ಬುಧವಾರ, ಮಾರ್ಚ್ 20, 2013

ಕೆಂಪ್ಟಿ ಫಾಲ್ಸ್

ಮಸ್ಸೂರಿಗೆ ಹೋದವರು ಕೆಂಪ್ಟಿ ಜಲಪಾತವನ್ನು ನೋಡದೆ ಹಿಂದಿರುಗಿದರೆ ಆ ಪ್ರಯಾಣ ವ್ಯರ್ಥವೇ ಸರಿ. ಮಸೂರಿಯಿಂದ ಚಕ್ರಾತಾ ರಸ್ತೆಯಲ್ಲಿ ಸುಮಾರು ೧೮ ಕಿಲೋಮೀಟರು ದೂರದಲ್ಲಿರುವ ಕೆಂಪ್ಟಿ ಫಾಲ್ ಒಂದು ಮನಮೋಹಕ ತಾಣ. ಡೆಹರಾದೂನಿನಿಂದಲೂ ಸರಿಸುಮಾರು ಅಷ್ಟೇ ದೂರವಿದ್ದು ಅಲ್ಲಿಂದಲೂ ನೇರವಾಗಿ ಬರಬಹುದು. ಸಮುದ್ರ ಮಟ್ಟದಿಂದ ೧೩೬೪ಮೀಟರು (೪೪೭೫ ಅಡಿ)ಗಳ ಮೇಲೆ ಇರುವ ಈ ಪ್ರವಾಸಿ ತಾಣವು ಹೆಚ್ಚಿನ ಜನರಿಗೆ ತಿಳಿದಿಲ್ಲ. ಜಾನ್ ಮೆಕಿನನ್ ಎಂಬ ಬ್ರಿಟಿಷ್ ಅಧಿಕಾರಿಯು ೧೮೩೫ರಲ್ಲಿ ಈ ತಾಣವನ್ನು ಅಭಿವೃದ್ಧಿ ಪಡಿಸಿದನೆಂದು ಹೇಳಲಾಗುತ್ತದೆ. ಸುತ್ತಮುತ್ತಲಿನ ರಮಣೀಯ ದೃಶ್ಯಾವಳಿ, ವಿಶಾಲವೂ ವಿಸ್ತಾರವೂ ಆದ ಪರಿಸರದ ಸೊಬಗು, ರುದ್ರಗಾಂಭೀರ್ಯದಲ್ಲಿ ಧುಮ್ಮಿಕ್ಕುವ ನೀರು ಇವುಗಳ ನಡುವೆ ಸಮಯ ಕಳೆಯುವುದೇ ತಿಳಿಯದ ಈ ತಾಣ ಮರೆಯಲು ಸಾಧ್ಯವಿಲ್ಲ. ಬ್ರಿಟಿಷರು ಬಿಡುವಾದಾಗ ಈ ಸುಂದರ ಜಾಗದಲ್ಲಿ ಶಿಬಿರ ಹೂಡಿ ಚಹಾ ಸವಿಯುತ್ತಿದ್ದರಂತೆ. ಆದ್ದರಿಂದಲೇ ಈ ಸ್ಥಳಕ್ಕೆ CAMP TEA ಎಂಬ ಹೆಸರುಂಟಾಗಿ ಅದೇ ಆಮೇಲೆ KEMPTY ಆಗಿದೆ ಎನ್ನಲಾಗಿದೆ.
ಬಂಗ್ಲೋ ಕಿ ಕಂಡಿ ಎಂಬ ಹಳ್ಳಿಯಲ್ಲಿ ಸಣ್ಣ ಚಿಲುಮೆಯಾಗಿ ಹುಟ್ಟುವ ಈ ನೀರು ಹಲವು ತೊರೆಗಳನ್ನು ಕೂಡಿಕೊಂಡು ಕೆಂಪ್ಟಿಯ ಬಳಿ ಬಂಡೆಗಳ ಬಳಿಸಾರಿ ೪೦ಅಡಿಗಳ ಎತ್ತರದಿಂದ ಧುಮ್ಮಿಕ್ಕುತ್ತದೆ. ಐದು ಶಾಖೆಗಳಾಗಿ ಬೀಳುವ ಜಲಧಾರೆಗೆ ಮೈಯೊಡ್ಡಿ ಬೆಚ್ಚನೆಯ ಬಿಸಿಲಿಗೆ ತುಂತುರ ನೀರ ಹನಿಯ ಮೇಲೆ ಅರಳುವ ನವಿರಾದ ಕಾಮನಬಿಲ್ಲನ್ನು ಸವರುತ್ತಾ, ಶುಭ್ರಸ್ಫಟಿಕ ನೀರಲ್ಲಿ ಈಜುತ್ತಾ, ಗೆಳೆಯ ಗೆಳತಿಯರತ್ತ ನೀರು ಎರಚುತ್ತಾ ಹಾಡುತ್ತ ಕೂಗುತ್ತಾ ಇಲ್ಲಿ ಎಷ್ಟು ಹೊತ್ತಾದರೂ ಮೈಮರೆಯಬಹುದು. ನೀರಿಗಿಳಿಯಲು ಮನಸ್ಸಿಲ್ಲದಿದ್ದರೆ ಜಲಪಾತವನ್ನೇ ನೋಡುತ್ತಾ ಪಾಪ್ ಕಾರ್ನ್ ಮೆಲ್ಲಬಹುದು, ಬಿಸಿಬಿಸಿಯಾದ ಆಲೂಪರಾಟದೊಂದಿಗೆ ಮೊಟ್ಟೆಪಲ್ಯವನ್ನು ಮುಕ್ಕುತ್ತಾ ಜಲಪಾತದ ಎತ್ತರವನ್ನು ಗುಣಿಸಬಹುದು. ಬಿಸಿಯಾದ ಮಸಾಲೆ ಚಹಾ ಹೀರುತ್ತಾ ಸಂಗಾತಿಗಳನ್ನು ಚುಡಾಯಿಸಬಹುದು. ಒಟ್ಟಿನಲ್ಲಿ ದಿನವಿಡೀ ಕಾಲ ಕಳೆಯಲು ಹೇಳಿ ಮಾಡಿಸಿದ ಜಾಗವಿದು.
ಮಸ್ಸೂರಿಯಿಂದ ಸ್ವಲ್ಪ ಹೊರಗೆ ಟ್ಯಾಕ್ಸಿ ಸ್ಟ್ಯಾಂಡ್ ಬಳಿ ಸುಮೊ ಅಥವಾ ಸಫಾರಿ ಗಾಡಿಗಳು ನಿಂತು ಕೆಂಪ್ಟಿಗೆ ಕರೆದೊಯ್ಯುತ್ತವೆ. ಹಿಮಾಲಯದ ಪರ್ವತಶ್ರೇಣಿಯ ನಡುವೆ ಮೋಡಗಳಲ್ಲಿ ತೇಲುತ್ತಾ ಆಳ ತಿರುವುಗಳಲ್ಲಿ ಇಳಿಯುತ್ತಾ ಕುಳಿರ್ಗಾಳಿಯ ಕಂಪು ಸವಿಯುತ್ತಾ ಉಲ್ಲಾಸದ ಪಯಣ ಸಾಗುತ್ತದೆ. ಜಲಪಾತ ಇನ್ನೂ ಎರಡು ಕಿಲೊಮೀಟರು ಇರುವಂತೆಯೇ ಅದರ ಸದ್ದು ಅನುರಣಿಸುತ್ತದೆ. ಒಂದು ಸುದೀರ್ಘ ವರ್ತುಳವನ್ನು ಸುತ್ತಿ ಜಲಪಾತದ ಬಳಿಗೆ ಗಾಡಿ ಬಂದು ನಿಲ್ಲುವ ವೇಳೆಗೆ ನಿಮ್ಮ ಕ್ಯಾಮೆರಾವು ಜಲಪಾತದ ಹಲವು ದೂರದೃಶ್ಯಗಳನ್ನು ಕ್ಲಿಕ್ಕಿಸಿರುತ್ತೆ. ರಸ್ತೆಯ ತಡಿಯಲ್ಲೇ ಸೇತುವೆಯ ಮೂಲಕ ಹರಿದ ನೊರೆನೊರೆಯಾದ ನದೀನೀರು ಸನಿಹದಲ್ಲೇ ಕೆಳಕ್ಕೆ ಬೀಳುವ ಸದ್ದಿನೊಂದಿಗೆ ಪ್ರವಾಸಿಗರ ಕೇಕೆ ಮಿಳಿತವಾಗಿ ಕೇಳಿಬರುತ್ತದೆ. ಇಲ್ಲಿಂದ ಮುಂದೆ ನಿಮ್ಮ ವಾಹನ ಸಾಗದು. ನೀವು ಕೆಳಗಿಳಿದು ನಡೆಯುತ್ತಾ ಅಂಗಡಿ ಸಾಲಿನ ನಡುವೆ ಜಲಪಾತದೆಡೆಗೆ ಸಾಗುವ ಮೆಟ್ಟಿಲುಗಳಿಗಾಗಿ ತಡಕುತ್ತೀರಿ. ನಿಮ್ಮ ತಡಕಾಟ ಕಂಡು ಅಲ್ಲಿನ ಸ್ನೇಹಪರ ಘರವಾಲಿ ಜನ ನಿಮಗೆ ಮಾರ್ಗದರ್ಶನ ಮಾಡುತ್ತಾರೆ. ಮೆಟ್ಟಲಿಳಿಯಲು ಕಷ್ಟವಾದವರಿಗೆ ಕೇಬಲ್ ತೊಟ್ಟಿಲಿನ ಸೌಕರ್ಯವೂ ಇದೆ.
ಕೆಂಪ್ಟಿ ಫಾಲ್ ಅನ್ನೋ ಈ ದಬದಬೆಯಷ್ಟೇ ಇಲ್ಲಿನ ನೋಟದಾಣವಲ್ಲ. ಮೇಲೆ ಹತ್ತಿ ನದಿಯ ಗುಂಟ ಸಾಗಿದರೆ ಅಲ್ಲಲ್ಲಿ ಕಿರು ಜಲಪಾತಗಳೂ, ಕೊರಕಲುಗಳ ನಡುವಿನ ನದೀ ಹಾಸುಗಳೂ, ಸ್ವಚ್ಛ ನೀರಿನ ಕೊಳಗಳೂ ಇದ್ದು ನೀರಿನಲ್ಲಿ ಸುಖಾಸುಮ್ಮನೆ ಆಟವಾಡಬಹುದು, ಬೊಗಸೆ ಮೊಗೆದು ನೀರು ಕುಡಿಯಬಹುದು, ನೀರ ಜುಳು ಜುಳು ನಾದ ಕೇಳುತ್ತಾ ಟೈಮ್ ಪಾಸ್ ಮಾಡಬಹುದು. ಇಲ್ಲವೇ ಕೆಳಗೆ ನದೀ ಗುಂಟ ನಿಸರ್ಗ ರಮಣೀಯತೆಯನ್ನು ಆಸ್ವಾದಿಸುತ್ತಾ ೧೨ ಕಿಲೋಮೀಟರು ನಡೆದು ಹೋಗಿ ಯಮುನೆಯೊಂದಿಗೆ ಸಂಗಮವಾಗುವವರೆಗಿನ ಚಾರಣ ಮಾಡಬಹುದು. ಅಲ್ಲಲ್ಲಿ ನಿಂತ ನೀರಿನಲ್ಲಿ ಈಜಬಹುದು ಅಥವಾ ಮೀನಿಗೆ ಗಾಳ ಹಾಕಬಹುದು. ಇಲ್ಲಿ ಹೇಳೋವರೂ ಇಲ್ಲ ಕೇಳೋವರೂ ಇಲ್ಲ.
ಕೆಂಪ್ಟಿಯಿಂದ ವಾಪಸು ಮಸೂರಿಗೆ ಬರುವಾಗ ಸಮಯವಿದ್ದರೆ ದಾರಿ ಮಧ್ಯೆ ಕಂಪೆನಿ ಗಾರ್ಡನ್ ಹಾಗೂ ಗನ್ ಹಿಲ್ ಪಾಯಿಂಟ್ ಸಿಗುತ್ತೆ. ಮಸೂರಿಗೆ ಹಿಂದಿರುಗಿ ಸ್ವಲ್ಪ ವಿಶ್ರಮಿಸಿ ಸಂಜೆ ಮಾಲ್ ರಸ್ತೆಯಲ್ಲಿ ನಡೆದಾಡುತ್ತಾ ಸ್ವಪ್ನಲೋಕದ ಸವಿ ಉಣ್ಣಬಹುದು.
ಡೆಹರಾಡೂನ್ ರೈಲುನಿಲ್ದಾಣದಿಂದ ಹೊರಬಂದರೆ ಮಸೂರಿಗೆ ಹೋಗುವ ಮಿನಿಬಸ್ಸುಗಳು ಹಲವಾರಿದ್ದು ಮಸೂರಿ ಮಸೂರಿ ಎಂದು ಕೂಗುತ್ತಿರುತ್ತಾರೆ. ಡೆಹರಾಡೂನಿನಿಂದ ಮಸೂರಿಗೆ ಒಂದು ಗಂಟೆ ಬಸ್ ಪ್ರಯಾಣ. ಡೆಹರಾಡೂನಿಗೆ ರೈಲು ಹಾಗು ವಿಮಾನಗಳ ಸಂಪರ್ಕವಿದೆ. ಚಂಡೀಗಡದಿಂದ ಬಸ್ಸಿನಲ್ಲಿ ಡೆಹರಾಡೂನ್ ಅಥವಾ ಹರದ್ವಾರ ತಲಪಿ ಅಲ್ಲಿಂದಲೂ ಮಸ್ಸೂರಿಗೆ ಬರಬಹುದು. ಡೆಹರಾಡೂನಿನಿಂದ ೩೫ ಕಿ. ಮೀ, ಹಾಗೂ ಹರದ್ವಾರದಿಂದ ೫೫ ಕಿ.ಮೀ.

ಡಿಸಂಬರಿನಿಂದ ಫೆಬ್ರವರಿ ಕೊನೆಯವರೆಗೆ ಹಿಮಪಾತ ಇಲ್ಲವೇ ಮಂಜು ಹಾಸಿರುತ್ತೆ. ಆಮೇಲೆ ಹೋಗುವುದು ಚೆನ್ನ. ಯಾವುದಕ್ಕೂ ಸ್ವೆಟರು ಅಥವಾ ಶಾಲು ಇರಲಿ. ಮಳೆಗಾಲದಲ್ಲಿ ಮಾತ್ರ ಬೇಡವೇ ಬೇಡ.

ಭಾನುವಾರ, ಮಾರ್ಚ್ 3, 2013

ಎ ಎಂ ಜೋಸೆಫ್


ಎ ಎಂ ಜೋಸೆಫ್ ಎಂಬುದು ಅರುವತ್ತರ ದಶಕದ ಚರ್ಚ್ ಸಾಹಿತ್ಯ ವಲಯದಲ್ಲಿ ಕಂಡು ಬರುತ್ತಿದ್ದ ಒಂದು ಚಿರಪರಿಚಿತ ಹೆಸರು. ಆಗಷ್ಟೇ ಅಕ್ಷರ ಕಲಿತ ನನ್ನ ಬಾಲ್ಯದ ಆ ದಿನಗಳಲ್ಲಿ ಕಂಡದ್ದನ್ನೆಲ್ಲ ಓದುವ ಹುರುಪು, ಮತ್ತದರ ಜೊತೆಗೇ ಜೋಸೆಫ್ ಎಂಬ ನನ್ನ ಹೆಸರನ್ನು ಮುದ್ರಣ ಮಾಧ್ಯಮದಲ್ಲಿ ನೋಡಿದಾಗ ಆಗುವ ಪುಳಕದಿಂದಾಗಿ ಎ ಎಂ ಜೋಸೆಫ್ ಹೆಸರು ನನಗೆ ಅಪ್ಯಾಯಮಾನವಾಗಿತ್ತು.
ಅಂದಿನ ಹಲವಾರು ಪುಸ್ತಕಗಳಲ್ಲಿ ಎ ಎಂ ಜೋಸೆಫ್ ಎಂಬ ಹೆಸರು ಕಂಡುಬರುತ್ತಿತ್ತು. ಕೆಲವದರಲ್ಲಿ ಎ ಎಂ ಬೆರ್ನಾರ್ಡ್ ಎಂಬ ಹೆಸರೂ ಇರುತ್ತಿತ್ತು. ಆ ಇಬ್ಬರನ್ನೂ ನಾನು ಎಂದಿಗೂ ನೋಡಲಿಲ್ಲ ಎಂಬುದು ಸತ್ಯವಾದರೂ ಅವರ ಬಗ್ಗೆ ಯಾರಾದರೂ ಮಾತನಾಡಿದ್ದಾಗಲೀ ಉಲ್ಲೇಖಿಸಿದ್ದಾಗಲೀ ಇಲ್ಲವೇ ಇಲ್ಲವೆನ್ನಬಹುದು. ಚರ್ಚಿನ ಭಾಷೆಯು ಲತೀನಿನಿಂದ ಕನ್ನಡಕ್ಕೆ ತೆರೆದುಕೊಳ್ಳುತ್ತಿದ್ದ ಅಂದಿನ ಸಂಕ್ರಮಣ ಸ್ಥಿತಿಯಲ್ಲಿ ಹಲವಾರು ಮಂದಿ ಕನ್ನಡ ಕ್ರೈಸ್ತ ಸಾಹಿತ್ಯದ ಒಕ್ಕಲುತನಕ್ಕೆ ಮನಸು ಮಾಡಿದ್ದರು. ಅವರಲ್ಲಿ ಜಾರ್ಜ್ ಡಿಸೋಜ, ಎನ್ ಎಸ್ ಮರಿಜೋಸೆಫ್, ಜಿ ಜೋಸೆಫ್, ಜೋ ಮೇರಿ ಲೋಬೋ, ವಲೇರಿಯನ್ ಡಿಸೋಜ, ಸಿಪ್ರಿಯನ್ ಪೈ, ಅಮಲಾನಂದ, ಸ್ಟ್ಯಾನಿ ಬ್ಯಾಪ್ಟಿಸ್ಟ್ ಮುಂತಾದವರೆಲ್ಲ ಗುರು ಅಭ್ಯರ್ಥಿಗಳಾಗಿದ್ದು ಕನ್ನಡ ಧಾರ್ಮಿಕ ಸಾಹಿತ್ಯದಲ್ಲಿನ ಶೂನ್ಯವನ್ನು ತುಂಬಲು ಪ್ರಯತ್ನಿಸುತ್ತಿದ್ದರು. ಅಂಥದರಲ್ಲಿ ದಯಾನಂದ ಪ್ರಭು ಅವರಂಥ ತರುಣರು ಸೃಜನಶೀಲ ಬರಹಕ್ಕೆ ಕೈಹಾಕಿದ್ದರು. ಮೇಲೆ ಹೇಳಿದ ಎಲ್ಲರೂ ಬೆಂಗಳೂರಿಗೆ ಹೊರಗಿನವರಾಗಿದ್ದು ಗುರುಮಠದಿಂದ ಹೊರಟ ಮೇಲೆ ದೂರಾದರು. ಬೆಂಗಳೂರಿನಲ್ಲಿ ಭಾಷಾ ಸಂಘರ್ಷಗಳು ಶೀತಲಯುದ್ಧದಂತೆ ವ್ಯಾಪಕವಾಗುತ್ತಿದ್ದ ಆ ಸಮಯದಲ್ಲಿ ಬಹಳಷ್ಟು ಸ್ಥಿತ್ಯಂತರಗಳು ನಡೆದು ಎ ಎಂ ದ್ವಯರ ಹೆಸರುಗಳು ನೇಪಥ್ಯಕ್ಕೆ ಸರಿದವೇನೋ?
ಅದೂ ಅಲ್ಲದೆ ಕ್ರೈಸ್ತ ಕಥೋಲಿಕ ಧಾರ್ಮಿಕ ಸಾಹಿತ್ಯವನ್ನು ಯಾರು ಬೇಕಾದರೂ ಸೃಜಿಸುವಂತಿರಲಿಲ್ಲ, ಅದಕ್ಕೆಲ್ಲ ಧರ್ಮಾಧಿಕಾರಿಗಳ ಅಪ್ಪಣೆ ಪಡೆಯಬೇಕೆನ್ನುವ ಜಿಗುಟುತನ ಚರ್ಚಿನದಾಗಿತ್ತು. ಅಂಥ ಜಿಗುಟುತನದ ನಡುವೆಯೂ ಎ ಎಂ ಜೋಸೆಫರು ತಮಿಳು ಬೈಬಲಿನ ಕನ್ನಡಾನುವಾದ ನಡೆಸಿದ್ದರು. ಆ ವಿಷಯವನ್ನು ನಾನು ತಿಳಿದುಕೊಂಡಿದ್ದು ಹೇಗೆಂಬುದರ ಕತೆಯೇ ಇದು.
೧೯೮೬ರ ಒಂದು ದಿನ. ನನ್ನ ಪೂರ್ವಜರ ಊರಾದ ಬೇಡರಹಳ್ಳಿಗೆ ಹೋಗಿದ್ದಾರ ಬೆನ್ಸನ್ ಟೌನಿನ ಉಪ ಅಂಚೆಕಚೇರಿಯ ಬದಿಯ ಒಂದು ಮನೆಯಲ್ಲಿ ನೋಯೆಲ್ ಎಂಬುವರ ಭೇಟಿಯಾಯ್ತು. ಕನ್ನಡ ತಮಿಳುಗಳ ನೆವದಲ್ಲಿ ಬೆಂಗಳೂರಿನ ಕ್ರೈಸ್ತರ ಬಾಂಧವ್ಯ ಹೇಗೆ ಒಡೆದ ಕನ್ನಡಿಯಾಯಿತುಎಂಬುದರ ಕುರಿತ ಮಾತುಕತೆಯ ನಡುವೆ ನೋಯೆಲ್ ಎಂಬ ಆ ಹಿರಿಯ ಗೃಹಸ್ಥರು ಕನ್ನಡ ಕ್ರೈಸ್ತ ಸಾಹಿತ್ಯ ಪ್ರವರ್ತಕರಾಗಿದ್ದ ನಮ್ಮ ಮಾವನವರ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲವೆಂದರು. ಆಗ ನನ್ನ ಕಿವಿ ನೆಟ್ಟಗಾಯಿತು. ನಿಮ್ಮ ಮಾವನವರು ಎಂದರೆ ಎಂ ಎಂ ಜೋಸೆಫರೇ?’ ಎಂದು ಕೇಳಿದೆ. ಅವರು ಇಲ್ಲ ಅವರು ನನ್ನ ಮಾವ ಎ ಎಂ ಬೆರ್ನಾಡರ ತಮ್ಮ ಎಂದರು.
ನಾನು ಹೌದೇ, ಚಿಕ್ಕಂದಿನಲ್ಲಿ ನಾನವರ ಪುಸ್ತಕಗಳನ್ನು ನೋಡಿದ್ದೇನೆ ಎಂದಾಗ ಕೂಡಲೇ ಭಾವ ಪರವಶರಾದ ಅವರು ನನ್ನನ್ನು ತಬ್ಬಿಕೊಂಡು ನನ್ನ ಜೀವಮಾನ ಕಾಲದಲ್ಲಿ ಅವರ ಕುರಿತು ಪ್ರಸ್ತಾಪಿಸಿದ ಒಬ್ಬ ವ್ಯಕ್ತಿಯನ್ನೂ ಕಾಣಲಿಲ್ಲ, ಆ ಪ್ರಸ್ತಾಪ ಮಾಡಿದ ಮೊದಲ ವ್ಯಕ್ತಿ ನೀವು, ನನಗೆ ನಿಜಕ್ಕೂ ಪರಮಾನಂದವಾಗುತ್ತಿದೆ ಎಂದು ಉದ್ಗರಿಸಿದರು. ಮತ್ತೊಂದು ದಿನ ಬಿಡುವು ಮಾಡಿಕೊಂಡು ಬನ್ನಿ ಅವರ ಪುಸ್ತಕಗಳನ್ನೆಲ್ಲ ತೋರಿಸುತ್ತೇನೆ, ಕುಳಿತು ಮಾತನಾಡೋಣ ಎಂದು ಆಹ್ವಾನಿಸಿದರು. ಹೀಗೆ ನಾನವರನ್ನು ಆಗಾಗ್ಗೆ ಭೇಟಿಯಾದೆ.
ಜೋಸೆಫರ್ ಪೂರ್ವಜರು ಹಾಸನ ಜಿಲ್ಲೆ ಚೆನ್ನರಾಯಪಟ್ಟಣಕ್ಕೆ ಸನಿಹದ ನುಗ್ಗೆಹಳ್ಳಿಯವರು. ಜೋಸೆಫರ ತಂದೆ ಅಲ್ಲಿನ ಶಾನುಭೋಗ ಕುಟುಂಬದ ಕೃಷ್ಣಪ್ಪಯ್ಯನವರು. ಅವರು ಮತಾಂತರದ ಕತೆ . . . ಮೂಡಲದಾಸಾಪುರದ ಕ್ರೈಸ್ತ ಶಾಲೆಯಲ್ಲಿ ವಿದ್ಯಾಗುರುವಾಗಿದ್ದಾಗ (೧೮೫೬?) ಕ್ರೈಸ್ತ ಧರ್ಮಕ್ಕೆ ಶರಣಾಗಿ ಚೌರಣ್ಣನಾದರು. ಚುರುಕು ಬುದ್ಧಿಯ ಚೌರಣ್ಣನವರನ್ನು ಫ್ರೆಂಚ್ ಪಾದ್ರಿಗಳು ಆದರಿಸಿ ಅನಾಥಾಶ್ರಮದಲ್ಲಿದ್ದ ಮಕ್ಕಳಿಗೆ ವಿದ್ಯೆ ಕಲಿಸುವಂತೆ ಒಪ್ಪಿಸಿದರು. ಹೀಗೆ ಕೃಷ್ಣಪ್ಪ ಅಯ್ಯನವರು ಚೌರಣ್ಣನಾಗಿ ಶೆಟ್ಟಿಹಳ್ಳಿಯಲ್ಲಿ ಮುಖ್ಯೋಪಾಧ್ಯಾಯರಾದರು. ನಂತರದ ದಿನಗಳಲ್ಲಿ ತಟ್ಟುಗುಪ್ಪೆ ಮರಿಯಾಪುರಕ್ಕೆ ಬಂದು ನೆಲೆನಿಂತ ಚೌರಣ್ಣನವರು ಅಲ್ಲಿಯೂ ಅನಾಥ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿದರು. ಈ ಕಾರ್ಮೆಲ್ ಮಾತೆಯ ಕನ್ಯಾಮಠ ಇದೆಯಲ್ಲ, ಅದೇ ಚೌರಣ್ಣನವರ ಮನೆ. ಆಮೇಲೆ ತಮ್ಮ ಮಕ್ಕಳಿಗೆ ಪ್ರೌಢ ಶಿಕ್ಷಣ ಕೊಡಿಸಲು ಬೆಂಗಳೂರು ನಗರ ಸೇರಿಕೊಂಡಿರಬಹುದು ಎಂದು ಭಾವಿಸಬಹುದಾಗಿದೆ.
ಎ ಎಂ ಜೋಸೆಫರು ವಿದ್ಯಾಭ್ಯಾಸ ಪಡೆದು ಅಲೋಶಿಯಸ್ ಶಾಲೆಯಲ್ಲಿ ಶಿಕ್ಷಕವೃತ್ತಿ ಪಡೆದರು. ಅವರು ಪ್ರತಿಭಾವಂತರಾಗಿದ್ದರೂ ಫ್ರೆಂಚ್ ಪಾದ್ರಿಗಳು ನೀಡುತ್ತಿದ್ದ ಕಾಲೇಜು ಶಿಕ್ಷಣದಿಂದ ಏಕೆ ವಂಚಿತರಾದರು ಎಂಬುದು ತಿಳಿಯದಾಗಿದೆ. ಸಾಂಪ್ರದಾಯಿಕ ಕಾಲೇಜು ಶಿಕ್ಷಣ ಪಡೆಯದಿದ್ದರೂ ವಿಪರೀತ ಜ್ಞಾನದಾಹಿಯಾಗಿದ್ದ ಜೋಸೆಫರು ಕನ್ನಡ ಸಾಹಿತ್ಯ, ಇಂಗ್ಲಿಷ್ ಸಾಹಿತ್ಯ, ಕ್ರೈಸ್ತ ಧಾರ್ಮಿಕ ಸಾಹಿತ್ಯವನ್ನು ಅಭ್ಯಸಿಸಿ ತಮ್ಮ ಜ್ಞಾನತೃಷೆಯನ್ನು ತಣಿಸಿಕೊಂಡರು. ಮರಿಯಾಪುರದ ಉಪದೇಶಿ ಮರಿಯಪ್ಪ ಅಯ್ಯನವರ ಮಗಳು ಜೋಸ್ಫಿನಾರನ್ನು ಮದುವೆಯಾದ ಜೋಸೆಫರು ನಂತರದ ದಿನಗಳಲ್ಲಿ ಶಿಕ್ಷಕ ವೃತ್ತಿಯನ್ನು ತೊರೆದು ಬೆಂಗಳೂರು ನಗರಸಭೆಯಲ್ಲಿ ಬೆರಳಚ್ಚುಗಾರರಾಗಿ ನೌಕರಿ ಹಿಡಿದು ಉಗ್ರಾಣಾಧಿಕಾರಿಯಾಗಿ ನಿವೃತ್ತರಾದರು. ಆಮೇಲೂ ಜೀವನೋಪಾಯಕ್ಕಾಗಿ ಬೆರಳಚ್ಚು ವೃತ್ತಿಯನ್ನು ಮುಂದುವರಿಸಿದ್ದರು.
ಅವರ ಪುಸ್ತಕಗಳ ಹೂರಣವನ್ನು ಗಮನಿಸಿದರೆ ಜೋಸೆಫರು ಅತ್ಯಂತ ಧರ್ಮಭೀರುಗಳಾಗಿದ್ದರೆಂದು ತಿಳಿಯುತ್ತದೆ. ಅವರು ಬರೆದ ಪುಸ್ತಕಗಳಲ್ಲಿ ಫಬಿಯೋಲೆ ಎಂಬುದು ರಾಜಮನ್ನಣೆಯನ್ನು ಪಡೆದಿತ್ತು. ಹಲವಾರು ಹಿರಿಯ ಕ್ರೈಸ್ತರು ಫಬಿಯೋಲೆಯನ್ನು ಉದಾಹರಿಸುತ್ತಿದ್ದುದು ನನಗೆ ನೆನಪಿದೆ. ೧೯೨೯ರಲ್ಲಿ ಈ ಕೃತಿಗೆ ಮೈಸೂರರಸರು ದೇವರಾಜ ಬಹದ್ದೂರ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಫಬಿಯೋಲೆಯ ಮುನ್ನುಡಿಯಲ್ಲಿ ಜೋಸೆಫರು ಹೀಗೆ ಹೇಳುತ್ತಾರೆ: ಸುಪ್ರಖ್ಯಾತರಾದ ಕಾರ್ಡಿನಲ್ ವೈಸ್‌ಮ್ಯಾನೆಂಬುವರು ಇಂಗ್ಲಿಷಿನಲ್ಲಿ ಬರೆದ ಫಬಿಯೋಲೆ ಎಂಬ ಮೂಲಗ್ರಂಥ ಮತ್ತು ಅದರ ಆಧಾರದಿಂದ ತಮಿಳಿನಲ್ಲಿ ಬರೆಯಲ್ಪಟ್ಟ ಪಂಕ್ರಾಸ್ ಎಂಬ ಗ್ರಂಥ ಇವೆರಡನ್ನೂ ಮುಂದಿಟ್ಟುಕೊಂಡು ಈ ಕನ್ನಡ ಗ್ರಂಥsವನ್ನು ಬರೆದೆವು. ಮೂಲಗ್ರಂಥವು ಬಹಳ ಪ್ರಖ್ಯಾತವಾದ ಸದ್ಗ್ರಂಥವಾಗಿದೆ. ಇದನ್ನು ಪ್ರಪಂಚದ ನಾಲ್ವತ್ತು ಭಾಷೆಗಳಿಗೆ ಪರಿವರ್ತಿಸಿಕೊಂಡಿರುತ್ತಾರಾದ್ದರಿಂದ ಇಂಥಾ ಗ್ರಂಥದ ಪ್ರಯೋಜನವು ಕನ್ನಡಿಗರಿಗೂ ದೊರೆಯಲೆಂದು ಇದನ್ನು ಕನ್ನಡದಲ್ಲಿ ಬರೆದೆವು.
ತಮಿಳಿನಲ್ಲಿ ಪ್ರಚಲಿತವಾಗಿದ್ದ ಪವಿತ್ರಬೈಬಲ್ ಗ್ರಂಥವನ್ನು ಕನ್ನಡಕ್ಕೆ ತರುವ ಆಸಕ್ತಿಯಿಂದ ತರ್ಜುಮೆಗೆ ತೊಡಗಿದ ಅವರ ಸಾಹಸವನ್ನು ಮೆಚ್ಚಬೇಕಾದ್ದೇ. ಆದರೆ ಅದನ್ನು ಅವರು ಪ್ರಕಟಿಸಲಾಗದ ಕಾರಣ ತಿಳಿಯದು. ೧೯೬೦ರ ದಶಕದಲ್ಲಿ ಹೊರಬಂದ ಶುಭಸಂದೇಶಗಳ ಕಥೋಲಿಕ ಆವೃತ್ತಿಯಲ್ಲಿ ಎ ಎಂ ಜೋಸೆಫರ ಹಸ್ತಪ್ರತಿಯನ್ನು ಬಳಸಿಕೊಂಡಿರುವ ಬಗ್ಗೆ ಉಲ್ಲೇಖವಿದೆ.
೧೯೫೦ರಲ್ಲಿ ಫಾದರ್ ಐ ಬಿ ಪಿಂಟೊ ಅವರ ಸಲಹೆಯ ಮೇರೆಗೆ ಎ ಎಂ ಜೋಸೆಫರು ರೆವರೆಂಡ್ ಕ್ಯಾಸೆಲ್ ಬ್ರಾಂಕೊ ಅವರ ಮೋರ್ ಅಬೊಟ್ ಫಾತಿಮಾ ಎಂಬ ಪುಸ್ತಕವನ್ನು ಅನುವಾದಿಸಿ ಫಾತಿಮಾ ಮಾತೆ ಎಂಬ ಹೆಸರಿನಲ್ಲಿ ಪ್ರಕಟಿಸುತ್ತಾರೆ. ಈ ಪುಸ್ತಕದ ಪ್ರಕಟಣೆಗೆ ಮೇಸ್ತ್ರಿ ಚೌರಪ್ಪನವರ ಮಗ ಸಿ ಜೋಸೆಫ್ ಧನಸಹಾಯ ಮಾಡಿದ್ದನ್ನೂ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಜೀವವಾದ ಜೇಸುನಾಥರು ಎಂಬುದು ಜೋಸೆಫರ ಇನ್ನೊಂದು ಮಹತ್ತರ ಪುಸ್ತಕ. ಇದು ಯೇಸುಸಭೆಯ ಇ ಲೆ ಜೋಲಿ ಅವರ ಇಂಗ್ಲಿಷ್ ಪುಸ್ತಕದ ಅನುವಾದ. ಸಂಕಲ್ಪ ಹಟಯೋಗಿ ಎಂಬುದು ಲೊಯೊಲದ ಸಂತ ಇಗ್ನೇಷಿಯಸರ ಜೀವನ ಚರಿತ್ರೆ. ಕೆಂಪು ಮರಳು ಎಂಬ ಪುಸ್ತಕ ಸಂತ ಜಾನ್ ದೆ ಬ್ರಿಟ್ಟೊ ಅವರ ಜೀವನ ಚರಿತ್ರೆ. ಸಂತ ಮಾಂಟ್‌ಫರ್ಟ್ ಅವರು ಮರಿಯಮ್ಮನವರ ಬಗೆಗೆ ಬರೆದಿರುವ ಬೃಹದ್ಗ್ರಂಥವನ್ನು ಸಂಗ್ರಹರೂಪದಲ್ಲಿ ಮರಿಯಮ್ಮನವರ ರಹಸ್ಯ ಎಂಬ ಪುಸ್ತಕವಾಗಿ ಅನುವಾದಿಸಿದರು. ಆತ್ಮಪರಾಗವನ್ನು ತಮ್ಮ ಅಣ್ಣ ಎ ಎಂ ಬೆರ್ನಾಡರೊಂದಿಗೆ ಸೇರಿ ಪ್ರಕಟಿಸಿದ್ದಾರೆ. ಈ ಪುಸ್ತಕವನ್ನು ಎ ಎಂ ಬರ್ನಾಡರ ಮಗ ಬಿ ಪ್ರಮೋದ ಅವರು ಮರುಮುದ್ರಿಸಿದ್ದಾರೆ.
ಕನ್ನಡ ಕಥೋಲಿಕ ಕ್ರೈಸ್ತ ಸಾಹಿತ್ಯಕೃಷಿಯಲ್ಲಿ ತೊಡಗಿಕೊಂಡು ಇಂಥ ಮಹತ್ಸಾಧನೆಗಳನ್ನು ಮಾಡಿದ ಎ ಎಂ ಜೋಸೆಫರು ೧೮-೮-೦೯೬೫ರಲ್ಲಿ ತೀರಿಕೊಂಡರು. ಆದರೆ ಇಂದು ಅವರನ್ನು ನೆನಪು ಮಾಡಿಕೊಳ್ಳುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರವೇ.

ಭಾನುವಾರ, ಫೆಬ್ರವರಿ 24, 2013

ತುಂಬೆ


ಬೆಳ್ಮುಗಿಲ ನೆಂಟ ತಂಗದಿರ
ತುಂಬೆಯದು ಮಣ್ಮನೆಯ ಬೆಳ್ಳಿಹೂ
ತುಂಬುವನು ಕುಂದುವನು ತಿಂಗಳನು ಬಾನಲ್ಲಿ
ತುಂಬೆಯದು ನಗುತಿಹುದು ಹಸಿರಲ್ಲಿ ಮೈಚೆಲ್ಲಿ
ತಿಂಗಳನ ಬೆಳಕಲ್ಲಿ ಜಗವೆಲ್ಲ ನಗುತಿಹುದು
ತುಂಬೆಗದು ಬೇಕಿಲ್ಲ ತನ್ನಿರವು ಗಿಡದಲ್ಲಿ
ತುಂಬು ಚಂದ್ರನ ಒಡಲು ಕಂಡು ಕೆರಳಿದೆ ಕಡಲು
ತುಂಬೆಯದು ತುಂಬುವುದು ಭೂಮಾತೆಯ ಮಡಿಲು
ತುಂಬೆಯ ಮೈಮೇಲೆ ಸುಳಿದು ಸುಯ್ಯುವ ಗಾಳಿ
ತಂಪೆರೆಯೆ ಹೇಳುವರು ಅದು ಚಂದ್ರ ತಂಗಾಳಿ
ಚಂದಿರನು ಮೇಲಿದ್ದು ಕಾಣುವನು ಜಗವೆಲ್ಲ
ತುಂಬೆಗದು ನಿಲುಕದು ಮಣ್ಣೊಳಿದೆ ಬೇರೆಲ್ಲ
ತುಂಬು ಜವ್ವನೆ ತುಂಬೆ ನಗುಮೊಗದ ಮೊಲ್ಲೆ
ತುಂಬಿಯನು ಬರಸೆಳೆದು ನಗಿಸಲೂ ಬಲ್ಲೆ
ನಿತ್ಯ ಕನ್ನಿಕೆ ತುಂಬೆ ನಗುವೆನ್ನ ಮನತುಂಬೆ
ತುಂಬಿಯೂ ತುಳುಕದಿಹ ವನಸುಮವ ನಾ ಕಾಂಬೆ

ಶನಿವಾರ, ಫೆಬ್ರವರಿ 23, 2013

ಬೂದಿ ಬುಧವಾರ


ಬೂದಿ ಬುಧವಾರ ಅಥವಾ ಆಷ್ ವೆನ್ಸ್ ಡೇ ಕ್ರೈಸ್ತರ ತಪಸ್ಸುಕಾಲದ ಪ್ರಾರಂಭದ ದಿನ. ಬೂದಿ ಎಂದರೆ ಬೆಂಕಿ ನಂದಿದ ಮೇಲೆ ಉಳಿಯುವ ಇಂಗಾಲ ವಸ್ತು ಅಲ್ಲವೇ? ಬೂದಿಗೂ ಬುಧವಾರಕ್ಕೂ ಅದಾವ ನಂಟು? ದಿನದ ವಿಶೇಷವಾದರೂ ಏನು?
ಶುಭಶುಕ್ರವಾರ ಅಥವಾ ಗುಡ್ ಫ್ರೈಡೇಗೆ ಮುಂಚಿನ ನಾಲ್ವತ್ತು ದಿನಗಳು ಕ್ರೈಸ್ತರಿಗೆ ತಪಸ್ಸಿನ ದಿನಗಳು. ಬುಧವಾರವೆಂಬ ಬಾಗಿಲ ಮೂಲಕವೆ ತಪಸ್ಸುಕಾಲಕ್ಕೆ ಪ್ರವೇಶ. ಇಂದಿನಿಂದ ಗುಡ್ ಫ್ರೈಡೇವರೆಗೂ ಕ್ರೈಸ್ತರು ತ್ಯಾಗಜೀವನ ನಡೆಸುತ್ತಾರೆ.
ಹಿಂದೆಲ್ಲ ಯೆಹೂದ್ಯ ಸಂಸ್ಕೃತಿಯಲ್ಲಿ ಜನರು ತಮಗೆ ಕೆಡುಕುಂಟಾದಾಗ ತಾವು ದೇವರಿಗೆ ವಿಮುಖರಾದ್ದರಿಂದಲೇ ಕಷ್ಟಕೋಟಲೆ ಅನುಭವಿಸಬೇಕಾಗಿ ಬಂತೆಂದು ಬಗೆದು ಪ್ರಾಯಶ್ಚಿತ್ತ ರೂಪವಾಗಿ ಮೈಗೆಲ್ಲ ಬೂದಿ ಬಳಿದುಕೊಂಡು ಉತ್ತಮ ದುಕೂಲಗಳನ್ನು ತೊರೆದು ನಾರುಮಡಿಯುಟ್ಟು ತಪಶ್ಚರ್ಯೆ ಕೈಗೊಳ್ಳುತ್ತಿದ್ದರು. ಅದನ್ನೇ ಇಂದು ಕ್ರೈಸ್ತರು ಸಾಂಕೇತಿಕವಾಗಿ ಆಚರಿಸುತ್ತಾರೆ.
ಕ್ರೈಸ್ತರೆಲ್ಲ ಚರ್ಚಿಗೆ ತೆರಳಿ ದೇವಾರಾಧನೆ ನಡೆಸಿ ಗುರುವರ್ಯರ ಮುಂದೆ ಸಾಲಾಗಿ ನಿಲ್ಲುತ್ತಾರೆ. ಗುರುವರ್ಯರು ಬೂದಿಬಟ್ಟಲಿನಿಂದ ಚಿಟಿಕೆ ಚಿಟಿಕೆ ಬೂದಿ ತೆಗೆದು ಭಕ್ತಾದಿಗಳ ಹಣೆಯ ಮೇಲೆ ತಿಲಕದಂತೆ ಶಿಲುಬೆ ಗುರುತು ಹಾಕುತ್ತಾಮಣ್ಣಿಂದ ಬಂದ ಕಾಯವಿದು, ಮರಳಿ ಮಣ್ಣಿಗೇ ಸೇರುವುದುಎಂದು ಉದ್ಘೋಷಿಸುತ್ತಾರೆ. ಸಂದರ್ಭದಲ್ಲಿ ಗಾನವೃಂದದವರುಮಣ್ಣಿನಿಂದ ಸೃಷ್ಟಿಯಾದ ಮನುಜನೇ ಮರೆಯಬೇಡ ಮರಳಿ ಸೇರ‍್ವೆ ಮಣ್ಣಿಗೆ, ಸುಳ್ಳು ಬೇಡ ಸತ್ಯ ಹಾದಿ ಹುಡುಕುವ, ದ್ವೇಷ ತ್ಯಜಿಸಿ ಐಕ್ಯದಿಂದ ಬಾಳುವ . . . ’ ಎಂದು ಹಾಡುತ್ತಾರೆ.
ಹಣೆಯ ಮೇಲಿನ ವಿಭೂತಿಯ ಅನುಭೂತಿ ಒಂದೆಡೆಯಾದರೆ ಗುರುಗಳ ಮಾತಿನ ಒಳಾರ್ಥ ಮತ್ತೊಂದೆಡೆಮನಕಲಕುವುದಕ್ಕೆ ಇನ್ನೇನು ತಾನೇ ಬೇಕು? ಜೀವನ ನಶ್ವರ, ಜೀವನ ಕ್ಷಣಿಕ, ಕೂಡಲೇ ಪಾಪಕ್ಕೆ ವಿಮುಖರಾಗಿ ದೇವರೆಡೆಗೆ ಅಭಿಮುಖರಾಗಬೇಕೆನ್ನುವ ಅರಿವು ತಪಶ್ಚರ್ಯೆಗೆ ನಾಂದಿಯಾಗುತ್ತದೆ. ತಪಶ್ಚರ್ಯೆ ಎಂದರೆ ಹಿಂದಿನಂತೆ ವನವಾಸಕ್ಕೆ ತೆರಳಿ ಒಂಟಿಕಾಲಲ್ಲಿ ನಿಂತು, ಪಂಚಾಗ್ನಿಯಲ್ಲಿ ಬೆಂದು ಮಂತ್ರ ಹೇಳುತ್ತಾ ತಪಸ್ಸು ಮಾಡಲು ಸಾಧ್ಯವೇ? ಇಂದಿನ ಕಾಲದ ಸಾಂಕೇತಿಕ ತಪಸ್ಸಿನ ರೀತಿಯೇ ಬೇರೆ. ದಿನಗಳಲ್ಲಿ ಜನ ದೈನಂದಿನ ಕೆಲಸಗಳನ್ನು ಕುಂದಿಲ್ಲದೆ ನಡೆಸುತ್ತಲೇ ವ್ಯಕ್ತಿಗತ ವಾಂಛೆಗಳನ್ನು ಬಿಟ್ಟುಬಿಡುತ್ತಾರೆ. ಮನರಂಜನೆಯಿಂದ ದೂರಾಗುತ್ತಾರೆ, ಚಟಗಳನ್ನು ತೊರೆಯುತ್ತಾರೆ, ಮಾಂಸಾಹಾರ ವರ್ಜಿಸುತ್ತಾರೆ, ಪಾರ್ಟಿಗಳು ಔತಣಕೂಟಗಳು ಇಲ್ಲವಾಗುತ್ತವೆ, ಮದ್ಯಸೇವನೆ ಧೂಮಪಾನ ಸಿನಿಮಾ ಗಡದ್ದು ಊಟಗಳ ಬದಲಿಗೆ ಒಂದೊತ್ತು ಉಪವಾಸ ಇಲ್ಲವೇ ಸಪ್ಪೆ ಸಾರನ್ನವೇ ಪರಮಾನ್ನವಾಗುತ್ತದೆ. ಆಭರಣಗಳು ಪೆಟ್ಟಿಗೆ ಸೇರುತ್ತವೆ, ಪ್ರಸಾಧನಗಳ ಬಳಕೆ ಕಡಿಮೆಯಾಗುತ್ತದೆ, ಬಟ್ಟೆಗಳಲ್ಲೂ ಸರಳತೆ ಕಾಣುತ್ತದೆ. ತಮಗೆ ತುಂಬಾ ಇಷ್ಟವಾದುದನ್ನು ತ್ಯಾಗ ಮಾಡುವುದೂ ಒಂದು ರೀತಿಯಲ್ಲಿ ತಪಸ್ಸೇ ಹೌದು.
ಕಂದಾಚಾರ, ಡಂಭಾಚಾರ, ಕುರುಡು ಕಟ್ಟಳೆ, ದರ್ಪ ದಬ್ಬಾಳಿಕೆಗಳಲ್ಲಿ ಕಳೆದುಹೋಗಿದ್ದ ಮನುಷ್ಯತ್ವವನ್ನು ಎತ್ತಿಹಿಡಿಯಲು ಯೇಸುಕ್ರಿಸ್ತನು ಎಷ್ಟೆಲ್ಲ ಯಾತನೆ ಅನುಭವಿಸಿರುವಾಗ, ಅದರ ಸ್ಮರಣೆಗಾಗಿ ನಾವು ಇಷ್ಟೂ ಮಾಡದಿದ್ದರೆ ಹೇಗೆ?

ಗುರುವಾರ, ಜನವರಿ 31, 2013

ದ ರಾ ಬೇಂದ್ರೆ


ಅಂಬಿಕಾತನಯದತ್ತ ಎಂಬ ಕಾವ್ಯನಾಮದಲ್ಲಿ ಅಪಾರ ಸಾಹಿತ್ಯರಾಶಿಯನ್ನು ವಷರ್ಿಸಿದ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಯುಗದಕವಿ ಜಗದಕವಿ ಸಹಜಕವಿ. `ಅಂಬಿಕಾತನಯದತ್ತ'ನಾಗಿ ಅವರು `ಇಳಿದು ಬಾ ತಾಯೆ ಇಳಿದು ಬಾ', 'ಮೂಡಲ ಮನೆಯ ಮುತ್ತಿನ ನೀರಿನ', 'ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ' ಮುಂತಾದ ಜನಪ್ರಿಯ ಕವನಗಳನ್ನು ಕನ್ನಡಿಗರಿಗಿತ್ತಿದ್ದಾರೆ.
1896ನೆಯ ಇಸವಿ ಜನವರಿ 31 ರಂದು ಜನಿಸಿದ ಬೇಂದ್ರೆಯವರು 1913ರಲ್ಲಿ ಮೆಟ್ರಿಕ್ಯುಲೇಶನ್ ತೇರ್ಗಡೆಯಾಗಿ ಪುಣೆಯ ಕಾಲೇಜಿನಲ್ಲಿ ಬಿಎ ಪದವಿ ಪಡೆದು ಕೆಲಕಾಲ ಧಾರವಾಡದ ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದರು. 1935ರಲ್ಲಿ ಎಂಎ ಪದವಿಯ ನಂತರ ಸೊಲ್ಲಾಪುರದ ಡಿ.ಎ.ವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ (1942-1956) ಕೆಲಸ ಮಾಡಿದರು. 1956ರಲ್ಲಿ ಧಾರವಾಡ ಆಕಾಶವಾಣಿಯ ಸಾಹಿತ್ಯ ಸಲಹೆಗಾರ ವೃತ್ತಿಗೆ ಬಂದರು. ಕವಿತೆ ಬರೆಯುವುದು ಇವರ ಹವ್ಯಾಸವಾಗಿತ್ತು. 1925 ರಲ್ಲಿ ಪ್ರಕಟವಾದ `ಕೃಷ್ಣಕುಮಾರಿ' ಇವರ ಮೊದಲ ಕವನಸಂಕಲನ. ಮುಂದೆ ಸಾಲು ಸಾಲಾಗಿ `ಗರಿ', `ಕಾಮಕಸ್ತೂರಿ', `ಸೂರ್ಯಪಾನ', `ನಾದಲೀಲೆ', `ನಾಕುತಂತಿ', `ಸಖೀಗೀತ', `ಮೇಘದೂತ', `ಶ್ರಾವಣ ಬಂತು' ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದರು.
ಮರಾಠಿಯು ಅವರ ಮನೆಯ ಮಾತಾಗಿತ್ತು. ಹೊರಗೆ ಕನ್ನಡದ ಗೆಳೆಯರೊಡನೆ `ಗೆಳೆಯರ ಗುಂಪು' ಕಟ್ಟಿ ಕನ್ನಡ ಸಾರಸ್ವತಲೋಕದ ಚಟುವಟಿಕೆಗಳಲ್ಲಿ ತೊಡಗುವುದು ಅವರ ಹವ್ಯಾಸವಾಗಿತ್ತು. ಧಾರವಾಡದ ಸಾಧನಕೇರಿ ಅವರ ಸಾಹಿತ್ಯಕೃಷಿಯ ನೆಲೆಯಾಗಿ ರೂಹು ಪಡೆಯಿತು. ಅದಮ್ಯ ದೇಶಪ್ರೇಮಿಯಾದ ಅವರು ಕವನಗಳ ಮೂಲಕವೇ ಜನರಲ್ಲಿ ದೇಶಾಭಿಮಾನದ ರೋಮಾಂಚಕ ಭಾವಗಳನ್ನು ಬಿತ್ತಿದರು. `ನರಬಲಿ' ಎಂಬ ಅವರ ಕವನದಿಂದ ಅಸಮಾಧಾನಗೊಂಡ ಆಗಿನ ಬ್ರಿಟಿಷ್ ಸರ್ಕಾರವು ಕೆಲಕಾಲ ಅವರನ್ನು ಸೆರೆಮನೆಗೂ ದೂಡಿತ್ತು.
ಉತ್ತಮ ವಾಗ್ಮಿಗಳಾಗಿದ್ದ ಬೇಂದ್ರೆಯವರ ಉಪನ್ಯಾಸಗಳೆಂದರೆ ಜನರಿಗೆ ಹಿಗ್ಗು. ಅವರ ಮಾತೆಲ್ಲ ಕವಿತೆಗಳೋಪಾದಿಯಲ್ಲಿ ಹೊರಹೊಮ್ಮುತ್ತಿದ್ದವು. ಅವರ 'ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಂವಾ' ಎನ್ನುವಂತ ಕವಿತೆಗಳು ಜನಪದ ಸಾಹಿತ್ಯದಂತೆ ಜನಜನಿತವಾಗಿದ್ದವು. 'ಪಾತರಗಿತ್ತೀ ಪಕ್ಕಾ ನೋಡಿದೇನೇ ಅಕ್ಕಾ' ಎಂದು ಮಕ್ಕಳೂ ಹಾಡಿ ಕುಣಿದರು.
ಜೀವನ ಸುಂದರವಾಗಿ ನಡೆಯುತ್ತಿದೆ ಎನ್ನುವಾಗ ಅವರ ಬದುಕಿನಲ್ಲಿ ದುರಂತಗಳು ಸಂಭವಿಸಿ ಅವರನ್ನು ಅಧ್ಯಾತ್ಮ ದರ್ಶನದತ್ತ ದೂಡಿದವು. ಪ್ರೀತಿಪ್ರೇಮಗಳ ಕಥನಗಳ ಕವನಗಳನ್ನು ಲೆಕ್ಕವಿಲ್ಲದೆ ಬರೆದಿದ್ದ ಅವರು ಮಾಗಿದ ಕಾಲಕ್ಕೆ ದಾರ್ಶನಿಕನಂತೆ ಬರೆಯತೊಡಗಿದರು. 'ನೀ ಹೀಂಗ ನೋಡಬ್ಯಾಡ ನನ್ನ' ಎಂಬ ಕವನ ಅದಕ್ಕೆ ನಾಂದಿಯಾಗಿತ್ತು. ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂಬುದು ಅವರ ಜೀವನಮಂತ್ರವಾಯಿತು. ಮಹರ್ಷಿ ಅರವಿಂದರ ಛಾಯೆ ಅವರ ಜೀವನದಲ್ಲೂ ಕಾವ್ಯದಲ್ಲೂ ಕಾಣಬರುತ್ತದೆ.
ಕವಿತೆಗಳಲ್ಲದೆ ನಾಟಕಗಳು, ಸಂಶೋಧನಾತ್ಮಕ ಲೇಖನಗಳು, ಅಣಕವಾಡುಗಳು, ನಗೆಬರಹಗಳು, ಅನವಾದ ಹಾಗೂ ವಿಮರ್ಶಾ ಪ್ರಕಾರಗಳಲ್ಲೂ ಸಹಾ ಅವರು ಕೈಯಾಡಿಸಿದ್ದಾರೆ. ಒಂಭತ್ತು ವಿಮರ್ಶಾ ಗ್ರಂಥಗಳನ್ನು, ಹದಿನಾಲ್ಕು ನಾಟಕಗಳನ್ನು, ಏಳು ಅನುವಾದ ಕೃತಿಗಳನ್ನು ರಚಿಸಿದ್ದಾರಲ್ಲದೆ ಮರಾಠಿ ಭಾಷೆಯಲ್ಲೂ ಐದು ಕೃತಿಗಳನ್ನು ಬರೆದಿದ್ದಾರೆ. ಮರಾಠಿಯ ಅವರ ಕೃತಿಯೊಂದಕ್ಕೆ ಅಲ್ಲಿನ ಪ್ರತಿಷ್ಠಿತ ಕೇಳ್ಕರ್ ಪ್ರಶಸ್ತಿ ದೊರೆತಿದೆ. ಉಪನಿಷತ್ ರಹಸ್ಯ, ಕಬೀರ ವಚನಾವಲಿ, ಭಗ್ನಮೂರ್ತಿ ಮುಂತಾದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರು ಬರೆದ ನಾಟಕಗಳು ವಾಸ್ತವ ಜೀವನದ ಚಿತ್ರಣವಾದರೂ ಗೂಢಾರ್ಥವನ್ನು ನಿರ್ದೇಶಿಸುತ್ತವೆ. ಈ ಪ್ರಯೋಗ ಕೂಡಾ ಕನ್ನಡಕ್ಕೆ ಹೊಸದು.
ಸಂಖ್ಯೆಗಳ ಸಂಕೇತಗಳನ್ನು ಬಹು ಸಮರ್ಥವಾಗಿ ಕಾವ್ಯಗಳಲ್ಲಿ ಬಳಸಿಕೊಂಡ ವಿಶಿಷ್ಟ ಕವಿ ಬೇಂದ್ರೆಯವರು. ಎಲ್ಲಾ ಕಾಲಕ್ಕೂ ಬಾಳುವಂತಹ ಕವನಗಳನ್ನು ರಚಿಸಿದ ಕೀರ್ತಿ ಅವರದು. ಈ ನಿಟ್ಟಿನಲ್ಲಂತೂ ಅವರು ಶಕ್ತಿಕವಿ. ಅವರ ಪದಸಂಪತ್ತು ಎಲ್ಲರಿಗೂ ನಿಲುಕುವಂತದಲ್ಲ. ಸಂಸ್ಕೃತಭೂಯಿಷ್ಟವಲ್ಲದ ಧಾರವಾಡದ ಗಂಡುಭಾಷೆಯಲ್ಲಿ ಅವರು ಪದಗಳನ್ನು ತಕದಿಮಿ ಆಡಿಸಿದ್ದಾರೆ. ಅವರ ಕಾವ್ಯಗಳನ್ನು ಓದಿ ವಿವರಿಸಬಲ್ಲವನಿಗೆ ಎಂಟೆದೆ ಇರಬೇಕು. ಅವು ಆಡುಮಾತು, ಬಳಕೆಮಾತು ವ್ಯಂಜನ ಗುಂಜನಗಳ ಸಂಮೃದ್ಧಿ, ಭಾವ ಬುದ್ಧಿಗಳ ಸಮಾಗಮ. ಕನ್ನಡ ಭಾಷೆಯ ಅರ್ಥಗೌರವವನ್ನು ಅಭಿವ್ಯಕ್ತಿ ಶಕ್ತಿಯನ್ನು ದೇದೀಪ್ಯಮಾನವಾಗಿ ಬೆಳಗಿಸಿದರು. ಈ ದೃಷ್ಟಿಯಿಂದ ಅವರು ಅಪ್ರತಿಮ ಕನ್ನಡಿಗ ಮತ್ತು ವರಕವಿ.
ಎಲ್ಲ ಕಾಲದ ಕಾವ್ಯಪ್ರೇಮಿಗಳಿಗೆ ಸ್ಫೂರ್ತಿಯ ಸೆಲೆಯಾದ ಬೇಂದ್ರೆಯವರಿಗೆ ರಾಷ್ಟ್ರದ ಅತ್ಯುನ್ನತ ಸಾಹಿತ್ಯಪುರಸ್ಕಾರವಾದ ಜ್ಞಾನಪೀಠದ ಗೌರವ ಲಭಿಸಿದೆ. ಕಾಶಿ ವಿದ್ಯಾಪೀಠ, ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್, ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಗೌರವಗಳಿಗೂ ಅವರು ಪಾತ್ರರಾಗಿದ್ದಾರೆ. ಸಾಧನಕೇರಿಯ ಅವರ ಮನೆಯನ್ನು ಸರ್ಕಾರವು ಸ್ಮಾರಕವಾಗಿ ಸಂರಕ್ಷಿಸಿದೆ.