ಶನಿವಾರ, ಅಕ್ಟೋಬರ್ 29, 2016

ಲಡಾಖಿನಲ್ಲಿ ನೋವಿನಿರುಳು

ಲೆಹ್ ಎಂದಾಕ್ಷಣ ನೆನಪಿಗೆ ಬರುವುದು ಹಿಮಾಲಯದ ತಾಣ, land of the broken moon, ಹಿಮಪಾತ, ಸ್ನೋಬಾಲ್ ಆಟ, ಸ್ಕೇಟಿಂಗು, ಪೋಲೊ, ಸಿಂಧೂನದಿ, ಝಂಸ್ಕಾರ್ ನದಿ, ಹೆಪ್ಪುಗಟ್ಟಿದ ನದಿ ಮೇಲ್ಮೈ, ಬೆಟ್ಟದ ಮೇಲೆ ಸದಾ ಹಿಟ್ಟು ಸುರಿದಂತೆ ತೋರುವ ಹಿಮ, ನಾಯಕ ನಾಯಕಿಯರು ನರ್ತಿಸುವ ಸಿನಿಮಾ ನೋಟಗಳು ಇವೆಲ್ಲ ನೆನಪಾಗಿ ವಾವ್ ಎಂಬ ಉದ್ಗಾರ ಬರುವುದು ಸಹಜ. ಹದಿನಾರು ವರ್ಷಗಳ ಹಿಂದೆ ನಾನು ಲೆಹ್ ಭೇಟಿ ಕೊಟ್ಟಾಗ ನನ್ನ ವಯಸ್ಸು ಮುವ್ವತ್ತಾರು. ಆಗ ಅದು ಪುಟಿದಿದ್ದ ಯೌವನದ ಕಾಲ.

ಈಗ ೨೦೧೬ರಲ್ಲಿ ನನಗೆ ಐವತ್ತೆರಡು ವರ್ಷ, ಬಿಪಿ ಮತ್ತು ಬಿಪಿಎಚ್ ಎರಡೂ ಅಮರಿಕೊಂಡಿವೆ. ಮನಸ್ಸಿಗೆ ಎಷ್ಟೇ ಉಲ್ಲಾಸವಿದ್ದರೂ ದೇಹದ ಕಸುವು ಕಡಿಮೆಯಿದೆ. ಅಂದು ಮೈನಸ್ ಇಪ್ಪತ್ತು ಡಿಗ್ರಿ ಕಠಿಣ ವಾತಾವರಣದಲ್ಲಿ ಸಂತೆಬೀದಿ ಮತ್ತು ಪ್ರವಾಸಿತಾಣಗಳನ್ನು ಉತ್ಸಾಹದಿಂದ ಓಡಾಡುತ್ತಾ ಕಳೆದಿದ್ದೆ. ಅದು ನನ್ನ ಜೀವನದ ಎಂದೂ ಮರೆಯಲಾಗದ ಅನುಭವವಾಗಿತ್ತು. ಇಂದು ಮೈನಸ್ ಒಂಬತ್ತು, ಮೈನಸ್ ಆರು ಇದ್ದರೂ ಸ್ಟಾರ್ ಹೋಟೆಲಿನ ಶೊಫಾಝ್ ಸಾಂತ್ರಲ್ (ಫ್ರೆಂಚ್ ಭಾಷೆಯಲ್ಲಿ ಶೊಫಾಝ್ ಸಾಂತ್ರಲ್ ಎಂದರೆ ಸೆಂಟ್ರಲಿ ಹೀಟೆಡ್) ವಾತಾವರಣದಲ್ಲಿ ಬೆಚ್ಚಗೆ ಹೊದ್ದು ಮಲಗಿರಬೇಕೆನಿಸುತ್ತಿದೆ. 

ಅಂದಿಗೂ ಇಂದಿಗೂ ಲೇಹ್ ಹವಾಗುಣದಲ್ಲಿ ಏನೂ ಬದಲಾಗಿಲ್ಲ. ಪಟ್ಟಣ ಬೆಳೆದಿದೆಯಷ್ಟೇ. ಆದರೆ ಅಂದಿಗಿಂತಲೂ ಇಂದು ನನಗೆ ಆಕ್ಸಿಜನ್ ಕೊರತೆ ಹೆಚ್ಚು ಕಾಡುತ್ತಿದೆ. ಮೊದಲ ಮೂರು ದಿನವಂತೂ ತಲೆನೋವು ಬಿಡಲೇ ಇಲ್ಲ. ನಗುನಗುತ್ತಾ ಮಾತನಾಡುವುದೇ ಕಷ್ಟ. ಎಲ್ಲರ ಪಾಡೂ ಅದೇ ಆಗಿತ್ತು. ಎಲ್ಲರೂ ಯಾವುದೋ ದುಃಖ ದುಗುಡವನ್ನು ಮನದಲ್ಲಿ ಹೊತ್ತ ಹಾಗೆ, ಯಾರೋ ಆತ್ಮೀಯರನ್ನು ಕಳೆದುಕೊಂಡ ಹಾಗೆ ಇದ್ದೆವು. ಯಾವುದೋ ಸೂತಕ ಹಿಡಿದುಕೊಂಡವರಂತೆ, ಅವ್ಯಕ್ತ ನೋವು ಮನವನ್ನು ತುಂಬಿಕೊಂಡಂತೆ, ಯಾವುದೋ ಹೇಳಿಕೊಳ್ಳಲಾಗದ ಯಾತನೆಯಲ್ಲಿದ್ದಂತೆ, ಎಷ್ಟು ಬೇಕೋ ಅಷ್ಟು ಮಾತಾಡುತ್ತಾ, acclimatization ಗೆ ಹೊಂದಿಕೊಳ್ಳುತ್ತಾ, ಪೇಪರು ಮ್ಯಾಗಝಿನ್ನು ಪುಸ್ತಕಗಳನ್ನೂ ಓದಲಾಗದೆ, ಹೊರಗಿನ ರಮಣೀಯ ದೃಶ್ಯಗಳನ್ನೂ ಆಸ್ವಾದಿಸಲಾಗದೆ, ರುಚಿಕರ ತಿಂಡಿಗಳನ್ನೂ ಮನಪೂರ್ವಕ ಸವಿಯಲಾಗದೆ ಮ್ಲಾನವದನರಾಗಿದ್ದೆವು. ಆಗಾಗ್ಗೆ ಹೋಟೆಲಿನ ರಿಸೆಪ್ಷನ್ನಿಗೆ ಹೋಗಿ ಆಕ್ಸಿಜನ್ ಲೆವೆಲ್ ಚೆಕ್ ಮಾಡಿಸೋದು. ಏನೋ ಒಂತರಾ ಸಮಾಧಾನ ಪಟ್ಟುಕೊಳ್ಳೋದು.

ನಾವಿದ್ದದ್ದು ಸ್ಟಾರ್ ಹೋಟೆಲು. ಹೋಟೆಲ್ ಗ್ರಾಂಡ್ ಡ್ರಾಗನ್ ಅನ್ತ. ಕಂಪೆನಿಯ ವತಿಯಿಂದ ನಮಗಾಗಿ ಕಾದಿರಿಸಿದ್ದರು. ಹಲವಾರು ವಿದೇಶೀಯರೂ ಅಲ್ಲಿ ತಂಗಿದ್ದರು. ಜಿಮ್, ಟ್ರೆಡ್ ಮಿಲ್ಲು, ಸೈಕ್ಲಿಂಗು, ಕೇರಂ, ಚೆಸ್, ಟಿಟಿ, ಸ್ನೂಕರ್ ಎಲ್ಲವೂ ಇತ್ತು. ಪವರ್ ಬ್ಯಾಕಪ್ ಇತ್ತು. ಊಟವಂತೂ ಸಕ್ಕತ್. ಬಫೆಯ ಬೆಲೆ ರೂ. ೧೨೦೦. ಆದರೆ ನಮಗೆ ಫ್ರೀ.

ಸ್ಟಾರ್ಟರ‍್ಸ್ ಅನ್ತ ಗಾರ್ಲಿಕ್ ಸೂಪ್ಚಿಕನ್ ಸೂಪ್, ಸೌತ್ ಇಂಡಿಯನ್ ರಸಮ್ ಕೊಡೋರು. ಆಮೇಲೆ ಹಣ್ಣುಗಳು. ಏಪ್ರಿಕಾಟು, ಕರಬೂಜ, ಕಿವಿ, ಅಂಜೂರ, ಪಪಾಯ, ಮಾವು ಅಲ್ಲದೆ ಇನ್ನೂ ಹೆಸರು ಗೊತ್ತಿಲ್ಲದ ಎಷ್ಟೋ ಹಣ್ಣುಗಳು. ನೀಟಾಗಿ ಚೂರು ಚೂರು ಮಾಡಿ ಇಟ್ಟಿರುತ್ತಿದ್ದರು. 

ಊಟಕ್ಕೆ ಕಾಶ್ಮೀರಿ ಬಿರಿಯಾನಿ, ಆಫ್ಗನ್ ಬಿರಿಯಾನಿ, ವೆಜ್ ಪುಲಾವ್, ಬಿಳಿಯನ್ನ, ದಾಲ್ ಫ್ರೈ, ವೆಜ್ ಮಸಾಲ, ಮೊಸರು, ಚಿಕನ್ ಕಬಾಬ್, ಮಟನ್ ಕಟ್ಲೆಟ್, ಹುರಿದ ಅಣಬೆ, ಮುಳ್ಳಿಲ್ಲದ ಹುರಿದ ಮೀನು, ಮೊಟ್ಟೆಯ ಚೂರುಗಳು, ಮಸಾಲೆ ಆಮ್ಲೆಟ್ಟು, ಹುರಿದ ಮೊಟ್ಟೆ ಪಲ್ಯ, ಸಾದಾ ಆಮ್ಲೆಟ್ಟು, ಹಸಿ ತರಕಾರಿ ಚೂರುಗಳು, ಬ್ರೆಡ್ಡು ಬೆಣ್ಣೆ, ಕೇವಾ ಚಹ, ಖೀರು, ಜಾಮೂನು, ಕೇಕು, ಐಸ್ ಕ್ರೀಮು, ಬೋರ್ನ್‌ವಿಟಾ, ಕಾಫೀ, ಬಿಸಿಹಾಲು, ಒಣಹಣ್ಣಚೂರುಗಳು, ಗೋಡಂಬಿ, ಬಾದಾಮಿ ಇತ್ಯಾದಿ ಇತ್ಯಾದಿ. 

ನನಗಾಗ ತಪಸ್ಸುಕಾಲ. ಮಾಂಸ ಮುಟ್ಟೋಹಾಗಿಲ್ಲ. ಅದು ಬಿಟ್ಟು ಉಳಿದೆಲ್ಲವನ್ನೂ ತಟ್ಟೆಗೆ ಹಾಕಿಕೊಂಡು ಬಂದು ಟೇಬಲಿನಲ್ಲಿ ಕೂತುಕೊಳ್ಳೋದು. ಎಲ್ಲವನ್ನೂ ಒಂದು ಚೂರು ರುಚಿ ನೋಡೋದು. ಯಾವುದು ಚೆನ್ನಾಗಿರುತ್ತೋ ಅದನ್ನು ಮತ್ತೆ ಎದ್ದು ಹೋಗಿ ತರೋದು. ಇನ್ನೊಬ್ಬರಿಗೂ ಇಂತದು ಚೆನ್ನಾಗಿದೆ ತಗೊಳಿ ಅನ್ತ ಹುರಿದುಂಬಿಸೋದು. ಯಾರೂ ನಗದೇ ಇದ್ರೂ ಜೋಕ್ ಕಟ್ ಮಾಡೋದು. ಹಣ್ಣುಹಂಪಲು, ಖೀರು, ಡ್ರೈಫ್ರೂಟ್ಸ್, ಹಸಿತರಕಾರಿ ಇಷ್ಟರಲ್ಲೇ ಕಾಲ ತಳ್ಳಿದೆ. ಹೊಟೆಲಿನವರು ದಿನಕ್ಕೆರಡು ಬಾಟಲ್ ಮಿನರಲ್ ವಾಟರ್ ಕೊಡ್ತಾ ಇದ್ರು. ರೂಮಿನಲ್ಲಿದ್ದ ಕೆಟಲಿನಲ್ಲಿ ಅದನ್ನು ಬಿಸಿ ಮಾಡ್ಕೊಂಡು ಕುಡೀತಾ ಇದ್ದೆ. 

ನಾಲ್ಕನೇ ದಿನಕ್ಕೆ ಏನಾಯ್ತು ಅಂದರೆ, ಹೊಟ್ಟೆ ನುಲಿಯೋಕೆ ಶುರುವಾಯ್ತು. ಮನೆಯಿಂದ ಜೀರಿಗೆ ಪುಡಿ ತಗೊಂಡು ಹೋಗಿದ್ನಲ್ಲಾ, ಬಿಸಿನೀರಿಗೆ  ಹಾಕಿ ಕುಡಿದೆ, ಹೋಟೆಲಿನವರು ಜಾಯಿಕಾಯಿ ರಸ ಅನ್ತ ಕೊಟ್ರು ಕುಡಿದೆ, ಏನೂ ಸರಿಹೋಗಲಿಲ್ಲ. ಬೆಂಗಳೂರಿನಿಂದ ಹೊರಡೋ ಮುಂಚೆ ಕಂಪೆನಿಯವರು ನಮಗೆ first aid kit ಅನ್ತ ಕೊಟ್ಟಿದ್ದರು. Acclimatization ಗೆ  Dimex  ಅನ್ನೋ ಮಾತ್ರೆ, ಜ್ವರಕ್ಕೆ  ಪ್ಯಾರಸಿಟಮಾಲ್ ಮುಂತಾದ ಮಾತ್ರೆಗಳು ಗೊತ್ತಿದ್ವು. ಆದರೆ ಹೊಟ್ಟೆನೋವಿಗೆ ಯಾವುದು ಅನ್ತ ಗೊತ್ತಾಗಲಿಲ್ಲ. ನನ್ನ ಸಹೋದ್ಯೋಗಿ ರವಿಶಂಕರ್ ಅವರ ಅಕ್ಕನ ಮಗಳು ಡಾಕ್ಟರು ಅನ್ತ ಅವರಿಗೆ ಫೋನ್ ಮಾಡಿ ನಮ್ಮಲ್ಲಿದ್ದ ಮಾತ್ರೆಗಳ ಹೆಸರು ಹೇಳಿ ಯಾವುದು ಹೊಟ್ಟೆನೋವಿಗೆ ಎಂದು ತಿಳಿದುಕೊಂಡರು. ಆದರೆ ನಾನು ಮಾತನಾಡಲೂ ಆಗದೆ ಕುರ್ಚಿಯಲ್ಲಿ ಕೂತುಕೊಳ್ಳಲೂ ಆಗದೆ ಚಡಪಡಿಸುತ್ತಾ ಇದ್ದೆ. ಕರುಳುಗಳೆಲ್ಲ ಹಿಂಡಿದಂತೆ, ಹೊಕ್ಕಳ ಮೇಲೆ ಒನಕೆಯಿಂದ ಕುಟ್ಟಿದಂತೆ ವಿಲ ವಿಲ ಒದ್ದಾಡಿಬಿಟ್ಟೆ. ನೆಟ್ಟಗೆ ನಿಂತುಕೊಳ್ಳಲೂ ಆಗದಷ್ಟು ಹಿಂಸೆ. ಹೊಕ್ಕಳ ಬಳಿ ಮುಟ್ಟಿದರೆ ಕರೆಂಟ್ ಶಾಕ್ ಹೊಡೆದ ಅನುಭವ.

ಹೋಟೆಲಿನವರು ಗಾರ್ಲಿಕ್ ಸೂಪು ಕುಡಿಯಲು ಕೊಟ್ಟು ರೆಸಿಡೆಂಟ್ ಡಾಕ್ಟರಿಗೆ ಫೋನ್ ಮಾಡಿದರು. ಅವರು ಬರುವುದು ಇನ್ನೂ ಒಂದು ಗಂಟೆಯಾಗುತ್ತೆ ಅನ್ತ ತಿಳಿಯಿತು. ತಕ್ಷಣ ನನ್ನನ್ನು ಕಾರಿನಲ್ಲಿ ಮಲಗಿಸಿ ಹತ್ತಿರದ ಸರ್ಕಾರಿ ಎಸ್ ಎನ್ ಎಂ ಆಸ್ಪತ್ರೆಗೆ ಕರೆದುಕೊಂಡು ಹೋದರು. ಎಮರ್ಜೆನ್ಸಿ ಡಾಕ್ಟರು ಮೊದಲಿಗೆ ಆಕ್ಸಿಜನ್ ಸ್ಯಾಚುರೇಷನ್ ಮತ್ತು ನಾಡಿಮಿಡಿತ ಪರೀಕ್ಷಿಸಿದರು. ಅದು ೯೨, ೮೬ ಇತ್ತು. ಫುಡ್ ಪಾಯಿಸನ್ ಆಗಿರಬಹುದು ಎಲ್ಲಿ ಊಟ ಮಾಡಿದಿರಿ ಎಂದು ಕೇಳಿದರು. ಹೋಟೆಲ್ ಗ್ರಾಂಡ್ ಡ್ರ್ಯಾಗನ್ ಅಂದಾಗ ಸಂದೇಹವೂ ಇಲ್ಲವಾಯಿತು. ನೀವು ಆಲ್ಕೋಹಾಲಿಕ್ ಎಂದು ಕೇಳಿದರು, ಕುಡಿತ, ಸಿಗರೇಟು ಇತ್ಯಾದಿ ಯಾವುದೂ ನನ್ನ ಜೀವಮಾನದಲ್ಲೇ ಇಲ್ಲ ಎಂದೆ.  Admit ಆಗಿ, ಬೆಳಗ್ಗೆ ಸ್ಕ್ಯಾನಿಂಗ್ ಮಾಡೋಣ ಅಂದ್ರು. ಆಗ ರಾತ್ರಿ ಹತ್ತು ಗಂಟೆ. ರಕ್ತನಾಳಕ್ಕೆ ಸೂಜಿ ಚುಚ್ಚಿ ಗ್ಲುಕೋಸಿನೊಂದಿಗೆ ದ್ರವ ಔಷಧಿ ಸೇರಿಸಿದರು.  

ನಿದ್ದೆ ಬರಲಿಲ್ಲ. ಬೆಂಗಳೂರಿನ ಆಫೀಸಿಗಾಗಲೀ ನಮ್ಮ ಮನೆಗಾಗಲೀ ವಿಷಯ ತಿಳಿಸಬಾರದು, ತಂಡದ ಉಳಿದ ಸಹೋದ್ಯೋಗಿಗಳಿಗೂ ನಾನು ಆಸ್ಪತ್ರೆಯಲ್ಲಿರುವ ವಿಷಯ ತಿಳಿಸಬಾರದು ಕೆಲಸಕ್ಕೆ ಹಿನ್ನಡೆಯಾಗುತ್ತೆ ಎಂದು ಹೇಳಿ ಬಂದಿದ್ದ ಮೂವರನ್ನೂ ವಾಪಸು ಕಳಿಸಿಬಿಟ್ಟೆ. ಬೆಳಗ್ಗೆ ಸರ್ಜರಿ ವಾರ್ಡಿಗೆ ಬದಲಾಯಿಸಿ, ಹೊಟ್ಟೆ ಸ್ಕ್ಯಾನ್ ಮಾಡಿದರು, ಎಲ್ಲಾ ನಾರ್ಮಲ್ಲು. 

ಸಂಜೆ ಸ್ವಂತ ರಿಸ್ಕ್ ಮೇಲೆ ಹೊರಗೆ ಹೋಗುತ್ತಿದ್ದೇನೆ, ಸ್ನಾನ ಊಟ ಮಾಡಿ ಇಂಜೆಕ್ಷನಿಗೆ ಮತ್ತೆ ಬಂದುಹೋಗುತ್ತೇನೆ ಎಂದು admit card ಮೇಲೆ ಬರೆದು ಬಂದೆ. ಸ್ನಾನ ಮಾಡಿ ಬಟ್ಟೆ ಬದಲಾಯಿಸಿಕೊಂಡು high tea ಗೆ ಬಂದೆ. ಎಲ್ಲರೂ ನಗುನಗುತಾ ಟೀ ಹೀರುತ್ತಾ ಇದ್ರು. ಬಿಸ್ಕತ್ತು ಕುಕ್ಕೀಸ್ ಪಫ್ಸ್ ಡ್ರೈ ಫ್ರೂಟ್ಸ್ ಟೀ ಕಾಫಿ ಹಾಲು ಇತ್ತು. ಬಿಸಿಹಾಲಿಗೆ ಬಾದಾಮಿ ಚೂರುಗಳನ್ನು ಹಾಕಿಕೊಂಡು ಕುಡಿದೆ. ಬೇರೆ ಏನೂ ತಿನ್ನಬೇಕು ಅನ್ತ ಅನಿಸಲಿಲ್ಲ. ರೂಮಿಗೆ ಹೋಗಿ ಸುಮ್ಮನೆ ಮಲಗಿದೆ. ತಂಡದವರೆಲ್ಲ ಬಂದು ಸುತ್ತಲೂ ಕುಳಿತರು. ಏನೂ ಮಾತುಕತೆ ಇಲ್ಲ. ತುಂಬಾ ಸುಸ್ತು. 
ಹೊರಗಡೆ ಕಾಲಿಟ್ರೆ ಸಾಕು, ಮೈನಸ್ ಚಳಿ ಮೈ ಹಿಂಡುತ್ತಿತ್ತು. ಎರಡು ದಿನದವರೆಗೆ ಹೀಗೆ ನಿಶ್ಯಕ್ತಿಯಿದ್ದರೂ ಕೆಲಸಕ್ಕೆ ಹೋಗಿ ಬರುತ್ತಿದ್ದೆ. ನೀರು ಬ್ರೆಡ್ಡು ಬಿಸ್ಕತ್ತು ಬಾದಾಮಿ ಪಿಸ್ತಾ ಟೀ ಇಷ್ಟರಲ್ಲೇ ಕಾಲ ತಳ್ಳುತ್ತಿದ್ದೆ. ಮನೆಯಿಂದ ಫೋನ್ ಬಂದಾಗ ಏನೂ ಆಗಿಲ್ಲ ಎಂಬಂತೆ ಮಾತಾಡುತ್ತಿದ್ದೆ. ಹಣ್ಣುಗಳನ್ನು ತಿನ್ನಲು ಹೋದರೂ ಯಾಕೋ ಮನಸಾಗತಿರಲಿಲ್ಲ. ಮಾವಿನಹಣ್ಣು ತಿನ್ನಬಾರದು. ಏಪ್ರಿಕಾಟ್ ಹಣ್ಣು ತಿನ್ನಬಾರದು ಅಂತೆಲ್ಲಾ ಹೇಳುತ್ತಿದ್ದರು

ಕಾಶ್ಮೀರ ಪ್ರದೇಶದಲ್ಲಿ ನಮ್ಮ ಪ್ರೀಪೇಡ್ ಸಿಮ್ಮುಗಳನ್ನು ಬ್ಲಾಕ್ ಮಾಡ್ತಾರೆ. ಪೋಸ್ಟ್ ಪೇಡ್ ಸಿಮ್ಮು ಮಾತ್ರ ಕೆಲಸ ಮಾಡುತ್ತೆ. ಕಂಪೆನಿಯವರು ನಮ್ಮ ಇಡೀ ತಂಡಕ್ಕೆ ಒಂದು ಪೋಸ್ಟ್ ಪೇಯ್ಡ್ ಮೊಬೈಲು ಕೊಟ್ಟಿದ್ದರು. ಅದರಲ್ಲಿ ಪರ್ಸನಲ್ ಕಾಲ್ ಮಾಡುವಂತೆ ಇಲ್ಲ. ಇನ್ನು ಹೋಟೆಲಿನ ಫೋನಿನಿಂದ ಖಾಸಗಿ ಕರೆ ಮಾಡಿದರೆ ಬಿಲ್ಲಿನಲ್ಲಿ ಅದು ದಾಖಲಾಗುತ್ತೆ ಅನ್ನೋದು ಒಂದು ಆತಂಕ. ಆದರೆ whatsapp ಮಾತ್ರ ಕೆಲಸ ಮಾಡ್ತಾ ಇತ್ತು. 

ಮನೆಯಾಕೆಯೊಂದಿಗೆ ಮಾತಾಡಿದ್ದರೆ ಮನೆವೈದ್ಯ ಹೇಳಿರುತ್ತಿದ್ದಳು. ಆದರೆ ಮನೆಯಿಂದ ಸಾವಿರಾರು ಮೈಲು ದೂರದಲ್ಲಿ ತನ್ನ ಗಂಡ ಆಸ್ಪತ್ರೆ ಸೇರಿದ್ದಾನೆಂದು ತಿಳಿದರೆ ಗಾಬರಿಯಾಗ್ತಾಳೆ ಎಂದು ಒಬ್ಬ ಆತ್ಮೀಯ ವೈದ್ಯರಿಗೆ ವಾಟ್ಸಾಪು ಸಂದೇಶ ಕಳಿಸಿ ಫೋನ್ ಮಾಡಲು ಕೇಳಿಕೊಂಡೆ. ನಮ್ಮ ದೇಹದ ನೋವನ್ನು ನಮ್ಮದೇ ಭಾಷೆಯಲ್ಲಿ ಹೇಳಿಕೊಳ್ಳುವುದಕ್ಕೂ ಇಂಗ್ಲಿಷು ಹಿಂದೀಯಂತ ಅಪರಿಚಿತ ಭಾಷೆಗಳಲ್ಲಿ ಹೇಳಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಆದರೆ ಯಾಕೋ ನನ್ನ ಅದೃಷ್ಟ ಚೆನ್ನಾಗಿರಲಿಲ್ಲ ಅನ್ಸುತ್ತೆ ಆಪ್ತವೈದ್ಯರು ತುಂಬಾ busy ಯಾಗಿದ್ದರು.

ಗರಿಗಳ ಭಾನುವಾರ ಚರ್ಚಿಗೆ ಹೋದೆ. ಇದ್ದ ಒಂದು ಹತ್ತಿಪ್ಪತ್ತು ಮಂದಿಯಲ್ಲಿ ನನ್ನ ಹೊಸಮುಖವನ್ನು ಗುರುತಿಸಿದ ಅಲ್ಲಿನ ಪಾದ್ರಿಗಳು ಹತ್ತಿರ ಬಂದು ಪರಿಚಯ ಮಾಡಿಕೊಂಡರು. ಜಗತ್ತಿನಲ್ಲಿ ಅತ್ಯಂತ ಎತ್ತರದಲ್ಲಿರುವ ಚರ್ಚು ಇದು ಎಂದರು. ಎತ್ತರದ ಬಲಿಪೀಠದಲ್ಲಿ ಪೂಜೆಯರ್ಪಿಸಿದರೆ ದೇವರಿಗೆ ಬಲುಬೇಗ ತಲಪುತ್ತದೆ ಅಲ್ಲವೇ ಎಂದು ಜೋಕ್ ಮಾಡಿದೆ. ಎತ್ತರದ ದೇವಾಲಯದಲ್ಲಿ ಪ್ರಾರ್ಥನೆ ಮಾಡಿದರೆ ಕೂಡ ದೇವರಿಗೆ ಬಹುಬೇಗ ಕೇಳಿಸುತ್ತದೆ ಎಂದರವರು. ಪ್ರಬೋಧನೆಯ ನಡುವೆ ಚರ್ಚಿನ ಸದಸ್ಯರ ಎಲ್ಲರ ಒಳಿತಿಗಾಗಿ, ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗಾಗಿ, ಕಾಯಿಲೆಯಿಂದ ಮಲಗಿರುವವರಿಗಾಗಿ, ಗಡಿಯಲ್ಲಿ ಕಾದಿರುವ ಸೈನಿಕರಿಗಾಗಿ ಪ್ರತಿಯೊಬ್ಬರ ಹೆಸರು ಹೇಳಿ ಪ್ರಾರ್ಥನೆ ಮಾಡಿದರು. ಕಾಯಿಲೆಯಿಂದ ಗುಣಹೊಂದಿ ಬಂದವರಿಗಾಗಿ ಶುಭಾಶಯ ಕೋರಿದರು. ಊರಿಗೆ ಹೊರಟಿರುವವರಿಗಾಗಿ ಶುಭ ಹಾರೈಸಿದರು. ನನ್ನ ಹೆಸರನ್ನೂ ಹೇಳಿ ನನಗೂ ನನ್ನ ಕುಟುಂಬಕ್ಕೂ ಶುಭ ಆಶಿಸಿದರು. ಬರುವ ಗುಡ್ ಫ್ರೈಡೇ ಹಾಗೂ ಈಸ್ಟರಿನ ಪಾಲುಗೊಳ್ಳುವಿಕೆಗೆ ನನ್ನನ್ನು ವಿಶೇಷವಾಗಿ ಆಮಂತ್ರಿಸಿದರು. ಅಪರಿಚಿತ ತಾಣದಲ್ಲಿ ಒಬ್ಬ ಸಾಮಾನ್ಯ ಭಕ್ತನಾದವನಿಗೆ ಅದೊಂದು ವಿಶೇಷ ಅನುಭವ. 

ಇನ್ನೂ ಕೆಲಸ ಇರುವಂತೆಯೇ ನನ್ನ ಪಾಲಿನದೆಲ್ಲ ಮುಗಿಸಿ ತಂಡದ ಪ್ರಯತ್ನಕ್ಕೆ ಕಾಯದೆ ಬುಧವಾರ ನಾನು ನವದೆಹಲಿ ಮಾರ್ಗವಾಗಿ ಬೆಂಗಳೂರಿಗೆ ವಿಮಾನ ಹತ್ತಿದೆ. ಉಳಿದವರಿಗೆ ಶುಭಶುಕ್ರವಾರದ ಮಹತ್ವದ ಬಗ್ಗೆ ಹೇಳಿ ಅಂದು ಸಂಪೂರ್ಣ ಉಪವಾಸದ ದಿನ, ಮನೆಯವರೊಂದಿಗೆ ಪ್ರತಿವರ್ಷ ದೋರನಹಳ್ಳಿಯಲ್ಲಿ ಕಳೆಯುತ್ತೇನೆ, ನನಗಾಗಿ ಅವರು ಕಾದಿರುತ್ತಾರೆ, ಇಲ್ಲಿ ನನ್ನ ಕೆಲಸವೆಲ್ಲ ಮುಗಿದಿದೆ ಎಂದು ಹೇಳಿ ಒಪ್ಪಿಸಿದ್ದೆ.

ಹೀಗೆ ತಂಡದ ಯಶಸ್ಸಿನಲ್ಲಿ ನಾನು ಆಬ್ಸೆಂಟು. ಚಳಿಯನ್ನು ಹೇಗೋ ತಡೆದುಕೊಳ್ಳಬಹುದಿತ್ತು ಆದರೆ ಹಾಳು ದೈಹಿಕ ಸುಸ್ತು ನನ್ನನ್ನು ನರಳಿಸಿಬಿಟ್ಟಿತ್ತು. ಅಲ್ಲಿ ಏರ್ ಫೋರ್ಸಿನ ಮುಖ್ಯಾಧಿಕಾರಿಗಳು ಬಂದು ತಂಡವನ್ನು ಅಭಿನಂದಿಸಿ ಬೀಳ್ಕೊಟ್ಟಾಗ ನಾನು ಬೆಂಗಳೂರಿನಲ್ಲಿದ್ದೆ. ನಮ್ಮ ಕಂಪೆನಿಯ -ಮ್ಯಾಗಝಿನ್ ನಲ್ಲಿ ತಂಡದ ಫೋಟೊ ಬಂದಾಗ ನಾನು ಅದರಲ್ಲಿರಲಿಲ್ಲ. ಪತ್ರಿಕೆಗಳಲ್ಲಿ The team has proved their sophisticated system in high altitude ಎಂಬ ಸುದ್ದಿಗಳು ಬಂದದ್ದನ್ನು ನಮ್ಮ ನೋಟೀಸ್ ಬೋರ್ಡುಗಳಲ್ಲಿ ವಾಟ್ಸಾಪ್ ಗ್ರೂಪುಗಳಲ್ಲಿ ಎಲ್ಲರೂ ಹಂಚಿಕೊಂಡರು. ಅಲ್ಲಿ ಇಲ್ಲಿ ಸಿಕ್ಕಿದವರೆಲ್ಲ ಅಭಿನಂದಿಸಿದಾಗ ನನಗೆ ಸಂತೋಷ ಎನಿಸಿದರೂ ಕರುಳು ಮತ್ತೆ ಹಿಂಡಿದಂತೆನಿಸುತ್ತಿತ್ತು.

ಮಂಗಳವಾರ, ಜುಲೈ 5, 2016

ಪಯಣ

ಮನದ ಹಿಮ್ಮೇಳದಲಿ ಜಣಜಣದ ಝೇಂಕಾರ
ಹಳೆಮನೆಯ ಕೊಳಕು ಹೊಸಮನೆಯ ಥಳುಕು
ಭಿತ್ತಿಯಲಿ ಸರಿಯುತಿದೆ ಬವಣೆಗಳ ನೆನಪು
ಸೋರುವ ಮನೆಯಲ್ಲಿ ಸೋರಿಹೋದ ಬದುಕು
ನಿರೀಕ್ಷೆಯ ಮುಗಿಲ ದಾರಿಯಲಿ ಬಾಗಿ ಬಿಲ್ಲಾಗಿ
ಬದುಕು ಭಾರದ ಎಡೆಯಿಂದ ಲಾರಿ ಬೆನ್ನಿಗೆ ಸಾಗಿ
ನಾಗಾಲೋಟದ ವೇಗ ಕತ್ತೆ ದಾರಿಯ ಹಿಡಿದು
ಹಸಿರು ಮಕಮಲ್ಲಿನ ನಡೆಮಡಿಯ ಹಾದಿಯಲಿ
ಪಯಣ ನಡೆದಿದೆ ಹೊಸ ಬದುಕಿನೆಡೆಗೆ
ಮರಿಕುರಿಗಳ ಬಾಲ ಧೃವತಾರೆಯಾಗಿ
ಹೊಸಹೊಸ ಹಾದಿ ಹರಿದತ್ತ ಬೀದಿ
ಇದ್ದವನಿಗೆ ಒಂದುಮನೆ
ಇಲ್ಲದವನಿಗೋ ನೂರುಮನೆ
ಆ ಮನೆ ಈ ಮನೆ ಎಲ್ಲ ಸುಕಾಸುಮ್ಮನೆ
ಬದುಕು ಸಾಗಿದೆ ಬೆಚ್ಚನೆಯ ಮನೆಯೆಡೆಗೆ
ಹಸಿವಿರದ ಹೆಸರಿರದ ಸೌಖ್ಯದಾರಾಮದೆಡೆಗೆ

ಪರಿಶುದ್ಧತೆ

ನನ್ನ ಬಾಳಿನ ಜೀವವೇ,
ನನ್ನ ಅಂಗಾಂಗಳ ಮೇಲೆ ನಿನ್ನ ಜೀವಸ್ಪರ್ಶ ಇರುವುದರಿಂದ,
ನನ್ನ ದೇಹವ ಪವಿತ್ರವಾಗಿಟ್ಟುಕೊಳ್ಳಲು ಸದಾ ಯತ್ನಿಸುವೆ
ನನ್ನ ಮನದೊಳಗಿನ ಕಾರಣದೀಪ ಬೆಳಗಿದ ಸತ್ಯ ನೀನಾದ್ದರಿಂದ,
ನನ್ನ ಚಿಂತನೆಗಳಿಂದ ಎಲ್ಲ ಸುಳ್ಳುಗಳನ್ನೂ ಹೊರಗಿಡಲೆತ್ನಿಸುವೆ
ನನ್ನ ಹೃದಯದೊಳಗಿನ ಕೆಡುಕುಗಳೆಲ್ಲ ತೊಲಗಲಿ, ಕುಸುಮದ ಮೇಲೆನ್ನ ಪ್ರೀತಿಯಿರಲಿ,
ಏಕೆಂದರೆ ನನ್ನ ಹೃದಯಾಂತರಂಗದ ಗುಡಿಯಲ್ಲಿ ನೀನಿರುವೆ
ನನ್ನ ಕ್ರಿಯೆಗಳಲ್ಲಿ ನಿನ್ನನ್ನು ತೋರುವ ಕಾಯಕ ನನಗಿರಲಿ, ನನ್ನ ದೃಢ ನಡೆಯ ಹಿಂದೆ ನಿನ್ನ ಶಕ್ತಿಯಿದೆ.
(ರವೀಂದ್ರನಾಥ ಟಾಗೋರರ ಕವಿತೆಯ ಅನುವಾದ)
Purity
Life of my life, I shall ever try to keep my body pure, knowing that thy living touch is upon all my limbs.
I shall ever try to keep all untruths out from my thoughts, knowing that thou art that truth which has kindled the light of reason in my mind.
I shall ever try to drive all evils away from my heart and keep my love in flower, knowing that thou hast thy seat in the inmost shrine of my heart.

And it shall be my endeavour to reveal thee in my actions, knowing it is thy power gives me strength to act.

ಭಾನುವಾರ, ಮೇ 15, 2016

ಅಂತಪ್ಪನವರ ಕರೆ

ನಾನು ಮೊತ್ತಮೊದಲು ಫಾದರ್ ಅಂತಪ್ಪನವರನ್ನು ಭೇಟಿಯಾಗಿದ್ದು ಸುಮಾರು ೧೯೮೬ರಲ್ಲಿ ಅವರು ಸಂತ ಪ್ಯಾಟ್ರಿಕ್ಕರ ಚರ್ಚಿನಲ್ಲಿ ಗುರುವಾಗಿದ್ದಾಗ.
ರಿಸರ್ವ್ ಬ್ಯಾಂಕಿನಲ್ಲಿ ಆಗಷ್ಟೇ ಉದ್ಯೋಗ ಪಡೆದು ಯಶವಂತಪುರದಲ್ಲಿ ಮನೆಮಾಡಿದ್ದ ಒಬ್ಬ ಯುವತಿ ತನ್ನ ಮದುವೆಗಾಗಿ ಹಾಡಲು ನಮ್ಮ ಗಾನವೃಂದವನ್ನು ಆಹ್ವಾನಿಸಿದ್ದಳು. ಆಕೆ ನಮಗೆ ಹೊಸಬಳಾದರೂ ಕನ್ನಡದ ಕೆಲಸವದು ಎಂಬ ಉತ್ಸಾಹದಿಂದ ನಾವು ಒಪ್ಪಿಕೊಂಡೆವು. ಮದುವೆಗಳಿಗೆ ಹಾಡಲು ಗಾನವೃಂದಗಳು ಹಣ ಪಡೆಯುವ ಕಾಯಿಲೆ ಹತ್ತಿಸಿಕೊಂಡಿವೆ ಎಂಬುದು ಆಗಷ್ಟೇ ನಮಗೆ ತಿಳಿಯಿತು. ಪುಣ್ಯವಶಾತ್ ನಮ್ಮ ತಂಡದಲ್ಲಿನ ಯಾರಿಗೂ ಆ ರೋಗ ಇರಲಿಲ್ಲ.
ಸಂತ ಪ್ಯಾಟ್ರಿಕ್ಕರ ಚರ್ಚಿನಲ್ಲಿ ಕನ್ನಡದ ಕಂಪು ಇರಲಿಲ್ಲವೆಂದಲ್ಲ. ಭಾನುವಾರ ಬೆಳಗ್ಗೆ ೫:೪೫ಕ್ಕೆ ನಡೆಯುತ್ತಿದ್ದ ಕನ್ನಡ ಪೂಜೆಗೆ  ಸಂತ ಫಿಲೋಮಿನಾ ಚರ್ಚಿನ ನರ್ಸುಗಳು ಹಾಗೂ ಸುತ್ತಮುತ್ತಲಿನ ಕಾನ್ವೆಂಟುಗಳ ಸಿಸ್ಟರುಗಳು ಸಂತೋಷದಿಂದ ಪಾಲುಗೊಳ್ಳುತ್ತಿದ್ದರು. ಅದರಲ್ಲಿ ಸಂಗೀತಜ್ಞ ದಿವಂಗತ ಮೈಕೆಲ್ ಜಾನ್ ಅವರು ಗಾನವೃಂದದ ನೇತೃತ್ವ ವಹಿಸುತ್ತಿದ್ದರು. ಗೆಳೆಯ ಮೈಕಲ್ ಜಾನರು ನನ್ನ ಮದುವೆಯ ಪೂಜೆಯಲ್ಲಿ ನಮ್ಮ ಗಾನವೃಂದದ ಹೊಣೆ ಹೊತ್ತಿದ್ದರು.
ಇರಲಿ, ಫಾದರ್ ಅಂತಪ್ಪನವರ ವಿಚಾರ ಹೇಳುತ್ತಿದ್ದೆ. ಸುಮಾರು ೧೯೮೫ರಲ್ಲಿ ಮಹಾಬಿಷಪರಾಗಿದ್ದ ಪಾಕ್ಯಂ ಆರೋಗ್ಯಸಾಮಿಯರ ವಿರುದ್ಧ ನಡೆದ ಕನ್ನಡ ಚಳವಳಿಯಲ್ಲಿ ಬಿಷಪರ ಮನೆಯಲ್ಲಿ ಕನ್ನಡ ಯಾಜಕರು ಬಿಷಪರೊಂದಿಗೆ ನಡೆಸಿದ ಮಾತುಕತೆ ಮುರಿದುಬಿದ್ದಾಗ ವೇದಿಕೆಗೆ ಬಂದ ಫಾದರ್ ಅಂತಪ್ಪನವರು ಈ ಬಿಷಪರು ಇರುವವರೆಗೆ ಕನ್ನಡಕ್ಕೆ ಉಳಿಗಾಲವಿಲ್ಲ ಇವರನ್ನು ಹೊರದೂಡಬೇಕು ಎಂದು ಕರೆ ಕೊಟ್ಟರು. ಬಹು ರೋಮಾಂಚಕಾರಿ ಕರೆ  ಅದು. ಅಂತೆಯೇ ನಡೆಯಿತು ಕೂಡಾ.
ಅದಾಗಿ ಕೆಲ ದಿನಗಳ ನಂತರ ಬೆಂಗಳೂರಿನ ಎಲ್ಲ ಯಾಜಕರು ತಮ್ಮ ಕ್ಲರ್ಜಿ ಮೀಟಿಂಗಿಗಾಗಿ ಎರಡು ಬಸ್ಸುಗಳಲ್ಲಿ ಮಂಡ್ಯದತ್ತ ಪ್ರಯಾಣ ಬೆಳಸಿದಾಗ ನಾವು ಯುವಕರು ಕೆಂಗೇರಿ ಕೆರೆಯ ಏರಿಯ ಮೇಲೆ ಆ ಬಸ್ಸುಗಳನ್ನು ತಡೆದು ಜ್ವಲಂತ ಸಮಸ್ಯೆಗಳ ಬಗ್ಗೆ ಮಾತಾಡಿದ್ದೆವು. ಆ ಬಸ್ಸಿನಲ್ಲಿದ್ದ ಫಾದರ್ ಅಂತಪ್ಪನವರೇ ನಮ್ಮನ್ನು ಆ ಕೆಲಸಕ್ಕೆ ಚೂ ಬಿಟ್ಟಿದ್ದರೆಂದು ಅಮೇಲೆ ಅವರ ಮೇಲೆ ಗೂಬೆ ಕೂರಿಸಿದ್ದರಂತೆ.
ಈ ಎರಡು ಘಟನೆಗಳಾದ ಮೇಲೆ ಅವರ ಚರ್ಚಿನಲ್ಲಿ ನಡೆದ ಮದುವೆಯ ನಂತರ ಗಾನವೃಂದದ ನಾವೆಲ್ಲ ಪಾದ್ರಿಮನೆಗೆ ಹೋಗಿ ಫಾದರ್ ಅಂತಪ್ಪನವರನ್ನು ಭೇಟಿಯಾದೆವು. ಅವರು ನಮ್ಮನ್ನೆಲ್ಲ ಕೂರಿಸಿ ಬಲು ಆದರ ಅಭಿಮಾನದಿಂದ ಮಾತಾಡಿದರು. ಅದೇ ವೇಳೆಯಲ್ಲಿ ಒಬ್ಬ ವಯಸ್ಸಾದ ಹೆಂಗಸು ಅಲ್ಲಿಗೆ ಬಂದರು. ಅವರ ಮಾತಿನಿಂದ ಅವರು ಹಾರೋಬೆಲೆಯಿಂದ ಬಂದವರೆಂದು ತಿಳಿಯಿತು. ಆಕೆ ಮಾಸಿದ ಬಟ್ಟೆ ಧರಿಸಿದ್ದರು. ಬಾಗಿಲ ಹೊರಗೆ ಚಪ್ಪಲಿ ಬಿಟ್ಟು ಬಂದ ಆಕೆ ಸ್ವಾಮಿ ಅಂತ್ಪಪನವರ ಬಳಿ ಬಂದು ಕಾಲಿಗೆ ಬಿದ್ದರು. ಇದೆಲ್ಲ ಬೇಡ ಎಂದು ಸ್ವಾಮಿಗಳು ಸಂಕೋಚದಿಂದ ಹಿಂಜರಿದರೂ ಆಕೆ ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿದರು.
ನಮ್ಮ ಗಾನವೃಂದದ ಹುಡುಗಿ ಎಲಿಜಕ್ಕನವರು ಇದೇನಪ್ಪ ಹೀಗೆ ಅಂತ ಸೋಜಿಗಪಟ್ಟರು. (ಮುಂದೆ ಅವರು ಹಾರೋಬೆಲೆಯ ಹುಡುಗನನ್ನೇ ಮದುವೆಯಾದರೆಂಬುದು ಬೇರೆ ವಿಷಯ). ಫಾದರ್ ಅಂತಪ್ಪನವರು ನಮ್ಮ ಬಳಿ ಬಲು ಉತ್ಸಾಹದಿಂದ ತಮ್ಮ ಹವ್ಯಾಸಗಳ ಕುರಿತು ಮಾತಾಡಿದರು. ನಾವೆಲ್ಲ ಆಗ ಹದಿನೆಂಟು ಇಪ್ಪತ್ತರ ಆಸುಪಾಸಿನ ಯುವಕ ಯುವತಿಯರು. ಕನ್ನಡದಲ್ಲಿ ಆಗಬೇಕಿರುವ ಕೆಲಸಗಳ ಕುರಿತು ಅವರು ತಿಳಿಹೇಳಿದರು. ರೋಮಿನ ಜೆಸ್ವಿತ್ ಹೌಸ್ ಗ್ರಂಥಾಲಯದಿಂದ ತಂದಿದ್ದ ಜೆಸ್ವಿತ್ ವರದಿಗಳ ಜೆರಾಕ್ಸ್ ಪ್ರತಿಗಳನ್ನು ನಮಗೆ ತೋರಿಸಿ ಇವೆಲ್ಲ ನಮ್ಮ ಇತಿಹಾಸದ ಅಮೂಲ್ಯ ನಿಧಿಗಳು. ನಾನು ನಿವೃತ್ತನಾದ ಮೇಲೆ ಇವುಗಳನ್ನು ಪುಸ್ತಕಗಳಾಗಿ ಪ್ರಕಟಿಸುತ್ತೇನೆ ಎಂದರು.
ಇತ್ತೀಚೆಗೆ ಅವರನ್ನು ಭೇಟಿಯಾದಾಗ ಕನಕದಾಸರ ಕುರಿತ ಮೂರನೇ ಪುಸ್ತಕ ಬರೆಯುತ್ತಿದ್ದೇನೆ ಎಂದು ಅದೇ ಉತ್ಸಾಹದಿಂದ ಹೇಳಿದರು. ನೀನು ಏನು ಬರೀತಿದ್ದೀಯಾ ಎಂದು ಕೇಳಿದರು. ಲೂರ್ದುಪ್ರಸಾದ್ ನವರ ಪ್ರೌಢಪ್ರಬಂಧವನ್ನು ಅನುವಾದಿಸುತ್ತಿದ್ದೇನೆ ಎಂದೆ. ಈಗೆಲ್ಲಿದ್ದಾನೆ ಅವನು ಎಂದರು. ನನಗೂ ಅದು ತಿಳಿಯದ ವಿಚಾರ. ಎಂದೆ. ಏನೇ ಆಗಲಿ, ಐ ವಾಂಟ್ ಯೂ ಟು ಕಂಟಿನ್ಯೂ ಮೈ ವರ್ಕ್ ಎಂದರು. ಅದು ನನ್ನಿಂದಾಗುವುದೇ ಎಂಬ ಅಳುಕು ನನ್ನದು. ಕುಮಾರಿಗೆ ಎಲ್ಲ ಹೇಳಿದ್ದೇನೆ ಎಂದರು. ಸಿಸ್ಟರ್ ವರ್ಜಿನಿಯಾ ರಾಜಕುಮಾರಿಯವರು ಫಾದರ್ ಅಂತಪ್ಪನವರ ತಮ್ಮನ ಮಗಳು. ತಮ್ಮ ಪುಸ್ತಕಗಳನ್ನೆಲ್ಲ ವರ್ಕರ್ಸ್ ಸೆಂಟರಿನ ಒಂದು ಕೊಠಡಿಯಲ್ಲಿಟ್ಟಿದ್ದೇನೆ, ಅದಕ್ಕೆ ಕುಮಾರಿಯದೇ ಉಸ್ತುವಾರಿ ಎಂದರು.

ಬಹುಶಃ ಅಂದೊಮ್ಮೆ ಅವರು ಹೇಳಿದ ಹಾಗೆ ನಾನೂ ಕೂಡಾ ನಿವೃತ್ತನಾದ ಮೇಲೆ ಆ ಕೆಲಸ ಮಾಡುತ್ತೇನೋ ಹೇಗೋ ಗೊತ್ತಿಲ್ಲ.

ಶುಕ್ರವಾರ, ನವೆಂಬರ್ 20, 2015

ಬೆಳ್ಮಣ್ಣಿನ ಪವಾಡ

ಮರಿಯಳು ಬೆತ್ಲೆಹೇಮಿನ ಗೋಶಾಲೆಯಲ್ಲಿ ಅಸುಕಂದನಿಗೆ ಜನ್ಮವಿತ್ತು ಇನ್ನೂ ಒಂದೆರಡು ದಿನವಾಗಿರಲಿಲ್ಲ. ಪುಟ್ಟಮಗು ಯೇಸುವನ್ನು ಸಂಹರಿಸಲೆಂದು ಹೆರೋದನ ಸೈನಿಕರು ಬರುತ್ತಿದ್ದಾರೆಂದು ಜನರಾಡಿಕೊಳ್ಳುತ್ತಿದ್ದ ಮಾತು ಅವರಿಗೆ ಬರಸಿಡಿಲಿನಂತೆ ಕೇಳಿಸಿತು. ಜೋಸೆಫರು ಕೂಡಲೇ ದೂರಪ್ರಯಾಣಕ್ಕೆ ಕತ್ತೆಯೊಂದನ್ನು ಸಿದ್ಧಮಾಡಿ ಹಸಿಬಾಣಂತಿ ಮರಿಯಳನ್ನೂ ಎಳೆಗೂಸು ಯೇಸುವನ್ನೂ ಹೊರಡಿಸಿದರು. ಕತ್ತೆ ಇನ್ನೂ ನೂರು ಹೆಜ್ಜೆ ಹಾಕಿರಲಿಲ್ಲ, ಅಷ್ಟರಲ್ಲಿ ಚಳಿಗೋ ಏನೋ ಮಗು ಯೇಸು ಅಳತೊಡಗಿದ. ಮರಿಯಮ್ಮನವರು ಅಲ್ಲೇ ಮರಳ ದಿಬ್ಬದ ಮರೆಯಲ್ಲಿ ಕುಳಿತು ಯೇಸುಪಾಪುವಿಗೆ ಹಾಲೂಡಿಸತೊಡಗಿದರು. ಅಳು ನಿಲ್ಲಿಸಿದ ಯೇಸು ಒಂದು ಕ್ಷಣ ಈ ಕಡೆ ಕಣ್ಣು ಹಾಯಿಸಿದ. ಕಣ್ಣಿನಿಂದ ಹೊರಟ ಪ್ರಕಾಶದ ಜೊತೆಗೇ ಅವನ ಹಾಲು ತುಂಬಿದ ತುಟಿಯಿಂದ ಒಂದು ಹನಿ ನೆಲಕ್ಕೆ ಬಿತ್ತು. ಆ ಕ್ಷಣವೇ ಆ ನೆಲದ ಮಣ್ಣೆಲ್ಲ ಹಾಲಿನಂತೆ ಬೆಳ್ಳಗಾಯಿತು ಎಂದು ಐತಿಹ್ಯವಿದೆ. ಇಂದಿಗೂ ಆ ತಾಣದಲ್ಲಿ ನೆಲದ ಮಣ್ಣು ಹಾಲಿನ ಪುಡಿಯಂತೆ ಬೆಳ್ಳಗಿದೆ. ಬೆತ್ಲೆಹೇಮಿಗೆ ಹೋದ ಜನ ಚಿಟಿಕೆಯಷ್ಟು ಮಣ್ಣನ್ನು ಕಣ್ಣಿಗೊತ್ತಿಕೊಂಡು ಬಾಯಿಗೆ ಹಾಕಿಕೊಳ್ಳುತ್ತಾರೆ. ಕೆಲವರು ಮನೆಗೆ ಕೊಂಡೊಯ್ದು ಹಾಲಿನಲ್ಲಿ ಬೆರೆಸಿಕೊಂಡು ಕುಡಿಯುತ್ತಾರೆ. ಅದ್ಭುತವೆಂದರೆ ಮನಃಶಾಂತಿ ಮನೋಲ್ಲಾಸಗಳಿಂದ ಅವರು ಪುಳಕಗೊಳ್ಳುತ್ತಾರೆ. ಅವರ ಕಷ್ಟಗಳು ತೀರಿ ಬೇಡಿಕೆಗಳು ಈಡೇರುತ್ತವೆ. ಇಲ್ಲಿ ತೋರಿಸಿರುವ ಚಿತ್ರ ಆ ಜಾಗದ ಘಟನೆಯನ್ನು ಸೂಚಿಸುತ್ತದೆ. ಅಲ್ಲಿ ಮಾರಾಟವಾಗುವ ಈ ಚಿತ್ರದಲ್ಲಿ ಕೆಳಗೊಂದು ದುಂಡಾದ ಭರಣಿ ಕಾಣುತ್ತದಲ್ಲವೇ? ಅದರಲ್ಲಿ ಅರ್ಧ ಚಮಚೆಯಷ್ಟು ಬಿಳಿಯ ಮಣ್ಣಿದೆ ನೋಡಿ. ಅದು ಈ ಸ್ಥಳದ ಪವಿತ್ರ ಮಣ್ಣು. ಪವಾಡಕರ್ತ ಯೇಸುಕ್ರಿಸ್ತ ಇಂದಿಗೂ ಪವಾಡಗಳನ್ನು ನಡೆಸುತ್ತಿದ್ದಾನೆನ್ನಲು ಒಂದು ಸಾಕ್ಷಿಯಿದು.
ಮಗುವಿಗೆ ಹಾಲೂಡಿಸುತ್ತಿರುವ ಮಹಿಳೆಯ ಚಿತ್ರವನ್ನು ಯಾರೂ ಪ್ರದರ್ಶಿಸುವುದಿಲ್ಲ. ಅದರಲ್ಲೂ ದೈವರೂಪಗಳಾದ ಸಂತ ಮೇರಿ ಮತ್ತು ಯೇಸುಕ್ರಿಸ್ತನ ಕುರಿತು ಹಾಗೆ ಮಾಡುವುದುಂಟೇ? ಜನಪದದಲ್ಲಿ ಎಲ್ಲವೂ ಸಾಧ್ಯ ಎಂಬಂತೆ ಈ ಚಿತ್ರ ಆ ತಾಣದಲ್ಲಿ ಮಾರಾಟಕ್ಕೆ ಲಭ್ಯವಿದೆ. ಆ ಪವಿತ್ರ ತಾಣಕ್ಕೆ ಭೇಟಿ ನೀಡಿದವರು ಸ್ಮರಣಿಕೆಯಂತೆ ಅದನ್ನು ಕೊಂಡೊಯ್ಯುತ್ತಾರೆ.

ಸೋಮವಾರ, ಏಪ್ರಿಲ್ 27, 2015

ಗ್ಯಾರಿಸನ್ ಸಿಮಿಟರಿ

ಸಾಹಸೀ ಪ್ರವೃತ್ತಿಯ ಐರೋಪ್ಯರು ಕಳೆದ ಶತಮಾನಗಳಲ್ಲಿ ನಾವೆಗಳನ್ನು ಹತ್ತಿ ಹೊಸ ನೆಲೆಗಳನ್ನು ಹುಡುಕುತ್ತಾ ಹೋದದ್ದು ನಮಗೆಲ್ಲ ತಿಳಿದ ವಿಷಯವೇ. ಅವರು ಹಾಗೆ ಹೊರಟಿದ್ದು ಹೊಸ ವಾಸ್ತವ್ಯಕ್ಕಾಗಿ, ಉದ್ಯೋಗಕ್ಕಾಗಿ, ಧರ್ಮಪ್ರಚಾರಕ್ಕಾಗಿ ಇತ್ಯಾದಿ ಇತ್ಯಾದಿ. ರಾಜ ಪೋಷಿತ ಪ್ರವಾಸಗಳಲ್ಲಿ ಚಿನ್ನದ ಬೇಟೆಯ ರಹಸ್ಯ ಕಾರ್ಯಸೂಚಿ ಇತ್ತೆಂಬುದು ಆಮೇಲೆ ಜಗಜ್ಜಾಹೀರಾದ ವಿಷಯ. ಇವೆಲ್ಲದರ ನಡುವೆ ಕೆಲವರು ಯುದ್ಧಕ್ಕಾಗಿಯೂ ಅಂದರೆ ಬಾಡಿಗೆ ಯೋಧರಾಗಿಯೂ ಹೊರಟರು ಎಂದರೆ ಅದೊಂದು ಸೋಜಿಗದ ಸಂಗತಿಯೇ ಸರಿ. ಅಂಥ ಒಂದು ಸೇನಾ ತುಕಡಿಯು ಡಚ್ ಈಸ್ಟ್ ಇಂಡಿಯಾ ಕಂಪೆನಿಯ ಪರವಾಗಿ ಯುದ್ಧಗಳನ್ನು ಮಾಡಿತ್ತು ಎಂದು ಇತಿಹಾಸ ಹೇಳುತ್ತದೆ.
ಸ್ವಿಝರ್ ಲ್ಯಾಂಡಿನಲ್ಲಿ ೧೭೮೧ರಲ್ಲಿ ಚಾರ್ಲಸ್ ಡೇನಿಯಲ್ ದೆ ಮ್ಯುರಾನ್ ಎಂಬುವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ರೆಜಿಮೆಂಟ್ ದೆ ಮ್ಯೂರಾನ್ ಎಂಬು ಯೋಧರ ತಂಡವು ಡಚ್ಚರ ಪರವಾಗಿ ಕೇಪ್ ಟೌನ್ ಮತ್ತು ಸಿಲೋನಿನಲ್ಲಿ ಕರ್ತವ್ಯ ನಿರ್ವಹಿಸಿತ್ತು. ಒಂದು ಹಂತದಲ್ಲಿ ಸಿಲೋನ್ ಯುದ್ಧದಲ್ಲಿ ಬ್ರಿಟಿಷರ ವಿರುದ್ಧ ಸೆಣಸಿದ್ದ ಈ ಪಡೆಯು ಮುಂದೆ ಸಂಬಳ ಸಿಗದೆ ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿದಾಗ ಬ್ರಿಟಿಷರ ಬಳಿಗೇ ಬಂದು ಉದ್ಯೋಗಕ್ಕಾಗಿ ಕೈಚಾಚಿದ್ದು ಮಾತ್ರ ಇತಿಹಾಸದ ವ್ಯಂಗ್ಯ. ಹಿಂದಿನ ಉದ್ಯೋಗದಾತರು ನೀಡಿದ್ದ ಸಂಬಳ ಮತ್ತು ಪದವಿಗಳಿಗೇ ಅಂಕಿತ ಹಾಕಿದ ಬ್ರಿಟಿಷರು ೧೭೯೮ರಲ್ಲಿ ಈ ಪಡೆಯನ್ನು ತಮ್ಮ ಸೇನೆಯ ಭಾಗವಾಗಿ ಭರ್ತಿ ಮಾಡಿಕೊಂಡರು. ಅದರ ಮರುವರ್ಷವೇ ನಡೆದ ನಾಲ್ಕನೇ ಮೈಸೂರು ಯುದ್ಧದಲ್ಲಿ ಟಿಪ್ಪುವಿನ ಶ್ರೀರಂಗಪಟ್ಟಣದ ಕೋಟೆಯನ್ನು ಮುತ್ತಲು ಮುಂಚೂಣಿಯ ಪಡೆಯಾಗಿ ಈ ಯೋಧರನ್ನು ಕಳಿಸಿದರು. ಅನ್ನದಾತರ ಹಂಗಿನಲ್ಲಿದ್ದ ಸ್ವಿಸ್ ಯೋಧರು ಪ್ರಾಣದ ಹಂಗು ತೊರೆದು ಹೋರಾಡಿ ಕೋಟೆಯಲ್ಲಿ ಬಿರುಕು ಮೂಡಿಸಿದರು. ಆ ಮೂಲಕ ಟಿಪ್ಪುವು ಕೋಟೆಯಿಂದ ಹೊರಬರುವಂತೆ ಮಾಡಿ ಅವನ ಸಾವಿಗೆ ಕಾರಣರಾದರು ಎಂಬ ವಿಷಯ ಮಾತ್ರ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.
ಹೀಗೆ ಶ್ರೀರಂಗಪಟ್ಟಣವು ಬ್ರಿಟಿಷರ ಕೈವಶವಾಯ್ತು. ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯು ದಕ್ಷಿಣಕ್ಕೆ ತಿರುಗಿಕೊಳ್ಳುವ ತಿರುವಿನ ದಂಡೆಯಲ್ಲಿ ಇಂದಿಗೂ ಅಸ್ತಿತ್ವದಲ್ಲಿರುವ ಗ್ಯಾರಿಸನ್ ಸಿಮಿಟರಿ (ಯೋಧರ ಸಮಾಧಿಭೂಮಿ) ಯಲ್ಲಿ ಸ್ವಿಸ್ ಯೋಧರನ್ನು ಮಣ್ಣು ಮಾಡಲಾಗಿದೆ. ಮುಂದಿನ ಅರುವತ್ತು ವರ್ಷಗಳ ಅವಧಿಯಲ್ಲಿ ಅವರ ಕುಟುಂಬವರ್ಗದವರನ್ನೂ ಇದೇ ಸಮಾಧಿಭೂಮಿಯಲ್ಲಿ ಹುಗಿಯಲಾಗಿದೆ.
ಇತ್ತೀಚಿನವರೆಗೂ ಪ್ರತಿ ನವೆಂಬರ್ ಎರಡನೇ ತಾರೀಕಿನಂದು ನಡೆಯುವ ಮೃತರ ಸ್ಮರಣೆಯ ಪ್ರಯುಕ್ತ ದೂರದ ಸ್ವಿಸರ್ ಲೆಂಡ್ ನಾಡಿನಿಂದ ಹಲವರು ಬಂದು ಈ ಸಮಾಧಿಗಳ ಮೇಲೆ ಮೇಣದ ಬತ್ತಿ ಹಚ್ಚಿ ಹೋಗುತ್ತಿದ್ದರು. ಸ್ಥಳೀಯರು ಪರಂಗಿಗೋರಿ ಎನ್ನುವ ಈ ಸ್ಥಳದಲ್ಲಿ ವಿದೇಶೀಯರು ಬಂದು ಪ್ರಾರ್ಥನೆ ಮಾಡುವುದನ್ನು ಬೆಕ್ಕಸ ಬೆರಗಾಗಿ ನೋಡುತ್ತಿದ್ದರು. ಉಳಿದಂತೆ ವರ್ಷವಿಡೀ ಈ ಸ್ಮಶಾನವು ಪಾಳುಬಿದ್ದು, ಪೊದೆಗಳು ಆಳೆತ್ತರಕ್ಕೆ ಬೆಳೆದು ಕಳ್ಳಕಾಕರ ಆವಾಸವಾಗುತ್ತಿತ್ತು. ಹೀಗೆ ಕೆಲವರು ಗೋರಿಗಳ ಮೇಲಿನ ಅಮೃತಶಿಲೆಯ ಫಲಕಗಳನ್ನು ಹೊತ್ತೊಯ್ದಿದ್ದಾರೆ, ಸಮಾಧಿಗಳ ಸುತ್ತಲಿನ ಕಬ್ಬಿಣದ ಬೇಲಿಗಳನ್ನು ಕಿತ್ತೊಯ್ದಿದ್ದಾರೆ.
ಇತ್ತೀಚೆಗೆ ಅಂದರೆ ಸುಮಾರು ೨೦೦೫ರಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಮ್ಯುರಾನ್ ವಂಶಸ್ತರಾದ ಲೂಯಿ ದೊಮಿನಿಕ್ ದೆ ಮ್ಯುರಾನ್ ಮತ್ತು ಶ್ರೀಮತಿ ಮೋನಿಕ್ ದೆ ಮ್ಯುರಾನ್ ಎಂಬ ದಂಪತಿ ಸಮಾಧಿಗಳ ಅಧಃಪತನವನ್ನು ಕಂಡು ಮರುಗಿ ಈ ತಾಣದ ಪುನರುದ್ಧಾರಕ್ಕಾಗಿ ಯತ್ನಿಸಿ ಮೈಸೂರು ಪುರಾತತ್ವ ಇಲಾಖೆಯವರೊಂದಿಗೆ ಸಮಾಲೋಚಿಸಿ, ಇಲಾಖೆಯ ಸೂಚನೆಯ ಮೇರೆಗೆ ಆರ್ ಗುಂಡುರಾವ್ ಅಸೋಸಿಯೇಟ್ಸ್ ಎಂಬ ಖಾಸಗಿ ಜೀರ್ಣೋದ್ಧಾರಕ ಸಂಸ್ಥೆಯನ್ನು ತಾವೇ ಸಂಪರ್ಕಿಸಿ ಆ ಸಂಸ್ಥೆಯ ಮೂಲಕ ಸಮಾಧಿಭೂಮಿಯನ್ನು ಸಹಜಸ್ಥಿತಿಗೆ ಮರಳುವಂತೆ ಮಾಡಿದ್ದಾರೆ. ಆದರೆ ಕೆಲಸ ಪೂರ್ಣಗೊಳ್ಳುವ ಮೊದಲೇ ಅಂದರೆ ೨೦೦೭ರಲ್ಲಿ ಆ ದಂಪತಿ ಅಕಾಲಿಕ ಮರಣಕ್ಕೀಡಾದರು. ಆಮೇಲೆ ಅವರ ಮಗ ಈ ಕೆಲಸದ ಉಸ್ತುವಾರಿ ವಹಿಸಿಕೊಂಡರೆಂದು ತಿಳಿದುಬರುತ್ತದೆ.

ಇದೇ ಮ್ಯುರಾನ್ ವಂಶಸ್ತರು ಸ್ಥಳೀಯರಾದ ಶ್ರೀಮತಿ ವಿದ್ಯಾಲಕ್ಷ್ಮಿ ಎಂಬುವರನ್ನು ಈ ಸ್ಥಳವನ್ನು ನೋಡಿಕೊಳ್ಳುವುದಕ್ಕಾಗಿ ನೇಮಿಸಿದ್ದಾರೆ. ವಿದ್ಯಾಲಕ್ಷ್ಮಿಯವರು ಬೆಳಗ್ಗೆ ಒಂಬತ್ತರಿಂದ ಸಂಜೆ ಐದರವರೆಗೆ ಇಲ್ಲಿದ್ದು ಬಂದ ಪ್ರವಾಸಿಗರನ್ನು ಆದರದಿಂದ ಮಾತನಾಡಿಸುತ್ತಾ, ಸಮಾಧಿಭೂಮಿಯನ್ನು ಬಲು ಜತನದಿಂದ ನೋಡಿಕೊಳ್ಳುತ್ತಿದ್ದಾರೆ.

ಸೋಮವಾರ, ಏಪ್ರಿಲ್ 6, 2015

ಒತಪ್ಪ್


ಚಿತ್ರದುರ್ಗದ ಫ್ಲೋಮಿನ್ ದಾಸ್ ಅವರು ಸುಮಾರು ಮೂರು ದಶಕಗಳಿಂದಲೂ ಸಾಹಿತ್ಯಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಅವರ ಬಗ್ಗೆ ಕೇಳಿದ್ದೆನಾದರೂ ಮೊನ್ನೆಮೊನ್ನೆಯವರೆಗೂ ಅವರ ಪರಿಚಯ ನನಗಿರಲಿಲ್ಲ. ಇತ್ತೀಚೆಗೆ ಪ್ರಜಾವಾಣಿಯಲ್ಲಿ ಅವರ ಪುಸ್ತಕವೊಂದು ಸಾದರ ಸ್ವೀಕಾರದಲ್ಲಿ ಪಟ್ಟೀಕರಣವಾದಾಗ ಅವರಿಗೊಂದು ಪತ್ರ ಬರೆದೆ. ಅದಾಗಿ ಒಂದು ವಾರದೊಳಗೇ ಸಂಪಂಗಿರಾಮನಗರದಲ್ಲಿ ನನ್ನ ಅವರ ಭೇಟಿಯಾಯ್ತು. ಅತ್ಯಂತ ಅಭಿಮಾನದಿಂದಲೂ ಸಂಭ್ರಮದಿಂದಲೂ ಅವರು ತಮ್ಮ ಒತಪ್ಪ್ ಎಂಬ ಅನುವಾದಿತ ಪುಸ್ತಕವನ್ನು ನನ್ನ ಕೈಯೊಳಗಿಟ್ಟರು.
ಒತಪ್ಪ್ ಎಂಬುದು ಮಲಯಾಳ ಪದ. ಕಳಂಕ ಎಂದು ಅದರರ್ಥ. ಗುರು ಕನ್ಯಾಸ್ತ್ರೀಯರಂತ ಧಾರ್ಮಿಕ ವ್ಯಕ್ತಿಗಳು ಸಮಾಜಕ್ಕೆ ನಿಷ್ಕಳಂಕ ಮಾದರಿಯಾಗಿರಬೇಕು ಎಂದು ಬಯಸುತ್ತೇವಲ್ಲವೇ? ಅವರೇ ಕಳಂಕಿತರಾದರೆ ಸಮಾಜಕ್ಕೆ ಏನು ಸಂದೇಶ ಕೊಟ್ಟಂತಾಯಿತು? ಆದರೆ ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿದ ಮಾನವತೆ ಎಂಬ ನೆಲೆಯಲ್ಲಿ ನಿಂತು ಕಳಂಕವನ್ನು ಅರ್ಥ ಮಾಡಿಸುವುದೇ ಈ ಕಾದಂಬರಿಯ ಆಶಯವೆಂದು ತೋರುತ್ತದೆ.
ಮೂಲತಃ ಇದನ್ನು ಮಲಯಾಳದಲ್ಲಿ ಬರೆದ ಸಾರಾ ಜೋಸೆಫ್ ಅವರು ಶಿಕ್ಷಕಿಯಾಗಿ ಆಮೇಲೆ ದೂರಶಿಕ್ಷಣದಲ್ಲಿ ಬಿಎ, ಎಂಎ ಪದವಿ ಪಡೆದು ಕಾಲೇಜು ಲೆಕ್ಚರರ್ ಆಗಿ ಕೆಲಸ ಮಾಡಿದವರು. ಹೆಂಗಳೆಯರ ಪರವಾಗಿ ಚಿಂತಿಸುವ ಇವರು ’ಮಾನುಷಿ’ ಎಂಬ ಮಹಿಳಾ ಹೋರಾಟದ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ. ಕೇರಳದ ಜನಸಂಖ್ಯೆಯ ಕಾಲುಭಾಗದಷ್ಟಿರುವ ಕ್ರೈಸ್ತರ ವಿವಿಧ ಪಂಗಡಗಳ ರೀತಿರಿವಾಜುಗಳನ್ನು ಓರೆಕೋರೆಗಳನ್ನು ಕೊಂಕಿಲ್ಲದೆ ನಾಜೂಕಾಗಿ ವಿಶ್ಲೇಷಿಸುತ್ತಾ ಒಂದು ಪ್ರೇಮಕತೆಯನ್ನು ಅದರಲ್ಲೂ ಕಾನ್ವೆಂಟು ಬಿಟ್ಟು ಬಂದ ಒಂದು ಹೆಣ್ಣಿನ ತವಕ ತಲ್ಲಣ ಕೋಪ ವಿಷಾದ ತ್ಯಾಗ ಕ್ಷಮಾಗುಣಗಳನ್ನು ಅವರು ಈ ಕಾದಂಬರಿಯಲ್ಲಿ ನಿರೂಪಿಸುತ್ತಾರೆ.
ಫ್ಲೋಮಿನ್ ದಾಸ್ ಅವರು ಇದನ್ನು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಯು ಸುಲಲಿತವಾಗಿ ಅಲ್ಲದಿದ್ದರೂ ಕುತೂಹಲಕ್ಕಾಗಿಯಾದರೂ ಓದಿಸಿಕೊಳ್ಳುತ್ತದೆ. ಏಕೆಂದರೆ ಮೂಲ ಮಲಯಾಳ ಕಾದಂಬರಿಯ ಹಂದರವು ಸುನಿಶ್ಚಿತ ಕಟ್ಟೋಣವಾಗಿರದೆ ಹಲವು ಗೊಂದಲಗಳಿಂದ ಕೂಡಿದೆ. ಧುತ್ತನೇ ಎದುರಾಗುವ ವಿವರಣಾತ್ಮಕ ಸಂಗತಿಗಳನ್ನು ಓದುಗನು ಪೂರಕ ಅಂಶವಾಗಿ ಒತ್ತಾಯದಿಂದ ಸ್ವೀಕರಿಸಬೇಕಾಗುವುದರಿಂದ ಹಾಗೂ ಒಂದು ಅಧ್ಯಾಯದಿಂದ ಇನ್ನೊಂದಕ್ಕೆ ಸಕಾರಾತ್ಮಕವಾಗಿ ಬೆಸೆಯಬಲ್ಲಂತ ಕೊಂಡಿಯ ಕೊರತೆಯಿಂದ ಈ ಭಾವ ಕಾಡುವುದು ಸಹಜ. ಕತೆಯ ಸ್ಥೂಲರೂಪವನ್ನು ಇಟ್ಟುಕೊಂಡ ಮೂಲ ಲೇಖಕಿಯು ಅದಕ್ಕೆ ಪೂರಕವಾಗಿಯೆನ್ನುವಂತೆ ಕಥೋಲಿಕ ಚರ್ಚಿನ, ಸುರಿಯಾನಿ ಚರ್ಚಿನ, ಕರಿಸ್ಮಾಟಿಕ್ ಕ್ರಾಂತಿಯ ಹಾಗೂ ಕಾಡುಮೇಡುಗಳಲ್ಲಿ ಅಸ್ತಿತ್ವದಲ್ಲಿರುವ ಅಸಾಂಪ್ರದಾಯಿಕ ಧರ್ಮಾಚರಣೆಗಳ ವಿವರಣಾತ್ಮಕ ಸಂಗತಿಗಳಿಂದ ಕಾದಂಬರಿಯನ್ನು ಭಾರವಾಗಿಸುತ್ತಾರೆ. ಒಂದು ನಿಟ್ಟಿನಲ್ಲಿ ಅವರು ಸಂಸ್ಥೀಕರಣಗೊಂಡ ಕಥೋಲಿಕ ಚರ್ಚಿನ ಹಾಗೂ ಅದರ ಅನುಯಾಯಿಗಳ ಕಠೋರ ಹೃದಯಗಳನ್ನು ಪ್ರತಿಬಿಂಬಿಸುವುದಕ್ಕೆ ಉಳಿದ ಮೂರು ಸಂಘಟನೆಗಳನ್ನು ಅತ್ಯಂತ ಸೂಕ್ತವಾಗಿ ಬಳಸಿಕೊಂಡಿದ್ದಾರೆ.
ಈ ಕಾದಂಬರಿಯು ಕತಾನಾಯಕಿ ಮರ್ಗಲೀತಾಳ ಸುತ್ತಲೇ ಸುತ್ತುತ್ತದೆ. ಮರ್ಗಲೀತಾ ಒಬ್ಬ ಕನ್ಯಾಸ್ತ್ರೀಯಾಗಿದ್ದವಳು. ಒಂದು ದಿನ ಆಕೆ ಕಾನ್ವೆಂಟನ್ನು ತೊರೆದು ಸಂಜೆಯ ಮಬ್ಬುಗತ್ತಲಲ್ಲಿ ತನ್ನ ಮನೆಗೆ ಬಂದಾಗ ತಾಯಿ ಮೊದಲ್ಗೊಂಡು ಅಣ್ಣಂದಿರು ಅತ್ತಿಗೆಯರು ಅವಳು ಹಾದರ ಮಾಡಿ ಬಂದಳೇನೋ ಎಂಬಂತೆ ತಿರಸ್ಕಾರದಿಂದ ಕಂಡು ಅವಳನ್ನು ಬಾಳೆಗುದಿಯಲ್ಲಿ ಕೂಡಿ ಹಾಕುತ್ತಾರೆ. ಕೇರಳದ ಸಂಪ್ರದಾಯಸ್ಥ ಕ್ರೈಸ್ತ ಕುಟುಂಬವೊಂದಕ್ಕೆ ತಮ್ಮ ಮನೆಯ ಮಗಳು ಕಾನ್ವೆಂಟು ಬಿಟ್ಟು ಬರುವುದೆಂದರೆ ಅತ್ಯಂತ ಅಪಮಾನದ ಸಂಗತಿ. ಈ ವಿಷಯ ಊರವರಿಗೆ ತಿಳಿದರಂತೂ ತಮ್ಮ ಮನೆಯ ಗೌರವ ಬೀದಿಪಾಲಾಗುವುದೆಂಬ ಆತಂಕ. ಮನೆಯ ಹಿರಿಮಗ ನಗರಸಭೆಯ ಮೇಯರ್ ಹುದ್ದೆಯ ಆಕಾಂಕ್ಷಿಯಾಗಿದ್ದು ತಂಗಿಯ ವರ್ತನೆ ತನ್ನ ಭವಿಷ್ಯಕ್ಕೆ ಮುಳ್ಳಾದೀತೆಂಬ ಭಯ. 
ಕಾದಂಬರಿಯ ನಾಯಕ ಕರೀಕನ್ ಎಂಬ ಯುವಪಾದ್ರಿ. ಹಲವು ಧರ್ಮಗ್ರಂಥಗಳು ಇತರ ಮೌಲಿಕ ಪುಸ್ತಕಗಳನ್ನು ಓದಿ ವೈಚಾರಿಕ ಬುದ್ಧಿಮತ್ತೆಯಲ್ಲಿ ಹರಿತನಾದವನು. ವಯಸ್ಸಿಗೆ ತಕ್ಕ ಬಂಡಾಯದ ಗುಣದವನು. ಬದಲಾವಣೆ ಬಯಸದ ವೃದ್ಧ ಗುರುವಿನ ಅನಾಸಕ್ತಿಯ ಕುರಿತು ಅಸಹನೆ ತಾಳಿದವನು. ಕ್ರೈಸ್ತ ಮನೆಗಳನ್ನೂ ಕಾನ್ವೆಂಟುಗಳನ್ನೂ ಸಂಧಿಸಿ ಧಾರ್ಮಿಕ ಭಾವಗಳನ್ನು ವಿಶೇಷ ರೀತಿಯಲ್ಲಿ ಉದ್ದೀಪಿಸುವುದು ಅವನ ಹವ್ಯಾಸ. ಕಥೋಲಿಕ ಕ್ರೈಸ್ತರಿಗೆ ಸ್ಪರ್ಧೆಯೊಡ್ಡಿದ ಸುರಿಯಾನಿ ಕ್ರೈಸ್ತರ ಪಾದ್ರಿ ಕಶೀಶ ಎಂಬುವರೊಂದಿಗೆ ಗೆಳೆತನ ಸಾಧಿಸಿ ಅವರೊಂದಿಗೆ ಬೌದ್ಧಿಕ ಚರ್ಚೆಯಲ್ಲಿ ತೊಡಗುವುದು ಮತ್ತೊಂದು ಹವ್ಯಾಸ.
ತನ್ನ ಕಾನ್ವೆಂಟಿಗೆ ಹಾಡುಗಳನ್ನು ಕಲಿಸಲು ಬರುತ್ತಿದ್ದ ಕರೀಕನ ವಿಚಾರಗಳಿಗೂ ಯೌವನಕ್ಕೂ ಮಾರುಹೋದವಳು ಮರ್ಗಲೀತಾ. ಕನ್ಯಾಮಠದ ಇತರ ಸಂನ್ಯಾಸಿನಿಯರ ಕಣ್ಣು ತಪ್ಪಿಸಿ ಅವಳು ಕರೀಕನ್ ನೊಂದಿಗೆ ಪತ್ರವ್ಯವಹಾರ ಇಟ್ಟುಕೊಳ್ಳುತ್ತಾಳೆ. ಹೀಗೆ ಅವಳು ಅವನಿಗೆ ಬರೆದ ಕೊನೆಯ ಪತ್ರದಲ್ಲಿ ತಾನು ಕಾನ್ವೆಂಟು ತೊರೆಯುವ ಉದ್ದೇಶವನ್ನು ತಿಳಿಸಿ ತನಗೊಂದು ಜೊತೆ ಉಡುಪನ್ನೂ ಹೊರಜಗತ್ತಿನಲ್ಲಿ ತನಗೊಂದು ವ್ಯವಸ್ಥೆಯನ್ನೂ ಮಾಡಬೇಕೆಂದು ವಿನಂತಿಸಿಕೊಳ್ಳುತ್ತಾಳೆ.
ನಿಜ ಹೇಳಬೇಕೆಂದರೆ ಕರೀಕನ್ ಒಬ್ಬ ಆರಂಭಶೂರ. ಅವನು ವಿಚಾರಗಳನ್ನು ಬಡಿದೆಬ್ಬಿಸಬಲ್ಲವನೇ ಹೊರತು ಅದರ ಪರಿಣಾಮಗಳನ್ನು ಮುಂದಾಗಿಯೇ ಊಹಿಸಿ ಸಮರ್ಥವಾಗಿ ಎದುರಿಸಬಲ್ಲ ಮುತ್ಸದ್ದಿಯಲ್ಲ. ಮರ್ಗಲೀತಾಳ ಈ ನಿರ್ಧಾರಕ್ಕೆ ಅವನು ಸಿದ್ಧನಾಗಿರುವುದೇ ಇಲ್ಲ. ಅವಳು ಬರೆದ ಪತ್ರವನ್ನು ಒಂದೆರಡು ದಿನ ಗಂಭೀರವಾಗಿ ಪರಿಗಣಿಸುವುದೂ ಇಲ್ಲ.
ಇತ್ತ ಮರ್ಗಲೀತಾ ತನ್ನ ಕಾನ್ವೆಂಟಿನ ಸೇವಕಿ ಆಬೆಲಮ್ಮ ನೀಡಿದ ಉಡುಪು ಧರಿಸಿ ಕಾನ್ವೆಂಟಿನಿಂದ ಹೊರಬೀಳುತ್ತಾಳೆ. ಶಿಕ್ಷಣ, ರೋಗಿಗಳ ಸೇವೆ. ಪೂಜಾಪೀಠದ ಅಲಂಕಾರ, ಧರ್ಮೋಪದೇಶಗಳ ಮೂಲಕ ಕ್ರಿಸ್ತನನ್ನು ಸೇವೆ ಮಾಡುವ ಜೀವನಧ್ಯೇಯದೊಂದಿಗೆ ಕಾನ್ವೆಂಟಿನ ನೇಮವ್ರತಗಳಿಗೆ ಬದ್ಧರಾಗಿ ಹಿರಿಯ ಸಂನ್ಯಾಸಿನಿಯರಿಗೆ ವಿಧೇಯಿಯಾಗಿರುತ್ತಾ ಸುಖವಾಗಿ ಸುರಕ್ಷಿತವಾಗಿರುವುದನ್ನು ಬಿಟ್ಟು ಕಾಣದ ಆದರ್ಶದ ಬೆನ್ನು ಹತ್ತಿ ಬಂದವಳನ್ನು ಮನೆಯಲ್ಲಿ ಸ್ವಾಗತಿಸುವವರಾದರೂ ಯಾರು? ಸಮಾಜಕ್ಕೂ ಅವಳೊಬ್ಬ ದುರ್ಮಾತೃಕೆ.
ಮರ್ಗಲೀತಾಳಿಗೆ ಹೊರಜಗತ್ತನ್ನು ಎದುರಿಸುವುದು ಗೊತ್ತಿಲ್ಲ, ತನ್ನದೆಂಬುದಕ್ಕೆ ಒಂದೇ ಕೊಂಡಿಯಾಗಿದ್ದ ತವರುಮನೆ ಆಸರೆಯಾಗಿ ಉಳಿದಿಲ್ಲ. ಕರೀಕನ್ ಎಂಬ ಒಂದೇ ಒಂದು ಆಶಾಕಿರಣವು ಪುಕ್ಕಲುತನದಲ್ಲಿ ಪಲಾಯನಗೈದಿದೆ. ಹೀಗಿರುವಲ್ಲಿ ಹೇಗೋ ಮನೆಯಿಂದ ಹೊರಬಿದ್ದ ಮರ್ಗಲೀತಾ ದಿನ ರಾತ್ರಿಯೆನ್ನದೆ ರೈಲುನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಹುಚ್ಚಿಯಂತೆ ದಿಕ್ಕೆಟ್ಟು ಅಲೆದು ಹಸಿವಿನಿಂದ ಕಂಗೆಟ್ಟು ಸೋತು ನಿತ್ರಾಣಳಾಗಿ ಆಸ್ಪತ್ರೆ ಸೇರುತ್ತಾಳೆ.
ಪಾದ್ರಿ ಕರೀಕನ್ ಅವಳನ್ನು ಪತ್ತೆ ಹಚ್ಚಿ ಗೆಳೆಯ ಕಶೀಶನ ಮನೆಯಲ್ಲಿ ಆಶ್ರಯ ದೊರಕಿಸಿಕೊಡುತ್ತಾನೆ. ಅಲ್ಲಿದ್ದ ಕೆಲದಿನಗಳಲ್ಲಿ ಕಶೀಶ ಮತ್ತು ಮರ್ಗಲೀತಾಳ ನಡುವಿನ ಬೌದ್ಧಿಕ ಚರ್ಚೆಗಳನ್ನು ಗಮನಿಸುವ ಕಶೀಶರ ಪತ್ನಿಗೆ ಮರ್ಗಲೀತಾಳು ತನ್ನ ಗಂಡನನ್ನು ಜಂಕಿಸಿ ಕೇಳುವ ದುರಹಂಕಾರಿಯಂತೆಯೂ ಕಾಮುಕ ಹೆಣ್ಣಂತೆಯೂ ತೋರಿ ಅಸೂಯೆ ಹುಟ್ಟಿಸುತ್ತಾಳೆ. ಇತ್ತ ಅವಳ ಇರುವನ್ನು ತಿಳಿದ ಊರವರು ನುಗ್ಗಿ ಬಂದು ದಾಂಧಲೆ ಎಬ್ಬಿಸಿ ಕಶೀಶರ ಮೇಲೆ ಅಪವಾದ ಹೊರಿಸಿ ಹೋಗುತ್ತಾರೆ. ಅಲ್ಲಿ ನಿಲ್ಲಲಾಗದ ಮರ್ಗಲೀತಾ ಹೊರಬಂದು ತನ್ನ ಓರಗೆಯ ರೆಬೆಕ್ಕಾ ಎಂಬ ಸೋದರಿಯ ಆಶ್ರಯ ಪಡೆಯುತ್ತಾಳೆ. ದೊಡ್ಡಬಾಯಿಯ ರೆಬೆಕ್ಕಾ ಕರಿಸ್ಮಾಟಿಕ್ ಕ್ರಾಂತಿಯವಳಾಗಿದ್ದು ಬೈಬಲ್ ವಚನಗಳನ್ನು ಉದ್ಧರಿಸುತ್ತಾ ಬೋಧನೆ ಮಾಡುತ್ತಿರುತ್ತಾಳೆ.
ಕೆಲದಿನಗಳ ನಂತರ ಮರ್ಗಲೀತಾ ಕಾಡು ಸೇರಿ ಅಲ್ಲಿ ಕಾಡಿನ ಕೂಲಿಕಾರರ ನಡುವೆ ಸಂತನಂತೆ ಬದುಕುತ್ತಿದ್ದ ಅಗಸ್ಟಿನ್ ಎಂಬ ಪಾದ್ರಿಯ ಸಾಹಚರ್ಯದಲ್ಲಿ ತೊಡಗಿಕೊಳ್ಳುತ್ತಾಳೆ. ಆ ತಾಣದ ರಮ್ಯ ಪ್ರಕೃತಿ ಸೌಂದರ್ಯ, ಕೂಲಿಕಾರರ ಮುಗ್ದ ಭಕ್ತಿ, ಅಗಸ್ಟಿನರ ಪರಮ ಸಾತ್ವಿಕ ಸೇವಾನಿಷ್ಠೆ ಮರ್ಗಲೀತಾಳನ್ನು ಸಂಪೂರ್ಣ ಬದಲಾಯಿಸುತ್ತದೆ. ಅದು ಹಾಗೇ ಇದ್ದಿದ್ದರೆ ಚೆನ್ನಾಗಿತ್ತೇನೋ? ಏಕೆಂದರೆ ಕನ್ಯಾಮಠದ ಡಾಂಭಿಕ ಜೀವನಕ್ಕೆ ವಿಮುಖಳಾಗಿ ಅವಳು ನೇರವಾಗಿ ಕ್ರಿಸ್ತಸೇವೆ ಮಾಡಬೇಕು ಎಂದುಕೊಂಡಿದ್ದವಳಲ್ಲವೇ, ಅವಳ ಆ ಇಚ್ಛೆ ಇಲ್ಲಿ ನೆರವೇರಿತ್ತು.
ಆದರೆ ಅವಳ ಬದುಕಿನಲ್ಲಿ ಕರೀಕನ್ ಪಾದ್ರಿಯ ಮರುಪ್ರವೇಶವಾಗುತ್ತದೆ. ಅಗಸ್ಟಿನರ ಗುಡಿಸಲಲ್ಲೇ ಇವರಿಬ್ಬರೂ ತಮ್ಮ ಕಾಮನೆಗಳನ್ನು ಹತ್ತಿಕ್ಕಲಾಗದೆ ಒಂದಾಗುತ್ತಾರೆ. ಅಲ್ಲಿಂದ ಕರೀಕನ್ ಧೈರ್ಯ ತಳೆದು ಮರ್ಗಲೀತಾಳನ್ನು ತನ್ನೊಂದಿಗೆ ಕರೆದುಕೊಂಡು ಮನೆಗೆ ಬರುತ್ತಾನೆ. ಇವರಿಬ್ಬರನ್ನು ಒಟ್ಟಿಗೆ ನೋಡಿದ್ದೇ ವಿಷಯವನ್ನು ಅರ್ಥ ಮಾಡಿಕೊಂಡ ಅವನ ತಂದೆ ಏನೊಂದೂ ಮಾತನಾಡದೇ ಎದ್ದು ಹೋಗಿ ನೇಣು ಹಾಕಿಕೊಳ್ಳುತ್ತಾರೆ. ಮನೆಗೆ ಸೂತಕ ಅಡರುತ್ತದೆ. ಕರೀಕನ್ ತೀವ್ರ ನಿರಾಶೆಯಿಂದ ಖಿನ್ನನಾಗುತ್ತಾನೆ. ಅವರಿಬ್ಬರೂ ವಿಚಾರವಾದಿ ಜೋನೆಸನ ಮನೆಯಲ್ಲಿ ಆಶ್ರಯ ಪಡೆಯುತ್ತಾರಾದರೂ ಕರೀಕನ್ ಹೊರಗಿನ ಪ್ರಪಂಚವನ್ನು ಎದುರಿಸಲು ಸೋತು ಮನೆಯಲ್ಲೇ ಅವಿತುಕೊಳ್ಳುತ್ತಾನೆ.
ಮರ್ಗಲೀತಾ ರೇಷನ್ ಅಂಗಡಿಯಲ್ಲಿ ಕಸ ಗುಡಿಸುವ ಕೆಲಸಕ್ಕೆ ಸೇರಿ ಮನೆ ನಡೆಸುತ್ತಾಳೆ. ಅವಳ ಹೊಟ್ಟೆಯಲ್ಲಿ ಮಗು ಬೆಳೆಯತೊಡಗುತ್ತದೆ. ಈ ನಡುವೆ ಕರೀಕನ್ ಪಶ್ಚಾತ್ತಾಪದಿಂದ ಬೆಂದುಹೋಗುತ್ತಾನೆ. ದೇವರ ಸೇವೆಗೆಂದು ನನ್ನನ್ನು ಮುಡುಪಿಟ್ಟ ತಂದೆಯ ಸಾವಿಗೆ ತಾನೇ ಕಾರಣನಾದೆ, ಮರ್ಗಲೀತಾಳ ಸುಂದರ ಬದುಕನ್ನು ಹಾಳುಗೆಡವಿದೆ, ಮನೆಯ ಮರ್ಯಾದೆಯನ್ನು ಮೂರಾಬಟ್ಟೆ ಮಾಡಿದೆ, ಊರವರ ಪಾಪಗಳಿಗೆ ಪರಿಹಾರ ಹೇಳಬೇಕಾದ ನಾನೇ ಕಡುಪಾಪಿಯಾದೆ ಎಂದು ನೊಂದುಕೊಂಡು ಊರು ಬಿಟ್ಟು ಹೋಗಿ ದೂರದ ಊರಿನಲ್ಲಿ ಒಂದು ದೇವಾಲಯದ ಆವರಣದಲ್ಲಿ ಅನಾಥನಂತೆ ವಾಸಿಸುತ್ತಾ ತನ್ನ ಬರಿಗೈಯಿಂದಲೇ ದೇವಾಲಯದ ನೆಲವನ್ನು ಗುಡಿಸುತ್ತಾ ಬಿಕ್ಷೆಯೆಂದು ಹಾಕಿದ್ದನ್ನು ತಿನ್ನುತ್ತಾ ಪರಿಹಾರ ಕಂಡುಕೊಳ್ಳುತ್ತಾನೆ.
ಇತ್ತ ಮರ್ಗಲೀತಾ ತನಗೆ ಒದಗಿಬಂದ ಅಮ್ಮನ ಪಾಲಿನ ಆಸ್ತಿಯನ್ನು ತುಚ್ಛೀಕರಿಸಿ, ಕೋರ್ಟಿನ ಮೂಲಕ ಒದಗಬಹುದಾಗಿದ್ದ ತಂದೆಯ ಕೆಲಸವನ್ನು ನಿರಾಕರಿಸಿ, ಅಗಸ್ಟಿನರು ತಂದು ಬಿಟ್ಟ ಅನಾಥ ಮಗುವನ್ನು ತನ್ನದೆಂಬಂತೆ ಸ್ವೀಕರಿಸಿ, ತನ್ನದೇ ಬದುಕನ್ನು ರೂಪಿಸಿಕೊಳ್ಳಲು ಹೆಜ್ಜೆಯಿಡುತ್ತಾಳೆ. ಅವಳ ಯೋಚನಾ ಲಹರಿಯನ್ನೂ ಮನದ ತುಮುಲವನ್ನು ಪರಕಾಯ ಪ್ರವೇಶ ಮಾಡಿ ಹೇಳಿಸುವ ಸಾಹಸವನ್ನು ಸಾರಾ ಅವರು ಮಾಡುವುದಿಲ್ಲ. ಆದರೆ ಕಾದಂಬರಿಯಲ್ಲಿ ಚರ್ಚು ವ್ಯವಸ್ಥೆಯ ಹುಳುಕುಗಳನ್ನೂ ಅವನ್ನು ಮೀರಿ ಹೊರಬರಲಾಗದ ಅಸಹಾಯಕತೆಯನ್ನೂ ಬಿಂಬಿಸುತ್ತಾರೆ. ಸಂಸ್ಥೀಕರಣಗೊಂಡ ಚರ್ಚಿಗಿಂತಲೂ ಜಾನ್ ಕಶೀಶರಂತ ಮನೆಗಳಲ್ಲಿ ಅಗಸ್ಟಿನರಿರುವಂತ ಕಾಡುಗಳಲ್ಲಿ ಕ್ರಿಸ್ತನಿದ್ದಾನೆ ಎಂಬುದನ್ನು ಪರೋಕ್ಷವಾಗಿ ಹೇಳುತ್ತಾರೆ. ಕಾನ್ವೆಂಟು ವ್ಯವಸ್ಥೆಯನ್ನು ಒಪ್ಪಿಕೊಳ್ಳಲಾಗದೆ ಹೊಂದಿಕೊಳ್ಳಲೂ ಆಗದೆ ತೊಳಲುವ ಮೂವರು ಸಂನ್ಯಾಸಿನಿಯರು ತಮ್ಮ ಕನ್ಯಾಮಠದ ಹಿರಿಯರಿಗೆ ಗೊತ್ತಿಲ್ಲದಂತೆ ಮಬ್ಬುಬೆಳಕಿನ ಮರೆಯಲ್ಲಿ ತಾವೇ ಪ್ರೀತಿಯಿಂದ ನೇಯ್ದ ಫ್ರಾಕೊಂದನ್ನು ತಂದು ಮರ್ಗಲೀತಾಳ ಇನ್ನೂ ಹುಟ್ಟದ ಮಗುವಿಗೆ ಉಡುಗೊರೆಯಾಗಿ ಕೊಡುವ ಸನ್ನಿವೇಶವಂತೂ ಕಾನ್ವೆಂಟು ವ್ಯವಸ್ಥೆಯೊಳಗಿನ ಕುಮುಲುವಿಕೆಗೆ ಕನ್ನಡಿಯಾಗುತ್ತದೆ.
ಕಾದಂಬರಿಯ ಶೀರ್ಷಿಕೆ ಒತಪ್ಪ್ ಅಥವಾ ಕಳಂಕ ಕೊನೆಯವರೆಗೂ ಕಳಂಕವಾಗಿಯೇ ಉಳಿಯುತ್ತದೆ. ಜಡ್ಡುಗಟ್ಟಿದ ಕಥೋಲಿಕ ಚರ್ಚು ಬದಲಾಗಬೇಕು ಎಂಬುದನ್ನು ಸಾರಾ ಅವರು ಸೂಚ್ಯವಾಗಿ ಹೇಳುತ್ತಾರೆ, ಆದರೆ ಅವರು ಹೇಳುವ ಕತೆಯೆಲ್ಲವೂ ಕೇರಳದ ಕಟ್ಟಾ ಕ್ರೈಸ್ತರು ಇರುವಂತಹ ಸಮುದಾಯದಲ್ಲೇ ಕೇಂದ್ರಿತವಾಗಿದೆ. ವಿಚಾರವಾದಿ ಜೋನೆಸನನ್ನು ಹೊರತುಪಡಿಸಿದರೆ ಇತರ ಧಾರ್ಮಿಕ ಸಮುದಾಯಗಳಾಗಲೀ, ಮಾಧ್ಯಮಗಳಾಗಲೀ ಇಲ್ಲಿ ಇಣುಕುವುದಿಲ್ಲ.

ಅದೂ ಅಲ್ಲದೆ ಈ ಕತೆ ಇಂದಿನ ಕಾಲದ್ದಲ್ಲವೆಂದು ಸಾರಾಸಗಟಾಗಿ ತಳ್ಳಿಹಾಕಬಹುದು. ನಮ್ಮ ಕನ್ನಡನಾಡಿನಲ್ಲೇ ಕಳೆದ ಮೂರು ನಾಲ್ಕು ದಶಕಗಳಲ್ಲಿ ಕಾನ್ವೆಂಟು ಬಿಟ್ಟುಬಂದವರ, ಗುರುಪಟ್ಟವನ್ನು ತೊರೆದವರ ಹಲವಾರು ಉದಾಹರಣೆಗಳನ್ನು ನೋಡಿದ್ದೇವೆ. ಹಾಗೂ ನಮ್ಮ ಸಮಾಜವು ಅವನ್ನು ಸಹಜ ಲೌಕಿಕ ಕ್ರಿಯೆ ಎಂಬಂತೆಯೇ ಸ್ವೀಕರಿಸಿದೆ. ಹೀಗಾಗಿ ಪ್ರಸ್ತುತ ಕಾದಂಬರಿಯು ಚರ್ಚ್ ನಡಾವಳಿಗೊಂದು ಕನ್ನಡಿಯಾಗಬಲ್ಲುದೇ ಹೊರತು ಕನ್ನಡ ನಾಡಿನ ಸಂದರ್ಭದಲ್ಲಿ ಸಾಮಾಜಿಕ ವಿಪ್ಲವ ಉಂಟುಮಾಡದು ಎಂಬುದನ್ನು ಸ್ಪಷ್ಟವಾಗಿ ಹೇಳಬಹುದು. 

ಗುರುವಾರ, ಡಿಸೆಂಬರ್ 25, 2014

ಕ್ರಿಸ್ಮಸ್ ಹಬ್ಬ

ಕ್ರಿಸ್ಮಸ್ ಎನ್ನುವುದು ಸಂಭ್ರಮ ಸಡಗರಗಳ ಹಬ್ಬ. ಜಾತಿ ಕಾಲ ದೇಶವೆನ್ನದೆ ಎಲ್ಲೆಡೆಯೂ ಎಲ್ಲರೂ ಸಂತೋಷದಿಂದ ಬರಮಾಡಿಕೊಳ್ಳುವ ಹಬ್ಬ ಈ ಕ್ರಿಸ್ಮಸ್ ಹಬ್ಬ. ಮಕ್ಕಳಿಗಂತೂ ಇದು ಅಚ್ಚುಮೆಚ್ಚು. ಈ ದಿನಗಳಲ್ಲಿ ಕ್ರೈಸ್ತಬಾಂಧವರು ಮನೆಯ ಮುಂದೆ ನಕ್ಷತ್ರ ಕಟ್ಟಿ, ದೀಪಬೆಳಗಿ, ಪುಟ್ಟದೊಂದು ಸಾಂಕೇತಿಕ ದನದಕೊಟ್ಟಿಗೆಯನ್ನು  ಕಟ್ಟಿ ಅದರಲ್ಲಿ ಬಾಲಕ ಯೇಸುವಿನ ಪ್ರತಿರೂಪ ಮಡಗಿ ನಮಸ್ಕರಿಸುತ್ತಾರೆ. ಗೆಳೆಯರು ಇತರರೆನ್ನದೆ ಎಲ್ಲರೂ ಈ ಕ್ರೈಸ್ತಬಾಂಧವರಿಗೆ ಮನಸಾರೆ ಶುಭಾಶಯ ಕೋರಿ ಹಸ್ತಲಾಘವ ಮಾಡಿ ಪ್ರೀತಿ ವಿಶ್ವಾಸ ಮೆರೆಯುತ್ತಾರೆ. ಕೆಲವರು ಚರ್ಚುಗಳಿಗೆ ಭೇಟಿನೀಡಿ ಕೈಮುಗಿಯುವುದರೊಂದಿಗೆ ಸಾರ್ಥಕ್ಯ ಅನುಭವಿಸುತ್ತಾರೆ.
ಕ್ರಿಸ್ಮಸ್ ಎಂದರೆ ಯೇಸುಕ್ರಿಸ್ತನ ಜನನದ ಹಬ್ಬ. ಕ್ರೈಸ್ತರ ಆರಾಧ್ಯದೈವ ಯೇಸುಕ್ರಿಸ್ತ. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಇಂದಿನ ಇಸ್ರೇಲ್ ದೇಶವು ರೋಮನ್ ಚಕ್ರಾಧಿಪತ್ಯದ ಆಳ್ವಿಕೆಯಲ್ಲಿದ್ದ ಕಾಲದಲ್ಲಿ ಚಕ್ರವರ್ತಿ ಅಗಸ್ಟಸ್ ಸೀಜರನು ಜಗತ್ತಿನ ಮೊದಲ ಜನಗಣತಿಯನ್ನು ಮಾಡಲಿಚ್ಛಿಸಿ ಎಲ್ಲರೂ ತಂತಮ್ಮ ಹುಟ್ಟಿದೂರುಗಳಲ್ಲಿ ತಂಗಬೇಕೆಂದು ಡಂಗುರ ಹೊಡೆಸಿದ. ಆಗ ನಜರೆತ್ ಎಂಬ ಊರಿನಲ್ಲಿದ್ದ ಜೋಸೆಫ್ ಮತ್ತು ಅವನ ತುಂಬುಗರ್ಭಿಣಿ ಪತ್ನಿ ಮರಿಯಾ ಇಬ್ಬರೂ ಬೆತ್ಲೆಹೆಮ್ ಎಂಬ ತಮ್ಮ ಊರಿಗೆ ತೆರಳುತ್ತಾರೆ. ಆದರೆ ಅವರಿಗೆ ಅಲ್ಲಿ ತಂಗಲು ಸ್ಥಳವಿಲ್ಲದೆ ಹೋದುದರಿಂದ ದನಗಳನ್ನು ಕೂಡಿದ್ದ ಕೊಟ್ಟಿಗೆಯ ಮೂಲೆಯೊಂದರಲ್ಲಿ ಆಶ್ರಯ ಪಡೆಯುತ್ತಾರೆ. ಆ ರಾತ್ರಿ ಮರಿಯಳು ಯೇಸುಕ್ರಿಸ್ತನಿಗೆ ಜನುಮ ನೀಡುತ್ತಾಳೆ. ಜನಗಣತಿಯ ಜಾತ್ರೆಯಲ್ಲಿ ಕಳೆದುಹೋಗಿರುವ ಜನರಿಗೆ ಅಸುಕಂದನ ಅಳು ಕೇಳಿಸುವುದಿಲ್ಲ. ಆದರೆ ಬಯಲಿನಲ್ಲಿ ಮಲಗಿರುವ ಕುರುಬರಿಗೆ ದಿವ್ಯವಾದ ದೇವಗಾನ ಕೇಳಿಸುತ್ತದೆ. ಪೂರ್ವದೇಶದ ಖಗೋಳಜ್ಞರಿಗೆ ಹೊಸ ನಕ್ಷತ್ರದ ಉದಯ ಗೋಚರಿಸುತ್ತದೆ. ಇದು ಕ್ರಿಸ್ಮಸ್ಸಿನ ಹಿನ್ನೆಲೆ.
ಮುಂದೆ ಯೇಸು ಬೆಳೆದು ಕ್ರಾಂತಿಕಾರಿಯಾಗಿ ರೂಪುಗೊಂಡು ಸನಾತನ ಧರ್ಮಸಿದ್ಧಾಂತಗಳನ್ನು ಧಿಕ್ಕರಿಸಿ ಜನರನ್ನು  ಮೂಢನಂಬಿಕೆಗಳಿಂದ ಬಿಡಿಸಿ ಪುರೋಹಿತರ ಸಂಪ್ರದಾಯದ ಸಂಕೋಲೆಗಳಿಂದ ಪಾರುಮಾಡಿ ಮಾನವಧರ್ಮವನ್ನು ಎತ್ತಿಹಿಡಿಯುತ್ತಾನೆ. ಎಲ್ಲರೂ ದೇವರ ಮಕ್ಕಳು, ಮತ್ತೊಬ್ಬನನ್ನು ನಿನ್ನಂತೆಯೆ ಪರಿಭಾವಿಸು ಎಂಬ ಶುಭಸಂದೇಶವನ್ನು ಪ್ರತಿಪಾದಿಸಿ ಆ ತತ್ವಕ್ಕಾಗಿ ಹುತಾತ್ಮನಾಗುತ್ತಾನೆ ಎಂಬುದು ನಡೆದ ಕತೆ.
ಯೇಸುವಿನ ಗೆಳೆಯರು ಅವನ ಈ ಸಂದೇಶವನ್ನು ಜಗತ್ತಿನ ಮೂಲೆಮೂಲೆಗೂ ಕೊಂಡೊಯ್ಯುತ್ತಾರೆ. ತಮ್ಮ ಬದುಕು ಮತ್ತು ನಡವಳಿಕೆಗಳ ಮೂಲಕ ಬಹುಬೇಗನೇ ಇತರರ ಗಮನ ಸೆಳೆಯುತ್ತಾರೆ. ಹೀಗೆ ಕ್ರೈಸ್ತಧರ್ಮ ಸರ್ವವ್ಯಾಪಿಯಾಗುತ್ತದೆ. ಹೀಗೆ ಕ್ರಿಸ್ಮಸ್ಸಿನೊಂದಿಗೆ ಶಾಂತಿಯ ಭರವಸೆ ಮೂಡುತ್ತದೆ. ಸಂತಸದ ನಗು ಅರಳುತ್ತದೆ. ಹೊಸಬೆಳಕು ಮೂಡುತ್ತದೆ.
ಮೊದಲ ಆಚರಣೆ
ಕ್ರಿಸ್ತಶಕ ೧೨೨೩-೨೪ರಲ್ಲಿ ಯೂರೋಪಿನ ಅಸ್ಸಿಸಿ ಎಂಬ ಊರಿನಲ್ಲಿದ್ದ ಫ್ರಾನ್ಸಿಸ್ ಎಂಬುವರು ತಮ್ಮ ಸಂಗಡಿಗರೊಂದಿಗೆ ಸೇರಿಕೊಂಡು ಕ್ರಿಸ್ತಸಂಭವದ ದೃಶ್ಯಗಳನ್ನು ನಾಟಕದ ಮೂಲಕ ಪ್ರಸ್ತುತಪಡಿಸಿದರು. ದನದ ಕೊಟ್ಟಿಗೆಯ ಪ್ರತಿರೂಪ ನಿರ್ಮಿಸಿ, ಹಸುಕರುಗಳನ್ನು ಕುರಿಗಳನ್ನು ಅದರಲ್ಲಿಟ್ಟು, ಕರುಗಳಿಗೆ ಮೇವು ತಿನ್ನಿಸುವ ಬಕೆಟಿನಾಕಾರದ ಪುಟ್ಟ ಗೊಂದಳಿಗೆ/ಗೋದಣಿಗೆ ಅಥವಾ ಗೋದಲಿಯಲ್ಲಿ ನಿಜವಾದ ಮಗುವೊಂದನ್ನು ಮಲಗಿಸಿ ಕ್ರಿಸ್ತಜನನವನ್ನು ಘೋಷಿಸಿದರು. ನೆರೆದಿದ್ದ ಊರಿನ ಜನರೆಲ್ಲ ಭಕ್ತಿಭಾವದಿಂದ ಹಾಡಿದರು ಸಂತಸದಿಂದ ಚಪ್ಪಾಳೆ ತಟ್ಟಿ ಕುಣಿದರು. ಪಿಳ್ಳಂಗೋವಿ ಊದಿ ನಲಿದರು, ತಮಟೆ ಬಡಿದು ಮೆರೆದರು. ಬಹುಬೇಗನೇ ಈ ನಾಟಕ ರೂಪ ಅತ್ಯಂತ ಜನಪ್ರಿಯವಾಗಿ ಯೂರೋಪಿನಾದ್ಯಂತ ಹಬ್ಬಿತು.
ಇಂದು ಕೆಲವೆಡೆಗಳಲ್ಲಿ ಇಂಥ ಲೈವ್ ಕ್ರಿಬ್ ಆಚರಣೆಗಳು ನಡೆಯುತ್ತವಾದರೂ ಜನರು ಮಾರುಕಟ್ಟೆಯಲ್ಲಿ ಸಿಗುವ ಕ್ರಿಸ್ತಜನನದ ಗೊಂಬೆಗಳನ್ನು ತಂದು ವಿಶೇಷ ಆಸಕ್ತಿಯಿಂದ ಜೋಡಿಸಿ ಸಿಂಗರಿಸುತ್ತಾರೆ. ಇದರ ಜೊತೆಗೆ ಮರಳು ಹಾಸು, ಹುಲ್ಲಿನ ಹಾಸು, ಬೆಟ್ಟಗುಡ್ಡ ನದಿ ಝರಿ, ನಕ್ಷತ್ರಗಳ ಕಣ್ಣುಮುಚ್ಚಾಲೆ, ದೇವಗಾನದ ಇಂಚರ, ಬಣ್ಣಬಣ್ಣದ ದೀಪಗಳು, ಕಾಗದದ ಪರಿಪರಿ ಇವುಗಳನ್ನೆಲ್ಲ ರಚಿಸಿ ಸಂಭ್ರಮಿಸುತ್ತಾರೆ. ಮಕ್ಕಳಾದಿಯಾಗಿ ಎಲ್ಲರೂ ಮನೆಮನೆಗೆ ತೆರಳಿ ಈ ಅಲಂಕಾರಗಳನ್ನೂ ಸೌಂದರ್ಯವನ್ನೂ ಮನದಣಿಯೆ ತಣಿದು ಬೀಗುತ್ತಾರೆ.
ಕ್ಯಾರಲ್ ಅಥವಾ ಕ್ರಿಸ್ಮಸ್ ಮೇಳ
ನವೆಂಬರ್ ಕೊನೆಯ ಭಾನುವಾರದ ನಂತರ ಪ್ರಾರಂಭವಾಗುವುದೇ ಕ್ರಿಸ್ತನಾಗಮನದ ಕಾಲ. ಕ್ರಿಸ್ತನನ್ನು ಎದುರು ನೋಡುವ ಆಡ್ವೆಂಟ್ ಎನ್ನುವ ಈ ದಿನಗಳಲ್ಲಿ ಸಂಜೆಯಾಯಿತೆಂದರೆ ಯುವಕರು ಗುಂಪಾಗಿ ಕೈಗೆ ಸಿಕ್ಕ ವಾದ್ಯ ನುಡಿಸುತ್ತಾ ಕ್ರಿಸ್ಮಸ್ ಗೀತೆಗಳನ್ನು ಸುಮಧುರವಾಗಿ ಹಾಡುತ್ತಾ ಬೀದಿ ಬೀದಿಗಳನ್ನು ಹಾದು ಹೋಗುತ್ತಾರೆ. ಇಂಪಾದ ಆ ಗಾನಮಾಧುರ್ಯ ತಮ್ಮ ಬೀದಿಯ ಕೊನೆಯಲ್ಲಿ ಕೇಳಿಬರುತ್ತಿದ್ದಂತೆ ಮನೆಯಲ್ಲಿನ ಎಲ್ಲರೂ ತಮ್ಮ ತಮ್ಮ ಕೆಲಸಗಳನ್ನು ಅಲ್ಲಲ್ಲಿಗೇ ನಿಲ್ಲಿಸಿ ಬಾಗಿಲ ಹೊರಗೆ ನಿಲ್ಲುತ್ತಾರೆ. ಗಾನವೃಂದದ ಜೊತೆಗೆ ತಾವೂ ದನಿಗೂಡಿಸುತ್ತಾರೆ. ಗಾನವೃಂದ ತೆರಳಿದ ಮೇಲೂ ಆ ಗಾನದಿಂಚರ ಮನೆಗಳಲ್ಲಿ ಮನಗಳಲ್ಲಿ ಸದಾ ರಿಂಗಣಿಸುತ್ತಲೇ ಇರುತ್ತದೆ. ಕ್ರಿಸ್ಮಸ್ಸಿನ ಸೊಬಗೇ ಹಾಗೆ.
ಶುಭಾಶಯಪತ್ರ
ಕ್ರಿಸ್ಮಸ್ ಬಂತೆಂದರೆ ಹಾಗೆಯೇ. ಮನೆ ಸುಣ್ಣ ಬಣ್ಣ ಕಾಣುತ್ತದೆ. ಹಳೆಯ ಕ್ಯಾಲೆಂಡರುಗಳು, ಬೇಡಾದ ವಸ್ತುಗಳು ತಿಪ್ಪೆ ಸೇರುತ್ತವೆ. ಪಾತ್ರೆಗಳನ್ನು ಬೆಳಗಿ ಹೊಳಪು ಮಾಡಲಾಗುತ್ತದೆ. ಹಂಡೆ ಬಿಂದಿಗೆಗಳನ್ನು ಚೆನ್ನಾಗಿ ತೊಳೆದು ಹೊಸನೀರು ತುಂಬಲಾಗುತ್ತದೆ. ಗೋಡೆಗಳಲ್ಲಿ ಚಿತ್ತಾರ ಮನೆ ಬಾಗಿಲಲ್ಲಿ ರಂಗೋಲಿ. ಪಡಸಾಲೆಯಲ್ಲಿ ಬಣ್ಣದ ತೋರಣ ನಳನಳಿಸುವ ಬೆಲೂನುಗಳು. ಎಲ್ಲರೂ ವರ್ಷದ ಉಳಿತಾಯದ ಹಣದಲ್ಲಿ ತಮ್ಮ ಪ್ರೀತಿಪಾತ್ರರಿಗೆ ಉಡುಗೊರೆ ಹಂಚಿ ತೃಪ್ತರಾಗುತ್ತಾರೆ. ಗೆಳೆಯರಿಗೆ ಸಂದೇಶದ ಕಾರ್ಡುಗಳನ್ನು ಕಳಿಸಿ ನಲಿಯುತ್ತಾರೆ. ಅದಕ್ಕೆಂದೇ ವಿಶೇಷ ರೀತಿಯ ದೇಶವಿದೇಶದ ರಂಗುರಂಗಾದ ಗ್ರೀಟಿಂಗ್ ಕಾರ್ಡುಗಳು ಮಾರಲು ಸಿಗುತ್ತವೆ. ಕೆಲವರು ಕೌಶಲ್ಯದಿಂದ ತಾವೇ ಕಾರ್ಡುಗಳನ್ನು ಮಾಡುವುದೂ ಉಂಟು. ಇಂದು ಎಸ್ಸೆಮ್ಮೆಸ್ಸುಗಳ ಸಂದೇಶ ಹರಿದಾಡಿದರೂ ಗ್ರೀಟಿಂಗ್ ಕಾರ್ಡು ನೀಡುವ ಅಪ್ಯಾಯತೆ ಮಾತ್ರ ಅನನ್ಯ ಮತ್ತು ಅನುಪಮ.
ಕ್ರಿಸ್ಮಸ್ ತಿಂಡಿಗಳು
ಕ್ರಿಸ್ಮಸ್ ದಿನ ಮನೆಗಳ ಭೇಟಿಯೆಂದರೆ ಅದು ಬರಿಯ ಭೇಟಿಯಲ್ಲ. ಅದು ಹಿಂದಿನ ಎಲ್ಲ ಮನಸ್ತಾಪಗಳನ್ನು ತಪ್ಪುತಿಳುವಳಿಕೆಗಳನ್ನೂ ಕಳೆಯುವ ಭೇಟಿ. ಅಲ್ಲಿ ಮುನಿಸಿಲ್ಲ, ಕೊಂಕಿಲ್ಲ, ಹಮ್ಮುಬಿಮ್ಮು ಇಲ್ಲ, ಕೀಳುಭಾವನೆ ಇಲ್ಲವೇ ಇಲ್ಲ. ಅಲ್ಲಿ ಮನೆಮಾಡುತ್ತದೆ ಸದಭಿರುಚಿಯ ಲೋಕಾಭಿರಾಮ. ನಮ್ಮ ಮನೆಯಲ್ಲಿ ಮಾಡಿದ ತಿಂಡಿ ತಿನಿಸುಗಳನ್ನು ಅವರೊಂದಿಗೆ ಹಂಚಿಕೊಂಡು ಅವರ ಮನೆಯ ಸಿಹಿತಿಂಡಿಗಳನ್ನು ಸವಿದು ಮನಸನ್ನೂ ಸಿಹಿ ಮಾಡಿಕೊಳ್ಳುವ ಕ್ಷಣ. ಕ್ರಿಸ್ಮಸ್ಸಿನ ತಿಂಡಿಗಳು ನಾವೆಲ್ಲ ಒಂದೇ ಎಂಬ ಭಾವನೆ ಮೂಡಿಸುವುದು ಮಾತ್ರ ಖಚಿತ.
ಆ ತಿಂಡಿಗಳಾದರೂ ಎಂಥವು. ಶುಭ್ರವಾದ ಹಾಲು ಸಕ್ಕರೆ ತುಪ್ಪ ಕೇಸರಿ ಏಲಕ್ಕಿ ಗೋಡಂಬಿಗಳೊಂದಿಗೆ ಜೇನಿನಂತ ಮನಸ್ಸು ಸಂತೃಪ್ತಿಯ ಬದುಕು ಮಿಳಿತವಾದ ಭಕ್ಷ್ಯಗಳು. ಅದರಲ್ಲಿವೆ ಕಜ್ಜಾಯ, ಕಲಕಲ, ಕರ್ಚಿಕಾಯಿ, ಕುಕ್ಕೀ, ರವೆಯುಂಡೆ, ಬೇಸನುಂಡೆ, ಕೊಬರಿಬಿಸ್ಕತ್ತು, ಚಕ್ಕುಲಿ ಕೋಡುಬಳೆ. ಇವುಗಳನ್ನು ಮೀರಿಸುವಂತೆ ಮೆರೆಯುತ್ತವೆ ಬಣ್ಣಬಣ್ಣದ ಕೆನೆಭರಿತ ಕೇಕುಗಳು. ಕ್ರಿಸ್ಮಸ್ಸಿಗೆಂದೇ ವಿಶೇಷವಾಗಿ ತಯಾರಿಸಲಾದ ಪ್ಲಂ ಕೇಕು ರಾಜನಂತೆ ಘನಗಂಭೀರವಾಗಿ ಕಂಗೊಳಿಸುತ್ತದೆ. ಈ ನಡುವೆ ಕೆಲ ಮನೆಗಳಲ್ಲಿ ಮನೆಯಲ್ಲೇ ತಯಾರಾದ ಹಗೇವಿನಲ್ಲಿ ಮುಚ್ಚಿಟ್ಟು ಹಿತವಾಗಿ ಹುದುಗೆಬ್ಬಿಸಿದ ದ್ರಾಕ್ಷಾರಸವನ್ನೂ ಗುಟುಕರಿಸಲಾಗುತ್ತದೆ.
ಕ್ರಿಸ್ಮಸ್ ನಕ್ಷತ್ರ
ಕ್ರಿಸ್ಮಸ್ಸಿಗೂ ಬಣ್ಣದ ನಕ್ಷತ್ರಕ್ಕೂ ಅವಿನಾಭಾವ ಸಂಬಂಧವಿದೆ. ಯೇಸುಕ್ರಿಸ್ತನ ಜನನವಾದ ಸಂದರ್ಭದಲ್ಲಿ ಪೂರ್ವದೇಶದ ಜ್ಞಾನಿಗಳು ವಿಶೇಷವಾದ ತಾರೆಯೊಂದು ಗಗನದಲ್ಲಿ ಉದಯವಾದುದನ್ನು ಕಂಡು ಲೆಕ್ಕಾಚಾರ ಮಾಡಿ ಗುಣಿಸಿ ಇದೇ ವೇಳೆಯಲ್ಲಿ ಮಹಾನ್ ವ್ಯಕ್ತಿಯು ಮಗುವಿನ ರೂಪದಲ್ಲಿ ಜನ್ಮ ತಳೆದಿದ್ದಾನೆಂದು ಅರಿತು ನಕ್ಷತ್ರದ ಜಾಡು ಹಿಡಿದು ಪ್ರಯಾಣ ಹೊರಡುತ್ತಾರೆ. ಚುಕ್ಕಿ ರೂಪದ ಆ ಮಾರ್ಗದರ್ಶಿಯು ಹಲವು ರಾತ್ರಿಗಳ ಪ್ರಯಾಣದ ನಂತರ ಬೆತ್ಲೆಹೇಮಿನ ಕೊಟ್ಟಿಗೆ ಮೇಲೆ ದಿವ್ಯಪ್ರಭೆಯಾಗಿ ಇಳಿಯುತ್ತದೆ.  ಆ ಒಂದು ಮಹಾದರ್ಶನವನ್ನು ಪಡೆದು ಜ್ಞಾನಿಗಳು ಪುನೀತರಾಗುತ್ತಾರೆ. ತಮ್ಮಲ್ಲಿನ ಅಮೂಲ್ಯ ವಸ್ತುಗಳನ್ನು ಮಗುವಿಗೆ ಕಾಣಿಕೆಯಾಗಿ ಕೊಟ್ಟು ನಮಸ್ಕರಿಸುತ್ತಾರೆ. ಕ್ರಿಸ್ಮಸ್ ನಕ್ಷತ್ರವೆಂದರೆ ಮಹತ್ವಾಕಾಂಕ್ಷೆ, ಅದು ಭರವಸೆಯ ಸಂಕೇತ, ಉಜ್ವಲ ಭವಿಷ್ಯದ ಕೈದೀಪ ಮಾತ್ರವಲ್ಲ ಕ್ರಿಸ್ತದರ್ಶನಕ್ಕೆ ಮಾರ್ಗದರ್ಶಿ.
ಕ್ರಿಸ್ಮಸ್ ಬೆಳಕು
ಕ್ರಿಸ್ಮಸ್ ಸಂದರ್ಭದ ರಾತ್ರಿ ಹಲವರು ತಮ್ಮ ಮನೆಗಳ ಮುಂದೆ ಮೇಣದ ಬತ್ತಿ ಹಚ್ಚುತ್ತಾರೆ. ಇದರ ಹಿಂದೆ ಒಂದು ಕತೆಯಿದೆ. ಆಸ್ಟ್ರಿಯಾ ದೇಶದಲ್ಲಿ ಒಬ್ಬ ಚಮ್ಮಾರ ದಂಪತಿಯಿದ್ದರು. ಅವರದು ಬಹು ಪರೋಪಕಾರಿ ಮನಸ್ಸು. ಸಂಜೆಯಾಯಿತೆಂದರೆ ಹಾದಿಹೋಕರಿಗೆ ಬೆಳಕಾಗಲೆಂದು ತಮ್ಮ ಮನೆಯ ಕಿಟಕಿಯಲ್ಲಿ ಒಂದು ಮೇಣದ ಬತ್ತಿಯನ್ನು ಹಚ್ಚಿ ಇಡುತ್ತಿದ್ದರು. ಯುದ್ಧದ ಸಂಕಷ್ಟದ ದಿನಗಳಲ್ಲೂ ಅವರ ಈ ನೇಮ ತಪ್ಪಿದ್ದಿಲ್ಲ. ಎಂಥ ಪ್ರಕ್ಷುಬ್ದ ಸಂದರ್ಭದಲ್ಲೂ ಈ ದಂಪತಿ ಸಮಾಧಾನ ಚಿತ್ತರಾಗಿರುವುದನ್ನು ಕಂಡು ಹಳ್ಳಿಗರಿಗೆ ಆಶ್ಚರ್ಯ. ಅದು ಹೇಗೆ ಎಂದು ಅವರನ್ನು ಕೇಳಿದಾಗ ಆ ಚಮ್ಮಾರ ದಂಪತಿ ಹೇಳುತ್ತಾರೆ: “ಎಲ್ಲಿ ಬೆಳಕು ಇರುತ್ತದೋ ಅಲ್ಲಿ ನೆಮ್ಮದಿಯಿರುತ್ತದೆ” ಎಂದು. ಆ ಮಾತನ್ನು ಕೇಳಿ ಊರವರೆಲ್ಲರೂ ತಂತಮ್ಮ ಮನೆಯ ಬಾಗಿಲಲ್ಲಿ ಮೇಣದ ಬತ್ತಿ ಹಚ್ಚಿಡಲು ಪ್ರಾರಂಭಿಸುತ್ತಾರೆ. ಆಗಲೇ ಕ್ರಿಸ್ಮಸ್ ದಿನವೂ ಬರುತ್ತದೆ. ಯುದ್ಧ ಮುಗಿಯಿತೆಂಬ ಸುದ್ದಿಯೂ ಬರುತ್ತದೆ. ರಣದ ಕ್ಷೋಭೆಯು ಕರಗಿ ನಿರುಮ್ಮಳತೆಯ ಸುಳಿಗಾಳಿ ಬೀಸಿ ಎಲ್ಲರ ಮನಸು ಹಗುರಾಗತೊಡಗುತ್ತದೆ. ಹೀಗೆ ಕ್ರಿಸ್ಮಸ್ ರಾತ್ರಿ ಮನೆಯ ಕಿಟಕಿಯಲ್ಲಿ ಮೇಣದ ಬತ್ತಿಯನ್ನು ಹಚ್ಚಿಡುವ ಪರಿ ಇಂದು ಸರ್ವವ್ಯಾಪಿಯಾಗಿದೆ.
ಕ್ರಿಸ್ಮಸ್ಸಿಗಾಗಿ ಕದನವಿರಾಮ
ಮೊದಲ ಮಹಾಯುದ್ಧ ನಡೆದಿದ್ದ ಸಂದರ್ಭವದು. ಕ್ರಿಸ್ಮಸ್ ಹತ್ತಿರಾಗುತ್ತಿದ್ದಂತೆ ಮುಂಚೂಣಿಯಲ್ಲಿದ್ದ ಕೆಲ ಜರ್ಮನ್ ಯುವಸೈನಿಕರಿಗೆ ಯುದ್ಧ ವಿರಾಮ ಘೋಷಿಸಿ ಕ್ರಿಸ್ಮಸ್ ಆಚರಿಸುವ ಉಮೇದು ಬರುತ್ತದೆ. ಕೆಲವರು ಶತ್ರು ಸೈನಿಕರ ಬಳಿ ಹೋಗಿ ಕೈಕುಲುಕಿ ಕೇಕು ತಿನ್ನಿಸುವ ಉಮೇದು ಬರುತ್ತದೆ. ಅವರೆಲ್ಲ ಸೇರಿ ವಿಶೇಷವಾದ ಕೇಕು ತಯಾರಿಸಿ ಶತ್ರುಪಾಳೆಯದೆಡೆಗೆ ಉರಿವ ಮೇಣದಬತ್ತಿ ಬಿಳಿಯ ಬಾವುಟ ಹಿಡಿದು ಸಾಗಿ “ಕ್ರಿಸ್ತಜಯಂತಿಯ ಶುಭಾಶಯಗಳು” ಎಂದು ಹೇಳುತ್ತಾರೆ. ಶತ್ರುಪಾಳೆಯದಲ್ಲಿದ್ದ ಇಂಗ್ಲಿಷ್ ಮತ್ತು ಫ್ರೆಂಚ್ ಸೈನಿಕರಿಗೆ ಆಶ್ಚರ್ಯವೋ ಆಶ್ಚರ್ಯ. ಮನದೊಳಗೆ ಆತಂಕ ಹಾಗೂ ತಳಮಳ. ಆದರೆ ಅವರ ಅಪನಂಬಿಕೆಯ ತೆರೆ ಸರಿದು ಅಲ್ಲಿ ಸಂತೋಷ ಮನೆ ಮಾಡುತ್ತದೆ. ಜರ್ಮನರು ಇಂಗ್ಲಿಷ್ ಭಾಷೆಯಲ್ಲಿ ಶುಭ ಕೋರಿದರೆ ಇಂಗ್ಲಿಷರು ಜರ್ಮನ್ ಭಾಷೆಯಲ್ಲಿ ಶುಭ ಹಾರೈಸುತ್ತಾರೆ. ಎರಡೂ ಬಣಗಳು ಕುಶಲೋಪರಿಯಲ್ಲಿ ತೊಡಗಿ ಮನಬಿಚ್ಚಿ ಮಾತಾಡಿಕೊಳ್ಳುತ್ತಾರೆ. ಯುದ್ಧ ನಮಗೆ ಸಾಕಾಗಿಬಿಟ್ಟಿದೆ, ಯಾವಾಗ ಯುದ್ಧ ಮುಗಿದು ಮನೆಗಳಿಗೆ ತೆರಳಿ ಸಂತೋಷದಿಂದ ಬದುಕುತ್ತೇವೋ ಎಂಬ ತುಡಿತ ಇಬ್ಬರಲ್ಲೂ ಮೂಡುತ್ತದೆ. ಹೀಗೆ ಕ್ರಿಸ್ಮಸ್ಸು ಅಘೋಷಿತ ಕದನವಿರಾಮ ಮೂಡಿಸಿ ಸೈನಿಕರಲ್ಲೂ ಸಂತಸದ ಕೇಳಿ ಹೊರಡಿಸುತ್ತದೆ.
ಸಾಂತಾಕ್ಲಾಸ್
ಕ್ರಿಸ್ಮಸ್ಸಿನೊಂದಿಗೆ ಬರುವ ಮತ್ತೊಂದು ಐಕಾನ್ ಎಂದರೆ ಸಾಂತಾಕ್ಲಾಸ್ ಎಂಬ ತಾತ. ಸಾಂತಾಕ್ಲಾಸರು ಒಮ್ಮೆ ಪಯಣಿಸುತ್ತಿರುವಾಗ ಒಂದು ಮನೆಯ ಜಗಲಿಯ ಮೇಲೆ ವಿರಮಿಸಿಕೊಳ್ಳುತ್ತಾರೆ. ಆ ಮನೆಯಲ್ಲಿ ಬೆಳೆದು ನಿಂತ ಮೂರು ಹೆಣ್ಣುಮಕ್ಕಳು ಹಾಗು ಅವರ ವೃದ್ಧ ತಾಯಿಯಷ್ಟೇ. ಮಕ್ಕಳಿಗೆ ಮದುವೆ ಮಾಡಲಾಗದ ಅಸಹಾಯಕತೆ ಅಲ್ಲಿ ಕಾಣದಿದ್ದರೂ ಗೋಚರವಾಗುತ್ತಿದೆ. ನಿಕೊಲಾಸರು ಆ ಸ್ವಾಭಿಮಾನಿ ಕುಟುಂಬಕ್ಕೆ ಪರೋಕ್ಷವಾಗಿ ನೆರವಾಗುತ್ತಾರೆ. ಮನೆಯ ಹೊಗೆಗೂಡಿನಿಂದ ಚಿನ್ನದ ನಾಣ್ಯಗಳನ್ನು ತೂರಿ ಆ ಮಕ್ಕಳ ಮದುವೆಗೆ ಕಾರಣರಾಗುತ್ತಾರೆ. ಇಂದಿಗೂ ಪುಟ್ಟ ಮಕ್ಕಳು ತಮ್ಮ ಕೋರಿಕೆಯನ್ನು ಸಾಂತಾಕ್ಲಾಸನಿಗೆ ಅರುಹಿದರೆ ಅವನು ಹೇಗಾದರೂ ಅದನ್ನು ಪೂರೈಸುವನೆಂದು ನಂಬುತ್ತಾರೆ. ಆ ನಂಬಿಕೆಯನ್ನು ಹುಸಿಗೊಳಿಸದ ತಂದೆತಾಯಿಯರು ಪರೋಕ್ಷವಾಗಿ ಮಕ್ಕಳ ಬಯಕೆಯನ್ನು ಪೂರೈಸುತ್ತಾರೆ. ಮಕ್ಕಳು ಬೆಳೆದ ಮೇಲೆ ಈ ಗುಟ್ಟನ್ನು ಜತನವಾಗಿರಿಸಿ ತಮ್ಮ ಮಕ್ಕಳಿಗೆ ದಾಟಿಸುತ್ತಾರೆಂಬುದು ಕ್ರಿಸ್ಮಸ್ಸಿನ ಒಂದು ನವಿರಾದ ಆಚರಣೆಗಳಲ್ಲೊಂದು.
ಕ್ರಿಸ್ಮಸ್ ಮರ
ಕ್ರಿಸ್ಮಸ್ಸಿನೊಂದಿಗೆ ಒಂದು ನಿತ್ಯ ಹರಿದ್ವರ್ಣದ ಸೂಜಿಯೆಲೆಯ ಮರವೂ ತಳಕು ಹಾಕಿಕೊಂಡಿದೆ. ಗಗನದೆತ್ತರಕ್ಕೆ ತುದಿಚಿಮ್ಮುವ ಆ ಮರ ಕ್ರಿಸ್ಮಸ್ ಸಂದರ್ಭದ ಇಬ್ಬನಿಯಸೋನೆಗೆ ಬೀಗಿದರೂ ಮಕ್ಕಳ ಮುದ್ದಿನ ವೃದ್ಧನ ಹಾಗೆ ಬಾಗುತ್ತದೆ. ಅದರಲ್ಲಿ ಬಣ್ಣಬಣ್ಣದ ನಕ್ಷತ್ರಗಳನ್ನು ಕಟ್ಟಿ ಉಡುಗೊರೆಗಳನ್ನು ತೂಗಿಸಿ ದೀಪಗಳನ್ನು ಮಿನುಗಿಸುವ ಪರಿಪಾಠ ಈಜಿಪ್ಟಿನ ಜಾನಪದ ಆಚರಣೆಯಿಂದ ಎರವಲಾದದ್ದು. ಆದರೆ ಅದು ಕ್ರಿಸ್ಮಸ್ಸಿಗಾಗಿಯೇ ಜನಪ್ರಿಯಗೊಂಡದ್ದು ಜರ್ಮನ್ ನಾಡಿನಲ್ಲಿ. ೧೮೪೧ರಲ್ಲಿ ವಿಕ್ಟೋರಿಯ ರಾಣಿಯ ಪತಿ ಜರ್ಮನ್ ಸಂಜಾತರಾಗಿದ್ದು ತಮ್ಮ ನಾಡಿನಿಂದ ವಿಶೇಷವಾಗಿ ಸಿಂಗರಿಸಿದ್ದ ಇಂಥ ಮರವೊಂದನ್ನು ಲಂಡನ್ನಿನ ವಿಂಡ್ಸರ್ ಕ್ಯಾಸಲ್ ಆವರಣಕ್ಕೆ ತಂದಾಗ ಇಡೀ ರಾಣಿಪರಿವಾರವೇ ಅಚ್ಚರಿಗೊಂಡಿತ್ತು. ಅದು ಕ್ಷಣಮಾತ್ರದಲ್ಲೇ ಇಂಗ್ಲೆಂಡಿನಲ್ಲೆಲ್ಲ ವಿದ್ಯುತ್ ಸಂಚಾರ ಮೂಡಿಸಿತು. ಇಂದು ಜಗತ್ತಿನೆಲ್ಲೆಡೆ ಪರಿಸರದ ಕಾಳಜಿ ಹಬ್ಬುತ್ತಿರುವಾಗ ಹಸಿರಿನಿಂದ ಕಂಗೊಳಿಸುವ ಮರಗಳನ್ನು ಸಿಂಗರಿಸಿ ಅದರಲ್ಲಿ ದೈವೀ ರೂಪವನ್ನು ಕಾಣುವ ಅನನ್ಯತೆಗೆ ಮನಸೋಲದವರಾರು?
ರೈತಪ್ರೇಮಿ ಕ್ರಿಸ್ತ
ಕನ್ನಡನಾಡಿನ ಹೆಚ್ಚಿನ ಪ್ರದೇಶಗಳಲ್ಲಿ ಕ್ರಿಸ್ಮಸ್ಸು ಸುಗ್ಗಿಯ ಸಂದರ್ಭವಾಗಿರುತ್ತದೆ. ಹೊಲದಿಂದ ಕಣಕ್ಕೆ ಪೈರುಬಂದು ಸ್ನಿಗ್ದ ಸೊಗಡಿನ ಕಾಳುಕಡಿ ಮನೆಗೆ ಬಂದಿರುತ್ತದೆ. ಈ ದಿನಗಳಲ್ಲಿ ರೈತರಿಗೂ ಅವರ ಪಶುಗಳಿಗೂ ವಿರಾಮದ ದಿನಗಳು. ಮೂರು ಜ್ಞಾನಿಗಳು ಒಂಟೆಗಳನ್ನೇರಿ ಯಾತ್ರೆ ಬಂದು ಕ್ರಿಸ್ತನನ್ನು ಕಾಣುತ್ತಾರಲ್ಲವೇ? ಅಂದರೆ ಕ್ರಿಸ್ತ ಹುಟ್ಟಿದಾಗ ಮೊದಲ ದರ್ಶನ ಪಡೆಯುವುದು ದನಕರುಗಳು ಕುರಿಗಳು ಒಂಟೆಗಳು ಪಾರಿವಾಳಗಳು ಎಂಬುದನ್ನು ನೆನೆಸಿಕೊಂಡರೆ ಕ್ರಿಸ್ತನಿಗೂ ಪ್ರಕೃತಿಗೂ ಎಷ್ಟೊಂದು ಬಾಂಧವ್ಯ ಅಲ್ಲವೇ? ಆದ್ದರಿಂದ ಕ್ರೈಸ್ತ ರೈತರು ತಮ್ಮ ಹಸುಕರುಗಳನ್ನು ಚೆನ್ನಾಗಿ ಸಿಂಗರಿಸಿ ಅವುಗಳ ಕೊಂಬಿಗೆ ಬಣ್ಣ ಹಚ್ಚಿ ಕೊರಳಿಗೆ ಕಿರುಗಂಟೆಗಳನ್ನು ಕಟ್ಟಿ ಬೆನ್ನ ಮೇಲೆ ಬಣ್ಣದ ಕವುದಿ ಹೊಚ್ಚಿ ಊರಲ್ಲಿ ಮೆರವಣಿಗೆ ಹೊರಡಿಸುತ್ತಾರೆ. ಅವರ ಸಂಭ್ರಮಕ್ಕೆ ಇನ್ನೊಂದು ಕಾರಣವೂ ಇದೆ. ಯೇಸುಕ್ರಿಸ್ತ ಹುಟ್ಟಿದಾಗ ತನಗೊಬ್ಬ ಪ್ರತಿಸ್ಪರ್ಧಿ ಹುಟ್ಟಿದ್ದನ್ನು ಅರಿತ ಅಲ್ಲಿನ ರಾಜ ಕ್ರಿಸ್ತನನ್ನು ಕೊಲ್ಲಲು ಉದ್ಯುಕ್ತನಾಗಿ ಹುಡುಕುತ್ತಾನೆ. ಆದರೆ ಅವನು ಸಿಕ್ಕದೇ ಹೋದಾಗ ತನ್ನ ನಾಡಿನ ಎಲ್ಲ ಹಸುಗೂಸುಗಳನ್ನು ಕೊಚ್ಚಿಹಾಕುವಂತೆ ಸೈನಿಕರಿಗೆ ಆದೇಶಿಸುತ್ತಾನೆ. ಜಗತ್ತಿನ ಅತ್ಯಂತ ಘೋರ ದುರಂತವಿದು. ಆ ಸಂದರ್ಭದಲ್ಲಿ ಯೇಸು ಮತ್ತು ಅವರ ತಂದೆತಾಯಿ ಸುರಕ್ಷಿತವಾಗಿ ಮತ್ತೊಂದು ದೇಶಕ್ಕೆ ಪಲಾಯನಗೈದಿರುತ್ತಾರೆ. ಹೋಗುವ ವೇಳೆ ದಾರಿಯಲ್ಲಿ ರೈತನೊಬ್ಬನನ್ನು ಮಾತಾಡಿಸಿ ಅಲ್ಲೇ ಸ್ವಲ್ಪ ವಿರಮಿಸಿ ಅವನಿಂದ ಬಿತ್ತನೆಧಾನ್ಯ ಪಡೆದು ಹೊಲದಲ್ಲಿ ಎರಚುತ್ತಾರೆ. ಒಮ್ಮೆಲೇ ಆ ಬೀಜಗಳು ಮೊಳೆತು ಫಲಭರಿತ ಪೈರಾಗಿ ಕಂಗೊಳಿಸುತ್ತವೆ. ಅವರು ಅತ್ತ ಹೋದ ಮೇಲೆ ಇತ್ತ ಸೈನಿಕರು ಕೂಸುಳ್ಳವರು ಇತ್ತ ಬಂದರೇ ಎಂದು ಕೇಳುತ್ತಾರೆ. ಅದಕ್ಕೆ ರೈತ ಹೌದು ಈ ಪೈರಿನ ಬಿತ್ತನೆ ಮಾಡಿ ಹೋದರು ಎನ್ನುತ್ತಾನೆ. ಬೆಳೆದು ನಿಂತ ಪೈರನ್ನು ಕಂಡ ಸೈನಿಕರು ಅವರು ಹೋಗಿ ಸಾಕಷ್ಟು ಕಾಲವಾಗಿದೆ ಎಂದು ತಿಳಿದು ಹಿಂದಕ್ಕೆ ಮರಳುತ್ತಾರೆ. ಈ ಘಟನೆಯ ಸಂಕೇತವಾಗಿ ಕನ್ನಡ ಕ್ರೈಸ್ತರ ಮನೆಗಳಲ್ಲಿ ಕ್ರಿಸ್ತಜನನದ ಕೊಟ್ಟಿಗೆಯ ಬದಿಯಲ್ಲಿ ತಟ್ಟೆಗಳಲ್ಲಿ ಬೆಳೆಸಿದ ಪೈರನ್ನು ಇಡುತ್ತಾರೆ.
ಅವರ ಜಾನಪದ ಹಾಡುಗಳಲ್ಲೂ ಕ್ರಿಸ್ತನಿಗೆ ಕ್ರಿಸ್ತನ ಹುಟ್ಟಿಗೆ ಅವನ ಹೆತ್ತತಾಯಿಗೆ ವಿಶೇಷವಾದ ಸ್ಥಾನವಿದೆ. ಹೀಗೆ ಕ್ರಿಸ್ತಜಯಂತಿಯು ಉಳ್ಳವರ ಹಾಗೂ ಇಲ್ಲದವರ ಎಲ್ಲರ ಸಂತೋಷಕ್ಕೆ ಕಾರಣವಾಗುತ್ತದೆ ಎಂಬುದೇ ಅದರ ಸಂಭ್ರಮಕ್ಕೆ ಕಾರಣವಾಗುತ್ತದೆ. ಇಬ್ಬನಿಯ ಜೊತೆಗಿನ ಹಬ್ಬದ ಬಿಸುಪು ದ್ವೇಷ ದುಗುಡದ ಎದೆಗಳಲ್ಲಿ ಭರವಸೆಯ ಬೆಳಕು ಮೂಡಿಸಲಿ ಎಂದು ಆಶಿಸೋಣ. 
(ಈ  ೨೫ನೇ ಡಿಸೆಂಬರ್ ೨೦೧೪ರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾಯಿತು. http://epaper.samyukthakarnataka.com/403110/Samyuktha-Karnataka/December-25-2014-Bangalore#page/15/1)