ಶುಕ್ರವಾರ, ಡಿಸೆಂಬರ್ 17, 2010

ಬಾಲ್ಯದ ನೆನಪು

ಅದು ಎಪ್ಪತ್ತರ ದಶಕ. ನಾನು ಮಾಧ್ಯಮಿಕ ಶಾಲಾದಿನಗಳ ರಜಾದ ಮಜಾದಲ್ಲಿದ್ದೆ. ಮಲ್ಲೇಶ್ವರದ ಕ್ರಿಸ್ತರಾಜರ ದೇವಾಲಯದ ಹಿಂಬದಿಯ ಗಂಟೆ ಗೋಪುರದ ಬಳಿಯೇ ನಮ್ಮ ಮನೆಯಿತ್ತು. ಬದಿಯಲ್ಲಿಯೇ ಇದ್ದ ಸಂತ ರಾಯಪ್ಪರ ಗುರುಮಠಕ್ಕೂ ಹೊಕ್ಕು ಬಳಕೆ ನಮಗೆ ಸಲೀಸಾಗಿತ್ತು. ನನ್ನ ಬಾಲ್ಯವೆಲ್ಲ ಕ್ರಿಸ್ತರಾಜರ ದೇವಾಲಯದಿಂದ ಹಿಡಿದು ನಿರ್ಮಲರಾಣಿ ಶಾಲೆಯವರೆಗಿನ ಇಂದಿನ ಕ್ಲರೇಷಿಯನ್ ಮತ್ತು ಎಂಎಸ್‌ಎಫ್‌ಎಸ್ ಸೆಮಿನರಿಗಳವರೆಗೆ ಮಾತ್ರವಲ್ಲ ಸೆಂಟ್ ತೆರೇಸಾಸ್ ಸ್ಯಾನಿಟೋರಿಯಂ ಎಂಬ ಗುಟ್ಟೆ ಆಸ್ಪತ್ರೆವರೆಗಿನ ಪ್ರದೇಶದಲ್ಲಿ ಆಡಾಡುತ್ತಾ ಕಳೆದಿತ್ತು.
ಈ ಒಂದು ನೆನಪಿನ ಬುತ್ತಿಯಿಂದ ಸಣ್ಣ ತುಣುಕೊಂದನ್ನು ಹಂಚಿಕೊಳ್ಳುತ್ತೇನೆ. ಒಂದು ದಿನ ನಾನು ಪೆನ್ವೆನ್ ಸ್ವಾಮಿಯವರ ಕೊಠಡಿಯ ಬಳಿ ಅಡ್ಡಾಡುತ್ತಿದ್ದಾಗ ಮೇಲುಗಡೆಯ ಕೊಠಡಿಯೊಂದರಿಂದ ಯಾರೋ ನನ್ನನ್ನು ಕರೆದಂತಾಯಿತು. ತಲೆಯೆತ್ತಿ ನೋಡಿದಾಗ ಅದು ಆಗಷ್ಟೇ ಯಾಜಕ ಪದವಿ ಪಡೆದು ರೂಮು ತೆರವು ಮಾಡುತ್ತಿದ್ದ ಯುವ ಬ್ರದರ್ (ಅಲ್ಲ ಫಾದರ್) ಒಬ್ಬರು ನನ್ನನ್ನು ಕರೆಯುತ್ತಿದ್ದುದು ಕಾಣಿಸಿತು. ಅವರು ತಮ್ಮ ಕೊಠಡಿಯಲ್ಲಿನ ಹಳೆಯಪಳೆಯ ವಸ್ತುಗಳನ್ನು ಎಸೆಯುತ್ತಾ ತಮ್ಮ ಬಟ್ಟೆಬರೆ ಪುಸ್ತಕಗಳನ್ನು ಜೋಡಿಸಿಕೊಳ್ಳುತ್ತಾ ತಮ್ಮ ಸೆಮಿನರಿ ಜೀವನಕ್ಕೆ ವಿದಾಯ ಹೇಳಲು ತಯಾರಿ ನಡೆಸಿದ್ದರು. ಆ ಕೆಲಸಕ್ಕೆ ಸಹಾಯ ಮಾಡಲು ಅವರು ನನ್ನನ್ನು ಕೇಳಿಕೊಂಡಾಗ ತುಂಬಾ ಸಂತಸದಿಂದ ಹೂಂಗುಟ್ಟಿದೆ. ನಗುಮುಖದ ಯುವಪಾದ್ರಿಗಳು ಸಹಾಯಕ್ಕೆ ಕರೆದಾಗ ಉತ್ಸಾಹದಿಂದ ಮುಂದಾಗುವುದು ನನಗೆ ಸಹಜವಾಗಿತ್ತು.
ಅವರ ಕೋಣೆಯಲ್ಲಿ ಗೋಡೆಗಳ ಮೇಲೆ ಇದ್ದ ಪಟ ಚಿತ್ರ ಇತ್ಯಾದಿಗಳನ್ನು ತೆಗೆದಿದ್ದರಿಂದ ಕೋಣೆ ಬಿಕೋ ಅನ್ನುತ್ತಿತ್ತು. ಮಂಚಕ್ಕೆ ಕಟ್ಟಿದ್ದ ಸೊಳ್ಳೆಪರದೆ ಬೆಡ್ ಶೀಟು ಮುಂತಾದವುಗಳನ್ನು ತೆಗೆದುಬಿಟ್ಟಿದ್ದರಿಂದ ಅಲ್ಲಿದ್ದ ಹಾಸಿಗೆ ನಿರಾಭರಣ ಸುಂದರಿಯಂತಿತ್ತು. ಹರಿದ ನ್ಯೂಸ್ ಪೇಪರುಗಳು ಬಿಡಿಗೂದಲುಗಳು ಧೂಳಿನೊಂದಿಗೆ ನೆಲದಲ್ಲಿ ಆಟವಾಡುತ್ತಿದ್ದವು. ಕಿಟಕಿಯ ಬಳಿ ಜೋಡಿಸಿದ್ದ ಬಾಚಣಿಗೆಯನ್ನು ನಾನು ಅಲ್ಲಿಂದಲೇ ಹೊರಕ್ಕೆಸೆದಾಗ ಸಣ್ಣಗೆ ಗದರಿದ ಅವರು ಅಲ್ಲಿಂದೇನನ್ನೂ ಕೆಳಗೆ ಹಾಕಬಾರದೆಂದೂ ಬುಟ್ಟಿಯಲ್ಲಿ ತುಂಬಿಕೊಂಡು ಮೆಟ್ಟಿಲಿಳಿದು ಕೆಳಗಿಹೋಗಿ ಕಸದ ರಾಶಿಗೆ ಸುರಿದುಬರುವಂತೆಯೂ ಹೇಳಿದರು. ಹಾಗೆ ನಾನು ಬಹಳಷ್ಟು ವಸ್ತುಗಳನ್ನು ಕಸದರಾಶಿಗೆ ಚೆಲ್ಲಿಬಂದೆ. ಕಿಟಕಿ ಬಳಿಯಲ್ಲಿ ಅವರು ಸಾಲಾಗಿ ಇಟ್ಟಿದ್ದ ಬ್ಲೇಡುಗಳಲ್ಲಿ ಹೊಳಪಿದ್ದ ಒಂದನ್ನು ಮೆಲ್ಲಗೆ ಎತ್ತಿಕೊಂಡು ಅಂಗಿಯ ಕಿಸೆಯಲ್ಲಿಟ್ಟುಕೊಂಡೆ, ಪೆನ್ಸಿಲ್ ಹೆರೆಯುವದಕ್ಕೆ ತುಂಬಾ ಚೆಂದವಾಗಿ ತೋರಿದ್ದ ಅದು ನನ್ನ ಮಿತ್ರರೆದುರಲ್ಲಿ ನನಗೆ ತುಂಬಾ ಹೆಮ್ಮೆ ತಂದುಕೊಡುವ ಸಾಧನವಾದೀತೆಂಬ ಆತ್ಮವಿಶ್ವಾಸ ನನ್ನ ಎದೆಯುಬ್ಬಿಸಿತ್ತು.
ಈ ಒಂದು ಸಂದರ್ಭದಲ್ಲೇ ಒಂದೇ ಶೀರ್ಷಿಕೆಯ ಹಲವಾರು ಪುಸ್ತಕಗಳನ್ನು ಒಟ್ಟಿಗೆ ಕಟ್ಟಿಡಲಾಗಿದ್ದ ಒಂದು ಪುಸ್ತಕದ ಕಟ್ಟು ಕಾಣಿಸಿತು. ಕುತೂಹಲದಿಂದ ಅದರ ಶೀರ್ಷಿಕೆ ಓದಿದೆ. ಅದು ಬಿಳಿ ಹೊದಿಕೆಯ ಮೇಲೆ ಅಚ್ಚ ಕೆಂಪು ಅಕ್ಷರಗಳಲ್ಲಿ ಮುದ್ರಿತವಾಗಿತ್ತು. ಅದರ ಹೆಸರು ಕ್ರೈಸ್ತಗುರು ಕೊಲೆಗಾರರೇ?’ ಎಂಬುದು ನನ್ನ ನೆನಪು. ಮುಂದೆ ಎಷ್ಟೋ ವರ್ಷಗಳ ಕಾಲ ಆ ಯುವಪಾದ್ರಿಯ ಮುಖದೊಂದಿಗೆ ಇತರರ ಮುಖಗಳನ್ನು ಹೋಲಿಸಿಕೊಂಡು ನನ್ನ ನೆನಪನ್ನು ಬ್ರಷ್ ಮಾಡಿಕೊಂಡದ್ದೂ ಉಂಟು. ಡಿಸೆಂಬರ್ ಚಳಿಗೆ ನನ್ನ ಮುಂಬೆರಳ ತುದಿ ಹಿಂಡಿದಾಗಲೆಲ್ಲ ಆ ನನ್ನ ಬಾಲ್ಯದ ಹೊಳಪಿನ ಬ್ಲೇಡಿನ ನೆನಪೂ ಕಾಡುತ್ತದೆ.

ಕಾಮೆಂಟ್‌ಗಳಿಲ್ಲ: