ಶನಿವಾರ, ನವೆಂಬರ್ 1, 2008

ಒರಿಸ್ಸಾ ಮತ್ತು ಮತಾಂತರ

ಒರಿಸ್ಸಾದ ಆದಿವಾಸಿ ಜನ ಹಿಂದೂಗಳೂ ಅಲ್ಲ ಕ್ರೈಸ್ತರೂ ಅಲ್ಲ. ಅವರೆಲ್ಲ ಪ್ರಕೃತಿಪೂಜಕರು. ರಾಮನಾಗಲೀ ಕ್ರಿಸ್ತನಾಗಲೀ ಯಾರೆಂದು ಅವರಿಗೆ ತಿಳಿಯದು. ಬೆಟ್ಟಗುಡ್ಡಗಳೇ ಅವರ ಮನೆ. ಅರಣ್ಯವೇ ಅವರ ದೇವರು. ಅರಣ್ಯದಲ್ಲಿ ಸಿಗುವ ಯಾವುದೋ ಮರದ ಬೇರು, ಅದರಿಂದೊಸರುವ ನೀರು, ಗೆಡ್ಡೆಗೆಣಸುಗಳು, ಯಾವುದೋ ಮರದ ಎಲೆ, ಅಪರೂಪಕ್ಕೆ ಸಿಗುವ ಮೊಲ ಮುಂಗುಸಿ ಮುಂತಾದ ಪ್ರಾಣಿಗಳು, ಕಾಡ ಹಕ್ಕಿಗಳು ಕೋಳಿಗಳು ಇವೇ ಅವರ ಆಹಾರ. ಆರು ತಿಂಗಳು ಒಂದೇ ಸಮನೆ ಮಳೆ ಸುರಿದರೂ ಎಲ್ಲ ಇಂಗಿಹೋಗುವ ಹಾಗೂ ಮತ್ತಾರು ತಿಂಗಳ ಬಿಸಿಲ ಬೇಗೆಗೆ ಎಲ್ಲ ಒಣಗಿ ಮರುಭೂಮಿಯಂತಾಗುವ ನೆಲ, ಇಲ್ಲಿ ಜೀವನ ನಡೆಸುವುದೇ ಪ್ರತಿನಿತ್ಯದ ಗೋಳಾಗಿರುವಾಗ ದೇವರುದಿಂಡರಿಗೆ ಎಲ್ಲಿ ಸಮಯ? ಎಲ್ಲೋ ಕೆಲವರು ಕಣಿವೆಗಳ ಕೆಸರು ಭೂಮಿಯಲ್ಲಿ ಭತ್ತ ಬೆಳೆದುಕೊಳ್ಳುತ್ತಾರೆ. ಅಲ್ಲಲ್ಲಿ ವಾರಕ್ಕೊಮ್ಮೆ ನಡೆವ ಸಂತೆಗಳಲ್ಲಿ ಈ ಆದಿವಾಸಿಗಳು ಕಾಡಿನ ಉತ್ಪನ್ನಗಳನ್ನು ಆಹಾರ ಪದಾರ್ಥಗಳಿಗಾಗಿ ವಿನಿಮಯಿಸಿಕೊಳ್ಳುತ್ತಾರೆ.
ಸಂತಾಲಿ ಎಂಬ ಸಂಪರ್ಕ ಭಾಷೆಯೊಂದನ್ನು ಹೊರತುಪಡಿಸಿದರೆ ಅವರ ಭಾಷೆಗಳೂ ವೇಷಭೂಷಣಗಳೂ ವೈವಿಧ್ಯಮಯ. ಹೆಚ್ಚಿನವರು ಲಂಗೋಟಿ ಬಿಟ್ಟರೆ ಬೇರೇನೂ ಧರಿಸುವುದಿಲ್ಲ. ಹೆಂಗಸರು ಮಾತ್ರ ಸೀರೆಯನ್ನು ಅದರ ಮಾಮೂಲಿ ಶೈಲಿಯಲ್ಲಿ ಉಡದೆ ಒಂದು ಸುತ್ತು ತಂದು ಭುಜದ ಹತ್ತಿರ ಗಂಟು ಹಾಕ್ಕೊಂಡಿರುತ್ತಾರೆ. ರವಿಕೆ ಇರೋದಿಲ್ಲ ಆದರೆ ಲಂಗೋಟಿ ಇರುತ್ತೆ. ಕೂದಲನ್ನು ಕೊಂಡೆ ಸುತ್ತಿ ಪಕ್ಕಕ್ಕೆ ವಾಲಿಬಿಟ್ಟಿರುತ್ತಾರೆ. ಮೂವತ್ತು ವರ್ಷಗಳ ಹಿಂದೆ ಸಿನಿಮಾ ಮೂಲಕ ಈ ಹೇರ್‍ ಸ್ಟೈಲ್ ಎಲ್ಲೆಡೆ ಹಬ್ಬಿತ್ತು. ಒರಿಸ್ಸಾ, ಮಹಾರಾಷ್ಟ್ರ, ಆಂಧ್ರ, ಛತ್ತೀಸಗಡ, ಜಾರ್ಖಂಡ್ ರಾಜ್ಯಗಳಲ್ಲಿ ಹರಡಿರುವ ಇವರಿಗೆ ಯಾವುದೇ ಗಡಿಗಳಿಲ್ಲ.ಹಸಿವು ನೀಗಿಕೊಳ್ಳಲು ಎಲ್ಲೆಂದರಲ್ಲಿಗೆ ಸ್ಥಳ ಬದಲಾಯಿಸುತ್ತಾರೆ, ಏನೂ ಸಿಕ್ಕದಾದಾಗ ತಮ್ಮದೇ ಹಸುಗಳನ್ನು ಕೊಂದು ತಿನ್ನುತ್ತಾರೆ. ಹೀಗಿದ್ದರೂ ಹಸಿವಿನಿಂದ ಸಾಯುವವರೇನೂ ಕಮ್ಮಿಯಿಲ್ಲ.
ಮನುಷ್ಯನನ್ನು ಮನುಷ್ಯನಂತೆ ಕಾಣಬೇಕು ಎನ್ನುವ ಧ್ಯೇಯವುಳ್ಳ ಕ್ರೈಸ್ತ ಸಂಸ್ಥೆಗಳು ಇವರಿಗೆ ಬದುಕುವ ರೀತಿಯನ್ನು ಕಲಿಸುತ್ತಿವೆ, ಆರೋಗ್ಯ ನೀಡುತ್ತಿವೆ, ಅಕ್ಷರ ಕಲಿಸುತ್ತಿವೆ, ಹೆಣ್ಣುಮಕ್ಕಳು ಕಿರಿಯವಯಸ್ಸಿನಲ್ಲಿ ತಾಯಿಯರಾಗದಂತೆ ನೋಡುತ್ತಿವೆ. ಎಲ್ಲಕ್ಕೂ ಮೊದಲು ಬಟ್ಟೆ ತೊಡುವುದನ್ನು ಹೇಳಿಕೊಟ್ಟಿವೆ. ಆದರೆ ಉದ್ಯೋಗ ನಿಮಿತ್ತ ಇಲ್ಲಿ ನೆಲೆನಿಂತ ಒರಿಸ್ಸಾದ ಪೂರ್ವಭಾಗದ ನಾಗರಿಕ ಜನ ಈ ಆದಿವಾಸಿಗಳನ್ನು ನಿಕೃಷ್ಟವಾಗಿ ಕಾಣುತ್ತಾರೆ. ಸೌದೆ ಹುಣಿಸೇಹಣ್ಣು ಜೇನು ಪುನುಗು ಇತ್ಯಾದಿಗಳನ್ನು ಕೊಟ್ಟು ದೂರ ನಿಂತು ಸೊಂಟ ಬಗ್ಗಿಸಿ ಹಣಕ್ಕಾಗಿ ಹಲ್ಲುಗಿಂಜುವ ಗಿರಿಜನರು ತಲೆಯೆತ್ತಿ ಓಡಾಡುವುದನ್ನು ನೋಡಿದಾಗ ಆ (ಅ)ನಾಗರಿಕರಿಗೆ ಒಂಥರಾ ಇರುಸುಮುರುಸಾಗುತ್ತದೆ. ಆದಿವಾಸಿಗಳ ಬದುಕನ್ನು ಮೇಲೆತ್ತುವುದಕ್ಕಿಂತ ಮೊದಲು ಅವರಿಗೆ ಗೋಹತ್ಯೆ ಕಾಣುತ್ತದೆ, ಆದಿವಾಸಿಗಳ ಬೆತ್ತಲೆ ದೇಹದ ಮೇಲೆ ಒಳ್ಳೆ ಉಡುಪು ಕಾಣುತ್ತದೆ, ಮತಾಂತರ ಕಾಣುತ್ತದೆ. ಹೀಗೆ ಒರಿಸ್ಸಾದಲ್ಲಿ ಈ ಅಮಾಯಕ ಆದಿವಾಸಿಗಳ ಕಗ್ಗೊಲೆಯಾಯಿತು, ಅವರ ಬದುಕಿನ ಅನ್ನವನ್ನು ನೆಲಕ್ಕೆ ಚೆಲ್ಲಲಾಯಿತು, ಆದರೆ ನೋಡಿ ಎಲ್ಲೂ ಈ ಕ್ರೈಸ್ತರು ತಮ್ಮ ಬಿಲ್ಲುಬಾಣ ಭರ್ಜಿಗಳನ್ನು ಕೈಗೆ ತೆಗೆದುಕೊಳ್ಳಲಿಲ್ಲ.

ಕಾಮೆಂಟ್‌ಗಳಿಲ್ಲ: