸಹೋದರಿಯನ್ನಾಗಲೀ ಮತ್ತೆ ಹಿಂತಿರುಗಿ ನೋಡಲೇ ಇಲ್ಲ
ಡಬ್ಲಿನ್ ನಗರದಲ್ಲಿ ಒಂದು ವರ್ಷದ ತರಬೇತಿಯ ನಂತರ ಅಕ್ಕ ತೆರೇಸಾ ಅವರು ನಮ್ಮ ದೇಶದ ದಾರ್ಜಿಲಿಂಗಿಗೆ ಬಂದು ೧೯೩೧ರ ಮೇ ತಿಂಗಳಲ್ಲಿ ಸಂನ್ಯಾಸವ್ರತದ ವಚನ ಸ್ವೀಕರಿಸಿದರು. ಅಲ್ಲಿಂದ ಆಕೆಯನ್ನು ಕಲಕತ್ತೆಗೆ ಕಳಿಸಲಾಯಿತು ಹಾಗೂ ಅಲ್ಲಿನ ಬಡ ಹೆಣ್ಣುಮಕ್ಕಳ ಸಂತ ಮೇರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯನ್ನಾಗಿ ನೇಮಿಸಲಾಯಿತು. ಬಂಗಾಳಿಯನ್ನು ಸುಲಲಿತವಾಗಿ ಮಾತನಾಡಲು ಕಲಿತ ಅಕ್ಕ ತೆರೇಸಾ ಅವರು ಭೂರಚನೆ ಮತ್ತು ಇತಿಹಾಸವನ್ನು ಬೋಧಿಸತೊಡಗಿದರು. ೧೯೩೭ರ ಮೇ ೨೪ರಂದು ಆಕೆ ಸಂಪೂರ್ಣ ಸಂನ್ಯಾಸತ್ವದ ದೀಕ್ಷೆ ಪಡೆದು ಬಡತನ, ವಿನಯ ಮತ್ತು ವಿಧೇಯತೆಯ ಬದುಕಿಗೆ ತಮ್ಮನ್ನು ಅರ್ಪಿಸಿಕೊಂಡರು. ಅಲ್ಲಿಂದಾಚೆಗೆ ಅವರನ್ನುಮದರ್ ತೆರೇಸಾಎಂದು ಕರೆಯಲಾರಂಭವಾಯಿತು.
೧೯೪೪ರಲ್ಲಿ ಆಕೆ ಅದೇ ಶಾಲೆಯ ಪ್ರಿನ್ಸಿಪಾಲರಾದರು. ಅವರ ಆದರ್ಶ ಪರಿಪಾಲನೆಯಲ್ಲಿ ಶಾಲೆಯ ಮಕ್ಕಳು ಸಮಾಜದಲ್ಲಿ ಸದೃಢರಾದರು. ಆದರೆ ಕಲ್ಕತ್ತೆಯ ಹಾದಿ ಬೀದಿಗಳ ಬದಿಯಲ್ಲಿ ಸೂರಿಲ್ಲದೆ ಬದುಕುತ್ತಿದ್ದ ನಿರ್ಗತಿಕರ, ವೃದ್ಧರ, ರೋಗಿಗಳ ಪಾಡು ತೆರೇಸಾ ಅವರ ಹೃದಯವನ್ನು ಕಲಕುತ್ತಿತ್ತು. ಸುಮಾರು ೧೯೪೮ರಲ್ಲಿ ಕಲ್ಕತ್ತೆಯ ಆಸ್ಪತ್ರೆಯೊಂದರ ಮುಂದೆ ಸಾವಿನಂಚಿನಲ್ಲಿದ್ದ ಅನಾಥ ಹೆಂಗಸನ್ನು ಕಂಡರು. ಹೆಂಗಸಿಗೆ ಸಾಂತ್ವನ ಹೇಳುತ್ತಾ ಶುಶ್ರೂಷೆ ಮಾಡುತ್ತಿದ್ದಂತೆ ಅವಳು ಕೊನೆಯುಸಿರೆಳೆದಳು. ಯಾವುದೇ ಒಂದು ಮನುಷ್ಯಜೀವ, ಸಾವಿನ ಸಂದರ್ಭದಲ್ಲಾದರೂ ಶಾಂತಮನಸ್ಕರಾಗಿ ಗೌರವಯುತವಾಗಿ ಸತ್ತು ಸಂಸ್ಕಾರ ಪಡೆಯದಿದ್ದಲ್ಲಿ ಮನುಷ್ಯಜೀವಕ್ಕೆ ಬೆಲೆಯಾದರೂ ಏನು ಎಂಬ ಪ್ರಶ್ನೆ ಬಹುಕಾಲ ಅವರನ್ನು ಕಾಡಿತು.

ಮತ್ತೊಂದು ಕರೆ
ಹೀಗಿರುವಲ್ಲಿ ೧೯೪೬ರ ಸೆಪ್ಟೆಂಬರ್ ೧೦ರಂದು ಮದರ್ ತೆರೇಸಾ ಅವರನ್ನು ದೇವರು ಮತ್ತೊಮ್ಮೆ ಕರೆದರು. ಕರೆಯು ಆಕೆಯ ಬದುಕಿನ ದಿಕ್ಕನ್ನೇ ಬದಲಿಸಿಬಿಟ್ಟಿತು. ಆಕೆ ಕಲಕತ್ತೆಯಿಂದ ಹಿಮಾಲಯದ ಬುಡಕ್ಕೆ ರೈಲಿನಲ್ಲಿ ಪಯಣಿಸುತ್ತಿರುವಾಗ್ಗೆ ಯೇಸುಕ್ರಿಸ್ತನು ಆಕೆಯೊಂದಿಗೆ ಪಿಸುದನಿಯಲ್ಲಿ ಶಾಲೆಯ ಕೆಲಸವನ್ನು ತೊರೆದು ಕೊಳೆಗೇರಿಗಳಲ್ಲಿನ ಕಡುಬಡವರ ಹಾಗೂ ರೋಗಪೀಡಿತರ ಸೇವೆ ಮಾಡು ಎಂದು ಹೇಳಿದಂತಾಯಿತು. ಯೇಸು ಆಕೆಗೆನನಗೆ ಗೊತ್ತು ನಿನ್ನ ಕೈಲಾಗದು ಎಂದು...ನೀನು ಅಶಕ್ತಳು...ಆದರೆ ನಿನ್ನನ್ನು ನನ್ನ ಕರಣವಾಗಿ ಬಳಸುತ್ತೇನೆ, ನಿರಾಕರಿಸುವೆಯಾ?’ ಎಂದುದು ಕೇಳಿಸಿತು. ಅದನ್ನು ಮದರ್ ತೆರೇಸಾ ಅವರು ಕಾಲ್ ವಿತಿನ್   ಕಾಲ್ಎಂದು ಭಾವಿಸಿದ್ದಾರೆ.
ಅವರು ವಿಧೇಯತೆಯ ಸಂಕಲ್ಪ ತೊಟ್ಟವರಾದ್ದರಿಂದ ತಮ್ಮ ಕಾನ್ವೆಂಟನ್ನು ಅನುಮತಿಯಿಲ್ಲದೆ ಬಿಡುವುದು ಸಾಧ್ಯವಿರಲಿಲ್ಲ. ಹಾಗೂ ಹೀಗೂ ಸುಮಾರು ಒಂದೂವರೆ ವರ್ಷಗಳ ತೊಳಲಾಟದ ನಂತರ ೧೯೪೮ರ ಜನವರಿಯಲ್ಲಿ ಸ್ಥಳೀಯ ಆರ್ಚ್ಬಿಷಪರು ಅವರಿಗೆ ಹೊಸ ದಾರಿಯನ್ನು ಕಂಡುಕೊಳ್ಳಲು ಅನುಮತಿ ನೀಡಿದರು. ಅದೇ ವರ್ಷದ ಆಗಸ್ಟ್ ೧೭ರಂದು ಅವರು ನೀಲಿಯಂಚಿನ ಬಿಳಿ ಸೀರೆಯುಟ್ಟು ತಮ್ಮ ಉಳಿದ ಬದುಕನ್ನು ಜನರ ನಡುವೆ ಕಳೆಯುವ ಆಶಯದೊಂದಿಗೆ ಬೀದಿಗಿಳಿದರು. ಆರು ತಿಂಗಳ ಕಾಲ ವೈದ್ಯಕೀಯದ ಪ್ರಾಥಮಿಕ ಶಿಕ್ಷಣ ಪಡೆದು ಕಲಕತ್ತೆಯ ಕೊಳಗೇರಿಗಳತ್ತ ಸಾಗಿಪರಿತ್ಯಕ್ತರ, ಅನಾಥರ, ನಿರ್ಗತಿಕರಕೈಹಿಡಿದೆತ್ತಲು ಮುಂದಾದರು.

ಮಿಶನರೀಸ್ ಆಫ್ ಚಾರಿಟಿ
ಹೀಗೆ ಪ್ರಾರಂಭವಾದುದೇ ಮಿಶನರೀಸ್ ಆಫ್ ಚಾರಿಟಿಎಂಬ ಸೇವಾಸಂಸ್ಥೆ. ತಮ್ಮ ಯೋಜನೆಯ ಅಡಿಪಾಯದ ಕೆಲಸಗಳನ್ನು ದೃಢಚಿತ್ತದಿಂದ ಕೈಗೊಂಡ ಅವರು ದಿನದಿಂದ ದಿನಕ್ಕೆ ದಾಪುಗಾಲು ಹಾಕುತ್ತಾ ಸಾಗಿದರು. ತಬ್ಬಲಿ ಮಕ್ಕಳಿಗಾಗಿ ಒಂದು ಬಯಲುಶಾಲೆಯನ್ನು ತೆರೆದರು. ಸಾಯುವ ಸ್ಥಿತಿಯಲ್ಲಿರುವ ನಿರ್ಗತಿಕರನ್ನು ಉಪಚರಿಸಲು ಅನುವಾಗುವಂತೆ ಒಂದು ಪಾಳುಬಿದ್ದ ಕಟ್ಟಡವನ್ನು ಸರ್ಕಾರದಿಂದ ಕೇಳಿ ಪಡೆದರು. ಕ್ಷಾಮ ಮತ್ತು ದೇಶವಿಭಜನೆಯ ಕಾರಣದಿಂದ ನಿರಾಶ್ರಿತರ ಮತ್ತು ನಿರ್ಗತಿಕರ ಸಂಖ್ಯೆ ಏರುತ್ತಲೇ ಇತ್ತಲ್ಲದೆ ಹೊಸ ಸರ್ಕಾರಕ್ಕೆ ಇವೆಲ್ಲ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಕಾರಣದಿಂದ ತೆರೇಸಾ ಅವರ ಯೋಜನೆಗಳು ಸುಸೂತ್ರವಾಗಿ ಸಾಗಿದವು. ಹೀಗೆ ೧೯೫೨ರಲ್ಲಿ " ದಿ ಕಾಳಿಘಾಟ್ಹೋಮ್ಫಾರ್ಪ್ಯೂರ್ಹಾರ್ಟ್ಅಥವಾ ನಿರ್ಮಲ ಹೃದಯ ನಿವಾಸ" ತಲೆಯೆತ್ತಿ ಮರಣಶಯ್ಯೆಯಲ್ಲಿದ್ದ ನಿರ್ಗತಿಕರಿಗೆ ಮನೆಯಾಯಿತು. ಅವರು ಮುದುಕರೋ ಕುಷ್ಟರೋ ಕುರುಡರೋ ಅನಾಥರೋ ಎಲ್ಲರಲ್ಲೂ ತೆರೇಸಾರವರು ಯೇಸುಕ್ರಿಸ್ತನನ್ನೇ ಕಾಣುತ್ತಿದ್ದರು. ಅವರಿಗೆ ಮದರ್ ತೆರೇಸಾ ತೋರುತ್ತಿದ್ದ ನಿಷ್ಕಾಮ ಕಾಳಜಿ ಎಂದೂ ಕುಗ್ಗಲಿಲ್ಲ.
ನಿರ್ಮಲ ಹೃದಯ ನಿವಾಸಕ್ಕೆ ಬಂದವರಿಗೆ ಸೂಕ್ತ ವೈದ್ಯಕೀಯ ಸೇವೆಗಳನ್ನು ನೀಡಿ ಅವರವರ ಧರ್ಮದ ನಂಬಿಕೆಯ ಅನುಸಾರವೇ ಘನತೆಯಿಂದ ಸಾಯುವ ಅವಕಾಶವನ್ನು ನೀಡುತ್ತಿದ್ದರು.; ಮುಸ್ಲಿಮರಿಗೆ ಕುರಾನ್ಅನ್ನು ಪಠಿಸುವ ಅವಕಾಶವಿತ್ತು; ಹಿಂದೂಗಳಿಗೆ ಪವಿತ್ರ ಗಂಗಾಜಲವನ್ನು ನೀಡಲಾಗುತ್ತಿತ್ತು; ಇರುವಾಗ ಯಾರಿಗೂ ಬೇಡದವರಾಗಿ ಪ್ರಾಣಿಗಳಂತೆ ಬದುಕಿ, ಸಾಯುವಾಗ ಎಲ್ಲರಿಗೂ ಬೇಕಾದವರೂ, ಪ್ರೀತಿ ಪಾತ್ರರೂ ಆಗಿ ದೇವತೆಗಳಂತೆ ಸಾವನ್ನಪ್ಪುವಂಥ "ಗೌರವಾನ್ವಿತ ಸಾವು" ಪಡೆಯುವ ಭಾಗ್ಯಕ್ಕಾಗಿ ಜನ ಬಲು ಆರ್ದ್ರರಾಗಿದ್ದರು.
"ಹೊಟ್ಟೆಗೆ ಬಟ್ಟೆಗೆ ಇಲ್ಲದವರು, ಸೂರಿಲ್ಲದವರು, ಅಂಗವಿಕಲರು, ಕುರುಡರುಕುಷ್ಠರೋಗಿಗಳು, ಸಮಾಜಕ್ಕೆ ಬೇಡವಾದವರು, ಪ್ರೀತಿ ವಂಚಿತರು, ಜನತೆಯ ಆದರ-ಪೋಷಣೆ ಇಲ್ಲದೆ ಸಮಾಜದಲ್ಲಿ ಉಪೇಕ್ಷೆಗೆ ಈಡಾದವರು, ಸಮಾಜಕ್ಕೆ ಹೊರೆಯೆನಿಸಿ ಎಲ್ಲರಿಂದ ಪರಿತ್ಯಕ್ತರಾದವರು-ಇವರೆಲ್ಲರ ಸೇವೆ ಮಾಡುವುದೇ ಮಿಷನರಿಯ ಮೂಲ ಧ್ಯೇಯ" ಎಂದು ಮದರ್ ತೆರೇಸಾ ಅವರು ಒಂದೆಡೆ ಹೇಳಿಕೊಂಡಿದ್ದಾರೆ.
ಅವರ ಸೇವಾಕಾರ್ಯವು ಬಹುಬೇಗನೇ ಜನಮನ್ನಣೆ ಗಳಿಸಿತು. ೧೯೫೦ರಲ್ಲಿ ವ್ಯಾಟಿಕನ್ ಮಹಾಸಭೆಯು ತೆರೇಸಾ ಅವರ ಹೊಸ ಆಶ್ರಮವಾದಮಿಶನರೀಸ್ ಆಫ್ ಚಾರಿಟಿಅನ್ನು ಅನುಮೋದಿಸಿತು. ಆಗ ಅದರಲ್ಲಿ ಕೇವಲ ಹನ್ನೆರಡು ಮಂದಿ ಸದಸ್ಯರಿದ್ದರು. ಅವರಲ್ಲಿ ಹೆಚ್ಚಿನವರು ಸಂತ ಮೇರಿ ಶಾಲೆಯ ಹಳೆಯ ಶಿಕ್ಷಕಿಯರು ಇಲ್ಲವೇ ವಿದ್ಯಾರ್ಥಿನಿಯರು.
ಆಶ್ರಮವು ತನ್ನ ಕೆಲಸಗಳನ್ನು ವಿಸ್ತರಿಸುತ್ತಾ ಹೋದಂತೆ ಅದಕ್ಕೆ ಎಲ್ಲೆಡೆಗಳಿಂದಲೂ ದಾನ ಹರಿದು ಬರತೊಡಗಿತು. ೫೦-೬೦ರ ಎರಡು ದಶಕಗಳಲ್ಲಿ ಅವರು ಕುಷ್ಟರ ಕಾಲನಿ, ಅನಾಥಾಶ್ರಮ, ಚಿಕಿತ್ಸಾಲಯ ಹಾಗೂ ಅನೇಕ ಸಂಚಾರಿ ಆರೋಗ್ಯಕೇಂದ್ರಗಳನ್ನು ತೆರೆದರು.

ಅಂತರಾಷ್ಟ್ರೀಯ ಮನ್ನಣೆ
ಫೆಬ್ರವರಿ ೧೯೬೫ರಲ್ಲಿ ಆಗಿನ ಕ್ರೈಸ್ತ ಜಗದ್ಗುರು ಆರನೇ ಚಿನ್ನಪ್ಪರು ಮಿಶನರೀಸ್ ಆಫ್ ಚಾರಿಟಿಯ ಕೆಲಸಗಳ ಕುರಿತು ಮೆಚ್ಚುಗೆಪತ್ರ ಹೊರಡಿಸಿದರು. ಇದರಿಂದ ಸ್ಫೂರ್ತಿಗೊಂಡ ಮದರ್ ತೆರೇಸಾ ಅವರು ತಮ್ಮ ಆಶ್ರಮವನ್ನು ಹೊರದೇಶಗಳಿಗೂ ವಿಸ್ತರಿಸಲು ನಿರ್ಧರಿಸಿದರು. ಹೀಗೆ ೧೯೯೭ರಲ್ಲಿ ಅವರು ಸಾಯುವ ವೇಳೆಗೆ ಮಿಶನರೀಸ್ ಆಫ್ ಚಾರಿಟಿಯು ಜಗತ್ತಿನ ಏಳೂ ಖಂಡಗಳ ೧೨೩ ದೇಶಗಳಲ್ಲಿ ನಾಲ್ಕು ಸಾವಿರ ಶಾಖೆಗಳನ್ನು ತೆರೆದಿತ್ತು, ಅದರ ೬೧೦ ವಿವಿಧ ಯೋಜನೆಗಳಲ್ಲಿ ಸಂನ್ಯಾಸಿಯರು ಮಾತ್ರವಲ್ಲದೆ ಸಾವಿರಾರು ಜನಸಾಮಾನ್ಯರು ಸ್ವಯಂ ಸ್ಫೂರ್ತಿಯಿಂದ ತೊಡಗಿಸಿಕೊಂಡಿದ್ದರು,
೧೯೭೧ರಲ್ಲಿ ನ್ಯೂಯಾರ್ಕ್ ನಗರಕ್ಕೆ ತೆರಳಿದ ಮದರ್ ತೆರೇಸಾ ಅವರು ಅಲ್ಲಿನ ಎಚ್ಐವಿ ಸೋಂಕಿನ ಜನರಿಗಾಗಿ ಆಶ್ರಯ ಕಲ್ಪಿಸಿ ಅವರ ಪೋಷಣೆಯ ಹೊಣೆ ಹೊತ್ತರು. ಅದರ ಮರುವರ್ಷ ಲೆಬನಾನಿಗೆ ಹೋಗಿ ಬೇರೂತ್ ಮುತ್ತಿಗೆಯಲ್ಲಿ ತೊಡಗಿದ್ದ ಇಸ್ರೇಲ್ ಸೇನೆ ಮತ್ತು ಪ್ಯಾಲೆಸ್ತೀನ್ ಗೆರಿಲ್ಲಾಗಳು ತಾತ್ಕಾಲಿಕ ಸಮರವಿರಾಮಕ್ಕೆ ಒಪ್ಪುವಂತೆ ಮಧ್ಯಸ್ತಿಕೆ ವಹಿಸಿ ಅಲ್ಲಿನ ರಣರಂಗದ ಮುಂಚೂಣಿಯಲ್ಲಿನ ಆಸ್ಪತ್ರೆಯಲ್ಲಿ ಸಿಲುಕಿಕೊಂಡಿದ್ದ ಮಕ್ಕಳನ್ನು ಅಪಾಯದಿಂದ ಪಾರುಮಾಡಿದ್ದರು. ಅಲ್ಲದೆ ಧ್ವಂಸಗೊಂ ಆಸ್ಪತ್ರೆಗಳಲ್ಲಿ ಸಿಲುಕಿಕೊಂಡಿದ್ದ ಮಕ್ಕಳನ್ನು ಅಲ್ಲಿಂದ ಪಾರುಮಾಡಲು ಇವರು ಕಾರ್ಯಕರ್ತರೊಡನೆ ಸೇರಿ ಯುದ್ಧ ವಲಯದುದ್ದಕ್ಕೂ ತಿರುಗಾಡಿ ಬೇರೂತಿನ ಕ್ರಿಶ್ಚಿಯನ್ ಸಮುದಾಯ ಹಾಗೂ ಮುಸ್ಲಿಮ್ ಸಮುಯದಾಯಗಳ ಮಕ್ಕಳ ಪ್ರೀತಿಯನ್ನು ಗೆದ್ದರು. ಆಪ್ರಿಕಾ, ಲ್ಯಾಟಿನ್ ಅಮೆರಿಕಾ, ಪೂರ್ವಯೂರೋಪ್, ಸೋವಿಯತ್ ಒಕ್ಕೂಟಗಳಲ್ಲಿ ಸಂಚರಿಸಿ ಪ್ರವಾಹ ಪೀಡಿತರ, ಸಾಂಕ್ರಾಮಿಕ ರೋಗಪೀಡಿತರ, ಕ್ಷಾಮಪೀಡಿತರ ಹಾಗೂ ನಿರಾಶ್ರಿತರ ನೆರವಿಗೆ ನಿಂತರು. ಕೈದಿಗಳ, ಮದ್ಯವಸನಿಗಳ, ನಿರ್ಗತಿಕರ ಸಾಂತ್ವನವಾದರು. ಒಂದೊಮ್ಮೆ ಇದೇ ಸೋವಿಯತ್ತಿನ ಕಮ್ಯುನಿಸ್ಟ್ ಸರ್ಕಾರವು ಇವರ ಯೋಜನೆಗಳನ್ನು ತಿರಸ್ಕರಿಸಿತ್ತು ಎಂಬುದು ವಿಪರ್ಯಾಸ.
ದಣಿವರಿಯದ ಅವರ ಸೇವೆಯನ್ನು ಗುರುತಿಸಿ ಹಲವಾರು ಸಮುದಾಯಗಳು ದೇಶಗಳು ಅವರನ್ನು ಆದರಿಸಿ ಗೌರವಿಸಿದವು. ಸೋವಿಯತ್ ಒಕ್ಕೂಟವು ಚಿನ್ನದ ಪದಕ ನೀಡಿ ಸತ್ಕರಿಸಿತು. ಕ್ರೈಸ್ತ ಜಗದ್ಗುರುಪೀಠವು ಶಾಂತಿ ಪ್ರಶಸ್ತಿ ನೀಡಿತು. ಅಂತರಾಷ್ಟ್ರೀಯ ಶಾಂತಿಗಾಗಿ ನೀಡುವ ನೆಹರೂ ಪ್ರಶಸ್ತಿ ಅವರ ಮುಡಿಗೇರಿತು, ಬಾಲ್ಜನ್, ಟೆಂಪಲ್ಟನ್ ಹಾಗೂ ಮ್ಯಾಗ್ಸೆಸೆ ಪ್ರಶಸ್ತಿಗಳಿಗೂ ಅವರು ಭಾಜನರಾದರು. ನಮ್ಮ ದೇಶವುಭಾರತರತ್ನಎಂದು ಕರೆದು ಮನ್ನಣೆ ನೀಡಿತು. ಅಮೆರಿಕ ಸಂಯುಕ್ತ ಸಂಸ್ಥಾನವು ಅವರಿಗೆ ಗೌರವ ಪೌರತ್ವ ನೀಡಿತು.
೧೯೭೯ರಲ್ಲಿ ಜಗತ್ತಿನ ಅತ್ಯುನ್ನತ ನೊಬೆಲ್ ಆಯ್ಕೆ ಕೂಟವು ಮದರ್ ತೆರೇಸಾ ಅವರನ್ನುನೊಂದ ಮಾನವೀಯತೆಯನ್ನು ಕೈಹಿಡಿದೆತ್ತಿದ ಮಾತೆಎಂದು ಕರೆದು ನೊಬೆಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಿತು. ಪ್ರಶಸ್ತಿ ವಿಜೇತರಿಗೆ ನೀಡಲಾದ ಸಾಂಪ್ರದಾಯಿಕ ಔತಣಕೂಟದಲ್ಲಿ ಪಾಲುಗೊಳ್ಳಲು ಒಪ್ಪದ ಮದರ್, ಪ್ರಶಸ್ತಿ ಮೊತ್ತವಾದ ,೯೨,೦೦೦ಡಾಲರ್  ನಿಧಿಯನ್ನು ಇಂಡಿಯಾದ ಬಡವರಿಗೆ ನೆರವಾಗಲು ನೀಡಬೇಕೆಂದು ಕೋರಿದರು.
ಪ್ರಶಸ್ತಿ ಪ್ರದಾನ ಮಾಡಿದ ಮೇಲೆ "ವಿಶ್ವ ಶಾಂತಿಯನ್ನು ಉತ್ತೇಜಿಸಲು ನಾವು ಏನು ಮಾಡಬಹುದು?" ಎಂದು ಮದರ್ತೆರೇಸಾರನ್ನು ನೊಬೆಲ್ ಪ್ರಶಸ್ತಿ ಸಂಸ್ಥೆ ಕೇಳಿತ್ತು. "ಮನೆಗೆ ಹೋಗಿ, ನಿಮ್ಮ ಕುಟುಂಬವನ್ನು ಪ್ರೀತಿಸಿ" ಎಂಬ ಚುಟುಕು ಉತ್ತರವನ್ನು ತೆರೇಸಾ ನೀಡಿದ್ದರು. "ಬಡ ರಾಷ್ಟ್ರಗಳಲ್ಲಿ ಮಾತ್ರವಲ್ಲ ಪಶ್ಚಿಮದಲ್ಲೂ ನಾನು ಬಡತನವನ್ನು ಕಂಡಿದ್ದೇನೆ, ಪಶ್ಚಿಮದಲ್ಲಿರುವ ದಾರಿದ್ರ್ಯ ನಿವಾರಣೆ ತೊಲಗಿಸುವುದು ತುಂಬಾ ಕಷ್ಟ ಸಾಧ್ಯ" ಎಂದು ತಮ್ಮ ಪ್ರಶಸ್ತಿ ಭಾಷಣದಲ್ಲಿ ಹೇಳಿದರು. ಒಬ್ಬ ಹಸಿದ ವ್ಯಕ್ತಿಯನ್ನು ಬೀದಿಯಿಂದ ಕರೆತಂದಾಗ ಅವನಿಗೆ ಒಂದು ತಟ್ಟೆ ಅನ್ನ ನೀಡಿ ನಾನು ಅವನನ್ನು ತೃಪ್ತಿಪಡಿಸಿದ್ದೇನೆ. ಅವನ ಹಸಿವನ್ನು ಇಂಗಿಸಿದ್ದೇನೆ. ಸಮಾಜವು ದೂರೀಕರಿಸಿದ ವ್ಯಕ್ತಿಗೆ ತಾನು ಬಹಿಷ್ಕೃತ ಹಾಗೂ ಪ್ರೀತಿವಂಚಿತ ಎಂಬ ಭಾವನೆ ಕಾಡುತ್ತದೆ, ಭೀತಗ್ರಸ್ತ ಭಾವನೆಗಳು ನೋವಿನ ನೆರಳಿನಂತೆ ಹಿಂಬಾಲಿಸುತ್ತವೆ. ಸಮಾಜದಿಂದ ಬಹಿಷ್ಕೃತನಾದ ವ್ಯಕ್ತಿಗಿರುವ ನೋವೇ ಒಂದು ಬಡತನ, ಅದು ಸಹಿಸಲಸಾಧ್ಯ ಎನ್ನುತ್ತಾರವರು.

ವಿವಾದ
ಇಷ್ಟೆಲ್ಲ ಜಗದ್ವ್ಯಾಪಿ ಜನಮನ್ನಣೆಯ ನಡುವೆ ತೆರೇಸಾ ಅವರಿಗೆ ನಿಂದಕರೂ ಇದ್ದರು. ೧೯೭೯ರಲ್ಲಿ ನೊಬೆಲ್ ಭಾಷಣ ಮಾಡುವ ವೇಳೆ ಅವರು ನುಡಿದಗರ್ಭಪಾತವು ಶಾಂತಿಯನ್ನು ಹಾಳುಗೆಡಹುವ ಮೊದಲ ಮಾರಿಎಂಬ ಮಾತು ಅಪಾರ ಟೀಕೆಗಳಿಗೆ ಕಾರಣವಾಯಿತು.
೧೯೯೫ರಲ್ಲಿ ಅಯರ್ಲೆಂಡ್ ದೇಶವು ಮದುವೆಮುರಿತ ಹಾಗೂ ಮರುಮದುವೆಗೆ ಜಾರಿಯಲ್ಲಿದ್ದ ಸಾಂವಿಧಾನಿಕ ನಿಷೇಧವನ್ನು ತೆಗೆದುಹಾಕುವ ಪ್ರಸ್ತಾವಕ್ಕೆ ಮುಂದಾದಾಗ ಮದರ್ ಅವರು ಪ್ರಸ್ತಾವದ ವಿರುದ್ಧ ಜನಾಭಿಪ್ರಾಯವನ್ನು ಎಚ್ಚರಗೊಳಿಸಿದ್ದರು. ” ಮಿಶನರಿ ಪೊಸಿಶನ್: ಮದರ್ ತೆರೇಸಾ ಇನ್ ತಿಯರಿಎಂಬ ಪುಸ್ತಕವನ್ನು ಬರೆದ ಕ್ರಿಸ್ಟೊಫರ್ ಹಿಚೆನ್ಸ್ ಎಂಬ ಲೇಖಕನು ತನ್ನ ಪುಸ್ತಕದಲ್ಲಿ ಮದರ್ ಅವರನ್ನು ಕಟುವಾಗಿ ಟೀಕಿಸಿದ್ದಾನೆ. ಮದರ್ ತೆರೇಸಾ ಅವರು ತಮ್ಮ ಸ್ವಾರ್ಥ ಸಾಧನೆಗಾಗಿ ಬಡತನವನ್ನು ಮೆರೆಸಿದರು, ಬಡತನವು ಸಮಾಜದ ಅನಿವಾರ್ಯವೆಂದು ಭಾವಿಸುವ ಸಾಂಸ್ಥಿಕ ವಾದಗಳನ್ನು ಪುಷ್ಟೀಕರಿಸಿದರು ಎಂದು ಅವನು ಹೇಳಿಕೊಂಡಿದ್ದಾನೆ. ಮದರ್ ತೆರೇಸಾ ಅವರು ಬಡತನವನ್ನು ಹೋಗಲಾಡಿಸುವುದರ ಬದಲು ಬಡವರು ಬಡವರಾಗಿಯೇ ಬದುಕುವುದಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ ಎಂದು ಡೇವಿಡ್ಸ್ಕಾಟ್ಎಂಬುವನು ಟೀಕಿಸಿದ್ದಾನೆ. ಮೈಕೇಲ್ಪೇರಂಟಿ, ಅರೂಪ್ಚಟರ್ಜೀ ಮುಂತಾದವರೂ ಮದರ್ ತೆರೇಸಾ ಅವರನ್ನು ಟೀಕಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ಎಂಬ ಸಂಸ್ಥೆಯು ತೆರೇಸಾ ಅವರ ಸೇವಾಕಾರ್ಯಗಳನ್ನು ಮತಾಂತರದ ಹುನ್ನಾರ ಎಂದು ಕರೆದಿದೆ. ಮದರ್ ತೆರೇಸಾ ಅವರು ಸತ್ತಾಗ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸುವುದನ್ನು ಇದೇ ವಿಶ್ವ ಹಿಂದೂ ಪರಿಷತ್ತು ವಿರೋಧಿಸಿತ್ತು.

ಮರಣ
ಹಲವಾರು ವರ್ಷಗಳ ಅವಿರತ ದುಡಿಮೆಯಿಂದಾಗಿ ಮದರ್ ತೆರೇಸಾ ಅವರ ಒಡಲು ಜರ್ಜರಿತವಾಗಿತ್ತು. ಹೃದಯ, ಉಸಿರುಚೀಲ ಹಾಗೂ ಮೂತ್ರಕೋಶಗಳು ಸೊರಗಿದ್ದವು. ಅವರು ೧೯೯೭ ಸೆಪ್ಟೆಂಬರ್ ೫ರಂದು ತಮ್ಮ ೮೭ನೇ ವಯಸ್ಸಿನಲ್ಲಿ ಸ್ವರ್ಗ ಸೇರಿದರು. ೨೦೦೩ರಲ್ಲಿ ಅವರ ಪತ್ರವ್ಯವಹಾರಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಿದಾಗ ತಮ್ಮ ಜೀವನದ ಕೊನೆಯ ಐವತ್ತು ವರ್ಷಗಳಲ್ಲಿ ಅವರು ಅನುಭವಿಸಿದ ಧರ್ಮಜಿಜ್ಞಾಸೆಯ ವೇದನೆಯನ್ನು ಜಗತ್ತು ಅರಿಯುವ ಮೂಲಕ ಅವರ ಬದುಕಿನ ಮರು ಮೌಲ್ಯಮಾಪನ ನಡೆಸಿತು.
ತಮ್ಮ ಸಂಸ್ಥೆಯನ್ನು ಕಟ್ಟಿದ ಮೊದಲ ವರ್ಷವು ಹಲವಾರು ಎಡರು-ತೊಡರುಗಳಿಂದ ತುಂಬಿತ್ತು ಎಂದು ತೆರೇಸಾ ತಮ್ಮ ದಿನಚರಿಯಲ್ಲಿ ದಾಖಲಿಸಿದ್ದಾರೆ.ಆದಾಯದ ಯಾವುದೇ ಮೂಲಗಳಿರಲಿಲ್ಲ, ಹೀಗಾಗಿ ಇವರು ಆಹಾರ ಮತ್ತು ಅಗತ್ಯ ಪೂರೈಕೆಗಾಗಿ ಅನ್ಯರನ್ನು ಬೇಡುವ ಪರಿಸ್ಥಿತಿಗೆ ಬೀಳಬೇಕಾಯಿತು. ಒಂಟಿತನ ಆಗಾಗ್ಗೆ ಕಾಡಿತು ಮತ್ತು ಮೊದಲಿನ ಬದುಕಿನ ಸೌಕರ್ಯಗಳಿಗೆ ಮತ್ತೆ ಹಿಂತಿರುಗುವ ಪ್ರಲೋಭನೆಯೂ ಉಂಟಾಯಿತು ಎಂದೆಲ್ಲ ತಮ್ಮ ದಿನಚರಿಯಲ್ಲಿ ದಾಖಲಿಸಿದ್ದಾರೆ. ನೋವು ಮಡುಗಟ್ಟಿದ ಒಂದು ಪತ್ರದಲ್ಲಿ ಅವರು: ’ಎಲ್ಲಿ ನನ್ನ ನಂಬಿಕೆ... ಎಷ್ಟೇ ಆಳಕ್ಕಿಳಿದರೂ ಎಲ್ಲ ಖಾಲಿ ಖಾಲಿ ಎಲ್ಲ ಕತ್ತಲೆ... ನನ್ನ ದೇವರೇ... ಕಾಣದ ನೋವು ಬಾಧಿಸುತ್ತಿದೆ... ನನ್ನಲ್ಲಿ ನಂಬಿಕೆಯೇ ಹೊರಟುಹೋಗಿದೆ... ನನ್ನ ಹೃದಯದ ತಳಮಳವನ್ನು ಹೊರಗೆಡವಲು ಆಗದು... ಅವ್ಯಕ್ತ ನೋವನ್ನು ಅನುಭವಿಸಲು ಬಿಡುಇತ್ಯಾದಿಯಾಗಿ ಅವರು ಹೇಳಿಕೊಂಡಿರುವುದರಿಂದ ಅವರೂ ಎಲ್ಲರಂತೆ ಸಾಮಾನ್ಯರು, ಮಾನವಾತೀತ ಶಕ್ತಿಗಳೇನೂ ಅವರಿಗಿರಲಿಲ್ಲ, ನಮ್ಮಂತೆ ಅವರಿಗೂ ಭಾವನೆಗಳಿದ್ದವು ಎಂಬುದು ಅರಿವಾಗುತ್ತದೆ.
ಆದರೆ ನಿರ್ಬಲರಿಗೆ ನಿರ್ಗತಿಕರಿಗೆ ನೀಡಿದ ಸಹಾಯಹಸ್ತದ ಕಾರಣದಿಂದ ಆಕೆ ೨೦ನೇ ಶತಮಾನದ ಮಹಾನ್ ಮಾನವತೆಯ ಸಂಕೇತಗಳಲ್ಲಿ ಒಬ್ಬರಾಗಿದ್ದಾರೆ. ಮಾನವ ಹೃದಯವನ್ನು ಅರ್ಥಮಾಡಿಕೊಳ್ಳುವ ಹಾಗೂ ಅದಕ್ಕೆ ತಕ್ಕಂತೆ ಮಿಡಿಯುವ ಅವರ ನಡೆನುಡಿಯಿಂದಾಗಿಯೇ ಅವರು ಪ್ರಪಂಚದೆಲ್ಲೆಡೆ ತಮ್ಮ ತತ್ವಗಳಿಗೆ ನಿಷ್ಠರನ್ನು ಪಡೆಯುವಂತಾಯಿತು.
ತಮ್ಮ ಸಂಸ್ಥೆಗಳ ಮೂಲಕ ಪ್ರಪಂಚದೆಲ್ಲೆಡೆ ಅಗಾಧ ಸೇವಾಕಾರ್ಯಗಳನ್ನು ನಡೆಸಿ, ಅಪಾರ ಹೃದಯಗಳನ್ನು ತಟ್ಟಿದ ಮದರ್ ತೆರೇಸಾ ಅವರದು ಸದಾ ವಿನೀತ ಭಾವ. ತಾವು ಸಾಯುವ ದಿನ ಅವರು ಸಂತೃಪ್ತಿಯಿಂದ ಆಡಿದ ಮಾತು ಹೀಗಿದೆ: "ಹುಟ್ಟಿನಿಂದ ನಾನು ಆಲ್ಬೇನಿಯನ್, ಪೌರತ್ವದಿಂದ ಇಂಡಿಯನ್, ಜೀವಿತದಿಂದ ಒಬ್ಬ ಸಂನ್ಯಾಸಿನಿ, ದೈವಕರೆಯಿಂದಾಗಿ ಜಗತ್ತಿಗೇ ಸೇರಿದವಳು, ಹೃದಯದಲ್ಲಿ ಮಾತ್ರ ನಾನು ಯೇಸುವಿಗೆ ಸೇರಿದವಳು"
ಕೊಲ್ಕತ್ತಾದ ಜನಮಾನಸದಲ್ಲಿ ಅವರು ಇನ್ನೂ ಜೀವಂತರಾಗಿದ್ದಾರೆ. ಅವರನ್ನು ಪೂಜಿಸುವ ಅರ್ಚಿಸುವ ಜನರ ಸಂಖ್ಯೆಯೂ ಕಡಿಮೆಯಿಲ್ಲ. ಜನಮಾನಸದ ಸದಿಚ್ಛೆಯಂತೆ ಕ್ರೈಸ್ತ ಧರ್ಮಮಂಡಲಿಯು ೧೯ ಅಕ್ಟೋಬರ್ ೨೦೦೩ರಂದು ಅವರಿಗೆ ಪೂಜನೀಯ ಸ್ಥಾನಮಾನ ನೀಡಿ ಗೌರವಿಸಿದೆ.

ಇವರ ಜೀವನದ ಕುರಿತು ಸಮ್ಥಿಂಗ್ಬ್ಯೂಟಿಫುಲ್ಫಾರ್ಗಾಡ್‌  ಎಂಬ ಪುಸ್ತಕ ಹೊರಬಂದಿದೆ ಹಾಗೂ ಇದೇ ಕೃತಿಯನ್ನು ಆಧರಿಸಿ ಸಾಕ್ಷ್ಯ ಚಿತ್ರವೂ ತೆರೆಕಂಡಿದೆ.

ಶುಕ್ರವಾರ, ಆಗಸ್ಟ್ 16, 2013

ಯಕ್ಷಗಾನದಲ್ಲಿ ಯೇಸುಸ್ವಾಮಿಯ ಕತೆ

ಇತ್ತೀಚೆಗೆ ನಾನು ಓದಿದ ಪುಸ್ತಕ ಹಿರೇಬಳ್ಳಾಪುರ ಸುಬ್ಬರಾಯಪ್ಪನವರ ಯೇಸುಸ್ವಾಮಿಯ ಕತೆ’ (ಸಾಗರ್ ಪ್ರಕಾಶನ). ಇದು ಮೂಡಲಪಾಯ ಯಕ್ಷಗಾನ ಪ್ರಕಾರದ ಒಂದು ಪ್ರಸಂಗ, ಹಸ್ತಪ್ರತಿಯಲ್ಲಿದ್ದ ಇದನ್ನು ಸಂಗ್ರಹಿಸಿ ಗ್ರಂಥಸಂಪಾದನೆ ಮಾಡಿರುವವರು ಡಾ. ಚಕ್ಕೆರೆ ಶಿವಶಂಕರ ಅವರು. ಸುಮಾರು ೭೮ ಪುಟಗಳ ಮುದ್ರಿತ ಯಕ್ಷಗಾನ ಕಥೆಗೆ ಶಿವಶಂಕರರು ೩೪ ಪುಟಗಳ ದೀರ್ಘ ಉಪೋದ್ಘಾತವನ್ನು ಬರೆದು ಯಕ್ಷಗಾನ ಪ್ರಕಾರಗಳಲ್ಲಿ ಮೂಡಲಪಾಯದ ಸ್ಥಾನ ಹಾಗೂ ಪ್ರಸ್ತುತ ಕೃತಿಯ ಕವಿಕಾವ್ಯದ ವಿಚಾರಗಳನ್ನು ಚರ್ಚಿಸಿದ್ದಾರೆ. ಬಹುಶಃ ನಶಿಸಿ ಹೋಗಬಹುದಾಗಿದ್ದ ಇಂಥ ಕೃತಿಯನ್ನು ಮುದ್ರಣರೂಪಕ್ಕೆ ತರುವ ಮೂಲಕ ಅವರೊಂದು ಶ್ಲಾಘ್ಯ ಕೆಲಸ ಮಾಡಿದ್ದಾರೆ. ಹಿರೇಬಳ್ಳಾಪುರ ಎನ್ನುವುದು ಇಂದು ಸಾರ್ವತ್ರಿಕವಾಗಿ ಬಳಕೆಯಲ್ಲಿರುವ ದೊಡ್ಡಬಳ್ಳಾಪುರವೇ. ಇಂಥಲ್ಲಿ ಕರಾವಳಿ ಮೂಲದ ಜಾನಪದ ಪ್ರಕಾರದ ಕಲೆಯೊಂದು ಅದರಲ್ಲೂ ಅಪರೂಪವೆನ್ನಬಹುದಾದ ಕ್ರೈಸ್ತ ವಸ್ತುವನ್ನು ಒಳಗೊಂಡಿರುವುದು ಆಶ್ಚರ್ಯವೇ ಸರಿ.
ಓದುತ್ತಾ ಹೋದಂತೆ ಬೇರೆಯೇ ಒಂದು ಯಕ್ಷಲೋಕಕ್ಕೆ ಕೊಂಡೊಯ್ಯುವ ಈ ಕಥಾರೂಪ, ವೇದಿಕೆಯಲ್ಲಿ ಪ್ರಯೋಗವಾದರೆ ರಮ್ಯವೂ ಅದ್ಭುತವೂ ರೋಮಾಂಚಕಾರಿಯೂ ಆಗಿರುತ್ತದೆಂಬುದರಲ್ಲಿ ಸಂಶಯವಿಲ್ಲ. ಇದನ್ನು ನಾನು ಪದೇ ಪದೇ ಓದಿ ತಣಿದೆ, ಅಪೂರ್ವ ರಸಾನುಭವದ ಅನುಭೂತಿ ಸವಿದೆ. ನಮ್ಮ ದೇಸೀ ಸಂಸ್ಕೃತಿಯ ಎಲ್ಲ ಆಚಾರ ವಿಚಾರಗಳನ್ನೂ ಯೇಸುವಿನ ಕತೆಯಲ್ಲಿ ನಿರುಕಿಸಿದ ಸುಬ್ಬರಾಯಪ್ಪನವರಿಗೆ ನಮೋ ನಮಃ.
ಮೊದಲೇ ಹೇಳಿದಂತೆ ಇದು ಒಂದು ಕ್ರಿಶ್ಚಿಯನ್ ವಸ್ತುವಾಗಿದ್ದರೂ ನಾಟಕದ ಪ್ರಸಂಗ ಶುರುವಾಗುವುದು ವಿಘ್ನೇಶ್ವರ ಸ್ತುತಿ ಶಾರದಾ ಸ್ತುತಿಯೊಂದಿಗೆ. ತದನಂತರ ಸುಬ್ಬರಾಯಪ್ಪನವರು ತಮ್ಮ ಇಷ್ಟದೈವ ಸೋಮೇಶ್ವರನನ್ನೂ ವಿದ್ಯಾಗುರುಗಳಾದ ರಾಮಸ್ವಾಮಿದಾಸರನ್ನೂ ಸ್ಮರಿಸಿಕೊಳ್ಳುತ್ತಾ ಕತೆಗೆ ಮುನ್ನಡಿಯಿಡುತ್ತಾರೆ.
ಸರ್ವಶಕ್ತ ದೇವನ ಒಡ್ಡೋಲಗದಲ್ಲಿ ಭೂಮಾತೆಯು ದೀನವದನಳಾಗಿ ನಿಂತು ಭೂಲೋಕದಲ್ಲಿ ಜನರು ಸತ್ಯ ಧರ್ಮ ನೀತಿ ನಿಷ್ಠೆಗಳನ್ನು ತೊರೆದು ಅಜ್ಞಾನಿಗಳಾಗಿ ಬಾಳುತ್ತಿರುವುದರಿಂದ ಆ ಪಾಪಿಗಳ ಭಾರವನ್ನು ನಾನು ಹೊರಲಾಗದು, ಹೇ ಸ್ವಾಮಿ ತಾವು ಭುವಿಯಲ್ಲಿ ಅವತರಿಸಿ ಆ ಪಾಪಿಗಳಿಗೆ ಜ್ಞಾನಮಾರ್ಗವನ್ನು ಬೋಧಿಸಿ ಭೂ ಹೊರೆಯನ್ನು ಇಳಿಸಿ ಕಾಪಾಡಬೇಕೆಂದು ಪ್ರಾರ್ಥಿಸುತ್ತಾಳೆ. ಆಗ ದೇವನು;
ಪರಮಪಾಪಿಗಳ ಭಾರ ಹೊರಲಾರೆನು ಎನುತ ನೀನು
ನಿರುತ ಮನದಿ ದುಃಖಿಸದಿರಮ್ಮ ಹೇ ಧರಣೀ ದೇವಿ
ನರನಾಗಿ ನಾನು ಅವತರಿಸುವೆನು
ಹೇ ಧರಣೀ ದೇವಿ, ನಿರಾಕಾರಿಯಾದ ನಾನು, ಆಕಾರವನ್ನು ಧರಿಸಿ, ಪರಮಪಾಪಿಗಳ ಅಜ್ಞಾನವನ್ನು ತಪ್ಪಿಸಿ ಜ್ಞಾನಮಾರ್ಗವನ್ನು ಬೋಧಿಸಲು ಮೇರಿಯಮ್ಮ ಎಂಬ ಕನ್ಯೆಯ ಗರ್ಭದಲ್ಲಿ ಯೇಸುದೇವನೆಂಬ ನಾಮಾಂಕಿತದಿಂದ ಭೂಲೋಕದಲ್ಲಿ ಅವತರಿಸುವೆನು ಎನ್ನುತ್ತಾನೆ.
ಕತೆಯ ಒಡಲೆಲ್ಲ ಭಾಗವತಿಕೆಯ ವಚನಗಳ ಜೊತೆಜೊತೆಗೇ ಕಾಂಬೋಧಿ, ಹರಿಕಾಂಬೋಧಿ, ಸಾರಂಗ, ಶಂಕರಾಭರಣ, ಕಾಫಿ, ಬಿಲಹರಿ, ಕಮಾಚ್ ರಾಗಗಳ ಶ್ರೀಮಂತ ಹಾಡುಗಾರಿಕೆಯೊಂದಿಗೆ ಯಾಲಪದಗಳ ಸೊಗಸೂ ಇದೆ. ಚಂಡೆ ಮದ್ದಳೆ ಡಪ್ಪು ವಾದ್ಯಗಳೂ ಇದ್ದವೇನೋ ತಿಳಿಯದು.
ಒಂದು ಪ್ರಸಂಗ
ಹರಿಕಾಂಬೋಧಿ ರಾಗ, ತ್ರಿಪುಢೆ ತಾಳ
ಸಾರಿ ಪೇಳುವೆ ಕೇಳಿರೀಕೆಯು ಮಾರಿಯಂತೆ ಊರ ಹುಡುಗರ
ಮಾರ ತಾಪಕೆ ಸೇರಿಸುವಳು ದಾರಿ ಕೆಡಿಸುವಳು...
ವಚನ: ಈ ಪ್ರಕಾರವಾಗಿ ಶಾಸ್ತ್ರಿಗಳು ವೇಶ್ಯೆಯನ್ನು ಯೇಸುದೇವನ ಬಳಿಗೆ ಕರೆದುಕೊಂಡುಹೋಗಿ ನಿಲ್ಲಿಸಿ, ಈಕೆಯು ಮಾಹಾ ವ್ಯಭಿಚಾರಿಣಿ, ಈಕೆಯು ಬಡ ಹುಡುಗರಿಗೆಲ್ಲ ವ್ಯಭಿಚರ ಕಲಿಸಿ, ತಂದೆ ತಾಯಿಗಳ ಮಾತನ್ನು ಕೇಳದೆ, ಹುಡುಗರು ದುರ್ಮಾರ್ಗ ಪ್ರವರ್ತಕರಾಗಿ ಗುರು ಹಿರಿಯರೆಂದು ತಿಳಿಯದೆ ನಿಂದಿಸುವರು. ಹಿಂದೆ ಮೋಶೆ ಹೇಳಿರುವ ಧರ್ಮಶಾಸ್ತ್ರದಂತೆ ಮಾಡಿಸೆನಲು ವೇಶ್ಯೆಯು ಏನೆನ್ನುತ್ತಿರ್ದಾಳೆಂತೆನೇ:
ಅರಿಯದೆ ಮಾಡಿದೆ ಗುರುವೆ ಈ ಕಾರ್ಯವ ಯೇಸುದೇವ...
ನೀನು ಮನ್ನಿಸಿ ಎನ್ನ ಮಾನವ ರಕ್ಷಿಸು...
ವಚನ: ಈ ಪ್ರಕಾರವಾಗಿ ಆ ವ್ಯಭಿಚಾರಿಣಿಯು ಯೇಸು ದೇವನ ಪಾದಕಮಲಗಳಿಗೆ ನಮಸ್ಕರಿಸಿ ತಾನು ಮಾಡಿರುವ ತಪ್ಪನ್ನು ಕ್ಷಮಿಸಬೇಕೆಮದು ಬೆಡಿಕೊಲ್ಳಲು ಯೇಸುದೆವರು ಆ ಶಾಸ್ತ್ರಿಗಳೊಡನೆ ಏನೆನ್ನುತ್ತಿರ್ದಾನದೆಂತೆನೇ:
ಯಾಲಪದ
ಮೋಶೆ ಧರ್ಮವನ್ನು ನೋಡೆ ಘಾಸಿಯಲ್ಲವೆ ಜಗಕೆ ಇನನೂ ನಾಶಗೈಯ್ವುದು ಮೋಸವಲ್ಲವೇ
ಓ ಶಾಸ್ತ್ರಿಗಳಿರಾ ಲೇಸು ಮಾತ್ರವು ಸತ್ಯವಿಲ್ಲವು
ವಚನ: ಈ ಪ್ರಕಾರವಾಗಿ ಯೇಸುದೇವನು ಶಾಸ್ತ್ರಿಗಳಿಗೆ, ಮೋಶೆ ಧರ್ಮವನ್ನು ಅನುಸರಿಸಿ ನೋಡಿದರೆ, ಸಕರ ಚರಚರಾತ್ಮಕವಾದ ಪ್ರಾಣಿಗಳಲ್ಲಿಯೂ ಒಬ್ಬಾತ್ಮನೆ ಎಂದು ಸಾರುತ್ತಿರುವಲ್ಲಿ ಈಕೆಯ್ನನು ಮರಕ್ಕೆ ನೇತುಹಾಕಿ, ಕಲ್ಲುಗಳಿಂದ ಹೊಡೆಯಬೇಕೆಂದು ಹೇಳುವುದು ಧರ್ಮವೇ ಎಂದು ಹೇಳಿ, ನಿಮ್ಮ ಪಾಪವಿಲ್ಲದೆ ಪರಮಾತ್ಮನಂತೆ ನಡೆ ನುಡಿ ಉಳ್ಳವರು ಯಾರೋ, ಆತನೇ ಮೊದಲು ಆಕೆಯ ಮೇಲೆ ಕಲ್ಲನ್ನು ಹಾಕಲಿ ಎಂದು ಹೇಳಲು....ಹಿರಿಯರು ಮೊದಲ್ಗೊಂಡು ಕಿರಿಯರೆಲ್ಲರೂ... ಒಬ್ಬರ ಹಿಂದೊಬ್ಬರು ಹೊರಟು ಹೋದರು.
ಬಿಲ್ಹರಿ ರಾಗ, ಏಕತಾಳ, ಕಮಾಚ್ ರಾಗ
ಕಾಮಿನಿ ಮಣಿಯೆ ಕೇಳು ಕಾಮ ಎಂಬುವದದು
ಪ್ರೇಮದ ಆಶೆಯು ನೇಮ ಕೆಡಿಸುವುದು
ಸೋಮ ಸೂರ್ಯಾದಿಗಳ ನೇಮ ತಪ್ಪಿಸುವುದು
ಭಾಮಿನಿ ನೀ ಕೇಳು ಕಾಮವು ಭ್ರಾಂತಿ
ತರುಣಿಯೆ ನೀ ಕೇಳು ಚಿರಕಾಲ ನಿನ್ನೊಳಿಹ
ಸ್ಥಿರವಾದ ಆತ್ಮನ ಅರಿತು ಬಾಳಮ್ಮಾ.
ಹೀಗೆ ಯೇಸು ಜನನ, ಜೀವನ, ಬೋಧನೆ, ಮರಣ, ಸ್ವರ್ಗಾರೋಹಣಗಳನ್ನು ನಿರೂಪಿಸುವ ಈ ಯಕ್ಷಗಾನ ಪ್ರಸಂಗವು ಕೊನೆಯಲ್ಲಿ ಈ ಪ್ರಕಾರವಾಗಿ ಸತ್ಯವಂತನಾದ ಯೇಸುದೇವನ ಕತೆಯನ್ನು ಬರೆದು ಓದಿ ಅರ್ಥವನ್ನು ಹೇಳಿದ ಜನರಿಗೆ ಪರಮಾತ್ಮನು ಸಕಲ ಸೌಭಾಗ್ಯ ಪುತ್ರ ಮಿತ್ರರನ್ನು ಕರುಣಿಸಿ ಆಯುರಾರೋಗ್ಯಭಾಗ್ಯವನ್ನು ಕೊಟ್ಟು ಸಲಹುವನು ಎಂಬಲ್ಲಿಗೆ ಕಥೆ ಸಂಪೂರ್ಣಂ.
ಕಥಾಸಂಪೂರ್ಣ, ಶ್ರೀ ಶುಭಮಸ್ತು, ಸರ್ವಮಂಗಳಮಸ್ತು
ಎನ್ನುತ್ತಾ ಮಂಗಳಾರತಿ ಹಾಡು ಹಾಡುವಲ್ಲಿಗೆ ಬೆಳಕು ಹರಿದು ಹೊಸ ದಿನ ಮೂಡುತ್ತದೆ.
ಮಂಗಳಂ ಮಂಗಳಂ ಯೇಸುವಿಗೆ,
ಮರಣದ ನಂತರ ಮೂರು ದಿವಸಕೆ ದರುಶನವ ಇತ್ತ
ಪರಮ ಪೂಜ್ಯನಿಗೆ ಮಂಗಳಂ.
ಹಿರಿಯ ಬಳ್ಳಾಪುರದ ವರದ ಸೋಮೇಶನ
ಕರುಣದಿಂದಲಿ ಮುಕ್ತಿ ಯನು ಹೊಂದಿದವಗೆ ಮಂಗಳಂ.


ಯೇಸುವಿನ ಜೀವನವನ್ನೇ ಕಥಾವಸ್ತುವಾಗುಳ್ಳ ಈ ಯಕ್ಷಗಾನದ ಬಯಲಾಟವು ಇಷ್ಟು ದಿನ ಅಜ್ಞಾತವಾಗಿತ್ತೆಂಬುದೇ ನೋವಿನ ಸಂಗತಿ. ಬಹುಶಃ ಬಹುಕಾಲ ಪ್ರಯೋಗಗಳನ್ನು ಕಂಡು ಸಾತ್ವಿಕ ಜನರ ಮನತಣಿಸಿ ಅಧ್ಯಾತ್ಮದೆಡೆಗೆ ಪರಮಾತ್ಮನೆಡೆಗೆ ಕೊಂಡಯ್ದ ಮುಕ್ತಿಮಾರ್ಗದ ವಸ್ತುವೊಂದು ಚಕ್ಕೆರೆ ಶಿವಶಂಕರರ ಪ್ರಯತ್ನದಿಂದ ಮುದ್ರಿತ ರೂಪ ತಳೆದಿದೆ. ಕಲಾಸಕ್ತರು ಇದನ್ನು ಕೊಂಡು ಸಂಗ್ರಹಿಸಿಟ್ಟುಕೊಳ್ಳುವುದಲ್ಲದೆ ಸಾಧ್ಯವಿದ್ದೆಡೆ ಪ್ರಯೋಗಿಸುವುದು ಇಂದಿನ ಅಗತ್ಯವಾಗಿದೆ. ಕ್ರೈಸ್ತ ಧರ್ಮಮಂಡಲಿಗೆ ತನ್ನದೇ ಆದ ಆಸಕ್ತಿಗಳೂ ಆದ್ಯತೆಗಳೂ ಇರುವುದರಿಂದ ಸಾಮಾನ್ಯರಾದ ಕ್ರೈಸ್ತಭಕ್ತರು ಈ ನಿಟ್ಟಿನಲ್ಲಿ ಆಸಕ್ತಿ ಮಹಿಸಲಿ ಎಂದು ಆಶಿಸುತ್ತೇನೆ.

ಶನಿವಾರ, ಜುಲೈ 20, 2013

ಅಬ್ಬೆ ದ್ಯುಬುವಾ

ಜಾನಪದ ಅಧ್ಯಯನ ಮಾಡುವವರು ಅತ್ಯವಶ್ಯವಾಗಿ ಓದಲೇಬೇಕಾದಂತ ಒಂದು ಪರಾಮರ್ಶನ ಗ್ರಂಥವೆಂದರೆ ಸ್ವಾಮಿ ಅಬ್ಬೆ ದ್ಯುಬುವಾ ಅವರು ಬರೆದ Hindu manners, customs and ceremonies ಎಂಬುದಾಗಿದೆ. ಇಂಡಿಯಾ ದೇಶದ ಜನರ ಸ್ವಭಾವ, ನಡವಳಿಕೆ ಮತ್ತು ರೀತಿರಿವಾಜುಗಳ ವಿವರ ಹಾಗೂ ಅವರ ಧಾರ್ಮಿಕ ಹಾಗಾ ಸಾಮಾಜಿಕ ಸಂಸ್ಥೆಗಳು (ಲಂಡನ್, ೧೮೧೬) ಎಂಬ ಆ ಪುಸ್ತಕ ಇಂದಿಗೂ ಒಂದು ಮಹತ್ವದ ಅಧ್ಯಯನ ಕೃತಿಯಾಗಿದೆ. ಅಬ್ಬೆ ದ್ಯುಬುವಾ ಅವರು ಫ್ರಾನ್ಸ್ ದೇಶದವರಾಗಿದ್ದು ಸೇಂಟ್ ರಿಮೇಝ್ ಎಂಬ ಹಳ್ಳಿಯಲ್ಲಿ ೧೭೬೫ರಲ್ಲಿ ಜನಿಸಿದರು. ವಯಸ್ಕರಾದಾಗ ಪ್ಯಾರಿಸ್ಸಿನ ಹೊರನಾಡು ಧರ್ಮಪ್ರಚಾರ ಸಂಸ್ಥೆ (ಎಂಇಪಿ) ಗೆ ಸೇರಿ ೧೭೯೧ರಲ್ಲಿ ಗುರುಪಟ್ಟ ಪಡೆದ ಅವರು ಅದರ ಮರುವರ್ಷವೇ ಅಂದರೆ ಫ್ರೆಂಚ್ ಚಳುವಳಿಯ ಕಿಡಿ ಸ್ಫೋಟವಾಗುವ ಹೊತ್ತಿಗೆ ಮಲಬಾರ್ ಮಿಷನ್ನಿಗೆ ನಿಯುಕ್ತರಾಗಿ ಇಂಡಿಯಾ ದೇಶಕ್ಕೆ ಕ್ರಿಶ್ಚಿಯನ್ ಧರ್ಮಬೋಧನೆ ಮಾಡಲು ತೆರಳಿದರು.
ಆ ಸಂದರ್ಭದಲ್ಲಿ ದಕ್ಷಿಣ ಇಂಡಿಯಾದಲ್ಲಿ ಟಿಪ್ಪುವಿನ ಪ್ರಭಾವ ಜೋರಾಗಿತ್ತು. ಪೂರ್ವದ ವೆಲ್ಲೂರಿನಿಂದ ಹಿಡಿದು ಮಧುರೆ ಮೈಸೂರು ಶೀಮೊಗ್ಗೆ ಸಮೇತ ಪಶ್ಚಿಮದ ಕರಾವಳಿಯವರೆಗೆ ಅವನ ರಾಜ್ಯ ವ್ಯಾಪಿಸಿತ್ತು. ದಕ್ಷ ಆಡಳಿತಗಾರನೂ, ಯುದ್ಧಪ್ರೇಮಿಯೂ ಆಗಿದ್ದ ಟಿಪ್ಪು ಹಲವು ಯುದ್ಧಗಳಿಂದ ಅಪಾರ ಸಂಪತ್ತನ್ನು ಅರ್ಜಿಸಿ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದ್ದನಲ್ಲದೆ ಧಾರ್ಮಿಕ ವಲಯದಲ್ಲೂ ಬದಲವಾವಣೆಗಳನ್ನು ಬಯಸಿದ್ದನು. ಈ ಒಂದು ಕಾರಣಕ್ಕಾಗಿ ಅವನು ಅಪ್ರತಿಮ ದೇಶಪ್ರೇಮಿಯಾಗಿದ್ದರೂ ಬ್ರಿಟಿಷರನ್ನು ದೇಶ ಬಿಟ್ಟು ತೊಲಗಿಸಲು ಪಣ ತೊಟ್ಟ ಮೊತ್ತಮೊದಲಿಗನಾಗಿದ್ದರೂ ಧಾರ್ಮಿಕ ಅಸಹನೆಯ ಕಾರಣದಿಂದ ಜನರ ಸಹಜ ಪ್ರೀತಿಯನ್ನು ಕಳೆದುಕೊಂಡಿದ್ದನು. ಅವನ ಆಳ್ವಿಕೆಯ ಪ್ರದೇಶಗಳಲ್ಲಿ ಕ್ರೈಸ್ತ ಧರ್ಮಪ್ರಚಾರ ನಡೆಸುತ್ತಿದ್ದವರು ಅಂಜಿ ದೂರ ಸರಿದಿದ್ದರು.
೧೭೯೯ರಲ್ಲಿ ಟಿಪ್ಪುವಿನ ಮರಣವಾದ ಮೇಲೆ ಸ್ವಾಮಿ ಅಬ್ಬೆ ದ್ಯುಬುವಾ ಅವರಿಗೆ ಮೈಸೂರು ಪ್ರಾಂತ್ಯದ ಕ್ರೈಸ್ತರನ್ನು ಒಗ್ಗೂಡಿಸುವ ಹೊಣೆ ವಹಿಸಲಾಯಿತು. ಮೈಸೂರು ಪ್ರಾಂತ್ಯಕ್ಕೆ ಬಂದ ಇವರು ಜನರೊಂದಿಗೆ ಆಪ್ತರಾಗಲು ಸಿಡುಬಿನ ವಿರುದ್ಧದ ಲಸಿಕೆಯನ್ನು ಪರಿಚಯಸಿದರಲ್ಲದೆ ಕೃಷಿ ವ್ಯವಸ್ಥೆಯಲ್ಲೂ ಬದಲಾವಣೆಗಳನ್ನು ತಂದರು. ತಮ್ಮ ಸಭ್ಯತೆ ಮತ್ತು ಸಹನೆಯ ಗುಣದಿಂದ ಸ್ಥಳೀಯರ ಮನಗೆದ್ದ ಅವರು  ದೊಡ್ಡ ಸ್ವಾಮಿಯವರು ಎಂದು ಜನಪ್ರಿಯರಾದರು. ಲಸಿಕೆ ಹಾಕುವ ಕಾರ್ಯದಲ್ಲಿ ಅವರ ಯಶಸ್ಸು ಅಪಾರ, ಅದನ್ನು ಗುರುತಿಸಿದ ಅಂದಿನ ಬ್ರಿಟಿಷ್ ಸರ್ಕಾರ ಅವರ ಈ ಕೆಲಸಕ್ಕೆ ೨೦೦೦ ಫ್ರಾಂಕುಗಳ ಅನುದಾನ ನೀಡಿತು. ಬ್ರಿಟಿಷರು ತಮ್ಮ ಮೇಲಿಟ್ಟಿದ್ದ ಗೌರವವನ್ನು ಸದುಪಯೋಗ ಪಡಿಸಿಕೊಂಡು ದ್ಯುಬುವಾ ಸ್ವಾಮಿಗಳು ಶ್ರೀರಂಗಪಟ್ಟಣ ಮತ್ತು ಧರ್ಮಪುರಿ ಚರ್ಚುಗಳ ಖರ್ಚಿಗಾಗಿ ಭತ್ಯೆಯನ್ನೂ ಪಡೆದರು.
ಕ್ರೈಸ್ತರನ್ನು ಗುರುತಿಸಿ ಅವರನ್ನು ತಮ್ಮ ಪ್ರೀತಿಯ ತೆಕ್ಕೆಗೆ ತೆಗೆದುಕೊಂಡು ಆದರಿಸಿದರು. ಸರಳ ಭಾಷೆಯಲ್ಲಿ ಅವರು ರಚಿಸಿದ ಕ್ರೈಸ್ತಧರ್ಮೋಪದೇಶದ ಕೈಪಿಡಿಗಳು ಜನಮನ ಗೆದ್ದವು. ಧರ್ಮಪ್ರಚಾರ ಮಾಡುವವನು ಸ್ಥಳೀಯ ಜನರ ರೀತಿನೀತಿ ಆಚಾರ ವಿಚಾರಗಳ ಬಗ್ಗೆ ಗೌರವ ತಳೆದು ಅವರಲ್ಲಿ ಒಂದಾದರೆ ಮಾತ್ರವೇ ಯಶಸ್ವಿಯಾಗಬಲ್ಲನೆಂದು ಅವರು ತಿಳಿದಿದ್ದರು. ಅದಕ್ಕಾಗಿ ಅವರು ಸ್ಥಳೀಯ ಸ್ವಾಮಿಗಳಂತೆಯೇ ಕಾವಿ ಉಡುಪು ತೊಟ್ಟು ಸಂಚರಿಸುತ್ತಿದ್ದರು. ದಕ್ಷಿಣ ಇಂಡಿಯಾದ ಎಲ್ಲ ಭಾಷೆಗಳಲ್ಲೂ ಪರಿಣತಿ ಪಡೆದ ಅವರು ಸಂಸ್ಕೃತವನ್ನೂ ಅಭ್ಯಸಿಸಿದ್ದರು. ಆದರೆ ಈ ಸ್ಥಳೀಯ ಕ್ರೈಸ್ತರ ಅಪಕ್ವ ಧರ್ಮನಿಷ್ಠೆಯ ಕುರಿತು ದ್ಯು ಬುವಾ ಸ್ವಾಮಿಗಳಿಗೆ ತುಂಬಾ ಅಸಮಾಧಾನವಿತ್ತು. ಧರ್ಮಪ್ರವರ್ತನೆಯ ಪ್ರಯಾಸ ಕ್ಷೇತ್ರದಲ್ಲಿ ಮೂವತ್ತೆರಡು ವರ್ಷಗಳ ಕಾಲ ದುಡಿದರೂ ಅವರ ದುಡಿಮೆ ಸತ್ಫಲಗಳನ್ನು ಕಾಣಲಿಲ್ಲ. ಇಂಡಿಯಾದ ಮಣ್ಣಿನಲ್ಲಿ ಶತಮಾನಗಳಿಂದ ಬೇರೂರಿರುವ ಪೂರ್ವಗ್ರಹಗಳ ಕಾರಣ ಸದ್ಯದ ಪರಿಸ್ಥಿತಿಯಲ್ಲಿ ಹೊಸಬರ ಮನಪರಿವರ್ತನೆ ಸಾಧ್ಯವಿಲ್ಲ ಎಂಬ ಅಭಿಪ್ರಾಯಕ್ಕೆ ಬರುವ ಅವರು ಪ್ಯಾರಿಸ್ಸಿಗೆ ಹಿಂದಿರುಗಲು ಮನಸ್ಸು ಮಾಡುತ್ತಾರೆ.
ಅವರು ಬರೆದ ಇಂಡಿಯಾ ದೇಶದ ಕ್ರೈಸ್ತಧರ್ಮದ ವಸ್ತುಸ್ಥಿತಿಯ ಕುರಿತ ವರದಿಯು  "Letters on the State of Christianity in India" ಎಂಬ ಹೆಸರಿನಲ್ಲಿ ಲಂಡನ್ನಿನಲ್ಲಿ ೧೮೨೩ರಲ್ಲಿ ಪ್ರಕಟವಾಯಿತು. ಕೂಡಲೇ ಲಂಡನ್ನಿನಲ್ಲಿ ಆ ವರದಿಯ ವಿರುದ್ಧದ ಅಸಹನೆ ಭುಗಿಲೇಳುತ್ತದೆ. ದ್ಯುಬುವಾ ಅವರ ವರದಿಗೆ ಎದುರಾಗಿ ಜೇಮ್ಸ್ ಹೋ "A Reply to the Letters of the Abbé Dubois" (ಎ ರಿಪ್ಲೈ ಟು ದ ಲೆಟರ‍್ಸ್ ಆಫ್ ಅಬ್ಬೆ ದ್ಯುಬುವಾ, ಅಬ್ಬೆ ದ್ಯುಬುವಾ ಪತ್ರಕ್ಕೆ ಪ್ರತ್ಯುತ್ತರ) ಮತ್ತು ಎಚ್ ಟೌನ್ಲಿ ಅವರು "An Answer to the Abbé Dubois" (ಅನ್ ಆನ್ಸರ್ ಟು ಅಬ್ಬೆ ದ್ಯುಬುವಾ, ಅಬ್ಬೆ ದ್ಯು ಬುವಾರಿಗೆ ಒಂದು ಉತ್ತ) ಗಳನ್ನು ಪ್ರಕಟಿಸುತ್ತಾರೆ. ಕಲ್ಕತ್ತಾದಿಂದ ಪ್ರಕಟವಾಗುತ್ತಿದ್ದ "The Friend of India" ಎಂಬ ಪತ್ರಿಕೆಯು ಅಬ್ಬೆ ದ್ಯುಬುವಾ ಅವರ ವರದಿಗೆ ಬಂದ ಖಂಡನೆಯನ್ನೂ ಅದಕ್ಕೆ ತರ್ಕಬದ್ಧವಾಗಿ ದ್ಯಬುವಾ ಅವರು ಬರೆದ ಸ್ಪಷ್ಟೀಕರಣವನ್ನೂ ಪ್ರಕಟಿಸಿತು. ಇದು ಆಮೇಲೆ ೧೮೨೫ ಮೇ ತಿಂಗಳಲ್ಲಿ "Bulletin des Sciences" (ವಿಜ್ಞಾನಗಳ ಮಾಹಿತಿ) ಯಲ್ಲೂ ಬೆಳಕು ಕಂಡಿತು. ೧೮೪೧ರಲ್ಲಿ ಏಷಿಯಾಟಿಕ್ ಜರ್ನಲ್ ತನ್ನ ಮೊದಲ ಆವೃತ್ತಿಯನ್ನು ಹೊರತಂದಾಗ ಅದರಲ್ಲೂ ಪ್ರಕಟವಾಯಿತು.
೧೮೦೭ರಲ್ಲಿ ಅಬ್ಬೆ ದ್ಯುಬುವಾ ಅವರ Hindu manners, customs and ceremonies ಪುಸ್ತಕದ ಫ್ರೆಂಚ್ ಹಸ್ತಪ್ರತಿಯನ್ನು ಈಸ್ಟ್ ಇಂಡಿಯಾ ಕಂಪೆನಿಯ ಪರವಾಗಿ ಲಾರ್ಡ್ ವಿಲಿಯಂ ಬೆಂಟಿಕ್ಕನು ಎಂಟು ಸಾವಿರ ರೂಪಾಯಿಗಳಿಗೆ ಖರೀದಿಸಿದನು. ೧೮೧೬ರಲ್ಲಿ ಅದರ ಇಂಗ್ಲಿಷ್ ಆವೃತ್ತಿಯು ಮುದ್ರಣವಾಯಿತು. (೧೮೬೪ರಲ್ಲಿ ಅದು ಮರುಮುದ್ರಣ ಕಂಡಿತು.) ಕೆಲಕಾಲಾನಂತರ ಅಬ್ಬೆ ದ್ಯುಬುವಾ ಅವರು ಇದನ್ನು ಹಿಗ್ಗಿಸಿ ಫ್ರೆಂಚ್ ಭಾಷೆಯಲ್ಲಿ ಮೆರ್ ಆನ್ಸ್ತಿತ್ಯುತಿಯೋಂ ಎ ಸೆರೆಮೊನೀ ದೇ ಪೇಪಲ್ ದೆಲಾಂದ್ (Moeurs, institutions, et cérémonies des peuples de l'Inde (Paris, 1825, 2 vols.), ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಇದು ಆ ವಿಷಯಾಧ್ಯಯನದ ಅತ್ಯುತ್ತಮ ಹಾಗೂ ಪರಿಪೂರ್ಣ ಪುಸ್ತಕವೆಂದು ಪರಿಗಣಿತವಾಗಿದೆಯಲ್ಲದೆ ಸ್ಪಾನಿಷ್ ಭಾಷೆಯಲ್ಲೂ ಪ್ರಕಟವಾಯಿತು. ಇದಲ್ಲದೆ ದ್ಯುಬುವಾ ಅವರು ಇನ್ನೆರಡು ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ಅವು ’ಬ್ರಾಹ್ಮಣ ಧರ್ಮದ ಪ್ರಮುಖಾಂಶಗಳ ನಿರೂಪಣೆ’ (Exposé de quelques-uns des principaux articles de la théologie des Brahmes -Paris, 1825); ’ವಿಷ್ಣುಶರ್ಮ ಎಂಬ ಬ್ರಾಹ್ಮಣನ ಪಂಚತಂತ್ರ ಅಥವಾ ಚಾಲಾಕಿತನದ ಕತೆಗಳು’ (Le Pantcha-tantra ou les cinq ruses, fables du Brahme Vichnou-Sarma - Paris, 1826). 
ಬ್ರಿಟಿಷ್ ಸರ್ಕಾರದ ಸನ್ಮಿತ್ರನಾಗಿದ್ದ ಅವರು ಕ್ರೈಸ್ತ ಆಸ್ತಿಪಾಸ್ತಿಗಳನ್ನು ಹಿಗ್ಗಿಸಿಕೊಳ್ಳಲು ಆ ಸ್ನೇಹವನ್ನು ಸದುಪಯೋಗ ಪಡಿಸಿಕೊಂಡರು. ೧೮೧೩ರಲ್ಲಿ ಪಾಂಡಿಚೆರಿ ಸೆಮಿನರಿಯು ಹಣದ ಮುಗ್ಗಟ್ಟಿನಲ್ಲಿದ್ದಾಗ ಅದರ ಉಸ್ತುವಾರಿ ವಹಿಸಿಕೊಂಡು ತಮ್ಮದೇ ಸಂಪನ್ಮೂಲಗಳಿಂದ ಅದನ್ನು ಮುನ್ನಡೆಸಿದರು. ೧೮೧೯ರಲ್ಲಿ ಎಂಎಪಿ ಕೇಂದ್ರಕಚೇರಿಯು ಅವರನ್ನು ಪ್ಯಾರಿಸಿಗೆ ಕರೆಸಿಕೊಂಡಿತು. ಅವರು ಸ್ವದೇಶಕ್ಕೆ ಹೊರಡುವ ಮುನ್ನ ಬ್ರಿಟಿಷ್ ಸರ್ಕಾರದ ಕೋರಿಕೆಯ ಮೇರೆಗೆ ತಮ್ಮ ವರ್ಣಚಿತ್ರ ರಚನೆಗೆ ಅನವು ಮಾಡಿಕೊಟ್ಟರು. ಆ ಚಿತ್ರವನ್ನು ಮದ್ರಾಸ್ ಅಕಾಡೆಮಿಯಲ್ಲಿಡಲಾಯಿತು. ಆ ವರ್ಣಚಿತ್ರದ ಮೇಲೆ J S Dubois Missionary Seringapatam 1st Dec 1826 ಎಂದು ಬರೆಯಲಾಗಿದೆ.
ಪ್ಯಾರಿಸ್ಸಿಗೆ ಹಿಂದಿರುಗಿದ ಮೇಲೆ ಅಬ್ಬೆ ದ್ಯುಬುವಾ ಅವರು ತಮ್ಮ ಎಂಇಪಿ ಸಂಸ್ಥೆಯ ನಿರ್ದೇಶಕರಾದರು. ರಾಯಲ್ ಸೊಸೈಟಿ ಆಫ್ ಗ್ರೇಟ್ ಬ್ರಿಟನ್ ಮತ್ತು ಪ್ಯಾರಿಸ್ ಗಳ ಸದಸ್ಯರೂ ಆಗಿದ್ದ ಅವರು ನಮ್ಮ ದೇಶದ ಸಾಂಸ್ಕೃತಿಕ ಅಧ್ಯಯನಕ್ಕೆ ಹಲವು ಕೊಡುಗೆಗಳನ್ನು ನೀಡಿದರು.
ಎಂಇಪಿ ಸಂಸ್ಥೆಯು ವಹಿಸಿದ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ಫಾದರ್ ದ್ಯುಬುವಾ ಅವರು ೧೮೪೮ರ ಫೆಬ್ರವರಿ ೧೭ರಂದು ಸ್ವರ್ಗಸಾಮ್ರಾಜ್ಯ ಸೇರಿದರು.