ಗುರುವಾರ, ಡಿಸೆಂಬರ್ 25, 2014

ಕ್ರಿಸ್ಮಸ್ ಹಬ್ಬ

ಕ್ರಿಸ್ಮಸ್ ಎನ್ನುವುದು ಸಂಭ್ರಮ ಸಡಗರಗಳ ಹಬ್ಬ. ಜಾತಿ ಕಾಲ ದೇಶವೆನ್ನದೆ ಎಲ್ಲೆಡೆಯೂ ಎಲ್ಲರೂ ಸಂತೋಷದಿಂದ ಬರಮಾಡಿಕೊಳ್ಳುವ ಹಬ್ಬ ಈ ಕ್ರಿಸ್ಮಸ್ ಹಬ್ಬ. ಮಕ್ಕಳಿಗಂತೂ ಇದು ಅಚ್ಚುಮೆಚ್ಚು. ಈ ದಿನಗಳಲ್ಲಿ ಕ್ರೈಸ್ತಬಾಂಧವರು ಮನೆಯ ಮುಂದೆ ನಕ್ಷತ್ರ ಕಟ್ಟಿ, ದೀಪಬೆಳಗಿ, ಪುಟ್ಟದೊಂದು ಸಾಂಕೇತಿಕ ದನದಕೊಟ್ಟಿಗೆಯನ್ನು  ಕಟ್ಟಿ ಅದರಲ್ಲಿ ಬಾಲಕ ಯೇಸುವಿನ ಪ್ರತಿರೂಪ ಮಡಗಿ ನಮಸ್ಕರಿಸುತ್ತಾರೆ. ಗೆಳೆಯರು ಇತರರೆನ್ನದೆ ಎಲ್ಲರೂ ಈ ಕ್ರೈಸ್ತಬಾಂಧವರಿಗೆ ಮನಸಾರೆ ಶುಭಾಶಯ ಕೋರಿ ಹಸ್ತಲಾಘವ ಮಾಡಿ ಪ್ರೀತಿ ವಿಶ್ವಾಸ ಮೆರೆಯುತ್ತಾರೆ. ಕೆಲವರು ಚರ್ಚುಗಳಿಗೆ ಭೇಟಿನೀಡಿ ಕೈಮುಗಿಯುವುದರೊಂದಿಗೆ ಸಾರ್ಥಕ್ಯ ಅನುಭವಿಸುತ್ತಾರೆ.
ಕ್ರಿಸ್ಮಸ್ ಎಂದರೆ ಯೇಸುಕ್ರಿಸ್ತನ ಜನನದ ಹಬ್ಬ. ಕ್ರೈಸ್ತರ ಆರಾಧ್ಯದೈವ ಯೇಸುಕ್ರಿಸ್ತ. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಇಂದಿನ ಇಸ್ರೇಲ್ ದೇಶವು ರೋಮನ್ ಚಕ್ರಾಧಿಪತ್ಯದ ಆಳ್ವಿಕೆಯಲ್ಲಿದ್ದ ಕಾಲದಲ್ಲಿ ಚಕ್ರವರ್ತಿ ಅಗಸ್ಟಸ್ ಸೀಜರನು ಜಗತ್ತಿನ ಮೊದಲ ಜನಗಣತಿಯನ್ನು ಮಾಡಲಿಚ್ಛಿಸಿ ಎಲ್ಲರೂ ತಂತಮ್ಮ ಹುಟ್ಟಿದೂರುಗಳಲ್ಲಿ ತಂಗಬೇಕೆಂದು ಡಂಗುರ ಹೊಡೆಸಿದ. ಆಗ ನಜರೆತ್ ಎಂಬ ಊರಿನಲ್ಲಿದ್ದ ಜೋಸೆಫ್ ಮತ್ತು ಅವನ ತುಂಬುಗರ್ಭಿಣಿ ಪತ್ನಿ ಮರಿಯಾ ಇಬ್ಬರೂ ಬೆತ್ಲೆಹೆಮ್ ಎಂಬ ತಮ್ಮ ಊರಿಗೆ ತೆರಳುತ್ತಾರೆ. ಆದರೆ ಅವರಿಗೆ ಅಲ್ಲಿ ತಂಗಲು ಸ್ಥಳವಿಲ್ಲದೆ ಹೋದುದರಿಂದ ದನಗಳನ್ನು ಕೂಡಿದ್ದ ಕೊಟ್ಟಿಗೆಯ ಮೂಲೆಯೊಂದರಲ್ಲಿ ಆಶ್ರಯ ಪಡೆಯುತ್ತಾರೆ. ಆ ರಾತ್ರಿ ಮರಿಯಳು ಯೇಸುಕ್ರಿಸ್ತನಿಗೆ ಜನುಮ ನೀಡುತ್ತಾಳೆ. ಜನಗಣತಿಯ ಜಾತ್ರೆಯಲ್ಲಿ ಕಳೆದುಹೋಗಿರುವ ಜನರಿಗೆ ಅಸುಕಂದನ ಅಳು ಕೇಳಿಸುವುದಿಲ್ಲ. ಆದರೆ ಬಯಲಿನಲ್ಲಿ ಮಲಗಿರುವ ಕುರುಬರಿಗೆ ದಿವ್ಯವಾದ ದೇವಗಾನ ಕೇಳಿಸುತ್ತದೆ. ಪೂರ್ವದೇಶದ ಖಗೋಳಜ್ಞರಿಗೆ ಹೊಸ ನಕ್ಷತ್ರದ ಉದಯ ಗೋಚರಿಸುತ್ತದೆ. ಇದು ಕ್ರಿಸ್ಮಸ್ಸಿನ ಹಿನ್ನೆಲೆ.
ಮುಂದೆ ಯೇಸು ಬೆಳೆದು ಕ್ರಾಂತಿಕಾರಿಯಾಗಿ ರೂಪುಗೊಂಡು ಸನಾತನ ಧರ್ಮಸಿದ್ಧಾಂತಗಳನ್ನು ಧಿಕ್ಕರಿಸಿ ಜನರನ್ನು  ಮೂಢನಂಬಿಕೆಗಳಿಂದ ಬಿಡಿಸಿ ಪುರೋಹಿತರ ಸಂಪ್ರದಾಯದ ಸಂಕೋಲೆಗಳಿಂದ ಪಾರುಮಾಡಿ ಮಾನವಧರ್ಮವನ್ನು ಎತ್ತಿಹಿಡಿಯುತ್ತಾನೆ. ಎಲ್ಲರೂ ದೇವರ ಮಕ್ಕಳು, ಮತ್ತೊಬ್ಬನನ್ನು ನಿನ್ನಂತೆಯೆ ಪರಿಭಾವಿಸು ಎಂಬ ಶುಭಸಂದೇಶವನ್ನು ಪ್ರತಿಪಾದಿಸಿ ಆ ತತ್ವಕ್ಕಾಗಿ ಹುತಾತ್ಮನಾಗುತ್ತಾನೆ ಎಂಬುದು ನಡೆದ ಕತೆ.
ಯೇಸುವಿನ ಗೆಳೆಯರು ಅವನ ಈ ಸಂದೇಶವನ್ನು ಜಗತ್ತಿನ ಮೂಲೆಮೂಲೆಗೂ ಕೊಂಡೊಯ್ಯುತ್ತಾರೆ. ತಮ್ಮ ಬದುಕು ಮತ್ತು ನಡವಳಿಕೆಗಳ ಮೂಲಕ ಬಹುಬೇಗನೇ ಇತರರ ಗಮನ ಸೆಳೆಯುತ್ತಾರೆ. ಹೀಗೆ ಕ್ರೈಸ್ತಧರ್ಮ ಸರ್ವವ್ಯಾಪಿಯಾಗುತ್ತದೆ. ಹೀಗೆ ಕ್ರಿಸ್ಮಸ್ಸಿನೊಂದಿಗೆ ಶಾಂತಿಯ ಭರವಸೆ ಮೂಡುತ್ತದೆ. ಸಂತಸದ ನಗು ಅರಳುತ್ತದೆ. ಹೊಸಬೆಳಕು ಮೂಡುತ್ತದೆ.
ಮೊದಲ ಆಚರಣೆ
ಕ್ರಿಸ್ತಶಕ ೧೨೨೩-೨೪ರಲ್ಲಿ ಯೂರೋಪಿನ ಅಸ್ಸಿಸಿ ಎಂಬ ಊರಿನಲ್ಲಿದ್ದ ಫ್ರಾನ್ಸಿಸ್ ಎಂಬುವರು ತಮ್ಮ ಸಂಗಡಿಗರೊಂದಿಗೆ ಸೇರಿಕೊಂಡು ಕ್ರಿಸ್ತಸಂಭವದ ದೃಶ್ಯಗಳನ್ನು ನಾಟಕದ ಮೂಲಕ ಪ್ರಸ್ತುತಪಡಿಸಿದರು. ದನದ ಕೊಟ್ಟಿಗೆಯ ಪ್ರತಿರೂಪ ನಿರ್ಮಿಸಿ, ಹಸುಕರುಗಳನ್ನು ಕುರಿಗಳನ್ನು ಅದರಲ್ಲಿಟ್ಟು, ಕರುಗಳಿಗೆ ಮೇವು ತಿನ್ನಿಸುವ ಬಕೆಟಿನಾಕಾರದ ಪುಟ್ಟ ಗೊಂದಳಿಗೆ/ಗೋದಣಿಗೆ ಅಥವಾ ಗೋದಲಿಯಲ್ಲಿ ನಿಜವಾದ ಮಗುವೊಂದನ್ನು ಮಲಗಿಸಿ ಕ್ರಿಸ್ತಜನನವನ್ನು ಘೋಷಿಸಿದರು. ನೆರೆದಿದ್ದ ಊರಿನ ಜನರೆಲ್ಲ ಭಕ್ತಿಭಾವದಿಂದ ಹಾಡಿದರು ಸಂತಸದಿಂದ ಚಪ್ಪಾಳೆ ತಟ್ಟಿ ಕುಣಿದರು. ಪಿಳ್ಳಂಗೋವಿ ಊದಿ ನಲಿದರು, ತಮಟೆ ಬಡಿದು ಮೆರೆದರು. ಬಹುಬೇಗನೇ ಈ ನಾಟಕ ರೂಪ ಅತ್ಯಂತ ಜನಪ್ರಿಯವಾಗಿ ಯೂರೋಪಿನಾದ್ಯಂತ ಹಬ್ಬಿತು.
ಇಂದು ಕೆಲವೆಡೆಗಳಲ್ಲಿ ಇಂಥ ಲೈವ್ ಕ್ರಿಬ್ ಆಚರಣೆಗಳು ನಡೆಯುತ್ತವಾದರೂ ಜನರು ಮಾರುಕಟ್ಟೆಯಲ್ಲಿ ಸಿಗುವ ಕ್ರಿಸ್ತಜನನದ ಗೊಂಬೆಗಳನ್ನು ತಂದು ವಿಶೇಷ ಆಸಕ್ತಿಯಿಂದ ಜೋಡಿಸಿ ಸಿಂಗರಿಸುತ್ತಾರೆ. ಇದರ ಜೊತೆಗೆ ಮರಳು ಹಾಸು, ಹುಲ್ಲಿನ ಹಾಸು, ಬೆಟ್ಟಗುಡ್ಡ ನದಿ ಝರಿ, ನಕ್ಷತ್ರಗಳ ಕಣ್ಣುಮುಚ್ಚಾಲೆ, ದೇವಗಾನದ ಇಂಚರ, ಬಣ್ಣಬಣ್ಣದ ದೀಪಗಳು, ಕಾಗದದ ಪರಿಪರಿ ಇವುಗಳನ್ನೆಲ್ಲ ರಚಿಸಿ ಸಂಭ್ರಮಿಸುತ್ತಾರೆ. ಮಕ್ಕಳಾದಿಯಾಗಿ ಎಲ್ಲರೂ ಮನೆಮನೆಗೆ ತೆರಳಿ ಈ ಅಲಂಕಾರಗಳನ್ನೂ ಸೌಂದರ್ಯವನ್ನೂ ಮನದಣಿಯೆ ತಣಿದು ಬೀಗುತ್ತಾರೆ.
ಕ್ಯಾರಲ್ ಅಥವಾ ಕ್ರಿಸ್ಮಸ್ ಮೇಳ
ನವೆಂಬರ್ ಕೊನೆಯ ಭಾನುವಾರದ ನಂತರ ಪ್ರಾರಂಭವಾಗುವುದೇ ಕ್ರಿಸ್ತನಾಗಮನದ ಕಾಲ. ಕ್ರಿಸ್ತನನ್ನು ಎದುರು ನೋಡುವ ಆಡ್ವೆಂಟ್ ಎನ್ನುವ ಈ ದಿನಗಳಲ್ಲಿ ಸಂಜೆಯಾಯಿತೆಂದರೆ ಯುವಕರು ಗುಂಪಾಗಿ ಕೈಗೆ ಸಿಕ್ಕ ವಾದ್ಯ ನುಡಿಸುತ್ತಾ ಕ್ರಿಸ್ಮಸ್ ಗೀತೆಗಳನ್ನು ಸುಮಧುರವಾಗಿ ಹಾಡುತ್ತಾ ಬೀದಿ ಬೀದಿಗಳನ್ನು ಹಾದು ಹೋಗುತ್ತಾರೆ. ಇಂಪಾದ ಆ ಗಾನಮಾಧುರ್ಯ ತಮ್ಮ ಬೀದಿಯ ಕೊನೆಯಲ್ಲಿ ಕೇಳಿಬರುತ್ತಿದ್ದಂತೆ ಮನೆಯಲ್ಲಿನ ಎಲ್ಲರೂ ತಮ್ಮ ತಮ್ಮ ಕೆಲಸಗಳನ್ನು ಅಲ್ಲಲ್ಲಿಗೇ ನಿಲ್ಲಿಸಿ ಬಾಗಿಲ ಹೊರಗೆ ನಿಲ್ಲುತ್ತಾರೆ. ಗಾನವೃಂದದ ಜೊತೆಗೆ ತಾವೂ ದನಿಗೂಡಿಸುತ್ತಾರೆ. ಗಾನವೃಂದ ತೆರಳಿದ ಮೇಲೂ ಆ ಗಾನದಿಂಚರ ಮನೆಗಳಲ್ಲಿ ಮನಗಳಲ್ಲಿ ಸದಾ ರಿಂಗಣಿಸುತ್ತಲೇ ಇರುತ್ತದೆ. ಕ್ರಿಸ್ಮಸ್ಸಿನ ಸೊಬಗೇ ಹಾಗೆ.
ಶುಭಾಶಯಪತ್ರ
ಕ್ರಿಸ್ಮಸ್ ಬಂತೆಂದರೆ ಹಾಗೆಯೇ. ಮನೆ ಸುಣ್ಣ ಬಣ್ಣ ಕಾಣುತ್ತದೆ. ಹಳೆಯ ಕ್ಯಾಲೆಂಡರುಗಳು, ಬೇಡಾದ ವಸ್ತುಗಳು ತಿಪ್ಪೆ ಸೇರುತ್ತವೆ. ಪಾತ್ರೆಗಳನ್ನು ಬೆಳಗಿ ಹೊಳಪು ಮಾಡಲಾಗುತ್ತದೆ. ಹಂಡೆ ಬಿಂದಿಗೆಗಳನ್ನು ಚೆನ್ನಾಗಿ ತೊಳೆದು ಹೊಸನೀರು ತುಂಬಲಾಗುತ್ತದೆ. ಗೋಡೆಗಳಲ್ಲಿ ಚಿತ್ತಾರ ಮನೆ ಬಾಗಿಲಲ್ಲಿ ರಂಗೋಲಿ. ಪಡಸಾಲೆಯಲ್ಲಿ ಬಣ್ಣದ ತೋರಣ ನಳನಳಿಸುವ ಬೆಲೂನುಗಳು. ಎಲ್ಲರೂ ವರ್ಷದ ಉಳಿತಾಯದ ಹಣದಲ್ಲಿ ತಮ್ಮ ಪ್ರೀತಿಪಾತ್ರರಿಗೆ ಉಡುಗೊರೆ ಹಂಚಿ ತೃಪ್ತರಾಗುತ್ತಾರೆ. ಗೆಳೆಯರಿಗೆ ಸಂದೇಶದ ಕಾರ್ಡುಗಳನ್ನು ಕಳಿಸಿ ನಲಿಯುತ್ತಾರೆ. ಅದಕ್ಕೆಂದೇ ವಿಶೇಷ ರೀತಿಯ ದೇಶವಿದೇಶದ ರಂಗುರಂಗಾದ ಗ್ರೀಟಿಂಗ್ ಕಾರ್ಡುಗಳು ಮಾರಲು ಸಿಗುತ್ತವೆ. ಕೆಲವರು ಕೌಶಲ್ಯದಿಂದ ತಾವೇ ಕಾರ್ಡುಗಳನ್ನು ಮಾಡುವುದೂ ಉಂಟು. ಇಂದು ಎಸ್ಸೆಮ್ಮೆಸ್ಸುಗಳ ಸಂದೇಶ ಹರಿದಾಡಿದರೂ ಗ್ರೀಟಿಂಗ್ ಕಾರ್ಡು ನೀಡುವ ಅಪ್ಯಾಯತೆ ಮಾತ್ರ ಅನನ್ಯ ಮತ್ತು ಅನುಪಮ.
ಕ್ರಿಸ್ಮಸ್ ತಿಂಡಿಗಳು
ಕ್ರಿಸ್ಮಸ್ ದಿನ ಮನೆಗಳ ಭೇಟಿಯೆಂದರೆ ಅದು ಬರಿಯ ಭೇಟಿಯಲ್ಲ. ಅದು ಹಿಂದಿನ ಎಲ್ಲ ಮನಸ್ತಾಪಗಳನ್ನು ತಪ್ಪುತಿಳುವಳಿಕೆಗಳನ್ನೂ ಕಳೆಯುವ ಭೇಟಿ. ಅಲ್ಲಿ ಮುನಿಸಿಲ್ಲ, ಕೊಂಕಿಲ್ಲ, ಹಮ್ಮುಬಿಮ್ಮು ಇಲ್ಲ, ಕೀಳುಭಾವನೆ ಇಲ್ಲವೇ ಇಲ್ಲ. ಅಲ್ಲಿ ಮನೆಮಾಡುತ್ತದೆ ಸದಭಿರುಚಿಯ ಲೋಕಾಭಿರಾಮ. ನಮ್ಮ ಮನೆಯಲ್ಲಿ ಮಾಡಿದ ತಿಂಡಿ ತಿನಿಸುಗಳನ್ನು ಅವರೊಂದಿಗೆ ಹಂಚಿಕೊಂಡು ಅವರ ಮನೆಯ ಸಿಹಿತಿಂಡಿಗಳನ್ನು ಸವಿದು ಮನಸನ್ನೂ ಸಿಹಿ ಮಾಡಿಕೊಳ್ಳುವ ಕ್ಷಣ. ಕ್ರಿಸ್ಮಸ್ಸಿನ ತಿಂಡಿಗಳು ನಾವೆಲ್ಲ ಒಂದೇ ಎಂಬ ಭಾವನೆ ಮೂಡಿಸುವುದು ಮಾತ್ರ ಖಚಿತ.
ಆ ತಿಂಡಿಗಳಾದರೂ ಎಂಥವು. ಶುಭ್ರವಾದ ಹಾಲು ಸಕ್ಕರೆ ತುಪ್ಪ ಕೇಸರಿ ಏಲಕ್ಕಿ ಗೋಡಂಬಿಗಳೊಂದಿಗೆ ಜೇನಿನಂತ ಮನಸ್ಸು ಸಂತೃಪ್ತಿಯ ಬದುಕು ಮಿಳಿತವಾದ ಭಕ್ಷ್ಯಗಳು. ಅದರಲ್ಲಿವೆ ಕಜ್ಜಾಯ, ಕಲಕಲ, ಕರ್ಚಿಕಾಯಿ, ಕುಕ್ಕೀ, ರವೆಯುಂಡೆ, ಬೇಸನುಂಡೆ, ಕೊಬರಿಬಿಸ್ಕತ್ತು, ಚಕ್ಕುಲಿ ಕೋಡುಬಳೆ. ಇವುಗಳನ್ನು ಮೀರಿಸುವಂತೆ ಮೆರೆಯುತ್ತವೆ ಬಣ್ಣಬಣ್ಣದ ಕೆನೆಭರಿತ ಕೇಕುಗಳು. ಕ್ರಿಸ್ಮಸ್ಸಿಗೆಂದೇ ವಿಶೇಷವಾಗಿ ತಯಾರಿಸಲಾದ ಪ್ಲಂ ಕೇಕು ರಾಜನಂತೆ ಘನಗಂಭೀರವಾಗಿ ಕಂಗೊಳಿಸುತ್ತದೆ. ಈ ನಡುವೆ ಕೆಲ ಮನೆಗಳಲ್ಲಿ ಮನೆಯಲ್ಲೇ ತಯಾರಾದ ಹಗೇವಿನಲ್ಲಿ ಮುಚ್ಚಿಟ್ಟು ಹಿತವಾಗಿ ಹುದುಗೆಬ್ಬಿಸಿದ ದ್ರಾಕ್ಷಾರಸವನ್ನೂ ಗುಟುಕರಿಸಲಾಗುತ್ತದೆ.
ಕ್ರಿಸ್ಮಸ್ ನಕ್ಷತ್ರ
ಕ್ರಿಸ್ಮಸ್ಸಿಗೂ ಬಣ್ಣದ ನಕ್ಷತ್ರಕ್ಕೂ ಅವಿನಾಭಾವ ಸಂಬಂಧವಿದೆ. ಯೇಸುಕ್ರಿಸ್ತನ ಜನನವಾದ ಸಂದರ್ಭದಲ್ಲಿ ಪೂರ್ವದೇಶದ ಜ್ಞಾನಿಗಳು ವಿಶೇಷವಾದ ತಾರೆಯೊಂದು ಗಗನದಲ್ಲಿ ಉದಯವಾದುದನ್ನು ಕಂಡು ಲೆಕ್ಕಾಚಾರ ಮಾಡಿ ಗುಣಿಸಿ ಇದೇ ವೇಳೆಯಲ್ಲಿ ಮಹಾನ್ ವ್ಯಕ್ತಿಯು ಮಗುವಿನ ರೂಪದಲ್ಲಿ ಜನ್ಮ ತಳೆದಿದ್ದಾನೆಂದು ಅರಿತು ನಕ್ಷತ್ರದ ಜಾಡು ಹಿಡಿದು ಪ್ರಯಾಣ ಹೊರಡುತ್ತಾರೆ. ಚುಕ್ಕಿ ರೂಪದ ಆ ಮಾರ್ಗದರ್ಶಿಯು ಹಲವು ರಾತ್ರಿಗಳ ಪ್ರಯಾಣದ ನಂತರ ಬೆತ್ಲೆಹೇಮಿನ ಕೊಟ್ಟಿಗೆ ಮೇಲೆ ದಿವ್ಯಪ್ರಭೆಯಾಗಿ ಇಳಿಯುತ್ತದೆ.  ಆ ಒಂದು ಮಹಾದರ್ಶನವನ್ನು ಪಡೆದು ಜ್ಞಾನಿಗಳು ಪುನೀತರಾಗುತ್ತಾರೆ. ತಮ್ಮಲ್ಲಿನ ಅಮೂಲ್ಯ ವಸ್ತುಗಳನ್ನು ಮಗುವಿಗೆ ಕಾಣಿಕೆಯಾಗಿ ಕೊಟ್ಟು ನಮಸ್ಕರಿಸುತ್ತಾರೆ. ಕ್ರಿಸ್ಮಸ್ ನಕ್ಷತ್ರವೆಂದರೆ ಮಹತ್ವಾಕಾಂಕ್ಷೆ, ಅದು ಭರವಸೆಯ ಸಂಕೇತ, ಉಜ್ವಲ ಭವಿಷ್ಯದ ಕೈದೀಪ ಮಾತ್ರವಲ್ಲ ಕ್ರಿಸ್ತದರ್ಶನಕ್ಕೆ ಮಾರ್ಗದರ್ಶಿ.
ಕ್ರಿಸ್ಮಸ್ ಬೆಳಕು
ಕ್ರಿಸ್ಮಸ್ ಸಂದರ್ಭದ ರಾತ್ರಿ ಹಲವರು ತಮ್ಮ ಮನೆಗಳ ಮುಂದೆ ಮೇಣದ ಬತ್ತಿ ಹಚ್ಚುತ್ತಾರೆ. ಇದರ ಹಿಂದೆ ಒಂದು ಕತೆಯಿದೆ. ಆಸ್ಟ್ರಿಯಾ ದೇಶದಲ್ಲಿ ಒಬ್ಬ ಚಮ್ಮಾರ ದಂಪತಿಯಿದ್ದರು. ಅವರದು ಬಹು ಪರೋಪಕಾರಿ ಮನಸ್ಸು. ಸಂಜೆಯಾಯಿತೆಂದರೆ ಹಾದಿಹೋಕರಿಗೆ ಬೆಳಕಾಗಲೆಂದು ತಮ್ಮ ಮನೆಯ ಕಿಟಕಿಯಲ್ಲಿ ಒಂದು ಮೇಣದ ಬತ್ತಿಯನ್ನು ಹಚ್ಚಿ ಇಡುತ್ತಿದ್ದರು. ಯುದ್ಧದ ಸಂಕಷ್ಟದ ದಿನಗಳಲ್ಲೂ ಅವರ ಈ ನೇಮ ತಪ್ಪಿದ್ದಿಲ್ಲ. ಎಂಥ ಪ್ರಕ್ಷುಬ್ದ ಸಂದರ್ಭದಲ್ಲೂ ಈ ದಂಪತಿ ಸಮಾಧಾನ ಚಿತ್ತರಾಗಿರುವುದನ್ನು ಕಂಡು ಹಳ್ಳಿಗರಿಗೆ ಆಶ್ಚರ್ಯ. ಅದು ಹೇಗೆ ಎಂದು ಅವರನ್ನು ಕೇಳಿದಾಗ ಆ ಚಮ್ಮಾರ ದಂಪತಿ ಹೇಳುತ್ತಾರೆ: “ಎಲ್ಲಿ ಬೆಳಕು ಇರುತ್ತದೋ ಅಲ್ಲಿ ನೆಮ್ಮದಿಯಿರುತ್ತದೆ” ಎಂದು. ಆ ಮಾತನ್ನು ಕೇಳಿ ಊರವರೆಲ್ಲರೂ ತಂತಮ್ಮ ಮನೆಯ ಬಾಗಿಲಲ್ಲಿ ಮೇಣದ ಬತ್ತಿ ಹಚ್ಚಿಡಲು ಪ್ರಾರಂಭಿಸುತ್ತಾರೆ. ಆಗಲೇ ಕ್ರಿಸ್ಮಸ್ ದಿನವೂ ಬರುತ್ತದೆ. ಯುದ್ಧ ಮುಗಿಯಿತೆಂಬ ಸುದ್ದಿಯೂ ಬರುತ್ತದೆ. ರಣದ ಕ್ಷೋಭೆಯು ಕರಗಿ ನಿರುಮ್ಮಳತೆಯ ಸುಳಿಗಾಳಿ ಬೀಸಿ ಎಲ್ಲರ ಮನಸು ಹಗುರಾಗತೊಡಗುತ್ತದೆ. ಹೀಗೆ ಕ್ರಿಸ್ಮಸ್ ರಾತ್ರಿ ಮನೆಯ ಕಿಟಕಿಯಲ್ಲಿ ಮೇಣದ ಬತ್ತಿಯನ್ನು ಹಚ್ಚಿಡುವ ಪರಿ ಇಂದು ಸರ್ವವ್ಯಾಪಿಯಾಗಿದೆ.
ಕ್ರಿಸ್ಮಸ್ಸಿಗಾಗಿ ಕದನವಿರಾಮ
ಮೊದಲ ಮಹಾಯುದ್ಧ ನಡೆದಿದ್ದ ಸಂದರ್ಭವದು. ಕ್ರಿಸ್ಮಸ್ ಹತ್ತಿರಾಗುತ್ತಿದ್ದಂತೆ ಮುಂಚೂಣಿಯಲ್ಲಿದ್ದ ಕೆಲ ಜರ್ಮನ್ ಯುವಸೈನಿಕರಿಗೆ ಯುದ್ಧ ವಿರಾಮ ಘೋಷಿಸಿ ಕ್ರಿಸ್ಮಸ್ ಆಚರಿಸುವ ಉಮೇದು ಬರುತ್ತದೆ. ಕೆಲವರು ಶತ್ರು ಸೈನಿಕರ ಬಳಿ ಹೋಗಿ ಕೈಕುಲುಕಿ ಕೇಕು ತಿನ್ನಿಸುವ ಉಮೇದು ಬರುತ್ತದೆ. ಅವರೆಲ್ಲ ಸೇರಿ ವಿಶೇಷವಾದ ಕೇಕು ತಯಾರಿಸಿ ಶತ್ರುಪಾಳೆಯದೆಡೆಗೆ ಉರಿವ ಮೇಣದಬತ್ತಿ ಬಿಳಿಯ ಬಾವುಟ ಹಿಡಿದು ಸಾಗಿ “ಕ್ರಿಸ್ತಜಯಂತಿಯ ಶುಭಾಶಯಗಳು” ಎಂದು ಹೇಳುತ್ತಾರೆ. ಶತ್ರುಪಾಳೆಯದಲ್ಲಿದ್ದ ಇಂಗ್ಲಿಷ್ ಮತ್ತು ಫ್ರೆಂಚ್ ಸೈನಿಕರಿಗೆ ಆಶ್ಚರ್ಯವೋ ಆಶ್ಚರ್ಯ. ಮನದೊಳಗೆ ಆತಂಕ ಹಾಗೂ ತಳಮಳ. ಆದರೆ ಅವರ ಅಪನಂಬಿಕೆಯ ತೆರೆ ಸರಿದು ಅಲ್ಲಿ ಸಂತೋಷ ಮನೆ ಮಾಡುತ್ತದೆ. ಜರ್ಮನರು ಇಂಗ್ಲಿಷ್ ಭಾಷೆಯಲ್ಲಿ ಶುಭ ಕೋರಿದರೆ ಇಂಗ್ಲಿಷರು ಜರ್ಮನ್ ಭಾಷೆಯಲ್ಲಿ ಶುಭ ಹಾರೈಸುತ್ತಾರೆ. ಎರಡೂ ಬಣಗಳು ಕುಶಲೋಪರಿಯಲ್ಲಿ ತೊಡಗಿ ಮನಬಿಚ್ಚಿ ಮಾತಾಡಿಕೊಳ್ಳುತ್ತಾರೆ. ಯುದ್ಧ ನಮಗೆ ಸಾಕಾಗಿಬಿಟ್ಟಿದೆ, ಯಾವಾಗ ಯುದ್ಧ ಮುಗಿದು ಮನೆಗಳಿಗೆ ತೆರಳಿ ಸಂತೋಷದಿಂದ ಬದುಕುತ್ತೇವೋ ಎಂಬ ತುಡಿತ ಇಬ್ಬರಲ್ಲೂ ಮೂಡುತ್ತದೆ. ಹೀಗೆ ಕ್ರಿಸ್ಮಸ್ಸು ಅಘೋಷಿತ ಕದನವಿರಾಮ ಮೂಡಿಸಿ ಸೈನಿಕರಲ್ಲೂ ಸಂತಸದ ಕೇಳಿ ಹೊರಡಿಸುತ್ತದೆ.
ಸಾಂತಾಕ್ಲಾಸ್
ಕ್ರಿಸ್ಮಸ್ಸಿನೊಂದಿಗೆ ಬರುವ ಮತ್ತೊಂದು ಐಕಾನ್ ಎಂದರೆ ಸಾಂತಾಕ್ಲಾಸ್ ಎಂಬ ತಾತ. ಸಾಂತಾಕ್ಲಾಸರು ಒಮ್ಮೆ ಪಯಣಿಸುತ್ತಿರುವಾಗ ಒಂದು ಮನೆಯ ಜಗಲಿಯ ಮೇಲೆ ವಿರಮಿಸಿಕೊಳ್ಳುತ್ತಾರೆ. ಆ ಮನೆಯಲ್ಲಿ ಬೆಳೆದು ನಿಂತ ಮೂರು ಹೆಣ್ಣುಮಕ್ಕಳು ಹಾಗು ಅವರ ವೃದ್ಧ ತಾಯಿಯಷ್ಟೇ. ಮಕ್ಕಳಿಗೆ ಮದುವೆ ಮಾಡಲಾಗದ ಅಸಹಾಯಕತೆ ಅಲ್ಲಿ ಕಾಣದಿದ್ದರೂ ಗೋಚರವಾಗುತ್ತಿದೆ. ನಿಕೊಲಾಸರು ಆ ಸ್ವಾಭಿಮಾನಿ ಕುಟುಂಬಕ್ಕೆ ಪರೋಕ್ಷವಾಗಿ ನೆರವಾಗುತ್ತಾರೆ. ಮನೆಯ ಹೊಗೆಗೂಡಿನಿಂದ ಚಿನ್ನದ ನಾಣ್ಯಗಳನ್ನು ತೂರಿ ಆ ಮಕ್ಕಳ ಮದುವೆಗೆ ಕಾರಣರಾಗುತ್ತಾರೆ. ಇಂದಿಗೂ ಪುಟ್ಟ ಮಕ್ಕಳು ತಮ್ಮ ಕೋರಿಕೆಯನ್ನು ಸಾಂತಾಕ್ಲಾಸನಿಗೆ ಅರುಹಿದರೆ ಅವನು ಹೇಗಾದರೂ ಅದನ್ನು ಪೂರೈಸುವನೆಂದು ನಂಬುತ್ತಾರೆ. ಆ ನಂಬಿಕೆಯನ್ನು ಹುಸಿಗೊಳಿಸದ ತಂದೆತಾಯಿಯರು ಪರೋಕ್ಷವಾಗಿ ಮಕ್ಕಳ ಬಯಕೆಯನ್ನು ಪೂರೈಸುತ್ತಾರೆ. ಮಕ್ಕಳು ಬೆಳೆದ ಮೇಲೆ ಈ ಗುಟ್ಟನ್ನು ಜತನವಾಗಿರಿಸಿ ತಮ್ಮ ಮಕ್ಕಳಿಗೆ ದಾಟಿಸುತ್ತಾರೆಂಬುದು ಕ್ರಿಸ್ಮಸ್ಸಿನ ಒಂದು ನವಿರಾದ ಆಚರಣೆಗಳಲ್ಲೊಂದು.
ಕ್ರಿಸ್ಮಸ್ ಮರ
ಕ್ರಿಸ್ಮಸ್ಸಿನೊಂದಿಗೆ ಒಂದು ನಿತ್ಯ ಹರಿದ್ವರ್ಣದ ಸೂಜಿಯೆಲೆಯ ಮರವೂ ತಳಕು ಹಾಕಿಕೊಂಡಿದೆ. ಗಗನದೆತ್ತರಕ್ಕೆ ತುದಿಚಿಮ್ಮುವ ಆ ಮರ ಕ್ರಿಸ್ಮಸ್ ಸಂದರ್ಭದ ಇಬ್ಬನಿಯಸೋನೆಗೆ ಬೀಗಿದರೂ ಮಕ್ಕಳ ಮುದ್ದಿನ ವೃದ್ಧನ ಹಾಗೆ ಬಾಗುತ್ತದೆ. ಅದರಲ್ಲಿ ಬಣ್ಣಬಣ್ಣದ ನಕ್ಷತ್ರಗಳನ್ನು ಕಟ್ಟಿ ಉಡುಗೊರೆಗಳನ್ನು ತೂಗಿಸಿ ದೀಪಗಳನ್ನು ಮಿನುಗಿಸುವ ಪರಿಪಾಠ ಈಜಿಪ್ಟಿನ ಜಾನಪದ ಆಚರಣೆಯಿಂದ ಎರವಲಾದದ್ದು. ಆದರೆ ಅದು ಕ್ರಿಸ್ಮಸ್ಸಿಗಾಗಿಯೇ ಜನಪ್ರಿಯಗೊಂಡದ್ದು ಜರ್ಮನ್ ನಾಡಿನಲ್ಲಿ. ೧೮೪೧ರಲ್ಲಿ ವಿಕ್ಟೋರಿಯ ರಾಣಿಯ ಪತಿ ಜರ್ಮನ್ ಸಂಜಾತರಾಗಿದ್ದು ತಮ್ಮ ನಾಡಿನಿಂದ ವಿಶೇಷವಾಗಿ ಸಿಂಗರಿಸಿದ್ದ ಇಂಥ ಮರವೊಂದನ್ನು ಲಂಡನ್ನಿನ ವಿಂಡ್ಸರ್ ಕ್ಯಾಸಲ್ ಆವರಣಕ್ಕೆ ತಂದಾಗ ಇಡೀ ರಾಣಿಪರಿವಾರವೇ ಅಚ್ಚರಿಗೊಂಡಿತ್ತು. ಅದು ಕ್ಷಣಮಾತ್ರದಲ್ಲೇ ಇಂಗ್ಲೆಂಡಿನಲ್ಲೆಲ್ಲ ವಿದ್ಯುತ್ ಸಂಚಾರ ಮೂಡಿಸಿತು. ಇಂದು ಜಗತ್ತಿನೆಲ್ಲೆಡೆ ಪರಿಸರದ ಕಾಳಜಿ ಹಬ್ಬುತ್ತಿರುವಾಗ ಹಸಿರಿನಿಂದ ಕಂಗೊಳಿಸುವ ಮರಗಳನ್ನು ಸಿಂಗರಿಸಿ ಅದರಲ್ಲಿ ದೈವೀ ರೂಪವನ್ನು ಕಾಣುವ ಅನನ್ಯತೆಗೆ ಮನಸೋಲದವರಾರು?
ರೈತಪ್ರೇಮಿ ಕ್ರಿಸ್ತ
ಕನ್ನಡನಾಡಿನ ಹೆಚ್ಚಿನ ಪ್ರದೇಶಗಳಲ್ಲಿ ಕ್ರಿಸ್ಮಸ್ಸು ಸುಗ್ಗಿಯ ಸಂದರ್ಭವಾಗಿರುತ್ತದೆ. ಹೊಲದಿಂದ ಕಣಕ್ಕೆ ಪೈರುಬಂದು ಸ್ನಿಗ್ದ ಸೊಗಡಿನ ಕಾಳುಕಡಿ ಮನೆಗೆ ಬಂದಿರುತ್ತದೆ. ಈ ದಿನಗಳಲ್ಲಿ ರೈತರಿಗೂ ಅವರ ಪಶುಗಳಿಗೂ ವಿರಾಮದ ದಿನಗಳು. ಮೂರು ಜ್ಞಾನಿಗಳು ಒಂಟೆಗಳನ್ನೇರಿ ಯಾತ್ರೆ ಬಂದು ಕ್ರಿಸ್ತನನ್ನು ಕಾಣುತ್ತಾರಲ್ಲವೇ? ಅಂದರೆ ಕ್ರಿಸ್ತ ಹುಟ್ಟಿದಾಗ ಮೊದಲ ದರ್ಶನ ಪಡೆಯುವುದು ದನಕರುಗಳು ಕುರಿಗಳು ಒಂಟೆಗಳು ಪಾರಿವಾಳಗಳು ಎಂಬುದನ್ನು ನೆನೆಸಿಕೊಂಡರೆ ಕ್ರಿಸ್ತನಿಗೂ ಪ್ರಕೃತಿಗೂ ಎಷ್ಟೊಂದು ಬಾಂಧವ್ಯ ಅಲ್ಲವೇ? ಆದ್ದರಿಂದ ಕ್ರೈಸ್ತ ರೈತರು ತಮ್ಮ ಹಸುಕರುಗಳನ್ನು ಚೆನ್ನಾಗಿ ಸಿಂಗರಿಸಿ ಅವುಗಳ ಕೊಂಬಿಗೆ ಬಣ್ಣ ಹಚ್ಚಿ ಕೊರಳಿಗೆ ಕಿರುಗಂಟೆಗಳನ್ನು ಕಟ್ಟಿ ಬೆನ್ನ ಮೇಲೆ ಬಣ್ಣದ ಕವುದಿ ಹೊಚ್ಚಿ ಊರಲ್ಲಿ ಮೆರವಣಿಗೆ ಹೊರಡಿಸುತ್ತಾರೆ. ಅವರ ಸಂಭ್ರಮಕ್ಕೆ ಇನ್ನೊಂದು ಕಾರಣವೂ ಇದೆ. ಯೇಸುಕ್ರಿಸ್ತ ಹುಟ್ಟಿದಾಗ ತನಗೊಬ್ಬ ಪ್ರತಿಸ್ಪರ್ಧಿ ಹುಟ್ಟಿದ್ದನ್ನು ಅರಿತ ಅಲ್ಲಿನ ರಾಜ ಕ್ರಿಸ್ತನನ್ನು ಕೊಲ್ಲಲು ಉದ್ಯುಕ್ತನಾಗಿ ಹುಡುಕುತ್ತಾನೆ. ಆದರೆ ಅವನು ಸಿಕ್ಕದೇ ಹೋದಾಗ ತನ್ನ ನಾಡಿನ ಎಲ್ಲ ಹಸುಗೂಸುಗಳನ್ನು ಕೊಚ್ಚಿಹಾಕುವಂತೆ ಸೈನಿಕರಿಗೆ ಆದೇಶಿಸುತ್ತಾನೆ. ಜಗತ್ತಿನ ಅತ್ಯಂತ ಘೋರ ದುರಂತವಿದು. ಆ ಸಂದರ್ಭದಲ್ಲಿ ಯೇಸು ಮತ್ತು ಅವರ ತಂದೆತಾಯಿ ಸುರಕ್ಷಿತವಾಗಿ ಮತ್ತೊಂದು ದೇಶಕ್ಕೆ ಪಲಾಯನಗೈದಿರುತ್ತಾರೆ. ಹೋಗುವ ವೇಳೆ ದಾರಿಯಲ್ಲಿ ರೈತನೊಬ್ಬನನ್ನು ಮಾತಾಡಿಸಿ ಅಲ್ಲೇ ಸ್ವಲ್ಪ ವಿರಮಿಸಿ ಅವನಿಂದ ಬಿತ್ತನೆಧಾನ್ಯ ಪಡೆದು ಹೊಲದಲ್ಲಿ ಎರಚುತ್ತಾರೆ. ಒಮ್ಮೆಲೇ ಆ ಬೀಜಗಳು ಮೊಳೆತು ಫಲಭರಿತ ಪೈರಾಗಿ ಕಂಗೊಳಿಸುತ್ತವೆ. ಅವರು ಅತ್ತ ಹೋದ ಮೇಲೆ ಇತ್ತ ಸೈನಿಕರು ಕೂಸುಳ್ಳವರು ಇತ್ತ ಬಂದರೇ ಎಂದು ಕೇಳುತ್ತಾರೆ. ಅದಕ್ಕೆ ರೈತ ಹೌದು ಈ ಪೈರಿನ ಬಿತ್ತನೆ ಮಾಡಿ ಹೋದರು ಎನ್ನುತ್ತಾನೆ. ಬೆಳೆದು ನಿಂತ ಪೈರನ್ನು ಕಂಡ ಸೈನಿಕರು ಅವರು ಹೋಗಿ ಸಾಕಷ್ಟು ಕಾಲವಾಗಿದೆ ಎಂದು ತಿಳಿದು ಹಿಂದಕ್ಕೆ ಮರಳುತ್ತಾರೆ. ಈ ಘಟನೆಯ ಸಂಕೇತವಾಗಿ ಕನ್ನಡ ಕ್ರೈಸ್ತರ ಮನೆಗಳಲ್ಲಿ ಕ್ರಿಸ್ತಜನನದ ಕೊಟ್ಟಿಗೆಯ ಬದಿಯಲ್ಲಿ ತಟ್ಟೆಗಳಲ್ಲಿ ಬೆಳೆಸಿದ ಪೈರನ್ನು ಇಡುತ್ತಾರೆ.
ಅವರ ಜಾನಪದ ಹಾಡುಗಳಲ್ಲೂ ಕ್ರಿಸ್ತನಿಗೆ ಕ್ರಿಸ್ತನ ಹುಟ್ಟಿಗೆ ಅವನ ಹೆತ್ತತಾಯಿಗೆ ವಿಶೇಷವಾದ ಸ್ಥಾನವಿದೆ. ಹೀಗೆ ಕ್ರಿಸ್ತಜಯಂತಿಯು ಉಳ್ಳವರ ಹಾಗೂ ಇಲ್ಲದವರ ಎಲ್ಲರ ಸಂತೋಷಕ್ಕೆ ಕಾರಣವಾಗುತ್ತದೆ ಎಂಬುದೇ ಅದರ ಸಂಭ್ರಮಕ್ಕೆ ಕಾರಣವಾಗುತ್ತದೆ. ಇಬ್ಬನಿಯ ಜೊತೆಗಿನ ಹಬ್ಬದ ಬಿಸುಪು ದ್ವೇಷ ದುಗುಡದ ಎದೆಗಳಲ್ಲಿ ಭರವಸೆಯ ಬೆಳಕು ಮೂಡಿಸಲಿ ಎಂದು ಆಶಿಸೋಣ. 
(ಈ  ೨೫ನೇ ಡಿಸೆಂಬರ್ ೨೦೧೪ರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾಯಿತು. http://epaper.samyukthakarnataka.com/403110/Samyuktha-Karnataka/December-25-2014-Bangalore#page/15/1)