ಭಾನುವಾರ, ಆಗಸ್ಟ್ 10, 2014

ಮಕ್ಕಳ ಜೀವೋದಯ

ತಂದೆತಾಯಿಯರ ಪ್ರೀತಿಯಿಂದ ವಂಚಿತರಾದ ಅಥವಾ ಕೆಟ್ಟ ಸಹವಾಸ ಕೆಟ್ಟ ಆಕರ್ಷಣೆಗೆ ಒಳಗಾದ ಮಕ್ಕಳು ಮನೆಬಿಟ್ಟು ಓಡಿಹೋಗಿ ಅಪರಿಚಿತ ಊರಿನಲ್ಲಿ ಮತ್ತಷ್ಟು ಕೆಟ್ಟುಹೋಗುವುದು ಸಾಮಾನ್ಯ ಸಂಗತಿ. ಅದರಲ್ಲೂ ಬೆಂಗಳೂರಿನಂಥ ನಗರಗಳಲ್ಲಿ ಬೀದಿಗೆ ಬಿದ್ದ ಇಂಥ ಮಕ್ಕಳು ತಬ್ಬಲಿಗಳಂತೆ ಬೀದಿ ಬೀದಿ ಅಲೆಯುವುದು, ತಿರುಪೆ ಎತ್ತುವುದು, ಕದಿಯುವುದು, ಇಲ್ಲವೇ ಸಮಾಜಘಾತುಕರ ಕೈಯ ಸೂತ್ರದ ಬೊಂಬೆಯಾಗುವುದು ನಡೆದೇ ಇದೆ. ಪ್ರಾಯದ ಹೆಣ್ಣುಮಕ್ಕಳಂತೂ ತಾವೂ ಕೆಟ್ಟು ಸಮಾಜವನ್ನೂ ಕೆಡಿಸುವುದು ನಾಗರಿಕ ಸಮಾಜಕ್ಕೆ ಪಿಡುಗಾಗಿದೆ. ಇಂಥವನ್ನು ಗ್ರಹಿಸುವ ಪೊಲೀಸು ಇಲಾಖೆ ಇಂಥ ಮಕ್ಕಳನ್ನು ಹಿಡಿದು ಬಾಲಕುಟೀರಗಳಿಗೆ ಸೇರಿಸುತ್ತಾರೆ. ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಇಂಥ ಮಕ್ಕಳನ್ನು ಅವರ ತಾಯ್ತಂದೆಯರಿಗೆ ಅಥವಾ ಅವರು ಅನಾಥರಾಗಿದ್ದಲ್ಲಿ ಪೋಷಣೆಯ ಹೊರೆ ಹೊರುವ ಸರ್ಕಾರೇತರ ಸೇವಾ ಸಂಸ್ಥೆಗಳ ಸುಪರ್ದಿಗೆ ಒಪ್ಪಿಸುತ್ತಾರೆ.
ಸೇವಾ ಮನೋಭಾವದ ಈ ಸರ್ಕಾರೇತರ ಸಂಸ್ಥೆಗಳು ಸಾರ್ವಜನಿಕ ದೇಣಿಗೆಯ ನೆರವಿನಿಂದ ಇಂಥ ಮಕ್ಕಳನ್ನು ಪಡೆದು ಅವರಿಗೆ ಸ್ವಚ್ಛತೆಯನ್ನು ಕಲಿಸಿ ಶಿಕ್ಷಣ ನೀಡಿ ಉತ್ತಮ ನಾಗರಿಕರನ್ನಾಗಿ ರೂಪಿಸುತ್ತದೆ. ಅಂಥ ಒಂದು ಸಂಸ್ಥೆ ’ಮಕ್ಕಳ ಜೀವೋದಯ’. ಪವಿತ್ರ ಶಿಲುಬೆಯ ಸೋದರಿಯರು (Holy Cross Sisters) ಲೈಂಗಿಕ ದೌರ್ಜನ್ಯ, ಅಗ್ಗದ ದುಡಿಮೆಗಳಿಂದ ಶೋಷಿತರಾದ ೧೭ವರ್ಷಕ್ಕಿಂತ ಕೆಳಗಿನ ಬಡ ಹೆಣ್ಣುಮಕ್ಕಳನ್ನು ಮಕ್ಕಳ ಕಲ್ಯಾಣಕೇಂದ್ರವೆಂಬ ಸರ್ಕಾರಿ ಆಶ್ರಯದಿಂದ ಪಡೆದು ಕೈಯಾಸರೆ ನೀಡುವ ಸದಾಶಯದಿಂದ ಮಕ್ಕಳ ಜೀವೋದಯವನ್ನು ೨೦೦೭ರಲ್ಲಿ ಹುಟ್ಟುಹಾಕಿದರು. ಮಕ್ಕಳ ನ್ಯಾಯಾಲಯದ ಮಧ್ಯಸ್ತಿಕೆಯಲ್ಲಿ ಈ ಸಂಸ್ಥೆಯು ಮಕ್ಕಳನ್ನು ಪಡೆದು ಅವರ ಬೌದ್ಧಿಕ ವಿಕಾಸಕ್ಕೆ ನೆರವಾಗಿ ಉತ್ತಮ ಭವಿಷ್ಯ ರೂಪಿಸುತ್ತದೆ.
ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಈ ಮಕ್ಕಳನ್ನು ದೇವರಧ್ಯಾನ ಮತ್ತು ಪೂಜೆಗೆ ಅಣಿಗೊಳಿಸಲಾಗುತ್ತದೆ. ಅವರು ಬೆಳಗ್ಗೆ ೫.೩೦ಕ್ಕೆಲ್ಲ ಕರ್ಮಗಳನ್ನು ಮುಗಿಸಿ ದೇವರ ಭಜನೆ ಮಾಡುತ್ತಾರೆ. ಪ್ರಾರ್ಥನೆಯ ನಂತರ ಅವರಿಗೆ ಯೋಗ ಕಲಿಸಲಾಗುತ್ತದೆ. ಸುಮಾರು ಇಪ್ಪತ್ತು ನಿಮಿಷಗಳ ಯೋಗಾಭ್ಯಾಸ ಮಕ್ಕಳಲ್ಲಿ ಶಿಸ್ತು ಮತ್ತು ಏಕಾಗ್ರತೆಯನ್ನು ಬೆಳೆಸುತ್ತದೆ.
ಆಮೇಲೆ ತಿಂಡಿ ತಿಂದು ಮಕ್ಕಳು ಓದಲು ತೊಡಗುತ್ತಾರೆ. ಸಿಸ್ಟರುಗಳು ಅಥವಾ ಸ್ವಯಂಸೇವಕರು ಮಕ್ಕಳ ಓದಿಗೆ ನೆರವು ನೀಡುತ್ತಾರೆ. ಇದು ಹೆಚ್ಚಿನ ಪಾಲು ವಾರದಂತ್ಯಗಳಲ್ಲಿ ನಡೆಯುತ್ತದೆ. ಓದಿನ ಸಮಯದಲ್ಲಿ ಅಲ್ಲಿ ಪ್ರಶಾಂತ ಮೌನ ಆವರಿಸುತ್ತದೆ. ಬೆಂಚುಗಳ ಮೇಲೆ, ವೆರಾಂಡದ ನೆಲದ ಮೇಲೆ, ಮನೆಯ ಹೊರಗಿನ ಹುಲ್ಲುಹಾಸಿನ ಮೇಲೆ ಎಲ್ಲಿ ನೋಡಿದರೂ ಪುಸ್ತಕ ಹಿಡಿದು ಓದುತ್ತಿರುವ ಮಕ್ಕಳ ಸಾಲು.
ಆಮೇಲೆ ಮಕ್ಕಳೆಲ್ಲ ಒಟ್ಟಿಗೆ ಶಾಲೆಗೆ ತೆರಳಿ ಸಂಜೆ ಒಟ್ಟಿಗೆ ಹಿಂದಿರುಗಿ ಆಟೋಟಗಳಲ್ಲಿ ನಿರತರಾಗುತ್ತಾರೆ. ದೊಡ್ಡ ಮಕ್ಕಳು ಟ್ಯೂಶನಿಗೆ ಹೋಗುತ್ತಾರೆ.   ಅರ್ಧಗಂಟೆಯ ಈ ಆಟದ ಸಮಯದಲ್ಲಿ ಮಕ್ಕಳು ಬ್ಯಾಡ್ಮಿಂಟನ್ಸ್ಕಿಪ್ಪಿಂಗ್ಟೆನಿಕಾಯ್ಟ್ ಆಡುತ್ತಾರೆ. ಅದಾದ ಕೂಡಲೇ ಮತ್ತೆ ಓದಿನಲ್ಲಿ ತಲ್ಲೀನ. ಸಂಜೆ ಸಂಸ್ಥೆಯ ಎಲ್ಲರೂ ಸೇರಿ ಪ್ರಾರ್ಥನೆ ಮಾಡುತ್ತಾರೆ. ಆಮೇಲೆ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ. ಕೆಲವೊಮ್ಮೆ ದಾನಿಗಳು ಊಟ ನೀಡುವುದುಂಟು. ಕ್ರಿಸ್ಮಸ್, ದೀಪಾವಳಿ, ಸಂಕ್ರಾಂತಿ ಹಬ್ಬಗಳನ್ನು ಮಕ್ಕಳೆಲ್ಲ ಸಡಗರದಿಂದ ಆಚರಿಸುತ್ತಾರೆ. ಹೊಸಬಟ್ಟೆ ಉಟ್ಟು ನಲಿಯುತ್ತಾರೆ. ಆ ದಿನಗಳಲ್ಲಿ ದಾನಿಗಳು ಕೇಕ್, ಸಿಹಿತಿಂಡಿ, ಪಟಾಕಿಗಳನ್ನು ಹಂಚಿ ಸಂಭ್ರಮಿಸುತ್ತಾರೆ. ರಜಾದಿನಗಳಲ್ಲಿ ಪ್ರಾಯೋಜಕರು ಮುಂದೆ ಬಂದು ಮಕ್ಕಳ ಹೊರಸಂಚಾರಕ್ಕೆ ನೆರವಾಗುತ್ತಾರೆ. ಹೀಗೆ ಮಕ್ಕಳು ತಾರಾಲಯ, ಮೈಸೂರು ಮೃಗಾಲಯ ಮುಂತಾದವನ್ನು ವೀಕ್ಷಿಸಿ ಮನತಣಿಯುತ್ತಾರೆ.
ಇಷ್ಟೆಲ್ಲ ಅನುಕೂಲಗಳು ಇದ್ದ ಮೇಲೆ ಮಕ್ಕಳು ತಮ್ಮ ತಾಯ್ತಂದೆಯರನ್ನು ಹುಟ್ಟಿಬೆಳೆದ ಊರನ್ನು ನೆನೆಸಿಕೊಳ್ಳದಿರಲು ಸಾಧ್ಯವೇ ಇಲ್ಲ. ಆದರೂ ಕೆಲವೊಮ್ಮೆ ಹಾಗಾಗುವುದೂ ಉಂಟು. ತಾಯಿ ಹೃದಯದ ಪ್ರೀತಿ ಎಂಥವರನ್ನೂ ಸೆಳೆಯುತ್ತದೆ ಅಲ್ಲವೇ? ಆದ್ದರಿಂದ ಮಕ್ಕಳ ಈ ದೈನಂದಿನ ಚಟುವಟಿಕೆಗಳಿಗೆ ಇಂಬಾಗುತ್ತಲೇ ಅವರ ತಾಯ್ತಂದೆಯರನ್ನು ಹುಡುಕುವ ಕೆಲಸವನ್ನೂ ಸಂಸ್ಥೆ ಮಾಡುತ್ತದೆ. ಮಕ್ಕಳು ನೀಡುವ ಮಾಹಿತಿ ಹಾಗೂ ಕಲ್ಯಾಣಕೇಂದ್ರದಿಂದ ಪಡೆದ ಮಾಹಿತಿಯನ್ನು ಕ್ರೋಢೀಕರಿಸಿ ಇನ್ನಿತರ ಸಹಾಯದೊಂದಿಗೆ ಮಕ್ಕಳ ಪೋಷಕರನ್ನು ಕಂಡುಹಿಡಿದು ಅವರ ಮಡಿಲಿಗೆ ಮಕ್ಕಳನ್ನು ಸೇರಿಸಲಾಗುತ್ತದೆ. ಪೋಷಕರು ತಮ್ಮ ಮಕ್ಕಳನ್ನು ಗುರುತಿಸುವಾಗಿನ ಸನ್ನಿವೇಶ ಅವರ್ಣನೀಯ. ಅವರು ತಮ್ಮ ಮಕ್ಕಳನ್ನು ಅಪಾರವಾಗಿ ಮುದ್ದಿಸುತ್ತಾರೆ, ಮೈದಡವುತ್ತಾರೆ, ಮಡಿಲ ಮೇಲೆ ಕುಳ್ಳಿರಿಸಿಕೊಳ್ಳುತ್ತಾರೆ, ತಲೆ ಬಾಚುತ್ತಾರೆ. ಆದರೆ ಕಡುಬಡತನ, ಕುಡಿತ, ವಿಪರೀತ ಕಾಯಿಲೆ, ಸೂರಿಲ್ಲದ ಸ್ಥಿತಿ ಮುಂತಾದ ತೊಂದರೆಗಳಲ್ಲಿ ಇರುವವರು ಮಕ್ಕಳನ್ನು ಗುರುತಿಸಿದರೂ ಇಲ್ಲಿನ ವಾತಾವರಣ, ಅನುಕೂಲಸ್ಥಿತಿಗಳನ್ನು ಗಮನಿಸಿ ಮಕ್ಕಳು ತಮ್ಮ ಮನೆಯಲ್ಲಿರುವುದಕ್ಕಿಂತ ಇಲ್ಲಿರುವುದೇ ಉತ್ತಮ ಎಂದು ಭಾವಿಸುತ್ತಾರೆ.
ಮಕ್ಕಳ ಜೀವೋದಯವು ಮಕ್ಕಳಿಗೆ ಮನೆಯಿಂದಾಚೆಯ ಮನೆಯಾಗಿದೆ. ಏಕೆಂದರೆ ಇಲ್ಲಿ ಪ್ರೀತಿ, ಸಹಾಯಹಸ್ತಗಳಿವೆ ಮಾತ್ರವಲ್ಲ ಅವರ ಜೀವನವನ್ನು ಮರುರೂಪಿಸಿಕೊಳ್ಳುವ ವ್ಯವಸ್ಥೆಯಿದೆ. ಕಿತ್ತುತಿನ್ನುವ ಬಡತನ, ಅನೈತಿಕ ಹುಟ್ಟಿನ ಹಿನ್ನೆಲೆ, ಪರಿತ್ಯಕ್ತ ಸಮಾಜದಿಂದ ದೂರಾಗಿ ದೇವರ ಹೂದೋಟದ ಸುಂದರ ಕುಸುಮಗಳಾಗಿ ಬೆಳೆಯುವ ಪರಿಸರವಿದೆ. ಆಗಾಗ್ಗೆ ಸಮಾಜದ ಹಲವು ಸಜ್ಜನರು ಇಲ್ಲಿಗೆ ಭೇಟಿ ನೀಡಿ ಮಕ್ಕಳ ಹುಟ್ಟುಹಬ್ಬ ಮುಂತಾದ ಸಂಭ್ರಮಗಳಲ್ಲಿ ಪಾಲ್ಗೊಂಡು ಸಿಹಿ ಅಥವಾ ಊಟದ ವಿತರಣೆಯಲ್ಲಿ ಆನಂದ ಪಡುತ್ತಾರೆ. ಮಕ್ಕಳಿಗೂ ಅದರಿಂದ ಬಹು ಆನಂದವಾಗುತ್ತದೆ.
ಹೀಗೆ ಅನಾಥ ಮಕ್ಕಳನ್ನು ಪೋಷಿಸಿ ಜೀವನಶೈಲಿಯನ್ನು ಬದಲಾಯಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನದಲ್ಲಿ ಹಲವಾರು ಸಂಸ್ಥೆಗಳು ಎಲೆಮರೆಯ ಕಾಯಂತೆ ಕಾರ್ಯ ನಿರ್ವಹಿಸುತ್ತಿವೆ. ’ನನ್ನ ನಾಮದಲ್ಲಿ ನೀವು ಪರರ‍್ಗೆ ಏನು ಮಾಡ್ವಿರೋ ನನಗೆ ಅದನು ಮಾಡ್ವಿರಿ.’ ಎಂದು ಯೇಸುಸ್ವಾಮಿ ಹೇಳಿದ ಹಾಗೆ.

ಕಾಮೆಂಟ್‌ಗಳಿಲ್ಲ: