ಸೋಮವಾರ, ಜೂನ್ 13, 2011

ಅಂತೋಣಿಯವರಿಗೆ ಮುಡಿಪು

ಅಂತೋಣಿ ಎಂಬ ಆ ಪುಣ್ಯಾತ್ಮ , ದೋರನಹಳ್ಳಿಯ ಮಹಾಸಂತ. ಆತ ನನ್ನ ಬದುಕಿಗೊಂದು ತಿರುವು ನೀಡಿದ್ದು ನನ್ನ ಜೀವನದ ಅಚ್ಚರಿಗಳಲ್ಲೊಂದು. ಎಲ್ಲಿಯ ಬೆಂಗಳೂರು ಎಲ್ಲಿಯ ಮೈಸೂರು, ಎಲ್ಲಿಯ ಮಲ್ಲೇಶ್ವರ ಎಲ್ಲಿಯ ದೋರನಹಳ್ಳಿ? ಇವೆಲ್ಲವನ್ನೂ ಒಗ್ಗೂಡಿಸಿದ ಸಂತ ಅಂತೋಣಿ ಪವಾಡಪುರುಷನೇ ಸರಿ.
ಸಂತ ಅಂತೋಣಿಯವರಿಗೆ ನಡೆದುಕೊಳ್ಳುವವರ ಒಂದು ನಡವಳಿಕೆಯನ್ನು ಹೊಸದಾಗಿ ಕಂಡೆ. ಇದುವರೆಗೆ ನಾನು ಗಮನಿಸದೇ ಇದ್ದ ಆ ಒಂದು ಸಂಗತಿಯನ್ನು ಇಲ್ಲಿ ದಾಖಲಿಸುತ್ತಿದ್ದೇನೆ.
ನವೇನ ದಿನಗಳ ಮೆರವಣಿಗೆಯಲ್ಲಿ ನಾಲ್ಕಾರು ಮಂದಿ ಭುಜದ ಮೇಲೆ ಹೊರುವ ಅಂತೋಣಿಯವರ ಪುಟ್ಟ ತೇರಿಗೆ ಹೆಗಲು ಕೊಡಲು ನಾ ಮುಂದೆ ತಾ ಮುಂದೆ ಎಂದು ಭಕ್ತಜನ ನೂಕುನುಗ್ಗಲಿನಲ್ಲಿರುತ್ತಾರೆ. ಅದನ್ನು ಗುಡಿಯೊಳಗೆ ತಂದು ನೆಲಕ್ಕಿಳಿಸಿದ ಮೇಲೆಯೂ ಮುಡಿಪು ಕಟ್ಟುವವರ ದೊಡ್ಡ ದಂಡೇ ಇರುತ್ತದೆ.
೧೨ನೇ ಜೂನ್ ೨೦೧೧. ಭಾನುವಾರದ ಶುಭಬೆಳಗು ಎಲ್ಲೆಡೆ ಹರಡಿತ್ತು. ಹಬ್ಬದ ಹಿಂದಿನ ದಿನವಾದ್ದರಿಂದ ಜನಸಂದಣಿಯನ್ನು ಅನುಸರಿಸಿ ಒಂದಾದಮೇಲೊಂದರಂತೆ ಬಲಿಪೂಜೆಗಳು ನಡೆದಿದ್ದವು. ಪೂಜೆಯ ನಂತರ ಪೀಠದ ಸುತ್ತಲೂ ಭಕ್ತಿಭಾವದಿಂದ ನಿಲ್ಲುವ ಜನ, ಅವರ ತಲೆಯ ಮೇಲೆ ಸಂತ ಅಂತೋಣಿಯವರ ಪವಾಡ ಪ್ರತಿಮೆಯನ್ನು ಮಡಗಿ ಭಕ್ತರಿಗೊಂದು ವಿಶಿಷ್ಟಾನುಭೂತಿ ಕಲ್ಪಿಸುವ ಅಂತೋಣಿಯವರ ಮಠದ ಸಂನ್ಯಾಸಿಗಳು, ಭಕ್ತಿಪಾರಮ್ಯದ ಈ ದರ್ಶನವನ್ನು ಕಣ್ದುಂಬಿಕೊಳ್ಳುತ್ತಾ ಹಾಗೆಯೇ ಗುಡಿಯ ಮುಂಬಾಗಿಲ ಬಳಿಯಿದ್ದ ನವೇನ ತೇರಿನ ಬಳಿಬಂದೆ. ಭಕ್ತ ಜನ ಅದರ ಮುಂದೆ ಡಜನುಗಟ್ಟಲೆ ಮೇಣದ ಬತ್ತಿಗಳನ್ನು ಹಚ್ಚಿ ಮೊಣಕಾಲೂರಿ ಹಣೆಯನ್ನು ನೆಲಕ್ಕೆ ಮುಟ್ಟಿಸುವಂತೆ ತಲೆಬಾಗಿ ನಮಸ್ಕರಿಸುತ್ತಿದ್ದರು. ಅಂತೋಣಿಯವರ ಮುಖ ಹೊರತು ಇಡೀ ದೇಹ ಹೂಮಾಲೆಗಳಿಂದ ತುಂಬಿಹೋಗಿತ್ತು.
ಅವರ ಪಾದದಡಿ ಕಣ್ಣು ಹಾಯಿಸಿದಾಗ ಒಂದು ರೀತಿಯ ಅಚ್ಚರಿಯೂ ಕುತೂಹಲವೂ ಮೂಡಿತು. ನಿಲುವಂಗಿಯ ಆ ಕೆಳಭಾಗವನ್ನೆಲ್ಲ ಕಪ್ಪು ಅರಿಶಿನ ಕೆಂಪು ದಾರಗಳು ಸುತ್ತುವರಿದಿದ್ದವು. ಅರಿಶಿನ ದಾರಗಳಲ್ಲಿ ಅರಿಶಿನದ ಕೊಂಬು ಇದ್ದವು. ಇನ್ನುಳಿದವುಗಳಲ್ಲಿ ಬೇಡಿಕೆ ಬರೆದ ಚೀಟಿ, ಬಟ್ಟೆಯಲ್ಲಿ ಸುತ್ತಿದ ಹರಕೆಯ ದುಡ್ಡು, ಕೈ ಕಾಲು ಕಣ್ಣು ದೇಹ ಮಗು ಇತ್ಯಾದಿಗಳ ಬಿಂಬವಿರುವ ಬೆಳ್ಳಿಯ ಬಿಲ್ಲೆಗಳು ಇತ್ಯಾದಿ ವಸ್ತುಗಳಿದ್ದವು.
ನಾನು ನೋಡುತ್ತಿದ್ದಂತೆ ಒಬ್ಬ ಪ್ರೌಢ ಹೆಂಗಸು ದಾರವೊಂದನ್ನು ಎಳೆಯ ತೊಡಗಿದಳು. ಅವಳು ಹೊಸದಾಗಿ ಕಟ್ಟುತ್ತಿದ್ದಾಳೋ ಇರುವುದನ್ನು ಕಿತ್ತುಹಾಕುತ್ತಿದ್ದಾಳೋ ಎಂದು ಖಚಿತ ಪಡಿಸಿಕೊಳ್ಳಲು ಗಮನವಿಟ್ಟು ನೋಡತೊಡಗಿದೆ. ಸಣ್ಣಗಿನ ಕಪ್ಪುದಾರವೊಂದನ್ನು ಆಯ್ಕೆ ಮಾಡಿಕೊಂಡ ಆಕೆ ಅದಕ್ಕೆ ಹಾಕಿದ್ದ ಗಂಟುಗಳನ್ನು ಒಂದೊಂದಾಗಿ ತುಂಬಾ ಸಹನೆಯಿಂದ ಬಿಚ್ಚತೊಡಗಿದಳು. ಆ ದಾರಕ್ಕೆ ಬಿಡಿಯಾಗಿ ಹಲವಾರು ಗಂಟುಗಳಿದ್ದರೆ ಎರಡೂ ಕೊನೆಗಳನ್ನು ಸೇರಿಸಿ ಇನ್ನಷ್ಟು ಗಂಟುಗಳನ್ನು ಹಾಕಲಾಗಿತ್ತು. ಬಿಡಿಗಂಟುಗಳ ಕಾರಣ ಈ ಜೋಡಿಗಂಟುಗಳನ್ನು ಸುಲಭವಾಗಿ ಬಿಚ್ಚಲಾಗುತ್ತಿರಲಿಲ್ಲ. ತುಂಬಾ ತಾಳ್ಮೆಯಿಂದ ಅವಳು ಅವನ್ನೆಲ್ಲ ಬಿಚ್ಚಿ ತನ್ನ ಹಸ್ತದೊಳಗಿಟ್ಟು ಮಡಿಚಿ ಕಣ್ಣಿಗೊತ್ತಿಕೊಂಡು ಎದ್ದು ಹೊರಟಳು. ನಾನಾಕೆಯನ್ನು ತಡೆದು ಅಮ್ಮಾ ನಿಲ್ಲಿ, ಇದೇಕೆ ಹೀಗೆ ದಾರವನ್ನು ಬಿಚ್ಚಿಕೊಂಡು ಹೋಗುತ್ತಿದ್ದೀರಿ ಎಂದು ಕೇಳಿದೆ. ಕೊಡಗು ಜಿಲ್ಲೆಯ ಸಿದ್ದಾಪುರದ ಆಕೆ ಹೇಳಿದ ಸಂಗತಿ ಮಾರ್ಮಿಕವಾಗಿತ್ತು. ಕಷ್ಟ ಸಂಕಟಗಳಿಗೆ ಸಿಲುಕಿದವರು ಅದರ ಪರಿಹಾರಕ್ಕಾಗಿ ಸಂತರಿಗೆ ಮೊರೆಯಿಟ್ಟು ಜಾತ್ರೆಯ ಸಮಯಕ್ಕೆ ದೋರನಹಳ್ಳಿಗೆ ಬಂದು ಹೀಗೆ ಮುಡಿಪು ಕಟ್ಟುತ್ತಾರಂತೆ. ಹಾಗೆ ಕಟ್ಟಿದ ಮೇಲೆ ಮೊದಲೇ ಇನ್ಯಾರೋ ಕಟ್ಟಿದ ಮುಡಿಪನ್ನು ಬಿಚ್ಚಿಕೊಂಡು ಹೋಗುತ್ತಾರಂತೆ. ಅದನ್ನು ಅವರು ತೆಗೆದುಕೊಂಡು ಮನೆಗೆ ಹಿಂದಿರುಗುವ ವೇಳೆಗೆ ಇವರು ಹಾಕಿದ ಗಂಟನ್ನು ಇನ್ಯಾರೋ ಬಿಚ್ಚಿರುತ್ತಾರೆ. ಹೀಗೆ ಇವರ ಗಂಟುಗಳು ಸಡಿಲವಾಗುತ್ತಿದ್ದಂತೆ ಇವರ ಕಷ್ಟಗಳೂ ಪರಿಹಾರವಾಗುತ್ತವೆಯಂತೆ. ಎಲ್ಲಾ ಅವರವರ ನಂಬಿಕೆ ಅಥವಾ ದೃಢವಿಶ್ವಾಸವೆನ್ನಬಹುದು. ಹೀಗೆ ಪವಾಡ ಸದೃಶವಾಗಿ ಸಂಕಟ ಪರಿಹರಿಸುವ ಸಂತ ಅಂತೋಣಿಯವರು ಕಾಣದ ವಸ್ತುಗಳನ್ನು ಮರಳಿ ದೊರಕಿಸುವರೆಂಬುದೂ ಒಂದು ನಂಬಿಕೆಯ ಅಂಶ. ಕಳೆದುಹೋದ ಸ್ಥಾನ ಮಾನ ಪ್ರತಿಷ್ಠೆಗಳೂ ಮರಳಿ ಸಿಗುವುದಾದರೆ ಅದಕ್ಕಿಂತ ಅದ್ಭುತ ಬೇರಿನ್ನೇನು!