ಭಾನುವಾರ, ಡಿಸೆಂಬರ್ 27, 2009

ಉನ್ನತಿಯ ಮರವೇರಿ

ನಾನು ಜಕ್ಕಾಯನೆಂದು ನಾ ಹೇಳಲಾರೆ
ಕುಬ್ಜನಿಗೇಕಣ್ಣ ಗರುವದ ಮಾತು

ನಾ ಸುಂಕದವ ಕಡುಪಾಪಿ ಜೂಜುಕೋರ
ನಿತ್ಯಸುಮಂಗಲಿಯರ ಹೃದಯಚೋರ

ನನ್ನ ಮನೆಯ ದೀಪ ಉರಿಯದಿದ್ದರೇನಂತೆ
ಮುಗ್ದರನು ವಂಚಿಸುತ ಜಗವ ಮರೆತವ ತಾನೇ?

ಯೇಸುವನೂ ಬಿಡಲಿಲ್ಲ ಸುಂಕ ಕೊಡು ಎಂದೆ
ಸೀಜರನದು ಸೀಜರನಿಗೆ ಎಂದನಾತ

ಗೆದ್ದವನು ನಾನೆಂದು ಬಲು ಉಬ್ಬಿಹೋದೆ
ಸಿಕ್ಕ ಪರುಷಮಣಿಯನು ನೆಲಕೆ ಚೆಲ್ಲಿ

ವರುಷ ಕಳೆಯಿತು ಹರುಷ ಜಾರಿತು
ನೆಮ್ಮದಿಯ ನಾಳೆಗಳು ಇಲ್ಲವಾಗಿ

ಶಾಂತಿ ಬಯಸಿತು ಮನ ತಂಪ ಕೋರಿತು ತನು
ಉತ್ಸಾಹದರಮನೆಯ ದೀಪ ನಂದಿ

ಬೆಳಗಬಲ್ಲುದೆ ಮನದ ದೀಪ
ನೆಮ್ಮದಿ ನಿರುಮ್ಮಳತೆ ಇಲ್ಲದಿರೆ?

ಪ್ರೀತಿ ನಂಬಿಕೆ ಬೇಕು ಮನ ಶುದ್ಧಿಯಿರಬೇಕು
ಸರ್ವರಲಿ ಸೋದರತೆಯ ಕಂಪು ಬೀರಿ

ದೀನದಲಿತರ ಮಿತ್ರ ಪಾಪಿ ಪತಿತರ ಗೆಳೆಯ
ಯೇಸುವಿನ ದರುಶನಕೆ ಮನ ತಪಿಸಿ

ಅವ ಬರುವ ಹಾದಿಯಲಿ ಮರವೇರಿ ಕುಳಿತೆ
ಅವನ ದೃಷ್ಟಿಗೆ ಹೆದರಿ ಮುಖವ ಮರೆಮಾಡಿ

ವಾತ್ಸಲ್ಯಮೂರ್ತಿಯವ ಪ್ರೀತಿಕಂಗಳ ಸೂಸಿ
ನಾನಿನ್ನ ಅತಿಥಿಯಾದೆ ಇಳಿದು ಬಾರೆಂದ

ಕರಗಿ ಹೋದೆನು ನಾನು ಆ ಮಮತೆ ನುಡಿಗಳಿಗೆ
ಎರಗಿ ಬಿದ್ದೆನು ಅವನ ಪಾದದಡಿಗೆ

ಮರವೇರಿ ಕುಳಿತೆನ್ನನು ಕರಬೀಸಿ ಕರೆದ
ಪಾಪಿಮನದಾಸೆಯನು ಹೇಳದೆಯೇ ತಿಳಿದ

ಅಂದು ನಿನ್ನ ಕಂಡಾಗ ನಿನ್ನನರಿಯದೇ ಹೋದೆ
ಸ್ವಾಮಿ ಇಂದೆನ್ನ ಕರವಿಡಿದು ಉದ್ಧರಿಸಯ್ಯಾ

ತಬ್ಬಿಹಿಡಿದೆನ್ನನು ಯೇಸು ನುಡಿದನು ಜನಕೆ
ತಪ್ಪಿಹೋದ ಕುರಿಮರಿಯು ಮತ್ತೆ ಸಿಕ್ಕಿತು ಎನಗೆ

ಜಕ್ಕಾಯ ನೀನಿನ್ನು ಕುಬ್ಜಕಾಯನಲ್ಲ
ದೇವರಿಗೆ ಕಾಣುವುದು ಆತ್ಮವೊಂದೇ

ನಿನ್ನಂತೆ ನೀನಾಗು ಅಂತರಂಗವನು ಬೆಳಗು
ನಿನ್ನಂತೆ ಪರರನ್ನು ಪರಿಭಾವಿಸುತಲಿ

ಇದುವೆ ಪರಮಾತ್ಮಜ್ಞಾನ ಇದುವೆ ಉನ್ನತಧರ್ಮ
ಅರಿತೊಡನೆ ಧರೆಗಿಳಿವುದು ದೇವಲೋಕ

ಮಂಗಳವಾರ, ಡಿಸೆಂಬರ್ 22, 2009

ಕ್ರಿಸ್‌ಮಸ್ ನವೋಲ್ಲಾಸ

ಕ್ರಿಸ್‌ಮಸ್ ಮುನ್ನಾದಿನಗಳ ನೆನಪೇ ಮಧುರ. ದೀಪದ ಬುಟ್ಟಿಗಳಲ್ಲಿ ಮೇಣದ ಬತ್ತಿಗಳನ್ನು ಹಚ್ಚಿಕೊಂಡು ವಿವಿಧ ವಾದ್ಯಗಳೊಂದಿಗೆ ಸಜ್ಜಾದ ಮಕ್ಕಳು ಕ್ರಿಸ್ತಾಗಮನದ ಗೀತೆಗಳನ್ನು ಹಾಡುತ್ತಾ ಮನೆಮನೆಯಲ್ಲೂ ಕ್ರಿಸ್ತಜಯಂತಿಯ ಬರುವಿಕೆಯನ್ನು ಸಾರುತ್ತಾ ಎಲ್ಲರೆದೆಗಳಲ್ಲೂ ಸಂತಸ ಸಂಭ್ರಮದ ಭಾವನೆಗಳನ್ನು ಬಿತ್ತುತ್ತಾರೆ.

ಪೆಟ್ರೊಮ್ಯಾಕ್ಸ್ ಬೆಳಕಿನಲ್ಲಿ ಹಾರ್ಮೋನಿಯಂ ನಾದಕ್ಕೆ ತಾಳ ಗೆಜ್ಜೆ ಝಲ್ಲರಿ ಕಂಜಿರಗಳು ಜೊತೆಗೂಡಿವೆ. ನಡುವೆ ಕೆಂಪಂಗಿ ಬಿಳಿದಾಡಿಯ ಸಾಂಟಾಕ್ಲಾಸ್ ವೇಷಧಾರಿ. ಕೇಕು ಬಿಸ್ಕತ್ತು ಚಕ್ಕುಲಿ ಕರ್ಚಿಕಾಯಿ ಕಲ್ಕಲ್ಸ್ ಕುರುಕು ತಿಂಡಿಗಳ ಸವಿಯೊಂದಿಗೆ ಮಕ್ಕಳ ಮೆರವಣಿಗೆ ಸಾಗುತ್ತಿದ್ದರೆ ಬಾಲ್ಯದ ಆ ದಿನಗಳ ಸವಿನೆನಪು ಗರಿಗೆದರುತ್ತದೆ. ಅದೆಲ್ಲೋ ಜಿಂಗಲ್ ಬೆಲ್ಸ್ ಜಿಂಗಲ್ ಬೆಲ್ಸ್ ಹಾಡು ತೇಲಿ ಬರುತ್ತಿದ್ದರೆ ಹೃದಯ ತಂತಾನೇ ಪುಟಿಯ ತೊಡಗುತ್ತದೆ. ಕ್ರಿಸ್‌ಮಸ್ ಭಜನೆಯ ಆ ಮಕ್ಕಳ ಮೇಳದ ಶಬ್ದ ಕಿವಿಗೆ ಸೋಕುತ್ತಿದ್ದಂತೆ ಮನೆಯೊಳಗಿನ ಎಲ್ಲ ಕೆಲಸಗಳೂ ಸ್ತಬ್ಧವಾಗಿ ಸಡಗರದಿಂದ ಸಜ್ಜಾಗಿ ದೇವರಿಗೆ ದೀಪಹಚ್ಚಿ ಬಾಗಿಲ ತೆರೆದು ಅವರನ್ನು ಪ್ರೀತಿಯಿಂದ ಬರಮಾಡಿಕೊಳ್ಳುವುದು ಇದೆಯಲ್ಲ! ಓಹ್ ಅದೊಂದು ಸುಂದರ ಭಾವಗೀತೆಯೇ ಸರಿ.

ಆ ಮೆರವಣಿಗೆಯಲ್ಲಿ ನಮ್ಮ ಮಕ್ಕಳೂ ಇದ್ದಾರಲ್ಲವೇ!? ಅವರೊಂದಿಗೆ ಎಲ್ಲ ಓರಗೆಯ ಮಕ್ಕಳು, ಕೆಲವರಂತೂ ನಮ್ಮ ಸ್ನೇಹಿತರ ಮಕ್ಕಳೇ. ಮತ ಬೇರೆಯಾದರೂ ನಮ್ಮ ಮಕ್ಕಳೊಂದಿಗೆ ಕ್ರಿಸ್‌ಮಸ್ ಭಜನೆಗೆ ಬಂದಿದ್ದಾರೆ, ಇದಲ್ಲವೇ ಸಹಬಾಳ್ವೆ ಸಾಮರಸ್ಯ! ಕ್ರಿಸ್‌ಮಸ್ ಸೆಳೆತವೇ ಅಂಥದು.

ಮತ್ತದೇ ಮೌನ ವಿರಾಮದ ನಂತರ ಸುಶ್ರಾವ್ಯವಾಗಿ ‘ಸೈಲೆಂಟ್ ನೈಟ್ ಹೋಲಿ ನೈಟ್ ಆಲ್ ಇಸ್ ಕಾಮ್ ಅಂಡ್ ಆಲ್ ಇಸ್ ಬ್ರೈಟ್’ ಪಂಚಮ ಸ್ವರವಲ್ಲರಿಯ ಆ ಗಾನಮಾಧುರ್ಯ ಗಾಳಿಯಲ್ಲಿ ಬೆರೆತು ಬರುತ್ತಿದೆ. ಅದೇ ರಾಗ. ಹೌದು ಅದೇ ರಾಗ ಆದರೆ ಹಾಡು ಬೇರೆ. ಏನದು ಕನ್ನಡದ್ದೇ ಪದಗಳು ಅನಿಸುತಿದೆ, ಓ ಹೌದು ಕನ್ನಡದ್ದೇ ಸಾಹಿತ್ಯ, ‘ಮಂಗಳಶ್ರೀ ರಾತ್ರಿಯಲಿ ದೂತರು ಗಾನದಿ ಹಿಂಡು ಕಾಯುವ ಕುರುಬರ್ಗೆ ತಂದ ವಾರ್ತೆಯು’. ಓಹ್ ಮೈಮನ ಪುಳಕಗೊಳ್ಳುತ್ತಿವೆ.

ಶಾಂತಿ ದೀವಿಗೆಯಾಗಿ ಪ್ರೀತಿ ಮಲ್ಲಿಗೆಯಾಗಿ ಮರಿಯಮ್ಮನ ಮಡಿಲಲ್ಲಿ ಹಸುಕಂದನಾಗಿ, ನಸುನಗುತ ನಮಗೆಲ್ಲ ಬೆಳಕು ತೋರುವ ಯೇಸು ನಮ್ಮೆದೆಯೊಳಗೆ ಬರುತಾನೆ ನೆಮ್ಮದಿಯ ನೀಡಿ.
http://www.prajavani.net/content/Dec222009/metrotue20091221161880.asp

ಶನಿವಾರ, ಡಿಸೆಂಬರ್ 5, 2009

ಹೀಗೊಂದು ಪುಸ್ತಕದ ಮನೆ

ಎಚ್ಎಎಲ್ ಏರೋಇಂಜಿನ್ ವಿಭಾಗದಲ್ಲಿ ಕರ್ನಾಟಕ ಕಲಾಸಂಘದ ಸ್ಥಾಪನೆ ೧೯೬೯ರಲ್ಲಾಯಿತು. ಅಂದು ಕಾರ್ಖಾನೆಯಲ್ಲಿ ತಮಿಳು ಭಾಷಾಂಧರ ಅಟಾಟೋಪ ಮೇರೆ ಮೀರಿದ್ದಾಗ ನೇರವಾಗಿ ಕನ್ನಡಸಂಘ ಎಂದು ಕರೆಯದೆ ಕನ್ನಡ ನಾಡಿನಲ್ಲಿನ ಎಲ್ಲ ಸಂಸ್ಕೃತಿ ಮತ್ತು ಕಲೆಗಳನ್ನು ಎತ್ತಿಹಿಡಿಯುವ ನೆಪದಲ್ಲಿ ಕನ್ನಡಿಗ ನೌಕರರ ಹಿತ ಕಾಯುವುದಕ್ಕೋಸ್ಕರ ಸ್ಥಾಪಿಸಲಾಯಿತು. ಕಾರ್ಖಾನೆ ಮುಖ್ಯಸ್ಥರಾಗಿದ್ದ ರಾಮಚಂದ್ರಕರ್ವೆಯವರು ತಮ್ಮ ಪತ್ನಿ ಮೀರಾಕರ್ವೆಯವರ ನೇತೃತ್ವದಲ್ಲಿ ಕನ್ನಡಿಗರನ್ನು ಒಂದುಗೂಡಿಸಿ ಹಾಡುಗಾರಿಕೆ, ಚರ್ಚಾಗೋಷ್ಠಿ, ಉಪನ್ಯಾಸ, ಯುಗಾದಿ ಮತ್ತು ದಸರಾ ಆಚರಣೆಗಳ ಮೂಲಕ ಕಾರ್ಮಿಕರಲ್ಲಿ ಕಲಾಭಿವ್ಯಕ್ತಿಯನ್ನು ಉದ್ದೀಪನಗೊಳಿಸಿ ಅವರ ಜಡ್ಡುಗಟ್ಟಿದ ಮನಸ್ಸುಗಳಲ್ಲಿ ಲವಲವಿಕೆಯನ್ನು ತುಂಬಿದ್ದರು.

ಆ ದಿನಗಳಲ್ಲಿ ಕಾರ್ಮಿಕನಾಗಿದ್ದ ದೊ ತಿ ಹನುಮಯ್ಯ ಎಂಬ ಉತ್ಸಾಹಿ ಕಾರ್ಯಕರ್ತನಿಂದ ಒಂದು ಪುಟ್ಟ ಗ್ರಂಥಾಲಯ ಸ್ಥಾಪನೆಯಾಯಿತೆನ್ನಬಹುದು. ಹನುಮಯ್ಯನವರು ತಮ್ಮ ಕೆಲಸದ ಸ್ಥಳದಲ್ಲಿಯೇ ಒಂದು ಮರದ ಪೆಟ್ಟಿಗೆಯಲ್ಲಿ ಶ್ರೀಕಂಠಯ್ಯ ಮುಂತಾದವರಿಂದ ಸಂಗ್ರಹಿಸಿ ತಂದ ಪುಸ್ತಕಗಳನ್ನು ಇಟ್ಟುಕೊಂಡು ಆಸಕ್ತರಿಗೆ ಎರವಲು ಕೊಡುತ್ತಾ ಕಾರ್ಮಿಕರಲ್ಲಿ ವಾಚನಾಭಿರುಚಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿದರು. ವಿಚಿತ್ರವೆಂದರೆ ಎಂಭತ್ತರ ದಶಕದವರೆಗೂ ಎಚ್ಎಎಲ್ ಪ್ರದೇಶದಲ್ಲಿ ಕನ್ನಡ ದಿನಪತ್ರಿಕೆಗಳನ್ನು ಕಾಣುವುದೇ ದುಸ್ತರವಾಗಿತ್ತು. ಕನ್ನಡ ಕಾರ್ಮಿಕರು ತಮಿಳು ಭಾಷಿಕ ಸಹೋದ್ಯೋಗಿಗಳಿಗೆ ಹಾಗೂ ಸೆಕ್ಯುರಿಟಿ/ವಿಜಿಲೆನ್ಸ್ ಸಿಬ್ಬಂದಿಗೆ ಹೆದರುತ್ತಾ ಅವರೊಂದಿಗೆ ತಮಿಳಿನಲ್ಲೇ ವ್ಯವಹರಿಸುತ್ತಾ ಕನ್ನಡ ಪುಸ್ತಕಗಳನ್ನು ಕದ್ದುಮುಚ್ಚಿ ಓದುತ್ತಿದ್ದರು. ಆದರೆ ವಿಪರ್ಯಾಸವೆಂದರೆ ತಮಿಳರ ಗ್ರಂಥಾಲಯವು ಕಾರ್ಪೆಂಟರಿ ಇಲಾಖೆಯಲ್ಲಿ ರಾಜಾರೋಷವಾಗಿ ನಡೆಯುತ್ತಿತ್ತು.

ನಂತರದ ದಿನಗಳಲ್ಲಿ ನಾರಾಯಣಮೂರ್ತಿ, ಗೋ ಶ್ರೀನಿವಾಸ್ ಅವರ ಮುನ್ನುಗ್ಗುವಿಕೆಯ ಫಲವಾಗಿ ಕನ್ನಡ ಪುಸ್ತಕಗಳ ಬಹಿರಂಗ ಓದಿಗೆ ಅವಕಾಶವಾಯಿತು. ಎಚ್ ಜಗದೀಶ, ಜ್ಞಾನೇಂದ್ರಗುಪ್ತಾ, ಮುನಿಗಿರಿಯಪ್ಪ, ಎನ್ ನಾಗರಾಜು, ಚಂದ್ರಪ್ಪ ಮುಂತಾದವರ ಅನುಪಮ ಸೇವೆಯಿಂದ ಅದು ಮುಂದುವರಿಯುತ್ತಾ ಬಂತು.

ಕಾರ್ಮಿಕರ ಭೋಜನಾಲಯದಲ್ಲಿ ಭೋಜನದ ವೇಳೆಯಲ್ಲಿ ಧ್ವನಿವರ್ಧಕದ ಮೂಲಕ ಚಿತ್ರಗೀತೆಗಳನ್ನು ಪ್ರಸಾರ ಮಾಡುವುದು ವಾಡಿಕೆ. ಊಟದ ಸಮಯದ ಮೊದಲ ಐದು ನಿಮಿಷ ಕನ್ನಡದ ಹಾಡು, ನಂತರದ ಹತ್ತು ನಿಮಿಷ ಹಿಂದೀ ಚಿತ್ರಗೀತೆಗಳು ಆಮೇಲಿನ ಹದಿನೈದು ನಿಮಿಷಗಳ ಕಾಲ ತಮಿಳು ಚಿತ್ರಗೀತೆಗಳನ್ನು ಪ್ರಸಾರ ಮಾಡುತ್ತಿದ್ದರು. ಊಟದ ಮನೆಗೆ ಪ್ರವೇಶಿಸುವ ಸಂದರ್ಭದಲ್ಲಿನ ಗದ್ದಲದಲ್ಲಿ ಕನ್ನಡ ಗೀತೆ ಕೇಳಿಸುತ್ತಲೇ ಇರಲಿಲ್ಲ. ಆದರೆ ಊಟ ಮುಗಿದ ನಂತರದ ಪ್ರಶಾಂತ ವೇಳೆಯಲ್ಲಿ ತಮಿಳು ಹಾಡುಗಳಿಗೆ ಕನ್ನಡಿಗರೂ ತಲೆದೂಗುತ್ತಿದ್ದರೆಂದರೆ ಅದು ಕನ್ನಡಿಗರ ಔದಾರ್ಯವೆನ್ನಲೇಬೇಕು. ಆದರೆ ಸೋಮಶೇಖರ, ರುದ್ರಪ್ರಕಾಶ, ಬಸವರಾಜು, ಗಂಗೇಗೌಡ ಹಾಗೂ ನನ್ನಂಥವರಿಗೆ ಅದು ತುಂಬಾ ಅಸಹನೀಯವೆನಿಸಿತ್ತು. ಹೀಗೊಂದು ದಿನ ೧೯೯೮ ರಲ್ಲಿ ಓದಲಿಕ್ಕೆಂದು ಬಹಿರಂಗವಾಗಿ ಪ್ರದರ್ಶಿತವಾಗಿದ್ದ ತಮಿಳು ದಿನಪತ್ರಿಕೆಯೊಂದು ನಮ್ಮ ಬಹುದಿನಗಳ ಅಸಹನೆಯನ್ನು ಆಸ್ಫೋಟಿಸಲು ಸಕಾರಣ ಒದಗಿಸಿತು. ಸಿಡಿದೆದ್ದ ಕನ್ನಡಿಗರ ಕೋಪವನ್ನು ತಣಿಸುವ ಕೆಲಸ ಬಹು ಸುಲಭದ್ದಾಗಿರಲಿಲ್ಲ. ಉದ್ಯಮದಲ್ಲಿನ ಅಶಾಂತಿಯ ಕಾರಣ ನೀಡಿ ಅಂದೇ ತಮಿಳರ ಪುಸ್ತಕ ಸಂಗ್ರಹಕ್ಕೆ ಬೀಗಮುದ್ರೆ ಹಾಕಲಾಯಿತು. ಕನ್ನಡ ಪುಸ್ತಕ ಭಂಡಾರಕ್ಕೆ ರಾಜಮನ್ನಣೆ ದೊರೆತು ಭೋಜನಾಲಯದ ಬಳಿ ಅದಕ್ಕೊಂದು ಸ್ಥಳಾವಕಾಶವೂ ಲಭ್ಯವಾಯಿತು. ಸಂಘದ ಕಚೇರಿಗೂ ವಿಸ್ತೃತ ಜಾಗ ದೊರೆತು ಅದರ ನವೀಕರಣವೂ ಆಯಿತು.

ಆದರೆ ಮುಂದೆ ಕನ್ನಡದ ಕಾವು ಆರಿದ ಕೆಲದಿನಗಳಲ್ಲಿ ಭೋಜನಾಲಯದ ನವೀಕರಣದ ಸಬೂಬು ನೀಡಿ ಗ್ರಂಥಾಲಯವಿದ್ದ ಜಾಗವನ್ನು ತೆರವುಗೊಳಿಸಿ ದೂರವಿರುವ ಈಗಿನ ಸ್ಥಳಕ್ಕೆ ವರ್ಗಾಯಿಸಲಾಯಿತು. ಅದು ಸ್ಥಳಾಂತರಗೊಂಡು ನಿಯಮಿತವಾಗಿ ತೆರೆಯದೇ ಇದ್ದುದರ ಕಾರಣ ಸದಸ್ಯರಲ್ಲಿ ಆಸಕ್ತಿಯೂ ಮೊಟಕುಗೊಂಡಿತು.

ಇಕ್ಕಟ್ಟಾದ ಕೊಠಡಿಯಲ್ಲಿದ್ದ ಈ ಗ್ರಂಥಾಲಯದ ಉಸ್ತುವಾರಿಯನ್ನು ೨೦೦೨ರಲ್ಲಿ ನನಗೆ ವಹಿಸಲಾಯಿತು. ಹಿಂದಿನವರು ಮಾಡಿದ್ದ ಎಲ್ಲ ಸುಕಾರ್ಯಗಳನ್ನೂ ಸ್ಮರಿಸುತ್ತಾ ಈ ಪುಸ್ತಕಭಂಡಾರಕ್ಕೆ ಕಾಯಕಲ್ಪ ನೀಡುವ ಕೆಲಸದಲ್ಲಿ ವಿನೀತನಾಗಿ ತೊಡಗಿಕೊಂಡೆ. ಅಲ್ಲಿ ಪುಸ್ತಕಗಳನ್ನು ಬಿಟ್ಟರೆ ಬೇರೆ ಏನಿತ್ತು ಎನ್ನುವುದಕ್ಕಿಂತ ಏನಿಲ್ಲ ಎಂಬುದೇ ದೊಡ್ಡ ಪಟ್ಟಿಯಾಗಿತ್ತು. ಕಸದಬುಟ್ಟಿ, ಪೊರಕೆ, ಇಂಕ್ಪ್ಯಾಡ್, ಸ್ಟ್ಯಾಪ್ಲರ್, ಪಂಚ್, ಬಿಳಿಕಾಗದ, ಕಡತ, ಗೋಂದು ಬಾಟ್ಲಿಯಿಂದ ಮೊದಲುಗೊಂಡು ವಿದ್ಯುತ್ ವ್ಯವಸ್ಥೆ, ದೀಪವ್ಯವಸ್ಥೆಯನ್ನು ಮಾಡಿಕೊಂಡಿದ್ದಾಯಿತು.

ಅಲ್ಲಿ ಏನೆಲ್ಲ ಪುಸ್ತಕಗಳಿವೆ ಎಂಥ ಪ್ರಕಾರಗಳಿವೆ ಎಂಬುದರ ಪಟ್ಟೀಕರಣ ಆಗಬೇಕಿತ್ತು. ಗೆದ್ದಲು ಹತ್ತಿದ್ದವಕ್ಕೆ ಕಾಯಕಲ್ಪ ಆಗಬೇಕಿತ್ತು. ಬಾಕಿ ಉಳಿಸಿಕೊಂಡವರಿಂದ ಪುಸ್ತಕಗಳನ್ನು ವಾಪಸು ಪಡೆಯಬೇಕಿತ್ತು. ಪಟ್ಟೀಕರಣದ ಕೆಲಸದಲ್ಲಿ ಶ್ರೀಯುತರಾದ ಎಂ ಜಗನ್ನಾಥ ಹಾಗೂ ದಿವಂಗತ ಪಂಡಿತ ಚನಗೊಂಡರವರು ನನಗೆ ನೆರವಾದರು. ಪುಸ್ತಕಗಳನ್ನು ಬಹುದಿನಗಳಿಂದ ಬಾಕಿ ಉಳಿಸಿಕೊಂಡಿದ್ದ ನೂರಕ್ಕೂ ಹೆಚ್ಚು ಸದಸ್ಯರ ಮನವೊಲಿಸಿ ಪುಸ್ತಕಗಳನ್ನು ಹಿಂದಕ್ಕೆ ಪಡೆಯಲಾಯಿತು. ಇದ್ದ ಎಲ್ಲ ಪುಸ್ತಕಗಳ ಪಟ್ಟಿಯನ್ನು ಸದಸ್ಯರ ಅವಗಾಹನೆಗಾಗಿ ಮುದ್ರಿಸಿ ಇಡಲಾಯಿತು.

ಆಗ ಪುಸ್ತಕಾಲಯದಲ್ಲಿ ಸ್ತ್ರೀ ಸಾಹಿತ್ಯ, ಪತ್ತೇದಾರಿ ಸಾಹಿತ್ಯ, ಸಾಮಾಜಿಕ ಕಾದಂಬರಿ ಇತ್ಯಾದಿ ಹಳೆಯ ಶೈಲಿಯ ಸಾಹಿತ್ಯ ಪ್ರಕಾರವೇ ತುಂಬಿದ್ದವು. ಅದರಲ್ಲಿ ಕಥಾಸಂಕಲನ, ವಿಜ್ಞಾನ, ಹಾಸ್ಯ, ಕಾವ್ಯ, ಅಧ್ಯಾತ್ಮ, ಆರೋಗ್ಯ, ವ್ಯಕ್ತಿಚಿತ್ರ, ನಾಟಕ, ಇತಿಹಾಸ, ಮನೋವಿಕಾಸ, ಸಾಹಿತ್ಯಚಿಂತನೆ, ಸಂಸ್ಕೃತಿ, ಪರಿಸರ ಇತ್ಯಾದಿ ಸಮೃದ್ಧ ಪ್ರಕಾರಗಳನ್ನು ತುಂಬಿಸಿ ಗ್ರಂಥಾಲಯವನ್ನು ಪ್ರತಿದಿನವೂ ತೆರೆಯುವಂತೆ ಮಾಡಿ ಓದುಗರನ್ನು ಸೆಳೆಯುವ ಪ್ರಯತ್ನ ಆಗಬೇಕು ಎಂಬುದನ್ನು ಮನಗಂಡೆ. ಈ ಅವಿರತ ಪ್ರಯತ್ನದಿಂದಾಗಿ ಇಂದು ಗ್ರಂಥಾಲಯದಲ್ಲಿ ಸಂಘದ ಹಣದಿಂದ ಖರೀದಿಸಿದ್ದು, ಆಡಳಿತವರ್ಗದಿಂದ ಪಡೆದುಕೊಂಡಿದ್ದು ಮಾತ್ರವಲ್ಲದೆ ಉದಾರ ದಾನಿಗಳಿಂದ ಸಂಗ್ರಹೀತವಾದುವು ಸೇರಿ ಒಟ್ಟಾರೆ ಈ ಪುಸ್ತಕಗಳ ಸಂಖ್ಯೆ ೩೫೦೦ ಮುಟ್ಟಿದೆ. ಈ ವರ್ಷ ಕನ್ನಡ ಪುಸ್ತಕ ಪ್ರಾಧಿಕಾರವು ಸುಮಾರು ೨೫೦೦೦ ರೂಪಾಯಿಗಳ ಮೌಲ್ಯದ ೧೮೦ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದೆ. ಗ್ರಂಥಾಲಯಕ್ಕೆ ಹೊಸಪುಸ್ತಕ ಬಂದ ಕೂಡಲೇ ಅದಕ್ಕೊಂದು ದಪ್ಪರಟ್ಟಿನ ಹೊದಿಕೆ ಹಾಕಿ ನಂಬರು ಬರೆದು ಠಸ್ಸೆ ಒತ್ತಿ ಪಟ್ಟೀಕರಣಗೊಳಿಸಿ ಇಡಲಾಗುತ್ತದೆ.

ಗ್ರಂಥಾಲಯಕ್ಕೆ ಗಣಕಯಂತ್ರದ ಕೊಡುಗೆ ಅನುಪಮ ಹಾಗೂ ಅನನ್ಯ. ಆದರೆ ನಮಗೆ ಕೊಟ್ಟ ಗಣಕಯಂತ್ರವು ತೀರಾ ಹಳೆಯದಾಗಿತ್ತಲ್ಲದೆ ಯಾರೋ ಬೇಡವೆಂದು ಮಡಗಿದ್ದನ್ನು ನಮ್ಮ ಸುಪರ್ದಿಗೆ ಕೊಡಲಾಗಿತ್ತು. ಕ್ರಮೇಣ ಅದರ ಬಿಡಿಭಾಗಗಳನ್ನು ಮೇಲ್ದರ್ಜೆಗೇರಿಸಿ, ಅಚ್ಚುಕಟ್ಟಾದ ಮೇಜೊಂದನ್ನು ಹೊಂದಿಸಿದ್ದಾಯಿತು. ಇಷ್ಟೆಲ್ಲ ಇದ್ದರೂ ಮಾನ್ಯ ಸದಸ್ಯರು ಕೇಳುವ ಪುಸ್ತಕಗಳನ್ನು ಸುಲಭದಲ್ಲಿ ಹುಡುಕಿ ತೆಗೆಯಲಾಗುತ್ತಿರಲಿಲ್ಲ. ಒಬ್ಬರು ಹುಡುಕುವಾಗ ಇನ್ನೊಬ್ಬರು ಕಾಯುತ್ತಾ ನಿಲ್ಲುವುದು ಸಾಮಾನ್ಯ ಸಂಗತಿಯಾಗಿತ್ತು. ಇರುವ ಅಲ್ಪಕಾಲದಲ್ಲಿ ಎಲ್ಲರಿಗೂ ಸಮರ್ಥಸೇವೆ ನೀಡಲು ಸಾಧ್ಯವಾಗುತ್ತಿರಲಿಲ್ಲ. ಜಾಗದ ಕೊರತೆ ಇರುವುದರಿಂದ ಸದಸ್ಯರು ಹೊರಗೆ ಕಾಯುತ್ತಾ ನಿಲ್ಲುವುದು ಸಹಜವಾಗಿತ್ತು. ಮಹಿಳಾ ಸದಸ್ಯರು ಈ ಜನಜಂಗುಳಿಯ ಬಗ್ಗೆ ದೂರುತ್ತಿದ್ದರು. ನಮ್ಮ ಸಂಘದ ಕಾರ್ಯದರ್ಶಿ ಎಂ ಜಯರಾಜಯ್ಯನವರ ಅವಿರತ ಓಡಾಟದ ಫಲವಾಗಿ ಗ್ರಂಥಾಲಯ ಕಟ್ಟಡ ಈಗ ವಿಸ್ತಾರಗೊಂಡಿದೆ.

ಮೊದಲು ಇದ್ದ ನಾಲ್ಕು ಮರದ ಕಪಾಟುಗಳ ಸ್ಥಾನದಲ್ಲಿ ಇಂದು ಹದಿನೆಂಟು ಉಕ್ಕಿನ ಕಪಾಟುಗಳಿವೆ. ಪುಸ್ತಕಾಲಯದ ಗಣಕಯಂತ್ರದಲ್ಲಿ ಎಲ್ಲ ೩೫೦೦ ಪುಸ್ತಕಗಳ ಹಾಗೂ ೧೫೦೦ ಸದಸ್ಯರ ಹೆಸರು ಹಾಗೂ ವಿವರಗಳನ್ನು ದಾಖಲು ಮಾಡಲಾಗಿದೆ. ಪುಸ್ತಕದ ಮೌಲ್ಯ, ಲೇಖಕ ಪ್ರಕಾಶಕರ ದಾನಿಗಳ ಹೆಸರು, ಪ್ರಕಾರ ವಿಂಗಡನೆ, ಎರವಲು ಹೋಗಿದ್ದರೆ ಯಾರು ತೆಗೆದುಕೊಂಡಿದ್ದಾರೆ ಎಂಬ ವಿವರ, ಮೊದಲೇ ಓದಿ ಆಗಿದ್ದರೆ ಅದರ ಬಗೆಗಿನ ಮಾಹಿತಿ, ಸದಸ್ಯರ ವಿಭಾಗ ಬಿಲ್ಲೆ ಮತ್ತು ದೂರವಾಣಿ ಸಂಖ್ಯೆ ಇತ್ಯಾದಿಗಳನ್ನು ಕ್ಷಣದಲ್ಲೇ ತಿಳಿಯಲು ಸಂಪೂರ್ಣ ಕನ್ನಡಮಯವಾದ ಒಂದು ಉಪಯುಕ್ತ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಈ ಅಚ್ಚಗನ್ನಡ ತಂತ್ರಾಂಶದ ಸಹಾಯದಿಂದ ಪುಸ್ತಕದ ವಿತರಣೆ ಅತ್ಯಂತ ಸುಲಭಸಾಧ್ಯವಾಗಿದೆ. ಪುಸ್ತಕದ ಶೀರ್ಷಿಕೆ ಗೊತ್ತಿಲ್ಲ ಮಗುವಿಗೆ ಸಂಬಂಧಿಸಿದ್ದು ಎಂದರೆ ಸಾಕು, ಬೆರಳ ತುದಿಗಳಲ್ಲೇ ನಿಮ್ಮ ಮಗು, ತಾಯಿ ಮಗು, ಮಗುವಿಗೊಂದು ಹೆಸರು ಈ ರೀತಿಯಾಗಿ ’ಮಗು’ ಎಂಬ ಪದ ಇರುವ ಎಲ್ಲ ಶೀರ್ಷಿಕೆಗಳನ್ನೂ ತೋರಿಸುತ್ತದೆ. ಪುಸ್ತಕದ ಹೆಸರಿನೊಂದಿಗೆ ಲೇಖಕರು ಅನುವಾದಕರು ಪ್ರಕಾಶಕರು ಬೆಲೆ ಲಭ್ಯವಿದೆ/ಲಭ್ಯವಿಲ್ಲ ಇತ್ಯಾದಿ ಮಾಹಿತಿಗಳು ಕಾಣುತ್ತವೆ. ಪುಸ್ತಕಗಳನ್ನು ಪ್ರಕಾರಾದಿ, ಲೇಖಕರಾದಿ, ಶೀರ್ಷಿಕೆಯಾದಿ ಹುಡುಕಬಹುದು. ಮೊದಲೇ ಓದಿದ್ದ ಪುಸ್ತಕವೊಂದನ್ನು ಆಯ್ಕೆ ಮಾಡಿಕೊಂಡಾಗ ಈಗಾಗಲೇ ಅದನ್ನು ಓದಿದ್ದೀರಿ ಮತ್ತೊಮ್ಮೆ ಬೇಕೇ ಎಂಬಂತಹ ಪ್ರಶ್ನೆಗಳೂ ಕಾಣಬರುತ್ತವೆ. ಅವಧಿ ಮೀರಿ ಹಿಂದಿರುಗಿಸಿದಾಗ ಇಂತಿಷ್ಟು ದಂಡ ಪಾವತಿಸಿ ಎಂಬ ಸಂದೇಶವೂ ಕಾಣುತ್ತದೆ.
ಈ ತಂತ್ರಾಂಶವನ್ನು ರೂಪಿಸಿದ ಕರ್ತವ್ಯ ಐ ಟಿ ಸಲ್ಯೂಷನ್ಸಿನ ಸಿದ್ಧಾರೂಢ ಮತ್ತು ಅವರ ಗೆಳೆಯರು ಸದಾ ಸ್ಮರಣೀಯರು. ಏಕೆಂದರೆ ಈ ಗ್ರಂಥಾಲಯ ಕಾರ್ಯನಿರತವಾಗುವುದು ಪ್ರತಿದಿನ ಊಟದ ವೇಳೆಯಲ್ಲಿ ಮಾತ್ರ. ಪುಸ್ತಕ ಹಿಡಿದು ಬರುವವರ ದೊಡ್ಡ ದಂಡು ಲಭ್ಯವಿರುವ ಅಲ್ಪ ಸಮಯದಲ್ಲಿ ತನ್ನ ಅಭೀಷ್ಟೆ ಪೂರೈಸಿಕೊಳ್ಳಲು ಈ ತಂತ್ರಾಂಶ ಗರಿಷ್ಠ ಸಹಾಯ ನೀಡುತ್ತದೆ.

ಕಾರ್ಖಾನೆಯ ಮೊದಲ ಮನುಷ್ಯನಿಂದ ಹಿಡಿದು ಅತ್ಯಂತ ಕೆಳಮನುಷ್ಯನವರೆಗೂ ಎಲ್ಲರೂ ಸದಸ್ಯರಾಗಿರುವ ಈ ಗ್ರಂಥಾಲಯದ ಗುರುತಿನ ಚೀಟಿಯು ಅತ್ಯಂತ ವಿಶಿಷ್ಟವಾಗಿದೆ. ಅದರಲ್ಲಿ ಸದಸ್ಯನ ಹೆಸರು ಸಂಖ್ಯೆ ವಿಭಾಗ ಮತ್ತು ದೂರವಾಣಿಗಳು ಕನ್ನಡದಲ್ಲಿ ಮುದ್ರಿತವಾಗಿವೆ. ಜ್ಞಾನಪೀಠ ಪುರಸ್ಕೃತ ಕನ್ನಡಿಗರ ವರ್ಣಚಿತ್ರದ ಕೊಲಾಜ್ ಇದೆ. ಹಿಂಬದಿಯಲ್ಲಿ ನಿಬಂಧನೆಗಳ ಜೊತೆಗೆ ಕನ್ನಡದ ಅಂಕಿಗಳ ಪರಿಚಯವಿದೆ. ಕನ್ನಡೇತರರೂ ಈ ಗುರುತಿನ ಚೀಟಿಯನ್ನು ತಮ್ಮ ಕಿಸೆಯಲ್ಲಿಟ್ಟುಕೊಳ್ಳುವುದಕ್ಕೆ ತುಂಬಾ ಹೆಮ್ಮೆ ಪಡುತ್ತಾರೆ.

ಶುಕ್ರವಾರ, ಅಕ್ಟೋಬರ್ 30, 2009

ಶೆಟ್ಟಿಹಳ್ಳಿಗೆ ಭೇಟಿ

ಹೀಗೊಮ್ಮೆ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಒಂದು ಲೇಖನ ಪ್ರಕಟವಾಗಿತ್ತು. ಹಾಸನದ ಹಳ್ಳಿಗಾಡಿನ ದಾರಿಯಲ್ಲಿ ಪ್ರಯಾಣ ಹೊರಟಿದ್ದ ಒಬ್ಬಾತ ಇಲ್ಲೊಂದು ಚರ್ಚ್ ಕಟ್ಟಡವಿದೆ, ಬಹುಶಃ ಜಲಾಶಯದಲ್ಲಿ ಮುಳುಗಡೆಯಾಗಿದ್ದುದು ಈಗ ನೀರು ಕಡಿಮೆಯಾಗಿರುವುದರಿಂದ ಮೇಲೆದ್ದಿದೆ, ಕಟ್ಟಡ ಮತ್ತು ಅದರ ರಚನೆ ತುಂಬಾ ಚೆನ್ನಾಗಿದೆ ಎಂದು ಬರೆದುಕೊಂಡಿದ್ದ. ಆ ಲೇಖನವನ್ನು ನನಗೆ ತೋರಿಸಿದ ಮಿತ್ರ ಫ್ರಾನ್ಸಿಸ್ ಎಂ ನಂದಗಾಂವ್ ಅವರಿಗೆ ಓ ಇದು ಶೆಟ್ಟಿಹಳ್ಳಿ ಚರ್ಚು ಎಂದು ಹೇಳಿದೆ. ಅದರ ಮುಂದಿನ ವಾರ ಅಂದರೆ ಜನವರಿ ೧೫ರಂದು ಸಂಕ್ರಾಂತಿ ರಜೆಯಿದ್ದುದರಿಂದ ನಾವು ಆ ಚರ್ಚನ್ನು ನೋಡಿಕೊಂಡು ಬರೋಣವೆಂದು ಹೊರಟೇ ಬಿಟ್ಟೆವು. ಗುರುತು ಪರಿಚಯವಿಲ್ಲದ ಆ ಊರಿಗೆ ತೆರಳಿ ದಾರಿಯಲ್ಲಿ ಸಿಕ್ಕ ಯಾರುಯಾರನ್ನೋ ಆ ಚರ್ಚು ಮತ್ತು ಅದರ ಇತಿಹಾಸಗಳ ಕುರಿತು ಕೆದಕಿ ಕೇಳತೊಡಗಿದೆವು. ಮೊದಲು ಸಿಕ್ಕ ಒಬ್ಬ ವ್ಯಕ್ತಿ ತನ್ನನ್ನು ಎಂಥದೋ ಶೆಟ್ಟಿ ಎಂದು ಪರಿಚಯಿಸಿಕೊಂಡ. ನಾವು ಹೀಗೆ ಪತ್ರಿಕೆಯ ಲೇಖನ ನೋಡಿಬಂದೆವು ಎಂದು ಹೇಳಿಕೊಳ್ಳುವಷ್ಟರಲ್ಲಿ ಆತನೇ ಮುಂದುವರಿದು “ಗೊತ್ತು ಗೊತ್ತು, ನಿಮ್ಮನ್ನು ನೋಡಿದರೇ ಗೊತ್ತಾಗುತ್ತೆ, ನಿಮಗೆ ಬೇಕಾದ ಮಾಹಿತಿಯೆಲ್ಲ ನನ್ನಲ್ಲಿದೆ, ನನಗೆ ಗೊತ್ತಿದ್ದಷ್ಟು ಈ ಊರಿನಲ್ಲಿ ಬೇರೆ ಯಾರಿಗೂ ಗೊತ್ತಿಲ್ಲ, ಆದರೆ ಆ ಮಾಹಿತಿಯೆಲ್ಲ ನಿಮಗೆ ಏಕೆ? ನೀವು ಹಿಂದೂಗಳಲ್ಲವೇ ನಿಮಗೆ ಇವೆಲ್ಲ ಯಾಕೆ? ಯಾವುದಕ್ಕೂ ನೀವು ನಮ್ಮ ಊರಿನ ಪಾದ್ರಿಯನ್ನು ಕಂಡರೆ ಒಳಿತು” ಎಂದ. ನಾವು ಹಿಂದೂಗಳಲ್ಲ ಕ್ರೈಸ್ತರೇ ಎಂದು ಹೇಳಿಕೊಂಡರೂ ಆತ ತಲೆದೂಗಲಿಲ್ಲ. ಪಾದ್ರಿ ಮನೆಗೆ ಹೋಗಿ ನೋಡಿದರೆ ಅವರು ಇರಲಿಲ್ಲ, ಮಗ್ಗೆಗೆ ಯಾವುದೋ ಹಬ್ಬದಾಚರಣೆಗೆ ತೆರಳಿದ್ದಾರೆಂದು ಅಡುಗೆಯವರು ಹೇಳಿದರು. ಆ ಊರಿನ ಬಗ್ಗೆ ಎಲ್ಲ ಗೊತ್ತೆಂದು ಹೇಳಿಕೊಂಡ ಆ ವ್ಯಕ್ತಿಯನ್ನು ಮತ್ತೆ ಹುಡುಕಿಕೊಂಡು ಹೋದರೆ ಆತ ಕೌಟುಂಬಿಕ ಸಮಸ್ಯೆಯಲ್ಲಿ ಮುಳುಗಿದ್ದನಲ್ಲದೆ ಸ್ವಲ್ಪ ಗುಂಡು ಹಾಕಿಕೊಂಡೂ ಇದ್ದ.
ಅಷ್ಟರಲ್ಲಿ ನಮ್ಮ ಹಿಂದೆ ಸುತ್ತುತ್ತಿದ್ದ ಒಂದೆರಡು ಹುಡುಗರು ನಮ್ಮ ಕಥೆ ಕೇಳಿ ಮುಳುಗಡೆಯ ದೇವಾಲಯಕ್ಕೆ ದಾರಿ ತೋರಿದರು. ಕಾಲೆಳೆಯುತ್ತಾ ಅಲ್ಲಿಗೆ ತಲಪಿದ ನಾವು ವಿವಿಧ ಕೋನಗಳಲ್ಲಿ ಆ ದೇವಾಲಯದ ಫೋಟೋಗಳನ್ನು ತೆಗೆದೆವು. ಅನತಿ ದೂರದಲ್ಲೇ ಹರಿಯುತ್ತಿದ್ದ ಹೇಮಾವತಿ ನದಿಯಲ್ಲಿ ಕೆಲ ಹೆಂಗಳೆಯರು ಬಟ್ಟೆ ತೊಳೆಯುತ್ತಿದ್ದರು. ಅಲ್ಲಿ ಒಂದರೆಡು ಶಿಲುಬೆಕಲ್ಲುಗಳು ಗೋಚರಿಸಿದವು. ಅವುಗಳ ಹತ್ತಿರಕ್ಕೆ ಹೋಗಿ ನೋಡಿದಾಗ ನೀರಿನಲ್ಲಿದ್ದಾಕೆ ಕಾಲೂರಿಕೊಂಡು ಬಟ್ಟೆ ಬಡಿಯುತ್ತಿದ್ದ ಬಂಡೆಯೂ ಶಿಲುಬೆಯಂತೆ ಕಂಡಿತು. “ಅದು ಶಿಲುಬೆಯಲ್ಲವೇ?” ಎಂದಾಕೆಯನ್ನು ಕೇಳಿದಾಗ ಆಕೆ ಭಯಾಶ್ಚರ್ಯಗಳಿಂದ “ಹಾ! ಶಿಲುಬೆ!!” ಎಂದು ಚೀರಿ ನೆಗೆದಳು. ವಾಸ್ತವವಾಗಿ ಅದು ಶಿಲುಬೆಕಲ್ಲೇ ಆಗಿತ್ತು. ನಿಧಾನವಾಗಿ ಅದನ್ನು ದಡಕ್ಕೆ ಸರಿಸಿ ಅದರ ಮೇಲಿನ ಅಕ್ಷರಗಳನ್ನು ಕೂಡಿಸಿ ಕೂಡಿಸಿ ಓದಿದೆವು.
ಅಲ್ಲಿಂದ ಹಿಂದಿರುಗಿ ಬರುವಾಗ ದಾರಿಯಲ್ಲಿದ್ದ ಒಂದು ಲಿಂಗಾಯತ ಹೋಟೆಲಿನಲ್ಲಿ ಸಿಕ್ಕಿದ್ದು ತಿಂದು ಚರ್ಚ್‌ ಬಳಿ ಬಂದು ನೋಡಿದರೆ ಆ ಪಾದ್ರಿ ಇನ್ನೂ ಬಂದಿರಲಿಲ್ಲ. ಅದಾಗಲೇ ನಾಲ್ಕು ಗಂಟೆಯಾಗುತ್ತಾ ಬಂದಿತ್ತು. ಊರ ಕೆಲವರ ಬಳಿ ಊರ ಸಂಪ್ರದಾಯಗಳ ಬಗ್ಗೆ, ಕ್ರಿಸ್ಮಸ್ ಮುಂತಾದ ಹಬ್ಬಗಳ ಬಗ್ಗೆ, ಕೋಲಾಟ ಮುಂತಾದ ಜಾನಪದ ಕಲೆಗಳ ಬಗ್ಗೆ ಕೇಳಿದೆವು. ಆದರೆ ಎಲ್ಲೂ ನಾವು ಯಾರೊಂದಿಗೂ ಆತ್ಮೀಯತೆ ಬೆಳೆಸಿಕೊಳ್ಳಲಾಗಲಿಲ್ಲ ಎಂಬುದೇ ಚಿಂತೆ. ಮೆಲ್ಲನೆ ಅಲ್ಲಿಂದ ಜಾಗ ಖಾಲಿ ಮಾಡಿ ಹಾಸನಕ್ಕೆ ತೆರಳಿ ತಂಗಿದೆವು.
ಮರುದಿನ ಬಸ್ ಹಿಡಿದು ಮತ್ತೆ ಶೆಟ್ಟಿಹಳ್ಳಿಗೆ ಬರುವ ವೇಳೆಗೆ ಅಲ್ಲಿನ ಪಾದ್ರಿಯವರಾದ ವಲೆರಿಯನ್ ಕ್ಯಾಸ್ತೆಲಿನೋ ಅವರು ಬಂದಿದ್ದರು. ನಮ್ಮ ಮಾತುಗಳನ್ನು ಕೇಳಿದ ಅವರು ತಾವು ಚಿಕ್ಕಮಗಳೂರಿನ ಶಾಲೆಯಲ್ಲಿ ಬಹಳವರ್ಷಗಳ ಕಾಲ ಶಿಕ್ಷಕರಾಗಿದ್ದುದಾಗಿಯೂ ಧರ್ಮಕೇಂದ್ರಗಳ ಕೆಲಸಕ್ಕೆ ಹೊಸಬರೆಂದೂ ಹೇಳಿದರಲ್ಲದೆ ಶೆಟ್ಟಿಹಳ್ಳಿಯ ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ತಮಗೂ ಆಸಕ್ತಿಯಿದೆ ಎಂಬುದಾಗಿಯೂ ಉತ್ಸಾಹ ತೋರಿದರು. ಕ್ರಿಸ್ತದೀಕ್ಷೆಯ ರಿಜಿಸ್ಟರು ತೆರೆದು ಮೊದಲು ದೀಕ್ಷೆ ಪಡೆದವರ ವಿವರ ನೋಡಿದರು. ಅದು ಹಾಸನದಲ್ಲಿ ನೆಲೆಸಿದ್ದ ಒಬ್ಬ ತಮಿಳು ವ್ಯಕ್ತಿಯದಾಗಿತ್ತು. ಹೀಗೇ ಮಾತನಾಡುತ್ತಾ ಆ ಶಿಲುಬೆಕಲ್ಲಿನ ಪ್ರಸ್ತಾಪ ಬಂತು. ತಟ್ಟನೇ ಅವರು ನಡೆಯಿರಿ ಅದನ್ನು ನೋಡೋಣ ಎಂದು ಎದ್ದೇಬಿಟ್ಟರು. ತಮ್ಮ ಸ್ಕೂಟರ್‍ ಸ್ಟಾರ್ಟ್ ಮಾಡಿ ನಮ್ಮಲ್ಲೊಬ್ಬರನ್ನು ತಮ್ಮೊಂದಿಗೆ ಕರೆದರಲ್ಲದೆ ಊರಿನ ಒಬ್ಬಾತನಿಗೆ ಹೇಳಿ ಕಳುಹಿಸಿ ಆತನನ್ನೂ ಮೋಟರ್‍ ಸೈಕಲ್ ತರಲು ಹೇಳಿ ಹಳೇ ದೇವಸ್ಥಾನದ ಕಡೆಗೆ ಹೊರಟರು. ಆ ಶಿಲುಬೆಯನ್ನು ವೀಕ್ಷಿಸುತ್ತಿರುವಾಗ ಯಾರೋ ಒಬ್ಬಾತ ಪೂರ್ವದಿಕ್ಕಿನ ಕಡೆ ಕೈ ತೋರಿ ಅಲ್ಲಿ ದೂರದಲ್ಲಿ ಊರ ಸಮಾಧಿ ಭೂಮಿಯಿತ್ತು. ಈಗ ನೀರಿಲ್ಲದಿರುವುದರಿಂದ ಸಮಾಧಿಗಳು ಕಾಣುತ್ತಿರಬಹುದು ಎಂದ.
ಕೂಡಲೇ ಸ್ವಾಮಿಗಳು ನಡೆಯಿರಿ ಅಲ್ಲಿಗೂ ಹೋಗೋಣ ಎಂದು ನಮ್ಮನ್ನೂ ಹೊರಡಿಸಿದರು. ಆದರೆ ಆ ಸಮಾಧಿ ಭೂಮಿಯ ಸಮೀಪ ಹೋಗುತ್ತಿದ್ದಂತೆ ಅಲ್ಲಿ ವಿಶಾಲವಾದ ನದಿ ಪಾತ್ರವನ್ನು ದಾಟಬೇಕಾದ ಅನಿವಾರ್ಯತೆ ಎದುರಾಯಿತು. ಯಾರೋ ಒಬ್ಬಾತ ಅಲ್ಲಿ ಒರಗಿಸಿದ್ದ ತೆಪ್ಪವನ್ನು ಎಳೆದು ತಂದು ನಮ್ಮನ್ನು ನದಿ ದಾಟಿಸಿದ. ಅಲ್ಲೂ ಸಹಾ ಅರೆಬರೆ ಮುರಿದ ಶಿಲುಬೆಗಳು ಅವುಗಳ ಮೇಲಿನ ಅಕ್ಷರಗಳು ಕಂಡವು. ಆದರೆ ಮೊತ್ತಮೊದಲು ನದಿಯಲ್ಲಿ ಸಿಕ್ಕ ಶಿಲುಬೆಕಲ್ಲಿನಷ್ಟು ಆಕರ್ಷಕವಾದ ಯಾವುವೂ ಅಲ್ಲಿರಲಿಲ್ಲ. ಅಲ್ಲಿಂದ ಹಿಂದಿರುಗಿ ಬರುತ್ತಿರುವಾಗ ಆ ಸ್ವಾಮಿಯವರು ಆ ಶಿಲುಬೆಕಲ್ಲು ಅಲ್ಲಿರುವುದು ಬೇಡ, ಹೊಸ ದೇವಾಲಯದ ಆವರಣಕ್ಕೆ ತರೋಣ ಎಂದರು. ನಮ್ಮ ಅಭಿಪ್ರಾಯವೂ ಅದೇ ಆಗಿತ್ತು.
ಪಾದ್ರಿಗಳ ಮನೆಯಲ್ಲಿ ಬಿಸಿ ಊಟ ಸಿದ್ಧವಾಗಿತ್ತು. ಊಟಕ್ಕೆ ನಮ್ಮನ್ನೂ ಆಹ್ವಾನಿಸಿದ ಪಾದ್ರಿಗಳು ಆಮೇಲೆ ವಿಶ್ರಾಂತಿಗೆ ತೆರಳಿದಾಗ ನಾವು ಹೊರಬಂದು ಮತ್ತೆ ಊರ ಜನರನ್ನು ಭೇಟಿಯಾಗಲು ಹೊರಟೆವು. ಗುಡಿಯ ಎದುರಿನ ಮನೆಗೆ ಭೇಟಿ ಕೊಟ್ಟು ಅಲ್ಲಿ ವೃದ್ಧ ದಂಪತಿಯನ್ನು ಕಂಡೆವು. ಆ ವೃದ್ಧೆ ಬಾಯಿತುಂಬಾ ಮಾತನಾಡಿದರು. ಆದರೆ ವೃದ್ಧ ಮಾತಿಗೊಪ್ಪಲಿಲ್ಲ. ‘ನಾವು ಯಾತಕ್ಕೂ ಓಗಾಕುಲ್ಲ, ಯಾರ ಕುಟ್ಟೆಯೂ ಮಾತಾಡಕ್ಕುಲ್ಲ, ಪೂಜೆ ನೋಡ್ತೀವಿ, ಬತ್ತೀವಿ, ಅಷ್ಟೇಯ’ ಅಂದರು.
ನಂತರದ ಮನೆ ಹ್ಯಾರಿ ರಾವ್ ಎಂಬಾತನದು. ಅವರಂತೂ ನಮ್ಮೂರಿನ ಚರಿತ್ರೆ ಕಟ್ಟಿಕೊಂಡು ನಿಮಗೇನಾಗಬೇಕು, ಅದರಿಂದ ನಿಮಗೇನು ಲಾಭ? ಎಂದರು. ನಾವೇ ಒಂದಷ್ಟು ಅವರ ಊರಿನ ಮಹತ್ತು ಹಿರಿಮೆ ಗರಿಮೆಗಳ ಬಗ್ಗೆ ಹೇಳಿ, ಪಾದ್ರಿಗಳ ಆಸಕ್ತಿಯ ಬಗ್ಗೆಯೂ ವಿವರಿಸಿ ಹೇಳಿ ಅದಕ್ಕೆ ನಿಮ್ಮಂಥವರಿಂದ ಪ್ರೋತ್ಸಾಹ ಅಗತ್ಯ ಎಂದೆವು. ನದೀ ತೀರದ ಆ ಶಿಲುಬೆಕಲ್ಲನ್ನು ಊರೊಳಕ್ಕೆ ತರಲು ಪಾದ್ರಿಗಳಿಗೆ ಸಹಕರಿಸಿ ಎಂದೆವು. ಅದಕ್ಕಾತ ಊರೊಳಗೆ ಯಾರೂ ತಮಗೆ ಸ್ಪಂದಿಸುವುದಿಲ್ಲ ಎಂದು ಅಲವತ್ತುಕೊಂಡರು.
ಹೀಗೇ ಅಡ್ಡಾಡುತ್ತಾ “ಸ್ನೇಹಜ್ಯೋತಿ” ಸಂಪಾದಕ ಪಾದ್ರಿ ಅದೇ ಊರಿನವರೆಂದು ನೆನಪಿಸಿಕೊಂಡು ಅವರ ಮನೆ ಹುಡುಕುತ್ತಾ ಹೊರಟೆವು. ಅವರ ತಾಯಿಯವರು ತುಂಬಾ ಅದರದಿಂದ ಮಾತನಾಡಿಸಿದರು. ವಿಚಿತ್ರವೆಂದರೆ ಆ ಪಾದ್ರಿಯ ತಮ್ಮನೊಂದಿಗೆ ನಾವು ಮಾತಿಗೆ ತೊಡಗಿದ ಕೂಡಲೇ ಈಗ ಬರುತ್ತೇನೆಂದು ಹೊರಹೋದ ಆತ ಮರಳಿ ಬರಲೇ ಇಲ್ಲ.
ಇದು ಶೆಟ್ಟಿಹಳ್ಳಿಗೆ ನಮ್ಮ ಮೊದಲ ಭೇಟಿ.

ಮಂಗಳವಾರ, ಸೆಪ್ಟೆಂಬರ್ 1, 2009

ಕುಂಕುಮ ಮತ್ತು ಬಳೆ

“ಸಮಾಜದ ಕಟ್ಟಕಡೆಯವನಿಗೆ ನೀವು ಏನನ್ನು ಮಾಡುತ್ತೀರೋ ಅದನ್ನು ನನಗೇ ಮಾಡಿದಂತೆ” ಎಂದ ಯೇಸುಕ್ರಿಸ್ತನ ಆದೇಶದಂತೆ ಕ್ರೈಸ್ತಧರ್ಮೀಯರು ತಮ್ಮ ಕ್ರಿಯಾತ್ಮಕ ಚಟುವಟಿಕೆಗಳಿಂದ ಕ್ರಿಸ್ತಪ್ರೀತಿಯನ್ನು ಎಲ್ಲರಿಗೂ ಭೇದಭಾವವಿಲ್ಲದೆ ಹಂಚುತ್ತಿದ್ದಾರೆ. ಆದರೆ ಅವರ ಚಟುವಟಿಕೆಗಳು ಹಿಂದೂ ಮೂಲಭೂತವಾದಿಗಳಿಗೆ ಮತಾಂತರದ ಹುನ್ನಾರದಂತೆ ತೋರುತ್ತಿವೆ. ಇತ್ತೀಚಿನ ದಿನಗಳಲ್ಲಿ ಕ್ರೈಸ್ತಧರ್ಮ ಮತ್ತು ಕ್ರೈಸ್ತ ನಡವಳಿಕೆಗಳ ಬಗ್ಗೆ ಇವರಲ್ಲಿ ಅಸಹನೆ ಹೆಚ್ಚುತ್ತಿರುವುದನ್ನು ನೋಡುತ್ತಲೇ ಇದ್ದೇವೆ. ಸಂಘಪರಿವಾರದ ಕೆಲ ಸಂಘಟನೆಗಳು ಏನೂ ಅರಿಯದ ಯುವಜನರಲ್ಲಿ ಕ್ರೈಸ್ತಧರ್ಮದ ಬಗ್ಗೆ ವಿಷಬೀಜವನ್ನು ಬಿತ್ತುತ್ತಾ ಇದ್ದಾರೆ. ಸುಳ್ಳುಸುಳ್ಳೇ ಆರೋಪಗಳನ್ನು ಕ್ರೈಸ್ತಧರ್ಮೀಯರ ಬಗ್ಗೆ ಆರೋಪಿಸುತ್ತಾ ಇವರು ಅಮಾಯಕರಲ್ಲಿ ಕಿಚ್ಚು ಹೊತ್ತಿಸುತ್ತಾರೆ.

ಈ ಸಂಘಪರಿವಾರದವರು ಕ್ರೈಸ್ತರ ಬಗ್ಗೆ ಹೊಂದಿರುವ ತಪ್ಪು ಪರಿಕಲ್ಪನೆಗಳಲ್ಲಿ ಈ ಕುಂಕುಮ ಬಳೆ ವ್ಯಾಖ್ಯಾನವೂ ಒಂದು. ಕ್ರೈಸ್ತ ವಿದ್ಯಾಸಂಸ್ಥೆಗಳಲ್ಲಿ ಹೆಣ್ಣುಮಕ್ಕಳಿಗೆ ಕುಂಕುಮ ಹಚ್ಚಿಕೊಳ್ಳಲು ಅಥವಾ ಬಳೆ ತೊಟ್ಟುಕೊಳ್ಳಲು ನಿರ್ಬಂಧವಿದೆ ಎಂಬುದು ಅಂಥ ಒಂದು ವಾದ. ದಿನಾಂಕ ೨೬-೦೮-೨೦೦೯ರ ಪ್ರಜಾವಾಣಿ ವಾಚಕರವಾಣಿಯಲ್ಲಿ ಒಬ್ಬರು ಬರಗೂರು ರಾಮಚಂದ್ರಪ್ಪನವರ ಹೆಸರನ್ನು ಉಲ್ಲೇಖಿಸುತ್ತಾ ಹೀಗೆ ಹೇಳಿಕೊಂಡಿದ್ದಾರೆ.
http://www.prajavani.net/Content/Aug262009/netmail20090825143307.asp

ಕುಂಕುಮ ಬಳೆಗಳನ್ನು ಧರಿಸಬೇಡಿ ಎನ್ನುವ ನಿರ್ಬಂಧ ಕ್ರೈಸ್ತಸಂಸ್ಥೆಗಳಲ್ಲಿ ಮಾತ್ರವಲ್ಲ ಇತರ ಧರ್ಮೀಯರು ನಡೆಸುವ ಶಾಲೆಗಳಲ್ಲೂ ಕೇಂದ್ರೀಯ ವಿದ್ಯಾಲಯಗಳಲ್ಲೂ ಇದೆ. ಸರ್ಕಾರದ ನಿಯಮದಂತೆ ಯೂನಿಫಾರ್ಮಿಟಿ ಪಾಲಿಸುವುದಕ್ಕೋಸ್ಕರವೂ ಮಕ್ಕಳಲ್ಲಿ ಶಿಸ್ತು ತರುವ ಕಾರಣಕ್ಕಾಗಿಯೂ ಇಂತ ನಿರ್ಬಂಧಗಳನ್ನು ಹಾಕಿಕೊಳ್ಳಬೇಕಾಗುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಇನ್ನೂ ಕೆಲವು ಶಾಲೆಗಳಲ್ಲಿ ಗೋರಂಟಿ ಹಚ್ಚಿಕೊಳ್ಳಬಾರದು, ಉಗುರುಬಣ್ಣ ಹಚ್ಚಿಕೊಳ್ಳಬಾರದು, ಸರ ಧರಿಸಬಾರದು, ಬೆಲೆಬಾಳುವ ಆಭರಣ ಧರಿಸಬಾರದು, ಕೆಂಪು ರಿಬ್ಬನ್ ಕಟ್ಟಬೇಕು, ಬಿಳಿ ಕಾಲುಚೀಲ ಧರಿಸಬೇಕು ಹೀಗೆ ಏನೇನೋ ಶಿಸ್ತಿನ ಕ್ರಮಗಳಿವೆ.

ಬರೀ ಕುಂಕುಮವಷ್ಟನ್ನೇ ಮತ್ತು ಕ್ರೈಸ್ತಶಾಲೆಗಳಷ್ಟನ್ನೇ ಈ ಮತಾಂಧರು ಜಾತಿಧರ್ಮಗಳ ದೃಷ್ಟಿಯಿಂದ ನೋಡುತ್ತಾರೆ. ಅಂದಹಾಗೇ ಕುಂಕುಮ ಮತ್ತು ಬಳೆಗಳು ಜಾತಿಧರ್ಮಗಳ ಸೂಚಕವೋ ಸಂಸ್ಕೃತಿಯ ಸೂಚಕವೋ ಎನ್ನುವುದೇ ಒಂದು ಯಕ್ಷಪ್ರಶ್ನೆ. ಹಾಗೆ ನೋಡಿದರೆ ಕ್ರೈಸ್ತರು ತಮ್ಮ ದೈನಂದಿನ ಬದುಕಿನಲ್ಲಿ ಕುಂಕುಮ ಬಳೆಗಳನ್ನು ನಿಷೇಧಿಸಿಲ್ಲ. ಎಲ್ಲೋ ಕೆಲವರು ವ್ರತ ನೇಮಗಳ ನೆಪದಲ್ಲಿ ಅವನ್ನು ಧರಿಸದೇ ಇರಬಹುದು. ಇನ್ನು ಕ್ರೈಸ್ತ ಸಂನ್ಯಾಸಿನಿಯರು ಮದುವೆಯಾಗದೆ ಕ್ರಿಸ್ತಸೇವೆಯಲ್ಲಿ ನಿರತರಾಗುವುದರಿಂದ ಅವರಿಗೆ ಕುಂಕುಮ ಬಳೆ ಮಾತ್ರವಲ್ಲ ಪ್ರಸಾಧನ ಸಾಧನಗಳು, ವೈವಿಧ್ಯಮಯ ಉಡುಪುಗಳು, ಆಭರಣಗಳು ಎಲ್ಲವೂ ವರ್ಜ್ಯ.

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗಂಡನಿರುವ ಸ್ತ್ರೀಯರು ಮಾತ್ರವೇ ಕುಂಕುಮ ಮತ್ತು ಬಳೆಗಳನ್ನು ಧರಿಸುವುದು ವಾಡಿಕೆ. ನಮಗೆ ತಿಳಿದಿರುವಂತೆ ಮದುವೆಯಾದ ಹೆಣ್ಣುಮಕ್ಕಳು ತಮ್ಮ ವಿವಾಹದ ಸಂಕೇತವಾಗಿ ಕುಂಕುಮ ಧರಿಸುತ್ತಾರೆ ಹಾಗೂ ಮದುವೆಯಾಗದ ಹೆಣ್ಣುಮಕ್ಕಳು ಸಣ್ಣದೊಂದು ಬೊಟ್ಟು ಇಟ್ಟುಕೊಳ್ಳುತ್ತಾರೆ. ಶಾಲೆಗಳಲ್ಲಿ ಓದುವ ಹೆಣ್ಣುಮಕ್ಕಳು ಇನ್ನೂ ಮದುವೆಯೇ ಆಗಿಲ್ಲದಿರುವುದರಿಂದ ಅವರಿಗೆ ಕುಂಕುಮ ಮತ್ತು ಬಳೆಗಳನ್ನು ಧರಿಸಲು ಹೇಗೆ ತಾನೇ ಹೇಳಲಾದೀತು? ಮೊದಲಿಗೆ ಸಂಘಪರಿವಾರದ ಈ ಜನರು ತಮ್ಮ ಜನಾಂಗದಲ್ಲಿ ವಿಧವೆಯರಾದ ಹೆಣ್ಣುಮಕ್ಕಳಿಗೆ ಬಳೆ ಮತ್ತು ಕುಂಕುಮ ತೊಡುವುದಕ್ಕೆ ಅವಕಾಶ ಕೊಡಲಿ, ಆಮೇಲೆ ಮದುವೆಯಾಗದ ಹೆಣ್ಣುಮಕ್ಕಳ ಬಗ್ಗೆ ಮಾತನಾಡೋಣ. ಈಚೀಚೆಗೆ ಮದುವೆಯಾದ ಹೊಸಪೀಳಿಗೆ ಹಿಂದೂ ಹೆಣ್ಣುಮಕ್ಕಳು ತಾಳಿಯನ್ನು ಕಳಚಿ ತಮ್ಮ ಜೀನ್ಸ್ ಪ್ಯಾಂಟಿನ ಜೇಬಿನಲ್ಲಿಟ್ಟುಕೊಂಡು ಓಡಾಡುತ್ತಾರಲ್ಲ, ಅದರ ಬಗ್ಗೆ ಇವರು ಏನು ಹೇಳುತ್ತಾರೋ?

ಗುರುವಾರ, ಜೂನ್ 18, 2009

ಜನಾಂಗದ್ವೇಷ

ಆ ದಿನ ಮೇ ೩೧ ಭಾನುವಾರ ಆಸ್ಟ್ರೇಲಿಯಾದ ಮೆಲ್ ಬೋರ್ನಿನಲ್ಲಿ ಎಷ್ಟೋ ಸಹಸ್ರ ಜನ ಬೀದಿಗಿಳಿದು “ನೀವು ಜನಾಂಗದ್ವೇಷಿಗಳು” ಎಂದು ಕೂಗುತ್ತಿದ್ದ ಆ ಘೋಷಣೆ ಅಲೆಯಲೆಯಾಗಿ ತೇಲಿಬರುತ್ತಿದ್ದರೆ ನನಗೆ ಅದೊಂದು ಮಧುರ ನಿನಾದದಂತೆ ಕೇಳಿಸಿತು. ಏಕೆಂದರೆ ಅದೊಂದು ನ್ಯಾಯಯುತ ಬೇಡಿಕೆ. ಒಂದು ಬಹುಸಮುದಾಯದ, ಬಹುಸಂಸ್ಕೃತಿಯ ನಾಡಿನಲ್ಲಿ ಶಾಂತಿ ಸೌಹಾರ್ದದಿಂದ ಬಾಳಬೇಕೆನ್ನುವ ಆ ಉತ್ಕಟ ಅಭಿಲಾಷೆಯನ್ನು ಹತ್ತಿಕ್ಕುವ ಒಂದು ಅಭದ್ರತೆಯ ಭಾವವನ್ನು ಆವರಿಸಿಕೊಂಡ ಮನಃಸ್ಥಿತಿಯಲ್ಲಿ ಸ್ವಾತಂತ್ರ್ಯದ ಆ ಕೂಗು ಯಾರಿಗೂ ಕೂಡಾ ಕರ್ಕಶವಾಗಿ ಕೇಳಿಸಲೇಬಾರದು.

ಇತ್ತ ನಮ್ಮಲ್ಲಿ ನಮ್ಮ ವೃತ್ತಪತ್ರಿಕೆಗಳೂ ಇತರ ಮಾಧ್ಯಮಗಳೂ ಅಲ್ಲಿನ ನಮ್ಮ ಸೋದರರ (ಹೆಚ್ಚಿನವರು ವಿದ್ಯಾರ್ಥಿಗಳು) ವ್ಯಥೆಯನ್ನು ಮನಕರಗುವಂತೆ ಚಿತ್ರಿಸಿ ಎಲ್ಲರ ಹೃದಯಗಳನ್ನೂ ತೇವವಾಗಿಸಿದರು. ಆ ವಿವರಗಳು ಭಾವನಾತ್ಮಕವಾಗಿದ್ದರೂ ಹೃದಯವಿದ್ರಾವಕವಾಗಿದ್ದರೂ ನಮ್ಮೊಳಗಿನ ನಮ್ಮನ್ನು ತಟ್ಟಿ ಎಬ್ಬಿಸಿ ಆ ನಮ್ಮ ಸೋದರರಿಗಾಗಿ ಮನ ಮಿಡಿಯುವಂತೆ ಮಾಡಿದವು. ಆ ವರದಿಗಳನ್ನು ನೋಡುತ್ತಿದ್ದಂತೆ ನಮ್ಮ ರಕ್ತ ಕುದಿಯುತ್ತಿದೆ. ಜನಾಂಗದ್ವೇಷ, ಶೋಷಣೆ, ತುಳಿತ, ವರ್ಣಬೇಧ, ವರ್ಗಬೇಧ, ಜಾತಿವಾದ, ಅಸ್ಪೃಶ್ಯತೆ, ತಾರತಮ್ಯಗಳನ್ನು ನಾವು ಸಹಿಸೆವು ಎಂದು ಜಗತ್ತಿಗೆ ಕೂಗಿ ಸಾರಲು ಬಾಯಿ ತಹತಹಿಸುತ್ತಿದೆ. ನಾಗರಿಕ ಸಮುದಾಯವೊಂದು ಇಂಥ ಸಮಸ್ಯೆಗಳನ್ನು ಮೊಳಕೆಯಲ್ಲೇ ಚಿವುಟಬೇಕೆಂದೂ ಅದುವೇ ಆಡಳಿತ ದಕ್ಷತೆಯೆಂದೂ, ಮುತ್ಸದ್ದಿತನವೆಂದೂ ಅನ್ನಿಸುತ್ತಿದೆ.

ನಮ್ಮವರೇ ಆದ ರಾಜಠಾಕ್ರೆ ’ಉತ್ತರಭಾರತೀಯರೇ ನಮ್ಮ ಮುಂಬೈ ಬಿಟ್ಟು ತೊಲಗಿ’ ಎಂದಾಗ ನಮಗದು ಸಂಬಂಧಿಸಿದ ಸಂಗತಿಯೇ ಆಗಿರಲಿಲ್ಲ. ಆದರೆ ಇಂದೇಕೆ ನಾವು ದೂರದ ಆಸ್ಟ್ರೇಲಿಯಾದಲ್ಲಿ ಹಿಂಸೆಗೊಳಗಾದ ಆ ತೆಲುಗು ಅಥವಾ ಪಂಜಾಬಿಗಳಿಗೆ ಮರುಗಬೇಕು? ನಮ್ಮ ಹಲ ರಾಜ್ಯಗಳಲ್ಲ್ಲಿರುವ ಕ್ರೈಸ್ತರ ಬದುಕು ಸಹಾ ಇದಕ್ಕಿಂತ ಬೇರೆಯಿಲ್ಲ. ಅಷ್ಟಲ್ಲದೆ ಅವರನ್ನು ತೆರೆಮರೆಯಲ್ಲಿ ಹೆದರಿಸುವ ಹಿಂಸಿಸುವ ಕೃತ್ಯಗಳಂತೂ ನಡೆದೇ ಇವೆ. ಇನ್ನು ದಲಿತರ ಪಾಡಂತೂ ನಾಯಿಗಿಂತಲೂ ಕಡೆ.

ಒರಿಸ್ಸಾದ ನಾಗರಿಕ ಜನ ಎನಿಸಿಕೊಂಡವರು ಬುಡಕಟ್ಟು ಜನಾಂಗದವರ ಮೇಲೆ ನಡೆಸಿದ ಬರ್ಬರ ಕೃತ್ಯವಂತೂ ಅಕ್ಷಮ್ಯ. ದೂರ ನಿಂತು ಸೊಂಟ ಬಗ್ಗಿಸಿ ಹಣಕ್ಕಾಗಿ ಹಲ್ಲುಗಿಂಜುತ್ತಿದ್ದ ಗಿರಿಜನರು ತಲೆಯೆತ್ತಿ ಓಡಾಡುವುದನ್ನು ನೋಡಿದಾಗ ಆ (ಅ)ನಾಗರಿಕರಿಗೆ ಏನೋ ಒಂಥರಾ ಇರುಸುಮುರುಸು. ಆದಿವಾಸಿಗಳ ಬದುಕನ್ನು ಮೇಲೆತ್ತುವುದಕ್ಕಿಂತ ಮೊದಲು ಅವರಿಗೆ ಗೋಹತ್ಯೆ ಕಾಣುತ್ತದೆ, ಆದಿವಾಸಿಗಳ ಬೆತ್ತಲೆ ದೇಹದ ಮೇಲೆ ಒಳ್ಳೆ ಉಡುಪು ಕಾಣುತ್ತದೆ, ಮತಾಂತರ ಕಾಣುತ್ತದೆ. ಹೀಗೆ ಒರಿಸ್ಸಾದಲ್ಲಿ ಈ ಅಮಾಯಕ ಆದಿವಾಸಿ ಕ್ರೈಸ್ತರನ್ನೇ ಗುರಿಯಾಗಿಸಿಕೊಂಡು ನಡೆಸಿದ ದೌರ್ಜನ್ಯಕ್ಕೆ ಅನೇಕರು ಬಲಿಯಾಗಿ, ಹೆಂಗಸರು ಅಪಮಾನಿತರಾಗಿ, ಮಕ್ಕಳು ಅನಾಥರಾದರು. ಅವರ ಮನೆಮಠಗಳೆಲ್ಲವೂ ಬೆಂಕಿಯಲ್ಲಿ ಬೆಂದುಹೋದವು, ಅವರ ಬದುಕಿನ ಅನ್ನವನ್ನು ನೆಲಕ್ಕೆ ಚೆಲ್ಲಲಾಯಿತು. ನಿತ್ಯವೂ ದುಃಸ್ವಪ್ನಗಳನ್ನು ಕಾಣುತ್ತಾ ಆ ಜನ ನಿರಾಶ್ರಿತ ಶಿಬಿರಗಳಲ್ಲಿ ದಿನ ದೂಡುತ್ತಿದ್ದಾರೆ.

ಇಂದು ಆಸ್ಟ್ರೇಲಿಯಾದಲ್ಲಿ ನಡೆದಿರುವ ಜನಾಂಗ ಹಿಂಸೆಯನ್ನು ಒಕ್ಕೊರಲಿನಿಂದ ಖಂಡಿಸುವ ನಾವುಗಳು ನಮ್ಮದೇ ಮನೆಯಲ್ಲಿ ನಮ್ಮದೇ ದೇಶದಲ್ಲಿ ನಡೆದಿರುವ ಜನಾಂಗದ್ವೇಷವನ್ನು ನೋಡಿಯೂ ನೋಡದಂತಿದ್ದೇವೆ ಅಲ್ಲವೇ?

ಮಂಗಳವಾರ, ಮೇ 12, 2009

ಆಸ್ಪತ್ರೆಯ ಕಿಟಕಿ

(ಅಂತರ್ಜಾಲದಲ್ಲಿ ತೇಲಿ ಬಂದ ಒಂದು ಪುಟದ ಇಂಗ್ಲಿಷ್ ಕಥೆಯ ರೂಪಾಂತರ)

ಆಸ್ಪತ್ರೆಯ ಜನರಲ್ ವಾರ್ಡು ಎಂದರೆ ಮೊದಲಿಗೆ ನಮ್ಮ ಕಣ್ಣಿಗೆ ಕಾಣುವುದು ಸಾಲಾಗಿ ಜೋಡಿಸಿದ ಬಿಳಿ ಮಂಚಗಳು, ಅವುಗಳ ಮೇಲೆ ಮಲಗಿರುವ ರೋಗಿಗಳು, ಬಿಳಿ ಹೊದಿಕೆ, ಕೆಂಪು ಕಂಬಳಿ, ರೋಗನಿದಾನದ ವಿವರಪಟ್ಟಿ, ಬಾಟಲಿಯಿಂದ ನಳಿಕೆಯ ಮೂಲಕ ನಿಧಾನವಾಗಿ ರೋಗಿಯ ಮೈಗೆ ಇಳಿಯುತ್ತಿರುವ ಗ್ಲೂಕೋಸು, ಮಂಚದ ಪಕ್ಕದ ಸಣ್ಣ ಕಪಾಟು, ಅದರ ಮೇಲೆ ಥರ್ಮಾಸ್ ಫ್ಲಾಸ್ಕು, ಕಾಫಿಲೋಟ, ಬ್ರೆಡ್ಡು. ಕೆಲ ರೋಗಿಗಳು ನೋವಿನಿಂದ ನರಳುತ್ತಿದ್ದರೆ, ಇನ್ನು ಕೆಲವರು ಆರಾಮವಾಗಿ ಆಸ್ಪತ್ರೆಗೆ ಹೊಂದಿಕೊಂಡಿದ್ದಾರೆ ಒಂದಿಬ್ಬರು ತಮ್ಮ ಮಂಚದಿಂದ ಬೇರೊಂದು ಮಂಚದ ಬಳಿ ಬಂದು ಕುಳಿತು ಹರಟೆಯಲ್ಲಿ ತೊಡಗಿದ್ದಾರೆ. ಇನ್ನು ರೋಗಿಗಳನ್ನು ನೋಡಲು ಬರುವ ಹಿತೈಷಿಗಳ ದಂಡು ಬಂದರಂತೂ ಆ ವಾರ್ಡು ಒಂದು ವಠಾರವಾಗುತ್ತದೆ. ಪರಸ್ಪರ ಕುಶಲೋಪರಿ, ಊರು, ಮನೆ, ಮಕ್ಕಳು, ಮದುವೆ, ಆಸ್ತಿಪಾಸ್ತಿ ಒಟ್ಟಿನಲ್ಲಿ ಏನೆಲ್ಲ ವಿವರಗಳನ್ನು ಅಲ್ಲಿ ಕಲೆಹಾಕಬಹುದು.

ಆದರೆ ಒಂದು ವಿಷಯ ಮಾತ್ರ ಸತ್ಯ, ಆಸ್ಪತ್ರೆಯ ವಾರ್ಡುಗಳಲ್ಲಿ ಇಷ್ಟೆಲ್ಲ ಜನ ಸೇರಿ ಏನೆಲ್ಲ ಮಾತುಕತೆಯಾಡಿದರೂ ಅಲ್ಲಿ ಜಗಳವೆಂಬುದೇ ಇರುವುದಿಲ್ಲ. ಜಗಳ ಮಾಡಲು ಎರಡು ವಿರುದ್ಧ ಅನಿಸಿಕೆಗಳಿರಬೇಕಲ್ಲ. ಆದರೆ ರೋಗಿಗಳೂ ಸೇರಿದಂತೆ ಬಂದವರೆಲ್ಲರೂ ಸಮಾನ ಹೃದಯಿಗಳೇ ಆಗಿರುವುದರಿಂದ ಅಲ್ಲಿ ಜಗಳಕ್ಕೇ ಆಸ್ಪದವೇ ಇಲ್ಲ ಬಿಡಿ. ಜಗಳವೇನಿದ್ದರೂ ಆಸ್ಪತ್ರೆಯ ವೈದ್ಯರ ಮೇಲೆ, ನರ್ಸುಗಳ ಮೇಲೆ ಇಲ್ಲವೇ ಇನ್ಯಾರೋ ಸಿಬ್ಬಂದಿಯ ಮೇಲೆ ಮಾತ್ರ.

ಆದರೆ ಸ್ಪೆಷಲ್ ವಾರ್ಡಿನ ಬಿಂಕ ಬಿಗುಮಾನಗಳೇ ಬೇರೆ. ಜನರಲ್ ವಾರ್ಡಿನ ಗಜಿಬಿಜಿ ಇಲ್ಲಲ್ಲ. ಅಲ್ಲಿ ಎರಡು ಮಂಚಗಳಿದ್ದರೂ ಸಹ ರೋಗಿಗಳಾಗಲೀ ಬಂಧುಗಳಾಗಲೀ ತಾವಾಯಿತು ತಮ್ಮ ಪಾಡಾಯಿತು ಎಂಬಂತಿರುತ್ತಾರೆ. ಅಲ್ಲಿ ಡಿಗ್ನಿಟಿಯ ಪ್ರಶ್ನೆ ಬರುತ್ತದೆ. ಆದ್ದರಿಂದ ಅಲ್ಲಿ ಮೌನದ್ದೇ ಕಾರುಬಾರು.

ಹೀಗೆ ಒಂದು ಆಸ್ಪತ್ರೆಯ ವಿಶೇಷ ಕೊಠಡಿಯಲ್ಲಿ ಎರಡು ಮಂಚಗಳು. ಒಂದು ದಿನ ಆ ಕೊಠಡಿಗೆ ಮರಣಾವಸ್ಥೆ ತಲುಪಿ ದಿನವಿಡೀ ಮಲಗಿಯೇ ಇರಬೇಕಿದ್ದ ಇಬ್ಬರು ವಯಸ್ಸಾದ ರೋಗಿಗಳನ್ನು ತಂದು ಮಲಗಿಸಿದರು. ಇಬ್ಬರೂ ತುಂಬಾ ಚಿಂತಾಜನಕ ಸ್ಥಿತಿಯಲ್ಲಿದ್ದರು. ಒಬ್ಬಾತನಿಗೆ ಕುತ್ತಿಗೆಯ ಮೂಳೆ ಮುರಿದಿತ್ತು, ಇನ್ನೊಬ್ಬಾತನಿಗೂ ಅಂಥದೇ ಬೇರೊಂದು ತೊಂದರೆ, ಹಾಗಾಗಿ ಇಬ್ಬರಿಗೂ ಮಲಗಿದ್ದಲ್ಲಿಯೇ ಔಷಧೋಪಚಾರ ನಡೆದಿತ್ತು. ಅವರಲ್ಲಿ ಎರಡನೆಯ ರೋಗಿ ಮಾತ್ರ ತನ್ನ ಶ್ವಾಸಕೋಶದಲ್ಲಿ ಸೇರಿಕೊಳ್ಳುವ ನೀರನ್ನು ಬಸಿಯಲಿಕ್ಕಾಗಿ ದಿನದಲ್ಲಿ ಒಂದು ತಾಸು ಎತ್ತಿ ಕೂಡಿಸುತ್ತಿದ್ದರು.
ಆ ಕೊಠಡಿಯಲ್ಲಿ ಒಂದು ರೀತಿಯ ಭಾರವಾದ ನಿಶಬ್ದ ವಿರಮಿಸಿತ್ತು. ಆ ಕೊಠಡಿಗೆ ಸಂದರ್ಶಕರಾರೂ ಬರುತ್ತಿರಲಿಲ್ಲ. ಎಂದೋ ಒಮ್ಮೆ ದಾದಿ ಬಂದು ರೋಗಿಗಳತ್ತ ನೋಡಿ ಹೊದಿಕೆ ಸರಿಪಡಿಸಿ ಏನೂ ಮಾತನಾಡದೆ ಹೊರಟುಬಿಡುತ್ತಿದ್ದಳು. ಇನ್ನುಳಿದಂತೆ ಅಲ್ಲಿ ಭಯಂಕರ ಮೌನ ಆವರಿಸಿತ್ತು.
ನಿಧಾನವಾಗಿ ಆ ರೋಗಿಗಳು ಪರಸ್ಪರ ಪರಿಚಯ ಮಾಡಿಕೊಂಡರು. ವಿಚಿತ್ರವೆಂದರೆ ಅವರ ಮಾತುಗಳೆಲ್ಲವೂ ಸಾವಿನ ಕುರಿತೇ ಇದ್ದವು. ಆ ಕೊಠಡಿಯಲ್ಲಿ ಸಾವಿನ ನಿರೀಕ್ಷೆಯಿತ್ತು. ಒಂದು ರೀತಿಯಲ್ಲಿ ಅದು ಸಾವಿನ ಮನೆಯಂತೆಯೇ ಇತ್ತು. ಕ್ರಮೇಣ ಆ ಎರಡನೆಯವನಿಗೆ ಈ ಸಾವಿನ ಚಿಂತನೆಯಿಂದ ಹೊರಬರಬೇಕೆಂದು ಅನ್ನಿಸಿತು.

ಆ ಕೊಠಡಿಯಲ್ಲಿ ಒಂದೇ ಒಂದು ಕಿಟಕಿಯಿತ್ತು. ಶ್ವಾಸಕೋಶದ ಸ್ವಚ್ಛತೆಗಾಗಿ ಆ ರೋಗಿಯನ್ನು ಎತ್ತಿ ಕೂಡಿಸಿದಾಗ ಅವನು ಆ ಕಿಟಕಿಯಿಂದಾಚೆ ದೃಷ್ಟಿ ಹಾಯಿಸುತ್ತಿದ್ದ. ಅಲ್ಲಿ ತನಗೆ ಕಾಣುತ್ತಿದ್ದ ಹೊರಗಿನ ಪ್ರಪಂಚದ ಬಗ್ಗೆ ತನ್ನ ನೆರೆಯಾತ ರೋಗಿಗೆ ವಿವರಿಸುತ್ತಾ ಆ ಕೋಣೆಯೊಳಗೆ ಭಾವನೆಗಳನ್ನು ತುಂಬಿದ.
ಕಿಟಕಿಯಿಂದಾಚೆ ಕಾಣುವ ಸುಂದರ ಉದ್ಯಾನ, ಗಿಡಮರಗಳಲ್ಲಿ ಅರಳಿದ್ದ ಹೂಗಳು, ಹಕ್ಕಿಗಳ ಕಲರವ, ತೋಳುಗಳ ಬೆಸೆದು ನಡೆದಾಡುತ್ತಿರುವ ಯುವಜೋಡಿ, ತಳ್ಳುಗಾಡಿಯಲ್ಲಿ ಎಳೆಕಂದನನ್ನು ಕೊಂಡೊಯ್ಯುತ್ತಿರುವ ತರುಣಿ, ಐಸ್ಕ್ಯಾಂಡಿ ಚೀಪುತ್ತಿರುವ ಚಿಣ್ಣರು, ಕೈಜಾರಿದ ಬೆಲೂನಿನ ಹಿಂದೆ ಓಡುತ್ತಿರುವ ಪುಟ್ಟ ಹುಡುಗಿ, ತಿಳಿಗೊಳದಲ್ಲಿ ತೇಲುತ್ತಿರುವ ಹಂಸಗಳು, ಕಾಗದದ ದೋಣಿಗಳನ್ನು ನೀರಮೇಲೆ ತೇಲಿಸುತ್ತಿರುವ ಮಕ್ಕಳು ಇವನ್ನೆಲ್ಲ ಆತ ವರ್ಣಿಸುತ್ತಿದ್ದರೆ, ಪಾಪ ! ಕುತ್ತಿಗೆ ಮುರಿದು ಏಳಲಾಗದ ಸ್ಥಿತಿಯಲ್ಲಿ ಪವಡಿಸಿದ್ದ ಆ ಇನ್ನೊಬ್ಬ ರೋಗಿಗೆ ಭಾವನೆಗಳು ಪುಟಿದೇಳುತ್ತಿದ್ದವು. ಆತ ಮಲಗಿದಲ್ಲಿಯೇ ಕಣ್ಣು ಮುಚ್ಚಿಕೊಂಡು ಆ ದೃಶ್ಯಗಳನ್ನು ಆಸ್ವಾದಿಸುತ್ತಿದ್ದ.

ಅವರಿಬ್ಬರೂ ತಮ್ಮ ಬಾಲ್ಯ, ತಂದೆತಾಯಿಯರು, ಗೆಳೆಯರು ಇತ್ಯಾದಿಗಳ ಬಗ್ಗೆ ಮಾತನಾಡುತ್ತಿದ್ದರು. ತಾವು ಓದಿದ ಶಾಲೆಗಳ ಬಗ್ಗೆ, ಶಿಕ್ಷಕರ ಬಗ್ಗೆ ಮಾತನಾಡುತ್ತಾ ಇಬ್ಬರೂ ಸರ್ಕಾರದ ಕೆಲಸಕ್ಕೆ ಸೇರಿದ ಕುರಿತೂ ಅಲ್ಲಿನ ರಸಮಯ ಸನ್ನಿವೇಶಗಳ ಕುರಿತೂ ಹಂಚಿಕೊಳ್ಳುತ್ತಿದ್ದರು.

ನಿಜವಾಗಿಯೂ ಆ ಒಂದು ಗಂಟೆ ಹೇಗೆ ಸರಿದುಹೋಗುತ್ತಿತ್ತೋ ಏನೋ, ಆ ಒಂದು ಗಂಟೆ ವೇಳೆಗಾಗಿ ಮತ್ತೊಂದು ದಿನ ಕಾಯಬೇಕಿತ್ತು. ಏಳಲಾಗದ ಸ್ಥಿತಿಯಲ್ಲಿದ್ದ ವ್ಯಕ್ತಿ ಆ ಒಂದು ಗಂಟೆಗಾಗಿಯೇ ಕಾತರಿಸುತ್ತಿದ್ದ. ಹೀಗೆಯೇ ಹಲವಾರು ದಿನಗಳು ಸರಿದುಹೋದವು.

ಒಂದು ದಿನ ಅಲ್ಲಿ ಹಾದುಹೋಗುತ್ತಿದ್ದ ಜಾನಪದಜಾತ್ರೆಯ ಬಗ್ಗೆ ಆ ಕಿಟಕಿಯಾತ ವಿವರಿಸುತ್ತಿದ್ದ. ಕೀಲುಕುದುರೆಗಳು, ಸೋಮನಕುಣಿತ, ಪಟದಕುಣಿತ, ಡೊಳ್ಳುಕುಣಿತ, ಗೊರವರಕುಣಿತ, ಕಲಾವಿದರ ವೇಷಭೂಷಣಗಳು, ಡೊಳ್ಳು ತಮಟೆ ನಗಾರಿ ಚಂಡಮದ್ದಲೆಯ ಲಯಬದ್ಧ ಸದ್ದು, ಹಾದಿಯ ಇಕ್ಕೆಲಗಳಲ್ಲೂ ನಿಂತು ಕೈಬೀಸುತ್ತಿರುವ ಜನಸ್ತೋಮ . . . ಮಲಗಿದ್ದ ವ್ಯಕ್ತಿಗೆ ಯಾವ ಸದ್ದು ಕೇಳಿಸುತ್ತಿಲ್ಲವಾದರೂ ಆ ವೀಕ್ಷಕ ವಿವರಣೆಯಿಂದ ಎಲ್ಲವೂ ಒಳಗಣ್ಣಿಗೆ ನಿಚ್ಚಳವಾಗಿ ತೋರುತ್ತಿತ್ತು. ಹೊಸ ನಿರೀಕ್ಷೆಯ ಕಾರಣದಿಂದ ಆತ ಕ್ರಮೇಣ ಗುಣವಾಗತೊಡಗಿದ. ಅವನ ದೇಹದಲ್ಲಿ ಹೊಸಚೈತನ್ಯ ತುಂಬುತ್ತಿತ್ತು.

ದಾದಿ ಒಂದು ಬೆಳಗ್ಗೆ ರೋಗಿಗಳ ಮೈ ಒರೆಸಲು ನೀರು ತಂದಾಗ ಆ ಕಿಟಕಿಯ ಮನುಷ್ಯ ಚಿರನಿದ್ರೆಗೆ ಶರಣಾಗಿದ್ದ. ದುಃಖಭಾವದಿಂದ ಆಕೆ ಅವನಮುಖದ ಮೇಲೆ ಮುಸುಕೆಳೆದು ಆಳುಗಳನ್ನು ಕರೆದು ಶವವನ್ನು ತೆರವುಗೊಳಿಸಿದಳು.

ಇವೆಲ್ಲ ಮುಗಿದ ನಂತರ ಆ ಇನ್ನೊಬ್ಬ ರೋಗಿಯು ದಾದಿಯನ್ನು ಕುರಿತು ತನ್ನ ಮಂಚವನ್ನು ಆ ಕಿಟಕಿಯ ಬದಿಗೆ ಸರಿಸುವಂತೆ ವಿನಂತಿಸಿದ. ಆಕೆ ಸಂತೋಷದಿಂದ ಒಪ್ಪಿ ಮಂಚವನ್ನು ಸರಿಸಿ ತೃಪ್ತಿಯಾಯಿತೇ ಎನ್ನುತ್ತಾ ಮಂದಹಾಸ ಬೀರಿ ಹೋದಳು.

ಏಳಲಾಗದ ಸ್ಥಿತಿಯಲ್ಲಿದ್ದ ಆ ವ್ಯಕ್ತಿಗೆ ಆ ಕಿಟಕಿಯಿಂದಾಚೆಗಿನ ಪ್ರಪಂಚವನ್ನು ಕಾಣಬೇಕೆನ್ನುವ ತವಕದಿಂದ ಹೊಸ ಶಕ್ತಿ ಬಂದಂತಾಗಿತ್ತು. ಮೆಲ್ಲನೆ ಆತ ಬಲಮಗ್ಗುಲಿಗೆ ಹೊರಳಲೆತ್ನಿಸಿದ. ನಿಧಾನವಾಗಿ ಸ್ವಲ್ಪಸ್ವಲ್ಪವೇ ಎದ್ದ. ಆಶ್ಚರ್ಯ! ಅವನ ಕುತ್ತಿಗೆ ಎಲುಬಿಗೆ ಬಲ ಬಂದಿತ್ತು. ಆತ ತನ್ನ ಕುತ್ತಿಗೆಯನ್ನು ಅತ್ತಿತ್ತ ಅಲುಗಾಡಿಸಿದ, ಏನೂ ನೋವೆನಿಸಲಿಲ್ಲ, ಸರಾಗವಾಗಿ ಆತ ತಲೆಯಾಡಿಸಬಹುದಾಗಿತ್ತು. ಕಿಟಕಿಯಿಂದಾಚೆ ನೋಡಿ ಹೊರಗಿನ ಪ್ರಪಂಚವನ್ನು ಕಣ್ಣು ತುಂಬಿಕೊಳ್ಳಬೇಕೆಂಬ ಆತನ ಬಹುನಿರೀಕ್ಷೆಯ ಕನಸು ಇಂದು ನನಸಾಗಲಿತ್ತು.

ಕಿಟಕಿಯ ಹೊರಗೆ ಅವನು ದೃಷ್ಟಿ ಹಾಯಿಸಿದ. ಆದರೆ . . ಆದರೆ . . ಅಲ್ಲಿ ಬಿಳಿ ಗೋಡೆಯ ಹೊರತು ಇನ್ನೇನೂ ಕಾಣುತ್ತಿರಲಿಲ್ಲ. ಆ ಮನುಷ್ಯನಿಗೆ ತಳಮಳವಾಯಿತು. ಮತ್ತೆ ಮತ್ತೆ ದೃಷ್ಟಿಸಿ ನೋಡಿದ. ಊಹೂಂ ಅದು ಬರೀ ಗೋಡೆಯಷ್ಟೆ, ಇನ್ನೇನೂ ಅಲ್ಲಿರಲಿಲ್ಲ. ಆತನ ಕನಸುಗಳ ಕಾಣ್ಕೆಗೆ ನಿರಾಶೆಯ ಗೋಡೆ ಅಡ್ಡಬಂದಿತ್ತು.

ದಾದಿಯನ್ನು ಕೇಳಿದಾಗ ಆಕೆ ಹೇಳಿದ್ದಿಷ್ಟು. "ನಿಜ ಹೇಳಬೇಕೆಂದರೆ ಅಲ್ಲಿ ಗೋಡೆಯ ಹೊರತು ಇನ್ನೇನೂ ಇಲ್ಲ. ಮತ್ತೊಂದು ಸಂಗತಿಯೆಂದರೆ ನಿಮಗೆ ಇಷ್ಟು ದಿನವೂ ಆ ದೃಶ್ಯಗಳನ್ನು ವರ್ಣರಂಜಿತವಾಗಿ ವಿವರಿಸುತ್ತಿದ್ದನಲ್ಲ ಆ ಮನುಷ್ಯ ಕುರುಡನಾಗಿದ್ದ. ಈ ಗೋಡೆಯನ್ನೂ ಆತ ಕಂಡಿರಲಾರ. ನೀವು ಗುಣಹೊಂದಿದ್ದು ಆತನ ಮಾತುಗಳಿಂದ, ಆತನ ವರ್ಣನೆಯಿಂದಲೇ ಹೊರತು ನಮ್ಮ ಔಷಧಿಗಳಿಂದಲ್ಲ."
ಹೌದಲ್ಲವೇ, ಕಾಣದ ನಿರೀಕ್ಷೆಯೇ ನಮ್ಮ ಬದುಕನ್ನು ನಡೆಸುತ್ತೆ.

ಗುರುವಾರ, ಏಪ್ರಿಲ್ 16, 2009

ಬೆಳಕಿನ ಹಬ್ಬ ಈಸ್ಟರ್

ಅಂದು ಶುಭಶುಕ್ರವಾರದ ಮರುದಿನ ಪವಿತ್ರಶನಿವಾರದ ರಾತ್ರಿ ಸುಮಾರು ಹನ್ನೊಂದೂವರೆಯ ವೇಳೆ. ಕ್ರೈಸ್ತಭಕ್ತಾದಿಗಳು ಒಬ್ಬೊಬ್ಬರಾಗಿ ಚರ್ಚಿನ ಬಳಿಬಂದು ಸೇರುತ್ತಿದ್ದರು. ಚರ್ಚಿನ ದೀಪಗಳನ್ನು ಉದ್ದೇಶಪೂರ್ವಕವಾಗಿ ಆರಿಸಿದ್ದರಿಂದ ವಾತಾವರಣ ಕತ್ತಲುಮಯವಾಗಿತ್ತು ಮಾತ್ರವಲ್ಲ ಅಲ್ಲೊಂದು ತೆರನ ನಿಗೂಢಮೌನ ಆವರಿಸಿತ್ತು. ಬಂದಿದ್ದ ಜನಗಳಾರೂ ಒಬ್ಬರೊಬ್ಬರನ್ನು ಗುರುತುಹಿಡಿದು ಕೈಕುಲುಕಿ ಕಿಲಕಿಲ ನಕ್ಕು ಉಭಯ ಕುಶಲೋಪರಿಗಳ ಮಾತಾಡುತ್ತಿರಲಿಲ್ಲ. ಅಲ್ಲ ಏನಾಗಿದೆ ಇವರಿಗೆಲ್ಲ? ವಿಚಿತ್ರವೇನೆಂದರೆ ಅಲ್ಲಿ ಸ್ಮಶಾನ ಮೌನವಿತ್ತಾದರೂ ಎಲ್ಲ ಜನ ಸುಂದರವಾದ ಹೊಸಬಟ್ಟೆಗಳನ್ನು ಧರಿಸಿ ಬಂದಿದ್ದರು.

ಆಗಸದಲ್ಲಿದ್ದ ಪೂರ್ಣಚಂದಿರ ಮಾತ್ರ ಇನ್ನು ಸ್ವಲ್ಪ ಹೊತ್ತಿನಲ್ಲಿ ಏನೋ ಒಂದು ಘಟನೆ ನಡೆಯಲಿಕ್ಕಿದೆ, ಅದಕ್ಕೆ ತಾನು ಸಾಕ್ಷಿಯಾಗಲಿದ್ದೇನೆ ಎಂಬಂತೆಯೋ ಅಥವಾ ತನಗೆ ಎಲ್ಲವೂ ತಿಳಿದಿದೆ ಎಂಬಂತೆಯೋ ಸಂತೃಪ್ತ ಭಾವದಿಂದ ಮುಖವನ್ನು ಅರಳಿಸಿಕೊಂಡಿದ್ದ. ಚಂದ್ರನ ಹಾಲುಕಿರಣಗಳು ಬಿದ್ದು ಚರ್ಚಿನ ಗೋಪುರ ಮಿನುಗುತ್ತಿತ್ತು. ಚರ್ಚನ್ನು ಮತ್ತು ಅಲ್ಲಿನ ಪರಿಸರವನ್ನು ಹಾಲಿನಿಂದ ತೊಳೆದಂತೆ ತೋರುತ್ತಿತ್ತು.

ಅಲ್ಲೇ ಮೂಲೆಯಲ್ಲಿ ದೊಡ್ಡ ಕಬ್ಬಿಣದ ಕಡಾಯಿಯಲ್ಲಿ ಕೆಂಡ ತುಂಬಿತ್ತು. ಮಂದಮಾರುತದ ಸಂಚಲನಕ್ಕೆ ಆ ಕೆಂಡ ನಿಗಿನಿಗಿ ಹೊಳೆಯುತ್ತಿತ್ತು. ಅಷ್ಟರಲ್ಲೇ ಕೆಂಪುಬಿಳಿ ನಿಲುವಂಗಿ ಧರಿಸಿದ ಪೂಜಾಕಿಂಕರ ಬಾಲಕನೊಬ್ಬ ಚರ್ಚಿನ ಬದಿಯಿಂದ ಮರದ ಜಾಗಟೆ ಬಾರಿಸುತ್ತಾ ಬಂದ. ಇದು ಭಕ್ತಾದಿಗಳನ್ನು ಪ್ರಾರ್ಥನೆಗೆ ಆಹ್ವಾನಿಸುವ ಪರಿ. ಭಕ್ತಾದಿಗಳನ್ನು ಆಹ್ವಾನಿಸಲು ಚರ್ಚಿನ ಗಂಟೆಯನ್ನು ಮೊಳಗಿಸಬೇಕಲ್ಲವೇ ಎಂದು ಕೇಳದಿರಿ. ಏಕೆಂದರೆ ಹಿಂದಿನ ದಿನ ಶುಭಶುಕ್ರವಾರ ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದ ದಿನವಲ್ಲವೇ? ಅಂದೇ ಚರ್ಚಿನ ಗೋಪುರದ ದೊಡ್ಡಗಂಟೆ ಇರಲಿ ಉಳಿದ ಕೈಹಿಡಿಯ ಹಿತ್ತಾಳೆ ಗೊಂಚಲು ಗಂಟೆಗಳ ಕಿಂಕಿಣಿ ನಾದವನ್ನೂ,ಗಾನವೃಂದದ ವಾದ್ಯಮೇಳಗಳನ್ನೂ ನಿಶ್ಯಬ್ದಗೊಳಿಸಲಾಗಿತ್ತು. ಅಕಸ್ಮಾತ್ ಕೈತಾಗಿ ಶಬ್ದ ಮಾಡದಿರಲೆಂದು ಆ ಕಿರುಗಂಟೆಗಳ ನಾಲಿಗೆಗೆ ಬಟ್ಟೆ ಸುತ್ತಲಾಗಿತ್ತು. ಹಾಗಾಗಿ ಇಂದು ಮರದ ಕೈಜಾಗಟೆಯದೇ ರಾಜ್ಯಭಾರ.

ಜಾಗಟೆಯ ಶಬ್ದವನ್ನು ಅನುಸರಿಸಿ ಚರ್ಚಿನ ಪಾದ್ರಿಗಳು ಬಂದರು. ಅವರು ಶುಭ್ರ ಬಿಳಿವಸ್ತ್ರದ ಮೇಲೆ ಅಚ್ಚ ಬಿಳಿಯ ಜರತಾರಿ ಮೇಲಂಗಿ ಧರಿಸಿ ಕೈಯಲ್ಲಿ ಆಳೆತ್ತರದ ಮೇಣದ ಬತ್ತಿ ಹಿಡಿದಿದ್ದರು. ಮುಂದಿನ ಪ್ರಕ್ರಿಯೆಗಾಗಿ ಜನರೆಲ್ಲ ಕೆಂಡದ ಕಡಾಯಿಯ ಬಳಿ ಸುತ್ತುವರಿದರು. ಸ್ವಾಮಿಗಳು ಪವಿತ್ರಬೈಬಲ್ ಶ್ಲೋಕವೊಂದನ್ನು ಪಠಿಸಿ ಆ ಕೆಂಡದ ಮೇಲೆ ಕೈಚಾಚಿದರು. “ಅಕಾರನೂ ನೀನೇ ಸಕಾರನೂ ನೀನೇ, ಆದಿಯೂ ನೀನೇ ಅಂತ್ಯವೂ ನೀನೇ, ಕೆಂಡದಲ್ಲಿ ಅಡಗಿದ ಜ್ಯೋತಿಯಂತೆ, ಮೊಟ್ಟೆಯಲ್ಲಿ ಅಡಗಿದ ಜೀವದ ಪಕ್ಷಿಯಂತೆ, ಮೃತ್ಯುಂಜಯನಾಗಿ ಎದ್ದು ಬಾರಾ ಯೇಸುಕ್ರಿಸ್ತ” ಎಂದೆನ್ನುತ್ತಾ ಕೆಂಡವನ್ನು ಊದಿ ಜ್ವಾಲೆಯನ್ನು ಪುಟಿದೆಬ್ಬಿಸಿದರು. ಆ ಜ್ವಾಲೆಯಿಂದ ಮೇಣದ ಬತ್ತಿಯನ್ನು ಹೊತ್ತಿಸಿ ಅದನ್ನು ಮೇಲೆತ್ತಿ ಹಿಡಿದು “ಇಗೋ! ಕ್ರಿಸ್ತನ ಬೆಳಕು” ಎಂದು ಸಾರಿದರು. ಭಕ್ತಾದಿಗಳೆಲ್ಲ ಭಾವಪರವಶರಾಗಿ “ದೇವರಿಗೆ ಕೃತಜ್ಞತೆ ಸಲ್ಲಲಿ” ಎಂದು ಉದ್ಘೋಷಿಸಿದರು.

ಹೀಗೆ ಆ ದೊಡ್ಡ ಮೇಣದ ಬತ್ತಿ ಪ್ರದೀಪವಾಗಿ ಭಕ್ತಾದಿಗಳೆಲ್ಲರ ಮೇಣದ ಬತ್ತಿಗಳಿಗೆ ಜ್ಯೋತಿಯನ್ನು ದಾಟಿಸಿತು. ಎಲ್ಲರೂ ತಂತಮ್ಮ ಕೈಗಳಲ್ಲಿ ಉರಿಯುವ ಮೋಂಬತ್ತಿಗಳನ್ನು ಹಿಡಿದು ದೇವಾಲಯದೊಳಕ್ಕೆ ಮೆರವಣಿಗೆಯಾಗಿ ಹೊರಟರು. ವಿದ್ಯುದ್ದೀಪಗಳನ್ನು ಹೊತ್ತಿಸಿರಲಿಲ್ಲವಾಗಿ ಆ ಒಳಾವರಣದಲ್ಲಿ ಮೋಂಬತ್ತಿಗಳ ಬೆಳಕು ದಿವ್ಯ ಪ್ರಕಾಶ ಚಿಮ್ಮಿ ಭವ್ಯ ಲೋಕವನ್ನು ತೆರೆದಿತ್ತು. ಗಂಟೆ ಹನ್ನೆರಡಾಗುತ್ತಿದ್ದಂತೆ ಯೇಸುಕ್ರಿಸ್ತನ ಪ್ರತಿಮೆಗೆ ಅಡ್ಡಲಾಗಿ ಕಟ್ಟಲಾಗಿದ್ದ ಪರದೆಯನ್ನು ಸರಿಸಲಾಯಿತು. ಫಕ್ಕನೇ ವಿದ್ಯುದ್ದೀಪಗಳು ಹೊತ್ತಿಕೊಂಡವು. ದೇವಾಲಯ ಗಂಟೆಗಳೆಲ್ಲ ಮೊಳಗಿ ದೂರದೂರಕ್ಕೆ ತಮ್ಮ ನಾದವನ್ನು ಹೊತ್ತೊಯ್ದವು. ಜನರೆಲ್ಲ ಭಕ್ತಿಯಿಂದ “ಮಹೋನ್ನತದಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಸುಮನಸ್ಕರಿಗೆ ಶಾಂತಿ” ಎಂದು ಎದೆ ತುಂಬಿ ಹಾಡಿದರು. ಪರಸ್ಪರ ಕೈಕುಲುಕಿ ಪುನರುತ್ಥಾನ ಹಬ್ಬದ ಶುಭಾಶಯಗಳನ್ನು ವಿನಿಮಯಿಸಿಕೊಂಡರು.

ಪ್ರತಿಯೊಬ್ಬರೂ ಮೇಣದ ಬತ್ತಿಯ ಬೆಳಕನ್ನು ಆರದಂತೆ ತೆಗೆದುಕೊಂಡು ಹೋಗಿ ತಮ್ಮ ಮನೆಯ ಹಣತೆಗಳನ್ನು ಹಚ್ಚಿಕೊಂಡರು. ಇನ್ನೂ ಕೆಲವರು ಕೆಂಡದ ಕಡಾಯಿಯಿಂದ ಕೆಂಡವನ್ನು ತೆಗೆದುಕೊಂಡು ಹೋಗಿ ತಮ್ಮ ಮನೆಯ ಒಲೆಗಳನ್ನು ಹೊತ್ತಿಸಿಕೊಂಡರು. ಇಂದು ರಾತ್ರಿಯ ಅಪಹೊತ್ತಿನಲ್ಲಿ ಶಾಮಣ್ಣನ ಸೊಸೆ ಜೆಸಿಂತ, ಚೌರಪ್ಪನ ಮೊಮ್ಮಗಳು ನಿರ್ಮಲ, ದೊರೆ ಮಗಳು ಕತ್ರಿನಾ ಮುಂತಾದವರೆಲ್ಲ ತಂತಮ್ಮ ಮನೆಗಳ ಹೊಸ್ತಿಲಲ್ಲಿ, ಕಾಂಪೌಂಡು ಗೋಡೆಯ ಮೇಲೆ ಹಣತೆಗಳನ್ನೂ ಮೇಣದ ಬತ್ತಿಗಳನ್ನೂ ಹಚ್ಚುತ್ತಿದ್ದರೆ ಅಚ್ಚರಿಗೊಳ್ಳದಿರಿ, ಏಕೆಂದರೆ ಇದು ಕ್ರೈಸ್ತರ ಬೆಳಕಿನ ಹಬ್ಬ ಈಸ್ಟರ್.

ಅಂದು ಸಾವಿರಾರು ವರ್ಷಗಳ ಹಿಂದೆ ಇಂಥದೇ ಒಂದು ರಾತ್ರಿಯಲ್ಲಿ ಈಜಿಪ್ಟರ ದಾಸ್ಯದಲ್ಲಿ ನೊಂದಿದ್ದ ಯೆಹೂದ್ಯರ ವಿಮೋಚನೆ ಆಗಿ ಅವರು ಪಾಸ್ಕ ಹಬ್ಬವನ್ನು ಆಚರಿಸಿದರು. ಅದೇ ರೀತಿಯಲ್ಲಿ ಯೇಸುಕ್ರಿಸ್ತನು ಸಂಪ್ರದಾಯದ ಬಂಧನದಲ್ಲಿ ಮೌಢ್ಯದ ಸಂಕೋಲೆಯಲ್ಲಿ ಪರಸ್ಪರ ಅಪನಂಬಿಕೆಯ ದಾಸ್ಯದಲ್ಲಿ ತೊಳಲುವ ಮಾನವರಿಗೆ ಪ್ರೀತಿಯ ಸಿಂಚನಗೈದು ಹೊಸಬದುಕಿನ ಹೊಸಬೆಳಕಿನ ಮಾರ್ಗ ಕಲ್ಪಿಸಿದ ಈ ಹಬ್ಬ ನಿಜವಾಗಿಯೂ ಬೆಳಕಿನ ಹಬ್ಬ.

ಗುರುವಾರ, ಏಪ್ರಿಲ್ 2, 2009

ಅನ್ನಮ್ಮ ಬೆಟ್ಟ

ಬೆಂಗಳೂರು ನಗರದ ದಕ್ಷಿಣದ ಅಂಚಿನಲ್ಲಿ ಬನಶಂಕರಮ್ಮನ ಗುಡಿ, ವಸಂತರಾಯನ ಗುಡಿಗಳಿರುವ ಸುಬ್ರಮಣ್ಯಪುರ ರಸ್ತೆಯಲ್ಲಿ ಸಾಗಿದರೆ ಉತ್ತರಹಳ್ಳಿ ಅರೆಹಳ್ಳಿ ಬೆಟ್ಟಗಳ ಸಾಲಿನಲ್ಲಿ ಒಂದು ಬೃಹತ್ ಬೆಟ್ಟವು ತನ್ನ ತುದಿಯಲ್ಲಿ ಯೇಸುಕ್ರಿಸ್ತನ ಶಿಲುಬೆಯನ್ನು ಧರಿಸಿ ಬಹು ದೂರದಿಂದಲೇ ಕಣ್ಮನ ಸೆಳೆಯುತ್ತದೆ. ಅದೇ ಪ್ರಸಿದ್ಧವಾದ ಅನ್ನಮ್ಮ ಬೆಟ್ಟ. ಭಾರೀ ಕಲ್ಲುಬಂಡೆಗಳೊಂದಿಗೆ ಹಸಿರಿನ ತೇಪೆ ಹೊದ್ದ ಈ ಅನ್ನಮ್ಮ ಬೆಟ್ಟವು ಎರಡು ಶತಮಾನಗಳಿಂದಲೂ ಕ್ರೈಸ್ತರ ಪುಣ್ಯಕ್ಷೇತ್ರವೆನಿಸಿದೆ.

ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರಚಲಿತವಿರುವ ಐತಿಹ್ಯದ ಪ್ರಕಾರ ಅನ್ನಮ್ಮ ಎಂಬ ಸಾತ್ವಿಕ ಕನ್ಯೆಯೊಬ್ಬಳು ಈ ಬೆಟ್ಟದ ತಪ್ಪಲಿನಲ್ಲಿ ಇರುವಾಗ (ಬಹುಶಃ ಟಿಪ್ಪುಸುಲ್ತಾನನ) ಸೈನಿಕರಿಬ್ಬರ ಕಾಮುಕ ದೃಷ್ಟಿಗೆ ಬಿದ್ದು ಅವರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಬೆಟ್ಟದ ಮೇಲಕ್ಕೆ ಏರಿದಳೆಂದೂ, ಅಲ್ಲಿಗೂ ಕುದುರೆ ಏರಿ ಬಂದ ಸೈನಿಕರಿಂದ ಮಾನ ರಕ್ಷಿಸಿಕೊಳ್ಳಲು ಬೆಟ್ಟದಿಂದ ಉರುಳಿಬಿದ್ದು ಸತ್ತಳೆಂದೂ ತಿಳಿದುಬರುತ್ತದೆ.

ಬೆಟ್ಟದ ಬುಡದಲ್ಲಿ ಅನ್ನಮ್ಮನನ್ನು ಸಮಾಧಿ ಮಾಡಿದ ಸ್ಥಳವು ಈಗಲೂ ಜನರಿಂದ ಪೂಜನೀಯವಾಗಿದೆ. ಕ್ರೈಸ್ತ ಕ್ರೈಸ್ತೇತರರೆನ್ನದೆ ಅಸಂಖ್ಯ ಹೆಣ್ಣುಮಕ್ಕಳು ಸಾಂಬ್ರಾಣಿ ಮೇಣದಬತ್ತಿಗಳನ್ನು ಅನ್ನಮ್ಮನ ಸಮಾಧಿಯ ಬಳಿ ಅರ್ಪಿಸಿ ಪ್ರಾರ್ಥನೆ ಮಾಡುತ್ತಾರೆ.

ಇಷ್ಟೆಲ್ಲ ಓದಿದಾಗ ನಿಮಗೆ ಅನ್ನಮ್ಮಬೆಟ್ಟವು ಕ್ರೈಸ್ತರಿಗೆ ಮಾತ್ರವೇ ಏಕೆ ಪುಣ್ಯಕ್ಷೇತ್ರವಾಗಿದೆ? ಬೆಂಗಳೂರಿನ ಗ್ರಾಮದೇವತೆ ಅಣ್ಣಮ್ಮ ಎಂಬುದೇ ಇಲ್ಲಿ ಅಪಭ್ರಂಶವಾಗಿದೆಯೇ? ಎಂಬ ಅನುಮಾನಗಳು ಮೂಡುವುದು ಸಹಜ.

ಇದಕ್ಕೆ ಸಮರ್ಥನೆಯಾಗಿ ಎರಡು ಕಾರಣಗಳನ್ನು ಕೊಡಬಹುದು.
೧. ಈ ಅನ್ನಮ್ಮ ಎಂಬುದು ಅಪ್ಪಟ ಕ್ರೈಸ್ತ ಹೆಸರು. ಪವಿತ್ರ ಬೈಬಲ್ಲಿನ ಪ್ರಕಾರ ಯೇಸುವಿನ ತಾಯಿ ಮರಿಯಳಿಗೆ ಅಮ್ಮ ಈ ಅನ್ನಮ್ಮ. ಮೇರಿಗೆ ತಾಯಿ ಅಂದರೆ ಯೇಸುಕ್ರಿಸ್ತನ ಅಜ್ಜಿಯಾದ “ಅನ್ನಾ” ಎಂಬ ಹೆಸರು ಕನ್ನಡದ ಜಾಯಮಾನದಲ್ಲಿ ಅನ್ನಮ್ಮ ಎಂದಾಗುವುದು ಅತ್ಯಂತ ಸಹಜ.
೨. ಟಿಪ್ಪುವಿನ ಕಾಲದಲ್ಲಿ ಕ್ರೈಸ್ತರನ್ನು ಬ್ರಿಟಿಷರಿಗೆ ಸುದ್ದಿ ನೀಡುವವರೆಂದು ಅಪನಂಬಿಕೆಯಿಂದ ಕಾಣಲಾಗುತ್ತಿತ್ತು. ಕ್ರೈಸ್ತರ ಮೇಲೆ ಒಂದು ರೀತಿಯ ಗೂಢಚಾರ ಕಣ್ಣು ಇದ್ದೇ ಇರುತ್ತಿತ್ತು. ಹೀಗೆ ಕ್ರೈಸ್ತ ಗ್ರಾಮಗಳ ಬಳಿ ಸುಳಿದಾಡುತ್ತಿದ್ದ ಅವನ ಸೈನಿಕರು ಅನ್ನಮ್ಮ ಎಂಬ ಒಂಟಿ ಹೆಣ್ಣನ್ನು ಆಸೆಗಣ್ಣಿನಿಂದ ನೋಡಿರಲೂ ಬಹುದು.
ಜಾನಪದೀಯ ಅಧ್ಯಯನದ ದೃಷ್ಟಿಯಿಂದ ನೋಡಿದರೆ ಗ್ರಾಮದೇವತೆಗಳು ಸಾಮಾನ್ಯವಾಗಿ ತಮ್ಮ ಪ್ರಾಪಂಚಿಕ ಜೀವನದಲ್ಲಿ ಸಾಮಾನ್ಯ ವ್ಯಕ್ತಿಗಳೇ ಆಗಿದ್ದು ತಮ್ಮ ಮರಣಾನಂತರವಷ್ಟೇ ದೈವೀ ಸ್ಥಾನವನ್ನು ಪಡೆದಿರುತ್ತಾರೆ. ಹೆಚ್ಚಿನ ಗ್ರಾಮದೇವತೆಗಳು ಗಂಡನನ್ನು ಸಾವಿನಲ್ಲೂ ಹಿಂಬಾಲಿಸಿದ ಮಹಾಸತಿಯರಾಗಿದ್ದ ನಿದರ್ಶನಗಳನ್ನು ನಾವು ನೋಡುತ್ತೇವೆ. ಅವರ ಸ್ಮರಣೆಗಾಗಿ ನಿಲ್ಲಿಸಲಾದ ಸ್ಮಾರಕಕಲ್ಲು ಅಥವಾ ಮಾಸ್ತಿಕಲ್ಲುಗಳೇ ಮುಂದೆ ಗುಡಿಗಳಾಗಿ ಬೆಳೆದ ನಿದರ್ಶನಗಳನ್ನೂ ನೋಡಿದ್ದೇವೆ. ಮಾರಮ್ಮ, ಅಣ್ಣಮ್ಮ ಮುಂತಾದ ದೇವತೆಗಳ ಹಿನ್ನೆಲೆಯಲ್ಲೂ ಇಂಥ ಅಸಾಮಾನ್ಯ ಘಟನೆಗಳು ತಳುಕು ಹಾಕಿಕೊಂಡಿರುವುದು ಐತಿಹ್ಯಗಳ ಮೂಲಕ ತಿಳಿದುಬರುತ್ತದೆ.

ಅನ್ನಮ್ಮಬೆಟ್ಟದ ಅನ್ನಮ್ಮನಿಗೂ ಇದೇ ರೀತಿ ಐತಿಹ್ಯ ಬೆಳೆದುಬಂದಿದೆ ಹಾಗೂ ಅನ್ನಮ್ಮಬೆಟ್ಟವು ಕ್ರೈಸ್ತ ಹೆಣ್ಣೊಬ್ಬಳ ಸ್ಮಾರಕಶಿಲೆಯಾಗಿದೆ. ಗಮನಿಸತಕ್ಕ ಸಂಗತಿಯೇನೆಂದರೆ ಇಲ್ಲಿ ಅನ್ನಮ್ಮ ಅವಿವಾಹಿತೆ ಎನ್ನುವ ಅಂಶ.

ಇನ್ನೂರು ವರ್ಷಗಳ ಇತಿಹಾಸವಿರುವ ಈ ಯಾತ್ರಾಸ್ಥಳವು ದಕ್ಷಿಣ ಕರ್ನಾಟಕದ ಕ್ರೈಸ್ತ ಜನಪದದಲ್ಲಿ ಸ್ಥಾನ ಪಡೆದಿರುವುದೂ ಅಚ್ಚರಿಯ ಸಂಗತಿಯೇನಲ್ಲ. ಕನ್ನಡ ಕ್ರೈಸ್ತ ಹಿರಿಯರ ಬಾಯಲ್ಲಿ, ಅವರ ಕೋಲಾಟಗಳಲ್ಲಿ, ಹಾಸನ ಜಿಲ್ಲೆಯ ಶೆಟ್ಟಿಹಳ್ಳಿ, ಮೂಡಲದಾಸಾಪುರ, ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ನಾಗನಹಳ್ಳಿ ಮುಂತಾದ ಊರುಗಳಲ್ಲಿ ಇನ್ನೂ ಉಳಿದುಕೊಂಡಿರುವ ಬೀಸೋಪದಗಳಲ್ಲಿ ಆಗೊಮ್ಮೆ ಈಗೊಮ್ಮೆ ಅನ್ನಮ್ಮನ ಪ್ರಸ್ತಾವ ಇಣುಕುತ್ತದೆ. ಹಸೆ ಬರೆಯುವ ಸಂದರ್ಭದ ಈ ಹಾಡಂತೂ ಅನ್ನಮ್ಮನನ್ನು ಕುರಿತ ಒಂದು ಸೊಗಸಾದ ಉಲ್ಲೇಖ :
ಸಣ್ಣಕ್ಕಿ ಹಸೆಯ ಸಣ್ಣಾಗಿ ಬರೆಯಮ್ಮ
ಸಣ್ಣಾಕಿ ಉತ್ರಳ್ಳಿ ಅನ್ನಮ್ಮ | ಬರೆದಾರೋ
ಸಣ್ಣ ಸುಣ್ಣಾದ ಹಸೆಗಳ | ಕಂಡಾರೋ
ಮರಿಯವ್ವ ತಾಯಿ ಜರಿದಾರೋ | ಅನ್ನಮ್ಮನ
ಸಣ್ಣಾಗಿ ಹಸೆಯ ಬರೆಯೆಂದು ||

ಹೀಗೆ ಇನ್ನೂರು ವರ್ಷಗಳಿಂದಲೂ ಕ್ರೈಸ್ತ ಜನಪದದಲ್ಲಿ ಬೇರೂರಿರುವ ಈ ಯಾತ್ರಾಸ್ಥಳದ ಪ್ರಸಿದ್ಧಿಯನ್ನು ಮನಗಂಡ ಕ್ರೈಸ್ತ ಪಾದ್ರಿ ಬ್ರಿಯಾಂಡ್ ಸ್ವಾಮಿಯವರು ಈಗ್ಗೆ ಸುಮಾರು ೬೦ ವರ್ಷಗಳ ಹಿಂದೆ ಈ ಅನ್ನಮ್ಮಬೆಟ್ಟದ ತುದಿಯಲ್ಲಿ ಶಿಲುಬೆ ನೆಡಿಸಿ ಅನ್ನಮ್ಮನ ಸಮಾಧಿಯ ಬಳಿ ವರ್ಷಕ್ಕೊಮ್ಮೆ ಕ್ರೈಸ್ತರೆಲ್ಲೂ ಸೇರಿ ಪೂಜೆ ಅರ್ಪಿಸುವ ಪದ್ಧತಿಗೆ ಚಾಲನೆ ನೀಡಿದರು. ಅಂದಿನಿಂದ ಪ್ರತಿವರ್ಷ ತಪಸ್ಸುಕಾಲದ ಐದನೇ ಭಾನುವಾರ ಅನ್ನಮ್ಮಬೆಟ್ಟಕ್ಕೆ ಕ್ರೈಸ್ತರು ತಂಡೋಪತಂಡವಾಗಿ ಆಗಮಿಸಿ ಪೂಜೆ ಮತ್ತು ಶಿಲುಬೆಯಾತ್ರೆಗಳಲ್ಲಿ ಪಾಲ್ಗೊಳ್ಳುತ್ತಾರೆ. ದೈತ್ಯಜೋಕಾಲಿಗಳಿಲ್ಲದ, ತಮಟೆ ನಗಾರಿ ಇಲ್ಲದ, ಅಷ್ಟೇಕೆ ರಥಯಾತ್ರೆಯೂ ಇಲ್ಲದ ಶೋಕಗೀತೆಗಳ ಮೌನ ತಪಸ್ಸಿನ ಜನಜಾತ್ರೆ. ಹಿಂದೆ ಜನ ಕಾಲ್ನಡಿಗೆಯಲ್ಲೂ ಎತ್ತಿನಬಂಡಿಗಳಲ್ಲೂ ಬರುತ್ತಿದ್ದರು. ೧೯೬೦ರ ದಶಕದಲ್ಲಿ ಬೆಂಗಳೂರು ನಗರಸಾರಿಗೆ ಪ್ರಾರಂಭವಾದ ಮೇಲೆ ’ಜಾತ್ರೆ ವಿಶೇಷ’ ಬಸ್ಸುಗಳು ಬ್ರಿಯಾಂಡ್ ಚೌಕದಿಂದ ಅನ್ನಮ್ಮಬೆಟ್ಟಕ್ಕೆ ಹೋಗಿಬರುವ ಪರಿಪಾಠ ಶುರುವಾಗಿ ಅದು ಇಂದಿಗೂ ಮುಂದುವರಿದುಕೊಂಡು ಬಂದಿದೆ.

ಅಂದು ಅನ್ನಮ್ಮಬೆಟ್ಟವು ತನ್ನ ಬುಡದಲ್ಲಿ ಅಗಾಧ ಕಲ್ಲುಬಂಡೆಗಳನ್ನೂ ಅವುಗಳನ್ನು ಮರೆಮಾಚುವಂತೆ ಬೆಳೆದ ಮರಗಳನ್ನೂ ಪೊದೆಗಳನ್ನೂ ಹೊಂದಿತ್ತು. ಅನ್ನಮ್ಮನ ಸಮಾಧಿ ಸುಣ್ಣದಿಂದ ಪರಿಶುಭ್ರಗೊಂಡ ಸಣ್ಣ ಗವಿಯಂತೆ ಇತ್ತು. ಜನರು ಒಳತೆರಳಿ ಮೇಣದ ಬತ್ತಿ ಬೆಳಗಿ ನಮಸ್ಕರಿಸಿ ಅಲ್ಲಿನ ಮಣ್ಣನ್ನು ಚಿಟಿಕೆಯಷ್ಟು ತೆಗೆದುಕೊಂಡು ತಲೆಯ ಮೇಲೆ ಉದುರಿಸಿಕೊಳ್ಳುತ್ತಿದ್ದರು. ಕೆಲವರು ಒಂದಷ್ಟು ಮಣ್ಣನ್ನು ಮುಷ್ಟಿಯಲ್ಲಿ ಹಿಡಿದು ಭಕ್ತಿಪೂರ್ವಕವಾಗಿ ಕಣ್ಣಿಗೊತ್ತಿಕೊಂಡು ತಮ್ಮ ಮನೆಗೆ ಒಯ್ಯುತ್ತಿದ್ದರು. ಅಲ್ಲೇ ಸನಿಯದಲ್ಲಿ ತೆರೆದ ಬಾವಿಯೊಂದಿತ್ತು, ಬಾವಿಯ ಸುತ್ತ ಇದ್ದ ಗೇಣುದ್ದದ ಕಟ್ಟೆಯ ಬದಿಯಲ್ಲಿ ಮೊಣಕಾಲೂರಿ ಕುಳಿತು ಕೈಗೇ ಎಟಕುತ್ತಿದ್ದ ಆ ಪರಿಶುದ್ಧ ನೀರನ್ನು ಜನ ಬೊಗಸೆ ತುಂಬಿ ಕುಡಿಯುತ್ತಿದ್ದರು. ಅನತಿ ದೂರದಲ್ಲಿದ್ದ ಕಾಲುವೆಯಲ್ಲಿ ನವಿರಾದ ಮಣ್ಣಿನ ಹೊಯಿಗೆಯಿದ್ದು ಮಳೆಗಾಲದಲ್ಲಿ ಸಮೃದ್ಧವಾಗಿ ನೀರು ಹರಿದ ಲಕ್ಷಣಗಳಿಗೆ ಸಾಕ್ಷಿಯಾಗಿತ್ತು. ಉತ್ತರಹಳ್ಳಿ ಗ್ರಾಮದಿಂದ ಸುಮಾರು ಎರಡು ಕಿಲೋಮೀಟರು ದೂರದಲ್ಲಿರುವ ಈ ಬೆಟ್ಟ ಊರಿನಿಂದ ನೋಡಿದಾಗ ಅಸಂಖ್ಯ ಜನರು ಬೆಟ್ಟವನ್ನು ಏರುತ್ತಲೂ ಇಳಿಯುತ್ತಲೂ ಇದ್ದ ದೃಶ್ಯ ಬೆಟ್ಟಕ್ಕೆ ಬಣ್ಣಬಣ್ಣದ ಬಟ್ಟೆ ತೊಡಿಸಿದಂತೆ ನಯನ ಮನೋಹರವಾಗಿ ತೋರುತ್ತಿತ್ತು.

ಕಾಲ್ನಡಿಗೆಯಲ್ಲೂ ಎತ್ತಿನಬಂಡಿಗಳಲ್ಲೂ ಬೆಟ್ಟಕ್ಕೆ ಬರುತ್ತಿದ್ದ ಜನ ಅದರ ತಪ್ಪಲಿನಲ್ಲಿಬೀಡುಬಿಟ್ಟು ಮೌನದ ಧ್ಯಾನ ಪ್ರಾರ್ಧನೆಗಳಲ್ಲಿ ತೊಡಗುತ್ತಿದ್ದರು. ಸನಿಹದ ತೋಟ, ಹೊಂಗೆಮರದ ತೋಪು ಅವರಿಗೆ ನೆರಳಾಗುತ್ತಿತ್ತು. ಅವರು ಸರತಿಯಂತೆ ಬೆಟ್ಟ ಹತ್ತಿ ಮೇಲಿನ ಶಿಲುಬೆಗೆ ಮುತ್ತಿಟ್ಟು ಹರಕೆ ತೀರಿಸಿ ಬರುತ್ತಿದ್ದರು. ಬಿಸಿಲೇರಿದಂತೆ ಎಲ್ಲರೂ ತೋಪಿನಲ್ಲಿ ಒಟ್ಟುಗೂಡಿ ಚಾಪೆ ಹಾಸಿಕೊಂಡು ಮನೆಯಿಂದ ಹೊತ್ತು ತಂದಿದ್ದ ಊಟವನ್ನು ಉಂಡು ತಮ್ಮಂತೆಯೇ ಅಲ್ಲಿಗೆ ಬಂದಿದ್ದ ಬಂಧುಬಾಂಧವರೊಂದಿಗೆ ಮತ್ತು ನೆರೆಹೊರೆಯೊಂದಿಗೆ ಕಷ್ಟಸುಖದ ಮಾತುಕತೆ ಆಡುತ್ತಿದ್ದರು. ತಮ್ಮ ಬೆಳೆದ ಮಕ್ಕಳಿಗೆ ಸಂಬಂಧಗಳನ್ನು ಕುದುರಿಸುತ್ತಿದ್ದರು. ಹೊತ್ತಿಳಿಯುತ್ತಿದ್ದಂತೆ ಎಲ್ಲರೂ ತಂತಮ್ಮ ಊರುಗಳಿಗೆ ತೆರಳುತ್ತಿದ್ದಂತೆ ಸಂತೆಯೆದ್ದು ಹೋದಹಾಗೆ ಅನ್ನಮ್ಮ ಬೆಟ್ಟದ ತಪ್ಪಲು ಮುಳುಗುವ ಸೂರ್ಯನಿಗೆ ಅಂತಿಮ ನಮನ ಸಲ್ಲಿಸುವಂತೆ ಕೆಂಪಗೆ ಹೊಳೆಯ ತೊಡಗುತ್ತಿತ್ತು.

ಇಂದು ಬೆಂಗಳೂರು ನಗರವು ವಿಪರೀತ ಬೆಳೆದು ಅನ್ನಮ್ಮ ಬೆಟ್ಟವನ್ನೂ ತನ್ನ ಒಡಲಲ್ಲಿ ಹುದುಗಿಸಿಕೊಂಡು ತಪ್ಪಲನ್ನು ಬೆತ್ತಲಾಗಿಸಿದೆ, ಬೆಟ್ಟವಂತೂ ನೆಲಗಳ್ಳರ ಗಣಿಗಳ್ಳರ ಕಲುಷಿತ ಮನದ ಧಾರ್ಮಿಕ ವಿಪ್ಲವಕಾರರ ಕಬಂಧ ಬಾಹುವಿನಲ್ಲಿ ಸಿಲುಕಿ ನಲುಗುತ್ತಿದೆ. ಬೆಟ್ಟದ ಬುಡದವರೆಗೂ ಮನೆಗಳನ್ನು ಕಟ್ಟಲಾಗಿದೆ. ಹೊಸಕೆರೆಹಳ್ಳಿ ಇತ್ತಮಡು ಗ್ರಾಮದ ಕಡೆಗಿನ ಬೆಟ್ಟದ ಒಂದು ಭಾಗವಂತೂ ಕಟ್ಟಡದ ಕಲ್ಲು ಪೂರೈಕೆಗಾಗಿ ಸಿಡಿದು ಕರಗಿದೆ. ಇನ್ನೊಂದು ಭಾಗ ಉದ್ಯಮಿಯೊಬ್ಬರ ಪಾಲಾಗಿದೆ. ಬೆಟ್ಟದ ಮೇಲೆ ಹನುಮಂತನ ಹಾಗೂ ಶಿವನ ಗುಡಿಗಳು ತಲೆಯೆತ್ತಿವೆ, ಅಲ್ಲಿನ ಬೃಹತ್ ಬಂಡೆಯ ಮೇಲೆ “ಹನುಮಗಿರಿ” ಎಂದು ಬರೆಯಲಾಗಿದೆ. ಆದರೂ ಈ ಬೆಟ್ಟವು ಸ್ಥಳೀಯರ ಬಾಯಲ್ಲಿ ಅನ್ನಮ್ಮಬೆಟ್ಟ / ಯೇಸುಬೆಟ್ಟ ಎಂದೇ ಕರೆಸಿಕೊಳ್ಳುತ್ತಿದೆ. ಜಾನಪದ ತಜ್ಞ ಡಿ ಲಿಂಗಯ್ಯನವರು ಇದನ್ನು ಶಿಲುಬೆಬೆಟ್ಟ ಎಂದು ಕರೆದಿದ್ದಾರೆ.

ಪ್ರತಿವರ್ಷದ ತಪಸ್ಸುಕಾಲದಲ್ಲಿ ಮಾತ್ರವೇ ಗರಿಗೆದರುತ್ತಿದ್ದ ಅನ್ನಮ್ಮಬೆಟ್ಟ ಇಂದು ಪ್ರತಿನಿತ್ಯವೂ ಯೇಸುಭಜನೆಯನ್ನು ಧ್ವನಿಸುತ್ತಿದೆ. ಅನ್ನಮ್ಮನ ಸಮಾಧಿಯ ಸ್ಥಳದಲ್ಲಿರುವ ಪುಟ್ಟದಾದ ಕ್ರೈಸ್ತ ದೇಗುಲವು ಸ್ಥಳೀಯ ಕ್ರೈಸ್ತರಿಗೆ ದಿನನಿತ್ಯದ ಅಧ್ಯಾತ್ಮ ಪೋಷಣೆಯನ್ನು ನೀಡುತ್ತಿದೆ.

ಭಾನುವಾರ, ಜನವರಿ 25, 2009

ಒಮ್ಮುಖ ಪತ್ರಿಕೆ

ಕನ್ನಡ ದಿನಪತ್ರಿಕೆ “ವಿಜಯಕರ್ನಾಟಕ”ವು ಸಂಘಪರಿವಾರದ ಮುಖವಾಣಿಯಂತಿದ್ದು ಪ್ರತಿನಿತ್ಯ ಅದರ ತುಂಬೆಲ್ಲ ಕ್ರೈಸ್ತರನ್ನು ದೇಶದ್ರೋಹಿಗಳೆಂಬಂತೆ ಪ್ರತಿಬಿಂಬಿಸಲಾಗುತ್ತಿದೆ. ಅದರಲ್ಲಿ ಕ್ರೈಸ್ತ ಸಮುದಾಯದ ಪರವಾದ ಸುದ್ದಿಗಳು ಪ್ರಕಟವಾಗುವುದಿಲ್ಲ ಮಾತ್ರವಲ್ಲ ಸಂಪಾದಕೀಯದಿಂದ ಹಿಡಿದು ಅಂಕಣಗಳು ಹಾಗೂ ವಾಚಕರ ಪತ್ರಗಳವರೆಗೆ ಎಲ್ಲವೂ ಕ್ರೈಸ್ತರ ವಿರುದ್ಧ ಹಲ್ಲು ಮಸೆಯುತ್ತಿರುವುದನ್ನು ಕಾಣಬಹುದಾಗಿದೆ. ಭಾರತೀಯ ಪತ್ರಿಕಾ ನೀತಿಯ ಪ್ರಕಾರ ಸುದ್ದಿಯೊಂದರ ಎರಡೂ ಬದಿಗಳನ್ನು ಓದುಗರ ಮುಂದಿಡಬೇಕು. ಆದರೆ ಇಲ್ಲಿ ಈ ಪತ್ರಿಕೆಯಲ್ಲಿ ಸಂಘಪರಿವಾರದ ವಿಧ್ವಂಸಕ ಕೃತ್ಯಗಳನ್ನು ರಣಶೌರ್ಯದಂತೆ ತೋರಿಸಲಾಗುತ್ತದೆ, ಅದೇ ವೇಳೆಯಲ್ಲಿ ಕ್ರೈಸ್ತರ ಅಥವಾ ಕ್ರೈಸ್ತ ಸಂಸ್ಥೆಗಳ ಕಾರ್ಯಗಳನ್ನು ದೇಶದ್ರೋಹದಂತೆ ಬಿಂಬಿಸಲಾಗುತ್ತದೆ. ಕ್ರೈಸ್ತ ಸಂಸ್ಥೆಗಳು ಮಾಡುವ ಒಳ್ಳೇ ಕಾರ್ಯಗಳನ್ನು ಈ ಪತ್ರಿಕೆ ವರದಿ ಮಾಡುವುದೇ ಇಲ್ಲ, ಆದರೆ ಎಲ್ಲೋ ಒಂದು ಸಣ್ಣ ತಪ್ಪನ್ನು ಒಬ್ಬ ಕೆಲಸಕ್ಕೆ ಬಾರದ ವರದಿಗಾರನೊಬ್ಬ ವರದಿ ಮಾಡಿದರೂ ಅದಕ್ಕೆ ವಿಶೇಷಣಗಳ ಮೇಲ್ಬರಹ ಕೊಟ್ಟು ಬಣ್ಣಬಣ್ಣವಾಗಿ ಪ್ರಕಟಿಸಲಾಗುತ್ತದೆ.
ಪ್ರತಾಪಸಿಂಹ ಎಂಬ ಒಬ್ಬ ಅಂಕಣಕಾರನಂತೂ ತಾನೊಬ್ಬ ಮಹಾನ್ ಪಂಡಿತ ಎಂದಂದುಕೊಂಡು ಮಹಾನ್ ವ್ಯಕ್ತಿಗಳ ಹೇಳಿಕೆಗಳನ್ನುತನಗೆ ಬೇಕಾದಂತೆ ತಿರುಚಿ ಸುಳ್ಳುಗಳ ಕಂತೆಯನ್ನೇ ಹೊಸೆಯುತ್ತಾನೆ. ಆತ ಬೌದ್ಧ ಧರ್ಮದ ಪ್ರಾರಂಭದೊಂದಿಗೆ ನಮ್ಮ ದೇಶದ ಅಧಃಪತನವೂ ಪ್ರಾರಂಭವಾಯಿತೆಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆಂದು ಇತ್ತೀಚೆಗೆ ಬೊಗಳೆ ಹೊಡೆದಿದ್ದ. ಬುದ್ಧನು ತನ್ನ ಕಾಲದಲ್ಲಿ ಆಚರಣೆಯಲ್ಲಿದ್ದ ವೈದಿಕ ಧರ್ಮದ ಶ್ರೇಣೀಕೃತ ವ್ಯವಸ್ಥೆಯನ್ನೂ ಗೊಡ್ಡು ಸಂಪ್ರದಾಯಗಳನ್ನೂ ಸ್ವರ್ಗನರಕಗಳ ಪರಿಕಲ್ಪನೆಯನ್ನೂ ಖಂಡಿಸಿ ಎಲ್ಲ ಮನುಷ್ಯರಿಗೂ ಸಮಾನಸ್ಥಾನ ನೀಡಿದ. ಈ ಮಹಾನ್ ಆದರ್ಶವನ್ನು ಅವನ ಅನುಯಾಯಿಗಳು ದಿಕ್ಕುದಿಕ್ಕಿಗೂ ಕೊಂಡೊಯ್ದರು. ಬುದ್ಧನನ್ನು ಪ್ರಗತಿಪರ ಭಾರತದ ನವ್ಯ ಪ್ರವರ್ತಕ ಎಂದು ಭಾವಿಸಿದ್ದ ವಿವೇಕಾನಂದರು ಆತನನ್ನು ಭಗವಾನ್ ಬುದ್ಧ ಎನ್ನುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಮನುಧರ್ಮವು ಬುದ್ಧನ ಆದರ್ಶ ತತ್ವಗಳನ್ನೆಲ್ಲ ಗಾಳಿಗೆ ತೂರಿ ತನ್ನ ಬೇರುಬಿಟ್ಟಿತು. ಇದನ್ನು ಕುರಿತೇ ವಿವೇಕಾನಂದರು ಒಮ್ಮೆ ತಮ್ಮ ಭಾಷಣದಲ್ಲಿ ".... ನಿಮ್ಮ ಪೂರ್ವೀಕರ ಮಾತಿನಲ್ಲಿ ನಿಮಗೆ ನಂಬಿಕೆ ಇನ್ನೂ ಇದ್ದರೆ, ಈ ಕ್ಷಣವೇ ಹಿಂದೆ ಕುಮಾರಿಲ ಭಟ್ಟ ತನ್ನ ಬಗ್ಗೆ ಸುಳ್ಳು ಹೇಳಿಕೊಂಡು ಒಬ್ಬ ಬೌದ್ಧ ಗುರುವಿನಲ್ಲಿ ಕಲಿತದ್ದರ ಆಧಾರದ ಮೇಲೆ, ಆ ಗುರುವನ್ನೇ ವಾದದಲ್ಲಿ ಸೋಲಿಸಿ; ಆನಂತರ ಸುಳ್ಳು ಹೇಳಿ ಗೈದ ಗುರು ದ್ರೋಹದ ಪ್ರಾಯಶ್ಚಿತ್ತಕ್ಕಾಗಿ ತುಷಾನಲದಲ್ಲಿ ಬಿದ್ದಂತೆ ನೀವೂ ಬಿದ್ದು ಪ್ರಾಯಶ್ಚಿತ್ತ ಮಾಡಿಕೊಳ್ಳಿ. ಇದನ್ನು ಮಾಡುವುದಕ್ಕೆ ನಿಮಗೆ ಧೈರ್ಯವಿಲ್ಲದೇ ಇದ್ದಲ್ಲಿ, ನಿಮ್ಮ ತಪ್ಪನ್ನು ಒಪ್ಪಿಕೊಂಡು ಎಲ್ಲರಿಗೂ ಸಹಾಯ ಮಾಡಿ. ಜ್ಞಾನಾಗಾರದ ಬಾಗಿಲನ್ನು ಎಲ್ಲರಿಗೂ ತೆರೆದು ಸಹಾಯ ಮಾಡಿ. ದುರ್ಬಲ ಜನಸಾಮಾನ್ಯರಿಗೆ ಮತ್ತೊಮ್ಮೆ ಅವರಿಗೆ ನ್ಯಾಯವಾಗಿ ಸಲ್ಲುವ ಹಕ್ಕು ಬಾಧ್ಯತೆಗಳನ್ನು ಕೊಡಿ.'' ವಿವೇಕಾನಂದರ ಈ ಎಚ್ಚರಿಕೆಯ ಮಾತುಗಳಿಗೆ ಕಿವಿಗೊಡದೆ ತಮ್ಮ ಭೋಜನ - ಬೈಠಕ್ಕುಗಳಲ್ಲೇ ಕಾಲ ಕಳೆದ ಬುದ್ಧ ನಿಂದಕರು, ತಾವು ಮಾಡದ ಕೆಲಸವನ್ನು ಕ್ರಿಶ್ಚಿಯನ್ ಮಿಷನರಿಗಳು ಮಾಡತೊಡಗಿದಾಗ, ತಮ್ಮ ಸಾಮ್ರಾಜ್ಯ ಕುಸಿಯುತ್ತಿರುವ ಆತಂಕದಲ್ಲಿ ಈಗ ದೇಶಪ್ರೇಮ ಹಾಗೂ ಧರ್ಮಪ್ರೇಮದ ಬೊಬ್ಬೆ ಹೊಡೆಯತೊಡಗಿದ್ದಾರೆ. (ವಿಕ್ರಾಂತ ಕರ್ನಾಟಕದಲ್ಲಿ ಮಾನ್ಯ ಡಿ ಎಸ್ ನಾಗಭೂಷಣರು ಬರೆದ ಲೇಖನದಿಂದ). ಈ ಪ್ರತಾಪಸಿಂಹನೂ ಅದೇ ಸಂಘಪರಿವಾರದ ಮರಿಯಾಗಿರುವುದು ಸ್ಪಷ್ಟವಾಗಿರುವುದರಿಂದ ಆತನಿಂದ ಖಾಲಿ ಬಿಂದಿಗೆಯ ಶಬ್ದದ ಹೊರತು ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ?
ಅದೇ ಪತ್ರಿಕೆಯ ಓದುಗರ ಪತ್ರಗಳ ಅಂಕಣದಲ್ಲಿಯೂ ಅಪ್ಪಿತಪ್ಪಿ ಕೂಡಾ ಕ್ರೈಸ್ತಸಮುದಾಯದ ಪರವಾದ ಪತ್ರಗಳು ಪ್ರಕಟವಾಗುತ್ತಿಲ್ಲ. ನಾಡಿನಲ್ಲಿ ಅನೇಕ ಸಮಸ್ಯೆಗಳಿದ್ದರೂ ಜನರೆಲ್ಲರೂ ಕ್ರೈಸ್ತಸಮುದಾಯದ ವಿರುದ್ಧವೇ ಚಿಂತಿಸುತ್ತಾರೆ ಎಂಬಂತೆ ಆ ಅಂಕಣದ ತುಂಬೆಲ್ಲ ಬರೀ ಅದೇ ವಿಷಯಗಳ ಪತ್ರಗಳನ್ನು ಪ್ರಕಟಿಸಲಾಗುತ್ತಿದೆ.
ಇದೀಗ ಕನ್ನಡದ ಪ್ರಖ್ಯಾತ ಕಾದಂಬರಿಕಾರ ಎಸ್ ಎಲ್ ಭೈರಪ್ಪನವರು ಕ್ರಿಸ್ತೀಕರಣದ ಕುರಿತಂತೆ ಬರೆದ ಲೇಖನಕ್ಕೆ ಒಂದೂವರೆ ಪುಟಗಳನ್ನು ಮೀಸಲಿಟ್ಟ ಈ ಪತ್ರಿಕೆ ಆ ಲೇಖನದ ಕುರಿತ ಚರ್ಚೆಗೆ ತಾನು ವೇದಿಕೆಯಾಗುವುದಾಗಿ ಪ್ರಕಟಿಸಿತು. ಅದರ ಮರುದಿನವೇ ಜಾನ್ ಸಿಕ್ವೆರಾ ಸಮಜಾಯಿಷಿ ಪ್ರಕಟವಾಯಿತು. ಮತ್ತು ಆ ಪ್ರತಿಕ್ರಿಯೆ ಜಾಳಾದ ಹಂದರ ಹೊಂದಿತ್ತು ಮಾತ್ರವಲ್ಲ ಚರ್ಚೆಯನ್ನು ದಾರಿತಪ್ಪಿಸುವ ಆಶಯ ಹೊಂದಿತ್ತು. ಹೀಗೇ ಮತ್ತೂ ಹಲವು ನಮ್ಮ ಸಮುದಾಯದ ವಿರುದ್ಧವಾದ ಪ್ರತಿಕ್ರಿಯೆಗಳು ಬಂದವು. ವಿಜಯಕರ್ನಾಟಕ ಪತ್ರಿಕೆ ಏಕಾಏಕಿ ತನ್ನ ಪ್ರಸರಣ ಸಂಖ್ಯೆ ಹೆಚ್ಚಿಸಿಕೊಳ್ಳುವುದಕ್ಕಾಗಿ ಈ ಒಂದು ಗದ್ದಲವನ್ನು ಹುಟ್ಟುಹಾಕಿತೇನೋ, ಆದರೆ ಸಂಪಾದಕ ವಿಶ್ವೇಶ್ವರಭಟ್ಟನಿಗೆ ಪೇಜಾವರ ಸ್ವಾಮಿಗಳ, ಯಡಿಯೂರಪ್ಪನವರ ಮತ್ತು ಸಂಘಪರಿವಾರದವರ ವಿಶೇಷ ಆಶೀರ್ವಾದಗಳು ಸಿಕ್ಕಿತೆನ್ನಬಹುದು.

ಭಾನುವಾರ, ಜನವರಿ 11, 2009

ಸಾಪ್ತಾಹಿಕ ಪುರವಣಿ ೧೧೦೧೨೦೦೯

ಇಂದಿನ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯ ಲೇಖನಗಳು ನನ್ನ ಮನಸ್ಸಿಗೆ ಬಹುವಾಗಿ ಲಗತ್ತಾದವು.

"ಸಂಕ್ರಾಂತಿಯ ಹಿಗ್ಗು ಕಾಣುವುದು ಸುಗ್ಗಿಯಲ್ಲಿ. ಮುಳುಗಡೆಯ ನಂತರ ಚಿಂದಿಯಾದ ಬದುಕು, ಉಳುವ ಭೂಮಿಯ ತೊಳೆದುಹಾಕಿದ ಯೋಜನೆಗಳ ನಡುವೆ ಮಣ್ಣಿನ ಮಕ್ಕಳೆಲ್ಲಾ ಕಂಗಾಲು. ಬದುಕನ್ನು ಮತ್ತೆ ಕಟ್ಟುವ ಅನಿವಾರ್ಯತೆಗೆ ಮುಖಾಮುಖಿಯಾಗಿರುವ ರೈತವರ್ಗ ಅಸಲಿ ಸುಗ್ಗಿಯನ್ನೂ, ಸಂಕ್ರಮಣವನ್ನೂ ಎದುರು ನೋಡುತ್ತಿದೆ. ಅವರ ಪಥ ಬದಲಾಗುವುದು ಎಂದೋ?" ಎನ್ನವು ಲೇಖನ ’ಸುಗ್ಗಿಯಲ್ಲೂ ಕುಗ್ಗಿದವರು’. ರೈತನ ಹಬ್ಬವಾದ ಸಂಕ್ರಾಂತಿಯು ಹೇಗೆ ರೈತನನ್ನು ನೇಪಥ್ಯಕ್ಕೆ ಸರಿಸುತ್ತಾ ಇತರರ ಹಬ್ಬವಾಗಿದೆ ಎಂಬುದನ್ನು ಸಾರುತ್ತದೆ.

ಹಾಗಂತ, ಸಂಕ್ರಾಂತಿಯ ಸವಿಯನ್ನು ಮೆಲುಕು ಹಾಕದಿರಲು ಸಾಧ್ಯವೇ? "ಹೊಲ ಇದ್ದವರೆಲ್ಲ ತಮ್ಮ ಆಪ್ತೇಷ್ಟರಿಗೆ ’ಸೀತನಿ ತಿನ್ನಾಕ ಹೋಗೂನು ಬರ್‍ರಿ’ ಎಂದು ಆತ್ಮೀಯ ವೀಳ್ಯವಿತ್ತರೆ, ಭೂರಿಭೋಜನದ ಹಬ್ಬವೇ ಆಗಿರುತ್ತದೆ. ಬುತ್ತಿಗೆ ಸಜ್ಜೆ ರೊಟ್ಟಿ, ಝಣಕದ ಒಡಿ, ಎಣ್ಣಿಗಾಯಿ, ಮೊಸರನ್ನದ ಬುತ್ತಿ, ಸೇಂಗಾ ಹಿಂಡಿ, ಗಟ್ಟ ಮೊಸರು, ಗೋಧಿ ಕುಟ್ಟಿದ ಹುಗ್ಗಿ . . . ಜೊತೆಗೆ ಹಸಿಮೆಂತ್ಯ ಸೊಪ್ಪು, ಹೊಲದ ಬದುವಿನ ಮೇಲೆ ಸಿಗುವ ಹಕ್ಕರಿಕೆ, ಎಳೆ ಕಡಲೆಗಿಡದ ಎಲೆಗಳು.. ಹೀಗೆ ಒಂದೆರಡಲ್ಲ, ಹತ್ತು ಹಲವು ಪದಾರ್ಥಗಳೊಂದಿಗೆ ಸಿಹಿ ಸೀತನಿ ಸವಿಯುವ ನೆವದಲ್ಲಿ ಒಂದು ’ಈಟ್ ಔಟ್’ . .

ಇಂದು ಕಾಲೇಜಿನಲ್ಲಿ ಗೋಕಾಕರ ಮೊದಲ ಉಪನ್ಯಾಸ, ಅವರನ್ನು ಗೇಲಿ ಮಾಡಿ ಕೆಣಕಲು ನಾವು ಪಣ ತೊಟ್ಟಿದ್ದೆವು. ಆದರೆ ತರಗತಿ ಪ್ರಾರಂಭವಾಗುತ್ತಿದ್ದಂತೆ ಅವರ ಮಾತಿನ ಓಘದ ಝರಿಗೆ ನಾವೆಲ್ಲ ಮಂತ್ರಮುಗ್ದರಾಗಿಬಿಟ್ಟೆವು. ಅದೇನು ಕವಿಯೊಬ್ಬ ಕಾವ್ಯದ ವಿಮರ್ಶೆ ಮಾಡುತ್ತಿದ್ದಾನೋ ಅಥವಾ ವಿಮರ್ಶೆಯೇ ಕಾವ್ಯವಾಗುತ್ತಿದೆಯೋ . .

ಕಿಟೆಲ್ ತಮ್ಮ ನಿಘಂಟಿನಲ್ಲಿ "ಇದ್ದಕ್ಕಿದ್ದ ಹಾಗೆ" ಎಂಬುದು ಜನರ ಮಾತಿನಲ್ಲಿ ಬಳಕೆಯಾಗಿದೆ ಎಂದು ಹೇಳುತ್ತಾರೆ. ಅಲ್ಲದೆ ಬರವಣಿಗೆಯಲ್ಲಿ ಮುಂಬಯಿ ಪ್ರಾಂತ್ಯದ ಶಾಲಾ ಪುಸ್ತಕಗಳಲ್ಲಿ ಬಳಕೆಯಾಗಿದೆಯೆಂದೂ ಹೇಳಿದ್ದಾರೆ. ಇದ್ದಕ್ಕಿದ್ದ ಹಾಗೆ ಎಂಬುದಕ್ಕೆ ಇರುವಂತೆಯೇ, ಯಥಾವತ್ತಾಗಿ, ತದ್ದವತ್ತಾಗೆ ಎಂಬ ತಿರುಳುಗಳನ್ನು ಕಿಟೆಲ್ ಅವರು ಗುರುತಿಸುತ್ತಾರೆ. ಈಗ ೧.ನಡುಹಗಲಲ್ಲಿ ಇದ್ದಕ್ಕಿದ್ದ ಹಾಗೆ ಮೋಡ ಕವಿದು ಮಳೆ ಸುರಿಯಿತು. ೨. ನೀನು ಇದ್ದಕ್ಕಿದ್ದ ಹಾಗೆ ಬಂದು ಕೇಳಿದರೆ ಅಷ್ಟು ಹಣ ನಾನು ಎಲ್ಲಿ ತರಲಿ? . . ಅಂದರೆ ನೂರು ವರುಷಗಳ ಅವಧಿಯಲ್ಲಿ ಇದ್ದಕ್ಕಿದ್ದ ಹಾಗೆ ಎಂಬ ರಚನೆಯ ತಿರುಳಿನಲ್ಲಿ ಎದ್ದುಕಾಣುವ ಬದಲಾವಣೆಯಾಗಿದೆ ಎಂದಾಯ್ತು.

ಸಿದ್ದರಾಮನು ಎಂಬ ಗೋವು ಬದ್ದನಾಗಿರೆ ಹಸ್ತದೊಳಗೆ ಗದ್ದುಗೆಯು ಸಿಗದಿರಲು ಆಗ ಎದ್ದು ನಡೆದನು ಕೇರ್‍ಳಕೆ | ಅಂಕಿ ಇದಿಗೋ ಸಂಖ್ಯೆ ಇದಿಗೋ ಸಂಕ್ರಮಣ ನಿರ್ಧಾರವಿದಿಗೋ ಬಿಂಕದಿಂದಲೆ ಆಚೆ ನಡೆವೆನು ಥಿಂಕು ಮಾಡಿರಿ ಎಂದನು

ಇವಿಷ್ಟಲ್ಲದೆ ಪ್ರಿಯಾ ತೆಂಡೂಲ್ಕರರ ಕತೆ, ಹರಿಯಬ್ಬೆ ಪ್ರೇಮಕುಮಾರರ ಸಂಸ್ಕೃತಿ ಮೆಲುಕು, ತಾರಿಣಿ ಶುಭದಾಯಿನಿಯವರ ಕಾವ್ಯದೃಷ್ಟಿ, ಲಕ್ಷ್ಮಣ ಕೊಡಸೆಯವರ ವಿಮರ್ಶೆ, ಯಲ್ಲಾಪ್ರಗಡ ಸುಬ್ಬರಾಯರ ಬಗ್ಗೆ ಬಿಂದುಸಾರ ಅವರ ಲೇಖನ, ವಿಜ್ಞಾನ-ವಿನೋದ, ಸಾಗರಕ್ಕೆ ೪೮ ಕಿಲೋಮೀಟರು ದೂರದಲ್ಲಿರುವ ಸಿಗಂದೂರಿಗೆ ನೀರಯಾತ್ರೆ, ಭುಬನೇಶ್ವರದಿಂದ ಪುರಿಗೆ ಹೋಗುವ ದಾರಿಯಲ್ಲಿರುವ ಪಿಪಿಲಿ ಎಂಬ ಪುಟ್ಟ ಗ್ರಾಮದ ಕರಕುಶಲಕಲೆ ಇವುಗಳೆಲ್ಲ ಮನಸೆಳೆಯುತ್ತವೆ.

ಒಟ್ಟಿನಲ್ಲಿ ಸಾಪ್ತಾಹಿಕ ಪುರವಣಿ ಒಂದು ಓದಲೇಬೇಕಾದ ಸರಕು.