ಭಾನುವಾರ, ಮಾರ್ಚ್ 16, 2014

ಕ್ರಿಸ್ತಕಾವ್ಯ

ಇತ್ತೀಚೆಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿಕ್ರಿಸ್ತ ಕಾವ್ಯಎಂಬ ವಿಭಿನ್ನ ಸಾಂಸ್ಕೃತಿಕ ಮನೋಲ್ಲಾಸ ರೂಹುತಳೆದಿತ್ತು. ಫೆಬ್ರವರಿ ೨೩ರ ಭಾನುವಾರ ಸೇವಾಸದನ ರಂಗಮಂದಿರದಲ್ಲಿ ಡಾ, ಕೆ ಎಸ್ ಪವಿತ್ರಾ ಅವರು ಯೇಸುಸ್ವಾಮಿಯ ಜೀವನ ಕಥನವನ್ನು ಭರತನಾಟ್ಯವೆಂಬ ತೇಜೋಮಯ ಲಾಸ್ಯರೂಪದಲ್ಲಿ ಯಶಸ್ವಿಯಾಗಿ ಪ್ರಯೋಗಿಸಿದರು. ಯೇಸುಕ್ರಿಸ್ತನ ಜೀವನಮೌಲ್ಯಗಳು ಮತ್ತು ಉಪದೇಶಗಳನ್ನು ಕನ್ನಡ ಸಾಹಿತ್ಯದ ಹಿನ್ನೆಲೆಯಲ್ಲಿ ಭರತನಾಟ್ಯದ ಮುಖೇನ ಪರಿಶೋಧಿಸುವ ಪವಿತ್ರಾ ಅವರ ಆಸಕ್ತಿಯನ್ನು ಮೆಚ್ಚಲೇಬೇಕು. ಹಿಂದೆಯೂ ಅನೇಕರು ಪ್ರಯತ್ನಗಳನ್ನು ಮಾಡಿ ಯಶಸ್ವಿಯಾಗಿದ್ದಾರಾದರೂ ಕನ್ನಡ ಕಾವ್ಯಸುಧೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಮಾರ್ಗದಲ್ಲಿ ಪವಿತ್ರಾ ಅವರು ಗೆದ್ದಿದ್ದಾರೆ.
ಸುಮಾರು ೧೯೮೯ರಲ್ಲಿ ಇದೇ ಮಲ್ಲೇಶ್ವರದ ಕೇಶವ ನೃತ್ಯಶಾಲೆಯ ತಂಡದವರಮಹಾತ್ಮ ಯೇಸುಕ್ರಿಸ್ತಎಂಬ ನೃತ್ಯರೂಪಕವನ್ನು ನಾನು ಪ್ರಾಯೋಜಿಸಿದಾಗ ಅದು ಎಲ್ಲರ ಮೆಚ್ಚುಗೆ ಪಡೆದಿತ್ತು. ಅಂದು ಫಾದರ್ ಪ್ಯಾಟ್ರಿಕ್ ಡಿಗ್ಬಿ ಎಂಬ ಹಿರಿಯ ಗುರುಗಳುತುಂಬಾ ಬೊಂಬಾಟ್ ಆಗಿತ್ತುಎಂದು ಉದ್ಗರಿಸಿದ್ದು ನನಗಿಂದೂ ನೆನಪಿದೆ. ಇದೇ ಮಲ್ಲೇಶ್ವರದ ಸಂತ ರಾಯಪ್ಪರ ಗುರುಮಠದಲ್ಲಿ ಹಿಂದೊಮ್ಮೆ ಫ್ರಾನ್ಸಿಸ್ ಬಾರ್ಬೊಸಾ ಅವರೂ ಯೇಸುಕಾವ್ಯವನ್ನು ಪ್ರಯೋಗಿಸಿದ್ದರು. ಕೇಶವ ನೃತ್ಯಶಾಲೆಯದು ತಂಡದ ಪ್ರಯತ್ನವಾದರೆ ಫ್ರಾನ್ಸಿಸ್ ಬಾರ್ಬೊಸಾ ಅವರು ಏಕವ್ಯಕ್ತಿ ನರ್ತನ.
ಮಲ್ಲೇಶ್ವರದಲ್ಲಿ ನಡೆದ ಪವಿತ್ರಾ ಅವರ ನೃತ್ಯ ಕಾರ್ಯಕ್ರಮವೂ ಏಕವ್ಯಕ್ತಿ ನಾಟ್ಯವೇ. ಮನೋವೈದ್ಯರಾದ ಆಕೆ ನೃತ್ಯಪ್ರಕಾರದಲ್ಲೂ ಪಳಗಿದ್ದಾರೆ. ಅವರುಕ್ರಿಸ್ತಕಾವ್ಯನೃತ್ಯರೂಪಕದ ಮೂಲಕ ಯೇಸುವಿನ ಜೀವನಮೌಲ್ಯಗಳನ್ನು ನಮ್ಮ ಮಣ್ಣಿನ ಕಲೆಯ ಮೂಲಸ್ರೋತದಲ್ಲಿ ಏಕೀಭವಿಸಿದರು.
ದೇವರು ಜಗತ್ ಸೃಷ್ಟಿಯನ್ನು ಸಾಕಾರಗೊಳಿಸಿದ್ದನ್ನು ಮಂದಸ್ಮಿತ ಹಾವಭಾವಗಳಲ್ಲಿ ನಿರಾಕಾರವಾಗಿ ನಿರೂಪಿಸಿದ ಪವಿತ್ರಾ ಅವರು ಮೀನಾಗಿ ಈಜಿದರು, ಹರಿಣವಾಗಿ ಜಿಗಿದರು, ನವಿಲಾಗಿ ಕುಣಿದರು, ಹಾವಾಗಿ ತೆವಳಿದರು. ಮೃಣ್ಮಯ ಮೂರ್ತಿಯನ್ನು ಕಡೆದ ದೇವಕುಂಬಾರ ಅದಕ್ಕೆ ನವಿರಾದ ಬೆರಳುಗಳನ್ನೂ ಮಾತನ್ನೂ ದಯಪಾಲಿಸಿ ನರನಾಗಿ ಮಾಡಿದರು. ಅವನ ಪಕ್ಕೆಲುಬಿನಿಂದ ಪವಿತ್ರಾ ಅವರು ತಾವೇಇವಳುಆಗಿಈವ್ ಳಾದರು’.
ಆಮೇಲೆ ಚೈತ್ರ ಅವರ ವಾಙ್ಮಯ ನಿರೂಪಣೆಯಲ್ಲಿ ಮನುಷ್ಯಕುಲ ಬೆಳೆದು ದ್ವೇಷಾಸೂಯೆಗಳು ಹೆಚ್ಚಿ ದೇವನ ಕೋಪ ಮಿತಿಮೀರಿತು. ವರ್ಷಕಾಲ ಬಿಡದೆ ಸುರಿದ ವರ್ಷಧಾರೆಯಿಂದ ಭೂಮಿಯಲ್ಲಿ ಪ್ರಳಯವಾಗಿ ಅಖಿಲ ಜೀವಜಂತು ನಾಶವಾಯಿತು. ದೇವಕೃಪೆಯಿಂದ ನೋಹ ಮತ್ತವನ ಪರಿವಾರವಷ್ಟೇ ಬದುಕುಳಿದದ್ದು. ತನ್ನ ಸೃಷ್ಟಿಯ ತಾನೇ ನಾಶಗೈದುದಕ್ಕೆ ದೇವನು ನೊಂದುಕೊಂಡ, ಇನ್ನೆಂದೂ ಜಗತ್ತಿಗೆ ಪ್ರಳಯ ತಾರೆನೆಂದು ಅಂದುಕೊಂಡ. ಅದರ ನೆನಪಿಗೆ ಭೂಮಿಯ ತುದಿಯಿಂದ ತುದಿಗೆ ಕಾಮನಬಿಲ್ಲನ್ನು ಕಟ್ಟಿದ.
ಇನ್ನು ಕ್ರಿಸ್ತನಾಗಮನ. ನವಮಾಸ ಉದರಲ್ಲಿ ಹೊತ್ತು ಕ್ರಿಸ್ತನನ್ನು ಜಗತ್ತಿಗಿತ್ತು ಪಲ್ಲವಿಸಿ ಸಂಭ್ರಮಿಸಿ ಪೊರೆದಳು ಮೇರಿ ಯಶೋದೆಯಂತೆ. ಬೀದರಿನ ಜಾನಪದ ಹಾಡಾದಕೂಸ ನೋಡೋಣ ಬನ್ನಿ ಯೇಸುಸ್ವಾಮಿ ಕೂಸ ನೊಡೋಣ ಬನ್ನಿ, ಹಾಸಿದ ಅರಿವೆಯಲ್ಲಿ ಮಾಸದ ಹೊಸ ಕೂಸ . . ’ ಎಂಬುದು ನಾಟ್ಯತಂಡದವರ ಗಾನದಲ್ಲಿ ತೇಲಿಬಂತು.
ಆಮೇಲಾಯ್ತು ಹಸುಗೂಸುಗಳ ಕಗ್ಗೊಲೆ. ತನ್ನನ್ನು ಕೊಲ್ಲಲೆಂದೇ ಯೇಸು ಹುಟ್ಟಿದ್ದಾನೆಂಬ ಸಮಾಚಾರ ತಿಳಿದಿದ್ದೇ ಹೆರೋದ ರಾಜ ಬೆಚ್ಚಿ ಬೆದರುತ್ತಾನೆ. ’ಮಗು ನೀನು ಪೆತ್ತರ್ಗೆ ಲೋಕಕ್ಕೆ ವೈರಿ’ (You are a darling to your parent but a competitor to the world) ಎಂಬಂತೆ, ಕೃಷ್ಣನನ್ನು ಕೊಲ್ಲಲು ಕಂಸನು ಎಳಸಿದಂತೆ, ಹೆರೋದ ರಾಜ ತನ್ನ ನಾಡಿನ ಎಳೆಗೂಸುಗಳನ್ನು ಕೊಚ್ಚಿಹಾಕಿ ಎಂದು ಇತಿಹಾಸವೇ ಬೆಚ್ಚುವಂಥ ಆಜ್ಞೆ ಹೊರಡಿಸುತ್ತಾನೆ. ಕಚಕ್ ಕಚಕ್ ಎಂದು ಕೊಚ್ಚಿದ ರಭಸಕ್ಕೆ ಕುಸುಮರೂಪದ ಅಸುಗೂಸುಗಳು ನಸುನಗುವಂತ ತೊಟ್ಟಲಲಿ ರಕ್ತಮಡುವಿನಲ್ಲಿ ಅಸುನೀಗಿದವು. ಅಯ್ಯೋ, ದೃಶ್ಯ ಭಯಾನಕ! ಚಿಗುರು ಕೈಗಳು ಎಳೆಯ ಕಾಲ್ಗಳು ತುಂಡಾಗಿ ಬಿದ್ದವು. ಕರುಳು ಹೊರಚೆಲ್ಲಿ ಹೆತ್ತ ಕರುಳನ್ನು ನರಳಿಸಿದವು. ಮಕ್ಕಳ ತಂದೆತಾಯಿಯರು ಬೋರಾಡಿ ಚೀರಾಡಿ ನಿಡುಸುಯ್ದು ತಲೆಚಚ್ಚಿ ಹುಚ್ಚರಾಗಿ ಬೆಪ್ಪರಾಗಿ ಗೋಳಾಡಿದರು. ನಾಟ್ಯದ ರೌದ್ರ ಭಯಾನಕ ಭೀಭತ್ಸ ಕರುಣ ರಸಾರ್ದ್ರದ ಭಾವಲಹರಿಯಲ್ಲಿ ಮಿಂದವರು ಪ್ರೇಕ್ಷಕರು.
ಆದರೆ ಆ ಸಮಯದಲ್ಲಿ ಆ ನಾಡಿನಿಂದಾಚೆ ಬಾಲಯೇಸುಇಹಳು ತಾಯಿ ಪೊರೆವುದವಳ ಹಾಲ ತೊಟ್ಟಿಲೆಂದು ನಂಬಿ ಬಾಳು ತುಂಬಿ ಬದುಕು ಅವಳು ಪ್ರೇಮಸಿಂಧುಎಂಬಂತೆ ಮರಿಯಳ ಮಡಿಲಲ್ಲಿ ಹಾಯಾಗಿ ಮಲಗಿದ್ದರು. ಎಳೆಕಂದ ಬೆಳೆದು ಬೇರೆ ಮಕ್ಕಳೊಡನೆ ಆಟಕ್ಕೆ ಹೋಗಿ ಎಷ್ಟೊತ್ತಾದರೂ ಮನೆಗೆ ಬರಲಿಲ್ಲ. ಮಗನನ್ನು ಹುಡುಕಿ ಹೊರಟ ಮೇರಿತಾಯಿಗೆ ದೂರದಲ್ಲಿ ಮಗ ಒಂಟಿಯಾಗಿ ನಿಂತಿರುವುದು ಕಂಡಿತು. ಹತ್ತಿರ ಹೋಗಿ ನೋಡಿದರೆ ಅವನ ಕೆನ್ನೆಯ ಮೇಲೆ ಎಳೆಬೆರಳುಗಳ ಗುರುತು. ಕಣ್ಣಲ್ಲಿ ಕಂಬಿನಿಯ ಧಾರೆ. ಯಾಕಳುವೆ ಎಲೆ ಕಂದಾ ಎನ್ನಲು ಆಟವಾಡುವಾಗ ಜಗಳ ಹುಟ್ಟಿತು, ಹುಡುಗನೊಬ್ಬ ನನ್ನ ಕೆನ್ನೆಗೆ ಹೊಡೆದ, ಪಾಪ ಅವನ ಕೈಯೆಷ್ಟು ನೊಂದಿತೋ ಎಂದ ಬಾಲಕ ಯೇಸು.
ಯೇಸು ದೊಡ್ಡವನಾಗಿ ಬೋಧನೆಗೆ ತೊಡಗಿದ. ನನ್ನ ಜನರ ಉದ್ಧಾರ ಹೇಗೆ ಎಂದು ಚಿಂತಿಸಿದ. ಕಳೆದು ಹೋದ ಕುರಿಮರಿಯು ಸಿಕ್ಕಾಗ ಒಡೆಯನು ನಲಿಯುವಂತೆ ದೇವರ ನಲಿವಿಗೆ ಕಾರಣರಾಗಿ ಎಂದು ಹೇಳಿದ. ಯೇಸುವಿನ ಬೋಧೆಗಳು, ಪವಾಡಗಳಿಗಿಂತ ಅವನ ಮನುಜಪ್ರೇಮ ಅಸದಳ. ಪರಿಸಾಯರು ಹೆಂಗಳೆಯೊಬ್ಬಳನ್ನು ಎಳೆತಂದು ಹಾದರಗಿತ್ತಿಯಿವಳು ಇವಳನ್ನು ಕಲ್ಲಿನಿಂದ ಹೊಡೆದು ದಂಡಿಸಬೇಕೆಂದು ಶಾಸ್ತ್ರ ಹೇಳುತ್ತದೆ ನೀನೇನು ಹೇಳುವೆ ಎಂದಾಗ ಯೇಸು ನಯನಕ್ಕೆ ನಯನ ದಂತಕ್ಕೆ ದಂತ ಎಂಬ ಕಠೋರನ್ಯಾಯದ ಬಗ್ಗೆ ಬೇಸರಿಸಿದ, ಅಪಮಾನಗೊಂಡ ಸ್ತ್ರೀತ್ವದ ಬಗ್ಗೆ ಮರುಕಗೊಂಡ, “ಆಗಲಪ್ಪ ಆಗಲಿ ನಿಮ್ಮ ಶಾಸ್ತ್ರದಂತೆಯೇ ಆಗಲಿ ಆದರೆ ಒಂದು ಮಾತು, ನಿಮ್ಮಲ್ಲಿ ಯಾರೊಬ್ಬನು ಯಾವುದೇ ತಪ್ಪು ಮಾಡಿಲ್ಲದವನು ಮೊದಲ ಕಲ್ಲೆಸೆಯಲಿ.” ಒಬ್ಬೊಬ್ಬರಾಗಿ ಅವರೆಲ್ಲ ಕಾಲ್ಕಿತ್ತರು.
ಯೇಸುವನು ಹೇಗಾದರೂ ಮಾಡಿ ಕೊಲ್ಲಬೇಕೆಂದು ಪರಿಸಾಯರು ಹೊಂಚುಹಾಕಿದರು. ಅಂದೋ ಯೇಸುವಿನ ಹನ್ನೆರಡು ಶಿಷ್ಯರಲಿ ಒಬ್ಬ ಜುದಾಸನಿದ್ದ, ಇಂದೋ ಒಬ್ಬನಲ್ಲಿಯೇ ಹನ್ನೆರಡು ಜುದಾಸ! ಯೇಸುವಿನ ಬಾಧೆ ಹಿಂಸೆ ನೋವು ಯಾತನೆ ಶಿಲುಬೆಮರಣಗಳನ್ನು ಪವಿತ್ರಾ ಅವರು ನಯವಾಗಿ ನವಿರಾಗಿ ಅಷ್ಟೇ ಸುಭಗವಾಗಿ ತೋರಿ ನಡೆದರು. ಪುನರುತ್ಥಾನ, ಅದು ಯೇಸುವಿನ ಪುನರುತ್ಥಾನ ಮಾತ್ರವಲ್ಲ, ಹಳೆಯ ಧರ್ಮಸಂಹಿತೆಗಳ ಸಮಾಧಿಯ ಮೇಲೆ ಹೊಸ ಜೀವನಮೌಲ್ಯಗಳ ಪುನರುತ್ಥಾನ. ಆದ್ದರಿಂದಲೇ ಕ್ರಿಸ್ತ ಎಲ್ಲರಿಗೂ ಬೇಕಾದವನು. ಕ್ರಿಸ್ತ ಬೇರೆಯಲ್ಲ ಕೃಷ್ಣ ಬೇರೆಯಲ್ಲ ಎಂದಲ್ಲವೇ ಗೋವಿಂದ ಪೈಗಳು ಹಾಡಿದ್ದು. ಯದುನಾಥನೇ ಯೂದನಾಥನಲ್ಲವೇ ಎಂದಿದ್ದು.
ನಾಟ್ಯದ ಹಾಡುಗಳಲ್ಲಿನಾವೀಗ ಕೂಡಿ ಹಾಡಿ ಕರ್ತನ್ಗೆ ಸ್ತೋತ್ರ ಮಾಡಿಎಂಬ ಜರ್ಮನ್ ಕವಿಯ ಕನ್ನಡದ ಹಾಡೂ ಕೇಳಿತು. ಕೆ ಎಸ್ ನರಸಿಂಹಸ್ವಾಮಿಯವರಪ್ರಾರ್ಥನೆಯ ಕೊರಳು ಬಾನಿಗೆ ಏರಬೇಕು, ಎತ್ತರದ ಗಂಟೆಗಳು ಎಡೆಬಿಡದೆ ಮೊಳಗಬೇಕು, ಶಾಂತಿ ನೆಲೆಸಬೇಕು. ಬಯಲ ಹಸಿರಿನ ತುಂಬ ಹೂವಾಡಬೇಕು, ಪ್ರೀತಿಯೇ ದೇವರೆಂದವನ ನೆನೆಯಬೇಕು, ಕಣ್ಣಹನಿಗಳ ನಡುವೆ ಕೈಮುಗಿಯಬೇಕುಎನ್ನುವಲ್ಲಿಗೆ ನಾಟ್ಯ ಪರಿಸಮಾಪ್ತ.
ಡಾ. ಪವಿತ್ರಾ ಅವರೊಂದಿಗೆ ಡಾ. ಕೆ ಎಸ್ ಶುಭ್ರತಾ ಅವರು ನಟ್ಟುವಾಂಗ, ವಿದ್ವಾನ್ ಮಹೇಶಸ್ವಾಮಿಯವರು ಹಾಡುಗಾರಿಕೆ, ವಿದ್ವಾನ್ ಜನಾರ್ಧನರಾವ್ ಅವರು ಮೃದಂಗ, ವಿದ್ವಾನ್ ಕೆ ಎಸ್ ಜಯರಾಮ್ ಅವರು ಕೊಳಲು, ವಿದ್ವಾನ್ ಕಾರ್ತಿಕ್ ಅವರು ರಿದಂ ಪ್ಯಾಡ್ ಗಳೊಂದಿಗೆ ಜೊತೆಗೂಡಿ ಕಾರ್ಯಕ್ರಮಕ್ಕೆ ಕಳೆಯೇರಿಸಿದರು. ಡಾ. ಕೆ ಎಸ್ ಚೈತ್ರ ಅವರು ಸುಭಗಸುಸ್ಪಷ್ಟವಾಗಿ ಗದ್ಯನಿರೂಪಣೆ ಮಾಡಿದರು.
ಕಾರ್ಯಕ್ರಮವನ್ನು ಪ್ರಾಯೋಜಿಸಿದ ಅನನ್ಯ ಸಂಸ್ಥೆಯ ರಾಘವೇಂದ್ರ ಅವರು ಕಾವ್ಯಕ್ಕೆ ಶಬ್ದವೇ ಆಧಾರ. ನಾಟ್ಯಕ್ಕೆ ಶಬ್ದ ಅನಿವಾರ್ಯವಾದರೂ ಅದು ಭಾರವಾಗದಂತೆ ಮೇಳೈಸಿದ ಶ್ರೀವಿಜಯ ತಂಡವನ್ನು ಹರಸಿ, ಕ್ರಿಸ್ತನಿಗೇಕೆ ಭರತನಾಟ್ಯ ಎನ್ನುವವರಿಗೆ ಅವನ ಸಂದೇಶವೇ ಉತ್ತರ ಎಂದರು. ಮಾತು ಎಷ್ಟು ಅರ್ಥಪೂರ್ಣ ಅಲ್ಲವೇ?