ಸೋಮವಾರ, ಜೂನ್ 13, 2011

ಅಂತೋಣಿಯವರಿಗೆ ಮುಡಿಪು

ಅಂತೋಣಿ ಎಂಬ ಆ ಪುಣ್ಯಾತ್ಮ , ದೋರನಹಳ್ಳಿಯ ಮಹಾಸಂತ. ಆತ ನನ್ನ ಬದುಕಿಗೊಂದು ತಿರುವು ನೀಡಿದ್ದು ನನ್ನ ಜೀವನದ ಅಚ್ಚರಿಗಳಲ್ಲೊಂದು. ಎಲ್ಲಿಯ ಬೆಂಗಳೂರು ಎಲ್ಲಿಯ ಮೈಸೂರು, ಎಲ್ಲಿಯ ಮಲ್ಲೇಶ್ವರ ಎಲ್ಲಿಯ ದೋರನಹಳ್ಳಿ? ಇವೆಲ್ಲವನ್ನೂ ಒಗ್ಗೂಡಿಸಿದ ಸಂತ ಅಂತೋಣಿ ಪವಾಡಪುರುಷನೇ ಸರಿ.
ಸಂತ ಅಂತೋಣಿಯವರಿಗೆ ನಡೆದುಕೊಳ್ಳುವವರ ಒಂದು ನಡವಳಿಕೆಯನ್ನು ಹೊಸದಾಗಿ ಕಂಡೆ. ಇದುವರೆಗೆ ನಾನು ಗಮನಿಸದೇ ಇದ್ದ ಆ ಒಂದು ಸಂಗತಿಯನ್ನು ಇಲ್ಲಿ ದಾಖಲಿಸುತ್ತಿದ್ದೇನೆ.
ನವೇನ ದಿನಗಳ ಮೆರವಣಿಗೆಯಲ್ಲಿ ನಾಲ್ಕಾರು ಮಂದಿ ಭುಜದ ಮೇಲೆ ಹೊರುವ ಅಂತೋಣಿಯವರ ಪುಟ್ಟ ತೇರಿಗೆ ಹೆಗಲು ಕೊಡಲು ನಾ ಮುಂದೆ ತಾ ಮುಂದೆ ಎಂದು ಭಕ್ತಜನ ನೂಕುನುಗ್ಗಲಿನಲ್ಲಿರುತ್ತಾರೆ. ಅದನ್ನು ಗುಡಿಯೊಳಗೆ ತಂದು ನೆಲಕ್ಕಿಳಿಸಿದ ಮೇಲೆಯೂ ಮುಡಿಪು ಕಟ್ಟುವವರ ದೊಡ್ಡ ದಂಡೇ ಇರುತ್ತದೆ.
೧೨ನೇ ಜೂನ್ ೨೦೧೧. ಭಾನುವಾರದ ಶುಭಬೆಳಗು ಎಲ್ಲೆಡೆ ಹರಡಿತ್ತು. ಹಬ್ಬದ ಹಿಂದಿನ ದಿನವಾದ್ದರಿಂದ ಜನಸಂದಣಿಯನ್ನು ಅನುಸರಿಸಿ ಒಂದಾದಮೇಲೊಂದರಂತೆ ಬಲಿಪೂಜೆಗಳು ನಡೆದಿದ್ದವು. ಪೂಜೆಯ ನಂತರ ಪೀಠದ ಸುತ್ತಲೂ ಭಕ್ತಿಭಾವದಿಂದ ನಿಲ್ಲುವ ಜನ, ಅವರ ತಲೆಯ ಮೇಲೆ ಸಂತ ಅಂತೋಣಿಯವರ ಪವಾಡ ಪ್ರತಿಮೆಯನ್ನು ಮಡಗಿ ಭಕ್ತರಿಗೊಂದು ವಿಶಿಷ್ಟಾನುಭೂತಿ ಕಲ್ಪಿಸುವ ಅಂತೋಣಿಯವರ ಮಠದ ಸಂನ್ಯಾಸಿಗಳು, ಭಕ್ತಿಪಾರಮ್ಯದ ಈ ದರ್ಶನವನ್ನು ಕಣ್ದುಂಬಿಕೊಳ್ಳುತ್ತಾ ಹಾಗೆಯೇ ಗುಡಿಯ ಮುಂಬಾಗಿಲ ಬಳಿಯಿದ್ದ ನವೇನ ತೇರಿನ ಬಳಿಬಂದೆ. ಭಕ್ತ ಜನ ಅದರ ಮುಂದೆ ಡಜನುಗಟ್ಟಲೆ ಮೇಣದ ಬತ್ತಿಗಳನ್ನು ಹಚ್ಚಿ ಮೊಣಕಾಲೂರಿ ಹಣೆಯನ್ನು ನೆಲಕ್ಕೆ ಮುಟ್ಟಿಸುವಂತೆ ತಲೆಬಾಗಿ ನಮಸ್ಕರಿಸುತ್ತಿದ್ದರು. ಅಂತೋಣಿಯವರ ಮುಖ ಹೊರತು ಇಡೀ ದೇಹ ಹೂಮಾಲೆಗಳಿಂದ ತುಂಬಿಹೋಗಿತ್ತು.
ಅವರ ಪಾದದಡಿ ಕಣ್ಣು ಹಾಯಿಸಿದಾಗ ಒಂದು ರೀತಿಯ ಅಚ್ಚರಿಯೂ ಕುತೂಹಲವೂ ಮೂಡಿತು. ನಿಲುವಂಗಿಯ ಆ ಕೆಳಭಾಗವನ್ನೆಲ್ಲ ಕಪ್ಪು ಅರಿಶಿನ ಕೆಂಪು ದಾರಗಳು ಸುತ್ತುವರಿದಿದ್ದವು. ಅರಿಶಿನ ದಾರಗಳಲ್ಲಿ ಅರಿಶಿನದ ಕೊಂಬು ಇದ್ದವು. ಇನ್ನುಳಿದವುಗಳಲ್ಲಿ ಬೇಡಿಕೆ ಬರೆದ ಚೀಟಿ, ಬಟ್ಟೆಯಲ್ಲಿ ಸುತ್ತಿದ ಹರಕೆಯ ದುಡ್ಡು, ಕೈ ಕಾಲು ಕಣ್ಣು ದೇಹ ಮಗು ಇತ್ಯಾದಿಗಳ ಬಿಂಬವಿರುವ ಬೆಳ್ಳಿಯ ಬಿಲ್ಲೆಗಳು ಇತ್ಯಾದಿ ವಸ್ತುಗಳಿದ್ದವು.
ನಾನು ನೋಡುತ್ತಿದ್ದಂತೆ ಒಬ್ಬ ಪ್ರೌಢ ಹೆಂಗಸು ದಾರವೊಂದನ್ನು ಎಳೆಯ ತೊಡಗಿದಳು. ಅವಳು ಹೊಸದಾಗಿ ಕಟ್ಟುತ್ತಿದ್ದಾಳೋ ಇರುವುದನ್ನು ಕಿತ್ತುಹಾಕುತ್ತಿದ್ದಾಳೋ ಎಂದು ಖಚಿತ ಪಡಿಸಿಕೊಳ್ಳಲು ಗಮನವಿಟ್ಟು ನೋಡತೊಡಗಿದೆ. ಸಣ್ಣಗಿನ ಕಪ್ಪುದಾರವೊಂದನ್ನು ಆಯ್ಕೆ ಮಾಡಿಕೊಂಡ ಆಕೆ ಅದಕ್ಕೆ ಹಾಕಿದ್ದ ಗಂಟುಗಳನ್ನು ಒಂದೊಂದಾಗಿ ತುಂಬಾ ಸಹನೆಯಿಂದ ಬಿಚ್ಚತೊಡಗಿದಳು. ಆ ದಾರಕ್ಕೆ ಬಿಡಿಯಾಗಿ ಹಲವಾರು ಗಂಟುಗಳಿದ್ದರೆ ಎರಡೂ ಕೊನೆಗಳನ್ನು ಸೇರಿಸಿ ಇನ್ನಷ್ಟು ಗಂಟುಗಳನ್ನು ಹಾಕಲಾಗಿತ್ತು. ಬಿಡಿಗಂಟುಗಳ ಕಾರಣ ಈ ಜೋಡಿಗಂಟುಗಳನ್ನು ಸುಲಭವಾಗಿ ಬಿಚ್ಚಲಾಗುತ್ತಿರಲಿಲ್ಲ. ತುಂಬಾ ತಾಳ್ಮೆಯಿಂದ ಅವಳು ಅವನ್ನೆಲ್ಲ ಬಿಚ್ಚಿ ತನ್ನ ಹಸ್ತದೊಳಗಿಟ್ಟು ಮಡಿಚಿ ಕಣ್ಣಿಗೊತ್ತಿಕೊಂಡು ಎದ್ದು ಹೊರಟಳು. ನಾನಾಕೆಯನ್ನು ತಡೆದು ಅಮ್ಮಾ ನಿಲ್ಲಿ, ಇದೇಕೆ ಹೀಗೆ ದಾರವನ್ನು ಬಿಚ್ಚಿಕೊಂಡು ಹೋಗುತ್ತಿದ್ದೀರಿ ಎಂದು ಕೇಳಿದೆ. ಕೊಡಗು ಜಿಲ್ಲೆಯ ಸಿದ್ದಾಪುರದ ಆಕೆ ಹೇಳಿದ ಸಂಗತಿ ಮಾರ್ಮಿಕವಾಗಿತ್ತು. ಕಷ್ಟ ಸಂಕಟಗಳಿಗೆ ಸಿಲುಕಿದವರು ಅದರ ಪರಿಹಾರಕ್ಕಾಗಿ ಸಂತರಿಗೆ ಮೊರೆಯಿಟ್ಟು ಜಾತ್ರೆಯ ಸಮಯಕ್ಕೆ ದೋರನಹಳ್ಳಿಗೆ ಬಂದು ಹೀಗೆ ಮುಡಿಪು ಕಟ್ಟುತ್ತಾರಂತೆ. ಹಾಗೆ ಕಟ್ಟಿದ ಮೇಲೆ ಮೊದಲೇ ಇನ್ಯಾರೋ ಕಟ್ಟಿದ ಮುಡಿಪನ್ನು ಬಿಚ್ಚಿಕೊಂಡು ಹೋಗುತ್ತಾರಂತೆ. ಅದನ್ನು ಅವರು ತೆಗೆದುಕೊಂಡು ಮನೆಗೆ ಹಿಂದಿರುಗುವ ವೇಳೆಗೆ ಇವರು ಹಾಕಿದ ಗಂಟನ್ನು ಇನ್ಯಾರೋ ಬಿಚ್ಚಿರುತ್ತಾರೆ. ಹೀಗೆ ಇವರ ಗಂಟುಗಳು ಸಡಿಲವಾಗುತ್ತಿದ್ದಂತೆ ಇವರ ಕಷ್ಟಗಳೂ ಪರಿಹಾರವಾಗುತ್ತವೆಯಂತೆ. ಎಲ್ಲಾ ಅವರವರ ನಂಬಿಕೆ ಅಥವಾ ದೃಢವಿಶ್ವಾಸವೆನ್ನಬಹುದು. ಹೀಗೆ ಪವಾಡ ಸದೃಶವಾಗಿ ಸಂಕಟ ಪರಿಹರಿಸುವ ಸಂತ ಅಂತೋಣಿಯವರು ಕಾಣದ ವಸ್ತುಗಳನ್ನು ಮರಳಿ ದೊರಕಿಸುವರೆಂಬುದೂ ಒಂದು ನಂಬಿಕೆಯ ಅಂಶ. ಕಳೆದುಹೋದ ಸ್ಥಾನ ಮಾನ ಪ್ರತಿಷ್ಠೆಗಳೂ ಮರಳಿ ಸಿಗುವುದಾದರೆ ಅದಕ್ಕಿಂತ ಅದ್ಭುತ ಬೇರಿನ್ನೇನು!

ಗುರುವಾರ, ಮೇ 26, 2011

ಕಪ್ಪು ಕ್ರಿಸ್ತ

ಫಿಲಿಪ್ಪೀನ್ಸ್ ದೇಶದ ರಾಜಧಾನಿ ಮನಿಲಾದ ಒಂದು ಹಳೆಯ ಬಡಾವಣೆ ಕಿಯಾಪೊ. ಈ ಪ್ರದೇಶದ ಹೆಂಚಿನ ಮಾಳಿಗೆಯ ಪುಟ್ಟಗಾತ್ರದ ಸಂತ ಸ್ನಾನಿಕ ಯೊವಾನ್ನರ ಚರ್ಚ್ ಅತ್ಯಂತ ನಯನ ಮನೋಹರವಾಗಿದೆ. ಸುತ್ತೆಲ್ಲ ವಾಣಿಜ್ಯಕೇಂದ್ರಗಳು, ತಿಂಡಿತಿನಿಸಿನ ಮಳಿಗೆಗಳು, ಸರಿಸರಿ (ಮನರಂಜನೆ) ಕೇಂದ್ರಗಳಿಂದ ತುಂಬಿದ್ದರೂ ಈ ಪುಟ್ಟ ಚರ್ಚ್ ಹಗಲೂ ರಾತ್ರಿ ಜನಜಂಗುಳಿಯಿಂದ ತುಂಬಿ ತುಳುಕುತ್ತದೆ. ಅಲ್ಲಿಗೆ ನೀವು ಯಾವಾಗ ಭೇಟಿ ನೀಡಿದರೂ ಅಲ್ಲಿನ ಪ್ರಸಾದಸಂಪುಟದ ಮುಂದೆ ಮೊಣಕಾಲೂರಿ ಭಕ್ತಿಯಿಂದ ಪ್ರಾರ್ಥಿಸುತ್ತಿರುವ ಹಲವಾರು ಭಕ್ತರನ್ನು ಕಾಣುತ್ತೀರಿ. ಬಿಳಿಯರು, ಕರಿಯರು, ಪೌರ್ವಾತ್ಯರು, ಸ್ಥಳೀಯರು, ಪ್ರವಾಸಿಗರು, ಬಡವರು, ಶ್ರೀಮಂತರು, ಸುಖಲೋಲುಪ್ತರು, ಅಂಗಹೀನರು ಹೀಗೆ ಯಾವುದೇ ಭಿನ್ನಭೇದವಿಲ್ಲದೆ ಇವರೆಲ್ಲ ಕ್ರಿಸ್ತನನ್ನು ಕಾಣಲು ಬಂದಿದ್ದಾರೆ. ಅವರ ಭಕ್ತಿಪಾರಮ್ಯವ ಕಂಡು ನೀವೂ ಪರವಶರಾಗಿ ನಿಮಗೇ ಗೊತ್ತಿಲ್ಲದಂತೆ ಕ್ರಿಸ್ತನ ಮುಂದೆ ಮೊಣಕಾಲೂರುತ್ತೀರಿ.


ಹಾಗೇ ತಲೆಯೆತ್ತಿ ಕ್ರಿಸ್ತನನ್ನು ದರ್ಶಿಸುತ್ತೀರಿ. ಅರೆ! ಆಶ್ಚರ್ಯ, ಕ್ರಿಸ್ತ ಕಪ್ಪಗಿದ್ದಾನೆ. ನೀವು ಯಾವಾಗಲೂ ದೇವಾಲಯಗಳಲ್ಲಿ ನೋಡುವ, ಕಣ್ಣು ಮುಚ್ಚಿದರೂ ಒಳಗಣ್ಣಿಗೆ ತೋರುವ ಆ ಗೌರವರ್ಣದ ಸುಂದರ ಸುಕೋಮಲ ಹಾಲುಗಲ್ಲದ ಬಿಳಿಯ ಕ್ರಿಸ್ತಮೂರ್ತಿಯೆಲ್ಲಿ, ಈ ಕಡುಗಪ್ಪಿನ ಕರಾಳ ಆದರೂ ಪ್ರೀತಿಯೇ ಮೈವೆತ್ತಿದಂತಿರುವ ಕರಿಯ ಕಾಷ್ಠ ಶಿಲ್ಪವೆಲ್ಲಿ?

ನಿಜ, ಇಲ್ಲಿ ಕ್ರಿಸ್ತ ಕಪ್ಪಗಿದ್ದಾನೆ, ಕಡುಗಪ್ಪಾಗಿದ್ದಾನೆ. ಆದರೆ . . ಆದರೆ . . ಅವನ ಕಂಗಳಲ್ಲಿ ಪ್ರೀತಿಯಿದೆ, ಶಾಂತಿಯಿದೆ, ಅಪೂರ್ವ ಕಾಂತಿಯಿದೆ, ಪ್ರಶಾಂತಿಯಿದೆ. ಅವನ ಭಕ್ತರ ಕಡೆ ನೋಡಿರಲ್ಲ. ಕಪ್ಪು, ಕಂದು, ಬಿಳಿ, ಹಳದಿ ಮೈಬಣ್ಣಗಳ ಜನಗಳ ನಡುವೆ ಕ್ರಿಸ್ತ ಕಪ್ಪಗಿರುವುದರಲ್ಲಿ ಏನು ವಿಶೇಷ? ಇದೇನು ವಿಚಿತ್ರ? ಕ್ರಿಸ್ತನೇಕೆ ಕಪ್ಪಗಾದ? ಎಂಬ ಪ್ರಶ್ನೆಗಳು ಕಾಡತೊಡಗುತ್ತವೆ.

ನಮ್ಮ ದೇಶದ ಪುರಾಣಗಳಲ್ಲಿನ ದೇವತೆಗಳಾದ ಕೃಷ್ಣನ ಬಣ್ಣ ಕಪ್ಪು, ರಾಮನ ಬಣ್ಣ ನೀಲಿ, ಹಾಗೆ ನೋಡಿದರೆ ಯೇಸುಕ್ರಿಸ್ತ ಜನಿಸಿದ್ದು ಏಷಿಯಾ ಖಂಡದಲ್ಲಿಯೇ. ಈ ಖಂಡದಲ್ಲಿ ಎಲ್ಲ ಬಣ್ಣಗಳ ಜನ ಇದ್ದಾರೆ. ಆದರೆ ನಮ್ಮ ಕಲ್ಪನೆಯ ಕ್ರಿಸ್ತ ಬೆಳ್ಳಗಿದ್ದಾನೆ, ಹೌದು. ಅದಕ್ಕೆ ಕಾರಣವೇನು?

ಸ್ಪೇನ್, ಇಟಲಿ, ಪೋರ್ಚುಗಲ್, ಫ್ರಾನ್ಸ್ ಮುಂತಾದ ಐರೋಪ್ಯ ದೇಶಗಳ ಮೂಲಕವೇ ನಮಗೆ ಕ್ರಿಸ್ತನ ಪರಿಚಯವಾಯಿತು. ಆ ದೇಶಗಳಿಂದಲೇ ನಮಗೆ ಯೇಸುಕ್ರಿಸ್ತನ, ಮೇರಿಮಾತೆಯ ಸ್ವರೂಪಗಳು ಬಂದವಲ್ಲವೇ? ಆ ಐರೋಪ್ಯ ಜನ ತಮ್ಮ ದೇಶ ಸಂಸ್ಕೃತಿಗನುಗುಣವಾದ, ತಮ್ಮ ಒಡನಾಡಿಗಳ ರೂಪ ಲಾವಣ್ಯ ಗಾಂಭೀರ್ಯಗಳನ್ನು ಆ ಸ್ವರೂಪಗಳಲ್ಲಿ ಮೂಡಿಸಿ ಅವನ್ನೇ ನಮ್ಮ ದೇವಾಲಯಗಳಲ್ಲಿ ಪ್ರತಿಷ್ಠಾಪಿಸಿದರು ಅಲ್ಲವೇ?

ಅದೇ ರೀತಿ ಕ್ರಿಸ್ತಶಕ ೧೬೦೬ರಲ್ಲಿ ಸ್ಪೇನ್ ದೇಶದ ಪಾದ್ರಿಗಳು ಗೌರವರ್ಣದ ಯೇಸುಕ್ರಿಸ್ತನ ಪ್ರತಿಮೆಯನ್ನು ಫಿಲಿಪ್ಪೀನ್ಸ್ ದೇಶಕ್ಕೆ ಹಡಗಿನಲ್ಲಿ ಕೊಂಡೊಯ್ಯುತ್ತಿದ್ದರು. ಅಂದು ಜನವರಿ ೯ನೇ ದಿನ ಸ್ವಲ್ಪಹೊತ್ತಿಗೆ ದಡ ಸೇರಬೇಕಿತ್ತು. ಆದರೆ ಇದ್ದಕ್ಕಿದ್ದಂತೆ ಹಡಗಿಗೆ ಬೆಂಕಿ ಬಿದ್ದು ಬಹಳಷ್ಟು ವಸ್ತುಗಳು ದಹಿಸಿಹೋದವು. ಆದರೆ ಕ್ರಿಸ್ತನ ಪ್ರತಿಮೆ ಮಾತ್ರ ಸುಟ್ಟುಹೋಗದೆ ಬಣ್ಣಗೆಟ್ಟು ಕಪ್ಪಾಯಿತೆಂದು ಚರಿತ್ರೆ ಹೇಳುತ್ತದೆ. ಇದೇ ಕಪ್ಪುಕ್ರಿಸ್ತನ ಪ್ರತಿಮೆಯನ್ನು ಕ್ರಿಸ್ತಶಕ ೧೭೮೭ರಿಂದೀಚೆಗೆ ಕಿಯಾಪೊ ಮೊಹಲ್ಲಾದ ಸಂತ ಸ್ನಾನಿಕ ಯೊವಾನ್ನರ ಚರ್ಚಿನಲ್ಲಿ ಬಹಿರಂಗ ಪ್ರದರ್ಶನಕ್ಕೆ ಇಡಲಾಗಿದೆ.

ಕಿಯಾಪೊ ಮೊಹಲ್ಲಾದ ಬೀದಿಗಳಲ್ಲಿ ಜನವರಿ ೯ರಂದು ಹಾಗೂ ಶುಭಶುಕ್ರವಾರದಂದು ಭಾರೀ ಮೆರವಣಿಗೆ ನಡೆಯುತ್ತದೆ. ಭಕ್ತಿಪರವಶರಾದ ಜನ ಮರದಲ್ಲಿ ಕೆತ್ತಲಾದ ಆಳೆತ್ತರದ ಕಪ್ಪು ಕ್ರಿಸ್ತನ ಪ್ರತಿಮೆಯನ್ನು ಹಿಡಿದು "ವಿವಾ ಸೆನೋರ್" ಎಂದು ಕೂಗುತ್ತಾ ಹೋಗುತ್ತಾರೆ. ಈ ಪ್ರತಿಮೆಯನ್ನು ಹೊತ್ತೊಯ್ಯುವ ದಾರಿಯ ಇಕ್ಕೆಲಗಳಲ್ಲಿ ಸೇರಿದ ಜನಜಂಗುಳಿ ಪ್ರತಿಮೆಯ ದರ್ಶನದಿಂದ ಪುಳಕಿತರಾಗುತ್ತಾರೆ. ಕೆಲವರು ಅದನ್ನು ಕೈಯಿಂದ ಮುಟ್ಟಲೆತ್ನಿಸುತ್ತಾರೆ, ಇನ್ನೂ ಕೆಲವರು ತಮ್ಮ ಕರವಸ್ತ್ರಗಳನ್ನೋ ತುಂಡುಬಟ್ಟೆಗಳನ್ನೋ  ಪ್ರತಿಮೆಗೆ ತಾಕಿಸಿ ತಂದು ತಮ್ಮ ಮನೆಯ ದೇವರ ಕೋಣೆಯಲ್ಲಿ ಜೋಪಾನವಾಗಿ ಮಡಗುತ್ತಾರೆ. ಕರಿಯ ಯೇಸುಕ್ರಿಸ್ತನ ಪ್ರತಿಮೆಯ ಸ್ಪರ್ಶವೇ ತಮ್ಮನ್ನು ಕೇಡಿನಿಂದ ತಪ್ಪಿಸಿ ಕ್ಷೇಮವನ್ನು ಪಾಲಿಸುತ್ತೆ ಎಂಬ ಭಾವನೆ ಇದೆಯಲ್ಲ ಅದಕ್ಕಿಂತ ಅನುಪಮವಾದುದು ಬೇರೇನಿದೆ ಅಲ್ಲವೇ?

ಬುಧವಾರ, ಏಪ್ರಿಲ್ 27, 2011

ಜನಲೋಕಪಾಲ ಮಸೂದೆ ಪ್ರಸ್ತಾವ


ಭಾರತೀಯ ಸೇನೆಗೆ ೧೯೬೩ರಲ್ಲಿ ಸೇರಿದ ಅಣ್ಣಾ ಹಜಾರೆಯವರು ೧೫ ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ತೆಗೆದುಕೊಂಡು ತನ್ನ ಹುಟ್ಟೂರು ಮಹಾರಾಷ್ಟ್ರ ರಾಜ್ಯದ ಅಹ್ಮದ್ ನಗರದ ರಾಲೆಗಾಂವ್ ಸಿದ್ಧಿ ಎಂಬ ಹಳ್ಳಿಗೆ ಬಂದಾಗ ಆ ಊರಿನ ಸ್ಥಿತಿ ಶೋಚನೀಯವಾಗಿತ್ತು. ಆ ಹಳ್ಳಿ ರಸ್ತೆ, ನೀರು, ಕರೆಂಟು ಯಾವುದೂ ಇಲ್ಲದೆ, ಶಿಕ್ಷಣ, ಕೃಷಿ, ನಾಗರಿಕ ಸವಲತ್ತು ಬಗ್ಗೆ ಯಾವುದೇ ಮುನ್ನೋಟವಿಲ್ಲದ ನಿರಕ್ಷರಕುಕ್ಷಿಗಳಿಂದ ತುಂಬಿತ್ತು. ಬರ ಆ ಊರನ್ನು ಬೆಂಗಾಡಾಗಿಸಿತ್ತು. ಕಳ್ಳಭಟ್ಟಿ ಸಾರಾಯಿ ದಂಧೆ ಉತ್ತುಂಗದಲ್ಲಿತ್ತು. ೧೯೭೫ ರಲ್ಲಿ ಅಣ್ಣಾ ಹಜಾರೆ ತನ್ನ ಊರನ್ನು ಸುಧಾರಿಸುವ ನಿಟ್ಟಿನಲ್ಲಿ ಮಾಡಿದ ಕಾರ್ಯಗಳು ದೇಶಕ್ಕೇ ಮಾದರಿಯಾಗಿವೆ. ಕುಡಿಯುವ ನೀರು, ರಸ್ತೆ, ಚರಂಡಿ, ನೀರಾವರಿ ವ್ಯವಸ್ಥೆ, ಶಾಲೆ ಹೀಗೆ ಎಲ್ಲವನ್ನು ಊರವರ ಸಹಕಾರದೊಂದಿಗೆ ಮಾಡಿ ಅದನ್ನು ಮಾದರಿ ಗ್ರಾಮವಾಗಿಸಿ ಸ್ವಾವಲಂಬೀ ಜೀವನ ನಡೆಸಲು ಅಲ್ಲಿನ ಜನರನ್ನು ಪ್ರೇರೇಪಿಸಿದ ಕೀರ್ತಿ ಅಣ್ಣಾ ಅವರ ಸಾಧನೆಯ ದ್ಯೋತಕ.
ಕೆಲ ವರ್ಷಗಳ ಹಿಂದೆ ಅಣ್ಣಾ ಅವರು ಮಾಹತಿಹಕ್ಕು ಕಾನೂನು ಜಾರಿಗೆ ಬರುವಂತೆ ಮಾಡಿದ ಕೀರ್ತಿಗೂ ಭಾಜನರಾಗಿದ್ದಾರೆ. ಅವರು ಅದಕ್ಕಾಗಿ ೨೦೦೩ರ ಜುಲೈನಲ್ಲಿ ೧೨ ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದರು.ಅದರ ಫಲವಾಗಿ ೨೦೦೫ರಲ್ಲಿ ಮಾಹಿತಿಹಕ್ಕು ಕಾಯಿದೆ ೨೦೦೫ ಜಾರಿಗೆ ಬಂತು.
ಜನಪರ ಕಾಳಜಿಗಾಗಿ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಪಡೆದ ಇವರು ಈಗ, ಭ್ರಷ್ಟರ ವಿಚಾರಣೆಯನ್ನು ಎರಡು ವರ್ಷಗಳಲ್ಲಿ ಮುಗಿಸಲು ಅನುಕೂಲವಾಗುವ ಜನ ಲೋಕಪಾಲ ಮಸೂದೆ ಜಾರಿಯಾಗಬೇಕು. ಇದು ಕಟ್ಟು ನಿಟ್ಟಿನ ಕಾಯ್ದೆಯಾಗಬೇಕು. ಇದರಿಂದ ಭ್ರಷ್ಟಾಚಾರ ನಿಯಂತ್ರಣ ಸಾಧ್ಯ ಎನ್ನುತ್ತಾ, ಈ ಕಾಯ್ದೆಯ ಕರಡು ರಚಿಸಲು ಜನರನ್ನೂ ಸೇರಿಸಿಕೊಳ್ಳಬೇಕೆಂಬ ಆಗ್ರಹದೊಂದಿಗೆ ಉಪವಾಸ ಸತ್ಯಾಗ್ರಹ ಮಾಡಿದ್ದು ಎಲ್ಲರಿಗೂ ವೇದ್ಯವಾಗಿದೆ.
ಆದರೆ ಯಾವುದೇ ಸರ್ಕಾರಕ್ಕೆ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲ ಮಾಡಲು ಬದ್ಧತೆ ಇಲ್ಲ. ಏಕೆಂದರೆ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಹಲವಾರು ಪಕ್ಷಗಳ ಸರ್ಕಾರಗಳ ಮುಂದೆ ಅದರ ಪ್ರಸ್ತಾವಗಳು ಬಂದರೂ ಜಾರಿಯಾಗಿರಲಿಲ್ಲ. ಅದರ ಈಗಿನ ಪ್ರಸ್ತಾವಗಳಂತೂ ಜಾಳುಜಾಳಾಗಿವೆಯಲ್ಲದೆ ಅದರ ಕರಡು ಸಿದ್ಧತಾ ಸಮಿತಿಯಲ್ಲಿ ಭೂಹಗರಣದಲ್ಲಿ ಸಿಲುಕಿರುವ ಶರದ್ ಪವಾರ್ ಅಂಥವರೂ ಇದ್ದರು. ಈ ಒಂದು ಅಂಶವನ್ನು ಮುಂದುಮಾಡಿಕೊಂಡು ಕೇಂದ್ರಸರ್ಕಾರವನ್ನು ನೊಣೆಯಬಹುದು ಎಂದು ಬಾಯಲ್ಲಿ ಜೊಲ್ಲು ಸುರಿಸುತ್ತಾ ಅಣ್ಣಾ ಹಜಾರೆಯವರಿಗೆ ಬೆಂಬಲು ಸೂಚಿಸಲು ಬಂದ ಬಿಜೆಪಿಯಂಥ ಪಕ್ಷಗಳ ನಾಯಕರನ್ನು ಅಣ್ಣಾ ಅವರು ಬಾಗಿಲಲ್ಲೇ ತಡೆದು ಹಿಂದಕ್ಕೆ ಕಳುಹಿಸಿದ್ದೂ ಸುದ್ದಿಯಾಯಿತು.
ಕರ್ನಾಟಕಕ್ಕೆ ದಕ್ಷ ಆಡಳಿತ, ಭ್ರಷ್ಟಮುಕ್ತ ಸರ್ಕಾರ, ಹಗರಣಮುಕ್ತ ಸರ್ಕಾರವನ್ನು ನೀಡುತ್ತೇವೆ ಎಂಬ ಆಶ್ವಾಸನೆಯೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ಹೇಗೆ ಭ್ರಷ್ಟಾಚಾರದಲ್ಲಿ ಮುಳುಗಿ ತೇಲುತ್ತಿದೆ ಎಂಬ ಅಂಗೈ ಹುಣ್ಣಿಗೆ ಕನ್ನಡಿಯೇನೂ ಬೇಕಾಗಿಲ್ಲ ಅಲ್ಲವೇ?
ಲೋಕಪಾಲ ಮಸೂದೆ ಎಂಬುದು ಸರಕಾರ ಸಿದ್ಧಪಡಿಸುತ್ತಿರುವ ಮಸೂದೆಯಾದರೆ, ಅಣ್ಣಾ ಹಜಾರೆ ಪ್ರಸ್ತಾಪಿಸಿದ್ದು ಜನ ಲೋಕಪಾಲ ಮಸೂದೆ, ಅದು ಜನರಿಂದಲೇ ರೂಪುಗೊಳ್ಳುವ ಮಸೂದೆಯಾಗಿರುತ್ತದೆ.
ಸರಕಾರದ ಪ್ರಸ್ತಾವನೆ ಮತ್ತು ಅಣ್ಣಾ ಹಜಾರೆ ನೇತೃತ್ವದ ಒಮ್ಮನಸ್ಸಿನ ಮಂದಿ ರೂಪಿಸಿದ ಪ್ರಸ್ತಾವನೆಯ ತುಲನೆ ಇಲ್ಲಿದೆ.

ಸರಕಾರದ ಪ್ರಸ್ತಾಪದಲ್ಲಿರುವುದು:
ಲೋಕಪಾಲರಿಗೆ ಭ್ರಷ್ಟರ ವಿರುದ್ಧ ತಾವಾಗಿಯೇ ಕ್ರಮ ಕೈಗೊಳ್ಳುವ ಅಧಿಕಾರವಿರುವುದಿಲ್ಲ ಅಥವಾ ಅವರು ಭ್ರಷ್ಟಾಚಾರದ ಕುರಿತು ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸುವಂತಿಲ್ಲ. ಲೋಕಸಭಾ ಸ್ಪೀಕರ್ ಅಥವಾ ರಾಜ್ಯಸಭಾ ಅಧ್ಯಕ್ಷರು ಅನುಮತಿ ಮೂಲಕ ಬಂದ ದೂರುಗಳನ್ನು ಮಾತ್ರವೇ ಅದು ತನಿಖೆ ನಡೆಸಬೇಕು.

ಅಣ್ಣಾ ಹಜಾರೆಯವರ ಪ್ರಸ್ತಾಪ:
ಯಾವುದೇ ಕೇಸಿನಲ್ಲಿ ತಾವಾಗಿಯೇ ತನಿಖೆ ಆರಂಭಿಸುವ ಹಕ್ಕು ಲೋಕಪಾಲರಿಗೆ ಇರಬೇಕು ಮತ್ತು ನೇರವಾಗಿ ಸಾರ್ವಜನಿಕರಿಂದ ಅವರು ದೂರುಗಳನ್ನು ಸ್ವೀಕರಿಸಬಹುದು. ಯಾವುದೇ ಕೇಸಿನ ತನಿಖೆ ಆರಂಭಿಸಲು ಯಾರದೇ ಅನುಮತಿ ಅಥವಾ ಉಲ್ಲೇಖಗಳು ಬೇಕಾಗಿಲ್ಲ.

ಸರಕಾರ: ಲೋಕಪಾಲ ಎಂಬುದು ಸಲಹಾ ಸಂಸ್ಥೆಯಾಗಿರುತ್ತದೆ. ಅದು ಅದರ ತನಿಖಾ ವರದಿಯನ್ನು ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವಿರುವ "ಜವಾಬ್ದಾರಿಯುತ ಮಂಡಳಿ"ಗೆ ಸಲ್ಲಿಸುತ್ತದೆ.
ಅಣ್ಣಾ: ಲೋಕಪಾಲ ಎಂಬುದು ಸಲಹಾ ಸಂಸ್ಥೆಯಲ್ಲ. ಕೇಸಿನ ವಿಚಾರಣೆ ಪೂರ್ಣಗೊಳಿಸಿದ ಬಳಿಕ ಶಿಕ್ಷೆ ವಿಧಿಸುವ ಹಕ್ಕು ಕೂಡ ಅದಕ್ಕೆ ಇರಬೇಕು. ಯಾವುದೇ ಸರಕಾರಿ ನೌಕರರ ವಿರುದ್ಧ ಶಿಸ್ತು ಕ್ರಮ ಆದೇಶಿಸುವ ಅಧಿಕಾರವನ್ನೂ ಅದು ಹೊಂದಿರಬೇಕು.

ಸರಕಾರ: ಲೋಕಪಾಲರಿಗೆ ಪೊಲೀಸ್ ಅಧಿಕಾರಗಳಿಲ್ಲ. ಅದರ ಎಲ್ಲ ತನಿಖೆಗಳು ’ಪ್ರಾಥಮಿಕ ತನಿಖೆಗಳಿಗೆ’ ಸಮ. (ಹಾಗಿದ್ದರೆ, ಅದರ ವರದಿ ಅಂಗೀಕೃತವಾದರೆ ಚಾರ್ಜ್ ಶೀಟ್ ಸಲ್ಲಿಸುವುದು ಯಾರು?)
ಅಣ್ಣಾ: ಲೋಕಪಾಲರಿಗೆ ಪೊಲೀಸ್ ಅಧಿಕಾರ ಬೇಕು. ಎಫ್ಐಆರ್ ದಾಖಲು ಮಾಡಲು, ಕ್ರಿಮಿನಲ್ ತನಿಖೆ ನಡೆಸಲು ಮತ್ತು ದಂಡನಾ ಕ್ರಮಗಳನ್ನು ಕೈಗೊಳ್ಳಲು ಅವರಿಗೆ ಅಧಿಕಾರ ಬೇಕು.

ಸರಕಾರ: ಮಸೂದೆ ಜಾರಿಗೆ ಬಂದ ಬಳಿಕ ಕೇಂದ್ರೀಯ ತನಿಖಾ ಮಂಡಳಿಯ ಪಾತ್ರ ಏನು ಎಂಬುದರ ಉಲ್ಲೇಖವಿಲ್ಲ. ರಾಜಕಾರಣಿಗಳ ವಿರುದ್ಧ ತನಿಖೆ ಕೈಗೊಳ್ಳುವ ಸಿಬಿಐ ಅಧಿಕಾರ ಹೋಗುತ್ತದೆಯೇ?
ಅಣ್ಣಾ: ಸಿಬಿಐಯ ಭ್ರಷ್ಟಾಚಾರ-ನಿಗ್ರಹ ಘಟಕವನ್ನು ಲೋಕಪಾಲ ಜೊತೆ ವಿಲೀನಗೊಳಿಸಬೇಕು. ಈ ಮೂಲಕ, ಭ್ರಷ್ಟಾಚಾರ ವಿರುದ್ಧ ಕ್ರಮ ಕೈಗೊಳ್ಳಲು ಏಕೈಕ ಸ್ವತಂತ್ರ ಸಂಸ್ಥೆ ಇರುವಂತಾಗುತ್ತದೆ.

ಸರಕಾರ: ಭ್ರಷ್ಟಾಚಾರಕ್ಕೆ ತೀರಾ ಸಣ್ಣ ಶಿಕ್ಷೆ - ಕನಿಷ್ಠ ೬ ತಿಂಗಳು, ಗರಿಷ್ಠ ೭ ವರ್ಷ.
ಅಣ್ಣಾ: ಶಿಕ್ಷೆ ಕಠಿಣವಾಗಬೇಕು. ಕನಿಷ್ಠ ೫ ವರ್ಷಗಳು ಹಾಗೂ ಗರಿಷ್ಠ ಜೀವಾವಧಿ ಶಿಕ್ಷೆ.

ಸರಕಾರ: ಅಕ್ರಮ ಸಂಪತ್ತು ಹೊರತೆಗೆಯುವ ಅಧಿಕಾರವಿಲ್ಲ. ಅಂದರೆ ಯಾವುದೇ ಭ್ರಷ್ಟ ವ್ಯಕ್ತಿಯು ಜೈಲಿನಿಂದ ಹೊರಬಂದ ಬಳಿಕ, ಅದೇ ಹಣ-ಸಂಪತ್ತನ್ನು ಬಳಸಿಕೊಳ್ಳಬಹುದಾಗಿದೆ.
ಅಣ್ಣಾ: ಭ್ರಷ್ಟಾಚಾರದಿಂದಾಗಿ ಸರಕಾರಕ್ಕೆ ಆಗುವ ನಷ್ಟವನ್ನು ಆಪಾದಿತರಿಂದಲೇ ವಸೂಲು ಮಾಡಬೇಕು.

ಶುಕ್ರವಾರ, ಮಾರ್ಚ್ 25, 2011

ಮರಿಯಾಪುರದಲ್ಲಿ ‘ಯೇಸು ಮಹಿಮೆ’

ಬನ್ನೇರುಘಟ್ಟ ಬೆಟ್ಟದ ಪಶ್ಚಿಮ ಬುಡದಲ್ಲಿ ಹಸಿರುಹೊತ್ತ ಮರಿಯಾಪುರ ಗ್ರಾಮಕ್ಕೆ ಈಗ ೧೨೭ ವರ್ಷ. ಇದನ್ನು ತಲುಪಲು ಬೆಂಗಳೂರು ಕನಕಪುರ ಹೆದ್ದಾರಿಯಲ್ಲಿ ಕಗ್ಗಲೀಪುರದ ಬಳಿ ತಿರುಗಬೇಕು.
ಆರ್ಟ್ ಆಫ್ ಲಿವಿಂಗ್ ಬಳಿ ಉದಿಪಾಳ್ಯದಿಂದ ಒಂದು ಕಿಲೊಮೀಟರು ಮುಂದೆ ಸಾಗಿದರೆ ಸಿಗುವ ಕಗ್ಗಲೀಪುರ ಒಂದು ಜಂಕ್ಷನ್ ಎನ್ನಬಹುದು. ಅಲ್ಲಿಂದ ಎಡಕ್ಕೆ ನಾಲ್ಕೈದು ಕಿ.ಮೀ ಒಳ ದಾರಿಯಲ್ಲಿ ಗುಳಕಮಲೆ, ತರಳು ದಾಟಿ ಮುಂದೆ ಹೋದಾಗ ಸಿಗುವುದೇ ಮರಿಯಾಪುರ.

ಶತಮಾನಕ್ಕೂ ಹಿಂದೆ ಪ್ಲೇಗ್ ಮತ್ತು ಕ್ಷಾಮದ ಹೆಮ್ಮಾರಿಗೆ ಸಿಲುಕಿ ಇಲ್ಲಿದ್ದ ತಟ್ಟಗುಪ್ಪೆ ಎಂಬ ಊರು ನಿರ್ಜನವಾದಾಗ ಫ್ರೆಂಚ್ ಮಿಷನರಿ ಫಿಲಿಪ್ ಸಿಜನ್ ಅವರು ಮಹಾರಾಜರಿಂದ ಈ ಊರನ್ನು ಪಡೆದು ೧೮೮೪ರಲ್ಲಿ ಮರುನಿರ್ಮಾಣ ಮಾಡಿದರು. ಅದೇ ಈಗಿನ ಮರಿಯಾಪುರ.

ನೂರಕ್ಕೆ ನೂರು ಕ್ರೈಸ್ತರೇ ವಾಸಿಸುವ ಇಲ್ಲಿನ ಅಚ್ಚರಿಯ ಸಂಗತಿಯೆಂದರೆ ಪರದೆಯಿಲ್ಲದೆ ನಡೆಯುವ ಧ್ವನಿ ಬೆಳಕಿನ ಬೃಹನ್ನಾಟಕ.ಸುಗ್ಗಿ ಕಳೆದ ನಂತರದ ವಿರಾಮದ ದಿನಗಳಲ್ಲಿ ಕ್ರೈಸ್ತ ಜನಪದರು ನಾಟಕ, ಕೋಲಾಟ, ಗೀತಗಾಯನಗಳಲ್ಲಿ ತೊಡಗಿಕೊಳ್ಳುವುದಕ್ಕೆ ತಪಸ್ಸು ಕಾಲವು ಇಂಬುಗೊಡುತ್ತದೆ. ಯೇಸು ಸ್ವಾಮಿಯ ಕೊನೆಯ ಗಳಿಗೆಗಳನ್ನು ಮನನ ಮಾಡುವ ತ್ಯಾಗ ನೇಮಗಳ ದಿನಗಳನ್ನು ತಪಸ್ಸು ಕಾಲ ಎನ್ನುತ್ತಾರೆ. ಈ ದಿನಗಳಲ್ಲಿ ಬೇಗೂರು, ಕಾಮನಹಳ್ಳಿ, ದೊರೆಸಾನಿಪಾಳ್ಯ, ವೀರನಪಾಳ್ಯ, ಆರೋಬೆಲೆ, ಮರಿಯಾಪುರಗಳಲ್ಲಿ ಕ್ರೈಸ್ತರಿಂದ ನಡೆಯುವ ನಾಟಕಗಳು ಪ್ರಸಿದ್ಧವಾದವು.

ದೊರೆಸಾನಿಪಾಳ್ಯದ ಡ್ರಾಮಾ ಮಾಸ್ತರ್ ದಾವಿದಪ್ಪನವರಲ್ಲಿ ‘ಜೋಸೆಫ್ ಮತ್ತು ಹನ್ನೆರಡು ಸಹೋದರರು, ಜ್ಞಾನಸುಂದರಿ, ಅಲ್ಫೋನ್ಸೆ, ಗುಣಸುಂದರಿ, ಯೂಸ್ತಾಕಿಯುಸ್, ಜೂಡಿತಮ್ಮ, ಎಸ್ತೆರಮ್ಮ’ ಮುಂತಾದ ಕ್ರೈಸ್ತ ನಾಟಕಗಳ ಹಸ್ತಪ್ರತಿಗಳನ್ನು ಈಗಲೂ ಕಾಣಬಹುದು.

ಅರ್ಕಾವತಿ ದಂಡೆಯ ಆರೂಬೆಲೆಯಲ್ಲಿ ಶುಭ ಶುಕ್ರವಾರ ಮತ್ತು ಪವಿತ್ರ ಶನಿವಾರ ರಾತ್ರಿ ಆಡುವ ‘ಯೇಸುಕ್ರಿಸ್ತನ ಮಹಿಮೆ’ ನಾಟಕ ಈಗಲೂ ಪ್ರಸಿದ್ಧ.

ಇವೆಲ್ಲವುಗಳ ನಡುವೆ ಮರಿಯಾಪುರದ ಧ್ವನಿ ಬೆಳಕಿನ ನಾಟಕಕ್ಕೆ ಹೊಸ ಹೊಳಪಿದೆ. ಸ್ವಾಮಿ ಫಿಲಿಪ್ ಸಿಜನ್ ಅವರ ನೆನಪು ಚಿರಸ್ಥಾಯಿಯಾಗಿಸುವ ಗ್ರಾಮಸ್ಥರ ಪ್ರಯತ್ನದಿಂದಾಗಿ ಈ ನಾಟಕವು ಹೊಸ ರೂಪ ತಳೆದಿದೆ.

ಗ್ರಾಮದ ಚರ್ಚ್ನ ಹಿಂಬದಿಯ ೧೨೫ ಮೀಟರು ಉದ್ದದ ದಿಬ್ಬದ ಮೇಲೆ ವಿಶಾಲ ವೇದಿಕೆ ನಿರ್ಮಿಸಿ ಇಡೀ ರಾತ್ರಿ ಆಡಲಾಗುವ ಈ ನಾಟಕದಲ್ಲಿ ೩೫೦ ನಟ ನಟಿಯರು, ಸುಮಾರು ೫೦೦ ಬಾಲ ಬಾಲೆಯರು ಹೆಜ್ಜೆ ಹಾಕುತ್ತಾರೆ. ಇನ್ನೂರಕ್ಕೂ ಹೆಚ್ಚು ಸ್ಪಾಟ್ಲೈಟ್ ಹಾಗೂ ಹೊನಲು ಬೆಳಕಿನ ವ್ಯವಸ್ಥೆಯಲ್ಲಿ ಹತ್ತು ಸಾವಿರ ವ್ಯಾಟ್ಗಳ ಸ್ಪಷ್ಟ ಧ್ವನಿ ನಾಟಕಕ್ಕೆ ವಿಶೇಷ ಪರಿಣಾಮ ತುಂಬುತ್ತದೆ.

ಯೇಸುವಿನ ಜೀವನವನ್ನು ಕೇಂದ್ರವಾಗಿಸಿಕೊಂಡು ಇಡೀ ಬೈಬಲನ್ನು ಸುಮಾರು ಆರೂವರೆ ಗಂಟೆಗಳ ಕಾಲ ಚಿತ್ರಿಸುತ್ತ ಅಂದಿನ ಕಾಲದ ವೇಷಭೂಷಣಗಳನ್ನು ಬಳಸಲಾಗುತ್ತದೆ. ಜೊತೆಗೆ ದನ ಕರು, ಕುರಿ, ಕತ್ತೆ, ಒಂಟೆ, ಕುದುರೆ, ರಥಗಳು ಹಾಗೂ ಎತ್ತಿನ ಗಾಡಿಗಳು ಬೃಹತ್ ವೇದಿಕೆ ಮೇಲೆ ಬಂದು ಹೋಗುವುದು ಚಿತ್ತಾಕರ್ಷಕವಾಗಿರುತ್ತದೆ. ನಗರದ ಜಂಜಡಗಳನ್ನು ಮರೆತು ಹಳ್ಳಿಗಾಡಿನ ನಿರಭ್ರ ಆಗಸದ ಕೆಳಗೆ ಶುದ್ಧ ಗಾಳಿ ಸೇವಿಸುತ್ತಾ ರಾತ್ರಿ ಕಳೆಯುವ ಈ ಅನುಭವ ನಿಜಕ್ಕೂ ಚೇತೋಹಾರಿ.
http://beta.prajavani.net/web/include/story.php?news=902§ion=56&menuid=13

ಗುರುವಾರ, ಮಾರ್ಚ್ 24, 2011

ಹಿಂದುತ್ವ ಸಾಧುವೇ?

ಹೀಗೊಂದು ಪತ್ರಿಕೆಯಲ್ಲಿ ಓದುತ್ತಿರುವಾಗ ಒಂದು ಬರಹ ಕಣ್ಣಿಗೆ ಬಿತ್ತು. ಅದರ ಪ್ರಕಾರ ಎಲ್ಲ ಧರ್ಮಗಳೂ ಒಂದೇ ಏಕೆಂದರೆ Temple, Church, Mosque ಎಂಬ ಭಕ್ತಿಸ್ಥಾನಗಳೂ, Geeta, Bible, Quran ಎಂಬ ಧರ್ಮಗ್ರಂಥಗಳೂ ಸಮ ಸಮ ಅಕ್ಷರಗಳಲ್ಲಿರುವಾಗ ಎಲ್ಲವೂ ಸಮಾನವಲ್ಲವೇ? ಅದೇಕೆ ನಾವು ಕಿತ್ತಾಡುವುದೆನ್ನುವ ಭಾವ ಆ ಲೇಖನದಲ್ಲಿತ್ತು. ಅದರ ಲೇಖಕನ ಆಶಯವೇನೋ ಚೆನ್ನಾಗಿದೆ. ಆದರೆ ಹಿಂದೂ ಧರ್ಮದ ಧರ್ಮಗ್ರಂಥವು ಗೀತೆ ಎಂಬುದನ್ನು ನೋಡಿ ನನ್ನಲ್ಲಿ ವಿಚಾರದ ತುಮುಲಗಳೆದ್ದವು. ಏಕೆಂದರೆ ನನ್ನ ಅರಿವಿಗೆ ಬಂದಂತೆ ಹಿಂದೂ ಎನ್ನುವುದು ಒಂದು ಜೀವನಶೈಲಿಯಷ್ಟೆ. ಅದೊಂದು ಧರ್ಮವಲ್ಲ. ಆಗಲಿ ಅದನ್ನು ಧರ್ಮವೆಂದೇ ಅಂದುಕೊಂಡರೂ ಗೀತೆಯನ್ನು ಅದರ ಧರ್ಮಗ್ರಂಥವೆಂದು ಕರೆಯಲಾಗದು. ಏಕೆಂದರೆ ಹಿಂದೂಸಂಸ್ಕೃತಿಯಲ್ಲಿ ಅನೇಕ ದೇವರುಗಳು, ಅನೆಕ ಪಂಗಡಗಳು, ಅನೇಕ ಒಳಧರ್ಮಗಳು ಇವೆ. ಅವೆಲ್ಲವುಗಳ ತತ್ತ್ವ ಮತ್ತು ಸಂಹಿತೆಗಳು ಒಂದೇ ತೆರನಾಗಿಲ್ಲ. ಹಿಂದೂ ಎಂಬ ಗ್ರಹಿಕೆಯ ಕುರಿತು ಅದರ ಬೆಂಬಲಿಗರು ಯಾವುದೋ ಒಂದು ಸಣ್ಣ ಅರ್ಥಹೀನ ಎಳೆಯನ್ನು ಹಿಡಿದು ನಿಜದ ಹತ್ತಿರಕ್ಕೇ ಬಾರದಂತೆ ಅಗಾಧವಾಗಿ ವಾದ ಮಾಡುತ್ತಾರೆ. ಹಿಂದುತ್ವದ ಹೆಸರು ಹೇಳಿಕೊಂಡು ಕೆಲವರು ಮಾಡುತ್ತಿರುವುದೂ ಅದನ್ನೇ.
ಮೊದಲಿಗೆ ಅವರ ರಾಮನನ್ನೇ ತೆಗೆದುಕೊಳ್ಳೋಣ. ನಮ್ಮ ಕಲ್ಪನೆಯ ರಾಮ ಒಬ್ಬ ಆದರ್ಶ ಪುರುಷ, ಪಿತೃವಾಕ್ಯ ಪರಿಪಾಲಕ, ಅವನ ಹೆಂಡತಿ ಸೀತೆ ಒಬ್ಬ ಆದರ್ಶ ಪತ್ನಿ, ಪತಿವ್ರತಾ ಶಿರೋಮಣಿ, ಸನ್ನಡತೆಯ ನಾರಿ. ರಾಮಸೀತೆಯರಂತೆಯೇ ಬಹಳಷ್ಟು ಆದರ್ಶ ದಂಪತಿಯರು ಹಿಂದೂ ಪುರಾಣಗಳಲ್ಲಿ ಮಾತ್ರವಲ್ಲ ನಮ್ಮ ದೇಶದ ಎಲ್ಲೆಡೆ ಕಾಣಸಿಗುತ್ತಾರೆ. ಶಿವ ಪಾರ್ವತಿ, ನಳ ದಮಯಂತಿ, ಆಯ್ದಕ್ಕಿ ಮಾರಯ್ಯ ದಂಪತಿ ಮುಂತಾದವರನ್ನೆಲ್ಲ ಹೀಗೆ ಹೆಸರಿಸಬಹುದು. ಆದರೆ ಹಿಂದುತ್ವವಾದಿಗಳು ರಾಮನೊಬ್ಬನನ್ನೇ ಹಿಂದೂ ಸಂಸ್ಕೃತಿಯ ಪ್ರತಿನಿಧಿಯಾಗಿ ಮಾತ್ರವಲ್ಲ ನಮ್ಮ ರಾಷ್ಟ್ರದ ಪ್ರತೀಕ ಸಹ ಎಂದು ಬಿಂಬಿಸುತ್ತಾರೆ.
ಧಾರ್ಮಿಕತೆ ಮತ್ತು ರಾಷ್ಟ್ರೀಯತೆಗಳು ಎರಡು ವಿಭಿನ್ನ ಚೌಕಟ್ಟುಗಳನ್ನು ಹೊಂದಿವೆಯೆಂಬುದನ್ನು ಅವರು ಅರಿತಂತಿಲ್ಲ. ರಾಷ್ಟ್ರವೊಂದಕ್ಕೆ ತನ್ನದೇ ಇತಿಮಿತಿಗಳಿವೆ, ಸೀಮೆಗಳಿವೆ, ರೀತಿನೀತಿಗಳಿವೆ, ಸಂವಿಧಾನ ಮತ್ತು ಶಾಸನಗಳಿವೆ. ದರ್ಮದ ಕುರಿತು ಹೇಳಬೇಕೆಂದರೆ ಅದು ಹೃದಯಕ್ಕೆ ಸಂಬಂಧಿಸಿದ್ದು, ಆತ್ಮಕ್ಕೆ ಸಂಬಂಧಿಸಿದ್ದು. ಅದಕ್ಕೆ ದೇಶ ಕಾಲಗಳ ಗಡಿಗಳಿಲ್ಲ. ಇನ್ನು ರಾಮನ ಕುರಿತು ಹೇಳಬೇಕೆಂದರೆ ಬಹು ಸಂಸ್ಕೃತಿಯ ಬಹು ದೇವರುಗಳ ನಮ್ಮ ದೇಶಕ್ಕೆ ರಾಮನೊಬ್ಬನೇ ನಾಯಕನಾಗಲಾರ. ವಾಲ್ಮೀಕಿಯ ಕತೆಯಂತೆ ರಾಮ ದೇವತಾ ಪುರುಷನಲ್ಲ, ಏಕೆಂದರೆ ಆನಂತರ ಅಂದರೆ ಸಾವಿರದೈನೂರು ವರ್ಷಗಳ ನಂತರ ಬಂದ ತುಲಸಿದಾಸರು ರಾಮನಿಗೆ ದೈವತ್ವ ಪ್ರಾಪ್ತಿ ಮಾಡಿದರು. ವಾಲ್ಮೀಕಿಯ ರಾಮಾಯಣವನ್ನು ಹಿಡಿದುಕೊಂಡರೆ ರಾಮನಿಗೆ ಚಾರಿತ್ರಿಕ ಸ್ಥಾನವೂ ಸಿಗುವುದಿಲ್ಲ, ಏಕೆಂದರೆ ಅಲ್ಲಿ ಅವನೊಬ್ಬ ಕಾಲ್ಪನಿಕ ಕಥಾನಾಯಕ. ಇನ್ನು ಅವನ ಜನ್ಮಸ್ಥಳ ಅಯೋಧ್ಯೆ ಎನ್ನುವುದು ಸತ್ಯದ ತಲೆಯಮೇಲೆ ಹೊಡೆದಂತೆ. ಇಂಥಲ್ಲಿ ರಾಮ ಜನಿಸಿದ ಎನ್ನುವ ವಾದ ಒಂದು ನಂಬುಗೆಯ ತಳಹದಿಯ ಮೇಲೆ ನಿಂತಿದೆ.
ಯೆಹೂದಿ, ಕ್ರೈಸ್ತ, ಇಸ್ಲಾಂ ಮುಂತಾದ ಸೆಮೆಟಿಕ್ ಧರ್ಮಗಳಿಗೆ ಅವುಗಳ ಕಾರಣಪುರುಷರ ದಿನಾಂಕಗಳು ಲಭ್ಯವಿವೆ. ಆದರೆ ಅದೇ ನೇರದಲ್ಲಿ ಹಿಂದೂ ಎಂಬ ಧರ್ಮದ ಕಾರಣಪುರುಷನ ತೇದಿಯನ್ನು ಇಂಥದೇ ಎಂದು ಹೇಳಲಾಗದು. ಯಾರಾದರೂ ಇತಿಹಾಸ ಸಂಶೋಧನೆ ಮಾಡಿ ಯೇಸುಕ್ರಿಸ್ತನೆಂಬುವನು ಇರಲೇ ಇಲ್ಲ ಎಂದು ಸಾಬೀತು ಪಡಿಸಿದರೆ ಕ್ರೈಸ್ತಧರ್ಮಕ್ಕೆ ಉಳಿಗಾಲವಿರುವುದಿಲ್ಲ. ಅಂತೆಯೇ ಇತಿಹಾಸಜ್ಞರು ಕೃಷ್ಣ ಎಂಬುವನು ಇರಲಿಲ್ಲವೆಂದು ಸಾಬೀತು ಪಡಿಸಿದರೆ ಗೀತೆಯ ಗತಿಯೂ ಅಂತೆಯೇ ಇರುತ್ತದೆ. ಇದೇ ವಾದ ರಾಮನಿಗೂ ಅನ್ವಯಿಸುತ್ತದೆ. ಅದಕ್ಕೇ ಕೆಲವರು ಹಿಂದೂ ಧರ್ಮ ಎನ್ನುವುದು ಸನಾತನ ಧರ್ಮ ಅದರ ಹುಟ್ಟನ್ನು ಕಾಲದಿಂದ ಅಳೆಯಲಾಗದು ಎಂದು ವಾದಿಸುತ್ತಾರೆ.
ಸನಾತನ ಹಿಂದೂ ಧರ್ಮಕ್ಕೂ ಇಂದಿನ ಹಿಂದುತ್ವಕ್ಕೂ ಏನಾದರೂ ಹೋಲಿಕೆ ಇದೆಯೇ? ಸನಾತನ ಹಿಂದೂಗಳಿಗೆ ಅನೇಕ ದೇವರುಗಳಿದ್ದು ಶಾಂತಿಯಿಂದಲೂ ಐಕ್ಯದಿಂದಲೂ ಬಾಳುತ್ತಿದ್ದಾರೆ. ನಮ್ಮ ಕಲ್ಪನೆಯ ರಾಮನಿಗೂ ಹಿಂದುತ್ವವಾದಿಗಳು ಹೇಳುವ ರಾಮನಿಗೂ ಅಗಾಧ ವ್ಯತ್ಯಾಸವಿದೆ. ನಮ್ಮ ಕಲ್ಪನೆಯ ರಾಮ ಮರ್ಯಾದಾ ಪುರುಷೋತ್ತಮ, ಎಲ್ಲ ಆದರ್ಶಗಳ ಮೇರುವ್ಯಕ್ತಿ. ಆತ ಕರ್ತವ್ಯಪಾಲಕ, ಹಿರಿಯರನ್ನು ಗೌರವಿಸಿ ಕಿರಿಯರನ್ನು ವಾತ್ಸಲ್ಯದಿಂದ ಕಂಡವನು, ಎಲ್ಲರನ್ನೂ ಪ್ರೀತಿಯಿಂದ ಪರಿಭಾವಿಸಿದವನು, ಶಾಂತಿ ಅವನ ದೊಡ್ಡ ಗುಣ. ಕಾರಣವಿಲ್ಲದೇ ಯಾರೊಂದಿಗೂ ಜಗಳ ಕಾದವನಲ್ಲ. ಪಾರಂಪರಿಕವಾಗಿ ರಾಮ ಶಾಂತಮೂರ್ತಿ. ಅವನೆಂದೂ ಒಂಟಿಯಲ್ಲ ಅವನೊಂದಿಗೆ ಹೆಂಡತಿ ಸೀತೆ, ತಮ್ಮ ಲಕ್ಷ್ಮಣ, ಗೆಳೆಯ ಹನುಮ ಇದ್ದೇ ಇರುತ್ತಾರೆ. ಆದರೆ ಹಿಂದುತ್ವವಾದಿಗಳು ತೋರುವ ರಾಮ ಒಬ್ಬಂಟಿ, ಆತ ಹುಬ್ಬುಗಂಟಿಕ್ಕಿ ಬಿಲ್ಲುಬಾಣಗಳ ಹಿಡಿದು ಜಗಳ ಕಾಯಲು ಸಿದ್ಧನಾಗಿರುವವನು. ಹಿಂದುತ್ವದ ಪ್ರತಿಪಾದಕರಿಗೆ ಉಗ್ರಸ್ವರೂಪಿ ರಾಮನೇ ದೇವರು, ಮತ್ತು ಅವನೇ ಅವರ ಪ್ರಕಾರ ರಾಷ್ಟ್ರನಾಯಕ. ಹಿಂದೂ ಎಂಬ ಭಾವವು ತಾಳ್ಮೆ ಮತ್ತು ಅಹಿಂಸೆ ಎಂಬ ಅಡಿಪಾಯದ ಮೇಲೆ ನಿಂತಿದೆ. ಅದನ್ನು ಹಿಂಸೆ ಮತ್ತು ದ್ವೇಷಗಳ ರೂಪದಲ್ಲಿ ಕಾಣುವುದೇ ಒಂದು ರೀತಿಯ ವ್ಯಂಗ್ಯ. ಅದರೆ ಹಿಂದುತ್ವದ ಸಂದೇಶಗಳು ಈ ಉದಾತ್ತ ಭಾವನೆಗಳಿಗೆ ಧಕ್ಕೆ ತರುವಂತೆ ತೋರುತ್ತಿವೆ, ಮಾತ್ರವಲ್ಲ ಅದನ್ನು ಸಾಬೀತು ಪಡಿಸಿಯೂ ಇವೆ. ವೈರಿಗಳನ್ನು ನಾಶಪಡಿಸೋಣ ಎಂಬುದೇ ಹಿಂದುತ್ವದ ಏಕೈಕ ಸಂದೇಶ, ಕಲ್ಪಿತವಿರಲಿ ನೈಜವಿರಲಿ ವೈರಿ ವೈರಿಯೇ ಎಂಬುದು ಅವರ ವಾದ. ಹಾಗೆ ನೋಡಿದರೆ ವಿಶ್ವದೆಲ್ಲೆಡೆಯ ಭಯೋತ್ಪಾದಕರೂ ಇದೇ ವಾದವನ್ನು ಮುಂದಿಡುತ್ತಾರೆ. ಅಂದರೆ ಹಿಂದುತ್ವವಾದಿಗಳು ಆತಂಕವಾದಿಗಳಾಗುತ್ತಿದ್ದಾರೆಯೇ?
ಹಿಂದುತ್ವವಾದಿಗಳು ಕೆಲ ದಿನಗಳ ಹಿಂದೆ ತ್ರಿಶೂಲಗಳು ತಮ್ಮ ಆಯುಧಗಳಾಗಲಿ ಎಂದು ಬಯಸಿದವರು. ಅದನ್ನೇ ಅವರು ವಿವಿಧ ಜನಗಳಿಗೆ ಹಂಚಿ ಸುದ್ದಿ ಮಾಡಿದ್ದರು. ತ್ರಿಶೂಲ ಮಂಗಳರೂಪಿ ಶಿವನ ಕೈಯಲ್ಲಿನ ಆಭರಣ. ಇಲ್ಲಿ ನಾನು ಅದನ್ನು ಆಯುಧವೆನ್ನುತ್ತಿಲ್ಲ ಏಕೆಂದರೆ ಶಿವ ಅದನ್ನೆಂದೂ ಎಲ್ಲೆಂದರಲ್ಲಿ ಕ್ರೋಧದಿಂದ ಪ್ರಯೋಗಿಸಿಲ್ಲ. ಬದಲಿಗೆ ಹಸನ್ಮುಖನಾಗಿಯೇ ಅದನ್ನು ಹಿಡಿದು ನಿಂತಿರುವುದನ್ನು ನೋಡಿದಾಗ ನಮಗೆ ಶಿವನ ಬಗ್ಗೆ ಪ್ರೀತಿಯ ಭಾವನೆ ಸ್ಫುರಿಸುತ್ತದೆ. ಸ್ವತಃ ಶಿವನೇ ಅಸ್ತ್ರವನ್ನು ದೂರಕ್ಕೆಸೆದು ಭೋಳೇಶಂಕರ ಎನಿಸಿದ್ದಾನೆ. ಆದರೆ ಹಿಂದುತ್ವವಾದಿಗಳು ವಿತರಿಸುವ ಅಥವಾ ಪ್ರದರ್ಶಿಸುವ ತ್ರಿಶೂಲ ಶಿವನ ಆಭರಣದಂತಿರದೆ ದಗಾಕೋರರ ಅಥವಾ ಠಕ್ಕರ ಆಯುಧದಂತಿದೆ.
ಹಾಗೆ ನೋಡಿದರೆ ರಾಮನು ಶಾಂತಿಗೆ ಮಾದರಿಯಾಗಿದ್ದಾನೆ, ಕೃಷ್ಣನು ಅವ್ಯಾಜಪ್ರೇಮಕ್ಕೆ ಮಾದರಿಯಾಗಿದ್ದಾನೆ, ಕಾಳಿಯು ಶಿಕ್ಷಣಕ್ಕೆ ಮಾದರಿಯಾಗಿದ್ದಾಳೆ, ಶಿವನು ನೆಮ್ಮದಿಗೆ ಮಾದರಿಯಾಗಿದ್ದಾನೆ, ಇವೆಲ್ಲವುಗಳ ಸಂಮಿಶ್ರವೇ ಹಿಂದೂ ಪ್ರತೀಕವಾಗಬೇಕು. ಇಂಥ ಉದಾತ್ತ ಸಂಸ್ಕೃತಿಗೆ ಏಕದೇವೋಪಾಸನೆಯ ಏಕಧರ್ಮಗ್ರಂಥದ ಅನಗತ್ಯ ಸಂಕೋಲೆ ಬಿಗಿದು ಆವೇಗ, ಆವೇಶ, ಕ್ರೋಧ, ಹಗೆಗಳನ್ನು ಆವಾಹಿಸಿಕೊಳ್ಳುವ ಹಿಂದುತ್ವವು ಲೋಕಕ್ಕೆ ಕಂಟಕಕಾರಿಯಾಗಿದೆ.



ಮಂಗಳವಾರ, ಫೆಬ್ರವರಿ 22, 2011

ತಾಯ್ನುಡಿಯ ಹಿರಿಮೆ

ಬೆಂಗಳೂರಿನಂತಹ ಕಾಸ್ಮೊಪಾಲಿಟನ್ ನಗರಗಳಲ್ಲಿನ ತಾಯ್ತಂದೆಯರು ತಮ್ಮ ಮಗು ಇಂಗ್ಲಿಷಿನಲ್ಲಿ ಮಾತಾಡುತ್ತಿದ್ದರೆ ಒಂದು ರೀತಿಯ ಪರಮಾನಂದ ಅನುಭವಿಸುತ್ತಾರೆ. ಅವರ ಮಕ್ಕಳು ತಮಗೆ ತಮ್ಮದೇ ತಾಯ್ನುಡಿ ಗೊತ್ತಿಲ್ಲ ಎಂದು ಬಲು ಹೆಮ್ಮೆಯಿಂದ ಹಾಗೂ ಯಾವುದೇ ಮುಜುಗರವಿಲ್ಲದೆ ಹೇಳುವುದನ್ನು ಕಂಡಾಗ ಅಥವಾ ನಾವು ಕನ್ನಡಾನ ಮನೇಲಷ್ಟೇ ಮಾತಾಡ್ತೀವಿ, ಓದೋಕೆ ಬರೆಯೋಕಂತೂ ಬರೊಲ್ಲ ಬಿಡಿ ಎಂದಾಗ ಪಿಚ್ಚೆನಿಸಿದರೂ ಕಠೋರ ಸತ್ಯವನ್ನು ಅರಗಿಸಿಕೊಳ್ಳದೇ ಇರಲಾಗದು.

ಕೆಲ ಶಾಲೆಗಳಲ್ಲಿ ಅಳವಡಿಸಿಕೊಂಡಿರುವ ನೀತಿನಿಯಮಾವಳಿಗಳು ತಾಯ್ನುಡಿಯನ್ನು ಮಕ್ಕಳು ಉಪೇಕ್ಷಿಸುವುದಕ್ಕೆ ಪೂರಕವಾಗಿವೆ. ಮಕ್ಕಳು ಬೇರೆ ಭಾಷೆಗಳಲ್ಲಿ ಮಾತಾಡುತ್ತಿದ್ದರೆ ಐರೋಪ್ಯ ನುಡಿಯಾದ ಇಂಗ್ಲಿಷನ್ನು ಕಲಿಯುವುದಕ್ಕೆ ತೊಡಕಾಗುತ್ತದೆ ಎಂಬುದು ಶಿಕ್ಷಕರ ವಾದ. ಅವರ ವಾದ ಸರಿಯಾದುದೇ. ಏಕೆಂದರೆ ನಮ್ಮ ದೇಶದ ನುಡಿಗಳ ವಾಕ್ಯರಚನೆಗೂ ಐರೋಪ್ಯ ನುಡಿಷೆಗಳ ವಾಕ್ಯರಚನೆಗೂ ಅಗಾಧ ವ್ಯತ್ಯಾಸವಿದೆ. ಅಷ್ಟಕ್ಕೂ ಐರೋಪ್ಯ ಭಾಷೆಗಳಲ್ಲಿ ನುರಿತಿರಬೇಕಾದರೆ ಮನಸ್ಸು ನುಡಿಯಲ್ಲೇ ಯೋಚಿಸಬೇಕಾಗುತ್ತದೆ. ಆದರೆ ನಾವು ನೀವೆಲ್ಲ ಏನು ಮಾತನಾಡಬೇಕು ಎಂಬುದನ್ನು ನಮ್ಮ ತಾಯ್ನುಡಿಯಲ್ಲಿ ಯೋಚಿಸಿ ಆಮೇಲೆ ಅದನ್ನು ಇಂಗ್ಲಿಷ್ ಮುಂತಾದ ಪರಕೀಯ ನುಡಿಗಳಲ್ಲಿ ವ್ಯಕ್ತಪಡಿಸುತ್ತೇವೆ. ತಾಯ್ನುಡಿಯನ್ನೇ ಇಂಗ್ಲಿಷ್ ಮಾಡಿಬಿಟ್ಟರೆ, ಇಂಗ್ಲಿಷಿನಲ್ಲೇ ಯೋಚಿಸಬಹುದಲ್ಲವೇ?

ವಾದವನ್ನು ವಿಶ್ಲೇಷಿಸುವ ಮುನ್ನ ತಾಯ್ನುಡಿ ಎಂದರೇನೆಂದು ತಿಳಿದುಕೊಳ್ಳೋಣ. ಒಂದು ಮಗು ತಾನು ಹುಟ್ಟಿದಾಗಿನಿಂದ ಬುದ್ದಿ ಬೆಳವಣಿಗೆಯಾಗುವವರೆಗೆ ತನ್ನ ಅಮ್ಮನಿಂದ, ತನ್ನ ಆಪ್ತರಿಂದ ಹಾಗೂ ಸುತ್ತಲಿನ ಪರಿಸರದಿಂದ ವ್ಯಕ್ತಿಗಳನ್ನು ಮತ್ತು ವಸ್ತುಗಳನ್ನು ಗುರುತಿಸುತ್ತಾ, ನುಡಿಯನ್ನು ಕಲಿಯತೊಡಗುತ್ತದೆ ನುಡಿಯ ಮೂಲಕ ಸಿಹಿ-ಕಹಿ, ಬೇಕು-ಬೇಡ, ಇಷ್ಟಾನಿಷ್ಟ, ನೋವು-ನಲಿವು, ಬಿಸಿ-ತಂಡಿ ಮುಂತಾದವುಗಳನ್ನು ತಾನಾಗಿ ಅರಿತು ಬೌದ್ಧಿಕವಾಗಿ ಬೆಳೆಯತೊಡಗುತ್ತದೆ. ನುಡಿಕಲಿಕೆಯ ಪ್ರಾಥಮಿಕ ಹಂತದಿಂದ ಶಾಲಾ ಹಂತಕ್ಕೆ ಬಂದಾಗಲೂ ಕೂಡ ಅದು ತನಗೊದಗಿದ ಪ್ರಪ್ರಥಮ ನುಡಿಯಲ್ಲೇ ಯೋಚಿಸುತ್ತದೆ ಹಾಗೂ ಎದುರಾದ ವ್ಯಕ್ತಿಯೊಂದಿಗೆ ಸಂಭಾಷಿಸಲಾರಂಭಿಸುತ್ತದೆ. ಪ್ರಾಥಮಿಕ ಚಿಂತನಾ ನುಡಿಯನ್ನೇ ಮೂಲನುಡಿ, ಬೇರುನುಡಿ ಅಥವಾ ತಾಯ್ನುಡಿ ಎನ್ನುತ್ತೇವೆ.

ಒಂದು ಬುನಾದಿಯಲ್ಲಿ ನಾವು ಚಿಂತಿಸಿದಾಗ ಯಾರಾದರೂ ತಮ್ಮ ತಾಯ್ನುಡಿಯಲ್ಲಿ ಮಾತಾಡೋದಿಲ್ಲ ಎಂದರೆ ಅವರು ತಮ್ಮ ಅಸ್ತಿತ್ವದ ಬೇರುಗಳನ್ನು ಕಡಿದುಕೊಳ್ಳುತ್ತಿದ್ದಾರೆಂದು ತಿಳಿಯಬೇಕಾಗುತ್ತದೆ. ಏಕೆಂದರೆ ನಮ್ಮ ಅನಿಸಿಕೆ, ನೋವು ನಲಿವು, ಪ್ರೀತಿ ಮಮತೆ ಇತ್ಯಾದಿಗಳನ್ನು ನಾವು ಆಂತರ್ಯದಿಂದ ಅಭಿವ್ಯಕ್ತಿಸಬೇಕಾದಲ್ಲಿ ಹೃದಯದ ಮಾತೇ ಮುಖ್ಯವಾಗುತ್ತದೆ ಹೊರತು ಇತರೆಲ್ಲ ಮಾತುಗಳು ಶುಷ್ಕವಾದ ಅಭಿನಯವಾಗುತ್ತದಷ್ಟೆ. ಆದರೂ ಕೆಲವರು ತಮ್ಮ ತಾಯ್ನುಡಿಗಿಂತಲೂ ತಾವು ವ್ಯವಹರಿಸುವ ನುಡಿಯಲ್ಲೇ ತಾದಾತ್ಮ್ಯ ಗಳಿಸಿಕೊಂಡು ಅದನ್ನೇ ತಮ್ಮ ಹೃದಯಕ್ಕೆ ಹತ್ತಿರಾಗಿಸಿಕೊಂಡಿರುತ್ತಾರೆ. ಅಯ್ಯಂಗಾರ, ತಿಗುಳ, ಸಂಕೇತಿ ಮುಂತಾದ ಜನಾಂಗದವರು ತಮ್ಮ ಮೂಲನುಡಿಗಿಂತಲೂ ಕನ್ನಡದಲ್ಲೇ ತಾದಾತ್ಯ ಹೊಂದಿರುವುದನ್ನು ಕಂಡಿದ್ದೇವೆ. ಇನ್ನು ಕೆಲವರು ತಾಯ್ನಾಡಿನಿಂದ ಹೊರಗೆ ನೆಲೆಗೊಂಡು ಅಲ್ಲಿನವರನ್ನೇ ಮದುವೆಯಾಗಿ ಅಲ್ಲಿನ ನುಡಿಯನ್ನೇ ತಮ್ಮ ನುಡಿಯನ್ನಾಗಿ ಅಳವಡಿಸಿಕೊಂಡಿರುವುದನ್ನೂ ಕಂಡಿದ್ದೇವೆ.


ಎಷ್ಟೇ ನುಡಿಗಳನ್ನು ರೂಢಿಸಿಕೊಂಡು ಎಷ್ಟೇ ನಿರರ್ಗಳವಾಗಿ ಮಾತನಾಡಿದರೂ ಮನುಷ್ಯನ ಸುಷುಪ್ತಿಯ ನುಡಿಯೇ ಬೇರೆಯಾಗಿರುತ್ತದೆ. ಅದು ಅಂತರಾತ್ಮಕ್ಕಷ್ಟೇ ಗೊತ್ತು. ಅದೇ ಮನುಷ್ಯನನ್ನು ನಿರಂತರ ಮುನ್ನಡೆಸುತ್ತದೆ. ನುಡಿಗೆ ಧ್ವನಿಯಿಲ್ಲ, ಲಿಪಿಯಿಲ್ಲ, ವ್ಯಾಕರಣವಂತೂ ಇಲ್ಲವೇ ಇಲ್ಲ. ಕಿವುಡ ಮೂಕರಿಗೂ ನುಡಿ ಗೊತ್ತು. ಆತ್ಮವಿದ್ದವರೆಲ್ಲ ನುಡಿಗೆ ಸ್ಪಂದಿಸುತ್ತಾರೆ.

            ನುಡಿಯ ಬಗೆಗಿನ ಅಭಿಮಾನದ ವಿಷಯದಲ್ಲಿ ಬಂಗಾಳಿಗಳು ವಿಶ್ವಕ್ಕೇ ಮಾದರಿಯಾಗಿದ್ದಾರೆ. ೧೯೪೮ರ ಮಾರ್ಚ್ ೨೨ ರಂದು ಪಾಕಿಸ್ತಾನದ ಪ್ರಧಾನಿಯಾಗಿದ್ದ ಮಹಮದಾಲಿ ಜಿನ್ನಾ ಅವರು ತಮ್ಮ ದೇಶದ ಅಧಿಕೃತ ನುಡಿ ಉರ್ದು ಎಂದು ಘೋಷಿಸಿದರು. ಪಡುವಣ ಪಾಕಿಗಳಿಗೆ ಅದು ಒಪ್ಪಿಗೆಯಾಯಿತಾದರೂ ಮೂಡಣ ಪಾಕಿಸ್ತಾನದ ಪ್ರಜೆಗಳಿಗೆ ಆದೇಶ ಪಥ್ಯವಾಗಲಿಲ್ಲ. ಎಷ್ಟಾದರೂ ಅವರು ಬಂಗಾಲದ ಬೇರಿನಿಂದ ಬೇರೆಯಾದವರಲ್ಲವೇ? ತಮ್ಮ ತಾಯ್ನುಡಿಯ ಉಳಿವಿಗಾಗಿ ಅವರು ಹೋರಾಡಿದರು. ಅದು ಉಗ್ರಸ್ವರೂಪ ತಾಳಿ ಕರ್ಫ್ಯೂ ಗೋಲಿಬಾರುಗಳಾಗಿ ಪೆಬ್ರವರಿ ೨೧ರಂದು ಮೂರು ವಿದ್ಯಾರ್ಥಿಗಳು ಬಲಿದಾನವಾದರು. ತಕ್ಷಣವೇ ವಿಶ್ವಸಂಸ್ಥೆಯು ಮಧ್ಯಪ್ರವೇಶಿಸಿ ಯಾವುದೇ ಮನುಷ್ಯನು ತನ್ನದೇ ನುಡಿಯನ್ನಾಡಲು ಮತ್ತು ಅದನ್ನು ಜತನದಿಂದ ಕಾಪಾಡಿಕೊಂಡು ಬರಲು ಹಕ್ಕುಳ್ಳವನಾಗಿದ್ದಾನೆಂದು ಸಾರಿತು. ಅಂದಿನಿಂದ ಫೆಬ್ರವರಿ ೨೧ಅನ್ನು ವಿಶ್ವ ಮಾತೃಭಾಷಾ ದಿನವನ್ನಾಗಿ ಆಚರಿಸಲಾಗುತ್ತಿದೆ.

ಅಂದು ಜಿನ್ನಾ ಮಾಡಿದ ಅದೇ ತಪ್ಪನ್ನು ಇಂದು ನಮ್ಮ ಭಾರತಸರ್ಕಾರ ಮಾಡುತ್ತಿರುವುದು ನಮ್ಮ ಕರ್ಮ. ಇಂದು ಕೇಂದ್ರ ಸರ್ಕಾರದ ಕಚೇರಿಗಳಲ್ಲಿ, ಬ್ಯಾಂಕುಗಳಲ್ಲಿ, ಉದ್ದಿಮೆಗಳಲ್ಲಿ ಹಿಂದೀ ಪ್ರಚಾರಕ್ಕೆಂದು ಕೋಟ್ಯಂತರ ರೂಪಾಯಿಗಳನ್ನು ವ್ಯಯಮಾಡಲಾಗುತ್ತಿದೆ. ಉತ್ತರ ಭಾರತದ ಹಿಂದೀ ತಾಯ್ನುಡಿಯವರಿಗೆ ಅನುಕೂಲ ಮಾಡಿಕೊಡಲು ಅವರು ನಮಗೆಲ್ಲ ಹಿಂದೀ ಕಲಿಸಿ ಅವರೊಂದಿಗೆ ಸ್ಪರ್ಧಿಸಲು ತಯಾರು ಮಾಡುತ್ತಿದ್ದಾರೆ. ಇಂದಿನ ಪ್ರೋತ್ನಾಹಧನಕ್ಕೆ ಆಸೆಬಿದ್ದು ಹಿಂದೀ ಕಲಿಯುವ ನಾವು ಮುಂದೆ ನಮ್ಮ ಪೀಳಿಗೆಯವರು ಉತ್ತರಭಾರತದವರ ದಬ್ಬಾಳಿಕೆಯಡಿ ನಲುಗುವಂತೆ ವೇದಿಕೆ ರೂಪಿಸುತ್ತಿದ್ದೇವೆ.

ಹಿಂದೀ ಎಂಬುದು ರಾಷ್ಟ್ರಭಾಷೆ ಎಂಬ ವಾದವನ್ನು ಕೆಲ ಮುಟ್ಠಾಳರು ಮುಂದಿಡುತ್ತಿದ್ದಾರೆ. ರಾಷ್ಟಭಾಷೆಗೂ ರಾಜಭಾಷೆಗೂ ವ್ಯತ್ಯಾಸವಿದೆ. ಇಂಡಿಯಾದಲ್ಲಿ ಕನ್ನಡವೂ ಸೇರಿದಂತೆ ಹದಿನೈದು ರಾಷ್ಟ್ರಭಾಷೆಗಳಿವೆ. ಬೇಕಿದ್ದರೆ ನಿಮ್ಮ ಜೇಬಿನಲ್ಲಿರುವ ಕರೆನ್ಸಿನೋಟನ್ನು ತೆರೆದು ನೋಡಿ. ಇನ್ನು ರಾಜಭಾಷೆ ಎಂದರೆ ಅಧಿಕೃತ ಭಾಷೆ ಎಂದರ್ಥ. ಹಿಂದೀಯ ಜೊತೆಜೊತೆಗೇ ಇಂಗ್ಲಿಷು ಸಹ ನಮ್ಮ ದೇಶದ ಅಧಿಕೃತ ಭಾಷೆಯಾಗಿದೆ. ಇಂದು ಜಗತ್ತಿನಾದ್ಯಂತದ ವ್ಯವಹಾರಕ್ಕಾಗಿ ನಾವು ಇಂಗ್ಲಿಷು ಕಲಿಯುವುದರಿಂದ ನಮ್ಮ ದೇಶದ ಅಧಿಕೃತ ನುಡಿಯಾಗಿ ಇಂಗ್ಲಿಷೇ ಮುಂದುವರಿದರೆ ನಮಗೆ ಅನುಕೂಲವಾಗಿರುತ್ತದೆ. ಆದರೆ ಹಿಂದೀ ಮಾತ್ರವೇ ರಾಜಭಾಷೆ ಎಂದಾಗ ಹಿಂದೀಯವರ ಕೈ ಮೇಲಾಗುತ್ತದೆ. ಅವರಿಗೆ ಇಂಗ್ಲಿಷು ಬೇಕಾಗದು, ಕನ್ನಡವಂತೂ ಬೇಡವೇ ಬೇಡ. ಹೀಗೆ ಬಹುಸಂಖ್ಯಾತ ಉತ್ತರಭಾರತೀಯರ ನಡುವೆ ನಮಗೆ ಅನ್ಯಾಯವಾಗುವುದು ಖಚಿತ. ಅನ್ಯಾಯ ಈಗಾಗಲೇ ಆಗುತ್ತಿದೆ. ಇಂದು ಬ್ಯಾಂಕುಗಳು, ಕೇಂದ್ರಸರ್ಕಾರದ ಕಚೇರಿಗಳು, ಎಚ್ಎಎಲ್ ನಂತಹ ಕಾರ್ಖಾನೆಗಳಲ್ಲಿ ಬಹುಪಾಲಿನ ಅಧಿಕಾರಿಗಳು ಹಿಂದೀ ಭಾಷಿಕರೇ ಆಗಿದ್ದಾರೆ. ಅವರಿಗೆ ಭಾರತದ ಇತರ ಯಾವ ನುಡಿಗಳೂ ಗೊತ್ತಿಲ್ಲ ಮಾತ್ರವಲ್ಲ ಇಂಗ್ಸಿಷೂ ಅಷ್ಟಕ್ಕಷ್ಟೇ. ಅವರೊಂದಿಗೆ ಸೆಣಸಲು ನಾವು ಕನ್ನಡ ಮತ್ತು ಇಂಗ್ಲಿಷು ಎರಡನ್ನೂ ಬಲಿಗೊಡಬೇಕಾಗಿದೆ.

ಬುಧವಾರ, ಜನವರಿ 12, 2011

ಪ್ರಜಾವಾಣಿ

          ನನಗೆ ಬುದ್ದಿ ಬಂದಾಗಿನಿಂದಲೂ ನಮ್ಮ ಮನೆಯಲ್ಲಿ ’ಪ್ರಜಾವಾಣಿ’ ಪತ್ರಿಕೆಯನ್ನು ನೋಡುತ್ತಿದ್ದೇನೆ. ಅಕ್ಷರಾಭ್ಯಾಸದ ಸಂದರ್ಭದಲ್ಲಿ ಸ್ಲೇಟಿನ ಮೇಲೆ ನನ್ನ ಕೈಬರಹದ ’ಅ’ ಅಕ್ಷರವನ್ನು ಪ್ರಜಾವಾಣಿಯಲ್ಲಿನ ಮುದ್ರಿತ ’ಅ’ ಅಕ್ಷರದೊಂದಿಗೆ ಹೋಲಿಸುವುದರಿಂದ ಹಿಡಿದು ಇಂದಿನ ವರ್ಣರಂಜಿತ ಪುರವಣಿಗಳವರೆಗೆ ಪ್ರಜಾವಾಣಿ ನನ್ನ ಜೀವನದ ಅವಿಭಾಜ್ಯ ಅಂಗವೆನಿಸಿದೆ.
ಅಂದಹಾಗೇ ನಾನು ಪ್ರಜಾವಾಣಿಯಲ್ಲಿ ಮೊದಮೊದಲು ಓದಿದ್ದು ಏನನ್ನು ಎಂದು ನೆನಪಿಸಿಕೊಂಡಾಗ ಐದನೇ ಪುಟದಲ್ಲಿ ಬರುತ್ತಿದ್ದ ಫ್ಯಾಂಟಮ್ ಕಾಮಿಕ್ಸ್ ಹಾಗೂ ನಾಲ್ಕನೇ ಪುಟದಲ್ಲಿ ಬರುತ್ತಿದ್ದ ಛೂಬಾಣ ಇವು ನನಗೆ ಅಚ್ಚುಮೆಚ್ಚಿನದಾಗಿದ್ದವು.
ಮುಂದೆ ಕಾಲಮುಗಳ ನಡುವಿನ ಗೆರೆಗಳು ಮಾಯವಾಗಿ ಅಕ್ಷರವಿನ್ಯಾಸ ಮಾತ್ರವಲ್ಲ ಪುಟವಿನ್ಯಾಸವೂ ಹೆಚ್ಚು ಆಕರ್ಷಣೀಯವಾಗಿ ಬದಲಾದವಲ್ಲದೆ ಪ್ರಜಾವಾಣಿಯ ಬಗೆಗಿನ ನನ್ನ ಆಪ್ತತೆ ಹೆಚ್ಚುತ್ತಾ ಹೋಯಿತು. ಶಾಲೆಯ ಪ್ರಾರ್ಥನಾ ವೇಳೆಯಲ್ಲಿ ವಿದ್ಯಾರ್ಥಿ ಮುಖಂಡನೋರ್ವನು ಧ್ವನಿವರ್ಧಕದ ಮುಂದೆ ನಿಂತು ಪ್ರಜಾವಾಣಿಯ ಪ್ರಮುಖ ಸುದ್ದಿಗಳನ್ನು ಓದುವಾಗ ನಾನು ಕೆಲ ಹೆಡಿಂಗುಗಳನ್ನು ಮೊದಲೇ ಹೇಳಿ ಅಕ್ಕಪಕ್ಕದ ಹುಡುಗರನ್ನು ಚಕಿತರಾಗಿಸುತ್ತಿದ್ದುದು ಒಂಥರಾ ಮಜಾದ ವಿಷಯವಾಗಿತ್ತು. ನನ್ನ ಹೈಸ್ಕೂಲಿನ ದಿನಗಳಲ್ಲಿ ಭಾನುವಾರದ ಪುರವಣಿಯಲ್ಲಿ ಬರುತ್ತಿದ್ದ ಪದಬಂಧವನ್ನು ಬಿಡಿಸುವುದು ಬಲು ಇಷ್ಟದ ಹವ್ಯಾಸವಾಗಿತ್ತು. ಇನ್ನು ಸಾಪ್ತಾಹಿಕ ಪುರವಣಿಯಂತು ನನ್ನ ಅಚ್ಚುಮೆಚ್ಚಿನ ಓದಿನ ಸಾಮಗ್ರಿಯಾಗಿತ್ತು.
ಇಂದಂತೂ ಪ್ರಜಾವಾಣಿ ಇನ್ನೂ ಹೆಚ್ಚು ಸಿಂಗಾರಗೊಂಡಿದೆ. ಅದರ ಒಂದೊಂದು ಪುಟಪುಟವೂ ಅಂಕಣಗಳೂ ನಿಷ್ಪಕ್ಷಪಾತವಾಗಿವೆ ಮಾತ್ರವಲ್ಲ ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಸಲ್ಲುವಂತಿರುತ್ತವೆ. ನಾಗೇಶಹೆಗಡೆಯವರ ವಿಜ್ಞಾನ ಬರಹಗಳು, ದಿನೇಶ ಅಮಿನಮಟ್ಟು ಅವರ ರಾಜಕೀಯ ವಿಶ್ಲೇಷಣೆಗಳು, ಗುರುರಾಜ ಕರ್ಜಗಿಯವರ ಮನೋವಿಕಾಸದ ಬರಹಗಳು, ಅನಂತಮೂರ್ತಿ ಕೊಡಸೆ ಲಿಂಗದೇವರು ಕೆವಿನಾರಾಯಣ ಮುಂತಾದವರ ಮೀಮಾಂಸೆಗಳು, ಇನ್ನಿತರ ರುಚಿಕರ ಆರೋಗ್ಯಕರ ಲೇಖನಗಳು, ಎಲ್ಲ ಮಗ್ಗಲುಗಳನ್ನು ತೋರುವ ವಾಚಕರವಾಣಿ, ಪೂರ್ವಗ್ರಹವಿಲ್ಲದ ಸಂಪಾದಕೀಯ ಇವೆಲ್ಲವನ್ನು ಅನುಭವಿಸುತ್ತಿರುವುದು ನಮ್ಮ ಕಾಲದ ಸೌಭಾಗ್ಯವಾಗಿದೆ.
ಇಂದಿನ ಪೀತಪತ್ರಿಕೆಗಳ ಯುಗದಲ್ಲಿ ಪ್ರಜಾವಾಣಿಯು ನನ್ನ ಜೀವನವನ್ನು ಬಲು ಚೆನ್ನಾಗಿ ರೂಪಿಸಿದೆ ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ.

ಭಾನುವಾರ, ಜನವರಿ 2, 2011

ಹೊಸವರುಷ

ವರುಷ ವರುಷವುರುಳಿದರೂ
ಹರುಷ ಮಾತ್ರ ಮಾಸದಿರಲಿ
ನೋವಿರಲಿ ನಗುವಿರಲಿ
ಮುಖದ ನಗುವು ಬಾಡದಿರಲಿ
ಉತ್ಸಾಹದ ಹೂವರಳಿ
ಮತ್ತೆ ಯಶವ ಚಿಮ್ಮಿ ತರಲಿ
ಪ್ರೀತಿ ಚಿಲುಮೆ ಬತ್ತದಿರಲಿ
ತೃಪ್ತಿಯಿಂದ ನಗುತಲಿರಲಿ
ವಿಶ್ವಾಸವು ಕುಂದದಿರಲಿ
ಏನೇ ಇರಲಿ ಏನೇ ಬರಲಿ
ದೇವನೊಲುಮೆ ನಿಮ್ಮಲಿರಲಿ

ಭಾನುವಾರ, ಡಿಸೆಂಬರ್ 26, 2010

ಕ್ರಿಸ್ಮಸ್ ರಾತ್ರಿ

ಕ್ರಿಸ್ಮಸ್ ಸಂದರ್ಭದ ಆ ಸಂಭ್ರಮವೇ ಅನುಪಮ. ಚಳಿಯ ಚುಮುಚುಮು ರಾತ್ರಿಯಲ್ಲಿನ ನಕ್ಷತ್ರಗಳ ಒಡ್ಡೋಲಗದಲ್ಲಿ ಇಬ್ಬನಿಯ ಮಸುಕಾದ ತೆರೆಯ ನಡುವೆ ಮೋಂಬತ್ತಿಗಳು ಜಗಮಗಿಸುತ್ತಿವೆ. ಜರತಾರಿ ರೇಷ್ಮೆಯ ಸರಪರ ಸದ್ದು ಕಿಲಕಿಲ ನಗುವಿನೊಂದಿಗೆ ಜುಗಲಬಂದಿ ಹಾಡುತ್ತಿದೆ. ನುಣುಪು ಹಸ್ತಗಳ ನಡುವೆ ಬೆಚ್ಚನೆಯ ಶುಭಾಶಯಗಳು ತವಕದಿಂದ ಕುಣಿಯುತ್ತಿವೆ. ಕುತ್ತಿಗೆಯ ಹಿಂಭಾಗದಲ್ಲಿ ಆಗೊಮ್ಮೆ ಈಗೊಮ್ಮೆ ಸಣ್ಣಗೆ ನಡುಕ ಹುಟ್ಟಿಸಿ ತನ್ನಿರುವನ್ನು ಪ್ರಕಟಪಡಿಸುವ ಆ ಚಳಿ ಮರುಕ್ಷಣವೇ ಮುದುಡಿಕೊಂಡು ಮೂಲೆ ಹಿಡಿಯುತ್ತಿದೆ. ನೂರಾರು ಕಂಠಗಳು ಚರ್ಚಿನ ಆ ಕಲ್ಲುಗೋಡೆಗಳ ನಡುವೆ ಕ್ಯಾರಲ್ಲುಗಳನ್ನು ಎದೆತುಂಬಿ ಹಾಡುತ್ತಿದ್ದರೆ ಆ ಬಿಸಿಯುಸಿರುಗಳ ಎದುರಲ್ಲಿ ಬೃಹತ್ ಬಾಗಿಲು ಕಿಟಕಿಗಳ ನಡುವಿನಿಂದ ತೂರಿಬರುವ ಹಿಮಗಾಳಿಯೂ ಸೋತು ಶರಣಾಗುತ್ತಿದೆ.
ನನ್ನ ಬಾಲ್ಯಕಾಲದಿಂದಲೂ ನೋಡುತ್ತಿದ್ದೇನೆ, ಅಲ್ಲ ಕೇಳುತ್ತಿದ್ದೇನೆ, ಕ್ರಿಸ್ಮಸ್ ಗೀತೆಗಳ ಆ ಸೊಬಗು ಆ ಸೊಗಡು ಆ ಸೌಂದರ್ಯ ನವನವೋನ್ಮೇಷಶಾಲಿನಿಯಾಗಿ ಚಿರಯೌವನೆಯಾಗಿಯೇ ಉಳಿದುಕೊಂಡಿದೆ. ಜನಿಸಿಹನಾರು ಗೋದಲಿಯೊಳು ವಿನಯದ ಶಿಶುವಾಗಿ, ಜನರೇ ಸಂತೋಷಿಸಿರಿ ಯೇಸುಬಾಲರು ಹುಟ್ಟಿದರು, ಭಗವಾನ್ ಕ್ರಿಸ್ತರು ಹುಟ್ಟಿದ ಸುದಿನ ಜಗದೊಳು ಮಹದಾನಂದದ ದಿನ, ಸುಂದರ ರಕ್ಷಕನೇ ನಿನ್ನ ವಂದಿತ ನಾಮವನೇ ಕುಂದದೆ ಕೀರ್ತಿಸಿ ಎಂದಿಗೂ ಹಾಡುತ, ಮಂಗಳಶ್ರೀ ರಾತ್ರಿಯಲಿ ಬೆತ್ಲೆಹೇಂ ಗ್ರಾಮದಿ . . . ಹೀಗೆ ಈ ಕ್ರಿಸ್ಮಸ್ ಗೀತೆಗಳ ಸೊಗಸೇ ಅನನ್ಯ. ಅದರಲ್ಲಿ ಹೃದಯಗಳನ್ನು ಬೆಸೆಯುವ ಸುಮಧುರ ನಾದವಿದೆ, ಅನುಪಮ ಕಾಂತಿಯಿದೆ, ಪ್ರೀತಿಶಾಂತಿಯಿದೆ.
ಕ್ರಿಸ್ತಜಯಂತಿಗೆ ನಾಲ್ವತ್ತು ದಿನಗಳ ಮುಂಚಿನಿಂದಲೇ ಆಗಮನಕಾಲ ಶುರುವಾಗುತ್ತದೆ. ಕ್ರಿಸ್ತನನ್ನು ಎದುರುಗೊಳ್ಳುವ ನಿರೀಕ್ಷೆಯ ಈ ಕಾಲವೆಲ್ಲ ಸುಣ್ಣ ಬಣ್ಣ ಅಲಂಕಾರ, ಹೊಸಬಟ್ಟೆ ಖರೀದಿ, ಉಡುಗರೆಗಳ ಆಯ್ಕೆ, ಶುಭಾಶಯಪತ್ರಗಳ ಸಿದ್ಧತೆ, ಹಳೆಯ ಪಳೆಯ ವಸ್ತುಗಳ ವಸ್ತ್ರಗಳ ವಿಲೇವಾರಿ, ಕ್ಯಾರಲ್ಲುಗಳ ಗಾನ, ಕರ್ಚಿಕಾಯಿ ಕಜ್ಜಾಯ ಕಲ್ಕಲ್ಸ್ ಎಂಬ ವಿಶಿಷ್ಟ ತಿಂಡಿಗಳ ತಯಾರಿ, ಇವೆಲ್ಲವುಗಳ ಭರಾಟೆಯಲ್ಲಿ ಅತಿ ಶೀಘ್ರವಾಗಿ ಕಳೆಯುತ್ತದೆ. ಹೀಗೆ ಕ್ರಿಸ್‌ಮಸ್ಸು ನಿಜವಾಗಿಯೂ ಬಲು ನಿರೀಕ್ಷೆಯ ಹಬ್ಬವೇ ಸರಿ.
ಹಾಗೆ ನೋಡಿದರೆ ಈ ಕ್ರಿಸ್ಮಸ್ಸು ಮಕ್ಕಳ ಹಬ್ಬ ಎನ್ನಬಹುದೇನೋ? ಏಕೆಂದರೆ ಈ ದಿನಗಳಲ್ಲಿ ಮಕ್ಕಳ ಬಗ್ಗೆ ಎಂದಿಗಿಂತ ಹೆಚ್ಚು ಕಾಳಜಿ. ಅವರೆಷ್ಟು ಕುಣಿದು ಕುಪ್ಪಳಿಸಿದರೂ ಕೇಳುವವರಿಲ್ಲ. ಅವರಿಗೆ ಬೇಕೆನಿಸಿದ ಉಡುಗರೆ, ಬೇಕೆನಿಸಿದ ಬಟ್ಟೆಬರೆ, ತಿಂಡಿ ತಿನಿಸು, ಆಟೋಟ ಸುತ್ತಾಟ, ಸಂಭ್ರಮ ಸಡಗರ . . ನೋಡ್ತಾ ನೋಡ್ತಾ ಇದ್ರೆ ವಯಸ್ಕರೂ ಮಕ್ಕಳಲ್ಲಿ ಮಕ್ಕಳಾಗಿ ಬಿಡುವುದರಲ್ಲಿ ಸಂದೇಹವೇ ಇಲ್ಲ. ಮಕ್ಕಳ ಮನದಿಂಗಿತವನ್ನು ತಿಳಿದುಕೊಂಡು ಸಾಂಟಾಕ್ಲಾಸ್ ಎಂಬ ಕಾಲ್ಪನಿಕ ವ್ಯಕ್ತಿಯ ನೆವದಲ್ಲಿ ಇವರೇ ಉಡುಗರೆ ತಂದು ಮಕ್ಕಳ ಮನ ಗೆಲ್ಲುವುದು, ಆ ಮಕ್ಕಳು ಮುಂದೆ ದೊಡ್ಡವರಾಗಿ ಅವರ ಮಕ್ಕಳಿಗೆ ಈ ಪವಿತ್ರವಾದ ಗುಟ್ಟನ್ನು ಗುಟ್ಟಾಗಿಯೇ ದಾಟಿಸುವುದು ಇವೆಲ್ಲ ಕ್ರಿಸ್‌ಮಸ್ ಹಬ್ಬವು ದಯಪಾಲಿಸಿದ ಪ್ರೀತಿಯ ಕೊಡುಗೆಯೇ ಅಲ್ಲವೇ?
ಡಿಸೆಂಬರ್ ತಿಂಗಳಿನ ಇಪ್ಪತ್ನಾಲ್ಕನೇ ದಿನದ ಮೈ ನಡುಗಿಸುವ ಚಳಿಯಲ್ಲಿ ಅದೂ ಮಧ್ಯರಾತ್ರಿ ಸಮೀಪಿಸುತ್ತಿದ್ದಂತೆ ಕ್ರಿಸ್‌ಮಸ್ ಸಂಭ್ರಮ ಗರಿಗೆದರುತ್ತದೆ. ಪ್ರಾಚೀನ ರೋಮನ್ ಚಕ್ರಾಧಿಪತ್ಯದ ಜೂಲಿಯನ್ ಕ್ಯಾಲೆಂಡರಿನ ಪ್ರಕಾರ ಡಿಸೆಂಬರ್ ಇಪ್ಪತ್ನಾಲ್ಕರ ನಡುರಾತ್ರಿ ಸೂರ್ಯನು ಮಕರ ಸಂಕ್ರಾಂತಿಯನ್ನು ದಾಟುವ ಈ ಸಂದರ್ಭ ಅವರಿಗೆಲ್ಲ ಸುಗ್ಗಿಯ ಹಬ್ಬ ಮಾತ್ರವಲ್ಲ ಕತ್ತಲಿನಿಂದ ಬೆಳಕಿನಡೆಗೆ ಸಾಗುವ ಬೆಳಕಿನ ಹಬ್ಬವಾಗಿತ್ತು. ಪುರಾತನ ರೋಮನರು ಸೂರ್ಯನ ಜಾಗದಲ್ಲಿ ಯೇಸುಕ್ರಿಸ್ತನನ್ನು ಅಲಂಕರಿಸಿ ಕ್ರಿಸ್‌ಮಸ್ ಆಚರಣೆಗೆ ನಾಂದಿ ಹಾಡಿದರು. ಅದರಿಂದಲೇ ಕ್ರಿಸ್ಮಸ್ ದಿನದ ಹಿಂದಿನ ನಡುರಾತ್ರಿಯ ಆಚರಣೆಗೆ ವಿಶೇಷ ಪ್ರಾಮುಖ್ಯತೆ ಇದೆ.
ಅಂದಿನ ರಾತ್ರಿ ಹನ್ನೊಂದು ಗಂಟೆಯ ಸುಮಾರಿಗೆಲ್ಲ ಎಲ್ಲೆಲ್ಲಿಂದ ಜನ ಬಂದು ಚರ್ಚಿನೊಳಗಡೆ ತಮ್ಮ ಜಾಗ ಹಿಡಿದುಕೊಳ್ಳುತ್ತಾರೆ. ಗಾನವೃಂದದವರು ಒಂದಾದ ಮೇಲೊಂದರಂತೆ ಕ್ರಿಸ್ಮಸ್ ಹಾಡುಗಳನ್ನು ಹಾಡುತ್ತಾ ಕ್ರಿಸ್ತನಿರೀಕ್ಷೆಗೆ ಹೊಳಪು ನೀಡುತ್ತಾರೆ. ಅವೆಲ್ಲ ಗೊತ್ತಿರುವ ಹಾಡುಗಳೇ. ಪ್ರತಿವರ್ಷ ಇದೇ ಸಮಯಕ್ಕೆ ನಾವು ಹಾಡಿದ್ದೇ ಅಲ್ಲವೇ? ಆದರೂ ಇಂದು ಅವು ಹೊಚ್ಚ ಹೊಸದರಂತೆ ನಿತ್ಯನಾವೀನ್ಯತೆಯಿಂದ ಕಂಗೊಳಿಸುತ್ತಿವೆ ಅಲ್ಲ ಇನಿದಾಗಿ ಕೇಳಿಸುತ್ತಿವೆ. ಆ ಹಾಡುಗಳಲ್ಲಿ ಅಪಾರ ಅರ್ಥವಿದೆ, ಅರ್ಥಕ್ಕೂ ಮಿಗಿಲಾದ ಸಂತಸವಿದೆ. ಹೃದಯವನರಳಿಸುವ ಮನ ಪ್ರಫುಲ್ಲಗೊಳಿಸುವ ತವಕವಿದೆ. 'ಬಂದಿಹುದು ಶುಭದಿನವು ತಂದಿಹುದು ಸಂತಸವ ಏನಾನಂದ ಏನಾನಂದ' ಎಂದು ಕೇಳಿಬರುವ ಆ ಗಾನವೃಂದದ ಮಕ್ಕಳ ಹಾಡು ನಮ್ಮ ಹೃದಯದ ಹಾಡಾಗಿ ಕುಣಿಯುತ್ತದೆ. ಚರ್ಚಿನೊಳಗಿನ ಎಲ್ಲರ ಎದೆಬಡಿತವೂ ಗಾನವೃಂದದ ರಾಗ ತಾನ ಪಲ್ಲವಿಗಳಿಗೆ ಮಿಡಿಯುತ್ತಾ ಭಕ್ತಿರಸದ ಹೊನಲಿನೊಂದಿಗೆ ತೃಪ್ತಿರಸದ ಸೊಬಗಿನಲ್ಲಿ ಮೀಯುತ್ತದೆ.
ಗಂಟೆ ಹನ್ನೆರಡಾಗುತ್ತಿದ್ದಂತೆ ಬಂಗಾರದ ಮೇಲುವಸ್ತ್ರ ಧರಿಸಿದ ಗುರುವರ್ಯರು ಶಿಶುಯೇಸುವಿನ ಸ್ವರೂಪವನ್ನು ಕರಗಳಲ್ಲಿ ಎತ್ತಿಹಿಡಿದು 'ಮಹೋನ್ನತದಲ್ಲಿ ದೇವರಿಗೆ ಮಹಿಮೆ ಭೂಲೋಕದಲ್ಲಿ ಸುಮನಸ್ಕರಿಗೆ ಶಾಂತಿ' ಎಂಬ ದೂತಗಾನವನ್ನು ಮೇರುಸ್ವರದಲ್ಲಿ ಹಾಡುತ್ತಾರೆ. ಚರ್ಚಿನೊಳಗಣ ಭಕ್ತಾದಿಗಳೆಲ್ಲ ಆ ದನಿಗೆ ದನಿಗೂಡಿಸಿ ಎದೆ ತುಂಬಿ ಹಾಡುತ್ತಾ ದೈವ ಭಜನೆ ಮಾಡುತ್ತಾರೆ. ಅದರೊಂದಿಗೆ ಚರ್ಚಿನ ಎಲ್ಲ ದೀಪಗಳೂ ಜಗಮಗಿಸುತ್ತವೆ. ಎಲ್ಲ ಗಂಟೆಗಳೂ ತಾರಸ್ತಾಯಿಯಲ್ಲಿ ಮೊಳಗುತ್ತವೆ. ಸಂತೋಷದ ನಗೆಯ ಹೂವರಳಿ ಒಡೆದ ಮನಗಳು ಬೆಸೆಯುತ್ತವೆ, ವೈಮನಸ್ಯ ಮರೆತುಹೋಗುತ್ತದೆ, ಅಸಹನೆಯ ಉರಿ ಶಾಂತವಾಗುತ್ತದೆ, ಮುಖವಾಡಗಳು ಕಳಚಿಹೋಗುತ್ತವೆ. ಕೈಕುಲುಕುವಿಕೆಯ ಶುಭಾಶಯಗಳು ಹೃದಯದ ಮಾತಾಗುತ್ತವೆ. ದೇವಾಲಯದ ಗಂಟೆ ಇನ್ನೂ ಮೊಳಗುತ್ತಿರುವಂತೆ ಎಸ್ಸೆಮ್ಮೆಸ್ಸುಗಳು ಜಗದ ಉದ್ದಗಲಕ್ಕೂ ಸರಿದಾಡುತ್ತವೆ.
ಶಾಂತಿ ಪ್ರೀತಿ ದ್ಯೋತಕವಾದ ಕ್ರಿಸ್ಮಸ್ಸು ಮತ್ತೆ ಮತ್ತೆ ಬರುತಿರಲಿ, ಜಗದ ದ್ವೇಷವೆಲ್ಲ ತೊಡೆದು ಬಂದೂಕಿನ ಮೇಲೆ ಮಲ್ಲಿಗೆ 
ಬಳ್ಳಿ ಹಬ್ಬಿ ಸಾಮರಸ್ಯದ ಹೂವರಳಿಸಲಿ.
http://www.prajavani.net/Content/Dec232010/metrothurs20101222218939.asp

ಶುಕ್ರವಾರ, ಡಿಸೆಂಬರ್ 17, 2010

ಹಾರೋಬೆಲೆ ವ್ಯುತ್ಪತ್ತಿ

ಕನಕಪುರ ತಾಲೂಕಿನಲ್ಲಿ ಅರ್ಕಾವತಿ ನದಿ ದಂಡೆಯಲ್ಲಿರುವ ಹಾರೋಬೆಲೆ ಎಂಬ ಗ್ರಾಮವು ನೂರಕ್ಕೆ ನೂರು ಕನ್ನಡ ಮನೆಮಾತಿನ ಕ್ರೈಸ್ತರೇ ನೆಲೆಗೊಂಡಿರುವ ಪುರಾತನ ಊರು. ಈ ಹಾರೋಬೆಲೆ ಎಂಬ ಗ್ರಾಮನಾಮದ ವ್ಯುತ್ಪತ್ತಿಗೆ ತೊಡಗುವಾಗ ಸ್ವಾಮಿ ಅಂತಪ್ಪನವರು ಅದನ್ನು ಇಂಗ್ಲಿಷಿನ horrible ಪದದೊಂದಿಗೆ ತಳುಕು ಹಾಕವುದನ್ನು ಗಮನಿಸಿದ್ದೇವೆ. ಆದರೆ ಎರಡು ಶತಮಾನಗಳ ಮುನ್ನ ಇಂಗ್ಲಿಷರು ಇನ್ನೂ ಇಂಡಿಯಾಕ್ಕೆ ಕಾಲಿಡುವ ಮುನ್ನವೇ ಹಾರೋಬೆಲೆ ಗ್ರಾಮಕ್ಕೆ ಇತಾಲಿಯನ್ ಜೆಸ್ವಿತರ ಪ್ರವೇಶವಾಗಿತ್ತೆನ್ನುವುದನ್ನು ಗಮನಿಸಿರಿ.
ಅಂದು ರಸ್ತೆಗಳಿಲ್ಲದೆ ಗುಡ್ಡ ಬೆಟ್ಟ ಹೊಳೆ ಕಾಡುಗಳಿಂದ ಆವೃತವಾಗಿ ಹೊರಗಿನಿಂದ ದುರ್ಗಮವಾಗಿದ್ದ ಹಾರೋಬೆಲೆಯನ್ನು ಪ್ರವೇಶಿಸುವುದು ಸುಲಭಸಾಧ್ಯವಾಗಿರಲಿಲ್ಲ. ಹಾಗಾಗಿ ಅವರು ಇತಾಲಿಯಾ ಭಾಷೆಯಲ್ಲಿ ಹಾರೋಬೆಲೆಗೆ ಹೋಗುವುದೆಂದರೆ ಅದು orribile ಅನುಭವ (ಭಯಂಕರ ಅನುಭವ) ಎಂಬುದಾಗಿ ಉದ್ಗರಿಸಿರಬೇಕು. ಇತಾಲಿಯಾದ orribile ಎಂಬ ಪದವು ಇಂಗ್ಲಿಷಿನ horrible ಎಂಬ ಪದಕ್ಕೆ ಸಂವಾದಿಯಾಗಿದೆ.
ಹೇಳಿಕೇಳಿ ಈ ಇತಾಲಿಯನ್ ಜೆಸ್ವಿತರು ಕನ್ನಡನಾಡಿಗೆ ಪ್ರವೇಶಿಸಿದ್ದು ೧೬೪೦ ರ ದಶಕದಲ್ಲಿ. ಅಂದರೆ ಕನ್ನಡದ ನುಡಿಗಟ್ಟಿನಲ್ಲಿ ’ಹ’ ಕಾರವು ಇನ್ನೂ ಸಾರ್ವತ್ರಿಕವಾಗಿರದೇ ಇದ್ದ ಕಾಲ. ಆದ್ದರಿಂದ ಹಾರೋಬೆಲೆ ಎಂಬ ಪದಾದಿಯಲ್ಲಿ ’ಹ’ ಕಾರವನ್ನು ಆರೋಪಿಸುವ ಬದಲು ಅಲ್ಲಿ ’ಅ’ ಕಾರವಿತ್ತೆನ್ನುವುದು ಸಮಂಜಸವೆನಿಸುತ್ತದೆ. ಅದು ಬಹುಶಃ ಆರುಬೆಲೆ ಅಥವಾ ಆರೋಬೆಲೆ ಇದ್ದಿರಬಹುದೆಂದು ನನ್ನ ಅನಿಸಿಕೆ. 
ಕನ್ನಡದ ಆಡುಮಾತಿನಲ್ಲಿ ಆರು ಎನ್ನುವುದನ್ನು ಉಳುಮೆ, ಕೃಷಿಗೆ ಸಮಾನಪದವಾಗಿ ಬಳಸಲಾಗುತ್ತದೆ. ಹಳೆಯ ಮೈಸೂರು ಪ್ರಾಂತ್ಯದಲ್ಲಿನ ಮೂಲನಿವಾಸಿಗಳು’ ’ಅ’ ಕಾರವನ್ನು’ಹ’ ಕಾರವನ್ನಾಗಿ ಉಚ್ಚರಿಸುವುದು ಸಹಜವಾದ್ದರಿಂದ ’ಆರೋಬೆಲೆ’ಯನ್ನು ಜನ ’ಹಾರೋಬೆಲೆ’ ಎಂದೇ ಕರೆದಿರಬಹುದು.
ಅಲ್ಲದೆ ’ಬೆಲೆ’ ಎಂಬುದು ’ಬೇಲಿ’ ಎಂಬುದರ ಸಂಕ್ಷಿಪ್ತರೂಪವಾಗಿದೆ. ನಮ್ಮಲ್ಲಿ ಮಂಚನಬೆಲೆ, ಸೂಲಿಬೆಲೆ, ಅತ್ತಿಬೆಲೆ ಮುಂತಾದ ಊರುಗಳಿರುವುದನ್ನು ಗಮನಿಸಿರಿ.
ಆಡುವ ಪದಗಳನ್ನು ಬರವಣಿಗೆಯಲ್ಲಿ ಮೂಡಿಸುವಾಗ ಜನ ಸ್ವಯಂ ಪ್ರೇರಣೆಯಿಂದ ಅವಕ್ಕೆ ಶಿಷ್ಟರೂಪವನ್ನು ನೀಡುವ ಪ್ರಯತ್ನ ಮಾಡುತ್ತಾರೆ. ಹಾಗೆ ಮಾಡುವಾಗ ಅವರಿಗೆ ಅರಿವಿಲ್ಲದಂತೆಯೇ ಆಡುಮಾತಿನ ಮೂಲ ಆಶಯಕ್ಕೆ ವ್ಯತಿರಿಕ್ತವಾದ ಅರ್ಥ ಮೂಡುವ ಪದಗಳನ್ನು ಟಂಕಿಸಿರುತ್ತಾರೆ. ಉದಾಹರಣೆಗೆ ’ಕಾಡುಗೋಡಿ’ ಯನ್ನು ತೆಗೆದುಕೊಳ್ಳೋಣ. ಕೆರೆಯು ತುಂಬಿದಾಗ ಅದರ ಸುರಕ್ಷೆಯ ದೃಷ್ಟಿಯಿಂದ ಹೆಚ್ಚುವರಿ ನೀರು ಹರಿದುಹೋಗುವಂತೆ ಒಂದೆಡೆ ಒಡ್ಡು ತೆರೆದಿರುತ್ತಾರೆ. ಅದಕ್ಕೆ ಕೋಡಿ ಎನ್ನುತ್ತಾರೆ. ಆ ಕೋಡಿಯ ಮೂಲಕ ಹರಿವ ನೀರು ಹೊಳೆಯಾಗಿ ನದಿಯಾಗಿ ಹರಿದು ಸಮುದ್ರ ಸೇರುತ್ತದೆ, ಇರಲಿ. ಆ ಕೋಡಿಯು ಕಾಡಿನ ಅಂದರೆ ಸುಡುಗಾಡಿನ ಕಡೆಗಿದ್ದರೆ ಅದಕ್ಕೆ ಕಾಡುಗೋಡಿ (ಕಾಡು+ಕೋಡಿ=ಕಾಡುಗೋಡಿ, ಆಗಮಸಂಧಿ) ಎನ್ನುವುದು ಅತ್ಯಂತ ಸೂಕ್ತ. ಆದರೆ ಬರವಣಿಗೆಯ ಶಿಷ್ಟರು ಅದನ್ನು ಕಾಡುಗುಡಿ ಎಂಬುದಾಗಿ ಭಾವಿಸಿಕೊಳ್ಳುತ್ತಾರೆ. ಹಾಗೆಯೇ ನಮ್ಮ ಈ ಆರೋಬೆಲೆ ಅಥವಾ ಹಾರೋಬೆಲೆಯನ್ನು ಕೆಲವರು ಹಾರೋಬಲೆ ಎಂಬುದಾಗಿ ಬರೆಯುವುದನ್ನೂ ನೋಡುತ್ತಿದ್ದೇವೆ.