ಶನಿವಾರ, ನವೆಂಬರ್ 1, 2008

ಮೈಲಾರಲಿಂಗ

ಇಂಡಿಯಾದ ಸಂಸ್ಕೃತಿಯಲ್ಲಿ ಶಿವನಿಗೆ ಇರುವ ಸ್ಥಾನ ಅನನ್ಯ. ಅಪ್ಪಟ ದೇಶೀಯ ದೈವವಾದ ಶಿವನು ಬೇಡಿದವರಿಗೆ ಎಲ್ಲವನ್ನೂ ಕೊಡುವವನೇ ಹೊರತು ಯಾರೊಂದಿಗೂ ಅನಗತ್ಯವಾಗಿ ಜಗಳಕ್ಕೆ ನಿಂತವನಲ್ಲ. ಸತಿಯು ಸತ್ತಾಗ ಕೆಂಡಾಮಂಡಲವಾದನೇ ಹೊರತು ಕೆಡುಕು ಮಾಡಲಿಲ್ಲ. ಸಮರವೆಂಬುದು ಅಮಂಗಳ ಎಂಬ ಭಾವನೆ ಆತನದು. ಮಹಾಕವಿ ಕುವೆಂಪು ಅವರು ಶಿವ ಎಂಬ ಪದವನ್ನು ಸುಂದರವಾದದ್ದು, ಮಂಗಳಕರವಾದದ್ದು ಎಂಬುದಕ್ಕೆ ಸಂವಾದಿಯಾಗಿ ಬಳಸಿದ್ದಾರೆ. ಸತ್ಯ ಶಿವ ಸೌಂದರ್ಯಕ್ಕೆ ನಮಿಸುವ ನಾವು ನಮ್ಮ ದೇಶದಲ್ಲಿ ಶಿವನಿಗೆ ಮೇರುಸ್ಥಾನವನ್ನೇ ನೀಡಿದ್ದೇವೆ. ಪ್ರಕೃತಿಯ ಆರಾಧಕನಾದ ಮಾನವ ಪ್ರಕೃತಿಯಲ್ಲಿ ಸೌಂದರ್ಯವನ್ನು ಅಂದರೆ ಶಿವನನ್ನು ಕಂಡಿದ್ದಾನೆ. ಕಲ್ಲಬಂಡೆಗಳ ಲಿಂಗರೂಪವೆಲ್ಲ ಶಿವನೇ. ಲಿಂಗರೂಪದ ಬೆಟ್ಟಗಳೆಲ್ಲ ಶಿವನ ತಾಣಗಳು. ಆತ ಮಲೆಯವಾಸಿ. ಕನ್ನಡದ ಮಲೆ+ಅಯ್ಯ> ಮಲೆಯಯ್ಯ> ಮಲ್ಲಯ್ಯನಾಗಿ ವಿಜೃಂಭಿಸಿದ್ದಾನೆ. ಜನಪದರು ಅವನನ್ನು ಮಲೆಮಾದಯ್ಯ, ಪರ್ವತಪ್ಪ, ಗುಡ್ಡಯ್ಯ, ಗಿರಿಯಪ್ಪ, ಗಿರಿಗೌಡ ಇತ್ಯಾದಿಯಾಗಿ ಕರೆದಿದ್ದಾರೆ. ಆದರೆ ಎಲ್ಲೂ ಶಿವನನ್ನು ಮಲ್ಲಾರಿ, ಮೈಲಾರಿ, ಮಲ್ಲಣ್ಣ, ಮಲ್ಲಯ್ಯ ಎಂದು ಕರೆದ ಉದಾಹರಣೆಯಿಲ್ಲ. ಈ ನಿಟ್ಟಿನಲ್ಲಿ ನಾವು ಸ್ವಲ್ಪ ವೀರಗಲ್ಲು ಹಾಗೂ ಮಾಸ್ತಿಕಲ್ಲುಗಳ ಹಿನ್ನೆಲೆ ಮುನ್ನೆಲೆಗಳನ್ನು ಮನನ ಮಾಡಬೇಕಾಗುತ್ತದೆ.

ಊರ ಹಿತಕ್ಕಾಗಿಯೋ ಮಾನಿನಿಯರ ರಕ್ಷಣೆಗಾಗಿಯೋ ತನ್ನ ಪಶುಗಳ ಕ್ಷೇಮಕ್ಕಾಗಿಯೋ ಹುತಾತ್ಮನಾದವನ ನೆನೆಪಿಗೆ ಸ್ಮಾರಕ ನೆಟ್ಟು ಪೂಜಿಸುವ ಕಲ್ಲೇ ವೀರಗಲ್ಲು. ಕನ್ನಡ ಸಂಸ್ಕೃತಿ ಎಲ್ಲೆಲ್ಲಿ ಪಸರಿಸಿತ್ತೋ ಅಲ್ಲೆಲ್ಲಾ ಈ ವೀರಗಲ್ಲುಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ವೀರಗಲ್ಲುಗಳಲ್ಲಿ ಸಾಮಾನ್ಯವಾಗಿ ಮೂರು ಹಂತಗಳಿದ್ದು ಅತಿ ಕೆಳಗಿನದರಲ್ಲಿ ವೀರನು ಸೆಣಸುತ್ತಿರುವ ದೃಶ್ಯ, ಅದರ ಮೇಲೆ ಅವನು ಸಾಯುವಾಗ ಅಪ್ಸರೆಯರು ಬಂದು ಉಪಚರಿಸುತ್ತಿರುವ ದೃಶ್ಯ, ಎಲ್ಲಕ್ಕಿಂತ ಮೇಲಿನ ಹಂತದಲ್ಲಿ ವೀರನು ಶಿವನ ಸಾನ್ನಿಧ್ಯದಲ್ಲಿ ವಿರಾಜಮಾನನಾದ ದೃಶ್ಯ ಕಂಡುಬರುತ್ತದೆ. ಈ ಸಂಗತಿ ಹೇಗಾಯಿತು ಎಂಬುದನ್ನು ಅರುಹುವ ಪಠ್ಯವನ್ನೂ ಕೆಲ ವೀರಗಲ್ಲುಗಳಲ್ಲಿ ಕೆತ್ತಲಾಗಿರುತ್ತದೆ. ಮತ್ತೂ ಕೆಲವದರಲ್ಲಿ ಯಾವ ಕೆತ್ತನೆಯೂ ಇರದೆ ಬರಿದೇ ಕಲ್ಲೊಂದನ್ನು ಸ್ಮಾರಕವಾಗಿ ನೆಟ್ಟು ಅದರ ಮೇಲೊಂದು ಶಿವಲಿಂಗವಿಟ್ಟು ಹೋದ ಪ್ರಸಂಗಗಳು ಇವೆ. ವೀರನ ಸ್ಮರಣೆಯಲ್ಲಿ ಲಿಂಗಕ್ಕೆ ನಿತ್ಯುಪೂಜೆ ಮಾಡಿ ವರುಷಕ್ಕೊಮ್ಮೆ ಸಂತರ್ಪಣೆ ಮಾಡಿ ಕಾಲಕ್ರಮೇಣ ಕಲ್ಲು ಮರೆತುಹೋಗಿ ಲಿಂಗವೊಂದೇ ಉಳಿದು ಅದೇ ಪ್ರಧಾನವಾಗಿ ಅದಕ್ಕೊಂದು ಮಂದಿರವಾಗಿ ಮುನ್ನಡೆದ ಪ್ರಸಂಗಗಳೂ ಇವೆ.

ಗಂಡನೊಂದಿಗೆ ಚಿತೆಯೇರಿದ ಹೆಣ್ಣಿನ ಸ್ಮರಣೆಗೆ ನಿಲ್ಲಿಸಿದ ಮಾಸ್ತಿ (ಮಹಾಸತಿ) ಕಲ್ಲುಗಳ ಕಥೆಯೂ ಹೀಗೇ ಆಗಿ ಇಂದು ಅವು ಶಕ್ತಿದೇವತೆಗಳ ಗುಡಿಗಳಾಗಿರುವುದು ವೇದ್ಯವಾದ ಸಂಗತಿಯೇ.

ಬಹುಶಃ ಮೈಲಾರಲಿಂಗವೂ ಇಂಥ ಒಂದು ವೀರಸ್ಮರಣೆಯ ಪ್ರತೀಕವಾಗಿದ್ದು ಅನಂತರ ದೈವೀರೂಪ ತಳೆದಿರಬೇಕು. ಈ ಮೈಲಾರಲಿಂಗನ ಭಕ್ತರು ಬ್ರಾಹ್ಮಣರಲ್ಲೂ ಇದ್ದಾರೆಂಬುದೇ ಮತ್ತೊಂದು ವಿಶೇಷ. ಮರಾಟಿಗರು ಪೂಜಿಸುವ ಖಂಡೋಬ (ಖಡ್ಗ ಹಿಡಿದ ವೀರ), ತೆಲುಗರು ಪೂಜಿಸುವ ಮಲ್ಲಿಕಾರ್ಜುನ ಹಾಗೂ ಕನ್ನಡಿಗರ ಮೈಲಾರ ಇವೆಲ್ಲ ವೀರಪುರುಷನೊರ್ವನ ವಿವಿಧ ರೂಪಗಳು. ಏಕೆಂದರೆ ನಮ್ಮ ದೇಶೀ ದೈವವಾದ ಶಿವನು ಎಂದು ಖಡ್ಗ ಹಿಡಿದವನಲ್ಲ.

ಬೀದರಿಗೆ ಹೋಗಿದ್ದಾಗ ಹಲಬರ್ಗಾ ನೋಡಿಬರೋಣವೆಂದು ಹೊರಟವನು ದಾರಿ ಮಧ್ಯೆ ಖಾನಾಪುರ ಎಂಬಲ್ಲಿ "ಮೈಲಾರ ಮಲ್ಲಣ್ಣಾ (ಖಂಡೋಬ) ಗುಡಿ" ಅನ್ತ ಬೋರ್ಡು ಕಂಡು ಫಕ್ಕನೇ ಅಚ್ಚರಿಗೊಂಡೆ. ಅಂದು ಭಾನುವಾರ, ರಸ್ತೆಯ ಎರಡೂ ಬದಿ ಜಾನುವಾರು ಸಂತೆ ನೆರೆದಿತ್ತು. ಮೈಲಾರ ಎಷ್ಟು ದೂರ ಅನ್ತ ಯಾರನ್ನೋ ಕೇಳಿದೆ. ಒಂದಿಬ್ಬರು ಓಡಿಬಂದರು ಬಕ್ರಾ ಬೇಕೇನ್ರೀ ಅನ್ತ. ನಾನು ಅವರಿಗೆ ಬೇಕಾದ ಗಿರಾಕಿ ಅಲ್ಲ ಅನ್ನೋದು ಖಾತ್ರಿಯಾಗಿ ಸುಮ್ಮನೇ ನೋಡುತ್ತಾ ನಿಂತರು. “ಮೈಲಾರಕ್ ನಡದೀನ್ರೀ, ಏಸು ದೂರ ಅದರೀ?” ಅಂದೆ. “ಮೈಲಾರ ಅನ್ನೋ ಊರು ಇರಾಂಗಿಲ್ರೀ, ಅಲ್ಲಿಬರೀ ಮಲ್ಲಣ್ಣಾಗುಡಿ ಅದರೀ, ನೀವ್ ಹಿಂಗಾ ಹೋಗರೀ, ಕಣ್ಣಿಗ್ ಕಾಣ್ತಾವ್ರೀ" ಅಂದರು. “ಅಲ್ರೀಯಪಾ, ಮೈಲಾರ ಅನ್ನೋ ಊರು ಇಲ್ಲೇನ್ರೀ? ಬೋರ್ಡು ಹಾಕ್ಯಾರಲ್ರೀ" ಅಂದಿದ್ದಕ್ಕೆ "ಅದ ಒಂದು ದೊಡ್ ಕತಿರೀ, ಅವರವ್ವನ ಶಾಪಾರೀ, ಕಾ ಅನ್ನೋ ಕಾಗಿ ಇರಂಗಿಲ್ಲ, ಗೂ ಅನ್ನೋ ಗೂಗಿ ಇರಂಗಿಲ್ಲ, ಅಂದಿದ್ಲಲ್ಲರೀ, ಅಲ್ಲೊಂದು ಕಾಗೀನೂ ಇಲ್ಲ, ಗೂಗೀನೂ ಇಲ್ಲ, ಮನುಷ್ಯಾರ್‍ ಭೀ ಮನಿ ಮಾಡಂಗಿಲ್ಲರೀ" ಅಂತ ಉತ್ತರ ಬಂತು. ಯಾಕೋ ತುಂಬಾ ಕುತೂಹಲ ಮೂಡಿತಾದರೂ ಆ ಕತೆಯನ್ನು ಮುಂದುವರಿಸುವ ಉಮೇದು ಅವರಿಗಿರಲಿಲ್ಲ.

ಸಣ್ಣಗೆ ಹರಿದಿದ್ದ ಹೊಳೆಯ ಮೇಲಿನ ಕಿರುಸೇತುವೆ ದಾಟಿ, ಒಂದು ತಿರುವು ತಿರುಗುತ್ತಿದ್ದಂತೆ ಧುತ್ತೆಂದು ಗೋಚರವಾಯಿತು ಆ ಗುಡಿ. ಗುಡಿಯ ಮುಂದಿನ ಕೊಳದಲ್ಲಿ ಹೆಂಗಸರು ಗಂಡಸರೆನ್ನದೆ ಎಲ್ಲರೂ ಮೈ ತೊಳೆದುಕೊಳ್ಳುತ್ತಿದ್ದರು. ಗುಡಿಯ ಪ್ರಾಂಗಣದ ಒಳಹೊಕ್ಕಂತೆ ಅಲ್ಲೊಂದು ದೊಡ್ಡ ಜನಜಂಗುಳಿ ತುಂಬಿತ್ತು. ನೋಡುವುದಕ್ಕೆ ಧರ್ಮಛತ್ರದಂತೆ ತೋರುತ್ತಿತ್ತು. ತೋರುವುದೇನು ಅದು ಧರ್ಮಶಾಲೇನೇ. ಅಲ್ಲಲ್ಲೇ ಉರುಳಿಕೊಂಡಿದ್ದೋರು, ಸೀರೆ ಪಂಚೆ ಒಣಗಿಹಾಕ್ತಿದ್ದೋರು, ಬೇಳೆ ರುಬ್ಬಿ ಒಬ್ಬಟ್ಟು ಸುಡುತಿದ್ದೋರು, ತಲೆ ಬಾಚುತಿದ್ದೋರು, ಬಳೆ ತೊಡಿಸುತಿದ್ದೋರು, ಇವರೆಲ್ಲರ ಗೌಜು ಗದ್ದಲ, ಅರಿಸಿನದ ನೀರಿನ ಓಕುಳಿ, ಬಿಸಿಲ ಮೇಲಾಟ, ಒಲೆಗಳ ಹಸಿಸೌದೆಯ ಹೊಗೆಯ ಮೇಲಾಟ, ಇವೆಲ್ಲವನ್ನೂ ದಾಟಿ ಮುಂದಿನ ಪ್ರಾಂಗಣಕ್ಕೆ ಹೋದಾಗ ಅಲ್ಲೊಂದು ಬೇರೆಯೇ ಲೋಕ ತೆರೆದುಕೊಂಡಿತ್ತು.

ದೊಡ್ಡ ಅಂಗಳದಲ್ಲಿ ಗಾರೆ ಗಚ್ಚಿನ ಗುಡಿಯೊಂದು ಮೈದಳೆದಿತ್ತು. ಸುಮಾರು ೧೫ ಅಡಿ ಅಗಲ ೩೦ ಅಡಿ ಉದ್ದದ ಕಟ್ಟಡವದು. ಮುಂದಿನ ಅಂಕಣದಲ್ಲಿ ಮಗುವಿಗೆ ಚೌಲ ತೆಗೆಯುವ ಕಾರ್ಯ ನಡೆದಿತ್ತು. ಅವರನ್ನು ದಾಟಿಕೊಂಡು ಗುಡಿಯ ಒಳಹೊಕ್ಕರೆ ಅಲ್ಲಿ ಯಾವುದೆ ನಿರ್ಬಂಧವಿಲ್ಲದೆ ದೇವರ ಮೂರ್ತಿಯ ಮುಂದೆಯೇ ಹಲವರು ನಿಂತಿದ್ದರು. ಅದೊಂದು ಎರಡಡಿ ಎತ್ತರದ ನಿಂತ ನಿಲುವಿನ ಬಣ್ಣ ಹಚ್ಚಿದ ಮಣ್ಣಿನ ಮೂರ್ತಿ. ಅದರ ಎರಡೂ ಬದಿಯಲ್ಲಿ ಹೆಣ್ಣು ಮೂರ್ತಿಗಳು. ಅವುಗಳ ಆಚೆ ಈಚೆ ಕುಳಿತ ಪೂಜಾರಿಗಳೆನಿಸಿಕೊಂಡ ವ್ಯಕ್ತಿಗಳು ಭಕ್ತರು ನೀಡುತ್ತಿದ್ದ ಅಂಗವಸ್ತ್ರವನ್ನು ದೇವರ ಹೆಗಲ ಮೇಲೆ ಹಾಕುತ್ತಿದ್ದರು. ಭಕ್ತರಿಗೆ ಕುಂಕುಮ ನೀಡುತ್ತಿದ್ದರು. ಭಕ್ತರಲ್ಲಿ ಹೆಚ್ಚಿನವರು ಹೆಂಗಸರೇ. ಭಕ್ತಜನರು ಕಡಿಮೆಯಾದ ಮೇಲೆ ನಾನು ಆ ಪೂಜಾರಿಗಳನ್ನು ಕೇಳಿದೆ, ಇದಾವ ದೇವರು ಶಿವನೇ? ಅನ್ತ. ಅಲ್ಲವೆಂದರು. ಮಲ್ಲಣ್ಣಾ ದೇವರು ಅಂದರು. ಪಕ್ಕದಲ್ಲಿರುವವರು ಅವನ ಹೆಂಡತಿಯರೇ ಎಂದೆ. ಅವನು ಶಿವ ಹಾಗೂ ಅವನ ಬದಿಯಲ್ಲಿರುವವರು ಗಿರಿಜೆ ಮತ್ತು ಗಂಗೆ ಎಂಬ ವಾದ ನನ್ನ ಮನದಲ್ಲಿತ್ತು. ಆದರೆ ಅವರು ನೀಡಿದ ಉತ್ತರ ನನ್ನನ್ನು ತಬ್ಬಿಬ್ಬಾಗಿಸಿತು. ಅವರು ಅವನ ತಂಗಿಯರೆಂದರು. ಬಂದವರೆಲ್ಲರೂ ಆ ತಂಗಿಯರಿಗೆ ನಮಿಸದೆ ಕೇವಲ ಮುಖ್ಯಮೂರ್ತಿಗಷ್ಟೇ ನಮಿಸುತ್ತಿದ್ದರು. ಅಲ್ಲಿದ್ದ ಒಂದೇ ಒಂದು ಹಣತೆಗೆ ತಾವು ತಂದಿದ್ದ ಗಟ್ಟಿ ತುಪ್ಪವನ್ನು ಬಳಿಯುತ್ತಿದ್ದರು. ನಿಧಾನಕ್ಕೆ ತುಪ್ಪ ಕರಗಿ ಕೆಳಗಡೆಯೇ ಇದ್ದ ಡಬ್ಬದಲ್ಲಿ ಶೇಖರವಾಗುತ್ತಿತ್ತು.. ಆದರೆ ನನ್ನ ಮನದ ಸಂಶಯ ಕರಗದೆ ಇನ್ನೂ ಗಟ್ಟಿಯಾಗುತ್ತಿತ್ತು.

ಬ್ರಾಹ್ಮಣರಲ್ಲದ ಆ ಪೂಜಾರಿಗಳು ಬಹು ತಾಳ್ಮೆಯಿಂದ ನನ್ನ ಪ್ರಶ್ನೆಗಳಿಗೆ ಉತ್ತರಿಸಿದರು. ಮೈಲಾರ ಹಿಂದೆ ಕುರುಬರ ತಾಣವಾಗಿತ್ತು. ಆ ಊರಿನ ಹೆಣ್ಣುಮಗಳೊಬ್ಬಳು ಹೊಲೆಯನೊಬ್ಬನನ್ನು ಪ್ರೇಮಿಸಿದ್ದಳು. ಅವನದೂ ಅಷ್ಟೆ ಉತ್ಕಟ ಪ್ರೇಮ. ಊರವರಿಗೆ ಆತ ಆ ಹೆಣ್ಣುಮಗಳನ್ನು ತನಗೆ ಮದುವೆ ಮಾಡಿಕೊಡುವಂತೆ ವಿನಂತಿಸಿದ. ಆದರೆ ಅವರು ಒಪ್ಪಲಿಲ್ಲ. ಅವರ ವಿರೋಧವನ್ನು ಲೆಕ್ಕಿಸದೆ ಆತ ಈ ಹೆಣ್ಣುಮಗಳನ್ನು ಹೊತ್ತೊಯ್ಯುವುದಾಗಿ ಹಟ ತೊಟ್ಟ. ಅಂತೆಯೇ ಆ ಪ್ರೇಮಿಗಳಿಬ್ಬರೂ ಒಂದು ದಿನ ಓಡಿಯೂ ಹೋದರು. ಎಲ್ಲಿಂದಲೋ ಕುದುರೆಯ ಮೇಲೆ ಧಾವಿಸಿ ಬಂದ ಆ ಹೆಣ್ಣಿನ ಅಣ್ಣ ಆ ಹೊಲೆಯ ಹುಡುಗನಿಗೆ ಯಮನಾದ. ಸಿಕ್ಕಲ್ಲೇ ಅವನನ್ನು ತುಂಡರಿಸಿ ತಂಗಿಯನ್ನು ಊರಿಗೆ ಮರಳಿ ತಂದ. ಇತ್ತ ಹುಡುಗನ ಕಡೆಯವರು ಬಂದರು. ಊರನ್ನು ಸೂರೆಗೈದರು. ಹುಡುಗನ ತಾಯಿಯ ಗೋಳಂತೂ ಹೇಳತೀರದು. ಭಾವಾವೇಶದಿಂದ ಆಕೆ ಶಪಿಸಿದಳು "ಕಾ ಅನ್ನೋ ಕಾಗಿ ಇರಂಗಿಲ್ಲ, ಗೂ ಅನ್ನಕ್ ಗೂಗಿ ಇರಂಗಿಲ್ಲ, ಊರೆಲ್ಲ ನಾಶವಾಗ್ಲಿ" ಅನ್ತ. ಈಗ ಅಲ್ಲಿ ಊರಿಗೆ ಊರೂ ಇಲ್ಲ, ಒಂದು ಕಾಗೆ ಗೂಗೆನೂ ಇಲ್ಲ.

ಪೂಜಾರಿಗಳು ಒಂದು ಹಿತ್ತಾಳೆಯ ಗೊಂಬೆಯೊಂದನ್ನು ಕೈಲಿ ಹಿಡಿದು ತೋರಿದರು. ಕುಂಕುಮ ಬಳಿದಿದ್ದರೂ ಮಂದ ಬೆಳಕಿನಲ್ಲಿ ಮಿನುಗುತ್ತಿದ್ದ ಅದನ್ನು ಹಾಗೇ ಹತ್ತಿರ ಹಿಡಿದು ನೋಡಿದೆ. ಕುದುರೆಯ ಮೇಲೆ ಕುಳಿತವನೊಬ್ಬ ಖಡ್ಗ ಹಿಡಿದು ನೆಲದ ಮೇಲೆ ನಿಂತವನ ಮೇಲೆ ಪ್ರಯೋಗಿಸುತ್ತಿದ್ದಾನೆ. ಅವನ ಬದಿಯಲ್ಲಿ ಹೆಣ್ಣೊಬ್ಬಳಿದ್ದಾಳೆ.

ಮೌನವಾಗಿ ಹೊರಬಂದೆ. ಗುಡಿಯ ಗೋಡೆಯ ಮೇಲೆ ಅದೇ ದೃಶ್ಯದ ಬಣ್ಣದ ಚಿತ್ತಾರ ಮೂಡಿಸಿದ್ದರು. ಗುಡಿಗೊಂದು ಸುತ್ತು ಬಂದೆ. ಒಂದು ಗೋಡೆಯ ಮೇಲೆ ಕನಕದಾಸರ ಚಿತ್ರವಿತ್ತು. ಇನ್ನೊಂದರ ಮೇಲೆ ಕಾಳಿದಾಸನ ಚಿತ್ರ. ಯಾವುದೋ ಧ್ವನಿವರ್ಧಕದಿಂದ ಮಲ್ಲಣ್ಣ ಬೇರೆಯಲ್ಲ ಮಾರ್ಕಂಡೇಯ ಬೇರೆಯಲ್ಲ ಅನ್ತ ಒಂದು ಹಾಡು ತೇಲಿ ಬರುತ್ತಿತ್ತು.

ನನ್ನ ಸ್ನೇಹಿತರೊಬ್ಬರು ವ್ಯಕ್ತಪಡಿಸಿದ ಅಭಿಪ್ರಾಯವನ್ನೂ ಇಲ್ಲಿ ಧಾಖಲಿಸುತ್ತೇನೆ. ”ಬಳ್ಳಾರಿ ಜಿಲ್ಲಾ ಸನೇಕಿನ ಆಂಧ್ರಪ್ರದೇಶದ ಗಡಿಯೊಳಗಿನ ಒಂದ ಹಳ್ಯಾನ ಮಂದಿ ಮಗ್ಗಲಕಿನ ಹಳ್ಯಾನ ಮಂದಿ ಜೋಡಿ ಬಡಗಿ ತಗೊಂಡ ಬಡದಾಡ್ತಾರ. ಒಂದ ಹಳ್ಯಾನ ದೈವ ಗುಡ್ಡದ ಮಲ್ಲಯ್ಯ ಅದ . . ಮೈಲಾರಲಿಂಗ. ಇನ್ನೊಂದ ಹಳ್ಯಾನ ಮಂದಿ ಅದನ್ನು ತಮ್ಮ ಹಳ್ಳಿಗೆ ತಗೊಂಡ ಹೋಗಾಕ ಬರ್ತಾರ. ದೈವ ಇರೂ ಹಳ್ಯಾನ ಮಂದಿ ಜಗಳಕ್ಕ ನಿಲ್ತಾರ. ದರ ವರ್ಸಾ ದಸರಾಕ್ಕ ಇದೂ ನಡಿಯೂದ. ತಲಿ ಒಡಕೋತಾರ. ಪಟ್ಟಿ ಕಟಗೊಂಡ ಮತ್ತ ಬರ್ತಾರ ಬೆಳತನ್ಕ ಜಗಳಕ್ಕ ನಿಲ್ತಾರ, ದೇವರ ಹೊಳ್ಳಿ ಬಂದ ಕೂಡ್ಲೆ ಬಡದಾಟ ಮುಗೀತದ. ಎರಡೂ ಹಳ್ಳಿ ಮಂದಿ ಸೇರಿ ಹಬ್ಬಾ ಮಾಡ್ತಾರ.”

3 ಕಾಮೆಂಟ್‌ಗಳು:

dattu kulkarni,australia ಹೇಳಿದರು...

ಮರಿಯ ಜೊಸ್‌ಫ಼್ ಅವರೆ ನಮಸ್ಕಾರ, ನಿಮ್ಮ ಮೈಲಾರಲಿಂಗನ ಬಗಿಗಿನ ಲ್‌ಖನ ಓದಿದೆ.
ಮೈಲಾರಲಿಂಗ ದೇವರು ನಮ್ಮ ದಕ್ಷಿಣ ದೇ ಶೀಯ ಅಂದರೆ ಕರ್ನಾಟಕ ಮೂಲದ ಜಾನಪದ ದೇವರು.
ಮೈಲಾರ ಅನ್ನುವ ಪದ ಮೂಲತಹ ಕನ್ನಡ ಪದ. ಹಾಗೆಯ ಖಂಡೊಬ ಎನ್ನುವದು ಕೂಡ ಕನ್ನಡ ಪದ ಖಂಡೆಯ(ಅಂದರೆ ಖಡ್ಗ) ಅನ್ನುವದರಿಂದ ಬಂದದ್ದು.
ಮೈಅಲಾರ ಲಿಂಗನ ದೇವಸ್ಥಾನಗಳು ಕರ್ನಾಟಕ, ಆಂದ್ರ ಮತ್ತು ಮಹರಾಷ್ಟ್ರಗಳಲ್ಲಿವೆ. ಮಹಾರಾಷ್ಟ್ರದ ಜೆಜೂರಿ,ಸಾತಾರಾ, ಚಂದಖೇಡ, ನಳದುರ್ಗ, ನಾಗಪುರ,
ಪಾಲಿ ಗಳಲ್ಲಿ , ಕರ್ನಾಟಕದ ಮಣ್ಣ ಮೈಲಾರ(ಬಳ್ಳಾರಿ ಜಿಲ್ಲೆ), ದೇವರ ಗುಡ್ಡದ ಮೈಲ್ಲಾರ, ಧಾರವಾಡ, ಗದಗ, ದೆವಿ ಹೊಸೂರು, (ಧಾರವಾಡ ಜಿಲ್ಲೆ)
ಮತ್ತೌ ಉತ್ತರ ಕರ್ನಾಟ್ಕದ ಇನ್ನೂ ಹತ್ತು ಹಲವು ಕಡೆ ಮೈಲಾರನ ದೇವಸ್ಥಾನಗಳಿವೆ. ಹಾಗೆಯೇ ಆಂದ್ರದ ಕಡಪಾ,ಕೊಂಡವೀಡು,ಪಟ್ಟರು, ವೆಮವರಮ್ ಗಳಲ್ಲಿ ಕಂಡುಬರುತ್ತವೆ.
ಮೈಸೂರು ಹತ್ತಿರದ ಮಹದೇವ ಅಥವಾ ಮಲೈ ಮಹದೇವ ಮತ್ತು ಉತ್ತರ ಕರ್ನಾಟಕದ ಮೈಲಾರನ ಇಬ್ಬರೂ ಒಂದೆ ಎಂದು ಹೇಳಬಹುದು.
ಜಾನಪದ ಅಥವಾ ಪರಿಶಿಷ್ಟದಿಂದ ವೈಭವಿಕರಿಸಿ ಶಿಷ್ಟ ದೇವರನ್ನಾಗಿ ಮಾಡಿದಾಗ ಹಲವು ವೈರುಧ್ಯಗಳು ಕಂಡುಬರುತ್ತವೆ.
ಹೆಚ್ಚಿನ ಮಾಹಿತಿಗಾಗಿ ತಾವು ಸಿವಿಜಿ ಪಬ್ಲಿಕೇಶನ್ಸ್ ಅವರ ದಕ್ಷಿಣ ದೇಶಿಯ ದೇವರು ಖಂಡೋಬಾ( ಮೂಲ ಮರಾಠಿ ಕನ್ನಡ ಅನುವಾದ- ರಾಮಕೃಷ್ಣ ಮರಾಠೆ)
ಈ ಪುಸ್ತಕದಿಂದ ಪಡೆಯಬಹುದು. ಈ ಪುಸ್ತಕ ಬೆಂಗಳೂರಿನ ಗಾಂಧಿಬಜಾರಿನ ಅಂಕಿತದಲ್ಲಿ ಸಿಗುತ್ತದೆ.

cmariejoseph.blogspot.com ಹೇಳಿದರು...

ಮಾನ್ಯ ದತ್ತು ಕುಲಕರ್ಣಿ ಅವರೇ, ನಿಮ್ಮ ಪ್ರತಿಕ್ರಿಯೆಗೆ ತುಂಬಾ ಸಂತೋಷ. ಹಾಗೆಯೇ ನಿಮ್ಮಿಂದ ಬಹಳಷ್ಟು ಮಾಹಿತಿ ಕೂಡಾ ಸಿಕ್ಕಿತು.
ಆಗಾಗ್ಗೆ ಬರೆಯುತ್ತಿರಿ.
ಪ್ರೀತಿಯಿಂದ
ಸಿ ಮರಿಜೋಸೆಫ್

kalsakri ಹೇಳಿದರು...

ಜೋಸೆಫರೇ , ಈ ಬಗ್ಗೆ ನನಗೇನೂ ಗೊತ್ತಿರಲಿಲ್ಲ ;ತುಂಬ ಧನ್ಯವಾದಗಳು , ಧಾರವಾಡದಲ್ಲಿ ನಾನು ಕೊಂಡ ಮನೆಯ ಹತ್ತಿರ ಹಳೆಯದಾದ ಮೈಲಾರ ದೇವರ ಗುಡಿ ಇದೆ. ’ಧರೆಯೊಳು ಮೆರೆಯುವ ಧಾರವಾಡ ಪುರದೊಳು’ ಎಂದು ಶುರುವಾಗುವ ಹಾಡೊಂದನ್ನು ಅಲ್ಲಿ ಒಂದು ಸಲ ಕೇಳಿದ್ದೇನೆ. ಮುಂದಿನ ಸಲ ಹೋದಾಗ ಅಲ್ಲಿಗೆ ಹೋಗಿ ಗಮನವಿಟ್ಟು ನೋಡುತ್ತೇನೆ.