ಗುರುವಾರ, ಮಾರ್ಚ್ 24, 2011

ಹಿಂದುತ್ವ ಸಾಧುವೇ?

ಹೀಗೊಂದು ಪತ್ರಿಕೆಯಲ್ಲಿ ಓದುತ್ತಿರುವಾಗ ಒಂದು ಬರಹ ಕಣ್ಣಿಗೆ ಬಿತ್ತು. ಅದರ ಪ್ರಕಾರ ಎಲ್ಲ ಧರ್ಮಗಳೂ ಒಂದೇ ಏಕೆಂದರೆ Temple, Church, Mosque ಎಂಬ ಭಕ್ತಿಸ್ಥಾನಗಳೂ, Geeta, Bible, Quran ಎಂಬ ಧರ್ಮಗ್ರಂಥಗಳೂ ಸಮ ಸಮ ಅಕ್ಷರಗಳಲ್ಲಿರುವಾಗ ಎಲ್ಲವೂ ಸಮಾನವಲ್ಲವೇ? ಅದೇಕೆ ನಾವು ಕಿತ್ತಾಡುವುದೆನ್ನುವ ಭಾವ ಆ ಲೇಖನದಲ್ಲಿತ್ತು. ಅದರ ಲೇಖಕನ ಆಶಯವೇನೋ ಚೆನ್ನಾಗಿದೆ. ಆದರೆ ಹಿಂದೂ ಧರ್ಮದ ಧರ್ಮಗ್ರಂಥವು ಗೀತೆ ಎಂಬುದನ್ನು ನೋಡಿ ನನ್ನಲ್ಲಿ ವಿಚಾರದ ತುಮುಲಗಳೆದ್ದವು. ಏಕೆಂದರೆ ನನ್ನ ಅರಿವಿಗೆ ಬಂದಂತೆ ಹಿಂದೂ ಎನ್ನುವುದು ಒಂದು ಜೀವನಶೈಲಿಯಷ್ಟೆ. ಅದೊಂದು ಧರ್ಮವಲ್ಲ. ಆಗಲಿ ಅದನ್ನು ಧರ್ಮವೆಂದೇ ಅಂದುಕೊಂಡರೂ ಗೀತೆಯನ್ನು ಅದರ ಧರ್ಮಗ್ರಂಥವೆಂದು ಕರೆಯಲಾಗದು. ಏಕೆಂದರೆ ಹಿಂದೂಸಂಸ್ಕೃತಿಯಲ್ಲಿ ಅನೇಕ ದೇವರುಗಳು, ಅನೆಕ ಪಂಗಡಗಳು, ಅನೇಕ ಒಳಧರ್ಮಗಳು ಇವೆ. ಅವೆಲ್ಲವುಗಳ ತತ್ತ್ವ ಮತ್ತು ಸಂಹಿತೆಗಳು ಒಂದೇ ತೆರನಾಗಿಲ್ಲ. ಹಿಂದೂ ಎಂಬ ಗ್ರಹಿಕೆಯ ಕುರಿತು ಅದರ ಬೆಂಬಲಿಗರು ಯಾವುದೋ ಒಂದು ಸಣ್ಣ ಅರ್ಥಹೀನ ಎಳೆಯನ್ನು ಹಿಡಿದು ನಿಜದ ಹತ್ತಿರಕ್ಕೇ ಬಾರದಂತೆ ಅಗಾಧವಾಗಿ ವಾದ ಮಾಡುತ್ತಾರೆ. ಹಿಂದುತ್ವದ ಹೆಸರು ಹೇಳಿಕೊಂಡು ಕೆಲವರು ಮಾಡುತ್ತಿರುವುದೂ ಅದನ್ನೇ.
ಮೊದಲಿಗೆ ಅವರ ರಾಮನನ್ನೇ ತೆಗೆದುಕೊಳ್ಳೋಣ. ನಮ್ಮ ಕಲ್ಪನೆಯ ರಾಮ ಒಬ್ಬ ಆದರ್ಶ ಪುರುಷ, ಪಿತೃವಾಕ್ಯ ಪರಿಪಾಲಕ, ಅವನ ಹೆಂಡತಿ ಸೀತೆ ಒಬ್ಬ ಆದರ್ಶ ಪತ್ನಿ, ಪತಿವ್ರತಾ ಶಿರೋಮಣಿ, ಸನ್ನಡತೆಯ ನಾರಿ. ರಾಮಸೀತೆಯರಂತೆಯೇ ಬಹಳಷ್ಟು ಆದರ್ಶ ದಂಪತಿಯರು ಹಿಂದೂ ಪುರಾಣಗಳಲ್ಲಿ ಮಾತ್ರವಲ್ಲ ನಮ್ಮ ದೇಶದ ಎಲ್ಲೆಡೆ ಕಾಣಸಿಗುತ್ತಾರೆ. ಶಿವ ಪಾರ್ವತಿ, ನಳ ದಮಯಂತಿ, ಆಯ್ದಕ್ಕಿ ಮಾರಯ್ಯ ದಂಪತಿ ಮುಂತಾದವರನ್ನೆಲ್ಲ ಹೀಗೆ ಹೆಸರಿಸಬಹುದು. ಆದರೆ ಹಿಂದುತ್ವವಾದಿಗಳು ರಾಮನೊಬ್ಬನನ್ನೇ ಹಿಂದೂ ಸಂಸ್ಕೃತಿಯ ಪ್ರತಿನಿಧಿಯಾಗಿ ಮಾತ್ರವಲ್ಲ ನಮ್ಮ ರಾಷ್ಟ್ರದ ಪ್ರತೀಕ ಸಹ ಎಂದು ಬಿಂಬಿಸುತ್ತಾರೆ.
ಧಾರ್ಮಿಕತೆ ಮತ್ತು ರಾಷ್ಟ್ರೀಯತೆಗಳು ಎರಡು ವಿಭಿನ್ನ ಚೌಕಟ್ಟುಗಳನ್ನು ಹೊಂದಿವೆಯೆಂಬುದನ್ನು ಅವರು ಅರಿತಂತಿಲ್ಲ. ರಾಷ್ಟ್ರವೊಂದಕ್ಕೆ ತನ್ನದೇ ಇತಿಮಿತಿಗಳಿವೆ, ಸೀಮೆಗಳಿವೆ, ರೀತಿನೀತಿಗಳಿವೆ, ಸಂವಿಧಾನ ಮತ್ತು ಶಾಸನಗಳಿವೆ. ದರ್ಮದ ಕುರಿತು ಹೇಳಬೇಕೆಂದರೆ ಅದು ಹೃದಯಕ್ಕೆ ಸಂಬಂಧಿಸಿದ್ದು, ಆತ್ಮಕ್ಕೆ ಸಂಬಂಧಿಸಿದ್ದು. ಅದಕ್ಕೆ ದೇಶ ಕಾಲಗಳ ಗಡಿಗಳಿಲ್ಲ. ಇನ್ನು ರಾಮನ ಕುರಿತು ಹೇಳಬೇಕೆಂದರೆ ಬಹು ಸಂಸ್ಕೃತಿಯ ಬಹು ದೇವರುಗಳ ನಮ್ಮ ದೇಶಕ್ಕೆ ರಾಮನೊಬ್ಬನೇ ನಾಯಕನಾಗಲಾರ. ವಾಲ್ಮೀಕಿಯ ಕತೆಯಂತೆ ರಾಮ ದೇವತಾ ಪುರುಷನಲ್ಲ, ಏಕೆಂದರೆ ಆನಂತರ ಅಂದರೆ ಸಾವಿರದೈನೂರು ವರ್ಷಗಳ ನಂತರ ಬಂದ ತುಲಸಿದಾಸರು ರಾಮನಿಗೆ ದೈವತ್ವ ಪ್ರಾಪ್ತಿ ಮಾಡಿದರು. ವಾಲ್ಮೀಕಿಯ ರಾಮಾಯಣವನ್ನು ಹಿಡಿದುಕೊಂಡರೆ ರಾಮನಿಗೆ ಚಾರಿತ್ರಿಕ ಸ್ಥಾನವೂ ಸಿಗುವುದಿಲ್ಲ, ಏಕೆಂದರೆ ಅಲ್ಲಿ ಅವನೊಬ್ಬ ಕಾಲ್ಪನಿಕ ಕಥಾನಾಯಕ. ಇನ್ನು ಅವನ ಜನ್ಮಸ್ಥಳ ಅಯೋಧ್ಯೆ ಎನ್ನುವುದು ಸತ್ಯದ ತಲೆಯಮೇಲೆ ಹೊಡೆದಂತೆ. ಇಂಥಲ್ಲಿ ರಾಮ ಜನಿಸಿದ ಎನ್ನುವ ವಾದ ಒಂದು ನಂಬುಗೆಯ ತಳಹದಿಯ ಮೇಲೆ ನಿಂತಿದೆ.
ಯೆಹೂದಿ, ಕ್ರೈಸ್ತ, ಇಸ್ಲಾಂ ಮುಂತಾದ ಸೆಮೆಟಿಕ್ ಧರ್ಮಗಳಿಗೆ ಅವುಗಳ ಕಾರಣಪುರುಷರ ದಿನಾಂಕಗಳು ಲಭ್ಯವಿವೆ. ಆದರೆ ಅದೇ ನೇರದಲ್ಲಿ ಹಿಂದೂ ಎಂಬ ಧರ್ಮದ ಕಾರಣಪುರುಷನ ತೇದಿಯನ್ನು ಇಂಥದೇ ಎಂದು ಹೇಳಲಾಗದು. ಯಾರಾದರೂ ಇತಿಹಾಸ ಸಂಶೋಧನೆ ಮಾಡಿ ಯೇಸುಕ್ರಿಸ್ತನೆಂಬುವನು ಇರಲೇ ಇಲ್ಲ ಎಂದು ಸಾಬೀತು ಪಡಿಸಿದರೆ ಕ್ರೈಸ್ತಧರ್ಮಕ್ಕೆ ಉಳಿಗಾಲವಿರುವುದಿಲ್ಲ. ಅಂತೆಯೇ ಇತಿಹಾಸಜ್ಞರು ಕೃಷ್ಣ ಎಂಬುವನು ಇರಲಿಲ್ಲವೆಂದು ಸಾಬೀತು ಪಡಿಸಿದರೆ ಗೀತೆಯ ಗತಿಯೂ ಅಂತೆಯೇ ಇರುತ್ತದೆ. ಇದೇ ವಾದ ರಾಮನಿಗೂ ಅನ್ವಯಿಸುತ್ತದೆ. ಅದಕ್ಕೇ ಕೆಲವರು ಹಿಂದೂ ಧರ್ಮ ಎನ್ನುವುದು ಸನಾತನ ಧರ್ಮ ಅದರ ಹುಟ್ಟನ್ನು ಕಾಲದಿಂದ ಅಳೆಯಲಾಗದು ಎಂದು ವಾದಿಸುತ್ತಾರೆ.
ಸನಾತನ ಹಿಂದೂ ಧರ್ಮಕ್ಕೂ ಇಂದಿನ ಹಿಂದುತ್ವಕ್ಕೂ ಏನಾದರೂ ಹೋಲಿಕೆ ಇದೆಯೇ? ಸನಾತನ ಹಿಂದೂಗಳಿಗೆ ಅನೇಕ ದೇವರುಗಳಿದ್ದು ಶಾಂತಿಯಿಂದಲೂ ಐಕ್ಯದಿಂದಲೂ ಬಾಳುತ್ತಿದ್ದಾರೆ. ನಮ್ಮ ಕಲ್ಪನೆಯ ರಾಮನಿಗೂ ಹಿಂದುತ್ವವಾದಿಗಳು ಹೇಳುವ ರಾಮನಿಗೂ ಅಗಾಧ ವ್ಯತ್ಯಾಸವಿದೆ. ನಮ್ಮ ಕಲ್ಪನೆಯ ರಾಮ ಮರ್ಯಾದಾ ಪುರುಷೋತ್ತಮ, ಎಲ್ಲ ಆದರ್ಶಗಳ ಮೇರುವ್ಯಕ್ತಿ. ಆತ ಕರ್ತವ್ಯಪಾಲಕ, ಹಿರಿಯರನ್ನು ಗೌರವಿಸಿ ಕಿರಿಯರನ್ನು ವಾತ್ಸಲ್ಯದಿಂದ ಕಂಡವನು, ಎಲ್ಲರನ್ನೂ ಪ್ರೀತಿಯಿಂದ ಪರಿಭಾವಿಸಿದವನು, ಶಾಂತಿ ಅವನ ದೊಡ್ಡ ಗುಣ. ಕಾರಣವಿಲ್ಲದೇ ಯಾರೊಂದಿಗೂ ಜಗಳ ಕಾದವನಲ್ಲ. ಪಾರಂಪರಿಕವಾಗಿ ರಾಮ ಶಾಂತಮೂರ್ತಿ. ಅವನೆಂದೂ ಒಂಟಿಯಲ್ಲ ಅವನೊಂದಿಗೆ ಹೆಂಡತಿ ಸೀತೆ, ತಮ್ಮ ಲಕ್ಷ್ಮಣ, ಗೆಳೆಯ ಹನುಮ ಇದ್ದೇ ಇರುತ್ತಾರೆ. ಆದರೆ ಹಿಂದುತ್ವವಾದಿಗಳು ತೋರುವ ರಾಮ ಒಬ್ಬಂಟಿ, ಆತ ಹುಬ್ಬುಗಂಟಿಕ್ಕಿ ಬಿಲ್ಲುಬಾಣಗಳ ಹಿಡಿದು ಜಗಳ ಕಾಯಲು ಸಿದ್ಧನಾಗಿರುವವನು. ಹಿಂದುತ್ವದ ಪ್ರತಿಪಾದಕರಿಗೆ ಉಗ್ರಸ್ವರೂಪಿ ರಾಮನೇ ದೇವರು, ಮತ್ತು ಅವನೇ ಅವರ ಪ್ರಕಾರ ರಾಷ್ಟ್ರನಾಯಕ. ಹಿಂದೂ ಎಂಬ ಭಾವವು ತಾಳ್ಮೆ ಮತ್ತು ಅಹಿಂಸೆ ಎಂಬ ಅಡಿಪಾಯದ ಮೇಲೆ ನಿಂತಿದೆ. ಅದನ್ನು ಹಿಂಸೆ ಮತ್ತು ದ್ವೇಷಗಳ ರೂಪದಲ್ಲಿ ಕಾಣುವುದೇ ಒಂದು ರೀತಿಯ ವ್ಯಂಗ್ಯ. ಅದರೆ ಹಿಂದುತ್ವದ ಸಂದೇಶಗಳು ಈ ಉದಾತ್ತ ಭಾವನೆಗಳಿಗೆ ಧಕ್ಕೆ ತರುವಂತೆ ತೋರುತ್ತಿವೆ, ಮಾತ್ರವಲ್ಲ ಅದನ್ನು ಸಾಬೀತು ಪಡಿಸಿಯೂ ಇವೆ. ವೈರಿಗಳನ್ನು ನಾಶಪಡಿಸೋಣ ಎಂಬುದೇ ಹಿಂದುತ್ವದ ಏಕೈಕ ಸಂದೇಶ, ಕಲ್ಪಿತವಿರಲಿ ನೈಜವಿರಲಿ ವೈರಿ ವೈರಿಯೇ ಎಂಬುದು ಅವರ ವಾದ. ಹಾಗೆ ನೋಡಿದರೆ ವಿಶ್ವದೆಲ್ಲೆಡೆಯ ಭಯೋತ್ಪಾದಕರೂ ಇದೇ ವಾದವನ್ನು ಮುಂದಿಡುತ್ತಾರೆ. ಅಂದರೆ ಹಿಂದುತ್ವವಾದಿಗಳು ಆತಂಕವಾದಿಗಳಾಗುತ್ತಿದ್ದಾರೆಯೇ?
ಹಿಂದುತ್ವವಾದಿಗಳು ಕೆಲ ದಿನಗಳ ಹಿಂದೆ ತ್ರಿಶೂಲಗಳು ತಮ್ಮ ಆಯುಧಗಳಾಗಲಿ ಎಂದು ಬಯಸಿದವರು. ಅದನ್ನೇ ಅವರು ವಿವಿಧ ಜನಗಳಿಗೆ ಹಂಚಿ ಸುದ್ದಿ ಮಾಡಿದ್ದರು. ತ್ರಿಶೂಲ ಮಂಗಳರೂಪಿ ಶಿವನ ಕೈಯಲ್ಲಿನ ಆಭರಣ. ಇಲ್ಲಿ ನಾನು ಅದನ್ನು ಆಯುಧವೆನ್ನುತ್ತಿಲ್ಲ ಏಕೆಂದರೆ ಶಿವ ಅದನ್ನೆಂದೂ ಎಲ್ಲೆಂದರಲ್ಲಿ ಕ್ರೋಧದಿಂದ ಪ್ರಯೋಗಿಸಿಲ್ಲ. ಬದಲಿಗೆ ಹಸನ್ಮುಖನಾಗಿಯೇ ಅದನ್ನು ಹಿಡಿದು ನಿಂತಿರುವುದನ್ನು ನೋಡಿದಾಗ ನಮಗೆ ಶಿವನ ಬಗ್ಗೆ ಪ್ರೀತಿಯ ಭಾವನೆ ಸ್ಫುರಿಸುತ್ತದೆ. ಸ್ವತಃ ಶಿವನೇ ಅಸ್ತ್ರವನ್ನು ದೂರಕ್ಕೆಸೆದು ಭೋಳೇಶಂಕರ ಎನಿಸಿದ್ದಾನೆ. ಆದರೆ ಹಿಂದುತ್ವವಾದಿಗಳು ವಿತರಿಸುವ ಅಥವಾ ಪ್ರದರ್ಶಿಸುವ ತ್ರಿಶೂಲ ಶಿವನ ಆಭರಣದಂತಿರದೆ ದಗಾಕೋರರ ಅಥವಾ ಠಕ್ಕರ ಆಯುಧದಂತಿದೆ.
ಹಾಗೆ ನೋಡಿದರೆ ರಾಮನು ಶಾಂತಿಗೆ ಮಾದರಿಯಾಗಿದ್ದಾನೆ, ಕೃಷ್ಣನು ಅವ್ಯಾಜಪ್ರೇಮಕ್ಕೆ ಮಾದರಿಯಾಗಿದ್ದಾನೆ, ಕಾಳಿಯು ಶಿಕ್ಷಣಕ್ಕೆ ಮಾದರಿಯಾಗಿದ್ದಾಳೆ, ಶಿವನು ನೆಮ್ಮದಿಗೆ ಮಾದರಿಯಾಗಿದ್ದಾನೆ, ಇವೆಲ್ಲವುಗಳ ಸಂಮಿಶ್ರವೇ ಹಿಂದೂ ಪ್ರತೀಕವಾಗಬೇಕು. ಇಂಥ ಉದಾತ್ತ ಸಂಸ್ಕೃತಿಗೆ ಏಕದೇವೋಪಾಸನೆಯ ಏಕಧರ್ಮಗ್ರಂಥದ ಅನಗತ್ಯ ಸಂಕೋಲೆ ಬಿಗಿದು ಆವೇಗ, ಆವೇಶ, ಕ್ರೋಧ, ಹಗೆಗಳನ್ನು ಆವಾಹಿಸಿಕೊಳ್ಳುವ ಹಿಂದುತ್ವವು ಲೋಕಕ್ಕೆ ಕಂಟಕಕಾರಿಯಾಗಿದೆ.



4 ಕಾಮೆಂಟ್‌ಗಳು:

VENU VINOD ಹೇಳಿದರು...

ಹಿಂದೂ ಧರ್ಮ ಶಾಂತಿ ಪ್ರಿಯ ಎಂದು ಕಿವಿ ಮೇಲೆ ಹೂ ಇಟ್ಟು ಇಟ್ಟೂ ಸಾಕಾಗಿದೆ. ಹಾಗಾಗಿಯೇ ಇಡೀ ಭಾರತವನ್ನು ಡಚ್ಚರು, ಶಾಂತಿಪ್ರಿಯ ಯೇಸುಸ್ವಾಮಿಯ ಭಕ್ತರಾದ ಬ್ರಿಟಿಷರು, ಎಲ್ಲ ಧರ್ಮದವರನ್ನು ಪ್ರೀತಿಸು ಎನ್ನುವ ಪೈಗಂಬರರ ಆಜ್ಞಾನುವರ್ತಿ ಇಸ್ಲಾಂ ಬಂಡುಕೋರರು ಹರಿದು ಮುಕ್ಕಿ ಬಿಟ್ಟರು. ಈಗಲೂ ಅದೇ ನಡೆಯುತ್ತಿದೆ, ಎಲ್ಲಿ ವರೆಗೆ ಅದು ನಿಲ್ಲದೋ,ಅಲ್ಲಿಯವರೆಗೆ ರಾಮ ಬಿಲ್ಲುಬಾಣ ಹಿಡಿದು ನಿಂತಿರೋದೇ ಮೇಲು

cmariejoseph.blogspot.com ಹೇಳಿದರು...

ಕಲ್ಪಿತ ಶತ್ರು ಅನ್ನೋದೇ ಒಂದು ಮಾಯಾಮೃಗ. ಅದರ ಹಿಂದೆ ಹೋದರೆ ಸಂಸಾರವೂ ಕೆಡುತ್ತೆ, ನೆಮ್ಮದಿಯೂ ಹಾಳು.

janardhan ಹೇಳಿದರು...

marijoshephanna Ninu modlu corectagi Ramayana Mahabharath Bhagvathgeethe oodhu.

cmariejoseph.blogspot.com ಹೇಳಿದರು...

ಜನಾರ್ಧನ ಅವರೇ, ನಾನು ರಾಮಾಯಣ ಮಹಾಭಾರತ ಓದಬೇಕೆನ್ನುವ ನಿಮ್ಮ ಅಭಿಲಾಷೆಯೇನೋ ಒಳ್ಳೆಯದೇ ಬ್ರದರ್, ಆದರೆ ನಾನು ಇವನ್ನು ಕತೆಯಂತೆ ಮಾತ್ರವಲ್ಲ ಅಧ್ಯಯನದಂತೆಯೂ ಓದಿದ್ದೇನೆಂಬ ಸಂಗತಿ ನಿಮಗೆ ಗೊತ್ತಿರಲಿ. ಇರಲಿ ನಿಮ್ಮ ಸಂತೋಷಕ್ಕೆ ಮತ್ತೊಮ್ಮೆ ಓದೋಣವಂತೆ. ನೀವೇ ಹೇಳಿ ’ನಾಡೊಳೆನಿತ್ತೋ ರಾಮಾಯಣಂಗಳೊಳವು’ ಇವುಗಳಲ್ಲಿ ನಾನು ಓದಬೇಕಾದ್ದು ಯಾವುದನ್ನು ಅನ್ತ ಒಸಿ ಹೇಳಿ. ಬ್ರಾಹ್ಮಣರು ಬರೆದದ್ದೋ, ಜೈನರು ಬರೆದದ್ದೋ, ಶೂದ್ರರು ಬರೆದದ್ದೋ ಅನ್ತ. ಹಿಂಗಂದೆ ಅನ್ತ ಬೇಜಾರು ಪಟ್ಟುಕೋಬೇಡಿ, ಏಕೆಂದರೆ ’ಕಾಲಾನುಕಾಲಕ್ಕೆ ಅರ್ಬಿಯುಮೊರ್ಮೆ ಮರ್ಯಾದೆಯಂ ದಾಂಟುಗುಂ’.
ಇರಲಿ ಬಿಡಿ, ಇನ್ನು ಮಾಬಾರ್ತದ ಬಗ್ಗೆ ಯೋಳೋದಾದ್ರೆ, ನೆತ್ತಮನಾಡಿ ಭಾನುಮತಿ ಸೋಲ್ತೊಡೆ ಅಲ್ಲಿಂದ ಹಿಡಿದು ಕರಿಯಂ ನುಂಗಿ ಕಳಿಂಗನಂ ನೊಣೆದ ದರ್ಪಕ್ಕೊಂದುಗೊಳ್ ಎನ್ನುತ್ತಾ, ಕೊಲಲಿಲ್ಲ ಕೊಲ್ಲದೆ ಕಾದೆನಾದೆಡೆ ಕೌರವಂಗವನಿಯಲಿ ಹೊಗಲಿಲ್ಲ ಎಂಬುದನ್ನೂ ದಾಟಿಕೊಂಡು ನಮ್ಮ ಬೆಟ್ಟದಬೀಡು ಸಿದ್ದಶೆಟ್ಟಿಯವರ ಗಾಂಧಾರಿ ’ತಲೆಯಿಂದ ಪುಟ್ಟಗೆ ಒಂದು ಕಡೆಯಿಂದ ಮೈ ಸವುರ್ಕೊಂಡು ಬಂದ್ಲು, ಸೊಂಟಕ್ಕೆ ಕೈ ಮಡಗಿ ಬೆಚ್ಚಿ ಕೆಟ್ಯಲ್ಲೊ ಮಗನೆ ಕೆಟ್ಯಲ್ಲೊ, ಹಣ ಇದ್ದೋರ ಕೂಡುದ್ರೂ ಋಣ ಇದ್ದಷ್ಟೆ ಅನ್ನೋ ಮಾತಾದ್ರೆ ನಿಜವಾಯ್ತು, ನಿನ್ನ ಮೈಯಾದ ಮೈ ವಜುರವಾದ್ರೂ ಸೊಂಟವು ಅಂಗೇ ಉಳುದೋಯ್ತು, ನಿನ್ನ ಮರ್ಮಸ್ಥಾನಗಳು ವಜ್ರವಾಗಲಿಲ್ಲ, ತೊಡೆಸಂದು ವಜ್ರವಾಗಲಿಲ್ಲ’ ಅನ್ನೋತನ್ಕಾನೂವೆ ಓದ್ಕಂಡಿವ್ನಿ ಗುರುವೇ. ನನ್ ಹೆಸರು ನೋಡಿ ಸೋಟೆ ತಿವೀತಿರಾ ಸಿವಾ, ಬೊಯ್ತೀರಾ ದೇವ್ರೂ, ಇರ್ಲಿ ಬುಡಿ ಅದೇನೋ ಸೂದ್ರರ ರಾಮಾಯಣದಾಗೆ ’ಶಿಲ್ಪಿಯ ನಿಶಿತ ಟಂಕದ ಮೊನೆಯ ಕಠಿಣ ಶಿಕ್ಷೆಗಲ್ಲಗೆ ಪೊಣ್ಮುವುದೇ ಕಲಾಪೂರ್ಣಮಹ ದೇವತಾವಿಗ್ರಹಂ’ ಅನ್ತ ಹೇಳವ್ರಲ್ಲ ಹಂಗೆ ಅಂದ್ಕಂಡು ವಟ್ಗಾಕ್ಯಂತೀವ್ನಿ.
ಅಂದಂಗೆ ಬುದ್ದೀ, ಶೂರ್ಪನಖಿ ಬಂದು ರಾಮುರ್ನ ನನ್ ಮದ್ವೆ ಮಾಡ್ಕಳಿ ಅನ್ತ ಕೇಳ್ದೇಟ್ಗೆ ಆಗಾಕಿಲ್ಲ ಕಣವ್ವ ಅಂತೇಳಿ ಗೌರವಪೂರ್ವಕವಾಗಿ ಕಳ್ಸೋದು ಬುಟ್ಟು ಆ ವಯ್ಯ ಮರ್ಯಾದಾಪುರುಷೋತ್ತಮ ಒಂದು ಪರನಾರಿಯ ಮೂಗು ಕಿವಿ ಕತ್ತರಿಸಿ ಕಳ್ಸೂದು ನ್ಯಾಯವಾ ಅನ್ತ ಒಸಿ ಹೇಳಿ.