ಬುಧವಾರ, ಮಾರ್ಚ್ 20, 2013

ಕೆಂಪ್ಟಿ ಫಾಲ್ಸ್

ಮಸ್ಸೂರಿಗೆ ಹೋದವರು ಕೆಂಪ್ಟಿ ಜಲಪಾತವನ್ನು ನೋಡದೆ ಹಿಂದಿರುಗಿದರೆ ಆ ಪ್ರಯಾಣ ವ್ಯರ್ಥವೇ ಸರಿ. ಮಸೂರಿಯಿಂದ ಚಕ್ರಾತಾ ರಸ್ತೆಯಲ್ಲಿ ಸುಮಾರು ೧೮ ಕಿಲೋಮೀಟರು ದೂರದಲ್ಲಿರುವ ಕೆಂಪ್ಟಿ ಫಾಲ್ ಒಂದು ಮನಮೋಹಕ ತಾಣ. ಡೆಹರಾದೂನಿನಿಂದಲೂ ಸರಿಸುಮಾರು ಅಷ್ಟೇ ದೂರವಿದ್ದು ಅಲ್ಲಿಂದಲೂ ನೇರವಾಗಿ ಬರಬಹುದು. ಸಮುದ್ರ ಮಟ್ಟದಿಂದ ೧೩೬೪ಮೀಟರು (೪೪೭೫ ಅಡಿ)ಗಳ ಮೇಲೆ ಇರುವ ಈ ಪ್ರವಾಸಿ ತಾಣವು ಹೆಚ್ಚಿನ ಜನರಿಗೆ ತಿಳಿದಿಲ್ಲ. ಜಾನ್ ಮೆಕಿನನ್ ಎಂಬ ಬ್ರಿಟಿಷ್ ಅಧಿಕಾರಿಯು ೧೮೩೫ರಲ್ಲಿ ಈ ತಾಣವನ್ನು ಅಭಿವೃದ್ಧಿ ಪಡಿಸಿದನೆಂದು ಹೇಳಲಾಗುತ್ತದೆ. ಸುತ್ತಮುತ್ತಲಿನ ರಮಣೀಯ ದೃಶ್ಯಾವಳಿ, ವಿಶಾಲವೂ ವಿಸ್ತಾರವೂ ಆದ ಪರಿಸರದ ಸೊಬಗು, ರುದ್ರಗಾಂಭೀರ್ಯದಲ್ಲಿ ಧುಮ್ಮಿಕ್ಕುವ ನೀರು ಇವುಗಳ ನಡುವೆ ಸಮಯ ಕಳೆಯುವುದೇ ತಿಳಿಯದ ಈ ತಾಣ ಮರೆಯಲು ಸಾಧ್ಯವಿಲ್ಲ. ಬ್ರಿಟಿಷರು ಬಿಡುವಾದಾಗ ಈ ಸುಂದರ ಜಾಗದಲ್ಲಿ ಶಿಬಿರ ಹೂಡಿ ಚಹಾ ಸವಿಯುತ್ತಿದ್ದರಂತೆ. ಆದ್ದರಿಂದಲೇ ಈ ಸ್ಥಳಕ್ಕೆ CAMP TEA ಎಂಬ ಹೆಸರುಂಟಾಗಿ ಅದೇ ಆಮೇಲೆ KEMPTY ಆಗಿದೆ ಎನ್ನಲಾಗಿದೆ.
ಬಂಗ್ಲೋ ಕಿ ಕಂಡಿ ಎಂಬ ಹಳ್ಳಿಯಲ್ಲಿ ಸಣ್ಣ ಚಿಲುಮೆಯಾಗಿ ಹುಟ್ಟುವ ಈ ನೀರು ಹಲವು ತೊರೆಗಳನ್ನು ಕೂಡಿಕೊಂಡು ಕೆಂಪ್ಟಿಯ ಬಳಿ ಬಂಡೆಗಳ ಬಳಿಸಾರಿ ೪೦ಅಡಿಗಳ ಎತ್ತರದಿಂದ ಧುಮ್ಮಿಕ್ಕುತ್ತದೆ. ಐದು ಶಾಖೆಗಳಾಗಿ ಬೀಳುವ ಜಲಧಾರೆಗೆ ಮೈಯೊಡ್ಡಿ ಬೆಚ್ಚನೆಯ ಬಿಸಿಲಿಗೆ ತುಂತುರ ನೀರ ಹನಿಯ ಮೇಲೆ ಅರಳುವ ನವಿರಾದ ಕಾಮನಬಿಲ್ಲನ್ನು ಸವರುತ್ತಾ, ಶುಭ್ರಸ್ಫಟಿಕ ನೀರಲ್ಲಿ ಈಜುತ್ತಾ, ಗೆಳೆಯ ಗೆಳತಿಯರತ್ತ ನೀರು ಎರಚುತ್ತಾ ಹಾಡುತ್ತ ಕೂಗುತ್ತಾ ಇಲ್ಲಿ ಎಷ್ಟು ಹೊತ್ತಾದರೂ ಮೈಮರೆಯಬಹುದು. ನೀರಿಗಿಳಿಯಲು ಮನಸ್ಸಿಲ್ಲದಿದ್ದರೆ ಜಲಪಾತವನ್ನೇ ನೋಡುತ್ತಾ ಪಾಪ್ ಕಾರ್ನ್ ಮೆಲ್ಲಬಹುದು, ಬಿಸಿಬಿಸಿಯಾದ ಆಲೂಪರಾಟದೊಂದಿಗೆ ಮೊಟ್ಟೆಪಲ್ಯವನ್ನು ಮುಕ್ಕುತ್ತಾ ಜಲಪಾತದ ಎತ್ತರವನ್ನು ಗುಣಿಸಬಹುದು. ಬಿಸಿಯಾದ ಮಸಾಲೆ ಚಹಾ ಹೀರುತ್ತಾ ಸಂಗಾತಿಗಳನ್ನು ಚುಡಾಯಿಸಬಹುದು. ಒಟ್ಟಿನಲ್ಲಿ ದಿನವಿಡೀ ಕಾಲ ಕಳೆಯಲು ಹೇಳಿ ಮಾಡಿಸಿದ ಜಾಗವಿದು.
ಮಸ್ಸೂರಿಯಿಂದ ಸ್ವಲ್ಪ ಹೊರಗೆ ಟ್ಯಾಕ್ಸಿ ಸ್ಟ್ಯಾಂಡ್ ಬಳಿ ಸುಮೊ ಅಥವಾ ಸಫಾರಿ ಗಾಡಿಗಳು ನಿಂತು ಕೆಂಪ್ಟಿಗೆ ಕರೆದೊಯ್ಯುತ್ತವೆ. ಹಿಮಾಲಯದ ಪರ್ವತಶ್ರೇಣಿಯ ನಡುವೆ ಮೋಡಗಳಲ್ಲಿ ತೇಲುತ್ತಾ ಆಳ ತಿರುವುಗಳಲ್ಲಿ ಇಳಿಯುತ್ತಾ ಕುಳಿರ್ಗಾಳಿಯ ಕಂಪು ಸವಿಯುತ್ತಾ ಉಲ್ಲಾಸದ ಪಯಣ ಸಾಗುತ್ತದೆ. ಜಲಪಾತ ಇನ್ನೂ ಎರಡು ಕಿಲೊಮೀಟರು ಇರುವಂತೆಯೇ ಅದರ ಸದ್ದು ಅನುರಣಿಸುತ್ತದೆ. ಒಂದು ಸುದೀರ್ಘ ವರ್ತುಳವನ್ನು ಸುತ್ತಿ ಜಲಪಾತದ ಬಳಿಗೆ ಗಾಡಿ ಬಂದು ನಿಲ್ಲುವ ವೇಳೆಗೆ ನಿಮ್ಮ ಕ್ಯಾಮೆರಾವು ಜಲಪಾತದ ಹಲವು ದೂರದೃಶ್ಯಗಳನ್ನು ಕ್ಲಿಕ್ಕಿಸಿರುತ್ತೆ. ರಸ್ತೆಯ ತಡಿಯಲ್ಲೇ ಸೇತುವೆಯ ಮೂಲಕ ಹರಿದ ನೊರೆನೊರೆಯಾದ ನದೀನೀರು ಸನಿಹದಲ್ಲೇ ಕೆಳಕ್ಕೆ ಬೀಳುವ ಸದ್ದಿನೊಂದಿಗೆ ಪ್ರವಾಸಿಗರ ಕೇಕೆ ಮಿಳಿತವಾಗಿ ಕೇಳಿಬರುತ್ತದೆ. ಇಲ್ಲಿಂದ ಮುಂದೆ ನಿಮ್ಮ ವಾಹನ ಸಾಗದು. ನೀವು ಕೆಳಗಿಳಿದು ನಡೆಯುತ್ತಾ ಅಂಗಡಿ ಸಾಲಿನ ನಡುವೆ ಜಲಪಾತದೆಡೆಗೆ ಸಾಗುವ ಮೆಟ್ಟಿಲುಗಳಿಗಾಗಿ ತಡಕುತ್ತೀರಿ. ನಿಮ್ಮ ತಡಕಾಟ ಕಂಡು ಅಲ್ಲಿನ ಸ್ನೇಹಪರ ಘರವಾಲಿ ಜನ ನಿಮಗೆ ಮಾರ್ಗದರ್ಶನ ಮಾಡುತ್ತಾರೆ. ಮೆಟ್ಟಲಿಳಿಯಲು ಕಷ್ಟವಾದವರಿಗೆ ಕೇಬಲ್ ತೊಟ್ಟಿಲಿನ ಸೌಕರ್ಯವೂ ಇದೆ.
ಕೆಂಪ್ಟಿ ಫಾಲ್ ಅನ್ನೋ ಈ ದಬದಬೆಯಷ್ಟೇ ಇಲ್ಲಿನ ನೋಟದಾಣವಲ್ಲ. ಮೇಲೆ ಹತ್ತಿ ನದಿಯ ಗುಂಟ ಸಾಗಿದರೆ ಅಲ್ಲಲ್ಲಿ ಕಿರು ಜಲಪಾತಗಳೂ, ಕೊರಕಲುಗಳ ನಡುವಿನ ನದೀ ಹಾಸುಗಳೂ, ಸ್ವಚ್ಛ ನೀರಿನ ಕೊಳಗಳೂ ಇದ್ದು ನೀರಿನಲ್ಲಿ ಸುಖಾಸುಮ್ಮನೆ ಆಟವಾಡಬಹುದು, ಬೊಗಸೆ ಮೊಗೆದು ನೀರು ಕುಡಿಯಬಹುದು, ನೀರ ಜುಳು ಜುಳು ನಾದ ಕೇಳುತ್ತಾ ಟೈಮ್ ಪಾಸ್ ಮಾಡಬಹುದು. ಇಲ್ಲವೇ ಕೆಳಗೆ ನದೀ ಗುಂಟ ನಿಸರ್ಗ ರಮಣೀಯತೆಯನ್ನು ಆಸ್ವಾದಿಸುತ್ತಾ ೧೨ ಕಿಲೋಮೀಟರು ನಡೆದು ಹೋಗಿ ಯಮುನೆಯೊಂದಿಗೆ ಸಂಗಮವಾಗುವವರೆಗಿನ ಚಾರಣ ಮಾಡಬಹುದು. ಅಲ್ಲಲ್ಲಿ ನಿಂತ ನೀರಿನಲ್ಲಿ ಈಜಬಹುದು ಅಥವಾ ಮೀನಿಗೆ ಗಾಳ ಹಾಕಬಹುದು. ಇಲ್ಲಿ ಹೇಳೋವರೂ ಇಲ್ಲ ಕೇಳೋವರೂ ಇಲ್ಲ.
ಕೆಂಪ್ಟಿಯಿಂದ ವಾಪಸು ಮಸೂರಿಗೆ ಬರುವಾಗ ಸಮಯವಿದ್ದರೆ ದಾರಿ ಮಧ್ಯೆ ಕಂಪೆನಿ ಗಾರ್ಡನ್ ಹಾಗೂ ಗನ್ ಹಿಲ್ ಪಾಯಿಂಟ್ ಸಿಗುತ್ತೆ. ಮಸೂರಿಗೆ ಹಿಂದಿರುಗಿ ಸ್ವಲ್ಪ ವಿಶ್ರಮಿಸಿ ಸಂಜೆ ಮಾಲ್ ರಸ್ತೆಯಲ್ಲಿ ನಡೆದಾಡುತ್ತಾ ಸ್ವಪ್ನಲೋಕದ ಸವಿ ಉಣ್ಣಬಹುದು.
ಡೆಹರಾಡೂನ್ ರೈಲುನಿಲ್ದಾಣದಿಂದ ಹೊರಬಂದರೆ ಮಸೂರಿಗೆ ಹೋಗುವ ಮಿನಿಬಸ್ಸುಗಳು ಹಲವಾರಿದ್ದು ಮಸೂರಿ ಮಸೂರಿ ಎಂದು ಕೂಗುತ್ತಿರುತ್ತಾರೆ. ಡೆಹರಾಡೂನಿನಿಂದ ಮಸೂರಿಗೆ ಒಂದು ಗಂಟೆ ಬಸ್ ಪ್ರಯಾಣ. ಡೆಹರಾಡೂನಿಗೆ ರೈಲು ಹಾಗು ವಿಮಾನಗಳ ಸಂಪರ್ಕವಿದೆ. ಚಂಡೀಗಡದಿಂದ ಬಸ್ಸಿನಲ್ಲಿ ಡೆಹರಾಡೂನ್ ಅಥವಾ ಹರದ್ವಾರ ತಲಪಿ ಅಲ್ಲಿಂದಲೂ ಮಸ್ಸೂರಿಗೆ ಬರಬಹುದು. ಡೆಹರಾಡೂನಿನಿಂದ ೩೫ ಕಿ. ಮೀ, ಹಾಗೂ ಹರದ್ವಾರದಿಂದ ೫೫ ಕಿ.ಮೀ.

ಡಿಸಂಬರಿನಿಂದ ಫೆಬ್ರವರಿ ಕೊನೆಯವರೆಗೆ ಹಿಮಪಾತ ಇಲ್ಲವೇ ಮಂಜು ಹಾಸಿರುತ್ತೆ. ಆಮೇಲೆ ಹೋಗುವುದು ಚೆನ್ನ. ಯಾವುದಕ್ಕೂ ಸ್ವೆಟರು ಅಥವಾ ಶಾಲು ಇರಲಿ. ಮಳೆಗಾಲದಲ್ಲಿ ಮಾತ್ರ ಬೇಡವೇ ಬೇಡ.

ಭಾನುವಾರ, ಮಾರ್ಚ್ 3, 2013

ಎ ಎಂ ಜೋಸೆಫ್


ಎ ಎಂ ಜೋಸೆಫ್ ಎಂಬುದು ಅರುವತ್ತರ ದಶಕದ ಚರ್ಚ್ ಸಾಹಿತ್ಯ ವಲಯದಲ್ಲಿ ಕಂಡು ಬರುತ್ತಿದ್ದ ಒಂದು ಚಿರಪರಿಚಿತ ಹೆಸರು. ಆಗಷ್ಟೇ ಅಕ್ಷರ ಕಲಿತ ನನ್ನ ಬಾಲ್ಯದ ಆ ದಿನಗಳಲ್ಲಿ ಕಂಡದ್ದನ್ನೆಲ್ಲ ಓದುವ ಹುರುಪು, ಮತ್ತದರ ಜೊತೆಗೇ ಜೋಸೆಫ್ ಎಂಬ ನನ್ನ ಹೆಸರನ್ನು ಮುದ್ರಣ ಮಾಧ್ಯಮದಲ್ಲಿ ನೋಡಿದಾಗ ಆಗುವ ಪುಳಕದಿಂದಾಗಿ ಎ ಎಂ ಜೋಸೆಫ್ ಹೆಸರು ನನಗೆ ಅಪ್ಯಾಯಮಾನವಾಗಿತ್ತು.
ಅಂದಿನ ಹಲವಾರು ಪುಸ್ತಕಗಳಲ್ಲಿ ಎ ಎಂ ಜೋಸೆಫ್ ಎಂಬ ಹೆಸರು ಕಂಡುಬರುತ್ತಿತ್ತು. ಕೆಲವದರಲ್ಲಿ ಎ ಎಂ ಬೆರ್ನಾರ್ಡ್ ಎಂಬ ಹೆಸರೂ ಇರುತ್ತಿತ್ತು. ಆ ಇಬ್ಬರನ್ನೂ ನಾನು ಎಂದಿಗೂ ನೋಡಲಿಲ್ಲ ಎಂಬುದು ಸತ್ಯವಾದರೂ ಅವರ ಬಗ್ಗೆ ಯಾರಾದರೂ ಮಾತನಾಡಿದ್ದಾಗಲೀ ಉಲ್ಲೇಖಿಸಿದ್ದಾಗಲೀ ಇಲ್ಲವೇ ಇಲ್ಲವೆನ್ನಬಹುದು. ಚರ್ಚಿನ ಭಾಷೆಯು ಲತೀನಿನಿಂದ ಕನ್ನಡಕ್ಕೆ ತೆರೆದುಕೊಳ್ಳುತ್ತಿದ್ದ ಅಂದಿನ ಸಂಕ್ರಮಣ ಸ್ಥಿತಿಯಲ್ಲಿ ಹಲವಾರು ಮಂದಿ ಕನ್ನಡ ಕ್ರೈಸ್ತ ಸಾಹಿತ್ಯದ ಒಕ್ಕಲುತನಕ್ಕೆ ಮನಸು ಮಾಡಿದ್ದರು. ಅವರಲ್ಲಿ ಜಾರ್ಜ್ ಡಿಸೋಜ, ಎನ್ ಎಸ್ ಮರಿಜೋಸೆಫ್, ಜಿ ಜೋಸೆಫ್, ಜೋ ಮೇರಿ ಲೋಬೋ, ವಲೇರಿಯನ್ ಡಿಸೋಜ, ಸಿಪ್ರಿಯನ್ ಪೈ, ಅಮಲಾನಂದ, ಸ್ಟ್ಯಾನಿ ಬ್ಯಾಪ್ಟಿಸ್ಟ್ ಮುಂತಾದವರೆಲ್ಲ ಗುರು ಅಭ್ಯರ್ಥಿಗಳಾಗಿದ್ದು ಕನ್ನಡ ಧಾರ್ಮಿಕ ಸಾಹಿತ್ಯದಲ್ಲಿನ ಶೂನ್ಯವನ್ನು ತುಂಬಲು ಪ್ರಯತ್ನಿಸುತ್ತಿದ್ದರು. ಅಂಥದರಲ್ಲಿ ದಯಾನಂದ ಪ್ರಭು ಅವರಂಥ ತರುಣರು ಸೃಜನಶೀಲ ಬರಹಕ್ಕೆ ಕೈಹಾಕಿದ್ದರು. ಮೇಲೆ ಹೇಳಿದ ಎಲ್ಲರೂ ಬೆಂಗಳೂರಿಗೆ ಹೊರಗಿನವರಾಗಿದ್ದು ಗುರುಮಠದಿಂದ ಹೊರಟ ಮೇಲೆ ದೂರಾದರು. ಬೆಂಗಳೂರಿನಲ್ಲಿ ಭಾಷಾ ಸಂಘರ್ಷಗಳು ಶೀತಲಯುದ್ಧದಂತೆ ವ್ಯಾಪಕವಾಗುತ್ತಿದ್ದ ಆ ಸಮಯದಲ್ಲಿ ಬಹಳಷ್ಟು ಸ್ಥಿತ್ಯಂತರಗಳು ನಡೆದು ಎ ಎಂ ದ್ವಯರ ಹೆಸರುಗಳು ನೇಪಥ್ಯಕ್ಕೆ ಸರಿದವೇನೋ?
ಅದೂ ಅಲ್ಲದೆ ಕ್ರೈಸ್ತ ಕಥೋಲಿಕ ಧಾರ್ಮಿಕ ಸಾಹಿತ್ಯವನ್ನು ಯಾರು ಬೇಕಾದರೂ ಸೃಜಿಸುವಂತಿರಲಿಲ್ಲ, ಅದಕ್ಕೆಲ್ಲ ಧರ್ಮಾಧಿಕಾರಿಗಳ ಅಪ್ಪಣೆ ಪಡೆಯಬೇಕೆನ್ನುವ ಜಿಗುಟುತನ ಚರ್ಚಿನದಾಗಿತ್ತು. ಅಂಥ ಜಿಗುಟುತನದ ನಡುವೆಯೂ ಎ ಎಂ ಜೋಸೆಫರು ತಮಿಳು ಬೈಬಲಿನ ಕನ್ನಡಾನುವಾದ ನಡೆಸಿದ್ದರು. ಆ ವಿಷಯವನ್ನು ನಾನು ತಿಳಿದುಕೊಂಡಿದ್ದು ಹೇಗೆಂಬುದರ ಕತೆಯೇ ಇದು.
೧೯೮೬ರ ಒಂದು ದಿನ. ನನ್ನ ಪೂರ್ವಜರ ಊರಾದ ಬೇಡರಹಳ್ಳಿಗೆ ಹೋಗಿದ್ದಾರ ಬೆನ್ಸನ್ ಟೌನಿನ ಉಪ ಅಂಚೆಕಚೇರಿಯ ಬದಿಯ ಒಂದು ಮನೆಯಲ್ಲಿ ನೋಯೆಲ್ ಎಂಬುವರ ಭೇಟಿಯಾಯ್ತು. ಕನ್ನಡ ತಮಿಳುಗಳ ನೆವದಲ್ಲಿ ಬೆಂಗಳೂರಿನ ಕ್ರೈಸ್ತರ ಬಾಂಧವ್ಯ ಹೇಗೆ ಒಡೆದ ಕನ್ನಡಿಯಾಯಿತುಎಂಬುದರ ಕುರಿತ ಮಾತುಕತೆಯ ನಡುವೆ ನೋಯೆಲ್ ಎಂಬ ಆ ಹಿರಿಯ ಗೃಹಸ್ಥರು ಕನ್ನಡ ಕ್ರೈಸ್ತ ಸಾಹಿತ್ಯ ಪ್ರವರ್ತಕರಾಗಿದ್ದ ನಮ್ಮ ಮಾವನವರ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲವೆಂದರು. ಆಗ ನನ್ನ ಕಿವಿ ನೆಟ್ಟಗಾಯಿತು. ನಿಮ್ಮ ಮಾವನವರು ಎಂದರೆ ಎಂ ಎಂ ಜೋಸೆಫರೇ?’ ಎಂದು ಕೇಳಿದೆ. ಅವರು ಇಲ್ಲ ಅವರು ನನ್ನ ಮಾವ ಎ ಎಂ ಬೆರ್ನಾಡರ ತಮ್ಮ ಎಂದರು.
ನಾನು ಹೌದೇ, ಚಿಕ್ಕಂದಿನಲ್ಲಿ ನಾನವರ ಪುಸ್ತಕಗಳನ್ನು ನೋಡಿದ್ದೇನೆ ಎಂದಾಗ ಕೂಡಲೇ ಭಾವ ಪರವಶರಾದ ಅವರು ನನ್ನನ್ನು ತಬ್ಬಿಕೊಂಡು ನನ್ನ ಜೀವಮಾನ ಕಾಲದಲ್ಲಿ ಅವರ ಕುರಿತು ಪ್ರಸ್ತಾಪಿಸಿದ ಒಬ್ಬ ವ್ಯಕ್ತಿಯನ್ನೂ ಕಾಣಲಿಲ್ಲ, ಆ ಪ್ರಸ್ತಾಪ ಮಾಡಿದ ಮೊದಲ ವ್ಯಕ್ತಿ ನೀವು, ನನಗೆ ನಿಜಕ್ಕೂ ಪರಮಾನಂದವಾಗುತ್ತಿದೆ ಎಂದು ಉದ್ಗರಿಸಿದರು. ಮತ್ತೊಂದು ದಿನ ಬಿಡುವು ಮಾಡಿಕೊಂಡು ಬನ್ನಿ ಅವರ ಪುಸ್ತಕಗಳನ್ನೆಲ್ಲ ತೋರಿಸುತ್ತೇನೆ, ಕುಳಿತು ಮಾತನಾಡೋಣ ಎಂದು ಆಹ್ವಾನಿಸಿದರು. ಹೀಗೆ ನಾನವರನ್ನು ಆಗಾಗ್ಗೆ ಭೇಟಿಯಾದೆ.
ಜೋಸೆಫರ್ ಪೂರ್ವಜರು ಹಾಸನ ಜಿಲ್ಲೆ ಚೆನ್ನರಾಯಪಟ್ಟಣಕ್ಕೆ ಸನಿಹದ ನುಗ್ಗೆಹಳ್ಳಿಯವರು. ಜೋಸೆಫರ ತಂದೆ ಅಲ್ಲಿನ ಶಾನುಭೋಗ ಕುಟುಂಬದ ಕೃಷ್ಣಪ್ಪಯ್ಯನವರು. ಅವರು ಮತಾಂತರದ ಕತೆ . . . ಮೂಡಲದಾಸಾಪುರದ ಕ್ರೈಸ್ತ ಶಾಲೆಯಲ್ಲಿ ವಿದ್ಯಾಗುರುವಾಗಿದ್ದಾಗ (೧೮೫೬?) ಕ್ರೈಸ್ತ ಧರ್ಮಕ್ಕೆ ಶರಣಾಗಿ ಚೌರಣ್ಣನಾದರು. ಚುರುಕು ಬುದ್ಧಿಯ ಚೌರಣ್ಣನವರನ್ನು ಫ್ರೆಂಚ್ ಪಾದ್ರಿಗಳು ಆದರಿಸಿ ಅನಾಥಾಶ್ರಮದಲ್ಲಿದ್ದ ಮಕ್ಕಳಿಗೆ ವಿದ್ಯೆ ಕಲಿಸುವಂತೆ ಒಪ್ಪಿಸಿದರು. ಹೀಗೆ ಕೃಷ್ಣಪ್ಪ ಅಯ್ಯನವರು ಚೌರಣ್ಣನಾಗಿ ಶೆಟ್ಟಿಹಳ್ಳಿಯಲ್ಲಿ ಮುಖ್ಯೋಪಾಧ್ಯಾಯರಾದರು. ನಂತರದ ದಿನಗಳಲ್ಲಿ ತಟ್ಟುಗುಪ್ಪೆ ಮರಿಯಾಪುರಕ್ಕೆ ಬಂದು ನೆಲೆನಿಂತ ಚೌರಣ್ಣನವರು ಅಲ್ಲಿಯೂ ಅನಾಥ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿದರು. ಈ ಕಾರ್ಮೆಲ್ ಮಾತೆಯ ಕನ್ಯಾಮಠ ಇದೆಯಲ್ಲ, ಅದೇ ಚೌರಣ್ಣನವರ ಮನೆ. ಆಮೇಲೆ ತಮ್ಮ ಮಕ್ಕಳಿಗೆ ಪ್ರೌಢ ಶಿಕ್ಷಣ ಕೊಡಿಸಲು ಬೆಂಗಳೂರು ನಗರ ಸೇರಿಕೊಂಡಿರಬಹುದು ಎಂದು ಭಾವಿಸಬಹುದಾಗಿದೆ.
ಎ ಎಂ ಜೋಸೆಫರು ವಿದ್ಯಾಭ್ಯಾಸ ಪಡೆದು ಅಲೋಶಿಯಸ್ ಶಾಲೆಯಲ್ಲಿ ಶಿಕ್ಷಕವೃತ್ತಿ ಪಡೆದರು. ಅವರು ಪ್ರತಿಭಾವಂತರಾಗಿದ್ದರೂ ಫ್ರೆಂಚ್ ಪಾದ್ರಿಗಳು ನೀಡುತ್ತಿದ್ದ ಕಾಲೇಜು ಶಿಕ್ಷಣದಿಂದ ಏಕೆ ವಂಚಿತರಾದರು ಎಂಬುದು ತಿಳಿಯದಾಗಿದೆ. ಸಾಂಪ್ರದಾಯಿಕ ಕಾಲೇಜು ಶಿಕ್ಷಣ ಪಡೆಯದಿದ್ದರೂ ವಿಪರೀತ ಜ್ಞಾನದಾಹಿಯಾಗಿದ್ದ ಜೋಸೆಫರು ಕನ್ನಡ ಸಾಹಿತ್ಯ, ಇಂಗ್ಲಿಷ್ ಸಾಹಿತ್ಯ, ಕ್ರೈಸ್ತ ಧಾರ್ಮಿಕ ಸಾಹಿತ್ಯವನ್ನು ಅಭ್ಯಸಿಸಿ ತಮ್ಮ ಜ್ಞಾನತೃಷೆಯನ್ನು ತಣಿಸಿಕೊಂಡರು. ಮರಿಯಾಪುರದ ಉಪದೇಶಿ ಮರಿಯಪ್ಪ ಅಯ್ಯನವರ ಮಗಳು ಜೋಸ್ಫಿನಾರನ್ನು ಮದುವೆಯಾದ ಜೋಸೆಫರು ನಂತರದ ದಿನಗಳಲ್ಲಿ ಶಿಕ್ಷಕ ವೃತ್ತಿಯನ್ನು ತೊರೆದು ಬೆಂಗಳೂರು ನಗರಸಭೆಯಲ್ಲಿ ಬೆರಳಚ್ಚುಗಾರರಾಗಿ ನೌಕರಿ ಹಿಡಿದು ಉಗ್ರಾಣಾಧಿಕಾರಿಯಾಗಿ ನಿವೃತ್ತರಾದರು. ಆಮೇಲೂ ಜೀವನೋಪಾಯಕ್ಕಾಗಿ ಬೆರಳಚ್ಚು ವೃತ್ತಿಯನ್ನು ಮುಂದುವರಿಸಿದ್ದರು.
ಅವರ ಪುಸ್ತಕಗಳ ಹೂರಣವನ್ನು ಗಮನಿಸಿದರೆ ಜೋಸೆಫರು ಅತ್ಯಂತ ಧರ್ಮಭೀರುಗಳಾಗಿದ್ದರೆಂದು ತಿಳಿಯುತ್ತದೆ. ಅವರು ಬರೆದ ಪುಸ್ತಕಗಳಲ್ಲಿ ಫಬಿಯೋಲೆ ಎಂಬುದು ರಾಜಮನ್ನಣೆಯನ್ನು ಪಡೆದಿತ್ತು. ಹಲವಾರು ಹಿರಿಯ ಕ್ರೈಸ್ತರು ಫಬಿಯೋಲೆಯನ್ನು ಉದಾಹರಿಸುತ್ತಿದ್ದುದು ನನಗೆ ನೆನಪಿದೆ. ೧೯೨೯ರಲ್ಲಿ ಈ ಕೃತಿಗೆ ಮೈಸೂರರಸರು ದೇವರಾಜ ಬಹದ್ದೂರ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಫಬಿಯೋಲೆಯ ಮುನ್ನುಡಿಯಲ್ಲಿ ಜೋಸೆಫರು ಹೀಗೆ ಹೇಳುತ್ತಾರೆ: ಸುಪ್ರಖ್ಯಾತರಾದ ಕಾರ್ಡಿನಲ್ ವೈಸ್‌ಮ್ಯಾನೆಂಬುವರು ಇಂಗ್ಲಿಷಿನಲ್ಲಿ ಬರೆದ ಫಬಿಯೋಲೆ ಎಂಬ ಮೂಲಗ್ರಂಥ ಮತ್ತು ಅದರ ಆಧಾರದಿಂದ ತಮಿಳಿನಲ್ಲಿ ಬರೆಯಲ್ಪಟ್ಟ ಪಂಕ್ರಾಸ್ ಎಂಬ ಗ್ರಂಥ ಇವೆರಡನ್ನೂ ಮುಂದಿಟ್ಟುಕೊಂಡು ಈ ಕನ್ನಡ ಗ್ರಂಥsವನ್ನು ಬರೆದೆವು. ಮೂಲಗ್ರಂಥವು ಬಹಳ ಪ್ರಖ್ಯಾತವಾದ ಸದ್ಗ್ರಂಥವಾಗಿದೆ. ಇದನ್ನು ಪ್ರಪಂಚದ ನಾಲ್ವತ್ತು ಭಾಷೆಗಳಿಗೆ ಪರಿವರ್ತಿಸಿಕೊಂಡಿರುತ್ತಾರಾದ್ದರಿಂದ ಇಂಥಾ ಗ್ರಂಥದ ಪ್ರಯೋಜನವು ಕನ್ನಡಿಗರಿಗೂ ದೊರೆಯಲೆಂದು ಇದನ್ನು ಕನ್ನಡದಲ್ಲಿ ಬರೆದೆವು.
ತಮಿಳಿನಲ್ಲಿ ಪ್ರಚಲಿತವಾಗಿದ್ದ ಪವಿತ್ರಬೈಬಲ್ ಗ್ರಂಥವನ್ನು ಕನ್ನಡಕ್ಕೆ ತರುವ ಆಸಕ್ತಿಯಿಂದ ತರ್ಜುಮೆಗೆ ತೊಡಗಿದ ಅವರ ಸಾಹಸವನ್ನು ಮೆಚ್ಚಬೇಕಾದ್ದೇ. ಆದರೆ ಅದನ್ನು ಅವರು ಪ್ರಕಟಿಸಲಾಗದ ಕಾರಣ ತಿಳಿಯದು. ೧೯೬೦ರ ದಶಕದಲ್ಲಿ ಹೊರಬಂದ ಶುಭಸಂದೇಶಗಳ ಕಥೋಲಿಕ ಆವೃತ್ತಿಯಲ್ಲಿ ಎ ಎಂ ಜೋಸೆಫರ ಹಸ್ತಪ್ರತಿಯನ್ನು ಬಳಸಿಕೊಂಡಿರುವ ಬಗ್ಗೆ ಉಲ್ಲೇಖವಿದೆ.
೧೯೫೦ರಲ್ಲಿ ಫಾದರ್ ಐ ಬಿ ಪಿಂಟೊ ಅವರ ಸಲಹೆಯ ಮೇರೆಗೆ ಎ ಎಂ ಜೋಸೆಫರು ರೆವರೆಂಡ್ ಕ್ಯಾಸೆಲ್ ಬ್ರಾಂಕೊ ಅವರ ಮೋರ್ ಅಬೊಟ್ ಫಾತಿಮಾ ಎಂಬ ಪುಸ್ತಕವನ್ನು ಅನುವಾದಿಸಿ ಫಾತಿಮಾ ಮಾತೆ ಎಂಬ ಹೆಸರಿನಲ್ಲಿ ಪ್ರಕಟಿಸುತ್ತಾರೆ. ಈ ಪುಸ್ತಕದ ಪ್ರಕಟಣೆಗೆ ಮೇಸ್ತ್ರಿ ಚೌರಪ್ಪನವರ ಮಗ ಸಿ ಜೋಸೆಫ್ ಧನಸಹಾಯ ಮಾಡಿದ್ದನ್ನೂ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಜೀವವಾದ ಜೇಸುನಾಥರು ಎಂಬುದು ಜೋಸೆಫರ ಇನ್ನೊಂದು ಮಹತ್ತರ ಪುಸ್ತಕ. ಇದು ಯೇಸುಸಭೆಯ ಇ ಲೆ ಜೋಲಿ ಅವರ ಇಂಗ್ಲಿಷ್ ಪುಸ್ತಕದ ಅನುವಾದ. ಸಂಕಲ್ಪ ಹಟಯೋಗಿ ಎಂಬುದು ಲೊಯೊಲದ ಸಂತ ಇಗ್ನೇಷಿಯಸರ ಜೀವನ ಚರಿತ್ರೆ. ಕೆಂಪು ಮರಳು ಎಂಬ ಪುಸ್ತಕ ಸಂತ ಜಾನ್ ದೆ ಬ್ರಿಟ್ಟೊ ಅವರ ಜೀವನ ಚರಿತ್ರೆ. ಸಂತ ಮಾಂಟ್‌ಫರ್ಟ್ ಅವರು ಮರಿಯಮ್ಮನವರ ಬಗೆಗೆ ಬರೆದಿರುವ ಬೃಹದ್ಗ್ರಂಥವನ್ನು ಸಂಗ್ರಹರೂಪದಲ್ಲಿ ಮರಿಯಮ್ಮನವರ ರಹಸ್ಯ ಎಂಬ ಪುಸ್ತಕವಾಗಿ ಅನುವಾದಿಸಿದರು. ಆತ್ಮಪರಾಗವನ್ನು ತಮ್ಮ ಅಣ್ಣ ಎ ಎಂ ಬೆರ್ನಾಡರೊಂದಿಗೆ ಸೇರಿ ಪ್ರಕಟಿಸಿದ್ದಾರೆ. ಈ ಪುಸ್ತಕವನ್ನು ಎ ಎಂ ಬರ್ನಾಡರ ಮಗ ಬಿ ಪ್ರಮೋದ ಅವರು ಮರುಮುದ್ರಿಸಿದ್ದಾರೆ.
ಕನ್ನಡ ಕಥೋಲಿಕ ಕ್ರೈಸ್ತ ಸಾಹಿತ್ಯಕೃಷಿಯಲ್ಲಿ ತೊಡಗಿಕೊಂಡು ಇಂಥ ಮಹತ್ಸಾಧನೆಗಳನ್ನು ಮಾಡಿದ ಎ ಎಂ ಜೋಸೆಫರು ೧೮-೮-೦೯೬೫ರಲ್ಲಿ ತೀರಿಕೊಂಡರು. ಆದರೆ ಇಂದು ಅವರನ್ನು ನೆನಪು ಮಾಡಿಕೊಳ್ಳುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರವೇ.