ಭಾನುವಾರ, ಡಿಸೆಂಬರ್ 30, 2012

ಸಾಮಾಜಿಕ ಪಿಡುಗು

ಸಿಗ್ಮಂಡ್ ಫ್ರಾಯ್ಡ್ ಅನ್ನೋ ಒಬ್ಬ ಮನೋವಿಜ್ಞಾನಿ ಈಡಿಪಸ್ ಕಾಂಪ್ಲೆಕ್ಸ್ (Oedipus complex) ಅನ್ನುವಂತ ಒಂದು ರೋಗಲಕ್ಷಣ ಮನುಷ್ಯನ ಸುಪ್ತ ಪ್ರಜ್ಞೆಯೊಳಗೆ ಸದಾ ಅಡಗಿರುತ್ತದೆಂದು ಹೇಳಿದ್ದಾನೆ. ಪ್ರತಿ ಮಗುವೂ ತನ್ನ ತಾಯಿಯನ್ನು ಲೈಂಗಿಕ ಸಂಗಾತಿಯಾಗಿ ಬಯಸುವುದೇ ಈಡಿಪಸ್ ಕಾಂಪ್ಲೆಕ್ಸ್.
ಗ್ರೀಕ್ ಕತೆಯೊಂದರಲ್ಲಿ ಬರುವ ಈ ಈಡಿಪಸ್ ಒಬ್ಬ ರಾಜನ ಮಗ. ಅವನು ಹುಟ್ಟುವಾಗಲೇ ಜೋತಿಷಿಗಳು ಈ ಮಗು ತಂದೆಗೆ ಕಂಟಕನಾಗುತ್ತಾನೆ ಎಂದು ಭವಿಷ್ಯ ನುಡಿಯುತ್ತಾರಂತೆ. ಅದಕ್ಕಾಗಿ ರಾಜ ಆ ಮಗುವನ್ನು ಕೊಂದುಬಿಡಬೇಕೆಂದು ಕಟುಕರಿಗೆ ಆಜ್ಞಾಪಿಸುತ್ತಾನೆ. ಮಗುವನ್ನು ಹೊತ್ತೊಯ್ದ ಕಟುಕರು ಅದರ ಮೇಲೆ ಕನಿಕರಗೊಂಡು ಅದರ ಹೆಬ್ಬೆರಳನ್ನಷ್ಟೇ ಕೊಯ್ದುಕೊಂಡು ಬೆಟ್ಟದ ಇಳಿಜಾರಿನಲ್ಲಿ ಮಗುವನ್ನು ಜಾರಿಸಿ ಬಂದುಬಿಡುತ್ತಾರೆ. ರಾಜನಿಗೆ ಮಗುವಿನ ಹೆಬ್ಬೆರಳನ್ನು ತೋರಿಸಿ ತಮ್ಮ ಕೆಲಸ ಆಯಿತೆಂದು ಹೇಳುತ್ತಾರೆ.
ಮುಂದೆ ಆ ಮಗು ಇನ್ನೊಬ್ಬ ರಾಜನ ಆಶ್ರಯದಲ್ಲಿ ಬೆಳೆದು ಅವನ ಉತ್ತರಾಧಿಕಾರಿಯೂ ಆಗಿ ರಾಜ್ಯವಿಸ್ತರಣೆಗೆ ತೊಡಗುತ್ತಾನೆ.  ಹೀಗೊಂದು ರಾಜ್ಯವನ್ನು ಅವನು ಗೆದ್ದಾಗ ಆ ರಾಜ್ಯದ ಪದ್ಧತಿಯಂತೆ ಅದರ ರಾಣಿ ಈಡಿಪಸನ ಹೆಂಡತಿಯಾಗುತ್ತಾಳೆ. ಒಮ್ಮೆ ಆ ರಾಣಿಯು ತನ್ನ ಹೊಸಗಂಡನ ಕಾಲಲ್ಲಿ ಹೆಬ್ಬೆರಳು ಕಾಣದೆ ಅವನ ಪೂರ್ವಾಪರಗಳನ್ನು ವಿಚಾರಿಸಿದಾಗ ತಾವಿಬ್ಬರೂ ತಾಯಿ ಮಗ ಎಂಬ ಅಂಶ ಬಯಲಾಗುತ್ತದೆ.
ಇಂಥಾ ಒಂದು ಈಡಿಪಸ್ ಕಾಂಪ್ಲೆಕ್ಸ್ ಉಲ್ಬಣಗೊಂಡ ಸ್ಥಿತಿಯನ್ನು ನಾವಿಂದು ನಮ್ಮ ಭವ್ಯ ಭಾರತ ದೇಶದಲ್ಲಿ ಕಾಣುತ್ತಿದ್ದೇವೆ. ನವದೆಹಲಿಯಲ್ಲಿ ಓಡುತ್ತಿರುವ ಬಸ್ಸಿನಲ್ಲೇ ಯುವತಿಯ ಮೇಲೆ ಅತ್ಯಾಚಾರ, ಹಾಸನದಲ್ಲಿ ಯುವಕನೊಬ್ಬ ತನ್ನ ಅತ್ತೆಯ ಮಗಳನ್ನೇ ಸ್ನೇಹಿತನಿಗೆ ಉಣಬಡಿಸಿದ ಸಂಗತಿ, ಕೇರಳದಲ್ಲಿ ತಂದೆಯೊಬ್ಬ ತನ್ನ ಕಾಮುಕ ಸ್ನೇಹಿತರೊಂದಿಗೆ ಸೇರಿ ಮಗಳನ್ನೇ ಭೋಗಿಸಿದ ವಿಚಾರ, ಕಾಸರಗೋಡಿನಲ್ಲಿ ಅಭಿಸಾರಿಕೆಯಾಗಿ ಬಂದ ಗೆಳತಿಯನ್ನು ಸ್ನೇಹಿತರೊಂದಿಗೆ ಸೇರಿಕೊಂಡು ವಂಚಿಸಿದ ಪರಿ ಇವನ್ನೆಲ್ಲ ಗಮನಿಸಿದರೆ ನಮ್ಮ ಮಹಾಭಾರತದ ಸಮಾಜವು ಎತ್ತ ಸಾಗುತ್ತಿದೆ ಎಂಬುದನ್ನು ಗುರುತಿಸಬಹುದಾಗಿದೆ.
ಭ್ರಷ್ಟಾಚಾರಕ್ಕಿಂತಲೂ ಅತ್ಯಾಚಾರವು ಇಂದು ನಮ್ಮ ಸಮಾಜದ ದೊಡ್ಡ ಪಿಡುಗಾಗಿದೆ. ಇದಕ್ಕೆ ಬಹುಶಃ ನಮ್ಮ ಸಿನೆಮಾಗಳು, ಅಂತರ್ಜಾಲದ ಆಸಕ್ತಿಗಳು, ವಿದ್ಯುನ್ಮಾನ ಸಲಕರಣೆಗಳು ಸಹಕಾರ ನೀಡುತ್ತಿವೆ.
ಈ ಸಾಮಾಜಿಕ ಪಿಡುಗನ್ನು ತೊಡೆದುಹಾಕಲು ಆಮೂಲಾಗ್ರ ಮನಪರಿವರ್ತನೆಯ ಅಗತ್ಯ ಇಂದು ಎದ್ದು ಕಾಣುತ್ತಿದೆ. ಧಾರ್ಮಿಕ ಸಂಸ್ಥೆಗಳು ವಿದ್ಯಾಕೇಂದ್ರಗಳು ಒಂದು ದೂರಗಾಮಿ ಯೋಜನೆಯನ್ನು ಹಾಕಿಕೊಂಡು ಸಮಾಜದಲ್ಲಿ ಸದ್ಬುದ್ದಿಯನ್ನು ತರಲು ಶ್ರಮಿಸುವ ಅಗತ್ಯವಿದೆ. ಸಾಕ್ಷರತೆಯಲ್ಲಿ ಮುಂದಿರುವ ಕೇರಳ ರಾಜ್ಯದಲ್ಲೇ ವಿನಾಶಕಾರೀ ಕೀಚಕ ಪ್ರವೃತ್ತಿಯು ಕಾಣುತ್ತಿದೆಯೆಂದ ಮೇಲೆ ಇದಕ್ಕೆ ಬೇರೆ ರೀತಿಯ ಉಪಾಯವೇ ಬೇಕೇನೋ.

ಕಾಮೆಂಟ್‌ಗಳಿಲ್ಲ: