ಭಾನುವಾರ, ಡಿಸೆಂಬರ್ 29, 2013

ಫಾದರ್ ಜೋಸೆಫ್ ಬಿಗೊ ಬೋಕ್ಲೇ (Fr. Joseph Bigot Beauclair)

ಬೆಂಗಳೂರಿನ ಸಂತ ಮೇರಿಸ್ ಟೌನಿನಲ್ಲಿರುವ ಮರಿಯಮ್ಮನವರ ಅನಾಥಾಶ್ರಮ ಗೊತ್ತಿದೆಯೇ? ಮರಿಯಾ ಅನಾಥಾಶ್ರಮ, ಸ್ವರ್ಗಾರೋಹಣ ದೇವಾಲಯ, ಮರಿಯ ನಿಕೇತನ ಶಾಲೆ ಹಾಗೂ ಎನ್ಬಿಸಿಎಲ್ಸಿ ಗಳನ್ನೊಳಗೊಂಡ ಬೃಹತ್ ಆವರಣದ ಜಮೀನನ್ನು ಖರೀದಿ ಮಾಡಿದವರು ಮೊತ್ತಮೊದಲ ಭಾರತೀಯ ಬಿಷಪ್ ತೋಮಾಸ್ ಪೊತ್ತಕಮೂರಿಯವರು ಎಂಬುದು ಎಲ್ಲರಿಗೂ ತಿಳಿದ ವಿಷಯ. ಹಾಗಾಗಿ ಮರಿಯಮ್ಮನವರ ಅನಾಥಾಶ್ರಮವನ್ನು ಸ್ಥಾಪಿಸಿದವರೂ ಪೊತ್ತಕಮೂರಿಯವರೇ ಎಂಬ ಅಭಿಪ್ರಾಯ ಹಲವರಲ್ಲಿದೆ. ಆದರೆ ಅನಾಥಾಶ್ರಮವು ಇಲ್ಲಿಗೆ ಬರುವುದಕ್ಕೂ ಮೊದಲು ಬಿಳೇಕಳ್ಳಿ (ಶಿವಾಜಿನಗರ) ದಲ್ಲಿತ್ತು ಎಂದು ಇತಿಹಾಸ ಹೇಳುತ್ತದೆ. ಶಿವಾಜಿನಗರದ ಸಂತ ಮರಿಯಮ್ಮನವರ ಮಹಾದೇವಾಲಯದ ಆಶ್ರಯದಲ್ಲಿ ಅನಾಥಾಶ್ರಮವನ್ನು ಸ್ಥಾಪಿಸಿದವರು ಫಾದರ್ ಬೋಕ್ಲೇ ಅವರು.
ಬೋಕ್ಲೇ ಸ್ವಾಮಿಗಳು ಶಿವಾಜಿನಗರದ ಸಂತ ಮರಿಯಮ್ಮನವರ ದೇವಾಲಯದ ಗುರುಗಳಾಗಿ ೨೪ ವರ್ಷಗಳ ದೀರ್ಘಕಾಲ ಸೇವೆ ಸಲ್ಲಿಸಿದರು. ಹಾಗೂ ದೇವಾಲಯದ ಸರ್ವಾಂಗೀಣ ಬೆಳವಣಿಗೆಗೆ ಕಾರಣರಾದರು. ಅವಧಿಯಲ್ಲೇ ಅಂದರೆ ಸುಮಾರು ೧೮೫೪ರಲ್ಲಿ ಅನಾಥ ಮಕ್ಕಳಿಗೊಂದು ಸೂರು ಮತ್ತು ಭವಿಷ್ಯ ಕಲ್ಪಿಸುವ ದೃಷ್ಟಿಯಿಂದ ಅಲ್ಲೊಂದು ಅನಾಥಾಲಯ ತೆರೆದರಲ್ಲದೆ ಮಕ್ಕಳನ್ನು ಪ್ರೀತಿಯ ತಂದೆಯಂತೆ ಪೋಷಿಸಿದರು. ಅವರು ನೂರಾರು ಮಕ್ಕಳು ಅನಾಥಾಲಯದಲ್ಲಿದ್ದಾರೆ, ಅವರಿಗೆ ಊಟ ಹಾಕಲು ಉದಾರ ಹೃದಯದಿಂದ ದಾನ ಮಾಡಿ ಎಂದು ಪ್ರತಿ ಭಾನುವಾರದ ಪೂಜೆಯಲ್ಲಿ ಹೇಳಿ ಪೂಜಾನಂತರ ದೇವಾಲಯದ ಆವರಣದಲ್ಲಿ ಬಿಕ್ಷೆಗಾಗಿ ನಿಲ್ಲುತ್ತಿದ್ದ ಹಾಗೂ ಪೂಜೆಗೆ ಬರುತ್ತಿದ್ದ ಬ್ರಿಟಿಷ್ ಹೆಂಗಸರು ಹಣವನ್ನೂ ಬ್ರೆಡ್ಡನ್ನೂ ಉದಾರವಾಗಿ ದಾನ ನೀಡುತ್ತಿದ್ದರೆಂಬ ಮಾಹಿತಿ ಮಿಂಬಲೆಯಲ್ಲಿ ಸಿಗುತ್ತದೆ ಅನಾಥಾಶ್ರಮವು ಮುಂದೆ ಬಿಷಪ್ ಪೊತ್ತಕಮೂರಿ ತೋಮಾಸರ ಕಾಲದಲ್ಲಿ ಸಂತ ಮೇರಿಸ್ ಟೌನಿಗೆ ಸ್ಥಳಾಂತರಗೊಂಡಿತು.
ಆದರೆ ಅಂದು ಬೆಂಗಳೂರಿನಲ್ಲಿ ನಿಜವಾಗಿಯೂ ಅನಾಥ ಮಕ್ಕಳಿದ್ದರೋ ಅಥವಾ ಬಡಮಕ್ಕಳ ಆರೈಕೆ ಪೋಷಣೆ ಮತ್ತು ಶಿಕ್ಷಣಕ್ಕಾಗಿ ಆಶ್ರಮ ಶುರುವಾಗಿತ್ತೋ ತಿಳಿಯದು. ೧೮೩೨ರಲ್ಲೊಮ್ಮೆ ಭೀಕರ ಬರಗಾಲ ಮತ್ತು ಸಾಂಕ್ರಾಮಿಕ ರೋಗಗಳು ಅಪ್ಪಳಿಸಿದ್ದು ಬಿಟ್ಟರೆ ಕಾಲಕ್ಕೆ ಬೆಂಗಳೂರಿನಲ್ಲಿ ಪ್ಲೇಗು ಇನ್ ಫ್ಲುಯೆಂಜಾ ಎಂಬ ಭಯಂಕರ ಮಾರಿಗಳು ಅಟಾಟೋಪ ನಡೆಸಿರಲಿಲ್ಲ. ೧೮೦೦ರಿಂದೀಚೆಗೆ ಬೆಂಗಳೂರಿನಲ್ಲಿ ಬ್ರಿಟಿಷರು ನೆಲೆನಿಂತು ದಂಡುಪ್ರದೇಶವು ಅಭಿವೃದ್ಧಿ ಹೊಂದುತ್ತಿತ್ತು. ಬೆಂಗಳೂರು ದಿನದಿಂದ ದಿನಕ್ಕೆ ಬೆಳೆಯುತ್ತಿತ್ತು. ಹೊಟ್ಟಪಾಡಿಗಾಗಿ ಬೆಂಗಳೂರು ಸೇರುತ್ತಿದ್ದ ಬಡಜನರಿಗೇನೂ ಕಡಿಮೆಯಿರಲಿಲ್ಲ. ಅವರೆಲ್ಲ ಇಂಗ್ಲಿಷ್ ಸೈನಿಕರ ಹಾಗೂ ಅಧಿಕಾರಿಗಳ ಮನೆಗಳಲ್ಲಿ ಉದ್ಯೋಗಾಶ್ರಯ ಕಂಡುಕೊಳ್ಳುತ್ತಿದ್ದರು. ಆದ್ದರಿಂದ ಅದು ಅನಾಥ ಮಕ್ಕಳ ನೆಲೆಯಾಗಿರದೆ ಬಡಮಕ್ಕಳ ಆಶ್ರಮವಾಗಿತ್ತು ಎಂದು ತಿಳಿಯಬಹುದು.
ಅದೇನೇ ಇರಲಿ, ಅನಾಥಾಶ್ರಮ ಮಾತ್ರವಲ್ಲ ಇಡೀ ಬೆಂಗಳೂರಿನ ಕಥೋಲಿಕ ಧರ್ಮಸಭೆಯನ್ನು ಮುಚ್ಚಟಿಕೆಯಿಂದ ಪೊರೆದ ಸ್ವಾಮಿ ಬೊಕ್ಲೇ ಅವರ ಬಗ್ಗೆ ತಿಳಿದುಕೊಳ್ಳೋಣ.
ಫಾದರ್ ಜೋಸೆಫ್ ಬಿಗೊ ಬೋಕ್ಲೇ ಅವರು ೧೮೦೪ರ ಜುಲೈ ೨೧ರಂದು ಫ್ರಾನ್ಸಿನ ಪರಿಯ್ನೆ ಎಂಬಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಪ್ರೆಸಿನ್ನೆ ಎಂಬಲ್ಲಿ ಪಡೆದ ಅವರು ಧಾರ್ಮಿಕ ಶಿಕ್ಷಣದ ಕೆಲಭಾಗವನ್ನು ಮಾನ್ ಸೆಮಿನರಿಯಲ್ಲ್ಲೂ ಉಳಿದರ್ಧವನ್ನು ಲವಾಲಿನ ರೀಜೆಂಟ್ ಕಾಲೇಜಿನಲ್ಲೂ ಪಡೆದರು. ತಮ್ಮ ಇಪ್ಪತ್ತೈದನೇ ವಯಸ್ಸಿನಲ್ಲಿ ಅವರು ಸಬ್ ಡೀಕನ್ ಆಗಿರುವಾಗಲೇ ಪ್ಯಾರಿಸ್ಸಿನ ಹೊರನಾಡು ಧರ್ಮಪ್ರಚಾರ ಸಂಸ್ಥೆ (ಎಂಇಪಿ ಸಂಸ್ಥೆ) ಬಗ್ಗೆ ಆಕರ್ಷಿತರಾಗಿ ಅದನ್ನು ಸೇರಿಕೊಂಡು ಡೀಕನ್ನರಾಗಿ ೧೮೩೦ರಲ್ಲಿ ಇಂಡಿಯಾದ ಪಾಂಡಿಚೇರಿಗೆ ಬಂದಿಳಿದರು. ೧೮೩೧ರ ಮೇ ೨೮ರಂದು ಅವರಿಗೆ ಗುರುಪಟ್ಟವಾಯಿತು.
ಗುರುಗಳಾಗಿ ಎರಡು ವರ್ಷಗಳಲ್ಲಿ ಅವರು ಕೆಲಕಾಲ ಪಾಂಡಿಚೇರಿಯ ಗುರುಮಠದಲ್ಲಿ ಬೋಧಿಸಿದರು. ಆಮೇಲೆ ೧೮೩೩ರಲ್ಲಿ ಅವರನ್ನು ಕನ್ನಡನಾಡಿಗೆ ನಿಯೋಜಿಸಲಾಯಿತು. ಶ್ರೀರಂಗಪಟ್ಟಣದ ಮುಖ್ಯ ಕೇಂದ್ರದಲ್ಲಿದ್ದುಕೊಂಡು ಅವರು ಇಡೀ ಪ್ರಾಂತ್ಯದ ಕ್ರೈಸ್ತರ ಆಧ್ಯಾತ್ಮಿಕ ಪೋಷಣೆ ಮಾಡಿದರು.
೧೮೩೪ರಲ್ಲಿ ಕೊಡಗಿನ ಚಿಕ್ಕವೀರರಾಜೇಂದ್ರನ ಅಟಾಟೋಪ ಮೇರೆ ಮೀರಿದ್ದಾಗ ಅವನ ಸೊಕ್ಕು ಮುರಿಯಲು ಕರ್ನಲ್ ಫ್ರೇಸರನ ಸೇತೃತ್ವದಲ್ಲಿ ಬ್ರಿಟಿಷರ ಸೈನ್ಯವು ಕೊಡಗಿಗೆ ತೆರಳಿತು. ಸೈನ್ಯದ ಚಾಪ್ಲೇನ್ (ಸೇನಾ ಧರ್ಮಗುರು) ಆಗಿ ಅದರೊಂದಿಗೆ ತೆರಳಿದ ಬೋಕ್ಲೇ ಸ್ವಾಮಿಗಳು ತಮ್ಮ ಉತ್ಸಾಹಭರಿತ ಉಪನ್ಯಾಸಗಳ ಮೂಲಕ ಸೈನ್ಯವನ್ನು ಧರ್ಮದ ದಾರಿಯಲ್ಲಿ ನಡೆಸಿದರು. ಅವರ ಮಾತುಗಾರಿಕೆ ಹಾಗೂ ನಡೆನುಡಿಯ ಕಾರಣದಿಂದ ಬ್ರಿಟಿಷರ ಗೌರವಾದರಕ್ಕೆ ಪಾತ್ರರಾದರು. ಬ್ರಿಟಿಷ್ ಅಧಿಕಾರಿಗಳು ತಮ್ಮ ಪಾದ್ರಿಯನ್ನು ಗೌರವಿಸಿ ಮಡಿಕೇರಿಯಲ್ಲೊಂದು ದೇವಾಲಯ ಕಟ್ಟಲು ಜಮೀನು ಮಂಜೂರು ಮಾಡಿದರು.
೧೯೩೭ ಜನವರಿ ೨೭ರಂದು ಶಾರ್ಬೊನೊ ಸ್ವಾಮಿಗಳಿಗೆ ಮೈಸೂರು ಪ್ರಾಂತ್ಯದ ಉಸ್ತುವಾರಿ ವಹಿಸಿ ಶ್ರೀರಂಗಪಟ್ಟಣಕ್ಕೆ ಕಳಿಸಿದಾಗ ಬೋಕ್ಲೇ ಸ್ವಾಮಿಯವರೊಬ್ಬರೇ ಅಲ್ಲಿದ್ದದ್ದು. ಅಪರಿಚಿತ ನಾಡಿನಲ್ಲಿ ಗುರುಮಠದ ತಮ್ಮ ಸಹಪಾಠಿಯನ್ನು ಕಂಡು ಶಾರ್ಬೊನೊ ಸ್ವಾಮಿಗಳಿಗೆ ತುಂಬಾ ಸಂತೋಷವಾಯಿತು. ಆದರೆ ಬೋಕ್ಲೇ ಅವರಿಗೆ ನೀಲಗಿರಿ ಪ್ರಾಂತ್ಯದ ಉಸ್ತುವಾರಿ ವಹಿಸಿದ ಕಾರಣ ಅವರು ಶಾರ್ಬೊನೊ ಅವರಿಗೆ ಮೈಸೂರು ಪ್ರಾಂತ್ಯದ ಎಲ್ಲ ವಿವರಗಳನ್ನು ಒಪ್ಪಿಸಿ ಬಿಷಪ್ ಬೊನಾಂ ಅವರ ಅಣತಿಯ ಮೇರೆಗೆ ಊಟಿಗೆ ಹೋದ ಅವರು ಅಲ್ಲಿದ್ದ ಗೋವಾ ಪಾದ್ರಿಗಳ ವಿರುದ್ಧ ಸೆಣಸಬೇಕಾಯಿತು. ಆಮೇಲೆ ಅಲ್ಲೊಂದು ದೇವಾಲಯವನ್ನೂ ಕಟ್ಟಿಸಿದರು. ಅದು ಈಗ ಸಂತ ಜೋಸೆಫರ ಪ್ರಾಥಮಿಕ ಶಾಲೆಯಾಗಿದೆ ಮಾತ್ರವಲ್ಲ ಊಟಿ ಧರ್ಮಪ್ರಾಂತ್ಯದ ಮೊದಲ ಚರ್ಚ್ ಎಂದು ಹೆಸರಾಗಿದೆ.
ಜೆಸ್ವಿತ್ ಮಿಷನರಿಯಾದ ಸ್ವಾಮಿ ಅಮದಿಯೋ ಅವರಿಂದ ೧೬೭೦ರಲ್ಲಿ ಪ್ರಾರಂಭವಾದ ಸತ್ಯಮಂಗಲ ಮಿಷನ್ ಕೇಂದ್ರವಾಗಿದ್ದ ಕಣಿವೆಕೆರೆ ಅಥವಾ ಮಠಪಾಳ್ಯವು ಟಿಪ್ಪುಸುಲ್ತಾನನ ಕಾಲದಲ್ಲಿ ಹೇಳಹೆಸರಿಲ್ಲದಂತೆ ನಾಶವಾಗಿತ್ತು. ಅಲ್ಲಿನ ಕನ್ನಡ ಭಾಷಿಕ ಒಕ್ಕಲಿಗರು ಮತ್ತು ದೇವಾಂಗರು ಉಪದೇಶಿಗಳ ನೆರವಿನಿಂದ ಕ್ರೈಸ್ತಧರ್ಮವನ್ನು ಉಳಿಸಿಕೊಂಡಿದ್ದರು. ೧೬೩೭-೪೧ರ ಅವಧಿಯಲ್ಲಿ ಬೋಕ್ಲೇ ಸ್ವಾಮಿಗಳು ಸ್ಥಳವನ್ನು ಸಂದರ್ಶಿಸಿ ಹತ್ತಿರದ ವಳಿಪಾಳ್ಯದಲ್ಲಿ ಒಂದು ಚರ್ಚು ಕಟ್ಟಿದರು. ಅದು ಇಂದಿನ ಕೊಯಿಮತ್ತೂರು ಧರ್ಮಪ್ರಾಂತ್ಯದ ಮೊತ್ತಮೊದಲ ಧರ್ಮಕೇಂದ್ರವೆಂದು ಇತಿಹಾಸದಲ್ಲಿ ದಾಖಲಾಗಿದೆ.
ಬೋಕ್ಲೇ ಸ್ವಾಮಿಗಳು ಅಲ್ಲಿಂದ ೧೮೪೩ರಲ್ಲಿ ಕೇರಳದ ವೆರಾಪೊಲಿಗೆ ಹೋಗಿ ಕೊಯಮತ್ತೂರಿನ ಪಾಲ್ಗಾಟ್ ಧರ್ಮಕೇಂದ್ರದ ಗಡಿ ವ್ಯಾಜ್ಯವನ್ನು ಸುಸೂತ್ರವಾಗಿ ಬಗೆಹರಿಸಿ ಗೋವನ್ನರ ಮನಗೆದ್ದರು. ೧೮೪೫ರಲ್ಲಿ ಮಲಬಾರ್ ಮಿಷನ್ನು ಇಬ್ಭಾಗವಾದಾಗ ಬೋಕ್ಲೇ ಸ್ವಾಮಿಗಳು ಮೈಸೂರು ಮಿಷನ್ನಿನಲ್ಲೇ ಉಳಿದರು.
ಬ್ರಿಟಿಷರ ಪಾಲಿಗೆ ಅಪ್ಯಾಯಮಾನರಾಗಿದ್ದ ಬೋಕ್ಲೇ ಸ್ವಾಮಿಗಳು ಅವರ ಪ್ರೀತಿ ಒಲವಿನ ಸದುಪಯೋಗ ಮಾಡಿಕೊಂಡು ಇಡೀ ಮೈಸೂರು ಪ್ರಾಂತ್ಯದಲ್ಲಿ ಹಲವಾರು ಗುಡಿಗಳನ್ನು ಕಟ್ಟಿದರು. ಅವರು ಕಟ್ಟಿಸಿದ ದೇವಾಲಯಗಳು ಒಂದೆರಡಲ್ಲ. ೧೮೩೭ರಲ್ಲಿ ಫ್ರೇಸರ್ ಪೇಟೆಯಲ್ಲಿ (ಈಗಿನ ಕುಶಾಲನಗರ), ೧೮೪೦-೪೧ರಲ್ಲಿ ಶೀಮೊಗ್ಗೆ, ಜಾಲಮಂಗಲ, ನಂದಿಗೊಂಡಗಳಲ್ಲಿ, ಮೈಸೂರಿನ ಬಳಿ ದೋರನಹಳ್ಳಿಯಲ್ಲಿ, ಪಾಲ್ಗಾಟು ಬಳಿಯ ಚಿತ್ತೂರಿನಲ್ಲಿ ದೇವಾಲಯಗಳನ್ನು ಕಟ್ಟಿಸಿದರು. ಹರಿಹರ ಮತ್ತು ಆನೆಕಲ್ಲುಗಳಲ್ಲಿ ಸಹಾ ಗುಡಿಗಳನ್ನು ಕಟ್ಟಿದ ಅವರು ಪಾಲಹಳ್ಳಿ ಗುಡಿಯನ್ನು ದುರಸ್ತಿಗೊಳಿಸಿದರಲ್ಲದೆ ಶೆಟ್ಟಿಹಳ್ಳಿಯ ದೇವಾಲಯವನ್ನು ವಿಸ್ತರಿಸಿದರು. ಅತ್ತಿಬೆಲೆಗೆ ಹತ್ತಿರವಿರುವ ಹೊಸೂರಿನಲ್ಲಿ ಗುರುಗಳ ಮನೆಯನ್ನು ಕಟ್ಟಿಸಿದರು. ಪುಂಗನೂರು ಕಡಪಾಗಳಲ್ಲೂ ಇವರು ಸೇವೆ ಸಲ್ಲಿಸಿದ ಕುರಿತು ಉಲ್ಲೇಖವಿದೆಯಾದರೂ ಬಗ್ಗೆ ಹೆಚ್ಚಿನ ಸಂಶೋಧನೆ ಅಗತ್ಯವಾಗಿದೆ. ಮೈಸೂರಿನಲ್ಲಿ ಸಂತ ಫಿಲೋಮಿನಾ ದೇವಾಲಯಕ್ಕೆ ಅಡಿಪಾಯ ಹಾಕಿದರಾದರೂ ಮೈಸೂರು ಮಹಾರಾಜರ ಬೆಂಬಲದೊಂದಿಗೆ ಅದನ್ನು ಮುಂದುವರಿಸಿದ್ದು ಶಾರ್ಬೊನೊ ಸ್ವಾಮಿಗಳು.
ಬೆಂಗಳೂರಿನಲ್ಲೂ ಕಾರ್ಯ ನಿರ್ವಹಿಸಿದ ಸ್ವಾಮಿ ಬೋಕ್ಲೇ ಅವರು ಹಲವಾರು ದೇವಾಲಯಗಳನ್ನು ನಿರ್ಮಿಸಿದ ಉಲ್ಲೇಖವಿದೆ. ಸೋಮನಹಳ್ಳಿಯ ದೇವಾಲಯ ನಿರ್ಮಾಣದಲ್ಲಿ ಇವರ ಪಾತ್ರವಿದೆ. ೧೮೪೬ರಲ್ಲಿ ಶೂಲೆ ಬಳಿ ಸೆಮಿನರಿಯೊಂದನ್ನು ಕಟ್ಟಿದರು. ಆದರೆ ಕಟ್ಟಡವನ್ನು ಹೆಣ್ಣು ಮಕ್ಕಳ ಶಾಲೆಗಾಗಿ ಬಿಟ್ಟುಕೊಡಬೇಕಾಯಿತು ಎಂಬುದು ಇತಿಹಾಸ.
ಬೆಂಗಳೂರಿನಲ್ಲಿ ಬೋಕ್ಲೇ ಸ್ವಾಮಿಗಳು ಕಟ್ಟಿಸಿದ ಚರ್ಚುಗಳಲ್ಲಿ ಪ್ರಮುಖವಾದುದು ಚಾಮರಾಜಪೇಟೆಯಲ್ಲಿನ ಸಂತ ಜೋಸೆಫರ ಚರ್ಚು. ಬೆಂಗಳೂರಿನ ಹಳೇ ಪೇಟೆಯಲ್ಲಿದ್ದ ಚವೇರಿಯವರ ಹೆಸರಿನ ಪುರಾತನ ಚರ್ಚು ಜನರಿಂದ ತುಂಬಿ ತುಳುಕುತ್ತಿತ್ತು. ಇಲ್ಲೊಂದು ದೊಡ್ಡ ದೇವಾಲಯದ ಅಗತ್ಯವೂ ಇತ್ತು. ಸಂತ ಜೋಸೆಫರಿಗೆ ಹರಕೆ ಹೊತ್ತಿದ್ದ ಕ್ರೈಸ್ತ ಶ್ರೀಸಾಮಾನ್ಯರೊಬ್ಬರು ದೇವಾಲಯ ಕಟ್ಟಲು ಅಗತ್ಯ ಹಣ ಸಹಾಯ ಮಾಡಿದರು. ೧೮೫೧ರ ಅಕ್ಟೋಬರ್ ೧೫ರಂದು ಶಾರ್ಬೊನೊ ಸ್ವಾಮಿಗಳು ಹೊಸ ದೇವಾಲಯಕ್ಕೆ ಅಡಿಪಾಯ ಹಾಕಿದರು, ಬೋಕ್ಲೇ ಸ್ವಾಮಿಗಳು ಕಟ್ಟಿ ಮುಗಿಸಿದರು.
ಹಿಂದೆ ಇದ್ದ ಅಬ್ಬೆ ದ್ಯು ಬುವಾ ಸ್ವಾಮಿಗಳು ಬೆಂಗಳೂರು ತಮಿಳು ಭಾಷಿಕ ಜನರ ಊರು ಎಂದು ತಪ್ಪಾಗಿ ಬಿಂಬಿಸಿಬಿಟ್ಟಿದ್ದರು. ತಪ್ಪು ಕಳಂಕವನ್ನು ತೊಡೆದವರು ಬೋಕ್ಲೇ ಸ್ವಾಮಿಗಳು. ಕನ್ನಡ ನುಡಿಯನ್ನು ಬಲು ಚೆನ್ನಾಗಿ ಅರಿತಿದ್ದ ಬೋಕ್ಲೇ ಸ್ವಾಮಿಗಳು ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆಂದು ಇತಿಹಾಸ ಹೇಳುತ್ತದೆಯಾದರೂ ಅವು ಸಿಕ್ಕಿಲ್ಲ. ಧರ್ಮದ ಕುರಿತ ಪ್ರೌಢಪ್ರಬಂಧವನ್ನು ಅವರು ರಚಿಸಿದ್ದರೆಂದು ಉಲ್ಲೇಖವಿದೆಯಾದರೂ ಅದು ಯಾವ ಗ್ರಂಥಾಲಯದಲ್ಲಿದೆಯೋ ತಿಳಿಯದು. ಅವು ಲಭ್ಯವಾದರೆ ಅಂದಿನ ಬೋಕ್ಲೇ ಸ್ವಾಮಿಗಳ ಕಾಲದ ಆಗುಹೋಗುಗಳ ಬಗ್ಗೆ ಇನ್ನಷ್ಟು ಮಾಹಿತಿ ಸಿಗಬಹುದು.

ಬ್ರಿಟಿಷ್ ಸರ್ಕಾರದ ಅಧಿಕಾರಿಗಳಂತೂ ಬೋಕ್ಲೇ ಅವರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಸಮಾಜದ ಇತರ ಧರ್ಮೀಯರೊಂದಿಗೂ ಬೋಕ್ಲೇ ಅವರು ಆತ್ಮೀಯ ಬಾಂಧವ್ಯ ಹೊಂದಿದ್ದರು. ಹೀಗೆ ಅತ್ಯಂತ ಜನಾನುರಾಗಿಯಾಗಿ ಛಲದಿಂದ ಜಾಣ್ಮೆಯಿಂದ ಎಲ್ಲ ಎಲ್ಲೆಗಳನ್ನು ಮೀರಿ ಬದುಕಿದ ಬೋಕ್ಲೇ ಸ್ವಾಮಿಗಳು ದೇವಸೇವೆ ಜನಸೇವೆ ಮಾಡುತ್ತಲೇ ಬಿಳೇಕಳ್ಳಿ (ಶಿವಾಜಿನಗರ) ಯಲ್ಲಿ ೧೮೫೮ರ ಜುಲೈ ೧೬ರಂದು ಸ್ವರ್ಗ ಸೇರಿದರು. (ಆದರೆ ಅವರ ಸಮಾಧಿಕಲ್ಲು ಎಲ್ಲಿದೆಯೆಂಬುದು ತಿಳಿಯದು)

ಕಾಮೆಂಟ್‌ಗಳಿಲ್ಲ: