ಶುಕ್ರವಾರ, ಮೇ 10, 2013

ದುಂದುಗಾರ ಮಗ

ಯೇಸುಕ್ರಿಸ್ತನು ಕತೆಗಳ ಮೂಲಕ ಜನರಿಗೆ ಹೊಸ ಸಂದೇಶ ನೀಡುತ್ತಿದ್ದನು. ಅವನು ಹೇಳಿದ ಎಷ್ಟೋ ಕತೆಗಳು ಇಂದಿಗೂ ರಂಜನೀಯವಾಗಿವೆ, ಮಾತ್ರವಲ್ಲ ಪ್ರತಿಸಾರಿಕೇಳಿದಾಗಲೂ ಹೊಸ ಅರ್ಥ ಹೊರಡಿಸುತ್ತವೆ.
ಯೇಸುಕ್ರಿಸ್ತನು ಹೇಳಿದ ಕತೆಗಳಲ್ಲಿ ಬಲು ಸುಂದರವಾದುದು ದುಂದುಗಾರ ಮಗನ ಕತೆ.
ಒಬ್ಬ ಶ್ರೀಮಂತನಿಗೆ ಇಬ್ಬರು ಗಂಡುಮಕ್ಕಳಿದ್ದರು. ಅಪಾರ ಜಮೀನು, ಆಳುಕಾಳು, ಒಳ್ಳೆ ಆಸ್ತಿಪಾಸ್ತಿ, ಯಾವುದಕ್ಕೂ ಕೊರತೆಯಿಲ್ಲದ ಜೀವನ ಅವರದಾಗಿತ್ತು. ಹಿರಿಮಗ ಹೊಲದ‌ಉಸ್ತುವಾರಿ ನೋಡಿಕೊಂಡರೆ, ತಂದೆಯು ಇತರೆಲ್ಲ ವ್ಯವಹಾರಗಳನ್ನು ನೋಡುತ್ತಿದ್ದರು. ಪ್ರಶಾಂತ ಕಡಲಲ್ಲಿ ಬಿರುಗಾಳಿ ಬೀಸಿತೋ ಎಂಬಂತೆ ಆ ಮನೆಯಲ್ಲಿ ಒಂದು‌ಆಘಾತಕಾರೀ ಘಟನೆ ನಡೆಯಿತು. ಯಾಕೋ ಏನೋ ಕಿರಿಮಗ ಅಪ್ಪನ ಎದುರು ಸೆಟೆದು ನಿಂತು ’ಅಪ್ಪಾ ನಿನ್ನ ಆಸ್ತಿಯಲ್ಲಿ ನನಗೆ ಬರಬೇಕಾದ ಪಾಲನ್ನು ಈಗಲೇ ಕೊಟ್ಟುಬಿಡು,ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡು’ ಎಂದ. ಅದೇನು ವಯೋಮಾನದ ಗುಣವೋ, ಸಹವಾಸದೋಷವೋ ಅಥವಾ ಯಾವ ಪ್ರಲೋಭನೆಯೋ ಏನೋ ಅಂತೂ ಪಾಲುತೆಗೆದುಕೊಂಡು ಯಾವುದಾದರೂ ಹೊರದೇಶಕ್ಕೆ ಹೋಗಿ ಸ್ವತಂತ್ರವಾಗಿ ಬದುಕಬೇಕೆಂದು ಆತ ಬಯಸಿದ. ಅವನ ಈ ವರ್ತನೆ ನೋಡುತ್ತಲೇ ಅಪ್ಪ ದಂಗಾದ. ಮಗನ‌ಅನುಭವದ ಕುರಿತು ಬುದ್ಧಿ ಹೇಳಿದ. ಆದರೆ ಮಗ ಕೇಳಿಯಾನೇ? ಅವನ ಹಠವೇ ಹಠ. ತನಗೆ ಆಸ್ತಿಯಲ್ಲಿ ಪಾಲು ಬೇಕೇಬೇಕೆಂದು ಕುಣಿಯತೊಡಗಿದ. ವಯಸ್ಸಿಗೆ ಬಂದಮಗನನ್ನು ಎದುರು ಹಾಕಿಕೊಳ್ಳಬಾರದೆಂಬ ಲೋಕಜ್ಞಾನವನ್ನು ಮನಸಿಗೆ ತಂದುಕೊಂಡ ತಂದೆ ವಿಧಿಯಿಲ್ಲದೆ ಆಸ್ತಿಯನ್ನು ಪಾಲು ಮಾಡಿಕೊಟ್ಟ.
ಆ ಕಿರಿಮಗನೋ ತನ್ನ ಪಾಲಿನ ಆಸ್ತಿಯನ್ನು ಮಾರಿ ಎಲ್ಲ ಹಣವನ್ನೂ ಗಂಟು ಕಟ್ಟಿಕೊಂಡು ಹೊರದೇಶಕ್ಕೆ ನಡೆದ. ಅಲ್ಲೇನು ಆ ಹಣವನ್ನು ವಿನಿಯೋಗಿಸಿ ಏಳ್ಗೆ ಹೊಂದಿದನೇ?ಇಲ್ಲವೇ ಇಲ್ಲ. ಹಣವನ್ನು ಎಲ್ಲೆಡೆ ದುಂದು ಮಾಡುತ್ತಾ ಕಳೆದ. ಮೋಜು ಮಾಡಿದ, ತಿಂದ, ಕುಡಿದ, ಸೂಳೆಯರ ಸಹವಾಸ ಮಾಡಿದ. ಅವನನ್ನು ದಾರಿತಪ್ಪಿದ ಮಗ‌ಎನ್ನುವುದಕ್ಕಿಂತ ದುಂದುಗಾರ ಮಗ ಎನ್ನುವುದೇ ಸರಿ. ಇಷ್ಟೆಲ್ಲಾ ದುಂದು ಆದ ಮೇಲೆ ಕೈಯಲ್ಲಿ ಹಣ ಉಳಿದೀತೇ? ಕೂತುಣ್ಣುವವನಿಗೆ ಕುಡಿಕೆ ಹಣ ಸಾಲದು ಎಂಬಂತೆ ಕೆಲವೇದಿನಗಳಲ್ಲಿ ಅವನ ಎಲ್ಲ ದುಡ್ಡೂ ಕರಗಿಹೋಯಿತು. ಅವನ ಜೊತೆಯಲ್ಲಿದ್ದವರೆಲ್ಲ ಒಬ್ಬೊಬ್ಬರಾಗಿ ದೂರ ಸರಿದರು. ಹಣವಿದ್ದಾಗ ಮಿತ್ರರಂತಿದ್ದವರು ಅಪರಿಚಿತರಂತೆ ವರ್ತಿಸಿದರು.ಒಂದೊಮ್ಮೆ ಸಿಕ್ಕಸಿಕ್ಕವರಿಗೆಲ್ಲ ಊಟ ಹಾಕಿದ ನೃತ್ಯಗಾತಿಯರ ಮೇಲೆ ಹಣ ಚೆಲ್ಲಿದ ದುಂದುಗಾರನಿಗೆ ಇಂದು ದಿನನಿತ್ಯದ ಊಟಕ್ಕೂ ಗತಿಯಿಲ್ಲವಾಯಿತು. ಕಂಡಕಂಡವರಲ್ಲಿಬೇಡಿ ನಿರಾಶನಾದ. ಎಲ್ಲರೂ ದುಡಿದು ತಿನ್ನೆಂದು ಮೂದಲಿಸಿದರು. ಕೊನೆಗೆ ಅವನ ಯೋಗ್ಯತೆಗೆ ಹಂದಿ ಮೇಯಿಸುವ ಕೆಲಸ ಸಿಕ್ಕಿತು.
ಅವನ ಯಜಮಾನ ಅವನಿಗೆ ಹೊಟ್ಟೆ ತುಂಬ ಊಟ ಹಾಕುತ್ತಿರಲಿಲ್ಲ. ಈಗಂತೂ ಆ ಕಿರಿಮಗ ತನ್ನ ಹೀನಾಯ ಸ್ಥಿತಿಗಾಗಿ ಹಲುಬಿದ, ಕೊರಗಿದ. ಹಂದಿಗಳು ತಿನ್ನುವತವುಡನ್ನಾದರೂ ತಿನ್ನೋಣವೆಮದರೆ ಅದಕ್ಕೂ ಅವಕಾಶ ಸಿಗಲಿಲ್ಲ. ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋ ಹಾಗೆ ಹೀಗೇ ಒಮ್ಮೆ ಕುಳಿತು ಯೋಚಿಸಿದ. ತಾನು ಹೇಗಿದ್ದವನುಹೇಗಾದೆ? ಅಪ್ಪನ ಮನೆಯಲ್ಲಿದ್ದಾಗ ಮೂರು ಹೊತ್ತೂ ಮೃಷ್ಟಾನ್ನ ಭೋಜನ ಉಣ್ಣುತ್ತಿದ್ದೆನಲ್ಲ? ಇಲ್ಲಿ ತವಡು ಕೂಡಾ ಸಿಕ್ಕುತ್ತಿಲ್ಲವಲ್ಲಾ? ಎಂದು ಪೇಚಾಡಿಕೊಂಡ. ಅಪ್ಪ ಅಷ್ಟುಹೇಳಿದರೂ ಕೇಳದೆ ಅವನನ್ನು ಧಿಕ್ಕರಿಸಿ ಬಂದು ದೊಡ್ಡ ತಪ್ಪು ಮಾಡಿಬಿಟ್ಟೆನೆಂದು ಅಲವತ್ತುಕೊಂಡ.
ಆಗಲೇ ಅವನಿಗೆ ಒಂದು ಒಳ್ಳೆ ಆಲೋಚನೆ ಹೊಳೆಯಿತು. ತಾನೀಗಲೇ ಅಪ್ಪನ ಬಳಿಗೆ ಓಡಿಹೋಗಿ ಅವನ ಕಾಲಮೇಲೆ ಬೀಳುತ್ತೇನೆ, ತನ್ನದು ತಪ್ಪಾಯಿತೆಂದುಬೇಡಿಕೊಳ್ಳುತ್ತೇನೆ, ಅಪ್ಪಾ ನನ್ನನ್ನು ನಿನ್ನ ಮಗನಾಗಿ ಅಲ್ಲ, ನಿನ್ನ ಸೇವಕರಲ್ಲಿ ಕಡೆಯವನಾಗಿ ಸ್ವೀಕರಿಸು ಎಂದು ಕೇಳಿಕೊಳ್ಳುತ್ತೇನೆ ಎಂದುಕೊಂಡ. ಬರೀ ಅವನ ಆಪರಿವರ್ತನೆಯೇ ಅವನಲ್ಲಿ ನಿರಾಳ ಭಾವ ಮೂಡಿಸಿತು. ಭರವಸೆಯ ಬೆಳಕೊಂದು ಅವನ ದಾರಿಯನ್ನು ನಿಚ್ಚಳವಾಗಿಸಿತು. ಹೊಸಚೈತನ್ಯ ಹೊಸ ಉತ್ಸಾಹ ಲವಲವಿಕೆಯಿಂದ‌ಆತ ಎದ್ದವನೇ ಅಪ್ಪನ ಊರಿಗೆ ಓಡೇ ಓಡಿದ.
ಇತ್ತ ಅಪ್ಪ ತನ್ನ ದಾರಿತಪ್ಪಿದ ಮಗನಿಗಾಗಿ ಬಹುವಾಗಿ ಕೊರಗಿದ್ದ. ಎಂದಾದರೂ ಒಂದು ದಿನ ತನ್ನ ಮಗ ಮರಳಿ ಬರುವನೆಂದು ಕಾದಿದ್ದ. ಆ ಒಂದು ಎಳೆಯ ಆಸೆಯೇ ಅವನಬದುಕನ್ನು ನಡೆಸಿತ್ತು. ದಿನದಿನವೂ ಆತ ತನ್ನ ಮಗನಿಗಾಗಿ ಹಂಬಲಿಸಿದ. ದಿಕ್ಕುದಿಕ್ಕಿಗೆಲ್ಲ ದೂತರನ್ನು ಕಳುಹಿಸಿ ಮಗನನ್ನು ಹುಡುಕಿಸಿದ. ಹೀಗೇ ಇರುವಲ್ಲಿ ಒಂದು ದಿನ ಅವನ‌ಒಳಮನಸಿಗೆ ತನ್ನ ಮಗ ಮರಳಿ ಬರುತ್ತಿದ್ದಾನೆಂದು ಅರಿವಾಯಿತು. ಕ್ಷಣಕ್ಷಣಕ್ಕೂ ಆ ಭಾವ ಗಟ್ಟಿಯಾಗುತ್ತಾ ಹೋಯಿತು. ಅವನು ತನ್ನ ಮನೆಯ ಮಹಡಿಯೇರಿ ದೂರ ದಿಕ್ಕಿನತ್ತದಿಟ್ಟಿಸಿದ.
ದೂರದಲ್ಲಿ ಹರಕು ಬಟ್ಟೆ ತೊಟ್ಟ ಯುವಕನೊಬ್ಬ ಬರಿಗಾಲಲ್ಲಿ ನಡೆದು ಬರುತ್ತಿರುವುದನ್ನು ಕಂಡ. ಆತನ ನಡಿಗೆಯ ಚಲನೆಯಿಂದಲೇ ಅವನು ತನ್ನ ಕಿರಿಮಗನೆಂಬುದು ತಂದೆಗೆಗೊತ್ತಾಯಿತು. ಮಹಡಿಯಿಂದಿಳಿದವನೇ ಆತುರದಿಂದ ಮಗನತ್ತ ಓಡತೊಡಗಿದ. ಯಜಮಾನ ಓಡುವುದನ್ನು ಕಂಡು ಆಳುಗಳೂ ಅವನನ್ನು ಹಿಂಬಾಲಿಸಿದರು. ಅಪ್ಪ ಮಗನಬಳಿಸಾರಿ ಅವನನ್ನು ಬರಸೆಳೆದು ಅಪ್ಪಿಕೊಂಡ. ಮಗನಾದರೋ ಅತ್ಯಂತ ಕುಬ್ಜನಾಗಿ ದೈನ್ಯದಿಂದ ಅಪ್ಪನ ಕಾಲಿಗೆ ಬಿದ್ದು ’ಅಪ್ಪಾ ನಿನ್ನ ಮಗನೆನಿಸಿಕೊಳ್ಳುವ ಯೋಗ್ಯತೆ ನನಗಿಲ್ಲ,ನಿನ್ನ ಮನೆಯ ಕೂಲಿಯಾಳುಗಳಲ್ಲಿ ಒಬ್ಬನಾಗಿ ನನ್ನನ್ನು ನೇಮಿಸಿಕೊ’ ಎಂದ.
ತಂದೆ ಅದನ್ನು ಕೇಳಿಸಿಕೊಳ್ಳದೇ ತನ್ನ ಸೇವಕರಿಗೆ ’ಓಡಿ ಹೋಗಿ ಉತ್ತಮ ವಸ್ತ್ರವನ್ನು ತನ್ನಿ, ಕಾಲಿಗೆ ನೀರು ಕೊಟ್ಟು ಒಳ್ಳೆಯ ಪಾದರಕ್ಷೆ ತೊಡಿಸಿರಿ, ಬೆರಳಿಗೊಂದುಸುಂದರವಾದ ಉಂಗುರ ಹಾಕಿರಿ, ಬನ್ನಿ ಎಲ್ಲ ಸಂತೋಷ ಪಡೋಣ, ಮೋಜು ಮಾಡಿ ಹಬ್ಬ ಮಾಡೋಣ, ಸತ್ತು ಹೋಗಿದ್ದ ನನ್ನ ಮಗ ಮತ್ತೆ ಬದುಕಿ ಬಂದಿದ್ದಾನೆ’ ಎಂದ.

ಒಡನೆಯೇ ಹಬ್ಬದ ಸಡಗರ ತೊಡಗಿತು. ಗಾನ ನರ್ತನಗಳ ನಾದವು ಅವನ ಮನೆಯಲ್ಲಿ ತುಂಬಿಕೊಂಡಿತು.

ಗುರುವಾರ, ಮೇ 2, 2013

NOH KA LIKAI ನೊಹ್ ಕಾ ಲಿಕಾಯ್


ಮೇಗಾಲಯದ ಬೆಟ್ಟಗುಡ್ಡಗಳ ನಾಡಿನ ಒಂದು ಹಳ್ಳಿ ರಂಗ್ಯಿರ್‍ಟೆ.  ಈ ಹಳ್ಳಿಯ ಅಂಚಿನಲ್ಲಿ ನೊಹ್ ಕಾಲಿಕಾಯ್ ಎಂಬ ನೀರ್‍ಬೀಳು ಇದೆ. ಆ ನೀರ್‍ಬೀಳು ಅದೇ ಹಳ್ಳಿಯಲ್ಲಿ ವಾಸಿಸುತ್ತಿದ್ದ ಒಬ್ಬ ಹೆಣ್ಣುಮಗಳ ಹೆಸರು ಹೊತ್ತಿದೆ. ಆ ಹಳ್ಳಿಯಲ್ಲಿ ಲಿಕಾಯ್ ಎಂಬ ಹೆಂಗಸಿದ್ದಳು. ಕಾಲಿಕಾಯ್ ಅಂದರೆ ಲಿಕಾಯಮ್ಮ ಎಂದರ್‍ತ. ನಮ್ಮಲ್ಲಿ ತೆರೇಸ ಎಂಬುದನ್ನು ತೆರೇಸಮ್ಮ ಎಂದೂ ಅಲಮೇಲು ಎಂಬುದನ್ನು ಅಲಮೇಲಮ್ಮ ಎಂದೂ ಕರೆಯುವುದಿಲ್ಲವೇ ಹಾಗೆ. ಹತ್ತಿರದ ಗಣಿಯಿಂದ ಕಬ್ಬಿಣದ ಅದಿರನ್ನು ಸಿಲ್ಹೆಟ್ ಎಂಬ ಊರಿಗೆ ಹೊತ್ತೊಯ್ಯುವುದೇ ಅವಳ ಗಂಡನ ಕೆಲಸ. ಅದರಿಂದ ಬರುವ ಅಲ್ಪ ಗಳಿಕೆಯಿಂದಲೇ ಅವರಿಬ್ಬರೂ ಸಂತಸದಿಂದಿದ್ದರು. ಆದರೆ ಒಂದು ದಿನ ಲಿಕಾಯಳ ಮಡಿಲಲ್ಲಿ ಪುಟ್ಟ ಕಂದಮ್ಮ ಆಡಿಕೊಂಡಿರುವಾಗಲೇ ಗಂಡ ಸತ್ತನೆಂಬ ಸುದ್ದಿ ಬಂತು. ಲಿಕಾಯ್ ಅತ್ತಳು, ಅವಳ ಅಳುವನ್ನು ಕೇಳಿ ಅವಳ ಪುಟ್ಟ ಮಗಳೂ ಅತ್ತಳು. ಕೊನೆಗೆ ಲಿಕಾಯ್  ಸಾವರಿಸಿಕೊಂಡು ಗಂಡ ಹೊರುತ್ತಿದ್ದ ಹೊರೆಯನ್ನು ತಾನೇ ಹೊರತೊಡಗಿದಳು. ಇಲ್ಲದಿದ್ದರೆ ಬದುಕು ನಡೆಯಬೇಕಲ್ಲ? ಅವಳು ಹೊರಹೊರಟಾಗ ಪುಟ್ಟ ಮಗುವನ್ನು ನೆರೆಯವರ ಕಯ್ಗೊಪ್ಪಿಸಿ ಹೊರಡುತ್ತಿದ್ದಳು. ಹೀಗೆ ಲಿಕಾಯ್ ಮಗಳು ಕಂಡವರ ಕಯ್ಗೂಸಾದಳು.
ಕಂಡವರು ಎಶ್ಟು ದಿನ ತಾನೇ ಮಗುವನ್ನು ಲಾಲಿಸಬಲ್ಲರು, ಅವರು ಒಂದು ದಿನ ಲಿಕಾಯ್ ಮನೆಗೆ ಹಿಂದಿರುಗುತ್ತಿದ್ದಂತೆ ನೀನು ಮತ್ತೊಂದು ಮದುವೆಯಾಗು ನಿನ್ನ ಮಗು ಅಮ್ಮ ಬೇಕೆಂದು ರಚ್ಚೆ ಹಿಡಿಯುವುದು ತಪ್ಪುತ್ತದೆ, ಅದಕ್ಕೂ ಒಬ್ಬ ಅಪ್ಪನೂ ಬೇಕಲ್ಲವೇ? ಎಂದು ಹೇಳಿದರು. ಅವರ ಮಾತನ್ನು ಅರಗಿಸಿಕೊಂಡ ಲಿಕಾಯ್ ಕೆಲದಿನಗಳಲ್ಲೇ ತನಗೊಬ್ಬ ಗಂಡನನ್ನು ಹುಡುಕಿಕೊಂಡಳು. ಹೊಸ ಗಂಡ ಅವಳನ್ನು ಚೆನ್ನಾಗಿ ನೋಡಿಕೊಂಡ. ಆದರೆ ಲಿಕಾಯಳು ತನಗಿಂತಲೂ ತನ್ನ ಮಗುವನ್ನು ಹೆಚ್ಚು ರಮಿಸುವುದು ಅವನಲ್ಲಿ ಹೊಟ್ಟೆಕಿಚ್ಚು ಹುಟ್ಟಿಸಿತು. ಹೆಂಡತಿಯು ತನ್ನನ್ನು ಗಮನಿಸುವುದಕ್ಕಿಂತ ಹೆಚ್ಚಾಗಿ ಮಗುವಿನತ್ತಲೇ ಗಮನ ಹರಿಸುತ್ತಾಳಲ್ಲ, ಆ ಮಗುವನ್ನು ಹೇಗಾದರೂ ತವಿಸಬೇಕು ಎಂದುಕೊಂಡ. ಎಶ್ಟಾದರೂ ಅದು ಅವನ ಮಗು ಅಲ್ಲವಲ್ಲ. ಅದರ ಬಗ್ಗೆ ಅವನಿಗೆ ಮಮತೆ ಅಕ್ಕರೆ ಮೂಡುವುದಾದರೂ ಹೇಗೆ? ತೀಟೆ ತೆವಲುಗಳ ಮೇಲಾಟದಲ್ಲಿ ಮಕ್ಕಳೇ ದೇವರುಗಳೆಂಬ ಅನಿಸಿಕೆ ಬರುವುದುಂಟೇ?
ಒಂದು ದಿನ ಲಿಕಾಯಳು ಎಂದಿನಂತೆ ಹೊರೆ ಸಾಗಿಸಲು ಹೋಗಿದ್ದಾಗ ಅವನು ಹೊಂಚು ಹಾಕಿ ಮಗುವನ್ನು ಕೊಂದುಬಿಟ್ಟ. ಕೊಂದ ಮೇಲೆ ಮಗುವಿನ ಒಡಲನ್ನು ಏನು ಮಾಡುವುದು? ಅದನ್ನು ಕತ್ತರಿಸಿ ಅಡುಗೆ ಮಾಡಿದ. ಆಮೇಲೆ ಏನೂ ಗೊತ್ತಿಲ್ಲದವನಂತೆ ಅಂಡಲೆಯುತ್ತಾ ಹೋದ. ಸಂಜೆ ಲಿಕಾಯ್ ಮನೆಗೆ ಹಿಂದಿರುಗಿದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಮಗು ನೆರೆಹೊರೆಯ ಯಾರದಾದರೂ ತೊಡೆಯೇರಿರುತ್ತದೆ ಎಂದುಕೊಂಡ ಆಕೆ  ಹಸಿವಾಗಿದ್ದರಿಂದಲೂ ಅಡುಗೆ ಮನೆಯಿಂದ ಒಳ್ಳೆ ಗಮಲು ಬರುತ್ತಿದ್ದರಿಂದಲೂ ಉಣ್ಣಲು ಕೂತಳು. ಊಟದ ಕೊನೆಯವರೆಗೂ ಅದು ಯಾವ ಪ್ರಾಣಿಯ ಮಾಂಸವಿರಬಹುದು ಎಶ್ಟು ಚೆನ್ನಾಗಿದೆಯಲ್ಲ ಎಂದುಕೊಂಡು ಸವಿದು ಸವಿದು ತಿಂದಳು.
ಉಂಡ ಮೇಲೆದ್ದು ಪಾತ್ರೆಗಳನ್ನು ಮರುಜೋಡಿಸುವಾಗ ಒಲೆಯ ಬಳಿ ಪುಟ್ಟ ಬೆರಳುಗಳು ಕಂಡವು. ಅವಳ ಗಂಡ ಮಗುವಿನ ಕಯ್ ಕಾಲು ತಲೆಗಳನ್ನು ಬಿಸಾಡಿದ್ದನಾದರೂ ಮಗುವಿನ ಬೆರಳುಗಳನ್ನು ತೆಗೆದುಹಾಕಲು ಮರೆತುಬಿಟ್ಟಿದ್ದ. ಆ ಬೆರಳುಗಳನ್ನು ಕಂಡಿದ್ದೇ ಲಿಕಾಯಳಿಗೆ ಕಣ್ಣು ಕತ್ತಲಿಟ್ಟಂತಾಯಿತು. ಕೋಪ ಮತ್ತು ಅಳು ಒಟ್ಟೊಟ್ಟಿಗೇ ಉಮ್ಮಳಿಸಿ ಬಂದವು. ತನ್ನ ಕರುಳ ಕುಡಿಯನ್ನು ತಾನೇ ಚಪ್ಪರಿಸಿ ತಿಂದುದರ ಬಗ್ಗೆ ಅವಳಿಗೆ ತುಂಬಾ ಹೇಸಿಗೆಯೆನಿಸಿತು. ಮುಶ್ಟಿ ಬಿಗಿದು ನೆಲಕ್ಕೆ ಬಡಿದಳು, ಹಣೆಯನ್ನು ಗೋಡೆಗೆ ಗಟ್ಟಿಸಿಕೊಂಡಳು, ಬೋರಾಡಿ ಚೀರಾಡಿ ಅತ್ತಳು, ತಲೆ ಕೆದರಿಕೊಂಡು ಹಾದಿ ಬೀದಿಯೆಲ್ಲ ಹುಚ್ಚಿಯಂತೆ ಓಡಿದಳು. ಕೊಂದ ತಪ್ಪಿಗಿಂತ ತಿಂದುದೇ ದೊಡ್ಡತಪ್ಪು ಎನ್ನಿಸಿತು.
ಆಕೆ ಓಡಿಯೇ ಓಡಿದಳು, ಎಡವಿದ್ದು ಮುಳ್ಳುಚುಚ್ಚಿದ್ದು ಯಾವುದನ್ನೂ ಲೆಕ್ಕಿಸದೆ ಓಡಿದಳು. ಊರವರೂ ಆಕೆ ಯಾತಕ್ಕಾಗಿ ಹಾಗೆ ಓಡುತ್ತಿದ್ದಾಳೆಂದು ತಿಳಿಯದೇ ಅವಳ ಹಿಂದೆಯೇ ಓಡಿದರು. ಓಡುತ್ತಾ ಓಡುತ್ತಾ ಲಿಕಾಯ್ ಊರ ಅಂಚನ್ನು ಮುಟ್ಟಿ ಅಲ್ಲಿಂದ 335 ಮೀಟರುಗಳ ಆಳಕ್ಕೆ ಬೀಳುತ್ತಿದ್ದ ನೀರಿನೊಂದಿಗೆ ಸೇರಿಕೊಂಡು ದುಮ್ಮಿಕ್ಕಿದಳು. ಹೀಗೆ ಮಗಳೊಂದಿಗೆ ಸೇರಿಕೊಂಡಳು. ಆ ನೀರ್‍ಬೀಳು ಇಂದಿಗೂ ಲಿಕಾಯಮ್ಮನ ಹೆಸರು ಹೊತ್ತಿದೆ. NOH KA LIKAI  ಎಂದರೆ ಲಿಕಾಯಮ್ಮನ ದುಮುಕು ಎಂದರ್‍ತ.
Excerpt from the article "Notes on the Kasia Hills, and People" by Lt. Henry Yule, the Bengal Engineers (Sir Henry Yule, the Geographer): Published in the Journal of the Asiatic Society of Bengal Vol. XIV Part II - July to December, 1844

ಬುಧವಾರ, ಮಾರ್ಚ್ 20, 2013

ಕೆಂಪ್ಟಿ ಫಾಲ್ಸ್

ಮಸ್ಸೂರಿಗೆ ಹೋದವರು ಕೆಂಪ್ಟಿ ಜಲಪಾತವನ್ನು ನೋಡದೆ ಹಿಂದಿರುಗಿದರೆ ಆ ಪ್ರಯಾಣ ವ್ಯರ್ಥವೇ ಸರಿ. ಮಸೂರಿಯಿಂದ ಚಕ್ರಾತಾ ರಸ್ತೆಯಲ್ಲಿ ಸುಮಾರು ೧೮ ಕಿಲೋಮೀಟರು ದೂರದಲ್ಲಿರುವ ಕೆಂಪ್ಟಿ ಫಾಲ್ ಒಂದು ಮನಮೋಹಕ ತಾಣ. ಡೆಹರಾದೂನಿನಿಂದಲೂ ಸರಿಸುಮಾರು ಅಷ್ಟೇ ದೂರವಿದ್ದು ಅಲ್ಲಿಂದಲೂ ನೇರವಾಗಿ ಬರಬಹುದು. ಸಮುದ್ರ ಮಟ್ಟದಿಂದ ೧೩೬೪ಮೀಟರು (೪೪೭೫ ಅಡಿ)ಗಳ ಮೇಲೆ ಇರುವ ಈ ಪ್ರವಾಸಿ ತಾಣವು ಹೆಚ್ಚಿನ ಜನರಿಗೆ ತಿಳಿದಿಲ್ಲ. ಜಾನ್ ಮೆಕಿನನ್ ಎಂಬ ಬ್ರಿಟಿಷ್ ಅಧಿಕಾರಿಯು ೧೮೩೫ರಲ್ಲಿ ಈ ತಾಣವನ್ನು ಅಭಿವೃದ್ಧಿ ಪಡಿಸಿದನೆಂದು ಹೇಳಲಾಗುತ್ತದೆ. ಸುತ್ತಮುತ್ತಲಿನ ರಮಣೀಯ ದೃಶ್ಯಾವಳಿ, ವಿಶಾಲವೂ ವಿಸ್ತಾರವೂ ಆದ ಪರಿಸರದ ಸೊಬಗು, ರುದ್ರಗಾಂಭೀರ್ಯದಲ್ಲಿ ಧುಮ್ಮಿಕ್ಕುವ ನೀರು ಇವುಗಳ ನಡುವೆ ಸಮಯ ಕಳೆಯುವುದೇ ತಿಳಿಯದ ಈ ತಾಣ ಮರೆಯಲು ಸಾಧ್ಯವಿಲ್ಲ. ಬ್ರಿಟಿಷರು ಬಿಡುವಾದಾಗ ಈ ಸುಂದರ ಜಾಗದಲ್ಲಿ ಶಿಬಿರ ಹೂಡಿ ಚಹಾ ಸವಿಯುತ್ತಿದ್ದರಂತೆ. ಆದ್ದರಿಂದಲೇ ಈ ಸ್ಥಳಕ್ಕೆ CAMP TEA ಎಂಬ ಹೆಸರುಂಟಾಗಿ ಅದೇ ಆಮೇಲೆ KEMPTY ಆಗಿದೆ ಎನ್ನಲಾಗಿದೆ.
ಬಂಗ್ಲೋ ಕಿ ಕಂಡಿ ಎಂಬ ಹಳ್ಳಿಯಲ್ಲಿ ಸಣ್ಣ ಚಿಲುಮೆಯಾಗಿ ಹುಟ್ಟುವ ಈ ನೀರು ಹಲವು ತೊರೆಗಳನ್ನು ಕೂಡಿಕೊಂಡು ಕೆಂಪ್ಟಿಯ ಬಳಿ ಬಂಡೆಗಳ ಬಳಿಸಾರಿ ೪೦ಅಡಿಗಳ ಎತ್ತರದಿಂದ ಧುಮ್ಮಿಕ್ಕುತ್ತದೆ. ಐದು ಶಾಖೆಗಳಾಗಿ ಬೀಳುವ ಜಲಧಾರೆಗೆ ಮೈಯೊಡ್ಡಿ ಬೆಚ್ಚನೆಯ ಬಿಸಿಲಿಗೆ ತುಂತುರ ನೀರ ಹನಿಯ ಮೇಲೆ ಅರಳುವ ನವಿರಾದ ಕಾಮನಬಿಲ್ಲನ್ನು ಸವರುತ್ತಾ, ಶುಭ್ರಸ್ಫಟಿಕ ನೀರಲ್ಲಿ ಈಜುತ್ತಾ, ಗೆಳೆಯ ಗೆಳತಿಯರತ್ತ ನೀರು ಎರಚುತ್ತಾ ಹಾಡುತ್ತ ಕೂಗುತ್ತಾ ಇಲ್ಲಿ ಎಷ್ಟು ಹೊತ್ತಾದರೂ ಮೈಮರೆಯಬಹುದು. ನೀರಿಗಿಳಿಯಲು ಮನಸ್ಸಿಲ್ಲದಿದ್ದರೆ ಜಲಪಾತವನ್ನೇ ನೋಡುತ್ತಾ ಪಾಪ್ ಕಾರ್ನ್ ಮೆಲ್ಲಬಹುದು, ಬಿಸಿಬಿಸಿಯಾದ ಆಲೂಪರಾಟದೊಂದಿಗೆ ಮೊಟ್ಟೆಪಲ್ಯವನ್ನು ಮುಕ್ಕುತ್ತಾ ಜಲಪಾತದ ಎತ್ತರವನ್ನು ಗುಣಿಸಬಹುದು. ಬಿಸಿಯಾದ ಮಸಾಲೆ ಚಹಾ ಹೀರುತ್ತಾ ಸಂಗಾತಿಗಳನ್ನು ಚುಡಾಯಿಸಬಹುದು. ಒಟ್ಟಿನಲ್ಲಿ ದಿನವಿಡೀ ಕಾಲ ಕಳೆಯಲು ಹೇಳಿ ಮಾಡಿಸಿದ ಜಾಗವಿದು.
ಮಸ್ಸೂರಿಯಿಂದ ಸ್ವಲ್ಪ ಹೊರಗೆ ಟ್ಯಾಕ್ಸಿ ಸ್ಟ್ಯಾಂಡ್ ಬಳಿ ಸುಮೊ ಅಥವಾ ಸಫಾರಿ ಗಾಡಿಗಳು ನಿಂತು ಕೆಂಪ್ಟಿಗೆ ಕರೆದೊಯ್ಯುತ್ತವೆ. ಹಿಮಾಲಯದ ಪರ್ವತಶ್ರೇಣಿಯ ನಡುವೆ ಮೋಡಗಳಲ್ಲಿ ತೇಲುತ್ತಾ ಆಳ ತಿರುವುಗಳಲ್ಲಿ ಇಳಿಯುತ್ತಾ ಕುಳಿರ್ಗಾಳಿಯ ಕಂಪು ಸವಿಯುತ್ತಾ ಉಲ್ಲಾಸದ ಪಯಣ ಸಾಗುತ್ತದೆ. ಜಲಪಾತ ಇನ್ನೂ ಎರಡು ಕಿಲೊಮೀಟರು ಇರುವಂತೆಯೇ ಅದರ ಸದ್ದು ಅನುರಣಿಸುತ್ತದೆ. ಒಂದು ಸುದೀರ್ಘ ವರ್ತುಳವನ್ನು ಸುತ್ತಿ ಜಲಪಾತದ ಬಳಿಗೆ ಗಾಡಿ ಬಂದು ನಿಲ್ಲುವ ವೇಳೆಗೆ ನಿಮ್ಮ ಕ್ಯಾಮೆರಾವು ಜಲಪಾತದ ಹಲವು ದೂರದೃಶ್ಯಗಳನ್ನು ಕ್ಲಿಕ್ಕಿಸಿರುತ್ತೆ. ರಸ್ತೆಯ ತಡಿಯಲ್ಲೇ ಸೇತುವೆಯ ಮೂಲಕ ಹರಿದ ನೊರೆನೊರೆಯಾದ ನದೀನೀರು ಸನಿಹದಲ್ಲೇ ಕೆಳಕ್ಕೆ ಬೀಳುವ ಸದ್ದಿನೊಂದಿಗೆ ಪ್ರವಾಸಿಗರ ಕೇಕೆ ಮಿಳಿತವಾಗಿ ಕೇಳಿಬರುತ್ತದೆ. ಇಲ್ಲಿಂದ ಮುಂದೆ ನಿಮ್ಮ ವಾಹನ ಸಾಗದು. ನೀವು ಕೆಳಗಿಳಿದು ನಡೆಯುತ್ತಾ ಅಂಗಡಿ ಸಾಲಿನ ನಡುವೆ ಜಲಪಾತದೆಡೆಗೆ ಸಾಗುವ ಮೆಟ್ಟಿಲುಗಳಿಗಾಗಿ ತಡಕುತ್ತೀರಿ. ನಿಮ್ಮ ತಡಕಾಟ ಕಂಡು ಅಲ್ಲಿನ ಸ್ನೇಹಪರ ಘರವಾಲಿ ಜನ ನಿಮಗೆ ಮಾರ್ಗದರ್ಶನ ಮಾಡುತ್ತಾರೆ. ಮೆಟ್ಟಲಿಳಿಯಲು ಕಷ್ಟವಾದವರಿಗೆ ಕೇಬಲ್ ತೊಟ್ಟಿಲಿನ ಸೌಕರ್ಯವೂ ಇದೆ.
ಕೆಂಪ್ಟಿ ಫಾಲ್ ಅನ್ನೋ ಈ ದಬದಬೆಯಷ್ಟೇ ಇಲ್ಲಿನ ನೋಟದಾಣವಲ್ಲ. ಮೇಲೆ ಹತ್ತಿ ನದಿಯ ಗುಂಟ ಸಾಗಿದರೆ ಅಲ್ಲಲ್ಲಿ ಕಿರು ಜಲಪಾತಗಳೂ, ಕೊರಕಲುಗಳ ನಡುವಿನ ನದೀ ಹಾಸುಗಳೂ, ಸ್ವಚ್ಛ ನೀರಿನ ಕೊಳಗಳೂ ಇದ್ದು ನೀರಿನಲ್ಲಿ ಸುಖಾಸುಮ್ಮನೆ ಆಟವಾಡಬಹುದು, ಬೊಗಸೆ ಮೊಗೆದು ನೀರು ಕುಡಿಯಬಹುದು, ನೀರ ಜುಳು ಜುಳು ನಾದ ಕೇಳುತ್ತಾ ಟೈಮ್ ಪಾಸ್ ಮಾಡಬಹುದು. ಇಲ್ಲವೇ ಕೆಳಗೆ ನದೀ ಗುಂಟ ನಿಸರ್ಗ ರಮಣೀಯತೆಯನ್ನು ಆಸ್ವಾದಿಸುತ್ತಾ ೧೨ ಕಿಲೋಮೀಟರು ನಡೆದು ಹೋಗಿ ಯಮುನೆಯೊಂದಿಗೆ ಸಂಗಮವಾಗುವವರೆಗಿನ ಚಾರಣ ಮಾಡಬಹುದು. ಅಲ್ಲಲ್ಲಿ ನಿಂತ ನೀರಿನಲ್ಲಿ ಈಜಬಹುದು ಅಥವಾ ಮೀನಿಗೆ ಗಾಳ ಹಾಕಬಹುದು. ಇಲ್ಲಿ ಹೇಳೋವರೂ ಇಲ್ಲ ಕೇಳೋವರೂ ಇಲ್ಲ.
ಕೆಂಪ್ಟಿಯಿಂದ ವಾಪಸು ಮಸೂರಿಗೆ ಬರುವಾಗ ಸಮಯವಿದ್ದರೆ ದಾರಿ ಮಧ್ಯೆ ಕಂಪೆನಿ ಗಾರ್ಡನ್ ಹಾಗೂ ಗನ್ ಹಿಲ್ ಪಾಯಿಂಟ್ ಸಿಗುತ್ತೆ. ಮಸೂರಿಗೆ ಹಿಂದಿರುಗಿ ಸ್ವಲ್ಪ ವಿಶ್ರಮಿಸಿ ಸಂಜೆ ಮಾಲ್ ರಸ್ತೆಯಲ್ಲಿ ನಡೆದಾಡುತ್ತಾ ಸ್ವಪ್ನಲೋಕದ ಸವಿ ಉಣ್ಣಬಹುದು.
ಡೆಹರಾಡೂನ್ ರೈಲುನಿಲ್ದಾಣದಿಂದ ಹೊರಬಂದರೆ ಮಸೂರಿಗೆ ಹೋಗುವ ಮಿನಿಬಸ್ಸುಗಳು ಹಲವಾರಿದ್ದು ಮಸೂರಿ ಮಸೂರಿ ಎಂದು ಕೂಗುತ್ತಿರುತ್ತಾರೆ. ಡೆಹರಾಡೂನಿನಿಂದ ಮಸೂರಿಗೆ ಒಂದು ಗಂಟೆ ಬಸ್ ಪ್ರಯಾಣ. ಡೆಹರಾಡೂನಿಗೆ ರೈಲು ಹಾಗು ವಿಮಾನಗಳ ಸಂಪರ್ಕವಿದೆ. ಚಂಡೀಗಡದಿಂದ ಬಸ್ಸಿನಲ್ಲಿ ಡೆಹರಾಡೂನ್ ಅಥವಾ ಹರದ್ವಾರ ತಲಪಿ ಅಲ್ಲಿಂದಲೂ ಮಸ್ಸೂರಿಗೆ ಬರಬಹುದು. ಡೆಹರಾಡೂನಿನಿಂದ ೩೫ ಕಿ. ಮೀ, ಹಾಗೂ ಹರದ್ವಾರದಿಂದ ೫೫ ಕಿ.ಮೀ.

ಡಿಸಂಬರಿನಿಂದ ಫೆಬ್ರವರಿ ಕೊನೆಯವರೆಗೆ ಹಿಮಪಾತ ಇಲ್ಲವೇ ಮಂಜು ಹಾಸಿರುತ್ತೆ. ಆಮೇಲೆ ಹೋಗುವುದು ಚೆನ್ನ. ಯಾವುದಕ್ಕೂ ಸ್ವೆಟರು ಅಥವಾ ಶಾಲು ಇರಲಿ. ಮಳೆಗಾಲದಲ್ಲಿ ಮಾತ್ರ ಬೇಡವೇ ಬೇಡ.

ಭಾನುವಾರ, ಮಾರ್ಚ್ 3, 2013

ಎ ಎಂ ಜೋಸೆಫ್


ಎ ಎಂ ಜೋಸೆಫ್ ಎಂಬುದು ಅರುವತ್ತರ ದಶಕದ ಚರ್ಚ್ ಸಾಹಿತ್ಯ ವಲಯದಲ್ಲಿ ಕಂಡು ಬರುತ್ತಿದ್ದ ಒಂದು ಚಿರಪರಿಚಿತ ಹೆಸರು. ಆಗಷ್ಟೇ ಅಕ್ಷರ ಕಲಿತ ನನ್ನ ಬಾಲ್ಯದ ಆ ದಿನಗಳಲ್ಲಿ ಕಂಡದ್ದನ್ನೆಲ್ಲ ಓದುವ ಹುರುಪು, ಮತ್ತದರ ಜೊತೆಗೇ ಜೋಸೆಫ್ ಎಂಬ ನನ್ನ ಹೆಸರನ್ನು ಮುದ್ರಣ ಮಾಧ್ಯಮದಲ್ಲಿ ನೋಡಿದಾಗ ಆಗುವ ಪುಳಕದಿಂದಾಗಿ ಎ ಎಂ ಜೋಸೆಫ್ ಹೆಸರು ನನಗೆ ಅಪ್ಯಾಯಮಾನವಾಗಿತ್ತು.
ಅಂದಿನ ಹಲವಾರು ಪುಸ್ತಕಗಳಲ್ಲಿ ಎ ಎಂ ಜೋಸೆಫ್ ಎಂಬ ಹೆಸರು ಕಂಡುಬರುತ್ತಿತ್ತು. ಕೆಲವದರಲ್ಲಿ ಎ ಎಂ ಬೆರ್ನಾರ್ಡ್ ಎಂಬ ಹೆಸರೂ ಇರುತ್ತಿತ್ತು. ಆ ಇಬ್ಬರನ್ನೂ ನಾನು ಎಂದಿಗೂ ನೋಡಲಿಲ್ಲ ಎಂಬುದು ಸತ್ಯವಾದರೂ ಅವರ ಬಗ್ಗೆ ಯಾರಾದರೂ ಮಾತನಾಡಿದ್ದಾಗಲೀ ಉಲ್ಲೇಖಿಸಿದ್ದಾಗಲೀ ಇಲ್ಲವೇ ಇಲ್ಲವೆನ್ನಬಹುದು. ಚರ್ಚಿನ ಭಾಷೆಯು ಲತೀನಿನಿಂದ ಕನ್ನಡಕ್ಕೆ ತೆರೆದುಕೊಳ್ಳುತ್ತಿದ್ದ ಅಂದಿನ ಸಂಕ್ರಮಣ ಸ್ಥಿತಿಯಲ್ಲಿ ಹಲವಾರು ಮಂದಿ ಕನ್ನಡ ಕ್ರೈಸ್ತ ಸಾಹಿತ್ಯದ ಒಕ್ಕಲುತನಕ್ಕೆ ಮನಸು ಮಾಡಿದ್ದರು. ಅವರಲ್ಲಿ ಜಾರ್ಜ್ ಡಿಸೋಜ, ಎನ್ ಎಸ್ ಮರಿಜೋಸೆಫ್, ಜಿ ಜೋಸೆಫ್, ಜೋ ಮೇರಿ ಲೋಬೋ, ವಲೇರಿಯನ್ ಡಿಸೋಜ, ಸಿಪ್ರಿಯನ್ ಪೈ, ಅಮಲಾನಂದ, ಸ್ಟ್ಯಾನಿ ಬ್ಯಾಪ್ಟಿಸ್ಟ್ ಮುಂತಾದವರೆಲ್ಲ ಗುರು ಅಭ್ಯರ್ಥಿಗಳಾಗಿದ್ದು ಕನ್ನಡ ಧಾರ್ಮಿಕ ಸಾಹಿತ್ಯದಲ್ಲಿನ ಶೂನ್ಯವನ್ನು ತುಂಬಲು ಪ್ರಯತ್ನಿಸುತ್ತಿದ್ದರು. ಅಂಥದರಲ್ಲಿ ದಯಾನಂದ ಪ್ರಭು ಅವರಂಥ ತರುಣರು ಸೃಜನಶೀಲ ಬರಹಕ್ಕೆ ಕೈಹಾಕಿದ್ದರು. ಮೇಲೆ ಹೇಳಿದ ಎಲ್ಲರೂ ಬೆಂಗಳೂರಿಗೆ ಹೊರಗಿನವರಾಗಿದ್ದು ಗುರುಮಠದಿಂದ ಹೊರಟ ಮೇಲೆ ದೂರಾದರು. ಬೆಂಗಳೂರಿನಲ್ಲಿ ಭಾಷಾ ಸಂಘರ್ಷಗಳು ಶೀತಲಯುದ್ಧದಂತೆ ವ್ಯಾಪಕವಾಗುತ್ತಿದ್ದ ಆ ಸಮಯದಲ್ಲಿ ಬಹಳಷ್ಟು ಸ್ಥಿತ್ಯಂತರಗಳು ನಡೆದು ಎ ಎಂ ದ್ವಯರ ಹೆಸರುಗಳು ನೇಪಥ್ಯಕ್ಕೆ ಸರಿದವೇನೋ?
ಅದೂ ಅಲ್ಲದೆ ಕ್ರೈಸ್ತ ಕಥೋಲಿಕ ಧಾರ್ಮಿಕ ಸಾಹಿತ್ಯವನ್ನು ಯಾರು ಬೇಕಾದರೂ ಸೃಜಿಸುವಂತಿರಲಿಲ್ಲ, ಅದಕ್ಕೆಲ್ಲ ಧರ್ಮಾಧಿಕಾರಿಗಳ ಅಪ್ಪಣೆ ಪಡೆಯಬೇಕೆನ್ನುವ ಜಿಗುಟುತನ ಚರ್ಚಿನದಾಗಿತ್ತು. ಅಂಥ ಜಿಗುಟುತನದ ನಡುವೆಯೂ ಎ ಎಂ ಜೋಸೆಫರು ತಮಿಳು ಬೈಬಲಿನ ಕನ್ನಡಾನುವಾದ ನಡೆಸಿದ್ದರು. ಆ ವಿಷಯವನ್ನು ನಾನು ತಿಳಿದುಕೊಂಡಿದ್ದು ಹೇಗೆಂಬುದರ ಕತೆಯೇ ಇದು.
೧೯೮೬ರ ಒಂದು ದಿನ. ನನ್ನ ಪೂರ್ವಜರ ಊರಾದ ಬೇಡರಹಳ್ಳಿಗೆ ಹೋಗಿದ್ದಾರ ಬೆನ್ಸನ್ ಟೌನಿನ ಉಪ ಅಂಚೆಕಚೇರಿಯ ಬದಿಯ ಒಂದು ಮನೆಯಲ್ಲಿ ನೋಯೆಲ್ ಎಂಬುವರ ಭೇಟಿಯಾಯ್ತು. ‘ಕನ್ನಡ ತಮಿಳುಗಳ ನೆವದಲ್ಲಿ ಬೆಂಗಳೂರಿನ ಕ್ರೈಸ್ತರ ಬಾಂಧವ್ಯ ಹೇಗೆ ಒಡೆದ ಕನ್ನಡಿಯಾಯಿತು’ಎಂಬುದರ ಕುರಿತ ಮಾತುಕತೆಯ ನಡುವೆ ನೋಯೆಲ್ ಎಂಬ ಆ ಹಿರಿಯ ಗೃಹಸ್ಥರು ಕನ್ನಡ ಕ್ರೈಸ್ತ ಸಾಹಿತ್ಯ ಪ್ರವರ್ತಕರಾಗಿದ್ದ ನಮ್ಮ ಮಾವನವರ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲವೆಂದರು. ಆಗ ನನ್ನ ಕಿವಿ ನೆಟ್ಟಗಾಯಿತು. ‘ನಿಮ್ಮ ಮಾವನವರು ಎಂದರೆ ಎಂ ಎಂ ಜೋಸೆಫರೇ?’ ಎಂದು ಕೇಳಿದೆ. ಅವರು ‘ಇಲ್ಲ ಅವರು ನನ್ನ ಮಾವ ಎ ಎಂ ಬೆರ್ನಾಡರ ತಮ್ಮ’ ಎಂದರು.
ನಾನು ಹೌದೇ, ಚಿಕ್ಕಂದಿನಲ್ಲಿ ನಾನವರ ಪುಸ್ತಕಗಳನ್ನು ನೋಡಿದ್ದೇನೆ ಎಂದಾಗ ಕೂಡಲೇ ಭಾವ ಪರವಶರಾದ ಅವರು ನನ್ನನ್ನು ತಬ್ಬಿಕೊಂಡು ನನ್ನ ಜೀವಮಾನ ಕಾಲದಲ್ಲಿ ಅವರ ಕುರಿತು ಪ್ರಸ್ತಾಪಿಸಿದ ಒಬ್ಬ ವ್ಯಕ್ತಿಯನ್ನೂ ಕಾಣಲಿಲ್ಲ, ಆ ಪ್ರಸ್ತಾಪ ಮಾಡಿದ ಮೊದಲ ವ್ಯಕ್ತಿ ನೀವು, ನನಗೆ ನಿಜಕ್ಕೂ ಪರಮಾನಂದವಾಗುತ್ತಿದೆ ಎಂದು ಉದ್ಗರಿಸಿದರು. ಮತ್ತೊಂದು ದಿನ ಬಿಡುವು ಮಾಡಿಕೊಂಡು ಬನ್ನಿ ಅವರ ಪುಸ್ತಕಗಳನ್ನೆಲ್ಲ ತೋರಿಸುತ್ತೇನೆ, ಕುಳಿತು ಮಾತನಾಡೋಣ ಎಂದು ಆಹ್ವಾನಿಸಿದರು. ಹೀಗೆ ನಾನವರನ್ನು ಆಗಾಗ್ಗೆ ಭೇಟಿಯಾದೆ.
ಜೋಸೆಫರ್ ಪೂರ್ವಜರು ಹಾಸನ ಜಿಲ್ಲೆ ಚೆನ್ನರಾಯಪಟ್ಟಣಕ್ಕೆ ಸನಿಹದ ನುಗ್ಗೆಹಳ್ಳಿಯವರು. ಜೋಸೆಫರ ತಂದೆ ಅಲ್ಲಿನ ಶಾನುಭೋಗ ಕುಟುಂಬದ ಕೃಷ್ಣಪ್ಪಯ್ಯನವರು. ಅವರು ಮತಾಂತರದ ಕತೆ . . . ಮೂಡಲದಾಸಾಪುರದ ಕ್ರೈಸ್ತ ಶಾಲೆಯಲ್ಲಿ ವಿದ್ಯಾಗುರುವಾಗಿದ್ದಾಗ (೧೮೫೬?) ಕ್ರೈಸ್ತ ಧರ್ಮಕ್ಕೆ ಶರಣಾಗಿ ಚೌರಣ್ಣನಾದರು. ಚುರುಕು ಬುದ್ಧಿಯ ಚೌರಣ್ಣನವರನ್ನು ಫ್ರೆಂಚ್ ಪಾದ್ರಿಗಳು ಆದರಿಸಿ ಅನಾಥಾಶ್ರಮದಲ್ಲಿದ್ದ ಮಕ್ಕಳಿಗೆ ವಿದ್ಯೆ ಕಲಿಸುವಂತೆ ಒಪ್ಪಿಸಿದರು. ಹೀಗೆ ಕೃಷ್ಣಪ್ಪ ಅಯ್ಯನವರು ಚೌರಣ್ಣನಾಗಿ ಶೆಟ್ಟಿಹಳ್ಳಿಯಲ್ಲಿ ಮುಖ್ಯೋಪಾಧ್ಯಾಯರಾದರು. ನಂತರದ ದಿನಗಳಲ್ಲಿ ತಟ್ಟುಗುಪ್ಪೆ ಮರಿಯಾಪುರಕ್ಕೆ ಬಂದು ನೆಲೆನಿಂತ ಚೌರಣ್ಣನವರು ಅಲ್ಲಿಯೂ ಅನಾಥ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿದರು. ಈ ಕಾರ್ಮೆಲ್ ಮಾತೆಯ ಕನ್ಯಾಮಠ ಇದೆಯಲ್ಲ, ಅದೇ ಚೌರಣ್ಣನವರ ಮನೆ. ಆಮೇಲೆ ತಮ್ಮ ಮಕ್ಕಳಿಗೆ ಪ್ರೌಢ ಶಿಕ್ಷಣ ಕೊಡಿಸಲು ಬೆಂಗಳೂರು ನಗರ ಸೇರಿಕೊಂಡಿರಬಹುದು ಎಂದು ಭಾವಿಸಬಹುದಾಗಿದೆ.
ಎ ಎಂ ಜೋಸೆಫರು ವಿದ್ಯಾಭ್ಯಾಸ ಪಡೆದು ಅಲೋಶಿಯಸ್ ಶಾಲೆಯಲ್ಲಿ ಶಿಕ್ಷಕವೃತ್ತಿ ಪಡೆದರು. ಅವರು ಪ್ರತಿಭಾವಂತರಾಗಿದ್ದರೂ ಫ್ರೆಂಚ್ ಪಾದ್ರಿಗಳು ನೀಡುತ್ತಿದ್ದ ಕಾಲೇಜು ಶಿಕ್ಷಣದಿಂದ ಏಕೆ ವಂಚಿತರಾದರು ಎಂಬುದು ತಿಳಿಯದಾಗಿದೆ. ಸಾಂಪ್ರದಾಯಿಕ ಕಾಲೇಜು ಶಿಕ್ಷಣ ಪಡೆಯದಿದ್ದರೂ ವಿಪರೀತ ಜ್ಞಾನದಾಹಿಯಾಗಿದ್ದ ಜೋಸೆಫರು ಕನ್ನಡ ಸಾಹಿತ್ಯ, ಇಂಗ್ಲಿಷ್ ಸಾಹಿತ್ಯ, ಕ್ರೈಸ್ತ ಧಾರ್ಮಿಕ ಸಾಹಿತ್ಯವನ್ನು ಅಭ್ಯಸಿಸಿ ತಮ್ಮ ಜ್ಞಾನತೃಷೆಯನ್ನು ತಣಿಸಿಕೊಂಡರು. ಮರಿಯಾಪುರದ ಉಪದೇಶಿ ಮರಿಯಪ್ಪ ಅಯ್ಯನವರ ಮಗಳು ಜೋಸ್ಫಿನಾರನ್ನು ಮದುವೆಯಾದ ಜೋಸೆಫರು ನಂತರದ ದಿನಗಳಲ್ಲಿ ಶಿಕ್ಷಕ ವೃತ್ತಿಯನ್ನು ತೊರೆದು ಬೆಂಗಳೂರು ನಗರಸಭೆಯಲ್ಲಿ ಬೆರಳಚ್ಚುಗಾರರಾಗಿ ನೌಕರಿ ಹಿಡಿದು ಉಗ್ರಾಣಾಧಿಕಾರಿಯಾಗಿ ನಿವೃತ್ತರಾದರು. ಆಮೇಲೂ ಜೀವನೋಪಾಯಕ್ಕಾಗಿ ಬೆರಳಚ್ಚು ವೃತ್ತಿಯನ್ನು ಮುಂದುವರಿಸಿದ್ದರು.
ಅವರ ಪುಸ್ತಕಗಳ ಹೂರಣವನ್ನು ಗಮನಿಸಿದರೆ ಜೋಸೆಫರು ಅತ್ಯಂತ ಧರ್ಮಭೀರುಗಳಾಗಿದ್ದರೆಂದು ತಿಳಿಯುತ್ತದೆ. ಅವರು ಬರೆದ ಪುಸ್ತಕಗಳಲ್ಲಿ ಫಬಿಯೋಲೆ ಎಂಬುದು ರಾಜಮನ್ನಣೆಯನ್ನು ಪಡೆದಿತ್ತು. ಹಲವಾರು ಹಿರಿಯ ಕ್ರೈಸ್ತರು ಫಬಿಯೋಲೆಯನ್ನು ಉದಾಹರಿಸುತ್ತಿದ್ದುದು ನನಗೆ ನೆನಪಿದೆ. ೧೯೨೯ರಲ್ಲಿ ಈ ಕೃತಿಗೆ ಮೈಸೂರರಸರು ದೇವರಾಜ ಬಹದ್ದೂರ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಫಬಿಯೋಲೆಯ ಮುನ್ನುಡಿಯಲ್ಲಿ ಜೋಸೆಫರು ಹೀಗೆ ಹೇಳುತ್ತಾರೆ: ‘ಸುಪ್ರಖ್ಯಾತರಾದ ಕಾರ್ಡಿನಲ್ ವೈಸ್‌ಮ್ಯಾನೆಂಬುವರು ಇಂಗ್ಲಿಷಿನಲ್ಲಿ ಬರೆದ ಫಬಿಯೋಲೆ ಎಂಬ ಮೂಲಗ್ರಂಥ ಮತ್ತು ಅದರ ಆಧಾರದಿಂದ ತಮಿಳಿನಲ್ಲಿ ಬರೆಯಲ್ಪಟ್ಟ ಪಂಕ್ರಾಸ್ ಎಂಬ ಗ್ರಂಥ ಇವೆರಡನ್ನೂ ಮುಂದಿಟ್ಟುಕೊಂಡು ಈ ಕನ್ನಡ ಗ್ರಂಥsವನ್ನು ಬರೆದೆವು. ಮೂಲಗ್ರಂಥವು ಬಹಳ ಪ್ರಖ್ಯಾತವಾದ ಸದ್ಗ್ರಂಥವಾಗಿದೆ. ಇದನ್ನು ಪ್ರಪಂಚದ ನಾಲ್ವತ್ತು ಭಾಷೆಗಳಿಗೆ ಪರಿವರ್ತಿಸಿಕೊಂಡಿರುತ್ತಾರಾದ್ದರಿಂದ ಇಂಥಾ ಗ್ರಂಥದ ಪ್ರಯೋಜನವು ಕನ್ನಡಿಗರಿಗೂ ದೊರೆಯಲೆಂದು ಇದನ್ನು ಕನ್ನಡದಲ್ಲಿ ಬರೆದೆವು.’
ತಮಿಳಿನಲ್ಲಿ ಪ್ರಚಲಿತವಾಗಿದ್ದ ಪವಿತ್ರಬೈಬಲ್ ಗ್ರಂಥವನ್ನು ಕನ್ನಡಕ್ಕೆ ತರುವ ಆಸಕ್ತಿಯಿಂದ ತರ್ಜುಮೆಗೆ ತೊಡಗಿದ ಅವರ ಸಾಹಸವನ್ನು ಮೆಚ್ಚಬೇಕಾದ್ದೇ. ಆದರೆ ಅದನ್ನು ಅವರು ಪ್ರಕಟಿಸಲಾಗದ ಕಾರಣ ತಿಳಿಯದು. ೧೯೬೦ರ ದಶಕದಲ್ಲಿ ಹೊರಬಂದ ಶುಭಸಂದೇಶಗಳ ಕಥೋಲಿಕ ಆವೃತ್ತಿಯಲ್ಲಿ ಎ ಎಂ ಜೋಸೆಫರ ಹಸ್ತಪ್ರತಿಯನ್ನು ಬಳಸಿಕೊಂಡಿರುವ ಬಗ್ಗೆ ಉಲ್ಲೇಖವಿದೆ.
೧೯೫೦ರಲ್ಲಿ ಫಾದರ್ ಐ ಬಿ ಪಿಂಟೊ ಅವರ ಸಲಹೆಯ ಮೇರೆಗೆ ಎ ಎಂ ಜೋಸೆಫರು ರೆವರೆಂಡ್ ಕ್ಯಾಸೆಲ್ ಬ್ರಾಂಕೊ ಅವರ ಮೋರ್ ಅಬೊಟ್ ಫಾತಿಮಾ ಎಂಬ ಪುಸ್ತಕವನ್ನು ಅನುವಾದಿಸಿ ‘ಫಾತಿಮಾ ಮಾತೆ’ ಎಂಬ ಹೆಸರಿನಲ್ಲಿ ಪ್ರಕಟಿಸುತ್ತಾರೆ. ಈ ಪುಸ್ತಕದ ಪ್ರಕಟಣೆಗೆ ಮೇಸ್ತ್ರಿ ಚೌರಪ್ಪನವರ ಮಗ ಸಿ ಜೋಸೆಫ್ ಧನಸಹಾಯ ಮಾಡಿದ್ದನ್ನೂ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
‘ಜೀವವಾದ ಜೇಸುನಾಥರು’ ಎಂಬುದು ಜೋಸೆಫರ ಇನ್ನೊಂದು ಮಹತ್ತರ ಪುಸ್ತಕ. ಇದು ಯೇಸುಸಭೆಯ ಇ ಲೆ ಜೋಲಿ ಅವರ ಇಂಗ್ಲಿಷ್ ಪುಸ್ತಕದ ಅನುವಾದ. ‘ಸಂಕಲ್ಪ ಹಟಯೋಗಿ’ ಎಂಬುದು ಲೊಯೊಲದ ಸಂತ ಇಗ್ನೇಷಿಯಸರ ಜೀವನ ಚರಿತ್ರೆ. ‘ಕೆಂಪು ಮರಳು’ ಎಂಬ ಪುಸ್ತಕ ಸಂತ ಜಾನ್ ದೆ ಬ್ರಿಟ್ಟೊ ಅವರ ಜೀವನ ಚರಿತ್ರೆ. ಸಂತ ಮಾಂಟ್‌ಫರ್ಟ್ ಅವರು ಮರಿಯಮ್ಮನವರ ಬಗೆಗೆ ಬರೆದಿರುವ ಬೃಹದ್ಗ್ರಂಥವನ್ನು ಸಂಗ್ರಹರೂಪದಲ್ಲಿ ‘ಮರಿಯಮ್ಮನವರ ರಹಸ್ಯ’ ಎಂಬ ಪುಸ್ತಕವಾಗಿ ಅನುವಾದಿಸಿದರು. ‘ಆತ್ಮಪರಾಗ’ವನ್ನು ತಮ್ಮ ಅಣ್ಣ ಎ ಎಂ ಬೆರ್ನಾಡರೊಂದಿಗೆ ಸೇರಿ ಪ್ರಕಟಿಸಿದ್ದಾರೆ. ಈ ಪುಸ್ತಕವನ್ನು ಎ ಎಂ ಬರ್ನಾಡರ ಮಗ ಬಿ ಪ್ರಮೋದ ಅವರು ಮರುಮುದ್ರಿಸಿದ್ದಾರೆ.
ಕನ್ನಡ ಕಥೋಲಿಕ ಕ್ರೈಸ್ತ ಸಾಹಿತ್ಯಕೃಷಿಯಲ್ಲಿ ತೊಡಗಿಕೊಂಡು ಇಂಥ ಮಹತ್ಸಾಧನೆಗಳನ್ನು ಮಾಡಿದ ಎ ಎಂ ಜೋಸೆಫರು ೧೮-೮-೦೯೬೫ರಲ್ಲಿ ತೀರಿಕೊಂಡರು. ಆದರೆ ಇಂದು ಅವರನ್ನು ನೆನಪು ಮಾಡಿಕೊಳ್ಳುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರವೇ.

ಭಾನುವಾರ, ಫೆಬ್ರವರಿ 24, 2013

ತುಂಬೆ


ಬೆಳ್ಮುಗಿಲ ನೆಂಟ ತಂಗದಿರ
ತುಂಬೆಯದು ಮಣ್ಮನೆಯ ಬೆಳ್ಳಿಹೂ
ತುಂಬುವನು ಕುಂದುವನು ತಿಂಗಳನು ಬಾನಲ್ಲಿ
ತುಂಬೆಯದು ನಗುತಿಹುದು ಹಸಿರಲ್ಲಿ ಮೈಚೆಲ್ಲಿ
ತಿಂಗಳನ ಬೆಳಕಲ್ಲಿ ಜಗವೆಲ್ಲ ನಗುತಿಹುದು
ತುಂಬೆಗದು ಬೇಕಿಲ್ಲ ತನ್ನಿರವು ಗಿಡದಲ್ಲಿ
ತುಂಬು ಚಂದ್ರನ ಒಡಲು ಕಂಡು ಕೆರಳಿದೆ ಕಡಲು
ತುಂಬೆಯದು ತುಂಬುವುದು ಭೂಮಾತೆಯ ಮಡಿಲು
ತುಂಬೆಯ ಮೈಮೇಲೆ ಸುಳಿದು ಸುಯ್ಯುವ ಗಾಳಿ
ತಂಪೆರೆಯೆ ಹೇಳುವರು ಅದು ಚಂದ್ರ ತಂಗಾಳಿ
ಚಂದಿರನು ಮೇಲಿದ್ದು ಕಾಣುವನು ಜಗವೆಲ್ಲ
ತುಂಬೆಗದು ನಿಲುಕದು ಮಣ್ಣೊಳಿದೆ ಬೇರೆಲ್ಲ
ತುಂಬು ಜವ್ವನೆ ತುಂಬೆ ನಗುಮೊಗದ ಮೊಲ್ಲೆ
ತುಂಬಿಯನು ಬರಸೆಳೆದು ನಗಿಸಲೂ ಬಲ್ಲೆ
ನಿತ್ಯ ಕನ್ನಿಕೆ ತುಂಬೆ ನಗುವೆನ್ನ ಮನತುಂಬೆ
ತುಂಬಿಯೂ ತುಳುಕದಿಹ ವನಸುಮವ ನಾ ಕಾಂಬೆ

ಶನಿವಾರ, ಫೆಬ್ರವರಿ 23, 2013

ಬೂದಿ ಬುಧವಾರ


ಬೂದಿ ಬುಧವಾರ ಅಥವಾ ಆಷ್ ವೆನ್ಸ್ ಡೇ ಕ್ರೈಸ್ತರ ತಪಸ್ಸುಕಾಲದ ಪ್ರಾರಂಭದ ದಿನ. ಬೂದಿ ಎಂದರೆ ಬೆಂಕಿ ನಂದಿದ ಮೇಲೆ ಉಳಿಯುವ ಇಂಗಾಲ ವಸ್ತು ಅಲ್ಲವೇ? ಈ ಬೂದಿಗೂ ಬುಧವಾರಕ್ಕೂ ಅದಾವ ನಂಟು? ಈ ದಿನದ ವಿಶೇಷವಾದರೂ ಏನು?
ಶುಭಶುಕ್ರವಾರ ಅಥವಾ ಗುಡ್ ಫ್ರೈಡೇಗೆ ಮುಂಚಿನ ನಾಲ್ವತ್ತು ದಿನಗಳು ಕ್ರೈಸ್ತರಿಗೆ ತಪಸ್ಸಿನ ದಿನಗಳು. ಈ ಬುಧವಾರವೆಂಬ ಬಾಗಿಲ ಮೂಲಕವೆ ತಪಸ್ಸುಕಾಲಕ್ಕೆ ಪ್ರವೇಶ. ಇಂದಿನಿಂದ ಗುಡ್ ಫ್ರೈಡೇವರೆಗೂ ಕ್ರೈಸ್ತರು ತ್ಯಾಗಜೀವನ ನಡೆಸುತ್ತಾರೆ.
ಹಿಂದೆಲ್ಲ ಯೆಹೂದ್ಯ ಸಂಸ್ಕೃತಿಯಲ್ಲಿ ಜನರು ತಮಗೆ ಕೆಡುಕುಂಟಾದಾಗ ತಾವು ದೇವರಿಗೆ ವಿಮುಖರಾದ್ದರಿಂದಲೇ ಕಷ್ಟಕೋಟಲೆ ಅನುಭವಿಸಬೇಕಾಗಿ ಬಂತೆಂದು ಬಗೆದು ಪ್ರಾಯಶ್ಚಿತ್ತ ರೂಪವಾಗಿ ಮೈಗೆಲ್ಲ ಬೂದಿ ಬಳಿದುಕೊಂಡು ಉತ್ತಮ ದುಕೂಲಗಳನ್ನು ತೊರೆದು ನಾರುಮಡಿಯುಟ್ಟು ತಪಶ್ಚರ್ಯೆ ಕೈಗೊಳ್ಳುತ್ತಿದ್ದರು. ಅದನ್ನೇ ಇಂದು ಕ್ರೈಸ್ತರು ಸಾಂಕೇತಿಕವಾಗಿ ಆಚರಿಸುತ್ತಾರೆ.
ಕ್ರೈಸ್ತರೆಲ್ಲ ಚರ್ಚಿಗೆ ತೆರಳಿ ದೇವಾರಾಧನೆ ನಡೆಸಿ ಗುರುವರ್ಯರ ಮುಂದೆ ಸಾಲಾಗಿ ನಿಲ್ಲುತ್ತಾರೆ. ಗುರುವರ್ಯರು ಬೂದಿಬಟ್ಟಲಿನಿಂದ ಚಿಟಿಕೆ ಚಿಟಿಕೆ ಬೂದಿ ತೆಗೆದು ಭಕ್ತಾದಿಗಳ ಹಣೆಯ ಮೇಲೆ ತಿಲಕದಂತೆ ಶಿಲುಬೆ ಗುರುತು ಹಾಕುತ್ತಾ ’ಮಣ್ಣಿಂದ ಬಂದ ಕಾಯವಿದು, ಮರಳಿ ಮಣ್ಣಿಗೇ ಸೇರುವುದು’ ಎಂದು ಉದ್ಘೋಷಿಸುತ್ತಾರೆ. ಆ ಸಂದರ್ಭದಲ್ಲಿ ಗಾನವೃಂದದವರು ’ಮಣ್ಣಿನಿಂದ ಸೃಷ್ಟಿಯಾದ ಮನುಜನೇ ಮರೆಯಬೇಡ ಮರಳಿ ಸೇರ‍್ವೆ ಮಣ್ಣಿಗೆ, ಸುಳ್ಳು ಬೇಡ ಸತ್ಯ ಹಾದಿ ಹುಡುಕುವ, ದ್ವೇಷ ತ್ಯಜಿಸಿ ಐಕ್ಯದಿಂದ ಬಾಳುವ . . . ’ ಎಂದು ಹಾಡುತ್ತಾರೆ.
ಹಣೆಯ ಮೇಲಿನ ವಿಭೂತಿಯ ಅನುಭೂತಿ ಒಂದೆಡೆಯಾದರೆ ಗುರುಗಳ ಮಾತಿನ ಒಳಾರ್ಥ ಮತ್ತೊಂದೆಡೆ,  ಮನಕಲಕುವುದಕ್ಕೆ ಇನ್ನೇನು ತಾನೇ ಬೇಕು? ಜೀವನ ನಶ್ವರ, ಜೀವನ ಕ್ಷಣಿಕ, ಈ ಕೂಡಲೇ ಪಾಪಕ್ಕೆ ವಿಮುಖರಾಗಿ ದೇವರೆಡೆಗೆ ಅಭಿಮುಖರಾಗಬೇಕೆನ್ನುವ ಅರಿವು ತಪಶ್ಚರ್ಯೆಗೆ ನಾಂದಿಯಾಗುತ್ತದೆ. ತಪಶ್ಚರ್ಯೆ ಎಂದರೆ ಹಿಂದಿನಂತೆ ವನವಾಸಕ್ಕೆ ತೆರಳಿ ಒಂಟಿಕಾಲಲ್ಲಿ ನಿಂತು, ಪಂಚಾಗ್ನಿಯಲ್ಲಿ ಬೆಂದು ಮಂತ್ರ ಹೇಳುತ್ತಾ ತಪಸ್ಸು ಮಾಡಲು ಸಾಧ್ಯವೇ? ಇಂದಿನ ಕಾಲದ ಸಾಂಕೇತಿಕ ತಪಸ್ಸಿನ ರೀತಿಯೇ ಬೇರೆ. ಈ ದಿನಗಳಲ್ಲಿ ಜನ ದೈನಂದಿನ ಕೆಲಸಗಳನ್ನು ಕುಂದಿಲ್ಲದೆ ನಡೆಸುತ್ತಲೇ ವ್ಯಕ್ತಿಗತ ವಾಂಛೆಗಳನ್ನು ಬಿಟ್ಟುಬಿಡುತ್ತಾರೆ. ಮನರಂಜನೆಯಿಂದ ದೂರಾಗುತ್ತಾರೆ, ಚಟಗಳನ್ನು ತೊರೆಯುತ್ತಾರೆ, ಮಾಂಸಾಹಾರ ವರ್ಜಿಸುತ್ತಾರೆ, ಪಾರ್ಟಿಗಳು ಔತಣಕೂಟಗಳು ಇಲ್ಲವಾಗುತ್ತವೆ, ಮದ್ಯಸೇವನೆ ಧೂಮಪಾನ ಸಿನಿಮಾ ಗಡದ್ದು ಊಟಗಳ ಬದಲಿಗೆ ಒಂದೊತ್ತು ಉಪವಾಸ ಇಲ್ಲವೇ ಸಪ್ಪೆ ಸಾರನ್ನವೇ ಪರಮಾನ್ನವಾಗುತ್ತದೆ. ಆಭರಣಗಳು ಪೆಟ್ಟಿಗೆ ಸೇರುತ್ತವೆ, ಪ್ರಸಾಧನಗಳ ಬಳಕೆ ಕಡಿಮೆಯಾಗುತ್ತದೆ, ಬಟ್ಟೆಗಳಲ್ಲೂ ಸರಳತೆ ಕಾಣುತ್ತದೆ. ತಮಗೆ ತುಂಬಾ ಇಷ್ಟವಾದುದನ್ನು ತ್ಯಾಗ ಮಾಡುವುದೂ ಒಂದು ರೀತಿಯಲ್ಲಿ ತಪಸ್ಸೇ ಹೌದು.
ಕಂದಾಚಾರ, ಡಂಭಾಚಾರ, ಕುರುಡು ಕಟ್ಟಳೆ, ದರ್ಪ ದಬ್ಬಾಳಿಕೆಗಳಲ್ಲಿ ಕಳೆದುಹೋಗಿದ್ದ ಮನುಷ್ಯತ್ವವನ್ನು ಎತ್ತಿಹಿಡಿಯಲು ಯೇಸುಕ್ರಿಸ್ತನು ಎಷ್ಟೆಲ್ಲ ಯಾತನೆ ಅನುಭವಿಸಿರುವಾಗ, ಅದರ ಸ್ಮರಣೆಗಾಗಿ ನಾವು ಇಷ್ಟೂ ಮಾಡದಿದ್ದರೆ ಹೇಗೆ?