ಶುಕ್ರವಾರ, ಆಗಸ್ಟ್ 16, 2013

ಯಕ್ಷಗಾನದಲ್ಲಿ ಯೇಸುಸ್ವಾಮಿಯ ಕತೆ

ಇತ್ತೀಚೆಗೆ ನಾನು ಓದಿದ ಪುಸ್ತಕ ಹಿರೇಬಳ್ಳಾಪುರ ಸುಬ್ಬರಾಯಪ್ಪನವರ ಯೇಸುಸ್ವಾಮಿಯ ಕತೆ’ (ಸಾಗರ್ ಪ್ರಕಾಶನ). ಇದು ಮೂಡಲಪಾಯ ಯಕ್ಷಗಾನ ಪ್ರಕಾರದ ಒಂದು ಪ್ರಸಂಗ, ಹಸ್ತಪ್ರತಿಯಲ್ಲಿದ್ದ ಇದನ್ನು ಸಂಗ್ರಹಿಸಿ ಗ್ರಂಥಸಂಪಾದನೆ ಮಾಡಿರುವವರು ಡಾ. ಚಕ್ಕೆರೆ ಶಿವಶಂಕರ ಅವರು. ಸುಮಾರು ೭೮ ಪುಟಗಳ ಮುದ್ರಿತ ಯಕ್ಷಗಾನ ಕಥೆಗೆ ಶಿವಶಂಕರರು ೩೪ ಪುಟಗಳ ದೀರ್ಘ ಉಪೋದ್ಘಾತವನ್ನು ಬರೆದು ಯಕ್ಷಗಾನ ಪ್ರಕಾರಗಳಲ್ಲಿ ಮೂಡಲಪಾಯದ ಸ್ಥಾನ ಹಾಗೂ ಪ್ರಸ್ತುತ ಕೃತಿಯ ಕವಿಕಾವ್ಯದ ವಿಚಾರಗಳನ್ನು ಚರ್ಚಿಸಿದ್ದಾರೆ. ಬಹುಶಃ ನಶಿಸಿ ಹೋಗಬಹುದಾಗಿದ್ದ ಇಂಥ ಕೃತಿಯನ್ನು ಮುದ್ರಣರೂಪಕ್ಕೆ ತರುವ ಮೂಲಕ ಅವರೊಂದು ಶ್ಲಾಘ್ಯ ಕೆಲಸ ಮಾಡಿದ್ದಾರೆ. ಹಿರೇಬಳ್ಳಾಪುರ ಎನ್ನುವುದು ಇಂದು ಸಾರ್ವತ್ರಿಕವಾಗಿ ಬಳಕೆಯಲ್ಲಿರುವ ದೊಡ್ಡಬಳ್ಳಾಪುರವೇ. ಇಂಥಲ್ಲಿ ಕರಾವಳಿ ಮೂಲದ ಜಾನಪದ ಪ್ರಕಾರದ ಕಲೆಯೊಂದು ಅದರಲ್ಲೂ ಅಪರೂಪವೆನ್ನಬಹುದಾದ ಕ್ರೈಸ್ತ ವಸ್ತುವನ್ನು ಒಳಗೊಂಡಿರುವುದು ಆಶ್ಚರ್ಯವೇ ಸರಿ.
ಓದುತ್ತಾ ಹೋದಂತೆ ಬೇರೆಯೇ ಒಂದು ಯಕ್ಷಲೋಕಕ್ಕೆ ಕೊಂಡೊಯ್ಯುವ ಈ ಕಥಾರೂಪ, ವೇದಿಕೆಯಲ್ಲಿ ಪ್ರಯೋಗವಾದರೆ ರಮ್ಯವೂ ಅದ್ಭುತವೂ ರೋಮಾಂಚಕಾರಿಯೂ ಆಗಿರುತ್ತದೆಂಬುದರಲ್ಲಿ ಸಂಶಯವಿಲ್ಲ. ಇದನ್ನು ನಾನು ಪದೇ ಪದೇ ಓದಿ ತಣಿದೆ, ಅಪೂರ್ವ ರಸಾನುಭವದ ಅನುಭೂತಿ ಸವಿದೆ. ನಮ್ಮ ದೇಸೀ ಸಂಸ್ಕೃತಿಯ ಎಲ್ಲ ಆಚಾರ ವಿಚಾರಗಳನ್ನೂ ಯೇಸುವಿನ ಕತೆಯಲ್ಲಿ ನಿರುಕಿಸಿದ ಸುಬ್ಬರಾಯಪ್ಪನವರಿಗೆ ನಮೋ ನಮಃ.
ಮೊದಲೇ ಹೇಳಿದಂತೆ ಇದು ಒಂದು ಕ್ರಿಶ್ಚಿಯನ್ ವಸ್ತುವಾಗಿದ್ದರೂ ನಾಟಕದ ಪ್ರಸಂಗ ಶುರುವಾಗುವುದು ವಿಘ್ನೇಶ್ವರ ಸ್ತುತಿ ಶಾರದಾ ಸ್ತುತಿಯೊಂದಿಗೆ. ತದನಂತರ ಸುಬ್ಬರಾಯಪ್ಪನವರು ತಮ್ಮ ಇಷ್ಟದೈವ ಸೋಮೇಶ್ವರನನ್ನೂ ವಿದ್ಯಾಗುರುಗಳಾದ ರಾಮಸ್ವಾಮಿದಾಸರನ್ನೂ ಸ್ಮರಿಸಿಕೊಳ್ಳುತ್ತಾ ಕತೆಗೆ ಮುನ್ನಡಿಯಿಡುತ್ತಾರೆ.
ಸರ್ವಶಕ್ತ ದೇವನ ಒಡ್ಡೋಲಗದಲ್ಲಿ ಭೂಮಾತೆಯು ದೀನವದನಳಾಗಿ ನಿಂತು ಭೂಲೋಕದಲ್ಲಿ ಜನರು ಸತ್ಯ ಧರ್ಮ ನೀತಿ ನಿಷ್ಠೆಗಳನ್ನು ತೊರೆದು ಅಜ್ಞಾನಿಗಳಾಗಿ ಬಾಳುತ್ತಿರುವುದರಿಂದ ಆ ಪಾಪಿಗಳ ಭಾರವನ್ನು ನಾನು ಹೊರಲಾಗದು, ಹೇ ಸ್ವಾಮಿ ತಾವು ಭುವಿಯಲ್ಲಿ ಅವತರಿಸಿ ಆ ಪಾಪಿಗಳಿಗೆ ಜ್ಞಾನಮಾರ್ಗವನ್ನು ಬೋಧಿಸಿ ಭೂ ಹೊರೆಯನ್ನು ಇಳಿಸಿ ಕಾಪಾಡಬೇಕೆಂದು ಪ್ರಾರ್ಥಿಸುತ್ತಾಳೆ. ಆಗ ದೇವನು;
ಪರಮಪಾಪಿಗಳ ಭಾರ ಹೊರಲಾರೆನು ಎನುತ ನೀನು
ನಿರುತ ಮನದಿ ದುಃಖಿಸದಿರಮ್ಮ ಹೇ ಧರಣೀ ದೇವಿ
ನರನಾಗಿ ನಾನು ಅವತರಿಸುವೆನು
ಹೇ ಧರಣೀ ದೇವಿ, ನಿರಾಕಾರಿಯಾದ ನಾನು, ಆಕಾರವನ್ನು ಧರಿಸಿ, ಪರಮಪಾಪಿಗಳ ಅಜ್ಞಾನವನ್ನು ತಪ್ಪಿಸಿ ಜ್ಞಾನಮಾರ್ಗವನ್ನು ಬೋಧಿಸಲು ಮೇರಿಯಮ್ಮ ಎಂಬ ಕನ್ಯೆಯ ಗರ್ಭದಲ್ಲಿ ಯೇಸುದೇವನೆಂಬ ನಾಮಾಂಕಿತದಿಂದ ಭೂಲೋಕದಲ್ಲಿ ಅವತರಿಸುವೆನು ಎನ್ನುತ್ತಾನೆ.
ಕತೆಯ ಒಡಲೆಲ್ಲ ಭಾಗವತಿಕೆಯ ವಚನಗಳ ಜೊತೆಜೊತೆಗೇ ಕಾಂಬೋಧಿ, ಹರಿಕಾಂಬೋಧಿ, ಸಾರಂಗ, ಶಂಕರಾಭರಣ, ಕಾಫಿ, ಬಿಲಹರಿ, ಕಮಾಚ್ ರಾಗಗಳ ಶ್ರೀಮಂತ ಹಾಡುಗಾರಿಕೆಯೊಂದಿಗೆ ಯಾಲಪದಗಳ ಸೊಗಸೂ ಇದೆ. ಚಂಡೆ ಮದ್ದಳೆ ಡಪ್ಪು ವಾದ್ಯಗಳೂ ಇದ್ದವೇನೋ ತಿಳಿಯದು.
ಒಂದು ಪ್ರಸಂಗ
ಹರಿಕಾಂಬೋಧಿ ರಾಗ, ತ್ರಿಪುಢೆ ತಾಳ
ಸಾರಿ ಪೇಳುವೆ ಕೇಳಿರೀಕೆಯು ಮಾರಿಯಂತೆ ಊರ ಹುಡುಗರ
ಮಾರ ತಾಪಕೆ ಸೇರಿಸುವಳು ದಾರಿ ಕೆಡಿಸುವಳು...
ವಚನ: ಈ ಪ್ರಕಾರವಾಗಿ ಶಾಸ್ತ್ರಿಗಳು ವೇಶ್ಯೆಯನ್ನು ಯೇಸುದೇವನ ಬಳಿಗೆ ಕರೆದುಕೊಂಡುಹೋಗಿ ನಿಲ್ಲಿಸಿ, ಈಕೆಯು ಮಾಹಾ ವ್ಯಭಿಚಾರಿಣಿ, ಈಕೆಯು ಬಡ ಹುಡುಗರಿಗೆಲ್ಲ ವ್ಯಭಿಚರ ಕಲಿಸಿ, ತಂದೆ ತಾಯಿಗಳ ಮಾತನ್ನು ಕೇಳದೆ, ಹುಡುಗರು ದುರ್ಮಾರ್ಗ ಪ್ರವರ್ತಕರಾಗಿ ಗುರು ಹಿರಿಯರೆಂದು ತಿಳಿಯದೆ ನಿಂದಿಸುವರು. ಹಿಂದೆ ಮೋಶೆ ಹೇಳಿರುವ ಧರ್ಮಶಾಸ್ತ್ರದಂತೆ ಮಾಡಿಸೆನಲು ವೇಶ್ಯೆಯು ಏನೆನ್ನುತ್ತಿರ್ದಾಳೆಂತೆನೇ:
ಅರಿಯದೆ ಮಾಡಿದೆ ಗುರುವೆ ಈ ಕಾರ್ಯವ ಯೇಸುದೇವ...
ನೀನು ಮನ್ನಿಸಿ ಎನ್ನ ಮಾನವ ರಕ್ಷಿಸು...
ವಚನ: ಈ ಪ್ರಕಾರವಾಗಿ ಆ ವ್ಯಭಿಚಾರಿಣಿಯು ಯೇಸು ದೇವನ ಪಾದಕಮಲಗಳಿಗೆ ನಮಸ್ಕರಿಸಿ ತಾನು ಮಾಡಿರುವ ತಪ್ಪನ್ನು ಕ್ಷಮಿಸಬೇಕೆಮದು ಬೆಡಿಕೊಲ್ಳಲು ಯೇಸುದೆವರು ಆ ಶಾಸ್ತ್ರಿಗಳೊಡನೆ ಏನೆನ್ನುತ್ತಿರ್ದಾನದೆಂತೆನೇ:
ಯಾಲಪದ
ಮೋಶೆ ಧರ್ಮವನ್ನು ನೋಡೆ ಘಾಸಿಯಲ್ಲವೆ ಜಗಕೆ ಇನನೂ ನಾಶಗೈಯ್ವುದು ಮೋಸವಲ್ಲವೇ
ಓ ಶಾಸ್ತ್ರಿಗಳಿರಾ ಲೇಸು ಮಾತ್ರವು ಸತ್ಯವಿಲ್ಲವು
ವಚನ: ಈ ಪ್ರಕಾರವಾಗಿ ಯೇಸುದೇವನು ಶಾಸ್ತ್ರಿಗಳಿಗೆ, ಮೋಶೆ ಧರ್ಮವನ್ನು ಅನುಸರಿಸಿ ನೋಡಿದರೆ, ಸಕರ ಚರಚರಾತ್ಮಕವಾದ ಪ್ರಾಣಿಗಳಲ್ಲಿಯೂ ಒಬ್ಬಾತ್ಮನೆ ಎಂದು ಸಾರುತ್ತಿರುವಲ್ಲಿ ಈಕೆಯ್ನನು ಮರಕ್ಕೆ ನೇತುಹಾಕಿ, ಕಲ್ಲುಗಳಿಂದ ಹೊಡೆಯಬೇಕೆಂದು ಹೇಳುವುದು ಧರ್ಮವೇ ಎಂದು ಹೇಳಿ, ನಿಮ್ಮ ಪಾಪವಿಲ್ಲದೆ ಪರಮಾತ್ಮನಂತೆ ನಡೆ ನುಡಿ ಉಳ್ಳವರು ಯಾರೋ, ಆತನೇ ಮೊದಲು ಆಕೆಯ ಮೇಲೆ ಕಲ್ಲನ್ನು ಹಾಕಲಿ ಎಂದು ಹೇಳಲು....ಹಿರಿಯರು ಮೊದಲ್ಗೊಂಡು ಕಿರಿಯರೆಲ್ಲರೂ... ಒಬ್ಬರ ಹಿಂದೊಬ್ಬರು ಹೊರಟು ಹೋದರು.
ಬಿಲ್ಹರಿ ರಾಗ, ಏಕತಾಳ, ಕಮಾಚ್ ರಾಗ
ಕಾಮಿನಿ ಮಣಿಯೆ ಕೇಳು ಕಾಮ ಎಂಬುವದದು
ಪ್ರೇಮದ ಆಶೆಯು ನೇಮ ಕೆಡಿಸುವುದು
ಸೋಮ ಸೂರ್ಯಾದಿಗಳ ನೇಮ ತಪ್ಪಿಸುವುದು
ಭಾಮಿನಿ ನೀ ಕೇಳು ಕಾಮವು ಭ್ರಾಂತಿ
ತರುಣಿಯೆ ನೀ ಕೇಳು ಚಿರಕಾಲ ನಿನ್ನೊಳಿಹ
ಸ್ಥಿರವಾದ ಆತ್ಮನ ಅರಿತು ಬಾಳಮ್ಮಾ.
ಹೀಗೆ ಯೇಸು ಜನನ, ಜೀವನ, ಬೋಧನೆ, ಮರಣ, ಸ್ವರ್ಗಾರೋಹಣಗಳನ್ನು ನಿರೂಪಿಸುವ ಈ ಯಕ್ಷಗಾನ ಪ್ರಸಂಗವು ಕೊನೆಯಲ್ಲಿ ಈ ಪ್ರಕಾರವಾಗಿ ಸತ್ಯವಂತನಾದ ಯೇಸುದೇವನ ಕತೆಯನ್ನು ಬರೆದು ಓದಿ ಅರ್ಥವನ್ನು ಹೇಳಿದ ಜನರಿಗೆ ಪರಮಾತ್ಮನು ಸಕಲ ಸೌಭಾಗ್ಯ ಪುತ್ರ ಮಿತ್ರರನ್ನು ಕರುಣಿಸಿ ಆಯುರಾರೋಗ್ಯಭಾಗ್ಯವನ್ನು ಕೊಟ್ಟು ಸಲಹುವನು ಎಂಬಲ್ಲಿಗೆ ಕಥೆ ಸಂಪೂರ್ಣಂ.
ಕಥಾಸಂಪೂರ್ಣ, ಶ್ರೀ ಶುಭಮಸ್ತು, ಸರ್ವಮಂಗಳಮಸ್ತು
ಎನ್ನುತ್ತಾ ಮಂಗಳಾರತಿ ಹಾಡು ಹಾಡುವಲ್ಲಿಗೆ ಬೆಳಕು ಹರಿದು ಹೊಸ ದಿನ ಮೂಡುತ್ತದೆ.
ಮಂಗಳಂ ಮಂಗಳಂ ಯೇಸುವಿಗೆ,
ಮರಣದ ನಂತರ ಮೂರು ದಿವಸಕೆ ದರುಶನವ ಇತ್ತ
ಪರಮ ಪೂಜ್ಯನಿಗೆ ಮಂಗಳಂ.
ಹಿರಿಯ ಬಳ್ಳಾಪುರದ ವರದ ಸೋಮೇಶನ
ಕರುಣದಿಂದಲಿ ಮುಕ್ತಿ ಯನು ಹೊಂದಿದವಗೆ ಮಂಗಳಂ.


ಯೇಸುವಿನ ಜೀವನವನ್ನೇ ಕಥಾವಸ್ತುವಾಗುಳ್ಳ ಈ ಯಕ್ಷಗಾನದ ಬಯಲಾಟವು ಇಷ್ಟು ದಿನ ಅಜ್ಞಾತವಾಗಿತ್ತೆಂಬುದೇ ನೋವಿನ ಸಂಗತಿ. ಬಹುಶಃ ಬಹುಕಾಲ ಪ್ರಯೋಗಗಳನ್ನು ಕಂಡು ಸಾತ್ವಿಕ ಜನರ ಮನತಣಿಸಿ ಅಧ್ಯಾತ್ಮದೆಡೆಗೆ ಪರಮಾತ್ಮನೆಡೆಗೆ ಕೊಂಡಯ್ದ ಮುಕ್ತಿಮಾರ್ಗದ ವಸ್ತುವೊಂದು ಚಕ್ಕೆರೆ ಶಿವಶಂಕರರ ಪ್ರಯತ್ನದಿಂದ ಮುದ್ರಿತ ರೂಪ ತಳೆದಿದೆ. ಕಲಾಸಕ್ತರು ಇದನ್ನು ಕೊಂಡು ಸಂಗ್ರಹಿಸಿಟ್ಟುಕೊಳ್ಳುವುದಲ್ಲದೆ ಸಾಧ್ಯವಿದ್ದೆಡೆ ಪ್ರಯೋಗಿಸುವುದು ಇಂದಿನ ಅಗತ್ಯವಾಗಿದೆ. ಕ್ರೈಸ್ತ ಧರ್ಮಮಂಡಲಿಗೆ ತನ್ನದೇ ಆದ ಆಸಕ್ತಿಗಳೂ ಆದ್ಯತೆಗಳೂ ಇರುವುದರಿಂದ ಸಾಮಾನ್ಯರಾದ ಕ್ರೈಸ್ತಭಕ್ತರು ಈ ನಿಟ್ಟಿನಲ್ಲಿ ಆಸಕ್ತಿ ಮಹಿಸಲಿ ಎಂದು ಆಶಿಸುತ್ತೇನೆ.