ಬುಧವಾರ, ಡಿಸೆಂಬರ್ 7, 2011

ಮಿಶನರಿ ಯಾತ್ರೆಯ ಹಿಂದೆ


೧೫-೧೬ನೇ ಶತಮಾನಗಳಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ಐರೋಪ್ಯರು ಹೊಸಹೊಸ ಜಲಮಾರ್ಗಗಳನ್ನು ಕಂಡುಹಿಡಿದು ವಿವಿಧ ಖಂಡಗಳನ್ನು ತಲುಪಿ ಅಲ್ಲೆಲ್ಲಾ ತಮ್ಮ ಕೋಠಿಗಳನ್ನು ಸ್ಥಾಪಿಸಿಕೊಂಡರು. ಅವರೊಂದಿಗೆ ಅವರ ವಾಣಿಜ್ಯ ಹಡಗುಗಳಲ್ಲಿ ಕ್ರೈಸ್ತ ಧರ್ಮಪ್ರಚಾರದ ಅಭಿಲಾಷೆಯುಳ್ಳ ಪಾದ್ರಿಗಳೂ ಸ್ವಯಿಚ್ಛೆಯಿಂದ ಪ್ರಯಾಣಿಸಿ ಹೊಸ ದೇಶಗಳ ಒಳನಾಡನ್ನೆಲ್ಲ ಸುತ್ತಿದರು.
ಹಾಗೆ ಇಂಡಿಯಾ ದೇಶಕ್ಕೆ ಜಲಮಾರ್ಗವಾಗಿ ಬಂದವರಲ್ಲಿ ಪೋರ್ಚುಗೀಸರೇ ಮೊದಲಿಗರು. ೧೪೯೮ರಲ್ಲಿ ವಾಸ್ಕೊ ಡ ಗಾಮನು ಕಲ್ಲಿಕೋಟೆಯಲ್ಲಿ ಲಂಗರು ಹಾಕುವುದರೊಂದಿಗೆ ಇಂಡಿಯಾದ ನೆಲದಲ್ಲಿ ಹೊಸ ಗಾಳಿ ಬೀಸುವುದಕ್ಕೆ ಕಾರಣಕರ್ತನಾದನು. ಪೋರ್ಚುಗೀಸ್ ಸರ್ಕಾರದ ವತಿಯಿಂದ ನಡದ ಇಂತಹ ಸಾಹಸೀ ಜಲಯಾತ್ರೆಗಳನ್ನು ಕ್ರೈಸ್ತ ಜಗದ್ಗುರು ಪೋಪರೂ ಹರಸಿ ಆಶೀರ್ವದಿಸಿದ್ದರು. ಅಂತೆಯೇ ಹೊಸದಾಗಿ ಕಂಡುಹಿಡಿವ ದೇಶಗಳಲ್ಲಿ ಧರ್ಮಪ್ರಚಾರಕರಿಗೆ ಸಹಕಾರ ನೀಡಬೇಕೆನ್ನುವ ಕ್ರೈಸ್ತ ಜಗದ್ಗುರುಗಳ ಮನವಿಯನ್ನು ಧರ್ಮಭೀರುಗಳಾದ ಪೋರ್ಚುಗೀಸರು ಶಿರಸಾವಹಿಸಿ ಪಾಲಿಸಿದ್ದರಲ್ಲಿ ಅತಿಶಯವೇನೂ ಇಲ್ಲ.
ಅಲ್ಲದೆ ವರ್ತಕರ ಮತ್ತು ಧರ್ಮಪ್ರಚಾರಕರ ನಡುವೆ ಒಂದು ಕಂಡೂ ಕಾಣದ ಒಳ ಒಪ್ಪಂದವಿದ್ದಂತೆಯೂ ತೋರುತ್ತದೆ. ಧರ್ಮಪ್ರಚಾರಕರು ಮಳೆಬಿಸಿಲೆನ್ನದೆ ಹಸಿವು ನೀರಡಿಕೆಯೆನ್ನದೆ ಕಾಡುಮೇಡುಗಳೆನ್ನದೆ ಸುತ್ತಿ ಕ್ರಿಸ್ತಸಂದೇಶವನ್ನು ಪ್ರಚಾರ ಮಾಡುತ್ತಿದ್ದರು. ಪಾದ್ರಿಗಳ ಕೆಲಸದಲ್ಲಿ ತ್ಯಾಗ ಬಲಿದಾನಗಳೇ ಮೇಲುಗೈಯಾದರೆ ಅದೇ ವೇಳೆಯಲ್ಲಿ ಸಮಾನಸಾಹಸಿಗಳಾಗಿದ್ದ ವಾಣಿಜ್ಯ ಯಾತ್ರಿಗಳಲ್ಲಿ ಧನದಾಹದ ಸ್ವಾರ್ಥ ಮೇಲಾಟ ನಡೆಸಿದ್ದವು. ಆದರೂ ಈ ವರ್ತಕರು ಧರ್ಮಪ್ರಚಾರಕರನ್ನು ಅತ್ಯಂತ ಗೌರವದಿಂದ ಪರಿಭಾವಿಸುತ್ತಿದ್ದರು. ವರ್ತಕರ ಹಡಗುಗಳಲ್ಲಿ ಪಾದ್ರಿಗಳು ಪತ್ರಗಳನ್ನು, ಬಟ್ಟೆಬರೆಗಳನ್ನು, ಔಷಧಿ ಉಡುಗರೆ ಪೂಜಾಸಾಮಗ್ರಿಗಳನ್ನು ಉಚಿತವಾಗಿ ಸಾಗಿಸಬಹುದಿತ್ತು. ಅವರು ಒಂದು ಪೆಟ್ಟಿಗೆಯ ಮೇಲೆ ವಿಳಾಸದಾರರ ಹೆಸರು ಬರೆದು ಹಡಗಿನ ಸಿಬ್ಬಂದಿಗೆ ನಿಶ್ಚಿಂತೆಯಿಂದ ಒಪ್ಪಿಸಿಬಿಟ್ಟರೆ ಸಾಕಿತ್ತು, ಅದರೊಳಗೇನಿದೆ ಎಂದು ವಿಚಾರಿಸುವ ಗೊಡವೆಗೇ ಹೋಗದೆ ಅದು ವಿಳಾಸದಾರರಿಗೆ ಖಂಡಿತ ತಲುಪುತ್ತಿತ್ತು. ಹೀಗೆ ಇಂದಿನ ಕೊರಿಯರ್ ಸೇವೆಯ ಮೂಲಬೇರುಗಳನ್ನು ನಾವಿಲ್ಲಿ ಕಾಣಬಹುದು. 
ವರ್ತಕ ಸಮುದಾಯವು ತಮಗಾಗಿ ಇಷ್ಟನ್ನೆಲ್ಲ ಮಾಡುವಾಗ ಅವರ ಋಣ ತೀರಿಸಲು ಪಾದ್ರಿ ಸಮುದಾಯವು ತಾನೂ ಏನಾದರೂ ಮಾಡಬೇಕಲ್ಲವೇ?  ಅವರು ತಾವು ಸಂದರ್ಶಿಸಿದ ಪ್ರಾಂತ್ಯಗಳ ರಾಜನೊಂದಿಗೆ ಸಂವಾದಿಸಿ ರಾಯಭಾರಿಯ ಕೆಲಸ ಮಾಡುತ್ತಿದ್ದರು. ಆ ರಾಜನನ್ನು ಭೇಟಿಯಾದಾಗ ಚಿನ್ನಬೆಳ್ಳಿಯ ಕುಸುರಿವಸ್ತುಗಳು, ಬೆಲೆಬಾಳುವ ವಸ್ತ್ರಗಳು, ವಿಶೇಷವಾಗಿ ಭಟ್ಟಿಯಿಳಿಸಿದ ಮದ್ಯ ಮುಂತಾದವುಗಳನ್ನು ಉಡುಗರೆಯಾಗಿ ನೀಡಲಾಗುತ್ತಿತ್ತು. ಈ ವಸ್ತುಗಳನ್ನು ವರ್ತಕ ಸಿಬ್ಬಂದಿಯೇ ಒದಗಿಸುತ್ತಿದ್ದಂತೆ ತೋರುತ್ತದೆ. ಆ ಮೂಲಕ ಆ ರಾಜರುಗಳೊಂದಿಗೆ ದೌತ್ಯದಲ್ಲಿ ಯಶರಾಗುತ್ತಿದ್ದ ಪಾದ್ರಿಗಳು ಅವರ ನಾಡಿನಲ್ಲಿ ಮುಕ್ತವಾಗಿ ಸಂಚರಿಸಲು ಸನ್ನದು ಪಡೆಯುತ್ತಿದ್ದರು ಮತ್ತು ಅದೇ ವೇಳೆಯಲ್ಲಿ ಆ ರಾಜರು ತಮ್ಮ ಸೇನಾಪಡೆಯನ್ನು ಮೇಲ್ದರ್ಜೆಗೇರಿಸಲು ವರ್ತಕರೊಂದಿಗೆ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದರು. ವಿಜಯನಗರದ ಅರಸನು ತನ್ನ ಓರಗೆಯ ಬಿಜಾಪುರ ಸುಲ್ತಾನನ್ನು ಮಣಿಸಲು ಪೋರ್ಚುಗೀಸರಿಂದ ಕುದುರೆಗಳನ್ನೂ ಮದ್ದುಗುಂಡುಗಳನ್ನೂ ಖರೀದಿಸಿದ ಉದಾಹರಣೆ ಇತಿಹಾಸದಲ್ಲಿ ದಾಖಲಾಗಿದೆ.
ಹೀಗೆ ಪೋರ್ಚುಗೀಸರು ಇಂಡಿಯಾ ದೇಶಕ್ಕೆ ತಾವು ಕಂಡುಕೊಂಡ ಜಲಮಾರ್ಗಕ್ಕೆ ಪೋಪ್ ಜಗದ್ಗುರುಗಳಿಂದ ವಿಶೇಷ ಪರ್ಮಿಟ್ಟು ಮಾಡಿಕೊಂಡಿದ್ದರಲ್ಲವೇ? ಅವರು ಅಂದು ಪೋಪ್ ಜಗದ್ಗುರುಗಳಿಗೆ ಇಂಡಿಯಾ, ಸಿಲೋನ್, ಬರ್ಮಾ, ಚೀನಾ, ಜಪಾನ್ ದೇಶಗಳನ್ನು ಒಟ್ಟು ಸೇರಿಸಿ ಈ ಅಗಾಧವಾದ ಪ್ರದೇಶವನ್ನು ಒಂದು ಪುಟ್ಟ ಭೂಭಾಗದಂತೆ ತೋರಿಸಿದ ಭೂಪಟವನ್ನು ತಯಾರಿಸಿ ಧರ್ಮಪ್ರಚಾರದ ಹಕ್ಕನ್ನು ಪಡೆದಿದ್ದರು. ಹೀಗೆ ಅವರು ಯೂರೋಪಿನಲ್ಲಿ ಸಂಬಾರ ಪದಾರ್ಥಗಳನ್ನು ವಿಕ್ರಯಿಸುವ ಏಕೈಕ ದೊರೆಗಳಾಗಿ ಮೆರೆಯಲು ತೊಡಗಿದಾಗ ಚಿನ್ನದ ಹುಡುಕಾಟದಲ್ಲಿ ತೊಡಗಿದ್ದ ಸ್ಪೇನ್, ಇಂಗ್ಲೆಂಡ್ ಮತ್ತು ಫ್ರಾನ್ಸ್ ಮುಂತಾದ ದೇಶಗಳಿಗೆ ಕಣ್ಣುಕಿಸುರಾಗಿದ್ದರಲ್ಲಿ ಅಚ್ಚರಿಯೇನಿಲ್ಲ. ಅವರೂ ಇಂಡಿಯಾದತ್ತ ಮುಖ ಮಾಡಲಾರಂಭಿಸುತ್ತಿದ್ದಂತೆ ಪೋರ್ಚುಗೀಸರಿಗೆ ಆತಂಕ ಶುರುವಾಯಿತು.
ಇಂಡಿಯಾದ ಜಲಮಾರ್ಗದಲ್ಲಿ ಆ ಇನ್ನಿತರರೂ ಪಯಣಿಸಿದರೆ ಇಂಡಿಯಾ ಸೇರಿದಂತೆ ಜಪಾನ್ ವರೆಗಿನ ಭೂಮಾಪನದ ಅಳತೆ ಸಿಕ್ಕಿ ಪೋಪರೆದುರು ಮುಖಭಂಗವಾಗುವುದು ಮಾತ್ರವಲ್ಲ, ಸಿಗುತ್ತಿದ್ದ ವರಮಾನದಲ್ಲಿ ಕಡಿತ ಉಂಟಾಗುವುದು ಅವರಿಗೆ ಬೇಡವಾಗಿತ್ತು. ಅದಕ್ಕಾಗಿ ಅವರು ಇಂಗ್ಲಿಷರು ಮತ್ತು ಫ್ರೆಂಚರ ವಿರುದ್ಧ ಕ್ರೈಸ್ತ ಜಗದ್ಗುರು ಪೀಠಕ್ಕೆ ಒತ್ತಡ ತರಲೆತ್ನಿಸಿದರು. ತಾವೇ ಕ್ರೈಸ್ತ ಧರ್ಮರಕ್ಷಕರು, ಈ ಆಂಗ್ಲರು ಮತ್ತು ಫ್ರೆಂಚರು ಪಾಷಂಡಿಗಳು ಎನ್ನುವ ಅಭಿಪ್ರಾಯವನ್ನು ಬಿಂಬಿಸಲು ಸಹಾ ಅವರು ಹಿಂಜರಿಯಲಿಲ್ಲ.
ಒಂದು ಶತಮಾನದ ಕಾಲ ಇಲ್ಲಿ ನೆಲೆನಿಂತು ಅಪಾರ ಹಣಗಳಿಸಿದರೂ ಧರ್ಮಪ್ರಚಾರಕ್ಕೆ ನೀಡಿದ ಕೊಡುಗೆ ಏನು ಎಂಬ ಪ್ರಶ್ನೆಗೆ ಇಂಕ್ವಿಸಿಷನ್ ಎಂಬ ಬಲವಂತ ದೀಕ್ಷೆ ಉತ್ತರವಾಯಿತೇ? ಅಲ್ಲದೆ ಪೋರ್ಚುಗೀಸ್ ರಾಜಕಾರಣವು ವ್ಯಾಟಿಕನ್ನಿನ ಕ್ರೈಸ್ತ ಜಗದ್ಗುರುಪೀಠದ ಆಡಳಿತದಲ್ಲೂ ಕೈಹಾಕಿ ಪೋಪರ ಮತ್ತು ಬಿಷಪರ ಆಯ್ಕೆಗಳನ್ನು ಪೋರ್ಚುಗೀಸ್ ರಾಜಕಾರಣದ ದಾಳದಂತೆಯೇ ನಡೆಸಿಕೊಂಡದ್ದೂ ಸುಳ್ಳೇನಲ್ಲ. ಅದೇ ರಾಜಕೀಯ ಹುನ್ನಾರದ ಫಲವಾಗಿಯೇ ಜಗದ್ಗುರುಪೀಠವು ತನಗೆ ನಿಷ್ಠರಾಗಿದ್ದ ಯೇಸುಸಭೆಯನ್ನು ಬಹಿಷ್ಕರಿಸಿತ್ತು ಎಂಬುದಂತೂ ಕಟುಸತ್ಯ.
ಕೊನೆಗೂ ರೋಮಾಪುರಿಯ ಈ ಜಗದ್ಗುರುಪೀಠವು ಆ ಕಬಂಧಬಾಹುವಿನಿಂದ ಹೊರಬಂದು ತನ್ನ ಕಾಲಮೇಲೆ ನಿಲ್ಲುವ ಮುನ್ನ ಶತಮಾನಗಳ ಕಾಲ ಪಾದ್ರುವಾದೆ ಮತ್ತು ಪ್ರಾಪಗಾಂಡಾಗಳ ನಡುವಿನ ಶೀತಲಸಮರವನ್ನು ಎದುರಿಸಬೇಕಾಯಿತೆಂಬುದು ಇತಿಹಾಸ.

ಕಾಮೆಂಟ್‌ಗಳಿಲ್ಲ: