ಭಾನುವಾರ, ಫೆಬ್ರವರಿ 9, 2014

ಕೆಟ್ಟ ದಡಿಯನ ಕತೆ

[ಇದು ಆಸ್ಕರ್ ವಿಲ್ಡನು ಮಕ್ಕಳಿಗಾಗಿ ಬರೆದ The Selfish Giant ಕತೆಯ ಕನ್ನಡ ರೂಪಾಂತರ]

ಆ ದಡಿಯನದೊಂದು ಸುಂದರ ತೋಟವಿತ್ತು. ಶಾಲೆ ಬಿಟ್ಟಾಗ ಅದೇ ದಾರಿಯಲ್ಲಿ ಬರುತ್ತಿದ್ದ ಮಕ್ಕಳಿಗೆ ಆ ತೋಟ ಬಲು ಮೆಚ್ಚಿನ ತಾಣವಾಗಿತ್ತು.
ಆ ತೋಟವು ವಿಶಾಲವಾಗಿತ್ತಲ್ಲದೆ ಮೃದುವಾದ ಹಸಿರ ಹುಲ್ಲು ಬೆಳೆದು ಸಿಕ್ಕಾಪಟ್ಟೆ ಚೆನ್ನಾಗಿತ್ತು, ಹುಲ್ಲು ಹಾಸಿನ ಮೇಲೆ ಅಲ್ಲೊಂದು ಇಲ್ಲೊಂದು ನಕ್ಷತ್ರದಂತ ಹೂಗಳು ಅರಳಿ ನಗುತ್ತಿದ್ದವು. ಅಲ್ಲಿದ್ದ ಹನ್ನೆರಡು ಸೀಬೆ ಮರಗಳು ವಸಂತನ ಆಗಮನದೊಂದಿಗೆ ರತ್ನಾಭರಣ ತೊಡುವಂತೆ ಮನೋಹರ ಹೂಗಳನ್ನು ಧರಿಸಿ ಬೀಗುತ್ತಿದ್ದವು. ಮಳೆಗಾಲ ಸನಿಹವಾಗುತ್ತಿದ್ದಂತೆ ಹೇರಳವಾದ ಕಾಯಿಹಣ್ಣುಗಳನ್ನು ಹೊತ್ತು ಬಾಗುತ್ತಿದ್ದವು. ಗಿಳಿ ಕೋಗಿಲೆ ಗುಬ್ಬಚ್ಚಿಗಳು ಆ ಮರಗಳಲ್ಲಿ ಕುಳಿತು ಹಾಡುತ್ತಿದ್ದರೆ ಮಕ್ಕಳು ಆಟ ಮರೆತು ಆ ಗಾನವನ್ನು ಆಲಿಸುತ್ತಿದ್ದರು. ’ಏ ಎಷ್ಟೊಂದು ಮಜಾ ಅಲ್ವಾ?’ ಎನ್ನುತ್ತಾ ಸಂಭ್ರಮ ಪಡುತ್ತಿದ್ದರು.
ಹೀಗೇ ಇರುವಲ್ಲಿ ಒಂದು ದಿನ ದಡಿಯ ಬಂದ. ಸ್ನೇಹಿತನ ಊರಿಗೆ ಎಂದು ಹೋದವನು ಏಳು ವರ್ಷಗಳ ಕಾಲ ಅಲ್ಲೇ ಉಳಿದುಬಿಟ್ಟಿದ್ದನಂತೆ. ಅವನು ಹಿಂದಿರುಗಿ ಬಂದಾಗ ಅವನ ಈ ತೋಟದಲ್ಲಿ ಮಕ್ಕಳು ತುಂಟಾಟವಾಡುತ್ತಿದ್ದರು.
ಒಮ್ಮೆಲೇ ಅವನು ಗುಟುರು ಹಾಕುತ್ತಾ ’ಯಾರದು, ನೀವೆಲ್ಲ ಏನು ಮಾಡ್ತಾ ಇದ್ದೀರಿ?’ ಎಂದ ಕೂಡಲೇ ಮಕ್ಕಳೆಲ್ಲ ಭಯಭೀತರಾಗಿ ಓಡಿಹೋದರು.
’ಇದು ನನ್ನ ತೋಟ, ನನ್ನ ಸ್ವಂತ ತೋಟ, ಅರ್ಥವಾಯಿತು ತಾನೇ? ಇಲ್ಲಿ ಯಾರನ್ನೂ ಸೇರಿಸಿಕೊಳ್ಳಲ್ಲ, ನಾನೊಬ್ಬನೇ ಆಡಿಕೊಳ್ಳುತ್ತೇನೆ’ ಎಂದು ಕೂಗು ಹಾಕಿದ. ಆಮೇಲೆ ಆ ತೋಟದ ಸುತ್ತ ಎತ್ತರದ ಗೋಡ ಕಟ್ಟಿಸಿದ. ಹಾಗೂ ಒಂದು ಹಲಗೆಯ ಮೇಲೆ
’ಅಡಿಯಿಟ್ಟರೆ ಕಡಿದುಬಿಡುವೆ’
ಎಂದು ಬರೆದು ತೂಗುಹಾಕಿದ.
ಅಲ್ಲ, ಯಾರಾದರೂ ಇಷ್ಟೊಂದು ಕೆಟ್ಟವರಾಗಿರ್ತಾರಾ? ಮಕ್ಕಳು ದೇವರ ಸಮಾನ ಅನ್ತಾರೆ, ಇವನ್ಯಾಕೋ ಮಕ್ಕಳು ಅಂದರೆ ಸಿಡುಕುತ್ತಾನಲ್ಲ?
ಪಾಪ ಬಡಪಾಯಿ ಮಕ್ಕಳಿಗೆ ಆಟಕ್ಕೆ ಜಾಗವಿಲ್ಲದಂತಾಯ್ತು. ರಸ್ತೆ ಮೇಲೆ ಆಡಿಕೊಳ್ಳೋಣ ಅಂದರೆ ಒಂದರ ಹಿಂದೆ ಒಂದು ಬಂಡಿ ಬರ್ತಾ ಇರುತ್ತೆ. ಹೊಳೆಗೆ ಹೋಗಿ ಆಡೋಣ ಅಂದ್ರೆ ಹೊಳೆ ನೀರೆಲ್ಲ ಗಲೀಜಾಗಿದೆ. ಏನು ಮಾಡೋದು, ಪ್ರತಿದಿನ ಅವರು ದಡಿಯನ ತೋಟದ ಸುಂದರ ನೆನಪುಗಳನ್ನು ಮೆಲುಕು ಹಾಕುತ್ತಾ ಅದರ ಸುತ್ತಲೂ ಠಳಾಯಿಸುತ್ತಿದ್ದರು. ಶಾಲೆ ಬಿಟ್ಟಾಗೆಲ್ಲ ಅದೇ ದಾರಿಯಲ್ಲಿ ಬರುತ್ತಾ ತೋಟದ ಕತೆಗಳನ್ನು ಹಂಚಿಕೊಳ್ಳುತ್ತಿದ್ದರು. ’ಅದೆಷ್ಟು ಚೆನ್ನಾಗಿತ್ತು ಗೊತ್ತಾ?’ ಎಂದು ಪರಸ್ಪರ ಹೇಳಿಕೊಂಡು ಮನಸಿನಲ್ಲೇ ಮಿಠಾಯಿ ಸವಿಯುತ್ತಿದ್ದರು.
< 2 >
 ಋತುಗಳ ರಾಜ ವಸಂತ ಬಂದ, ಎಲ್ಲೆಡೆ ಮರಗಿಡಗಳು ಚಿಗುರೊಡೆದವು, ಕೋಗಿಲೆ ಕುಹೂಕುಹೂ ಹಾಡಿತು. ಎಲ್ಲೆಲ್ಲಿಂದಲೋ ಗುಬ್ಬಚ್ಚಿ ಗಿಳಿ ಗೊರವಂಕಗಳು ಬಂದು ಚಿಲಿಪಿಲಿಗುಟ್ಟಿ ಹಾಡಿ ತಣಿದವು, ಹಸಿರ ನಡುವೆ ಮೊಗ್ಗು ಒಡೆದು ಹೂಗಳರಳಿ ಗಾಳಿ ಗಮ್ಮೆಂದಿತು. ಆದರೆ .. ಆದರೆ ಆ ದಡಿಯನ ತೋಟದಿಂದ ಚಳಿಗಾಲ ಹೊರಹೋಗಲೇ ಇಲ್ಲ. ಅಲ್ಲಿ ಗಿಡಮರಗಳು ಚಿಗುರಲಿಲ್ಲ, ತಂಬೆಲರು ಸುಳಿಯಲಿಲ್ಲ. ಹಕ್ಕಿಗಳಂತೂ ಬರಲೇ ಇಲ್ಲ. ಮಕ್ಕಳೇ ಇಲ್ಲದ ಮೇಲೆ ಅಲ್ಲಿ ಹಾಡುವುದಾದರೂ ಹೇಗೆ ಎಂದುಕೊಂಡವೇನೋ. ಮರಗಳ ರೆಂಬೆಕೊಂಬೆಗಳಲ್ಲಿ ಮಕ್ಕಳು ಮರಕೋತಿ ಆಡದೆ ಮರಗಳಿಗೂ ಬೇಸರವಾಗಿ ಅವು ಮೊಗ್ಗು ತೊಡಲೇ ಇಲ್ಲ. ಹುಲ್ಲಿನ ನಡುವಿನಿಂದ ಹೂವೊಂದು ಇಣುಕಿ ನೋಡಿತು, ದಡಿಯನ ಎಚ್ಚರಿಕೆಯ ಬೋರ್ಡು ಕಂಡಿದ್ದೇ ಹೆದರಿಕೆಯಾಗಿ ಮತ್ತೆ ಹುಲ್ಲಿನೊಳಗೆ ಅವಿತುಕೊಂಡಿತು.
ಹಸಿರೊಂದೇ ಮಕ್ಕಳ ಬಗ್ಗೆ ಮರುಕಪಟ್ಟಿದ್ದು. ಚಳಿಯೂ ಇಬ್ಬನಿಯೂ ನಮಗಾವ ತಂಟೆಯೂ ಬೇಡ ಎಂದು ತಮ್ಮ ಪಾಡಿಗೆ ತಾವು ಬಿದ್ದುಕೊಂಡಿದ್ದವು. ಆದರೂ ಅವು ’ವಸಂತ ಯಾಕೋ ಇಲ್ಲಿಗೆ ಬರುವುದನ್ನು ಮರೆತುಬಿಟ್ಟಿದ್ದಾನೆ, ಅವನು ಬರಲಿಲ್ಲ ಅಂದರೆ ಕತ್ತೆ ಬಾಲ ಹೋಯ್ತು, ಯಾವೋನು ಹೆಂಗಿದ್ರೆ ನಮಗೇನು, ನಾವು ಚೆನ್ನಾಗಿದ್ದರೆ ಸಾಕು’ ಎಂದು ಮಾತಾಡಿಕೊಂಡವು. ಇಬ್ಬನಿಯು ಹುಲ್ಲು ಹಾಸಿನ ಮೇಲೆ ತನ್ನ ಬಿಳಿಯುಡುಗೆಯನ್ನು ಹಾಸಿತು. ಸಾಲದೆಂಬಂತೆ ಮರಗಳ ಎಲೆಗಳ ಮೇಲೆ ಸಕ್ಕತ್ತಾಗಿ ಸುರಿದು ತೋಯಿಸಿಬಿಟ್ಟಿತು. ಚಳಿಯಿಂದಾಗಿ ಮರಗಳು ಗಾಢನಿದ್ದೆಗೆ ಜಾರಿದವು. ಸೊಕ್ಕಿದ ಚಳಿಯು ಉತ್ತರದ ಗಾಳಿಯನ್ನೂ ಕರೆದು ತನ್ನ ಜೊತೆಯಲ್ಲಿರಿಸಿಕೊಂಡಿತು. ಉತ್ತರದ ಗಾಳಿಯು ಬಂದವನೇ ತೋಟದ ಮೇಲೆಲ್ಲ ಸುಂಯೆಂದು ಸುತ್ತಾಡಿದ, ಹೊಗೆಕೊಳವೆಯಲ್ಲಿ ಪೀಪಿ ಊದಿದ. ’ಈ ಜಾಗ ನನಗೆ ತುಂಬಾ ಇಷ್ಟವಾಯಿತು’ ಎಂದು ಸಡಗರಗೊಂಡ ಅವನು ತನ್ನ ಜೊತೆ ಸುಂಟರಗಾಳಿಯೂ ಇದ್ದಿದ್ದರೆ ಚೆನ್ನಾಗಿತ್ತು ಎಂದುಕೊಂಡ. ಅದೆಲ್ಲಿದ್ದನೋ ಸುಂಟರಗಾಳಿ, ಕೂಡಲೇ ಅಲ್ಲಿಗೆ ಆಗಮಿಸಿ ಮನೆಯ ಹೆಂಚುಗಳನ್ನೆಲ್ಲ ಅಲ್ಲಾಡಿಸಿ ಸಿಳ್ಳೆ ಹಾಕಿ ತನ್ನ ಪ್ರತಾಪ ತೋರಿಸಿದನಲ್ಲದೆ ತೋಟದಲ್ಲೆಲ್ಲ ಬಿರುಸಾಗಿ ಸುತ್ತಾಡಿದ. ದಟ್ಟ ಮಂಜಿನ ಉಡುಗೆ ತೊಟ್ಟಿದ್ದ ಅವನ ಉಸಿರಿನ ಗಾಳಿ ಕೊರೆತಕ್ಕೆ ಮೈ ನಡುಗುತ್ತಿತ್ತು.
ಇತ್ತ ಮನೆಯೊಳಗೆ ಬೆಂಕಿ ಗೂಡಿಗೆ ಕೊಳ್ಳಿಯನ್ನು ತುರುಕಿ ಆರಾಮ ಕುರ್ಚಿಯ ಮೇಲೆ ಕುಳಿತ ದಡಿಯ ಯಾಕಿನ್ನೂ ಚಳಿ ಹೋಗಿಲ್ಲ ಎಂದುಕೊಂಡವನು ಕಿಟಕಿ ತೆರೆದು ನೋಡಿದಾಗ ಹೊರಗೆ ಮಂಜು ಸುರಿಯುತ್ತಿತ್ತು. ಬಹುಶಃ ಕಾಲದಲ್ಲೇನೋ ಬದಲಾವಣೆಯಾಗಿದೆ’ ಎಂದುಕೊಂಡು ಕಿಟಕಿ ಮುಚ್ಚಿದ.
ಆದರೆ ಚಳಿಗಾಲ ಅವನ ತೋಟದಿಂದಹ ಹೊರಹೋಗಲೇ ಇಲ್ಲ, ಮತ್ತೆ ಬೇಸಿಗೆಯೂ ಬರಲಿಲ್ಲ. ಮಳೆಗಾಲ ಹತ್ತಿರವಾಗುತ್ತಿದ್ದಂತೆ ಎಲ್ಲ ಮರಗಳೂ ಚಿನ್ನದಂಥ ಹಣ್ಣುಗಳನ್ನುದುರಿಸಿದರೆ ದಡಿಯನ ತೋಟದ ಮರಗಳು ಇನ್ನೂ ಮಲಗಿಯೇ ಇದ್ದವು. ಮಲೆನಾಡಿನ ತಂಡಿ ಗಾಳಿ ಅವನ ತೋಟಕ್ಕೆ ಕಾಲಿಡಲು ಇಷ್ಟಪಡಲಿಲ್ಲ. ಹಾಗಾಗಿ ಅವನ ತೋಟದಲ್ಲಿ ಚಳಿಗಾಲ ಶಾಶ್ವತವಾಗಿ ಮನೆಮಾಡಿತು, ಉತ್ತರದ ಶೀತಗಾಳಿ ಬೀಸಿಯೇ ಬೀಸಿತು, ಕೊರೆಯುವ ಮಂಜಿನಸೋನೆ ಇಡೀ ತೋಟವನ್ನು ತೋಯಿಸಿತು. ಹಿಮ ಮತ್ತು ಇಬ್ಬನಿಗಳು ಮರಗಳ ಕೊಂಬೆ ರೆಂಬೆಗಳಲ್ಲಿ ಕುಣಿದು ಕುಪ್ಪಳಿಸಿ ಚೆಲ್ಲಾಟವಾಡಿದವು.
ಹೀಗೇ ಇರುವಲ್ಲಿ ಒಂದಾನೊಂದು ಮುಂಜಾನೆ ದಡಿಯನು ಇನ್ನೂ ಹಾಸಿಗೆಯ ಮೇಲೆ ಉರುಳಾಡುತ್ತಿರುವಾಗ ಎಲ್ಲಿಂದಲೋ ಇಂಪಾದ ನಾದ ಮಾಧುರ್ಯ ತೇಲಿಬಂತು. ಅದರ ಇಂಚರದಿಂದ ಅವನು ಪುಳಕಗೊಂಡ, ಅರಮನೆಯ ಬ್ಯಾಂಡಿನವರು ತನ್ನ ಮನೆಯ ಮುಂದೆ ಹಾದುಹೋಗುತ್ತಿರಬೇಕು ಎಂದುಕೊಂಡ. ಕಣ್ಣುಮುಚ್ಚಿ ಕಿವಿದೆರೆದು ಆಲಿಸಿಯೇ ಆಲಿಸಿದ. ಅದು ಯಾವ ವಾದ್ಯಮೇಳವೂ ಅಲ್ಲ ತನ್ನ ಕೋಣೆಯ ಕಿಟಕಿಯಾಚೆ ಯಾವುದೋ ಹಕ್ಕಿ ಹಾಡುತ್ತಿದೆ ಎನಿಸಿತು. ಎಷ್ಟೋ ವರ್ಷಗಳ ಕಾಲ ಅವನು ಹಕ್ಕಿಯ ಹಾಡನ್ನೇ ಕೇಳಿರಲಿಲ್ಲವಾದ್ದರಿಂದ ಈ ಒಂಟಿ ಹಕ್ಕಿಯ ಗಾನ ಅವನನ್ನು ಹುಚ್ಚನಾಗಿಸಿತು. ಜಗತ್ತಿನಲ್ಲೇ ಅತ್ಯಂತ ಮಧುರವಾದ ರಾಗವಿದು ಎಂದುಕೊಂಡ. ಸುಂಯೆನ್ನುವ ಕುಳಿರ್ಗಾಳಿ ನಿಂತುಹೋಯಿತು. ಇಬ್ಬನಿ ಕರಗಿತು. ಮಂಜಿನ ತೆರೆ ಸರಿದು ವಾತಾವರಣ ಬೆಚ್ಚಗಾಗತೊಡಗಿತು. ಎಲ್ಲಿಂದಲೋ ಸುಗಂಧ ಸೌರಭ ಸೂಸಿ ದಡಿಯನ ಮುಖವರಳಿತು. ಮಂಚದಿಂದ ಎದ್ದವನೇ ’ಅಬ್ಬ ಕೊನೆಗೂ ವಸಂತ ಬಂದ’ ಎಂದು ಕುಣಿದು ಕುಪ್ಪಳಿಸಿದ. ಮನೆಯ ಕಿಟಕಿಗಳನ್ನು ತೆರೆದ.
< 3 >
 ಓ ಅದೊಂದು ಅದ್ಭುತ ನೋಟ!
ತೋಟದ ಹೊರಗೋಡೆಯಲ್ಲಿ ಸಣ್ಣದೊಂದು ಸಂದು ಮಾಡಿಕೊಂಡು ಮಕ್ಕಳು ನುಗ್ಗಿ ಬರುತ್ತಿದ್ದರು. ಬಂದವರೇ ಮರಗಳ ಕೊಂಬೆರೆಂಬೆಗಳನ್ನೇರಿ ಜೋಕಾಲಿಯಾಡುತ್ತಿದ್ದರು. ಮರಗಳಿಗೂ ಮಕ್ಕಳನ್ನು ನೋಡಿ ಸಂತೋಷವಾಗಿ ಮೈಕೈಯೆಲ್ಲ ಹೂಗಳನ್ನು ಮುಡಿದು ಸ್ವಾಗತಿಸುತ್ತಿದ್ದವು. ಮಕ್ಕಳ ತಲೆಯ ಮೇಲೆ ಹಸಿರೆಲೆಗಳನ್ನು ನವಿರಾಗಿ ಸೋಕಿಸುತ್ತಿದ್ದವು. ಹಕ್ಕಿಗಳು ಸಂಭ್ರಮದಿಂದ ಕಲರವ ಮಾಡುತ್ತಿದ್ದವು. ಹುಲ್ಲಿನೊಳಗಿಂದ ಹೊರಬಂದ ಹೂಗಳು ಚಂದದ ಮೊಗದಿಂದ ನಗುತ್ತಿದ್ದವು. ಅಲ್ಲಿದ್ದ ಪ್ರತಿ ಮರದ ಮೇಲೂ ಒಬ್ಬನಾದರೂ ಹುಡುಗ ಕುಳಿತಿದ್ದ.
ಮನಮೋಹಕವೂ ರಮಣೀಯವೂ ಆದ ನೋಟವದು. ಆದರೆ ತೋಟದ ದೂರದ ಒಂದು ಮೂಲೆಯಲ್ಲಿ ಮಾತ್ರ ಇನ್ನೂ ಇಬ್ಬನಿ ಹೆಪ್ಪುಗಟ್ಟಿತ್ತು. ಅಲ್ಲೊಬ್ಬ ಪುಟ್ಟ ಹುಡುಗ ನಿಂತುಕೊಂಡಿದ್ದ. ಅವನೆಷ್ಟು ಪುಟ್ಟ ಹುಡುಗನೆಂದರೆ ಮರದ ಕೊಂಬೆಗಳತ್ತ ಕೈಚಾಚಿದರೆ ನಿಲುಕುತ್ತಲೇ ಇರಲಿಲ್ಲ. ಮರದ ಸುತ್ತಲೂ ಸುತ್ತುತ್ತ ಎಲ್ಲಿಯಾದರೂ ಹತ್ತಲು ಆಸ್ಪದವುಂಟೇ ಎಂದು ನೋಡುತ್ತಿದ್ದ. ಅಸಹಾಯಕನಾಗಿ ಅಳುತ್ತಿದ್ದ. ಮರದ ಕೊಂಬೆಗಳು ಕವಲುಗಳು ಇನ್ನೂ ಇಬ್ಬನಿಯಿಂದ ತೊಯ್ದು ಮುದ್ದೆಯಾಗಿದ್ದವು. ಮರದ ಮೇಲೆ ಇನ್ನೂ ಶೀತಗಾಳಿ ಬೀಸುತ್ತಿತ್ತು. ಹತ್ತು ಮಗೂ ಹತ್ತು ಎಂದು ಮರ ಪಿಸುಗುಡುತ್ತಿತ್ತು. ತನ್ನ ರೆಂಬೆಗಳನ್ನು ಸಾಧ್ಯವಾದಷ್ಟೂ ಕೆಳಕ್ಕೆ ಚಾಚುತ್ತಿತ್ತು. ಆದರೆ ಆ ಪುಟ್ಟ ಹುಡುಗನವರೆಗೂ ಅವು ತಲಪಲಾಗುತ್ತಿಲ್ಲ.
ಅದನ್ನು ನೋಡುತ್ತಿದ್ದಂತೆ ದಡಿಯನ ಹೃದಯ ಕರಗಿತು. ’ನಾನೆಷ್ಟು ಸ್ವಾರ್ಥಿಯಾಗಿದ್ದೆ’ ಎಂದು ಮನಸಿನಲ್ಲೇ ಅಂದುಕೊಂಡ. ’ಅದಕ್ಕೇ ಇಲ್ಲಿಗೆ ವಸಂತ ಬರಲಿಲ್ಲ, ನಾನೀಗಲೇ ಹೋಗಿ ಆ ಪುಟ್ಟ ಕಂದನನ್ನು ಮರದ ಮೇಲೆ ಕೂರಿಸುವೆ, ಆಮೇಲೆ ಈ ಗೋಡೆಯನ್ನು ಬೀಳಿಸುವೆ, ನನ್ನ ತೋಟ ಮಕ್ಕಳಾಟಕ್ಕೆ ಒದಗಲಿ, ಅದು ಎಂದೆಂದೂ ಮಕ್ಕಳ ತೋಟವಾಗಲಿ’ ಎಂದುಕೊಂಡ. ಇದುವರೆಗೆ ಆದುದಕ್ಕೆ ಬಲು ಪರಿತಾಪ ಪಟ್ಟ.
ಮೆಲ್ಲನೆ ಮನೆಯ ಬಾಗಿಲನು ತೆರೆದು ತೋಟದ ಒಳಹೊಕ್ಕ. ಮಕ್ಕಳು ಅವನನ್ನು ನೋಡಿದ್ದೇ ಚೆಲ್ಲಾಪಿಲ್ಲಿಯಾಗಿ ಫೇರಿ ಕಿತ್ತು ಓಡಿಹೋದರು. ತೋಟದಲ್ಲಿ ಮತ್ತೆ ಚಳಿಗಾಲ ಅಮರಿಕೊಂಡಿತು. ಆದರೆ ಆ ಪುಟ್ಟ ಹುಡುಗ ಮಾತ್ರ ಅಲ್ಲೇ ನಿಂತಿದ್ದ. ಅವನ ಕಣ್ಣುಗಳಲ್ಲಿ ಕಂಬನಿ ತುಂಬಿದ್ದರಿಂದ ದಡಿಯ ಬಂದಿದ್ದನ್ನು ಅವನು ನೋಡಲಿಲ್ಲ. ದಡಿಯನು ಆ ಮಗುವನ್ನು ಹೂವಿನಂತೆ ಮೇಲೆತ್ತಿ ಮರದ ಮೇಲೆ ಕುಳ್ಳಿರಿಸಿದ. ಕೂಡಲೇ ಮರವು ನಲಿದಾಡಿ ತಳಿರು ಹೊದೆಯಿತು. ಹಸಿರೆಲೆಗಳ ನಡುವಿನಿಂದ ತಂಬೆಲರು ತೂರಿ ಹೂಗಳು ಅರಳಿ ಕಂಪು ಸೂಸಿದವು. ಎಲ್ಲೆಲ್ಲಿಂದಲೋ ಹಕ್ಕಿಗಳು ಕುಣಿದು ಬಂದು ಪಂಚಮ ಸ್ವರವಲ್ಲರಿಯ ಗಾನವಾಡಿದವು. ಪುಟ್ಟ  ಹುಡುಗನು ಕಿಲಕಿಲ ನಗುತ್ತಾ ದಡಿಯನ ಕೊರಳ ಸುತ್ತ ತೋಳು ಬಳಸಿ ಅವನಿಗೊಂದು ಮುತ್ತು ಕೊಟ್ಟ. ದಡಿಯ ರೋಮಾಂಚನಗೊಂಡ. ಅವನ ಕಠೋರ ಹೃದಯ ಕುಸುಮದಂತೆ ಮೃದುವಾಯಿತು.
ದೂರದಿಂದ ಇಣುಕಿ ನೋಡುತ್ತಿದ್ದ ಮಕ್ಕಳಿಗೆ ದಡಿಯ ಒಳ್ಳೆಯವನು ಎನಿಸಿತು. ಕೂಡಲೇ ಅವರು ಕೇಕೆ ಹಾಕುತ್ತಾ ತೋಟದೊಳಕ್ಕೆ ಓಡಿ ಬಂದರು. ಅವರ ಹಿಂದೆಯೇ ವಸಂತನಾಗಮನವೂ ಆಗಿ ತೋಟ ನಳನಳಿಸಿತು. ದಡಿಯನು ’ಮಕ್ಕಳೇ ಇನ್ನು ಮುಂದೆ ಈ ತೋಟ ನಿಮ್ಮದೇ’ ಎಂದು ಕೂಗಿ ಹೇಳಿ ತಾನು ಹಾಕಿದ್ದ ಬೋರ್ಡನ್ನು ಕಿತ್ತು ಬಿಸಾಡಿದ ಗೋಡೆಯನ್ನು ಒಡೆದು ಹಾಕಿದ. ಸಂತೆಗೆಂದು ಹೊರಟಿದ್ದ ಊರಜನ ಮಕ್ಕಳೊಂದಿಗೆ ಆಡುತ್ತಿದ್ದ ದಡಿಯನನ್ನೂ ಸ್ವರ್ಗದಂತಿದ್ದ ತೋಟವನ್ನೂ ನೋಡಿ ಬೆರಗಾದರು. ಇಂಥ ಸುಂದರವಾದ ತೋಟವನ್ನು ತಾವೆಂದೂ ಕಂಡಿದ್ದೇ ಇಲ್ಲವೆಂದು ಮಾತಾಡಿಕೊಂಡರು.
< 4 >
 ಅವರು ದಿನವೆಲ್ಲ ಆಡಿದರು, ಹಾಡಿ ಕುಣಿದರು, ಸಂಜೆ ಹತ್ತಿರವಾಗುತ್ತಿದ್ದಂತೆ ಮಕ್ಕಳೆಲ್ಲ ದಡಿಯನಿಗೆ ವಂದಿಸಿ ತಮ್ಮ ಮನೆಗಳಿಗೆ ಹಿಂದಿರುಗಿದರು.
’ಆದರೆ ನಾನು ಮರದ ಮೇಲೆ ಕೂರಿಸಿದೆನಲ್ಲ ಆ ಪುಟ್ಟ ಎಲ್ಲಿ?’ ಎಂದು ಅವನು ಕಕ್ಕುಲತೆಯಿಂದ ಕೇಳಿದ. ಆ ಹುಡುಗ ನೀಡಿದ ಸವಿಮುತ್ತಿನ ಮಾಧುರ್ಯವನ್ನು ಅವನಿನ್ನೂ ಮೆಲುಕು ಹಾಕುತ್ತಿದ್ದ. ಆ ಹುಡುಗನ ಬಗ್ಗೆ ಏನೋ ಒಂದು ಮಮತೆ ವಾತ್ಸಲ್ಯ ಮೂಡಿತ್ತು.
ಎಲ್ಲ ಮಕ್ಕಳೂ ’ನಮಗೆ ಗೊತ್ತಿಲ್ಲ, ಅವನು ಹೋಗಿರಬಹುದು’ ಎಂದರು.
’ನಾಳೆಯೂ ಕಂಡಿತ ಬರಬೇಕೆಂದು ಅವನಿಗೆ ಹೇಳಿ’ ಎಂದು ಹೇಳಿದ್ದಕ್ಕೆ ಮಕ್ಕಳು ’ಇಲ್ಲ ಅವನಾರೆಂದೇ ನಮಗೆ ತಿಳಿಯದು, ಇವೊತ್ತೇ ನಾವು ಅವನನ್ನು ನೋಡಿದ್ದು’ ಎಂದಾಗ ದಡಿಯನಿಗೆ ತುಂಬಾ ಬೇಸರವಾಯಿತು.  
ಪ್ರತಿದಿನ ಶಾಲೆ ಮುಗಿದಾಗ ಮಕ್ಕಳು ತೋಟಕ್ಕೆ ಬಂದು ದಡಿಯನ ಜೊತೆ ಆಡುತ್ತಿದ್ದರು. ಆದರೆ ಅವನ ಪ್ರೀತಿಯ ಪುಟ್ಟ ಹುಡುಗ ಮಾತ್ರ ಬರಲೇ ಇಲ್ಲ. ದಡಿಯ ಎಲ್ಲ ಮಕ್ಕಳನ್ನೂ ಪ್ರೀತಿಯಿಂದ ಕಾಣುತ್ತಿದ್ದ. ಆದರೆ ಅವನ ಮೊದಲ ಪುಟ್ಟ ಗೆಳೆಯನ ಮೇಲೆ ಅವನಿಗೆ ವಿಶೇಷ ಅಕ್ಕರೆಯಿತ್ತು. ಯಾವಾಗಲೂ ಅವನ ಬಗ್ಗೆಯೇ ಮಾತನಾಡುತ್ತಿದ್ದ. ’ಹೇಗಾದರೂ ಅವನನ್ನು ಕಾಣಲೇಬೇಕು’ ಎಂದುಕೊಳ್ಳುತ್ತಿದ್ದ. 
ವರ್ಷಗಳೇ ಕಳೆದು ಹೋದವು, ದಡಿಯ ಮುದುಕನಾದ, ದೇಹದ ಕಸುವು ಕಡಿಮೆಯಾಯಿತು. ಮುನ್ನಿನಂತೆ ಅವನು ಆಡಲಾಗುತ್ತಿಲ್ಲ, ದೊಡ್ಡದಾದ ಆರಾಮಕುರ್ಚಿಯಲ್ಲಿ ಕುಳಿತು ಮಕ್ಕಳಾಟವನ್ನು ನೋಡುವುದೇ ಅವನ ದಿನಚರಿಯಾಯಿತು, ತನ್ನ ತೋಟದ ಬಗ್ಗೆ ಅವನಿಗೆ ಹೆಮ್ಮಯೆನಿಸಿತು. ’ನನ್ನಲ್ಲಿ ಎಷ್ಟೋ ಸುಂದರ ಹೂಗಳಿವೆ, ಆದರೆ ಮಕ್ಕಳು ಮಾತ್ರ ಎಲ್ಲ ಹೂಗಳಿಗಿಂತ ಮಿಗಿಲು’ ಎಂದುಕೊಂಡ.
ಒಂದು ಚಳಿಗಾಲದ ಮುಂಜಾನೆ ಅವನು ಬಟ್ಟೆ ಉಡುತ್ತಿರುವಾಗ ಕಿಟಕಿಯಾಚೆ ನೋಡಿದ. ಈಗವನು ಚಳಿಯನ್ನು ದ್ವೇಷಿಸುತ್ತಿಲ್ಲ, ಅವನಿಗೆ ಗೊತ್ತು ವಸಂತನ ನಿದ್ದೆಯ ಕಾಲವದು ಮತ್ತು ಹೂಗಳಿಗೂ ವಿಶ್ರಾಂತಿ ಬೇಕೆಂದು.
ಇದ್ದಕ್ಕಿದ್ದಂತೆ ಅವನು ಅಚ್ಚರಿಯಿಂದ ಕಣ್ಣಗಲಿಸಿ ನೋಡಿದ, ದೂರದ ಮೂಲೆಯತ್ತ ದೃಷ್ಟಿಸಿ ನೋಡಿದ. ಅದು ನಿಜವಾಗಿಯೂ ಒಂದು ಅನುಪಮ ಕಾಣ್ಕೆ. ತೋಟದ ದೂರದ ಮೂಲೆಯಲ್ಲಿನ ಆ ಮರ ಕಣ್ಣಿಗೆ ಹಬ್ಬದಂತೆ ಬಲು ಮೋಹಕವಾದ ಬಿಳಿಯ ಹೂಗಳನ್ನು ಧರಿಸಿತ್ತು. ಅದರ ಬಂಗಾರದ ಕೊಂಬೆಗಳಲ್ಲಿ ಬೆಳ್ಳಿಯ ಹಣ್ಣುಗಳು ಜೋತಾಡುತ್ತಿದ್ದವು. ಕೆಳಗೆ ಅವನು ಅತಿಯಾಗಿ ಹಚ್ಚಿಕೊಂಡಿದ್ದ ಅದೇ ಹುಡುಗ ನಿಂತಿದ್ದ.
ಸಂತೋಷಾತಿರೇಕದಿಂದ ದಡಿಯ ಅಲ್ಲಿಗೆ ಧಾವಿಸಿ ಓಡಿದ. ಹುಲ್ಲು ಸಸಿ ಪೊದೆ ಗಿಡಗಳನ್ನು ದಾಟಿ ಮಗುವಿನ ಬಳಿ ಬಂದ. ಆದರೆ ಮಗುವನ್ನು ನೋಡುತ್ತಿದ್ದಂತೆ ಅವನ ಮುಖ ಕೆಂಪಾಯಿತು, ಕೋಪದಿಂದ ಅವನು ಕುದಿಯ ತೊಡಗಿದ. ’ಯಾರು? ಯಾರದು ಈ ಪುಟ್ಟ ಕಂದನಿಗೆ ಹೊಡೆದವರು? ರಕ್ತ ಸುರಿಯುವಂತೆ ಗಾಯಗೊಳಿಸಲು ಮನಸ್ಸಾದರೂ ಹೇಗೆ ಬಂತು’ ಎಂದು ಕಿರುಚಾಡಿದ. ಏಕೆಂದರೆ ಆ ಮಗುವಿನ ಎರಡೂ ಅಂಗೈ ತೂತಾಗಿತ್ತು ಪಾದಗಳಲ್ಲೂ ತೂತಾಗಿತ್ತು.
< 5 >
’ಮಗುವೇ ಹೇಳಪ್ಪಾ ಯಾರು ನಿನಗೆ ಹೀಗೆ ಮಾಡಿದ್ದು, ಈಗಲೇ ದೊಡ್ಡದೊಂದು ಕೊಡಲಿ ತೆಗೆದುಕೊಂಡು ಹೋಗಿ ಅವನ್ನು ಅಡ್ಡಡ್ಡ ಸಿಗಿದು ಹಾಕುವೆ’ ಎಂದ.
’ಇಲ್ಲ, ಇವು ಪ್ರೀತಿಯಿಂದಾದ ಗಾಯಗಳು’ ಎಂದಿತು ಆ ಮಗು.
’ಏನು!?’  ದಡಿಯನ ಗಂಟಲುಬ್ಬಿತು. ಅವನು ಮಗುವಿನ ಮುಂದೆ ಮಂಡಿಯೂರಿ ಕುಳಿತ.
ಅವನನ್ನು ನೋಡಿ ಮಗು ಮುಗುಳುನಗೆ ನಕ್ಕಿತು. ’ನಿನ್ನ ತೋಟದಲ್ಲಿ ನನಗೆ ಆಡಲು ಬಿಟ್ಟೆಯಲ್ಲವೇ, ಇಂದು ನೀನು ನನ್ನ ತೋಟಕ್ಕೆ ಬಾ, ಸ್ವರ್ಗವೇ ನನ್ನ ತೋಟ’ ಎಂದಿತು.

ಮಧ್ಯಾಹ್ನ ಶಾಲೆ ಬಿಟ್ಟಾಗ ಮಕ್ಕಳೆಲ್ಲ ಬಂದು ನೋಡಿದ್ದೇನು? ದಡಿಯ ಮರದ ಕೆಳಗೆ ಸುವಾಸಿತ ಬಿಳಿಯ ಹೂಗಳನ್ನು ಹೊದ್ದು ಮಲಗಿದ್ದ.

3 ಕಾಮೆಂಟ್‌ಗಳು:

David Arulappa ಹೇಳಿದರು...

A beautiful story written with a simple style with the natural village feelings and sentiments evokes lot of intrest in the minds of the readers. The story is all about how the nature reacts to our feelings of good and bad. When we are generous the nature is kind. I liked this story and hearty congratulations for posting this.

cmariejoseph.blogspot.com ಹೇಳಿದರು...

ಇದು ನಾನು ಬರೆದ ಕತೆಯಲ್ಲ. ಇಂಗ್ಲಿಷಿನ The Selfish Giant ಎಂಬ ಕತೆಯ ರೂಪಾಂತರ.

ಅನಾಮಧೇಯ ಹೇಳಿದರು...

ಸೊಗಸಾದ ಅನುವಾದ, ಕತೆ ತುಂಬ ಚೆನ್ನಾಗಿದೆ.

RAJ.C.A