ಶುಕ್ರವಾರ, ಸೆಪ್ಟೆಂಬರ್ 19, 2014

ಮಕ್ಕಳನ್ನು ಗೌರವಿಸಿ

ನ್ಯಗ್ರೋಧ ಬೀಜಂ ಕೆಲಂ ಸಿಡಿದು ಪೆರ್ಮರನಾಗದೇ, ಎಳೆಗರುಂ ಎತ್ತಾಗದೇ, ದೈವಾನುಗ್ರಹಮಿದ್ದೊಡಂ ಬಡವಂ ಬಲ್ಲಿದನಾಗನೇ? ಎಂದು ಕನ್ನಡದ  ಕವಿಯೊಬ್ಬ ಹಾಡಿದ್ದಾನೆ. ಪದ್ಯದ ವಿವರಣೆ ಹೀಗಿದೆ: ಆಲದ ಮರದ ಬೀಜವು ಸಾಸಿವೆ ಕಾಳಿಗಿಂತ ಚಿಕ್ಕದು ಆದರೆ ಅದು ಮೊಳೆತು ಭಾರೀ ಗಾತ್ರದ ಮರವನ್ನು ಹುಟ್ಟುಹಾಕುತ್ತದೆ, ಮುದ್ದು ಮುದ್ದಾಗಿ ಜಿಗಿಯುವ ಕರು ನಮ್ಮ ಕಣ್ಣ ಮುಂದೆಯೇ ಬೆಳೆದು ಗೂಳಿಯಾಗಿ ಹೆದರಿಸುವುದಿಲ್ಲವೆ ಹಾಗೆಯೇ ಇಂದು ಬಡವನಾಗಿರುವವನು ದೈವೇಚ್ಛೆಯಿಂದ ನಾಳೆ ಸಿರಿವಂತನಾಗಲೂ ಬಹುದು. ಪವಿತ್ರ ಬೈಬಲಿನಲ್ಲಿ ನಮಗೆ ಇಂಥ ಹಲವು ಉದಾರಣೆಗಳು ಕಾಣಸಿಗುತ್ತವೆ.
ಮೊದಲಿಗೆ ನಾವು ಜೋಸೆಫ್ ಮತ್ತು ಅವನ ಹನ್ನೆರಡು ಸೋದರರ ಕತೆಯನ್ನೇ ತೆಗೆದುಕೊಳ್ಳೋಣ. ಪುಟ್ಟಹುಡುಗ ಜೋಸೆಫ್ ಚಿತ್ರವಿಚಿತ್ರವಾದ ಕನಸುಗಳನ್ನು ಕಾಣುತ್ತಿದ್ದ. ಆದರೆ ಅವನ ತಂದೆ ಜಾಕೋಬನಿಗೆ ತನ್ನ ಮಗನ ಮೇಲೆ ಭರವಸೆತ್ತು. ಅಣ್ಣಂದಿರಾದರೋ ಅವನನ್ನು ಕನಸುಗಾರ ಕನಸುಗಾರ ಎಂದು ಲೇವಡಿ ಮಾಡುತ್ತಿದ್ದರು. ಕೊನೆಗೆ ಅಣ್ಣಂದಿರು ಅವನನ್ನು ವರ್ತಕರಿಗೆ ಮಾರಿಬಿಟ್ಟರು. ವರ್ತಕರ ಕಣ್ಣಿಗೆ ಜೋಸೆಫ್ ಒಳ್ಳೆ ಹಣಕ್ಕೆ ಮಾರಬಹುದಾದ ಒಬ್ಬ ಗುಲಾಮನಾಗಿ ಕಂಡ. ಜೋಸೆಫನನ್ನು ಕೊಂಡುಕೊಂಡ ಅಧಿಕಾರಿಗೆ ಅವನೊಬ್ಬ ಪ್ರಾಮಾಣಿಕ ಹಾಗೂ ಚುರುಕುಬುದ್ದಿಯ ಸೇವಕನಾಗಿ ಕಂಡ. ಅವನ ಹೆಂಡತಿಗೋ ಅವನೊಬ್ಬ ಸುಂದರ ಸುಕಾಯದ ಪುರುಷನಾಗಿ ಕಂಡ. ಜೈಲಿನಲ್ಲಿ ಅವನ ಸಹವಾಸಿಯಾಗಿದ್ದವರು ಜೋಸೆಫನಲ್ಲಿ ದೈವಭಕ್ತಿಯನ್ನು ಗುರುತಿಸಿದರು. ದೇವರು ಜೋಸೆಫನ ಭವಿಷ್ಯದಲ್ಲಿ ಈಜಿಪ್ಟ್ ದೇಶದ ಪ್ರಧಾನಮಂತ್ರಿಯ ಪಟ್ಟವನ್ನು ಬರೆದಿದ್ದರು.
ಎಸ್ತೆರಳ ಕತೆಯನ್ನೇ ನೋಡಿ. ತಂದೆ ತಾಯಿಯಿಲ್ಲದ ಎಸ್ತೆರ್ ತನ್ನ ಚಿಕ್ಕಪ್ಪನ ನೆರಳಿನಲ್ಲಿ ದೈವಭಕ್ತಿಯ ಜೀವನ ನಡೆಸುತ್ತಿದ್ದಳು. ಹೆಣ್ಣುಮಗಳು ದೈವಪ್ರೇರಣೆಂದ ದೇಶದ ರಾಣಿಯಾದಳು ಮಾತ್ರವಲ್ಲ ತನ್ನ ಜನರನ್ನು ಸುರಕ್ಷಿತವಾಗಿ ಕಾಪಾಡಿದಳು. ಎಲ್ಲೋ ಆಡಿಕೊಂಡಿದ್ದ ಸಮುವೇಲನನ್ನು ಎಲೀಯನನ್ನು ದೇವರು ತನ್ನ ವಕ್ತಾರರನ್ನಾಗಿ ಆರಿಸಿಕೊಳ್ಳಲಿಲ್ಲವೇ? ದೇವರಲ್ಲಿ ಅಪಾರ ನಂಬಿಕೆರಿಸಿದ್ದ ಅಬ್ರಹಾಮನು ಇಳಿವಯಸ್ಸಿನಲ್ಲಿ ತಂದೆಯಾಗಿ ಒಂದು ಮಹಾನ್ ಮನುಷ್ಯಸಂಕುಲಕ್ಕೇ ಪಿತಾಮಹನಾದ. ಕುರಿಗಳನ್ನು ಮೇಸುತ್ತಿದ್ದ ದಾವಿದನನ್ನು ದೇವರು ತಮ್ಮ ಪ್ರಜೆಯ ರಾಜನನ್ನಾಗಿ ಅಭಿಷೇಕಿಸಿದರು. ಈಟಿ ಭರ್ಜಿಗಳನ್ನು ಹಿಡಿದಿದ್ದ ಗೊಲಿಯಾತ ಎಂಬ ದೈತ್ಯನನ್ನು ಪುಟ್ಟ ಹುಡುಗ ದಾವೀದ ತನ್ನ ಕವಣೆಯಿಂದಲೇ ಹೊಡೆದು ಕೆಡವಿದ. ದೈವಸಂಕಲ್ಪವಿದ್ದರೆ ನಿಮ್ಮ ಕೆಲಸದಾಕೆ ಸಹಾ ಒಂದಾನೊಂದು ದಿನ ನಿಮ್ಮ ಕಂಪೆನಿಯ ಸಿಇಒ ಆಗಲೂ ಬಹುದುನಿಮ್ಮ ತೋಟದ ಮಾಲಿ ಮುಂದೊಮ್ಮೆ ನಿಮ್ಮ ಕ್ಷೇತ್ರದ ಎಂಎಲ್ಲೆ ಆದರೂ ಆಗಬಹುದು.

ಅದಕ್ಕೇ ಯೇಸು ಚಿಕ್ಕಮಕ್ಕಳನ್ನು ತನ್ನ ಬಳಿಗೆ ಬರಲು ಬಿಡಿ ದೈವೀಸಾಮ್ರಾಜ್ಯದ ವಾರಸುದಾರರು ಅವರು ಎಂದು ಹೇಳಿದ್ದು. (ಮಾರ್ಕ ೧೦:೧೩-೧೬)ಚಿಕ್ಕಮಕ್ಕಳನ್ನು ನಾವು ನಗಿಸಿದರೆ ನಗುವ ಅಳಸಿದರೆ ಅಳುವ ಆಟದ ಗೊಂಬೆಗಳು ಎಂದುಕೊಂಡಿದ್ದೇವೆ. ನಮ್ಮಲ್ಲಿ ಕೆಲವು ಜನ ಪುಟ್ಟ ಕಂದಮ್ಮಗಳನ್ನು ಕಾಮಪಿಪಾಸುಗಳಂತೆ ಕಾಣುತ್ತಿದ್ದಾರೆ. ಸಮಾಜದ ಘೋರ ವ್ಯಂಗ್ಯವಿದು. ಯೇಸು ಹೇಳಿದಂತೆ ಸ್ವರ್ಗಸಾಮ್ರಾಜ್ಯದ ವಾರಸುದಾರರನ್ನು ಯೇಸುವಿಗೆ ಸಮೀಪವಾಗಿರುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಚಿಕ್ಕ ಹುಡುಗನಾಗಿದ್ದಾಗಲೇ ಯೇಸು ಮಹಾದೇವಾಲಯದ ಧರ್ಮಪಂಡಿತರಲ್ಲಿ ಅನೇಕಾನೇಕ ಪ್ರಶ್ನೆಗಳನ್ನು ಕೇಳಿ ಗಲಿಬಿಲಿಗೊಳಿಸಿದ್ದನಲ್ಲವೇ? ಮುಂದೆ ಅದೇ ಯೇಸು ಅನೇಕ ಜಟಿಲ ಧಾರ್ಮಿಕ ಸಮಸ್ಯೆಗಳಿಗೆ ಮನುಷ್ಯಧರ್ಮದ ಪರಿಹಾರಗಳನ್ನು ಹೇಳಿ ಸಮಾಜದ ಉದ್ಧಾರ ಮಾಡಿದನಲ್ಲವೇ? ಹಾಗೆಯೇ ಇಂದಿನ ಮಕ್ಕಳೂ ಸಹ ಮುಂದೆ ದೊಡ್ಡ ವಿಜ್ಞಾನಿಗಳಾಗಿ, ವೈದ್ಯರಾಗಿ, ಇಂಜಿನಿಯರುಗಳಾಗಿ, ಸಮಾಜದ ಒಳಿತಿಗೆ ದುಡಿಯುವ ಶಿಲ್ಪಿಗಳಾಗುವಂತೆ ಮಾಡೋಣ. ದೇವರು ಕುರಿಕಾಯುವ ದಾವಿದನಲ್ಲಿ ದೇಶಕಾಯುವ ರಾಜನನ್ನು ಕಂಡಂತೆ ಮಕ್ಕಳಲ್ಲಿ ನಾವು ದೊಡ್ಡ ವ್ಯಕ್ತಿತ್ವವನ್ನು ಕಾಣೋಣ. ಮಕ್ಕಳನ್ನು ಗೌರವಿಸೋಣ. ಏಕೆಂದರೆ ಮನುಷ್ಯರಾಗಿ ಹುಟ್ಟಿದ ಎಲ್ಲರಲ್ಲೂ ವ್ಯಕ್ತಿತ್ವವಿದ್ದೇ ಇರುತ್ತದೆ.

ಭಾನುವಾರ, ಆಗಸ್ಟ್ 10, 2014

ಫಾದರ್ ಪಿಯೇರ್ ಅಗಸ್ತೆ ಬೊತೆಲೊ

ಕಳೆದ ಶತಮಾನದಲ್ಲಿ ನಮ್ಮ ಬೆಂಗಳೂರನ್ನೊಳಗೊಂಡ ಮೈಸೂರು ಧರ್ಮಪ್ರಾಂತ್ಯದಲ್ಲಿ ಸೇವೆ ಸಲ್ಲಿಸಿದ ಎಂಇಪಿ ಗುರುಗಳ ಪೈಕಿ ಫಾದರ್ ಪಿಯೇರ್ ಅಗಸ್ತೆ ಬೊತೆಲೊ ಅವರು ತುಂಬಾ ಪ್ರತಿಭಾನ್ವಿತ ಗುರುಗಳಾಗಿದ್ದರು.
೧೮೨೦ ಮೇ ೩೧ರಂದು ಜನಿಸಿದ ಬೊತೆಲೊ ಅವರು ಫ್ರಾನ್ಸಿನ ಲ ಮಾನ್ ಧರ್ಮಪ್ರಾಂತ್ಯದಲ್ಲಿ ೧೮೪೩ರ ಡಿಸೆಂಬರ್ ೩೧ರಂದು ಗುರುದೀಕ್ಷೆ  ಪಡೆದು ಸೋಲ್ಜೆ ಲ ಬ್ರುಯಾಂ ಚರ್ಚಿನ ಗುರುಗಳಾಗಿ ಸೇವೆ ಮಾಡಿದರು. ಅದಾದ ಮೇಲೆ ಬಹುಶಃ ೧೮೪೪ ನವೆಂಬರಿನಲ್ಲಿ ಜೆಸ್ವಿತ್ ಸಭೆಗೆ ಸೇರಿದ್ದರಾದರೂ ಮತ್ತೆ ಕೆಲ ದಿನಗಳಲ್ಲಿಯೇ ಮಾತೃ ಧರ್ಮಪ್ರಾಂತ್ಯಕ್ಕೆ ಹಿಂದಿರುಗಿ ಲವಾಲಿನ ಸಂತ ವೆನೆರಾನ್ ಚರ್ಚಿನಲ್ಲಿ ಗುರುಗಳಾದರು. ೧೮೪೯ರ ಜೂನ್ ೨೯ರಂದು ಇವರು ಎಂಇಪಿ (ಪ್ಯಾರಿಸ್ಸಿನ ಹೊರನಾಡು ಧರ್ಮಪ್ರಚಾರ ಸಂಸ್ಥೆ) ಯ ಮೂಲಕ ನಮ್ಮ ದೇಶಕ್ಕೆ ನಿಯುಕ್ತರಾಗಿ ೧೮೫೦ ಏಪ್ರಿಲ್ ಹತ್ತರಂದು ಮೈಸೂರು ಧರ್ಮಪ್ರಾಂತ್ಯಕ್ಕೆ ಬಂದಿಳಿದರು.
ನಮ್ಮ ನಾಡಿನಲ್ಲಿ ಅಂದು ಬ್ರಿಟಿಷರ ಆಳ್ವಿಕೆಯಿತ್ತು. ಪ್ರೊಟೆಸ್ಟೆಂಟರು ಅಪಾರ ಧನಕನಕಗಳೊಂದಿಗೆ ಸಜ್ಜಾಗಿ ಪುಸ್ತಕಗಳು, ಕರಪತ್ರಗಳು, ಆಸ್ಪತ್ರೆಗಳು, ಶಾಲೆಗಳು ಮುಂತಾದ ಸೇವೆಗಳ ಮೂಲಕ ಕ್ರಿಸ್ತಧರ್ಮವನ್ನು ಗಟ್ಟಿಯಾಗಿ ನೆಲೆಗೊಳಿಸುತ್ತಿದ್ದರು. ಅವರೊಂದಿಗೆ ಪೈಪೋಟಿಗೆ ನಿಲ್ಲಲಾಗದೆ ಕಥೋಲಿಕ ಧರ್ಮಸಭೆ ಸೊರಗುತ್ತಿತ್ತು. ಇದನ್ನು ಮನಗಂಡ ಬೊತೆಲೊ ಅವರು ಕ್ಷಣಿಕ ಕಾಲದಲ್ಲಿಯೇ ನಮ್ಮ ಧರ್ಮಪ್ರಾಂತ್ಯದಲ್ಲಿ ಆಮೂಲಾಗ್ರ ಬದಲಾವಣೆಗೆ ಕಾರಣಕರ್ತರಾಗಿ ಮಿಂಚಿನ ಸಂಚಾರ ಉಂಟುಮಾಡಿದರು.
೧೮೫೧ರಲ್ಲಿ ಬೆಂಗಳೂರಿನ ಸಂತ ಜೋಸೆಫರ ಸೆಮಿನರಿಯ ನಿರ್ದೇಶಕರಾಗಿ ನೇಮಕಗೊಂಡ ಇವರು ಮೂರು ವರ್ಷಗಳ ನಂತರ ಅಂದರೆ ೧೮೫೪ರಲ್ಲಿ ಆ ಗುರುಮಠವನ್ನು ಹೊಸ ರೂಪದಲ್ಲಿ ಪುನರ್ ನಿರ್ಮಾಣ ಮಾಡಿದ ಹೆಗ್ಗಳಿಗೆ ಹೊಂದಿದ್ದಾರೆ. ಇಂದು ಆ ಕಟ್ಟಡವು ಸೆಂಟ್ ಜೋಸೆಫ್ಸ್ ಯೂರೋಪಿಯನ್ ಹೈಸ್ಕೂಲ್ ಎಂದು ಬದಲಾಗಿದೆ. ಅಂದು ಅದರ ನಿರ್ಮಾಣ ವೆಚ್ಚ ಮೂರು ಸಾವಿರ ರೂಪಾಯಿಗಳು. ಅದರ ಆವರಣದಲ್ಲಿ ಒಂದು ಅನಾಥಾಶ್ರಮ ಹಾಗೂ ವಸತಿಶಾಲೆಯೂ ಇತ್ತೆಂದು ದಾಖಲೆಗಳು ಹೇಳುತ್ತವೆ.
ಬೊತೆಲೊ ಅವರ ಸಾಹಿತ್ಯ ಸೇವೆ ಅನುಕರಣೀಯ. ಪ್ರೊಟೆಸ್ಟೆಂಟರ ಪ್ರಾಬಲ್ಯವನ್ನು ಸರಿಗಟ್ಟಲು ಅಪಾರ ಪ್ರಮಾಣದ ಸಾಹಿತ್ಯವರ್ಧನೆ ಅಗತ್ಯವೆಂದು ಅವರು ಮನಗಂಡರು. ಅದಕ್ಕಾಗಿ ಅವರು ಮುದ್ರಣ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡರು. ಕನ್ನಡ ಭಾಷೆಯನ್ನೂ ಚೆನ್ನಾಗಿ ಕಲಿತುಕೊಂಡರು. ಕಥೋಲಿಕ ಧರ್ಮದ ತತ್ವಗಳು, ಪ್ರೊಟೆಸ್ಟೆಂಟರ ತಪ್ಪಾದ ಬೋಧನಾನೀತಿ ಮುಂತಾದ ವಿಷಯಗಳ ಕುರಿತಂತೆ ಪುಸ್ತಕಗಳನ್ನು ಪ್ರಕಟಿಸಿದರು. ಕಥೋಲಿಕ ಮುದ್ರಣಾಲಯವನ್ನೂ ತಾವೇ ಮುನ್ನಡೆಸಿದರು. ಅಲ್ಪಕಾಲದಲ್ಲಿಯೇ ಅವರು ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಲ್ಲದೆ ತಾವು ಮುದ್ರಿಸಿದ ಪುಸ್ತಕಗಳನ್ನು ೧೮೬೭ರಲ್ಲಿ ಪ್ಯಾರಿಸ್ಸಿನಲ್ಲಿ ನಡೆದ ಅಂತರಾಷ್ಟ್ರೀಯ ಪುಸ್ತಕಮೇಳದ ಪ್ರದರ್ಶನಕ್ಕೆಂದು ಕಳಿಸಿಕೊಟ್ಟರು. ಈ ಅನುಭವದ ಆಧಾರದಲ್ಲಿ ಅವರು ೧೮೭೦ರಲ್ಲಿ ಕನ್ನಡ ಪುಸ್ತಕಗಳ ಮುದ್ರಣ ಮತ್ತು ಪ್ರಕಾಶನದ ಕುರಿತಂತೆ ಒಂದು ಯೋಜನಾವರದಿಯನ್ನು ಸಿದ್ಧಪಡಿಸಿದರು.
೧೮೬೧ರಲ್ಲಿ ಅವರು ಕಥೋಲಿಕ ಧರ್ಮದ ಪರಿಚಯ ಮತ್ತು ಪ್ರೊಟೆಸ್ಟೆಂಟರ ಖಂಡನೆಯುಳ್ಳ ಸತ್ಯೋಪದೇಶಎಂಬ ಪುಸ್ತಕವನ್ನು ಪ್ರಕಟಿಸಿದರು. ಕೆಲದಿನಗಳಲ್ಲೇ ಆ ಲೇಖನಗಳನ್ನು ಬಿಡಿಬಿಡಿಯಾಗಿ ಪುಸ್ತಕಗಳನ್ನಾಗಿಸಿದರು. ತಿರುಸಭೆಯ ಲಕ್ಷಣಗಳು, ಕನ್ನಡ ಜ್ಞಾನೋಪದೇಶವು, ಹಬ್ಬ ಸಾಂಗ್ಯಗಳ ವ್ಯಾಖ್ಯಾನವು, ಪತಿತರ ಖಂಡನೆಯು ಅಥವಾ ವೇದ ಮಾರ್ಪಡಿಸುವಿಕೆಯು (Refutation of Protestantism) ಎಂಬ ಆ ಪುಸ್ತಕಗಳು ಹಲವಾರು ಮರುಮುದ್ರಣಗಳನ್ನು ಕಂಡವು. ಇದರಲ್ಲಿ ೧೩೮ ಪುಟಗಳ ಹಬ್ಬ ಸಾಂಗ್ಯಗಳ ವ್ಯಾಖ್ಯಾನವುತಮಿಳಿನಿಂದ ಅನುವಾದವಾಗಿದ್ದು ೧೮೮೨ರಲ್ಲಿ ಮರುಮುದ್ರಣ ಕಂಡಿತು ಹಾಗೂ ೧೮೯೭ರಲ್ಲಿ ಪರಿಷ್ಕೃತ ಮುದ್ರಣ ಕಂಡಿತು. ಕನ್ನಡ ಜ್ಞಾನೋಪದೇಶವು (೧೦೨ ಪುಟಗಳು) ೧೮೯೯ರಲ್ಲಿ ಪರಿಷ್ಕೃತವಾಯಿತು.
ಇವಲ್ಲದೆ ಬೊತೆಲೊ ಅವರು ಕಥೋಲಿಕ ಶಾಲೆಗಳಲ್ಲಿ ಓದುತ್ತಿದ್ದ ಮಕ್ಕಳ ಬಳಕೆಗಾಗಿ ಬ್ರಿಟಿಷ್ ಸರ್ಕಾರದ ಕೋರಿಕೆಯ ಮೇರೆಗೆ ಇಂಗ್ಲೆಂಡು ಶೀಮೆಯ ಚರಿತ್ರೆ (Histoire d'Angleterre) (೧೯೪ ಪುಟಗಳು), ಭೂಗೋಳ ಶಾಸ್ತ್ರದ ಸಂಕ್ಷೇಪವು (೪೩೮ ಪುಟಗಳು), ಗಣಿತದ ಪುಸ್ತಕ, ಓನಾಮಗಳು, ಬಾಲರು ಓದುವ ಪುಸ್ತಕ ಮುಂತಾದ ಪಠ್ಯಪುಸ್ತಕಗಳನ್ನೂ ಪ್ರಕಟಿಸಿದರು. ಮೈಸೂರು ಪ್ರಾಂತ್ಯದ ಕಥೋಲಿಕ ಗುರು ಅಭ್ಯರ್ಥಿಗಳ ಬಳಕೆಗೆ ಅನುವಾಗಲೆಂದು ೧೮೫೫ರಲ್ಲಿ ೧೦೦೮ ಪುಟಗಳ ಲತೀನು ಕನ್ನಡ ಅಕಾರಾದಿ(Dictionarium Canarense latinul ad usum Maïsurensis catholici seminarii) ಹಾಗೂ ತಿರುಸಭೆಯ ಚರಿತ್ರೆಯು (೧೮೬೭) (Histoire de l'Eglise) ಎಂಬ ಪುಸ್ತಕದ ಎರಡು ಸಂಪುಟಗಳನ್ನು (ಪುಟಗಳು ೩೯೨ + ೪೪೮) ಹೊರತಂದರು. ಸೆಮಿನರಿಯಲ್ಲಿ ಬೋಧಕರಾಗಿದ್ದವರು ನಮ್ಮ ದೇಶದ ಮತವಿಚಾರಗಳನ್ನು ಅರಿತಿರುವುದು ಒಳ್ಳೆಯದು ಎಂಬ ಉದ್ದೇಶದಿಂದ ಭಾರತೀಯ ತತ್ವಶಾಸ್ತ್ರದ ಪರಿಚಯ (Philosophiae Indicae Expositio ad usum scholarum) ಎಂಬ ೧೨೮ ಪುಟಗಳ ಗ್ರಂಥವನ್ನು ೧೮೬೮ರಲ್ಲಿ ಪ್ರಕಟಿಸಿದರು. ಬೊತೆಲೊ ಅವರು ರಚಿಸಿದ ಮತ್ತೊಂದು ಮಹೋನ್ನತ ಕೃತಿ ಕನ್ನಡ ಲತೀನು ನಿಘಂಟು (Dictionarium Canarense-Latinum) ೧೮೫೫ರಲ್ಲಿ ಪ್ರಕಟವಾಯಿತು.
ಫಾದರ್ ಬೆಶ್ಚಿಯವರು ತಮಿಳಿನಲ್ಲಿ ಬರೆದಿದ್ದ ಜ್ಞಾನಬೋಧಕ (೧೮೬೪) ಎಂಬ ಪುಸ್ತಕವನ್ನು ಹಾಗೂ ಅದೇ ರೀತಿ ತಮಿಳಿನಲ್ಲಿ ಜನಪ್ರಿಯವಾಗಿದ್ದ ಅರ್ಚಶಿಷ್ಟರ ಚರಿತ್ರೆಯು (೧೮೬೯) ಎಂಬ ಪುಸ್ತಕವನ್ನು ಅನುವಾದಿಸಿ ಪ್ರಕಟಿಸಿದರು. ೨೦೮ ಪುಟಗಳ ಆ ಪುಸ್ತಕವು ೧೮೯೯ರಲ್ಲಿ ಮರುಮುದ್ರಣವಾಯಿತು. ಕನ್ನಡ ಕ್ರೈಸ್ತರಲ್ಲಿ ನೆನ್ನೆಮೊನ್ನೆಯವರೆಗೂ ಅತ್ಯಂತ ಜನಪ್ರಿಯವಾಗಿ ಬಳಕೆಯಲ್ಲಿದ್ದ ಆದಿತ್ಯವಾರದ ಅದ್ಭುತವು (Les miracles du dimanche) ಎಂಬ ಎರಡು ಸಂಪುಟಗಳ ಪುಸ್ತಕವನ್ನು ಮೊತ್ತಮೊದಲು ಅಂದರೆ ೧೮೬೭ರಲ್ಲಿ ಪ್ರಕಟಿಸಿದ ಹೆಗ್ಗಳಿಕೆಯೂ ಬೊತೆಲೊ ಅವರದು. ಆನಂತರದಲ್ಲಿ ಸ್ವಾಮಿ ದೆಸೇಂ ಅವರು ಅವನ್ನು ಮರುಮುದ್ರಣ ಮಾಡಿದರು. ಶಿಷ್ಟಕನ್ನಡದ ತಿರುಳು (Elementa Prodiae Canarensis) ಎಂಬ ೩೮ ಪುಟಗಳ ಕಿರುಪುಸ್ತಕ ೧೮೭೦ರಲ್ಲಿ ಪ್ರಕಟಿಸಿದ್ದಾರಾದರೂ ಅದರ ಮೂಲ ಲೇಖಕರು ಯಾರೆಂಬುದು ಖಚಿತವಾಗಿಲ್ಲ. ಕನ್ನಡ ಛಂದಸ್ಸುಗಳ ಕುರಿತೂ ಸಹ ಅವರು ಲತೀನ್ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿರುವರೆಂದು ದಾಖಲೆಗಳಿಂದ ತಿಳಿದು ಬರುತ್ತದೆ. ಐರೋಪ್ಯರಿಗಾಗಿ ಕನ್ನಡ ವ್ಯಾಕರಣದ ಪುಸ್ತಕ Grammatica Canarico-Latina ad usum scholarum (೧೮೬೫) (೨೯೦ ಪುಟಗಳು) ಹಾಗೂ ಕನ್ನಡಿಗರಿಗೆ ಲತೀನು ವ್ಯಾಕರಣ’ (೧೮೬೯) ವನ್ನು ಪರಿಚಯಿಸಿದ್ದು ಕನ್ನಡಕ್ಕೆ ಸಂದ ಅಮೋಘ ಕೊಡುಗೆಯೇ ಸರಿ.
ಬಿಷಪ್ ಶಾರ್ಬೊನೊ ಅವರ ಕೋರಿಕೆಯ ಮೇರೆಗೆ ನಮ್ಮ ಶಾಲೆಗಳಿಗೆ ಇಂಗ್ಲಿಷ್ ಶಿಕ್ಷಕರನ್ನು ನೇಮಿಸಿಕೊಳ್ಳಲು ೧೮೫೮ರಲ್ಲಿ ಯೂರೋಪಿಗೆ ತೆರಳಿದರಾದರೂ ಅದು ಪ್ರಯೋಜನವಾಗದೆ ಅವರು ಬರಿಗೈಯಲ್ಲಿ ಹಿಂದಿರುಗಬೇಕಾಯಿತು. ಆಮೇಲೆ ಅವರ ಸೇವೆ ಚಿಕ್ಕಬಳ್ಳಾಪುರ ಚರ್ಚಿನಲ್ಲಾಯಿತು. ಅದೇ ವೇಳೆಯಲ್ಲಿ ಅವರು ಕನ್ನಳ್ಳಿ, ಮಂಚನಹಳ್ಳಿ ಮುಂತಾದ ಹಲವೆಡೆಗಳಲ್ಲಿ ಪ್ರಾರ್ಥನಾ ಮಂದಿರಗಳನ್ನು ಕಟ್ಟಿದರು.
ಇಷ್ಟೆಲ್ಲ ಸಾಧನೆಗಳನ್ನು ಮಾಡಿದರೂ ಬೊತೆಲೊ ಅವರಿಗೆ ಹೆಸರಿನ ಹಂಬಲ ಇರಲಿಲ್ಲ. ಎಲ್ಲೂ ತಮ್ಮ ಹೆಸರು ಎದ್ದು ಕಾಣದಂತೆ ಅವರು ಕೆಲಸ ಮಾಡಿದ್ದಾರೆ. ತಮ್ಮೆಲ್ಲ ಕೆಲಸಗಳಿಗೂ ಅವರು ತಮ್ಮ ಬಿಷಪರಾಗಿದ್ದ ಶಾರ್ಬೊನೊ ಅವರ ಹೆಸರನ್ನೇ ಆರೋಪಿಸಿದ್ದಾಗಿ ಕಂಡುಬರುತ್ತದೆ. ಏಕೆಂದರೆ ಇವರ ಪದಸಂಪತ್ತು ಮತ್ತು ವಾಕ್ಯಪ್ರಯೋಗಗಳನ್ನೇ ನಾವು ಶಾರ್ಬೊನೊ ಅವರ ಕೃತಿಗಳಲ್ಲೂ ಕಾಣುತ್ತೇವೆ. ಅಥವಾ ತಮ್ಮ ಹೆಸರನ್ನು ಎಲ್ಲೂ ಬಿಂಬಿಸದಂತೆ ಅವರಿಗೆ ಒತ್ತಡವಿತ್ತೇನೋ ತಿಳಿಯದು.
ಅದೇನಾಯಿತೋ ಏನೋ ೧೮೭೨ರಲ್ಲಿ ಇದ್ದಕ್ಕಿದ್ದಂತೆ ಬೊತೆಲೊ ಅವರು ಎಂಇಪಿ ಸಂಸ್ಥೆಯನ್ನು ತೊರೆದು ಕೇರಳದ ಎರಣಾಕುಲದಲ್ಲಿನ ವೆರಾಪೊಲಿಗೆ ತೆರಳಿ ಅಲ್ಲಿನ ಕಾರ್ಮೆಲೈಟ್ ಮಠಕ್ಕೆ ಸೇರಿಕೊಂಡರು. ತಮ್ಮ ಕೊನೆಗಾಲವನ್ನು ಅಲ್ಲಿಯೇ ಕಳೆದ ಅವರು ೧೮೯೨ರ ಮೇ ೨೧ರಂದು ತೀರಿಕೊಂಡರು. ಅವರನ್ನು ವೆರಾಪೊಲಿಯ ಮಗ್ನುಮೆಲ್ ಪ್ರದೇಶದ ಒಂದು ಕಾನ್ವೆಂಟಿನ ಪ್ರಾರ್ಥನಾ ಮಂದಿರದಲ್ಲಿ ಸಮಾಧಿ ಮಾಡಲಾಗಿದೆಯೆಂದು ದಾಖಲೆಗಳು ಹೇಳುತ್ತವೆ.
ಬಹುಮುಖ ಪ್ರತಿಭೆಯ ಈ ಗುರುಗಳು ಕೇರಳಕ್ಕೆ ತೆರಳಿದ ಮೇಲೆ ಇಪ್ಪತ್ತು ವರ್ಷಗಳ ಕಾಲ ಅಲ್ಲಿ ಜೀವಿಸಿದ್ದರು. ಆ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಅವರು ಸುಮ್ಮನೆ ಕೂಡದೆ ಏನಾದರೂ ಸಾಧಿಸಿರುತ್ತಾರೆ. ಆದರೆ ನಮಗೆ ಆ ಕುರಿತ ಮಾಹಿತಿ ಲಭ್ಯವಿಲ್ಲ. ಕಾರ್ಮೆಲ್ ಸಭೆಯವರು ಅವರಿಗೆ ಅಗಸ್ಟಿನ್ ದೆ ಲ ಸಾಂತಾ ವಿರ್ಗೆ (ಪವಿತ್ರ ಕನ್ಯೆಯ ಅಗಸ್ಟಿನ್) ಎಂದು ಮರುನಾಮಕರಣ ಮಾಡಿದ್ದಂತೆ ತೋರುತ್ತದೆ. ಆ ಹೆಸರಿನಲ್ಲಿಯೇ ಅವರು ಲತೀನ್ ಭಾಷೆಯಲ್ಲಿ ಮಲಬಾರ್ ವ್ಯಾಕರಣ, ಇಂಗ್ಲಿಷಿನಲ್ಲಿ ಮಲಬಾರ್ ವ್ಯಾಕರಣ ಹಾಗೂ ಗುರುಮಠದ ಅಭ್ಯರ್ಥಿಗಳಿಗಾಗಿ ಇಂಗ್ಲಿಶು-ಮಲಬಾರ್ ನಿಘಂಟುವನ್ನು ಪ್ರಕಟಿಸಿದ ಉಲ್ಲೇಖವಿದೆ. ಅದರ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯಬೇಕಾಗಿದೆ.


ಮಕ್ಕಳ ಜೀವೋದಯ

ತಂದೆತಾಯಿಯರ ಪ್ರೀತಿಯಿಂದ ವಂಚಿತರಾದ ಅಥವಾ ಕೆಟ್ಟ ಸಹವಾಸ ಕೆಟ್ಟ ಆಕರ್ಷಣೆಗೆ ಒಳಗಾದ ಮಕ್ಕಳು ಮನೆಬಿಟ್ಟು ಓಡಿಹೋಗಿ ಅಪರಿಚಿತ ಊರಿನಲ್ಲಿ ಮತ್ತಷ್ಟು ಕೆಟ್ಟುಹೋಗುವುದು ಸಾಮಾನ್ಯ ಸಂಗತಿ. ಅದರಲ್ಲೂ ಬೆಂಗಳೂರಿನಂಥ ನಗರಗಳಲ್ಲಿ ಬೀದಿಗೆ ಬಿದ್ದ ಇಂಥ ಮಕ್ಕಳು ತಬ್ಬಲಿಗಳಂತೆ ಬೀದಿ ಬೀದಿ ಅಲೆಯುವುದು, ತಿರುಪೆ ಎತ್ತುವುದು, ಕದಿಯುವುದು, ಇಲ್ಲವೇ ಸಮಾಜಘಾತುಕರ ಕೈಯ ಸೂತ್ರದ ಬೊಂಬೆಯಾಗುವುದು ನಡೆದೇ ಇದೆ. ಪ್ರಾಯದ ಹೆಣ್ಣುಮಕ್ಕಳಂತೂ ತಾವೂ ಕೆಟ್ಟು ಸಮಾಜವನ್ನೂ ಕೆಡಿಸುವುದು ನಾಗರಿಕ ಸಮಾಜಕ್ಕೆ ಪಿಡುಗಾಗಿದೆ. ಇಂಥವನ್ನು ಗ್ರಹಿಸುವ ಪೊಲೀಸು ಇಲಾಖೆ ಇಂಥ ಮಕ್ಕಳನ್ನು ಹಿಡಿದು ಬಾಲಕುಟೀರಗಳಿಗೆ ಸೇರಿಸುತ್ತಾರೆ. ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಇಂಥ ಮಕ್ಕಳನ್ನು ಅವರ ತಾಯ್ತಂದೆಯರಿಗೆ ಅಥವಾ ಅವರು ಅನಾಥರಾಗಿದ್ದಲ್ಲಿ ಪೋಷಣೆಯ ಹೊರೆ ಹೊರುವ ಸರ್ಕಾರೇತರ ಸೇವಾ ಸಂಸ್ಥೆಗಳ ಸುಪರ್ದಿಗೆ ಒಪ್ಪಿಸುತ್ತಾರೆ.
ಸೇವಾ ಮನೋಭಾವದ ಈ ಸರ್ಕಾರೇತರ ಸಂಸ್ಥೆಗಳು ಸಾರ್ವಜನಿಕ ದೇಣಿಗೆಯ ನೆರವಿನಿಂದ ಇಂಥ ಮಕ್ಕಳನ್ನು ಪಡೆದು ಅವರಿಗೆ ಸ್ವಚ್ಛತೆಯನ್ನು ಕಲಿಸಿ ಶಿಕ್ಷಣ ನೀಡಿ ಉತ್ತಮ ನಾಗರಿಕರನ್ನಾಗಿ ರೂಪಿಸುತ್ತದೆ. ಅಂಥ ಒಂದು ಸಂಸ್ಥೆ ’ಮಕ್ಕಳ ಜೀವೋದಯ’. ಪವಿತ್ರ ಶಿಲುಬೆಯ ಸೋದರಿಯರು (Holy Cross Sisters) ಲೈಂಗಿಕ ದೌರ್ಜನ್ಯ, ಅಗ್ಗದ ದುಡಿಮೆಗಳಿಂದ ಶೋಷಿತರಾದ ೧೭ವರ್ಷಕ್ಕಿಂತ ಕೆಳಗಿನ ಬಡ ಹೆಣ್ಣುಮಕ್ಕಳನ್ನು ಮಕ್ಕಳ ಕಲ್ಯಾಣಕೇಂದ್ರವೆಂಬ ಸರ್ಕಾರಿ ಆಶ್ರಯದಿಂದ ಪಡೆದು ಕೈಯಾಸರೆ ನೀಡುವ ಸದಾಶಯದಿಂದ ಮಕ್ಕಳ ಜೀವೋದಯವನ್ನು ೨೦೦೭ರಲ್ಲಿ ಹುಟ್ಟುಹಾಕಿದರು. ಮಕ್ಕಳ ನ್ಯಾಯಾಲಯದ ಮಧ್ಯಸ್ತಿಕೆಯಲ್ಲಿ ಈ ಸಂಸ್ಥೆಯು ಮಕ್ಕಳನ್ನು ಪಡೆದು ಅವರ ಬೌದ್ಧಿಕ ವಿಕಾಸಕ್ಕೆ ನೆರವಾಗಿ ಉತ್ತಮ ಭವಿಷ್ಯ ರೂಪಿಸುತ್ತದೆ.
ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಈ ಮಕ್ಕಳನ್ನು ದೇವರಧ್ಯಾನ ಮತ್ತು ಪೂಜೆಗೆ ಅಣಿಗೊಳಿಸಲಾಗುತ್ತದೆ. ಅವರು ಬೆಳಗ್ಗೆ ೫.೩೦ಕ್ಕೆಲ್ಲ ಕರ್ಮಗಳನ್ನು ಮುಗಿಸಿ ದೇವರ ಭಜನೆ ಮಾಡುತ್ತಾರೆ. ಪ್ರಾರ್ಥನೆಯ ನಂತರ ಅವರಿಗೆ ಯೋಗ ಕಲಿಸಲಾಗುತ್ತದೆ. ಸುಮಾರು ಇಪ್ಪತ್ತು ನಿಮಿಷಗಳ ಯೋಗಾಭ್ಯಾಸ ಮಕ್ಕಳಲ್ಲಿ ಶಿಸ್ತು ಮತ್ತು ಏಕಾಗ್ರತೆಯನ್ನು ಬೆಳೆಸುತ್ತದೆ.
ಆಮೇಲೆ ತಿಂಡಿ ತಿಂದು ಮಕ್ಕಳು ಓದಲು ತೊಡಗುತ್ತಾರೆ. ಸಿಸ್ಟರುಗಳು ಅಥವಾ ಸ್ವಯಂಸೇವಕರು ಮಕ್ಕಳ ಓದಿಗೆ ನೆರವು ನೀಡುತ್ತಾರೆ. ಇದು ಹೆಚ್ಚಿನ ಪಾಲು ವಾರದಂತ್ಯಗಳಲ್ಲಿ ನಡೆಯುತ್ತದೆ. ಓದಿನ ಸಮಯದಲ್ಲಿ ಅಲ್ಲಿ ಪ್ರಶಾಂತ ಮೌನ ಆವರಿಸುತ್ತದೆ. ಬೆಂಚುಗಳ ಮೇಲೆ, ವೆರಾಂಡದ ನೆಲದ ಮೇಲೆ, ಮನೆಯ ಹೊರಗಿನ ಹುಲ್ಲುಹಾಸಿನ ಮೇಲೆ ಎಲ್ಲಿ ನೋಡಿದರೂ ಪುಸ್ತಕ ಹಿಡಿದು ಓದುತ್ತಿರುವ ಮಕ್ಕಳ ಸಾಲು.
ಆಮೇಲೆ ಮಕ್ಕಳೆಲ್ಲ ಒಟ್ಟಿಗೆ ಶಾಲೆಗೆ ತೆರಳಿ ಸಂಜೆ ಒಟ್ಟಿಗೆ ಹಿಂದಿರುಗಿ ಆಟೋಟಗಳಲ್ಲಿ ನಿರತರಾಗುತ್ತಾರೆ. ದೊಡ್ಡ ಮಕ್ಕಳು ಟ್ಯೂಶನಿಗೆ ಹೋಗುತ್ತಾರೆ.   ಅರ್ಧಗಂಟೆಯ ಈ ಆಟದ ಸಮಯದಲ್ಲಿ ಮಕ್ಕಳು ಬ್ಯಾಡ್ಮಿಂಟನ್ಸ್ಕಿಪ್ಪಿಂಗ್ಟೆನಿಕಾಯ್ಟ್ ಆಡುತ್ತಾರೆ. ಅದಾದ ಕೂಡಲೇ ಮತ್ತೆ ಓದಿನಲ್ಲಿ ತಲ್ಲೀನ. ಸಂಜೆ ಸಂಸ್ಥೆಯ ಎಲ್ಲರೂ ಸೇರಿ ಪ್ರಾರ್ಥನೆ ಮಾಡುತ್ತಾರೆ. ಆಮೇಲೆ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ. ಕೆಲವೊಮ್ಮೆ ದಾನಿಗಳು ಊಟ ನೀಡುವುದುಂಟು. ಕ್ರಿಸ್ಮಸ್, ದೀಪಾವಳಿ, ಸಂಕ್ರಾಂತಿ ಹಬ್ಬಗಳನ್ನು ಮಕ್ಕಳೆಲ್ಲ ಸಡಗರದಿಂದ ಆಚರಿಸುತ್ತಾರೆ. ಹೊಸಬಟ್ಟೆ ಉಟ್ಟು ನಲಿಯುತ್ತಾರೆ. ಆ ದಿನಗಳಲ್ಲಿ ದಾನಿಗಳು ಕೇಕ್, ಸಿಹಿತಿಂಡಿ, ಪಟಾಕಿಗಳನ್ನು ಹಂಚಿ ಸಂಭ್ರಮಿಸುತ್ತಾರೆ. ರಜಾದಿನಗಳಲ್ಲಿ ಪ್ರಾಯೋಜಕರು ಮುಂದೆ ಬಂದು ಮಕ್ಕಳ ಹೊರಸಂಚಾರಕ್ಕೆ ನೆರವಾಗುತ್ತಾರೆ. ಹೀಗೆ ಮಕ್ಕಳು ತಾರಾಲಯ, ಮೈಸೂರು ಮೃಗಾಲಯ ಮುಂತಾದವನ್ನು ವೀಕ್ಷಿಸಿ ಮನತಣಿಯುತ್ತಾರೆ.
ಇಷ್ಟೆಲ್ಲ ಅನುಕೂಲಗಳು ಇದ್ದ ಮೇಲೆ ಮಕ್ಕಳು ತಮ್ಮ ತಾಯ್ತಂದೆಯರನ್ನು ಹುಟ್ಟಿಬೆಳೆದ ಊರನ್ನು ನೆನೆಸಿಕೊಳ್ಳದಿರಲು ಸಾಧ್ಯವೇ ಇಲ್ಲ. ಆದರೂ ಕೆಲವೊಮ್ಮೆ ಹಾಗಾಗುವುದೂ ಉಂಟು. ತಾಯಿ ಹೃದಯದ ಪ್ರೀತಿ ಎಂಥವರನ್ನೂ ಸೆಳೆಯುತ್ತದೆ ಅಲ್ಲವೇ? ಆದ್ದರಿಂದ ಮಕ್ಕಳ ಈ ದೈನಂದಿನ ಚಟುವಟಿಕೆಗಳಿಗೆ ಇಂಬಾಗುತ್ತಲೇ ಅವರ ತಾಯ್ತಂದೆಯರನ್ನು ಹುಡುಕುವ ಕೆಲಸವನ್ನೂ ಸಂಸ್ಥೆ ಮಾಡುತ್ತದೆ. ಮಕ್ಕಳು ನೀಡುವ ಮಾಹಿತಿ ಹಾಗೂ ಕಲ್ಯಾಣಕೇಂದ್ರದಿಂದ ಪಡೆದ ಮಾಹಿತಿಯನ್ನು ಕ್ರೋಢೀಕರಿಸಿ ಇನ್ನಿತರ ಸಹಾಯದೊಂದಿಗೆ ಮಕ್ಕಳ ಪೋಷಕರನ್ನು ಕಂಡುಹಿಡಿದು ಅವರ ಮಡಿಲಿಗೆ ಮಕ್ಕಳನ್ನು ಸೇರಿಸಲಾಗುತ್ತದೆ. ಪೋಷಕರು ತಮ್ಮ ಮಕ್ಕಳನ್ನು ಗುರುತಿಸುವಾಗಿನ ಸನ್ನಿವೇಶ ಅವರ್ಣನೀಯ. ಅವರು ತಮ್ಮ ಮಕ್ಕಳನ್ನು ಅಪಾರವಾಗಿ ಮುದ್ದಿಸುತ್ತಾರೆ, ಮೈದಡವುತ್ತಾರೆ, ಮಡಿಲ ಮೇಲೆ ಕುಳ್ಳಿರಿಸಿಕೊಳ್ಳುತ್ತಾರೆ, ತಲೆ ಬಾಚುತ್ತಾರೆ. ಆದರೆ ಕಡುಬಡತನ, ಕುಡಿತ, ವಿಪರೀತ ಕಾಯಿಲೆ, ಸೂರಿಲ್ಲದ ಸ್ಥಿತಿ ಮುಂತಾದ ತೊಂದರೆಗಳಲ್ಲಿ ಇರುವವರು ಮಕ್ಕಳನ್ನು ಗುರುತಿಸಿದರೂ ಇಲ್ಲಿನ ವಾತಾವರಣ, ಅನುಕೂಲಸ್ಥಿತಿಗಳನ್ನು ಗಮನಿಸಿ ಮಕ್ಕಳು ತಮ್ಮ ಮನೆಯಲ್ಲಿರುವುದಕ್ಕಿಂತ ಇಲ್ಲಿರುವುದೇ ಉತ್ತಮ ಎಂದು ಭಾವಿಸುತ್ತಾರೆ.
ಮಕ್ಕಳ ಜೀವೋದಯವು ಮಕ್ಕಳಿಗೆ ಮನೆಯಿಂದಾಚೆಯ ಮನೆಯಾಗಿದೆ. ಏಕೆಂದರೆ ಇಲ್ಲಿ ಪ್ರೀತಿ, ಸಹಾಯಹಸ್ತಗಳಿವೆ ಮಾತ್ರವಲ್ಲ ಅವರ ಜೀವನವನ್ನು ಮರುರೂಪಿಸಿಕೊಳ್ಳುವ ವ್ಯವಸ್ಥೆಯಿದೆ. ಕಿತ್ತುತಿನ್ನುವ ಬಡತನ, ಅನೈತಿಕ ಹುಟ್ಟಿನ ಹಿನ್ನೆಲೆ, ಪರಿತ್ಯಕ್ತ ಸಮಾಜದಿಂದ ದೂರಾಗಿ ದೇವರ ಹೂದೋಟದ ಸುಂದರ ಕುಸುಮಗಳಾಗಿ ಬೆಳೆಯುವ ಪರಿಸರವಿದೆ. ಆಗಾಗ್ಗೆ ಸಮಾಜದ ಹಲವು ಸಜ್ಜನರು ಇಲ್ಲಿಗೆ ಭೇಟಿ ನೀಡಿ ಮಕ್ಕಳ ಹುಟ್ಟುಹಬ್ಬ ಮುಂತಾದ ಸಂಭ್ರಮಗಳಲ್ಲಿ ಪಾಲ್ಗೊಂಡು ಸಿಹಿ ಅಥವಾ ಊಟದ ವಿತರಣೆಯಲ್ಲಿ ಆನಂದ ಪಡುತ್ತಾರೆ. ಮಕ್ಕಳಿಗೂ ಅದರಿಂದ ಬಹು ಆನಂದವಾಗುತ್ತದೆ.
ಹೀಗೆ ಅನಾಥ ಮಕ್ಕಳನ್ನು ಪೋಷಿಸಿ ಜೀವನಶೈಲಿಯನ್ನು ಬದಲಾಯಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನದಲ್ಲಿ ಹಲವಾರು ಸಂಸ್ಥೆಗಳು ಎಲೆಮರೆಯ ಕಾಯಂತೆ ಕಾರ್ಯ ನಿರ್ವಹಿಸುತ್ತಿವೆ. ’ನನ್ನ ನಾಮದಲ್ಲಿ ನೀವು ಪರರ‍್ಗೆ ಏನು ಮಾಡ್ವಿರೋ ನನಗೆ ಅದನು ಮಾಡ್ವಿರಿ.’ ಎಂದು ಯೇಸುಸ್ವಾಮಿ ಹೇಳಿದ ಹಾಗೆ.

ಶನಿವಾರ, ಮೇ 31, 2014

ಪ್ರಾರ್ಥನೆ

ಇತ್ತೀಚೆಗೆ ನಾನು ಓದಿದ ಪುಸ್ತಕ ಶಿಕಾರಿಪುರ ಹರಿಹರೇಶ್ವರರು ರಚಿಸಿರುವ “ಬೈಬಲಿನಲ್ಲಿ ಜಾನನ ಸುವಾರ್ತೆ-ಒಂದು ಅಧ್ಯಯನ”
ಅದನ್ನು ಓದಿದ ನಂತರ ನನ್ನ ಮನಸು ಹಾಗೂ ವಿಚಾರಲಹರಿ ಇಂದಿಗೂ ಕೂಡಾ ಒಂದು ರೀತಿಯ ಅಲೌಕಿಕ ಆನಂದದ ತುಮುಲದಲ್ಲಿ ತೇಲುತ್ತಿದೆ. ಹರಿಹರೇಶ್ವರರನ್ನು ನಾನು ನೋಡಿದವನಲ್ಲ. ಜೀವನಕ್ಕಾಗಿ ಅಮೆರಿಕದಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ನೆಲೆನಿಂತಿದ್ದ ಅವರು ಉದ್ಯೋಗದ ಜೊತೆಜೊತೆಗೇ ಅಲ್ಲಿನ ಹಿಂದೂ ಗುಡಿಯಲ್ಲಿ ಪೂಜಾರಿಯಾಗಿ, ಹಿಂದೂ ಬಾಂಧವರ ಧಾರ್ಮಿಕ ರೀತಿ ರಿವಾಜುಗಳ ಪುರೋಹಿತರಾಗಿ, ಎಲ್ಲಕ್ಕಿಂತ ಮೇಲಾಗಿ ಅಲ್ಲಿನ ಕನ್ನಡಿಗರನ್ನು ಒಂದುಗೂಡಿಸಿದ ’ಅಕ್ಕ’ ಎಂಬ ಸಂಘಟನೆಯ ರೂವಾರಿಯಾಗಿ ಗುರುತಿಸಿಕೊಂಡಿದ್ದಾರೆ.
ಅಮೆರಿಕದ ಜೀವನಯಾತ್ರೆಯಲ್ಲಿ ಸಹಜವಾಗಿಯೇ ಅವರು ಕ್ರೈಸ್ತ ಧರ್ಮದ ಆಚರಣೆಗಳ ಹಾಗೂ ಪವಿತ್ರ ಬೈಬಲಿನ ಸಂಸರ್ಗಕ್ಕೆ ಬಂದಿದ್ದಾರೆ. ಯೊವಾನ್ನನು ಬರೆದ ಶುಭಸಂದೇಶವು ಅವರ ಮೇಲೆ ಗಾಢ ಪ್ರಭಾವ ಬೀರಿತೆಂದೂ, ಅದನ್ನು ಭಗವದ್ಗೀತೆಯೊಂದಿಗೆ ಹೋಲಿಸಿ ಸಮಾನ ಅಂಶಗಳನ್ನು ದಾಖಲಿಸುತ್ತಾ ಅಧ್ಯಯನ ಪೂರ್ವಕವಾಗಿ ಓದಿದೆನೆಂದೂ ಅವರು ಈ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.
“ಸುವಾರ್ತೆಗಳಲ್ಲಿ ನನಗೆ ಬಹಳ ಪ್ರಿಯವಾದದ್ದು ಸಂತ ಜಾನನ ಹೆಸರಿನಲ್ಲಿ ಪ್ರಸಿದ್ಧವಾಗಿರುವ ಕೊನೆಯ ಸುವಾರ್ತೆ. . . [ಇ]ಲ್ಲಿ ಮಾತ್ರವೇ ಕಾಣಬರುವ ಹೊಸ ಹೊಸ ವಸ್ತುಗಳ ಪ್ರಾಮುಖ್ಯತೆಯಾದರೂ ಏನು?ಉಳಿದವಲ್ಲೂ ಇದ್ದು, ಇಲ್ಲೂ ಇರುವ, ಕತೆಗಳಲ್ಲಿ ವಿಷಯಗಳಲ್ಲಿ ಈ ಸುವಾರ್ತೆಕಾರ ಮಾಡಿಕೊಂಡಿರುವ ಬದಲಾವಣೆಗಳ ಮತ್ತು ಸೇರ್ಪಡೆಗಳ ಮಹತ್ವವಾದರೂ ಏನು? ಇವೆಲ್ಲ ಚಿಂತನೀಯ ವಿಷಯಗಳು. ನನ್ನ ತೌಲನಿಕ ಅಧ್ಯಯನಕ್ಕೆ ಈ ಸುವಾರ್ತೆಯನ್ನೇ ಏಕೆ ಆರಿಸಿಕೊಂಡಿದ್ದೇನೆಂಬುದು  . . [ಈ ಪುಸ್ತಕವನ್ನು] ಓದಿದಾಗ ಸಹೃದಯರಿಗೆ ಮನವರಿಕೆಯಾಗುವುದು.”
ಎಂದು ಹೇಳಿರುವ ಅವರು ಇಂಥದೊಂದು ಅಧ್ಯಯನ ನಡೆಸಿದ್ದೇನೆ, ಇದನ್ನೇ ಪಿಎಚ್‌ಡಿ ಪ್ರಬಂಧವಾಗಿ ರೂಪಿಸುವ ಬಯಕೆಯಿದೆ, ಕನ್ನಡನಾಡಿನ ಯಾವುದಾದರೂ ಯೂನಿವರ್ಸಿಟಿಯಲ್ಲಿ ಈ ಕುರಿತು ನೋಂದಾಯಿಸಿಕೊಳ್ಳಲು ನೆರವಾಗಿರಿ ಎಂದು ಪ್ರೊಫೆಸರ್ ಅಶ್ವತ್ಥನಾರಾಯಣರನ್ನು ಕೇಳಿದ್ದರಂತೆ. ದುರದೃಷ್ಟವಶದಿಂದ ಅದಾಗಿ ಒಂದೂವರೆ ತಿಂಗಳಲ್ಲೇ ಅವರು ತೀರಿಕೊಂಡರು. ಅವರ ಶವವನ್ನು ಮೈಸೂರಿಗೆ ತಂದಾಗ ಅವರ ಕೊನೆಯ ದರ್ಶನ ಪಡೆಯಲು ಅಪಾರ ಜನಸಂದಣಿ ಕಾದಿತ್ತು.
ಇತ್ತೀಚೆಗೆ ಪ್ರೊ. ಅಶ್ವತ್ಥನಾರಾಯಣರು ದೂರವಾಣಿಯಲ್ಲಿ ಮಾತನಾಡುತ್ತಾ ಒಂದು ಹೊಸ ಪುಸ್ತಕವಿದೆ ಬಂದು  ತೆಗೆದುಕೊಂಡುಹೋಗಿ ಎಂದರು. ಜಾನನ ಸುವಾರ್ತೆಯ ಅಧ್ಯಯನದ ಹಸ್ತಪ್ರತಿಯನ್ನು ಹರಿಹರೇಶ್ವರರ ನಿಧನಾನಂತರ ಅವರ ಶ್ರೀಮತಿ ನಾಗಲಕ್ಷ್ಮೀ ಹರಿಹರೇಶ್ವರರು ಪ್ರಕಟಿಸಿದ್ದ ಪುಸ್ತಕವದು. ಹರಿಹರೇಶ್ವರರ ಕುರಿತು ಪ್ರೊಫೆಸರು ಮಾತನಾಡುತ್ತಿದ್ದ ಹಾಗೇ ಒಂದೆರಡು ಪುಟಗಳತ್ತ ಕಣ್ಣಾಡಿಸಿದೆ. ಯಾವುದೋ ಅವ್ಯಕ್ತ ಆನಂದದ ಭಾವ ಉದಯವಾಗಿ ಆ ಪ್ರಕಾಶ ನನ್ನನ್ನಾವರಿಸಿತು. ನಾವು ದಿನನಿತ್ಯ ಓದುವ ನಮಗೆ ಚಿರಪರಿಚಿತವಾಗಿರುವ ಯೇಸುವಿನ ಜೀವನದ ದೃಶ್ಯಗಳು ಇಂದು ಬೇರೆಯೇ ತೆರನಾಗಿರುವಂತೆ ಇನ್ನಷ್ಟು ಹೊಳಪಾದಂತೆ ಹರಿಹರೇಶ್ವರರು ಮಂಡಿಸುತ್ತಾ ಸಾಗಿದರು.
ನಡುನಡುವೆ ಕೃಷ್ಣನಿಗೆ ಹೋಲಿಸುತ್ತಾ, ಗೀತೆಯ ಮಾತುಗಳನ್ನು ಸಮೀಕರಿಸುತ್ತಾ, ಕಥಾಕಥಿತ ಚರ್ವಿತಚರ್ವಣದ ಸಂಗತಿಗಳನ್ನು ತಿಳಿಯಾಗಿ ನವಿರಾಗಿ ಅಷ್ಟೇ ವಿಶದವಾಗಿ, ಸುಲಲಿತ ಸುಭಗ ಸಲಿಲಧಾರೆಯಾಗಿ ಪ್ರವಹಿಸುತ್ತಾ ಹೋದರು. ಎಷ್ಟೋ ಕಡೆಗಳಲ್ಲಿ ಅವರ ಮಾತು ಅಪೂರ್ಣವಾಗಿದೆ ಆದರೆ ನಮ್ಮ ಮನದಂಗಳಕ್ಕೆ ಮುಂದಿನದು ಗೋಚರವಾಗುತ್ತದೆ. ಮುಂದೆ ಇನ್ನಷ್ಟು ವಿಸ್ತರಿಸಿ ಬರೆಯೋಣ ಎಂದು ಅವರು ಗುರುತು ಹಾಕಿಕೊಂಡಿದ್ದಿದೆ, ಆದರೆ ಬರೆದ ಸಾಲುಗಳೇ ಎಷ್ಟೋ ಸುಳಿವುಗಳನ್ನು ಒಳಗೊಂಡು ನಾನಾರ್ಥ ಶ್ರೀಮಂತಿಕೆಯನ್ನು ತೋರುತ್ತಿವೆ. ಅವರ ಈ ಮಹಾನ್ ಕೃತಿಯಲ್ಲಿ ಬರುವ ಪ್ರಾರ್ಥನೆಯೆಂಬ ಉಪೋದ್ಘಾತದ ಕುರಿತು ಒಂದೆರಡು ಮಾತುಗಳನ್ನು ಇಲ್ಲಿ ಪ್ರಸ್ತುತಪಡಿಸುತ್ತೇನೆ. ಮಿಕ್ಕಿದ್ದನ್ನು ಪುಸ್ತಕ ಕೊಂಡು ಓದಿರೆಂದು ನನ್ನ ಪ್ರಾರ್ಥನೆ.
ಕೇಳಿರಿ ಕೊಡಲಾಗುವುದು ತಟ್ಟಿರಿ ತೆರೆಯುವುದು ಎಂಬ ಯೇಸುವಿನ ನುಡಿಗಳು ಹರಿಹರೇಶ್ವರರ ಮಾತುಗಳಲ್ಲಿ ಗೇಯರೂಪ ಪಡೆದುಕೊಳ್ಳುತ್ತವೆ.  (ಪುಟ ೯೭)
“ತಟ್ಟಿ ಕದವನು ಬೇಗ; ಒಡನೆ ತೆರೆವನು ಬೆರಳ ಸಪ್ಪಳ ಕೇಳಿ, ಒಳಹೊಗಲು ಸಿದ್ಧರಿರೆ ಬರಮಾಡಿಕೊಳುವನವ ಸ್ವಾಗತವ ಕೋರಿ”
ಕೆಲವರು ಬಾಗಿಲ ಮುಂದೆ ನಿಂತು ನಿಧಾನವಾಗಿ, ತಟ್ಟಲೋ ಬೇಡವೋ ಎಂಬಂತೆ ತಟ್ಟುತ್ತಾರೆ, ಬಾಗಿಲು ತೆರೆದಾಗ ಒಳಹೊಗಲು ಏನೋ ಸಂಕೋಚ, ಏನೋ ನಾಚಿಕೆ, ಬಿಂಕ ಬಿಗುಮಾನ, ಇಲ್ಲವೇ ಕುಬ್ಜತೆಯಿಂದ ಮುದುಡುತ್ತಾರೆ. ಇಂಥಾ ದೊಡ್ಡ ಸ್ವಾಮಿಯ ಮುಂದೆ ನಾನು ಕೇಳುವುದಾದರೂ ಏನನ್ನು, ಕೇಳಲಾದರೂ ನಾನು ಅರ್ಹನೇ, ಒಳಹೊಗಲು ಯೋಗ್ಯನೇ ಎಂದೆಲ್ಲಾ ತಲ್ಲಣಿಸುತ್ತಾರೆ. ತಟ್ಟುವಾಗಿನ ತವಕ ತೆರೆದಾಗ ಕುಂದಿಹೋಗುತ್ತದೆ.
ಅದೇ ಆಗ ಯೇಸುವಿನಂಥ ಒಡೆಯ ಪ್ರೀತಿಯಿಂದ ನಮ್ಮ ಕೈಕುಲುಕಿ ನಮ್ಮನ್ನು ಆಲಂಗಿಸಿ ಮೈದಡವಿ ತಾನೇ ಒಳ ಕರೆದೊಯ್ಯುತ್ತಾನೆ. ನಮ್ಮ ಮನದ ಬಯಕೆಯನ್ನು ತಾನೇ ತಿಳಿದುಕೊಳ್ಳುವ ಸ್ವಾಮಿ ಅವನು, ನಮ್ಮ ಬೆರಳ ಸಪ್ಪಳ ಕೇಳಿಯೇ ಬಾಗಿಲ ಬಳಿ ಬಂದು ನಿಂತು ನಮಗಾಗಿ ತನ್ನ ಮನೆಯ ಬಾಗಿಲನ್ನು ವಿಶಾಲವಾಗಿ ತೆರೆಯುತ್ತಾನೆ.
ಅಲ್ಲಿ ಪಸರಿಸಿದೆ: ಯೇಸುವಿನ ಕಂಗಳ ಬೆಳಕು ಹೃದಯದ ನಿನಾದ ಗಂಧ ಕಸ್ತೂರಿ ಜಾಜಿ ಸಂಪಿಗೆಗಳ ಪರಿಮಳ. ಹಾಲು ಬೆಳದಿಂಗಳಂತೆ ತಂಪು ಸೂಸುವ ಆ ಬೆಳಕಿನಲ್ಲಿ ನಮಗೆ ನೆಮ್ಮದಿಯಿದೆ. ಸಂತೃಪ್ತಿಯಿದೆ.

“ಪ್ರಾರ್ಥನೆಯಲ್ಲಿ ಬಲವಿದೆ; ಅಪೂರ್ವ ಶಕ್ತಿಯಿದೆ, ನಂಬಲಾದಂತಹ ಗುಣವಿದೆ ಎಂಬ ಮಾತನ್ನು ಎಲ್ಲ ಸಾಮಾನ್ಯರೂ, ಮನಶಾಸ್ತ್ರಜ್ಞ ಪಂಡಿತರೂ ಒಪ್ಪುತ್ತಾರೆ. ಧಾರ್ಮಿಕ ವಲಯಗಳಲ್ಲಂತೂ ಪ್ರಾರ್ಥನೆಗೆ ಇರುವ ಮಹತ್ವ ಬೇರೊಂದಕ್ಕಿಲ್ಲ, ದಾರ್ಶನಿಕರು, ಪ್ರವಾದಿಗಳು, ಸಾಧು ಸಂತರು, ಧರ್ಮಪ್ರವರ್ತಕರು, ಮತಪ್ರಚಾರಕರು ಎಲ್ಲರೂ ಈ ಉಪಕರಣವನ್ನು ಯಥೋಚಿತವಾಗಿ ತಮ್ಮ ಕಾರ್ಯಸಾಧನೆಗೆ ಬಳಸಿಕೊಂಡದ್ದುಂಟು; ಯೇಸುವೂ ಇದಕ್ಕೆ ಹೊರತಾಗಿರಲಿಲ್ಲ” ಎನ್ನುವ ಹರಿಹರೇಶ್ವರರು ಈ ಪುಸ್ತಕದ ತಯಾರಿಗಾಗಿ ಇಡೀ ಪವಿತ್ರ ಬೈಬಲ್ ಶ್ರೀಗ್ರಂಥವನ್ನೂ, ಯೆಹೂದ್ಯರ ರೀತಿ ರಿವಾಜುಗಳನ್ನೂ, ಸಾಂದರ್ಭಿಕ ಇತಿಹಾಸ ಮತ್ತು ಸಂಸ್ಕೃತಿಯನ್ನೂ, ಇತರ ಧರ್ಮಗ್ರಂಥಗಳನ್ನೂ ಆಳವಾಗಿ ಅಭ್ಯಸಿಸಿ ಒಂದು ಉತ್ಕೃಷ್ಟ ಸಂಶೋಧನಾ ಕೃತಿಯನ್ನು ಕನ್ನಡ ಸಾಹಿತ್ಯ ಸಂಪದಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇಂಥದೊಂದು ಪುಸ್ತಕ ನಮ್ಮ ಸಂಗ್ರಹದಲ್ಲಿ ಇದ್ದರೆ ಅದೊಂದು ಹೆಮ್ಮೆಯ ವಿಷಯವೇ ಸರಿ.