ಶುಕ್ರವಾರ, ಫೆಬ್ರವರಿ 22, 2008

ಮತಾಂತರ

ಮತಾಂತರದ ಕುರಿತಂತೆ ಇತ್ತೀಚೆಗೆ ಪತ್ರಿಕೆಗಳಲ್ಲಿ ಬಹಳಷ್ಟು ಸುದ್ದಿಗಳು ಪ್ರಕಟವಾಗುತ್ತಿವೆ. ಕೆಲವರು ಭಾವಿಸುವಂತೆ ಕ್ರೈಸ್ತರು ಜಗತ್ತಿನಲ್ಲಿ ತಮ್ಮ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಮತಾಂತರ ನಡೆಸುತ್ತಿದ್ದಾರೆ ಎನ್ನುವುದು ಸರಿಯಲ್ಲ. ಕ್ರೈಸ್ತಧರ್ಮದ ವ್ಯಾಖ್ಯೆಯಲ್ಲಿ ಕ್ರಿಸ್ತತತ್ವಗಳನ್ನು ಜಗತ್ತಿನೆಲ್ಲೆಡೆ ಸಾರಬೇಕೆನ್ನುವ ಕಾಳಜಿ ಇದೆಯೇ ಹೊರತು ಮತಾಂತರ ಮಾಡಬೇಕು ಎಂದಿಲ್ಲ. ಹಣದ ಎದುರಲ್ಲಿ, ಕತ್ತಿಯ ತುದಿಯಲ್ಲಿ ನಡೆಯುವ ಮತಾಂತರ ಮತಾಂತರವೇ ಅಲ್ಲವೆಂದು ಕ್ರೈಸ್ತಧರ್ಮ ಹೇಳುತ್ತದೆ. ಧಾರ್ಮಿಕತೆ ಗೊತ್ತಿಲ್ಲದ ರಾಜಕೀಯ ನಾಯಕರು ತಮ್ಮ ಸ್ವಲಾಭಕ್ಕಾಗಿ ಆ ರೀತಿ ಮಾಡಿದ್ದು ಇತಿಹಾಸದ ದುರಂತ. ಆದರೆ ಕ್ರೈಸ್ತಧರ್ಮ ಅದನ್ನು ಮಾನ್ಯಗೊಳಿಸಲಿಲ್ಲವೆಂಬುದೂ ಅಷ್ಟೇ ಸತ್ಯ. ವ್ಯಕ್ತಿಯೊಬ್ಬ ಪೂರ್ಣ ಪರಿವರ್ತನೆಗೊಂಡು ತಾನೇ ತಾನಾಗಿ ಕ್ರೈಸ್ತನಾಗುತ್ತೇನೆಂದು ಮುಂದೆ ಬಂದರೂ ಚರ್ಚು ಒಮ್ಮಿಂದೊಮ್ಮೆಲೇ ಕ್ರೈಸ್ತದೀಕ್ಷೆ ಕೊಟ್ಟುಬಿಡುವುದಿಲ್ಲ. ಅದಕ್ಕೆ ತನ್ನದೇ ಆದ ರೀತಿನೀತಿಗಳಿವೆ. ಇದನ್ನರಿಯದ ಮೂಢಜನರು ಚರ್ಚಿಗೆ ತೆರಳಿ ತೀರ್ಥ ಪ್ರೋಕ್ಷಣೆಯಾದ ಕೂಡಲೇ ತಾವು ಕ್ರೈಸ್ತರಾದೆವೆಂದು ಭಾವಿಸಿಕೊಳ್ಳುತ್ತಾರೆ. ಇತರರೂ ಇದು ಹೌದೆಂದು ತಿಳಿದುಕೊಳ್ಳುತ್ತಾರೆ. ಕ್ರೈಸ್ತಧರ್ಮವೆಂಬುದು ಕೆಲವರಿಗೆ ವಂಶಪಾರಂಪರ್ಯದ ಬಳುವಳಿ ಮತ್ತೆ ಕೆಲವರಿಗೆ ಅದು ಒಂದು ದಿವ್ಯ ಅನುಭವ.

ಕಣ್ಣಿಗೆ ಕಣ್ಣು ಹಲ್ಲಿಗೆ ಹಲ್ಲು ಎಂಬ ಮೃಗೀಯ ನಿಯಮಗಳ ಬದಲಿಗೆ ಬಲಗೆನ್ನೆಗೆ ಹೊಡೆದವಗೆ ಎಡಗೆನ್ನೆ ತೋರು, ನಿನ್ನ ಶತ್ರುಗಳನ್ನೂ ಪ್ರೀತಿಸು, ನಿನಗೆ ಕೆಡಕು ಮಾಡುವವನನ್ನು ಕ್ಷಮಿಸು, ದೊರೆಯಂತೆ ಭರ್ತ್ಸನೆ ತೋರದೆ ಸೇವಕನಂತೆ ದೀನನಾಗಿರು, ಬೇರೆಯವರ ತಪ್ಪನ್ನು ಎತ್ತಿ ತೋರುವ ಮೊದಲು ನಿನ್ನ ಕಣ್ಣನ್ನು ಸ್ವಚ್ಛಪಡಿಸಿಕೋ, ನಿನ್ನನ್ನು ವಿರೋಧಿಸುವವನಿಗೂ ಸ್ನೇಹಭಾವ ತೋರು. ಕ್ಷಮೆ ಇರುವಲ್ಲಿ ಪ್ರೀತಿ ವಿಶ್ವಾಸ ಮೊಳೆಯುತ್ತದೆ. ಹೃದಯವನ್ನು ಪವಿತ್ರವಾಗಿಸಿಕೊಂಡವನು ದೇವರನ್ನು ಕಾಣುವನು ಎಲ್ಲ ಮಾನವರೂ ಒಂದೇ ಎಂಬ ಉದಾತ್ತ ಭಾವ ಉಂಟಾದಾಗ ಜಗತ್ತು ಸುಂದರವಾಗುತ್ತದೆ ಎಂಬುದು ಕ್ರೈಸ್ತಧರ್ಮದ ತಿರುಳು. ಈ ತತ್ವವನ್ನಾಚರಿಸಿದವನೇ ನಿಜಕ್ರೈಸ್ತ. ಕ್ರೈಸ್ತ ಎನಿಸಿಕೊಳ್ಳವುದು ಉದಾತ್ತ ಮನೋವಿಕಾಸದ ಪರಮಾವಧಿ. ಹಾಗೆ ನೋಡಿದರೆ ಮಹಾತ್ಮಗಾಂಧಿಯವರು ಒಬ್ಬ ಅಪ್ಪಟ ಕ್ರೈಸ್ತ. ಇದರರ್ಥ ಕ್ರಿಸ್ತನನ್ನು ಅರಿಯಲು ಚರ್ಚಿಗೇ ಹೋಗಬೇಕೆಂದಿಲ್ಲ. ವಿಪರ್ಯಾಸವೆಂದರೆ ನಮ್ಮ ಚರ್ಚಿನ ಎಷ್ಟೋ ಪಾದ್ರಿಗಳು ಬಿಪಪರು ಕ್ರೈಸ್ತರೇ ಅಲ್ಲ. ಶಾಲೆ ಆಸ್ಪತ್ರೆಗಳಲ್ಲಿ ಹಣ ಸುಲಿಯುವ ಮನುಷ್ಯತ್ವವಿಲ್ಲದ ಕ್ರೈಸ್ತ ಸಂನ್ಯಾಸಿನಿಯರೂ ಕ್ರೈಸ್ತರಲ್ಲ.

ಶತಮಾನಗಳ ಹಿಂದೆಯೂ ಚರ್ಚು ಹೀಗೆ ತನ್ನ ಮೇರೆ ಮಿರಿದಾಗ ಮಾರ್ಟಿನ್ ಲೂಥರನು ಬಂಡಾಯವೆದ್ದು ಚರ್ಚಿನ ಹುಳುಕುಗಳನ್ನು ಎತ್ತಿ ತೋರಿದ. ತರುವಾಯ ಚರ್ಚು ತನ್ನ ಆತ್ಮಶೋಧನೆ ನಡೆಸಿ ಸ್ವಜನಪಕ್ಷಪಾತವನ್ನೂ ರಾಜಕೀಯವನ್ನೂ ದೂರವಿಟ್ಟು ವಿಚಾರವಂತಿಕೆಗೆ ಹಾಗೂ ಪ್ರಗತಿಪರ ಧೋರಣೆಗೆ ಪಕ್ಕಾಗಿದೆ. ಇಂದು ಚರ್ಚು ಪವಿತ್ರಬೈಬಲ್ ಹಾಗೂ ತನ್ನದೇ ಆದ ನೀತಿಸಂಹಿತೆಗಳನ್ನು ಮುಂದಿಟ್ಟರೂ ನೆಲದ ನಿಯಮಗಳನ್ನೂ ವಿಜ್ಞಾನದ ಆವಿಷ್ಕಾರಗಳನ್ನೂ ಗೌರವಿಸುತ್ತಾ ಬರುತ್ತಿದೆ.

ಇನ್ನೂ ಕೆಲವರು ಯೂರೋಪ್ ಅಮೆರಿಕೆಗಳಲ್ಲಿರುವ ಎಲ್ಲರೂ ಕ್ರೈಸ್ತರೆಂದು ಭಾವಿಸಿದಂತಿದೆ. ಅಲ್ಲಿನ ಚರ್ಚುಗಳು ಹಾಳು ಸುರಿಯುತ್ತಿವೆ ಎಂಬ ಅಂಶ ಅವರಿಗೆ ತಿಳಿದಂತಿಲ್ಲ. ಅಲ್ಲಿನ ಜನ ಕ್ರೈಸ್ತಧರ್ಮಕ್ಕಾಗಿ ಬೇರೊಂದು ದೇಶದ ಮೇಲೆ ದ್ವೇಷ ಸಾಧಿಸುತ್ತಾರೆಂಬ ಅಥವಾ ಯುದ್ಧ ಸಾರುತ್ತಾರೆಂಬ ಮಾತು ಬಾಲಿಶವಾಗುತ್ತದೆ. ಏಕೆಂದರೆ ಎರಡು ಮಹಾಯುದ್ಧಗಳು ನಡೆದದ್ದು ರಾಜಕೀಯ ಹಿತಾಸಕ್ತಿಗಾಗಿ ಎಂಬುದು ಸರ್ವವೇದ್ಯ ಸಂಗತಿ. ಅಂತೆಯೇ ಅಮೆರಿಕದ ವಿಯೆಟ್ನಾಂ ಮೇಲಿನ ಯುದ್ಧವು ಜಗತ್ತಿನ ಪೂರ್ವಭಾಗದಲ್ಲಿ ಅದರ ಆಧಿಪತ್ಯ ಸ್ಥಾಪಿಸುವ ಹುನ್ನಾರವಾಗಿತ್ತು, ಇರಾಕಿನ ಮೇಲಿನ ದಾಳಿ ವ್ಯಾಪಾರೀ ಕಾರಣವಾಗಿತ್ತು ಹಾಗೂ ಆಫ್ಘನ್ ಮೇಲಿನ ದಾಳಿ ಸೇಡಿನ ಕ್ರಿಯೆಯಾಗಿತ್ತು. ಇವಾವುದಕ್ಕೂ ಚರ್ಚು ತನ್ನ ಆಶೀರ್ವಾದ ಹಸ್ತ ತೋರಿಲ್ಲ. ಇವಾವುದೂ ಧರ್ಮಯುದ್ಧಗಳ ಪರಿಧಿಗೆ ಬರುವುದಿಲ್ಲ.

ಗುರುವಾರ, ಫೆಬ್ರವರಿ 21, 2008

ಯೇಸುಕ್ರಿಸ್ತ ಎಂಬ ಉಚ್ಚಾರಣೆ

ಹೀಬ್ರೂ ಭಾಷೆಯ ಜೇಸು ಎಂಬ ಪದವನ್ನು ಅಂದಿನ ಕಾಲದ ವಿದ್ವತ್ ಭಾಷೆಯಾಗಿದ್ದ ಗ್ರೀಕ್ನಲ್ಲಿ Jesus (ಜೇಸುಸ್) ಎಂದು ಬರೆಯುತ್ತಿದ್ದರು. ಆದರೆ ಗ್ರೀಕರು 'ಜ' ಅಕ್ಷರವನ್ನು 'ಯ' ಎಂಬುದಾಗಿ ಉಚ್ಚರಿಸುತ್ತಾರೆ. (ನಮ್ಮ ದೇಶದಲ್ಲಿ ಒರಿಸ್ಸಾ, ಛತ್ತೀಸಗಡದಿಂದ ಹಿಡಿದು ಈಶಾನ್ಯ ಭಾಗದ ಎಲ್ಲ ರಾಜ್ಯಗಳ ಜನರು 'ಯ'ಕಾರಕ್ಕೆ 'ಜ'ಕಾರ ಬಳಸುವುದನ್ನು ನೋಡಬಹುದು). ಗ್ರೀಕರ ಪ್ರಕಾರ ಅವರ ದೇವರ ಹೆಸರು AJAX ಎಂಬುದನ್ನು 'ಅಯಾಸ್' ಎಂದು ಉಚ್ಚರಿಸುವಂತೆ 'Jesus' ಎಂಬುದು 'ಯೇಸು' ಎಂದಾಯಿತು.

ಅದೇರೀತಿ ಜೆಹೋವ>ಯೆಹೋವ, ಜೂದ>ಯೂದ, ಜೋಸೆಫ್>ಯೋಸೆಫ್, ಜೋರ್ಡಾನ್>ಯೋರ್ದಾನ್, ಜೋನಾ>ಯೋನಾ, ಜೊವಾನ್ನ>ಯೊವಾನ್ನ, ಜೆರಿಕೋ>ಯೆರಿಕೋ, ಜೆರೆಮಿಯ>ಯೆರೆಮಿಯ, ಜೆಹೊಶುವ>ಯೆಹೊಶುವ ಇತ್ಯಾದಿಗಳನ್ನು ಹೆಸರಿಸಬಹುದು.

ಕನ್ನಡದ ಸಂದರ್ಭದಲ್ಲಿ ಕೆಲವರು ಯೇಸು ಎಂಬುದನ್ನು ಏಸು ಎಂದು ಬರೆಯುವುದನ್ನು ಕಂಡಿದ್ದೇವೆ. ಮೇಲಿನ ಎಲ್ಲ ಉದಾಹರಣೆಗಳಲ್ಲಿ ಜ ಮತ್ತು ಯ ಎರಡೂ ವ್ಯಂಜನಗಳೇ ಆಗಿವೆ. ಆದರೆ ಇಲ್ಲಿ ನಾವು ತಿಳಿದಂತೆ ಎ ಏ ಗಳು ನಮ್ಮ ಅಕ್ಷರಮಾಲೆಯಲ್ಲಿ ಸ್ವರಗಳಾಗಿ ಸ್ಥಾನ ಪಡೆದಿವೆ. ಮೇಲಿನ ಹೆಸರುಗಳಿಗೆ ಸ್ವರಗಳನ್ನು ಬಳಸುವುದಾದರೆ ಯೇಸುವನ್ನು ಏಸುವಾಗಿ, ಯೆಹೋವನನ್ನು ಎಹೋವನನ್ನಾಗಿ, ಜೆರಿಕೋವನ್ನು ಎರಿಕೋವನ್ನಾಗಿ ಮಾಡಬಹುದೇನೋ ಸರಿ. ಆದರೆ ಜೋಸೆಫ್, ಜೊವಾನ್ನ ಇತ್ಯಾದಿಗಳನ್ನು ಹೇಗೆ ಬರೆಯುವುದು?

ಸಂಸ್ಕಾರದ ವಿವಾದ

ಅನಂತಮೂರ್ತಿಯವರು ಅತ್ಯಂತ ಪ್ರಗತಿಪರರಾಗಿದ್ದೂ ತಮ್ಮ ಸಾಹಿತ್ಯದ ಮೂಲಕ ಸಮಾಜಕ್ಕೆ ನೇರವಾಗಿ ಸಂದೇಶ ಕೊಡಲು ಹೋಗದೇ ಕನ್ನಡಿ ತೋರಿದವರು. ಕ್ರಿಶ್ಚಿಯನ್ ಹೆಣ್ಣನ್ನು ಮದುವೆಯಾಗಿರುವುದರಿಂದ ತಮ್ಮ ಸಂಸ್ಕಾರ ಹೇಗಿದ್ದೀತು ಎಂಬುದರ ಸುಳಿವನ್ನು ಇಲ್ಲಿ ನೀಡಿದ್ದಾರೆಂದು ಕುಹಕಿಗಳು ಆಡಿಕೊಂಡರಂತೆ. ಪರ್ವ ಬರೆದ ಭೈರಪ್ಪ ಪರ್ವರ್ಟೆಡ್ ಭೈರಪ್ಪ ಎನ್ನಲಿಲ್ಲವೇ ಹಾಗೆ. ತಮ್ಮ ಸಂಸ್ಕಾರ ಕಾದಂಬರಿಯಲ್ಲಿ ಅನಂತಮೂರ್ತಿಯವರು ಇಡೀ ವ್ಯವಸ್ಧೆಗೇ ಸಂಸ್ಕಾರ ಆಗಬೇಕಿದೆ ಎಂಬುದನ್ನು ಧ್ವನಿಸುತ್ತಾರೆ.
ಪ್ರಾಣೇಶಾಚಾರ್ಯ ಹಾಗೂ ನಾರಾಯಣಪ್ಪ ಈ ಕೃತಿಯಲ್ಲಿ ಎರಡು ಧೃವಗಳಾಗಿ ನಿಲ್ಲುತ್ತಾರೆ. ಪ್ರಾಣೇಶಾಚಾರ್ಯ ಧರ್ಮಭೀರು ಹಾಗೂ ಜನತೆಗೆ ಬುದ್ಧಿ ಹೇಳಬಲ್ಲ ಸಾತ್ವಿಕ. ಆದರೆ ನಾರಾಯಣಪ್ಪ ಎಲ್ಲ ಧರ್ಮಕಟ್ಟಲೆಗಳನ್ನು ಧಿಕ್ಕರಿಸಿ ಚಂದ್ರಿಯನ್ನು ಮಡಗಿಕೊಂಡ ಲಂಪಟ. ಪ್ರಾಣೇಶಾಚಾರ್ಯನ ಪುರಾಣಕ್ಕಿಂತಲೂ ಜನಗಳಿಗೆ ನಾರಾಯಣಪ್ಪನ ಕ್ಯಾಸೆಟ್ ಮೋಡಿಯೇ ಹುಚ್ಚು ಹಿಡಿಸುತ್ತದೆ. ಹೀಗೆ ನಾರಾಯಣಪ್ಪ ವಾಸ್ತವದ ಸಂಕೇತವಾಗುತ್ತಾನೆ.
ನಾರಾಯಣಪ್ಪ ಸತ್ತ ಮೇಲೆ ಚಂದ್ರಿ ಬಂದು ಆತನಿಗೆ ಸಂಸ್ಕಾರ ಮಾಡಬೇಕೆಂದು ಕೇಳಿಕೊಳ್ಳುತ್ತಾಳೆ. ಅದಕ್ಕೆ ಪ್ರಾಣೇಶಾಚಾರ್ಯ ಹಿಂಜರಿದರೂ ಕೊನೆಗೆ ಹಾಸಿಗೆ ಹಿಡಿದಿರುವ ತನ್ನ ಪತ್ನಿಗಾಗಿ ಚಂದ್ರಿಯ ನೆರವನ್ನು ಪಡೆಯಬೇಕಾಗುತ್ತದೆ. ಚಂದ್ರಿಯ ಸಂಗದಲ್ಲಿ ಆತ ನೆಲದ ವಾಸನೆ ಏನೆಂದು ಅರಿಯುತ್ತಾನೆ ಹಾಗೆಯೇ ಪ್ರಾಣೇಶಾಚಾರ್ಯನ ಸನಿಹದಲ್ಲಿ ಆಕೆ ಆಗಸದ ಸಪ್ತರ್ಷಿ ಮಂಡಲವನ್ನು ದರ್ಶಿಸುತ್ತಾಳೆ. (ಇದು ಅಶ್ಲೀಲವೆನಿಸಿದರೆ ಓದಬೇಡಿ, ಅಷ್ಟೇ) ಈ ಕ್ರಿಯೆ ನಡೆದ ಮೇಲೆ ಪ್ರಾಣೇಶಾಚಾರ್ಯನಿಗೆ ತಾನು ತಪ್ಪು ಮಾಡಿದ ಅರಿವುಂಟಾಗಿ ಅಲ್ಲಿ ನಿಲ್ಲದೆ ಓಡಿಹೋಗುತ್ತಾನೆ. ಓಡಿ ಹೋದವನು ಹೋಟೆಲಿಗೆ ನುಗ್ಗಿ ಕಾಫಿ ಹೀರುತ್ತಾನೆ. ಮಡಿವಂತ ಬ್ರಾಹ್ಮಣರು ಹೋಟೆಲಿನಲ್ಲಿ ಕಾಫಿ ಕುಡಿಯುವುದೆಂದರೆ ನಿಷಿದ್ಧವೆನಿಸಿದ್ದ ಆ ಕಾಲದಲ್ಲಿ ಪ್ರಾಣೇಶಾಚಾರ್ಯನ ಕ್ರಿಯೆ ಬದಲಾವಣೆಯ ಸಂಕೇತವಾಗಿ ಕಾಣುತ್ತದೆ.
ಇಲ್ಲಿ ನಾರಣಪ್ಪನ ಹೆಣದ ರೂಪದಲ್ಲಿ ನಮ್ಮ ದೇಶದ ಒಟ್ಟು ವ್ಯವಸ್ಥೆಯೇ ಕೊಳೆತು ನಾರುತ್ತಿದೆ. ಅದಕ್ಕೆ ಸಂಸ್ಕಾರ ಕೂಡಲೇ ಆಗಬೇಕು. ವ್ಯವಸ್ಥೆಯ ಅಂಗವಾದ ಚಂದ್ರಿಯಂಥ ಸೂಳೆಯರೂ ಸಂಸ್ಕಾರಕ್ಕಾಗಿ ಹಪಹಪಿಸುವಾಗ ಹೊಲಸಿನಲ್ಲೇ ಮುಳುಗಿರುವ ಕರ್ಮಠರು ಶಾಸ್ತ್ರಗಳ ತೌಲನಿಕ ಮೀಮಾಂಸೆಯಲ್ಲಿ ತೊಡಗಿದ್ದಾರೆ. ಆಗ ಅನ್ಯಧರ್ಮದ ಅನ್ಯಸಂಸ್ಕೃತಿಯ ಸಜ್ಜನನೊಬ್ಬ ಅವತರಿಸಿ ಸಂಸ್ಕಾರಗೈಯುವ ಪ್ರಕ್ರಿಯೆಯನ್ನು ಗಮನಿಸಿ ಸಮಾಜ ಪರಿವರ್ತನೆಗೆ ಇಂಬುಗೊಡಬೇಕಾದ ಶಿಕ್ಷಕರು ನೆಲದವಾಸನೆ ಮತ್ತು ನಕ್ಷತ್ರದರ್ಶನಗಳ ಜುಗಲಬಂದಿಯಲ್ಲಿ ತೊಡಗಿರುವುದೇ ನಮ್ಮ ಶಿಕ್ಷಣವ್ಯವಸ್ಥೆಯ ದುರಂತ.