ಭಾನುವಾರ, ಡಿಸೆಂಬರ್ 30, 2012

ಸಾಮಾಜಿಕ ಪಿಡುಗು

ಸಿಗ್ಮಂಡ್ ಫ್ರಾಯ್ಡ್ ಅನ್ನೋ ಒಬ್ಬ ಮನೋವಿಜ್ಞಾನಿ ಈಡಿಪಸ್ ಕಾಂಪ್ಲೆಕ್ಸ್ (Oedipus complex) ಅನ್ನುವಂತ ಒಂದು ರೋಗಲಕ್ಷಣ ಮನುಷ್ಯನ ಸುಪ್ತ ಪ್ರಜ್ಞೆಯೊಳಗೆ ಸದಾ ಅಡಗಿರುತ್ತದೆಂದು ಹೇಳಿದ್ದಾನೆ. ಪ್ರತಿ ಮಗುವೂ ತನ್ನ ತಾಯಿಯನ್ನು ಲೈಂಗಿಕ ಸಂಗಾತಿಯಾಗಿ ಬಯಸುವುದೇ ಈಡಿಪಸ್ ಕಾಂಪ್ಲೆಕ್ಸ್.
ಗ್ರೀಕ್ ಕತೆಯೊಂದರಲ್ಲಿ ಬರುವ ಈ ಈಡಿಪಸ್ ಒಬ್ಬ ರಾಜನ ಮಗ. ಅವನು ಹುಟ್ಟುವಾಗಲೇ ಜೋತಿಷಿಗಳು ಈ ಮಗು ತಂದೆಗೆ ಕಂಟಕನಾಗುತ್ತಾನೆ ಎಂದು ಭವಿಷ್ಯ ನುಡಿಯುತ್ತಾರಂತೆ. ಅದಕ್ಕಾಗಿ ರಾಜ ಆ ಮಗುವನ್ನು ಕೊಂದುಬಿಡಬೇಕೆಂದು ಕಟುಕರಿಗೆ ಆಜ್ಞಾಪಿಸುತ್ತಾನೆ. ಮಗುವನ್ನು ಹೊತ್ತೊಯ್ದ ಕಟುಕರು ಅದರ ಮೇಲೆ ಕನಿಕರಗೊಂಡು ಅದರ ಹೆಬ್ಬೆರಳನ್ನಷ್ಟೇ ಕೊಯ್ದುಕೊಂಡು ಬೆಟ್ಟದ ಇಳಿಜಾರಿನಲ್ಲಿ ಮಗುವನ್ನು ಜಾರಿಸಿ ಬಂದುಬಿಡುತ್ತಾರೆ. ರಾಜನಿಗೆ ಮಗುವಿನ ಹೆಬ್ಬೆರಳನ್ನು ತೋರಿಸಿ ತಮ್ಮ ಕೆಲಸ ಆಯಿತೆಂದು ಹೇಳುತ್ತಾರೆ.
ಮುಂದೆ ಆ ಮಗು ಇನ್ನೊಬ್ಬ ರಾಜನ ಆಶ್ರಯದಲ್ಲಿ ಬೆಳೆದು ಅವನ ಉತ್ತರಾಧಿಕಾರಿಯೂ ಆಗಿ ರಾಜ್ಯವಿಸ್ತರಣೆಗೆ ತೊಡಗುತ್ತಾನೆ.  ಹೀಗೊಂದು ರಾಜ್ಯವನ್ನು ಅವನು ಗೆದ್ದಾಗ ಆ ರಾಜ್ಯದ ಪದ್ಧತಿಯಂತೆ ಅದರ ರಾಣಿ ಈಡಿಪಸನ ಹೆಂಡತಿಯಾಗುತ್ತಾಳೆ. ಒಮ್ಮೆ ಆ ರಾಣಿಯು ತನ್ನ ಹೊಸಗಂಡನ ಕಾಲಲ್ಲಿ ಹೆಬ್ಬೆರಳು ಕಾಣದೆ ಅವನ ಪೂರ್ವಾಪರಗಳನ್ನು ವಿಚಾರಿಸಿದಾಗ ತಾವಿಬ್ಬರೂ ತಾಯಿ ಮಗ ಎಂಬ ಅಂಶ ಬಯಲಾಗುತ್ತದೆ.
ಇಂಥಾ ಒಂದು ಈಡಿಪಸ್ ಕಾಂಪ್ಲೆಕ್ಸ್ ಉಲ್ಬಣಗೊಂಡ ಸ್ಥಿತಿಯನ್ನು ನಾವಿಂದು ನಮ್ಮ ಭವ್ಯ ಭಾರತ ದೇಶದಲ್ಲಿ ಕಾಣುತ್ತಿದ್ದೇವೆ. ನವದೆಹಲಿಯಲ್ಲಿ ಓಡುತ್ತಿರುವ ಬಸ್ಸಿನಲ್ಲೇ ಯುವತಿಯ ಮೇಲೆ ಅತ್ಯಾಚಾರ, ಹಾಸನದಲ್ಲಿ ಯುವಕನೊಬ್ಬ ತನ್ನ ಅತ್ತೆಯ ಮಗಳನ್ನೇ ಸ್ನೇಹಿತನಿಗೆ ಉಣಬಡಿಸಿದ ಸಂಗತಿ, ಕೇರಳದಲ್ಲಿ ತಂದೆಯೊಬ್ಬ ತನ್ನ ಕಾಮುಕ ಸ್ನೇಹಿತರೊಂದಿಗೆ ಸೇರಿ ಮಗಳನ್ನೇ ಭೋಗಿಸಿದ ವಿಚಾರ, ಕಾಸರಗೋಡಿನಲ್ಲಿ ಅಭಿಸಾರಿಕೆಯಾಗಿ ಬಂದ ಗೆಳತಿಯನ್ನು ಸ್ನೇಹಿತರೊಂದಿಗೆ ಸೇರಿಕೊಂಡು ವಂಚಿಸಿದ ಪರಿ ಇವನ್ನೆಲ್ಲ ಗಮನಿಸಿದರೆ ನಮ್ಮ ಮಹಾಭಾರತದ ಸಮಾಜವು ಎತ್ತ ಸಾಗುತ್ತಿದೆ ಎಂಬುದನ್ನು ಗುರುತಿಸಬಹುದಾಗಿದೆ.
ಭ್ರಷ್ಟಾಚಾರಕ್ಕಿಂತಲೂ ಅತ್ಯಾಚಾರವು ಇಂದು ನಮ್ಮ ಸಮಾಜದ ದೊಡ್ಡ ಪಿಡುಗಾಗಿದೆ. ಇದಕ್ಕೆ ಬಹುಶಃ ನಮ್ಮ ಸಿನೆಮಾಗಳು, ಅಂತರ್ಜಾಲದ ಆಸಕ್ತಿಗಳು, ವಿದ್ಯುನ್ಮಾನ ಸಲಕರಣೆಗಳು ಸಹಕಾರ ನೀಡುತ್ತಿವೆ.
ಈ ಸಾಮಾಜಿಕ ಪಿಡುಗನ್ನು ತೊಡೆದುಹಾಕಲು ಆಮೂಲಾಗ್ರ ಮನಪರಿವರ್ತನೆಯ ಅಗತ್ಯ ಇಂದು ಎದ್ದು ಕಾಣುತ್ತಿದೆ. ಧಾರ್ಮಿಕ ಸಂಸ್ಥೆಗಳು ವಿದ್ಯಾಕೇಂದ್ರಗಳು ಒಂದು ದೂರಗಾಮಿ ಯೋಜನೆಯನ್ನು ಹಾಕಿಕೊಂಡು ಸಮಾಜದಲ್ಲಿ ಸದ್ಬುದ್ದಿಯನ್ನು ತರಲು ಶ್ರಮಿಸುವ ಅಗತ್ಯವಿದೆ. ಸಾಕ್ಷರತೆಯಲ್ಲಿ ಮುಂದಿರುವ ಕೇರಳ ರಾಜ್ಯದಲ್ಲೇ ವಿನಾಶಕಾರೀ ಕೀಚಕ ಪ್ರವೃತ್ತಿಯು ಕಾಣುತ್ತಿದೆಯೆಂದ ಮೇಲೆ ಇದಕ್ಕೆ ಬೇರೆ ರೀತಿಯ ಉಪಾಯವೇ ಬೇಕೇನೋ.

ಭಾನುವಾರ, ನವೆಂಬರ್ 25, 2012

ನನ್ನ ಬಾಲ್ಯಕಾಲದ ಕೆಲ ನೆನಪುಗಳು


ನನ್ನ ಬಾಲ್ಯಕಾಲದ ಹೆಚ್ಚಿನ ದಿನಗಳು ಸಂತ ರಾಯಪ್ಪರ ಗುರುಮಠದ ಹಿಂಬದಿಯಲ್ಲಿನ ನೀಲಗಿರಿ ಮರದ ತೋಪಿನಲ್ಲೇ ಕಳೆದವು. ಆ ತೋಪಿನಲ್ಲಿ ನೀಲಗಿರಿಯಷ್ಟೇ ಅಲ್ಲ ಹೊಂಗೆ, ನೇರಳೆ, ಮಾವು, ಬೇವು, ಸಿರಿಗಂಧ, ಕತ್ತಿಕಾಯಿ, ಹೂವರಸಿ, ಸಾರುವೆ, ಬಾದಾಮಿ, ಜಾಲಿ, ಸೀಬೆಕಾಯಿ, ಸೀತಾಫಲ, ಚಕ್ಕೋತ ಹಾಗೂ ಇನ್ನೂ ಎಷ್ಟೋ ಹೆಸರು ಗೊತ್ತಿಲ್ಲದ ಮರಗಳಿದ್ದವು. ಕೆಲವು ಭಾರೀ ಗಾತ್ರದವು ಇನ್ನು ಕೆಲವು ಮರಕೋತಿ ಆಡಬಲ್ಲಂತವು. ಇನ್ನೂ ಕೆಲವು ಮರವೆನ್ನಲಾಗದ ಗಿಡವೂ ಎನ್ನಲಾಗದ ಸಣ್ಣಗಾತ್ರ ಸಸಿಗಳು. ಇವುಗಳ ನಡುವೆ ಸಣ್ಣಸಣ್ಣ ಪೊದೆಗಳು ಬಳ್ಳಿಗಳು ಕಾರೆಗಿಡ ಗಣಿಕೆಹುಲ್ಲು ಗರಿಕೆಹುಲ್ಲು ಅರಳು ತುಂಬೆ ಅಡ್ಡಿಗೆ ಮುಟ್ಟಿದರೆಮುನಿ ಇಂಥವು. ಇವೆಲ್ಲ ಬಹು ಸಹಜವಾಗಿ ಸ್ವೇಚ್ಛೆಯಾಗಿ ಬೆಳೆದು ಸದಾ ಹಸಿರಾಗಿ ಕಂಗೊಳಿಸುತ್ತಾ ಪ್ರಕೃತಿಯಲ್ಲಿ ತಾವೇ ತಾವಾಗಿದ್ದವು. ನಿಸರ್ಗ ಸೌಂದರ್ಯ ಇಲ್ಲಿ ಸಂತಸ ಸಂಭ್ರಮ ಲವಲವಿಕೆಯಿಂದ ಓಲಾಡುತ್ತಿತ್ತು.
ಸೆಮಿನರಿಯ ಮುಂದುಗಡೆಯಲ್ಲಿದ್ದ ಗಿಡಮರಗಳು ಕೃತಕವಾಗಿ ಬೆಳೆಸಿದ್ದಂತವು. ಅಲ್ಲಿ ಅಶೋಕ, ಕ್ರಿಸ್ಮಸ್, ಮೇಫ್ಲವರ್ ಮುಂತಾದ ಮರಗಳು ಲಿಲಿ, ಆಸ್ಟರ್, ಡೇಲಿಯಾ, ಕ್ರೋಟನ್, ರೋಜಾ, ಮನಿಪ್ಲಾಂಟ್ ಮುಂತಾದ ಕುಂಡಗಿಡಗಳು ನಳನಳಿಸುತ್ತಿದ್ದವು. ಇವಕ್ಕೆ ತಪ್ಪದೇ ಪ್ರತಿ ದಿನ ನೀರುಣಿಸಬೇಕಿತ್ತು. ಹಿಂದಿನ ತೋಟದಲ್ಲಿ ಬಾಳೆಗಿಡ ಟೊಮೆಟೊ ಬದನೆ ಬೆಂಡೆ ಸಪೋಟ ಗಿಡಗಳು ಪಡವಲ ಹಾಗಲ ಕುಂಬಳ ಬಳ್ಳಿಗಳು, ಇವಕ್ಕೆಲ್ಲ ತೊಪ್ಪೆಗೊಬ್ಬರ ಹಾಕಿ ಪಾತಿಕಟ್ಟಿ ಪೈಪು ಮೂಲಕ ನೀರು ಹಾಯಿಸಿ ಪೋಷಿಸುತ್ತಿದ್ದ ಸೋಲೂರಿನ ಕೃಷ್ಣ, ಇದ ನಡುವೆ ಬಾಬ್ಬಿ ಎಂಬ ಭರ್ಜರಿ ನಾಯಿ, ಚಪ್ಪಲಿ ಹೊಲೆಯುವ ಹನುಮಂತಯ್ಯ, ಧೋಬಿ ಜೋಸೆಪ್ಪು, ಹಾಲು ಕರೆಯೊ ಮಂದಿ, ಕುಸುನಿಮನೆ ಕೆಲಸಗಾರರು ಇವಾವುದೂ ನನ್ನ ನೆನಪಿನಿಂದ ಮಾಸಿಲ್ಲ.
ಬೆಳಗಾಗೋಕೆ ಮುಂಚೇನೇ ನಮ್ಮ ತಾತ ಅಮೃತರಾಜ್ (ಅಬ್ಬಯ್ಯ) ಎದ್ದು ಓಡಾಡಿ ಕ್ರಿಸ್ತರಾಜರ ದೇವಸ್ಥಾನದ ಗಂಟೇನ ಢಣ್ ಅನ್ನಿಸೋರು. ಮಣಭಾರದ ಗಂಟೇನ ಎಳುದ್ರೆ ಸುಲಭಕ್ಕೆ ಜಗ್ಗಲ್ಲ, ತುಂಬಾನೇ ಶಕ್ತಿ ಬೇಕು, ಅದುನ್ನೇನೂ ಅವರು ಸುಮ್ನೆ ಢಣಢಣಾಂತ ಎಳೆದಾಡ್ತಿರಲಿಲ್ಲ, ತ್ರಿಕಾಲಮಂತ್ರ ಅನ್ತ ಮಣಮಣ ಹೇಳ್ಕೊಂಡು ಮೂರು ಗಂಟೆ ಹೊಡೀತಿದ್ರು ಹೀಗೇ ಸ್ವಲ್ಪ ಹೊತ್ತು ಸುಮ್ನಿದ್ದು ಮತ್ತೆ ಮೂರು ಗಂಟೆ ಹೊಡೀತಿದ್ರು. ಮೂರುಸಾರಿ ಹೀಗೆ ಗಂಟೆ ಹೊಡೆದು ಆಮೇಲೆ ಕೊನೇಗೆ ಢಣಢಣಾ ಅನ್ನಿಸೋರು. ಗಂಟೆ ಹೊಡೆದ್ರೆ ಹೀಗೆ ಒಂದೇ ಸಮನೆ ಒಂದಷ್ಟು ಹೊತ್ತು ಹೊಡೀಬೇಕು ಆ ಸುಮಧುರ ನಿನಾದ ಮುಂಜಾನೆ ಆ ಹೊತ್ತಿನಲ್ಲಿ ಬಹುದೂರದವರೆಗೂ ಅನುರಣಿಸಬೇಕು, ಅದರ ಅನುಭವವೇ ಅನನ್ಯ.
ಚುಮುಚುಮು ಬೆಳಗಾಗ್ತಿದ್ದಂತೆ ಚಿನಕುರುಳಿ ಗುಬ್ಬಿಯೊಂದು ಕೊಂಬೆರೆಂಬೆಗಳ ಮೇಲೆ ಕುಳಿತು ಬಾಲ ಕುಣಿಸ್ತಾ ಪಿಟಿಪಿಟಿಪಿಟಿ ಅನ್ತ ಸದ್ದು ಮಾಡೋದು. ಒಂದು ಚೋಟುದ್ದ ಇರೋ ಹಕ್ಕಿ ಅದೆಷ್ಟು ಚುರುಕಾಗಿ ಎಲೆಗಳ ಮಧ್ಯೆ ಪುಟುಪುಟು ಓಡಾಡ್ಕೊಂಡು ಅದೇನು ಹೂ ನೆಕ್ತದೋ ತಿಂತದೋ ತಿಳೀವಲ್ದು. ಅದೊಂಥರಾ ಕೆಂಪು ಹೂ ಅದೇ ಮೈಯೆಲ್ಲ ಕೆಂಪು ಕೂದಲಿದ್ದು ಹೊಳೆಯುವ ಹೂ, ಗಿಡ ನೋಡಿದ್ರೆ ಹುಣಿಸೇ ಮರದ ಚಿಕ್ಕ ಸಸಿ ಇದ್ದಂಗೆ ಆ ಗಿಡದಲ್ಲಿ ಈ ಹಕ್ಕಿ ಆಟ.
ಅದೆಲ್ಲೋ ಯಾವ್ದೋ ಮರದಲ್ಲಿ ಕೋಗಿಲೆ ಕುಂತ್ಕಂಡು ಕುಹೂ ಅನ್ತ ಕೂಗ್ತಿತ್ತು. ಇನ್ನೆಲ್ಲೋ ಯಾವುದೋ ಮರದಿಂದ ಅದಕ್ಕುತ್ತರ ಬರುತ್ತಿತ್ತು. ಅದೆಲ್ಲಿಂದಲೋ ಒಂದು ವಿಚಿತ್ರ ಹಕ್ಕಿ ಬಾಲ ಎತ್ತಾಕ್ಕೊಂಡು ಕಿರುಚೋಕೆ ಶುರುಮಾಡೋದು. ಕಣ್ಣು ಸುತ್ತಲೂ ಬಿಳಿ ಚುಕ್ಕಿಗಳಿರೋ ಆ ಹಕ್ಕಿ ಟಿಟಿಟಿಟೂ ಟಿಟಿಟಿಟೂ ಅನ್ನುತ್ತಾ ಕೂಗಾಡಿ ಅರಚಾಡಿ ತನ್ನ ಹತ್ತಿರ ಬಂದ ಕಾಗೆಗಳನ್ನು ಓಡಿಸುತ್ತಿತ್ತು. ಆ ಹಕ್ಕಿಯ ಕೂಗು ಅಪ್ಯಾಯಮಾನ.
ಇಷ್ಟರ ನಡುವೆ ಇಬ್ಬನಿ ಸುರಿದ ಹುಲ್ಲಿನ ಮೆಲೆ ಗೊರವಂಕಗಳು ಕುಳಿತು ಹುಳಾ ಹಿಡೀತಿದ್ವು. ನೀಲಗಿರಿ ಮರದ ಮೇಲೆ ಗಿಳಿಗಳು ಚಕ್ಕಂದ ಅಡುತಿದ್ವು, ಗುಡಿಯ ಗಂಟೆ ಗೋಪುರದಲ್ಲಿ ಪಾರಿವಾಳಗಳು ಗುಟುರು ಹಾಕ್ತಿದ್ವು. ಇನ್ಯಾವುದೋ ಮೂಲೆಯಿಂದ ಮುತ್ತಿನಶೆಟ್ಟಿ ಮುತ್ತಿನಶೆಟ್ಟಿ ಅನ್ತ ಹಾಡಿಕೊಳ್ಳುವ ಹಕ್ಕಿ.
ಅರುವತ್ತು ಎಪ್ಪತ್ತರ ದಶಕದ ಆ ಸುಂದರ ಬೆಂಗಳೂರು ಈಗೆಲ್ಲಿದೆ?

ಸೋಮವಾರ, ನವೆಂಬರ್ 19, 2012

ಶಿರಡಿಯ ಊಟ


ಅವರಂಗಾಬಾದ್ ನಿಂದ ಬೆಂಗಳೂರಿಗೆ ನೇರ ರೈಲು ಇಲ್ಲ. ಸುಮಾರು ನೂರು ಕಿಲೊಮೀಟರು ದೂರದಲ್ಲಿರುವ ಅಹಮದ್ ನಗರ ಅಥವಾ ಕೋಪರ್ಗಾಂವ್ ತಲಪಿದರೆ ದೆಹಲಿಯಿಂದ ಬರುವ ಕರ್ನಾಟಕ ಎಕ್ಸ್‌ಪ್ರೆಸ್ ಹಿಡಿಯಬಹುದು ಎಂದು ನನ್ನ ಲೆಕ್ಕಾಚಾರ. ಹೇಗೂ ಬಂದಿದ್ದೀವಿ ಶಿರಡೀನೂ ನೋಡಿಬಿಡೋಣ ಎಂಬುದು ಅಮ್ಮಮಗಳ ಅಭಿಪ್ರಾಯ. ಆದೂ ಆಗಿಬಿಡಲಿ ಎಂದು ಬಸ್ ಹತ್ತಿಕೊಂಡು ಶಿರಡಿ ತಲಪಿದಾಗ ರಾತ್ರಿ ಹತ್ತು ಗಂಟೆ. ಆಹಾ ಏನು ಸುಂದರ ತಾಣ, ಎಷ್ಟು ಒಳ್ಳೆಯ ಜನ, ಪ್ರಶಾಂತ ವಾತಾವರಣ, ಜನರೆಲ್ಲ ಪ್ರೀತಿವಿಶ್ವಾಸದಿಂದ ಕರೆದೂ ಕರೆದೂ ತಮ್ಮಲ್ಲೇ ವಾಸ್ತವ್ಯ ಹೂಡಿ ಎಂದು ಆತಿಥ್ಯ ಮೆರೆಯುವ ಪರಿ ಕಂಡು ಬೆಕ್ಕಸಬೆರಗಾದೆವು.
ಹೆಂಗಸರ ಜೊತೆ ಲಗೇಜು ಹೊತ್ತುಕೊಂಡು ರೂಮುಗಳಿಗಾಗಿ ಪರದಾಡಿದ್ದೇ ಬಂತು. ಇರುವುದೊಂದೇ ರೂಮು, ಇನ್ನು ಸ್ವಲ್ಪ ಹೊತ್ತು ಹೋದರೆ ಅದೂ ಇಲ್ಲ, ಸಾವಿರ ರೂಪಾಯಿ ಮಡಗಿ, ಬೆಳಗ್ಗೆ ಹತ್ತು ಗಂಟೆಗೆ ಚೆಕ್ಕೌಟು ಎಂಬ ಒಲವಿನ ಮಾತುಗಳಿಗೆ ಸೋಲದವರುಂಟೇ? ಸೋಲಲೇಬೇಕಾಯಿತು.
ಯಾವುದೇ ಪುಣ್ಯಕ್ಷೇತ್ರದ ಅಥವಾ ಪ್ರವಾಸಿ ತಾಣದ ಪಾಡೇ ಹೀಗೆ. ಪ್ರವಾಸಿಗರು ಬರುವುದೇ ಸುಲಿಗೆಗಾಗಿ ಎಂದು ಭಾವಿಸುವ ಸ್ಥಳೀಯರು.
ಸತ್ರದಲಿ ನೇಮದಿಂದಿರಲಿಕೆಡೆಯುಂಟು . . ಕಾಲಿಟ್ಟೆಡೆ ಕುಂಕುಮ ಬಳೆಯ ಚೂರುಗಳಿವೆ ಎಚ್ಚರ, ಗೋಡೆಗೆ ತಾಗದಿರಿ ಮೈಲಿಗೆಯಾದೀತು, ಮನೆಯಿಂದ ತಂದ ಹೊದಿಕೆ ಇದೆ ತಾನೇ ಹಾಸಿಕೊಳ್ಳಿ, ಬಚ್ಚಲು ವಾಸನೆಯೆಂದು ನೀರು ಚೆಲ್ಲದಿರಿ ಆಮೇಲೆ ತತ್ವಾರ, ಬಿಸಿನೀರು ಕೇಳಬೇಡಿ ಗೀಸರ್ ಇದೆ ಅಲಂಕಾರಕ್ಕೆ, . .  ಹತ್ತಾಯ್ತು ಹೊರಡೆನೆ ತೆರಳಿದೊಡೆ ಪಾರುಪತ್ಯದವ ಮೆಚ್ಚುವನು ಮಂಕುತಿಮ್ಮ.
ಬೆಳಗ್ಗೆ ರೂಮು ಖಾಲಿ ಮಾಡಿ ಐದು ಕಿಲೊಮೀಟರು ದೂರದ ರಾಹತಾ ಎಂಬ ಊರಿಗೆ ಸಾರೋಟಿನಲ್ಲಿ ಹೋಗಿ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚಿನಲ್ಲಿ ಪೂಜೆಗೆ ಕುಳಿತಾಗ ಏನೋ ನೆಮ್ಮದಿ. ಮರಾಠಿ ಭಾಷಿಕರ ನಡುವೆ ಆಪ್ತ ಪೂಜಾರ್ಪಣೆ.
ಸಾಯಿಬಾಬಾ ಮಂದಿರದಲ್ಲಿ ಚಪ್ಪಲಿ, ಮೊಬೈಲು, ಕ್ಯಾಮೆರಾಗೆ ಪ್ರವೇಶವಿಲ್ಲ, ಇವನ್ನೆಲ್ಲ ಧರಿಸಿಕೊಂಡು ನಾನು ಪ್ರವೇಶವಾಗದೆ ಇವರಿಬ್ಬರನ್ನು ಮಾತ್ರವೇ ಪ್ರವೇಶಗೊಳಿಸಿದೆ. ಆ ಸಾಲಂತೂ ಸುಮಾರು ಒಂದು ಕಿಲೋಮೀಟರಿನಷ್ಟು ಉದ್ದದ ಅನಕೊಂಡಾ ಆಗಿತ್ತೆಂದೂ ದರ್ಶನಪ್ರಾಪ್ತಿಯಿಂದ ಆಗುವುದೇನೂ ಇಲ್ಲವೆಂದೂ ಸ್ವಲ್ಪಹೊತ್ತಿನಲ್ಲೇ ಅವರು ಹೊರಬಂದರು. ಆದರೆ ಭೋಜನಗೃಹದವರು ಮಾತ್ರ ಬೇಜಾರು ಮಾಡಿಕೊಳ್ಳಬೇಡಿ ಊಟ ಮಾಡಿಕೊಂಡೇ ಹೋಗಿ ಎಂದು ನೇರವಾಗಿ ನಮ್ಮ ಹೊಟ್ಟೆಯನ್ನೇ ಆಹ್ವಾನಿಸಿದ್ದರಿಂದಲೂ ಹೊರಗಡೆ ಇದ್ದ ಹೋಟೆಲು ಖಾನಾವಳಿಗಳು ಸಕತ್ ಹೈಜೀನ್ ಆಗಿದ್ದರಿಂದಲೂ ವಿಧಿಯಿಲ್ಲದೆ ಬಾಬಾ ಊಟದ ಮನೆಯೊಳಕ್ಕೆ ತೂರಿಕೊಂಡೆವು. ಒಟ್ಟಿಗೆ ಎರಡೂವರೆ ಸಾವಿರ ಮಂದಿ ಕೂತು ಊಟ ಮಾಡಬಹುದಾದ ಬಹುದೊಡ್ಡ ಅಂಕಣ. ಪೂರಿ ಅನ್ನ ಸಾರು ಗೊಜ್ಜು ಒಂದು ಸಿಹಿ ಹೊಟ್ಟೆ ತುಂಬುವಷ್ಟು ಬಡಿಸಿ ಕಳಿಸಿದರು. ಬಾಬಾ ಚೆನ್ನಾಗಿರಲಿ.
ಅಲ್ಲಿಂದ ಒಂದು ಶೇರಿಂಗ್ ರಿಕ್ಷಾ ಮಾಡಿಕೊಂಡು ನಾಲ್ಕು ಗಂಟೆಯ ವೇಳೆಗೆ ಕೋಪರಗಾಂವ್ ತಲಪಿದ ಸ್ವಲ್ಪ ಹೊತ್ತಿಗೇ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಬಂತು.

ಬುಧವಾರ, ಅಕ್ಟೋಬರ್ 31, 2012

ರಾಕ್ ಗಾರ್ಡನ್

ನಯೀದಿಲ್ಲಿ ಐಎಸ್‌ಬಿಟಿಯಲ್ಲಿ ಹರ‍್ಯಾನಾ ಬಸ್ ಹತ್ತಿ ಚಂಡೀಗಡದಲ್ಲಿ ಇಳಿದಾಗ ಮೂರುಗಂಟೆ ಆಗಿತ್ತು. ಅಲ್ಲಿಂದ ಸಿಕ್ಕಿದ್ ವೋಲ್ವೊ ಬಸ್ ಹತ್ತಿ ಹೈಕೋರ್ಟ್ ಕಡೆ ಹೊರಟೆ. ಅಲ್ಲೇನೂ ನಾನು ಕೋರ್ಟ್ ಮೆಟ್ಟಿಲು ಹತ್ತಬೇಕಾಗಿರಲಿಲ್ಲ. ಯಾವಾಗ್ ಹೋದ್ರೂ ರಾಕ್‌ ಗಾರ್ಡನ್ ನೋಡೋಕೆ ಆಗಿರಲಿಲ್ಲ, ಈ ಸಾರಿ ಎಂಗಾನಾ ಮಾಡಿ ನೋಡೇ ತೀರ್ಬೇಕು ಅನ್ತ ವೊಂಟಿದ್ದೆ. ಸೆಕ್ಟರ್ ೧೬-೧೭ರ ನಡುವೆ ಬಸ್ಸು ಹೋಗ್ತಾ ಇತ್ತು. ಎಡಕ್ಕೆ ಗುಲಾಬಿ ಉದ್ಯಾನ. ಹೈಕೋರ್ಟ್ ತಾವ ಇಳಿದೇಟ್ಗೇ ಎಡಕ್ಕೆ ಸಿಗೋದೇ ಕಲ್ಲುದ್ಯಾನ.
ಅತ್ತೆಗೊಂದ್ದ ಕಾಲ ಕತ್ತೇಗೊಂದ್ ಕಾಲ ಅನ್ತಾರಲ್ಲ ಅಂಗೆ ಇಲ್ಲಿ ಬಂಡೆಗೂ ಒಂದು ಪಾರ್ಕ್ ಮಾಡವ್ರೆ. ಕಬ್ಬನ್ ಪಾರ್ಕಿನಾಗೆ ಬ್ಯಾಂಡ್ ಸ್ಟ್ಯಾಂಡಿನಿಂದ ಕೆಳೀಕ್ಕೆ ಅಂದ್ರೆ ಲಾನ್ ಟೆನಿಸ್ ಕೋರ್ಟಿಗೋಗೋವ್ನಾಗ ಒಂದ್ ಬಂಡೆ ಸಿಕ್ತೈತಲ್ಲ ಆ ತರಾ ಪಾರ್ಕಿನಾಗೆ ಬಂಡೆ ಅಂದ್ಕೋಬ್ಯಾಡಿ, ಇದೊಂತರಾ ಬಂಡೆಗಳೇ ಕಲ್ಲುಗಳೇ ತುಂಬಿರೋವಂತ ಪಾರ್ಕು. ಗಿಡ ಮರ ಇದ್ರೂನೂವೆ ಕಲ್ಲಿಗಿರೋ ಪ್ರಾಮುಖ್ಯತೆ ಅವಕ್ಕಿಲ್ಲ. ಕಲ್ಲಿನದೇ ಕೋತಿಗಳಿವೆ, ಕಲ್ಲಿನದೇ ನಾಯಿಗಳಿವೆ, ಕಲ್ಲಿನದೇ ಗೊಂಬೆಗಳಿವೆ, ಲಂಗದಾವಣಿ ಹಾಕ್ಯಂಡ್ ನಿಂತ್ಕಂಡಿರೋ ಹುಡುಗೀರೂ ಕಲ್ಲೇ. ಅಲ್ಲಿ ಇಲ್ಲಿ ಬಿದ್ದಿರೋ ಬಂಡೇಗಳು, ಗುಂಡುಕಲ್ಲುಗಳು, ಬೆಣಚುಕಲ್ಲು, ಪಿಂಗಾಣಿಚೂರು, ಬಳೆಚೂರು ಎಲ್ಲ ಬಳಸಿ ಜೋಡಿಸಿ ಮನುಷ್ಯಾಕಾರದಲ್ಲಿ ಪ್ರಾಣಿಗಳಾಕಾರದಲ್ಲಿ ಮಾಡಿಟ್ಟವರೆ. ಕೃತಕ ಜಲಪಾತಗಳು ಕೋಟೆ ಗೋಡೆಗಳು, ಸುರಂಗಮಾರ್ಗ, ಏರು ಇಳಿ, ಕಿರುಓಣಿ, ಮೇಲುಪ್ಪರಿಗೆ, ನೆಲಮಾಳಿಗೆಯಲ್ಲಿಳಿದು ಉರುಟು ಕಲ್ಲುಗಳ ಮೇಲೆ ಜೋಪಾನವಾಗಿ ಕಾಲಿಟ್ಟು ಹರಿಯೋ ನೀರು ದಾಟಿಕೊಂಡು ಅಬ್ಬಾ ಅನ್ತ ಉಸಿರು ಬಿಟ್ಟು ತಂಪಾದ ಗಾಳಿ ಆಸ್ವಾದಿಸುತ್ತಾ ಪರ್ಪಂಚ ಮರೆಯೋದೇ ಒಂದು ಸುಖ.

ಶನಿವಾರ, ಅಕ್ಟೋಬರ್ 20, 2012

ಜೆ ಎಫ್ ಫ್ಲೀಟ್

೧೮೪೭ರಲ್ಲಿ ಲಂಡನ್ನಿನಲ್ಲಿ ಜನಿಸಿದ ಜಾನ್ ಫೇಯ್ತ್‌ಫುಲ್ ಫ್ಲೀಟ್ ಅವರು ೧೮೬೭ರಲ್ಲಿ ಐಸಿಎಸ್ ಅಧಿಕಾರಿಯಾಗಿ ಇಂಡಿಯಾ ದೇಶದ ಪಶ್ಚಿಮ ಕರಾವಳಿಗೆ ನಿಯುಕ್ತರಾದರು. ಇಂಡಿಯಾ ದೇಶದ ಭಾಷೆ ಸಂಸ್ಕೃತವೆಂದು ತಿಳಿದು ಲಂಡನ್ ವಿಶ್ವವಿದ್ಯಾಲಯದಲ್ಲಿ ಅದನ್ನು ವಿಶೇಷವಾಗಿ ಅಭ್ಯಾಸ ಮಾಡಿಕೊಂಡು ಬಂದಿದ್ದರು. ಮೊದಲಿಗೆ ಬೊಂಬಾಯಿ ಪ್ರಾಂತ್ಯಕ್ಕೆ ಅಸಿಸ್ಟೆಂಟ್ ಕಲೆಕ್ಟರ್ ಆಗಿ ಆನಂತರದ ದಿನಗಳಲ್ಲಿ ದಕ್ಷಿಣ ವಿಭಾಗದ ನ್ಯಾಯಾಧೀಶ, ಶಿಕ್ಷಣ ಇನ್ಸ್‌ಪೆಕ್ಟರ್ ಆಗಿ, ರಾಜತಂತ್ರಜ್ಞರಾಗಿ ಕರ್ತವ್ಯ ನಿರ್ವಹಿಸಿದರು. ಕೆಲಸದ ನಿಮಿತ್ತ ಪಶ್ಚಿಮ ಕರಾವಳಿಯ ವ್ಯಾಪಕ ಪ್ರವಾಸ ಮಾಡಿದಾಗ ಇಲ್ಲಿ ಸಂಸ್ಕೃತಕ್ಕಿಂತಲೂ ಬೇರೆಯದಾದ ಕನ್ನಡವೆಂಬ ಜನರಾಡುವ ಭಾಷೆ ಇದೆಯೆಂಬುದು ಅವರ ಅರಿವಿಗೆ ಬಂತು.

ಬೊಂಬಾಯಿ ಪ್ರಾಂತ್ಯದ ಅಸಂಖ್ಯ ಕಲ್ಲಿನ ಮತ್ತು ತಾಮ್ರದ ಶಾಸನಗಳತ್ತ ಆಸಕ್ತಿ ತಳೆದು ಅವುಗಳ ಅಧ್ಯಯನಕ್ಕೆ ತೊಡಗಿದ ಫ್ಲೀಟರು ವಿದ್ವತ್ ಪತ್ರಿಕೆಗಳಲ್ಲಿ ಈ ಕುರಿತು ಲೇಖನಗಳನ್ನು ಬರೆಯತೊಡಗಿದರು. ಈ ಒಂದು ಅಧ್ಯಯನದ ಫಲವಾಗಿ ಅವರು ಕನ್ನಡ ಭಾಷೆಯತ್ತ ಸೆಳೆಯಲ್ಪಟ್ಟರು. ಕನ್ನಡವನ್ನು ಆಮೂಲಾಗ್ರವಾಗಿ ಅಭ್ಯಸಿಸಿ ಹಳಗನ್ನಡದಿಂದ ಹಿಡಿದು ಕನ್ನಡದ ಆಧುನಿಕ ಪ್ರಯೋಗಗಳವರೆಗೆ ಎಲ್ಲವನ್ನೂ ಕರತಲಾಮಲಕ ಮಾಡಿಕೊಂಡರು. ಕನ್ನಡವನ್ನು ಹೆಚ್ಚುಹೆಚ್ಚಾಗಿ ಪ್ರೀತಿಸತೊಡಗಿದ ಫ್ಲೀಟರು ಸದರನ್ ಮರಾಠಾ ಎಂದು ಕರೆಸಿಕೊಳ್ಳುತ್ತಿದ್ದ ಪ್ರದೇಶವೆಲ್ಲ ಕನ್ನಡನಾಡಿನ ಭಾಗವೇ ಎಂದು ಗುರುತಿಸಿದರು. ಅಲ್ಲದೆ ಆ ಪ್ರದೇಶವನ್ನಾಳಿದವರೆಲ್ಲ ಕನ್ನಡ ರಾಜರೇ ಎಂದು ಸಹ ನಿರೂಪಿಸಿದರು.

೧೮೮೨ರಲ್ಲಿ ಬೊಂಬಾಯಿ ಪ್ರಾಂತ್ಯದ ಗೆಝೆಟಿಯರಿನಲ್ಲಿ ಅವರ ಲೇಖನ "ದಿ ಡೈನಾಸ್ಟೀಸ್ ಆಫ್ ದ ಕ್ಯಾನರೀಸ್ ಡಿಸ್ಟ್ರಿಕ್ಟ್ಸ್ ಆಫ್ ದ ಬಾಂಬೇ ಪ್ರೆಸಿಡೆನ್ಸಿ ಫ್ರಂ ದಿ ಅರ್ಲಿಯೆಸ್ಟ್ ಹಿಸ್ಟಾರಿಕಲ್ ಟೈಮ್ಸ್ ಟು ದ ಮುಸಲ್ಮಾನ್ ಕಾನ್‌ಕ್ವೆಸ್ಟ್" (ಇತಿಹಾಸಾರಂಭ ಕಾಲದಿಂದ ಮುಸ್ಲಿಂ ದಾಳಿಯವರೆಗಿನ ಬೊಂಬಾಯಿ ಪ್ರಾಂತ್ಯದ ಕನ್ನಡ ಜಿಲ್ಲೆಗಳ ರಾಜವಂಶಗಳು) ಪ್ರಕಟವಾಯಿತು. ಅದು ಮುಂದೆ ೧೮೯೫ರಲ್ಲಿ ಪುಸ್ತಕರೂಪದಲ್ಲಿಯೂ ಪ್ರಕಟವಾಯಿತು. ಶಾಸನಗಳ ಅಧ್ಯಯನದಿಂದ ತಾವು ಕಂಡುಕೊಂಡ ಸತ್ಯದ ಆಧಾರದಲ್ಲಿ ಅವರು ಈ ಚರಿತ್ರೆಯನ್ನು ಸಂಕಲಿಸಿದರು. ಕಾವ್ಯಗಳು, ಸ್ಥಳಪುರಾಣಗಳು ಹಾಗೂ ನಾಣ್ಯಗಳ ಅಧ್ಯಯನಕ್ಕಿಂತಲೂ ಶಾಸನಗಳ ಅಧ್ಯಯನದಿಂದ ನಿಖರವಾದ ಚರಿತ್ರೆ ಅರಿಯಬಹುದೆಂದು ಅವರು ನಂಬಿದ್ದರು. ಹಾಗಾಗಿ ಅವರ ಈ ಕೃತಿಯು ವಸ್ತುನಿಷ್ಠವಾಗಿದ್ದು ಕದಂಬರು, ಗಂಗರು, ಕಲಚುರಿ, ಯಾದವರು, ಚಾಲುಕ್ಯರು, ರಾಷ್ಟ್ರಕೂಟರು, ಸೇವುಣರು ಮುಂತಾದ ರಾಜಮನೆತನಗಳ ಮತ್ತವರ ಕಾಲ ಮತ್ತು ಪ್ರಾದೇಶಿಕ ಪರಿಧಿಗಳನ್ನು ವಿಶದವಾಗಿ ವಿಶ್ಲೇಷಿಸಿದೆ.

೧೮೮೩ರಲ್ಲಿ ಅಂದಿನ ಇಂಡಿಯಾ ಸರ್ಕಾರವು ಅವರಿಗಾಗಿ ಶಾಸನತಜ್ಞ ಹುದ್ದೆಯನ್ನು ಸೃಷ್ಟಿಸಿತು. ಆಮೇಲೆ ಅವರು ಶಿಲಾಶಾಸನಗಳ ಕುರಿತು ಆಳ ಸಂಶೋಧನೆ ನಡೆಸಿ ಹಲವಾರು ಲೇಖನಗಳನ್ನೂ ಪುಸ್ತಕಗಳನ್ನೂ ಪ್ರಕಟಿಸಿದರು. "ಪಾಳಿ, ಸಂಸ್ಕೃತ ಮತ್ತು ಹಳಗನ್ನಡ ಶಾಸನಗಳು" ಮತ್ತು "ಮೊದಲ ಗುಪ್ತ ರಾಜರ ಮತ್ತವರ ಉತ್ತರಾಧಿಕಾರಿಗಳ ಶಾಸನಗಳು" ಫ್ಲೀಟರ ಸಾಧನೆಯ ಗರಿಗಳು. ಇವಲ್ಲದೆ ಅವರು ದಿ ರಾಯಲ್ ಏಶಿಯಾಟಿಕ್ ಸೊಸೈಟಿಯ ಪತ್ರಿಕೆಗೆ ಹಾಗೂ ‘ಇಂಡಿಯನ್ ಆಂಟಿಕ್ವರಿ’ ಪತ್ರಿಕೆಗೆ ಲೇಖನಗಳನ್ನು ಬರೆಯುತ್ತಿದ್ದರು. ಅಲ್ಲದೆ ಅವರು ೧೯೧೦ರಲ್ಲಿ ಪ್ರಕಟವಾದ ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾದ ಹನ್ನೊಂದನೇ ಪ್ರಕಟಣೆಯ ಹದಿನಾಲ್ಕನೇ ಸಂಪುಟಕ್ಕೆ "ಹಿಂದೂ ಕಾಲನಿರ್ಣಯ" ಹಾಗೂ "ಶಾಸನಗಳು" ಕುರಿತಂತೆ ಮಾಹಿತಿ ತುಂಬಿದರು. ೧೮೮೫-೧೮೯೨ರ ಅವಧಿಯಲ್ಲಿ ಅವರು ‘ಇಂಡಿಯನ್ ಆಂಟಿಕ್ವರಿ’ಯ ಸಂಪಾದಕರಾಗಿ ೧೪ರಿಂದ ೨೦ರವರೆಗಿನ ಸಂಪುಟಗಳನ್ನು ಪ್ರಕಟಿಸಿದರು. ಶಾಸನಗಳ ಅವರ ಅವಲೋಕನದಿಂದ ಲಿಪಿ ಬೆಳೆದ ದಾರಿ, ಅಯಾ ಕಾಲದ ಆಡಳಿತ ಪದ್ಧತಿ ಹಾಗೂ ಆಚಾರ ವಿಚಾರಗಳನ್ನು ತಿಳಿಯಲಾಯಿತು. ಅಲ್ಲದೆ ಈ ಮೂಲಕ ಫ್ಲೀಟರು ಕಾಲನಿರ್ಣಯಕ್ಕೆ ಒಂದು ಸರಿಯಾದ ಬುನಾದಿ ಹಾಕಿಕೊಟ್ಟರು. ಅಲ್ಲಿ ತನಕ ವಿಕ್ರಮಾದಿತ್ಯ ಶಕೆ, ಶಾಲಿವಾಹನ ಶಕೆಗಳನ್ನು ಮನಸಿಗೆ ತೋಚಿದಂತೆ ಲೆಕ್ಕಿಸಲಾಗುತ್ತಿತ್ತು.

ಸರ್ಕಾರಿ ಅಧಿಕಾರಿಯಾಗಿ ಬಿಡುವಿಲ್ಲದ ಕೆಲಸಗಳನ್ನು ನಿಭಾಯಿಸುತ್ತಲೇ ಅವರು ತಮ್ಮ ಆಸಕ್ತಿಯ ಕನ್ನಡದ ಕೆಲಸವನ್ನೂ ಅಷ್ಟೇ ಶ್ರದ್ಧೆಯಿಂದ ಮಾಡಿದರು. ಈ ಹಿನ್ನೆಲೆಯಲ್ಲಿ ಅವರು ಸರ್ಕಾರಿ ಅಧಿಕಾರಿಯಾಗಿಯಾಗಿದ್ದುದರ ಜೊತೆಗೆ ಒಬ್ಬ ಅನುಪಮ ಇತಿಹಾಸಜ್ಞರಾಗಿ ಭಾಷಾತಜ್ಞರಾಗಿ ರೂಪುಗೊಂಡರು. ೧೮೯೭ರಲ್ಲಿ ಐಸಿಎಸ್ ಹುದ್ದೆಯಿಂದ ನಿರ್ಗಮಿಸಿ ಇಂಗ್ಲೆಂಡಿಗೆ ವಾಪಸಾದರು. ಅಲ್ಲಿದ್ದುಕೊಂಡೇ ಶಾಸನಗಳ ಪೂರ್ಣಕಾಲೀನ ಅಧ್ಯಯನದಲ್ಲಿ ತೊಡಗಿ ರಾಯಲ್ ಏಶಿಯಾಟಿಕ್ ಸೊಸೈಟಿ ಆಫ್ ಗ್ರೇಟ್ ಬ್ರಿಟನ್ ಅಂಡ್ ಐರ್ಲೆಂಡ್ ಪತ್ರಿಕೆಗೆ ಹಾಗೂ ಎಫಿಗ್ರಾಫಿಯಾ ಇಂಡಿಕಾದ ಹೊತ್ತಿಗೆಗಳಿಗೆ ಮೌಲಿಕ ಲೇಖನಗಳನ್ನು ಬರೆದರು. ಹೀಗೆ ಅವರು ತಮ್ಮ ಜೀವಿತ ಕಾಲದಲ್ಲಿ ಇನ್ನೂರಕ್ಕೂ ಮಿಗಿಲಾದ ಲೇಖನಗಳನ್ನು ಬರೆದರು. ಆ ಮೂಲಕ ಕನ್ನಡಿಗರ ಭವ್ಯ ಇತಿಹಾಸದ ದಿವ್ಯ ಪತಾಕೆಯನ್ನು ಜಗತ್ತಿಗೆಲ್ಲ ತೋರಿದರು. ಫ್ಲೀಟರ ಈ ಅಮೋಘ ಕಾರ್ಯದಿಂದ ಇತಿಹಾಸದ ಪುಸ್ತಕಗಳ ಪಠ್ಯವೆಲ್ಲ ಆಮೂಲಾಗ್ರವಾಗಿ ಬದಲಾಯಿತೆಂಬುದರಲ್ಲಿ ಅತಿಶಯೋಕ್ತಿಯಿಲ್ಲ.

ಇಷ್ಟಲ್ಲದೆ ಫ್ಲೀಟರು ಜನಸಾಮಾನ್ಯರ ನೆಲೆಯ ಆಳಕ್ಕಿಳಿದು ಯಾವ ಜಾನಪದ ವಿದ್ವಾಂಸನಿಗೂ ಕಡಿಮೆಯಿಲ್ಲದಂತೆ ಲಾವಣಿಗಳನ್ನು ಸಂಗ್ರಹಿಸಿ ಆ ಮೂಲಕ ಕನ್ನಡ ನಾಡಿನ ಇತಿಹಾಸವನ್ನು ಕಟ್ಟಿದರು. ಕಿತ್ತೂರ ಈರವ್ವ, ಸಂಗೊಳ್ಳಿರಾಯಣ್ಣ ಮುಂತಾದವರನ್ನು ಹಾಗೂ ನರಗುಂದದ ಬಂಡಾಯ, ಬಾದಾಮಿ ಕೋಟೆಯ ಬಂಡಾಯ ಮುಂತಾದ ಜಾನಪದ ಸಾಹಿತ್ಯವನ್ನು ಮುದ್ರಣದ ಬಂಗಾರದ ಚೌಕಟ್ಟಿಗೆ ತಂದು ಕನ್ನಡಿಗರ ಶೌರ್ಯವನ್ನು ಲೋಕಕ್ಕೆಲ್ಲ ಸಾರಿದ ಕಾರಣಕ್ಕೆ ಕನ್ನಡಿಗರು ಅವರಿಗೆ ಚಿರಋಣಿಗಳಾಗಿರಬೇಕು.

೧೯೧೭ರಲ್ಲಿ ಅವರು ನಿಧನರಾಗುವ ಮುನ್ನ ಇಂಡಿಯನ್ ಆಂಟಿಕ್ವೆರಿಯಲ್ಲಿ ’ಲಾವಣಿ’ಗಳನ್ನು ಸಂಗೀತ ಸಮೇತ ಪ್ರಕಟಿಸಿದರು. ಬಾದಾಮಿ ಕೋಟೆಯು ನಾಶವಾದುದರ ಕುರಿತಾದ ಲಾವಣಿಯ ತುಣುಕು ಇಲ್ಲಿದೆ:

ಭಾದೂರ ಕಟ್ಟಿಸಿದಂಥ ಬಾದಾಮಿ ಕಿಲೇಕ ಬಂತೊ ಪ್ರಳಯಕಾಲಾ |

ಸುತ್ತ ರಾಜ್ಯದೊಳು ಮೇಲಾದ ಕಿಲೆಯ ಆಯಿತೊ ನೆಲದ ಪಾಲಾ ||ಪಲ್ಲ||

ಕಿಲೇದ ಚಮತ್ಕಾರ ಹೇಳತೀನಿ ಕೇಳರಿ ಮಜಕೂರಾ

ಗುಡ್ಡದ ಮೇಲೆ ಗಡಾ ಕಾಣತದ ಭಾಳ ಅಪರಂಪಾರಾ

ಮುನ್ನೂರ ಅರವತ್ತು ಕಿಲೇವು ಕಟ್ಟಿಸಿದ ಭಾದೂರ ಸಾಹೇಬರಾ

ಕುಂಟ ಕುರುಡರಿಗೆ ಅನ್ನಕ್ಷೇತ್ರ ಅಲಿ ಇಟ್ಟಿದ ಕರಾರಾ

ಬಸರ್ಹೆಂಗಸರಿಗೆ ಎರಡಾಳಿನ ಕೂಲಿ ಕೊಟ್ಟನ ಮಜೂರಾ

ಒಂಬತ್ತು ವರುಷ ಕಟ್ಟಿದ ಜನ ಹನ್ನೆರಡು ಸಾವಿರಾ

ಸುತ್ತ ಅಳವಾರಿ ಕಬ್ಬಿಣ ದ್ವಾರಗಸಿ ಇದ್ದವನೂ

ಕಲ್ಲು ಗಚ್ಚಿಲೆ ಕಟ್ಟಿದ ಗೋಡೀಗೆ ಬರದಾರ ಚಿತ್ತಾರಾ ||ಚಾಲ||

ಚಿತ್ರಕಲ್ಲುದುರ್ಗದ ತಾಯಿ

ಹುಬ್ಬಳ್ಳಿಯ ಕಥೋಲಿಕರಾದ ಮಾನ್ಯ ಫ್ರಾನ್ಸಿಸ್ ಎಂ ನಂದಗಾಂವ್ ಅವರು ಕ್ರೈಸ್ತ ಸಾಹಿತ್ಯಲೋಕಕ್ಕೆ ಅಪರಿಚಿತರೇನಲ್ಲ. ಪ್ರಜಾವಾಣಿಯ ಸಂಪಾದಕ ವರ್ಗದಲ್ಲಿರುವ ಅವರ ಬರಹಗಳು ಒಳ್ಳೆ ಹದ ಕಂಡಿವೆ. ಅವರ ಐದು ಕಥಾಸಂಕಲನಗಳೂ ಎರಡು ಅನುವಾದಿತ ಕೃತಿಗಳೂ ವೈಜ್ಞಾನಿಕ ಲೇಖನಗಳೂ ಪ್ರಕಟವಾಗಿವೆ. ಜಾನಪದ ಅಧ್ಯಯನವಾಗಿ ’ಅನ್ನಮ್ಮ ಬೆಟ್ಟದ ಶಿಲುಬೆಯಾತ್ರೆ’ ಒಂದು ವಿಶಿಷ್ಟ ಹೊಳಹು ನೀಡಿದ ಪುಸ್ತಕ.

ಇವರ ಇತ್ತೀಚಿನ ಪುಸ್ತಕ ’ಹಾರೊಬೆಲೆಯ ಚಿತ್ರಕಲ್ಲುದುರ್ಗದ ಮಾತೆ’.

ಅರಿತೋ ಅರಿಯದೆಯೋ ಮರಿಯಾಮಾತೆಯ ಒಂದು ಸ್ವರೂಪದ ಮೂಲಕ ಒಂದು ಜಾನಪದ ಪಳೆಯುಳಿಕೆಯನ್ನು ತಮ್ಮ ಎದೆಯ ಹಣತೆಯಲ್ಲಿ ಕಾಪಾಡುತ್ತಾ ಬಂದಿರುವ ಹಾರೋಬೆಲೆಯ ಕ್ರೈಸ್ತ ಜನಪದರಿಗೆ ಈ ಪುಸ್ತಕವನ್ನು ಅರ್ಪಿಸಿರುವುದು ಅತ್ಯಂತ ವಿಶಿಷ್ಟವಾಗಿದೆ. ಡೋಂಗಿ ಜಾನಪದ ವಿದ್ವಾಂಸರ ನಡುವೆ ಫ್ರಾನ್ಸಿಸರ ಈ ಕೃತಿ ಅತ್ಯಂತ ಮೇರುಮಟ್ಟದಲ್ಲಿ ನಿಲ್ಲುವುದಾಗಿದೆ. ಈ ಪುಸ್ತಕದ ಮೂಲಕ ಪ್ರೌಢಜಾನಪದ ಅಧ್ಯಯನಕ್ಕೆ ಮುಂದಾಗಿರುವ ಫ್ರಾನ್ಸಿಸರ ನಿಲುವನ್ನು ಸ್ವತಃ ಬೆಂಗಳೂರು ಮಹಾಧರ್ಮಾಧ್ಯಕ್ಷರಾದ ಡಾ. ಬೆರ್ನಾಡ್ ಮೊರಾಸ್ ಅವರು ಮೆಚ್ಚಿಕೊಂಡು ಶುಭ ಹಾರೈಸಿದ್ದಾರೆ. ಮೊನ್ನೆಯಷ್ಟೇ ತೀರಿಕೊಂಡ ಹಿರಿಯ ಜಾನಪದ ತಜ್ಞ ಪ್ರೊ. ಡಿ ಲಿಂಗಯ್ಯನವರು ಈ ಪುಸ್ತಕಕ್ಕೆ ಮುನ್ನುಡಿ ಬರೆಯುತ್ತಾ ಇದೊಂದು ಜನಾಂಗೀಯ ಅಧ್ಯಯನವೆಂದು ಕರೆದಿದ್ದಾರೆ. ಮತ್ತೊಬ್ಬ ಜಾನಪದ ವಿದ್ವಾಂಸ ಮೀರ್ ಸಾಬಿಹಳ್ಳಿ ಶಿವಣ್ಣನವರು ನಲ್ಮೆಯ ಮಾತುಗಳನ್ನಾಡುತ್ತಾ ಹೈದರಾಲಿ ಮತ್ತು ಟಿಪ್ಪುಸುಲ್ತಾನರ ಕಾಲದಲ್ಲಿ ಮೈಸೂರು ಆಸುಪಾಸಿನಲ್ಲಿ ಕ್ರೈಸ್ತರ ಸ್ಥಿತಿಗತಿಗಳು ಹೇಗಿದ್ದವು ಎಂಬುದನ್ನು ವಿವರಿಸುವ ಪರಿ ಇಲ್ಲಿಯವರೆಗೂ ಯಾರ ಗಮನಕ್ಕೂ ಬಾರದ ಅನೇಕ ಸಂಗತಿಗಳನ್ನು ತಿಳಿಸುವಲ್ಲಿ ಸಫಲವಾಗಿವೆ ಎಂದು ಹೇಳಿರುವುದನ್ನು ಇಲ್ಲಿ ಉಲ್ಲೇಖಿಸಲೇಬೇಕು.

ಪುಸ್ತಕದ ಒಡಲಲ್ಲಿ ಆರು ಅಧ್ಯಾಯಗಳಿದ್ದು ಫ್ರಾನ್ಸಿಸರು ಮರಿಯಾಮಾತೆಯ ಚಿತ್ರದುರ್ಗದ ನಂಟು, ಚಿತ್ರಕಲ್ಲು ಮಾತೆಯ ಪದಗಳ ವರ್ಗೀಕರಣ, ಕ್ರೈಸ್ತ ಜಾನಪದ ಸಂಸ್ಕೃತಿ ಇತಿಹಾಸಗಳ ಹಾಗೂ ಕನ್ನಡ ಜಾನಪದ ಕಥನ ಕಾವ್ಯಗಳ ಬೆಳಕಿನಲ್ಲಿ ಅಧ್ಯಯನ ಮಾಡಿ ಓದುಗರಿಗೆ ವಸ್ತುನಿಷ್ಠ ಮಾಹಿತಿ ನೀಡಿದ್ದಾರೆ. ಸುಂದರವಾದ ರೇಖಾಚಿತ್ರಗಳು ಪುಸ್ತಕದ ಅಂದ ಹೆಚ್ಚಿಸುತ್ತಾ ಓದುಗನಿಗೆ ಆಸಕ್ತಿ ಮೂಡಿಸುತ್ತಿವೆ. ಪ್ರತಿಯೊಂದು ಅಧ್ಯಾಯದ ಕೊನೆಯಲ್ಲಿ ಆಯಾ ಅಧ್ಯಾಯದ ಅಡಿ ಟಿಪ್ಪಣಿಗಳನ್ನು ಕೊಡಲಾಗಿದೆ.

ಕನ್ನಡ ಕ್ರೈಸ್ತ ಜಾನಪದದ ಅಧ್ಯಯನದ ವ್ಯಾಪ್ತಿಗೆ ಇನ್ನೂ ಸೇರಬೇಕಾದ ಬೀದರದ ಭಜನೆ ಸಂಸ್ಕೃತಿಯಂತೆಯೇ ಹಾರೋಬೆಲೆಯ ಚಿತ್ರಕಲ್ಲು ದುರ್ಗದ ಮಾತೆಯ ಸ್ವರೂಪದ ಹಿನ್ನೆಲೆ ಕುರಿತೂ ಅನೇಕ ಸತ್ಯಗಳು ಕಾಲಗರ್ಭದಲ್ಲಿ ಹೂತುಹೋಗಿವೆ. ನಂದಗಾಂವ್ ಫ್ರಾನ್ಸಿಸರು ಈ ಕುರಿತು ಅಪಾರ ಆಸಕ್ತಿ ತಳೆದು ಶಾಸ್ತ್ರೀಯವಾಗಿ ಅಭ್ಯಸಿಸಿ ಜಾನಪದ ತೌಲನಿಕ ಒರೆಗೆ ಹಚ್ಚಿರುವುದು ಕನ್ನಡ ಕ್ರೈಸ್ತರು ತಮ್ಮ ಇತಿಹಾಸದ ಕುರಿತಂತೆ ಹೆಮ್ಮೆ ಪಟ್ಟುಕೊಳ್ಳುವುದಕ್ಕೆ ಕಾರಣವಾಗಿದೆ.

ಇದೇ ಅಕ್ಟೋಬರ್ ಏಳರಂದು ಜಪಮಾಲೆ ಮಾತೆಯ ಹಬ್ಬದಂದು ಹಾರೋಬೆಲೆಯಲ್ಲಿ ಈ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಗಿದೆ. ಚಿತ್ರಕಲ್ಲುದುರ್ಗದ ಮಾತೆಯು ಹಾರೋಬೆಲೆಯ ಆಸ್ತಿಕ ಜನರ ಕಣ್ಮಣಿಯಾಗಿರುವಂತೆಯೇ ಅದರ ಸಾಂಸ್ಕೃತಿಕ ಅಧ್ಯಯನದ ಈ ಪುಸ್ತಕವೂ ಅವರ ಅಭಿಮಾನದ ಮಾಸ್ಟರ್ ಪೀಸ್ ಆಗಲೆಂದು ಆಶಿಸುತ್ತೇನೆ.

ಕನ್ನಡದ ಸ್ಥಿತಿಗತಿ


ಕನ್ನಡವು ಎರಡು ಸಾವಿರ ವರ್ಷಗಳ ಇತಿಹಾಸವಿರುವ ಒಂದು ಸಂಪದ್ಭರಿತ ಭಾಷೆ. ನಮ್ಮ ಈ ಕನ್ನಡ ಭಾಷೆಯಲ್ಲಿ ಒಂದು ಸಾವಿರ ವರ್ಷಗಳಿಗೆ ಮುನ್ನವೇ ಕವರತ್ನರು ಮೈದಳೆದಿದ್ದಾರೆ, ಮಹಾಕಾವ್ಯಗಳು ಉದ್ಭವಿಸಿವೆ. ಹಳೆಗನ್ನಡ ನಡುಗನ್ನಡ ಹೊಸಗನ್ನಡಗಳ ಭವ್ಯ ಪರಂಪರೆಯಲ್ಲಿ ಹಲವಾರು ಉತ್ತಮ ಸಾಹಿತ್ಯಗಳು, ಸ್ಫೂರ್ತಿದಾಯಕ ಆಚಾರವಿಚಾರಗಳು, ಹೆಮ್ಮೆ ತರುವ ರಾಜಾಳ್ವಿಕೆಗಳು ನಡೆದುಬಂದಿವೆ. ಇಂದಿನ ಇಪ್ಪತ್ತು ಇಪ್ಪತ್ತೊಂದನೇ ಶತಮಾನಗಳಲ್ಲಿ ಕನ್ನಡವು ತನ್ನ ಉಚ್ಛ್ರಾಯ ಸ್ಥಿತಿಯನ್ನು ಕಂಡಿದೆ. ನಮ್ಮ ದೇಶದ ಹೆಮ್ಮೆಯ ಸಾಹಿತ್ಯ ಪುರಸ್ಕಾರವಾದ ಜ್ಞಾನಪೀಠ ಪ್ರಶಸ್ತಿಯ ಹೆಚ್ಚಿನ ಪಾಲು ಕನ್ನಡಕ್ಕೆ ದೊರೆತಿದೆ. ಇದಕ್ಕೆ ಕಿರೀಟಪ್ರಾಯ ಎಂಬಂತೆ ಕನ್ನಡವು ಶಾಸ್ತ್ರೀಯ ಭಾಷೆ ಎಂದು ಬಿರುದು ಹೊತ್ತಿದೆ.

ಆರೂವರೆ ಕೋಟಿ ಕನ್ನಡಿಗರು ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಲ್ಲಿ ಹಾಗೂ ವಿಶ್ವದೆಲ್ಲೆಡೆ ಕನ್ನಡದ ಕಂಪನ್ನು ಹಾಗೂ ಕನ್ನಡ ಜನರ ಸೌಜನ್ಯಪರ ಸ್ನೇಹಪರ ಬಾಂಧವ್ಯವನ್ನು ಹರಡುತ್ತಿದ್ದಾರೆ. ವಿವಿಧ ಧರ್ಮ, ಸಂಸ್ಕೃತಿ, ಪ್ರದೇಶಭೇದ ಎಲ್ಲವನ್ನೂ ಕನ್ನಡತನವು ಪ್ರೀತಿಯಿಂದ ಬೆಸೆದಿದೆ. ಕನ್ನಡದ ಪ್ರಾಚೀನ ಸಂಸ್ಕೃತಿ, ಪರಂಪರೆ, ಉತ್ಕೃಷ್ಟ ಸಾಹಿತ್ಯಗಳು ಎಲ್ಲ ಕನ್ನಡಿಗರಿಗೆ ರೋಮಾಂಚಕ ಭಾವನೆಗಳ ಸೆಲೆಯಾಗಿವೆ. ಅವನ್ನೆಲ್ಲ ಅವರು ಅತ್ಯಂತ ಅಮೂಲ್ಯವೆಂದು ಭಾವಿಸುತ್ತಾರೆ.

ಕನ್ನಡನಾಡಿನ ನಿಸರ್ಗಸೌಂದರ್ಯ, ಪ್ರಾಕೃತಿಕ ಸಂಪನ್ಮೂಲಗಳು, ಅರಣ್ಯಗಳು, ಸಸ್ಯಸಂಪತ್ತು, ಪ್ರಾಣಿಸಂಕುಲ, ನದಿ ತೊರೆ ಜಲಪಾತಗಳು, ಬೆಟ್ಟ ಘಟ್ಟ ಬಯಲತಾಣಗಳು, ತೆಂಗು ಕಂಗು ರಾಗಿ ಜೋಳ ನೆಲಗಡಲೆಗಳು, ಮಲ್ಲಿಗೆ ಸಂಪಿಗೆ ಜಾಜಿ ಪುನುಗುಗಳು, ಸಿರಿಗಂಧ ಬಂಗಾರಗಳು, ಗುಡಿ ಚರ್ಚು ಮಸೀದಿಗಳು ಕನ್ನಡದ ನೆಲವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸಿವೆ.
ಕನ್ನಡದ ನಿಯತಕಾಲಿಕೆಗಳು ತಮ್ಮ ಸೌಂದರ್ಯಕ್ಕೆ ಮಾತ್ರವಲ್ಲದೆ ನಿಷ್ಪಕ್ಷಪಾತ ನಿರೂಪಣೆಗೆ ಹೆಸರಾಗಿವೆ. ಕನ್ನಡ ಸಿನಿಮಾಗಳು ಉತ್ತಮ ಅಭಿರುಚಿಯವಾಗಿದ್ದು ವಿಚಾರ ಪ್ರಚೋದಕವೂ ಉತ್ತಮ ಮನರಂಜನಾತ್ಮಕವೂ ಕಲಾತ್ಮಕವೂ ಆಗಿವೆ. ಕನ್ನಡ ನಾಡಿನ ವಿದ್ಯಾಸಂಸ್ಥೆಗಳಲ್ಲಿ ಕಲಿಯಲು ದೇಶದೆಲ್ಲೆಡೆಯಿಂದ ಜನರು ಧಾವಿಸಿ ಬರುತ್ತಾರೆ. ಕನ್ನಡಿಗರ ಸೌಜನ್ಯಪರ ನಡವಳಿಕೆಗಳು ಆದರ ಪ್ರೀತಿಯ ಉಪಚಾರಗಳು ಕನ್ನಡ ನೆಲದ ಸೌಹಾರ್ದದ ವಾತಾವರಣಗಳು ದೇಶದೆಲ್ಲೆಡೆ ಮನೆಮಾತಾಗಿವೆ. ಎಲ್ಲರನ್ನೂ ’ಇವರು ನಮ್ಮವರು’ ಎಂದು ಭಾವಿಸುವ ಪರಿಶುದ್ಧ ಮಾನವಪ್ರೀತಿಗೆ ಸಮನಾದುದು ಬೇರೆ ಏನಿದೆ? ಅದೇ ಕನ್ನಡಿಗರ ಬಲು ಹಿರಿಮೆ.

ಇಷ್ಟೆಲ್ಲ ಮಹಾನ್ ಪರಂಪರೆ ಕನ್ನಡಕ್ಕಿದ್ದರೂ ಅದರ ಇಂದಿನ ಸ್ಥಿತಿ ಬಲು ಭಯ ಹುಟ್ಟಿಸುವಂತಿದೆ. ಕನ್ನಡಿಗರ ಸೌಜನ್ಯವನ್ನು ದೌರ್ಬಲ್ಯವೆಂದು ಪರಿಗಣಿಸಲಾಗುತ್ತಿದೆ. ಅವರ ಶಾಂತಿಪ್ರಿಯತೆಯ ದುರ್ಲಾಭ ಪಡೆದು ಅವರನ್ನು ಆತಂಕಕ್ಕೀಡು ಮಾಡುವ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ. ಉದಾರೀಕರಣ, ಔದ್ಯಮೀಕರಣಗಳ, ಬಂಡವಾಳ ಹೂಡಿಕೆಯ ನೆವದಲ್ಲಿ ಇಲ್ಲಿ ಬೇರೂರುತ್ತಿರುವವರು ಸ್ಥಳೀಯ ಸಂಸ್ಕೃತಿಗೆ ಪೋಷಕರಾಗುತ್ತಿಲ್ಲ. ಪರಿಸ್ಥಿತಿಯ ಲಾಭ ಪಡೆದು ಪರಿಸರವನ್ನು ಹಾಳುಗೆಡವುವ ಹುನ್ನಾರ ಎಲ್ಲೆಡೆ ನಡೆದಿದೆ. ಹಿಂದೀಯು ರಾಷ್ಟ್ರಭಾಷೆ ಎಂಬ ನೆವವೊಡ್ಡಿ ಕನ್ನಡದ ಮೇಲೆ ಸವಾರಿ ಮಾಡುತ್ತಿದೆ. ಕನ್ನಡವನ್ನು ಕಲಿಯದೆಯೇ ಕನ್ನಡನಾಡಿನಲ್ಲಿ ಜೀವಿಸಲು ಸಾಧ್ಯ ಎಂಬುದು ಸಾರ್ವತ್ರಿಕವಾಗುತ್ತಿದೆ. ಕನ್ನಡವನ್ನು ದ್ವೇಷಿಸುವ ಕೀಳಾಗಿ ಕಾಣುವ ಪ್ರವೃತ್ತಿ ಹೆಚ್ಚುತ್ತಿದೆ. ಮಾತುಗಾರಿಕೆಯಲ್ಲಿ ನಾಮಫಲಕಗಳಲ್ಲಿ ಕರಪತ್ರಗಳಲ್ಲಿ ಜಾಹಿರಾತುಗಳಲ್ಲಿ ಕನ್ನಡ ಕಾಣಿಸುತ್ತಿಲ್ಲ.

ಇನ್ನು ಕನ್ನಡ ಮನೆಮಾತಿನ ಜನರೂ ಕನ್ನಡತನವನ್ನು ಮರೆಯುತ್ತಿದ್ದಾರೆ. ತಾವು ನೆಲೆನಿಂತ ಸ್ಥಳದಲ್ಲಿ ಕನ್ನಡವನ್ನು ಕನ್ನಡತನವನ್ನು ತೋರುವ ಬದಲಿಗೆ ಎದುರಿಗೆ ಕಂಡ ವ್ಯಕ್ತಿಯ ಜಾಯಮಾನಕ್ಕೆ ತಕ್ಕಂತೆ ರೂಪಾಂತರವಾಗುತ್ತಿದ್ದಾರೆ. ಕನ್ನಡಿಗರ ಮಾತುಗಾರಿಕೆ ಸಂಭಾಷಣೆಗಳಲ್ಲಿ ಕನ್ನಡದ ಪದಗಳ ಪ್ರಯೋಗ ಕಡಿಮೆಯಾಗುತ್ತಿದೆ. ಕನ್ನಡದ ಪತ್ರಿಕೆಗಳನ್ನು ಪುಸ್ತಕಗಳನ್ನು ಓದುವವರು ಕಡಿಮೆಯಾಗುತ್ತಿದ್ದಾರೆ. ಕನ್ನಡದ ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆಯಿದೆ. ನಮ್ಮ ಪ್ರವಾಸಿ ತಾಣಗಳನ್ನು ಬಿಟ್ಟು ನಾವು ಹೊರನಾಡುಗಳಿಗೆ ಪ್ರವಾಸ ಹೋಗುತ್ತೇವೆ. ಇತರ ಕನ್ನಡಿಗರೊಂದಿಗೆ ಇಂಗ್ಲಿಷಿನಲ್ಲಿ ಮಾತಾಡುವುದು ನಮಗೆ ಹೆಮ್ಮೆ ಉಂಟುಮಾಡುತ್ತದೆ. ಹೆಚ್ಚಿನ ಕನ್ನಡಿಗರಿಗೆ ಕನ್ನಡದಲ್ಲಿ ತಪ್ಪಿಲ್ಲದೆ ಬರೆಯುವುದು ಸಾಧ್ಯವಾಗುತ್ತಿಲ್ಲ. ಎಷ್ಟೋ ಕನ್ನಡಿಗರು ಕನ್ನಡವನ್ನು ತಪ್ಪುತಪ್ಪಾಗಿ ಉಚ್ಚರಿಸುತ್ತಾರೆ ಅಥವಾ ತಪ್ಪುತಪ್ಪಾಗಿ ಮಾತಾಡುತ್ತಾರೆ. ತಪ್ಪುತಪ್ಪಾದ ಬರವಣಿಗೆಗಳನ್ನು ಅವು ಹೇಗಿದೆಯೋ ಹಾಗೆ ನಾವು ಒಪ್ಪಿಕೊಂಡುಬಿಡುತ್ತೇವೆ. ಕನ್ನಡಿಗರು ತಮ್ಮ ಮಕ್ಕಳು ಅಮ್ಮಾ ಅಪ್ಪಾ ಎಂದರೆ ತಬ್ಬಿಬ್ಬಾಗುತ್ತಾರೆ ಆದರೆ ಮಮ್ಮೀ ಡ್ಯಾಡೀ ಎಂದು ಕರೆಯುವಾಗ ಪುಳಕಗೊಳ್ಳುತ್ತಾರೆ. ಮಕ್ಕಳೂ ಸಹಾ ಮಾತೃಭಾಷೆ ಕನ್ನಡದಲ್ಲಿ ಮಾತನಾಡಲು ತಳಮಳ ಪಡುತ್ತಾರೆ.
ಕನ್ನಡಿಗರಲ್ಲಿ ಕನ್ನಡತನಕ್ಕಿಂತ ಜಾತಿ ಧರ್ಮ ಪ್ರದೇಶಗಳ ಭಾವನೆಗಳು ಮುಖ್ಯವಾಗುತ್ತವೆ. ಕನ್ನಡತನದ ಆಚರಣೆಯು ಎಷ್ಟೋ ವೇಳೆ ಪ್ರದರ್ಶನದಂತೆ ಭಾಸವಾಗುತ್ತದೆ. ಎಷ್ಟೋ ಜನರಿಗೆ ಕನ್ನಡದ ಕೂಗು ಹೊಟ್ಟೆಪಾಡಿನ ವಿಚಾರವಾಗಿದೆ. ಗಾಜಿನ ಮನೆಯವರಿಗೆ ಕನ್ನಡದ ಬಾವುಟವು ಕಲ್ಲೇಟಿನಿಂದ ರಕ್ಷೆ ನೀಡುತ್ತದೆಂದರೆ ಕನ್ನಡಿಗನು ಕಲ್ಲುತೂರುವ ದುಷ್ಟನೆಂದಲ್ಲವೇ? ಇಂದು ಕನ್ನಡವನ್ನು ಪ್ರೀತಿಯಿಂದ ಅಪ್ಪಿಕೊಳ್ಳುವವರಿಲ್ಲ ಒಪ್ಪಿಕೊಳ್ಳುವವರಿಲ್ಲ. ಆಳ್ ಕನ್ನಡ ತಾಯ್ ಬಾಳ್ ಕನ್ನಡ ತಾಯ್ ಎಂಬ ಕವಿವಾಣಿಯು ಸವಕಲಾಗಿ ಬೆಲೆಯಿಲ್ಲವಾಗಿದೆ.

ಬುಧವಾರ, ಆಗಸ್ಟ್ 22, 2012

ಕೀರ್ತನಾಂಜಲಿ

ಇತ್ತೀಚೆಗೆ ನಾನು ನೋಡಿದ ಪುಸ್ತಕಗಳಲ್ಲಿ ಕೀರ್ತನಾಂಜಲಿ ಎಂಬ ಅಗಲವಾದ ಪುಸ್ತಕ ಗಮನ ಸೆಳೆಯಿತು. ಭಜನಾಂಜಲಿ ಎಂಬ ಎಲ್ಸಿ ತಟ್ಟೆಯು ಸಹಾ ಇದೇ ಆಕಾರದಲ್ಲಿದ್ದುದರಿಂದ ಇದೊಂದು ಪುಸ್ತಕ ಎಂಬ ಕಲ್ಪನೆ ನನಗಾಗಿರಲಿಲ್ಲ. ಪುಸ್ತಕದ ವರ್ಣಮಯ ಮುಖಪುಟದಲ್ಲಿ ದಾವೀದರಸನು ಹಾರ್ಪ್ ಎಂಬ ತಂತಿ ವಾದ್ಯ ನುಡಿಸುತ್ತಿರುವ ಚಿತ್ರವಿದೆ. ವರ್ಷ-ಬಿ ಗೆ ಸರಿಹೊಂದುವ ವಾಚನಾನಂತರ ಪಠಿಸುವ ಕೀರ್ತನೆಗಳನ್ನೆಲ್ಲ ಸಂಗ್ರಹಿಸಿ ಮಾನ್ಯ ಬೆಂಜಮಿನ್ ಫ್ರಾನ್ಸಿಸ್ ಅವರು ರಾಗಸಂಯೋಜನೆ ಮಾಡಿದ್ದಾರೆ.
ಬೆಂಗಳೂರು ಮಹಾಧರ್ಮಪ್ರಾಂತ್ಯದ ದೈವಾರಾಧನಾ ವಿಧಿ ಆಯೋಗವು ಹೊರತಂದಿರುವ ಪುಸ್ತಕಕ್ಕೆ ಮಹಾಧರ್ಮಾಧ್ಯಕ್ಷರಾದ ಅತಿ ವಂದನೀಯ ಬೆರ್ನಾಡ್ ಮೊರಾಸ್ ಅವರು ಮುನ್ನುಡಿ ಬರೆಯುತ್ತಾ "ದೇವರು ತನ್ನ ಬದುಕಿನಲ್ಲಿ ಎಸಗಿರುವ ಮಹತ್ಕಾರ್ಯಗಳನ್ನು ಸ್ಮರಿಸು ಹಾಡುವ ಕೃತಜ್ಞತಾ ಗೀತೆಗಳು, ದೇವರಲ್ಲಿ ತಾನಿಟ್ಟಿರುವ ನಂಬಿಕೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸುವ ಗೀತೆಗಳು ಮಾತ್ರವಲ್ಲ, ತನ್ನ ಮನದಾಳದಲ್ಲಿ ಅಡಗಿರುವ ನೋವು, ಹತಾಶೆ, ಆತಂಕ ಮತ್ತು ಅಳಲನ್ನು ವ್ಯಕ್ತಪಡಿಸುವ ಗೀತೆಗಳೇ ಕೀರ್ತನೆಗಳು" ಎಂದಿದ್ದಾರೆ.
ಸುಂದರವಾಗಿ ಮುದ್ರಿಸಿರುವ ಪುಸ್ತಕದ ಕುರಿತು ಹೇಳಲೇಬೇಕಾದ ವೈಶಿಷ್ಟ್ಯವೆಂದರೆ ಇದರಲ್ಲಿ ಪಾಶ್ಚಾತ್ಯಶೈಲಿಯ ಸ್ವರಪ್ರಸ್ತಾರವನ್ನು ಸಹ ಮುದ್ರಿಸಲಾಗಿದೆ. ಬಹುಶಃ ನೊಟೇಷನ್ ನೋಡಿಕೊಂಡು ವಾದ್ಯಗಳನ್ನು ನುಡಿಸುವ ಪರಿಪಾಠವು ಇಂದು ಮರೆತೇಹೋಗುತ್ತಿರುವ ಸಂದರ್ಭದಲ್ಲಿ ಬಳಕೆ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆಂಬುದನ್ನು ಕಾದು ನೋಡಬೇಕಷ್ಟೆ.
ಅದೊಂದು ಕಾಲವಿತ್ತು, ಗೀತಾಮೃತ ಗಾನಾಮೃತಗಳಿಂದ ಶುರುವಾಗಿ ಸೆಮಿನರಿಯ ಸೈಕ್ಲೊಸ್ಟೈಲ್ಡ್ ಪುಸ್ತಕಗಳವರೆಗೆ ನೊಟೇಷನ್ ಪುಸ್ತಕಗಳು ಬಹುಕಾಲ ಚಾಲ್ತಿಯಲ್ಲಿದ್ದವು. ಅವಕ್ಕೊಂದು ಪುನರುಜ್ಜೀವನ ಕೊಡುವಂತೆ ಕೀರ್ತನಾಂಜಲಿ ಮೈದಳೆದಿದೆ. ಆದರೆ ಇವು ಶಾಸ್ತ್ರೀಯ ಸಂಗೀತವಾಗಿರದೆ ಲಘುಸಂಗೀತದ ಧಾಟಿಯಲ್ಲಿರುವುದು ಮಾತ್ರ ಒಂದು ಕೊರತೆ. ಅದೊಂದು ಬಿಟ್ಟರೆ ಕೀರ್ತನೆಗಳನ್ನೂ ಅದರ ರಾಗಗಳನ್ನೂ ಸ್ಟ್ಯಾಂಡರ್ಡೈಸ್ ಮಾಡುವ ನಿಟ್ಟಿನಲ್ಲಿ ಪುಸ್ತಕ ಯಶಸ್ವಿಯಾಗಲೆಂದು ಹಾರೈಸೋಣ.

ಸೋಮವಾರ, ಜುಲೈ 23, 2012

ಆರಕ್ಕೇರದ ಮೂರಕ್ಕಿಳಿಯದ


ಕ್ರೈಸ್ತ ಧರ್ಮವು ನಮ್ಮ ನಾಡಿಗೆ ಹೊರಗಿನಿಂದ ಬಂದ ಧರ್ಮವಾದರೂ ಅದರ ಅನುಯಾಯಿಗಳಾದ ನಾವು ಇಲ್ಲಿನ ಮಣ್ಣಿನ ಮಕ್ಕಳೇ ಆಗಿದ್ದೇವೆನಮ್ಮ ಜೀವನಶೈಲಿವೃತ್ತಿ ಮತ್ತು ಸಂಪ್ರದಾಯಗಳು ಉಳಿದ ಜನಸಮುದಾಯಗಳಿಗಿಂತ ಭಿನ್ನವಾಗೇನೂ ಇಲ್ಲಅದೇ ಕೃಷಿಜೀವನಅದೇ ವಸ್ತ್ರಾಭರಣಅದೇ ಆಚಾರ ವಿಚಾರಗಳುಅದೇ ಜಾನಪದ ಸಂಸ್ಕೃತಿಗಳುಅದೇ ನೋವು ನಲಿವುಗಳು.
ಬದಲಾಗಿದ್ದಾದರೂ ಏನು ಎಂದರೆ ಜೀವನಾದರ್ಶಗಳಿಗೆ ಧರ್ಮದ ಲೇಪ ಅಷ್ಟೇ.
ಆರಕ್ಕೇರದ ಮೂರಕ್ಕಿಳಿಯದ ಬದುಕು ನಮ್ಮದು.
ಯಾರಾದರೂ ಕೇಳಬಹುದು,
ನಿಮ್ಮದೇ ಶಾಲೆಗಳಿದ್ದೂ ನೀವು ಶಿಕ್ಷಣದಲ್ಲಿ ಹಿಂದೆ ಏಕೆಎಂದು,
ಅಲ್ಲಾ ಸ್ವಾಮಿಶಾಲೆಗಳೇನೋ ನಮ್ಮವೇವಿದ್ಯೆಯೇನೋ ಕೊಟ್ಟಿವೆಬದುಕು ರೂಪಿಸಲಿಲ್ಲವಲ್ಲ?
ನಿಜ ... ಬದುಕು ರೂಪಿಸಿಕೊಂಡವರು ಕೇರಳದ ಮಲಯಾಳಿಗರು ಹಾಗೂ ಮಂಗಳೂರಿನ ಕೊಂಕಣಿಗರುಬಯಲಸೀಮೆಗೆಲ್ಲಿ ಬರಬೇಕು ಮೇಲೇರುವ ತಂತ್ರ.
ಮತ್ತೆ ನೀವು ಕೇಳಬಹುದು,
ಯೇಸುಕ್ರಿಸ್ತನ ತತ್ವಗಳಿಂದ ನಿಮ್ಮ ಬದುಕನ್ನು ಗಟ್ಟಿಗೊಳಿಸಬಹುದಿತ್ತಲ್ಲ?
ಹೌದು ಸ್ವಾಮೀಆದರೆಯೇಸುತತ್ವಗಳಿಗಿಂತ ಜಾತಿ ಅಂತಸ್ತು ದೊಡ್ಡದು ನೋಡಿಜಾತಿ ನಮಗೆ ಬೇಡೆಂದರೂ ಅದು ನಮ್ಮನ್ನು ಬಿಡದು ಕೇಳಿಇನ್ನು ಪಾದ್ರಿಗಳನ್ನು ಬೈಯುವುದು ನಮಗೊಂದು ಚಾಳಿ.
ಹುಂ ಎಲ್ಲ ಜಾತಿಯವರೂ ತಮ್ಮನ್ನುದ್ಧರಿಸಲು ತಮಗೊಬ್ಬ ಮಠಾಧೀಶ ಬೇಕು ಅನ್ನೋವಾಗ ನಮ್ಮಲ್ಲಂತೂ ಮಠಾಧಿಪತಿಗಳು ಅನಾಯಾಸವಾಗಿ ಸಿಕ್ಕಿದರೂ ನಮ್ಮ ಏಳಿಗೆಯಾಗಲಿಲ್ಲವಲ್ಲಾ? ಅದಕ್ಕೆ ಇನ್ನೇನು ತಾನೇ ಹೇಳೋಣ.
ಎಸ್ಸೆಸ್ಸೆಲ್ಸಿ ಆಯ್ತು ಮುಂದೇನುಅದೇನೋ ನಂಗೊತ್ತಿಲ್ಲಪ್ಪಅಣ್ಣ ಬೆಂಗಳೂರಿನಾಗೆ ಇದ್ದಾನೆಹೋಗಿ ಯಾವ್ದಾದರೂ ಕೆಲಸ ಹುಡುಕಬೇಕುಅಲ್ಲೇನೂ ಕ್ರೈಸ್ತಧರ್ಮದ ಛತ್ರ ಅನ್ತ ಇಲ್ಲಚರ್ಚುಗಳಿಗೆ ದೊಡ್ಡ ಕಾಂಪೌಂಡು ಗೇಟು ಬೀಗಪಾದ್ರಿ ಮನೆಗಳಲ್ಲಿ ಸೀಳುನಾಯಿಗಳು ಅಟ್ಟಿಸಿಕೊಂಡು ಬತ್ತವೆ.
ಬೆಂಗಳೂರಲ್ಲಿ ನೆಂಟರಿಲ್ಲ ಅಂದ ಮ್ಯಾಲೆ ಊರಲ್ಲೇ ಬೀದಿ ಸುತ್ತುಎಂಥಾ ಬುದ್ಧಿವಂತ ಹುಡುಗ ಇದ್ಯಾಕಿಂಗಾದ ಅಂತ ಯಾರೂ ಕೇಳೋದಿಲ್ಲಯಾಕೆ ಅಂದರೆ ನಿನ್ನಂತೆ ಅವರೂ ಕೂಡಾ.
ಇನ್ನು ಓದಿರೋ ಮಂದೀನಾದ್ರೂ ತಮ್ಮ ಸಮುದಾಯಕ್ಕೆ ನೆರವಾಗಿದ್ದಾರಾ?
ಅಯ್ಯೋ ಬುಡ್ತು ಅನ್ನಿತಮ್ಮದು ತೊಳಕೊಳ್ಳೋಕೇ ಅವರಿಗೆ ಪುರಸೊತ್ತಿಲ್ಲಇನ್ನೊಬ್ಬರದು ಯಾಕೆ ಮೂಸಬೇಕು?
ಏನೋ ನಮ್ಮ ಕುಲ ಅನ್ತ ಒಂಚೂರು ದುಡ್ಡು ಬಿಸಾಕಿ ಸುಮ್ಮನಾಗಬೋದು.
ಇನ್ನೊಬ್ಬ ಮತ್ತೊಬ್ಬ ಅದರಲ್ಲೂ ಯಾವಯಾವುದೋ ಜಾತಿಯೋರಿಗೆ ...  ಹೋಗ್ರೀ ನಿಮ್ಮ ಕೆಲಸ ನೋಡ್ರೀ.

 ನಗ್ನಸತ್ಯಗಳ ಭೂಮಿಕೆಯಲ್ಲಿ ಕ್ರೈಸ್ತ ಧರ್ಮವನ್ನು ಅಪ್ಪಿಕೊಂಡವರನ್ನು ಅವಲೋಕಿಸಿದಾಗ ಮೂಡುವ ಪ್ರಶ್ನೆಗಳು ಹಲವಾರುಅದಕ್ಕೆ ಸಿಗುವ ಉತ್ತರಗಳಂತೂ ನೂರಾರು.
ಸ್ವಾತಂತ್ರ್ಯಾನಂತರದ ದಿನಗಳಲ್ಲಿ ನಮ್ಮ ದೇಶದ ರಾಜಕೀಯವು ಹಲವಾರು ತಿರುವುಗಳನ್ನು ಹಾದು ಹಲವಾರು ಸ್ಥಿತ್ಯಂತರಗಳನ್ನು ಕಂಡಿದೆಪ್ರಸ್ತುತ ಸನ್ನಿವೇಶದಲ್ಲಿ ರಾಜಕೀಯ ಮೇಲಾಟಗಳಿಗಾಗಿ ಜಾತಿಧರ್ಮಗಳನ್ನು ದಾಳಗಳಾಗಿ ಬಳಸುವ ಪರಿಪಾಠ ಬೆಳೆದುಬಂದಿದೆಅನಾಯಾಸವಾಗಿ ಬಂದ ಸ್ಥಾನಮಾನಗಳನ್ನಷ್ಟೇ ನೆಚ್ಚಿಕೊಂಡು  ಸಮುದಾಯ ನಡೆದುಬಂದುದನ್ನು ನೋಡಿದ್ದೇವೆಯಾರ ಹಿಂದೆಯೂ ಹೋಗದೆ ಬಹುಶಃ ಎಲ್ಲರಿಗೂ ಬೇಕಾದವರಾಗಿದ್ದು ಕೇವಲ ದಾಕ್ಷಿಣ್ಯದ ಕಾರಣದಿಂದಲೇ ಜನಪ್ರತಿನಿಧಿಗಳಾಗಿರುವ ಸನ್ನಿವೇಶಗಳೇ ನಮಗೆ ಢಾಳಾಗಿ ಕಾಣುತ್ತವೆಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಚುನಾವಣೆಗಳನ್ನು ಎದುರಿಸಿ ಆರಿಸಿ ಬಂದಿರುವರಾದರೂ ಅವರು ಇಡೀ ಜನಸಮುದಾಯದ ಪ್ರತಿನಿಧಿಗಳಾಗಿ ವರ್ತಿಸಿದ ಮುತ್ಸದ್ದಿಗಳಾಗಿದ್ದಾರೆಯೇ ಹೊರತು ಕ್ರೈಸ್ತ ಸಮುದಾಯಕ್ಕೆ ಪ್ರತ್ಯೇಕ ನ್ಯಾಯ ಒದಗಿಸಿಲ್ಲವೆನ್ನಬಹುದುನಮ್ಮ ವಿಮೋಚನೆ ನಮ್ಮಿಂದಲೇ ಆಗುತ್ತದೆಯೋ ಅಥವಾ ವಿಮೋಚಕನೊಬ್ಬನನ್ನು ಎದುರುಗೊಳ್ಳಬೇಕೋ ಎಂಬುದೇ ಇಂದಿನ ಪ್ರಶ್ನೆ.