ಮಂಗಳವಾರ, ಜನವರಿ 17, 2012

ಲಾಜರ್ ಸ್ವಾಮಿಯವರು


ಕನಕಪುರ ತಾಲೂಕಿನಲ್ಲಿ ಅರ್ಕಾವತಿ ನದಿಯ ದಂಡೆಯಲ್ಲಿರುವ ಒಂದು ಕುಗ್ರಾಮ ಹಾರೋಬೆಲೆ. ಬೆಂಗಳೂರಿನ ಇತರೆಡೆಗಳಲ್ಲಿ ಮಂಚನಬೆಲೆ, ಅತ್ತಿಬೆಲೆ, ಸೂಲಿಬೆಲೆ ಎಂಬ ಊರುಗಳಂತೆ ಹಾರೋಬೆಲೆಯ ಹೆಸರು ಬಳಕೆಯಲ್ಲಿದೆ. ನೂರಕ್ಕೆ ನೂರು ಕ್ರಿಸ್ತನುಯಾಯಿಗಳಿರುವ ಈ ಊರಿಗೆ ಸುಮಾರು ೪೦೦ ವರ್ಷಗಳ ಇತಿಹಾಸವಿದೆ.  ವಿದೇಶಗಳಿಂದ ಬಂದ ಕ್ರೈಸ್ತಮತಪ್ರಚಾರಕರ ವಾರ್ಷಿಕ ವರದಿಗಳಲ್ಲಿ ಈ ಊರಿನ ಬಗ್ಗೆ ಇತಿಹಾಸವಿದೆ. ಈ ವಿದೇಶಿಯರ ಶ್ರದ್ಧೆಯ ಫಲವಾಗಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಕ್ರ್ರೈಸ್ತ ಧರ್ಮವನ್ನು ಸ್ವೀಕರಿಸಿ ೪೦೦ ವರ್ಷಗಳು ತಂದಿದೆ.  ಎಷ್ಟೋ ವಿದೇಶಿ ಪಾದ್ರಿಗಳ ಹೆಸರಿಗಿಂತಲೂ ಸ್ಥಳೀಯರಲ್ಲಿ ಪ್ರಥಮ ಎನಿಸಿದ ಲಾಜರ್ ಸ್ವಾಮಿಯವರ ಹೆಸರು ಇಂದಿಗೂ ಪ್ರಚಲಿತವಾಗಿದೆ. ಹಾರೋಬೆಲೆಯೊಂದಿಗೆ ಸಂಪರ್ಕವಿರುವವರಿಗೆ ಲಾಜರ್ ಸ್ವಾಮಿಯವರ ನೆನಪು ಸದಾ ತುಡಿಯುತ್ತದೆ.
ಆದರೆ ಈ ಲಾಜರ್ ಸ್ವಾಮಿಯವರ ಜೀವನದ ಕುರಿತಂತೆ ಲಿಖಿತದಾಖಲೆಗಳು ಸದ್ಯದಲ್ಲಿ ಲಭ್ಯವಿಲ್ಲ. ಇವರ ಸಮಕಾಲೀನರು ಹೇಳಿರುವ ಹೇಳಿಕೆಗಳು, ಬಾಯಿಂದ ಬಾಯಿಗೆ ಹಬ್ಬಿ ಹರಡಿರುವ ಅವರ ಜೀವನಗಾಥೆ ಇವುಗಳನ್ನು ಆಧರಿಸಿ ಲಾಜರ್ ಸ್ವಾಮಿಯವರ ಬದುಕಿನ ನಿರೂಪಣೆಯನ್ನು ಮಾಡಲು ಇಲ್ಲಿ ಪ್ರಯತ್ನಿಸಲಾಗಿದೆ.
ಬೆಂಗಳೂರಿನ ಬಿಷಪ್ಪರ ನಿವಾಸದ ಬಳಿ ಇರುವ ಬೇಡರಹಳ್ಳಿ ಎಂಬ ಸಣ್ಣ ಗ್ರಾಮದಲ್ಲಿ ಕ್ರಿ.ಸ್ತಶಕ ಸುಮಾರು ೧೮೬೨ ರಾಜಮ್ಮ ಎಂಬುವರ ಗರ್ಭಾಂಬುಧಿಯಲ್ಲಿ ಲಾಜರ್ ರವರು ಜನಿಸಿದರು. ಇವರ ಅಣ್ಣನ ಹೆಸರು ಚಿನ್ನಣ್ಣ, ತಂದೆಯ ಹೆಸರು ತಿಳಿಯದು. ಕೆಲವೇ ವರ್ಷಗಳಲ್ಲಿ ನಾಡಿನ ಅದ್ಯಂತ ಫ್ಲೇಗ್ ಮಾರಿ ಅಪ್ಪಳಿಸಿದ್ದರಿಂದಾಗಿ ಲಾಜರ್ ರವರ ಕುಟುಂಬವು ಬೆಂಗಳೂರಿನ ಹೊರವಲಯದ ದೊರೆಸಾನಿಪಾಳ್ಯಕ್ಕೆ ಸ್ಥಳಾಂತರಗೊಂಡಿತು. ದೈವಭಕ್ತಿಯವರೂ, ಚುರುಕುಮತಿಯವರೂ ಆಗಿದ್ದ ಲಾಜರ್ ಅವರನ್ನು ಅಂದಿನ ಫ್ರೆಂಚ್ ಕ್ರೈಸ್ತಸಭೆಯು ತರಬೇತಿ ಕೊಟ್ಟು ಕ್ರೈಸ್ತ ಗುರುಪಟ್ಟ ನೀಡಿತು.
ಲಾಜರ್ ಸ್ವಾಮಿಯವರ ಕಾರ್ಯವ್ಯಾಪ್ತಿಯು ಬೇಗೂರು, ಕಾಮನಹಳ್ಳಿ, ಸೋಮನಹಳ್ಳಿ, ಕಾನಕಾನಹಳ್ಳಿ, ಉಯ್ಯಂಬಳ್ಳಿ, ಹಾರೋಬೆಲೆ, ಕೊಳ್ಳೇಗಾಲ, ಪರಸೆಗೊಂಡನಪಾಳ್ಯ, ಮಾರ್ಟಳ್ಳಿ, ಕೌದಳ್ಳಿ, ಆನೇಕಲ್ಲು ಹಾಗೂ ಇಂದು ತಮಿಳುನಾಡಿಗೆ ಸೇರಿಹೋಗಿರುವ ಮಾರಂಡನಹಳ್ಳಿ, ದಾಸರಹಳ್ಳಿ, ಮದಗೊಂಡನಹಳ್ಳಿ ಇತ್ಯಾದಿಯಾಗಿತ್ತು. ಸ್ಥಳೀಯವಾಗಿ ಇವರು ಕುದುರೆಯ ಮೇಲೂ ದೂರದೂರುಗಳಿಗೆ ಎತ್ತಿನ ಗಾಡಿಯ ಮೇಲೂ ಪ್ರ್ರಯಾಣಿಸಿ ಕ್ರೈಸ್ತ ಭಕ್ತರ ಅಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುತ್ತಿದ್ದರು. ತಮ್ಮ ಬಂಟ ವೀಸಲ್ ಪಟ್ಟಿ ಚಿನ್ನಣ್ಣನೊಂದಿಗೆ ಕಮಾನು ಕಟ್ಟಿದ ಎತ್ತಿನ ಗಾಡಿಯಲ್ಲಿ ಊರಿಂದೂರಿಗೆ ಪ್ರಯಾಣಮಾಡುವಾಗ ಅವರಲ್ಲಿದ್ದ ಬಟ್ಟೆಬರೆ ಹಣ ಕಾಸು ಪೂಜಾಸಾಮಗ್ರಿ ಪ್ರಸಾದಗಳನ್ನು ಕದಿಯ ಬರುವ ಕಳ್ಳಕಾಕರಿಂದ ರಕ್ಷಣೆ ಪಡೆಯಲು ಅಂದಿನ ಬ್ರಿಟಿಷ್ ಸರಕಾರವು ಇವರಿಗೆ ಬಂದೂಕು ಬಳಸಲು ಪರವಾನಿಗೆ ನೀಡಿತ್ತು.  ಊರಿಂದೂರಿಗೆ ಪ್ರಯಾಣ ಮಾಡುತ್ತ ಮತ್ತೆ ಅದೇ ಊರಿಗೆ ಅವರು ಮರುಭೇಟಿ ನೀಡಲು ಮೂರು ತಿಂಗಳಾದರೂ ಆಗುತ್ತಿತ್ತು. ಆದರೆ ತಪಸ್ಸು ಕಾಲದಲ್ಲಿ ಹಾರೋಬೆಲೆ, ಮಳೆಗಾಲ ಕಳೆದು ಕ್ರಿಸ್ತಜಯಂತಿ ಮುಗಿಯುವವರೆಗೂ ಸೋಮನಹಳ್ಳಿ ಇವೆರಡು ಊರುಗಳು ಅವರ ಶಾಶ್ವತ ನೆಲೆಯಾಗಿದ್ದವು.
ಹಾರೋಬೆಲೆಯಲ್ಲಿ ಅವರು ಪ್ರಯೋಗಿಸಿದ, ಯೇಸುಸ್ವಾಮಿಯ ಪೂಜ್ಯ ಪಾಡುಗಳ ಕಥನ ಎಂಬ ರಂಗಪ್ರಯೋಗ ಅಭಿವೃದ್ಧಿಗೊಂಡು ಶತಮಾನ ಕಳೆದಿದೆ. ೧೯೦೬ನೇ ಏಪ್ರಿಲ್ ೧೩ರ ಪವಿತ್ರ ಶುಕ್ರವಾರದಂದು ಹಾರೋಬೆಲೆಯ ಜಪಸರದೊಡತಿಯ ಆಲಯದ ಮುಂದೆ ಹಾಕಿದ್ದ ಚಪ್ಪರದಡಿಯಲ್ಲಿ ಯೇಸುವಿನ ಜೀವನದ ಅಂತಿಮ ಕ್ಷಣಗಳ ಘಟನಾವಳಿಯನ್ನು ಲಾಜರ್ ಸ್ವಾಮಿಯವರು ಭಕ್ತಾದಿಗಳ ಮನಮುಟ್ಟುವಂತೆ ವ್ಯಾಖ್ಯಾನಿಸಿದರು.  ಅದಕ್ಕೆ ಆರು ಮಂದಿ ಪೂಜೆ ಒತ್ತಾಸೆಯ ಬಾಲಕರ ಅಭಿನಯವು ಪೂರಕವಾಗಿತ್ತು. ಹೊಂಗೆಸೊಪ್ಪು ಹೊದ್ದ ಬಗಿನಿಮರದ ಚಪ್ಪರಕ್ಕೆ ಪಂಜಿನ ಬೆಳಕಲ್ಲಿ ನಡೆದ ಈ ನಾಟಕದಂಥ ಪ್ರಯೋಗವನ್ನು ಅನಂತ ತಲ್ಲಿನತೆಯಿಂದ ನೋಡಿದ ಭಕ್ತಾದಿಗಳು ಭಾವಪರವಶರಾಗಿ ಶಿಲುಬೆಗೆ ಮುತ್ತನ್ನಿಟ್ಟು ಮನೆಗೆ ತೆರಳಿದರು.  ವರ್ಷಗಳು ಕಳೆದಂತೆ ಈ ನಾಟಕದ ಪಾತ್ರದಾರಿಗಳು ಹೆಚ್ಚಿ, ಅವಧಿಯೂ ಹೆಚ್ಚಿ, ಧಿರಿಸುಗಳೂ ಕಳೆಗೊಂಡು ದೂರುದೂರುಗಳಿಂದ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.  ನಂತರದ ವರ್ಷಗಳಲ್ಲಿ ಶುಭಶುಕ್ರವಾರ ರಾತ್ರಿ ಪೂಜ್ಯಪಾಡುಗಳ ಅಭಿನಯವು ಪವಿತ್ರ ಶನಿವಾರದ ರಾತ್ರಿ ಪುನರುತ್ಥಾನದ ಮಹಿಮೆಯ ಪ್ರದರ್ಶನವು ಮರುದಿನ ಈಸ್ಟರ್ ಭಾನುವಾರದ ರಾತ್ರಿ ಕ್ರೈಸ್ತ ಸಂತರ ನಾಟಕವೂ ಪ್ರದರ್ಶನಗೊಳ್ಳತೊಡಗಿದವು.
ಇನ್ನೊಂದು ಪ್ರಸಂಗದಲ್ಲಿ ಕ್ರೈಸ್ತ ಸ್ವಾಮೀಜಿಯನ್ನು ಹೋಲುವ ಮರದ ಪುಟ್ಟ ಪ್ರತಿಮೆಯೊಂದು ಸಿಕ್ಕಿದೆ ಎಂದು ಬೆಟ್ಟದಹಲಸೂರಿನಿಂದ ಸುದ್ದಿ ಬಂತು. ಲಾಜರ್ ಸ್ವಾಮಿಯವರು ಅಲ್ಲಿಗೆ ಹೋಗಿ ನೋಡಲಾಗಿ ಆ ಪ್ರತಿಮೆ ಸಂತ ಅಂತೋಣಿಯವರದೆಂದು ತಿಳಿಯಿತು. ಅದನ್ನು ಅವರು ತಮ್ಮ ಉಣ್ಣೆಯ ನಿಲುವಂಗಿಯ ಕಿಸೆಯಲ್ಲಿಟ್ಟುಕೊಂಡು ಹಾರೋಬೆಲೆಗೆ ಮರಳಿದರು.  ಆದರೆ ಹಾರೋಬೆಲೆಗೆ ಬಂದು ನೋಡಿದರೆ ಅವರ ಕಿಸೆಯಲ್ಲಿ ಪ್ರತಿಮೆ ಇರಲಿಲ್ಲ. ಎಂದಿನ ಕೆಲಸಗಳಲ್ಲಿ ತೊಡಗಿಕೊಂಡು ಅವರು ಈ ಘಟನೆಯನ್ನು ಮರೆತು ಬಿಟ್ಟರು.  ಆ ರಾತ್ರಿ ಮಲಗುವ ಮುನ್ನ ಅವರು ಧ್ಯಾನಕ್ಕೆ ಕುಳಿತಾಗ ಅಂದಿನ ಘಟನೆಗಳನ್ನು ಮತ್ತೆ ನೆನಪು ಮಾಡಿಕೊಂಡರು. ಸಂತ ಅಂತೋಣಿಯವರ ಆ ಪ್ರತಿಮೆ ಬೆಟ್ಟದ ಹಲಸೂರಿನಲ್ಲೇ ಉಳಿದಿದೆ ಎಂದು ಅವರಿಗೆ ಅನಿಸಿತು. ಮರುದಿನ ಕುದುರೆ ಹತ್ತಿ ಅಲ್ಲಿಗೆ ಹೋದಾಗ ಆ ಪ್ರತಿಮೆ ಮೊದಲು ಸಿಕ್ಕ ಜಾಗದಲ್ಲೇ ಬಿದ್ದಿತ್ತು. ಸಂತ ಅಂತೋಣಿಯವರಿಗೆ ಆ ಸ್ಥಳವನ್ನು ಬಿಟ್ಟುಬರಲು ಮನಸ್ಸಿಲ್ಲವೆಂದು ಅರಿತುಕೊಂಡ ಅವರು ಸಂತ ಅಂತೋಣಿಯವರ ನೆನಪಿನಲ್ಲಿ ಅಲ್ಲೇ ಒಂದು ದೇಗುಲ ಕಟ್ಟಿಸಿದರು.  ಹಾರೋಬೆಲೆ ಮಹಿಮೆಗೆ ಬಂದವರು ಬೆಟ್ಟದ ಹಲಸೂರಿಗೂ ಭೇಟಿ ನೀಡುವ ಪರಂಪರೆ ಬೆಳೆಯಿತು.
ಸೋಮನಹಳ್ಳಿಯ ಜನತೆ ಅವರೊಂದಿಗೆ ಇರಿಸಿಕೊಂಡಿದ್ದ ಭಾವನಾತ್ಮಕ ಸಂಬಂಧ ತುಂಬ ಗಾಢವಾದದ್ದು. ೧೯೨೫ರಲ್ಲಿ ಅಂದರೆ ತಮ್ಮ ೬೩ನೇ ವಯಸ್ಸಿನಲ್ಲಿ ಲಾಜರ್ ಸ್ವಾಮಿಯವರು ತೀರಿಕೊಂಡಾಗ ವಾಡಿಕೆಯಂತೆ ಅವರ ಶರೀರವನ್ನು ನಗರದ ಪವಿತ್ರ ಹೃದಯಾಲಯದ ಆವರಣದಲ್ಲಿರುವ ಗುರುಪ್ರಸಾದಿಗಳ ಸಮಾಧಿ ಭೂಮಿಯಲ್ಲಿ ಮಣ್ಣು ಮಾಡಲಾಯಿತು.  ಆದರೆ ಅವರ ಅಂತಿಮಕ್ರಿಯೆ ತಮ್ಮೂರಲ್ಲೇ ನಡೆಯಬೇಕೆಂದು ಸೋಮನಹಳ್ಳಿಯ ಜನತೆ ಹಟ ಹಿಡಿದು ಸತ್ಯಾಗ್ರಹ ನಡೆಸಿದ್ದು ಲಾಜರ್ ಸ್ವಾಮಿಯವರ ಜನಪ್ರೀತಿಗೆ ಉಜ್ವಲ ಸಾಕ್ಷಿ.

ಶನಿವಾರ, ಜನವರಿ 14, 2012

ಬಾಲಕಯೇಸುವಿನ ಹಬ್ಬ


ಜನಿಸಿಹನಾರು ಗೋದಲಿಯೊಳು ವಿನಯದ ಶಿಶುವಾಗಿ
ವಿನಯದಿ ಮೆರೆಯುತ ಶಾಂತಿಯ ಬೀರುತ
ಅನುಪಮ ಸುಂದರ ಶಿಶುವಾಗಿಯೇ

ಎಂದೊಬ್ಬ ಕವಿ ಕ್ರಿಸ್ತನನ್ನು ಹಾಡಿ ಭಜಿಸಿದ್ದಾನೆ. ಇಂದು ಬಾಲಯೇಸುವಿನ ಹಬ್ಬ. ವಿವೇಕನಗರದ ಬಾಲಯೇಸುವಿನ ದೇವಾಲಯದಲ್ಲಿ ಅಪಾರ ಜನಜಾತ್ರೆ.
ಬಾಲಕೃಷ್ಣ, ಬಾಲಗಣಪರಂತೆಯೇ ಬಾಲಕನ ರೂಪದಲ್ಲಿ ಯೇಸುಕ್ರಿಸ್ತನನ್ನು ಪರಿಭಾವಿಸಿಕೊಂಡು ಪೂಜಿಸುವ ಈ ಆಚರಣೆ ಭಾರತೀಯ ಸಂಸ್ಕೃತಿಯ ನೆರಳಂತೆ ಅನಿಸಿದರೂ ಈ ಬಾಲಯೇಸು ಪರಿಕಲ್ಪನೆ ಮೂಡಿಬಂದದ್ದು ದೂರದ ಯೂರೋಪಿನ ಪ್ರೇಗ್ ಎಂಬ ಊರಿನಿಂದ.
ಹಾಗೆ ನೋಡಿದರೆ ಬಾಲಕ ಯೇಸುವಿನ ಕುರಿತ ಸಂಗತಿಗಳು ಪವಿತ್ರ ಬೈಬಲಿನಲ್ಲಿ ಉಲ್ಲೇಖಗೊಂಡಿರುವುದು ಕಡಿಮೆ. ಯೇಸುವನ್ನು ಉದರದಲ್ಲಿ ಹೊತ್ತು ತುಂಬುಗರ್ಭಿಣಿ ಮೇರಿ ಮಾತೆ ತಮ್ಮ ಪತಿ ಜೋಸೆಫರೊಂದಿಗೆ ಕಡ್ಡಾಯ ಜನಗಣತಿಯ ಕಾರಣದಿಂದ ನೆಲೆನಿಂತ ಊರನ್ನು ಬಿಟ್ಟು ಪೂರ್ವಜರ ಊರಾದ ಬೆತ್ಲೆಹೇಮಿಗೆ ಬರಬೇಕಾಯಿತು. ಅದಾಗಲೇ ಜನಗಣತಿಗೆ ಬಂದವರಿಂದ ಮನೆಗಳು ಭರ್ತಿಯಾಗಿದ್ದವು. ಜೋಸೆಫ ಮತ್ತು ಮರಿಯಾಳಿಗೆ ದನದ ಕೊಟ್ಟಿಗೆಯೇ ಗತಿಯಾಯ್ತು. ಕತ್ತೆಯ ಮೇಲೆ ಬಹುದೂರದ ಪ್ರಯಾಣ ಮಾಡಿ ಆಯಾಸಗೊಂಡಿದ್ದ ಬಿಮ್ಮನಸೆ ಮರಿಯಾಳಿಗೆ ಸರಿರಾತ್ರಿಯಲ್ಲಿ ಹೆರಿಗೆಯಾಗಿ ಗಂಡುಮಗು ಹುಟ್ಟಿತು. ಕರುಗಳಿಗೆ ಮೇವುಣ್ಣಿಸುವ ಗೊಂದಣಿಗೆ ಅಥವಾ ಗೋದಲಿಯೊಳಗೆ ಶಿಶುವನ್ನು ಮಲಗಿಸಿ ಜೋಸೆಫರು ಬಾಣಂತಿ ಮೇರಿಯ ಉಪಚಾರ ಮಾಡುತ್ತಾರೆ. ಯೇಸುಜನನದ ಕತೆಯ ಈ ಎಲ್ಲ ಸಂಗತಿಗಳಿಗೆ ಕುಂದು ತಾರದೇ ಸರ್ವಶಕ್ತ ದೇವರು ಸಮ್ಮನಸುಗಳ ಬಾಯಲ್ಲಿ ದೇವಗಾನ ಹಾಡಿಸುತ್ತಾನೆ, ಆಗಸದಲ್ಲಿ ವಿಶೇಷ ನಕ್ಷತ್ರಗಳನ್ನು ಬೆಳಗಿಸುತ್ತಾನೆ, ಜನಗಣತಿಯ ಜಾತ್ರೆಯಲ್ಲಿ ಕಳೆದುಹೋದ ಜನರನ್ನು ಬಿಟ್ಟು ಬಯಲಲ್ಲಿ ಬಿಡುಬೀಸಾಗಿ ಕುರಿಮೇಯಿಸುತ್ತಿದ್ದ ಕುರುಬರಿಗೆ ಯೇಸುವಿನ ಮೊದಲ ದರ್ಶನ ಮಾಡಿಸುತ್ತಾನೆ. ಕೊಟ್ಟಿಗೆಯಲ್ಲಿ ಅದಾಗಲೇ ನೆಲೆಕಂಡಿದ್ದ ದನಗಳು ಕರುಗಳು ಕತ್ತೆಗಳು ಆಡುಗಳು ಸಹ ಯೇಸುವಿನ ದರ್ಶನದಿಂದ ಪುಳಕಗೊಂಡವು. ಟಿಬೆಟ್ಟಿನ ಬುದ್ಧ ಚರಿತೆಯ ಪ್ರಕಾರ ಬೋಧಿಸತ್ವನು ಯೇಸುವಿನ ರೂಪದಲ್ಲಿ ಜನಿಸಿದ್ದನ್ನು ಕಂಡುಕೊಂಡ ಜ್ಞಾನಿಗಳು ನಕ್ಷತ್ರದ ಜಾಡು ಹಿಡಿದು ದೀರ್ಘ ಪ್ರಯಾಣ ಮಾಡಿ ಶಿಶು ಯೇಸುವನ್ನು ಕಂಡು ಪುನೀತರಾಗುತ್ತಾರೆ. ಆದರೆ ಆ ಜ್ಞಾನಿಗಳ ಮಾತು ಅಲ್ಲಿನ ರಾಜನಿಗೆ ಪಥ್ಯವಾಗುವುದಿಲ್ಲ. ಮಗು ಯೇಸು ಬೆಳೆದು ಮುಂದೆಂದೋ ತನ್ನ ವಿರೋಧಿಯಾಗುವ ಬದಲು ಇಂದೇ ಆತನನ್ನು ಇಲ್ಲವಾಗಿಸಿಬಿಟ್ಟರೆ ನೆಮ್ಮದಿ ಎಂದುಕೊಂಡು ತನ್ನ ರಾಜ್ಯದಲ್ಲಿನ ಶಿಶುಗಳನ್ನೆಲ್ಲ ಕೊಲ್ಲಿಸುತ್ತಾನೆ. ಆದರೆ ಅಷ್ಟರಲ್ಲಿ ಮೇರಿ ಮತ್ತು ಜೋಸೆಫರು ಶಿಶುಸಮೇತ ಪಲಾಯನ ಮಾಡಿರುತ್ತಾರೆ. ಹೀಗೆ ಊರು ತೊರೆಯುವ ಯೇಸು ಮತ್ತೆ ಕಾಣಿಸಿಕೊಳ್ಳುವುದು ತನ್ನ ಹನ್ನೆರಡನೇ ವಯಸ್ಸಿನಲ್ಲಿ. ಮುಂಜಿಗಾಗಿ ಜೆರುಸಲೇಮಿನ ಗುಡಿಗೆ ಬರುವ ಆತ ಅಲ್ಲಿನ ಧರ್ಮಗುರುಗಳಿಗೆ ವಿವಿಧ ಪ್ರಶ್ನೆಗಳನ್ನು ಕೇಳಿ ಗಲಿಬಿಲಿಗೊಳಿಸುತ್ತಾನೆ.
ಇಷ್ಟರ ಹೊರತು ಬಾಲಕ ಯೇಸುವಿನ ಬಾಲಲೀಲೆಗಳ ಕುರಿತಾಗಲೀ ಇನ್ನಾವುದೇ ವಿವರಗಳಾಗಲೀ ನಮಗೆ ದೊರೆಯವು. ಕೆಲ ಚಿತ್ರಗಳಲ್ಲಿ ಆತ ತನ್ನ ತಂದೆ ಜೋಸೆಫನಿಗೆ ಬಡಗಿ ಕೆಲಸದಲ್ಲಿ ನೆರವಾಗುವ ವಿವರವಿದೆ. ಬಾಲಕ ಯೇಸುವು ಹನ್ನೊಂದನೇ ಶತಮಾನದ ಜನಪ್ರಿಯ ಸಂತ ಅಂತೋಣಿಯವರೊಂದಿಗೆ ಆಟವಾಡುತ್ತಿದ್ದರೆಂಬ ಪ್ರತೀತಿಯಿದೆ. ಸಹಾಯಮಾತೆಯ ಪಟದಲ್ಲಿ ದೇವದೂತರು ಮಗುಯೇಸುವಿಗೆ ಶಿಲುಬೆ ತೋರಿಸಿ ಹೆದರಿಸುವಾಗ ಗುಮ್ಮನ ಕಂಡು ಹೆದರುವ ಮಗು ತಾಯಿಯ ಮರೆಹೊಗುವಂತೆ ಯೇಸು ಅಮ್ಮನ ಮಡಿಲೇರಿದ್ದಾನೆ. ಹಾಗೆಯೇ  ಕವಿಗಳ ಕಲ್ಪನೆಯಲ್ಲಿ ಧರ್ಮಭೀರುಗಳ ಬೊಗಸೆಯಲ್ಲಿ ಬಾಲಯೇಸು ನರ್ತಿಸುತ್ತಾನೆ, ಕುಣಿಯುತ್ತಾನೆ, ಕುಪ್ಪಳಿಸುತ್ತಾನೆ, ತುಂಟಾಟವಾಡುತ್ತಾನೆ, ಕೇಳಿದ ವರಗಳನ್ನೆಲ್ಲ ಮೊಗೆಮೊಗೆದು ಕೊಡುತ್ತಾನೆ. ಹಾಗಾಗಿಯೇ ಜಾತಿಧರ್ಮಗಳ ಭೇದವಿಲ್ಲದೆ ಜನ ಅವನೆಡೆಗೆ ಧಾವಿಸಿ ಬರುತ್ತಾರೆ.
ಹೀಗೆ ಯಾವಾಗಲೂ ಎಲ್ಲ ಸ್ತರಗಳ ಜನರಿಂದ ತುಂಬಿ ತುಳುಕುವ ವಿವೇಕನಗರದಲ್ಲಿರುವ ಬಾಲಯೇಸು ದೇವಾಲಯ ಕಂಬಗಳಿಲ್ಲದೇ ರಚಿತವಾದ ಅರೆವರ್ತುಳಾಕಾರದ ದಿವ್ಯ ಭವ್ಯ ವಿಸ್ತಾರದ ಗುಡಿ. ಒಮ್ಮೆಗೇ ಹತ್ತು ಸಾವಿರ ಜನರು ನೆಮ್ಮದಿಯಾಗಿ ಕುಳಿತು ಯೇಸುಧ್ಯಾನ ಮಾಡಬಹುದಾದ ಸುಂದರ ತಾಣವಿದು. ಹಜಾರದ ಕೇಂದ್ರಸ್ಥಾನದಲ್ಲಿ ಯೇಸುಜನನದ ಬೃಹತ್ ಭಿತ್ತಿಯನ್ನು ಉಬ್ಬುಶಿಲ್ಪದಂತೆ ರಚಿಸಲಾಗಿದೆ. ಅಪೂರ್ವ ವರ್ಣಸಂಯೋಜನೆಯ ಈ ಚಿತ್ತಾರದಲ್ಲಿ ನಾಯಿಗಳೂ ಪಾರಿವಾಳಗಳೂ ಕ್ರಿಸ್ತಜನನಕ್ಕೆ ಸಾಕ್ಷಿಯಾಗಿವೆ. ಗುಡಿಯ ಹೊರ ಆವರಣದಲ್ಲಿ ಚಪ್ಪಡಿ ಹಾಸಿನ ವಿಶಾಲ ಜಗಲಿಯಿದ್ದು ದೇವಾಲಯದ ಸೌಂದರ್ಯಕ್ಕೆ ಪೂರಕವಾಗಿದೆ. ಇದರ ಕೆಳಗೆ ನೆಲಮಾಳಿಗೆಯಲ್ಲಿ ಇನ್ನೂರು ಕಾರುಗಳ ನಿಲುಗಡೆಗೂ ವ್ಯವಸ್ಥೆಯಿದೆ. ಪುಸ್ತಕ ಮತ್ತು ಗಾನಮುದ್ರಿಕೆಗಳ ಮಾರಾಟ, ಹರಕೆ ವಸ್ತುಗಳ ಪ್ರದರ್ಶನ, ಹರಕೆಯ ಅಂಕಣ, ವಧುವರಾನ್ವೇಷಣಾ ಕೇಂದ್ರ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳೊಂದಿಗೆ ನಳನಳಿಸುತ್ತಿರುವ ಈ ಧಾರ್ಮಿಕ ಕೇಂದ್ರವನ್ನು ಯಾರು ಯಾವಾಗ ಬೇಕಾದರೂ ಸಂದರ್ಶಿಸಿ ಧನ್ಯರಾಗಬಹುದು.

ಸೋಮವಾರ, ಡಿಸೆಂಬರ್ 26, 2011

ತೆಸಿಯೇ ಸ್ವಾಮಿಯವರು TEISSIER Hippolyte, MEP (1853 - 1922)


ನವೆಂಬರ್ ೧೫ನೇ ತಾರೀಖು ತೆಸಿಯೇ ಸ್ವಾಮಿಯವರ ಜನ್ಮದಿನ. ಬೆಂಗಳೂರು, ಮೈಸೂರು ಮತ್ತು ಶೀಮೊಗ್ಗೆ ಧರ್ಮಪ್ರಾಂತ್ಯಗಳು ವಿಶೇಷವಾಗಿ ಸ್ಮರಿಸಿಕೊಳ್ಳಬೇಕಾದಂಥ ಅನುಪಮ ಚೇತನ ಈ ತೆಸಿಯೇ ಸ್ವಾಮಿಯವರು. ಫ್ರಾನ್ಸ್ ದೇಶದ ಐಷಾರಾಮೀ ಜೀವನವನ್ನು ಬದಿಗೊತ್ತಿ ಕ್ರಿಸ್ತರಾಜ್ಯವನ್ನು ಪಸರಿಸುವ ಕಷ್ಟಕರ ಹಾದಿ ತುಳಿದ ಇವರು ಏಳು ದಶಕಗಳ ಕಾಲ ನಮ್ಮ ನಾಡಿನಲ್ಲಿ ಜೀವ ಸವೆಸಿದವರು. ಅಂದು ನಮ್ಮ ನಾಡಿನಲ್ಲಿ ಕ್ರೈಸ್ತಧರ್ಮವು ಅದೇ ತಾನೇ ಪ್ರವರ್ಧಿಸುತ್ತಿತ್ತು. ಇಲ್ಲಿ ಧರ್ಮಪ್ರಚಾರ ನಡೆಸಿದ್ದ ಜೆಸ್ವಿತರು ತಂತಮ್ಮ ನಾಡುಗಳಿಗೆ ಹಿಂದಿರುಗಿ ಐವತ್ತು ವರ್ಷಗಳಾಗಿದ್ದವು. ಸ್ಥಳೀಯ ಕ್ರೈಸ್ತರು ಆಧ್ಯಾತ್ಮಿಕ ಪೋಷಣೆಯಿಲ್ಲದೆ ಜ್ಞಾನಸ್ನಾನ ಪೂಜೆ ಸತ್ಪ್ರಸಾದಗಳಿಲ್ಲದೆ ಮದುವೆ ಮತ್ತು ಸಾವುಗಳನ್ನು ಮಂತ್ರಿಸುವವರಿಲ್ಲದೆ ಸೊರಗಿದ್ದರು. ಉಪದೇಶಿಗಳಷ್ಟೇ ಜಪತಪಗಳನ್ನು ಮುಂದುವರಿಸಿದ್ದರು.
ಫ್ರಾನ್ಸ್ ದೇಶದ ಮಿಷನರಿಗಳು ಧರ್ಮಸೇವೆಯ ಹೊಣೆ ಹೊತ್ತುಕೊಂಡಿದ್ದರಾದರೂ ಅವರ ವ್ಯಾಪಕ ಚಟುವಟಿಕೆಗೆ ಅಪಾರ ಹಣ ಮತ್ತು ಗುರುವರ್ಯರ ಅವಶ್ಯಕತೆ ಇತ್ತು. ದೇಶೀಯ ಗುರುಗಳನ್ನು ಹುಟ್ಟುಹಾಕುವ ಪದ್ಧತಿ ಇನ್ನೂ ಶುರುವಾಗಿರಲಿಲ್ಲ. ಪ್ರತಿಯೊಂದಕ್ಕೂ ಯೂರೂಪಿನತ್ತಲೇ ನೋಡಬೇಕಾದಂಥ ಪರಿಸ್ಥಿತಿ ಇತ್ತು. ಫ್ರೆಂಚರು ವಸಾಹತು ಹೊಂದಿದ್ದ ಪಾಂಡಿಚೇರಿಯಲ್ಲಿ ಫ್ರೆಂಚ್ ಮಿಷನರಿಗಳು ಕೇಂದ್ರ ಕಚೇರಿ ಇಟ್ಟುಕೊಂಡು ಗುರುಗಳಿಗೆ ನಿರ್ದೇಶನ ನೀಡುತ್ತಿದ್ದರು. ಅಂಥ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ದ್ಯುಬುವಾ, ಶಾರ್ಬೊನೊ, ಶೆವಾಲಿಯೇ ಮುಂತಾದವರು ಕ್ರಿಸ್ತರಾಜ್ಯದ ಸಸಿಗೆ ನೀರೆರೆದು ಪೋಷಿಸಿದರು. ತೆಸಿಯೇ ಅವರು ಕೂಡಾ ಇಂಥ ಮಹನೀಯರಲ್ಲಿ ಒಬ್ಬರು.
೧೮೫೩ರಲ್ಲಿ ಫ್ರಾನ್ಸ್ ದೇಶದಲ್ಲಿ ಹುಟ್ಟಿದ ತೆಸಿಯೇ ಅವರು ತಮ್ಮ ಇಪ್ಪತ್ತಾರನೇ ವಯಸ್ಸಿನಲ್ಲಿ ಅಂದರೆ ೧೮೭೯ರಲ್ಲಿ ಗುರುಪಟ್ಟ ಪಡೆದು ಅದೇ ವರ್ಷ ಬೆಂಗಳೂರಿಗೆ ಬಂದರು. ಆರು ತಿಂಗಳ ಕಾಲ ಇಲ್ಲಿ ಕನ್ನಡವನ್ನು ಅಭ್ಯಸಿಸಿದ ಅವರು ಇಂದು ತಮಿಳುನಾಡಿಗೆ ಸೇರಿಹೋಗಿರುವ ಹೊಸೂರಿನ ಸಮೀಪದ ಮತ್ತಿಕೆರೆಗೆ ನಿಯುಕ್ತರಾದರು. ಹೊಸೂರಿಗೆ ಸಮೀಪವಿರುವ ಮತ್ತಿಕೆರೆ, ಮರಂದನಹಳ್ಳಿ, ದಾಸರಹಳ್ಳಿ, ತಳಿ ಮುಂತಾದ ಧರ್ಮಕೇಂದ್ರಗಳು ಅಂದು ಕನ್ನಡನಾಡಿನ ಭಾಗಗಳೇ ಆಗಿದ್ದು ಅಲ್ಲಿ ವಾಸಿಸುತ್ತಿದ್ದ ಕ್ರೈಸ್ತರು ಕನ್ನಡದಲ್ಲಿಯೇ ಜಪತಪಗಳನ್ನು ಮಾಡುತ್ತಿದ್ದರೆಂಬುದು ಗಮನಾರ್ಹ.
ಅಲ್ಲಿ ಕೆಲ ತಿಂಗಳು ಕಳೆದ ಮೇಲೆ ತೆಸಿಯೇ ಸ್ವಾಮಿಯವರನ್ನು ಶೀಮೊಗ್ಗೆಗೆ ಕಳಿಸಲಾಯಿತು. ಮಲೆನಾಡಿನ ಸುಂದರ ಪರಿಸರದಲ್ಲಿ ಮೂರುವರ್ಷಗಳ ಕಾಲ ಕ್ರಿಸ್ತನ ಸೇವೆ ಮಾಡಿದ ಆ ಉತ್ಸಾಹೀ ತರುಣ ೧೮೮೪ರ ಜನವರಿಗೆ ಬೆಂಗಳೂರಿನ ಶಿಲ್ವೆಪುರಕ್ಕೆ ಬಂದರು. ಆಗಷ್ಟೇ ಶಿಲ್ವೆಪುರವು ಕ್ಷಾಮ ಮತ್ತು ಪ್ಲೇಗಿನಿಂದ  ಅನಾಥರಾಗಿದ್ದವರ ಪುನರ್ವಸತಿ ಕೇಂದ್ರವಾಗಿ ರೂಪುಗೊಂಡಿತ್ತು. ಆ ಹೊಸ ಶಿಬಿರದ ಜನರಿಗೆ ಒಂದು ವರ್ಷಕಾಲ ಕೃಷಿ ಚಟುವಟಿಕೆಗಳ ಕುರಿತ ಮಾರ್ಗದರ್ಶನ ನೀಡಿದ ತೆಸಿಯೇ ಸ್ವಾಮಿಗಳು ೧೮೮೫ರ ಜೂನ್ ತಿಂಗಳಲ್ಲಿ ಶ್ರೀರಂಗಪಟ್ಟಣದ ಬಳಿಯ ಗಂಜಾಂ ಎಂಬ ಊರಿಗೆ ವರ್ಗವಾದರು.
 ಗಂಜಾಮು ಮೈಸೂರು ಪ್ರಾಂತ್ಯದ ಪ್ರಾಚೀನ ಕ್ರೈಸ್ತಕೇಂದ್ರ. ಅಲ್ಲಿದ್ದ ಕ್ರೈಸ್ತರೆಲ್ಲ ಸಿರಿವಂತ ಒಕ್ಕಲುಮಕ್ಕಳು. ಜೆಸ್ವಿತರ ನಿರ್ಗಮನದ ನಂತರ ತಮಗೆ ಗುರುಗಳ ಕೊರತೆಯಾದಾಗ ಟಿಪ್ಪುಸುಲ್ತಾನನ ಮೂಲಕ ಗೋವೆಯವರೆಗೂ ಅಹವಾಲು ಕೊಂಡೊಯ್ದ ಜನ ಅವರು. ಅಂಥಾ ಹೋರಾಟದ ಪರಂಪರೆಯುಳ್ಳ ಗಂಜಾಮು ತೆಸಿಯೇ ಅವರ ಕರ್ಮಭೂಮಿಯಾಯಿತು. ಅಲ್ಲಿದ್ದುಕೊಂಡೇ ಅವರು ಇಡೀ ಮೈಸೂರು ಜಿಲ್ಲೆಯಲ್ಲಿ ಸುತ್ತಾಡಿ ಕ್ರೈಸ್ತರಿಗೆ ಅಧ್ಯಾತ್ಮದ ಪೋಷಣೆ ಮಾಡಿದರು. ಕೊಡಗಿನ ಗಡಿಯ ಕಾಡುಕುರುಬರನ್ನು ಕ್ರೈಸ್ತಧರ್ಮಕ್ಕೆ ಬರಮಾಡಿಕೊಳ್ಳುವಲ್ಲಿ ಅವರ ಸಾಧನೆ ಗಣನೀಯ. ದೋರನಹಳ್ಳಿಯ ಸಂತ ಅಂತೋಣಿಯವರ ಪುಣ್ಯಕ್ಷೇತ್ರವನ್ನು ಜನಪ್ರಿಯಗೊಳಿಸಿ ಆಮೂಲಾಗ್ರವಾಗಿ ಅಭಿವೃದ್ಧಿಪಡಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ನಿರರ್ಗಳವಾಗಿ ಕನ್ನಡದಲ್ಲಿ ಮಾತನಾಡುತ್ತಾ ಜನಸಾಮಾನ್ಯರೊಂದಿಗೆ ಆತ್ಮೀಯರಾಗಿದ್ದ ತೆಸಿಯೇ ಸ್ವಾಮಿಯವರನ್ನು ಅಂದು ಮೈಸೂರು ಧರ್ಮಪ್ರಾಂತ್ಯದ ಬಿಷಪರಾಗಿದ್ದ ಕುವಾಡು (Mgr. Couadou) ಅವರು ೧೮೯೦ರಲ್ಲಿ ಎಂಟು ಜಿಲ್ಲೆಗಳ ಇಡೀ ಮೈಸೂರು ಪ್ರಾಂತ್ಯಕ್ಕೆ prosecutor ಆಗಿ ನೇಮಿಸಿ ಬಿಷಪರ ಮನೆಯಲ್ಲಿಯೇ ಅವರಿಗೊಂದು ಸ್ಥಾನ ಕಲ್ಪಿಸಿದರು.
ಸುಮಾರು ಇಪ್ಪತ್ತಾರು ವರ್ಷಗಳ ಕಾಲ ಅವರು ಈ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸಿದರಲ್ಲದೆ ಬೆಂಗಳೂರಿನ ಮಾರ್ಥಾ ಆಸ್ಪತ್ರೆಯಲ್ಲಿ ಆಧ್ಯಾತ್ಮಿಕ ಗುರುವಾಗಿಯೂ ಜನರಿಗೆ ಮಾರ್ಗದರ್ಶನ ನೀಡಿದರು. ಮಾರ್ಥಾ ಆಸ್ಪತ್ರೆಯಲ್ಲಿ ನರ್ಸಿಂಗ್ ಶಾಲೆಯನ್ನು ತೆರೆದು ನೂರಾರು ಹೆಣ್ಣುಮಕ್ಕಳಿಗೆ ಕೆಲಸ ಕಲ್ಪಿಸಿದರು. ದೇಶೀ ಹೆಣ್ಣುಮಕ್ಕಳಿಗಾಗಿಯೇ ಸಂತ ಫ್ರಾನ್ಸಿಸರ ಮೂರನೇ ಮಠವನ್ನು ಸ್ಥಾಪಿಸಿದರು. ಬೆಂಗಳೂರಿನ ಪ್ರಸಿದ್ಧ ಸಂತ ಜೋಸೆಫರ ಕಾಲೇಜನ್ನು ಕಟ್ಟಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ.
೧೯೧೬ರ ಸೆಪ್ಟೆಂಬರ್ ೪ನೇ ತಾರೀಖು ತೆಸಿಯೇ ಸ್ವಾಮಿಯವರ ಜೀವನದಲ್ಲಿ ಒಂದು ಮಹತ್ವದ ದಿನ. ಆ ದಿನ ಅವರು ಇಡೀ ಮೈಸೂರು ಪ್ರಾಂತ್ಯಕ್ಕೆ ಮೇತ್ರಾಣಿಯಾಗಿ ನೇಮಕಗೊಂಡರು. ನಿಜ ಹೇಳಬೇಕೆಂದರೆ ಬಿಷಪ್ ಪದವಿ ಅವರಿಗೆ ಹೂವಿನ ಹಾಸಿಗೆಯಾಗಿರಲಿಲ್ಲ. ಹಲವಾರು ಕಷ್ಟ ತೊಂದರೆಗಳನ್ನು ಅವರು ಎದುರಿಸಬೇಕಾಗಿತ್ತು. ಯೂರೋಪಿನಲ್ಲಿ ಮಹಾಯುದ್ಧ ನಡೆಯುತ್ತಿದ್ದ ಕಾರಣ ಜೀವನಾವಶ್ಯಕ ವಸ್ತುಗಳ ಕೊರತೆಯಿಂದ ಜನಜೀವನ ದುರ್ಭರವಾಗಿತ್ತು. ಗುರುಗಳ ಸಂಖ್ಯೆಯೂ ಕಡಿಮೆಯಿತ್ತು. ಯೂರೋಪಿನ ಸಹಾಯಧನ ನಿಂತುಹೋಗಿತ್ತು. ಇಂಥ ಕಠಿಣವಾದ ದಿನಗಳಲ್ಲಿ ತೆಸಿಯೇ ಸ್ವಾಮಿಗಳು ವಿಶಾಲ ಧರ್ಮಪ್ರಾಂತ್ಯವನ್ನು ತನ್ನ ಕಾಲುಗಳ ಮೇಲೆ ನಿಲ್ಲುವಂತೆ ಮಾಡಲು ಬಹುವಾಗಿ ಶ್ರಮಿಸಿದರು.
ಅವರ ೪೭ವರ್ಷಗಳ ದೀರ್ಘಕಾಲದ ಅವಿರತ ಸೇವೆಯ ಫಲವಾಗಿ ಅವಿಭಜಿತ ಮೈಸೂರು ಧರ್ಮಪ್ರಾಂತ್ಯವು ಇಡೀ ದೇಶದಲ್ಲಿಯೇ ಒಂದು ಮಾದರಿ ಧರ್ಮಪ್ರಾಂತ್ಯವಾಗಿ ರೂಪುಗೊಂಡಿತು ಎಂದರೆ ಅತಿಶಯವಲ್ಲ. ಹೀಗೆ ಯೇಸುಕ್ರಿಸ್ತನ ವಿನಮ್ರ ಸೇವಕನಾಗಿ ಹಗಲೂ ಇರುಳೂ ದುಡಿದ ಅವರು ೧೯೨೨ ಫೆಬ್ರವರಿ ೨೬ರಂದು ಸ್ವರ್ಗಸ್ಥರಾದರು. ಅಂದಿನ ಕಾಲದಲ್ಲಿ ಬಿಷಪರ ನಿವಾಸವೂ ಪ್ರಧಾನಾಲಯವೂ ಆಗಿದ್ದ ಸಂತ ಪ್ಯಾಟ್ರಿಕ್ಕರ ದೇವಾಲಯದ ಆವರಣದಲ್ಲಿಯೇ ಅವರನ್ನು ಮಣ್ಣುಮಾಡಲಾಗಿದೆ.
ಯಾವಾಗಲಾದರೂ ಆ ದೇವಾಲಯಕ್ಕೆ ಭೇಟಿ ನೀಡಿದಾಗ ಬಲಿಪೀಠದ ಬಳಿ ಬಲರೆಕ್ಕೆಯಲ್ಲಿ ತೆಸಿಯೇ ಸ್ವಾಮಿಗಳ ಸಮಾಧಿಕಲ್ಲನ್ನು ನೋಡಿ ನಮಿಸೋಣ. ನಮ್ಮ ನಾಡಿನಲ್ಲಿ ಕ್ರೈಸ್ತಧರ್ಮವು ಬಲವಾಗಿ ಬೇರೂರಲು ಶ್ರಮವಹಿಸಿ ನೀರೆರೆದ ಒಬ್ಬ ಮಹಾನ್ ದೇವಸೇವಕನನ್ನು ಹೃತ್ಪೂರ್ವಕವಾಗಿ ಸ್ಮರಿಸೋಣ. 

ಬುಧವಾರ, ಡಿಸೆಂಬರ್ 7, 2011

ಮಿಶನರಿ ಯಾತ್ರೆಯ ಹಿಂದೆ


೧೫-೧೬ನೇ ಶತಮಾನಗಳಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ಐರೋಪ್ಯರು ಹೊಸಹೊಸ ಜಲಮಾರ್ಗಗಳನ್ನು ಕಂಡುಹಿಡಿದು ವಿವಿಧ ಖಂಡಗಳನ್ನು ತಲುಪಿ ಅಲ್ಲೆಲ್ಲಾ ತಮ್ಮ ಕೋಠಿಗಳನ್ನು ಸ್ಥಾಪಿಸಿಕೊಂಡರು. ಅವರೊಂದಿಗೆ ಅವರ ವಾಣಿಜ್ಯ ಹಡಗುಗಳಲ್ಲಿ ಕ್ರೈಸ್ತ ಧರ್ಮಪ್ರಚಾರದ ಅಭಿಲಾಷೆಯುಳ್ಳ ಪಾದ್ರಿಗಳೂ ಸ್ವಯಿಚ್ಛೆಯಿಂದ ಪ್ರಯಾಣಿಸಿ ಹೊಸ ದೇಶಗಳ ಒಳನಾಡನ್ನೆಲ್ಲ ಸುತ್ತಿದರು.
ಹಾಗೆ ಇಂಡಿಯಾ ದೇಶಕ್ಕೆ ಜಲಮಾರ್ಗವಾಗಿ ಬಂದವರಲ್ಲಿ ಪೋರ್ಚುಗೀಸರೇ ಮೊದಲಿಗರು. ೧೪೯೮ರಲ್ಲಿ ವಾಸ್ಕೊ ಡ ಗಾಮನು ಕಲ್ಲಿಕೋಟೆಯಲ್ಲಿ ಲಂಗರು ಹಾಕುವುದರೊಂದಿಗೆ ಇಂಡಿಯಾದ ನೆಲದಲ್ಲಿ ಹೊಸ ಗಾಳಿ ಬೀಸುವುದಕ್ಕೆ ಕಾರಣಕರ್ತನಾದನು. ಪೋರ್ಚುಗೀಸ್ ಸರ್ಕಾರದ ವತಿಯಿಂದ ನಡದ ಇಂತಹ ಸಾಹಸೀ ಜಲಯಾತ್ರೆಗಳನ್ನು ಕ್ರೈಸ್ತ ಜಗದ್ಗುರು ಪೋಪರೂ ಹರಸಿ ಆಶೀರ್ವದಿಸಿದ್ದರು. ಅಂತೆಯೇ ಹೊಸದಾಗಿ ಕಂಡುಹಿಡಿವ ದೇಶಗಳಲ್ಲಿ ಧರ್ಮಪ್ರಚಾರಕರಿಗೆ ಸಹಕಾರ ನೀಡಬೇಕೆನ್ನುವ ಕ್ರೈಸ್ತ ಜಗದ್ಗುರುಗಳ ಮನವಿಯನ್ನು ಧರ್ಮಭೀರುಗಳಾದ ಪೋರ್ಚುಗೀಸರು ಶಿರಸಾವಹಿಸಿ ಪಾಲಿಸಿದ್ದರಲ್ಲಿ ಅತಿಶಯವೇನೂ ಇಲ್ಲ.
ಅಲ್ಲದೆ ವರ್ತಕರ ಮತ್ತು ಧರ್ಮಪ್ರಚಾರಕರ ನಡುವೆ ಒಂದು ಕಂಡೂ ಕಾಣದ ಒಳ ಒಪ್ಪಂದವಿದ್ದಂತೆಯೂ ತೋರುತ್ತದೆ. ಧರ್ಮಪ್ರಚಾರಕರು ಮಳೆಬಿಸಿಲೆನ್ನದೆ ಹಸಿವು ನೀರಡಿಕೆಯೆನ್ನದೆ ಕಾಡುಮೇಡುಗಳೆನ್ನದೆ ಸುತ್ತಿ ಕ್ರಿಸ್ತಸಂದೇಶವನ್ನು ಪ್ರಚಾರ ಮಾಡುತ್ತಿದ್ದರು. ಪಾದ್ರಿಗಳ ಕೆಲಸದಲ್ಲಿ ತ್ಯಾಗ ಬಲಿದಾನಗಳೇ ಮೇಲುಗೈಯಾದರೆ ಅದೇ ವೇಳೆಯಲ್ಲಿ ಸಮಾನಸಾಹಸಿಗಳಾಗಿದ್ದ ವಾಣಿಜ್ಯ ಯಾತ್ರಿಗಳಲ್ಲಿ ಧನದಾಹದ ಸ್ವಾರ್ಥ ಮೇಲಾಟ ನಡೆಸಿದ್ದವು. ಆದರೂ ಈ ವರ್ತಕರು ಧರ್ಮಪ್ರಚಾರಕರನ್ನು ಅತ್ಯಂತ ಗೌರವದಿಂದ ಪರಿಭಾವಿಸುತ್ತಿದ್ದರು. ವರ್ತಕರ ಹಡಗುಗಳಲ್ಲಿ ಪಾದ್ರಿಗಳು ಪತ್ರಗಳನ್ನು, ಬಟ್ಟೆಬರೆಗಳನ್ನು, ಔಷಧಿ ಉಡುಗರೆ ಪೂಜಾಸಾಮಗ್ರಿಗಳನ್ನು ಉಚಿತವಾಗಿ ಸಾಗಿಸಬಹುದಿತ್ತು. ಅವರು ಒಂದು ಪೆಟ್ಟಿಗೆಯ ಮೇಲೆ ವಿಳಾಸದಾರರ ಹೆಸರು ಬರೆದು ಹಡಗಿನ ಸಿಬ್ಬಂದಿಗೆ ನಿಶ್ಚಿಂತೆಯಿಂದ ಒಪ್ಪಿಸಿಬಿಟ್ಟರೆ ಸಾಕಿತ್ತು, ಅದರೊಳಗೇನಿದೆ ಎಂದು ವಿಚಾರಿಸುವ ಗೊಡವೆಗೇ ಹೋಗದೆ ಅದು ವಿಳಾಸದಾರರಿಗೆ ಖಂಡಿತ ತಲುಪುತ್ತಿತ್ತು. ಹೀಗೆ ಇಂದಿನ ಕೊರಿಯರ್ ಸೇವೆಯ ಮೂಲಬೇರುಗಳನ್ನು ನಾವಿಲ್ಲಿ ಕಾಣಬಹುದು. 
ವರ್ತಕ ಸಮುದಾಯವು ತಮಗಾಗಿ ಇಷ್ಟನ್ನೆಲ್ಲ ಮಾಡುವಾಗ ಅವರ ಋಣ ತೀರಿಸಲು ಪಾದ್ರಿ ಸಮುದಾಯವು ತಾನೂ ಏನಾದರೂ ಮಾಡಬೇಕಲ್ಲವೇ?  ಅವರು ತಾವು ಸಂದರ್ಶಿಸಿದ ಪ್ರಾಂತ್ಯಗಳ ರಾಜನೊಂದಿಗೆ ಸಂವಾದಿಸಿ ರಾಯಭಾರಿಯ ಕೆಲಸ ಮಾಡುತ್ತಿದ್ದರು. ಆ ರಾಜನನ್ನು ಭೇಟಿಯಾದಾಗ ಚಿನ್ನಬೆಳ್ಳಿಯ ಕುಸುರಿವಸ್ತುಗಳು, ಬೆಲೆಬಾಳುವ ವಸ್ತ್ರಗಳು, ವಿಶೇಷವಾಗಿ ಭಟ್ಟಿಯಿಳಿಸಿದ ಮದ್ಯ ಮುಂತಾದವುಗಳನ್ನು ಉಡುಗರೆಯಾಗಿ ನೀಡಲಾಗುತ್ತಿತ್ತು. ಈ ವಸ್ತುಗಳನ್ನು ವರ್ತಕ ಸಿಬ್ಬಂದಿಯೇ ಒದಗಿಸುತ್ತಿದ್ದಂತೆ ತೋರುತ್ತದೆ. ಆ ಮೂಲಕ ಆ ರಾಜರುಗಳೊಂದಿಗೆ ದೌತ್ಯದಲ್ಲಿ ಯಶರಾಗುತ್ತಿದ್ದ ಪಾದ್ರಿಗಳು ಅವರ ನಾಡಿನಲ್ಲಿ ಮುಕ್ತವಾಗಿ ಸಂಚರಿಸಲು ಸನ್ನದು ಪಡೆಯುತ್ತಿದ್ದರು ಮತ್ತು ಅದೇ ವೇಳೆಯಲ್ಲಿ ಆ ರಾಜರು ತಮ್ಮ ಸೇನಾಪಡೆಯನ್ನು ಮೇಲ್ದರ್ಜೆಗೇರಿಸಲು ವರ್ತಕರೊಂದಿಗೆ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದರು. ವಿಜಯನಗರದ ಅರಸನು ತನ್ನ ಓರಗೆಯ ಬಿಜಾಪುರ ಸುಲ್ತಾನನ್ನು ಮಣಿಸಲು ಪೋರ್ಚುಗೀಸರಿಂದ ಕುದುರೆಗಳನ್ನೂ ಮದ್ದುಗುಂಡುಗಳನ್ನೂ ಖರೀದಿಸಿದ ಉದಾಹರಣೆ ಇತಿಹಾಸದಲ್ಲಿ ದಾಖಲಾಗಿದೆ.
ಹೀಗೆ ಪೋರ್ಚುಗೀಸರು ಇಂಡಿಯಾ ದೇಶಕ್ಕೆ ತಾವು ಕಂಡುಕೊಂಡ ಜಲಮಾರ್ಗಕ್ಕೆ ಪೋಪ್ ಜಗದ್ಗುರುಗಳಿಂದ ವಿಶೇಷ ಪರ್ಮಿಟ್ಟು ಮಾಡಿಕೊಂಡಿದ್ದರಲ್ಲವೇ? ಅವರು ಅಂದು ಪೋಪ್ ಜಗದ್ಗುರುಗಳಿಗೆ ಇಂಡಿಯಾ, ಸಿಲೋನ್, ಬರ್ಮಾ, ಚೀನಾ, ಜಪಾನ್ ದೇಶಗಳನ್ನು ಒಟ್ಟು ಸೇರಿಸಿ ಈ ಅಗಾಧವಾದ ಪ್ರದೇಶವನ್ನು ಒಂದು ಪುಟ್ಟ ಭೂಭಾಗದಂತೆ ತೋರಿಸಿದ ಭೂಪಟವನ್ನು ತಯಾರಿಸಿ ಧರ್ಮಪ್ರಚಾರದ ಹಕ್ಕನ್ನು ಪಡೆದಿದ್ದರು. ಹೀಗೆ ಅವರು ಯೂರೋಪಿನಲ್ಲಿ ಸಂಬಾರ ಪದಾರ್ಥಗಳನ್ನು ವಿಕ್ರಯಿಸುವ ಏಕೈಕ ದೊರೆಗಳಾಗಿ ಮೆರೆಯಲು ತೊಡಗಿದಾಗ ಚಿನ್ನದ ಹುಡುಕಾಟದಲ್ಲಿ ತೊಡಗಿದ್ದ ಸ್ಪೇನ್, ಇಂಗ್ಲೆಂಡ್ ಮತ್ತು ಫ್ರಾನ್ಸ್ ಮುಂತಾದ ದೇಶಗಳಿಗೆ ಕಣ್ಣುಕಿಸುರಾಗಿದ್ದರಲ್ಲಿ ಅಚ್ಚರಿಯೇನಿಲ್ಲ. ಅವರೂ ಇಂಡಿಯಾದತ್ತ ಮುಖ ಮಾಡಲಾರಂಭಿಸುತ್ತಿದ್ದಂತೆ ಪೋರ್ಚುಗೀಸರಿಗೆ ಆತಂಕ ಶುರುವಾಯಿತು.
ಇಂಡಿಯಾದ ಜಲಮಾರ್ಗದಲ್ಲಿ ಆ ಇನ್ನಿತರರೂ ಪಯಣಿಸಿದರೆ ಇಂಡಿಯಾ ಸೇರಿದಂತೆ ಜಪಾನ್ ವರೆಗಿನ ಭೂಮಾಪನದ ಅಳತೆ ಸಿಕ್ಕಿ ಪೋಪರೆದುರು ಮುಖಭಂಗವಾಗುವುದು ಮಾತ್ರವಲ್ಲ, ಸಿಗುತ್ತಿದ್ದ ವರಮಾನದಲ್ಲಿ ಕಡಿತ ಉಂಟಾಗುವುದು ಅವರಿಗೆ ಬೇಡವಾಗಿತ್ತು. ಅದಕ್ಕಾಗಿ ಅವರು ಇಂಗ್ಲಿಷರು ಮತ್ತು ಫ್ರೆಂಚರ ವಿರುದ್ಧ ಕ್ರೈಸ್ತ ಜಗದ್ಗುರು ಪೀಠಕ್ಕೆ ಒತ್ತಡ ತರಲೆತ್ನಿಸಿದರು. ತಾವೇ ಕ್ರೈಸ್ತ ಧರ್ಮರಕ್ಷಕರು, ಈ ಆಂಗ್ಲರು ಮತ್ತು ಫ್ರೆಂಚರು ಪಾಷಂಡಿಗಳು ಎನ್ನುವ ಅಭಿಪ್ರಾಯವನ್ನು ಬಿಂಬಿಸಲು ಸಹಾ ಅವರು ಹಿಂಜರಿಯಲಿಲ್ಲ.
ಒಂದು ಶತಮಾನದ ಕಾಲ ಇಲ್ಲಿ ನೆಲೆನಿಂತು ಅಪಾರ ಹಣಗಳಿಸಿದರೂ ಧರ್ಮಪ್ರಚಾರಕ್ಕೆ ನೀಡಿದ ಕೊಡುಗೆ ಏನು ಎಂಬ ಪ್ರಶ್ನೆಗೆ ಇಂಕ್ವಿಸಿಷನ್ ಎಂಬ ಬಲವಂತ ದೀಕ್ಷೆ ಉತ್ತರವಾಯಿತೇ? ಅಲ್ಲದೆ ಪೋರ್ಚುಗೀಸ್ ರಾಜಕಾರಣವು ವ್ಯಾಟಿಕನ್ನಿನ ಕ್ರೈಸ್ತ ಜಗದ್ಗುರುಪೀಠದ ಆಡಳಿತದಲ್ಲೂ ಕೈಹಾಕಿ ಪೋಪರ ಮತ್ತು ಬಿಷಪರ ಆಯ್ಕೆಗಳನ್ನು ಪೋರ್ಚುಗೀಸ್ ರಾಜಕಾರಣದ ದಾಳದಂತೆಯೇ ನಡೆಸಿಕೊಂಡದ್ದೂ ಸುಳ್ಳೇನಲ್ಲ. ಅದೇ ರಾಜಕೀಯ ಹುನ್ನಾರದ ಫಲವಾಗಿಯೇ ಜಗದ್ಗುರುಪೀಠವು ತನಗೆ ನಿಷ್ಠರಾಗಿದ್ದ ಯೇಸುಸಭೆಯನ್ನು ಬಹಿಷ್ಕರಿಸಿತ್ತು ಎಂಬುದಂತೂ ಕಟುಸತ್ಯ.
ಕೊನೆಗೂ ರೋಮಾಪುರಿಯ ಈ ಜಗದ್ಗುರುಪೀಠವು ಆ ಕಬಂಧಬಾಹುವಿನಿಂದ ಹೊರಬಂದು ತನ್ನ ಕಾಲಮೇಲೆ ನಿಲ್ಲುವ ಮುನ್ನ ಶತಮಾನಗಳ ಕಾಲ ಪಾದ್ರುವಾದೆ ಮತ್ತು ಪ್ರಾಪಗಾಂಡಾಗಳ ನಡುವಿನ ಶೀತಲಸಮರವನ್ನು ಎದುರಿಸಬೇಕಾಯಿತೆಂಬುದು ಇತಿಹಾಸ.

ಗುರುವಾರ, ಡಿಸೆಂಬರ್ 1, 2011

ಮಣ್ಣಿನ ದಾಖಲೆ


ಕ್ರೈಸ್ತಧರ್ಮ ನಮ್ಮ ನೆಲದ ಧರ್ಮವಲ್ಲ. ನಮ್ಮ ಮಣ್ಣಿನ ಧರ್ಮಗಳಲ್ಲಾದರೆ ಧರ್ಮಸಂಹಿತೆಗಿಂತಲೂ ಹೆಚ್ಚಾಗಿ ಪುರಾಣಪುಣ್ಯ ಕತೆಗಳು, ಉಪಕತೆಗಳು, ನೀತಿಪ್ರಧಾನ ಪ್ರಸಂಗಗಳು ಜನಜನಿತವಾಗಿವೆ. ಆದರೆ ಕ್ರೈಸ್ತಧರ್ಮವನ್ನು ಪ್ರಚುರಪಡಿಸಿದ ವಿದೇಶೀಯರು ತಮ್ಮ ಪಾಶ್ಚಾತ್ಯ ದೇಶಗಳ ಶೈಲಿಯಲ್ಲೇ ವಿಷಯ ನಿರ್ದುಷ್ಟ ಕಟ್ಟುಪಾಡಿಗೆ ಒಳಗಾದವರು. ಅದರ ಜೊತೆಜೊತೆಗೇ ಅವರು ನಮ್ಮ ನಾಡಿಗೆ ಬಂದಾಗ ಅವರಿಗೆ ಭಾಷೆಯ/ಭಾಷಾಂತರದ ಸಂದಿಗ್ದತೆಯೂ ಕಾಡುತ್ತಿತ್ತು. ಈ ಒಂದು ಹಿನ್ನೆಲೆಯಲ್ಲಿ ಆ ಕಾಲದ ಸಂದರ್ಭವನ್ನು ವಿವೇಚಿಸಿದಾಗ ವಿದೇಶೀ ಪಾದ್ರಿಗಳು ಹಾಗೂ ಕ್ರೈಸ್ತ ಜನಸಾಮಾನ್ಯರ ನಡುವೆ ಸ್ಥಳೀಯರೇ ಆದ ಉಪದೇಶಿಗಳು ಪ್ರಮುಖ ಸೇತುವೆಯಾಗಿ ನಿಲ್ಲುವುದನ್ನು ಕಾಣುತ್ತೇವೆ.
ಒಂದೆಡೆ ಈ ಉಪದೇಶಿಗಳು ವಿದೇಶೀ ಪಾದ್ರಿಗಳಿಗೆ ಕನ್ನಡ ಕಲಿಸುವ ಗುರುಗಳಾಗಿದ್ದರೆ ಅದೇ ನೇರದಲ್ಲಿ ಆ ಪಾದ್ರಿಗಳು ಹೇಳುವ ತತ್ತ್ವಗಳಿಗೆ ದೇಶೀಯ ನೆಲೆಯಲ್ಲಿ ತಕ್ಕ ಪದಗಳನ್ನು ಸಂಯೋಜಿಸಿ ಜನರಿಗೆ ತಲಪಿಸುವ ಹೊಣೆಗಾರಿಕೆಯುಳ್ಳವರೂ ಆಗಿದ್ದರು.
ನಮ್ಮ ದೇಶೀಯ ಸಮಾಜಕ್ಕೆ ಅತಿ ಪುರಾತನ ಧಾರ್ಮಿಕ ಆಕರಗಳೆಂದರೆ ವೇದಗಳು, ಧರ್ಮಪ್ರವರ್ತನ ಸೂತ್ರ, ತೀರ್ಥಂಕರ ಚರಿತ್ರೆ, ಷಟ್‌ಸ್ಥಲಸಿದ್ಧಾಂತ ಮತ್ತು ದ್ವೈತಾದ್ವೈತಗಳು. ಇವೆಲ್ಲವುಗಳಲ್ಲಿ ಅತಿ ಪ್ರಾಚೀನವಾದುದು ವೇದಗಳೇ ಆದ್ದರಿಂದ ಕ್ರೈಸ್ತರ ಧರ್ಮಗ್ರಂಥವನ್ನು ವೇದಗಳಿಗೆ ಸಮನಾಗಿ ಪರಿಗಣಿಸುವುದಾಗಲೀ ಅಥವಾ ಚತುರ್ವೇದಗಳ ಸಾಲಿನಲ್ಲಿಟ್ಟು ಸತ್ಯವೇದ ಎಂದು ಕರೆಯುವುದಾಗಲೀ ಈ ಉಪದೇಶಿಗಳಿಂದಲೇ ಸಾಧ್ಯ. ಆದರೆ ಕನ್ನಡನಾಡು ಮಾತ್ರವಲ್ಲ ಇಡೀ ದಕ್ಷಿಣ ಇಂಡಿಯಾದಲ್ಲಿ ಕ್ರೈಸ್ತಧರ್ಮ ಪ್ರಚಾರವನ್ನು ನಡೆಸಿದ ಜೆಸ್ವಿತರಾಗಲೀ ಫ್ರೆಂಚ್ ಮಿಷನ್ನಿನವರಾಗಲೀ ಯಾರೂ ಈ ಉಪದೇಶಿಗಳನ್ನು ತಮ್ಮ ವರದಿಗಳಲ್ಲಿ ದಾಖಲಿಸಲಿಲ್ಲವೆನ್ನುವುದು ವಿಷಾದಕರ ಸಂಗತಿ.
ಮೇಲೆ ಹೇಳಿದ ಮತಪ್ರಚಾರಕರಿಗೆ ತಾವು ಎಷ್ಟು ಮಂದಿಗೆ ಕ್ರೈಸ್ತದೀಕ್ಷೆ ಕೊಟ್ಟೆವೆನ್ನುವ ಅಂಕಿಸಂಖ್ಯೆಗಳೇ ಮುಖ್ಯವಾಗುತ್ತವೆ ಹೊರತು ಎಂಥಾ ಜನರಿಗೆ ತಾವು ದೀಕ್ಷೆಯನ್ನು ಧಾರೆ ಎರೆದೆವೆನ್ನುವುದು ಮುಖ್ಯವಾಗುವುದಿಲ್ಲ. ಹಾಗೇನಾದರೂ ಉಲ್ಲೇಖವಿದ್ದಲ್ಲಿ ವ್ಯಕ್ತಿಯೊಬ್ಬನ ದೀಕ್ಷಾಸಂದರ್ಭದಲ್ಲಿ ನಡೆದ ಘರ್ಷಣೆ, ಅಲ್ಲಿನ ಪಾಳೇಗಾರನ ಅಥವಾ ಜನನಾಯಕನ ಅಥವಾ ಅರಸನ ಪಾತ್ರಗಳು ಚಿತ್ರಿತವಾಗುವ ಸಂದರ್ಭದಲ್ಲಿ ಪ್ರಾಸಂಗಿಕವಾಗಿ ಆ ವ್ಯಕ್ತಿಯನ್ನು ಉಲ್ಲೇಖಿಸಲಾಗಿರುತ್ತದೆ. ಇನ್ನೆಲ್ಲಿಯೂ ಹೊಸಕ್ರೈಸ್ತರ ಮೂಲಹೆಸರುಗಳನ್ನು ಪ್ರಸ್ತಾಪಿಸಿರುವುದೇ ಇಲ್ಲ. ಹೀಗೊಬ್ಬ ಬ್ರಾಹ್ಮಣ ಕ್ರೈಸ್ತನಾದ, ಹೀಗೊಬ್ಬ ಶೈವಸಂನ್ಯಾಸಿ ಕ್ರೈಸ್ತನಾದ, ಅಲ್ಲೊಬ್ಬ ಹೆಂಗಸು ಕ್ರೈಸ್ತಳಾದಳು, ಈ ಊರಿನಲ್ಲಿ ಇಷ್ಟು ಸಂಖ್ಯೆಯ ಮಂದಿ ಕ್ರೈಸ್ತರಾದರು ಎಂಬುದನ್ನಷ್ಟೇ ಕಾಣುತ್ತೇವೆ.
ಆಮೇಲೆ ಆ ಹೊಸಕ್ರೈಸ್ತರ ಪಾಡೇನಾಯಿತು, ಅವರ ಬದುಕು ಆಚಾರ ವಿಚಾರಗಳು ತೀವ್ರತರ ಬದಲಾವಣೆಗಳನ್ನು ಕಂಡವೇ, ಅವರಿಂದ ಸೃಷ್ಟಿಯಾದ ಜನಪದವೇನಾದರೂ ಇತ್ತೇ, ಅವರ ಧರ್ಮದೊಂದಿಗೇನೆ ಜನಪದವೂ ಮುಂಪೀಳಿಗೆಗಳಿಗೆ ಹರಿದು ಬಂತೇ ಎಂಬುದನ್ನು ತಿಳಿಸುವ ದಾಖಲೆಗಳಿಲ್ಲ. 

ಸೋಮವಾರ, ಅಕ್ಟೋಬರ್ 17, 2011

ಜೇನಿನ ರುಚಿಗಿಂತ


ಬೊಂಬಾಯಿನ ಕೊಲಾಬಾದಲ್ಲಿ ಸಾಗರ್ ಎಂಬೋ ನೌಕಾದಳದ ಅತಿಥಿಗೃಹದಲ್ಲಿ ನಾನು ಕೆಲ ದಿನಗಳ ವಾಸ್ತವ್ಯ ಹೊಂದಿದ್ದೆ. ಅದರ ಎಂಟನೇ ಮಹಡಿಯ ಕಿಟಕಿಯಲ್ಲಿ ನಿಂತು ಸನಿಹದಲ್ಲೇ ಕಾಣುತ್ತಿದ್ದ ರಾಜಾಭಾಯ್ ಗಡಿಯಾರ ಗೋಪುರವನ್ನು ನೋಡುತ್ತಲಿದ್ದೆ. ಅತಿಥಿಗೃಹದ ಕೆಳಗಿನ ಉದ್ಯಾನದಲ್ಲಾಗುತ್ತಿದ್ದ ಗದ್ದಲ ಇಲ್ಲಿಗೂ ಕೇಳಿಸುತ್ತಿತ್ತು. ಆ ಉದ್ಯಾನ ಹಾಗೂ ಅದಕ್ಕೆ ಸೇರಿದ ಸಭಾಂಗಣವು ಸಂಜೆಯಾಗುತ್ತಿದ್ದಂತೆ ಕುಡಿತದ ಕೇಕೆಯ ಹಾಗೂ ಔತಣದ ತಾಣವಾಗುತ್ತಿತ್ತು. ದಿನಗಟ್ಟಲೆ ಸಮುದ್ರದ ಏಕತಾನತೆಯಲ್ಲಿ ಸೋತ ನಾವಿಕರು ದಡಕ್ಕೆ ಬಂದು ಶುಭ್ರವಾದ ಬಟ್ಟೆ ತೊಟ್ಟುಕೊಂಡು ನಗರವನ್ನೆಲ್ಲ ಅಂಡಲೆದು ಕೊನೆಗೆ ಸಂಜೆಯಾಗುತ್ತಿದ್ದಂತೆ ಇಲ್ಲಿ ಸೇರುತ್ತಾರೆ.
ಸಭಾಂಗಣದಲ್ಲಿ ಬೃಹತ್ ಪರದೆಗಳ ಮೇಲೆ ಪ್ರಚಲಿತ ಜನಪ್ರಿಯ ಟಿವಿ ಶೋ ಇದ್ದರೂ ಅದರತ್ತ ಯಾರೂ ನೋಡುವವರಿಲ್ಲ. ಅಲ್ಲ, ಮಾತನಾಡಲಿಕ್ಕೆ ಏನೆಲ್ಲ ವಿಷಯಗಳುಂಟು, ಟಿವಿ ತಾನೇ ಯಾರಿಗೆ ಬೇಕು? ಮೋಜು, ಕುಣಿತ, ಕುಡಿತ, ಧೂಮಲೀಲೆ ಹಾಗೂ ಭರ್ಜರಿ ಬಾಡೂಟವಿರುವಾಗ ನಗು ಕೇಕೆ ಹರಟೆಗಳ ನಡುವೆ ಟಿವಿ ಅದರ ಪಾಡಿಗೆ ಅದು ಚಾಲನೆಯಲ್ಲಿರುತ್ತದೆ. ಎಲ್ಲೋ ಒಬ್ಬೊಬ್ಬರು ನಡುವಯಸ್ಸಿನ ಅಬ್ಬೇಪಾರಿಗಳು ಒಂಟಿಯಾಗಿ ಮಧು ಹೀರುತ್ತಾ ಮನೆಯ ನೆನಪುಗಳನ್ನು ನವೀಕರಿಸುತ್ತಾ ಗೆಳೆಯರಿಗಾಗಿ ಕಾಯುತ್ತಾ ಕುಳಿತಿರುತ್ತಾರೆ. ಅಂಥ ಒಂಟೆತ್ತಿನ ಮೇಜಿನಲ್ಲಿ ಕುಳಿತು ಊಟ ಮುಗಿಸಿದವನು ಮೇಲೆ ಹೋಗಿ ಬೃಹತ್ ಬೊಂಬಾಯಿ ನಗರದ ದೀಪದೃಶ್ಯಗಳನ್ನು ನೋಡುವುದೇ ಚೆಂದ. ಆದರೆ ಇಂದು ಎಂಟನೇ ಮಹಡಿಯಲ್ಲಿ ಇನ್ನೊಬ್ಬ ಸ್ನೇಹಿತನಿಗಾಗಿ ನಿರೀಕ್ಷಿಸುತ್ತ ಕಿಟಕಿಯಾಚೆ ನೋಡುತ್ತಿದ್ದೆ.
ಆ ಸಮಯದಲ್ಲೇ ನನ್ನ ಮೊಬೈಲು ರಿಂಗಣಿಸಿತು. ಮನೆಯಿಂದ ಅಂದರೆ ಬೆಂಗಳೂರಿನಿಂದ ಬಂದ ಕರೆ. ನಾನು ಮಾತನಾಡಿ ಮುಗಿಸಿದ ನಂತರ ಒಬ್ಬ ನಡುವಯಸ್ಕ ನನ್ನ ಬಳಿಗೆ ಬಂದು ’ನೀವು ಕ್ರಿಶ್ಚಿಯನ್ನಾ?’ ಎಂದು ಕೇಳಿದ. ನಾನು ಮುಗುಳ್ನಗುತ್ತಾ ಹೌದೆಂದು ತಲೆಯಾಡಿಸಿದೆ. ನನ್ನ ಹೆಸರನ್ನು ಹೊರತುಪಡಿಸಿದರೆ ಮುಖಚಹರೆಯಿಂದ ಅಥವಾ ಮಾತುಗಾರಿಕೆಯಿಂದ ಯಾರೂ ಇದುವರೆಗೆ ನನ್ನನ್ನು ಕ್ರಿಶ್ಚಿಯನ್ ಎಂದು ಗುರುತಿಸಿಲ್ಲ. ಆದರೆ ಈ ವ್ಯಕ್ತಿ ಅದು ಹೇಗೆ ನನ್ನನ್ನು ಕ್ರಿಶ್ಚಿಯನ್ ಎಂದುಕೊಂಡ? ಅದಕ್ಕವನು ಉತ್ತರಿಸುತ್ತಾ ನಿಮ್ಮ ಮೊಬೈಲಿನ ರಿಂಗ್ ಟೋನ್ ಕೇಳಿ ಹಾಗಂದುಕೊಂಡೆ ಎಂದ.
ತುಂಬಾ ಜನಪ್ರಿಯವಾಗಿರುವ ಒಂದು ಕ್ರೈಸ್ತ ಭಕ್ತಿಗೀತೆಯ ರಾಗವನ್ನು ನನ್ನ ಮೊಬೈಲಿಗೆ ಅಳವಡಿಸಿಕೊಂಡಿದ್ದೇನೆ. ’ಜೇನಿನ ರುಚಿಗಿಂತ ಯೇಸು ಸುನಾಮವು ದಿವ್ಯ ಮಧುರವಾದ್ದೇ’ ಅನ್ನೋ ಆ ರಾಗವನ್ನು ನೀವೆಲ್ಲ ಕೇಳಿರುತ್ತೀರಿ. ವಿಚಿತ್ರವೆಂದರೆ ನನ್ನ ತಮಿಳು ಸಹೋದ್ಯೋಗಿಯಿಂದ ಆ ರಾಗವನ್ನು ಪಡೆದುಕೊಂಡಿದ್ದೆ, ತಮಿಳಿನಲ್ಲೂ ಈ ರಾಗದ ಗೀತೆಯೊಂದಿದೆ. ಅದೇ ರಾಗದ ಹಾಡು ಮಲಯಾಳದಲ್ಲೂ ಇದೆಯೆಂಬುದು ಇದೀಗ ಈ ವ್ಯಕ್ತಿಯಿಂದ ತಿಳಿಯಿತು. ಮಲೆಯಾಳದಲ್ಲಿ ಅತ್ಯಂತ ಜನಪ್ರಿಯವಾಗಿರುವ ಆ ಕ್ರೈಸ್ತ ಭಕ್ತಿಗೀತೆಯನ್ನು ಇಲ್ಲಿ ನೀಡಿದ್ದೇನೆ. ಜಯನ್ ಎಂಬವರು ಅದನ್ನು ರಚಿಸಿದ್ದಾರೆ. ಎರಡು ಬಗೆಯ ರಾಗಗಳಲ್ಲಿ ಅದು ಪ್ರಚಾರದಲ್ಲಿದೆ. ಪಾಶ್ಚಾತ್ಯ ಶೈಲಿಯ ರಾಗಲ್ಲಿರುವುದನ್ನು ಕೇಳಿದ ನಂತರ
ಯೇಸುದಾಸ್ ಹಾಡುವ ದೇಶಿ ಶೈಲಿಯ ಈ ಗೀತೆಯನ್ನು ಕೇಳಿರಿ.
ಗೀತೆಯ ಪಠ್ಯವನ್ನು ಇಲ್ಲಿ ಕೊಟ್ಟಿದ್ದೇನೆ:
ಎನ್ದತಿಶಯಮೇ ದೈವತ್ತಿನ್ ಸ್ನೇಹಂ
ಎತ್ರ ಮನೋಹರಮೇ, ಅದು
ಚಿನ್ತಯಿಲ್ ಅಡಙ್ಙಾ ಸಿನ್ಧುಸಮಾನಮಾಯ್
ಸನ್ತತಮ್ ಕಾಣುನ್ನು ಞಾನ್
ದೈವಮೇ ನಿನ್ ಮಹಾ ಸ್ನೇಹಮ್ ಅದಿನ್ ವಿಧಂ
ಆರ್ಕು ಗ್ರಹಿಚ್ಚರಿಯಾಮ್
ಎನಿಕ್ಕಾವದಿಲ್ಲೇ ಅದಿನ್ ಆೞಮಳನ್ನಿಡಾನ್
ಎತ್ರ ಬಹುಲಮದು
ಮೋದಮೆೞುಂ ತಿರುಮಾರ್ವಿಲ್ ಉಲ್ಲಾಸಮಾಯ್
ಸಂತತಂ ಚೇರ್ನಿರುನ್ನ, ಏಕ
ಜಾತನಾಮೇಶುವೇ ಪಾದಕರ್ಕಾಯ್ ತನ್ನ
ಸ್ನೇಹಮ್ ಅತಿಶಯಮೇ
ಜೀವಿತತ್ತಿಲ್ ಪಲ ವೀೞ್ಚಗಳ್ ವನ್ನಿಟ್ಟುಂ
ಒಟ್ಟುಂ ನಿಷೇಧಿಕ್ಕಾದೆ, ಎನ್ನೆ
ಕೇವಲಂ ಸ್ನೇಹಿಚ್ಚು ಪಾಲಿಚ್ಚಿಡುಂ ತವ
ಸ್ನೇಹಮತುಲ್ಯಮ್ ಅಹೋ!

ಗೆಳೆಯರೊಬ್ಬರು ಈ ಗೀತೆಯನ್ನು ಕನ್ನಡಕ್ಕೆ ಅನುವಾದಿಸಿಕೊಟ್ಟಿದ್ದಾರೆ.
(ಅಚ್ಚರಿ ಅಚ್ಚರಿ ದೇವನ ಪ್ರೀತಿಯು
ಎನಿತು ಮನೋಹರವು, ಅದು
ಚಿನ್ತೆಯ ಮೀರಿದ ಪೆರ್ಗಡಲೊಲು ಎಂದು
ಅನುದಿನ ಪಾಡುವೆನು, ತಂದೆ
ಅನುದಿನ ಪಾಡುವೆನು
ದೇವನೇ ಹರಿಸಿದೆ ಸ್ನೇಹದ ಹೊನಲ್ಗಳ
ಯಾರು ಅಳೆವವರು, ಎನ್ನ
ತಂದೆಯ ಪ್ರೀತಿಯ ಆಳವನಳೆವುದು
ಮೀರಿದ ಬಲುಮೆಯದು, ಎನ್ನ
ಮೀರಿದ ಬಲುಮೆಯದು
ಮೋದವನೀಯುತ ದೇಹಕುಲ್ಲಾಸವ
ಅನುದಿನ ಪ್ರೀತಿಸುತ, ಏಕ
ಜಾತನೇ ಯೇಸುವೇ ಭಕ್ತರ್ಗೆ ನೀಡಿದ
ಪ್ರೀತಿಯದಚ್ಚರಿಯು, ನಿನ್ನ
ಪ್ರೀತಿಯದಚ್ಚರಿಯು

ಜೀವಿತ ಕಾಲದಿ ಮಾಡಿದ ಪಾಪವ
ಕ್ಷಮಿಸುತ ಪಾಲಿಸುತ, ತಂದೆ
ಸಾಕುತ ಸಲಹುತ ಮುನ್ನಡೆಸುವೆ ನಿನ್ನ
ಪ್ರೀತಿ ಅತುಲ್ಯವದು, ತಂದೆ
ಪ್ರೀತಿ ಅತುಲ್ಯವದು)

ಶನಿವಾರ, ಅಕ್ಟೋಬರ್ 15, 2011

ಎಪ್ಪತ್ತರ ದಶಕದಲ್ಲಿ


ಇದು ಎಪ್ಪತ್ತರ ದಶಕದ ಮಾತು. ಮಲ್ಲೇಶ್ವರದ ಕ್ರಿಸ್ತರಾಜರ ದೇವಾಲಯದ ಹಿಂಬದಿಯೇ ನಮ್ಮ ಮನೆಯಿದ್ದುದರಿಂದ ಅಲ್ಲಿನ ಪ್ರತಿ ಆಗುಹೋಗುಗಳಿಗೂ ನಾನು ಸಾಕ್ಷಿಯಾಗುತ್ತಿದ್ದೆ. ೧೯೬೦ರಿಂದ ೧೯೭೩ರವರೆಗಿನ ದೀರ್ಘಕಾಲ ಅಲ್ಲಿನ ಗುರುಗಳಾಗಿದ್ದ ಸ್ವಾಮಿ ಅಂತೋಣಿ ಸಿಕ್ವೆರಾ ಅವರು ತಮ್ಮ ಪ್ರಯತ್ನದಿಂದ ಈ ದೇವಾಲಯದ ಸಮುದಾಯವನ್ನು ಪ್ರವರ್ಧಮಾನ ಸ್ಥಿತಿಗೆ ತಂದಿದ್ದರು.
ಪೂಜೆಗಳಲ್ಲಿ ಹೊಸ ಪೀಳಿಗೆಯ ಸಮರ್ಥ ಪಾಲುಗೊಳ್ಳುವಿಕೆಗೆ ಇಂಬುಗೊಡಲು ಅವರು ಹತ್ತಿರದ ನಿರ್ಮಲರಾಣಿ ಶಾಲೆಯನ್ನು ಸಾಧನವಾಗಿ ಬಳಸಿಕೊಂಡಿದ್ದರು. ಅಲ್ಲಿನ ಮದರುಗಳು ಪ್ರತಿ ಭಾನುವಾರ ದೇವಾಲಯಕ್ಕೆ ಆಗಮಿಸಿ ಮಕ್ಕಳನ್ನು ಶಿಸ್ತುಬದ್ದವಾಗಿ ಕೂಡಿಸಿ ಬೆಳೆದ ಮಕ್ಕಳಿಗೆ ವಾಚನ ಓದಲು ಸಿದ್ಧಪಡಿಸಿ ಪುಟ್ಟ ಮಕ್ಕಳಿಗೆ ಜಪ ಧರ್ಮೋಪದೇಶದ ತರಗತಿಗಳನ್ನೂ ನಡೆಸುತ್ತಿದ್ದರು. ಶಾಲೆಯಿಂದ ಹೊರನಡೆದ ಹಳೆಯ ವಿದ್ಯಾರ್ಥಿಗಳೂ ಸಹ ಅವರ ಪ್ರೀತಿಯ ಒತ್ತಾಯಕ್ಕೆ ಮಣಿದು ಗಾನವೃಂದ ಪೂಜೆ ಒತ್ತಾಸೆ ಮುಂತಾದ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು. ಅಂದಿನ ದಿನಗಳಲ್ಲಿ ಪೀಠದೊಳಕ್ಕೆ ಹೆಣ್ಣುಮಕ್ಕಳಿಗೆ ಪ್ರವೇಶವಿರಲಿಲ್ಲ. ಆದರೆ ಹಿಂದಿನ ಅಟ್ಟಣಿಗೆಯಲ್ಲಿನ ಗಾನವೃಂದಕ್ಕೆ ಪುಷ್ಪ, ವಿಕ್ಟೋರಿಯಾ ಮುಂತಾದ ಹಿರಿ ವಿದ್ಯಾರ್ಥಿಗಳು ಜೀವಕಳೆ ತುಂಬಿದ್ದರು. ಬ್ರದರ್ ಜೋಸೆಫ್ ಡಿಮೆಲ್ಲೊ, ಬ್ರದರ್ ಎನ್ ಎಸ್ ಮರಿಜೋಸೆಫ್ ಮುಂತಾದವರು ಇಲ್ಲಿಗೆ ಬಂದು ಹಾಡು ಹೇಳಿಕೊಡುತ್ತಿದ್ದರು. ಮನೆಯಲ್ಲಿ ತಮಿಳು ಮಾತನಾಡುತ್ತಿದ್ದ ಆದರೆ ಕನ್ನಡ ಓದುತ್ತಿದ್ದ ಹಲವು ಮಂದಿ ಗಾನವೃಂದದಲ್ಲಿದ್ದರು.
೧೯೭೧ರಲ್ಲಿ ರಾಜಾಜಿನಗರದಲ್ಲಿ ಹೊಸ ಚರ್ಚು ತಲೆಯೆತ್ತಿದ್ದರಿಂದ ಮಲ್ಲೇಶ್ವರದ ಈ ಚರ್ಚು ಇಬ್ಭಾಗವಾಯಿತು. ಸಹಜವಾಗಿ ಗಾನವೃಂದದಲ್ಲಿನ ಕನ್ನಡದ ದನಿಗಳು ಸೊರಗಿದವು. ೧೯೭೩ರಲ್ಲಿ ಇನ್ನೊಂದು ಸ್ಥಿತ್ಯಂತರ ನಡೆದು ಥಾಮಸ್ ಫೆರ್ನಾಂಡೊ ಎಂಬ ತಮಿಳು ಪಾದ್ರಿ ಈ ಚರ್ಚಿಗೆ ನೇಮಕವಾದರು. ಅವರು ಯೇಸುಸ್ವಾಮಿ ಸ್ವತಃ ತಮಿಳರಾಗಿದ್ದರೆಂದೂ ಬೆಂಗಳೂರು ತಮಿಳುನಾಡಿನ ಭಾಗವೆಂದೂ ಭಾವಿಸಿದ್ದರು. ಹೀಗೆ ದೇವಾಲಯದ ಭಕ್ತಾದಿಗಳ ನಡುವೆ ಒಂದು ಸ್ಪಷ್ಟ ಗೆರೆ ಎಳೆಯಲಾಯಿತು. ಒಂದು ಕಡೆ ತಮಿಳರೆಂದೂ ಇನ್ನೊಂದು ಕಡೆ ಕನ್ನಡವೆಂದೂ ವಿಭಾಗಿಸಿ ಹಗ್ಗ ಜಗ್ಗಾಟ ಶುರುವಾಯಿತು. ಕನ್ನಡದ ಪೂಜೆಗಳಲ್ಲಿ ಹಾಡುಹಾಡಲು ಪವಿತ್ರಗ್ರಂಥ ಪಠಿಸಲು ಜನರಿಲ್ಲವಾಯಿತು. ಅಲ್ಲಿಯ ತನಕ ನಿರ್ಮಲರಾಣಿ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ತಮಿಳು ಯುವಕರೇ ಕನ್ನಡದ ಬೈಬಲ್ ವಾಚಿಸುತ್ತಿದ್ದರು. ತಮಿಳಿಗಾದರೋ ವಲಸೆ ಬಂದಿದ್ದ ಸ್ಪಷ್ಟ ತಮಿಳು ಉಚ್ಚಾರದ ತಾರ್ಸಿಸ್, ಹ್ಯಾರಿ ಮುಂತಾದ ಓದುಗರಿದ್ದರು.
ಕನ್ನಡಕ್ಕೊದಗಿದ ಈ ಶೂನ್ಯವನ್ನು ತುಂಬಲು ಪೀಟರ್ ಪಿಕಾರ್ಡೊ, ಚೌರಪ್ಪನವರ ಮಗ ಜಾರ್ಜ್, ರೇಲ್ವೆ ಚಾಲಕ ಅರುಳಪ್ಪ, ಸುಬೇದಾರಪಾಳ್ಯದ ಅಂತೋಣಪ್ಪ ಮುಂತಾದವರು ಮುಂದೆ ಬಂದರು.

ಶುಕ್ರವಾರ, ಸೆಪ್ಟೆಂಬರ್ 23, 2011

ಅಪೂರ್ವ ತಿರುವು


“ಕತ್ತಲೆಯನಳಿದು ಬೆಳಕ ಚಿತ್ತಾರವ ಬರೆಯೆ
ಮತ್ತಾಯನರಮನೆಗೆ ಯೇಸು ಬಂದ”
ಅಂದು ಮತ್ತಾಯನು ಸುಂಕದಕಟ್ಟೆಯ ತನ್ನ ಕಚೇರಿಯಲ್ಲಿ ಕೆಲಸದಲ್ಲಿ ಮಗ್ನನಾಗಿದ್ದ. ಅವನಿಗೆ ಯೇಸು ಯಾರೆಂದು ತಿಳಿದಿತ್ತೋ ಇಲ್ಲವೋ? ಅಥವಾ ಯೇಸುವಿನೆಡೆಗೆ ಅವನ ಮನ ಒಳಗೊಳಗೇ ತುಡಿದಿತ್ತೋ ಏನೋ? ಅದೆಲ್ಲ ಏನೇ ಇರಲಿ, ಆ ದಿನವಂತೂ ಒಂದು ಮಹತ್ತರ ದಿನ. ಯೇಸು ಆ ದಾರಿಯಲ್ಲಿ ನಡೆಯುತ್ತಿದ್ದವನು ಮತ್ತಾಯನೆಡೆಗೆ ನೋಡಿ ’ನನ್ನನ್ನು ಹಿಂಬಾಲಿಸು’ ಎಂದ. ಆಕ್ಷಣವೇ ಮತ್ತಾಯ ಮರುಮಾತಾಡದೇ ತನ್ನ ಜೀವನದ ಒಂದು ಮಹತ್ವದ ನಿರ್ಧಾರ ತಳೆದು ಕಚೇರಿಯನ್ನು ತೊರೆದು ಬಂದ. ಅದೊಂದು ’ಅಪೂರ್ವ ತಿರುವು’.
ಯೇಸು ಒಮ್ಮೆ ಗಲಿಲೇಯ ಸರೋವರದ ದಡದ ಗುಂಟ ನಡೆದಿದ್ದ. ಅಲ್ಲಿ ಸಿಮೋನ ಮತ್ತು ಅಂದ್ರೆಯ ಎಂಬ ಬೆಸ್ತರು ಬಲೆ ಹೆಣೆಯುತ್ತಿದ್ದರು. ಯೇಸು ಅವರತ್ತ ತಿರುಗಿ ನನ್ನೊಂದಿಗೆ ಬನ್ನಿ ಎಂದಾಗ (ಮತ್ತಾಯ ೪:೧೮-೨೦) ಅವರು ಬಲೆಯನ್ನು ಅಲ್ಲೇ ಬಿಸುಟು ಯೇಸುವಿನ ಹಿಂದೆ ಹೋದವರು ಮತ್ತೆ ತಿರುಗಿ ನೋಡಲಿಲ್ಲ. ಯೇಸು ಮುಂದೆ ಹೋಗುತ್ತಿದ್ದಾಗ ತಮ್ಮ ತಂದೆಯೊಂದಿಗೆ ದೋಣಿಯಲ್ಲಿದ್ದ ಜೇಮ್ಸ್ ಮತ್ತು ಜಾನರನ್ನು ಕಂಡು ಅವರಿಗೂ ನನ್ನೊಂದಿಗೆ ಬನ್ನಿರೆಂದ. (ಮತ್ತಾಯ ೪:೨೧-೨೨) ಅವರು ಮರುಮಾತಾಡದೆ ತಮ್ಮ ತಂದೆಯ ಕಡೆಗೂ ನೋಡದೆ ಯೇಸುವನ್ನು ಹಿಂಬಾಲಿಸಿದರು. ಇವೆಲ್ಲ ಮತ್ತಾಯನೇ ದಾಖಲಿಸಿದ ಆಖ್ಯಾಯಿಕೆಗಳು. ಬಹುಶಃ ಯೇಸುವಿನ ಕರೆಯೋಲೆಗೆ ತನ್ನ ಪ್ರತಿಕ್ರಿಯೆಯ ಸ್ವರೂಪವನ್ನು ಸ್ಪಷ್ಟಗೊಳಿಸುವ ಪ್ರಕ್ರಿಯೆಯಾಗಿ ಈ ಘಟನೆಗಳನ್ನು ಅವನು ಹೇಳುತ್ತಿದ್ದಾನೆನಿಸುತ್ತದೆ.
ಜಾನ್ ಹೆನ್ರಿ ನ್ಯೂಮನ್ ಎಂಬ ವ್ಯಕ್ತಿ ಇಂಗ್ಲೆಂಡಿನಲ್ಲಿ ಜೀವಿಸಿದ್ದಾತ, ಒಂದು ಕಾಲದಲ್ಲಿ ಕಥೋಲಿಕ ವಿರೋಧಿ, ಆಮೇಲೆ ಕಥೋಲಿಕ ಪಂಥಕ್ಕೆ ಒಲಿದು ಬಂದು ಕಾರ್ಡಿನಲ್ ಆಗಿ ಪುನೀತ ಪದವಿಯನ್ನು ಅಲಂಕರಿಸಿದ. ನ್ಯೂಮನ್ ಅವರು ಬ್ಯಾಂಕ್ ಕೆಲಸವನ್ನು ತೊರೆದು ಕ್ರೈಸ್ತಧರ್ಮಪ್ರಚಾರದತ್ತ ನಡೆದು ಸಂತನಾಗುವ ಹೊತ್ತಿಗೆ ಅವರ ಜೀವನದಲ್ಲಿ ಏನೆಲ್ಲ ತಿರುವುಗಳು! ಮಹಾತ್ಮ ಗಾಂಧಿಯವರು ಅವರು ತಮ್ಮ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಇಂಗ್ಲೆಂಡಿನಲ್ಲಿ ಕಾನೂನು ಪದವಿಗಾಗಿ ಓದುತ್ತಿದ್ದಾಗ ನ್ಯೂಮನ್ ಬರೆದ Lead Kindly Light ಎಂಬ ಪದ್ಯವು ಅವರ ಮೇಲೆ ಬಹು ಪ್ರಭಾವ ಬೀರಿತ್ತು. ತಮ್ಮ ಜೀವಿತದ ಕೊನೆಯವರೆಗೂ ಗಾಂಧಿಯವರು ಕರುಣಾಳು ಬಾ ಬೆಳಕೆ ಎಂಬ ಆ ಹಾಡನ್ನು ಆಗಾಗ್ಗೆ ಮೆಲುಕು ಹಾಕುತ್ತಿದ್ದರಂತೆ. ಗಾಂಧಿಯವರು ದಕ್ಷಿಣ ಆಫ್ರಿಕೆಯಲ್ಲಿದ್ದಾಗ ರೈಲಿನ ಮೇಲ್ದರ್ಜೆಯ ಬೋಗಿಯಲ್ಲಿ ಒಮ್ಮೆ ಪಯಣಿಸುತ್ತಿದ್ದರು. ಆ ಬೋಗಿಯಲ್ಲಿದ್ದ ಬಿಳಿಯರು ಅವರನ್ನು ನೋಡಿ ಅಸಹನೆಯಿಂದ ಪೊಲೀಸು ಅಧಿಕಾರಿಯ ಮೂಲಕ ಅವರನ್ನು ಹೊರದೂಡುತ್ತಾರೆ. ಆ ಕ್ಷಣ ಗಾಂಧಿಯ ಜೀವನದಲ್ಲೊಂದು ಮಹತ್ತರ ತಿರುವು. 

ಶುಕ್ರವಾರ, ಆಗಸ್ಟ್ 26, 2011

ಅಣ್ಣಾ ಹಿಂದೆ ಯಾರಿದ್ದಾರೆ?


ಭ್ರಷ್ಟಾಚಾರವೆಂಬುದು ಇಂದು ನಮ್ಮನ್ನು ಕಾಡುತ್ತಿರುವ ರಾಷ್ಟ್ರವ್ಯಾಪೀ ಜ್ವಲಂತ ಸಮಸ್ಯೆಯಾಗಿದೆ. ಸಮಸ್ಯೆಯಿಂದಾಗಿ ನಾವೆಷ್ಟು ರೋಸಿಹೋಗಿದ್ದೇವೆಂದರೆ ಇದರ ವಿರುದ್ಧ ಪ್ರತಿಭಟಿಸುವ ಯಾರೇ ವ್ಯಕ್ತಿ ನಮಗೆ ನಿಜ ನಾಯಕನಾಗಿ ತೋರುತ್ತಾನೆ. ಏಕೆಂದರೆ ಭ್ರಷ್ಟಾಚಾರದ ನಿಜವಾದ ಬಲಿಪಶುಗಳು ನಾವಾಗಿರುತ್ತೇವೆ, ಎಷ್ಟೊ ವೇಳೆ ಅದರ ವಿರುದ್ಧದ ನಮ್ಮ ವಿರೋಧ ಅಥವಾ ಆಕ್ರೋಶವನ್ನು ಅನಿವಾರ್ಯವಾಗಿ ಅದುಮಿಟ್ಟುಕೊಂಡಿರುತ್ತೇವೆ. ಒಂದು ಹಿನ್ನೆಲೆಯಲ್ಲಿ ಅದರ ವಿರುದ್ಧ ದನಿಯೆತ್ತಬಲ್ಲ ಯಾರೇ ಆದರೂ ನಮಗೆ ಹೀರೋ ಆಗಿ ತೋರುವುದರಲ್ಲಿ ಅತಿಶಯವೇನಿಲ್ಲ. ಅದು ಒಬ್ಬ ಕಿರಣ್ ಬೇಡಿ ಇರಬಹುದು, ಒಬ್ಬ ಸಾಂಗ್ಲಿಯಾನಾ ಇರಬಹುದು, ಒಬ್ಬ ಖೈರನಾರ್ ಇರಬಹುದು, ಒಬ್ಬ ಹರ್ಷಗುಪ್ತ ಇರಬಹುದು, ಒಬ್ಬ ಮಣಿವಣ್ಣನ್ ಇರಬಹುದು ಇವರೆಲ್ಲ ನಮಗೆ ಆದರ್ಶಪ್ರಾಯರಾಗಿಯೇ ತೋರುತ್ತಾರೆ. ಇಂದು ಅಣ್ಣಾ ಹಜಾರೆಯ ಕಾಲ. ಎರಡು ದಶಕಗಳ ಹಿಂದೆ ಅವರ ಸಾಧನೆಯ ಬಗ್ಗೆ ಸುಧಾ ಎಂಬ ವಾರಪತ್ರಿಕೆಯಲ್ಲಿ ಲೇಖನ ಪ್ರಕಟವಾದಾಗ ಹೆಚ್ಚು ಮಂದಿ ಗಮನ ಹರಿಸಲಿಲ್ಲವೆಂಬುದು ನಿಜವೇ ಆದರೂ ಇಂದು ಅಣ್ಣಾ ಬಗ್ಗೆ ಗೊತ್ತಿಲ್ಲದ ಜನವೇ ಇಲ್ಲವೆನ್ನಬಹುದು. ಭ್ರಷ್ಟಾಚಾರದ ವಿರುದ್ಧದ ಅವರ ಕೂಗಿಗೆ ಇವೊತ್ತು ಲಕ್ಷ ಜನರು ದನಿಸೇರಿಸುತ್ತಾರೆ.
ಹಾಗಿದ್ದರೆ ಅಣ್ಣಾ ಅವರು ಇಡೀ ರಾಷ್ಟ್ರವನ್ನು ಪ್ರತಿನಿಧಿಸುತ್ತಾರೆಯೇ? ಬಹುಶಃ ಭ್ರಷ್ಟಾಚಾರ ವಿರುದ್ಧದ ದನಿಯಲ್ಲಿ ಅವರು ಮುಂಚೂಣಿಯಲ್ಲಿ ನಿಂತು ರಾಷ್ಟ್ರವನ್ನು ಪ್ರತಿನಿಧಿಸಬಹುದು, ಆದರೆ ರಾಷ್ಟ್ರವನ್ನು ಮುನ್ನಡೆಸುವ ಅಭಿವೃದ್ಧಿ ಯೋಜನೆಗಳು, ಆರ್ಥಿಕ ನೀತಿಗಳು, ರಕ್ಷಣಾ ಸಂಶೋಧನೆಗಳು, ವಿದೇಶೀ ಸಂಬಂಧಗಳು, ಆರೋಗ್ಯ ಶಿಕ್ಷಣ ಮೂಲಭೂತ ಸೌಲಭ್ಯ ಮುಂತಾದ ಆಂತರಿಕ ಪ್ರಕ್ರಿಯೆಗಳನ್ನು ಮುನ್ನಡೆಸಬಲ್ಲ ಒಂದು ಸಾಂವಿಧಾನಿಕ ಆಡಳಿತಯಂತ್ರ ನಿಸ್ಪೃಹವಾಗಿ ಕೆಲಸ ಮಾಡುತ್ತಲೇ ಇದೆಯಲ್ಲವೇ?
ಭ್ರಷ್ಟಾಚಾರದ ವಿರುದ್ಧದ ಒಂದು ಅಸಹನೆ ಅಂತರ್ವಾಹಿನಿಯಾಗಿ ಹರಿಯುತ್ತಾ ಬಂದು ಇಂದು ಸ್ಫೋಟಿಸಿದೆ. ಆದರೆ ಸೇನಾ ಅತಿರೇಕದ ವಿರುದ್ಧ ಕಳೆದ ಹತ್ತುವರ್ಷಗಳಿಂದ ನಿರಂತರವಾಗಿ ಉಪವಾಸ ಮಾಡುತ್ತಿರುವ ಇರೋಮ್ ಶರ್ಮಿಳಾ ಎಂಬ ಮಣಿಪುರದ ಮಹಿಳೆ, ಪೆಟ್ರೋಲ್ ಕಲಬೆರಕೆ ಮಾಫಿಯಾಗೆ ಬಲಿಯಾದ ಮಂಜುನಾಥ ಎಂಬ ಕೋಲಾರದ ಹುಡುಗ, ಹಲ್ಲಾ ಬೋಲ್ ಎಂಬ ಬೀದಿ ನಾಟಕವಾಡುತ್ತಲೇ ಭೀಕರವಾಗಿ ಕೊಲೆಯಾದ ಸಫ್ದರ್ ಹಷ್ಮಿ ಇವರನ್ನೆಲ್ಲ ನಾವು ಮರೆತುಬಿಡುತ್ತೇವೆ. ಅಷ್ಟೇ ಏಕೆ ಇನ್ನೂ ಕಾಡುತ್ತಿರುವ ಜನಾಂಗದ್ವೇಷ, ಜಾತಿಭೇದ, ಕೋಮುಗಲಭೆ, ಹಲ್ಲೆ ಹಿಂಸೆ ದರೋಡೆ ಅತ್ಯಾಚಾರಗಳನ್ನೂ ನಾವು ಪ್ರತಿಭಟಿಸುವುದೇ ಇಲ್ಲ. ಇಂದು ಅವರಿಗಾದುದು ನಾಳೆ ನಮಗಾದೀತೆಂದು ನಾವು ಯೋಚಿಸುವುದೇ ಇಲ್ಲ.
ಯಾವುದರ ವಿರುದ್ಧವೇ ಆದರೂ ದನಿಯೆತ್ತಲು ಪ್ರತಿಭಟಿಸಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ. ಮೂಲಕ ಕಾನೂನುಗಳನ್ನು ರೂಪಿಸುವಲ್ಲಿ, ಕ್ರಿಯಾ ಯೋಜನೆಗಳನ್ನು ಜಾರಿಗೆ ತರುವಲ್ಲಿ ನಮ್ಮ ಪಾತ್ರ ಹಿರಿದೆಂಬುದನ್ನು ನಮ್ಮ ಘನ ಸಂವಿಧಾನವು ತೋರಿಸಿದೆ. ಯುವಶಕ್ತಿಯನ್ನು ಬಳಸಿಕೊಂಡು ನೇತಾರರು ಪ್ರಪಂಚದಲ್ಲಿ ಹಲವಾರು ಮಹತ್ತರ ಪಲ್ಲಟಗಳನ್ನು ನಿರ್ವಹಿಸಿದ್ದಾರೆ. ಲೆನಿನನ ಕ್ರಾಂತಿಕಾರೀ ಘೋಷಣೆಗೆ ಓಗೊಟ್ಟ ಯುವಕರು ಕೆಂಪುಕ್ರಾಂತಿಗೆ ಕಾರಣರಾದರು. ಅದೇ ಯುವಕರು ವಯಸ್ಕರಾದ ಮೇಲೆ ಅದೇ ಲೆನಿನನ ಪ್ರತಿಮೆಯನ್ನು ನೆಲಕ್ಕುರುಳಿಸಿದರು. ಜರ್ಮನಿಯ ಯುವಕರನ್ನು ಹುರಿದುಂಬಿಸಿದ ಹಿಟ್ಲರ್ ಯೆಹೂದಿಗಳ ಮಾರಣಹೋಮ ನಡೆಸಿದ. ಆದರೆ ಯುದ್ಧ ಮುಗಿಯುವ ಮೊದಲೇ ತಾನು ಆತ್ಮಹತ್ಯೆ ಮಾಡಿಕೊಂಡ. ತೊಂಬತ್ತರ ದಶಕದಲ್ಲಿ ನಮ್ಮ ದೇಶದ ಯುವಕರನ್ನು ಪ್ರಚೋದಿಸಿದ ಸಂಘಪರಿವಾರವು ಮಸೀದಿ ಒಡೆಯುವ ಮೂಲಕ ದೇಶದ ಶಾಂತ ಸರೋವರವನ್ನು ಕಲಕಿತು.
ಆದರೆ ಜವಾಬ್ದಾರಿಯುತ ಪ್ರಜೆಗಳಾದ ನಾವು ಸಿಖ್ ಹತ್ಯಾಕಾಂಡ, ಗುಜರಾತ್ ದಾಂಧಲೆ, ಒರಿಸ್ಸಾ ಗಲಭೆ, ಕರ್ನಾಟಕದ ಚರ್ಚ್ ದಾಳಿ ಮುಂತಾದವುಗಳನ್ನು ಮೌನವಾಗಿ ವೀಕ್ಷಿಸಿದೆವು. ಅಥವಾ ತೋಚಿದ ನೆಪಗಳನ್ನು ಹೇಳಿಕೊಂಡು ಘಟನೆಗಳನ್ನು ಸಮರ್ಥಿಸಿಕೊಂಡೆವು. ಮಾನವಧರ್ಮವನ್ನು ಮರೆತು ಬೀದಿನಾಯಿಗಳಂತೆ ಕಚ್ಚಾಡಿದೆವು. ಇಂದು ನಾವೆಲ್ಲ ಸಮೂಹ ಸನ್ನಿಗೊಳಗಾದವರಂತೆ ಭ್ರಷ್ಟಾಚಾರದ ವಿರುದ್ಧ ನಿಂತಿದ್ದೇವೆ. ಆದರೆ ಭ್ರಷ್ಟಾಚಾರವೆಂದರೆ ಹಣದ ಭ್ರಷ್ಟತೆ ಮಾತ್ರವಲ್ಲ ಮಾನಸಿಕ ಭ್ರಷ್ಟತೆ ಕೂಡಾ ಎಂಬುದನ್ನು ಮರೆತಿದ್ದೇವೆ.
ನಮ್ಮ ಮನಸಿನ ಒಳಹೊಕ್ಕು ಸ್ವತಃ ನಾವು ಭ್ರಷ್ಟರಲ್ಲವೇ ಎಂದು ಒಮ್ಮೆ ಆತ್ಮಶೋಧನೆ ಮಾಡಿಕೊಳ್ಳೋಣ. ಯಾವುದೇ ಚುನಾವಣೆಯಲ್ಲಿ ಪ್ರಲೋಭನೆಗೊಳಗಾಗಿ ಓಟು ಮಾಡಿದ್ದೀವಾ? ಓಟು ಮಾಡುವ ಹಕ್ಕಿದ್ದರೂ ಮಾಡದೇ ಮನೆಯಲ್ಲುಳಿದೆವಾ? ಸುಳ್ಳು ಲೆಕ್ಕ ತೋರಿಸಿ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿದ್ದೀವಾ? ಸುಳ್ಳು ಬಿಲ್ಲು ತೋರಿಸಿ ಹೆಚ್ಚಿನ ಭತ್ಯೆ ಪಡೆದಿದ್ದೀವಾ? ಬಡ್ಡಿಗೆ ದುಡ್ಡು ಕೊಟ್ಟು ರಕ್ತ ಹೀರಿದ್ದೀವಾ? ವರದಕ್ಷಿಣೆಗಾಗಿ ಪೀಡಿಸಿದ್ದೀವಾ? ಜಾತಿಯ ಕಾರಣಕ್ಕೆ ಜನರನ್ನು ದೂರವಿಟ್ಟಿದ್ದೀವಾ? ಕಾಲೇಜಿಗೆ ಚಕ್ಕರು ಹಾಕಿದ್ದೀವಾ? ಮತ್ತೊಬ್ಬನ ಹೆಂಡತಿಯನ್ನು ಕೆಟ್ಟದೃಷ್ಟಿಯಿಂದ ನೋಡಿದ್ದೀವಾ? ಸ್ನೇಹಿತರಿಗೇ ಮೋಸ ಮಾಡಿ ತಿರಪತಿಗೋ ಧರ್ಮಸ್ಥಳಕ್ಕೋ ತಪ್ಪುಕಾಣಿಕೆ ಕಟ್ಟಿದ್ದೀವಾ?
ಇರಲಿ ಬಿಡಿ. ಇನ್ನು ಅಣ್ಣಾ ಅವರ ಹಿಂದೆ ಇರುವವರಾರೆಂದು ನೋಡೋಣ. ಅವರೆಲ್ಲ ಕಾರ್ಪೊರೇಟ್ ವಲಯದ ಅಥವಾ ಐಟಿ ಸೆಕ್ಟರಿನ ಜನ. ಅಮೆರಿಕದಲ್ಲಿ ಸೋತು ಇಂಡಿಯಾಕ್ಕೆ ಹಿಂದಿರುಗಿದ ಜನ. ಬಂಡವಾಳ ಹೂಡಿಕೆಯಲ್ಲಿ ಸೋತ ಜನ. ರಾಜಕೀಯ ಲಾಭ ಪಡೆಯಲು ಹೊಂಚು ಹಾಕಿದ ಜನ. ನಿಜ ಹೇಳಬೇಕೆಂದರೆ ಬಡ ರೈತರಾಗಲೀ ಬಡ ಕಾರ್ಮಿಕರಾಗಲೀ ಭ್ರಷ್ಟಾಚಾರದ ಕುರಿತು ಹೆಚ್ಚು ತಲೆಕೆಡಿಸಿಕೊಂಡವರೇ ಅಲ್ಲ. ಇಂದು ಭ್ರಷ್ಟಾಚಾರ ನಿರ್ಮೂಲನವೆಂಬುದು ಕೆಲವರಿಗೆ ಫ್ಯಾಷನ್ ಘೋಷಣೆಯಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಅದನ್ನೇ ಹೇಳಿತ್ತು. ಸಂಪೂರ್ಣ ಬದಲಾವಣೆ ತರುತ್ತೇವೆ ಯಾರೂ ಮಾಡದಂಥದನ್ನು ಮಾಡುತ್ತೇವೆ, ಸ್ವಚ್ಛ ಆಡಳಿತ, ದಕ್ಷ ಆಡಳಿತ, ಹಗರಣ ಮುಕ್ತ ಸರ್ಕಾರ, ಭ್ರಷ್ಟಮುಕ್ತ ಸರ್ಕಾರ ಕೊಡುತ್ತೇವೆ ಎಂದು ಘಂಟಾಘೋಷವಾಗಿ ಹೇಳಿತ್ತು. ಆದರೆ ಮಾಡಿದ್ದೇನು? ಇಂದು ಇಂಥದೇ ಫ್ಯಾಸಿಸ್ಟ್ ಶಕ್ತಿಗಳು ಅಣ್ಣಾ ಅವರ ಮುಖವಾಡ ತೊಟ್ಟು ಅವರೊಂದಿಗೆ ಕೈಜೋಡಿಸಿವೆ.
ನೀವು ಹೇಳಬಹುದು ಅಣ್ಣಾ ಅವರೊಂದಿಗೆ ಬಹುಸಂಖ್ಯಾತ ಮಧ್ಯಮವರ್ಗದವರೂ ಅಷ್ಟೇ ಸಂಖ್ಯೆಯ ವಿದ್ಯಾವಂತರೂ ಇದ್ದಾರೆಂದು. ಆದರೆ ಅವರೊಂದಿಗೆ ನಮ್ಮ ದೇಶದ ಅರ್ಧ ಬಿಲಿಯನ್ ಓಬಿಸಿ ಜನ ಇಲ್ಲ, ೨೫೦ ಮಿಲಿಯನ್ ಎಸ್ಸಿಎಸ್ಟಿ ಜನ ಇಲ್ಲ, ೧೫೦ ಮಿಲಿಯನ್ ಅಲ್ಪಸಂಖ್ಯಾತರಿಲ್ಲ. ಅಣ್ಣಾ ಅವರೊಂದಿಗಿದ್ದಾರೆ ಬಾಬಾ ರಾಮ್ದೇವ್ ನಂಥ ಖೂಳರು, ದ್ವೇಷವನ್ನು ಬಿತ್ತಿ ದ್ವೇಷವನ್ನು ಬೆಳೆಯುವಂಥ ದುರುಳರು. ಭ್ರಷ್ಟಾಚಾರ ನಿರ್ಮೂಲದಂಥ ಹೃದಯಸ್ಪರ್ಶಿ ಸಂಗತಿಯನ್ನು ಮುಂದು ಮಾಡಿಕೊಂಡು ಅಣ್ಣಾ ಹೆಸರನ್ನು ಹೈಜಾಕ್ ಮಾಡುವಂಥ ಖದೀಮರು.
ಅಣ್ಣಾ ಅವರ ಪರವಾಗಿ ಟ್ವಿಟರುಗಳು, ಫೇಸ್ ಬುಕ್ಕುಗಳು, -ತಂಡಗಳು, ಬ್ಲಾಗುಗಳು, ಜಾಲತಾಣಗಳು ಬರೆದೇ ಬರೆಯುತ್ತವೆ. ಸುಳ್ಳು ಹೆಸರುಗಳಲ್ಲಿ ಸುಳ್ಳು ಗುರುತುಗಳಲ್ಲಿ ಚರ್ಚೆಗಳನ್ನು ಹುಟ್ಟುಹಾಕುತ್ತವೆ, ಸ್ಪಷ್ಟೀಕರಣ ನೀಡುತ್ತವೆ, ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತವೆ, ಅದೇ ವೇಳೆಯಲ್ಲಿ ವಿರೋಧದ ಸಣ್ಣ ಎಳೆಯನ್ನೂ ಮೊಳೆಯುವ ಮುನ್ನವೇ ಹೊಸಕುತ್ತವೆ. ಇವೆಲ್ಲದರ ಹಿಂದೆ ಇರುವವರಾದರೂ ಯಾರು?
ವಿ ಪಿ ಸಿಂಗ್ ಸರ್ಕಾರವು ಮಂಡಲ್ ಆಯೋಗದ ವರದಿಯನ್ನು ಜಾರಿಗೊಳಿಸಿದಾಗಲೂ ಇಂಥದೇ ಚಿತಾವಣೆಗಳು ನಡೆದಿದ್ದವು. ನೆನಪಿಡಿ, ಮೂರು ಸಾವಿರ ವರ್ಷಗಳ ಹಿಂದಿನ ಜಾತಿಪದ್ಧತಿಯನ್ನು ದೇಶದಲ್ಲಿ ಮರುಸ್ಥಾಪಿಸಲು ಸಂಘಟಿತ ಪ್ರಯತ್ನಗಳು ಚಾಪೆಯ ಕೆಳಗಿನ ನೀರಿನಂತೆ ಕಾರ್ಯವೆಸಗುತ್ತಿವೆ ಎಚ್ಚರ.

ಭಾನುವಾರ, ಜುಲೈ 17, 2011

ಕಾರ್ಖಾನೆಯ ನೋಟ

ಇದು ನಾನು ಕಾರ್ಖಾನೆಗೆ ಸೇರಿದ ದಿನದ ಅನುಭವ. ನನ್ನ ಆಯ್ಕೆ ಪ್ರಕ್ರಿಯೆಗಳೆಲ್ಲ ಮುಖ್ಯಕಾರ್ಖಾನೆಯಲ್ಲಿ ಮುಗಿದು ಇಂಜಿನ್ ವಿಭಾಗಕ್ಕೆ ನನ್ನನ್ನು ಹೊತ್ತು ಹಾಕಿದರು. ಜೀಪಿನಲ್ಲಿ ನನ್ನನ್ನು ಕರೆದೊಯ್ದವರು ಇಂಜಿನ್ ವಿಭಾಗದ ದ್ವಾರದಲ್ಲಿ ನನ್ನನ್ನು ಇಳಿಸಿ ಒಳಹೋದರು. ನಾನು ಬಾಗಿಲ ಬಳಿ ಬಂದಾಗ ಅಲ್ಲಿದ್ದ ಸೆಕ್ಯುರಿಟಿ ’ಎನ್ನ’ ಅಂದ. ಒಳಗೆ ಹೋಗ್ಬೇಕು ಅಂದೆ. ನನ್ನ ಅಂಗಿನ ಜೇಬಿನಲ್ಲಿ ಪಂಚ್ ಕಾರ್ಡು ಇಣುಕುತ್ತಿತ್ತು. ಆತ ತಮಿಳಿನಲ್ಲಿ ಏನಯ್ಯ ಪಂಚುಕಾರ್ಡು ತೊಗೊಂಡು ಎಲ್ಲೆಲ್ಲೋ ಓಡಾಡ್ತಿದ್ದೀಯಾ, ನೀನೇನೂ ಟ್ರೇನಿನೋ, ಎಂಪ್ಲಾಯೋ ಅನ್ತ ಕೇಳಿದ. ನನಗೇನೂ ಅರ್ಥವಾಗಲಿಲ್ಲ ಅದೇನು ಕನ್ನಡದಲ್ಲಿ ಕೇಳು ಅಂದೆ. ಎಲ್ಲಿ ಬ್ಯಾಡ್ಜ್ ತೋರಿಸು ಎಂದು ಹೇಳಿ ಅಕ್ಷರಶಃ ಅದನ್ನು ಕಿತ್ತುಕೊಂಡ ಆತ ’ಇದೆನ್ನ ಜೋಸೆಫ್ ಅನ್ನಿ ಪೇರು ಇರುಕ್ಕು, ಕ್ರಿಶ್ಚಿಯನ್ ಅಯಿಟು ತಮಿಳು ತೆರಿಯಾದು ಅನಿ ಸೊಲ್ಲರಿಯಾ, ಎತ್ತನೆ ಗಾಂಚಾಲಿ’ (ಇದೇನು ಜೋಸೆಫ್ ಅನ್ತ ಹೆಸರಿದೆ, ಕ್ರಿಶ್ಚಿಯನ್ ಆಗಿದ್ರೂ ತಮಿಳು ಗೊತ್ತಿಲ್ಲ ಅಂತೀಯಲ್ಲ, ನಿನಗೆಷ್ಟು ಸೊಕ್ಕು) ಅಂದ. ನಾನು ಮುಚ್ಕಂಡ್ ವೋಗಲೋ ಅಂದೆ. ಅವನ ಪಿತ್ತ ನೆತ್ತಿಗೇರಿತು, ’ಐ ವಿಲ್ ಟೀಚ್ ಯು ಎ ಲೆಸನ್’ ಅಂದು ಕೂಗಾಡತೊಡಗಿದ. ನನಗೂ ಮನಸ್ಸಿನಲ್ಲೇ, ಇವತ್ತು ಏನಾದ್ರೂ ಆಗಲಿ ನಾಲಕ್ ಜನಾನ ಕರ್ಕೊಂಡು ಬಂದು ಈ ನನ್ಮಗನ್ನ ಹೊಡೆಸ್ಬೇಕು ಅನ್ತ ಅಂದುಕೊಳ್ತಿದ್ದೆ. ಅಷ್ಟರಲ್ಲಿ ಅವನ ಮೇಲಧಿಕಾರಿ ಹೊರಗೆ ಬಂದವನು ಇವನು ಕೂಗಾಡುತ್ತಿದ್ದುದನ್ನು ಕಂಡು ’ಏಯ್ ಪೊನ್ನುಸ್ವಾಮಿ, ಇದೇನಯ್ಯ ಯಾವಾಗ್ಲೂ ಗೇಟಲ್ಲಿ ಏನಾದ್ರೂ ಸೀನ್ ಕ್ರಿಯೇಟ್ ಮಾಡ್ತಾ ಇರ್ತೀಯ, ನೀನು ಹೀಗೇ ಮಾಡ್ರಾ ಇದ್ರೆ ನಿನ್ನ ಆ ಡ್ಯೂಟಿಗೆ ಹಾಕೋದೇ ಒಳ್ಳೇದು ಅಂದ. ಆ ಡ್ಯೂಟಿ ಅಂದರೇನು ನನಗೆ ಗೊತ್ತಿಲ್ಲ ಆದರೆ ಆ ಪೊನ್ನುಸ್ವಾಮಿಗೆ ಅರ್ಥವಾಯಿತು. ಇದು ಕಾರ್ಖಾನೆಯ ನನ್ನ ಮೊದಲದಿನದ ಅನುಭವ.
ಇನ್ನೊಂದು ಅನುಭವವನ್ನು ಹಂಚಿಕೊಳ್ಳಬಯಸುತ್ತೇನೆ. ಕಾರ್ಯಾಗಾರದಲ್ಲಿ ಕೆಲಸ ಮಾಡಲು ಹಲವು ಉಪಕರಣಗಳ ಅಗತ್ಯವಿರುತ್ತದೆ. ಎಲ್ಲರಿಗೂ ಸಿಗಲಿ ಎಂಬ ಕಾರಣದಿಂದ ಕೆಲ ವಿಶೇಷ ಉಪಕರಣಗಳನ್ನು ಕೋಠಿಯಲ್ಲಿ ಸಂಗ್ರಹಿಸಿರುತ್ತಾರೆ. ಅದಕ್ಕೊಬ್ಬ ಯಜಮಾನ ಇರುತ್ತಾನೆ. ಹೀಗೇ ನನಗೊಂದು ಉಪಕರಣ ಬೇಕಾಯ್ತು. ಅಲ್ಲಿಗೆ ಹೋಗಿ ವಾಡಿಕೆಯಂತೆ ಅಲ್ಲಿದ್ದ ಚೀಟಿಯಲ್ಲಿ ನನ್ನ ವಿವರ ಬರೆದು ಬೇಕಾದ ಉಪಕರಣದ ಬಗ್ಗೆ ಬರೆದೆ. ಕನ್ನಡದಲ್ಲಿದ್ದ ನನ್ನ ಚೀಟಿಯನ್ನು ನೋಡಿ ಅಲ್ಲಿದ್ದ ಕನ್ನಡಿಗನೇ ಆದ ತರಿಯಪ್ಪ ಎಂಬಾತ ಸಿಡಿಮಿಡಿಗೊಂಡ. ಅಲ್ಲಪ್ಪಾ ಇಷ್ಟುದಿನ ಇಲ್ಲಿದ್ದ ಆ ತಮಿಳು ವ್ಯಕ್ತಿ ಏನೂ ಕೊಸರದೆ ಉಪಕರಣಗಳನ್ನು ಕೊಡುತ್ತಿದ್ದನಲ್ಲ ನಿನ್ನದೇನು ರಗಳೆ ಎಂದೆ. ಇದು ಕೇಂದ್ರಸರ್ಕಾರದ ಕಾರ್ಖಾನೆ, ಇಲ್ಲಿ ಕನ್ನಡ ನಡೆಯೋಲ್ಲ, ನಿನಗೆ ತಾಕತ್ತಿದ್ದರೆ ಈ ಚೀಟಿಯನ್ನು ಕನ್ನಡದಲ್ಲಿ ಮುದ್ರಿಸುವಂತೆ ಮಾಡು ಆಮೇಲೆ ಕನ್ನಡದಲ್ಲಿ ಭರ್ತಿ ಮಾಡು ಎಂದು ಇನ್ನೇನೆಲ್ಲ ಮಾತನಾಡಿದ. ನಾನು ಉತ್ತರಿಸುತ್ತಾ ಮುದ್ರಣದ ಮಾತೆಲ್ಲ ಬೇಡ, ಯಾವುದೇ ಕೇಂದ್ರಸರ್ಕಾರದ ಸಂಸ್ಥೆಯಲ್ಲಿ ತ್ರಿಭಾಷಾ ಸೂತ್ರವಿದೆ, ನಾನು ಪ್ರಾದೇಶಿಕ ಭಾಷೆ ಕನ್ನಡವನ್ನು ಬಳಸಿದ್ದೇನೆ ಎಂದೆ. ಸುತ್ತ ಇತರೆಲ್ಲ ಕಾರ್ಮಿಕರು ಜಮಾಯಿಸಿ ಅವನಿಗೆ ಬುದ್ದಿ ಹೇಳಿದರು. ನಾನು ಗೆದ್ದೆನೆಂದು ಬೀಗಿದೆ.

ಮರುದಿನ ಭದ್ರತಾದಳದ ಮುಖ್ಯಸ್ಥರು ದೂರವಾಣಿಯ ಮೂಲಕ ನನ್ನನ್ನು ಅವರ ಕಚೇರಿಗೆ ಕರೆದರು. ತರಿಯಪ್ಪನು ಪರಿಶಿಷ್ಟ ವರ್ಗಕ್ಕೆ ಸೇರಿದವನೆಂದೂ ನಾನು ಗುಂಪು ಕಟ್ಟಿಕೊಂಡು ಹೋಗಿ ಅವನನ್ನು ಜಾತಿಯ ಹೆಸರಲ್ಲಿ ನಿಂದಿಸಿದೆನೆಂದೂ ದೂರು ಬಂದಿರುವುದರಿಂದ ನನ್ನನ್ನು ವಿಚಾರಿಸಲು ಅಲ್ಲಿಗೆ ಕರೆದಿದ್ದರು. ವಾಸ್ತವವಾಗಿ ನಡೆದ ವಿಷಯವೇನೆಂದು ವಿವರಿಸಿ ನನ್ನ ಹೇಳಿಕೆಯನ್ನು ಬರೆದುಕೊಟ್ಟೆ. ತರಿಯಪ್ಪನನ್ನು ಕರೆಸಿ ಏನ್ರೀ ನಿಮಗೆ ಕನ್ನಡ ಗೊತ್ತಿಲ್ಲವಾದರೆ ಮೇಲಧಿಕಾರಿಗೆ ಹೋಗಿ ಹೇಳಬಹುದಿತ್ತು, ನೀವೇ ಏನೇನೆಲ್ಲ ಮಾತನಾಡಿ ಈಗ ಜಾತಿಯ ಪ್ರಸ್ತಾಪ ಮಾಡುತ್ತಿದ್ದೀರಿ ಎಂದರು. ಅದಕ್ಕಾತ ಇದೇನ್ ಸಾರ್ ನೀವು ನನಗೆ ಸಪೋರ್ಟ್ ಮಾಡುವುದು ಬಿಟ್ಟು ಅವರ ಕಡೇನೇ ಮಾತಾಡ್ತೀರಿ, ನಾನು ಸೆಲ್ ಗೆ ಹೋಗಬೇಕಾಗುತ್ತೆ ಎಂದು ದಬಾಯಿಸಿದ. ಅದಕ್ಕವರು ನೀನೆಲ್ಲಿಗೇ ಹೋದರೂ ಇದೇ ಗೇಟಿನಲ್ಲಿ ಒಳಗೆ ಬರಬೇಕು ಹೊರಗೆ ಹೋಗಬೇಕು, ನಿನ್ನದೆಲ್ಲ ನಮಗೆ ಗೊತ್ತಿದೆ ಅಂದರು. ಅಲ್ಲಿಗೆ ಕೇಸು ಬಿದ್ದುಹೋಯಿತು.
ಹೀಗೆ ನಮ್ಮದೇ ನುಡಿಯ ಬಳಕೆಗೆ ಏನೆಲ್ಲ ತೊಡಕುಗಳು ಹಾಗೂ ಅದನ್ನು ನಿವಾರಿಸಿಕೊಳ್ಳುವಲ್ಲಿ ಇರಬೇಕಾದ ಇಚ್ಛಾಶಕ್ತಿಯ ಕುರಿತು ಹೇಳಿದ್ದೇನೆ. ನೀವು ಮೆಚ್ಚಿಕೊಳ್ಳಬೇಕೆಂಬುದು ನನ್ನ ಬಯಕೆಯಲ್ಲ, ದೈನಂದಿನ ನಡಾವಳಿಗಳಲ್ಲಿ ಕನ್ನಡದ ಬಳಕೆಗೆ ಈ ಬರಹ ಉದ್ದೀಪನವಾಗಲಿ ಎಂಬುದಷ್ಟೇ ನನ್ನ ಹಿರಿಯಾಸೆ.