ಸೋಮವಾರ, ಜುಲೈ 23, 2012

ಆರಕ್ಕೇರದ ಮೂರಕ್ಕಿಳಿಯದ


ಕ್ರೈಸ್ತ ಧರ್ಮವು ನಮ್ಮ ನಾಡಿಗೆ ಹೊರಗಿನಿಂದ ಬಂದ ಧರ್ಮವಾದರೂ ಅದರ ಅನುಯಾಯಿಗಳಾದ ನಾವು ಇಲ್ಲಿನ ಮಣ್ಣಿನ ಮಕ್ಕಳೇ ಆಗಿದ್ದೇವೆ. ನಮ್ಮ ಜೀವನಶೈಲಿ, ವೃತ್ತಿ ಮತ್ತು ಸಂಪ್ರದಾಯಗಳು ಉಳಿದ ಜನಸಮುದಾಯಗಳಿಗಿಂತ ಭಿನ್ನವಾಗೇನೂ ಇಲ್ಲ. ಅದೇ ಕೃಷಿಜೀವನ, ಅದೇ ವಸ್ತ್ರಾಭರಣ, ಅದೇ ಆಚಾರ ವಿಚಾರಗಳು, ಅದೇ ಜಾನಪದ ಸಂಸ್ಕೃತಿಗಳು, ಅದೇ ನೋವು ನಲಿವುಗಳು.
ಬದಲಾಗಿದ್ದಾದರೂ ಏನು ಎಂದರೆ ಜೀವನಾದರ್ಶಗಳಿಗೆ ಧರ್ಮದ ಲೇಪ ಅಷ್ಟೇ.
ಆರಕ್ಕೇರದ ಮೂರಕ್ಕಿಳಿಯದ ಬದುಕು ನಮ್ಮದು.
ಯಾರಾದರೂ ಕೇಳಬಹುದು,
ನಿಮ್ಮದೇ ಶಾಲೆಗಳಿದ್ದೂ ನೀವು ಶಿಕ್ಷಣದಲ್ಲಿ ಹಿಂದೆ ಏಕೆ? ಎಂದು,
ಅಲ್ಲಾ ಸ್ವಾಮಿ, ಶಾಲೆಗಳೇನೋ ನಮ್ಮವೇ, ವಿದ್ಯೆಯೇನೋ ಕೊಟ್ಟಿವೆ, ಬದುಕು ರೂಪಿಸಲಿಲ್ಲವಲ್ಲ?
ನಿಜ ... ಬದುಕು ರೂಪಿಸಿಕೊಂಡವರು ಕೇರಳದ ಮಲಯಾಳಿಗರು ಹಾಗೂ ಮಂಗಳೂರಿನ ಕೊಂಕಣಿಗರು. ಬಯಲಸೀಮೆಗೆಲ್ಲಿ ಬರಬೇಕು ಮೇಲೇರುವ ತಂತ್ರ.
ಮತ್ತೆ ನೀವು ಕೇಳಬಹುದು,
ಯೇಸುಕ್ರಿಸ್ತನ ತತ್ವಗಳಿಂದ ನಿಮ್ಮ ಬದುಕನ್ನು ಗಟ್ಟಿಗೊಳಿಸಬಹುದಿತ್ತಲ್ಲ?
ಹೌದು ಸ್ವಾಮೀ, ಆದರೆ, ಯೇಸುತತ್ವಗಳಿಗಿಂತ ಜಾತಿ ಅಂತಸ್ತು ದೊಡ್ಡದು ನೋಡಿ. ಜಾತಿ ನಮಗೆ ಬೇಡೆಂದರೂ ಅದು ನಮ್ಮನ್ನು ಬಿಡದು ಕೇಳಿ. ಇನ್ನು ಪಾದ್ರಿಗಳನ್ನು ಬೈಯುವುದು ನಮಗೊಂದು ಚಾಳಿ.
ಹುಂ ಎಲ್ಲ ಜಾತಿಯವರೂ ತಮ್ಮನ್ನುದ್ಧರಿಸಲು ತಮಗೊಬ್ಬ ಮಠಾಧೀಶ ಬೇಕು ಅನ್ನೋವಾಗ ನಮ್ಮಲ್ಲಂತೂ ಮಠಾಧಿಪತಿಗಳು ಅನಾಯಾಸವಾಗಿ ಸಿಕ್ಕಿದರೂ ನಮ್ಮ ಏಳಿಗೆಯಾಗಲಿಲ್ಲವಲ್ಲಾ? ಅದಕ್ಕೆ ಇನ್ನೇನು ತಾನೇ ಹೇಳೋಣ.
ಎಸ್ಸೆಸ್ಸೆಲ್ಸಿ ಆಯ್ತು ಮುಂದೇನು? ಅದೇನೋ ನಂಗೊತ್ತಿಲ್ಲಪ್ಪ. ಅಣ್ಣ ಬೆಂಗಳೂರಿನಾಗೆ ಇದ್ದಾನೆ, ಹೋಗಿ ಯಾವ್ದಾದರೂ ಕೆಲಸ ಹುಡುಕಬೇಕು. ಅಲ್ಲೇನೂ ಕ್ರೈಸ್ತಧರ್ಮದ ಛತ್ರ ಅನ್ತ ಇಲ್ಲ, ಚರ್ಚುಗಳಿಗೆ ದೊಡ್ಡ ಕಾಂಪೌಂಡು ಗೇಟು ಬೀಗ. ಪಾದ್ರಿ ಮನೆಗಳಲ್ಲಿ ಸೀಳುನಾಯಿಗಳು ಅಟ್ಟಿಸಿಕೊಂಡು ಬತ್ತವೆ.
ಬೆಂಗಳೂರಲ್ಲಿ ನೆಂಟರಿಲ್ಲ ಅಂದ ಮ್ಯಾಲೆ ಊರಲ್ಲೇ ಬೀದಿ ಸುತ್ತು. ಎಂಥಾ ಬುದ್ಧಿವಂತ ಹುಡುಗ ಇದ್ಯಾಕಿಂಗಾದ ಅಂತ ಯಾರೂ ಕೇಳೋದಿಲ್ಲ. ಯಾಕೆ ಅಂದರೆ ನಿನ್ನಂತೆ ಅವರೂ ಕೂಡಾ.
ಇನ್ನು ಓದಿರೋ ಮಂದೀನಾದ್ರೂ ತಮ್ಮ ಸಮುದಾಯಕ್ಕೆ ನೆರವಾಗಿದ್ದಾರಾ?
ಅಯ್ಯೋ ಬುಡ್ತು ಅನ್ನಿ, ತಮ್ಮದು ತೊಳಕೊಳ್ಳೋಕೇ ಅವರಿಗೆ ಪುರಸೊತ್ತಿಲ್ಲ, ಇನ್ನೊಬ್ಬರದು ಯಾಕೆ ಮೂಸಬೇಕು?
ಏನೋ ನಮ್ಮ ಕುಲ ಅನ್ತ ಒಂಚೂರು ದುಡ್ಡು ಬಿಸಾಕಿ ಸುಮ್ಮನಾಗಬೋದು.
ಇನ್ನೊಬ್ಬ ಮತ್ತೊಬ್ಬ ಅದರಲ್ಲೂ ಯಾವಯಾವುದೋ ಜಾತಿಯೋರಿಗೆ ... ಏ ಹೋಗ್ರೀ ನಿಮ್ಮ ಕೆಲಸ ನೋಡ್ರೀ.

ಈ ನಗ್ನಸತ್ಯಗಳ ಭೂಮಿಕೆಯಲ್ಲಿ ಕ್ರೈಸ್ತ ಧರ್ಮವನ್ನು ಅಪ್ಪಿಕೊಂಡವರನ್ನು ಅವಲೋಕಿಸಿದಾಗ ಮೂಡುವ ಪ್ರಶ್ನೆಗಳು ಹಲವಾರು, ಅದಕ್ಕೆ ಸಿಗುವ ಉತ್ತರಗಳಂತೂ ನೂರಾರು.
ಸ್ವಾತಂತ್ರ್ಯಾನಂತರದ ದಿನಗಳಲ್ಲಿ ನಮ್ಮ ದೇಶದ ರಾಜಕೀಯವು ಹಲವಾರು ತಿರುವುಗಳನ್ನು ಹಾದು ಹಲವಾರು ಸ್ಥಿತ್ಯಂತರಗಳನ್ನು ಕಂಡಿದೆ. ಪ್ರಸ್ತುತ ಸನ್ನಿವೇಶದಲ್ಲಿ ರಾಜಕೀಯ ಮೇಲಾಟಗಳಿಗಾಗಿ ಜಾತಿಧರ್ಮಗಳನ್ನು ದಾಳಗಳಾಗಿ ಬಳಸುವ ಪರಿಪಾಠ ಬೆಳೆದುಬಂದಿದೆ. ಅನಾಯಾಸವಾಗಿ ಬಂದ ಸ್ಥಾನಮಾನಗಳನ್ನಷ್ಟೇ ನೆಚ್ಚಿಕೊಂಡು ಈ ಸಮುದಾಯ ನಡೆದುಬಂದುದನ್ನು ನೋಡಿದ್ದೇವೆ. ಯಾರ ಹಿಂದೆಯೂ ಹೋಗದೆ ಬಹುಶಃ ಎಲ್ಲರಿಗೂ ಬೇಕಾದವರಾಗಿದ್ದು ಕೇವಲ ದಾಕ್ಷಿಣ್ಯದ ಕಾರಣದಿಂದಲೇ ಜನಪ್ರತಿನಿಧಿಗಳಾಗಿರುವ ಸನ್ನಿವೇಶಗಳೇ ನಮಗೆ ಢಾಳಾಗಿ ಕಾಣುತ್ತವೆ. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಚುನಾವಣೆಗಳನ್ನು ಎದುರಿಸಿ ಆರಿಸಿ ಬಂದಿರುವರಾದರೂ ಅವರು ಇಡೀ ಜನಸಮುದಾಯದ ಪ್ರತಿನಿಧಿಗಳಾಗಿ ವರ್ತಿಸಿದ ಮುತ್ಸದ್ದಿಗಳಾಗಿದ್ದಾರೆಯೇ ಹೊರತು ಕ್ರೈಸ್ತ ಸಮುದಾಯಕ್ಕೆ ಪ್ರತ್ಯೇಕ ನ್ಯಾಯ ಒದಗಿಸಿಲ್ಲವೆನ್ನಬಹುದು. ನಮ್ಮ ವಿಮೋಚನೆ ನಮ್ಮಿಂದಲೇ ಆಗುತ್ತದೆಯೋ ಅಥವಾ ವಿಮೋಚಕನೊಬ್ಬನನ್ನು ಎದುರುಗೊಳ್ಳಬೇಕೋ ಎಂಬುದೇ ಇಂದಿನ ಪ್ರಶ್ನೆ.

ಗುರುವಾರ, ಜುಲೈ 12, 2012

ಸಂಸ್ಕೃತಿಯ ಉಳಿವು


ಬೆಂಗಳೂರಿನ ಚರ್ಚುಗಳಲ್ಲಿ ಕನ್ನಡ ಪ್ರಾರ್ಥನೆಗೆ ಅವಕಾಶ ಕೋರಿ ಕನ್ನಡ ಭಾಷಿಕರು ಬಹುಕಾಲ ಚಳವಳಿ ನಡೆಸಿದ್ದು ಇಂದು ಹಲವರಿಗೆ ಮರೆತು ಹೋಗಿರಬಹುದು. ಸುಮಾರು ಎರಡೂವರೆ ದಶಕಗಳ ಕಾಲ ನಡೆದ ಆ ಚಳವಳಿಯು ಅಂದಿನ ದಿನಪತ್ರಿಕೆಗಳಲ್ಲಿ ಪ್ರತಿದಿನದ ಸುದ್ದಿಯಾಗಿತ್ತು. ಅಂದು ಸುದ್ದಿಯಲ್ಲಿದ್ದ ಸಾಹಿತಿ ಕಲಾವಿದರ ಬಳಗ, ಕನ್ನಡ ಗೆಳೆಯರ ಬಳಗ, ಕನ್ನಡ ಸಂಘರ್ಷ ಸಮಿತಿ, ಕನ್ನಡ ಶಕ್ತಿಕೇಂದ್ರ, ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘ ಮುಂತಾದವುಗಳು ಸಹಾ ಕನ್ನಡ ಕ್ರೈಸ್ತರೊಂದಿಗೆ ಹೆಜ್ಜೆ ಹಾಕುತ್ತಾ ಗೋಕಾಕ್ ಚಳವಳಿಯೊಂದಿಗೂ ಮೇಳವಿಸಿಕೊಂಡು ಹಲವು ಕನ್ನಡಪರ ಹೋರಾಟಗಳಲ್ಲಿ ಪಾಲ್ಗೊಂಡಿದ್ದವು. ಕನ್ನಡ ಸಾಹಿತ್ಯ ಪರಿಷತ್ತು ಮೊದಲ್ಗೊಂಡು ಹಲವಾರು ಸಾಹಿತಿಗಳೂ ಚಿಂತಕರೂ ಕನ್ನಡ ಕ್ರೈಸ್ತರ ನ್ಯಾಯಯುತ ಬೇಡಿಕೆಯನ್ನು ಬೆಂಬಲಿಸಿ ಸರ್ಕಾರಕ್ಕೆ ಒತ್ತಡ ತಂದಿದ್ದರು.
ಅಂದಹಾಗೇ ಈ ಕನ್ನಡ ಕ್ರೈಸ್ತರ ಚಳವಳಿ ನೇಪಥ್ಯಕ್ಕೆ ಸರಿದಿದೆಯೇ, ಅವರ ಬೇಡಿಕೆಗಳು ಈಡೇರಿವೆಯೇ? ಎಂಬುದನ್ನು ಅವಲೋಕಿಸಿದಾಗ ಆ ಚಳವಳಿಯ ಬಿಸಿಯು ಬೂದಿ ಮುಚ್ಚಿದ ಕೆಂಡದಂತೆ ಕುಮುಲುತ್ತಿರುವುದು ಅರಿವಾಗುತ್ತದೆ. ಚಳವಳಿಯ ಫಲವಾಗಿ ಇಂದು ಕನ್ನಡ ಭಾಷೆಯಲ್ಲಿ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿದೆ, ಅವರ ಚಳವಳಿಯು ಕೇವಲ ಪೂಜಾರ್ಪಣೆಯಲ್ಲಿ ಮಾತ್ರವೇ ಕನ್ನಡಕ್ಕೆ ಅವಕಾಶ ಎಂಬುದಾಗಿರಲಿಲ್ಲ. ಅದು ಚರ್ಚುಗಳಲ್ಲಿನ ಎಲ್ಲ ಸವಲತ್ತುಗಳಿಗೂ ತಾವು ಸಮಾನವಾಗಿ ಭಾಜನರಾಗಬೇಕೆನ್ನುವ ಹಂಬಲವಾಗಿತ್ತು. ಅಂದರೆ ಜೀವನದ ವಿವಿಧ ಆಯಾಮಗಳಾದ ಶೈಕ್ಷಣಿಕ ಸವಲತ್ತು, ಔದ್ಯೋಗಿಕ ಸವಲತ್ತು, ಅಧಿಕಾರದ ಹಂಚಿಕೆ, ಕನ್ನಡ ಸಂಸ್ಕೃತಿಯ ಉಳಿವು, ಕನ್ನಡಕ್ಕೆ ಪ್ರಧಾನಸ್ಥಾನ, ಹಬ್ಬದಂಥ ಸಂದರ್ಭಗಳಲ್ಲಿ ಸ್ಥಳೀಯರಿಗೆ ಮನ್ನಣೆ ಮುಂಥಾದ ವಿಸ್ತೃತ ಅಂಗಗಳನ್ನು ಒಳಗೊಂಡಿತ್ತು.
ಸ್ಥಳೀಯ ಭಾವನೆಗಳಿಗೆ ದೂರದ ರೋಮ್ ಸ್ಪಂದಿಸಿ, ಇಲ್ಲಿನ ಅಧಿಕಾರ ವರ್ಗವೂ ಸಮ್ಮತ ತೋರಿ, ಜನ ಸಮಾನ್ಯರೂ ಇದಕ್ಕೆ ಕೈ ಜೋಡಿಸಿದ್ದರಿಂದ, ಕನ್ನಡಿಗರು ಆಯಕಟ್ಟಿನ ಜಾಗಗಳನ್ನು ಪಡೆಯುವಂತಾಗಿದೆ, ಹಳ್ಳಿಗರಿಗೂ ಅವಕಾಶಗಳು ಲಭ್ಯವಾಗುತ್ತಿವೆ ಮಾತ್ರವಲ್ಲ ಧರ್ಮಪ್ರಾಂತ್ಯದ ಆಡಳಿತವೂ ಪಾರದರ್ಶಕವಾಗಿದೆ.
ಆದರೆ ಕನ್ನಡಿಗರ ಬಹುದಿನಗಳ ಬೇಡಿಕೆಯಾದ ಗುರುಗಳ ಪ್ರಾದೇಶಿಕ ತರಬೇತಿ ಕೇಂದ್ರವನ್ನು ಹೊಂದಬೇಕೆನ್ನುವ ಕೂಗು ಮಾತ್ರ ಸಫಲವಾಗಿಲ್ಲ. ಏಕೆಂದರೆ ಮಲ್ಲೇಶ್ವರದಲ್ಲಿರುವ ಗುರು ತರಬೇತಿ ಸಂಸ್ಥೆಯು ಕರ್ನಾಟಕ ಮತ್ತು ತಮಿಳುನಾಡುಗಳ ಜಂಟಿ ಆಡಳಿತದಲ್ಲಿದ್ದು ಸಹಜವಾಗಿ ತಮಿಳರ ಹಿಡಿತದಲ್ಲಿದೆ. ಅಂದು ಮಹಾರಾಜರು ದಾನವಾಗಿ ನೀಡಿದ ೨೪.೨ ಎಕರೆಗಳ ಈ ವಿಶಾಲ ಜಮೀನಿನಲ್ಲಿ ಶಾಲೆ, ಬ್ಯಾಂಕು, ಅಂಗಡಿಸಾಲು, ಪೆಟ್ರೋಲ್ ಪಂಪ್, ಅಂಚೆಕಚೇರಿಗಳಲ್ಲದೆ ಇತರ ಉಪ ಗುರುಮಠಗಳಿಗೂ ಸ್ಥಳ ಕಲ್ಪಿಸಲಾಗಿದೆ. ಆದರೆ ಕನ್ನಡಿಗರು ತಮ್ಮದೇ ನೆಲದಲ್ಲಿ ತಮಗೊಂದು ತರಬೇತಿ ಸ್ಥಳ ಬೇಕೆನ್ನುವ ಬೇಡಿಕೆಗೆ ಮಾತ್ರ ತಕ್ಕ ಸ್ಪಂದನವಿಲ್ಲವಾಗಿದೆ.
ಇತ್ತೀಚೆಗೆ ಈ ಸಂತ ರಾಯಪ್ಪರ ಗುರುಮಠದ ಆಡಳಿತಮಂಡಲಿಯ ವಾರ್ಷಿಕ ಸಭೆಯಲ್ಲಿ ಕನ್ನಡ ಕ್ರೈಸ್ತರ ಅಹವಾಲುಗಳನ್ನು ಮಂಡಿಸಲು ಆರ್ಚ್ ಬಿಷಪ್ ಬೆರ್ನಾಡ್ ಮೊರಾಸ್ ಅವರು ಅವಕಾಶ ಕಲ್ಪಿಸಿದರು. ತಮ್ಮ ಬೇಡಿಕೆ ಎಷ್ಟು ನ್ಯಾಯಯುತ ಹಾಗೂ ಎಷ್ಟು ಅತ್ಯಗತ್ಯ ಎಂಬುದರ ಕುರಿತು ಕನ್ನಡ ಕ್ರೈಸ್ತರ ಸಂಘದ ಪದಾಧಿಕಾರಿಗಳು ಎಲ್ಲ ಬಿಷಪರುಗಳ ಮುಂದೆ ಬಿನ್ನವಿಸಿಕೊಂಡರು. ಅದರ ಫಲವಾಗಿ ಇನ್ನೇನು ಸಂತ ರಾಯಪ್ಪರ ಗುರುಮಠದ ಆವರಣದಲ್ಲಿ ಪ್ರಾದೇಶಿಕ ಗುರುಮಠಕ್ಕಾಗಿ ಕಟ್ಟಡ ಮಂಜೂರಾಗುತ್ತದೆನ್ನುವಾಗ ಬೆಂಗಳೂರಿನ ಸುಮಾರು ೪೫ ತಮಿಳು ಗುರುಗಳು ಅಪಸ್ವರ ಎತ್ತಿದರು. ಇರುವ ಗುರುಮಠವೇ ಸಾಕು, ಪ್ರಾದೇಶಿಕ ಗುರುಮಠ ಬೇಡ, ಹಾಗೇನಾದರೂ ಆದಲ್ಲಿ ತಮಿಳರಿಗೆ ಅವಕಾಶಗಳು ಇಲ್ಲವಾಗುತ್ತವೆನ್ನುವ ವಾದ ಮುಂದಿಟ್ಟು ರೋಮಿನವರೆಗೆ ದೂರು ಕೊಂಡೊಯ್ದರು.
ಇದೀಗ ಈ ವ್ಯಾಜ್ಯವನ್ನು ಪರಿಶೀಲಿಸಿ ವರದಿ ನೀಡಲು ವ್ಯಾಟಿಕನ್ನಿನ ಸರ್ವೋಚ್ಛ ಪೀಠವು ಮೂರು ಬಿಷಪರುಗಳ ಒಂದು ಸಮಿತಿ ನೇಮಿಸಿದೆ. ಆ ಸಮಿತಿಯು ಇದೇ ಜುಲೈ ೧೬, ೧೭, ೧೮ರಂದು ಆಸಕ್ತರ ಅಹವಾಲುಗಳನ್ನು ಆಲಿಸಿ ವರದಿ ತಯಾರಿಸಲಿದೆ.
ಈಗ ನಮ್ಮ ಮುಂದಿರುವ ಪ್ರಶ್ನೆಯೆಂದರೆ ಇಷ್ಟು ವರ್ಷಗಳ ಕಾಲ ಇಲ್ಲೇ ನೆಲೆನಿಂತಿರುವ ತಮಿಳು ಜನಸಾಮಾನ್ಯರು ಮುಖ್ಯವಾಹಿನಿಯೊಂದಿಗೆ ಬೆರೆತಿರುವಾಗ ಕೆಲ ಪಟ್ಟಭದ್ರ ಗುರುಗಳ ಯಾವ ತೆವಲಿಗಾಗಿ ಈ ರೀತಿಯ ನಿಲುವು ತಳೆದಿದ್ದಾರೆ ಎಂಬುದೇ. ಹಾಗೂ ಕನ್ನಡಿಗರಿಗೆ ನ್ಯಾಯಯುತವಾಗಿ ಸಲ್ಲಬೇಕಿರುವ ಪಾಲನ್ನು ತಾವೇ ಅನುಭವಿಸಿಕೊಂಡು ಬಂದಿದ್ದಲ್ಲದೆ ಅವರಿಗೊದಗಿದ ಕಿಂಚಿತ್ ಪಾಲನ್ನೂ ಕಿತ್ತುಕೊಳ್ಳುವ ಹಾದಿ ತುಳಿದಿದ್ದಾರಲ್ಲ ಏಕೆ ಎಂಬುದಾಗಿದೆ. ಇನ್ನೆಷ್ಟು ವರ್ಷಗಳ ಕಾಲ ಅವರು ಸ್ಥಳೀಯರ ಮೇಲೆ ಸವಾರಿ ಮಾಡುತ್ತಾ ಪ್ರತ್ಯೇಕವಾಗಿ ಉಳಿಯಲು ಬಯಸಿದ್ದಾರೆ? ಕ್ರೈಸ್ತಧರ್ಮದ ತತ್ವವು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುತ್ತದಲ್ಲವೇ? ಆದರೆ ಈ ತಮಿಳು ಸಂಕುಚಿತ ಮನೋಭಾವದ ಮಂದಿ ಕ್ರೈಸ್ತ ತತ್ವಗಳನ್ನು ಗಾಳಿಗೆ ತೂರಿ ಎಲ್ಲ ಅವಕಾಶಗಳನ್ನೂ ತಾವೇ ಬಾಚಿಕೊಳ್ಳುವ ಪರಿ ಸರಿಯೇ? ಇದರಿಂದ ಕ್ರೈಸ್ತ ಧರ್ಮಕ್ಕೇ ಅಪಚಾರವಲ್ಲವೇ?
ಕೆಲವೇ ಕೆಲವು ರೋಗಗ್ರಸ್ಥ ಮನಸ್ಸುಗಳು ಜನರ ಹಾದಿ ತಪ್ಪಿಸುತ್ತಿರುವುದು ನಿಜಕ್ಕೂ ದೌರ್ಭಾಗ್ಯದ ಸಂಗತಿಯಾಗಿದೆ. ವಾಸ್ತವದಲ್ಲಿ ಇಲ್ಲಿನ ತಮಿಳು ಕ್ರೈಸ್ತರೂ ಸಹಾ ಇಲ್ಲಿನ ಭಾಷೆ, ಜನ, ಸಂಸ್ಕೃತಿಯ ಜೊತೆಯಲ್ಲಿ ನಡೆಯುವಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ತಮ್ಮ ದಿನ ನಿತ್ಯದ ಆಗು ಹೋಗುಗಳಲ್ಲಿ ಮುಖ್ಯವಾಹಿನಿಯಲ್ಲಿ ಬೆರೆತು ಹೋಗುವಂತಹ ಸಂದರ್ಭ ಬಂದಿದೆ. ಅಂತಹ ಪರಿಸ್ಥಿತಿ ಸಂದರ್ಧಕ್ಕೆ ಒಗ್ಗಿಕೊಳ್ಳುವುದೂ ಕಷ್ಟದ ಮಾತೇನಲ್ಲ ಎಂದು ಅವರುಗಳು ಈಗಾಗಲೇ ತೋರಿಸಿಕೊಟ್ಟಾಗಿದೆ. ಆದರೆ ಈ ರೀತಿಯಾಗುವುದು ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ಇಷ್ಟವಿಲ್ಲ. ಇತ್ತ ತಾವೂ ಮುಖ್ಯ ವಾಹಿನಿಯಲ್ಲಿ ಬೆರೆಯದೆ ಜನಸಾಮಾನ್ಯರನ್ನೂ ಬೆರೆಯಲು ಬಿಡದೆ ಮಾಡುತ್ತಿರುವ ಕುತಂತ್ರಗಳಿಗೆ ಪ್ರಾದೇಶಿಕ ಗುರು ತರಬೇತಿ ಮಂದಿರಕ್ಕೆ ವ್ಯಕ್ತಪಡಿಸುತ್ತಿರುವ ವಿರೋಧವೇ ಉತ್ತಮ ಉದಾಹರಣೆಯಾಗಿದೆ. ಇಲ್ಲಿನ ಸ್ಥಳೀಯರಿಗೆ ನೆರವಾಗಲಿ, ಸ್ಥಳೀಯತೆಗೆ ಪ್ರಾಶಸ್ತ್ಯ ದೊರಕಲಿ ಎಂಬ ಕನ್ನಡ ಕ್ರೈಸ್ತರ ಬೇಡಿಕೆ ಇವರಿಗೆ ಸಂಕುಚಿತವಾಗಿ ಕಂಡರೆ,  ದಶಕಗಳ ಕಾಲ ಇವರು ತೋರಿದ ವರ್ತನೆ ಇದಕ್ಕಿಂತಲೂ ಘೋರ. ಇನ್ನಾದರೂ ಜನಸಾಮಾನ್ಯರು ಇವರುಗಳ ಸಂಕುಚಿತ ಬಣ್ಣದ ಮಾತುಗಳಿಗೆ ಸೊಪ್ಪು ಹಾಕದೆ ಇಲ್ಲಿನ ನೆಲ, ಭಾಷೆ, ಸಂಸ್ಕೃತಿಯ ಜೊತೆಗೆ ಬಾಳುವುದೇ ಸರಿಯಾದ ದಾರಿಯಾಗಿದೆ.


ಶನಿವಾರ, ಜೂನ್ 30, 2012

ಪಿಯೆಟಾ


ನಮ್ಮ ನಾಡಿನ ಸಂಸ್ಕೃತಿಯಲ್ಲಿ ಹೆಣ್ಣು ಶಕ್ತಿದೇವತೆಯಾಗಿ ಹಲವು ರೂಪಗಳಲ್ಲಿ ಕಾಣಿಸುತ್ತಾಳೆ. ಅಟ್ಟಿಲಕ್ಕಮ್ಮ, ದಂಡು ಮಾರಮ್ಮ, ಜಲಗೇರಮ್ಮ, ಕಬ್ಬಾಳಮ್ಮ ಅಕ್ಕಯ್ಯಮ್ಮ, ಮಾಂಕಾಳಮ್ಮ, ಮಾಸ್ತಮ್ಮ, ಎಂದು ಮುಂತಾಗಿ ಪೂಜೆಗೊಳ್ಳುವ ಆಕೆ ರೋಗ ಪೀಡೆಗಳ ಹೆಸರಿನಲ್ಲಿ ಭಕ್ತರನ್ನು ಹೆದರಿಸುತ್ತಾಳೆ.  ದೊಡ್ಡಮ್ಮ, ಚಿಕ್ಕಮ್ಮ, ಪ್ಲೇಗಮ್ಮ, ಗದ್ದಕಟ್ಟಮ್ಮ ಇತ್ಯಾದಿಯಾಗಿ ರೋಗರುಜಿನಗಳಿಂದ ಭಾಧಿತರಾದಾಗ ಅದೇ ಹೆಸರಿನ ಮಾತೆಯಾಗಿ ಅಭಯ ನೀಡುತ್ತಾಳೆ.
ಆ ಮಾತೃಶಕ್ತಿಯ ಇನ್ನೊಂದು ರೂಪವೇ ಮೇರಿಮಾತೆ. ನಿಜ ಹೇಳಬೇಕೆಂದರೆ ಈ ಮೇರಿಮಾತೆ ಎಂದೂ ಯಾರನ್ನೂ ಹೆದರಿಸಿದ್ದೇ ಇಲ್ಲ. ಶರಣುಬಂದ ಪಾಪಿಗೂ ಆಕೆ ಅಭಯದಾಯಿನಿಯೇ. ಪಾಶ್ಚಾತ್ಯರಿಗೆ ಆಕೆ ಸಮುದ್ರದ ನಕ್ಷತ್ರವಾಗಿ, ಗಹನವಾದ ರೋಜಾಪುಷ್ಪವಾಗಿ ಸ್ವರ್ಗದೂತರ ರಾಣಿಯಾಗಿ ಕಂಗೊಳಿಸಿದರೆ ನಮ್ಮ ದೇಶಸ್ತರಿಗೆ ಮರಿಯಮ್ಮ, ಸತ್ಯಮ್ಮ, ದೇವಮಾತೆ, ಆರೋಗ್ಯಮಾತೆ, ಬಡವರ ಮಾತೆ, ಕರುಣೆಯ ತಾಯಿ, ಭರವಸೆಯ ಬೆಳಕು, ನಿತ್ಯ ಸಹಾಯದಾತೆ ಆಗಿದ್ದಾಳೆ.
ಇದೇ ಸಾಲಿನಲ್ಲಿ ವ್ಯಾಕುಲಮಾತೆ ಎಂಬ ಹೆಸರೂ ಸಹ ಕೇಳಿಬರುತ್ತಲ್ಲವೇ? ವಿಶ್ವವಿಖ್ಯಾತ ಶಿಲ್ಪಿ ಮೈಕೆಲ್ ಆಂಜೆಲೊ ಕಡೆದ ’ಪಿಯೆಟಾ’ ಎಂಬ ದೃಶ್ಯಕಾವ್ಯವೇ ಈ ವ್ಯಾಕುಲಮಾತೆ. ಪಿಯೆಟಾ ನಮಗಾಗಿ ಬಾಯ್ದೆರೆದು ಏನನ್ನೂ ಹೇಳುವುದಿಲ್ಲ. ಸ್ನಿಗ್ದ ಮೊಗದ ಮರಿಯಾ ಮಾತೆಯ ಮುಚ್ಚಿದ ತುಟಿಗಳು ಕಟ್ಟಿಕೊಡುವ ಭಾವನೆಗಳೇ ಅನೂಹ್ಯ. ಮಾತುಗಳಿಗೆ ನಿಲುಕದ ಭಾವನೆಗಳಿಗೆ ಸಿಲುಕದ ಅಮೃತಶಿಲೆಯ ಸ್ವರೂಪವು ಪ್ರತಿನಿಧಿಸುವ ಪ್ರತಿಮೆಯಾದರೂ ಏನು? ಒಬ್ಬ ತಾಯಿ ತನ್ನ ಮಗನ ಕಳೇಬರವನ್ನು ಮಡಿಲಲ್ಲಿಟ್ಟುಕೊಂಡು ಜಗತ್ತಿನೆಡೆಗೆ ಬೀರುವ ದೃಷ್ಟಿಯಾದರೂ ಎಂಥದು? ಅದು ಕೇಳುವ ಪ್ರಶ್ನೆಯಾದರೂ ಏನು? ನೀಡುವ ಸಂದೇಶವಾದರೂ ಹೇಗಿರಬಹುದು?
’ಅವನು ಹೇಳಿದಂತೆ ಮಾಡಿ’ ಎಂದಾಗ ಆ ಸೇವಕರು ಕೊಡ ಕೊಡ ನೀರು ಹೊತ್ತು ತಂದು ಬಾನಿಗಳನ್ನು ತುಂಬಿಸಿದರಲ್ಲ. ಅವನ ಸ್ಪರ್ಶವೊಂದರಿಂದಲೇ ಆ ನೀರು ಪರಿಶುದ್ಧ ದ್ರಾಕ್ಷಾರಸವಾಯಿತಲ್ಲ! ಅದಕ್ಕಿಂತಲೂ ಪರಿಶುದ್ಧವಾದ ಪ್ರೀತಯ ನಗುವನ್ನು ಕರುಣೆಯ ಸಿಂಚನವನ್ನು ಹಂಚಿದವನಿಗೆ ಶಿಲುಬೆಯಲ್ಲಿ ನೇತುಹಾಕಿ ಕೊಂದಿರಲ್ಲ! ಏನಿದು ಜಗದ ವಿಚಿತ್ರ? ಸೋದರತೆಗಿಲ್ಲಿ ನೆಲೆಯೇ ಇಲ್ಲವೇ? ಸತ್ತಿರುವುದು ನನ್ನ ಮಗನಲ್ಲ, ನಿಮ್ಮಂತರಾತ್ಮಗಳು ಎಂದು ಹೇಳುತ್ತಿರಬಹುದೇ ಆ ತಾಯಿ? ಈ ಪ್ರತಿಮೆಯಲ್ಲಿ ಮಾತು ಮೌನವಾಗಿ, ವಾತ್ಸಲ್ಯದ ಕಂಬನಿ ಬತ್ತಿಹೋಗಿ, ಮಮತೆಯ ಕಡಲು ಹೆಪ್ಪುಗಟ್ಟಿ ಮನುಷ್ಯತ್ವದ ಹುಡುಕಾಟ ನಡೆಸಿದೆ.

ಪಿಯೆಟಾ
ಹಾಲುಗಲ್ಲಿನ ತುಟಿಗಳಲಿ
ಅನೂಹ್ಯ ಭಾವನೆಗಳ ಮಿಡುಕುತಿಹ
ವ್ಯಾಕುಲವೇ ಮೈವೆತ್ತ ಶಿಲ್ಪಕಾವ್ಯವೇ

ಶತಮಾನಗಳ ಕಾಲಡಿಯಲ್ಲಿ ಹೊಸಕಿಹೋದ ಮಾನವತೆಯ
ಕಳೇಬರವ ಮಡಿಲಿಗೇರಿಸಿ ಪ್ರೀತಿಯಿಂ ನೇವರಿಸುತಿಹ
ಜಗದಾಕ್ರಂದನದ ಮೂಕದನಿಯೇ?

ಅಣ್ಣನೊಬ್ಬ ದುರುಳನಾಗಿ ತೋಳಕಿಂತ ಖೂಳನಾಗಿ
ಪ್ರೀತಿನಗು ಮಾಸಿಹೋಗಿ ತುಮುಲದಲಿ ಬಂಧಿಯಾಗಿ
ತಮ್ಮನನ್ನೇ ಬೇಟೆಯಾಡಿ ಹೊಸಕಿರುವುದ ನೋಡಿ ನೋಡಿ
ಮರುಗಿಹೆಯಾ ತಾಯಿ?

ಜೀವಾತ್ಮನನು ಕೊಂದು ಸತ್ಯವನು ತುಳಿದು
ಗೆದ್ದಿರುವೆವು ತಾವೆಂದು ಜಗ ಭ್ರಮಿಸುತಿರೆ
ಸತ್ತಿರುವುದೆನ್ನ ಮಗನಲ್ಲ ಸತ್ಯಕ್ಕೆ ಸಾವಿಲ್ಲ
ಸತ್ತಿವೆ ನಿಮ್ಮಂತರಾತ್ಮಗಳು ಎನುತಿಹೆಯಾ ತಾಯಿ?

ಬಿತ್ತವದು ತಾ ಸತ್ತು ಮತ್ತೆ ಜೀವವ ತಳೆದು
ಕುಡಿಯೊಡೆದು ಸಸಿಯಾಗಿ ಮರನಾಗಿ ಬೆಳೆದು
ಜಗಕೆಲ್ಲ ನೆರಳಾಗಿ ಶಾಂತಿ ಕಹಳೆಯ ಮೊಳಗಿ
ಮನುಜ ಪ್ರೇಮದ ನುಡಿಯ ದೇಶದೇಶದಿ ಬೆಳಗಿ

ಸಹನೆಗಿರಲಿ ಹೆಸರು ಮರಿಯಳೆಂದು
ಕ್ರಿಸ್ತನುದಯಿಸಲಿ ಮತ್ತೆ ಜಗದಲಿಂದು
ದ್ವೇಷ ಹಗೆ ಮತ್ಸರ ತೊಡೆದುಹೋಗಿ
ಪ್ರೀತಿಸುಧೆಯ ಹೊಂಬೆಳಗು ಚೆಲ್ಲುತಿರಲಿ
ಅಮ್ಮನೆಂಬ ಮಲ್ಲಿಗೆಯ ಹೂವರಳಿ.

ಗುರುವಾರ, ಮೇ 24, 2012

ಆಂತೋನ್ ಮರೀ ತಬಾ (Antoine Marie Tabard, M.A., M.B.E.)


ಬೆಂಗಳೂರು ಮಹಾಧರ್ಮಪ್ರಾಂತ್ಯದ ರೂವಾರಿಗಳಲ್ಲಿ ಆಂತೋನ್ ಮರೀ ತಬಾ ಎಂಬ ಫ್ರೆಂಚ್ ಪಾದ್ರಿಯ ಹೆಸರು ಬಲು ಪ್ರಮುಖವಾದುದು. ಮೂರು ದಶಕಗಳ ಕಾಲ ಸಂತ ಪ್ಯಾಟ್ರಿಕ್ಕರ ದೇವಾಲಯದ ಪಾದ್ರಿಯಾಗಿ ಕೆಲಸ ನಿರ್ವಹಿಸುತ್ತಲೇ ಸಮಾಜದ ವಿವಿಧ ಕ್ಷೇತ್ರಗಳಲ್ಲಿಅವರು ತೊಡಗಿಕೊಂಡ ರೀತಿ ಅಚ್ಚರಿ ಮೂಡಿಸುತ್ತದೆ. ಅವರ ಚಟುವಟಿಕೆಗಳಿಗೆ ಧಾರ್ಮಿಕ ಕಟ್ಟುಪಾಡುಗಳಿರಲಿಲ್ಲ. ಎಲ್ಲ ಕ್ಷೇತ್ರಗಳಲ್ಲೂ ಅವರು ಪಾದರಸದಂತೆ ಚುರುಕಾಗಿ ತೊಡಗಿಸಿಕೊಳ್ಳುತ್ತಿದ್ದರು. ಭಾರತದ ಭೂಪಟದಲ್ಲಿ ಬೆಂಗಳೂರನ್ನು ಎಲ್ಲರೂ ಗುರುತಿಸುವಂತೆ ಮಾಡುವಲ್ಲಿ ಅವರ ಪಾತ್ರ ಗಣನೀಯ. “ಇದ್ದಲ್ಲೇ ಇದ್ದು ತುಕ್ಕು ಹಿಡಿಯುವುದಕ್ಕಿಂತ ಅತ್ತಿತ್ತ ಸರಿದಾಡಿ ಸವೆಯುವುದು ಮೇಲು” ಎನ್ನುವುದು ಅವರ ಧ್ಯೇಯವಾಕ್ಯವಾಗಿತ್ತು. ಸಂತ ಪ್ಯಾಟ್ರಿಕ್ಕರ ಚರ್ಚಿನ ಪಾದ್ರಿಯಾಗಿ ೩೩ ವರ್ಷಗಳ ಕಾಲ ಅವರು ಸೈನಿಕರಿಗೆ, ನಾಗರಿಕರಿಗೆ, ಹಳ್ಳಿಗರಿಗೆ, ಪ್ರಯಾಣಿಕರಿಗೆ ಪರಿಚಿತ ಅಪರಿಚಿತರೆಲ್ಲರಿಗೆ ನೆಚ್ಚಿನ ಫಾದರ್ ಆಗಿದ್ದರು. ಮೈಸೂರಿನ ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್ ಅವರಿಗಂತೂ ತಬಾ ಅವರು ಪ್ರಾತಃಸ್ಮರಣೀಯರಾಗಿದ್ದರು. ಒಬ್ಬ ಪಾದ್ರಿ ಹೀಗೂ ಬದುಕಲು ಸಾಧ್ಯ ಎಂದು ತೋರುವ ಅತ್ಯುತ್ತಮ ಮಾದರಿ ತಬಾ ಅವರದು.

ತಬಾ ಅವರು ಫ್ರಾನ್ಸ್ ದೇಶದ ವಾಯುವ್ಯ ಪ್ರದೇಶದಲ್ಲಿನ ತೊರಿಗ್ನಿಸೂರ್ ವಿಯ ಎಂಬ ಊರಲ್ಲಿ ೧೮೬೩ನೇ ಅಕ್ಟೋಬರ್ ೧೫ರಂದು ಜನಿಸಿದರು. ಮಧ್ಯಮವರ್ಗದ ಕುಟುಂಬದ ಅವರ ತಂದೆತಾಯಿಯರು ತಮ್ಮ ಸಜ್ಜನಿಕೆಯ ಕಾರಣದಿಂದ ಊರಲ್ಲಿ ಗೌರವಾನ್ವಿತರಾಗಿದ್ದರು. ಬಾಲ್ಯದಲ್ಲಿ ತಬಾ ಅವರು ಕೃಶಕಾಯರಾಗಿದ್ದುದರಿಂದ ಅವರ ವಿದ್ಯಾಭ್ಯಾಸವು ಮನೆಯಲ್ಲೇ ನಡೆಯಿತು. ಚುರುಕುಮತಿಯ ತಬಾ ಎಲ್ಲ ವಿದ್ಯೆಯನ್ನೂ ಕರಗತ ಮಾಡಿಕೊಂಡು ವಿಶ್ವವಿದ್ಯಾಲಯದ ಪ್ರವೇಶಕ್ಕೆ ಅಣಿಯಾಗುವ ವೇಳೆಗೆ ಅವರ ಆರೋಗ್ಯವೂ ಸುಧಾರಿಸಿತ್ತು. ತಮ್ಮ ಹದಿನಾರನೇ ವಯಸ್ಸಿಗೆ ಪದವೀಧರರಾದ ಅವರನ್ನು ಯಾರಾದರೂ ಮುಂದೇನು ಮಾಡುತ್ತೀ ಎಂದು ಕೇಳಿದರೆ ಪೂರ್ವದೇಶಗಳಿಗೆ ಹೋಗಿ ಧರ್ಮಪ್ರಚಾರ ಮಾಡುತ್ತೇನೆಂದು ತಟ್ಟನೇ ಉತ್ತರಿಸುತ್ತಿದ್ದರು. ಈ ಮಾತಿನಿಂದ ಅವರ ತಂದೆತಾಯಿಯರಿಗೆ ನೋವುಂಟಾದರೂ ತೋರ್ಪಡಿಸದೆ ಒಬ್ಬನೇ ಮಗನ ಮನದಿಂಗಿತಕ್ಕೆ ಮುಗುಳ್ನಗೆಯಿಂದಲೇ ಅಂಗೀಕಾರ ನೀಡಿದರು.

ಕಾಲೇಜು ಶಿಕ್ಷಕ
ಹೀಗೆ ತಬಾ ಅವರು ಪ್ಯಾರಿಸ್ಸಿನ ಹೊರದೇಶ ಧರ್ಮಪ್ರಚಾರ ಸಂಸ್ಥೆ (MEP) ಗೆ ಸೇರಿ ಧರ್ಮಾಧ್ಯಯನ ಮಾಡಿ ೧೮೮೬ರ ಜೂನ್ ೧೬ರಂದು ಗುರುಪಟ್ಟ ಪಡೆದರು. ಅದಾಗಿ ಮೂರು ತಿಂಗಳಾನಂತರ ಬೆಂಗಳೂರಿಗೆ ಬಂದಿಳಿದಾಗ ಅವರ ಪಾಂಡಿತ್ಯವನ್ನು ಗಮನಿಸಿ ಅವರನ್ನು ಸಂತ ಜೋಸೆಫರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ನೇಮಿಸಲಾಯಿತು. ಅಲ್ಲಿ ಅವರು ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರಗಳ ಪ್ರಕಾಂಡ ಬೋಧಕರೆನಿಸಿ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನವರಾದರು.
ಆದರೆ ತಾನು ಅಂದುಕೊಂಡಿದ್ದಾದರೂ ಏನು? ಪೂರ್ವದೇಶಗಳಿಗೆ ತೆರಳಿ ಧರ್ಮಪ್ರಚಾರ ಮತ್ತು ಬಡಜನರ ಸೇವೆ ಮಾಡಬೇಕೆಂದಲ್ಲವೇ? ಇಲ್ಲಿ ನಗರವಾಸಿಯಾಗಿ ಮೇಲ್ವರ್ಗದ ಜನರಿಗೆ ಕಾಲೇಜು ಶಿಕ್ಷಣ ನೀಡುತ್ತಿದ್ದೇನಲ್ಲ ಎಂದು ನೊಂದುಕೊಂಡ ತಬಾ ಅವರು ಮೇತ್ರಾಣಿಯವರಾಗಿದ್ದ ಕ್ಲೀನೆ (Bishop Kleiner) ಅವರ ಬಳಿ ತೆರಳಿ ತಮ್ಮನ್ನು ಈ ಹುದ್ದೆಯಿಂದ ತೆರವುಗೊಳಿಸುವಂತೆ ವಿನಂತಿಸಿಕೊಂಡರು. ಅವರ ಮನವಿಗೆ ಒಪ್ಪಿದ ಬಿಷಪರು ತಬಾ ಅವರನ್ನು ಮೈಸೂರಿಗೆ ಕಳಿಸಿದರು.
ಫಾದರ್ ತಬಾ ಅವರು ಮೈಸೂರಿನಲ್ಲಿ ಫಾದರ್ ರೋತಿಯಾರಿ (Father Reautearu) ಅವರ ಸಹವರ್ತಿಯಾಗಿದ್ದುಕೊಂಡು ಕನ್ನಡವನ್ನು ಚೆನ್ನಾಗಿ ಕಲಿತುಕೊಂಡರು. ಆದರೆ ಒಂದು ವರ್ಷವಾಗುವಷ್ಟರಲ್ಲಿ ಅವರು ಮತ್ತೆ ಬೆಂಗಳೂರಿಗೆ ಮರಳುವ ಅನಿವಾರ್ಯ ಪರಿಸ್ಥಿತಿ ಉದ್ಭವಿಸಿತು. ಅಂದು ಪ್ರಧಾನಾಲಯವಾಗಿದ್ದ ಸಂತ ಪ್ಯಾಟ್ರಿಕ್ಕರ ದೇವಾಲಯದ ಮುಖ್ಯ ಗುರುಗಳಾಗಿದ್ದ ಫಾದರ್ ಕಿನಾ (Father Quenard) ಅವರು ತೀರಿಕೊಂಡಿದ್ದರಿಂದ ಅವರ ಸ್ಥಾನ ತುಂಬಲು ಫಾದರ್ ತಬಾ ಅವರನ್ನು ಕರೆಸಿಕೊಳ್ಳಲಾಯಿತು. ಹೀಗೆ ಅವರು ೧೮೯೧ರಿಂದ ೧೯೨೬ ವರೆಗಿನ ದೀರ್ಘ ಅವಧಿಯನ್ನು ಈ ದೇವಾಲಯದ ಮುಖ್ಯಗುರುವಾಗಿ ಕಳೆದರು. ಇಲ್ಲಿದ್ದುಕೊಂಡೇ ಅವರು ದೀನರ ಬಡಬಗ್ಗರ ಅನಾಥರ ಸೇವೆ ಮಾಡಿದರು.
ತಮ್ಮ ದೇವಾಲಯದ ಆವರಣದಲ್ಲಿ ಅನಾಥಾಶ್ರಮ (Saint Patrick’s Orphanage) ತೆರೆದು ಆಗಿನ ಕಾಲದಲ್ಲಿ ತೀವ್ರ ಬಡತನ ಅಂಟುಜಾಡ್ಯಗಳಿಂದ ಕಂಗೆಟ್ಟು ಹೋಗಿದ್ದ ಕುಟುಂಬಗಳ ಹುಡುಗರನ್ನು ಕರೆತಂದು ಊಟ ವಿದ್ಯೆ ನೀಡಿ ಅವರನ್ನು ಗೌರವಾನ್ವಿತ ಪ್ರಜೆಗಳಾಗಿ ರೂಪಿಸಿದರು.

ಮಿಧಿಕ್ ಸೊಸೈಟಿ
ಬೆಂಗಳೂರಿನ ಪ್ರಸಿದ್ಧ ಮಿಥಿಕ್ ಸೊಸೈಟಿಯನ್ನು ಹುಟ್ಟುಹಾಕುವಲ್ಲಿ ಇವರ ಪಾತ್ರ ಗಣನೀಯ. ಮೈಸೂರಿನ ಇತಿಹಾಸ ಸಂಶೋಧನೆಗೆ ಈ ಸಂಸ್ಥೆಯು ಬಲವಾದ ಬುನಾದಿಯಾಗಲೆಂದು ಆಶಿಸಿದರು. ತಮ್ಮ ವರ್ಚಸ್ಸನ್ನು ಉಪಯೋಗಿಸಿ ಎಲ್ಲೆಡೆಯಿಂದ ಚಂದಾ ಸಂಗ್ರಹಿಸಿ ಮಿಥಿಕ್ ಸೊಸೈಟಿಯನ್ನು ಸಾಕಾರಗೊಳಿಸಿದರು. ಒಮ್ಮೆ ದಳವಾಯಿ ದೇವರಾಜ ಅರಸರು ಒಂದು ಭೇಟಿಯಲ್ಲಿ ಬೆಳ್ಳನೆಯ ಮೊಲದ ಜೋಡಿಯನ್ನು ಕೊಡಲು ಹೋದಾಗ ನಕ್ಕ ತಬಾ ಅವರು “ಮೊಲಗಳ ಬೆಲೆಯನ್ನು ಕೊಟ್ಟರೆ ಮಿಥಿಕ್ ಸೊಸೈಟಿಗೆ ಉಪಕಾರವಾದೀತು” ಎಂದರಂತೆ. ಸಜ್ಜನರಾದ ದೇವರಾಜ ಅರಸರು ಮರುದಿನ ಜೋಡಿ ಮೊಲಗಳ ಜೊತೆಗೆ ಐನೂರು ರೂಪಾಯಿಗಳ ಚೆಕ್ಕನ್ನು ಸಹ ಕಳಿಸಿಕೊಟ್ಟರು.
ಸೆನೊಟಾಫ್ ರಸ್ತೆಯಲ್ಲಿ (ಇಂದಿನ ನೃಪತುಂಗ ರಸ್ತೆ) ಒಂದು ನಿವೇಶನ ಪಡೆದ ತಬಾ ಅವರು ಅಲ್ಲಿ ಡ್ಯಾಲಿ ಮೆಮೊರಿಯಲ್ ಹಾಲ್ ಕಟ್ಟಿ ತಮ್ಮಲ್ಲಿದ್ದ ಎಲ್ಲ ಮೌಲಿಕ ಪರಾಮರ್ಶನ ಗ್ರಂಥಗಳನ್ನು ಅಲ್ಲಿ ತಂದಿಟ್ಟು ಒಂದು ಪರಿಪೂರ್ಣ ಪುಸ್ತಕಾಲಯವನ್ನು ಸ್ಥಾಪಿಸಿದರು. ವಿದ್ವತ್ ಪ್ರಬಂಧಗಳನ್ನು ಮಂಡಿಸಲು ವಿವಿಧ ಕ್ಷೇತ್ರಗಳ ಗಣ್ಯರನ್ನು ಆಹ್ವಾನಿಸಿ ಇಡೀ ಕಾರ್ಯಕ್ರಮದ ನಿರೂಪಣೆಯನ್ನು ತಾವೇ ಬಲು ಚೆಂದವಾಗಿ ಪ್ರಸ್ತುತಪಡಿಸುತ್ತಿದ್ದರು. ಪುರಾತತ್ವ ಉತ್ಖನನಗಳ ಕುರಿತ ಒಣವರದಿಗಳಿಗೆ ಫಾದರ್ ತಬಾ ಅವರು ನೀಡುತ್ತಿದ್ದ ವೈಜ್ಞಾನಿಕ ಹಾಗೂ ರೋಚಕ ನಿರೂಪಣೆಯಿಂದಾಗಿ ಅವು ಸರ್ವಗ್ರಾಹ್ಯವಾಗುತ್ತಿದ್ದವು. ವಿಷಯಜ್ಞಾನದಿಂದ ಕೂಡಿದ ಅವರ ಕಂಚಿನ ಕಂಠದ ಕಲಾತ್ಮಕ ನಿರೂಪಣೆ ಯುವರಾಜರಾದ ಕಂಠೀರವ ನರಸಿಂಹ ರಾಜರನ್ನೂ ಬಹುವಾಗಿ ಆಕರ್ಷಿಸಿತ್ತು.

ಮೈಸೂರು ವಿಶ್ವವಿದ್ಯಾಲಯ
ಮೈಸೂರು ವಿಶ್ವವಿದ್ಯಾಲಯದ ಸ್ಥಾಪನೆಯಲ್ಲೂ ತಬಾ ಅವರದು ಬಹು ಮುಖ್ಯ ಪಾತ್ರವಿತ್ತು. ಮೊದಲ ಸೆನೆಟಿನ ಸದಸ್ಯರಾಗಿ, ಹಲವಾರು ಸಮಿತಿಗಳಲ್ಲಿ ಪಾಲ್ಗೊಂಡು, ಲತೀನ್ ಮತ್ತು ಫ್ರೆಂಚ್ ಅಧ್ಯಯನ ಪೀಠಗಳ ಅಧ್ಯಕ್ಷರಾಗಿ, ಮೈಸೂರು ವಿವಿಯ ಆಜೀವ ಫೆಲೊ ಆಗಿ ಅವರು ಕಾರ್ಯನಿರ್ವಹಿಸಿದರು. ಇಂದಿಗೂ ಮೈಸೂರು ವಿವಿಯು ಇತಿಹಾಸ ವಿಷಯದಲ್ಲಿ ಉತ್ತಮ ಅಂಕಗಳಿಸಿದವರಿಗೆ “ತಬಾ ಚಿನ್ನದ ಪದಕ” ನೀಡುತ್ತಿದೆ.
ತಬಾ ಅವರು ಮೈಸೂರು ಸಂಸ್ಥಾನ ಹಾಗೂ ಬ್ರಿಟಿಷ್ ಕಂಟೋನ್ಮೆಂಟ್ ಎರಡೂ ಕಡೆ ಬಲು ಪ್ರಭಾವೀ ವರ್ಚಸ್ಸು ಹೊಂದಿದ್ದರು. ಪೌರಾಡಳಿತ ಹಾಗೂ ಸೇನಾಡಳಿಗಳ ಈ ನಂಟನ್ನು ಸದುಪಯೋಗ ಪಡಿಸಿಕೊಂಡು ಸಮಾಜದ ಒಳಿತಿಗಾಗಿಯೇ ಸದಾ ದುಡಿಯುತ್ತಿದ್ದರು. ಕ್ರೈಸ್ತಧರ್ಮದ ಬೋಧಕರಾಗಿ ನಿಜವಾದ ಸಂನ್ಯಾಸ ಜೀವನ ನಡೆಸುತ್ತಿದ್ದ ತಬಾ ಅವರು ತಮಗಾಗಿ ಏನನ್ನೂ ಕೇಳುತ್ತಿರಲಿಲ್ಲ. ಕೇಳುತ್ತಿದ್ದುದೆಲ್ಲ ಸಮಾಜಕ್ಕೆ ಮಾತ್ರ. ದಿನದ ಪ್ರತಿ ಕ್ಷಣವೂ ಸಮಾಜದ ದುರ್ಬಲರ ಏಳಿಗೆಗಾಗಿಯೇ ದುಡಿಯುತ್ತಿದ್ದರು. ಯುವಕರು ತಮ್ಮ ಕಾಲ ಮೇಲೆ ನಿಲ್ಲಲು ಹಣ ಸಹಾಯ ಮಾಡುತ್ತಿದ್ದರು. ದೊಡ್ಡವರು ದಾರಿ ತಪ್ಪಿದಾಗ ಕರೆದು ಬುದ್ಧಿ ಹೇಳುತ್ತಿದ್ದರು. ಫಿನ್ಸ್ (ಫ್ರೆಂಡ್ಸ್ ಇನ್ ನೀಡ್ ಸೊಸೈಟಿ) ಯನ್ನು ಹುಟ್ಟುಹಾಕಿ ಬಡಬಗ್ಗರಿಗೆ ಕೌಶಲ್ಯದ ತರಬೇತಿ ನೀಡಿ ಆರ್ಥಿಕ ಸ್ವಾವಲಂಬನೆ ನೀಡಿದರು.

ಅನುಪಮ ವಿದ್ವಾಂಸ
ಇವೆಲ್ಲದರ ಜೊತೆಗೆ ಅವರು ವಿಜ್ಞಾನ, ಗಣಿತ ಮತ್ತು ಇತಿಹಾಸಗಳ ಪ್ರಕಾಂಡ ವಿದ್ವಾಂಸರಾಗಿದ್ದರು. ಅವರ ಕೆಲ ವಿದ್ವತ್ ಲೇಖನಗಳ ಶೀರ್ಷಿಕೆಗಳೇ ಅವರ ಅಧ್ಯಯನ ಕ್ಷೇತ್ರದ ವ್ಯಾಪ್ತಿಯನ್ನು ಸಾರುತ್ತವೆ.
1.                  Talakad, the burried city
2.                  Tipu Sultan’s Embassy to the French Court
3.                  The birth of Buddha
4.                  Savandurga
5.                  Sravanabelagola
6.                  The founder of Bangalore
7.                  Indian Tales
8.                  Kapilavastu & Siam
ಮೇಲಿನ ಪಟ್ಟಿಯನ್ನು ನೋಡಿದರೆ ತಮ್ಮೆಲ್ಲ ಬಿಡುವಿಲ್ಲದ ಕೆಲಸಗಳ ನಡುವೆಯೂ ಅವರು ಇಂಥ ವಿಷಯಗಳ ಅಧ್ಯಯನಕ್ಕೆ ಹೇಗೆ ಸಮಯ ಮೀಸಲಿಟ್ಟಿದ್ದರೆಂದು ಅಚ್ಚರಿಯಾಗುತ್ತದೆ. Essay on Gunadhya and Brihatkatha ಎಂಬುವುದು ಫೆಲಿಕ್ಸ್ ಲಕೋತ್ ಬರೆದ ಫ್ರೆಂಚ್ ಪುಸ್ತಕದ ಅನುವಾದವಾಗಿದೆ.
ತಬಾ ಅವರ ಸಮಾಜಮುಖಿ ವ್ಯಕ್ತಿತ್ವ ಹಾಗೂ ವಿಜ್ಞಾನದ ಪ್ರಸಾರದಲ್ಲಿನ ಅವರ ಪಾತ್ರವನ್ನು ಗುರುತಿಸಿ ಇಂಡಿಯಾ ಸರ್ಕಾರವು ಅವರಿಗೆ ’ಕೈಸೆರ್ ಇ ಹಿಂದ್’ ಎಂಬ ಬಿರುದು ನೀಡಿ ಗೌರವಿಸಿತು. ಅಂತೆಯೇ ಮೈಸೂರು ಪ್ರಾಂತ್ಯದ ಆಚಾರ ವಿಚಾರಗಳು ಇತಿಹಾಸ ಮತ್ತು ಪುರಾತತ್ವಗಳನ್ನು ಬಿಂಬಿಸಿದ ರೀತಿಯನ್ನು ಮೆಚ್ಚಿ ಮೈಸೂರು ದರ್ಬಾರು ’ರಾಜಸಭಾಭೂಷಣ’ ಎಂಬ ಬಿರುದಿನೊಂದಿಗೆ ಪುರಸ್ಕರಿಸಿತು.

ಕೊನೆಗಳಿಗೆ
೧೯೨೪ರ ವೇಳೆಗೆ ತಬಾ ಅವರ ಆರೋಗ್ಯ ಹದಗೆಟ್ಟಾಗ ವೈದ್ಯರ ಸಲಹೆಯ ಮೇರೆಗೆ ಅವರು ಸ್ವದೇಶವಾದ ಫ್ರಾನ್ಸಿಗೆ ತೆರಳಿ ಆರೋಗ್ಯ ಸುಧಾರಿಸಿಕೊಂಡರು. ಮತ್ತೆ ಇಂಡಿಯಾಕ್ಕೆ ಹಿಂದಿರುಗಿ ಮುನ್ನಿನಂತೆ ಚಟುವಟಿಕೆಗಳಲ್ಲಿ ನಿರತರಾಗಿದ್ದಂತೆಯೇ ೧೯೨೬ರ ಜುಲೈ ೨ರಂದು ಸ್ವರ್ಗವಾಸಿಯಾದರು. ಮಾರ್ಥಾಸ್ ಆಸ್ಪತ್ರೆಯಿಂದ ಸಂತ ಪ್ಯಾಟ್ರಿಕ್ ದೇವಾಲಯದವರೆಗೆ ನಡೆದ ಅವರ ಅಂತಿಮ ಯಾತ್ರೆಯಲ್ಲಿ ಮೈಸೂರಿನ ಯುವರಾಜರು, ಬ್ರಿಟಿಷ್ ರೆಸಿಡೆಂಟರು, ಎಲ್ಲ ಸರ್ಕಾರಿ ಅಧಿಕಾರಿಗಳು ಸೇನಾ ಅಧಿಕಾರಿಗಳು, ಪ್ರಜೆಗಳು ಮಕ್ಕಳೊಡಗೂಡಿದ ಅಪಾರ ಜನಸ್ತೋಮ ದುಃಖ ಗೌರವಗಳಿಂದ ಹೆಜ್ಜೆಹಾಕಿದರು. ಸಂತ ಪ್ಯಾಟ್ರಿಕ್ಕರ ದೇವಾಲಯದ ದ್ವಾರದಲ್ಲಿ ರೋಮ್ ಪ್ರತಿನಿಧಿಯಾಗಿ ಕಾರ್ಡಿನಲ್ ಮೋನೆ, ಬಿಷಪರುಗಳಾದ ದೇಪಾಟ್ಯುರ್ ಹಾಗೂ ವಿಸ್ಮಾರಾ ಅವರು ಗನ್ ಕ್ಯಾರೇಜ್ ಮೇಲಿನ ತಬಾ ಅವರ ಪಾರ್ಥಿವ ಶರೀರವನ್ನು ಸ್ವೀಕರಿಸಿ ದೇವಾಲಯದೊಳಕ್ಕೆ ಕೊಂಡೊಯ್ದು ಅಂತಿಮವಿಧಿಗಳನ್ನು ನೆರವೇರಿಸಿದರು. ದೇವಾಲಯದ ಬಲ ಪೂಜಾಂಕಣದಲ್ಲಿನ ಪಾಪಿಗಳಾಶ್ರಯ ಸಂತ ಮರಿಯಮ್ಮನವರ ಸ್ವರೂಪದ ಮುಂದಿನ ನೆಲದಲ್ಲಿ ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ತಬಾ ಅವರನ್ನು ಮಣ್ಣು ಮಾಡಲಾಯಿತು. ತಾಯಿ ಮರಿಯಮ್ಮನೊಂದಿಗಿನ ಭಾವನಾತ್ಮಕ ಬಾಂಧವ್ಯದಿಂದ ಅವರು ಸದಾ ಅಲ್ಲಿ ಮೊಣಕಾಲೂರಿ ಜಪಿಸುತ್ತಿದ್ದರು. ಈಗ ಅದೇ ತಾಯಿಯ ಚರಣದಲ್ಲಿ ಚಿರನಿದ್ರೆಯಲ್ಲಿ ಮಲಗಿದ್ದಾರೆ. ವಿಪರ್ಯಾಸವೆಂದರೆ ಮಾತೆ ಮರಿಯಳ ಪ್ರತಿಮೆಯ ಬದಲಿಗೆ ಅಲ್ಲಿ ಈಗ ಸಂತ ಜೋಸೆಫರ ಪ್ರತಿಮೆಯಿದೆ.
ಅವರ ಮರಣಾನಂತರ ರಾಯಲ್ ಏಷಿಯಾಟಿಕ್ ಸೊಸೈಟಿಯು ವಿಶೇಷ ಪುರವಣಿಯನ್ನು ಹೊರತಂದು ಅವರನ್ನು ಸ್ಮರಿಸಿಕೊಂಡಿತು. (Journal of the Royal Asiatic Society, October 1926 58: pp 807-807)

ಚರ್ಚಿನ ಪೋಷಕ
ತಬಾ ಅವರು ಸಂತ ಪ್ಯಾಟ್ರಿಕ್ಕರ ಚರ್ಚಿನ ಮುಂಭಾಗವನ್ನು ಸುಂದರಗೊಳಿಸಿ ಎರಡು ಗಗನಚುಂಬಿ ಗೋಪುರಗಳನ್ನು ನಿರ್ಮಿಸಿದ್ದಲ್ಲದೆ ಚರ್ಚಿನ ಎರಡು ರೆಕ್ಕೆಗಳಂತೆ ಪೂಜಾಂಕಣಗಳನ್ನೂ ರಚಿಸಿದರು. ಅವರು ಮಾಡಿದ ಮತ್ತೊಂದು ಮಹತ್ತರ ಕಾರ್ಯ ಪವಿತ್ರ ಹೃದಯಾಲಯವನ್ನು ಕಟ್ಟಿದ್ದು. ಆಗೆಲ್ಲ ಭಾನುವಾರ ಒಂದೇ ಪೂಜೆ ಇರುತ್ತಿತ್ತಾದ್ದರಿಂದ ಸಂತ ಪ್ಯಾಟ್ರಿಕ್ಕರ ದೇವಾಲಯದಲ್ಲಿ ಆ ದಿನ ವಿಪರೀತ ಸಂದಣಿ ಏರ್ಪಡುತ್ತಿತ್ತು. ಸ್ಕಾಟ್ಲೆಂಡ್ ಯೋಧರು ಕಟ್ಟಿದ ಈ ಪ್ರಧಾನಾಲಯದಲ್ಲಿ ಬಿಳಿಯರ ಅಸಹನೆ ಹಾಗೂ ಸ್ಥಳೀಯರ ಕೀಳರಿಮೆಗಳು ಮೇಳವಿಸಿ ಕ್ರೈಸ್ತ ತತ್ವಾದರ್ಶಗಳು ಕದಡುವ ಅಪಾಯವಿತ್ತು. ತಬಾ ಅವರು ರಿಚ್ಮಂಡ್ ರಸ್ತೆಯ ಕೊನೆಯಲ್ಲಿನ ಕಾಡಿನ ಭಾಗವನ್ನು ಮಿಲಿಟರಿ ಅಧಿಕಾರಿಗಳಿಂದ ಕೇಳಿ ಪಡೆದು ಅಲ್ಲೊಂದು ಭವ್ಯವಾದ ಚರ್ಚ್ ಕಟ್ಟಿದರು. ಆ ಜಾಗದಂಚಿನಲ್ಲಿ ಗುರುಗಳ ಸಮಾಧಿಭೂಮಿಗೆಂದು ಮೊದಲೇ ಒಂದಿಷ್ಟು ಜಾಗ ಪಡೆಯಲಾಗಿತ್ತು.
ಕಬ್ಬನ್ ಪೇಟೆಯಲ್ಲಿ ೧೮೦೦ರಲ್ಲೇ ಒಂದು ಚರ್ಚ್ ಇತ್ತಾದರೂ ಕಾಲದ ತುಳಿತದಲ್ಲಿ ನಲುಗಿತ್ತು. ಚರ್ಚಿನೊಂದಿಗೆ ಸಮಾಧಿಭೂಮಿಯೂ ಮಾಯವಾಗಿ ಒಂದಿಷ್ಟು ಚೂರುಪಾರು ಉಳಿದುಕೊಂಡಿತ್ತು. ತಬಾ ಅವರು ಆ ಪುರಾತನ ಚರ್ಚಿನ ಮರುನಿರ್ಮಾಣಕ್ಕಾಗಿ ೧೫೦೦೦ ರೂಪಾಯಿಗಳ ನಿಧಿಯನ್ನು ಕಾದಿರಿಸಿದರು. ಅವರು ಸತ್ತ ಮೂವತ್ತು ವರ್ಷಗಳ ನಂತರ ನೂತನ ದೇವಾಲಯದ ಅವರ ಕನಸು ನನಸಾಯಿತು.  ಆ ನನಸೇ ಇಂದಿನ ಸಂತ ತೆರೇಸಮ್ಮನವರ ದೇವಾಲಯ.
ಮೈಸೂರಿನ ದೋರನಹಳ್ಳಿ ಸಂತ ಅಂತೋನಿಯವರ ತೀರ್ಥಸ್ಥಳಕ್ಕೂ ತಬಾ ಅವರ ಕೊಡುಗೆಯಿದೆ. ಆಗ ದೋರನಹಳ್ಳಿಗಾಗಿ ನಿರ್ಮಿಸಲಾಗಿದ್ದ ರೈಲುನಿಲ್ದಾಣದಿಂದ ಚರ್ಚಿನವರೆಗೆ ದಾರಿಯೇ ಇರಲಿಲ್ಲ. ರೈಲಿಳಿದ ಜನರು ಹೊಲಗದ್ದೆಗಳ ಮಣ್ಣಿನಲ್ಲಿ ನಡೆಯುತ್ತಾ ನಾಲ್ಕೈದು ಕಿಲೊಮೀಟರು ಕ್ರಮಿಸಬೇಕಿತ್ತು. ಜನರ ಈ ಗೋಳು ತಬಾ ಅವರಿಗೆ ತಿಳಿದಿದ್ದೆ ತಡ ಅವರು ತಕ್ಷಣವೇ ಕಾರ್ಯೋನ್ಮುಖರಾಗಿ ಸರ್ಕಾರದಿಂದ ರಸ್ತೆಯೊಂದನ್ನು ಮಂಜೂರು ಮಾಡಿಸಿದರಲ್ಲದೆ ಯಾತ್ರಿಗಳ ವಸತಿಗಾಗಿ ಒಳ್ಳೇ ಮೊತ್ತದ ಹಣವನ್ನೂ ಕಳಿಸಿದರು.
ಅಂದಿನ ಅವಿಭಜಿತ ಧರ್ಮಪ್ರಾಂತ್ಯವು ಸ್ವಾವಲಂಬಿಯಾಗಲು ನಿಧಿ ಸಂಗ್ರಹ ಮಾಡಿಟ್ಟರು. ಅವರು ಕೂಡಿಸಿದ ಹಣವೇ ಬೆಂಗಳೂರು ಮೈಸೂರು ಧರ್ಮಪ್ರಾಂತ್ಯಗಳನ್ನು ಹಲವು ದಶಕಗಳ ಕಾಲ ಮುನ್ನಡೆಸಿತೆಂಬುದೇ ಅತಿಶಯ.

ಫ್ರಾನ್ಸಿಸ್ ದಾಂತಿ


’ಶ್ರೀದಾಂತಿ’ ಎಂಬ ಕಾವ್ಯನಾಮದಲ್ಲಿ ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಫ್ರಾನ್ಸಿಸ್ ದಾಂತಿಯವರು ಪ್ರಗತಿಶೀಲ ಚಳವಳಿಯ ಪ್ರಮುಖ ಕತೆಗಾರರಲ್ಲಿ ಒಬ್ಬರು. ೧೯೪೦-೬೦ರ ಅವಧಿಯಲ್ಲಿ ಸಾಹಿತ್ಯ ಕೃಷಿ ನಡೆಸಿ ಸಮಾಜದ ತಲ್ಲಣಗಳಿಗೆ ಹೆಚ್ಚು ಸ್ಪಂದಿಸಿದ್ದಾರೆ. ‘ರಾಯರ ಬಾವಿ’, ‘ಕನಸು’, ‘ನಮ್ಮ ಹಣೆಬರಹ, ‘ಕಣ್ಣೀರ ಕಾರಣ’, ‘ಇಗೋ ಹಾಕಿಕೋ ಚೂರಿ’, ‘ಮೇರಿಬಾಯಿ’ ಇತ್ಯಾದಿ ಕತೆಗಳು ಅಂದಿನ ಸಮಾಜದ ವೈಪರೀತ್ಯಗಳಿಗೆ ಅವರು ತೋರಿದ ಪ್ರತಿಕ್ರಿಯೆಯೇ ಆಗಿದೆ. ‘ಅಳಿಯದ ಮಹಾಚೇತನ ಯೇಸು’ ಪುಸ್ತಕದಲ್ಲಿ ದಾಂತಿಯವರ ಪ್ರತಿಭೆ, ವಿದ್ವತ್ತು, ಭಾಷಾ ಪ್ರೌಡಿಮೆ, ಜೀವಪರ ಚಿಂತನೆ, ಮಾನವ ಪ್ರೇಮ, ಆಧ್ಯಾತ್ಮದ ಒಲವು, ತಂತ್ರ ಕೌಶಲ ಇವೆಲ್ಲ ಸಮರ್ಥವಾಗಿ ದುಡಿದುಕೊಂಡಿವೆ.
೧೯೫೨ರಲ್ಲಿ ‘ಸುಬೋಧಿನಿ ಪುಸ್ತಕ’ ಮಾಲೆಯನ್ನು ಆರಂಭಿಸಿ ನಾಟಕ, ಜೀವನ ಚರಿತ್ರೆ, ಮಕ್ಕಳ ಪದ್ಯಗಳನ್ನು ಪ್ರಕಟಿಸಿ ಮಕ್ಕಳ ಮನಸ್ಸನ್ನು ಕಟ್ಟುವ ಕೆಲಸ ಮಾಡಿದ್ದಾರೆ. ಅವರೇ ಆಡಿಸುತ್ತಿದ್ದ ಕವಿವರ ಕಾಳಿದಾಸ, ವೀರಬಾದಳ, ತ್ಯಾಗಮಯಿ ಪನ್ನಾದಾಸಿ, ಲವಕುಶ, ಸತ್ಯ ಹರಿಶ್ಚಂದ್ರ, ಮುತ್ತಿನ ನತ್ತು (ಭಕ್ತ ಪುರಂದರದಾಸರು) ಸತ್ಯವಾನ್ ಸಾವಿತ್ರಿ, ಸಿಪಾಯಿ ದಂಗೆ, ಟಿಪ್ಪುಸುಲ್ತಾನ್, ಸಂತ ಲಾರೆನ್ಸರು ಇತ್ಯಾದಿ ನಾಟಕಗಳು ಅತ್ಯಂತ ಜನಪ್ರಿಯವಾಗಿದ್ದವು.

ಪ್ರೀತಿಯ ಶಿಕ್ಷಕ
೩೦-೦೬-೧೯೨೨ರಲ್ಲಿ ಜನಿಸಿದ ಫ್ರಾನ್ಸಿಸರು ಹರೆಯಕ್ಕೆ ಕಾಲಿಡುವ ವೇಳೆಗಾಗಲೇ ತಂದೆಯವರು ತೀರಿಕೊಂಡಿದ್ದರಿಂದ ಕುಟುಂಬದ ಸಂಪೂರ್ಣ ಹೊಣೆ ಇವರ ಮೇಲೆ ಬಿತ್ತು. ಆಗ ಅವರ ಶಿಕ್ಷಣ ಎಂಟನೇ ತರಗತಿಯವರೆಗಿನ ಓದು ಅಷ್ಟೇ. ಹೆಚ್ಚಿನ ಶಿಕ್ಷಣಕ್ಕೆ ಊರಲ್ಲಿ ಅವಕಾಶವಿರಲಿಲ್ಲ. ಗೇಣಿ ಕೃಷಿಯನ್ನೇ ನಂಬಿ ಬದುಕುವ ಹಾಗೂ ಇರಲಿಲ್ಲ. ತಾತ್ಕಾಲಿಕವಾಗಿ ಅವರು ಅಲೆವೂರಿನ ಸುಬೋಧಿನಿ ಕಿರಿಯ ಪ್ರಾಥಮಿಕ ಶಾಲೆಗೆ ಅಧ್ಯಾಪಕರಾಗಿ ಸೇರಿ ಸುಮಾರು ಎರಡು-ಮೂರು ವರ್ಷ ಸೇವೆ ಸಲ್ಲಿಸಿದರು. ಆಮೇಲೆ ಅವರು ಶಿಕ್ಷಕ ತರಬೇತಿಗಾಗಿ ಮಂಗಳೂರಿನ ಟೀಚರ್ಸ್ ಟ್ರೇನಿಂಗ್ ಸ್ಕೂಲನ್ನು ಸೇರಿ ಎಲ್ಲರೂ ಅಚ್ಚರಿ ಪಡುವಂತೆ ಆಗಿನ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿಯೇ ಪ್ರಥಮ ಸ್ಥಾನ ಪಡೆದು ಸ್ವರ್ಣಪದಕವನ್ನು ಪಡೆದರು. ಶಿಕ್ಷಕ ತರಬೇತಿ ಪೂರೈಸಿದ ಶ್ರೀ ದಾಂತಿಯವರು ಅಲೆವೂರಿನ ಸುಬೋಧಿನಿ ಶಾಲೆ, ಮೂಡುಬೆಳ್ಳೆ ಚರ್ಚ್ ಶಾಲೆ, ಕುತ್ವಾಡಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ತಮ್ಮತನ ಮೆರೆದು ಊರ ಜನಕ್ಕೆ ಪ್ರೀತಿಯ ‘ದಾಂತಿ ಮಾಸ್ಟ್ರು’ ಆದರು.

ಸಮಾಜಮುಖಿ
ದಾಂತಿಯವರು ಸಾರ್ವಜನಿಕರೊಂದಿಗೆ ವ್ಯವಹರಿಸುವ ಚತುರತೆಯನ್ನು ಸೂಕ್ಷ್ಮವಾಗಿ ಗಮನಿಸಿದ ಟಿ.ಏ.ಪೈಯವರು ೧೯೬೦ರಲ್ಲಿ ಅವರನ್ನು ಸಿಂಡಿಕೇಟ್ ಬ್ಯಾಂಕಿನ ಸಾರ್ವಜನಿಕ ಸಂಪರ್ಕ ಹಾಗೂ ಪ್ರಚಾರ ಅಧಿಕಾರಿಯಾಗಿ ಸೇರಿಸಿಕೊಂಡರು. ಇಪ್ಪತ್ತು ವರ್ಷಗಳ ಕಾಲ ಲವಲವಿಕೆಯಿಂದ ವೃತ್ತಿ ನಿರ್ವಹಿಸಿದ ದಾಂತಿಯವರು ಬ್ಯಾಂಕನ್ನು ಜನಸಾಮಾನ್ಯರೆಡೆಗೆ ಒಯ್ದರು. ತಾನು ಸಮಾಜದಿಂದ ಬೆಳೆದಿದ್ದೇನೆ; ಸಮಾಜದ ಬೆಳವಣಿಗೆಯಲ್ಲಿ ತಾನೂ ಪಾಲುಗೊಳ್ಳಬೇಕು ಎಂಬ ತುಡಿತವೇ ಅವರನ್ನು ಸಮಾಜಮುಖಿಯನ್ನಾಗಿ ರೂಪಿಸಿತ್ತು. ಯಾವುದೇ ಸಮಸ್ಯೆ ಇರಲಿ, ಜಗಳ ಇರಲಿ ದಾಂತಿ ಮಾಸ್ಟರಲ್ಲಿಗೆ ಹೋದರೆ ಸಮರ್ಪಕ ಪರಿಹಾರ ಸಿಗುತ್ತದೆ ಎಂಬುವಂತೆ ಅವರು ಜನಜನಿತರಾಗಿದ್ದರು.

ಕ್ರಿಯಾಶೀಲ ವ್ಯಕ್ತಿತ್ವ
ದಾಂತಿಯವರೆಂದರೆ ಎಲ್ಲರಿಗೂ ಪ್ರೀತಿ. ಇವರಿಗೂ ಪ್ರೀತಿಗಿಂತ ದೊಡ್ಡ ವಸ್ತು ಬೇರೆ ಯಾವುದೂ ಇರಲಿಲ್ಲ. ನಿನ್ನನ್ನು ನೀನು ಪ್ರೀತಿಸುವಷ್ಟೆ ನಿನ್ನ ನೆರೆಯವರನ್ನೂ ಪ್ರೀತಿಸು; ನಿನಗೆ ಬೇರೆಯವರು ಯಾವುದನ್ನು ಮಾಡಬಾರದು ಎಂದು ಇಚ್ಛಿಸುವಿಯೊ ಅದನ್ನು ನೀನೂ ಬೇರೆಯವರಿಗೆ ಮಾಡಬೇಡ ಇತ್ಯಾದಿ ಯೇಸುವಿನ ನುಡಿಗಳನ್ನು ತಮ್ಮ ಹೃದಯಕ್ಕೆ ತಂದುಕೊಂಡವರು ದಾಂತಿಯವರು. ತಮ್ಮ ಮನೆಯಲ್ಲಿ ಕ್ರೈಸ್ತ ಹಬ್ಬಗಳ ಜೊತೆಗೆ ಇತರ ಹಬ್ಬಗಳನ್ನೂ ಆಚರಿಸುತ್ತಿದ್ದರು. ದೀಪಾವಳಿಯಂದು ದೀಪ ಹಚ್ಚುತ್ತಿದ್ದರು, ಗೋಪೂಜೆಯಂದು ಗೋವುಗಳನ್ನು ಸಿಂಗರಿಸುತ್ತಿದ್ದರು. ಒಟ್ಟಿನಲ್ಲಿ ಅವರದು ಸರ್ವಧರ್ಮ ಸಮದೃಷ್ಟಿ. ದಾಂತಿಯವರು ಕಲಾಸಂಪನ್ನರಾಗಿದ್ದರು. ಸಾಹಿತ್ಯ, ಸಂಗೀತ, ಯಕ್ಷಗಾನ, ಭೂತ, ಕೋಲ ಇವೆಲ್ಲ ಅವರಿಗೆ ಪ್ರಿಯವೆ. ಯಾವುದು ಬದುಕನ್ನು ಸಮೃದ್ಧಗೊಳಿಸುತ್ತದೆ ಅದೆಲ್ಲ ನಮಗೆ ಬೇಕು ಎಂಬ ಜಾಯಮಾನದವರು ಅವರು.

ಕನ್ನಡ ಪ್ರೇಮ
ಕೊಂಕಣಿ ಮಾತ್ಯಭಾಷೆಯವರಾದರೂ ದಾಂತಿಯವರ ಕನ್ನಡ ಪ್ರೇಮ ಅನನ್ಯವಾದುದು. ಕರ್ನಾಟಕದವರು ಕನ್ನಡವನ್ನು ಪ್ರೀತಿಸಬೇಕು, ಕನ್ನಡದ ಬಗ್ಗೆ ಗೌರವ ತಾಳಬೇಕು, ಕನ್ನಡವನ್ನು ಚೆನ್ನಾಗಿ ಕಲಿಯಬೇಕು ಎಂಬ ಧೋರಣೆಯವರಾಗಿದ್ದರು ಅವರು. ಮನೆಯಲ್ಲಿ ತಮ್ಮ ಮಕ್ಕಳು ಶುದ್ಧಗನ್ನಡ ಬಳಸುವಂತೆ ಎಚ್ಚರ ವಹಿಸುತ್ತಿದ್ದರು. ಸಾಹಿತ್ಯ ಅವರಿಗೆ ಸದಾ ಸುಖಕೊಡುವ ಸಾಧನವಾಗಿತ್ತು. ಮಂಗಳೂರಿನ ಕಥೋಲಿಕ್ ಸಭೆಯು ‘ದಾಂತಿ ಸ್ಮಾರಕ ಸಾಹಿತ್ಯ ಟ್ರಸ್ಟ್’ನ್ನು ಸ್ಥಾಪಿಸಿ ಪ್ರತಿ ವರುಷ ಶ್ರೇಷ್ಠ ಕನ್ನಡ ಸಾಹಿತ್ಯ ಪುರಸ್ಕಾರವನ್ನು ನೀಡುತ್ತಿದೆ.
೨೩-೧೧-೧೯೯೧ರಂದು ಯೇಸುವಿನ ಪಾದ ಸೇರಿದ ಶ್ರೀ ದಾಂತಿಯವರು ಇಂದು ನಮ್ಮೊಂದಿಗಿಲ್ಲ ಅದಕ್ಕಿಂತ ವಿಷಾದವೆಂದರೆ ಅವರು ರಚಿಸಿದ ಎಲ್ಲ ಸಾಹಿತ್ಯ ಕೃತಿಗಳು ನಮಗೀಗ ಲಭ್ಯವಿಲ್ಲ. ಇರುವಷ್ಟು ಕೃತಿಗಳನ್ನಾದರೂ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ. ಡಾ. ಸಬೀಹ ಭೂಮಿಗೌಡರು ‘ಕರಾವಳಿ ಕತೆಗಳು’ ಎಂಬ ತಮ್ಮ ಸಂಶೋಧನೆ ಸಂದರ್ಭದಲ್ಲಿ ದಾಂತಿಯವರ ಕತೆಗಳನ್ನು ಬಳಸಿಕೊಂಡಿರುವುದು ಮತ್ತು ಡಾ. ಬಿ. ಜನಾರ್ದನ ಭಟ್ಟರು ತಾವು ಸಂಪಾದಿಸಿದ ‘ಶತಮಾನದ ಕತೆಗಳು’ ಸಂಪುಟದಲ್ಲಿ ಅವರ ಎರಡು ಕತೆಗಳನ್ನು ಸೇರಿಸಿರುವುದು ಇಲ್ಲಿ ಉಲ್ಲೇಖನೀಯ.

ಸೋಮವಾರ, ಮೇ 21, 2012

ಪುನರುತ್ಥಾನ


ಸರಿಯಿತು ಕಲ್ಲು ತೆರೆಯಿತು ಬಾಗಿಲು
ಯೇಸು ಹೊರಹೋಗಲೆಂದಲ್ಲ
ಹೊಸ ಜೀವ ಹೊಸ ಭಾವ
ಉದಯಿಸಿರುವುದ ನಾ ಕಾಣಲೆಂದು

ಕ್ರಿಸ್ತನೆದ್ದಿರುವನು ನಿಜ
ಆದರೆ ನಾನಿನ್ನೂ ಎದ್ದಿಲ್ಲ
ನಾನಿನ್ನೂ ಎದ್ದಿಲ್ಲ ಪಾಪಕೂಪದಿಂದ

ಕ್ರಿಸ್ತ ನೀ ಬಾರಾ ಪೊರೆಯೆನ್ನ
ದುರಾಸೆಯ ಬಲೆಯಿಂದ
ಅಸೂಯೆಯ ಸೆರೆಯಿಂದ
ಧನದಾಹದ ಮದದಿಂದ

ಹೆಸರು ಮಾಡುವ ಮೋಹ
ಅಳಿದುಹೋಗಲಿ ಸ್ವಾಮಿ
ಬದುಕಗೊಡಿಸುವ ಗುಣವು
ನನ್ನಲುದಯಿಸಲಿ

ನನ್ನಾತ್ಮ ಬಲವು ನೀನು
ನನ್ನ ಜೀವದ ಬೆಳಕು
ನಿನ್ನ ಭರವಸೆಯ ದಾರಿಯಲಿ
ಎನ್ನ ಮುನ್ನಡೆಸು

ಶನಿವಾರ, ಮಾರ್ಚ್ 17, 2012

ಸಂತ ಜೋಸೆಫ್

ಮಾರ್ಚ್ ೧೯ ಸಂತ ಜೋಸೆಫರ ಹಬ್ಬ.  ಮರಿಯಳ ಆದರ್ಶ ಪತಿಯಾಗಿ, ಯೇಸುವಿನ ಸಾಕು ತಂದೆಯಾಗಿ ವಿಶ್ವ ಧರ್ಮಸಭೆಯ ಪೋಷಕರಾಗಿ ಸಂತ ಜೋಸೆಫರನ್ನು ನಾವು ಗೌರವಿಸುತ್ತಾ ಪ್ರತಿವರ್ಷ ಮಾರ್ಚ್ ೧೯ರಂದು ಅವರ ಸ್ಮರಣೆಯ ದಿನವೆಂದು ಆಚರಿಸುತ್ತೇವೆ. ಮೇ ಒಂದರಂದು ಅವರನ್ನು ಕಾರ್ಮಿಕರ ಪಾಲಕರೆಂದು ಸ್ಮರಿಸುತ್ತೇವಾದರೂ ಬಹು ಹಿಂದಿನಿಂದಲೂ ಮಾರ್ಚ್ ತಿಂಗಳನ್ನು ಸಂತ ಜೋಸೆಫರಿಗೆ ಸಮರ್ಪಿಸಲಾಗಿದೆ.
ಅವರೊಬ್ಬ ಮೌನ ಸಂತ. ಏನನ್ನೂ ಆಡದಲೇ ಎಲ್ಲವನ್ನೂ ಮಾಡಿ ತೋರಿಸಿದಾತ. ಅವರೊಬ್ಬ ಬಡಗಿಯೆಂದು ನಮಗೆ ತಿಳಿದುಬರುವುದು ಯಾವಾಗೆಂದರೆ ಜನರು ಯೇಸುವನ್ನು ಕುರಿತು ’ಓ ಇವನು ಆ ಬಡಗಿಯ ಮಗನಲ್ಲವೇ?’ ಎನ್ನುವಾಗ ಮಾತ್ರ. ಅವರು ಆರ್ಥಿಕವಾಗಿ ಸುಸ್ಥಿತಿಯಲ್ಲಿ ಇರಲಿಲ್ಲ ಎನ್ನುವುದಕ್ಕೆ ಪವಿತ್ರ ಬೈಬಲಿನಲ್ಲಿ ಒಂದು ಸೂಚನೆಯಿದೆ. ಅದೇನೆಂದರೆ ಯೇಸುವಿನ ಜನನದ ವೇಳೆ ಅವರು ಜೆರುಸಲೇಮಿನ ಪವಿತ್ರಗುಡಿಗೆ ಎರಡು ಬೆಳುವಕ್ಕಿಗಳನ್ನು ದಾನವಾಗಿ ನೀಡಿದರಲ್ಲವೇ? ಅಂದರೆ ಕುರಿಯನ್ನು ದಾನ ಕೊಡಲು ಶಕ್ತರಲ್ಲದವರು ಬೆಳುವಕ್ಕಿಯನ್ನು ಕೊಡಬಹುದೆಂದು ದೇವಾಲಯದ ನಿಯಮವಿತ್ತು ತಾನೇ? ಅಂದ ಮೇಲೆ ಅವರು ಬಡವರೇ ಹೌದು.  ಆದರೆ ಅವರು ದಾವಿದನ ವಂಶಸ್ತರಾಗಿದ್ದರು ಎಂಬುದು ಮಾತ್ರ ನಿಜ, ಏಕೆಂದರೆ ದೇವದೂತನು ಅವರನ್ನು ಕುರಿತು ’ದಾವಿದ ವಂಶಸ್ತನಾದ ಜೋಸೆಫನೇ’ ಎಂದು ಕರೆಯುತ್ತಾನೆ. ಅವರು ದಾವಿದ ವಂಶಸ್ತರೆಂಬುದನ್ನು ಮತ್ತಾಯ ಮತ್ತು ಲೂಕ ಇಬ್ಬರೂ ತಮ್ಮ ಶುಭಸಂದೇಶದಲ್ಲಿ ದಾಖಲಿಸಿದ್ದಾರೆ. ತಮ್ಮ ಏಕಮಾತ್ರ ಪುತ್ರನನ್ನು ದಾವಿದ ವಂಶಸ್ತನಾಗಿಸುವ ಉದ್ದೇಶದಿಂದ ದೇವರು ಜೋಸೆಫರನ್ನು ಆರಿಸಿಕೊಂಡರು.
ಜೋಸೆಫರು ನೀತಿವಂತರಾಗಿದ್ದರು, ಮರಿಯಳನ್ನು ಅವಮಾನಕ್ಕೆ ಗುರಿಮಾಡಬೇಕೆಂಬ ಕೀಳು ಅಭಿರುಚಿ ಅವರಿಗಿರಲಿಲ್ಲ, ಹಾಗಾಗಿ ಅವರೊಬ್ಬ ಘನಗಾಂಭೀರ್ಯದ ವ್ಯಕ್ತಿತ್ವದವರು ಎಂದು ಕೂಡಾ ದಾಖಲಾಗಿರುವುದನ್ನು ನೋಡುವಾಗ ನಮಗೆ ಜೋಸೆಫರ ಬಗ್ಗೆ ತುಂಬಾ ಗೌರವ ಮೂಡುತ್ತದೆ. ಯೇಸುವಿನ ಜನನದ ಸಂದರ್ಭದಲ್ಲಿ ಜೋಸೆಫರು ಎಲ್ಲ ರೀತಿಯ ಆತಂಕಗಳಿಂದ ತಮ್ಮ ಕುಟುಂಬವನ್ನು ಜತನದಿಂದ ಕಾಪಾಡಿಕೊಳ್ಳುವುದು ಅವರ ಆದರ್ಶಕ್ಕೆ ಸಾಕ್ಷಿಯಾಗಿದೆ. ಯೇಸು ಕನ್ಯಾಪುತ್ರನಾಗಿ ಜನಿಸುವುದಕ್ಕೆ ಮೊದಲ ಸಾಕ್ಷಿಯಾಗುವ ಜೋಸೆಫರು ಆಮೇಲೆ ಅಷ್ಟೇ ನಿಗೂಢವಾಗಿ ಅಂತರ್ಧಾನರಾಗುತ್ತಾರೆ. ಉಳಿದಂತೆ ಅವರ ಕುರಿತ ಕತೆಯೆಲ್ಲವೂ ನಮಗೆ ಬೈಬಲ್ ಹೊರತಾಗಿ ಇತರ ಐತಿಹ್ಯಗಳಲ್ಲಷ್ಟೇ ಸಿಗುತ್ತವೆ. ಅವಂತೂ ಅತಿ ರಂಜಕ ಹಾಗೂ ಅತಿ ರೋಚಕ. ಸಂತ ಜೋಸೆಫರ ಮನವಿಮಾಲೆಯಲ್ಲಿ ಅವರ ಕುರಿತು ಬಹು ಮನಮೋಹಕ ಸಂಗತಿಗಳು ನಮಗೆ ಸಿಗುತ್ತವೆ.
ಅದೇನೇ ಇರಲಿ, ಜೋಸೆಫರು ದೇವರಿಗೇ ಭಿಕ್ಷೆ ನೀಡುವಷ್ಟು ದೊಡ್ಡವರಾಗಿದ್ದರು ಎಂಬುದು ಮಾತ್ರ ಸತ್ಯ. ದೇವರು ತನ್ನ ಒಬ್ಬನೇ ಮಗನನ್ನು ನಿನ್ನ ಮಗನೆಂದು ತಿಳಿದು ಸಾಕಿಕೊಡಪ್ಪ ಎಂದಾಗ ಮರುಮಾತಾಡದೇ, ಅದರ ಅಡ್ಡ ಪರಿಣಾಮಗಳನ್ನು ಚಿಂತಿಸದೇ ಒಪ್ಪಿಕೊಂಡ ಮಹಾನುಭಾವ ಜೋಸೆಫರು. ನಿಜ ಹೇಳಬೇಕೆಂದರೆ ಇಡೀ ಬೈಬಲನ್ನು ತಿರುವಿ ನೋಡಿದಾಗ ಜೋಸೆಫರು ಒಂದು ಮಾತನ್ನಾದರೂ ಆಡಿದ ಉದಾಹರಣೆ ಎಲ್ಲೂ ಇಲ್ಲ. ಬಾಯಿಗೆ ಬೀಗ ಹಾಕಿಕೊಂಡು ಹಗಲೂರಾತ್ರಿ ನಡೆದು ಬಿಮ್ಮನಸೆ ಮರಿಯಮ್ಮನವರನ್ನು ನಜರೇತಿನಿಂದ ಬೆತ್ಲೆಹೇಮಿಗೆ ಜೋಪಾನವಾಗಿ ಕರೆತಂದುದಲ್ಲದೆ ಹೆರಿಗೆ ಮಾಡಿಸಿ ಬಾಣಂತಿ ಉಪಚಾರ ಮಾಡಿದ್ದು, ಮಗುವಿಗೆ ಅಪಾಯವಿದೆ ಎಂದು ಗೊತ್ತಾದಾಗ ಇದ್ದುದೆಲ್ಲವನ್ನೂ ಬಿಟ್ಟು ಬರಿಗೈಯಲ್ಲಿ ಕುಟುಂಬವನ್ನು ಹೊರದೇಶಕ್ಕೆ ಕರೆದೊಯ್ದು ಜೋಪಾನ ಮಾಡಿದ್ದು, ಹನ್ನೆರಡು ವರ್ಷಗಳ ನಂತರ ಜೆರುಸಲೇಮಿನ ಜಾತ್ರೆಯಲ್ಲಿ ಮಗು ಕಳೆದುಹೋದಾಗ  ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಹುಡುಕಾಡಿದ್ದು ಒಂದೇ ಎರಡೇ, ಎಲ್ಲಾದರೂ ಆ ಬಡಪಾಯಿ ಮಾತನಾಡಿದ್ದೇ ಇಲ್ಲ. ಗಂಡ ಆದವನು ಬಾಯಿ ಮುಚ್ಚಿಕೊಂಡು ತೆಪ್ಪಗಿರಬೇಕು ಅನ್ನೋದನ್ನ ಇದು ಸೂಚಿಸುತ್ತದೆಯೇ? ಅವರೊಬ್ಬ ತುಂಬಿದ ಕೊಡವಾಗಿದ್ದರು, ತುಂಬಿದ ಕೊಡ ತುಳುಕುವುದಿಲ್ಲ ಎಂಬ ಗಾದೆಯೇ ಇದೆಯಲ್ಲವೇ?
ಇನ್ನು ಯೇಸುವಿನ ಬಹಿರಂಗ ಜೀವನದ ನಂತರ ಎಲ್ಲೂ ಅವರ ಪ್ರಸ್ತಾಪವಾಗದೇ ಇರುವುದರಿಂದ ಆ ವೇಳೆಗೆ ಜೋಸೆಫರು ಇಹಲೋಕ ತ್ಯಜಿಸಿದ್ದರೆಂಬ ನಿರ್ಣಯ ತಳೆಯಬೇಕಾಗುತ್ತದೆ. ಅಂದರೆ ಆ ಅನ್ಯೋನ್ಯ ಕುಟುಂಬದಲ್ಲಿ ಯೇಸು ಮತ್ತು ಮರಿಯಮ್ಮನವರ ತೋಳುಗಳಲ್ಲಿ ಪ್ರಾಣ ಬಿಡುವುದೆಂದರೆ ಅವರೆಂಥ ಪುಣ್ಯಶಾಲಿಯಾಗಿರಬೇಕು ಅಲ್ಲವೇ? ಪ್ರಾಪಂಚಿಕವಾಗಿ ಅವರು ಬಡವರಾಗಿದ್ದರೂ ಪಾರಮಾರ್ಥಿಕವಾಗಿ ಶ್ರೀಮಂತರಾಗಿದ್ದರು. ಅವರು ನೀತಿಗಾಗಿ ಹಸಿದು ಹಾತೊರೆದರು. ವಿನಯವಂತರಾಗಿ ಬಾಳಿದರು.
ಅವರೆಂದೂ ಕೋಪಗೊಳ್ಳಲಿಲ್ಲ, ಸಿಡುಕಲಿಲ್ಲ ದುಡುಕಲಿಲ್ಲ, ಅವರದು ಅನುಪಮ ಶಾಂತಹೃದಯ.
ಅವರು ನಿರ್ಮಲಚಿತ್ತರಾಗಿದ್ದರಿಂದ ದೇವರನ್ನು ಮುಖಾಮುಖಿ ಕಂಡರಲ್ಲದೆ ದೇವರನ್ನು ತಮ್ಮ ಕರಗಳಲ್ಲಿ ಎತ್ತಿ ಆಡಿಸಿದರು. ಯೇಸುಕ್ರಿಸ್ತರು ತಮ್ಮ ಪರ್ವತಪ್ರಸಂಗದಲ್ಲಿ ಹೇಳಿದ ಎಲ್ಲ ಅಷ್ಟಭಾಗ್ಯಗಳಿಗೂ ಭಾಜನರಾದವರು ಸಂತ ಜೋಸೆಫರು.
ಎರಡು ಮಹಾಯುದ್ಧಗಳ ನಂತರ ಕಮ್ಯುನಿಸ್ಟ್ ಪ್ರಭಾವ ಅತಿಯಾದಾಗ ಮೇ ಒಂದಕ್ಕೆ ಇನ್ನಿಲ್ಲದ ಪ್ರಾಬಲ್ಯ ಬಂದಿತ್ತಲ್ಲ, ಆಗ ಜಗದ್ಗುರುಗಳಾದ ೧೨ನೇ ಭಕ್ತಿನಾಥರು ಸಂತ ಜೋಸೆಫರನ್ನು ಕಾರ್ಮಿಕರ ಪಾಲಕ ಎಂದು ಸಾರಿ ಆ ದಿನಕ್ಕೆ ಧಾರ್ಮಿಕ ಮೆರುಗು ನೀಡಿದರು.
ನ್ಯೂ ಮೆಕ್ಸಿಕೋದ ಸಾಂತಾ ಫೆ ಎಂಬಲ್ಲಿನ ಒಂದು ಕನ್ಯಾಮಠದಲ್ಲಿ ಒಂದು ಸುರುಳಿಯಾಕಾರದ ಅದ್ಭುತ ಮೆಟ್ಟಿಲಿದೆ. ಅದನ್ನೊಬ್ಬ ಮರಗೆಲಸದವನು ಇತರ ಕೆಲಸಗಾರರ ಸಹಾಯವಿಲ್ಲದೆ ತಾನೊಬ್ಬನೇ ಹಗಲೂ ರಾತ್ರಿ ಕಟ್ಟಿದನಂತೆ, ಕೆಲಸ ಮುಗಿದ ಮೇಲೆ ಕೂಲಿ ಕೊಡೋಣವೆಂದುಕೊಂಡು ಕನ್ಯಾಸ್ತ್ರೀಯರು ಕಾದಿದ್ದೇ ಕಾದಿದ್ದು, ಆತ ಬರಲೇ ಇಲ್ಲವಂತೆ, ಎಷ್ಟೊ ಜನ ಘಟಾನುಘಟಿ ಮರಗೆಲಸದವರು ಬಂದು ಆ ಮೆಟ್ಟಿಲನ್ನು ನೋಡಿ ಅಚ್ಚರಿಗೊಂಡು ಇದನ್ನು ಕಟ್ಟಿದಾತ ಅಸಾಮಾನ್ಯ ಮನುಷ್ಯನೇ ಸರಿ, ಏಕೆಂದರೆ ಇದು ನಮ್ಮಿಂದ ಸಾಧ್ಯವಾಗದ ಕೆಲಸ ಎಂದರಂತೆ. ಹಾಗಿದ್ದರೆ ಅದನ್ನು ಮಾಡಿದವರು ಸಂತ ಜೋಸೆಫರೇ ಇರಬಹುದೆಂದು ಆ ಕಾನ್ವೆಂಟಿನವರು ನಂಬಿದ್ದಾರೆ, ಇಂದಿಗೂ ಅಸಂಖ್ಯಾತ ಜನ ಆ ಕಾನ್ವೆಂಟನ್ನು ಸಂದರ್ಶಿಸಿ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ.
ಪವಿತ್ರ ಕುಟುಂಬದ ಪಾಲಕಸಂತರೇ, ವಿಧೇಯತೆಯ ಅಪರಾವತಾರ, ಕೆಲಸಗಾರರ ಆದರ್ಶ, ಮೌನಸಂತ, ಪವಿತ್ರ ಮರಣದ ಹರಿಕಾರರೇ ನಿಮ್ಮ ಕೃಪೆ ನಿರಂತರವೂ ನಮ್ಮ ಮೇಲಿರಲಿ.

ಭಾನುವಾರ, ಫೆಬ್ರವರಿ 26, 2012

ಜೆಸ್ವಿತ್ ಪತ್ರಗಳಲ್ಲಿ ಹೈದರನ ಹೂರಣ


ಐರೋಪ್ಯನಾಡುಗಳಿಂದ ಆಗಮಿಸಿ ಅಂದು ಧರ್ಮಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಮಿಶನರಿಗಳು ಪ್ರತಿವರ್ಷವೂ ತಮ್ಮ ಸಾಧನೆಗಳ ಕುರಿತಂತೆ ತಮ್ಮ ವರಿಷ್ಠರಿಗೆ ವಿಸ್ತೃತ ವರದಿಗಳನ್ನು ಕಳಿಸಬೇಕಾಗಿತ್ತು. ಆ ವರದಿಗಳು ಪ್ರಚಾರಕಾರ್ಯದ ಸಾಧ್ಯಾಸಾಧ್ಯತೆ, ಅದಕ್ಕಿರುವ ವಿಘ್ನಗಳು, ಅಂದಿನ ಸಾಮಾಜಿಕ ಪರಿಸ್ಥಿತಿ, ಸಮಕಾಲೀನ ರಾಜಾಳ್ವಿಕೆಗಳು, ಯುದ್ಧಗಳು, ಜನರ ಮನೋಭಾವ, ಜೀವನಶೈಲಿ, ಆಚಾರವಿಚಾರ, ಸಂಸ್ಕೃತಿ, ಅಂದಿನ ರಾಜರುಗಳ ಏಳುಬೀಳು ಹಾಗೂ ಅವರ ಬಲಾಬಲಗಳ ಬಗ್ಗೆ ನಿಷ್ಪಕ್ಷಪಾತವಾದ ಕನ್ನಡಿ ಹಿಡಿದಿವೆ. ಮಿಶನರಿಗಳು ಅವುಗಳನ್ನೆಲ್ಲ ಅಧ್ಯಯನ ಮಾಡಿ ನಗಣ್ಯವೆನಿಸಬಹುದಾದ ಸಣ್ಣ ವಿವರವನ್ನೂ ದಾಖಲಿಸುವುದರ ಜೊತೆಗೆ ತಾವು ಆ ವರ್ಷ ಎಷ್ಟು ಜನರಿಗೆ ಕ್ರೈಸ್ತದೀಕ್ಷೆ ನೀಡಿದರೆಂಬುದರ ಲೆಕ್ಕ ಹೇಳಬೇಕಿತ್ತು. ಇದರೊಂದಿಗೆ ಧರ್ಮಪ್ರಚಾರಕಾರ್ಯದಲ್ಲಿ ಅವರು ಅನುಭವಿಸುತ್ತಿರುವ ಕಷ್ಟಸಂಕಟ ಯಾತನೆಗಳ ಚಿತ್ರಣವೂ ಇರುತ್ತಿತ್ತು.
ಚೆಸ್ವಿತ್ ಪತ್ರಗಳು ಎನಿಸಿಕೊಳ್ಳುವ ಈ ವಾರ್ಷಿಕ ವರದಿಗಳನ್ನು ಕ್ರಿಸ್ತಶಕ ೧೬೪೦ ರಿಂದ ೧೭೫೦ ಅವಧಿಯವಾಗಿದ್ದು ಲತೀನ್, ಸ್ಪಾನಿಷ್, ಪೋರ್ಚುಗೀಸ್, ಫ್ರೆಂಚ್ ಭಾಷೆಗಳಲ್ಲಿ ಬರೆಯಲಾಗಿವೆ. ಇಂದಿಗೂ ಈ ವರದಿಗಳನ್ನು ಕ್ರೈಸ್ತ ಜಗದ್ಗುರುಪೀಠವಿರುವ ವ್ಯಾಟಿಕನ್ನಿನ ಗ್ರೆಗರಿಯನ್ ವಿಶ್ವವಿದ್ಯಾಲಯದ ಪತ್ರಾಗಾರದಲ್ಲಿ ಸಂಗ್ರಹಿಸಿಡಲಾಗಿದೆ.
ಜೆಸ್ವಿತ್ ಪತ್ರಗಳನ್ನು ಇತಿಹಾಸಾಧ್ಯಯನದ ದೃಷ್ಟಿಯಿಂದ ಅವಲೋಕಿಸಿದರೆ ರಾಜರುಗಳ ಪೂರ್ವೋತ್ತರಗಳ ಕುರಿತ ವರದಿಗಳು ಕರ್ನಾಟಕದ ಇತಿಹಾಸದ ಪುನರ್ ರಚನೆಗೆ ಕಾರಣವಾಗಿವೆ ಎಂದು ಘಂಟಾಘೋಷವಾಗಿ ಹೇಳಬಹುದು. ನಮ್ಮ ದೇಶದ ಪ್ರಾಚೀನ ಇತಿಹಾಸದ ದಾಖಲಿಸುವ ಸಂದರ್ಭದಲ್ಲಿ ಸ್ಥಳೀಯ ಬರಹಗಾರನಿಗೆ ತನ್ನೊಡೆಯನ ಉಪ್ಪಿನ ಋಣವೇ ಭಾರವಾಗುವುದರಿಂದ ಆತ ಒಡೆಯನ ಉನ್ನತಿಯ ವಿಷಯಗಳನ್ನಷ್ಟೇ ದಾಖಲಿಸುತ್ತಾನೆ, ಅವನತಿಯ ವಿಷಯಗಳನ್ನು ಮರೆಮಾಚುತ್ತಾನೆ.
ಆದ್ದರಿಂದ ನಮ್ಮ ದೇಶದ ಚರಿತ್ರೆಯನ್ನು ಪುನರ್ ನಿರೂಪಿಸುವಾಗ ನಮ್ಮ ನಾಡಿನ ಆಕರಗಳು ಪೂರ್ಣ ನ್ಯಾಯ ಒದಗಿಸುವುದಿಲ್ಲ. ಆದರೆ ವಿದೇಶೀ ವ್ಯಕ್ತಿಗೆ ಈ ಹಂಗು ಇರುವುದಿಲ್ಲವಾದ್ದರಿಂದ ಆತ ಇತಿಹಾಸವನ್ನು ನಿಷ್ಪಕ್ಷಪಾತವಾಗಿ ದಾಖಲಿಸುತ್ತಾನೆ. ಈ ಒಂದು ದೃಷ್ಟಿಯಿಂದ ಜೆಸ್ವಿತ್ ಪತ್ರಗಳ ಬೆಳಕಲ್ಲಿ ನಮಗೆ ನಮ್ಮ ನಾಡಿನ ಇತಿಹಾಸದ ಸ್ಪಷ್ಟ ದೃಶ್ಯಗಳು ಕಾಣತೊಡಗುತ್ತವೆ.
ಕ್ರಿಸ್ತಶಕ ೧೭೫೬ರ ಒಂದು ಜೆಸ್ವಿತ್ ಪತ್ರದ ಮೂಸೆಯಲ್ಲಿ ನೋಡಿದಾಗ ಹೈದರನು ಒಬ್ಬ ರಾಜಕೀಯ ಮುತ್ಸದ್ದಿಯಾಗಿರಲಿಲ್ಲ, ಅವನ ರಣತಂತ್ರ ನಡೆನುಡಿ ಎಲ್ಲವೂ ಕುಲೀನ ಧೀಮಂತಿಕೆಯಿಲ್ಲದ, ಇಂದಿನ ಪರಿಭಾಷೆಯಲ್ಲಿ ಹೇಳುವುದಾದರೆ ದುರುಳ ದುಂಡಾವರ್ತಿಯ ’ಗೂಂಡಾ’ / ’ರೌಡಿ’ತನವಾಗಿತ್ತೆಂದು ತಿಳಿಯಬಹುದಾಗಿದೆ.
ಕ್ರಿಸ್ತಶಕ ೧೭೨೨ರಲ್ಲಿ ಬೂದಿಕೋಟೆಯಲ್ಲಿ ಜನಿಸಿದ ಹೈದರ್‌ಅಲಿಯು ೧೭೪೯ರಲ್ಲಿನ ದೇವನಹಳ್ಳಿ ಮುತ್ತಿಗೆ ಸಂದರ್ಭದಲ್ಲಿ ಸಮರ್ಥ ರಾಹುತನಾಗಿ ಗುರುತಿಸಿಕೊಂಡ. ಅವನ ಧೈರ್ಯಶಾಲಿ ಮುನ್ನುಗ್ಗುವಿಕೆಯನ್ನು ಕಂಡ ಸೇನಾಪತಿಯು ಆತನನ್ನು ೫೦ ರಾಹುತರ ಹಾಗೂ ೨೦೦೦ ಪದಾತಿ ಸೈನಿಕರ ಮುಖಂಡನನ್ನಾಗಿ ನೇಮಿಸಿದ. ಹೀಗೆ ದೇವನಹಳ್ಳಿಯು ಮೈಸೂರು ದೇಶದ ಪೂರ್ವದಂಚಿನ ದುರ್ಗವಾಯಿತು. ದೇವನಹಳ್ಳಿಯಿಂದ ಹಿಡಿದು ಪೂರ್ವಕರಾವಳಿಯವರೆಗಿನ ಪ್ರದೇಶವನ್ನು ಕರ್ನಾಟಕ ರಾಜ್ಯಾಧೀಶರು ವಿಜಯನಗರದಿಂದ ಆಳುತ್ತಿದ್ದರು. ಈ ಕರ್ನಾಟಕ ಪ್ರಾಂತ್ಯದ ಮೇಲೆ ಸ್ವಾಮ್ಯ ಸಾಧಿಸಲು ಇಂಗ್ಲಿಷರು ಹಾಗೂ ಫ್ರೆಂಚರು ಪೈಪೋಟಿ ನಡೆಸಿದ್ದರು. ಹೀಗೆ ಅವರಿಬ್ಬರಿಗೆ ಯುದ್ಧ ಸಂಭವಿಸಿದಾಗ ಅವರ ಪೂರೈಕೆ ದಳದ ಮೇಲೆ ಬಿದ್ದ ಹೈದರ್ ಎರಡು ಒಂಟೆಗಳ ಹೇರಿನಷ್ಟು ಚಿನ್ನದ ನಾಣ್ಯ, ೫೦೦ ಕುದುರೆಗಳು ಹಾಗೂ ೫೦೦ ಹೇರುಗಳನ್ನು ದೋಚಿ ದೇವನಹಳ್ಳಿಗೆ ಸಾಗಿಸಿದ. ಈ ಕಳವಿನ ಮಾಲಿಗಾಗಿ ದೊರೆಗಳಿಂದ ಮೆಚ್ಚುಗೆಯನ್ನೂ ಪಡೆದ.
ತಿರುಚಿನಾಪಳ್ಳಿ ವಶವಾದ ನಂತರ ಅವನನ್ನು ದಿಂಡಿಗಲ್ ಕೋಟೆಯ ಸೇನಾಪತಿಯಾಗಿ ನೇಮಿಸಲಾಯಿತು. ಲೂಟಿಗಳಲ್ಲಿ ಮುಂದುವರಿದ ಆತ ೧೫೦೦ ಕುದುರೆ, ೩೦೦೦ ಪದಾತಿ ಸೈನ್ಯ, ತಲಾ ೪ ಬಂದೂಕು ಹಾಗೂ ಇತರ ಪರಿಕರಗಳನ್ನು ಹೊಂದಿದ ಪೂರೈಕೆದಾರರು, ಅಸಂಖ್ಯಾತ ಆನೆಗಳು, ಒಂಟೆಗಳು ಮತ್ತು ಗುಡಾರಗಳನ್ನು ಲಪಟಾಯಿಸಿದ. ತನ್ನಿಷ್ಟ ಬಂದಂತೆ ಸೈನ್ಯವನ್ನು ಎಲ್ಲೆಂದರಲ್ಲಿ ಮುನ್ನುಗ್ಗಿಸಿ ದೋಚುವುದು ಅವನ ಹವ್ಯಾಸವಾಯಿತು. ಮೈಸೂರ ಒಡೆಯರು ಅವನನ್ನು ಹಿಂದಕ್ಕೆ ಕರೆಸಿಕೊಳ್ಳುವ ಎಲ್ಲ ಪ್ರಯತ್ನಗಳನ್ನೂ ಆತ ಧಿಕ್ಕರಿಸಿದ. ಆ ಜೆಸ್ವಿತ್ ವರದಿಯಲ್ಲಿ “ಹೈದರನ ಸೈನ್ಯ ಬರುತ್ತಿದೆಯೆಂಬ ಸುದ್ದಿ ಕೇಳಿಯೇ ಗಂಡಸರು ಊರು ತೊರೆದು ಕಾಡು ಸೇರಿಕೊಳ್ಳುತ್ತಿದ್ದರು, ಇನ್ನು ಹೆಣ್ಣುಮಕ್ಕಳಂತೂ ಬೆಂಕಿಗೆ ಹಾರಿಕೊಳ್ಳುತ್ತಿದ್ದರು, ನಮ್ಮ ನಾಲ್ಕು ಚರ್ಚುಗಳೂ, ಹಲವು ಊರುಗಳಲ್ಲಿದ್ದ ಮಿಶನರಿಗಳ ಮನೆಗಳೂ ಅವನ ಸೈನ್ಯಕ್ಕೆ ಆಹುತಿಯಾದವು. ನಮ್ಮ ಹೆಣ್ಣುಮಕ್ಕಳ ಮೇಲೆ ಅವರು ನಡೆಸಿದ ಬಲಾತ್ಕಾರದ ಸಂಗತಿಗಳನ್ನಂತೂ ಹೇಳಲು ಅಸಾಧ್ಯ” ಎಂದು ದಾಖಲಿಸಲಾಗಿದೆ.
ಫ್ರೆಂಚರ ಕುಮ್ಮಕ್ಕಿನೊಂದಿಗೆ ಹೈದರ್ ಒಂದು ಪಕ್ಕಾ ಸೈನ್ಯ, ಮದ್ದುಗುಂಡು ದಾಸ್ತಾನು ಹಾಗೂ ಮದ್ದುಗುಂಡು ಕಾರ್ಖಾನೆಯನ್ನು ರೂಪಿಸಿದ. ಅನಂತರ ಅವನು ಬೆಂಗಳೂರ ಒಡೆಯನಾಗಿ ನೇಮಕಗೊಂಡು ಕೊಯಿಮತ್ತೂರು ಪ್ರಾಂತ್ಯದ ಸಮಸ್ತ ರಾಜಧನ ತನಗೇ ಸೇರುವಂತೆ ನೋಡಿಕೊಂಡ. ಮೈಸೂರಿನ ಮೇಲೆ ತಂಟೆ ಮಾಡುತ್ತಿದ್ದ ಮರಾಠರನ್ನು ಸದೆಬಡಿದು ಶ್ರೀರಂಗಪಟ್ಟಣದ ರಾಜದರ್ಬಾರಿನಲ್ಲಿ ‘ಫತೇ ಹೈದರ್ ಬಹಾದುರ್’ ಎಂಬ ಬಿರುದುಗಳಿಸಿದ.
ಇಷ್ಟಾದ ಮೇಲೆ ಕ್ರಿಸ್ತಶಕ ೧೭೫೯ರಲ್ಲಿ ಮೈಸೂರ ಒಡೆಯನಾಗಿದ್ದ ನಂಜರಾಜನನ್ನು ರಾಜಧಾನಿಯಿಂದ ಓಡಿಸಿ ತಾನೇ ರಾಜನೆಂದು ಘೋಷಿಸಿಕೊಂಡ. ಅದೇ ವೇಳೆಗೆ ಫ್ರೆಂಚ್ ರಾಯಭಾರಿಯೊಬ್ಬ ಬಂದು ಆರ್ಕಾಟ್ ಪ್ರಾಂತ್ಯದಿಂದ ಇಂಗ್ಲಿಷರನ್ನು ಹೊಡೆದೋಡಿಸಲು ತಮಗೆ ನೆರವಾಗಬೇಕೆಂದು ವಿನಂತಿಸಿದ. ಈ ಉದ್ದೇಶಕ್ಕಾಗಿ ೧೭೬೦ರಲ್ಲಿ ಪಾಂಡಿಚೇರಿಯಲ್ಲಿ ಲ್ಯಾಲಿಯೊಂದಿಗೆ ಒಂದು ಒಪ್ಪಂದಕ್ಕೆ ಬರಲಾಯಿತು. ಈ ಸಂತೋಷದಲ್ಲಿ ಅವನು ಬೀಗುತ್ತಿರಬೇಕಾದರೆ ಇದ್ದಕ್ಕಿದ್ದಂತೆ ಮೈಸೂರಿನ ಮೇಲೆ ಮರಾಠರು ದಾಳಿ ನಡೆಸಿದರು. ಖಂಡೇರಾವನ ನೇತೃತ್ವದಲ್ಲಿ ನಡೆದ ಆ ದಾಳಿ ಎಷ್ಟು ತೀವ್ರವಾಗಿತ್ತೆಂದರೆ ಹೈದರನು ತನ್ನ ಯುವಪತ್ನಿಯನ್ನೂ ಒಂಬತ್ತು ವರ್ಷದ ಮಗನನ್ನೂ ಬಿಟ್ಟು ತಲೆಮರೆಸಿಕೊಂಡು ಓಡಿಹೋಗಬೇಕಾಯಿತು.
ಅದುವರೆಗೆ ಎಂದೂ ಸೋಲನ್ನೇ ಕಾಣದಿದ್ದ ಹೈದರನಿಗೆ ಈ ಘಟನೆ ದೊಡ್ಡ ಪಾಠ ಕಲಿಸಿತು. ಮರಾಠರು ಮತ್ತೊಮ್ಮೆ ಮೈಸೂರನ್ನು ಗೆದ್ದುಕೊಂಡ ಅಮಲಿನಲ್ಲಿರುವಾಗಲೇ ಉತ್ತರದ ಪಾನಿಪತ್ ಕದನದಲ್ಲಿ ತಮಗೆ ಸೋಲು ಸಂಭವಿಸಿದ ಸುದ್ದಿ ಬಂದು ಮೈಸೂರಿನಿಂದ ಕಾಲ್ಕಿತ್ತರು. ಈ ಸಂದರ್ಭದಲ್ಲಿ ನಂಜರಾಜನನ್ನು ಭೇಟಿಯಾದ ಹೈದರ್ ಆತನನ್ನು ಸಂತೈಸಿ ಅವನ ಮಾನಪ್ರತಿಷ್ಠೆಗಳನ್ನು ಮತ್ತೆ ಸಿಗುವಂತೆ ಮಾಡುವುದಾಗಿ ಹೇಳಿ ಆತ ತನ್ನ ದಳವಾಯಿಯಾಗಿ ಕೆಲಸ ನಿರ್ವಹಿಸುವಂತೆ ಒಪ್ಪಿಸಿದ. ಯುದ್ಧವೆಂದರೆ ಬರೀ ಕೊಳ್ಳೆ ಹೊಡೆಯುವುದು, ಭರ್ಭರಕೃತ್ಯಗಳನ್ನು ನಡೆಸುವುದು ಎಂದೇ ತಿಳಿದಿದ್ದ ಅನಕ್ಷರಸ್ಥ ಹೈದರನಿಗೆ ರಾಜ್ಯಾಳ್ವಿಕೆಯ ಅನುಭವ ಹೇಗೆ ತಾನೇ ಬಂದೀತು? ಈ ಕಾರಣದಿಂದ ರಾಜ್ಯದ ಉಳಿವಿಗಾಗಿ ನಂಜರಾಜ ಹೈದರನ ದಳವಾಯಿಯಾಗಿ ಊಳಿಗಕ್ಕೆ ಬರಲು ಒಪ್ಪಿಕೊಂಡ. ಒಮ್ಮೆ ತಾನೊಬ್ಬ ರಾಜ, ತನ್ನ ರಾಜ್ಯದ ಸೈನ್ಯದಲ್ಲಿದ್ದ ಒಬ್ಬ ಸಾಮಾನ್ಯ ಸಿಪಾಯಿ ಈ ಹೈದರ, ಈಗ ಕಾಲದ ಗತಿಯಲ್ಲಿ ಏನೆಲ್ಲ ಏರುಪೇರು ಆಗಿಬಿಟ್ಟಿತು.
ಇವೆಲ್ಲದರ ನಡುವೆ ಪಾನಿಪತ್ ಕದನದಲ್ಲಿ ನಿಜವಾಗಿಯೂ ಮರಾಠರಿಗೆ ಸೋಲುಂಟಾಯಿತೇ ಅಥವಾ ಅದು ಹೈದರನು ಹಬ್ಬಿಸಿದ ಗಾಳಿಸುದ್ದಿಯೇ? ಏನೋ ಅಂತೂ ಅಸಂಘಟಿತ ಮರಾಠಾ ಸೈನ್ಯದ ಮೇಲೆ ಬಿದ್ದ ಹೈದರನ ಸೇನೆ ಅದನ್ನು ದಿಕ್ಕಾಪಾಲಾಗಿ ಓಡಿಸಿ ಖಂಡೇರಾವನ ಸೆರೆಹಿಡಿದು ಹೈದರನ ಮುಂದೆ ತಂದು ನಿಲ್ಲಿಸಿತು. ಜೀವಭಿಕ್ಷೆ ಬೇಡಿದ ಖಂಡೇರಾಯನಿಗೆ ಗಿಳಿಯಂತೆ ನೋಡಿಕೊಳ್ಳುವುದಾಗಿ ಹೇಳಿದ ಹೈದರ ಅವನನ್ನು ಕಬ್ಬಿಣದ ಸರಳುಗಳ ಹಿಂದೆ ತಳ್ಳಿ ಗಿಳಿಯಂತೆಯೇ ನೋಡಿಕೊಂಡ.
ಹೀಗೆ ಹೈದರ್‌ಅಲಿ ಕ್ರಿಸ್ತಶಕ ೧೭೬೧ರಲ್ಲಿ ಮೈಸೂರಿನ ರಾಜನಾಗಿ ವಿಧ್ಯುಕ್ತವಾಗಿ ಅಧಿಕಾರ ವಹಿಸಿಕೊಂಡ ಅನಂತರ ಹೊಸಕೋಟೆ, ದೊಡ್ಡಬಳ್ಳಾಪುರ, ಕೋಡಿಕೊಂಡ, ಪೆನುಕೊಂಡ, ಚಿತ್ರದುರ್ಗಗಳನ್ನು ಗೆದ್ದುಕೊಂಡ. ಆಮೇಲೆ ಅವನ ಕಣ್ಣು ಮಲಬಾರಿನ ಮೇಲೆ ಬಿತ್ತು. ಹೈದರನ ಸೇನೆ ತಮ್ಮತ್ತ ಬಂದುದನ್ನು ತಿಳಿದ ಜಾಮೊರಿನ್ ದೊರೆಯು ಐರೋಪ್ಯದಾಳಿ ಅಥವಾ ತ್ರಿಶೂರಿನ ನಷ್ಟಕ್ಕಿಂತಲೂ ದೊಡ್ಡದಾದ ಗಂಡಾಂತರವಿದೆಂದು ಅರಿತುಕೊಂಡು ಕೊಚ್ಚಿಯನ್ನು ಬಿಟ್ಟುಕೊಟ್ಟು ವಾರ್ಷಿಕ ೧.೫೯.೯೯೯/- ರೂಪಾಯಿಗಳ ಕಪ್ಪ ನೀಡುವುದಾಗಿ ಹೈದರನೊಂದಿಗೆ ಒಪ್ಪಂದ ಮಾಡಿಕೊಂಡ. ಈ ಒಪ್ಪಂದದೊಂದಿಗೆ ಶತಶತಮಾನಗಳಿಂದ ಕೇರಳಿಗರು ಅನುಭವಿಸಿಕೊಂಡು ಬಂದ ಸ್ವತಂತ್ರ ರಾಜಾಳ್ವಿಕೆಯ ಇತಿಹಾಸ ಅಂತಿಮ ತೆರೆಕಂಡಿತು.
ಕ್ರಿಸ್ತಶಕ ೧೭೬೩ರ ಜನವರಿಯಲ್ಲಿ ಹೈದರ್ ಬಿದನೂರಿನ ಮೇಲೆ ಮುತ್ತಿಗೆ ನಡೆಸಿ ಮಾರ್ಚ್ ವೇಳೆಗೆ ಅದನ್ನು ವಶಪಡಿಸಿಕೊಂಡ. ಆಗ ಅವನು ಕೊಳ್ಳೆಹೊಡೆದ ಸಂಪತ್ತು ಕೋಟ್ಯಂತರ ರೂಪಾಯಿ ಎಂದು ಅಂದಾಜಿಸಲಾಗಿದೆ. ಬಿದನೂರಿನ ವೃಕ್ಷಸಂಪತ್ತು, ಅಲ್ಲಿನ ಜನರ ರೀತಿರಿವಾಜು ನಡವಳಿಗೆ ಪರಿಸರ ಎಲ್ಲವೂ ಹೈದರನನ್ನು ಬಹುವಾಗಿ ಆಕರ್ಷಿಸಿದವು. ಬಿದನೂರನ್ನೇ ತನ್ನ ರಾಜ್ಯದ ರಾಜಧಾನಿಯಾಗಿ ಮಾಡಬಯಸಿ ಅಲ್ಲೊಂದು ಸುಂದರ ಅರಮನೆ ಕಟ್ಟಿ ತನ್ನ ಸಂಸಾರವನ್ನು ಬರಮಾಡಿಕೊಂಡ. ಟಂಕಸಾಲೆ ಸ್ಥಾಪಿಸಿ ಹೈದರಿ ಮತ್ತು ಬಹಾದುರಿ ಎಂಬ ನಾಣ್ಯಗಳನ್ನು ಟಂಕಿಸಿದ. ಪಶ್ಚಿಮ ಕರಾವಳಿಯಲ್ಲಿ ನೌಕಾದಳವನ್ನು ಸಂಘಟಿಸಿ ಯುದ್ಧನೌಕೆಗಳ ನಿರ್ಮಾಣಕ್ಕೂ ಕೈಹಾಕಿದ. ಇವೆಲ್ಲದರ ನಡುವೆ ತನ್ನ ವಿರುದ್ಧ ನಡೆದ ಪಿತೂರಿಯನ್ನು ಬಹುಸುಲಭದಲ್ಲಿ ಕಂಡುಕೊಂಡ ಹೈದರ್ ಸುಮಾರು ಮುನ್ನೂರಕ್ಕೂ ಹೆಚ್ಚು ಮಂದಿಯನ್ನು ಗಲ್ಲಿಗೇರಿಸಿದ.
ಮರಾಠರೊಂದಿಗೆ ಶಾಂತಿಸಂಧಾನಕ್ಕೆ ಪ್ರಯತ್ನಿಸಿದನಾದರೂ ಅದು ಫಲಕೊಡಲಿಲ್ಲ ಮಾತ್ರವಲ್ಲ ರಟ್ಟಿಹಳ್ಳಿ ಅಪಜಯದಲ್ಲಿ ಉತ್ತರದ ಸೀಮೆಯನ್ನೆಲ್ಲ ಕಳೆದುಕೊಂಡ. ಕ್ರಿಸ್ತಶಕ ೧೭೬೫ರಲ್ಲಿ ಶಾಂತಿ ಮರುಸ್ಥಾಪನೆಯಾದ ಮೇಲೆ . . . ಹೀಗೆ ಹೈದರನ ಕಾಲದ ಕಾಣದ ಮಗ್ಗಲುಗಳ ಪರಿಚಯ ನಮಗಾಗುವುದು ಜೆಸ್ವಿತ್ ಪತ್ರಗಳಿಂದಲೇ.
ಜೆಸ್ವಿತ್ ಪತ್ರಗಳ ಮೂಲಕ ಸಮಗ್ರ ಇತಿಹಾಸದರ್ಶನವನ್ನು ನಮಗೆ ಕಟ್ಟಿಕೊಡುವ ಕೆಲಸದಲ್ಲಿ ಮೊತ್ತಮೊದಲು ಅಂದರೆ ೧೯೫೦ರ ದಶಕದಲ್ಲಿ ತೊಡಗಿಕೊಂಡವರು ಜೆಸ್ವಿತ್ ಪಾದ್ರಿಯವರಾದ ಜೆ ಫೆರೋಲಿಯವರು. ‘JESUITS IN MALABAR’ ಮತ್ತು ‘JESUITS IN MYSORE’ ಎಂಬ ತಮ್ಮ ಅಮೂಲ್ಯ ಗ್ರಂಥಗಳ ಮೂಲಕ ಫೆರೋಲಿಯವರು ನಮ್ಮ ನಾಡಿನ ಇತಿಹಾಸದ ನವೀಕರಣಕ್ಕೆ ಕೈಹಾಕಿದ್ದರು. ಆ ಸಮಯದಲ್ಲಿ ಅವರಿಗೆ ಜೆಸ್ವಿತರ ಸಮಗ್ರ ಪತ್ರಗಳು ಲಭ್ಯವಿರಲಿಲ್ಲವೆಂಬುದು ಒಂದು ನ್ಯೂನತೆಯಾಗಿ ಪರಿಣಮಿಸುತ್ತದೆ. ಅವರ ಪುಸ್ತಕಗಳನ್ನು ಪರಾಮರ್ಶಿಸಿದಾಗ ಇತಿಹಾಸವನ್ನು ಕುರಿತಂತೆ ಅವರ ಅಪಾರ ಪಾಂಡಿತ್ಯವನ್ನು ಮೆಚ್ಚದಿರಲು ಸಾಧ್ಯವಾಗದು.