ಮಂಗಳವಾರ, ಫೆಬ್ರವರಿ 22, 2011

ತಾಯ್ನುಡಿಯ ಹಿರಿಮೆ

ಬೆಂಗಳೂರಿನಂತಹ ಕಾಸ್ಮೊಪಾಲಿಟನ್ ನಗರಗಳಲ್ಲಿನ ತಾಯ್ತಂದೆಯರು ತಮ್ಮ ಮಗು ಇಂಗ್ಲಿಷಿನಲ್ಲಿ ಮಾತಾಡುತ್ತಿದ್ದರೆ ಒಂದು ರೀತಿಯ ಪರಮಾನಂದ ಅನುಭವಿಸುತ್ತಾರೆ. ಅವರ ಮಕ್ಕಳು ತಮಗೆ ತಮ್ಮದೇ ತಾಯ್ನುಡಿ ಗೊತ್ತಿಲ್ಲ ಎಂದು ಬಲು ಹೆಮ್ಮೆಯಿಂದ ಹಾಗೂ ಯಾವುದೇ ಮುಜುಗರವಿಲ್ಲದೆ ಹೇಳುವುದನ್ನು ಕಂಡಾಗ ಅಥವಾ ನಾವು ಕನ್ನಡಾನ ಮನೇಲಷ್ಟೇ ಮಾತಾಡ್ತೀವಿ, ಓದೋಕೆ ಬರೆಯೋಕಂತೂ ಬರೊಲ್ಲ ಬಿಡಿ ಎಂದಾಗ ಪಿಚ್ಚೆನಿಸಿದರೂ ಕಠೋರ ಸತ್ಯವನ್ನು ಅರಗಿಸಿಕೊಳ್ಳದೇ ಇರಲಾಗದು.

ಕೆಲ ಶಾಲೆಗಳಲ್ಲಿ ಅಳವಡಿಸಿಕೊಂಡಿರುವ ನೀತಿನಿಯಮಾವಳಿಗಳು ತಾಯ್ನುಡಿಯನ್ನು ಮಕ್ಕಳು ಉಪೇಕ್ಷಿಸುವುದಕ್ಕೆ ಪೂರಕವಾಗಿವೆ. ಮಕ್ಕಳು ಬೇರೆ ಭಾಷೆಗಳಲ್ಲಿ ಮಾತಾಡುತ್ತಿದ್ದರೆ ಐರೋಪ್ಯ ನುಡಿಯಾದ ಇಂಗ್ಲಿಷನ್ನು ಕಲಿಯುವುದಕ್ಕೆ ತೊಡಕಾಗುತ್ತದೆ ಎಂಬುದು ಶಿಕ್ಷಕರ ವಾದ. ಅವರ ವಾದ ಸರಿಯಾದುದೇ. ಏಕೆಂದರೆ ನಮ್ಮ ದೇಶದ ನುಡಿಗಳ ವಾಕ್ಯರಚನೆಗೂ ಐರೋಪ್ಯ ನುಡಿಷೆಗಳ ವಾಕ್ಯರಚನೆಗೂ ಅಗಾಧ ವ್ಯತ್ಯಾಸವಿದೆ. ಅಷ್ಟಕ್ಕೂ ಐರೋಪ್ಯ ಭಾಷೆಗಳಲ್ಲಿ ನುರಿತಿರಬೇಕಾದರೆ ಮನಸ್ಸು ನುಡಿಯಲ್ಲೇ ಯೋಚಿಸಬೇಕಾಗುತ್ತದೆ. ಆದರೆ ನಾವು ನೀವೆಲ್ಲ ಏನು ಮಾತನಾಡಬೇಕು ಎಂಬುದನ್ನು ನಮ್ಮ ತಾಯ್ನುಡಿಯಲ್ಲಿ ಯೋಚಿಸಿ ಆಮೇಲೆ ಅದನ್ನು ಇಂಗ್ಲಿಷ್ ಮುಂತಾದ ಪರಕೀಯ ನುಡಿಗಳಲ್ಲಿ ವ್ಯಕ್ತಪಡಿಸುತ್ತೇವೆ. ತಾಯ್ನುಡಿಯನ್ನೇ ಇಂಗ್ಲಿಷ್ ಮಾಡಿಬಿಟ್ಟರೆ, ಇಂಗ್ಲಿಷಿನಲ್ಲೇ ಯೋಚಿಸಬಹುದಲ್ಲವೇ?

ವಾದವನ್ನು ವಿಶ್ಲೇಷಿಸುವ ಮುನ್ನ ತಾಯ್ನುಡಿ ಎಂದರೇನೆಂದು ತಿಳಿದುಕೊಳ್ಳೋಣ. ಒಂದು ಮಗು ತಾನು ಹುಟ್ಟಿದಾಗಿನಿಂದ ಬುದ್ದಿ ಬೆಳವಣಿಗೆಯಾಗುವವರೆಗೆ ತನ್ನ ಅಮ್ಮನಿಂದ, ತನ್ನ ಆಪ್ತರಿಂದ ಹಾಗೂ ಸುತ್ತಲಿನ ಪರಿಸರದಿಂದ ವ್ಯಕ್ತಿಗಳನ್ನು ಮತ್ತು ವಸ್ತುಗಳನ್ನು ಗುರುತಿಸುತ್ತಾ, ನುಡಿಯನ್ನು ಕಲಿಯತೊಡಗುತ್ತದೆ ನುಡಿಯ ಮೂಲಕ ಸಿಹಿ-ಕಹಿ, ಬೇಕು-ಬೇಡ, ಇಷ್ಟಾನಿಷ್ಟ, ನೋವು-ನಲಿವು, ಬಿಸಿ-ತಂಡಿ ಮುಂತಾದವುಗಳನ್ನು ತಾನಾಗಿ ಅರಿತು ಬೌದ್ಧಿಕವಾಗಿ ಬೆಳೆಯತೊಡಗುತ್ತದೆ. ನುಡಿಕಲಿಕೆಯ ಪ್ರಾಥಮಿಕ ಹಂತದಿಂದ ಶಾಲಾ ಹಂತಕ್ಕೆ ಬಂದಾಗಲೂ ಕೂಡ ಅದು ತನಗೊದಗಿದ ಪ್ರಪ್ರಥಮ ನುಡಿಯಲ್ಲೇ ಯೋಚಿಸುತ್ತದೆ ಹಾಗೂ ಎದುರಾದ ವ್ಯಕ್ತಿಯೊಂದಿಗೆ ಸಂಭಾಷಿಸಲಾರಂಭಿಸುತ್ತದೆ. ಪ್ರಾಥಮಿಕ ಚಿಂತನಾ ನುಡಿಯನ್ನೇ ಮೂಲನುಡಿ, ಬೇರುನುಡಿ ಅಥವಾ ತಾಯ್ನುಡಿ ಎನ್ನುತ್ತೇವೆ.

ಒಂದು ಬುನಾದಿಯಲ್ಲಿ ನಾವು ಚಿಂತಿಸಿದಾಗ ಯಾರಾದರೂ ತಮ್ಮ ತಾಯ್ನುಡಿಯಲ್ಲಿ ಮಾತಾಡೋದಿಲ್ಲ ಎಂದರೆ ಅವರು ತಮ್ಮ ಅಸ್ತಿತ್ವದ ಬೇರುಗಳನ್ನು ಕಡಿದುಕೊಳ್ಳುತ್ತಿದ್ದಾರೆಂದು ತಿಳಿಯಬೇಕಾಗುತ್ತದೆ. ಏಕೆಂದರೆ ನಮ್ಮ ಅನಿಸಿಕೆ, ನೋವು ನಲಿವು, ಪ್ರೀತಿ ಮಮತೆ ಇತ್ಯಾದಿಗಳನ್ನು ನಾವು ಆಂತರ್ಯದಿಂದ ಅಭಿವ್ಯಕ್ತಿಸಬೇಕಾದಲ್ಲಿ ಹೃದಯದ ಮಾತೇ ಮುಖ್ಯವಾಗುತ್ತದೆ ಹೊರತು ಇತರೆಲ್ಲ ಮಾತುಗಳು ಶುಷ್ಕವಾದ ಅಭಿನಯವಾಗುತ್ತದಷ್ಟೆ. ಆದರೂ ಕೆಲವರು ತಮ್ಮ ತಾಯ್ನುಡಿಗಿಂತಲೂ ತಾವು ವ್ಯವಹರಿಸುವ ನುಡಿಯಲ್ಲೇ ತಾದಾತ್ಮ್ಯ ಗಳಿಸಿಕೊಂಡು ಅದನ್ನೇ ತಮ್ಮ ಹೃದಯಕ್ಕೆ ಹತ್ತಿರಾಗಿಸಿಕೊಂಡಿರುತ್ತಾರೆ. ಅಯ್ಯಂಗಾರ, ತಿಗುಳ, ಸಂಕೇತಿ ಮುಂತಾದ ಜನಾಂಗದವರು ತಮ್ಮ ಮೂಲನುಡಿಗಿಂತಲೂ ಕನ್ನಡದಲ್ಲೇ ತಾದಾತ್ಯ ಹೊಂದಿರುವುದನ್ನು ಕಂಡಿದ್ದೇವೆ. ಇನ್ನು ಕೆಲವರು ತಾಯ್ನಾಡಿನಿಂದ ಹೊರಗೆ ನೆಲೆಗೊಂಡು ಅಲ್ಲಿನವರನ್ನೇ ಮದುವೆಯಾಗಿ ಅಲ್ಲಿನ ನುಡಿಯನ್ನೇ ತಮ್ಮ ನುಡಿಯನ್ನಾಗಿ ಅಳವಡಿಸಿಕೊಂಡಿರುವುದನ್ನೂ ಕಂಡಿದ್ದೇವೆ.


ಎಷ್ಟೇ ನುಡಿಗಳನ್ನು ರೂಢಿಸಿಕೊಂಡು ಎಷ್ಟೇ ನಿರರ್ಗಳವಾಗಿ ಮಾತನಾಡಿದರೂ ಮನುಷ್ಯನ ಸುಷುಪ್ತಿಯ ನುಡಿಯೇ ಬೇರೆಯಾಗಿರುತ್ತದೆ. ಅದು ಅಂತರಾತ್ಮಕ್ಕಷ್ಟೇ ಗೊತ್ತು. ಅದೇ ಮನುಷ್ಯನನ್ನು ನಿರಂತರ ಮುನ್ನಡೆಸುತ್ತದೆ. ನುಡಿಗೆ ಧ್ವನಿಯಿಲ್ಲ, ಲಿಪಿಯಿಲ್ಲ, ವ್ಯಾಕರಣವಂತೂ ಇಲ್ಲವೇ ಇಲ್ಲ. ಕಿವುಡ ಮೂಕರಿಗೂ ನುಡಿ ಗೊತ್ತು. ಆತ್ಮವಿದ್ದವರೆಲ್ಲ ನುಡಿಗೆ ಸ್ಪಂದಿಸುತ್ತಾರೆ.

            ನುಡಿಯ ಬಗೆಗಿನ ಅಭಿಮಾನದ ವಿಷಯದಲ್ಲಿ ಬಂಗಾಳಿಗಳು ವಿಶ್ವಕ್ಕೇ ಮಾದರಿಯಾಗಿದ್ದಾರೆ. ೧೯೪೮ರ ಮಾರ್ಚ್ ೨೨ ರಂದು ಪಾಕಿಸ್ತಾನದ ಪ್ರಧಾನಿಯಾಗಿದ್ದ ಮಹಮದಾಲಿ ಜಿನ್ನಾ ಅವರು ತಮ್ಮ ದೇಶದ ಅಧಿಕೃತ ನುಡಿ ಉರ್ದು ಎಂದು ಘೋಷಿಸಿದರು. ಪಡುವಣ ಪಾಕಿಗಳಿಗೆ ಅದು ಒಪ್ಪಿಗೆಯಾಯಿತಾದರೂ ಮೂಡಣ ಪಾಕಿಸ್ತಾನದ ಪ್ರಜೆಗಳಿಗೆ ಆದೇಶ ಪಥ್ಯವಾಗಲಿಲ್ಲ. ಎಷ್ಟಾದರೂ ಅವರು ಬಂಗಾಲದ ಬೇರಿನಿಂದ ಬೇರೆಯಾದವರಲ್ಲವೇ? ತಮ್ಮ ತಾಯ್ನುಡಿಯ ಉಳಿವಿಗಾಗಿ ಅವರು ಹೋರಾಡಿದರು. ಅದು ಉಗ್ರಸ್ವರೂಪ ತಾಳಿ ಕರ್ಫ್ಯೂ ಗೋಲಿಬಾರುಗಳಾಗಿ ಪೆಬ್ರವರಿ ೨೧ರಂದು ಮೂರು ವಿದ್ಯಾರ್ಥಿಗಳು ಬಲಿದಾನವಾದರು. ತಕ್ಷಣವೇ ವಿಶ್ವಸಂಸ್ಥೆಯು ಮಧ್ಯಪ್ರವೇಶಿಸಿ ಯಾವುದೇ ಮನುಷ್ಯನು ತನ್ನದೇ ನುಡಿಯನ್ನಾಡಲು ಮತ್ತು ಅದನ್ನು ಜತನದಿಂದ ಕಾಪಾಡಿಕೊಂಡು ಬರಲು ಹಕ್ಕುಳ್ಳವನಾಗಿದ್ದಾನೆಂದು ಸಾರಿತು. ಅಂದಿನಿಂದ ಫೆಬ್ರವರಿ ೨೧ಅನ್ನು ವಿಶ್ವ ಮಾತೃಭಾಷಾ ದಿನವನ್ನಾಗಿ ಆಚರಿಸಲಾಗುತ್ತಿದೆ.

ಅಂದು ಜಿನ್ನಾ ಮಾಡಿದ ಅದೇ ತಪ್ಪನ್ನು ಇಂದು ನಮ್ಮ ಭಾರತಸರ್ಕಾರ ಮಾಡುತ್ತಿರುವುದು ನಮ್ಮ ಕರ್ಮ. ಇಂದು ಕೇಂದ್ರ ಸರ್ಕಾರದ ಕಚೇರಿಗಳಲ್ಲಿ, ಬ್ಯಾಂಕುಗಳಲ್ಲಿ, ಉದ್ದಿಮೆಗಳಲ್ಲಿ ಹಿಂದೀ ಪ್ರಚಾರಕ್ಕೆಂದು ಕೋಟ್ಯಂತರ ರೂಪಾಯಿಗಳನ್ನು ವ್ಯಯಮಾಡಲಾಗುತ್ತಿದೆ. ಉತ್ತರ ಭಾರತದ ಹಿಂದೀ ತಾಯ್ನುಡಿಯವರಿಗೆ ಅನುಕೂಲ ಮಾಡಿಕೊಡಲು ಅವರು ನಮಗೆಲ್ಲ ಹಿಂದೀ ಕಲಿಸಿ ಅವರೊಂದಿಗೆ ಸ್ಪರ್ಧಿಸಲು ತಯಾರು ಮಾಡುತ್ತಿದ್ದಾರೆ. ಇಂದಿನ ಪ್ರೋತ್ನಾಹಧನಕ್ಕೆ ಆಸೆಬಿದ್ದು ಹಿಂದೀ ಕಲಿಯುವ ನಾವು ಮುಂದೆ ನಮ್ಮ ಪೀಳಿಗೆಯವರು ಉತ್ತರಭಾರತದವರ ದಬ್ಬಾಳಿಕೆಯಡಿ ನಲುಗುವಂತೆ ವೇದಿಕೆ ರೂಪಿಸುತ್ತಿದ್ದೇವೆ.

ಹಿಂದೀ ಎಂಬುದು ರಾಷ್ಟ್ರಭಾಷೆ ಎಂಬ ವಾದವನ್ನು ಕೆಲ ಮುಟ್ಠಾಳರು ಮುಂದಿಡುತ್ತಿದ್ದಾರೆ. ರಾಷ್ಟಭಾಷೆಗೂ ರಾಜಭಾಷೆಗೂ ವ್ಯತ್ಯಾಸವಿದೆ. ಇಂಡಿಯಾದಲ್ಲಿ ಕನ್ನಡವೂ ಸೇರಿದಂತೆ ಹದಿನೈದು ರಾಷ್ಟ್ರಭಾಷೆಗಳಿವೆ. ಬೇಕಿದ್ದರೆ ನಿಮ್ಮ ಜೇಬಿನಲ್ಲಿರುವ ಕರೆನ್ಸಿನೋಟನ್ನು ತೆರೆದು ನೋಡಿ. ಇನ್ನು ರಾಜಭಾಷೆ ಎಂದರೆ ಅಧಿಕೃತ ಭಾಷೆ ಎಂದರ್ಥ. ಹಿಂದೀಯ ಜೊತೆಜೊತೆಗೇ ಇಂಗ್ಲಿಷು ಸಹ ನಮ್ಮ ದೇಶದ ಅಧಿಕೃತ ಭಾಷೆಯಾಗಿದೆ. ಇಂದು ಜಗತ್ತಿನಾದ್ಯಂತದ ವ್ಯವಹಾರಕ್ಕಾಗಿ ನಾವು ಇಂಗ್ಲಿಷು ಕಲಿಯುವುದರಿಂದ ನಮ್ಮ ದೇಶದ ಅಧಿಕೃತ ನುಡಿಯಾಗಿ ಇಂಗ್ಲಿಷೇ ಮುಂದುವರಿದರೆ ನಮಗೆ ಅನುಕೂಲವಾಗಿರುತ್ತದೆ. ಆದರೆ ಹಿಂದೀ ಮಾತ್ರವೇ ರಾಜಭಾಷೆ ಎಂದಾಗ ಹಿಂದೀಯವರ ಕೈ ಮೇಲಾಗುತ್ತದೆ. ಅವರಿಗೆ ಇಂಗ್ಲಿಷು ಬೇಕಾಗದು, ಕನ್ನಡವಂತೂ ಬೇಡವೇ ಬೇಡ. ಹೀಗೆ ಬಹುಸಂಖ್ಯಾತ ಉತ್ತರಭಾರತೀಯರ ನಡುವೆ ನಮಗೆ ಅನ್ಯಾಯವಾಗುವುದು ಖಚಿತ. ಅನ್ಯಾಯ ಈಗಾಗಲೇ ಆಗುತ್ತಿದೆ. ಇಂದು ಬ್ಯಾಂಕುಗಳು, ಕೇಂದ್ರಸರ್ಕಾರದ ಕಚೇರಿಗಳು, ಎಚ್ಎಎಲ್ ನಂತಹ ಕಾರ್ಖಾನೆಗಳಲ್ಲಿ ಬಹುಪಾಲಿನ ಅಧಿಕಾರಿಗಳು ಹಿಂದೀ ಭಾಷಿಕರೇ ಆಗಿದ್ದಾರೆ. ಅವರಿಗೆ ಭಾರತದ ಇತರ ಯಾವ ನುಡಿಗಳೂ ಗೊತ್ತಿಲ್ಲ ಮಾತ್ರವಲ್ಲ ಇಂಗ್ಸಿಷೂ ಅಷ್ಟಕ್ಕಷ್ಟೇ. ಅವರೊಂದಿಗೆ ಸೆಣಸಲು ನಾವು ಕನ್ನಡ ಮತ್ತು ಇಂಗ್ಲಿಷು ಎರಡನ್ನೂ ಬಲಿಗೊಡಬೇಕಾಗಿದೆ.

ಬುಧವಾರ, ಜನವರಿ 12, 2011

ಪ್ರಜಾವಾಣಿ

          ನನಗೆ ಬುದ್ದಿ ಬಂದಾಗಿನಿಂದಲೂ ನಮ್ಮ ಮನೆಯಲ್ಲಿ ’ಪ್ರಜಾವಾಣಿ’ ಪತ್ರಿಕೆಯನ್ನು ನೋಡುತ್ತಿದ್ದೇನೆ. ಅಕ್ಷರಾಭ್ಯಾಸದ ಸಂದರ್ಭದಲ್ಲಿ ಸ್ಲೇಟಿನ ಮೇಲೆ ನನ್ನ ಕೈಬರಹದ ’ಅ’ ಅಕ್ಷರವನ್ನು ಪ್ರಜಾವಾಣಿಯಲ್ಲಿನ ಮುದ್ರಿತ ’ಅ’ ಅಕ್ಷರದೊಂದಿಗೆ ಹೋಲಿಸುವುದರಿಂದ ಹಿಡಿದು ಇಂದಿನ ವರ್ಣರಂಜಿತ ಪುರವಣಿಗಳವರೆಗೆ ಪ್ರಜಾವಾಣಿ ನನ್ನ ಜೀವನದ ಅವಿಭಾಜ್ಯ ಅಂಗವೆನಿಸಿದೆ.
ಅಂದಹಾಗೇ ನಾನು ಪ್ರಜಾವಾಣಿಯಲ್ಲಿ ಮೊದಮೊದಲು ಓದಿದ್ದು ಏನನ್ನು ಎಂದು ನೆನಪಿಸಿಕೊಂಡಾಗ ಐದನೇ ಪುಟದಲ್ಲಿ ಬರುತ್ತಿದ್ದ ಫ್ಯಾಂಟಮ್ ಕಾಮಿಕ್ಸ್ ಹಾಗೂ ನಾಲ್ಕನೇ ಪುಟದಲ್ಲಿ ಬರುತ್ತಿದ್ದ ಛೂಬಾಣ ಇವು ನನಗೆ ಅಚ್ಚುಮೆಚ್ಚಿನದಾಗಿದ್ದವು.
ಮುಂದೆ ಕಾಲಮುಗಳ ನಡುವಿನ ಗೆರೆಗಳು ಮಾಯವಾಗಿ ಅಕ್ಷರವಿನ್ಯಾಸ ಮಾತ್ರವಲ್ಲ ಪುಟವಿನ್ಯಾಸವೂ ಹೆಚ್ಚು ಆಕರ್ಷಣೀಯವಾಗಿ ಬದಲಾದವಲ್ಲದೆ ಪ್ರಜಾವಾಣಿಯ ಬಗೆಗಿನ ನನ್ನ ಆಪ್ತತೆ ಹೆಚ್ಚುತ್ತಾ ಹೋಯಿತು. ಶಾಲೆಯ ಪ್ರಾರ್ಥನಾ ವೇಳೆಯಲ್ಲಿ ವಿದ್ಯಾರ್ಥಿ ಮುಖಂಡನೋರ್ವನು ಧ್ವನಿವರ್ಧಕದ ಮುಂದೆ ನಿಂತು ಪ್ರಜಾವಾಣಿಯ ಪ್ರಮುಖ ಸುದ್ದಿಗಳನ್ನು ಓದುವಾಗ ನಾನು ಕೆಲ ಹೆಡಿಂಗುಗಳನ್ನು ಮೊದಲೇ ಹೇಳಿ ಅಕ್ಕಪಕ್ಕದ ಹುಡುಗರನ್ನು ಚಕಿತರಾಗಿಸುತ್ತಿದ್ದುದು ಒಂಥರಾ ಮಜಾದ ವಿಷಯವಾಗಿತ್ತು. ನನ್ನ ಹೈಸ್ಕೂಲಿನ ದಿನಗಳಲ್ಲಿ ಭಾನುವಾರದ ಪುರವಣಿಯಲ್ಲಿ ಬರುತ್ತಿದ್ದ ಪದಬಂಧವನ್ನು ಬಿಡಿಸುವುದು ಬಲು ಇಷ್ಟದ ಹವ್ಯಾಸವಾಗಿತ್ತು. ಇನ್ನು ಸಾಪ್ತಾಹಿಕ ಪುರವಣಿಯಂತು ನನ್ನ ಅಚ್ಚುಮೆಚ್ಚಿನ ಓದಿನ ಸಾಮಗ್ರಿಯಾಗಿತ್ತು.
ಇಂದಂತೂ ಪ್ರಜಾವಾಣಿ ಇನ್ನೂ ಹೆಚ್ಚು ಸಿಂಗಾರಗೊಂಡಿದೆ. ಅದರ ಒಂದೊಂದು ಪುಟಪುಟವೂ ಅಂಕಣಗಳೂ ನಿಷ್ಪಕ್ಷಪಾತವಾಗಿವೆ ಮಾತ್ರವಲ್ಲ ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಸಲ್ಲುವಂತಿರುತ್ತವೆ. ನಾಗೇಶಹೆಗಡೆಯವರ ವಿಜ್ಞಾನ ಬರಹಗಳು, ದಿನೇಶ ಅಮಿನಮಟ್ಟು ಅವರ ರಾಜಕೀಯ ವಿಶ್ಲೇಷಣೆಗಳು, ಗುರುರಾಜ ಕರ್ಜಗಿಯವರ ಮನೋವಿಕಾಸದ ಬರಹಗಳು, ಅನಂತಮೂರ್ತಿ ಕೊಡಸೆ ಲಿಂಗದೇವರು ಕೆವಿನಾರಾಯಣ ಮುಂತಾದವರ ಮೀಮಾಂಸೆಗಳು, ಇನ್ನಿತರ ರುಚಿಕರ ಆರೋಗ್ಯಕರ ಲೇಖನಗಳು, ಎಲ್ಲ ಮಗ್ಗಲುಗಳನ್ನು ತೋರುವ ವಾಚಕರವಾಣಿ, ಪೂರ್ವಗ್ರಹವಿಲ್ಲದ ಸಂಪಾದಕೀಯ ಇವೆಲ್ಲವನ್ನು ಅನುಭವಿಸುತ್ತಿರುವುದು ನಮ್ಮ ಕಾಲದ ಸೌಭಾಗ್ಯವಾಗಿದೆ.
ಇಂದಿನ ಪೀತಪತ್ರಿಕೆಗಳ ಯುಗದಲ್ಲಿ ಪ್ರಜಾವಾಣಿಯು ನನ್ನ ಜೀವನವನ್ನು ಬಲು ಚೆನ್ನಾಗಿ ರೂಪಿಸಿದೆ ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ.

ಭಾನುವಾರ, ಜನವರಿ 2, 2011

ಹೊಸವರುಷ

ವರುಷ ವರುಷವುರುಳಿದರೂ
ಹರುಷ ಮಾತ್ರ ಮಾಸದಿರಲಿ
ನೋವಿರಲಿ ನಗುವಿರಲಿ
ಮುಖದ ನಗುವು ಬಾಡದಿರಲಿ
ಉತ್ಸಾಹದ ಹೂವರಳಿ
ಮತ್ತೆ ಯಶವ ಚಿಮ್ಮಿ ತರಲಿ
ಪ್ರೀತಿ ಚಿಲುಮೆ ಬತ್ತದಿರಲಿ
ತೃಪ್ತಿಯಿಂದ ನಗುತಲಿರಲಿ
ವಿಶ್ವಾಸವು ಕುಂದದಿರಲಿ
ಏನೇ ಇರಲಿ ಏನೇ ಬರಲಿ
ದೇವನೊಲುಮೆ ನಿಮ್ಮಲಿರಲಿ

ಭಾನುವಾರ, ಡಿಸೆಂಬರ್ 26, 2010

ಕ್ರಿಸ್ಮಸ್ ರಾತ್ರಿ

ಕ್ರಿಸ್ಮಸ್ ಸಂದರ್ಭದ ಆ ಸಂಭ್ರಮವೇ ಅನುಪಮ. ಚಳಿಯ ಚುಮುಚುಮು ರಾತ್ರಿಯಲ್ಲಿನ ನಕ್ಷತ್ರಗಳ ಒಡ್ಡೋಲಗದಲ್ಲಿ ಇಬ್ಬನಿಯ ಮಸುಕಾದ ತೆರೆಯ ನಡುವೆ ಮೋಂಬತ್ತಿಗಳು ಜಗಮಗಿಸುತ್ತಿವೆ. ಜರತಾರಿ ರೇಷ್ಮೆಯ ಸರಪರ ಸದ್ದು ಕಿಲಕಿಲ ನಗುವಿನೊಂದಿಗೆ ಜುಗಲಬಂದಿ ಹಾಡುತ್ತಿದೆ. ನುಣುಪು ಹಸ್ತಗಳ ನಡುವೆ ಬೆಚ್ಚನೆಯ ಶುಭಾಶಯಗಳು ತವಕದಿಂದ ಕುಣಿಯುತ್ತಿವೆ. ಕುತ್ತಿಗೆಯ ಹಿಂಭಾಗದಲ್ಲಿ ಆಗೊಮ್ಮೆ ಈಗೊಮ್ಮೆ ಸಣ್ಣಗೆ ನಡುಕ ಹುಟ್ಟಿಸಿ ತನ್ನಿರುವನ್ನು ಪ್ರಕಟಪಡಿಸುವ ಆ ಚಳಿ ಮರುಕ್ಷಣವೇ ಮುದುಡಿಕೊಂಡು ಮೂಲೆ ಹಿಡಿಯುತ್ತಿದೆ. ನೂರಾರು ಕಂಠಗಳು ಚರ್ಚಿನ ಆ ಕಲ್ಲುಗೋಡೆಗಳ ನಡುವೆ ಕ್ಯಾರಲ್ಲುಗಳನ್ನು ಎದೆತುಂಬಿ ಹಾಡುತ್ತಿದ್ದರೆ ಆ ಬಿಸಿಯುಸಿರುಗಳ ಎದುರಲ್ಲಿ ಬೃಹತ್ ಬಾಗಿಲು ಕಿಟಕಿಗಳ ನಡುವಿನಿಂದ ತೂರಿಬರುವ ಹಿಮಗಾಳಿಯೂ ಸೋತು ಶರಣಾಗುತ್ತಿದೆ.
ನನ್ನ ಬಾಲ್ಯಕಾಲದಿಂದಲೂ ನೋಡುತ್ತಿದ್ದೇನೆ, ಅಲ್ಲ ಕೇಳುತ್ತಿದ್ದೇನೆ, ಕ್ರಿಸ್ಮಸ್ ಗೀತೆಗಳ ಆ ಸೊಬಗು ಆ ಸೊಗಡು ಆ ಸೌಂದರ್ಯ ನವನವೋನ್ಮೇಷಶಾಲಿನಿಯಾಗಿ ಚಿರಯೌವನೆಯಾಗಿಯೇ ಉಳಿದುಕೊಂಡಿದೆ. ಜನಿಸಿಹನಾರು ಗೋದಲಿಯೊಳು ವಿನಯದ ಶಿಶುವಾಗಿ, ಜನರೇ ಸಂತೋಷಿಸಿರಿ ಯೇಸುಬಾಲರು ಹುಟ್ಟಿದರು, ಭಗವಾನ್ ಕ್ರಿಸ್ತರು ಹುಟ್ಟಿದ ಸುದಿನ ಜಗದೊಳು ಮಹದಾನಂದದ ದಿನ, ಸುಂದರ ರಕ್ಷಕನೇ ನಿನ್ನ ವಂದಿತ ನಾಮವನೇ ಕುಂದದೆ ಕೀರ್ತಿಸಿ ಎಂದಿಗೂ ಹಾಡುತ, ಮಂಗಳಶ್ರೀ ರಾತ್ರಿಯಲಿ ಬೆತ್ಲೆಹೇಂ ಗ್ರಾಮದಿ . . . ಹೀಗೆ ಈ ಕ್ರಿಸ್ಮಸ್ ಗೀತೆಗಳ ಸೊಗಸೇ ಅನನ್ಯ. ಅದರಲ್ಲಿ ಹೃದಯಗಳನ್ನು ಬೆಸೆಯುವ ಸುಮಧುರ ನಾದವಿದೆ, ಅನುಪಮ ಕಾಂತಿಯಿದೆ, ಪ್ರೀತಿಶಾಂತಿಯಿದೆ.
ಕ್ರಿಸ್ತಜಯಂತಿಗೆ ನಾಲ್ವತ್ತು ದಿನಗಳ ಮುಂಚಿನಿಂದಲೇ ಆಗಮನಕಾಲ ಶುರುವಾಗುತ್ತದೆ. ಕ್ರಿಸ್ತನನ್ನು ಎದುರುಗೊಳ್ಳುವ ನಿರೀಕ್ಷೆಯ ಈ ಕಾಲವೆಲ್ಲ ಸುಣ್ಣ ಬಣ್ಣ ಅಲಂಕಾರ, ಹೊಸಬಟ್ಟೆ ಖರೀದಿ, ಉಡುಗರೆಗಳ ಆಯ್ಕೆ, ಶುಭಾಶಯಪತ್ರಗಳ ಸಿದ್ಧತೆ, ಹಳೆಯ ಪಳೆಯ ವಸ್ತುಗಳ ವಸ್ತ್ರಗಳ ವಿಲೇವಾರಿ, ಕ್ಯಾರಲ್ಲುಗಳ ಗಾನ, ಕರ್ಚಿಕಾಯಿ ಕಜ್ಜಾಯ ಕಲ್ಕಲ್ಸ್ ಎಂಬ ವಿಶಿಷ್ಟ ತಿಂಡಿಗಳ ತಯಾರಿ, ಇವೆಲ್ಲವುಗಳ ಭರಾಟೆಯಲ್ಲಿ ಅತಿ ಶೀಘ್ರವಾಗಿ ಕಳೆಯುತ್ತದೆ. ಹೀಗೆ ಕ್ರಿಸ್‌ಮಸ್ಸು ನಿಜವಾಗಿಯೂ ಬಲು ನಿರೀಕ್ಷೆಯ ಹಬ್ಬವೇ ಸರಿ.
ಹಾಗೆ ನೋಡಿದರೆ ಈ ಕ್ರಿಸ್ಮಸ್ಸು ಮಕ್ಕಳ ಹಬ್ಬ ಎನ್ನಬಹುದೇನೋ? ಏಕೆಂದರೆ ಈ ದಿನಗಳಲ್ಲಿ ಮಕ್ಕಳ ಬಗ್ಗೆ ಎಂದಿಗಿಂತ ಹೆಚ್ಚು ಕಾಳಜಿ. ಅವರೆಷ್ಟು ಕುಣಿದು ಕುಪ್ಪಳಿಸಿದರೂ ಕೇಳುವವರಿಲ್ಲ. ಅವರಿಗೆ ಬೇಕೆನಿಸಿದ ಉಡುಗರೆ, ಬೇಕೆನಿಸಿದ ಬಟ್ಟೆಬರೆ, ತಿಂಡಿ ತಿನಿಸು, ಆಟೋಟ ಸುತ್ತಾಟ, ಸಂಭ್ರಮ ಸಡಗರ . . ನೋಡ್ತಾ ನೋಡ್ತಾ ಇದ್ರೆ ವಯಸ್ಕರೂ ಮಕ್ಕಳಲ್ಲಿ ಮಕ್ಕಳಾಗಿ ಬಿಡುವುದರಲ್ಲಿ ಸಂದೇಹವೇ ಇಲ್ಲ. ಮಕ್ಕಳ ಮನದಿಂಗಿತವನ್ನು ತಿಳಿದುಕೊಂಡು ಸಾಂಟಾಕ್ಲಾಸ್ ಎಂಬ ಕಾಲ್ಪನಿಕ ವ್ಯಕ್ತಿಯ ನೆವದಲ್ಲಿ ಇವರೇ ಉಡುಗರೆ ತಂದು ಮಕ್ಕಳ ಮನ ಗೆಲ್ಲುವುದು, ಆ ಮಕ್ಕಳು ಮುಂದೆ ದೊಡ್ಡವರಾಗಿ ಅವರ ಮಕ್ಕಳಿಗೆ ಈ ಪವಿತ್ರವಾದ ಗುಟ್ಟನ್ನು ಗುಟ್ಟಾಗಿಯೇ ದಾಟಿಸುವುದು ಇವೆಲ್ಲ ಕ್ರಿಸ್‌ಮಸ್ ಹಬ್ಬವು ದಯಪಾಲಿಸಿದ ಪ್ರೀತಿಯ ಕೊಡುಗೆಯೇ ಅಲ್ಲವೇ?
ಡಿಸೆಂಬರ್ ತಿಂಗಳಿನ ಇಪ್ಪತ್ನಾಲ್ಕನೇ ದಿನದ ಮೈ ನಡುಗಿಸುವ ಚಳಿಯಲ್ಲಿ ಅದೂ ಮಧ್ಯರಾತ್ರಿ ಸಮೀಪಿಸುತ್ತಿದ್ದಂತೆ ಕ್ರಿಸ್‌ಮಸ್ ಸಂಭ್ರಮ ಗರಿಗೆದರುತ್ತದೆ. ಪ್ರಾಚೀನ ರೋಮನ್ ಚಕ್ರಾಧಿಪತ್ಯದ ಜೂಲಿಯನ್ ಕ್ಯಾಲೆಂಡರಿನ ಪ್ರಕಾರ ಡಿಸೆಂಬರ್ ಇಪ್ಪತ್ನಾಲ್ಕರ ನಡುರಾತ್ರಿ ಸೂರ್ಯನು ಮಕರ ಸಂಕ್ರಾಂತಿಯನ್ನು ದಾಟುವ ಈ ಸಂದರ್ಭ ಅವರಿಗೆಲ್ಲ ಸುಗ್ಗಿಯ ಹಬ್ಬ ಮಾತ್ರವಲ್ಲ ಕತ್ತಲಿನಿಂದ ಬೆಳಕಿನಡೆಗೆ ಸಾಗುವ ಬೆಳಕಿನ ಹಬ್ಬವಾಗಿತ್ತು. ಪುರಾತನ ರೋಮನರು ಸೂರ್ಯನ ಜಾಗದಲ್ಲಿ ಯೇಸುಕ್ರಿಸ್ತನನ್ನು ಅಲಂಕರಿಸಿ ಕ್ರಿಸ್‌ಮಸ್ ಆಚರಣೆಗೆ ನಾಂದಿ ಹಾಡಿದರು. ಅದರಿಂದಲೇ ಕ್ರಿಸ್ಮಸ್ ದಿನದ ಹಿಂದಿನ ನಡುರಾತ್ರಿಯ ಆಚರಣೆಗೆ ವಿಶೇಷ ಪ್ರಾಮುಖ್ಯತೆ ಇದೆ.
ಅಂದಿನ ರಾತ್ರಿ ಹನ್ನೊಂದು ಗಂಟೆಯ ಸುಮಾರಿಗೆಲ್ಲ ಎಲ್ಲೆಲ್ಲಿಂದ ಜನ ಬಂದು ಚರ್ಚಿನೊಳಗಡೆ ತಮ್ಮ ಜಾಗ ಹಿಡಿದುಕೊಳ್ಳುತ್ತಾರೆ. ಗಾನವೃಂದದವರು ಒಂದಾದ ಮೇಲೊಂದರಂತೆ ಕ್ರಿಸ್ಮಸ್ ಹಾಡುಗಳನ್ನು ಹಾಡುತ್ತಾ ಕ್ರಿಸ್ತನಿರೀಕ್ಷೆಗೆ ಹೊಳಪು ನೀಡುತ್ತಾರೆ. ಅವೆಲ್ಲ ಗೊತ್ತಿರುವ ಹಾಡುಗಳೇ. ಪ್ರತಿವರ್ಷ ಇದೇ ಸಮಯಕ್ಕೆ ನಾವು ಹಾಡಿದ್ದೇ ಅಲ್ಲವೇ? ಆದರೂ ಇಂದು ಅವು ಹೊಚ್ಚ ಹೊಸದರಂತೆ ನಿತ್ಯನಾವೀನ್ಯತೆಯಿಂದ ಕಂಗೊಳಿಸುತ್ತಿವೆ ಅಲ್ಲ ಇನಿದಾಗಿ ಕೇಳಿಸುತ್ತಿವೆ. ಆ ಹಾಡುಗಳಲ್ಲಿ ಅಪಾರ ಅರ್ಥವಿದೆ, ಅರ್ಥಕ್ಕೂ ಮಿಗಿಲಾದ ಸಂತಸವಿದೆ. ಹೃದಯವನರಳಿಸುವ ಮನ ಪ್ರಫುಲ್ಲಗೊಳಿಸುವ ತವಕವಿದೆ. 'ಬಂದಿಹುದು ಶುಭದಿನವು ತಂದಿಹುದು ಸಂತಸವ ಏನಾನಂದ ಏನಾನಂದ' ಎಂದು ಕೇಳಿಬರುವ ಆ ಗಾನವೃಂದದ ಮಕ್ಕಳ ಹಾಡು ನಮ್ಮ ಹೃದಯದ ಹಾಡಾಗಿ ಕುಣಿಯುತ್ತದೆ. ಚರ್ಚಿನೊಳಗಿನ ಎಲ್ಲರ ಎದೆಬಡಿತವೂ ಗಾನವೃಂದದ ರಾಗ ತಾನ ಪಲ್ಲವಿಗಳಿಗೆ ಮಿಡಿಯುತ್ತಾ ಭಕ್ತಿರಸದ ಹೊನಲಿನೊಂದಿಗೆ ತೃಪ್ತಿರಸದ ಸೊಬಗಿನಲ್ಲಿ ಮೀಯುತ್ತದೆ.
ಗಂಟೆ ಹನ್ನೆರಡಾಗುತ್ತಿದ್ದಂತೆ ಬಂಗಾರದ ಮೇಲುವಸ್ತ್ರ ಧರಿಸಿದ ಗುರುವರ್ಯರು ಶಿಶುಯೇಸುವಿನ ಸ್ವರೂಪವನ್ನು ಕರಗಳಲ್ಲಿ ಎತ್ತಿಹಿಡಿದು 'ಮಹೋನ್ನತದಲ್ಲಿ ದೇವರಿಗೆ ಮಹಿಮೆ ಭೂಲೋಕದಲ್ಲಿ ಸುಮನಸ್ಕರಿಗೆ ಶಾಂತಿ' ಎಂಬ ದೂತಗಾನವನ್ನು ಮೇರುಸ್ವರದಲ್ಲಿ ಹಾಡುತ್ತಾರೆ. ಚರ್ಚಿನೊಳಗಣ ಭಕ್ತಾದಿಗಳೆಲ್ಲ ಆ ದನಿಗೆ ದನಿಗೂಡಿಸಿ ಎದೆ ತುಂಬಿ ಹಾಡುತ್ತಾ ದೈವ ಭಜನೆ ಮಾಡುತ್ತಾರೆ. ಅದರೊಂದಿಗೆ ಚರ್ಚಿನ ಎಲ್ಲ ದೀಪಗಳೂ ಜಗಮಗಿಸುತ್ತವೆ. ಎಲ್ಲ ಗಂಟೆಗಳೂ ತಾರಸ್ತಾಯಿಯಲ್ಲಿ ಮೊಳಗುತ್ತವೆ. ಸಂತೋಷದ ನಗೆಯ ಹೂವರಳಿ ಒಡೆದ ಮನಗಳು ಬೆಸೆಯುತ್ತವೆ, ವೈಮನಸ್ಯ ಮರೆತುಹೋಗುತ್ತದೆ, ಅಸಹನೆಯ ಉರಿ ಶಾಂತವಾಗುತ್ತದೆ, ಮುಖವಾಡಗಳು ಕಳಚಿಹೋಗುತ್ತವೆ. ಕೈಕುಲುಕುವಿಕೆಯ ಶುಭಾಶಯಗಳು ಹೃದಯದ ಮಾತಾಗುತ್ತವೆ. ದೇವಾಲಯದ ಗಂಟೆ ಇನ್ನೂ ಮೊಳಗುತ್ತಿರುವಂತೆ ಎಸ್ಸೆಮ್ಮೆಸ್ಸುಗಳು ಜಗದ ಉದ್ದಗಲಕ್ಕೂ ಸರಿದಾಡುತ್ತವೆ.
ಶಾಂತಿ ಪ್ರೀತಿ ದ್ಯೋತಕವಾದ ಕ್ರಿಸ್ಮಸ್ಸು ಮತ್ತೆ ಮತ್ತೆ ಬರುತಿರಲಿ, ಜಗದ ದ್ವೇಷವೆಲ್ಲ ತೊಡೆದು ಬಂದೂಕಿನ ಮೇಲೆ ಮಲ್ಲಿಗೆ 
ಬಳ್ಳಿ ಹಬ್ಬಿ ಸಾಮರಸ್ಯದ ಹೂವರಳಿಸಲಿ.
http://www.prajavani.net/Content/Dec232010/metrothurs20101222218939.asp

ಶುಕ್ರವಾರ, ಡಿಸೆಂಬರ್ 17, 2010

ಹಾರೋಬೆಲೆ ವ್ಯುತ್ಪತ್ತಿ

ಕನಕಪುರ ತಾಲೂಕಿನಲ್ಲಿ ಅರ್ಕಾವತಿ ನದಿ ದಂಡೆಯಲ್ಲಿರುವ ಹಾರೋಬೆಲೆ ಎಂಬ ಗ್ರಾಮವು ನೂರಕ್ಕೆ ನೂರು ಕನ್ನಡ ಮನೆಮಾತಿನ ಕ್ರೈಸ್ತರೇ ನೆಲೆಗೊಂಡಿರುವ ಪುರಾತನ ಊರು. ಈ ಹಾರೋಬೆಲೆ ಎಂಬ ಗ್ರಾಮನಾಮದ ವ್ಯುತ್ಪತ್ತಿಗೆ ತೊಡಗುವಾಗ ಸ್ವಾಮಿ ಅಂತಪ್ಪನವರು ಅದನ್ನು ಇಂಗ್ಲಿಷಿನ horrible ಪದದೊಂದಿಗೆ ತಳುಕು ಹಾಕವುದನ್ನು ಗಮನಿಸಿದ್ದೇವೆ. ಆದರೆ ಎರಡು ಶತಮಾನಗಳ ಮುನ್ನ ಇಂಗ್ಲಿಷರು ಇನ್ನೂ ಇಂಡಿಯಾಕ್ಕೆ ಕಾಲಿಡುವ ಮುನ್ನವೇ ಹಾರೋಬೆಲೆ ಗ್ರಾಮಕ್ಕೆ ಇತಾಲಿಯನ್ ಜೆಸ್ವಿತರ ಪ್ರವೇಶವಾಗಿತ್ತೆನ್ನುವುದನ್ನು ಗಮನಿಸಿರಿ.
ಅಂದು ರಸ್ತೆಗಳಿಲ್ಲದೆ ಗುಡ್ಡ ಬೆಟ್ಟ ಹೊಳೆ ಕಾಡುಗಳಿಂದ ಆವೃತವಾಗಿ ಹೊರಗಿನಿಂದ ದುರ್ಗಮವಾಗಿದ್ದ ಹಾರೋಬೆಲೆಯನ್ನು ಪ್ರವೇಶಿಸುವುದು ಸುಲಭಸಾಧ್ಯವಾಗಿರಲಿಲ್ಲ. ಹಾಗಾಗಿ ಅವರು ಇತಾಲಿಯಾ ಭಾಷೆಯಲ್ಲಿ ಹಾರೋಬೆಲೆಗೆ ಹೋಗುವುದೆಂದರೆ ಅದು orribile ಅನುಭವ (ಭಯಂಕರ ಅನುಭವ) ಎಂಬುದಾಗಿ ಉದ್ಗರಿಸಿರಬೇಕು. ಇತಾಲಿಯಾದ orribile ಎಂಬ ಪದವು ಇಂಗ್ಲಿಷಿನ horrible ಎಂಬ ಪದಕ್ಕೆ ಸಂವಾದಿಯಾಗಿದೆ.
ಹೇಳಿಕೇಳಿ ಈ ಇತಾಲಿಯನ್ ಜೆಸ್ವಿತರು ಕನ್ನಡನಾಡಿಗೆ ಪ್ರವೇಶಿಸಿದ್ದು ೧೬೪೦ ರ ದಶಕದಲ್ಲಿ. ಅಂದರೆ ಕನ್ನಡದ ನುಡಿಗಟ್ಟಿನಲ್ಲಿ ’ಹ’ ಕಾರವು ಇನ್ನೂ ಸಾರ್ವತ್ರಿಕವಾಗಿರದೇ ಇದ್ದ ಕಾಲ. ಆದ್ದರಿಂದ ಹಾರೋಬೆಲೆ ಎಂಬ ಪದಾದಿಯಲ್ಲಿ ’ಹ’ ಕಾರವನ್ನು ಆರೋಪಿಸುವ ಬದಲು ಅಲ್ಲಿ ’ಅ’ ಕಾರವಿತ್ತೆನ್ನುವುದು ಸಮಂಜಸವೆನಿಸುತ್ತದೆ. ಅದು ಬಹುಶಃ ಆರುಬೆಲೆ ಅಥವಾ ಆರೋಬೆಲೆ ಇದ್ದಿರಬಹುದೆಂದು ನನ್ನ ಅನಿಸಿಕೆ. 
ಕನ್ನಡದ ಆಡುಮಾತಿನಲ್ಲಿ ಆರು ಎನ್ನುವುದನ್ನು ಉಳುಮೆ, ಕೃಷಿಗೆ ಸಮಾನಪದವಾಗಿ ಬಳಸಲಾಗುತ್ತದೆ. ಹಳೆಯ ಮೈಸೂರು ಪ್ರಾಂತ್ಯದಲ್ಲಿನ ಮೂಲನಿವಾಸಿಗಳು’ ’ಅ’ ಕಾರವನ್ನು’ಹ’ ಕಾರವನ್ನಾಗಿ ಉಚ್ಚರಿಸುವುದು ಸಹಜವಾದ್ದರಿಂದ ’ಆರೋಬೆಲೆ’ಯನ್ನು ಜನ ’ಹಾರೋಬೆಲೆ’ ಎಂದೇ ಕರೆದಿರಬಹುದು.
ಅಲ್ಲದೆ ’ಬೆಲೆ’ ಎಂಬುದು ’ಬೇಲಿ’ ಎಂಬುದರ ಸಂಕ್ಷಿಪ್ತರೂಪವಾಗಿದೆ. ನಮ್ಮಲ್ಲಿ ಮಂಚನಬೆಲೆ, ಸೂಲಿಬೆಲೆ, ಅತ್ತಿಬೆಲೆ ಮುಂತಾದ ಊರುಗಳಿರುವುದನ್ನು ಗಮನಿಸಿರಿ.
ಆಡುವ ಪದಗಳನ್ನು ಬರವಣಿಗೆಯಲ್ಲಿ ಮೂಡಿಸುವಾಗ ಜನ ಸ್ವಯಂ ಪ್ರೇರಣೆಯಿಂದ ಅವಕ್ಕೆ ಶಿಷ್ಟರೂಪವನ್ನು ನೀಡುವ ಪ್ರಯತ್ನ ಮಾಡುತ್ತಾರೆ. ಹಾಗೆ ಮಾಡುವಾಗ ಅವರಿಗೆ ಅರಿವಿಲ್ಲದಂತೆಯೇ ಆಡುಮಾತಿನ ಮೂಲ ಆಶಯಕ್ಕೆ ವ್ಯತಿರಿಕ್ತವಾದ ಅರ್ಥ ಮೂಡುವ ಪದಗಳನ್ನು ಟಂಕಿಸಿರುತ್ತಾರೆ. ಉದಾಹರಣೆಗೆ ’ಕಾಡುಗೋಡಿ’ ಯನ್ನು ತೆಗೆದುಕೊಳ್ಳೋಣ. ಕೆರೆಯು ತುಂಬಿದಾಗ ಅದರ ಸುರಕ್ಷೆಯ ದೃಷ್ಟಿಯಿಂದ ಹೆಚ್ಚುವರಿ ನೀರು ಹರಿದುಹೋಗುವಂತೆ ಒಂದೆಡೆ ಒಡ್ಡು ತೆರೆದಿರುತ್ತಾರೆ. ಅದಕ್ಕೆ ಕೋಡಿ ಎನ್ನುತ್ತಾರೆ. ಆ ಕೋಡಿಯ ಮೂಲಕ ಹರಿವ ನೀರು ಹೊಳೆಯಾಗಿ ನದಿಯಾಗಿ ಹರಿದು ಸಮುದ್ರ ಸೇರುತ್ತದೆ, ಇರಲಿ. ಆ ಕೋಡಿಯು ಕಾಡಿನ ಅಂದರೆ ಸುಡುಗಾಡಿನ ಕಡೆಗಿದ್ದರೆ ಅದಕ್ಕೆ ಕಾಡುಗೋಡಿ (ಕಾಡು+ಕೋಡಿ=ಕಾಡುಗೋಡಿ, ಆಗಮಸಂಧಿ) ಎನ್ನುವುದು ಅತ್ಯಂತ ಸೂಕ್ತ. ಆದರೆ ಬರವಣಿಗೆಯ ಶಿಷ್ಟರು ಅದನ್ನು ಕಾಡುಗುಡಿ ಎಂಬುದಾಗಿ ಭಾವಿಸಿಕೊಳ್ಳುತ್ತಾರೆ. ಹಾಗೆಯೇ ನಮ್ಮ ಈ ಆರೋಬೆಲೆ ಅಥವಾ ಹಾರೋಬೆಲೆಯನ್ನು ಕೆಲವರು ಹಾರೋಬಲೆ ಎಂಬುದಾಗಿ ಬರೆಯುವುದನ್ನೂ ನೋಡುತ್ತಿದ್ದೇವೆ.

ಬಾಲ್ಯದ ನೆನಪು

ಅದು ಎಪ್ಪತ್ತರ ದಶಕ. ನಾನು ಮಾಧ್ಯಮಿಕ ಶಾಲಾದಿನಗಳ ರಜಾದ ಮಜಾದಲ್ಲಿದ್ದೆ. ಮಲ್ಲೇಶ್ವರದ ಕ್ರಿಸ್ತರಾಜರ ದೇವಾಲಯದ ಹಿಂಬದಿಯ ಗಂಟೆ ಗೋಪುರದ ಬಳಿಯೇ ನಮ್ಮ ಮನೆಯಿತ್ತು. ಬದಿಯಲ್ಲಿಯೇ ಇದ್ದ ಸಂತ ರಾಯಪ್ಪರ ಗುರುಮಠಕ್ಕೂ ಹೊಕ್ಕು ಬಳಕೆ ನಮಗೆ ಸಲೀಸಾಗಿತ್ತು. ನನ್ನ ಬಾಲ್ಯವೆಲ್ಲ ಕ್ರಿಸ್ತರಾಜರ ದೇವಾಲಯದಿಂದ ಹಿಡಿದು ನಿರ್ಮಲರಾಣಿ ಶಾಲೆಯವರೆಗಿನ ಇಂದಿನ ಕ್ಲರೇಷಿಯನ್ ಮತ್ತು ಎಂಎಸ್‌ಎಫ್‌ಎಸ್ ಸೆಮಿನರಿಗಳವರೆಗೆ ಮಾತ್ರವಲ್ಲ ಸೆಂಟ್ ತೆರೇಸಾಸ್ ಸ್ಯಾನಿಟೋರಿಯಂ ಎಂಬ ಗುಟ್ಟೆ ಆಸ್ಪತ್ರೆವರೆಗಿನ ಪ್ರದೇಶದಲ್ಲಿ ಆಡಾಡುತ್ತಾ ಕಳೆದಿತ್ತು.
ಈ ಒಂದು ನೆನಪಿನ ಬುತ್ತಿಯಿಂದ ಸಣ್ಣ ತುಣುಕೊಂದನ್ನು ಹಂಚಿಕೊಳ್ಳುತ್ತೇನೆ. ಒಂದು ದಿನ ನಾನು ಪೆನ್ವೆನ್ ಸ್ವಾಮಿಯವರ ಕೊಠಡಿಯ ಬಳಿ ಅಡ್ಡಾಡುತ್ತಿದ್ದಾಗ ಮೇಲುಗಡೆಯ ಕೊಠಡಿಯೊಂದರಿಂದ ಯಾರೋ ನನ್ನನ್ನು ಕರೆದಂತಾಯಿತು. ತಲೆಯೆತ್ತಿ ನೋಡಿದಾಗ ಅದು ಆಗಷ್ಟೇ ಯಾಜಕ ಪದವಿ ಪಡೆದು ರೂಮು ತೆರವು ಮಾಡುತ್ತಿದ್ದ ಯುವ ಬ್ರದರ್ (ಅಲ್ಲ ಫಾದರ್) ಒಬ್ಬರು ನನ್ನನ್ನು ಕರೆಯುತ್ತಿದ್ದುದು ಕಾಣಿಸಿತು. ಅವರು ತಮ್ಮ ಕೊಠಡಿಯಲ್ಲಿನ ಹಳೆಯಪಳೆಯ ವಸ್ತುಗಳನ್ನು ಎಸೆಯುತ್ತಾ ತಮ್ಮ ಬಟ್ಟೆಬರೆ ಪುಸ್ತಕಗಳನ್ನು ಜೋಡಿಸಿಕೊಳ್ಳುತ್ತಾ ತಮ್ಮ ಸೆಮಿನರಿ ಜೀವನಕ್ಕೆ ವಿದಾಯ ಹೇಳಲು ತಯಾರಿ ನಡೆಸಿದ್ದರು. ಆ ಕೆಲಸಕ್ಕೆ ಸಹಾಯ ಮಾಡಲು ಅವರು ನನ್ನನ್ನು ಕೇಳಿಕೊಂಡಾಗ ತುಂಬಾ ಸಂತಸದಿಂದ ಹೂಂಗುಟ್ಟಿದೆ. ನಗುಮುಖದ ಯುವಪಾದ್ರಿಗಳು ಸಹಾಯಕ್ಕೆ ಕರೆದಾಗ ಉತ್ಸಾಹದಿಂದ ಮುಂದಾಗುವುದು ನನಗೆ ಸಹಜವಾಗಿತ್ತು.
ಅವರ ಕೋಣೆಯಲ್ಲಿ ಗೋಡೆಗಳ ಮೇಲೆ ಇದ್ದ ಪಟ ಚಿತ್ರ ಇತ್ಯಾದಿಗಳನ್ನು ತೆಗೆದಿದ್ದರಿಂದ ಕೋಣೆ ಬಿಕೋ ಅನ್ನುತ್ತಿತ್ತು. ಮಂಚಕ್ಕೆ ಕಟ್ಟಿದ್ದ ಸೊಳ್ಳೆಪರದೆ ಬೆಡ್ ಶೀಟು ಮುಂತಾದವುಗಳನ್ನು ತೆಗೆದುಬಿಟ್ಟಿದ್ದರಿಂದ ಅಲ್ಲಿದ್ದ ಹಾಸಿಗೆ ನಿರಾಭರಣ ಸುಂದರಿಯಂತಿತ್ತು. ಹರಿದ ನ್ಯೂಸ್ ಪೇಪರುಗಳು ಬಿಡಿಗೂದಲುಗಳು ಧೂಳಿನೊಂದಿಗೆ ನೆಲದಲ್ಲಿ ಆಟವಾಡುತ್ತಿದ್ದವು. ಕಿಟಕಿಯ ಬಳಿ ಜೋಡಿಸಿದ್ದ ಬಾಚಣಿಗೆಯನ್ನು ನಾನು ಅಲ್ಲಿಂದಲೇ ಹೊರಕ್ಕೆಸೆದಾಗ ಸಣ್ಣಗೆ ಗದರಿದ ಅವರು ಅಲ್ಲಿಂದೇನನ್ನೂ ಕೆಳಗೆ ಹಾಕಬಾರದೆಂದೂ ಬುಟ್ಟಿಯಲ್ಲಿ ತುಂಬಿಕೊಂಡು ಮೆಟ್ಟಿಲಿಳಿದು ಕೆಳಗಿಹೋಗಿ ಕಸದ ರಾಶಿಗೆ ಸುರಿದುಬರುವಂತೆಯೂ ಹೇಳಿದರು. ಹಾಗೆ ನಾನು ಬಹಳಷ್ಟು ವಸ್ತುಗಳನ್ನು ಕಸದರಾಶಿಗೆ ಚೆಲ್ಲಿಬಂದೆ. ಕಿಟಕಿ ಬಳಿಯಲ್ಲಿ ಅವರು ಸಾಲಾಗಿ ಇಟ್ಟಿದ್ದ ಬ್ಲೇಡುಗಳಲ್ಲಿ ಹೊಳಪಿದ್ದ ಒಂದನ್ನು ಮೆಲ್ಲಗೆ ಎತ್ತಿಕೊಂಡು ಅಂಗಿಯ ಕಿಸೆಯಲ್ಲಿಟ್ಟುಕೊಂಡೆ, ಪೆನ್ಸಿಲ್ ಹೆರೆಯುವದಕ್ಕೆ ತುಂಬಾ ಚೆಂದವಾಗಿ ತೋರಿದ್ದ ಅದು ನನ್ನ ಮಿತ್ರರೆದುರಲ್ಲಿ ನನಗೆ ತುಂಬಾ ಹೆಮ್ಮೆ ತಂದುಕೊಡುವ ಸಾಧನವಾದೀತೆಂಬ ಆತ್ಮವಿಶ್ವಾಸ ನನ್ನ ಎದೆಯುಬ್ಬಿಸಿತ್ತು.
ಈ ಒಂದು ಸಂದರ್ಭದಲ್ಲೇ ಒಂದೇ ಶೀರ್ಷಿಕೆಯ ಹಲವಾರು ಪುಸ್ತಕಗಳನ್ನು ಒಟ್ಟಿಗೆ ಕಟ್ಟಿಡಲಾಗಿದ್ದ ಒಂದು ಪುಸ್ತಕದ ಕಟ್ಟು ಕಾಣಿಸಿತು. ಕುತೂಹಲದಿಂದ ಅದರ ಶೀರ್ಷಿಕೆ ಓದಿದೆ. ಅದು ಬಿಳಿ ಹೊದಿಕೆಯ ಮೇಲೆ ಅಚ್ಚ ಕೆಂಪು ಅಕ್ಷರಗಳಲ್ಲಿ ಮುದ್ರಿತವಾಗಿತ್ತು. ಅದರ ಹೆಸರು ಕ್ರೈಸ್ತಗುರು ಕೊಲೆಗಾರರೇ?’ ಎಂಬುದು ನನ್ನ ನೆನಪು. ಮುಂದೆ ಎಷ್ಟೋ ವರ್ಷಗಳ ಕಾಲ ಆ ಯುವಪಾದ್ರಿಯ ಮುಖದೊಂದಿಗೆ ಇತರರ ಮುಖಗಳನ್ನು ಹೋಲಿಸಿಕೊಂಡು ನನ್ನ ನೆನಪನ್ನು ಬ್ರಷ್ ಮಾಡಿಕೊಂಡದ್ದೂ ಉಂಟು. ಡಿಸೆಂಬರ್ ಚಳಿಗೆ ನನ್ನ ಮುಂಬೆರಳ ತುದಿ ಹಿಂಡಿದಾಗಲೆಲ್ಲ ಆ ನನ್ನ ಬಾಲ್ಯದ ಹೊಳಪಿನ ಬ್ಲೇಡಿನ ನೆನಪೂ ಕಾಡುತ್ತದೆ.

ಗುರುವಾರ, ನವೆಂಬರ್ 11, 2010

Bengaluru ಎಂದು ಬರೆಯೋಣ

ಬೆಂಗಳೂರು ಎಂಬ ಹೆಸರು ಇಂಗ್ಲಿಷಿನಲ್ಲಿ Bangalore ಎಂದು ಬರೆಯಲಾಗುತ್ತೆ. ಇಂಗ್ಲಿಷಿನಲ್ಲಿ ಯೋಚಿಸುವ ಮಂದಿ Bang (ಬ್ಯಾಂಗ್) Galore (ಗ್ಯಾಲೋರ್) ಎಂಬುದಾಗಿ ಸಂಬೋಧಿಸಿ ಬ್ಯಾಂಗಲೋರ್ ಎನ್ನುವುದನ್ನು ಗಮನಿಸಿದ್ದೇವೆ. ಹಳ್ಳಿಗಾಡಿನ ಜನರೂ ಸಹ ಬೆಂಗಳೂರನ್ನು ಬೆಂಗಳೂರೆನ್ನದೆ ಬ್ಯಾಂಗಲೋರ್ ಎಂದು ಉಚ್ಚರಿಸುವಷ್ಟರ ಮಟ್ಟಿಗೆ ಇದು ಚಲಾವಣೆಯಲ್ಲಿದೆ.

ಈಗ ಬೆಂಗಳೂರನ್ನು ಬೆಂಗಳೂರೆಂದೇ ಕರೆಯೋಣವೆಂಬ ಕೂಗು ಎದ್ದಿದೆ. ಆದರೆ ಜನಮಾನಸದ ಚಟವನ್ನು ಅಷ್ಟು ಸುಲಭದಲ್ಲಿ ಹೋಗಲಾಡಿಸಲಾದೀತೇ?

ಬೆಂಗಳೂರನ್ನು ಬೆಂಗಳೂರೆಂದು ಉಚ್ಚರಿಸುವ, ಬರೆಯುವ ಹಾಗೂ ಬೇರೆಯವರಿಂದ ಹಾಗೆ ಹೇಳಿಸುವ ಪ್ರಕ್ರಿಯೆಯಲ್ಲಿ ನಮ್ಮ ಕಲ್ಪನೆಗೂ ಮೀರಿದ ಇಚ್ಛಾಶಕ್ತಿ ಹಾಗೂ ಪ್ರೇರಣೆಗಳ ಅಗತ್ಯವಿದೆ. ಈಗಾಗಲೇ NDTV ಯವರು BENGALURU ಪದದ ಬಳಕೆಯನ್ನು ತಮ್ಮ ಟಿವಿ ವಾಹಿನಿಯಲ್ಲಿ ತಂದುಬಿಟ್ಟಿದ್ದಾರೆ. www.map.google.com ನಲ್ಲಿ BENGALURU ಎಂದು ಟೈಪಿಸಿದರೆ ಅದು ಸ್ವೀಕರಿಸುತ್ತದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ದೆಸೆಯಿಂದ ಇಂದು ಹಲವಾರು ವಿಮಾನಯಾನ ಸಂಸ್ಥೆಗಳು BENGALURU ಎಂದು ಬಳಸಲಾರಂಭಿಸಿದ್ದಾರೆ. ಹಾಗೆಯೇ ಬೆಂಗಳೂರಿನ ಪೊಲೀಸು ಇಲಾಖೆ ಸೇರಿದಂತೆ ಹಲವರು ಸ್ವಯಂಪ್ರೇರಣೆಯಿಂದ ತಮ್ಮ ನಾಮಫಲಕಗಳಲ್ಲಿ ಹಾಗೂ ವಿಳಾಸಗಳಲ್ಲಿ BENGALURU ಎಂಬುದಾಗಿ ಬಳಸುತ್ತಿದ್ದಾರೆ. ಸರ್ಕಾರದ ಆದೇಶ ಬರುವವರೆಗೂ ಕಾಯದೆ ಈಗಿಂದೀಗಲೇ ನಾವೆಲ್ಲ ಬೆಂಗಳೂರನ್ನು ‘ಬೆಂಗಳೂರು’ ಎಂದು ಕರೆಯುವ, ಬರೆಯುವ ಹಾಗೂ ತಿದ್ದುವ ಪ್ರಯತ್ನದಲ್ಲಿ ತೊಡಗೋಣ.

ನಮ್ಮೆಲ್ಲ ಪತ್ರಗಳು, ಲೇಖನಗಳು, ದಾಖಲೆಗಳು, ದಸ್ತಾವೇಜುಗಳು, ಕರಡಚ್ಚುಗಳು, ನಾಮಫಲಕಗಳು, ಠಸ್ಸೆಗಳು, ಶಿರೋನಾಮೆಗಳು, ವಿಳಾಸಸೂಚಿಗಳು ಇತ್ಯಾದಿಗಳಲ್ಲೆಲ್ಲ Bangalore ಅನ್ನು BENGALURU ಆಗಿ ಬದಲಾಯಿಸುವ ಕೆಲಸಕ್ಕೆ ಇಂದೇ ಚಾಲನೆ ನೀಡೋಣ.

ಶುಕ್ರವಾರ, ನವೆಂಬರ್ 5, 2010

ದೇವರು ನಕ್ಕುಬಿಟ್ಟ

ಇದು ಓಷೋ ಹೇಳಿದ ಕಥೆ.
ಆ ಊರಿನಲ್ಲಿ ಇದ್ದುದು ಅದೊಂದೇ ಗುಡಿ. ಬಲು ಸುಂದರವೂ ಭವ್ಯವೂ ದಿವ್ಯವೂ ಕಲಾಪೂರ್ಣವೂ ಆಗಿತ್ತದು. ಊರಿನ ಸಕಲ ಸಿರಿವಂತರೂ ದೇಣಿಗೆ ನೀಡಿ ಅದನ್ನು ನಿರ್ಮಿಸಿದ್ದರು. ಅದಕ್ಕೆ ಒಬ್ಬ ಪೂಜಾರಿಯನ್ನೂ ನೇಮಿಸಿದ್ದರು. ಆತ ಗುಡಿಯ ಬದಿಯಲ್ಲೇ ಮನೆ ಮಾಡಿಕೊಂಡು ನಿತ್ಯ ಪಾರಾಯಣ, ಪೂಜೆ, ಮಂಗಳಾಭಿಷೇಕ, ಗಂಟಾನಾದ, ಸುಗಂಧ ಧೂಪಗಳೊಂದಿಗೆ ಮಂದಿರವನ್ನು ಸೊಬಗಿನ ತಾಣವಾಗಿಸಿದ್ದ.
ಹೀಗಿರುವಲ್ಲಿ ಒಂದು ರಾತ್ರಿ ಬಡವನೊಬ್ಬ ಬಂದು ಪೂಜಾರಿಯ ಮನೆಯ ಬಾಗಿಲು ತಟ್ಟಿದ. ಹಗಲಿನ ಬೆಳಕಲ್ಲೇ ಆತ ಬರಬಹುದಿತ್ತು. ಆದರೆ ನಾನು ನಿಮಗೆ ಹೇಳಲು ಮರೆತಿದ್ದೆ. ಅದು ಸಿರಿವಂತರ ಗುಡಿಯಾಗಿತ್ತು. ಬಡವರಿಗೆ ಅಲ್ಲಿ ಪ್ರವೇಶ ನಿಷಿದ್ಧವಿತ್ತು. ನಮ್ಮ ದೇಶದ ಗುಡಿಗಳ ಜಾಯಮಾನವೇ ಹಾಗೆ. ಗುಡಿಗಳ ನಿರ್ಮಾಣಕ್ಕೆ ಹಣ ಒದಗಿಸುವವರು ಸಿರಿವಂತರು. ದುಡಿಮೆ ಬಡವರದು. ಭಕ್ತಿಭಾವದಿಂದ ತನ್ಮಯತೆಯಿಂದ ಬಡವರು ಗುಡಿಕಟ್ಟಿ ಅದರ ಅಂದ ಹೆಚ್ಚಿಸುತ್ತಾರೆ. ಗುಡಿ ಪೂರ್ಣಗೊಂಡ ನಂತರ ಸಿರಿವಂತರು ಅದರಲ್ಲಿ ತುಂಬಿ ಬಡವರಿಗೆ ಪ್ರವೇಶ ನಿರಾಕರಿಸುತ್ತಾರೆ.
ಬಡವರು ತಮ್ಮದೇ ಆದ ಗುಡಿ ಕಟ್ಟಿಕೊಳ್ಳಲಿ ಎಂದು ನೀವು ವಾದಿಸಬಹುದು. ಆದರೆ ಕೇಳಿ, ಅವರು ತಮ್ಮ ಜೀವನ ನಡೆಸುವುದೇ ಕಷ್ಟವಿರುವಾಗ ಗುಡಿಯನ್ನೆಂತು ಕಟ್ಟಬಲ್ಲರು? ಅವರಿಗೆ ಹೊಟ್ಟೆಯೇ ದೇವರು, ಸಿರಿವಂತರು ಮಾತ್ರ ಅನೇಕ ಗುಡಿಗಳನ್ನು ಕಟ್ಟಬಲ್ಲರು. ಅದರಲ್ಲೂ ಅತಿ ದೊಡ್ಡ ಅತಿ ಎತ್ತರದ ಅತಿ ವಿಸ್ತಾರದ ಗುಡಿಗಳು. ಅವರಿಗೆ ದೇವರಿಗಿಂತಲೂ ದೇವಾಲಯದ ಗಾತ್ರ ಮುಖ್ಯ. ಅವರ ಹಣದ ತೂಕದಷ್ಟೇ ಗುಡಿಯ ಗಾತ್ರವು ಇರುತ್ತದೆ. ಇನ್ನೊಂದು ವಿಷಯ ಗಮನಿಸಿದ್ದೀರಾ? ಇಂದು ದೇವರು ಸಹ ಮಾರುಕಟ್ಟೆಯಲ್ಲಿ ಕೊಳ್ಳುವ ವಸ್ತುವಾಗಿದ್ದಾನೆ. ಸಿರಿವಂತರ ದೇವರು ದೊಡ್ಡದಾಗಿದ್ದರೆ ಬಡವರ ದೇವರು ಚಿಕ್ಕದಾಗಿರುತ್ತಾನೆ.
ಇರಲಿ ಇನ್ನು ನಮ್ಮ ಬಡವನ ವಿಷಯಕ್ಕೆ ಬರೋಣ. ಆತ ಬಹುಶಃ ರಾತ್ರಿ ಹೊತ್ತಿನಲ್ಲಿ ಯಾರೂ ಇಲ್ಲದಿದ್ದಾಗ ಪೂಜಾರಿ ದಯೆತೋರಿ ಗುಡಿಯ ಬಾಗಿಲು ತೆರೆಯಬಹುದೆಂದು ಭಾವಿಸಿದ್ದ. ತನ್ನ ವಿನಂತಿಯನ್ನು ಕೇಳಿ ಅಥವಾ ತನ್ನ ದಯಾರ್ದ್ರ ಗೋಳಿಗೆ ಪೂಜಾರಿಯ ಮನ ಕರಗಬಹುದೆಂದು ಅವ ಭಾವಿಸಿದ್ದ. ಗುಡಿಯೊಳಗಿನ ದೇವರು ಕಲ್ಲಾಗಿದ್ದ ನಿಜ, ಆದರೆ ಅದಕ್ಕಿಂತ ಕಠಿಣತಮ ಮನಸ್ಸು ಪೂಜಾರಿಯದಾಗಿತ್ತು. ಆ ಪೂಜಾರಿ ಕತ್ತಲೆಯಲ್ಲೂ ಮನುಷ್ಯರ ಚರ್ಮದ ಬಣ್ಣವನ್ನು ತಿಳಿಯಬಲ್ಲ ಚಾಣಾಕ್ಷನೂ ಆಗಿದ್ದ. ಬಂದಿದ್ದವನು ಬಡವನೆಂದು ಅವನಿಗೆ ತಿಳಿದುಹೋಯಿತು. ಬಡವ ನಿಧಾನವಾಗಿ ವಿನಂತಿ ಮಾಡಿದ 'ಸ್ವಾಮಿ ಗುಡಿಯ ಬಾಗಿಲು ತೆರೆಯಿರಿ, ನಾನು ದೇವರನ್ನು ನೋಡಲು ಬಂದಿದ್ದೇನೆ.'
ಹಿಂದಿನ ಕಾಲವಾಗಿದ್ದರೆ ಆ ಪೂಜಾರಿ 'ಎಲೈ ದುಷ್ಟನೇ! ತೊಲಗಿಲ್ಲಿಂದ, ಈ ಗುಡಿ ಪರಮಪಾವನಾತ್ಮನದು, ನಿನ್ನ ಅಪವಿತ್ರ ಗಾಳಿ ಇಲ್ಲಿ ಸುಳಿಯಬಾರದು, ನಡಿಯಾಚೆ' ಎನ್ನುತ್ತಿದ್ದನೇನೋ? ಆದರೆ ಬದಲಾದ ಪರಿಸ್ಥಿತಿಯಲ್ಲಿ ಹಾಗೆ ಹೊರಗಟ್ಟುವುದು ನಾಗರೀಕ ಲಕ್ಷಣವಲ್ಲ. ಆತ ಸುರಕ್ಷಿತ ಮಾರ್ಗ ಅನುಸರಿಸಿದ. ನಾನು ಮೊದಲೇ ಹೇಳಿದಂತೆ ಪೂಜಾರಿ ಪುರೋಹಿತರೆಲ್ಲರೂ ಬಲು ಚಾಣಾಕ್ಷ ಮಂದಿ, ಮಿಕ್ಕವರು ಅಕ್ಕಿ ಬೇಳೆ ಮಾರಿದರೆ ಇವರು ದೇವರನ್ನೇ ಮಾರುವವರು.
ಆ ಕಿಲಾಡಿ ಪೂಜಾರಿ ಹೇಳಿದ 'ಸೋದರನೇ, ಗುಡಿಯೊಳಕ್ಕೆ ನೀನು ಬರುವುದರಿಂದ ಆಗುವ ಪ್ರಯೋಜನವಾದರೂ ಏನು? ಎಲ್ಲಿಯ ತನಕ ನಿನ್ನ ಮನಸ್ಸು ಶುದ್ಧವಾಗುವುದಿಲ್ಲವೋ, ಎಲ್ಲಿಯ ತನಕ ನಿನ್ನ ಮನಸ್ಸು ಶಾಂತವಾಗುವುದಿಲ್ಲವೋ ಅಲ್ಲಿಯ ತನಕ ಮಂದಿರದೊಳಗೆ ಪ್ರವೇಶಿಸಿ ಏನೂ ಲಾಭವಿಲ್ಲ, ದೇವರ ದರ್ಶನವೂ ಆಗುವುದಿಲ್ಲ.'
ತನ್ನ ಮನಸ್ಸು ಶಾಂತವಾಗಿಲ್ಲ ಎಂಬುದು ಆಗ ಬಡವನಿಗೆ ಅರಿವಾಯಿತು. ತನ್ನ ಮನದ ತಳಮಳ, ದುಃಖ ದುಗುಡ ಆತಂಕ ಅತಂತ್ರಸ್ಥಿತಿಗೆ ಪರಿಹಾರ ಅದನ್ನು ಶಾಂತವಾಗಿಸುವುದು ಎಂಬ ಸತ್ಯವನ್ನು ಕೇವಲ ಒಂದೇ ಮಾತಿನಲ್ಲಿ ಪೂಜಾರಿ ತಿಳಿಸಿಕೊಟ್ಟದ್ದು, ಅವನಿಗೆ ಪೂಜಾರಿಯ ಬಗ್ಗೆ ಅಪಾರ ಗೌರವ ತಳೆಯುವಂತೆ ಮಾಡಿತು. ಮನಸ್ಸನ್ನು ಶಾಂತವಾಗಿಸಿಕೊಂಡು ಮರಳಿ ಬರುವೆ ಎಂದುಕೊಂಡ. ಆದರೆ ಪೂಜಾರಿಯ ಮುಖದಲ್ಲಿ ಕಿರುನಗೆ ಸುಳಿದುಹೋದದ್ದು ಅವನಿಗೆ ಗೊತ್ತಾಗಲೇ ಇಲ್ಲ.
ಮೂರು ತಿಂಗಳಾಯಿತು, ಆರು ತಿಂಗಳಾಯಿತು, ಬಡವ ಮರಳಿ ಬರಲಿಲ್ಲ. ಒಂದು ದಿನ ಪೂಜಾರಿ ಅವನನ್ನು ರಸ್ತೆಯಲ್ಲಿ ಕಂಡ. ಆ ಬಡವನ ಮುಖದಲ್ಲಿ ಅನಿರ್ವಚನೀಯ ತೇಜಸ್ಸಿತ್ತು. ಅವನ ಕಣ್ಣುಗಳಲ್ಲಿ ಅನುಪಮ ಕಾಂತಿಯಿತ್ತು. ಆತ ಮತ್ಯಾರೋ ಹೊಸ ವ್ಯಕ್ತಿಯಾದಂತೆ ತೊರುತ್ತಿತ್ತು. ಪುಜಾರಿ ಅವನನ್ನು ತಡೆದು ಕೇಳಿದ 'ಗೆಳೆಯನೇ, ನೀನು ಮತ್ತೆ ಬರಲೇ ಇಲ್ಲವಲ್ಲ?'
ಬಡವ ಉತ್ತರಿಸಿದ 'ಸ್ವಾಮೀ, ನಾ ಹೇಗೆ ತಾನೇ ಬರಲಿ, ಮನಸ್ಸನ್ನು ಶಾಂತಗೊಳಿಸುವ ಶುದ್ಧಗೊಳಿಸುವ ಪ್ರಕ್ರಿಯೆಯಲ್ಲಿ ನನಗೆ ದಿನಗಳು ಕಳೆದದ್ದೇ ಗೊತ್ತಾಗಲಿಲ್ಲ. ರಾತ್ರಿಗಳಲ್ಲಿ ಕಣ್ಣೀರಿಡುತ್ತಾ ದೇವಪ್ರಾರ್ಥನೆಯಲ್ಲಿ ಕಳೆಯುತ್ತಿದ್ದೆ. ಒಂದು ರಾತ್ರಿ ಕನಸಿನಲ್ಲಿ ದೇವರು ಬಂದು 'ಏಕೆ ಅಳುತ್ತಿರುವೆ?' ಎಂದು ಕೇಳಿದ. ಅದಕ್ಕೆ ನಾನು 'ದೇವರೇ, ಆ ಗುಡಿಯೊಳಕ್ಕೆ ನಾನು ಹೋಗಬೇಕು, ಅಲ್ಲಿ ನಿನ್ನನ್ನು ಕಾಣಬೇಕು' ಎಂದೆ. ಅದಕ್ಕೆ ದೇವರು ನಕ್ಕುಬಿಟ್ಟ. ನಗುತ್ತಾ ಆತ ಹೇಳಿದ 'ನಿಜಕ್ಕೂ ನೀನೊಬ್ಬ ಹುಚ್ಚ, ಆ ಗುಡಿಯೊಳಕ್ಕೆ ನೀನು ಹೋಗಲಾರೆ, ಸ್ವತಃ ನಾನೇ ಹತ್ತಾರು ವರ್ಷಗಳಿಂದ ಅದರೊಳಕ್ಕೆ ಹೋಗಲು ಪ್ರಯತ್ನಿಸಿ ಸೋತಿದ್ದೇನೆ. ನಾನೇ ಸೋತಿದ್ದೇನೆ ಎಂದ ಮೇಲೆ ನೀನು ಹೇಗೆ ತಾನೇ ಹೋಗಬಲ್ಲೆ, ನಾನು ಬೇಕಾದರೆ ನಿನ್ನ ಹೃದಯ ಮಂದಿರದಲ್ಲಿ ನಿಲ್ಲಬಹುದು, ಆದರೆ ಆ ಗುಡಿಯೊಳಗೆ ಹೋಗುವುದು ಬಲು ಕಷ್ಟ.'
ನಿಜ ಹೇಳಬೇಕೆಂದರೆ ಹತ್ತಾರು ವರ್ಷಗಳಿಂದ ಅಲ್ಲ, ನೂರಾರು ವರ್ಷಗಳಿಂದ ದೇವರಿಗೆ ಮಾನವರು ಕಟ್ಟಿದ ಗುಡಿಗಳೊಳಗೆ ಹೋಗಲಾಗಿಲ್ಲ, ಗುಡಿಗಳು ದಿವ್ಯ ಭವ್ಯ ವಿರಾಟ್ ಸ್ವರೂಪಿಯದಾಗಿದ್ದರೂ ದೇವರಿಗೆ ಅವು ಚಿಕ್ಕವು, ಆದರೆ ಆತ ದರಿದ್ರರ ಮನದೊಳಗೆ ಪ್ರವೇಶಿಸಬಲ್ಲ, ಒಂಟೆಯು ಸೂಜಿಯ ಕಣ್ಣೊಳಗೆ ಪ್ರವೇಶಿಸುವಂತೆ.