ಬುಧವಾರ, ಜನವರಿ 12, 2011

ಪ್ರಜಾವಾಣಿ

          ನನಗೆ ಬುದ್ದಿ ಬಂದಾಗಿನಿಂದಲೂ ನಮ್ಮ ಮನೆಯಲ್ಲಿ ’ಪ್ರಜಾವಾಣಿ’ ಪತ್ರಿಕೆಯನ್ನು ನೋಡುತ್ತಿದ್ದೇನೆ. ಅಕ್ಷರಾಭ್ಯಾಸದ ಸಂದರ್ಭದಲ್ಲಿ ಸ್ಲೇಟಿನ ಮೇಲೆ ನನ್ನ ಕೈಬರಹದ ’ಅ’ ಅಕ್ಷರವನ್ನು ಪ್ರಜಾವಾಣಿಯಲ್ಲಿನ ಮುದ್ರಿತ ’ಅ’ ಅಕ್ಷರದೊಂದಿಗೆ ಹೋಲಿಸುವುದರಿಂದ ಹಿಡಿದು ಇಂದಿನ ವರ್ಣರಂಜಿತ ಪುರವಣಿಗಳವರೆಗೆ ಪ್ರಜಾವಾಣಿ ನನ್ನ ಜೀವನದ ಅವಿಭಾಜ್ಯ ಅಂಗವೆನಿಸಿದೆ.
ಅಂದಹಾಗೇ ನಾನು ಪ್ರಜಾವಾಣಿಯಲ್ಲಿ ಮೊದಮೊದಲು ಓದಿದ್ದು ಏನನ್ನು ಎಂದು ನೆನಪಿಸಿಕೊಂಡಾಗ ಐದನೇ ಪುಟದಲ್ಲಿ ಬರುತ್ತಿದ್ದ ಫ್ಯಾಂಟಮ್ ಕಾಮಿಕ್ಸ್ ಹಾಗೂ ನಾಲ್ಕನೇ ಪುಟದಲ್ಲಿ ಬರುತ್ತಿದ್ದ ಛೂಬಾಣ ಇವು ನನಗೆ ಅಚ್ಚುಮೆಚ್ಚಿನದಾಗಿದ್ದವು.
ಮುಂದೆ ಕಾಲಮುಗಳ ನಡುವಿನ ಗೆರೆಗಳು ಮಾಯವಾಗಿ ಅಕ್ಷರವಿನ್ಯಾಸ ಮಾತ್ರವಲ್ಲ ಪುಟವಿನ್ಯಾಸವೂ ಹೆಚ್ಚು ಆಕರ್ಷಣೀಯವಾಗಿ ಬದಲಾದವಲ್ಲದೆ ಪ್ರಜಾವಾಣಿಯ ಬಗೆಗಿನ ನನ್ನ ಆಪ್ತತೆ ಹೆಚ್ಚುತ್ತಾ ಹೋಯಿತು. ಶಾಲೆಯ ಪ್ರಾರ್ಥನಾ ವೇಳೆಯಲ್ಲಿ ವಿದ್ಯಾರ್ಥಿ ಮುಖಂಡನೋರ್ವನು ಧ್ವನಿವರ್ಧಕದ ಮುಂದೆ ನಿಂತು ಪ್ರಜಾವಾಣಿಯ ಪ್ರಮುಖ ಸುದ್ದಿಗಳನ್ನು ಓದುವಾಗ ನಾನು ಕೆಲ ಹೆಡಿಂಗುಗಳನ್ನು ಮೊದಲೇ ಹೇಳಿ ಅಕ್ಕಪಕ್ಕದ ಹುಡುಗರನ್ನು ಚಕಿತರಾಗಿಸುತ್ತಿದ್ದುದು ಒಂಥರಾ ಮಜಾದ ವಿಷಯವಾಗಿತ್ತು. ನನ್ನ ಹೈಸ್ಕೂಲಿನ ದಿನಗಳಲ್ಲಿ ಭಾನುವಾರದ ಪುರವಣಿಯಲ್ಲಿ ಬರುತ್ತಿದ್ದ ಪದಬಂಧವನ್ನು ಬಿಡಿಸುವುದು ಬಲು ಇಷ್ಟದ ಹವ್ಯಾಸವಾಗಿತ್ತು. ಇನ್ನು ಸಾಪ್ತಾಹಿಕ ಪುರವಣಿಯಂತು ನನ್ನ ಅಚ್ಚುಮೆಚ್ಚಿನ ಓದಿನ ಸಾಮಗ್ರಿಯಾಗಿತ್ತು.
ಇಂದಂತೂ ಪ್ರಜಾವಾಣಿ ಇನ್ನೂ ಹೆಚ್ಚು ಸಿಂಗಾರಗೊಂಡಿದೆ. ಅದರ ಒಂದೊಂದು ಪುಟಪುಟವೂ ಅಂಕಣಗಳೂ ನಿಷ್ಪಕ್ಷಪಾತವಾಗಿವೆ ಮಾತ್ರವಲ್ಲ ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಸಲ್ಲುವಂತಿರುತ್ತವೆ. ನಾಗೇಶಹೆಗಡೆಯವರ ವಿಜ್ಞಾನ ಬರಹಗಳು, ದಿನೇಶ ಅಮಿನಮಟ್ಟು ಅವರ ರಾಜಕೀಯ ವಿಶ್ಲೇಷಣೆಗಳು, ಗುರುರಾಜ ಕರ್ಜಗಿಯವರ ಮನೋವಿಕಾಸದ ಬರಹಗಳು, ಅನಂತಮೂರ್ತಿ ಕೊಡಸೆ ಲಿಂಗದೇವರು ಕೆವಿನಾರಾಯಣ ಮುಂತಾದವರ ಮೀಮಾಂಸೆಗಳು, ಇನ್ನಿತರ ರುಚಿಕರ ಆರೋಗ್ಯಕರ ಲೇಖನಗಳು, ಎಲ್ಲ ಮಗ್ಗಲುಗಳನ್ನು ತೋರುವ ವಾಚಕರವಾಣಿ, ಪೂರ್ವಗ್ರಹವಿಲ್ಲದ ಸಂಪಾದಕೀಯ ಇವೆಲ್ಲವನ್ನು ಅನುಭವಿಸುತ್ತಿರುವುದು ನಮ್ಮ ಕಾಲದ ಸೌಭಾಗ್ಯವಾಗಿದೆ.
ಇಂದಿನ ಪೀತಪತ್ರಿಕೆಗಳ ಯುಗದಲ್ಲಿ ಪ್ರಜಾವಾಣಿಯು ನನ್ನ ಜೀವನವನ್ನು ಬಲು ಚೆನ್ನಾಗಿ ರೂಪಿಸಿದೆ ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ.

ಭಾನುವಾರ, ಜನವರಿ 2, 2011

ಹೊಸವರುಷ

ವರುಷ ವರುಷವುರುಳಿದರೂ
ಹರುಷ ಮಾತ್ರ ಮಾಸದಿರಲಿ
ನೋವಿರಲಿ ನಗುವಿರಲಿ
ಮುಖದ ನಗುವು ಬಾಡದಿರಲಿ
ಉತ್ಸಾಹದ ಹೂವರಳಿ
ಮತ್ತೆ ಯಶವ ಚಿಮ್ಮಿ ತರಲಿ
ಪ್ರೀತಿ ಚಿಲುಮೆ ಬತ್ತದಿರಲಿ
ತೃಪ್ತಿಯಿಂದ ನಗುತಲಿರಲಿ
ವಿಶ್ವಾಸವು ಕುಂದದಿರಲಿ
ಏನೇ ಇರಲಿ ಏನೇ ಬರಲಿ
ದೇವನೊಲುಮೆ ನಿಮ್ಮಲಿರಲಿ