ಭಾನುವಾರ, ಡಿಸೆಂಬರ್ 27, 2009

ಉನ್ನತಿಯ ಮರವೇರಿ

ನಾನು ಜಕ್ಕಾಯನೆಂದು ನಾ ಹೇಳಲಾರೆ
ಕುಬ್ಜನಿಗೇಕಣ್ಣ ಗರುವದ ಮಾತು

ನಾ ಸುಂಕದವ ಕಡುಪಾಪಿ ಜೂಜುಕೋರ
ನಿತ್ಯಸುಮಂಗಲಿಯರ ಹೃದಯಚೋರ

ನನ್ನ ಮನೆಯ ದೀಪ ಉರಿಯದಿದ್ದರೇನಂತೆ
ಮುಗ್ದರನು ವಂಚಿಸುತ ಜಗವ ಮರೆತವ ತಾನೇ?

ಯೇಸುವನೂ ಬಿಡಲಿಲ್ಲ ಸುಂಕ ಕೊಡು ಎಂದೆ
ಸೀಜರನದು ಸೀಜರನಿಗೆ ಎಂದನಾತ

ಗೆದ್ದವನು ನಾನೆಂದು ಬಲು ಉಬ್ಬಿಹೋದೆ
ಸಿಕ್ಕ ಪರುಷಮಣಿಯನು ನೆಲಕೆ ಚೆಲ್ಲಿ

ವರುಷ ಕಳೆಯಿತು ಹರುಷ ಜಾರಿತು
ನೆಮ್ಮದಿಯ ನಾಳೆಗಳು ಇಲ್ಲವಾಗಿ

ಶಾಂತಿ ಬಯಸಿತು ಮನ ತಂಪ ಕೋರಿತು ತನು
ಉತ್ಸಾಹದರಮನೆಯ ದೀಪ ನಂದಿ

ಬೆಳಗಬಲ್ಲುದೆ ಮನದ ದೀಪ
ನೆಮ್ಮದಿ ನಿರುಮ್ಮಳತೆ ಇಲ್ಲದಿರೆ?

ಪ್ರೀತಿ ನಂಬಿಕೆ ಬೇಕು ಮನ ಶುದ್ಧಿಯಿರಬೇಕು
ಸರ್ವರಲಿ ಸೋದರತೆಯ ಕಂಪು ಬೀರಿ

ದೀನದಲಿತರ ಮಿತ್ರ ಪಾಪಿ ಪತಿತರ ಗೆಳೆಯ
ಯೇಸುವಿನ ದರುಶನಕೆ ಮನ ತಪಿಸಿ

ಅವ ಬರುವ ಹಾದಿಯಲಿ ಮರವೇರಿ ಕುಳಿತೆ
ಅವನ ದೃಷ್ಟಿಗೆ ಹೆದರಿ ಮುಖವ ಮರೆಮಾಡಿ

ವಾತ್ಸಲ್ಯಮೂರ್ತಿಯವ ಪ್ರೀತಿಕಂಗಳ ಸೂಸಿ
ನಾನಿನ್ನ ಅತಿಥಿಯಾದೆ ಇಳಿದು ಬಾರೆಂದ

ಕರಗಿ ಹೋದೆನು ನಾನು ಆ ಮಮತೆ ನುಡಿಗಳಿಗೆ
ಎರಗಿ ಬಿದ್ದೆನು ಅವನ ಪಾದದಡಿಗೆ

ಮರವೇರಿ ಕುಳಿತೆನ್ನನು ಕರಬೀಸಿ ಕರೆದ
ಪಾಪಿಮನದಾಸೆಯನು ಹೇಳದೆಯೇ ತಿಳಿದ

ಅಂದು ನಿನ್ನ ಕಂಡಾಗ ನಿನ್ನನರಿಯದೇ ಹೋದೆ
ಸ್ವಾಮಿ ಇಂದೆನ್ನ ಕರವಿಡಿದು ಉದ್ಧರಿಸಯ್ಯಾ

ತಬ್ಬಿಹಿಡಿದೆನ್ನನು ಯೇಸು ನುಡಿದನು ಜನಕೆ
ತಪ್ಪಿಹೋದ ಕುರಿಮರಿಯು ಮತ್ತೆ ಸಿಕ್ಕಿತು ಎನಗೆ

ಜಕ್ಕಾಯ ನೀನಿನ್ನು ಕುಬ್ಜಕಾಯನಲ್ಲ
ದೇವರಿಗೆ ಕಾಣುವುದು ಆತ್ಮವೊಂದೇ

ನಿನ್ನಂತೆ ನೀನಾಗು ಅಂತರಂಗವನು ಬೆಳಗು
ನಿನ್ನಂತೆ ಪರರನ್ನು ಪರಿಭಾವಿಸುತಲಿ

ಇದುವೆ ಪರಮಾತ್ಮಜ್ಞಾನ ಇದುವೆ ಉನ್ನತಧರ್ಮ
ಅರಿತೊಡನೆ ಧರೆಗಿಳಿವುದು ದೇವಲೋಕ

ಕಾಮೆಂಟ್‌ಗಳಿಲ್ಲ: