ಭಾನುವಾರ, ಡಿಸೆಂಬರ್ 29, 2013

ಮಾರ್ಸೆಲಿನೊ

ನನ್ನ ಹಳೆಯ ಪಳೆಯ ನೆನಪುಗಳಲ್ಲಿ ಆಗಾಗ್ಗೆ ಕಾಡುವುದು ಎಪ್ಪತ್ತರ ದಶಕದಲ್ಲಿ ನಮ್ಮ ಶಾಲೆಯಲ್ಲಿ ತೋರಿಸಿದ ಒಂದು ಚಲನಚಿತ್ರ. ಬಹುಶಃ ನಾನಾಗ ಐದನೇ ತರಗತಿಯ ವಿದ್ಯಾರ್ಥಿ.
ಆ ಚಿತ್ರದ ನಾಯಕ ಒಬ್ಬ ಪುಟಾಣಿ ತುಂಟ ಹುಡುಗ. ಅಂದೊಮ್ಮೆ ಬೆಳಂಜಾವ ಆ ಮಠದ ಸ್ವಾಮಿಗಳು ಚರ್ಚಿನ ಗಂಟೆ ಬಾರಿಸುವಾಗ ಗೇಟಿನ ಬಳಿ ಬಟ್ಟೆಯಲ್ಲಿ ಸುತ್ತಿ ಮಲಗಿಸಿದ್ದ ಒಂದು ಅನಾಥ ಮಗುವನ್ನು ಕಾಣುತ್ತಾರೆ. ಮಠದ ಎಲ್ಲ ಸಂನ್ಯಾಸಿಗಳೂ ಅದರ ಸುತ್ತ ನೆರೆದು ಪಾಪುವನ್ನು ಮುದ್ದಿಸಿ ಒಳಕರೆತರುತ್ತಾರೆ. ಒಬ್ಬರು ಬೆಚ್ಚನೆಯ ಹಾಸಿಗೆ ಮಾಡಿದರೆ ಮತ್ತೊಬ್ಬರು ಹಾಲಿನ ಬಾಟಲಿ ತರುತ್ತಾರೆ. ಎಲ್ಲರೂ ಸೇರಿ ಮಗುವಿಗೆ ಮಾರ್ಸೆಲಿನೊ ಎಂದು ಹೆಸರಿಟ್ಟು ದೀಕ್ಷಾಸ್ನಾನ ಕೊಡುತ್ತಾರೆ. 
ಮಠದೊಳಗಿನ ಧಾರ್ಮಿಕ ಶಿಸ್ತಿನ ಪರಿಸರದೊಳಗಿದ್ದೂ ಹುಡುಗ ಬಲು ತುಂಟನಾಗಿ ಬೆಳೆಯುತ್ತಾನೆ. ಹೋಗಬಾರದೆನ್ನುವ ಕಡೆ ಹೋಗುತ್ತಾನೆ, ಮುಟ್ಟಬಾರದೆಂದುದನ್ನು ಮುಟ್ಟುತ್ತಾನೆ, ಕಲ್ಲಿನ ಕೆಳಗೆ ಅವಿತಿದ್ದ ಚೇಳನ್ನು ಮುಟ್ಟಿ ಕಿಟಾರನೆ ಕಿರುಚಿಕೊಂಡು ಜ್ವರಬಂದು ಮಲಗುತ್ತಾನೆ, ಕೆಟ್ಟ ಹುಡುಗರ ಸಹವಾಸ ಮಾಡಿ ಊರವರೆಲ್ಲರಿಂದ ಉಗಿಸಿಕೊಳ್ಳುತ್ತಾನೆ. ಹೀಗೆ ಒಮ್ಮೆ ಸಂತೆಗೆ ಹೋಗಿದ್ದಾಗ ಹಸುಕರುಗಳನ್ನು ಬಿಚ್ಚಿ ಓಡಿಸಿ ಸಂತೆಯೆಲ್ಲ ಗಲಿಬಿಲಿಗೊಳ್ಳುವಂತೆ ಮಾಡುತ್ತಾನೆ. ಊರಿನ ಮುಖಂಡ ಬಂದು ಹುಡುಗನನ್ನು ನನಗೆ ಕೊಡಿ ಅವನಿಗೆ ಚೆನ್ನಾಗಿ ಬುದ್ದಿ ಕಲಿಸುವೆ, ಇಡೀ ದಿನ ನನ್ನ ಕುಲುಮೆಯ ತಿದಿಯೊತ್ತಲಿ ಎನ್ನುತ್ತಾನೆ. ಆದರೆ ಗುರುಗಳು ಒಪ್ಪುವುದಿಲ್ಲ. 
ಮಠದ ಅಟ್ಟದಲ್ಲಿ ಏನಿದೆಯೋ ಎಂದು ನೋಡುವ ಕುತೂಹಲ ಮಾರ್ಸೆಲಿನೊಗೆ. ಆದರೆ ನೀನೆಲ್ಲಿ ಬೇಕಾದರೂ ಹೋಗು, ಆದರೆ ಅಟ್ಟಕ್ಕೆ ಮಾತ್ರ ಹತ್ತಬೇಡ, ಅದರ ಮೆಟ್ಟಿಲುಗಳಿಗೆ ಹಿಡಿಗಂಬಿ ಇಲ್ಲ, ಜಾರಿಬಿದ್ದೀಯೆ, ಅಲ್ಲದೆ ಅಟ್ಟದ ಮೇಲೆ ಭೂತವಿದೆ ಎಂದು ಅವನಿಗೆ ಮಠದ ಸ್ವಾಮಿಗಳು ಹೆದರಿಸುತ್ತಾರೆ. ಆದರೂ ಆ ಹುಡುಗನಿಗೆ ಒಂದು ಕೆಟ್ಟ ಕುತೂಹಲ. ಒಂದು ದಿನ ಅಟ್ಟ ಹತ್ತಿ ಅಲ್ಲಿನ ಕೋಣೆಯ ಬಾಗಿಲು ತೆರೆದು ದೆವ್ವ ಕಂಡವನಂತೆ ಬೆಚ್ಚಿಬಿದ್ದು ಓಡಿ ಬರುತ್ತಾನೆ. ಮತ್ತೊಂದು ದಿನ ಧೈರ್ಯಮಾಡಿ ಮತ್ತೆ ಅಲ್ಲಿಗೆ ತೆರಳಿ ಬಾಗಿಲಲ್ಲಿ ಇಣುಕುತ್ತಾನೆ. ಅದು ಭೂತವಾಗಿರದೆ ಶಿಲುಬೆಯ ಮೇಲೆ ನೇತಾಡುತ್ತಿರುವ ಒಬ್ಬ ಮನುಷ್ಯನಂತೆ ತೋರುತ್ತದೆ. ಅದರ ಹತ್ತಿರ ಹೋಗಿ ಮಾತಾಡಿಸುತ್ತಾನೆ. ನೀನೇಕೆ ಹೀಗಿದ್ದೀಯ, ಹಸಿವಾಗುತ್ತಿದೆಯೇ ತಾಳು ರೊಟ್ಟಿ ತರುವೆ ಎಂದು ಅಡಿಗೆಮನೆಗೆ ಹೋಗಿ ಕದ್ದುಮುಚ್ಚಿ ರೊಟ್ಟಿ ತಂದು ಶಿಲುಬೆಯ ಮೇಲಿನ ಮನುಷ್ಯನಿಗೆ ಕೊಡುತ್ತಾನೆ. ನಿಧಾನವಾಗಿ ಕೈ ಕೆಳಗಿಳಿಸುವ ಆ ವ್ಯಕ್ತಿ ರೊಟ್ಟಿಯನ್ನು ತಿನ್ನುತ್ತಾನೆ. 
ಹೀಗೇ ಹಲವಾರು ದಿನ ನಡೆಯುತ್ತದೆ. ಊಟದ ಮೇಜಿನ ಬಳಿ ಕುಳಿತಾಗ ಎಲ್ಲರ ತಟ್ಟೆಗೂ ರೊಟ್ಟಿ ಬಡಿಸುತ್ತಾರೆ. ಒಂದೇ ಕ್ಷಣದಲ್ಲಿ ಮಾರ್ಸೆಲಿನೊ ತನ್ನ ತಟ್ಟೆಯೊಳಗಿನ ರೊಟ್ಟಿಯನ್ನು ಯಾರಿಗೂ ಕಾಣದಂತೆ ತೆಗೆದು ತನ್ನ ಅಂಗಿಯೊಳಗೆ ಸೇರಿಸಿಕೊಳ್ಳುತ್ತಾನೆ. ಅಡಿಗೆಯವನಿಗೆ ಏನೋ ಸಂದೇಹ, ಈಗಷ್ಟೇ ಅವನ ತಟ್ಟೆಯಲ್ಲಿ ರೊಟ್ಟಿ ಹಾಕಿದ ನೆನಪು, ಹುಡುಗ ಅಷ್ಟು ಬೇಗನೇ ತಿಂದು ಮುಗಿಸಿದನೇ, ಅಥವ ನಾನು ಅವನಿಗೆ ರೊಟ್ಟಿಯನ್ನೇ ಹಾಕಲಿಲ್ಲವೇ...?
ಒಂದು ದಿನ ಅಡಿಗೆಯವ ಈ ಕಳ್ಳಾಟವನ್ನು ಕಂಡುಕೊಂಡ. ಹುಡುಗನಿಗೆ ಗೊತ್ತಾಗದಂತೆ ಹಿಂಬಾಲಿಸಿ ಹೋದ. ಅಟ್ಟದಲ್ಲಿನ ಕೋಣೆಯಲ್ಲಿ ಮುರುಕಲು ಕುರ್ಚಿಯ ಮೇಲೆ ಕುಳಿತುಕೊಂಡಿದ್ದ ಶಿಲುಬೆಯ ಮನುಷ್ಯ ಹುಡುಗನ ಕೈಯಿಂದ ರೊಟ್ಟಿ ಇಸಿದುಕೊಂಡು ತಿಂದು ನೀರು ಕುಡಿಯುತ್ತಾನೆ. ಆಮೇಲೆ ಹುಡುಗನಿಗೆ ತಾನ್ಯಾರೆಂದು ಹೇಳುತ್ತಾನೆ. ಜಪಗಳನ್ನು ಹೇಳಿಕೊಡುತ್ತಾನೆ. ನಿನಗೇನು ಬೇಕು ಕೇಳು ಕೊಡುತ್ತೇನೆ ಎಂದಾಗ ಹುಡುಗ ನನಗೆ ನನ್ನ ಅಮ್ಮ ಬೇಕು ಎನ್ನುತ್ತಾನೆ. 
ನಿನ್ನ ಅಮ್ಮ ನನ್ನ ಅಮ್ಮನ ಬಳಿಯಿದ್ದಾಳೆ, ಬಾ ಕರೆದುಕೊಂಡು ಹೋಗುತ್ತೇನೆ ಎಂದು ಶಿಲುಬೆಯವ ಹೇಳುತ್ತಿದ್ದಂತೆ ಮಾರ್ಸೆಲಿನೊಗೆ ಗಾಢ ನಿದ್ದೆ ಬರುತ್ತದೆ, ಅವನ ದೇಹವನ್ನು ಒಂದು ಅಪೂರ್ವ ಬೆಳಕು ಆವರಿಸುತ್ತದೆ. ಬಾಗಿಲ ಸಂದಿಯಲ್ಲಿ ಇಣುಕುತ್ತಿದ್ದ ಮಠದ ಸ್ವಾಮಿಗಳೆಲ್ಲ ಬಿಟ್ಟ ಬಾಯಿ ಬಿಟ್ಟ ಹಾಗೇ ಇದನ್ನು ನೋಡುತ್ತಿರುತ್ತಾರೆ. ಆಮೇಲೆ ಅವರು ಚರ್ಚಿನ ಗಂಟೆಯನ್ನು ಢಣಢಣ ಬಾರಿಸಿ ಊರವರನ್ನೆಲ್ಲ ಕರೆದು ನಡೆದ ಕತೆಯನ್ನೆಲ್ಲ ಹೇಳಿ ಸುಂದರವಾದ ಹಾಡು ಹಾಡುತ್ತಾರೆ. 

ಕಾಮೆಂಟ್‌ಗಳಿಲ್ಲ: