ಮಂಗಳವಾರ, ಜುಲೈ 16, 2013

ಜನಕನ ಮನದನ್ನ

ಯೇಸುವಿನ ಕುರಿತ ಕಾವ್ಯಗಳಲ್ಲಿ ಇತ್ತೀಚಿನದುಜನಕನ ಮನದನ್ನ’. ಇದನ್ನು ಯೇಸುಸಭೆಯ ಗುರುಗಳಾದ ಸ್ವಾಮಿ ದೇವದತ್ತ ಕಾಮತರು ರಚಿಸಿದ್ದಾರೆ. ಕಾವ್ಯದ ವಸ್ತು ಬೈಬಲ್ ಪವಿತ್ರಗ್ರಂಥವೇ ಆದರು ಅವರದನ್ನು ಹಾಗೆ ಕರೆದಿಲ್ಲ. ಕಾವ್ಯವನ್ನು ಅವರೇ ವರ್ಗೀಕರಿಸಿದ ಹಾಗೆ ಪೂರ್ವಕಾಂಡ ಹಾಗೂ ಉತ್ತರಕಾಂಡ ಎಂಬ ಎರಡು ಭಾಗಗಳಿವೆ. ಪೂರ್ವಕಾಂಡವನ್ನು ಅವರು ಯೇಹೂದ್ಯ ಇತಿಹಾಸ ಎಂದೂ ಕರೆದಿದ್ದು ಇದು ಹಳೇ ಒಡಂಬಡಿಕೆಗೆ ಆರೋಪಿತವಾಗಿದೆ. ಉತ್ತರಕಾಂಡವನ್ನು ಮಾನವಾವತಾರ ಎಂದೂ ಕರೆಯಲಾಗಿದ್ದು ಅದು ಯೇಸುವಿನ ಜೀವನವೃತ್ತಾಂತವನ್ನು ಹೇಳುತ್ತದೆ.
ಇದನ್ನು ಕಾವ್ಯವೆಂದು ಹೇಳಿದೆನಷ್ಟೆ. ಕಾವ್ಯಕ್ಕಿರಬೇಕಾದ ಅಷ್ಟಾದಶ ವರ್ಣನೆಗಳನ್ನು ಹುಡುಕ ಹೋಗದೆ ಅಲ್ಲಲ್ಲಿ ತಿರುವಿ ನೋಡಿರುವ ನಾನು ಅದನ್ನಿಲ್ಲಿ ವಿಮರ್ಶಿಸುವ ದಾರ್ಷ್ಟ್ಯ ತೋರುತ್ತಿಲ್ಲ. ಬದಲಿಗೆ ಅದನ್ನು ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದೇನೆ. ಲತೀನಿನ ಪಠ್ಯವೊಂದನ್ನು ಕನ್ನಡಕ್ಕೆ ತರ್ಜುಮೆ ಮಾಡಿಸಿಕೊಳ್ಳಲು ನಾನು ಅವರ ಬಳಿ ಮೊತ್ತಮೊದಲ ಸಲ ಹೋದಾಗ ನಡೆದ ಮಾತುಕತೆಯಿಂದ ನಾವು ಆತ್ಮೀಯರಾದೆವು. ಸುಮಾರು ಎಪ್ಪತ್ತರ ಆಸುಪಾಸಿನ ವೃದ್ಧ ಗುರು ಸುಮ್ಮನೆ ಕಾಲ ವ್ಯರ್ಥ ಮಾಡುವವರಲ್ಲ. ಆಗ ಅವರು ಇದೇ ಕಾವ್ಯದ ಗಿದೆಯೋನ್ ಅಧ್ಯಾಯವನ್ನು ಬರೆಯುತ್ತಿದ್ದರು. ಅದುವರೆಗೂ ಯಾರಿಗೂ ಅದರ ಸುಳಿವು ಕೊಡದಿದ್ದ ಅವರು ನನ್ನ ಮುಂದೆ ಅದನ್ನು ಓದಿ ಸಂತೋಷಪಟ್ಟರು ನಾನು ಸಂಭ್ರಮ ಪಟ್ಟೆ. ಅವರ ಕಾವ್ಯದ ಭಾಗವನ್ನು ಅವರ ಬಾಯಿಂದಲೇ ಕೇಳುವ ಸುಯೋಗ ದೊರೆತದ್ದಕ್ಕಾಗಿ ಹೆಮ್ಮೆ ಪಡುತ್ತೇನೆ.
ಆಮೇಲೆ ಒಂದೆರಡು ತಿಂಗಳಲ್ಲಿ ಅವರು ಕಾವ್ಯವನ್ನು ಪೂರ್ಣಗೊಳಿಸಿದ್ದಾರೆಂದೂ ಅದಕ್ಕೆ ಬಲ್ಲವರಿಂದ ಮುನ್ನುಡಿ ಬರೆಸಿಕೊಡಲು ಸಾಧ್ಯವೇ ಎಂದು ಫಾದರ್ ಅರುಳಪ್ಪನವರು ನನಗೆ ಕೇಳಿದಾಗ ಅಷ್ಟು ಬೇಗನೇ ಕಾವ್ಯ ಮುಕ್ತಾಯ ಕಂಡಿದ್ದನ್ನು ತಿಳಿದು ಸೋಜಿಗಗೊಂಡೆ. ಅದರ ಕುರಿತು ರಾಷ್ಟ್ರಕವಿಯವರೊಂದಿಗೆ ಮಾತನಾಡಿದಾಗ ಅವರಿನ್ನೂ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದರು. ಕಲ್ಮಶವಿಲ್ಲದ ಮತ್ತೊಂದು ಕವಿಹೃದಯಿ ಯಾರಿರಬಹುದೆಂದು ಯೋಚಿಸುತ್ತಿದ್ದಾಗ ಫಕ್ಕನೇ ಸಾ ಶಿ ಮರುಳಯ್ಯನವರು ನೆನಪಾದರು.
ವಿಜಯನಗರದಲ್ಲಿನ ಅವರ ಮನೆಗೆ ಹೋದಾಗ ಆದರಿಸಿ ಸತ್ಕರಿಸಿದ ಅವರು ಕಾವ್ಯದ ಮೇಲೆ ಕಣ್ಣಾಡಿಸಿ ಅದನ್ನು ತಲೆಯ ಮೇಲಿಟ್ಟುಕೊಂಡರು. ಯೇಸು ಮಹಾತ್ಮನ ಕುರಿತು ಯಾರೆಷ್ಟು ಬರೆದರೂ ಸಾಲದು, ಅವನೊಬ್ಬ ಪುಣ್ಯಪುರಷ ಎಂದು ಉದ್ಗರಿಸಿದ ಅವರು, ಮನುಷ್ಯ ಜೀವವೆಂಬುದು ಅತ್ಯಮೂಲ್ಯ, ಮನುಷ್ಯನೇ ಮನುಷ್ಯತ್ವವನ್ನು ಕಳೆದುಕೊಂಡರೆ ಬೇರೆಲ್ಲಿ ಅದನ್ನು ಹುಡುಕಬೇಕು ಎಂಬುದನ್ನು ಯೇಸು ಅತ್ಯಂತ ಸರಳವಾಗಿಉಪ್ಪು ತನ್ನ ರುಚಿಯನ್ನು ಕಳೆದುಕೊಂಡರೆ ಉಪ್ಪಿಗೇನು ಬೆಲೆ ಅದು ಕಸಎಂದಿದ್ದಾನೆ ಅಂಥ ದೇವಮಾನವನಿಗೆ ನಮೋನಮಃ ಎಂದರು.
ಕೆಲವೇ ದಿನಗಳಲ್ಲಿ ಅವರು ಕಾವ್ಯಕ್ಕೊಂದು ಆದರ್ಶಪ್ರಾಯವಾದ ಮುನ್ನುಡಿಯನ್ನು ಬರೆದರು. ಮುನ್ನುಡಿಯಿಂದ ಆಯ್ದ ಭಾಗವಿದು. ’ ಕೃತಿಯಲ್ಲಿ ಪ್ರಯೋಗಗೊಮಡಿರುವ ಛಂದಸ್ಸು ಕನ್ನಡಕ್ಕೆ ಹೊಸದು. ಮಾಮೂಲಿ ತ್ರಿಪದಿ, ಷಟ್ಪದಿ, ಸೀಸಪದ್ಯ, ಸಾನೆಟ್, ಎಲಿಜಿ, ಪ್ರಗಾಥ (Oದೆ) ಮೊದಲಾದ ಧಾಟಿಗಳಲ್ಲಿಲ್ಲ. ಕವಿ ದೇವದತ್ತರವರೇ ಆವಿಷ್ಕರಿಸಿದ ಅಷ್ಟಪದಿ (ಎಂಟುಪಾದ) ಯಲ್ಲಿದೆ. ಇದು ಪೂರ್ವಕಾಂಡ ಮತ್ತು ಉತ್ತರಕಾಂಡ ಎರಡು ಭಾಗಗಳಲ್ಲಿ ಹರಡಿಕೊಂಡಿದೆ. ಪೂರ್ವಕಾಂಡದಲ್ಲಿ ೧೦೯೨ ಉತ್ತರಕಾಂಡದಲ್ಲಿ ೭೬೩ ಅಷ್ಟಪದಿಗಳಿಂದ ಕೂಡಿದ ಮಹಾಗ್ರಂಥ. ಮೊದಲ ಕಾಂಡವು ಸೃಷ್ಟಿಯ ಮೂಲ, ನಾನಾರು, ನಾನೆಂದರೇನು ಎಂಬ ಜಿಜ್ಞಾಸಾರೂಪದ ನಾಂದಿ ಪದ್ಯದಿಂದ ಆರಂಭಗೊಂಡು, ಸೆರೆರಕ್ತವನ್ನು ಹಂಚಿಕೊಂಡು ಹುಟ್ಟಿದ ಸಹೋದರರಲ್ಲಿ ಹಿರಿಯ ಅಣ್ಣ ಕೇಡಾಳಿ ಕಾಯಿನ, ತಮ್ಮ ಮುಗ್ದ ತಮ್ಮ ಹೇಬಲನನ್ನು ಕೊಲೆ ಮಾಡಿ ತನ್ನ ಪಾಪಕೃತ್ಯವನ್ನು ಅರ್ಥ ಮಾಡಿಕೊಂಡ ಪಶ್ಚಾತ್ತಾಪ, ಪ್ರಾಯಶ್ಚಿತ್ತಗಳ ಮೂಲಕ ಆರಂಭಗೊಂಡು ಮಹಾಕಾವ್ಯದ ಚಾಲನೆ ಪಡೆದಿದೆ. .. ಎರಡನೆಯ ಕಾಂಡದಲ್ಲಿ ಯೇಸು ಸ್ವಾಮಿಯು ಜ್ಯೋಗಿರೂಪದಲ್ಲಿ ಜಗತ್ತಿಗೆ ಅವತರಿಸಿದ್ದು, ತ್ಯಾಗ ಬಲಿದಾನ ಮೊದಲಾದವುಗಳ ಅಂತ್ಯದಲ್ಲಿ ಪ್ರಭುವಿನ ದಿವ್ಯದರ್ಶನ ioದ್ಯುತಿ ಪಡೆದು ಬೆಳಗಿದ್ದು ತತ್ವೋಪದೇಶ ಸಾರಿದ್ದು ಇಡೀ ಭೂಮಂಡಲದಲ್ಲೇ ಆನಂದರಸಸ್ತೋತಸ್ವಿನಿ ಭಾಗೀರಥಿಯಾಗಿ ಪ್ರವಹಿಸಿದ್ದು. ಮಹಾಮಾನವಾವತಾರಾದಿಯಾದ ಯೇಸುಸ್ವಾಮಿಯ ಬದುಕಿನ ದಾರುಣ ದೃಶ್ಯ ಎಂಥವರ ಕರುಳನ್ನೂ ಹಿಂಡುತ್ತದೆ. ಸಮಾಧಿಯಿಂದ ಕಾಣೆಯಾದ ಪವಾಡ ಎಲ್ಲರನ್ನೂ ಅಚ್ಚರಿಗೊಳಿಸುತ್ತದೆ. ಭಾಗ ದೇವದತ್ತ ಕಾಮತ್ ಅವರ ಕಾವ್ಯೋನ್ನತಿಯನ್ನು ಹಿಮಾಲಯದ ಉತ್ತುಂಗ ಶೃಂಗಕ್ಕೆ ಓದುಗರನ್ನು ಕೊಂಡೊಯ್ಯುತ್ತದೆ.’
ಜನಕನ ಮನದನ್ನವನ್ನು ಕಾಮತರು ಕ್ರಿಸ್ತಾಯನ ಎಂದೂ ಕರೆದಿದ್ದಾರೆ. ಪ್ರತಿಯೊಂದು ಪದ್ಯವೂ ಎಂಟು ಸಾಲುಗಳಲ್ಲಿದೆ. ಮೊದಲ ಸಾಲಿನಲ್ಲಿ ೨೦ ಮಾತ್ರೆಗಳಿದ್ದರೆ ನಂತರದ್ದು ೧೫ ಹೀಗೆ ೨೦,೧೫,೨೦,೧೫,೨೦,೧೫,೨೦,೧೫ ಮಾತ್ರೆಗಳು ಬರುತ್ತವೆ. ಆದರೆ ಗಣ ವರ್ಗೀಕರಣ ಮಾಡುವಾಗ ಎಷ್ಟು ಮಾತ್ರೆಗೊಂದು ಗಣ ಎಂಬುದು ತಿಳಿಯುತ್ತಿಲ್ಲ. ಗಣವಿಭಜನೆಗೆ ಹೋದಾಗ ಅದು ಅಂಶ ಛಂದಸ್ಸಿನಂತೆ ತೋರುತ್ತದೆ. ಒಂದು ಪದ್ಯನೋಡಿ:
ಮಾತು ಕದ್ದಾಲಿಸಿದ ರೆಬೇಕನು ತಾನೆ
ತನ್ನೊಲವಿನ ಸುಕುಮಾರನಿಗಾಗಿ
ಹೂಡಿದಳು ಸ್ತ್ರೀಸಹಜ ಹಂಚಿಕೆಯ ತವಕದಲಿ
ಅಳುಕುತಿಹ ಮಗನನ್ನು ಕಳುಹಿದಳು
ಮೇಕೆಗಳನೆರಡು ತರಲೆಂದವನ್ನಟ್ಟು ಸವಿ
ಯೂಟವಣಿಗೊಳಿಸಿದಳು, ಮೇಕೆಗಳ
ತೊಗಲಿಂದ ಯುವಕನಾ ಕೈ ಕತ್ತು ಸುತ್ತಿದಳು
ಏಸಾವಿನಾ ಬಟ್ಟೆ ತೊಡಿಸಿದಳು
ಇದರಲ್ಲಿ ಪ್ರಾಸದ ಹಂಗಿಲ್ಲ, ಭಾಷೆಯೂ ಸುಲಲಿತವಾಗಿದೆ. ಆದರೆ ಛಂದಸ್ಸಿನ ಬಂಧಕ್ಕೆ ಅಳವಡುವ ನಿಟ್ಟಿನಲ್ಲಿ ಕೆಲವೆಡೆ ಒತ್ತಕ್ಷರಗಳನ್ನು ವರ್ಜಿಸಿರುವುದು ದೋಷವೆಂಬಂತೆ ಕಣ್ಣಿಗೆ ರಾಚುತ್ತದೆ. ನೋಡಿ,
ಎಯ್ತಂದವನಿಗೆ ನಿನ ಮನೆಯಲೇ ನಾನಿಂದು
ತಂಗುವುದು ಎಂದೊಸಗೆಯನೆ ನುಡಿದ
ಸಖ್ಖಾಯನಿಗೊ ಇದನು ಕೇಳ್ದೆಲ್ಲಿಲದ ಸಂಭ್ರ
ಜನರಿಗೊ ವಿಭ್ರಮವು. ಯಃಕಶ್ಚಿ
ವಸೂಲಿಗರ ಪಂಗಡದ ಮುಖಂಡನೆ ಇವನು,
ಈತನಲಿ ತಂಗುವುದು ಗುರುದೇವ
ನಿಗೆ ತರವೆ? ಎಂದು ಗೊಣಗಿದರು ನೆರೆದ ಮಡಿವಂತ
ತರು. ಪ್ರಭು ನಿರೀಕ್ಷಿಸಿದುದೂ ಇದನೆ.
ಪದ್ಯದ ಮೂರನೇ ಸಾಲಿನಲ್ಲಿಕೇಳ್ದೆಲ್ಲಿಲದ’  ಎಂಬ ಪ್ರಯೋಗವಿದೆ. ಕಾರಕ್ಕೆ ಒತ್ತು ಇಲ್ಲದಿರುವುದರಿಂದ ಇದು ನಮಗೆ ಅಪಭ್ರಂಶವಾಗಿ ಕಾಡುತ್ತದೆ. ಅಂದರೆ ಫಾದರ್ ದೇವದತ್ತ ಕಾಮತರು ಅಲ್ಪಜ್ಞರೆಂದಲ್ಲ. ಅವರು ಸಂಸ್ಕೃತದ ಪಂಡಿತೋತ್ತಮರು. ಅವರು ಕನ್ನಡವನ್ನು ಸಂಸ್ಕೃತದ ಜಾಯಮಾನಕ್ಕೆ ಹೊಂದಿಸುತ್ತಾರೆಂಬುದೇ ಅಸಮಾಧಾನದ ಸಂಗತಿ. ಇರಲಿ ಬಿಡಿ ನಡೆವರೆಡುಹದೇ ಕುಳಿತರೆಡಹುವರೇ. ಡಾಕ್ಟ್ರಿನ್ ಆಫ್ ಮಧ್ವಾಚಾರ್ಯ ಎಂಬುದು ಅವರ ಸಂಶೋಧನಾ ಪ್ರಬಂಧ. ಮಂಗಳೂರಿನ ಗುರುಮಠದಲ್ಲಿ ದೈವಶಾಸ್ತ್ರವನ್ನು ಬೋಧಿಸಿದವರು. ಅವರ ಕಾವ್ಯ ಬುಕ್ ಶೆಲ್ಫುಗಳಲ್ಲಿ ಧೂಳು ತಿನ್ನದೆ ಜನಮನದ ಕಾವ್ಯವಾಗಲಿ ಎಂದು ಹಾರೈಸುತ್ತೇನೆ.

ಶುಕ್ರವಾರ, ಜೂನ್ 28, 2013

ಅನುವಾದ

ಅನುವಾದಗಳಲ್ಲಿ ಹೆಚ್ಚಿನವರು ಇಂಗ್ಲಿಷ್ ಪದಗಳಿಗೆ ಸಂವಾದಿಯಾಗಿ ಸಂಸ್ಕೃತ ಪದಗಳನ್ನು ಕೊಟ್ಟುಬಿಡುತ್ತಾರೆ. ಕನ್ನಡ ಪದಗಳಿಗಿಂತ ಅವು ಹೆಚ್ಚಿನ ಮರ್ಯಾದೆ ಗೌರವ ತಂದುಕೊಡುತ್ತದೆಂಬುದು ಅವರ ವಾದ. ಅದು ಹೇಗೆಂದರೆ, WIFE ಎಂಬುದನ್ನು ಅವರು ಪತ್ನಿ/ಭಾರ್ಯೆ ಎಂಬುದಾಗಿ ಅನುವಾದಿಸುತ್ತಾರೆ. ಹೆಂಡತಿ ಎಂದು ಬರೆದರೆ ಗಂಡನ ಗೌರವ ಕಡಿಮೆಯಾಗುತ್ತದೆಂಬ ಭಾವನೆಯಿರಬಹುದು, ಪತ್ನಿ ಎಂದು ಬರೆದರೆ ಗಂಡ ಹೆಂಡತಿ ಇಬ್ಬರಿಗೂ ಮರ್ಯಾದೆ ಎಂದೂ ಕೂಡಾ ಇರಬಹುದೇನೋ? ಇಂತಹ ಅನುವಾದವನ್ನು ಒಪ್ಪಿಕೊಳ್ಳಲೇಬೇಕು ಎಂಬಂತ ಅನಿವಾರ್ಯತೆ ಇಂದು ಸಾರ್ವತ್ರಿಕವಾಗಿಬಿಟ್ಟಿದೆ.
ಹೀಗೆ ನಾವು ಕನ್ನಡದ್ದೇ ಆದ ಮೂಡಣ ಪಡುವಣಗಳನ್ನು ಬಿಟ್ಟು ಪೂರ್ವ ಪಶ್ಚಿಮ ಎಂದು ಬಳಸುತ್ತಿದ್ದೇವೆ. ಈ ನಿಟ್ಟಿನಲ್ಲಿ ತಮಿಳರ ಭಾಷಾಭಿಮಾನ ಅನುಕರಣೀಯ. RADIOಗೆ ನಮ್ಮವರು ಆಕಾಶವಾಣಿ ಎಂದು ಹೆಸರಿಟ್ಟರೇನೋ ಸರಿಯೇ, ಆದರೆ ತಮಿಳರು ಅದನ್ನು ವಾನ್ (ಆಗಸ) ಉಲಿ (ವಾಣಿ) ಎಂದರೆ ವಾನುಲಿ ಎಂದು ಕರೆದರು. ಆಮೇಲೆ ನಮ್ಮ ಕೆಲ ಕೇಂದ್ರಗಳೂ ಬಾನುಲಿ ಎಂದು ಕರೆದುಕೊಂಡವು ಎಂಬುದು ಹಳೆಕತೆ. ನಮ್ಮಲ್ಲೇ TEST BED ಎಂಬುದನ್ನು ನಮ್ಮ ಸ್ನೇಹಿತರೊಬ್ಬರು ಪರೀಕ್ಷಾತಲ್ಪ ಎಂಬುದಾಗಿ ಅನುವಾದಿಸಿದ್ದರು. ಅವರು ಪರೀಕ್ಷೆ ನಡೆಸುವ ಹಾಸಿಗೆ ಎಂದು ಮಾಡಬೇಕಿತ್ತು. ಆಗ ಜನರು ಹಾಸಿಗೆಯ ಮೇಲೆ ಅದೆಂಥ ಪರೀಕ್ಷೆ ಎಂದು ಕೇಳುತ್ತಿದ್ದರು. ಅದು ಕಂಡಿತ ನಗೆಪಾಟಲಿನ ವಿಷಯ. ಅದಕ್ಕೇ ಸುಸಂಸ್ಕೃತರಾದ ಅವರು ಸಂಸ್ಕೃತದ ಮರೆಹೊಕ್ಕು ತಲ್ಪ ಎಂದದ್ದು. ಪದಶಃ ಅನುವಾದ ಮಾಡಿದರೆ ಆಗೋದೇ ಹೀಗೆ.
ಟೆಸ್ಟ್ ಬೆಡ್ ಎಂಬ ಪದವನ್ನು ನಿಘಂಟು ನೋಡಿ ಅರ್ಥ ಹುಡುಕದೆ ಅದು ಬಳಕೆಯಾಗುತ್ತಿರುವ ಜಾಗ ಎಂಥದು, ಅಲ್ಲೇನು ಕೆಲಸ ನಡೆಯುತ್ತದೆ ಎಂದು ಅರಿತರೆ ಅನುವಾದ ಸಲೀಸು. ವಿಮಾನಕ್ಕೆ ಇಂಜಿನನ್ನು ಅಳವಡಿಸುವ ಮುನ್ನ ಅದು ಹಾರಾಟಕ್ಕೆ ಯೋಗ್ಯವೇ ಎಂದು ಪರೀಕ್ಷಿಸುವುದು ಈ ಟೆಸ್ಟ್ ಬೆಡ್ಡಿನಲ್ಲಿಯೇ. ಅಂದ ಮೇಲೆ ವಿಮಾನದ ಎಲ್ಲ ಮಾನಕಗಳನ್ನೂ ನೆಲದಲ್ಲಿಯೇ ಅಳವಡಿಸಿ ಅದಕ್ಕೆ ತಕ್ಕಂತೆ ಯಂತ್ರವು ವರ್ತಿಸುತ್ತಿದೆಯೇ ಎಂದು ಒರೆಗೆ ಹಚ್ಚಿ ನೋಡುವುದು. ಆದ್ದರಿಂದ ನಾನು TEST BED ಎಂಬುದನ್ನು ’ಒರೆಪೀಠ’ ಎಂದು ಕರೆದೆ. ಜನ ಅದನ್ನು ಒಪ್ಪಿಕೊಂಡಿದ್ದಾರೆ.
ಈಗ ನಾವಿರುವುದು ಇಂಟರ್ ನೆಟ್ ಕಾಲದಲ್ಲಿ. ಇಂಟರ್ನೆಟ್ ಎಂಬ ಪದವನ್ನಾದರೂ ನಾವು ಕನ್ನಡದ ಜಾಯಮಾನಕ್ಕೆ ತಕ್ಕಂತೆ ರೂಪಿಸಬೇಕಿತ್ತು. ಆದರೆ ಅದು ಅಂತರಜಾಲ ಎಂಬುದಾಗಿ ಬಳಕೆಗೆ ಬಂದುಬಿಟ್ಟಿತು. INTERNATIONAL ಎಂಬುದನ್ನು ಅಂತರ ರಾಷ್ಟ್ರೀಯ ಎಂಬುದಾಗಿ ಬಳಸಿಕೊಂಡು ಬಂದುಬಿಟ್ಟಿದ್ದೇವೆ. ಅದೇ ನೇರದಲ್ಲಿ INTERNET ಬಳಸಿದ ಮೊದಲಿಗರು ಮೊದಲ ಪದಕ್ಕೆ ಅಂತರ ಎಂದು ಅನ್ವಯಿಸಿದರು. ಇನ್ನು ಎರಡನೇ ಪದ NET ಎಂಬುದನ್ನು ಬಲೆ ಎನ್ನಬಹುದಾಗಿತ್ತಲ್ಲವೇ? ಇಲ್ಲೂ ಮತ್ತೆ ಸಂಸ್ಕೃತಕ್ಕೆ ಜೀತಗೈಯುವುದು ಸರಿಯೇ?
ಮೊನ್ನೆಮೊನ್ನೆ ಕನ್ನಡದ ಕೋಟ್ಯಾಧಿಪತಿಯಲ್ಲಿ TRAIN ಎನ್ನಲು ಕನ್ನಡ ಪದವೇನು ಎಂದು ಕೇಳಿ ಅದಕ್ಕೆ ಉತ್ತರವನ್ನೂ ಹೇಳಿದರು. ಅದು ’ಧೂಮ್ರಶಕಟ’ಅಂತೆ. ಅಲ್ಲಪ್ಪಾ ನಾವು ಚಿಕ್ಕ ಹುಡುಗರಿದ್ದಾಗಲೇ TRAIN ಗೆ ಉಗಿಬಂಡಿ ಎಂದು ಕರೆದಿದ್ದು ಸಾಮಾನ್ಯವಾಗಿತ್ತು. ಉಗಿಯ ಅಥವಾ ಹಬೆಯ ಶಕ್ತಿಯಿಂದ ಓಡುವ ಬಂಡಿ. ಕೈಲಾಸಂ ಹೇಳುವಂತೆ ಎತ್ತು ಕುದುರೆ ಇಲ್ಲದೆ ಗಾಡಿ. ಈಗ ಹಬೆಯ ಬಂಡಿ ಇಲ್ಲ, ಏನಿದ್ದರೂ ಡೀಸೆಲ್ ಅಥವಾ ವಿದ್ಯುತ್ತಿನಿಂದ ಚಲಿಸುವ ರೈಲು. ಆದರೆ ನಮ್ಮ ಬಂಡಿಯನ್ನು ನಾವು ಶಕಟ ಎನ್ನುವ ಸಂಕಟವಾದರೂ ಏಕೆ?
CRECHE ಅನ್ನು ಶಿಶುಪಾಲನ ಕೇಂದ್ರ ಎಂದು ಬರೆದಿರುವುದನ್ನು ನೋಡಿದ್ದೇವಲ್ಲವೇ? ಅದೂ ಸಹ ಇಂತಹುದೇ ವಿಪರೀತ ಬುದ್ಧಿಯ ಅನುವಾದ ಎನ್ನಬಹುದು. ಉದ್ಯೋಗಸ್ಥ ಮಹಿಳೆಯರು ತಮ್ಮ ಮಕ್ಕಳನ್ನು ಅಂದರೆ ಎಳೆಯ ಕೂಸುಕಂದಮ್ಮಗಳನ್ನು ಆರೈಕೆಗಾಗಿ ಬಿಟ್ಟುಹೋಗುವ ಮನೆಯನ್ನು ಚಿಕ್ಕದಾಗಿ ಕೂಸಿನಮನೆ, ಕಂದಕುಟೀರ, ಮಕ್ಕಳಾರೈಕೆ ಎನ್ನಬಹುದಲ್ಲ? ಶಿಶುಪಾಲನ ಕೇಂದ್ರ ಅನ್ತಲೇ ಯಾಕೆ, ಶಿಶುಪಾಲನಿಗಿಂತಲೂ ದುರ್ಯೋಧನ ತನ್ನ ಮಕ್ಕಳ ಮೇಲೆ ಪ್ರೀತಿ ಹೊಂದಿದ್ದವನೆಂದು ರನ್ನನ ಗದಾಯುದ್ಧದಲ್ಲಿ ಓದಿದ್ದೇವೆ. ತಂದೆಗೆ ಮಗನಾದವನು ಎಳ್ಳುನೀರು ಬಿಡಬೇಕಾದುದು ಧರ್ಮ, ಆದರೆ ನನಗಿಂತ ಮೊದಲು ನನ್ನ ಮಗ ಯುದ್ಧದಲ್ಲಿ ಮಡಿದು ನಾನೇ ಅವನಿಗೆ ತರ್ಪಣ ಬಿಡುವಂತಾಯಿತೇ ಎಂದು ಹಲುಬುತ್ತಾನೆ. ಆದ್ದರಿಂದ ಶಿಶುಪಾಲನ ಕೇಂದ್ರ ಎನ್ನುವ ಬದಲು ದುರ್ಯೋಧನ ಕೇಂದ್ರ ಎಂದೇಕೆ ಕರೆಯಬಾರದು? ಹಾಗೆಯೇ ಕೆಲವು ಸ್ಥಳಗಳನ್ನು ಕೀಚಕ ಕೇಂದ್ರ ಎಂದೂ ಕರೆಯೋಣ. ಇರಲಿ, ಮತ್ತೆ ಇಂಟರ್‌ನೆಟ್ ಗೆ ಬರೋಣ. ಈಗಾಗಲೇ ಕೆಲ ಕನ್ನಡಿಗರು ಇದನ್ನು ಮಿನ್ ಬಲೆ ಎಂದು ಕರೆದಿದ್ದಾರೆ. ಮಿಂಚಿನ ವೇಗದಲ್ಲಿ ಬೇಕಾದ್ದನ್ನು ತೆರೆದು ತೋರುವ ಇಂಟರನೆಟ್ಟಿಗೆ ಮಿಂಬಲೆ ತುಂಬಾನೇ ಸರಿಹೊಂದುವ ಹೆಸರಾಗಿದೆ. ನಿಧಾನಗತಿಯ ನಮ್ಮ ಅಂಚೆ ವಿಧಾನಕ್ಕಿಂತ ಮಿಂಚಿನ ಸಂಚಾರದ ಅಂಚೆಯಾದ ಈ-ಮೇಲ್ ಅನ್ನು ಮಿನ್ನಂಚೆ ಎಂದು ಕರೆದು ಅದು ಚಲಾವಣೆಗೆ ಬರುತ್ತಲಿದೆ. ಹಾಗೆಯೇ ಮೊಬೈಲ್ ದೂರವಾಣಿಗೆ ಜಂಗಮವಾಣಿ ಎಂಬ ಪ್ರಯೋಗವೂ ಜನಪ್ರಿಯವಾಗಿದೆ.
ಅದೇ ರೀತಿ ನಮ್ಮ ದೈನಂದಿನ ಬಳಕೆಯ ಇಂಗ್ಲಿಷ್ ಪದಗಳಿಗೆ ಕನ್ನಡದ್ದೇ ಆದಂತಹ ಪದಗಳನ್ನು ಹುಡುಕಿ ಬಳಸಿ ಜನಪ್ರಿಯಗೊಳಿಸೋಣ.

ಬುಧವಾರ, ಜೂನ್ 19, 2013

ಒಂದು ಒಡಪು

ಗಂಜಾಮಿನ ಅಮಲೋದ್ಭವಿ ತಾಯಿಯ ಗುಡಿಯ ಮುಂದೆ ಒಂದು ಪ್ರಾಚೀನ ಸ್ಮಾರಕವಿದ್ದು ಅದರಲ್ಲಿ ತೂಗಾಡುತ್ತಿರುವ ಗಂಟೆಯ ಮೇಲೆ ’ಹಿಲ್ಡಾ ಆ ಪಾರೀ’ ಅನ್ತ ಬರೆದಿದೆ. ಅಂದರೆ ಪ್ಯಾರಿಸ್ಸಿನ ಹಿಲ್ಡಾ ಎಂದರ್ಥ. ಇಂಥ ಅರ್ಥಗಳನ್ನು ಹುಡುಕುವುದು ಈಗ ಕಷ್ಟವೇನಲ್ಲ. www.translate.google.com ತೆರೆದು ಫ್ರೆಂಚ್ ಭಾಷೆಯಿಂದ ಕನ್ನಡಕ್ಕೆ ಆಯ್ದುಕೊಂಡರೆ ಸಾಕು. ಏನೆಲ್ಲವನ್ನೂ ತರ್ಜುಮೆ ಮಾಡಿಕೊಳ್ಳಬಹುದು. ಅಲ್ಲಿಯೇ ಶಿಲುಬೆ ಕಲ್ಲಿನ ಮೇಲೆ ಬರೆದಿರುವ IHS ಎಂದರೇನೆಂದು ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಫಾದರ್ ಮೋಹನ್ ಯೇ.ಸ. ಅವರನ್ನು ಕೇಳಿದ್ದೆ. ಅದಕ್ಕವರು ’ಇಯೇಸುಸ್ ಹೊಮಿನೆಸ್ ಸಾಲ್ವೆತೋರುಮ್’ ಎಂದು ಉತ್ತರಿಸಿದ್ದರು. ಕೀರ್ತನೆ ಪುಸ್ತಕದ ಮೇಲೆ ಅಚ್ಚಾಗಿರುವ AMDG ಎಂಬ ಒಗಟನ್ನು ಬಿಡಿಸಲು ಈಗ ಮೋಹನರ ನೆರವು ಬೇಕಿಲ್ಲ, ಗೂಗಲ್ ಸಾಕು. ಅಲ್ಲಾ ಈ ಗೂಗಲ್ ಮೂಲಕ ಏನೆಲ್ಲವನ್ನೂ ಬಿಡಿಸಬಹುದುಲ್ಲ ಎಂಬುದೇ ಆಶ್ಚರ್ಯ. ಬಹುಶಃ ಮಕ್ಕಳು ಏನಾದರೂ ತರಲೆ ಪ್ರಶ್ನೆ ಮಾಡಿದಾಗ ಹೋಗಿ ಅಮ್ಮನ ಹತ್ರ ಕೇಳು ಅನ್ನೋದು ಬದಲಾಗಿ ಹೋಗಿ ಗೂಗಲ್ ಜಾಲಾಡು ಎನ್ನುವಂತ ಕಾಲ ಬಂದೀತೇನೋ?
ಯಾಕೆ ಇಷ್ಟೆಲ್ಲ ಪೀಠಿಕೆ ಅಂದರೆ, ಮೊನ್ನೆ ಭಾನುವಾರ ಶುಭಸಂದೇಶ ಓದುವಾಗ ಒಂದು ಒಗಟಿನಂತ ಮಾತು ಬಂತು. ಅದು ’ಯೇಸುವಿನ ತಲೆಗೆ ಸುತ್ತಿದ್ದ ಬಟ್ಟೆ ಆ ನಾರುಮಡಿಗಳೊಡನೆ ಇರದೆ ಅದನ್ನು ಮಡಚಿ ಪ್ರತ್ಯೇಕವಾಗಿ ಇಟ್ಟಿರುವುದನ್ನು ಕಂಡನು . . ನೋಡಿ ನಂಬಿದನು’. ಮಡಚಿ ಪ್ರತ್ಯೇಕವಾಗಿ ಇಟ್ಟಿರುವುದನ್ನು ನೋಡಿ ನಂಬಿದನು ಎಂಬುದೇ ಆ ಒಡಪು. ಆ ಒಡಪನ್ನು ಬಿಡಿಸಲು ಮತ್ತೆ ಗೂಗಲ್ ತಡಕಿದೆ. ನಮ್ಮ ಕನ್ನಡದ ಪವಿತ್ರ ಬೈಬಲ್ಲಿನ ಇದೇ ಪಠ್ಯವನ್ನು ಕ್ಲರೇಷಿಯನ್ ಸಂಸ್ಥೆಯು ಪ್ರಕಟಿಸಿರುವ Christian Community Bible ನಲ್ಲಿ ನೋಡಿದಾಗ ಅದು ವಿಭಿನ್ನವಾಗಿತ್ತು. ಆ ಪುಸ್ತಕದ ಮುಖಪುಟದಲ್ಲಿ complete text translated from original languages ಎಂದು ಹೇಳಲಾಗಿದೆ. ಅದರ ಪ್ರಕಾರ John 20:7-9 ರಲ್ಲಿನ ಪಠ್ಯ ಹೀಗಿದೆ; ‘The napkin, which had been around his head was not lying flat like the other linen cloths, but lay rolled up in its place. Then the other disciple who had reached the tomb first also went in, he saw and believed. Scripture clearly said that he must raise form the dead, but they had not yet understood that.’
ಆದರೆ ಅದು ನ್ಯಾಪ್ಕಿನ್ ಅಥವಾ ಕರವಸ್ತ್ರ ಅಲ್ಲವೆಂದು ಹೇಳಿ ಈ ಜಾಲತಾಣದಲ್ಲಿ ನಡೆದಿರುವ ಚರ್ಚೆ ಹೀಗಿದೆ: When Peter, and then later John, entered the tomb they found something intriguing about these burial garments: something so utterly astounding that it erased their doubts and established their faith in our Lord's resurrection from the dead. They "saw the strips of linen lying there, as well as the burial cloth that had been around Jesus' head. The cloth was folded up by itself, separate from the linen" (John 20:7, NIV). Now, you and I, as we read this statement, may not find much to astound us. But, most translations have not really captured, in their English rendering of the text, what Peter and John were beholding and perceiving in that tomb. Indeed, in some translations, the wording is even misleading. For example, there are a few versions where the face/head wrap is referred to as a "napkin" (King James Version, American Standard VersionRevised Standard VersionYoung's Literal TranslationNew English Bible). These are major translations that have greatly influenced our religious language. Another unfortunate rendering of the Greek term is "handkerchief" (New King James VersionDarby Translation, the modern translation by J. B. Phillips, and even the version by Hugo McCord). Most versions, however, simply render the Greek term as "the wrapping" or "the cloth." The words "napkin" and "handkerchief" leave the wrong impression in our minds, and can lead to some strange interpretations (such as the "eRumor" making the rounds on the Internet in which a "folded napkin at the dinner table" is supposed to convey to a servant that the master is coming back -- well, there was no such Jewish custom in that day; such "dinner napkins" were not even used, and a number of Orthodox Jewish rabbis and scholars in Jerusalem, when questioned about this, stated they had never even heard of such a thing).
 ಅಂದ ಮೇಲೆ ಕನ್ನಡದ ಭಾಷಾಂತರದಲ್ಲಿ ಹೇಳಿರುವ ತಲೆಗೆ ಸುತ್ತಿದ್ದ ಬಟ್ಟೆ ಎಂಬುದು ಸರಿಯಾದ ಪದವಾಗಿದೆ. ಆದರೆ ಅದನ್ನು ಮಡಚಿ ಇಟ್ಟಿದ್ದನ್ನು ನೋಡಿ ನಂಬಿದ್ದಾದರೂ ಏನನ್ನು ಮತ್ತ ಹೇಗೆ ಎಂಬುದು ನಿಜವಾದ ಒಡಪು. ಇದನ್ನು ಬಿಡಿಸಿ ಹೇಳುವರುಂಟೇ?


ಸೋಮವಾರ, ಜೂನ್ 10, 2013

ಗಿರೀಶ್ ಕಾರ್ನಾಡ್

ಮಹಾರಾಷ್ಟ್ರದ ಮಾಥೇರಾನದಲ್ಲಿ ೧೯೩೮ ಮೇ ೧೯ರಂದು ಜನಿಸಿದ ಗಿರೀಶ ಕಾರ್ನಾಡರ ಪ್ರಗತಿಪರ ವಿಚಾರಗಳು ತಂದೆಯಿಂದ ಪಡೆದ ಬಳುವಳಿ. ಮದುವೆಯಾದ ಹೊಸತರಲ್ಲೇ ಪತ್ನಿಯನ್ನು ಕಳೆದುಕೊ೦ಡ ತಂದೆ ರಘುನಾಥರು, ಸಮಾಜವನ್ನು ಧಿಕ್ಕರಿಸಿ ಬಾಲ್ಯವಿಧವೆ ಕೃಷ್ಣಾಬಾಯಿಯನ್ನು ಮದುವೆಯಾದರು. ಇವರ ದಾಂಪತ್ಯದ ಫಲವೇ ಗಿರೀಶ್ ಕಾರ್ನಾಡ್. ಗಿರೀಶರ ಮನೆಮಾತು ಕೊಂಕಣಿ, ಹಾಗೂ ಅವರ ಶಿಕ್ಷಣವೆಲ್ಲ ಕರ್ನಾಟಕದಲ್ಲೇ ನಡೆಯಿತು. ಆಮೇಲೆ ಉನ್ನತ ಶಿಕ್ಷಣಕ್ಕಾಗಿ ಲಂಡನ್ನಿಗೆ ಹೋದ ಅವರು ಅಲ್ಲಿನ ಆಕ್ಸ್ಫರ್ಡ್ ವಿವಿಯಲ್ಲಿ ಇಂಗ್ಲಿಷ್ ಅಭ್ಯಸಿಸಿದರು. ಅದರ ಚರ್ಚಾವೇದಿಕೆಯನ್ನು ಮುನ್ನಡೆಸಿದ ಮೊದಲ ಪೌರ್ವಾತ್ಯರಿವರು. ಅದರ ಪರಿಣಾಮವಾಗಿ ಇವರಿಗೆ ಇಂಗ್ಲೆಂಡಿನ ವಾಗ್ಮಿಗಳ ಕಲಾವಿದರ ಸಹವಾಸ ಲಭ್ಯವಾಯಿತು. ಅದು ಅವರ ಒಳಪ್ರತಿಭೆಯನ್ನು ಹೊರಗೆಡವಿತು. ಅಲ್ಲಿಂದ ಚಿಕಾಗೊ ವಿವಿಗೆ ಪ್ರಾಧ್ಯಾಪಕರಾಗಿ ತೆರಳಿದ ಅವರು ನಾಟಕಗಳ ಮೂಲಕ ಸಾಮಾಜಿಕ ಪರಿವರ್ತನೆಗಾಗಿ ಶ್ರಮಿಸಿದರು. ಅಲ್ಲಿದ್ದಾಗಲೇ ಕನ್ನಡದಲ್ಲಿ ನಾಟಕಗಳನ್ನು ರಚಿಸಿದರು.
ನಮ್ಮ ನಾಡಿಗೆ ಹಿಂದಿರುಗಿದ ಮೇಲೆ ಅವರು ಪ್ರದರ್ಶಿಸಿದ ನಾಟಕಗಳು ಜನಮನ ಗೆದ್ದವು ಮಾತ್ರವಲ್ಲ ಹಿಂದೀ, ಪಂಜಾಬಿ, ಮರಾಠಿ ಮುಂತಾದ ಭಾಷೆಗಳಿಗೆ ಅನುವಾದಗೊಂಡು ಪ್ರದರ್ಶನಗೊಂಡವು. ಹಾಗೆ ನೋಡಿದರೆ ಅವರು ಇಂಗ್ಲಂಡಿಗೆ ತೆರಳುವ ಮೊದಲೇ ರಚಿಸಿದ್ದಯಯಾತಿನಾಟಕ ಧಾರವಾಡದ ಮನೋಹರ ಗ್ರಂಥಮಾಲೆಯಲ್ಲಿ ಪ್ರಕಟವಾಗಿತ್ತು. ವಿದೇಶದಿಂದ ಹಿಂದಿರುಗಿದ ಮೇಲೆ ಬರೆದತುಘಲಕ್ನಾಟಕ ಜವಾಹರಲಾಲ್ ಅವರ ವಿಡಂಬನೆಯಾಗಿತ್ತು. ನಾಟಕ ನವದೆಹಲಿಯಲ್ಲಿ ನೂರಾರು ಪ್ರದರ್ಶನ ಕಂಡು ಗಿರೀಶರಿಗೆ ಅಪಾರ ಹೆಸರು ತಂದುಕೊಟ್ಟಿತು. ಅವರುಹಯವದನ’, ‘ಅಂಜುಮಲ್ಲಿಗೆ’, ‘ನಾಗಮಂಡಲ’, ‘ತಲೆದಂಡ’, ’ಅಗ್ನಿ ಮತ್ತು ಮಳೆಮೊದಲಾದ ನಾಟಕಗಳನ್ನು ಬರೆದಿದ್ದಾರೆ. ಬಿಬಿಸಿಗಾಗಿ ನಾಟಕ:’ಟಿಪ್ಪುವಿನ ಕನಸುಗಳು’. ಕನ್ನಡದಲ್ಲಿ ನಾಟಕ ರಚಿಸುತ್ತ, ಇತರ ಭಾಷೆಗಳೊಂದಿಗೆ ಸಾಂಸ್ಕೃತಿಕ ರಾಯಭಾರತ್ವ ವಹಿಸಿರುವ ಕಾರ್ನಾಡ್ ನಟರಾಗಿ, ನಿರ್ದೇಶಕರಾಗಿ ಹೆಸರಾಗಿದ್ದಾರೆ. ಆರಂಭದಲ್ಲಿ ರಂಗಭೂಮಿ ನಟರಾಗಿದ್ದವರು ಹೊಸ ವಿಚಾರಗಳತ್ತ ಗಮನ ಹರಿಸಿ ನಾಟಕ ರಚನೆಗೆ ಚಿಂತಿಸಿದರು. ಹೀಗಾಗಿ ಪುರಾಣ, ಇತಿಹಾಸಗಳ ಪಾತ್ರಗಳನ್ನು ಸಮಕಾಲೀನ ಸಂದರ್ಭದ ಆಗುಹೋಗುಗಳೊಂದಿಗೆ ಸಮೀಕರಿಸುವ ವಾಸ್ತವ ನೆಲೆಗಟ್ಟಿನಲ್ಲಿ ನೇಯ್ದರು.
ಸಿನಿಮಾರಂಗದಲ್ಲೂ ಕಾರ್ನಾಡರದು ಬಹುಮುಖ ಪ್ರತಿಭೆ. ಕನ್ನಡ ಚಿತ್ರರಂಗಕ್ಕೊಂದು ಹೊಸ ಆಯಾಮ ದೊರಕಿಸಿಕೊಟ್ಟವರೇ ಅವರು. ಅವರು ಚಿತ್ರಕತೆ ಬರೆದು ನಟಿಸಿದಸಂಸ್ಕಾರಚಲನಚಿತ್ರ ಕನ್ನಡಕ್ಕೆ ಮೊತ್ತಮೊದಲ ಸ್ವರ್ಣಕಮಲ ತಂದುಕೊಟ್ಟಿತು. ಅದು ಕನ್ನಡದ ಮೊದಲ ಕಲಾತ್ಮಕ ಚಿತ್ರವೂ ಆಗಿದೆ. ಅಲ್ಲಿಂದ ಮುಂದೆ ಅವರು ನಿರ್ದೇಶಿಸಿದ  ‘ತಬ್ಬಲಿಯು ನೀನಾದೆ ಮಗನೆ’, ‘ಕಾಡು’, ‘ಒಂದಾನೊಂದು ಕಾಲದಲ್ಲಿಚಿತ್ರಗಳು ಪ್ರಶಸ್ತಿಗಳ ಸರಮಾಲೆಯನ್ನೇ ಕಂಡವು. ಕುವೆಂಪು ಅವರಕಾನೂರು ಹೆಗ್ಗಡಿತಿಯನ್ನು ನಿರ್ದೇಶಿಸಿದ್ದು ಅವರ ಮತ್ತೊಂದು ಹೆಗ್ಗಳಿಕೆ. ಚಿತ್ರವು ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪುರಸ್ಕಾರ ಪಡೆದು, ಪನೋರಮಕ್ಕೂ ಆಯ್ಕೆಯಾಯಿತು. ಹಿಂದೀ ಭಾಷೆಯಲ್ಲೂ ಅವರುಉತ್ಸವ’, ‘ಗೋಧೂಳಿಎಂಬ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ’ ದಿನಗಳುಎಂಬ ಕನ್ನಡ ಚಲನಚಿತ್ರದಲ್ಲಿ ಅವರದು ಮನೋಜ್ಞ ಅಭಿನಯ.
ಇವಲ್ಲದೆ ಅನೇಕ ಸಾಕ್ಷ್ಯಚಿತ್ರಗಳನ್ನೂ ನಿರ್ದೇಶಿಸಿದ್ದಾರೆ, ಪರಿಸರ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದಾರೆ, ಮೃಣಾಲ್ ಸೇನ್, ಸತ್ಯಜಿತ್ ರೇ, ಶ್ಯಾಮ್ ಬೆನೆಗಲ್ ಮುಂತಾದ ಪ್ರಸಿದ್ಧರ ನಿರ್ದೇಶನದಲ್ಲಿ ಅಭಿನಯಿಸಿದ್ದಾರೆ. ವಿಜ್ಞಾನ-ತಂತ್ರಜ್ಞಾನದ ಮುನ್ನಡೆಯನ್ನು ಬಿಂಬಿಸುವ, ವಿಜ್ಞಾನಿ ಯಶ್ಪಾಲ್ ಮಾರ್ಗದರ್ಶನದದಿ ಟರ್ನಿಂಗ್ ಪಾಯಿಂಟ್ಎನ್ನುವ ದೂರದರ್ಶನದ ಧಾರಾವಾಹಿಯಲ್ಲಿ ಮುಖ್ಯ ನಿರೂಪಕರಾಗಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದ್ದಾರೆ. ಇವರ ಕೃತಿಗಳನ್ನು ನಮ್ಮ ದೇಶದ ಇತರ ಭಾಷೆಗಳ ಪ್ರಸಿದ್ದ ನಿರ್ದೇಶಕರಾದ ಇಬ್ರಾಹಿಂ ಅಲ್ಕಾಜಿ,ಅಲಿಖ್ ಪದಮ್ಸೀ, ಅರವಿಂದ ಗೌರ್, ಪ್ರಸನ್ನ, ವಿಜಯ ಮೆಹ್ತಾ, ಸತ್ಯದೇವ ದುಬೆ, ಶ್ಯಾಮಾನಂದ ಜಲಾನ್ ಹಾಗೂ ಅಮಲ್ ಅಲ್ಲಾನ ಮುಂತಾದವರು ತಂತಮ್ಮ ರಾಜ್ಯಭಾಷೆಗಳಲ್ಲಿ ಪ್ರಯೋಗಿಸಿದ್ದಾರೆ ಎಂಬುದು ಕಾರ್ನಾಡರಿಗೆ ಮಾತ್ರವಲ್ಲ ಕನ್ನಡಕ್ಕೆ ಹೆಮ್ಮೆ ತರುವ ವಿಷಯವಾಗಿದೆ.

ಕಾರ್ನಾಡರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪ್ರತಿಷ್ಠಿತ ಪದ್ಮಶ್ರೀ, ಪದ್ಮಭೂಷಣ, ಜ್ಞಾನಪೀಠ ಪ್ರಶಸ್ತಿಗಳ ಗೌರವ ದೊರೆತಿದೆ. ನಾಟಕ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಪಡೆದವರಲ್ಲಿ ಕಾರ್ನಾಡ್ ಮೊದಲಿಗರು. ಇಂಗ್ಲೆಂಡಿನಲ್ಲಿ ನೆಹರು ಸೆಂಟರಿನ ನಿರ್ದೇಶಕರಾಗಿಯೂ ಇವರು ಕಾರ್ಯನಿರ್ವಹಿಸಿದ್ದಾರೆ. ನಾಲ್ಕು ಸಾರಿ ಫಿಲಂ ಫೇರ್ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಕನ್ನಡನಾಡಿನ ಹೊರಗಿದ್ದುಕೊಂಡೂ ಕನ್ನಡದ ಕಂಪನ್ನು ದೇಶದೆಲ್ಲೆಡೆ ಹರಡಿದ ಮಹಾನ್ ಕನ್ನಡಪ್ರೇಮಿ ನಮ್ಮ ನಿಮ್ಮೆಲ್ಲರ ಹೆಮ್ಮೆ.

ಶುಕ್ರವಾರ, ಮೇ 10, 2013

ದುಂದುಗಾರ ಮಗ

ಯೇಸುಕ್ರಿಸ್ತನು ಕತೆಗಳ ಮೂಲಕ ಜನರಿಗೆ ಹೊಸ ಸಂದೇಶ ನೀಡುತ್ತಿದ್ದನು. ಅವನು ಹೇಳಿದ ಎಷ್ಟೋ ಕತೆಗಳು ಇಂದಿಗೂ ರಂಜನೀಯವಾಗಿವೆ, ಮಾತ್ರವಲ್ಲ ಪ್ರತಿಸಾರಿಕೇಳಿದಾಗಲೂ ಹೊಸ ಅರ್ಥ ಹೊರಡಿಸುತ್ತವೆ.
ಯೇಸುಕ್ರಿಸ್ತನು ಹೇಳಿದ ಕತೆಗಳಲ್ಲಿ ಬಲು ಸುಂದರವಾದುದು ದುಂದುಗಾರ ಮಗನ ಕತೆ.
ಒಬ್ಬ ಶ್ರೀಮಂತನಿಗೆ ಇಬ್ಬರು ಗಂಡುಮಕ್ಕಳಿದ್ದರು. ಅಪಾರ ಜಮೀನು, ಆಳುಕಾಳು, ಒಳ್ಳೆ ಆಸ್ತಿಪಾಸ್ತಿ, ಯಾವುದಕ್ಕೂ ಕೊರತೆಯಿಲ್ಲದ ಜೀವನ ಅವರದಾಗಿತ್ತು. ಹಿರಿಮಗ ಹೊಲದ‌ಉಸ್ತುವಾರಿ ನೋಡಿಕೊಂಡರೆ, ತಂದೆಯು ಇತರೆಲ್ಲ ವ್ಯವಹಾರಗಳನ್ನು ನೋಡುತ್ತಿದ್ದರು. ಪ್ರಶಾಂತ ಕಡಲಲ್ಲಿ ಬಿರುಗಾಳಿ ಬೀಸಿತೋ ಎಂಬಂತೆ ಆ ಮನೆಯಲ್ಲಿ ಒಂದು‌ಆಘಾತಕಾರೀ ಘಟನೆ ನಡೆಯಿತು. ಯಾಕೋ ಏನೋ ಕಿರಿಮಗ ಅಪ್ಪನ ಎದುರು ಸೆಟೆದು ನಿಂತು ’ಅಪ್ಪಾ ನಿನ್ನ ಆಸ್ತಿಯಲ್ಲಿ ನನಗೆ ಬರಬೇಕಾದ ಪಾಲನ್ನು ಈಗಲೇ ಕೊಟ್ಟುಬಿಡು,ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡು’ ಎಂದ. ಅದೇನು ವಯೋಮಾನದ ಗುಣವೋ, ಸಹವಾಸದೋಷವೋ ಅಥವಾ ಯಾವ ಪ್ರಲೋಭನೆಯೋ ಏನೋ ಅಂತೂ ಪಾಲುತೆಗೆದುಕೊಂಡು ಯಾವುದಾದರೂ ಹೊರದೇಶಕ್ಕೆ ಹೋಗಿ ಸ್ವತಂತ್ರವಾಗಿ ಬದುಕಬೇಕೆಂದು ಆತ ಬಯಸಿದ. ಅವನ ಈ ವರ್ತನೆ ನೋಡುತ್ತಲೇ ಅಪ್ಪ ದಂಗಾದ. ಮಗನ‌ಅನುಭವದ ಕುರಿತು ಬುದ್ಧಿ ಹೇಳಿದ. ಆದರೆ ಮಗ ಕೇಳಿಯಾನೇ? ಅವನ ಹಠವೇ ಹಠ. ತನಗೆ ಆಸ್ತಿಯಲ್ಲಿ ಪಾಲು ಬೇಕೇಬೇಕೆಂದು ಕುಣಿಯತೊಡಗಿದ. ವಯಸ್ಸಿಗೆ ಬಂದಮಗನನ್ನು ಎದುರು ಹಾಕಿಕೊಳ್ಳಬಾರದೆಂಬ ಲೋಕಜ್ಞಾನವನ್ನು ಮನಸಿಗೆ ತಂದುಕೊಂಡ ತಂದೆ ವಿಧಿಯಿಲ್ಲದೆ ಆಸ್ತಿಯನ್ನು ಪಾಲು ಮಾಡಿಕೊಟ್ಟ.
ಆ ಕಿರಿಮಗನೋ ತನ್ನ ಪಾಲಿನ ಆಸ್ತಿಯನ್ನು ಮಾರಿ ಎಲ್ಲ ಹಣವನ್ನೂ ಗಂಟು ಕಟ್ಟಿಕೊಂಡು ಹೊರದೇಶಕ್ಕೆ ನಡೆದ. ಅಲ್ಲೇನು ಆ ಹಣವನ್ನು ವಿನಿಯೋಗಿಸಿ ಏಳ್ಗೆ ಹೊಂದಿದನೇ?ಇಲ್ಲವೇ ಇಲ್ಲ. ಹಣವನ್ನು ಎಲ್ಲೆಡೆ ದುಂದು ಮಾಡುತ್ತಾ ಕಳೆದ. ಮೋಜು ಮಾಡಿದ, ತಿಂದ, ಕುಡಿದ, ಸೂಳೆಯರ ಸಹವಾಸ ಮಾಡಿದ. ಅವನನ್ನು ದಾರಿತಪ್ಪಿದ ಮಗ‌ಎನ್ನುವುದಕ್ಕಿಂತ ದುಂದುಗಾರ ಮಗ ಎನ್ನುವುದೇ ಸರಿ. ಇಷ್ಟೆಲ್ಲಾ ದುಂದು ಆದ ಮೇಲೆ ಕೈಯಲ್ಲಿ ಹಣ ಉಳಿದೀತೇ? ಕೂತುಣ್ಣುವವನಿಗೆ ಕುಡಿಕೆ ಹಣ ಸಾಲದು ಎಂಬಂತೆ ಕೆಲವೇದಿನಗಳಲ್ಲಿ ಅವನ ಎಲ್ಲ ದುಡ್ಡೂ ಕರಗಿಹೋಯಿತು. ಅವನ ಜೊತೆಯಲ್ಲಿದ್ದವರೆಲ್ಲ ಒಬ್ಬೊಬ್ಬರಾಗಿ ದೂರ ಸರಿದರು. ಹಣವಿದ್ದಾಗ ಮಿತ್ರರಂತಿದ್ದವರು ಅಪರಿಚಿತರಂತೆ ವರ್ತಿಸಿದರು.ಒಂದೊಮ್ಮೆ ಸಿಕ್ಕಸಿಕ್ಕವರಿಗೆಲ್ಲ ಊಟ ಹಾಕಿದ ನೃತ್ಯಗಾತಿಯರ ಮೇಲೆ ಹಣ ಚೆಲ್ಲಿದ ದುಂದುಗಾರನಿಗೆ ಇಂದು ದಿನನಿತ್ಯದ ಊಟಕ್ಕೂ ಗತಿಯಿಲ್ಲವಾಯಿತು. ಕಂಡಕಂಡವರಲ್ಲಿಬೇಡಿ ನಿರಾಶನಾದ. ಎಲ್ಲರೂ ದುಡಿದು ತಿನ್ನೆಂದು ಮೂದಲಿಸಿದರು. ಕೊನೆಗೆ ಅವನ ಯೋಗ್ಯತೆಗೆ ಹಂದಿ ಮೇಯಿಸುವ ಕೆಲಸ ಸಿಕ್ಕಿತು.
ಅವನ ಯಜಮಾನ ಅವನಿಗೆ ಹೊಟ್ಟೆ ತುಂಬ ಊಟ ಹಾಕುತ್ತಿರಲಿಲ್ಲ. ಈಗಂತೂ ಆ ಕಿರಿಮಗ ತನ್ನ ಹೀನಾಯ ಸ್ಥಿತಿಗಾಗಿ ಹಲುಬಿದ, ಕೊರಗಿದ. ಹಂದಿಗಳು ತಿನ್ನುವತವುಡನ್ನಾದರೂ ತಿನ್ನೋಣವೆಮದರೆ ಅದಕ್ಕೂ ಅವಕಾಶ ಸಿಗಲಿಲ್ಲ. ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋ ಹಾಗೆ ಹೀಗೇ ಒಮ್ಮೆ ಕುಳಿತು ಯೋಚಿಸಿದ. ತಾನು ಹೇಗಿದ್ದವನುಹೇಗಾದೆ? ಅಪ್ಪನ ಮನೆಯಲ್ಲಿದ್ದಾಗ ಮೂರು ಹೊತ್ತೂ ಮೃಷ್ಟಾನ್ನ ಭೋಜನ ಉಣ್ಣುತ್ತಿದ್ದೆನಲ್ಲ? ಇಲ್ಲಿ ತವಡು ಕೂಡಾ ಸಿಕ್ಕುತ್ತಿಲ್ಲವಲ್ಲಾ? ಎಂದು ಪೇಚಾಡಿಕೊಂಡ. ಅಪ್ಪ ಅಷ್ಟುಹೇಳಿದರೂ ಕೇಳದೆ ಅವನನ್ನು ಧಿಕ್ಕರಿಸಿ ಬಂದು ದೊಡ್ಡ ತಪ್ಪು ಮಾಡಿಬಿಟ್ಟೆನೆಂದು ಅಲವತ್ತುಕೊಂಡ.
ಆಗಲೇ ಅವನಿಗೆ ಒಂದು ಒಳ್ಳೆ ಆಲೋಚನೆ ಹೊಳೆಯಿತು. ತಾನೀಗಲೇ ಅಪ್ಪನ ಬಳಿಗೆ ಓಡಿಹೋಗಿ ಅವನ ಕಾಲಮೇಲೆ ಬೀಳುತ್ತೇನೆ, ತನ್ನದು ತಪ್ಪಾಯಿತೆಂದುಬೇಡಿಕೊಳ್ಳುತ್ತೇನೆ, ಅಪ್ಪಾ ನನ್ನನ್ನು ನಿನ್ನ ಮಗನಾಗಿ ಅಲ್ಲ, ನಿನ್ನ ಸೇವಕರಲ್ಲಿ ಕಡೆಯವನಾಗಿ ಸ್ವೀಕರಿಸು ಎಂದು ಕೇಳಿಕೊಳ್ಳುತ್ತೇನೆ ಎಂದುಕೊಂಡ. ಬರೀ ಅವನ ಆಪರಿವರ್ತನೆಯೇ ಅವನಲ್ಲಿ ನಿರಾಳ ಭಾವ ಮೂಡಿಸಿತು. ಭರವಸೆಯ ಬೆಳಕೊಂದು ಅವನ ದಾರಿಯನ್ನು ನಿಚ್ಚಳವಾಗಿಸಿತು. ಹೊಸಚೈತನ್ಯ ಹೊಸ ಉತ್ಸಾಹ ಲವಲವಿಕೆಯಿಂದ‌ಆತ ಎದ್ದವನೇ ಅಪ್ಪನ ಊರಿಗೆ ಓಡೇ ಓಡಿದ.
ಇತ್ತ ಅಪ್ಪ ತನ್ನ ದಾರಿತಪ್ಪಿದ ಮಗನಿಗಾಗಿ ಬಹುವಾಗಿ ಕೊರಗಿದ್ದ. ಎಂದಾದರೂ ಒಂದು ದಿನ ತನ್ನ ಮಗ ಮರಳಿ ಬರುವನೆಂದು ಕಾದಿದ್ದ. ಆ ಒಂದು ಎಳೆಯ ಆಸೆಯೇ ಅವನಬದುಕನ್ನು ನಡೆಸಿತ್ತು. ದಿನದಿನವೂ ಆತ ತನ್ನ ಮಗನಿಗಾಗಿ ಹಂಬಲಿಸಿದ. ದಿಕ್ಕುದಿಕ್ಕಿಗೆಲ್ಲ ದೂತರನ್ನು ಕಳುಹಿಸಿ ಮಗನನ್ನು ಹುಡುಕಿಸಿದ. ಹೀಗೇ ಇರುವಲ್ಲಿ ಒಂದು ದಿನ ಅವನ‌ಒಳಮನಸಿಗೆ ತನ್ನ ಮಗ ಮರಳಿ ಬರುತ್ತಿದ್ದಾನೆಂದು ಅರಿವಾಯಿತು. ಕ್ಷಣಕ್ಷಣಕ್ಕೂ ಆ ಭಾವ ಗಟ್ಟಿಯಾಗುತ್ತಾ ಹೋಯಿತು. ಅವನು ತನ್ನ ಮನೆಯ ಮಹಡಿಯೇರಿ ದೂರ ದಿಕ್ಕಿನತ್ತದಿಟ್ಟಿಸಿದ.
ದೂರದಲ್ಲಿ ಹರಕು ಬಟ್ಟೆ ತೊಟ್ಟ ಯುವಕನೊಬ್ಬ ಬರಿಗಾಲಲ್ಲಿ ನಡೆದು ಬರುತ್ತಿರುವುದನ್ನು ಕಂಡ. ಆತನ ನಡಿಗೆಯ ಚಲನೆಯಿಂದಲೇ ಅವನು ತನ್ನ ಕಿರಿಮಗನೆಂಬುದು ತಂದೆಗೆಗೊತ್ತಾಯಿತು. ಮಹಡಿಯಿಂದಿಳಿದವನೇ ಆತುರದಿಂದ ಮಗನತ್ತ ಓಡತೊಡಗಿದ. ಯಜಮಾನ ಓಡುವುದನ್ನು ಕಂಡು ಆಳುಗಳೂ ಅವನನ್ನು ಹಿಂಬಾಲಿಸಿದರು. ಅಪ್ಪ ಮಗನಬಳಿಸಾರಿ ಅವನನ್ನು ಬರಸೆಳೆದು ಅಪ್ಪಿಕೊಂಡ. ಮಗನಾದರೋ ಅತ್ಯಂತ ಕುಬ್ಜನಾಗಿ ದೈನ್ಯದಿಂದ ಅಪ್ಪನ ಕಾಲಿಗೆ ಬಿದ್ದು ’ಅಪ್ಪಾ ನಿನ್ನ ಮಗನೆನಿಸಿಕೊಳ್ಳುವ ಯೋಗ್ಯತೆ ನನಗಿಲ್ಲ,ನಿನ್ನ ಮನೆಯ ಕೂಲಿಯಾಳುಗಳಲ್ಲಿ ಒಬ್ಬನಾಗಿ ನನ್ನನ್ನು ನೇಮಿಸಿಕೊ’ ಎಂದ.
ತಂದೆ ಅದನ್ನು ಕೇಳಿಸಿಕೊಳ್ಳದೇ ತನ್ನ ಸೇವಕರಿಗೆ ’ಓಡಿ ಹೋಗಿ ಉತ್ತಮ ವಸ್ತ್ರವನ್ನು ತನ್ನಿ, ಕಾಲಿಗೆ ನೀರು ಕೊಟ್ಟು ಒಳ್ಳೆಯ ಪಾದರಕ್ಷೆ ತೊಡಿಸಿರಿ, ಬೆರಳಿಗೊಂದುಸುಂದರವಾದ ಉಂಗುರ ಹಾಕಿರಿ, ಬನ್ನಿ ಎಲ್ಲ ಸಂತೋಷ ಪಡೋಣ, ಮೋಜು ಮಾಡಿ ಹಬ್ಬ ಮಾಡೋಣ, ಸತ್ತು ಹೋಗಿದ್ದ ನನ್ನ ಮಗ ಮತ್ತೆ ಬದುಕಿ ಬಂದಿದ್ದಾನೆ’ ಎಂದ.

ಒಡನೆಯೇ ಹಬ್ಬದ ಸಡಗರ ತೊಡಗಿತು. ಗಾನ ನರ್ತನಗಳ ನಾದವು ಅವನ ಮನೆಯಲ್ಲಿ ತುಂಬಿಕೊಂಡಿತು.

ಗುರುವಾರ, ಮೇ 2, 2013

NOH KA LIKAI ನೊಹ್ ಕಾ ಲಿಕಾಯ್


ಮೇಗಾಲಯದ ಬೆಟ್ಟಗುಡ್ಡಗಳ ನಾಡಿನ ಒಂದು ಹಳ್ಳಿ ರಂಗ್ಯಿರ್‍ಟೆ.  ಈ ಹಳ್ಳಿಯ ಅಂಚಿನಲ್ಲಿ ನೊಹ್ ಕಾಲಿಕಾಯ್ ಎಂಬ ನೀರ್‍ಬೀಳು ಇದೆ. ಆ ನೀರ್‍ಬೀಳು ಅದೇ ಹಳ್ಳಿಯಲ್ಲಿ ವಾಸಿಸುತ್ತಿದ್ದ ಒಬ್ಬ ಹೆಣ್ಣುಮಗಳ ಹೆಸರು ಹೊತ್ತಿದೆ. ಆ ಹಳ್ಳಿಯಲ್ಲಿ ಲಿಕಾಯ್ ಎಂಬ ಹೆಂಗಸಿದ್ದಳು. ಕಾಲಿಕಾಯ್ ಅಂದರೆ ಲಿಕಾಯಮ್ಮ ಎಂದರ್‍ತ. ನಮ್ಮಲ್ಲಿ ತೆರೇಸ ಎಂಬುದನ್ನು ತೆರೇಸಮ್ಮ ಎಂದೂ ಅಲಮೇಲು ಎಂಬುದನ್ನು ಅಲಮೇಲಮ್ಮ ಎಂದೂ ಕರೆಯುವುದಿಲ್ಲವೇ ಹಾಗೆ. ಹತ್ತಿರದ ಗಣಿಯಿಂದ ಕಬ್ಬಿಣದ ಅದಿರನ್ನು ಸಿಲ್ಹೆಟ್ ಎಂಬ ಊರಿಗೆ ಹೊತ್ತೊಯ್ಯುವುದೇ ಅವಳ ಗಂಡನ ಕೆಲಸ. ಅದರಿಂದ ಬರುವ ಅಲ್ಪ ಗಳಿಕೆಯಿಂದಲೇ ಅವರಿಬ್ಬರೂ ಸಂತಸದಿಂದಿದ್ದರು. ಆದರೆ ಒಂದು ದಿನ ಲಿಕಾಯಳ ಮಡಿಲಲ್ಲಿ ಪುಟ್ಟ ಕಂದಮ್ಮ ಆಡಿಕೊಂಡಿರುವಾಗಲೇ ಗಂಡ ಸತ್ತನೆಂಬ ಸುದ್ದಿ ಬಂತು. ಲಿಕಾಯ್ ಅತ್ತಳು, ಅವಳ ಅಳುವನ್ನು ಕೇಳಿ ಅವಳ ಪುಟ್ಟ ಮಗಳೂ ಅತ್ತಳು. ಕೊನೆಗೆ ಲಿಕಾಯ್  ಸಾವರಿಸಿಕೊಂಡು ಗಂಡ ಹೊರುತ್ತಿದ್ದ ಹೊರೆಯನ್ನು ತಾನೇ ಹೊರತೊಡಗಿದಳು. ಇಲ್ಲದಿದ್ದರೆ ಬದುಕು ನಡೆಯಬೇಕಲ್ಲ? ಅವಳು ಹೊರಹೊರಟಾಗ ಪುಟ್ಟ ಮಗುವನ್ನು ನೆರೆಯವರ ಕಯ್ಗೊಪ್ಪಿಸಿ ಹೊರಡುತ್ತಿದ್ದಳು. ಹೀಗೆ ಲಿಕಾಯ್ ಮಗಳು ಕಂಡವರ ಕಯ್ಗೂಸಾದಳು.
ಕಂಡವರು ಎಶ್ಟು ದಿನ ತಾನೇ ಮಗುವನ್ನು ಲಾಲಿಸಬಲ್ಲರು, ಅವರು ಒಂದು ದಿನ ಲಿಕಾಯ್ ಮನೆಗೆ ಹಿಂದಿರುಗುತ್ತಿದ್ದಂತೆ ನೀನು ಮತ್ತೊಂದು ಮದುವೆಯಾಗು ನಿನ್ನ ಮಗು ಅಮ್ಮ ಬೇಕೆಂದು ರಚ್ಚೆ ಹಿಡಿಯುವುದು ತಪ್ಪುತ್ತದೆ, ಅದಕ್ಕೂ ಒಬ್ಬ ಅಪ್ಪನೂ ಬೇಕಲ್ಲವೇ? ಎಂದು ಹೇಳಿದರು. ಅವರ ಮಾತನ್ನು ಅರಗಿಸಿಕೊಂಡ ಲಿಕಾಯ್ ಕೆಲದಿನಗಳಲ್ಲೇ ತನಗೊಬ್ಬ ಗಂಡನನ್ನು ಹುಡುಕಿಕೊಂಡಳು. ಹೊಸ ಗಂಡ ಅವಳನ್ನು ಚೆನ್ನಾಗಿ ನೋಡಿಕೊಂಡ. ಆದರೆ ಲಿಕಾಯಳು ತನಗಿಂತಲೂ ತನ್ನ ಮಗುವನ್ನು ಹೆಚ್ಚು ರಮಿಸುವುದು ಅವನಲ್ಲಿ ಹೊಟ್ಟೆಕಿಚ್ಚು ಹುಟ್ಟಿಸಿತು. ಹೆಂಡತಿಯು ತನ್ನನ್ನು ಗಮನಿಸುವುದಕ್ಕಿಂತ ಹೆಚ್ಚಾಗಿ ಮಗುವಿನತ್ತಲೇ ಗಮನ ಹರಿಸುತ್ತಾಳಲ್ಲ, ಆ ಮಗುವನ್ನು ಹೇಗಾದರೂ ತವಿಸಬೇಕು ಎಂದುಕೊಂಡ. ಎಶ್ಟಾದರೂ ಅದು ಅವನ ಮಗು ಅಲ್ಲವಲ್ಲ. ಅದರ ಬಗ್ಗೆ ಅವನಿಗೆ ಮಮತೆ ಅಕ್ಕರೆ ಮೂಡುವುದಾದರೂ ಹೇಗೆ? ತೀಟೆ ತೆವಲುಗಳ ಮೇಲಾಟದಲ್ಲಿ ಮಕ್ಕಳೇ ದೇವರುಗಳೆಂಬ ಅನಿಸಿಕೆ ಬರುವುದುಂಟೇ?
ಒಂದು ದಿನ ಲಿಕಾಯಳು ಎಂದಿನಂತೆ ಹೊರೆ ಸಾಗಿಸಲು ಹೋಗಿದ್ದಾಗ ಅವನು ಹೊಂಚು ಹಾಕಿ ಮಗುವನ್ನು ಕೊಂದುಬಿಟ್ಟ. ಕೊಂದ ಮೇಲೆ ಮಗುವಿನ ಒಡಲನ್ನು ಏನು ಮಾಡುವುದು? ಅದನ್ನು ಕತ್ತರಿಸಿ ಅಡುಗೆ ಮಾಡಿದ. ಆಮೇಲೆ ಏನೂ ಗೊತ್ತಿಲ್ಲದವನಂತೆ ಅಂಡಲೆಯುತ್ತಾ ಹೋದ. ಸಂಜೆ ಲಿಕಾಯ್ ಮನೆಗೆ ಹಿಂದಿರುಗಿದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಮಗು ನೆರೆಹೊರೆಯ ಯಾರದಾದರೂ ತೊಡೆಯೇರಿರುತ್ತದೆ ಎಂದುಕೊಂಡ ಆಕೆ  ಹಸಿವಾಗಿದ್ದರಿಂದಲೂ ಅಡುಗೆ ಮನೆಯಿಂದ ಒಳ್ಳೆ ಗಮಲು ಬರುತ್ತಿದ್ದರಿಂದಲೂ ಉಣ್ಣಲು ಕೂತಳು. ಊಟದ ಕೊನೆಯವರೆಗೂ ಅದು ಯಾವ ಪ್ರಾಣಿಯ ಮಾಂಸವಿರಬಹುದು ಎಶ್ಟು ಚೆನ್ನಾಗಿದೆಯಲ್ಲ ಎಂದುಕೊಂಡು ಸವಿದು ಸವಿದು ತಿಂದಳು.
ಉಂಡ ಮೇಲೆದ್ದು ಪಾತ್ರೆಗಳನ್ನು ಮರುಜೋಡಿಸುವಾಗ ಒಲೆಯ ಬಳಿ ಪುಟ್ಟ ಬೆರಳುಗಳು ಕಂಡವು. ಅವಳ ಗಂಡ ಮಗುವಿನ ಕಯ್ ಕಾಲು ತಲೆಗಳನ್ನು ಬಿಸಾಡಿದ್ದನಾದರೂ ಮಗುವಿನ ಬೆರಳುಗಳನ್ನು ತೆಗೆದುಹಾಕಲು ಮರೆತುಬಿಟ್ಟಿದ್ದ. ಆ ಬೆರಳುಗಳನ್ನು ಕಂಡಿದ್ದೇ ಲಿಕಾಯಳಿಗೆ ಕಣ್ಣು ಕತ್ತಲಿಟ್ಟಂತಾಯಿತು. ಕೋಪ ಮತ್ತು ಅಳು ಒಟ್ಟೊಟ್ಟಿಗೇ ಉಮ್ಮಳಿಸಿ ಬಂದವು. ತನ್ನ ಕರುಳ ಕುಡಿಯನ್ನು ತಾನೇ ಚಪ್ಪರಿಸಿ ತಿಂದುದರ ಬಗ್ಗೆ ಅವಳಿಗೆ ತುಂಬಾ ಹೇಸಿಗೆಯೆನಿಸಿತು. ಮುಶ್ಟಿ ಬಿಗಿದು ನೆಲಕ್ಕೆ ಬಡಿದಳು, ಹಣೆಯನ್ನು ಗೋಡೆಗೆ ಗಟ್ಟಿಸಿಕೊಂಡಳು, ಬೋರಾಡಿ ಚೀರಾಡಿ ಅತ್ತಳು, ತಲೆ ಕೆದರಿಕೊಂಡು ಹಾದಿ ಬೀದಿಯೆಲ್ಲ ಹುಚ್ಚಿಯಂತೆ ಓಡಿದಳು. ಕೊಂದ ತಪ್ಪಿಗಿಂತ ತಿಂದುದೇ ದೊಡ್ಡತಪ್ಪು ಎನ್ನಿಸಿತು.
ಆಕೆ ಓಡಿಯೇ ಓಡಿದಳು, ಎಡವಿದ್ದು ಮುಳ್ಳುಚುಚ್ಚಿದ್ದು ಯಾವುದನ್ನೂ ಲೆಕ್ಕಿಸದೆ ಓಡಿದಳು. ಊರವರೂ ಆಕೆ ಯಾತಕ್ಕಾಗಿ ಹಾಗೆ ಓಡುತ್ತಿದ್ದಾಳೆಂದು ತಿಳಿಯದೇ ಅವಳ ಹಿಂದೆಯೇ ಓಡಿದರು. ಓಡುತ್ತಾ ಓಡುತ್ತಾ ಲಿಕಾಯ್ ಊರ ಅಂಚನ್ನು ಮುಟ್ಟಿ ಅಲ್ಲಿಂದ 335 ಮೀಟರುಗಳ ಆಳಕ್ಕೆ ಬೀಳುತ್ತಿದ್ದ ನೀರಿನೊಂದಿಗೆ ಸೇರಿಕೊಂಡು ದುಮ್ಮಿಕ್ಕಿದಳು. ಹೀಗೆ ಮಗಳೊಂದಿಗೆ ಸೇರಿಕೊಂಡಳು. ಆ ನೀರ್‍ಬೀಳು ಇಂದಿಗೂ ಲಿಕಾಯಮ್ಮನ ಹೆಸರು ಹೊತ್ತಿದೆ. NOH KA LIKAI  ಎಂದರೆ ಲಿಕಾಯಮ್ಮನ ದುಮುಕು ಎಂದರ್‍ತ.
Excerpt from the article "Notes on the Kasia Hills, and People" by Lt. Henry Yule, the Bengal Engineers (Sir Henry Yule, the Geographer): Published in the Journal of the Asiatic Society of Bengal Vol. XIV Part II - July to December, 1844

ಬುಧವಾರ, ಮಾರ್ಚ್ 20, 2013

ಕೆಂಪ್ಟಿ ಫಾಲ್ಸ್

ಮಸ್ಸೂರಿಗೆ ಹೋದವರು ಕೆಂಪ್ಟಿ ಜಲಪಾತವನ್ನು ನೋಡದೆ ಹಿಂದಿರುಗಿದರೆ ಆ ಪ್ರಯಾಣ ವ್ಯರ್ಥವೇ ಸರಿ. ಮಸೂರಿಯಿಂದ ಚಕ್ರಾತಾ ರಸ್ತೆಯಲ್ಲಿ ಸುಮಾರು ೧೮ ಕಿಲೋಮೀಟರು ದೂರದಲ್ಲಿರುವ ಕೆಂಪ್ಟಿ ಫಾಲ್ ಒಂದು ಮನಮೋಹಕ ತಾಣ. ಡೆಹರಾದೂನಿನಿಂದಲೂ ಸರಿಸುಮಾರು ಅಷ್ಟೇ ದೂರವಿದ್ದು ಅಲ್ಲಿಂದಲೂ ನೇರವಾಗಿ ಬರಬಹುದು. ಸಮುದ್ರ ಮಟ್ಟದಿಂದ ೧೩೬೪ಮೀಟರು (೪೪೭೫ ಅಡಿ)ಗಳ ಮೇಲೆ ಇರುವ ಈ ಪ್ರವಾಸಿ ತಾಣವು ಹೆಚ್ಚಿನ ಜನರಿಗೆ ತಿಳಿದಿಲ್ಲ. ಜಾನ್ ಮೆಕಿನನ್ ಎಂಬ ಬ್ರಿಟಿಷ್ ಅಧಿಕಾರಿಯು ೧೮೩೫ರಲ್ಲಿ ಈ ತಾಣವನ್ನು ಅಭಿವೃದ್ಧಿ ಪಡಿಸಿದನೆಂದು ಹೇಳಲಾಗುತ್ತದೆ. ಸುತ್ತಮುತ್ತಲಿನ ರಮಣೀಯ ದೃಶ್ಯಾವಳಿ, ವಿಶಾಲವೂ ವಿಸ್ತಾರವೂ ಆದ ಪರಿಸರದ ಸೊಬಗು, ರುದ್ರಗಾಂಭೀರ್ಯದಲ್ಲಿ ಧುಮ್ಮಿಕ್ಕುವ ನೀರು ಇವುಗಳ ನಡುವೆ ಸಮಯ ಕಳೆಯುವುದೇ ತಿಳಿಯದ ಈ ತಾಣ ಮರೆಯಲು ಸಾಧ್ಯವಿಲ್ಲ. ಬ್ರಿಟಿಷರು ಬಿಡುವಾದಾಗ ಈ ಸುಂದರ ಜಾಗದಲ್ಲಿ ಶಿಬಿರ ಹೂಡಿ ಚಹಾ ಸವಿಯುತ್ತಿದ್ದರಂತೆ. ಆದ್ದರಿಂದಲೇ ಈ ಸ್ಥಳಕ್ಕೆ CAMP TEA ಎಂಬ ಹೆಸರುಂಟಾಗಿ ಅದೇ ಆಮೇಲೆ KEMPTY ಆಗಿದೆ ಎನ್ನಲಾಗಿದೆ.
ಬಂಗ್ಲೋ ಕಿ ಕಂಡಿ ಎಂಬ ಹಳ್ಳಿಯಲ್ಲಿ ಸಣ್ಣ ಚಿಲುಮೆಯಾಗಿ ಹುಟ್ಟುವ ಈ ನೀರು ಹಲವು ತೊರೆಗಳನ್ನು ಕೂಡಿಕೊಂಡು ಕೆಂಪ್ಟಿಯ ಬಳಿ ಬಂಡೆಗಳ ಬಳಿಸಾರಿ ೪೦ಅಡಿಗಳ ಎತ್ತರದಿಂದ ಧುಮ್ಮಿಕ್ಕುತ್ತದೆ. ಐದು ಶಾಖೆಗಳಾಗಿ ಬೀಳುವ ಜಲಧಾರೆಗೆ ಮೈಯೊಡ್ಡಿ ಬೆಚ್ಚನೆಯ ಬಿಸಿಲಿಗೆ ತುಂತುರ ನೀರ ಹನಿಯ ಮೇಲೆ ಅರಳುವ ನವಿರಾದ ಕಾಮನಬಿಲ್ಲನ್ನು ಸವರುತ್ತಾ, ಶುಭ್ರಸ್ಫಟಿಕ ನೀರಲ್ಲಿ ಈಜುತ್ತಾ, ಗೆಳೆಯ ಗೆಳತಿಯರತ್ತ ನೀರು ಎರಚುತ್ತಾ ಹಾಡುತ್ತ ಕೂಗುತ್ತಾ ಇಲ್ಲಿ ಎಷ್ಟು ಹೊತ್ತಾದರೂ ಮೈಮರೆಯಬಹುದು. ನೀರಿಗಿಳಿಯಲು ಮನಸ್ಸಿಲ್ಲದಿದ್ದರೆ ಜಲಪಾತವನ್ನೇ ನೋಡುತ್ತಾ ಪಾಪ್ ಕಾರ್ನ್ ಮೆಲ್ಲಬಹುದು, ಬಿಸಿಬಿಸಿಯಾದ ಆಲೂಪರಾಟದೊಂದಿಗೆ ಮೊಟ್ಟೆಪಲ್ಯವನ್ನು ಮುಕ್ಕುತ್ತಾ ಜಲಪಾತದ ಎತ್ತರವನ್ನು ಗುಣಿಸಬಹುದು. ಬಿಸಿಯಾದ ಮಸಾಲೆ ಚಹಾ ಹೀರುತ್ತಾ ಸಂಗಾತಿಗಳನ್ನು ಚುಡಾಯಿಸಬಹುದು. ಒಟ್ಟಿನಲ್ಲಿ ದಿನವಿಡೀ ಕಾಲ ಕಳೆಯಲು ಹೇಳಿ ಮಾಡಿಸಿದ ಜಾಗವಿದು.
ಮಸ್ಸೂರಿಯಿಂದ ಸ್ವಲ್ಪ ಹೊರಗೆ ಟ್ಯಾಕ್ಸಿ ಸ್ಟ್ಯಾಂಡ್ ಬಳಿ ಸುಮೊ ಅಥವಾ ಸಫಾರಿ ಗಾಡಿಗಳು ನಿಂತು ಕೆಂಪ್ಟಿಗೆ ಕರೆದೊಯ್ಯುತ್ತವೆ. ಹಿಮಾಲಯದ ಪರ್ವತಶ್ರೇಣಿಯ ನಡುವೆ ಮೋಡಗಳಲ್ಲಿ ತೇಲುತ್ತಾ ಆಳ ತಿರುವುಗಳಲ್ಲಿ ಇಳಿಯುತ್ತಾ ಕುಳಿರ್ಗಾಳಿಯ ಕಂಪು ಸವಿಯುತ್ತಾ ಉಲ್ಲಾಸದ ಪಯಣ ಸಾಗುತ್ತದೆ. ಜಲಪಾತ ಇನ್ನೂ ಎರಡು ಕಿಲೊಮೀಟರು ಇರುವಂತೆಯೇ ಅದರ ಸದ್ದು ಅನುರಣಿಸುತ್ತದೆ. ಒಂದು ಸುದೀರ್ಘ ವರ್ತುಳವನ್ನು ಸುತ್ತಿ ಜಲಪಾತದ ಬಳಿಗೆ ಗಾಡಿ ಬಂದು ನಿಲ್ಲುವ ವೇಳೆಗೆ ನಿಮ್ಮ ಕ್ಯಾಮೆರಾವು ಜಲಪಾತದ ಹಲವು ದೂರದೃಶ್ಯಗಳನ್ನು ಕ್ಲಿಕ್ಕಿಸಿರುತ್ತೆ. ರಸ್ತೆಯ ತಡಿಯಲ್ಲೇ ಸೇತುವೆಯ ಮೂಲಕ ಹರಿದ ನೊರೆನೊರೆಯಾದ ನದೀನೀರು ಸನಿಹದಲ್ಲೇ ಕೆಳಕ್ಕೆ ಬೀಳುವ ಸದ್ದಿನೊಂದಿಗೆ ಪ್ರವಾಸಿಗರ ಕೇಕೆ ಮಿಳಿತವಾಗಿ ಕೇಳಿಬರುತ್ತದೆ. ಇಲ್ಲಿಂದ ಮುಂದೆ ನಿಮ್ಮ ವಾಹನ ಸಾಗದು. ನೀವು ಕೆಳಗಿಳಿದು ನಡೆಯುತ್ತಾ ಅಂಗಡಿ ಸಾಲಿನ ನಡುವೆ ಜಲಪಾತದೆಡೆಗೆ ಸಾಗುವ ಮೆಟ್ಟಿಲುಗಳಿಗಾಗಿ ತಡಕುತ್ತೀರಿ. ನಿಮ್ಮ ತಡಕಾಟ ಕಂಡು ಅಲ್ಲಿನ ಸ್ನೇಹಪರ ಘರವಾಲಿ ಜನ ನಿಮಗೆ ಮಾರ್ಗದರ್ಶನ ಮಾಡುತ್ತಾರೆ. ಮೆಟ್ಟಲಿಳಿಯಲು ಕಷ್ಟವಾದವರಿಗೆ ಕೇಬಲ್ ತೊಟ್ಟಿಲಿನ ಸೌಕರ್ಯವೂ ಇದೆ.
ಕೆಂಪ್ಟಿ ಫಾಲ್ ಅನ್ನೋ ಈ ದಬದಬೆಯಷ್ಟೇ ಇಲ್ಲಿನ ನೋಟದಾಣವಲ್ಲ. ಮೇಲೆ ಹತ್ತಿ ನದಿಯ ಗುಂಟ ಸಾಗಿದರೆ ಅಲ್ಲಲ್ಲಿ ಕಿರು ಜಲಪಾತಗಳೂ, ಕೊರಕಲುಗಳ ನಡುವಿನ ನದೀ ಹಾಸುಗಳೂ, ಸ್ವಚ್ಛ ನೀರಿನ ಕೊಳಗಳೂ ಇದ್ದು ನೀರಿನಲ್ಲಿ ಸುಖಾಸುಮ್ಮನೆ ಆಟವಾಡಬಹುದು, ಬೊಗಸೆ ಮೊಗೆದು ನೀರು ಕುಡಿಯಬಹುದು, ನೀರ ಜುಳು ಜುಳು ನಾದ ಕೇಳುತ್ತಾ ಟೈಮ್ ಪಾಸ್ ಮಾಡಬಹುದು. ಇಲ್ಲವೇ ಕೆಳಗೆ ನದೀ ಗುಂಟ ನಿಸರ್ಗ ರಮಣೀಯತೆಯನ್ನು ಆಸ್ವಾದಿಸುತ್ತಾ ೧೨ ಕಿಲೋಮೀಟರು ನಡೆದು ಹೋಗಿ ಯಮುನೆಯೊಂದಿಗೆ ಸಂಗಮವಾಗುವವರೆಗಿನ ಚಾರಣ ಮಾಡಬಹುದು. ಅಲ್ಲಲ್ಲಿ ನಿಂತ ನೀರಿನಲ್ಲಿ ಈಜಬಹುದು ಅಥವಾ ಮೀನಿಗೆ ಗಾಳ ಹಾಕಬಹುದು. ಇಲ್ಲಿ ಹೇಳೋವರೂ ಇಲ್ಲ ಕೇಳೋವರೂ ಇಲ್ಲ.
ಕೆಂಪ್ಟಿಯಿಂದ ವಾಪಸು ಮಸೂರಿಗೆ ಬರುವಾಗ ಸಮಯವಿದ್ದರೆ ದಾರಿ ಮಧ್ಯೆ ಕಂಪೆನಿ ಗಾರ್ಡನ್ ಹಾಗೂ ಗನ್ ಹಿಲ್ ಪಾಯಿಂಟ್ ಸಿಗುತ್ತೆ. ಮಸೂರಿಗೆ ಹಿಂದಿರುಗಿ ಸ್ವಲ್ಪ ವಿಶ್ರಮಿಸಿ ಸಂಜೆ ಮಾಲ್ ರಸ್ತೆಯಲ್ಲಿ ನಡೆದಾಡುತ್ತಾ ಸ್ವಪ್ನಲೋಕದ ಸವಿ ಉಣ್ಣಬಹುದು.
ಡೆಹರಾಡೂನ್ ರೈಲುನಿಲ್ದಾಣದಿಂದ ಹೊರಬಂದರೆ ಮಸೂರಿಗೆ ಹೋಗುವ ಮಿನಿಬಸ್ಸುಗಳು ಹಲವಾರಿದ್ದು ಮಸೂರಿ ಮಸೂರಿ ಎಂದು ಕೂಗುತ್ತಿರುತ್ತಾರೆ. ಡೆಹರಾಡೂನಿನಿಂದ ಮಸೂರಿಗೆ ಒಂದು ಗಂಟೆ ಬಸ್ ಪ್ರಯಾಣ. ಡೆಹರಾಡೂನಿಗೆ ರೈಲು ಹಾಗು ವಿಮಾನಗಳ ಸಂಪರ್ಕವಿದೆ. ಚಂಡೀಗಡದಿಂದ ಬಸ್ಸಿನಲ್ಲಿ ಡೆಹರಾಡೂನ್ ಅಥವಾ ಹರದ್ವಾರ ತಲಪಿ ಅಲ್ಲಿಂದಲೂ ಮಸ್ಸೂರಿಗೆ ಬರಬಹುದು. ಡೆಹರಾಡೂನಿನಿಂದ ೩೫ ಕಿ. ಮೀ, ಹಾಗೂ ಹರದ್ವಾರದಿಂದ ೫೫ ಕಿ.ಮೀ.

ಡಿಸಂಬರಿನಿಂದ ಫೆಬ್ರವರಿ ಕೊನೆಯವರೆಗೆ ಹಿಮಪಾತ ಇಲ್ಲವೇ ಮಂಜು ಹಾಸಿರುತ್ತೆ. ಆಮೇಲೆ ಹೋಗುವುದು ಚೆನ್ನ. ಯಾವುದಕ್ಕೂ ಸ್ವೆಟರು ಅಥವಾ ಶಾಲು ಇರಲಿ. ಮಳೆಗಾಲದಲ್ಲಿ ಮಾತ್ರ ಬೇಡವೇ ಬೇಡ.

ಭಾನುವಾರ, ಮಾರ್ಚ್ 3, 2013

ಎ ಎಂ ಜೋಸೆಫ್


ಎ ಎಂ ಜೋಸೆಫ್ ಎಂಬುದು ಅರುವತ್ತರ ದಶಕದ ಚರ್ಚ್ ಸಾಹಿತ್ಯ ವಲಯದಲ್ಲಿ ಕಂಡು ಬರುತ್ತಿದ್ದ ಒಂದು ಚಿರಪರಿಚಿತ ಹೆಸರು. ಆಗಷ್ಟೇ ಅಕ್ಷರ ಕಲಿತ ನನ್ನ ಬಾಲ್ಯದ ಆ ದಿನಗಳಲ್ಲಿ ಕಂಡದ್ದನ್ನೆಲ್ಲ ಓದುವ ಹುರುಪು, ಮತ್ತದರ ಜೊತೆಗೇ ಜೋಸೆಫ್ ಎಂಬ ನನ್ನ ಹೆಸರನ್ನು ಮುದ್ರಣ ಮಾಧ್ಯಮದಲ್ಲಿ ನೋಡಿದಾಗ ಆಗುವ ಪುಳಕದಿಂದಾಗಿ ಎ ಎಂ ಜೋಸೆಫ್ ಹೆಸರು ನನಗೆ ಅಪ್ಯಾಯಮಾನವಾಗಿತ್ತು.
ಅಂದಿನ ಹಲವಾರು ಪುಸ್ತಕಗಳಲ್ಲಿ ಎ ಎಂ ಜೋಸೆಫ್ ಎಂಬ ಹೆಸರು ಕಂಡುಬರುತ್ತಿತ್ತು. ಕೆಲವದರಲ್ಲಿ ಎ ಎಂ ಬೆರ್ನಾರ್ಡ್ ಎಂಬ ಹೆಸರೂ ಇರುತ್ತಿತ್ತು. ಆ ಇಬ್ಬರನ್ನೂ ನಾನು ಎಂದಿಗೂ ನೋಡಲಿಲ್ಲ ಎಂಬುದು ಸತ್ಯವಾದರೂ ಅವರ ಬಗ್ಗೆ ಯಾರಾದರೂ ಮಾತನಾಡಿದ್ದಾಗಲೀ ಉಲ್ಲೇಖಿಸಿದ್ದಾಗಲೀ ಇಲ್ಲವೇ ಇಲ್ಲವೆನ್ನಬಹುದು. ಚರ್ಚಿನ ಭಾಷೆಯು ಲತೀನಿನಿಂದ ಕನ್ನಡಕ್ಕೆ ತೆರೆದುಕೊಳ್ಳುತ್ತಿದ್ದ ಅಂದಿನ ಸಂಕ್ರಮಣ ಸ್ಥಿತಿಯಲ್ಲಿ ಹಲವಾರು ಮಂದಿ ಕನ್ನಡ ಕ್ರೈಸ್ತ ಸಾಹಿತ್ಯದ ಒಕ್ಕಲುತನಕ್ಕೆ ಮನಸು ಮಾಡಿದ್ದರು. ಅವರಲ್ಲಿ ಜಾರ್ಜ್ ಡಿಸೋಜ, ಎನ್ ಎಸ್ ಮರಿಜೋಸೆಫ್, ಜಿ ಜೋಸೆಫ್, ಜೋ ಮೇರಿ ಲೋಬೋ, ವಲೇರಿಯನ್ ಡಿಸೋಜ, ಸಿಪ್ರಿಯನ್ ಪೈ, ಅಮಲಾನಂದ, ಸ್ಟ್ಯಾನಿ ಬ್ಯಾಪ್ಟಿಸ್ಟ್ ಮುಂತಾದವರೆಲ್ಲ ಗುರು ಅಭ್ಯರ್ಥಿಗಳಾಗಿದ್ದು ಕನ್ನಡ ಧಾರ್ಮಿಕ ಸಾಹಿತ್ಯದಲ್ಲಿನ ಶೂನ್ಯವನ್ನು ತುಂಬಲು ಪ್ರಯತ್ನಿಸುತ್ತಿದ್ದರು. ಅಂಥದರಲ್ಲಿ ದಯಾನಂದ ಪ್ರಭು ಅವರಂಥ ತರುಣರು ಸೃಜನಶೀಲ ಬರಹಕ್ಕೆ ಕೈಹಾಕಿದ್ದರು. ಮೇಲೆ ಹೇಳಿದ ಎಲ್ಲರೂ ಬೆಂಗಳೂರಿಗೆ ಹೊರಗಿನವರಾಗಿದ್ದು ಗುರುಮಠದಿಂದ ಹೊರಟ ಮೇಲೆ ದೂರಾದರು. ಬೆಂಗಳೂರಿನಲ್ಲಿ ಭಾಷಾ ಸಂಘರ್ಷಗಳು ಶೀತಲಯುದ್ಧದಂತೆ ವ್ಯಾಪಕವಾಗುತ್ತಿದ್ದ ಆ ಸಮಯದಲ್ಲಿ ಬಹಳಷ್ಟು ಸ್ಥಿತ್ಯಂತರಗಳು ನಡೆದು ಎ ಎಂ ದ್ವಯರ ಹೆಸರುಗಳು ನೇಪಥ್ಯಕ್ಕೆ ಸರಿದವೇನೋ?
ಅದೂ ಅಲ್ಲದೆ ಕ್ರೈಸ್ತ ಕಥೋಲಿಕ ಧಾರ್ಮಿಕ ಸಾಹಿತ್ಯವನ್ನು ಯಾರು ಬೇಕಾದರೂ ಸೃಜಿಸುವಂತಿರಲಿಲ್ಲ, ಅದಕ್ಕೆಲ್ಲ ಧರ್ಮಾಧಿಕಾರಿಗಳ ಅಪ್ಪಣೆ ಪಡೆಯಬೇಕೆನ್ನುವ ಜಿಗುಟುತನ ಚರ್ಚಿನದಾಗಿತ್ತು. ಅಂಥ ಜಿಗುಟುತನದ ನಡುವೆಯೂ ಎ ಎಂ ಜೋಸೆಫರು ತಮಿಳು ಬೈಬಲಿನ ಕನ್ನಡಾನುವಾದ ನಡೆಸಿದ್ದರು. ಆ ವಿಷಯವನ್ನು ನಾನು ತಿಳಿದುಕೊಂಡಿದ್ದು ಹೇಗೆಂಬುದರ ಕತೆಯೇ ಇದು.
೧೯೮೬ರ ಒಂದು ದಿನ. ನನ್ನ ಪೂರ್ವಜರ ಊರಾದ ಬೇಡರಹಳ್ಳಿಗೆ ಹೋಗಿದ್ದಾರ ಬೆನ್ಸನ್ ಟೌನಿನ ಉಪ ಅಂಚೆಕಚೇರಿಯ ಬದಿಯ ಒಂದು ಮನೆಯಲ್ಲಿ ನೋಯೆಲ್ ಎಂಬುವರ ಭೇಟಿಯಾಯ್ತು. ಕನ್ನಡ ತಮಿಳುಗಳ ನೆವದಲ್ಲಿ ಬೆಂಗಳೂರಿನ ಕ್ರೈಸ್ತರ ಬಾಂಧವ್ಯ ಹೇಗೆ ಒಡೆದ ಕನ್ನಡಿಯಾಯಿತುಎಂಬುದರ ಕುರಿತ ಮಾತುಕತೆಯ ನಡುವೆ ನೋಯೆಲ್ ಎಂಬ ಆ ಹಿರಿಯ ಗೃಹಸ್ಥರು ಕನ್ನಡ ಕ್ರೈಸ್ತ ಸಾಹಿತ್ಯ ಪ್ರವರ್ತಕರಾಗಿದ್ದ ನಮ್ಮ ಮಾವನವರ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲವೆಂದರು. ಆಗ ನನ್ನ ಕಿವಿ ನೆಟ್ಟಗಾಯಿತು. ನಿಮ್ಮ ಮಾವನವರು ಎಂದರೆ ಎಂ ಎಂ ಜೋಸೆಫರೇ?’ ಎಂದು ಕೇಳಿದೆ. ಅವರು ಇಲ್ಲ ಅವರು ನನ್ನ ಮಾವ ಎ ಎಂ ಬೆರ್ನಾಡರ ತಮ್ಮ ಎಂದರು.
ನಾನು ಹೌದೇ, ಚಿಕ್ಕಂದಿನಲ್ಲಿ ನಾನವರ ಪುಸ್ತಕಗಳನ್ನು ನೋಡಿದ್ದೇನೆ ಎಂದಾಗ ಕೂಡಲೇ ಭಾವ ಪರವಶರಾದ ಅವರು ನನ್ನನ್ನು ತಬ್ಬಿಕೊಂಡು ನನ್ನ ಜೀವಮಾನ ಕಾಲದಲ್ಲಿ ಅವರ ಕುರಿತು ಪ್ರಸ್ತಾಪಿಸಿದ ಒಬ್ಬ ವ್ಯಕ್ತಿಯನ್ನೂ ಕಾಣಲಿಲ್ಲ, ಆ ಪ್ರಸ್ತಾಪ ಮಾಡಿದ ಮೊದಲ ವ್ಯಕ್ತಿ ನೀವು, ನನಗೆ ನಿಜಕ್ಕೂ ಪರಮಾನಂದವಾಗುತ್ತಿದೆ ಎಂದು ಉದ್ಗರಿಸಿದರು. ಮತ್ತೊಂದು ದಿನ ಬಿಡುವು ಮಾಡಿಕೊಂಡು ಬನ್ನಿ ಅವರ ಪುಸ್ತಕಗಳನ್ನೆಲ್ಲ ತೋರಿಸುತ್ತೇನೆ, ಕುಳಿತು ಮಾತನಾಡೋಣ ಎಂದು ಆಹ್ವಾನಿಸಿದರು. ಹೀಗೆ ನಾನವರನ್ನು ಆಗಾಗ್ಗೆ ಭೇಟಿಯಾದೆ.
ಜೋಸೆಫರ್ ಪೂರ್ವಜರು ಹಾಸನ ಜಿಲ್ಲೆ ಚೆನ್ನರಾಯಪಟ್ಟಣಕ್ಕೆ ಸನಿಹದ ನುಗ್ಗೆಹಳ್ಳಿಯವರು. ಜೋಸೆಫರ ತಂದೆ ಅಲ್ಲಿನ ಶಾನುಭೋಗ ಕುಟುಂಬದ ಕೃಷ್ಣಪ್ಪಯ್ಯನವರು. ಅವರು ಮತಾಂತರದ ಕತೆ . . . ಮೂಡಲದಾಸಾಪುರದ ಕ್ರೈಸ್ತ ಶಾಲೆಯಲ್ಲಿ ವಿದ್ಯಾಗುರುವಾಗಿದ್ದಾಗ (೧೮೫೬?) ಕ್ರೈಸ್ತ ಧರ್ಮಕ್ಕೆ ಶರಣಾಗಿ ಚೌರಣ್ಣನಾದರು. ಚುರುಕು ಬುದ್ಧಿಯ ಚೌರಣ್ಣನವರನ್ನು ಫ್ರೆಂಚ್ ಪಾದ್ರಿಗಳು ಆದರಿಸಿ ಅನಾಥಾಶ್ರಮದಲ್ಲಿದ್ದ ಮಕ್ಕಳಿಗೆ ವಿದ್ಯೆ ಕಲಿಸುವಂತೆ ಒಪ್ಪಿಸಿದರು. ಹೀಗೆ ಕೃಷ್ಣಪ್ಪ ಅಯ್ಯನವರು ಚೌರಣ್ಣನಾಗಿ ಶೆಟ್ಟಿಹಳ್ಳಿಯಲ್ಲಿ ಮುಖ್ಯೋಪಾಧ್ಯಾಯರಾದರು. ನಂತರದ ದಿನಗಳಲ್ಲಿ ತಟ್ಟುಗುಪ್ಪೆ ಮರಿಯಾಪುರಕ್ಕೆ ಬಂದು ನೆಲೆನಿಂತ ಚೌರಣ್ಣನವರು ಅಲ್ಲಿಯೂ ಅನಾಥ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿದರು. ಈ ಕಾರ್ಮೆಲ್ ಮಾತೆಯ ಕನ್ಯಾಮಠ ಇದೆಯಲ್ಲ, ಅದೇ ಚೌರಣ್ಣನವರ ಮನೆ. ಆಮೇಲೆ ತಮ್ಮ ಮಕ್ಕಳಿಗೆ ಪ್ರೌಢ ಶಿಕ್ಷಣ ಕೊಡಿಸಲು ಬೆಂಗಳೂರು ನಗರ ಸೇರಿಕೊಂಡಿರಬಹುದು ಎಂದು ಭಾವಿಸಬಹುದಾಗಿದೆ.
ಎ ಎಂ ಜೋಸೆಫರು ವಿದ್ಯಾಭ್ಯಾಸ ಪಡೆದು ಅಲೋಶಿಯಸ್ ಶಾಲೆಯಲ್ಲಿ ಶಿಕ್ಷಕವೃತ್ತಿ ಪಡೆದರು. ಅವರು ಪ್ರತಿಭಾವಂತರಾಗಿದ್ದರೂ ಫ್ರೆಂಚ್ ಪಾದ್ರಿಗಳು ನೀಡುತ್ತಿದ್ದ ಕಾಲೇಜು ಶಿಕ್ಷಣದಿಂದ ಏಕೆ ವಂಚಿತರಾದರು ಎಂಬುದು ತಿಳಿಯದಾಗಿದೆ. ಸಾಂಪ್ರದಾಯಿಕ ಕಾಲೇಜು ಶಿಕ್ಷಣ ಪಡೆಯದಿದ್ದರೂ ವಿಪರೀತ ಜ್ಞಾನದಾಹಿಯಾಗಿದ್ದ ಜೋಸೆಫರು ಕನ್ನಡ ಸಾಹಿತ್ಯ, ಇಂಗ್ಲಿಷ್ ಸಾಹಿತ್ಯ, ಕ್ರೈಸ್ತ ಧಾರ್ಮಿಕ ಸಾಹಿತ್ಯವನ್ನು ಅಭ್ಯಸಿಸಿ ತಮ್ಮ ಜ್ಞಾನತೃಷೆಯನ್ನು ತಣಿಸಿಕೊಂಡರು. ಮರಿಯಾಪುರದ ಉಪದೇಶಿ ಮರಿಯಪ್ಪ ಅಯ್ಯನವರ ಮಗಳು ಜೋಸ್ಫಿನಾರನ್ನು ಮದುವೆಯಾದ ಜೋಸೆಫರು ನಂತರದ ದಿನಗಳಲ್ಲಿ ಶಿಕ್ಷಕ ವೃತ್ತಿಯನ್ನು ತೊರೆದು ಬೆಂಗಳೂರು ನಗರಸಭೆಯಲ್ಲಿ ಬೆರಳಚ್ಚುಗಾರರಾಗಿ ನೌಕರಿ ಹಿಡಿದು ಉಗ್ರಾಣಾಧಿಕಾರಿಯಾಗಿ ನಿವೃತ್ತರಾದರು. ಆಮೇಲೂ ಜೀವನೋಪಾಯಕ್ಕಾಗಿ ಬೆರಳಚ್ಚು ವೃತ್ತಿಯನ್ನು ಮುಂದುವರಿಸಿದ್ದರು.
ಅವರ ಪುಸ್ತಕಗಳ ಹೂರಣವನ್ನು ಗಮನಿಸಿದರೆ ಜೋಸೆಫರು ಅತ್ಯಂತ ಧರ್ಮಭೀರುಗಳಾಗಿದ್ದರೆಂದು ತಿಳಿಯುತ್ತದೆ. ಅವರು ಬರೆದ ಪುಸ್ತಕಗಳಲ್ಲಿ ಫಬಿಯೋಲೆ ಎಂಬುದು ರಾಜಮನ್ನಣೆಯನ್ನು ಪಡೆದಿತ್ತು. ಹಲವಾರು ಹಿರಿಯ ಕ್ರೈಸ್ತರು ಫಬಿಯೋಲೆಯನ್ನು ಉದಾಹರಿಸುತ್ತಿದ್ದುದು ನನಗೆ ನೆನಪಿದೆ. ೧೯೨೯ರಲ್ಲಿ ಈ ಕೃತಿಗೆ ಮೈಸೂರರಸರು ದೇವರಾಜ ಬಹದ್ದೂರ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಫಬಿಯೋಲೆಯ ಮುನ್ನುಡಿಯಲ್ಲಿ ಜೋಸೆಫರು ಹೀಗೆ ಹೇಳುತ್ತಾರೆ: ಸುಪ್ರಖ್ಯಾತರಾದ ಕಾರ್ಡಿನಲ್ ವೈಸ್‌ಮ್ಯಾನೆಂಬುವರು ಇಂಗ್ಲಿಷಿನಲ್ಲಿ ಬರೆದ ಫಬಿಯೋಲೆ ಎಂಬ ಮೂಲಗ್ರಂಥ ಮತ್ತು ಅದರ ಆಧಾರದಿಂದ ತಮಿಳಿನಲ್ಲಿ ಬರೆಯಲ್ಪಟ್ಟ ಪಂಕ್ರಾಸ್ ಎಂಬ ಗ್ರಂಥ ಇವೆರಡನ್ನೂ ಮುಂದಿಟ್ಟುಕೊಂಡು ಈ ಕನ್ನಡ ಗ್ರಂಥsವನ್ನು ಬರೆದೆವು. ಮೂಲಗ್ರಂಥವು ಬಹಳ ಪ್ರಖ್ಯಾತವಾದ ಸದ್ಗ್ರಂಥವಾಗಿದೆ. ಇದನ್ನು ಪ್ರಪಂಚದ ನಾಲ್ವತ್ತು ಭಾಷೆಗಳಿಗೆ ಪರಿವರ್ತಿಸಿಕೊಂಡಿರುತ್ತಾರಾದ್ದರಿಂದ ಇಂಥಾ ಗ್ರಂಥದ ಪ್ರಯೋಜನವು ಕನ್ನಡಿಗರಿಗೂ ದೊರೆಯಲೆಂದು ಇದನ್ನು ಕನ್ನಡದಲ್ಲಿ ಬರೆದೆವು.
ತಮಿಳಿನಲ್ಲಿ ಪ್ರಚಲಿತವಾಗಿದ್ದ ಪವಿತ್ರಬೈಬಲ್ ಗ್ರಂಥವನ್ನು ಕನ್ನಡಕ್ಕೆ ತರುವ ಆಸಕ್ತಿಯಿಂದ ತರ್ಜುಮೆಗೆ ತೊಡಗಿದ ಅವರ ಸಾಹಸವನ್ನು ಮೆಚ್ಚಬೇಕಾದ್ದೇ. ಆದರೆ ಅದನ್ನು ಅವರು ಪ್ರಕಟಿಸಲಾಗದ ಕಾರಣ ತಿಳಿಯದು. ೧೯೬೦ರ ದಶಕದಲ್ಲಿ ಹೊರಬಂದ ಶುಭಸಂದೇಶಗಳ ಕಥೋಲಿಕ ಆವೃತ್ತಿಯಲ್ಲಿ ಎ ಎಂ ಜೋಸೆಫರ ಹಸ್ತಪ್ರತಿಯನ್ನು ಬಳಸಿಕೊಂಡಿರುವ ಬಗ್ಗೆ ಉಲ್ಲೇಖವಿದೆ.
೧೯೫೦ರಲ್ಲಿ ಫಾದರ್ ಐ ಬಿ ಪಿಂಟೊ ಅವರ ಸಲಹೆಯ ಮೇರೆಗೆ ಎ ಎಂ ಜೋಸೆಫರು ರೆವರೆಂಡ್ ಕ್ಯಾಸೆಲ್ ಬ್ರಾಂಕೊ ಅವರ ಮೋರ್ ಅಬೊಟ್ ಫಾತಿಮಾ ಎಂಬ ಪುಸ್ತಕವನ್ನು ಅನುವಾದಿಸಿ ಫಾತಿಮಾ ಮಾತೆ ಎಂಬ ಹೆಸರಿನಲ್ಲಿ ಪ್ರಕಟಿಸುತ್ತಾರೆ. ಈ ಪುಸ್ತಕದ ಪ್ರಕಟಣೆಗೆ ಮೇಸ್ತ್ರಿ ಚೌರಪ್ಪನವರ ಮಗ ಸಿ ಜೋಸೆಫ್ ಧನಸಹಾಯ ಮಾಡಿದ್ದನ್ನೂ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಜೀವವಾದ ಜೇಸುನಾಥರು ಎಂಬುದು ಜೋಸೆಫರ ಇನ್ನೊಂದು ಮಹತ್ತರ ಪುಸ್ತಕ. ಇದು ಯೇಸುಸಭೆಯ ಇ ಲೆ ಜೋಲಿ ಅವರ ಇಂಗ್ಲಿಷ್ ಪುಸ್ತಕದ ಅನುವಾದ. ಸಂಕಲ್ಪ ಹಟಯೋಗಿ ಎಂಬುದು ಲೊಯೊಲದ ಸಂತ ಇಗ್ನೇಷಿಯಸರ ಜೀವನ ಚರಿತ್ರೆ. ಕೆಂಪು ಮರಳು ಎಂಬ ಪುಸ್ತಕ ಸಂತ ಜಾನ್ ದೆ ಬ್ರಿಟ್ಟೊ ಅವರ ಜೀವನ ಚರಿತ್ರೆ. ಸಂತ ಮಾಂಟ್‌ಫರ್ಟ್ ಅವರು ಮರಿಯಮ್ಮನವರ ಬಗೆಗೆ ಬರೆದಿರುವ ಬೃಹದ್ಗ್ರಂಥವನ್ನು ಸಂಗ್ರಹರೂಪದಲ್ಲಿ ಮರಿಯಮ್ಮನವರ ರಹಸ್ಯ ಎಂಬ ಪುಸ್ತಕವಾಗಿ ಅನುವಾದಿಸಿದರು. ಆತ್ಮಪರಾಗವನ್ನು ತಮ್ಮ ಅಣ್ಣ ಎ ಎಂ ಬೆರ್ನಾಡರೊಂದಿಗೆ ಸೇರಿ ಪ್ರಕಟಿಸಿದ್ದಾರೆ. ಈ ಪುಸ್ತಕವನ್ನು ಎ ಎಂ ಬರ್ನಾಡರ ಮಗ ಬಿ ಪ್ರಮೋದ ಅವರು ಮರುಮುದ್ರಿಸಿದ್ದಾರೆ.
ಕನ್ನಡ ಕಥೋಲಿಕ ಕ್ರೈಸ್ತ ಸಾಹಿತ್ಯಕೃಷಿಯಲ್ಲಿ ತೊಡಗಿಕೊಂಡು ಇಂಥ ಮಹತ್ಸಾಧನೆಗಳನ್ನು ಮಾಡಿದ ಎ ಎಂ ಜೋಸೆಫರು ೧೮-೮-೦೯೬೫ರಲ್ಲಿ ತೀರಿಕೊಂಡರು. ಆದರೆ ಇಂದು ಅವರನ್ನು ನೆನಪು ಮಾಡಿಕೊಳ್ಳುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರವೇ.