ಗುರುವಾರ, ಏಪ್ರಿಲ್ 16, 2009

ಬೆಳಕಿನ ಹಬ್ಬ ಈಸ್ಟರ್

ಅಂದು ಶುಭಶುಕ್ರವಾರದ ಮರುದಿನ ಪವಿತ್ರಶನಿವಾರದ ರಾತ್ರಿ ಸುಮಾರು ಹನ್ನೊಂದೂವರೆಯ ವೇಳೆ. ಕ್ರೈಸ್ತಭಕ್ತಾದಿಗಳು ಒಬ್ಬೊಬ್ಬರಾಗಿ ಚರ್ಚಿನ ಬಳಿಬಂದು ಸೇರುತ್ತಿದ್ದರು. ಚರ್ಚಿನ ದೀಪಗಳನ್ನು ಉದ್ದೇಶಪೂರ್ವಕವಾಗಿ ಆರಿಸಿದ್ದರಿಂದ ವಾತಾವರಣ ಕತ್ತಲುಮಯವಾಗಿತ್ತು ಮಾತ್ರವಲ್ಲ ಅಲ್ಲೊಂದು ತೆರನ ನಿಗೂಢಮೌನ ಆವರಿಸಿತ್ತು. ಬಂದಿದ್ದ ಜನಗಳಾರೂ ಒಬ್ಬರೊಬ್ಬರನ್ನು ಗುರುತುಹಿಡಿದು ಕೈಕುಲುಕಿ ಕಿಲಕಿಲ ನಕ್ಕು ಉಭಯ ಕುಶಲೋಪರಿಗಳ ಮಾತಾಡುತ್ತಿರಲಿಲ್ಲ. ಅಲ್ಲ ಏನಾಗಿದೆ ಇವರಿಗೆಲ್ಲ? ವಿಚಿತ್ರವೇನೆಂದರೆ ಅಲ್ಲಿ ಸ್ಮಶಾನ ಮೌನವಿತ್ತಾದರೂ ಎಲ್ಲ ಜನ ಸುಂದರವಾದ ಹೊಸಬಟ್ಟೆಗಳನ್ನು ಧರಿಸಿ ಬಂದಿದ್ದರು.

ಆಗಸದಲ್ಲಿದ್ದ ಪೂರ್ಣಚಂದಿರ ಮಾತ್ರ ಇನ್ನು ಸ್ವಲ್ಪ ಹೊತ್ತಿನಲ್ಲಿ ಏನೋ ಒಂದು ಘಟನೆ ನಡೆಯಲಿಕ್ಕಿದೆ, ಅದಕ್ಕೆ ತಾನು ಸಾಕ್ಷಿಯಾಗಲಿದ್ದೇನೆ ಎಂಬಂತೆಯೋ ಅಥವಾ ತನಗೆ ಎಲ್ಲವೂ ತಿಳಿದಿದೆ ಎಂಬಂತೆಯೋ ಸಂತೃಪ್ತ ಭಾವದಿಂದ ಮುಖವನ್ನು ಅರಳಿಸಿಕೊಂಡಿದ್ದ. ಚಂದ್ರನ ಹಾಲುಕಿರಣಗಳು ಬಿದ್ದು ಚರ್ಚಿನ ಗೋಪುರ ಮಿನುಗುತ್ತಿತ್ತು. ಚರ್ಚನ್ನು ಮತ್ತು ಅಲ್ಲಿನ ಪರಿಸರವನ್ನು ಹಾಲಿನಿಂದ ತೊಳೆದಂತೆ ತೋರುತ್ತಿತ್ತು.

ಅಲ್ಲೇ ಮೂಲೆಯಲ್ಲಿ ದೊಡ್ಡ ಕಬ್ಬಿಣದ ಕಡಾಯಿಯಲ್ಲಿ ಕೆಂಡ ತುಂಬಿತ್ತು. ಮಂದಮಾರುತದ ಸಂಚಲನಕ್ಕೆ ಆ ಕೆಂಡ ನಿಗಿನಿಗಿ ಹೊಳೆಯುತ್ತಿತ್ತು. ಅಷ್ಟರಲ್ಲೇ ಕೆಂಪುಬಿಳಿ ನಿಲುವಂಗಿ ಧರಿಸಿದ ಪೂಜಾಕಿಂಕರ ಬಾಲಕನೊಬ್ಬ ಚರ್ಚಿನ ಬದಿಯಿಂದ ಮರದ ಜಾಗಟೆ ಬಾರಿಸುತ್ತಾ ಬಂದ. ಇದು ಭಕ್ತಾದಿಗಳನ್ನು ಪ್ರಾರ್ಥನೆಗೆ ಆಹ್ವಾನಿಸುವ ಪರಿ. ಭಕ್ತಾದಿಗಳನ್ನು ಆಹ್ವಾನಿಸಲು ಚರ್ಚಿನ ಗಂಟೆಯನ್ನು ಮೊಳಗಿಸಬೇಕಲ್ಲವೇ ಎಂದು ಕೇಳದಿರಿ. ಏಕೆಂದರೆ ಹಿಂದಿನ ದಿನ ಶುಭಶುಕ್ರವಾರ ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದ ದಿನವಲ್ಲವೇ? ಅಂದೇ ಚರ್ಚಿನ ಗೋಪುರದ ದೊಡ್ಡಗಂಟೆ ಇರಲಿ ಉಳಿದ ಕೈಹಿಡಿಯ ಹಿತ್ತಾಳೆ ಗೊಂಚಲು ಗಂಟೆಗಳ ಕಿಂಕಿಣಿ ನಾದವನ್ನೂ,ಗಾನವೃಂದದ ವಾದ್ಯಮೇಳಗಳನ್ನೂ ನಿಶ್ಯಬ್ದಗೊಳಿಸಲಾಗಿತ್ತು. ಅಕಸ್ಮಾತ್ ಕೈತಾಗಿ ಶಬ್ದ ಮಾಡದಿರಲೆಂದು ಆ ಕಿರುಗಂಟೆಗಳ ನಾಲಿಗೆಗೆ ಬಟ್ಟೆ ಸುತ್ತಲಾಗಿತ್ತು. ಹಾಗಾಗಿ ಇಂದು ಮರದ ಕೈಜಾಗಟೆಯದೇ ರಾಜ್ಯಭಾರ.

ಜಾಗಟೆಯ ಶಬ್ದವನ್ನು ಅನುಸರಿಸಿ ಚರ್ಚಿನ ಪಾದ್ರಿಗಳು ಬಂದರು. ಅವರು ಶುಭ್ರ ಬಿಳಿವಸ್ತ್ರದ ಮೇಲೆ ಅಚ್ಚ ಬಿಳಿಯ ಜರತಾರಿ ಮೇಲಂಗಿ ಧರಿಸಿ ಕೈಯಲ್ಲಿ ಆಳೆತ್ತರದ ಮೇಣದ ಬತ್ತಿ ಹಿಡಿದಿದ್ದರು. ಮುಂದಿನ ಪ್ರಕ್ರಿಯೆಗಾಗಿ ಜನರೆಲ್ಲ ಕೆಂಡದ ಕಡಾಯಿಯ ಬಳಿ ಸುತ್ತುವರಿದರು. ಸ್ವಾಮಿಗಳು ಪವಿತ್ರಬೈಬಲ್ ಶ್ಲೋಕವೊಂದನ್ನು ಪಠಿಸಿ ಆ ಕೆಂಡದ ಮೇಲೆ ಕೈಚಾಚಿದರು. “ಅಕಾರನೂ ನೀನೇ ಸಕಾರನೂ ನೀನೇ, ಆದಿಯೂ ನೀನೇ ಅಂತ್ಯವೂ ನೀನೇ, ಕೆಂಡದಲ್ಲಿ ಅಡಗಿದ ಜ್ಯೋತಿಯಂತೆ, ಮೊಟ್ಟೆಯಲ್ಲಿ ಅಡಗಿದ ಜೀವದ ಪಕ್ಷಿಯಂತೆ, ಮೃತ್ಯುಂಜಯನಾಗಿ ಎದ್ದು ಬಾರಾ ಯೇಸುಕ್ರಿಸ್ತ” ಎಂದೆನ್ನುತ್ತಾ ಕೆಂಡವನ್ನು ಊದಿ ಜ್ವಾಲೆಯನ್ನು ಪುಟಿದೆಬ್ಬಿಸಿದರು. ಆ ಜ್ವಾಲೆಯಿಂದ ಮೇಣದ ಬತ್ತಿಯನ್ನು ಹೊತ್ತಿಸಿ ಅದನ್ನು ಮೇಲೆತ್ತಿ ಹಿಡಿದು “ಇಗೋ! ಕ್ರಿಸ್ತನ ಬೆಳಕು” ಎಂದು ಸಾರಿದರು. ಭಕ್ತಾದಿಗಳೆಲ್ಲ ಭಾವಪರವಶರಾಗಿ “ದೇವರಿಗೆ ಕೃತಜ್ಞತೆ ಸಲ್ಲಲಿ” ಎಂದು ಉದ್ಘೋಷಿಸಿದರು.

ಹೀಗೆ ಆ ದೊಡ್ಡ ಮೇಣದ ಬತ್ತಿ ಪ್ರದೀಪವಾಗಿ ಭಕ್ತಾದಿಗಳೆಲ್ಲರ ಮೇಣದ ಬತ್ತಿಗಳಿಗೆ ಜ್ಯೋತಿಯನ್ನು ದಾಟಿಸಿತು. ಎಲ್ಲರೂ ತಂತಮ್ಮ ಕೈಗಳಲ್ಲಿ ಉರಿಯುವ ಮೋಂಬತ್ತಿಗಳನ್ನು ಹಿಡಿದು ದೇವಾಲಯದೊಳಕ್ಕೆ ಮೆರವಣಿಗೆಯಾಗಿ ಹೊರಟರು. ವಿದ್ಯುದ್ದೀಪಗಳನ್ನು ಹೊತ್ತಿಸಿರಲಿಲ್ಲವಾಗಿ ಆ ಒಳಾವರಣದಲ್ಲಿ ಮೋಂಬತ್ತಿಗಳ ಬೆಳಕು ದಿವ್ಯ ಪ್ರಕಾಶ ಚಿಮ್ಮಿ ಭವ್ಯ ಲೋಕವನ್ನು ತೆರೆದಿತ್ತು. ಗಂಟೆ ಹನ್ನೆರಡಾಗುತ್ತಿದ್ದಂತೆ ಯೇಸುಕ್ರಿಸ್ತನ ಪ್ರತಿಮೆಗೆ ಅಡ್ಡಲಾಗಿ ಕಟ್ಟಲಾಗಿದ್ದ ಪರದೆಯನ್ನು ಸರಿಸಲಾಯಿತು. ಫಕ್ಕನೇ ವಿದ್ಯುದ್ದೀಪಗಳು ಹೊತ್ತಿಕೊಂಡವು. ದೇವಾಲಯ ಗಂಟೆಗಳೆಲ್ಲ ಮೊಳಗಿ ದೂರದೂರಕ್ಕೆ ತಮ್ಮ ನಾದವನ್ನು ಹೊತ್ತೊಯ್ದವು. ಜನರೆಲ್ಲ ಭಕ್ತಿಯಿಂದ “ಮಹೋನ್ನತದಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಸುಮನಸ್ಕರಿಗೆ ಶಾಂತಿ” ಎಂದು ಎದೆ ತುಂಬಿ ಹಾಡಿದರು. ಪರಸ್ಪರ ಕೈಕುಲುಕಿ ಪುನರುತ್ಥಾನ ಹಬ್ಬದ ಶುಭಾಶಯಗಳನ್ನು ವಿನಿಮಯಿಸಿಕೊಂಡರು.

ಪ್ರತಿಯೊಬ್ಬರೂ ಮೇಣದ ಬತ್ತಿಯ ಬೆಳಕನ್ನು ಆರದಂತೆ ತೆಗೆದುಕೊಂಡು ಹೋಗಿ ತಮ್ಮ ಮನೆಯ ಹಣತೆಗಳನ್ನು ಹಚ್ಚಿಕೊಂಡರು. ಇನ್ನೂ ಕೆಲವರು ಕೆಂಡದ ಕಡಾಯಿಯಿಂದ ಕೆಂಡವನ್ನು ತೆಗೆದುಕೊಂಡು ಹೋಗಿ ತಮ್ಮ ಮನೆಯ ಒಲೆಗಳನ್ನು ಹೊತ್ತಿಸಿಕೊಂಡರು. ಇಂದು ರಾತ್ರಿಯ ಅಪಹೊತ್ತಿನಲ್ಲಿ ಶಾಮಣ್ಣನ ಸೊಸೆ ಜೆಸಿಂತ, ಚೌರಪ್ಪನ ಮೊಮ್ಮಗಳು ನಿರ್ಮಲ, ದೊರೆ ಮಗಳು ಕತ್ರಿನಾ ಮುಂತಾದವರೆಲ್ಲ ತಂತಮ್ಮ ಮನೆಗಳ ಹೊಸ್ತಿಲಲ್ಲಿ, ಕಾಂಪೌಂಡು ಗೋಡೆಯ ಮೇಲೆ ಹಣತೆಗಳನ್ನೂ ಮೇಣದ ಬತ್ತಿಗಳನ್ನೂ ಹಚ್ಚುತ್ತಿದ್ದರೆ ಅಚ್ಚರಿಗೊಳ್ಳದಿರಿ, ಏಕೆಂದರೆ ಇದು ಕ್ರೈಸ್ತರ ಬೆಳಕಿನ ಹಬ್ಬ ಈಸ್ಟರ್.

ಅಂದು ಸಾವಿರಾರು ವರ್ಷಗಳ ಹಿಂದೆ ಇಂಥದೇ ಒಂದು ರಾತ್ರಿಯಲ್ಲಿ ಈಜಿಪ್ಟರ ದಾಸ್ಯದಲ್ಲಿ ನೊಂದಿದ್ದ ಯೆಹೂದ್ಯರ ವಿಮೋಚನೆ ಆಗಿ ಅವರು ಪಾಸ್ಕ ಹಬ್ಬವನ್ನು ಆಚರಿಸಿದರು. ಅದೇ ರೀತಿಯಲ್ಲಿ ಯೇಸುಕ್ರಿಸ್ತನು ಸಂಪ್ರದಾಯದ ಬಂಧನದಲ್ಲಿ ಮೌಢ್ಯದ ಸಂಕೋಲೆಯಲ್ಲಿ ಪರಸ್ಪರ ಅಪನಂಬಿಕೆಯ ದಾಸ್ಯದಲ್ಲಿ ತೊಳಲುವ ಮಾನವರಿಗೆ ಪ್ರೀತಿಯ ಸಿಂಚನಗೈದು ಹೊಸಬದುಕಿನ ಹೊಸಬೆಳಕಿನ ಮಾರ್ಗ ಕಲ್ಪಿಸಿದ ಈ ಹಬ್ಬ ನಿಜವಾಗಿಯೂ ಬೆಳಕಿನ ಹಬ್ಬ.

ಕಾಮೆಂಟ್‌ಗಳಿಲ್ಲ: