ಶನಿವಾರ, ಆಗಸ್ಟ್ 14, 2010

ಲತೀನ ಕನ್ನಡ ನಿಘಂಟು

೧೯೮೭ರ ಮಾರ್ಚ್ ತಿಂಗಳ ಒಂದು ದಿನ. ಮಲ್ಲೇಶ್ವರದ ಆಟದ ಮೈದಾನದಲ್ಲಿ ಬೆಂಗಳೂರು ಬುಕ್ ಫೇರ್ ಎಂಬ ಮೇಳ ನಡೆದಿತ್ತು. ನಾನು ಸುಮ್ಮನೇ ಕುತೂಹಲಕ್ಕಾಗಿ ಎಂದು ಅಲ್ಲಿಗೆ ತೆರಳಿದ್ದವನು ಕಣ್ಣಾಡಿಸುತ್ತಿರುವಾಗ ನವದೆಹಲಿಯ ಏಶಿಯನ್ ಎಜುಕೇಷನಲ್ ಸರ್ವಿಸಸ್ ಎಂಬ ಹೆಸರಿನ ಒಂದು ಪುಸ್ತಕ ಮಳಿಗೆಯಲ್ಲಿ ಕನ್ನಡ ಶೀರ್ಷಿಕೆಯ ಪುಸ್ತಕಗಳನ್ನು ಕಂಡು ಸೋಜಿಗದಿಂದ ಒಳಹೊಕ್ಕೆ. ಬುಚರ್ ಎಂಬುವನು ಸಂಪಾದಿಸಿದ್ದ ಕನ್ನಡ ಇಂಗ್ಲಿಷು ನಿಘಂಟುವನ್ನು ತಿರುವುತ್ತಿದ್ದೆ. ಅಂಗಡಿಯವನು ಪುಸ್ತಕಗಳನ್ನು ಕಟ್ಟಿಡುವುದರಲ್ಲಿ ಮಗ್ನನಾಗಿದ್ದ. ಏಕೆಂದರೆ ಅಂದೇ ಪುಸ್ತಕ ಪ್ರದರ್ಶನದ ಕೊನೆಯ ದಿನ ಹಾಗೂ ಮುಕ್ತಾಯದ ವೇಳೆಯೂ ಸಮೀಪಿಸಿತ್ತು. ನನಗೇನೋ ಆ ಪುಸ್ತಕವನ್ನು ಕೊಳ್ಳುವಾಸೆ ಆದರೆ ಅದರ ಮುಖಬೆಲೆ ಇಪ್ಪತ್ತೈದು ರೂಪಾಯಿ. ನನ್ನ ಜೇಬಿನಲ್ಲಿದ್ದದ್ದು ಬರೇ ಇಪ್ಪತ್ತು ರೂಪಾಯಿ. ಅಂಗಡಿಯವನಿಗೆ ಅರ್ಥವಾಯಿತೇನೋ, ಆತ ಮುಗುಳ್ನಕ್ಕು ನಿಮ್ಮಲ್ಲೆಷ್ಟಿದೆಯೋ ಅಷ್ಟೇ ಕೊಡಿ ಸಾಕು ಎಂದ. ಸಂಕೋಚದಿಂದ ಇಪ್ಪತ್ತು ರೂಪಾಯಿ ಕೊಟ್ಟೆ. ಆತ ಸಂತೋಷದಿಂದ ಬಿಲ್ ಬರೆದು ಹರುಕು ಮುರುಕು ಇಂಗ್ಲಿಷಿನಲ್ಲಿ ಏನೇನೋ ಹೇಳಿದೆ. ಹಣದ ಮೌಲ್ಯಕ್ಕಿಂತಲೂ ಪುಸ್ತಕ ಕೊಳ್ಳಬೇಕೆನ್ನುವ ಮನಸ್ಸು ಮುಖ್ಯ ಎಂದು ಹೇಳಿದನೆಂದು ನಾನು ಅರ್ಥೈಸಿಕೊಂಡು ತಲೆದೂಗಿದೆ. ಏಕೆಂದರೆ ನನ್ನ ಇಂಗ್ಲಿಷು ಅವನದಕ್ಕಿಂತಲೂ ಮೇಲ್ಮಟ್ಟದ್ದಾಗಿರಲಿಲ್ಲ ಎಂದು ಎದೆ ಮುಟ್ಟಿ ಹೇಳುತ್ತೇನೆ.

ಆ ಪುಸ್ತಕ ಕೆಲ ದಿನಗಳವರೆಗೆ ನನ್ನನ್ನು ಸಂಪೂರ್ಣವಾಗಿ ಆವರಿಸಿಕೊಂಡುಬಿಟ್ಟಿತ್ತು. ಕಿಟೆಲರ ಕೃತಿಯನ್ನಾಧರಿಸಿದ ಸಂಗ್ರಹ ರೂಪದ ಪದಕೋಶವದು. ನಾವು ನಿತ್ಯವೂ ಬಳಸುವ ಕನ್ನಡ ಪದಗಳ ಮೂಲ ನಿಷ್ಪನ್ನಗಳ ಸೂಚಿಯೊಂದಿಗೆ ಇದ್ದ ಆ ಪದಸಂಗ್ರಹಕ್ಕೆ ಮಾರುಹೋದೆ. ಕನ್ನಡದಲ್ಲಿ ಯೋಚಿಸಿ ಇಂಗಲೀಸು ಪದಪ್ರಯೋಗ ಮಾಡುವ ನನ್ನಂಥವರ ಪದಸಂಪದವನ್ನು ಹೆಚ್ಚಿಸಲು ಅದು ಬಲು ಒಳ್ಳೆಯ ಪುಸ್ತಕ.

ಅದು ಸರಿ ಕನ್ನಡದ ಬಗ್ಗೆ ಕೆಲಸ ಮಾಡಿದ ಕ್ರೈಸ್ತ ಮಿಷನರಿಗಳೆಲ್ಲ ಕಿಟೆಲ್ ರೈಸ್ ಫ್ಲೀಟ್ ಮೊಗ್ಲಿಂಗ್ ಮುಂತಾದ ಪ್ರೊಟೆಸ್ಟಾಂಟರೇ. ಹಾಗಿದ್ದರೆ ಕಥೋಲಿಕ ಮಿಷನರಿಗಳು ಕನ್ನಡದಲ್ಲಿ ಏನೂ ಮಾಡಲೇ ಇಲ್ಲವೇ? ಈ ಪ್ರಶ್ನೆಗೆ ಉತ್ತರ ಸ್ವಲ್ಪ ಜಟಿಲವಾದದ್ದು. ಏಕೆಂದರೆ ಪ್ರೊಟೆಸ್ಟೆಂಟರ ಕೃತಿಗಳು ಪ್ರಾಪಂಚಿಕ ಬಳಕೆಗೆ ತೆರೆದಿಟ್ಟುಕೊಂಡಿವೆಯಾದರೆ ಕಥೋಲಿಕರವು ಅವರ ಮಠಗಳ ಆರ್ಕೈವುಗಳಲ್ಲಿ ಸಂರಕ್ಷಿತವಾಗಿ ಲೋಕದ ಕಣ್ಣಿಗೆ ಮರೆಯಾಗಿವೆ. ರೋಮಿನ ಪ್ರಖ್ಯಾತ ಗ್ರೆಗರಿಯನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದರಿಂದಲೇ ಅಲ್ಲವೇ ಸ್ವಾಮಿ ಅಂತಪ್ಪನವರಿಗೆ ೧೭ನೇ ಶತಮಾನದಲ್ಲಿ ಜೆಸ್ವಿತರು ನಮ್ಮ ನಾಡಿನ ಆಗುಹೋಗುಗಳ ಬಗ್ಗೆ ಬರೆದ ಅಮೂಲ್ಯ ಪತ್ರಗಳು ಕಣ್ಣಿಗೆ ಬಿದ್ದದ್ದು? ಇಂದು ಆ ಜೆಸ್ವಿತ್ ಪತ್ರಗಳ ಬೆಳಕಲ್ಲಿ ಕನ್ನಡ ನಾಡಿನ ಇತಿಹಾಸವನ್ನು ಪುನರ್ ರಚನೆ ಮಾಡಬಹುದಾಗಿದೆ.

ಬೆಂಗಳೂರಿನ ಪ್ರಾಚೀನ ಚರ್ಚುಗಳಲ್ಲೊಂದಾದ ಸಂತ ಮೇರಿ ಬೆಸಿಲಿಕಾದಲ್ಲಿನ ಗುರುವರ‍್ಯರಾದ ಸ್ವಾಮಿ ಅರುಳಪ್ಪನವರ ಬಳಿ ಈ ವಿಷಯಗಳನ್ನು ಕುರಿತು ಚರ್ಚಿಸುತ್ತಿದ್ದಾಗ ಅವರು ತಮ್ಮ ಬಳಿಯಿದ್ದ ಒಂದು ಅಮೂಲ್ಯ ಗ್ರಂಥವನ್ನು ನನಗೆ ತೋರಿಸಿದರು. ಅದರ ತಲೆಬರಹವನ್ನು Dictionarium Latino Canarense (ದಿಕ್ತಿಯನೇರಿಯುಂ ಲತೀನೊ ಕನಾರೆನ್) ಎಂದು ಬರೆಯಲಾಗಿತ್ತು. ಅಂದರೆ ಅದೊಂದು ಲತೀನ ಕನ್ನಡ ಪದಕೋಶ. ಎಲ್ಲೂ ಉಪಲಭ್ದವಿಲ್ಲದ ಅಪರೂಪದ ಪುಸ್ತಕ ಅದು. ಅದನ್ನು ಮರುಪ್ರಕಟಿಸಿದರೆ ಹೇಗೆ ಎಂದು ಅರುಳಪ್ಪನವರು ಕೇಳಿದರು. ಅದರ ಬಗ್ಗೆ ಮಾನ್ಯ ಜಿ ವೆಂಟಸುಬ್ಬಯ್ಯವರಿಗೆ ದೂರವಾಣಿಯಲ್ಲಿ ಮಾತನಾಡಿದಾಗ ಅವರು ಆ ಪುಸ್ತಕವನ್ನು ಹಿಂದೊಮ್ಮೆ ನೋಡಿದ್ದೇನೆ, ಆದರೆ ಅದರ ಮರುಪ್ರಕಟನೆಯಿಂದ ಯಾರಿಗೂ ಪ್ರಯೋಜನವಿಲ್ಲ, ಆ ಪುಸ್ತಕವನ್ನು ಪ್ರದರ್ಶನ ಮಳಿಗೆಯಲ್ಲಿ ಇಡಲಷ್ಟೇ ಯೋಗ್ಯ ಎಂದರು. ಅರುಳಪ್ಪನವರಿಗೆ ನಿರಾಶೆಯಾಯತೇನೋ? ಅವರಿಗೆ ಹೇಳಿದೆ ಇಂದು ಲತೀನ ಕನ್ನಡ ನಿಘಂಟು ಬಳಕೆಗೆ ಬರುವುದೋ ಇಲ್ಲವೋ ಅದು ಮುಖ್ಯವಲ್ಲ, ಇಂತದೊಂದು ಚರಿತ್ರಾರ್ಹ ಗ್ರಂಥವೊಂದು ಕಥೋಲಿಕರಿಂದ ರಚಿತವಾಗಿತ್ತು ಎಂಬುದನ್ನು ಪ್ರಪಂಚಕ್ಕೆ ತಿಳಿಯಪಡಿಸುವುದು ಮುಖ್ಯ ಎಂದು. ಹಣಕಾಸಿನ ನೆರವಿನ ಭರವಸೆ ನೀಡಿ ಅವರು ಆ ಅಮೂ ಗ್ರಂಥದ ಮರುಪ್ರಕಟನೆಯ ಜವಾಬ್ದಾರಿಯನ್ನು ನನಗೊಪ್ಪಿಸಿದರು.

ಸುಮಾರು ೧೨೦೦ ಪುಟಗಳ ಆ ಪುಸ್ತಕವನ್ನು ಬರೆದವರಾರು ಎಂಬುದನ್ನು ಎಲ್ಲಿಯೂ ಹೇಳಿರಲಿಲ್ಲ. ಮುಖಪುಟದಲ್ಲಿ AUCTORE RR EPISCOPO JASSENSI, V. A. MAISSURENSI, etc. etc (ಔಕ್ತೊರೆ ರೆವರೆಂದಿಸ್ಸಿಮೊ ಎಪಿಸ್ಕೊಪೊ ಯಸೆನ್, ವಿಕಾರಿಯೇತುಸ್ ಅಪೊಸ್ತೊಲಿಕುಸ್ ಮಯಿಸ್ಸುರ್ ಎಂದಷ್ಟೇ ಬರೆಯಲಾಗಿತ್ತು. ಅದನ್ನು ಒರೆಗೆ ಹಚ್ಚಿದಾಗ AUCTORE = Author ಲೇಖಕ, RR = Right Reverend ಪೂಜ್ಯ, EPISCOPO JASSENSI = Bishop of Jasso ಯಸೊ ಪ್ರಾಂತ್ಯದ ಧರ್ಮಾಧಿಕಾರಿ, V. A. MAISSURENSI = Apostolic Vicar to Mysore ಮೈಸೂರು ಪ್ರಾಂತ್ಯಕ್ಕೆ ನಿಯುಕ್ತರಾದ ಗುರುಸ್ವಾಮಿಗಳು ಎಂಬುದಾಗಿ ಬಿಡಿಸಿ ಅದು ಮತ್ಯಾರೂ ಅಲ್ಲದೆ ಬಿಷಪ್ ಎತಿಯೇನ್ ಲೂಯಿ ಶಾರ್ಬೊನೊ ಎಂಬ ತೀರ್ಮಾನಕ್ಕೆ ಬರಲಾಯಿತು.

ಇನ್ನು ಅದರ ಮೊದಲ ಪುಟಗಳಲ್ಲಿ ಮುದ್ರಿತವಾಗಿರುವ ಪ್ರಸ್ತಾವನೆಯು ಲತೀನ ಭಾಷೆಯಲ್ಲಿದ್ದು ಅದನ್ನು ತರ್ಜುಮೆ ಮಾಡುವವರು ಯಾರೂ ದೊರಕಲಿಲ್ಲವಾಗಿ ಅಂತರ್ಜಾಲದ ಮರೆಹೊಕ್ಕೆ. ಆದರೆ ದುರದೃಷ್ಟವೆಂದರೆ ಅಂತರ್ಜಾಲದಲ್ಲಿ ಸ್ಪ್ಯಾನಿಶ್, ಇಟಾಲಿಯನ್, ಫ್ರೆಂಚ್, ಜರ್ಮನ್, ಪೋರ್ಚುಗೀಸ್, ಜಪಾನೀ ಮುಂತಾದ ಹಲವಾರು ಭಾಷೆಗಳಿಗೆ ತರ್ಜುಮೆಯ ಸೌಲಭ್ಯವಿದ್ದರೂ ಲತೀನ ಭಾಷೆಯಿಂದ ತರ್ಜುಮೆ ಮಾಡಲು ಯಾವ ತಂತ್ರಾಂಶವೂ ಸಿಕ್ಕಲಿಲ್ಲ. ಕೆಲ ಅಂತರ್ಜಾಲ ತಾಣಗಳು ಲತೀನದ ಪಠ್ಯವನ್ನು ಕಳಿಸಿ, ಪ್ರಯತ್ನಿಸುತ್ತೇವೆ ಎಂದುದರಿಂದ OCR ತಂತ್ರಜ್ಞಾನ ಬಳಸಿ ಪಠ್ಯವನ್ನು ಅಂತರ್ಜಾಲಕ್ಕೆ ಊಡಿದೆ. ಆದರೆ ಫಲಿತಾಂಶ ಶೂನ್ಯವಾಗಿತ್ತು.

ಆ ವೇಳೆಗೆ ಫಾದರ್ ದೇವದತ್ತ ಕಾಮತರ ಪ್ರಸ್ತಾಪ ಮಾಡಿದರು ಸ್ವಾಮಿ ಅರುಳಪ್ಪನವರು. ಈ ಫಾದರ್ ದೇವದತ್ತರು ಸಂಸ್ಕೃತ ವಿದ್ವಾಂಸರಾಗಿದ್ದು ಮಧ್ವಾಚಾರ್ಯರ ಕೃತಿಗಳ ಬಗ್ಗೆ ಆಳ ಸಂಶೋಧನೆ ನಡೆಸಿದ್ದಾರೆ. A Study on the Doctrines of Madhvacharya ಅನ್ನೋದು ಅವರ ಸಂಶೋಧನಾ ಪ್ರಬಂಧವಾಗಿದೆ. ಅವರು ಲತೀನದ ಪಂಡಿತರೂ ಆಗಿದ್ದರಿಂದ ನಮ್ಮ ಕೆಲಸ ಸುಲಭವಾಯಿತು. ಒಂದೇ ದಿನದಲ್ಲಿ ಅವರು ಲತೀನ ಪ್ರಸ್ತಾವನೆಯನ್ನು ಕನ್ನಡಕ್ಕೆ ಅನುವಾದಿಸಿಕೊಟ್ಟರು. ಆ ಪ್ರಸ್ತಾವನೆಯಲ್ಲಿ ಶಾರ್ಬೊನೊ ಅವರು "ಕನ್ನಡವು ನಾಲ್ಕು ಭಾಷೆಗಳಿಂದ ಕಲೆಹಾಕಿರುವ ನುಡಿಯೆಂದು ಹೇಳುವುದುಂಟು . . . ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಭಾಷೆಯು ಸ್ಥಿರತೆಯನ್ನು ತಲುಪಿರುವುದೆಂದು ಹೇಳಲು ಸಾಧ್ಯವಿಲ್ಲ. ಅದರ ಪದವಿನ್ಯಾಸದಲ್ಲಿ ಕೂಡಾ ವೈವಿಧ್ಯ ಮತ್ತು ಬಹುರೂಪವು ಕಾಣಬರುವುದು" ಎಂದು ಹೇಳುತ್ತಾರೆ.

ಇಂದು ನಾವು ಅದನ್ನೊಪ್ಪಲು ಸಾಧ್ಯವಿಲ್ಲವಾದರೂ ಶಾರ್ಬೊನೊ ಅವರ ಸಮಕಾಲೀನ ಪರಿಸ್ಥಿತಿಯನ್ನು ಅವಲೋಕಿಸಿದಾಗ ಅವರ ತಿಳುವಳಿಕೆಯ ನೆಲೆಯನ್ನು ಗುರುತಿಸಬಹುದಾಗಿದೆ. ಏಕೆಂದರೆ ಅವರು ಫ್ರೆಂಚ್ ವಸಾಹತು ಆಗಿದ್ದ ಪಾಂಡಿಚೇರಿಯಲ್ಲಿ ತಮ್ಮ ಮೊದಲ ದಿನಗಳನ್ನು ಕಳೆದು ತಮಿಳು ತೆಲುಗುಗಳ ಪರಿಚಯ ಮಾಡಿಕೊಂಡ ತರುವಾಯ ಕನ್ನಡನಾಡಿಗೆ ಬಂದರು. ಹೀಗಾಗಿ ಅವರು ಕನ್ನಡವನ್ನು ತಮಿಳಿನ ಮೂಲಕ ಕಲಿತ ಸಾಧ್ಯತೆಯಿದೆ. ಅಂದಿನ ಸಂದರ್ಭದಲ್ಲಿ ಮುದ್ರಿತ ಪುಸ್ತಕಗಳ ಕೊರತೆ ಹಾಗೂ ಎಲ್ಲೆಡೆಯೂ ಅವು ಸಿಗದಿದ್ದ ಕಾರಣದಿಂದ ಶಾರ್ಬೊನೊ ಅವರ ಹೇಳಿಕೆಯನ್ನು ನಾವು ಅನುಕಂಪದಿಂದ ನೋಡಬೇಕಾಗುತ್ತದೆ.

ಈ ಪದಕೋಶದ ರಚನೆಗೆ ಶಾರ್ಬೊನೊ ಅವರು ಪುದುಚೇರಿಯಿಂದ ಪ್ರಕಟವಾದ ಲತೀನ್-ತಮಿಳು ನಿಘಂಟಿನ ಸಹಾಯ ಪಡೆದಿದ್ದಾರೆ. ಆದರೆ ಗ್ರಂಥದ ಮುಕ್ತಾಯದ ವೇಳೆಗೆ ಅವರಿಗೆ ರೀವ್ ಅವರ ನಿಘಂಟು ದೊರೆತು ಕನ್ನಡ ಸಾಹಿತ್ಯದ ಅಲ್ಪ ಪರಿಚಯವಾದುದರ ಕುರುಹು ದೊರೆಯುತ್ತದೆ. ಫರ್ಡಿನೆಂಡ್ ಕಿಟೆಲರಂತೆ ಭಾಷಾಧ್ಯಯನ, ಗ್ರಂಥಸಂಪಾದನೆ, ನಿಘಂಟು ರಚನಾಶಾಸ್ತ್ರದ ಗೋಜಿಗೆ ಹೋಗದೆ ಅವರು ಲತೀನ್ ಪದಕ್ಕೆ ಹತ್ತಿರವಾದ ಕನ್ನಡ ಪದವನ್ನು ನೀಡುವುದರಲ್ಲಿಯೇ ತೃಪ್ತರಾಗಿದ್ದಾರೆ. ಆದರೆ ಇದೊಂದು ಪ್ರಾರಂಭಿಕ ಪ್ರಯತ್ನ ಎಂಬುದನ್ನು ಮಾತ್ರ ತಳ್ಳಿಹಾಕುವಂತಿಲ್ಲ, ಅದಕ್ಕಾಗಿಯೇ ಈ ಕೃತಿಯು ನಮಗೆ ಮುಖ್ಯವಾಗುತ್ತದೆ ಮಾತ್ರವಲ್ಲ ಐತಿಹಾಸಿಕವಾಗಿಯೂ ಮಹತ್ವದ್ದಾಗುತ್ತದೆ.

ಈ ಪದನೆರಕೆಯಲ್ಲಿ ಶಾರ್ಬೊನೊ ಅವರು ಬರೀ ಲತೀನ ಪದಗಳನ್ನು ಅಕಾರಾದಿಯಾಗಿ ಕೊಡುತ್ತಾ ಅವಕ್ಕೆ ಅರ್ಥಪ್ರಾಪ್ತಿಯನ್ನು ನೀಡುತ್ತಿಲ್ಲ. ಬದಲಿಗೆ ಅವರು ಲತೀನ ಪಂಡಿತ ಭಾಷೆ, ದಿನಬಳಕೆಯ ಭಾಷೆ, ಕವಿಗಳ ಸಾಲುಗಳನ್ನು ವಿಶದೀಕರಿಸುತ್ತಾ ಅವುಗಳ ಜೊತೆಜೊತೆಗೇ ಕನ್ನಡದ ಪದಗಳಲ್ಲಿನ ವಿವಿಧ ಪ್ರಾದೇಶಿಕ ಭೇದಗಳು, ಅರ್ಥಾಂತರಗಳು, ಅರ್ಥವೈವಿಧ್ಯಗಳನ್ನು ಸಹಾ ವಿಶದೀಕರಿಸುತ್ತಾರೆ. ಕನ್ನಡಿಗರ ಆಡುಮಾತಿನಲ್ಲಿ ಬಳಕೆಯಲ್ಲಿರುವ ಪದಗಳನ್ನೇ - ಅವುಗಳ ಮೂಲ ಯಾವುದೇ ಇದ್ದರೂ - ಮೊದಲು ನೀಡುತ್ತಾರೆ. ಹದಿನೈದು ವರ್ಷಗಳ ಕಾಲ ಅವರು ಜನಸಾಮಾನ್ಯರ ಒಡನಾಟದಲ್ಲಿ ಕೇಳಿದ ಮಾತುಗಳನ್ನು ಟಿಪ್ಪಣಿ ಮಾಡಿಟ್ಟುಕೊಂಡು ಮಿಷನರಿ ಕೆಲಸ ಹಾಗೂ ಚರ್ಚಿನ ಉಸ್ತುವಾರಿ ಮತ್ತು ಗುರುಅಭ್ಯರ್ಥಿಗಳ ಶಿಕ್ಷಣಕ್ಕಾಗಿ ಯೂರೋಪಿನಿಂದ ನಮ್ಮ ನಾಡಿಗೆ ಬರುತ್ತಿದ್ದ ವಿದ್ವಾಂಸರು ಮತ್ತು ಸಂದರ್ಶಕರ ಅನುಕೂಲಕ್ಕಾಗಿ ಈ ಪದಕೋಶವನ್ನು ರಚಿಸಿದ್ದಾರೆ. ಏಕೆಂದರೆ ಲತೀನ ಭಾಷೆಯು ಆ ಕಾಲದಲ್ಲಿ ಚರ್ಚಿನ ದೈವಾರಾಧನೆಯ ಅಧಿಕೃತ ಭಾಷೆಯಾಗಿತ್ತು. ಅಲ್ಲದೆ ನಮ್ಮ ದೇಶಕ್ಕೆ ಭೇಟಿ ನೀಡುತ್ತಿದ್ದ ಐರೋಪ್ಯ ಕಥೋಲಿಕ ಮಿಷನರಿಗಳು ಯಾವ ಮಾತೃಭಾಷೆಯವರೇ ಆಗಿದ್ದರೂ ಲತೀನ ಭಾಷೆಯನ್ನು ಕಲಿತಿರುತ್ತಿದ್ದರು.

ಶಾರ್ಬೊನೊ ಅವರ ಈ ಪುಸ್ತಕದಲ್ಲಿನ ಮೊದಲ ನಮೂದು ಲತೀನ ಆಗಿದ್ದು ಎರಡನೇ ನಮೂದು ಕನ್ನಡವಾಗಿದೆ. ಉದಾಹರಣೆಗೆ ನೋಡುವುದಾದರೆ ab ostio jacens = ಬಾಗಲಿಗೆ ಮುಂಚೆ, ಯೆದುರಾಗಿ ಬಿದ್ದಿರುವ, liberis impuberibus = ಮಕ್ಕಳ ಸಂಣ ಪ್ರಾಯದೊಳು, ಸಂಣ ಪ್ರಾಯದ ಕಾಲದಲ್ಲಿ.

ಇವರು ಮುದ್ರಣಕ್ಕಾಗಿ ಬಳಸಿದ ಕನ್ನಡ ಲಿಪಿಯು ಅಂದಿನ ಅಂದರೆ ಹತ್ತೊಂಬತ್ತನೇ ಶತಮಾನದ ಕನ್ನಡ ಲಿಪಿಯಾಗಿದ್ದು ಮೇಲುನೋಟಕ್ಕೆ ಓದಲು ಸ್ವಲ್ಪ ಕ್ಲಿಷ್ಟವೆಂಬಂತೆ ತೋರುತ್ತದೆ, ಅದರಲ್ಲಿ ರ ಒತ್ತಕ್ಷರ, ತ ಒತ್ತಕ್ಷರಗಳು, ಪ ಮತ್ತು ಸ ದೀರ್ಘಾಕ್ಷರಗಳು ಇಂದಿಗೂ ತೆಲುಗು ಲಿಪಿಯಲ್ಲಿ ಉಳಿದುಕೊಂಡಿವೆ. ಅಲ್ಲದೆ ಇವರ ಪುಸ್ತಕದಲ್ಲಿ ಅರ್ಕವೊತ್ತು ಕಾಣುವುದಿಲ್ಲ.

ಈ ಪುಸ್ತಕವನ್ನು ಅವಲೋಕಿಸಿದ ನುಡಿಯರಿಗ ಡಾ. ಕೆ ವಿ ನಾರಾಯಣರು ಬಹು ಸಂತೋಷಪಟ್ಟು ಒಂದು ವಿದ್ವತ್ ಲೇಖನ ಬರೆದುಕೊಟ್ಟರು. ಅಲ್ಲದೆ ಈ ಪುಸ್ತಕದ ಮರುಪ್ರಕಟನೆಯ ಸುದ್ದಿ ಕೇಳಿ ಇತರ ನುಡಿಯರಿಗರಾದ ಕನ್ನಡ ವಿವಿಯ ಡಾ. ಮುರಿಗೆಪ್ಪನವರು, ರಂಗಾಯಣದ ಲಿಂಗದೇವರು ಹಳೆಮನೆಯವರು, ಧಾರವಾಡದ ಸಂಗಮೇಶ ಸವದತ್ತಿಮಠ ಅವರು ಬಲು ಸಂಭ್ರಮಿಸಿದರು.

ಹೀಗೆ ಅಂತೂ ಇಂತೂ ಈ ಲತೀನ ಕನ್ನಡ ನಿಘಂಟು ಮರುಮುದ್ರಿತವಾಗಿ ೨೦೧೦ ಆಗಸ್ಟ್ ೮ ರಂದು ಭಾನುವಾರ ಬೆಳಗ್ಗೆ
ಹತ್ತೂವರೆ ಗಂಟೆಗೆ ಕನ್ನಡಭವನದ ನಯನ ಸಭಾಂಗಣದಲ್ಲಿ ಲೋಕಾರ್ಪಿತವಾಯಿತು.
http://www.prajavani.net/Content/Aug82010/books20100807198321.asp