ಶನಿವಾರ, ಅಕ್ಟೋಬರ್ 20, 2012

ಕನ್ನಡದ ಸ್ಥಿತಿಗತಿ


ಕನ್ನಡವು ಎರಡು ಸಾವಿರ ವರ್ಷಗಳ ಇತಿಹಾಸವಿರುವ ಒಂದು ಸಂಪದ್ಭರಿತ ಭಾಷೆ. ನಮ್ಮ ಈ ಕನ್ನಡ ಭಾಷೆಯಲ್ಲಿ ಒಂದು ಸಾವಿರ ವರ್ಷಗಳಿಗೆ ಮುನ್ನವೇ ಕವರತ್ನರು ಮೈದಳೆದಿದ್ದಾರೆ, ಮಹಾಕಾವ್ಯಗಳು ಉದ್ಭವಿಸಿವೆ. ಹಳೆಗನ್ನಡ ನಡುಗನ್ನಡ ಹೊಸಗನ್ನಡಗಳ ಭವ್ಯ ಪರಂಪರೆಯಲ್ಲಿ ಹಲವಾರು ಉತ್ತಮ ಸಾಹಿತ್ಯಗಳು, ಸ್ಫೂರ್ತಿದಾಯಕ ಆಚಾರವಿಚಾರಗಳು, ಹೆಮ್ಮೆ ತರುವ ರಾಜಾಳ್ವಿಕೆಗಳು ನಡೆದುಬಂದಿವೆ. ಇಂದಿನ ಇಪ್ಪತ್ತು ಇಪ್ಪತ್ತೊಂದನೇ ಶತಮಾನಗಳಲ್ಲಿ ಕನ್ನಡವು ತನ್ನ ಉಚ್ಛ್ರಾಯ ಸ್ಥಿತಿಯನ್ನು ಕಂಡಿದೆ. ನಮ್ಮ ದೇಶದ ಹೆಮ್ಮೆಯ ಸಾಹಿತ್ಯ ಪುರಸ್ಕಾರವಾದ ಜ್ಞಾನಪೀಠ ಪ್ರಶಸ್ತಿಯ ಹೆಚ್ಚಿನ ಪಾಲು ಕನ್ನಡಕ್ಕೆ ದೊರೆತಿದೆ. ಇದಕ್ಕೆ ಕಿರೀಟಪ್ರಾಯ ಎಂಬಂತೆ ಕನ್ನಡವು ಶಾಸ್ತ್ರೀಯ ಭಾಷೆ ಎಂದು ಬಿರುದು ಹೊತ್ತಿದೆ.

ಆರೂವರೆ ಕೋಟಿ ಕನ್ನಡಿಗರು ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಲ್ಲಿ ಹಾಗೂ ವಿಶ್ವದೆಲ್ಲೆಡೆ ಕನ್ನಡದ ಕಂಪನ್ನು ಹಾಗೂ ಕನ್ನಡ ಜನರ ಸೌಜನ್ಯಪರ ಸ್ನೇಹಪರ ಬಾಂಧವ್ಯವನ್ನು ಹರಡುತ್ತಿದ್ದಾರೆ. ವಿವಿಧ ಧರ್ಮ, ಸಂಸ್ಕೃತಿ, ಪ್ರದೇಶಭೇದ ಎಲ್ಲವನ್ನೂ ಕನ್ನಡತನವು ಪ್ರೀತಿಯಿಂದ ಬೆಸೆದಿದೆ. ಕನ್ನಡದ ಪ್ರಾಚೀನ ಸಂಸ್ಕೃತಿ, ಪರಂಪರೆ, ಉತ್ಕೃಷ್ಟ ಸಾಹಿತ್ಯಗಳು ಎಲ್ಲ ಕನ್ನಡಿಗರಿಗೆ ರೋಮಾಂಚಕ ಭಾವನೆಗಳ ಸೆಲೆಯಾಗಿವೆ. ಅವನ್ನೆಲ್ಲ ಅವರು ಅತ್ಯಂತ ಅಮೂಲ್ಯವೆಂದು ಭಾವಿಸುತ್ತಾರೆ.

ಕನ್ನಡನಾಡಿನ ನಿಸರ್ಗಸೌಂದರ್ಯ, ಪ್ರಾಕೃತಿಕ ಸಂಪನ್ಮೂಲಗಳು, ಅರಣ್ಯಗಳು, ಸಸ್ಯಸಂಪತ್ತು, ಪ್ರಾಣಿಸಂಕುಲ, ನದಿ ತೊರೆ ಜಲಪಾತಗಳು, ಬೆಟ್ಟ ಘಟ್ಟ ಬಯಲತಾಣಗಳು, ತೆಂಗು ಕಂಗು ರಾಗಿ ಜೋಳ ನೆಲಗಡಲೆಗಳು, ಮಲ್ಲಿಗೆ ಸಂಪಿಗೆ ಜಾಜಿ ಪುನುಗುಗಳು, ಸಿರಿಗಂಧ ಬಂಗಾರಗಳು, ಗುಡಿ ಚರ್ಚು ಮಸೀದಿಗಳು ಕನ್ನಡದ ನೆಲವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿಸಿವೆ.
ಕನ್ನಡದ ನಿಯತಕಾಲಿಕೆಗಳು ತಮ್ಮ ಸೌಂದರ್ಯಕ್ಕೆ ಮಾತ್ರವಲ್ಲದೆ ನಿಷ್ಪಕ್ಷಪಾತ ನಿರೂಪಣೆಗೆ ಹೆಸರಾಗಿವೆ. ಕನ್ನಡ ಸಿನಿಮಾಗಳು ಉತ್ತಮ ಅಭಿರುಚಿಯವಾಗಿದ್ದು ವಿಚಾರ ಪ್ರಚೋದಕವೂ ಉತ್ತಮ ಮನರಂಜನಾತ್ಮಕವೂ ಕಲಾತ್ಮಕವೂ ಆಗಿವೆ. ಕನ್ನಡ ನಾಡಿನ ವಿದ್ಯಾಸಂಸ್ಥೆಗಳಲ್ಲಿ ಕಲಿಯಲು ದೇಶದೆಲ್ಲೆಡೆಯಿಂದ ಜನರು ಧಾವಿಸಿ ಬರುತ್ತಾರೆ. ಕನ್ನಡಿಗರ ಸೌಜನ್ಯಪರ ನಡವಳಿಕೆಗಳು ಆದರ ಪ್ರೀತಿಯ ಉಪಚಾರಗಳು ಕನ್ನಡ ನೆಲದ ಸೌಹಾರ್ದದ ವಾತಾವರಣಗಳು ದೇಶದೆಲ್ಲೆಡೆ ಮನೆಮಾತಾಗಿವೆ. ಎಲ್ಲರನ್ನೂ ’ಇವರು ನಮ್ಮವರು’ ಎಂದು ಭಾವಿಸುವ ಪರಿಶುದ್ಧ ಮಾನವಪ್ರೀತಿಗೆ ಸಮನಾದುದು ಬೇರೆ ಏನಿದೆ? ಅದೇ ಕನ್ನಡಿಗರ ಬಲು ಹಿರಿಮೆ.

ಇಷ್ಟೆಲ್ಲ ಮಹಾನ್ ಪರಂಪರೆ ಕನ್ನಡಕ್ಕಿದ್ದರೂ ಅದರ ಇಂದಿನ ಸ್ಥಿತಿ ಬಲು ಭಯ ಹುಟ್ಟಿಸುವಂತಿದೆ. ಕನ್ನಡಿಗರ ಸೌಜನ್ಯವನ್ನು ದೌರ್ಬಲ್ಯವೆಂದು ಪರಿಗಣಿಸಲಾಗುತ್ತಿದೆ. ಅವರ ಶಾಂತಿಪ್ರಿಯತೆಯ ದುರ್ಲಾಭ ಪಡೆದು ಅವರನ್ನು ಆತಂಕಕ್ಕೀಡು ಮಾಡುವ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ. ಉದಾರೀಕರಣ, ಔದ್ಯಮೀಕರಣಗಳ, ಬಂಡವಾಳ ಹೂಡಿಕೆಯ ನೆವದಲ್ಲಿ ಇಲ್ಲಿ ಬೇರೂರುತ್ತಿರುವವರು ಸ್ಥಳೀಯ ಸಂಸ್ಕೃತಿಗೆ ಪೋಷಕರಾಗುತ್ತಿಲ್ಲ. ಪರಿಸ್ಥಿತಿಯ ಲಾಭ ಪಡೆದು ಪರಿಸರವನ್ನು ಹಾಳುಗೆಡವುವ ಹುನ್ನಾರ ಎಲ್ಲೆಡೆ ನಡೆದಿದೆ. ಹಿಂದೀಯು ರಾಷ್ಟ್ರಭಾಷೆ ಎಂಬ ನೆವವೊಡ್ಡಿ ಕನ್ನಡದ ಮೇಲೆ ಸವಾರಿ ಮಾಡುತ್ತಿದೆ. ಕನ್ನಡವನ್ನು ಕಲಿಯದೆಯೇ ಕನ್ನಡನಾಡಿನಲ್ಲಿ ಜೀವಿಸಲು ಸಾಧ್ಯ ಎಂಬುದು ಸಾರ್ವತ್ರಿಕವಾಗುತ್ತಿದೆ. ಕನ್ನಡವನ್ನು ದ್ವೇಷಿಸುವ ಕೀಳಾಗಿ ಕಾಣುವ ಪ್ರವೃತ್ತಿ ಹೆಚ್ಚುತ್ತಿದೆ. ಮಾತುಗಾರಿಕೆಯಲ್ಲಿ ನಾಮಫಲಕಗಳಲ್ಲಿ ಕರಪತ್ರಗಳಲ್ಲಿ ಜಾಹಿರಾತುಗಳಲ್ಲಿ ಕನ್ನಡ ಕಾಣಿಸುತ್ತಿಲ್ಲ.

ಇನ್ನು ಕನ್ನಡ ಮನೆಮಾತಿನ ಜನರೂ ಕನ್ನಡತನವನ್ನು ಮರೆಯುತ್ತಿದ್ದಾರೆ. ತಾವು ನೆಲೆನಿಂತ ಸ್ಥಳದಲ್ಲಿ ಕನ್ನಡವನ್ನು ಕನ್ನಡತನವನ್ನು ತೋರುವ ಬದಲಿಗೆ ಎದುರಿಗೆ ಕಂಡ ವ್ಯಕ್ತಿಯ ಜಾಯಮಾನಕ್ಕೆ ತಕ್ಕಂತೆ ರೂಪಾಂತರವಾಗುತ್ತಿದ್ದಾರೆ. ಕನ್ನಡಿಗರ ಮಾತುಗಾರಿಕೆ ಸಂಭಾಷಣೆಗಳಲ್ಲಿ ಕನ್ನಡದ ಪದಗಳ ಪ್ರಯೋಗ ಕಡಿಮೆಯಾಗುತ್ತಿದೆ. ಕನ್ನಡದ ಪತ್ರಿಕೆಗಳನ್ನು ಪುಸ್ತಕಗಳನ್ನು ಓದುವವರು ಕಡಿಮೆಯಾಗುತ್ತಿದ್ದಾರೆ. ಕನ್ನಡದ ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆಯಿದೆ. ನಮ್ಮ ಪ್ರವಾಸಿ ತಾಣಗಳನ್ನು ಬಿಟ್ಟು ನಾವು ಹೊರನಾಡುಗಳಿಗೆ ಪ್ರವಾಸ ಹೋಗುತ್ತೇವೆ. ಇತರ ಕನ್ನಡಿಗರೊಂದಿಗೆ ಇಂಗ್ಲಿಷಿನಲ್ಲಿ ಮಾತಾಡುವುದು ನಮಗೆ ಹೆಮ್ಮೆ ಉಂಟುಮಾಡುತ್ತದೆ. ಹೆಚ್ಚಿನ ಕನ್ನಡಿಗರಿಗೆ ಕನ್ನಡದಲ್ಲಿ ತಪ್ಪಿಲ್ಲದೆ ಬರೆಯುವುದು ಸಾಧ್ಯವಾಗುತ್ತಿಲ್ಲ. ಎಷ್ಟೋ ಕನ್ನಡಿಗರು ಕನ್ನಡವನ್ನು ತಪ್ಪುತಪ್ಪಾಗಿ ಉಚ್ಚರಿಸುತ್ತಾರೆ ಅಥವಾ ತಪ್ಪುತಪ್ಪಾಗಿ ಮಾತಾಡುತ್ತಾರೆ. ತಪ್ಪುತಪ್ಪಾದ ಬರವಣಿಗೆಗಳನ್ನು ಅವು ಹೇಗಿದೆಯೋ ಹಾಗೆ ನಾವು ಒಪ್ಪಿಕೊಂಡುಬಿಡುತ್ತೇವೆ. ಕನ್ನಡಿಗರು ತಮ್ಮ ಮಕ್ಕಳು ಅಮ್ಮಾ ಅಪ್ಪಾ ಎಂದರೆ ತಬ್ಬಿಬ್ಬಾಗುತ್ತಾರೆ ಆದರೆ ಮಮ್ಮೀ ಡ್ಯಾಡೀ ಎಂದು ಕರೆಯುವಾಗ ಪುಳಕಗೊಳ್ಳುತ್ತಾರೆ. ಮಕ್ಕಳೂ ಸಹಾ ಮಾತೃಭಾಷೆ ಕನ್ನಡದಲ್ಲಿ ಮಾತನಾಡಲು ತಳಮಳ ಪಡುತ್ತಾರೆ.
ಕನ್ನಡಿಗರಲ್ಲಿ ಕನ್ನಡತನಕ್ಕಿಂತ ಜಾತಿ ಧರ್ಮ ಪ್ರದೇಶಗಳ ಭಾವನೆಗಳು ಮುಖ್ಯವಾಗುತ್ತವೆ. ಕನ್ನಡತನದ ಆಚರಣೆಯು ಎಷ್ಟೋ ವೇಳೆ ಪ್ರದರ್ಶನದಂತೆ ಭಾಸವಾಗುತ್ತದೆ. ಎಷ್ಟೋ ಜನರಿಗೆ ಕನ್ನಡದ ಕೂಗು ಹೊಟ್ಟೆಪಾಡಿನ ವಿಚಾರವಾಗಿದೆ. ಗಾಜಿನ ಮನೆಯವರಿಗೆ ಕನ್ನಡದ ಬಾವುಟವು ಕಲ್ಲೇಟಿನಿಂದ ರಕ್ಷೆ ನೀಡುತ್ತದೆಂದರೆ ಕನ್ನಡಿಗನು ಕಲ್ಲುತೂರುವ ದುಷ್ಟನೆಂದಲ್ಲವೇ? ಇಂದು ಕನ್ನಡವನ್ನು ಪ್ರೀತಿಯಿಂದ ಅಪ್ಪಿಕೊಳ್ಳುವವರಿಲ್ಲ ಒಪ್ಪಿಕೊಳ್ಳುವವರಿಲ್ಲ. ಆಳ್ ಕನ್ನಡ ತಾಯ್ ಬಾಳ್ ಕನ್ನಡ ತಾಯ್ ಎಂಬ ಕವಿವಾಣಿಯು ಸವಕಲಾಗಿ ಬೆಲೆಯಿಲ್ಲವಾಗಿದೆ.

2 ಕಾಮೆಂಟ್‌ಗಳು:

ವಿ.ರಾ.ಹೆ. ಹೇಳಿದರು...

ಹೌದು. ಇದನ್ನೆಲ್ಲಾ ನೋಡಿದರೆ ಬೇಸರವಾಗುತ್ತದೆ. :(

ಅನಾಮಧೇಯ ಹೇಳಿದರು...

ಇದನ್ನೆಲ್ಲಾ ನೋಡಿದರೆ ಬೇಸರವಾಗುತ್ತದೆ.