ಶನಿವಾರ, ಅಕ್ಟೋಬರ್ 29, 2016

ಲಡಾಖಿನಲ್ಲಿ ನೋವಿನಿರುಳು

ಲೆಹ್ ಎಂದಾಕ್ಷಣ ನೆನಪಿಗೆ ಬರುವುದು ಹಿಮಾಲಯದ ತಾಣ, land of the broken moon, ಹಿಮಪಾತ, ಸ್ನೋಬಾಲ್ ಆಟ, ಸ್ಕೇಟಿಂಗು, ಪೋಲೊ, ಸಿಂಧೂನದಿ, ಝಂಸ್ಕಾರ್ ನದಿ, ಹೆಪ್ಪುಗಟ್ಟಿದ ನದಿ ಮೇಲ್ಮೈ, ಬೆಟ್ಟದ ಮೇಲೆ ಸದಾ ಹಿಟ್ಟು ಸುರಿದಂತೆ ತೋರುವ ಹಿಮ, ನಾಯಕ ನಾಯಕಿಯರು ನರ್ತಿಸುವ ಸಿನಿಮಾ ನೋಟಗಳು ಇವೆಲ್ಲ ನೆನಪಾಗಿ ವಾವ್ ಎಂಬ ಉದ್ಗಾರ ಬರುವುದು ಸಹಜ. ಹದಿನಾರು ವರ್ಷಗಳ ಹಿಂದೆ ನಾನು ಲೆಹ್ ಭೇಟಿ ಕೊಟ್ಟಾಗ ನನ್ನ ವಯಸ್ಸು ಮುವ್ವತ್ತಾರು. ಆಗ ಅದು ಪುಟಿದಿದ್ದ ಯೌವನದ ಕಾಲ.

ಈಗ ೨೦೧೬ರಲ್ಲಿ ನನಗೆ ಐವತ್ತೆರಡು ವರ್ಷ, ಬಿಪಿ ಮತ್ತು ಬಿಪಿಎಚ್ ಎರಡೂ ಅಮರಿಕೊಂಡಿವೆ. ಮನಸ್ಸಿಗೆ ಎಷ್ಟೇ ಉಲ್ಲಾಸವಿದ್ದರೂ ದೇಹದ ಕಸುವು ಕಡಿಮೆಯಿದೆ. ಅಂದು ಮೈನಸ್ ಇಪ್ಪತ್ತು ಡಿಗ್ರಿ ಕಠಿಣ ವಾತಾವರಣದಲ್ಲಿ ಸಂತೆಬೀದಿ ಮತ್ತು ಪ್ರವಾಸಿತಾಣಗಳನ್ನು ಉತ್ಸಾಹದಿಂದ ಓಡಾಡುತ್ತಾ ಕಳೆದಿದ್ದೆ. ಅದು ನನ್ನ ಜೀವನದ ಎಂದೂ ಮರೆಯಲಾಗದ ಅನುಭವವಾಗಿತ್ತು. ಇಂದು ಮೈನಸ್ ಒಂಬತ್ತು, ಮೈನಸ್ ಆರು ಇದ್ದರೂ ಸ್ಟಾರ್ ಹೋಟೆಲಿನ ಶೊಫಾಝ್ ಸಾಂತ್ರಲ್ (ಫ್ರೆಂಚ್ ಭಾಷೆಯಲ್ಲಿ ಶೊಫಾಝ್ ಸಾಂತ್ರಲ್ ಎಂದರೆ ಸೆಂಟ್ರಲಿ ಹೀಟೆಡ್) ವಾತಾವರಣದಲ್ಲಿ ಬೆಚ್ಚಗೆ ಹೊದ್ದು ಮಲಗಿರಬೇಕೆನಿಸುತ್ತಿದೆ. 

ಅಂದಿಗೂ ಇಂದಿಗೂ ಲೇಹ್ ಹವಾಗುಣದಲ್ಲಿ ಏನೂ ಬದಲಾಗಿಲ್ಲ. ಪಟ್ಟಣ ಬೆಳೆದಿದೆಯಷ್ಟೇ. ಆದರೆ ಅಂದಿಗಿಂತಲೂ ಇಂದು ನನಗೆ ಆಕ್ಸಿಜನ್ ಕೊರತೆ ಹೆಚ್ಚು ಕಾಡುತ್ತಿದೆ. ಮೊದಲ ಮೂರು ದಿನವಂತೂ ತಲೆನೋವು ಬಿಡಲೇ ಇಲ್ಲ. ನಗುನಗುತ್ತಾ ಮಾತನಾಡುವುದೇ ಕಷ್ಟ. ಎಲ್ಲರ ಪಾಡೂ ಅದೇ ಆಗಿತ್ತು. ಎಲ್ಲರೂ ಯಾವುದೋ ದುಃಖ ದುಗುಡವನ್ನು ಮನದಲ್ಲಿ ಹೊತ್ತ ಹಾಗೆ, ಯಾರೋ ಆತ್ಮೀಯರನ್ನು ಕಳೆದುಕೊಂಡ ಹಾಗೆ ಇದ್ದೆವು. ಯಾವುದೋ ಸೂತಕ ಹಿಡಿದುಕೊಂಡವರಂತೆ, ಅವ್ಯಕ್ತ ನೋವು ಮನವನ್ನು ತುಂಬಿಕೊಂಡಂತೆ, ಯಾವುದೋ ಹೇಳಿಕೊಳ್ಳಲಾಗದ ಯಾತನೆಯಲ್ಲಿದ್ದಂತೆ, ಎಷ್ಟು ಬೇಕೋ ಅಷ್ಟು ಮಾತಾಡುತ್ತಾ, acclimatization ಗೆ ಹೊಂದಿಕೊಳ್ಳುತ್ತಾ, ಪೇಪರು ಮ್ಯಾಗಝಿನ್ನು ಪುಸ್ತಕಗಳನ್ನೂ ಓದಲಾಗದೆ, ಹೊರಗಿನ ರಮಣೀಯ ದೃಶ್ಯಗಳನ್ನೂ ಆಸ್ವಾದಿಸಲಾಗದೆ, ರುಚಿಕರ ತಿಂಡಿಗಳನ್ನೂ ಮನಪೂರ್ವಕ ಸವಿಯಲಾಗದೆ ಮ್ಲಾನವದನರಾಗಿದ್ದೆವು. ಆಗಾಗ್ಗೆ ಹೋಟೆಲಿನ ರಿಸೆಪ್ಷನ್ನಿಗೆ ಹೋಗಿ ಆಕ್ಸಿಜನ್ ಲೆವೆಲ್ ಚೆಕ್ ಮಾಡಿಸೋದು. ಏನೋ ಒಂತರಾ ಸಮಾಧಾನ ಪಟ್ಟುಕೊಳ್ಳೋದು.

ನಾವಿದ್ದದ್ದು ಸ್ಟಾರ್ ಹೋಟೆಲು. ಹೋಟೆಲ್ ಗ್ರಾಂಡ್ ಡ್ರಾಗನ್ ಅನ್ತ. ಕಂಪೆನಿಯ ವತಿಯಿಂದ ನಮಗಾಗಿ ಕಾದಿರಿಸಿದ್ದರು. ಹಲವಾರು ವಿದೇಶೀಯರೂ ಅಲ್ಲಿ ತಂಗಿದ್ದರು. ಜಿಮ್, ಟ್ರೆಡ್ ಮಿಲ್ಲು, ಸೈಕ್ಲಿಂಗು, ಕೇರಂ, ಚೆಸ್, ಟಿಟಿ, ಸ್ನೂಕರ್ ಎಲ್ಲವೂ ಇತ್ತು. ಪವರ್ ಬ್ಯಾಕಪ್ ಇತ್ತು. ಊಟವಂತೂ ಸಕ್ಕತ್. ಬಫೆಯ ಬೆಲೆ ರೂ. ೧೨೦೦. ಆದರೆ ನಮಗೆ ಫ್ರೀ.

ಸ್ಟಾರ್ಟರ‍್ಸ್ ಅನ್ತ ಗಾರ್ಲಿಕ್ ಸೂಪ್ಚಿಕನ್ ಸೂಪ್, ಸೌತ್ ಇಂಡಿಯನ್ ರಸಮ್ ಕೊಡೋರು. ಆಮೇಲೆ ಹಣ್ಣುಗಳು. ಏಪ್ರಿಕಾಟು, ಕರಬೂಜ, ಕಿವಿ, ಅಂಜೂರ, ಪಪಾಯ, ಮಾವು ಅಲ್ಲದೆ ಇನ್ನೂ ಹೆಸರು ಗೊತ್ತಿಲ್ಲದ ಎಷ್ಟೋ ಹಣ್ಣುಗಳು. ನೀಟಾಗಿ ಚೂರು ಚೂರು ಮಾಡಿ ಇಟ್ಟಿರುತ್ತಿದ್ದರು. 

ಊಟಕ್ಕೆ ಕಾಶ್ಮೀರಿ ಬಿರಿಯಾನಿ, ಆಫ್ಗನ್ ಬಿರಿಯಾನಿ, ವೆಜ್ ಪುಲಾವ್, ಬಿಳಿಯನ್ನ, ದಾಲ್ ಫ್ರೈ, ವೆಜ್ ಮಸಾಲ, ಮೊಸರು, ಚಿಕನ್ ಕಬಾಬ್, ಮಟನ್ ಕಟ್ಲೆಟ್, ಹುರಿದ ಅಣಬೆ, ಮುಳ್ಳಿಲ್ಲದ ಹುರಿದ ಮೀನು, ಮೊಟ್ಟೆಯ ಚೂರುಗಳು, ಮಸಾಲೆ ಆಮ್ಲೆಟ್ಟು, ಹುರಿದ ಮೊಟ್ಟೆ ಪಲ್ಯ, ಸಾದಾ ಆಮ್ಲೆಟ್ಟು, ಹಸಿ ತರಕಾರಿ ಚೂರುಗಳು, ಬ್ರೆಡ್ಡು ಬೆಣ್ಣೆ, ಕೇವಾ ಚಹ, ಖೀರು, ಜಾಮೂನು, ಕೇಕು, ಐಸ್ ಕ್ರೀಮು, ಬೋರ್ನ್‌ವಿಟಾ, ಕಾಫೀ, ಬಿಸಿಹಾಲು, ಒಣಹಣ್ಣಚೂರುಗಳು, ಗೋಡಂಬಿ, ಬಾದಾಮಿ ಇತ್ಯಾದಿ ಇತ್ಯಾದಿ. 

ನನಗಾಗ ತಪಸ್ಸುಕಾಲ. ಮಾಂಸ ಮುಟ್ಟೋಹಾಗಿಲ್ಲ. ಅದು ಬಿಟ್ಟು ಉಳಿದೆಲ್ಲವನ್ನೂ ತಟ್ಟೆಗೆ ಹಾಕಿಕೊಂಡು ಬಂದು ಟೇಬಲಿನಲ್ಲಿ ಕೂತುಕೊಳ್ಳೋದು. ಎಲ್ಲವನ್ನೂ ಒಂದು ಚೂರು ರುಚಿ ನೋಡೋದು. ಯಾವುದು ಚೆನ್ನಾಗಿರುತ್ತೋ ಅದನ್ನು ಮತ್ತೆ ಎದ್ದು ಹೋಗಿ ತರೋದು. ಇನ್ನೊಬ್ಬರಿಗೂ ಇಂತದು ಚೆನ್ನಾಗಿದೆ ತಗೊಳಿ ಅನ್ತ ಹುರಿದುಂಬಿಸೋದು. ಯಾರೂ ನಗದೇ ಇದ್ರೂ ಜೋಕ್ ಕಟ್ ಮಾಡೋದು. ಹಣ್ಣುಹಂಪಲು, ಖೀರು, ಡ್ರೈಫ್ರೂಟ್ಸ್, ಹಸಿತರಕಾರಿ ಇಷ್ಟರಲ್ಲೇ ಕಾಲ ತಳ್ಳಿದೆ. ಹೊಟೆಲಿನವರು ದಿನಕ್ಕೆರಡು ಬಾಟಲ್ ಮಿನರಲ್ ವಾಟರ್ ಕೊಡ್ತಾ ಇದ್ರು. ರೂಮಿನಲ್ಲಿದ್ದ ಕೆಟಲಿನಲ್ಲಿ ಅದನ್ನು ಬಿಸಿ ಮಾಡ್ಕೊಂಡು ಕುಡೀತಾ ಇದ್ದೆ. 

ನಾಲ್ಕನೇ ದಿನಕ್ಕೆ ಏನಾಯ್ತು ಅಂದರೆ, ಹೊಟ್ಟೆ ನುಲಿಯೋಕೆ ಶುರುವಾಯ್ತು. ಮನೆಯಿಂದ ಜೀರಿಗೆ ಪುಡಿ ತಗೊಂಡು ಹೋಗಿದ್ನಲ್ಲಾ, ಬಿಸಿನೀರಿಗೆ  ಹಾಕಿ ಕುಡಿದೆ, ಹೋಟೆಲಿನವರು ಜಾಯಿಕಾಯಿ ರಸ ಅನ್ತ ಕೊಟ್ರು ಕುಡಿದೆ, ಏನೂ ಸರಿಹೋಗಲಿಲ್ಲ. ಬೆಂಗಳೂರಿನಿಂದ ಹೊರಡೋ ಮುಂಚೆ ಕಂಪೆನಿಯವರು ನಮಗೆ first aid kit ಅನ್ತ ಕೊಟ್ಟಿದ್ದರು. Acclimatization ಗೆ  Dimex  ಅನ್ನೋ ಮಾತ್ರೆ, ಜ್ವರಕ್ಕೆ  ಪ್ಯಾರಸಿಟಮಾಲ್ ಮುಂತಾದ ಮಾತ್ರೆಗಳು ಗೊತ್ತಿದ್ವು. ಆದರೆ ಹೊಟ್ಟೆನೋವಿಗೆ ಯಾವುದು ಅನ್ತ ಗೊತ್ತಾಗಲಿಲ್ಲ. ನನ್ನ ಸಹೋದ್ಯೋಗಿ ರವಿಶಂಕರ್ ಅವರ ಅಕ್ಕನ ಮಗಳು ಡಾಕ್ಟರು ಅನ್ತ ಅವರಿಗೆ ಫೋನ್ ಮಾಡಿ ನಮ್ಮಲ್ಲಿದ್ದ ಮಾತ್ರೆಗಳ ಹೆಸರು ಹೇಳಿ ಯಾವುದು ಹೊಟ್ಟೆನೋವಿಗೆ ಎಂದು ತಿಳಿದುಕೊಂಡರು. ಆದರೆ ನಾನು ಮಾತನಾಡಲೂ ಆಗದೆ ಕುರ್ಚಿಯಲ್ಲಿ ಕೂತುಕೊಳ್ಳಲೂ ಆಗದೆ ಚಡಪಡಿಸುತ್ತಾ ಇದ್ದೆ. ಕರುಳುಗಳೆಲ್ಲ ಹಿಂಡಿದಂತೆ, ಹೊಕ್ಕಳ ಮೇಲೆ ಒನಕೆಯಿಂದ ಕುಟ್ಟಿದಂತೆ ವಿಲ ವಿಲ ಒದ್ದಾಡಿಬಿಟ್ಟೆ. ನೆಟ್ಟಗೆ ನಿಂತುಕೊಳ್ಳಲೂ ಆಗದಷ್ಟು ಹಿಂಸೆ. ಹೊಕ್ಕಳ ಬಳಿ ಮುಟ್ಟಿದರೆ ಕರೆಂಟ್ ಶಾಕ್ ಹೊಡೆದ ಅನುಭವ.

ಹೋಟೆಲಿನವರು ಗಾರ್ಲಿಕ್ ಸೂಪು ಕುಡಿಯಲು ಕೊಟ್ಟು ರೆಸಿಡೆಂಟ್ ಡಾಕ್ಟರಿಗೆ ಫೋನ್ ಮಾಡಿದರು. ಅವರು ಬರುವುದು ಇನ್ನೂ ಒಂದು ಗಂಟೆಯಾಗುತ್ತೆ ಅನ್ತ ತಿಳಿಯಿತು. ತಕ್ಷಣ ನನ್ನನ್ನು ಕಾರಿನಲ್ಲಿ ಮಲಗಿಸಿ ಹತ್ತಿರದ ಸರ್ಕಾರಿ ಎಸ್ ಎನ್ ಎಂ ಆಸ್ಪತ್ರೆಗೆ ಕರೆದುಕೊಂಡು ಹೋದರು. ಎಮರ್ಜೆನ್ಸಿ ಡಾಕ್ಟರು ಮೊದಲಿಗೆ ಆಕ್ಸಿಜನ್ ಸ್ಯಾಚುರೇಷನ್ ಮತ್ತು ನಾಡಿಮಿಡಿತ ಪರೀಕ್ಷಿಸಿದರು. ಅದು ೯೨, ೮೬ ಇತ್ತು. ಫುಡ್ ಪಾಯಿಸನ್ ಆಗಿರಬಹುದು ಎಲ್ಲಿ ಊಟ ಮಾಡಿದಿರಿ ಎಂದು ಕೇಳಿದರು. ಹೋಟೆಲ್ ಗ್ರಾಂಡ್ ಡ್ರ್ಯಾಗನ್ ಅಂದಾಗ ಸಂದೇಹವೂ ಇಲ್ಲವಾಯಿತು. ನೀವು ಆಲ್ಕೋಹಾಲಿಕ್ ಎಂದು ಕೇಳಿದರು, ಕುಡಿತ, ಸಿಗರೇಟು ಇತ್ಯಾದಿ ಯಾವುದೂ ನನ್ನ ಜೀವಮಾನದಲ್ಲೇ ಇಲ್ಲ ಎಂದೆ.  Admit ಆಗಿ, ಬೆಳಗ್ಗೆ ಸ್ಕ್ಯಾನಿಂಗ್ ಮಾಡೋಣ ಅಂದ್ರು. ಆಗ ರಾತ್ರಿ ಹತ್ತು ಗಂಟೆ. ರಕ್ತನಾಳಕ್ಕೆ ಸೂಜಿ ಚುಚ್ಚಿ ಗ್ಲುಕೋಸಿನೊಂದಿಗೆ ದ್ರವ ಔಷಧಿ ಸೇರಿಸಿದರು.  

ನಿದ್ದೆ ಬರಲಿಲ್ಲ. ಬೆಂಗಳೂರಿನ ಆಫೀಸಿಗಾಗಲೀ ನಮ್ಮ ಮನೆಗಾಗಲೀ ವಿಷಯ ತಿಳಿಸಬಾರದು, ತಂಡದ ಉಳಿದ ಸಹೋದ್ಯೋಗಿಗಳಿಗೂ ನಾನು ಆಸ್ಪತ್ರೆಯಲ್ಲಿರುವ ವಿಷಯ ತಿಳಿಸಬಾರದು ಕೆಲಸಕ್ಕೆ ಹಿನ್ನಡೆಯಾಗುತ್ತೆ ಎಂದು ಹೇಳಿ ಬಂದಿದ್ದ ಮೂವರನ್ನೂ ವಾಪಸು ಕಳಿಸಿಬಿಟ್ಟೆ. ಬೆಳಗ್ಗೆ ಸರ್ಜರಿ ವಾರ್ಡಿಗೆ ಬದಲಾಯಿಸಿ, ಹೊಟ್ಟೆ ಸ್ಕ್ಯಾನ್ ಮಾಡಿದರು, ಎಲ್ಲಾ ನಾರ್ಮಲ್ಲು. 

ಸಂಜೆ ಸ್ವಂತ ರಿಸ್ಕ್ ಮೇಲೆ ಹೊರಗೆ ಹೋಗುತ್ತಿದ್ದೇನೆ, ಸ್ನಾನ ಊಟ ಮಾಡಿ ಇಂಜೆಕ್ಷನಿಗೆ ಮತ್ತೆ ಬಂದುಹೋಗುತ್ತೇನೆ ಎಂದು admit card ಮೇಲೆ ಬರೆದು ಬಂದೆ. ಸ್ನಾನ ಮಾಡಿ ಬಟ್ಟೆ ಬದಲಾಯಿಸಿಕೊಂಡು high tea ಗೆ ಬಂದೆ. ಎಲ್ಲರೂ ನಗುನಗುತಾ ಟೀ ಹೀರುತ್ತಾ ಇದ್ರು. ಬಿಸ್ಕತ್ತು ಕುಕ್ಕೀಸ್ ಪಫ್ಸ್ ಡ್ರೈ ಫ್ರೂಟ್ಸ್ ಟೀ ಕಾಫಿ ಹಾಲು ಇತ್ತು. ಬಿಸಿಹಾಲಿಗೆ ಬಾದಾಮಿ ಚೂರುಗಳನ್ನು ಹಾಕಿಕೊಂಡು ಕುಡಿದೆ. ಬೇರೆ ಏನೂ ತಿನ್ನಬೇಕು ಅನ್ತ ಅನಿಸಲಿಲ್ಲ. ರೂಮಿಗೆ ಹೋಗಿ ಸುಮ್ಮನೆ ಮಲಗಿದೆ. ತಂಡದವರೆಲ್ಲ ಬಂದು ಸುತ್ತಲೂ ಕುಳಿತರು. ಏನೂ ಮಾತುಕತೆ ಇಲ್ಲ. ತುಂಬಾ ಸುಸ್ತು. 
ಹೊರಗಡೆ ಕಾಲಿಟ್ರೆ ಸಾಕು, ಮೈನಸ್ ಚಳಿ ಮೈ ಹಿಂಡುತ್ತಿತ್ತು. ಎರಡು ದಿನದವರೆಗೆ ಹೀಗೆ ನಿಶ್ಯಕ್ತಿಯಿದ್ದರೂ ಕೆಲಸಕ್ಕೆ ಹೋಗಿ ಬರುತ್ತಿದ್ದೆ. ನೀರು ಬ್ರೆಡ್ಡು ಬಿಸ್ಕತ್ತು ಬಾದಾಮಿ ಪಿಸ್ತಾ ಟೀ ಇಷ್ಟರಲ್ಲೇ ಕಾಲ ತಳ್ಳುತ್ತಿದ್ದೆ. ಮನೆಯಿಂದ ಫೋನ್ ಬಂದಾಗ ಏನೂ ಆಗಿಲ್ಲ ಎಂಬಂತೆ ಮಾತಾಡುತ್ತಿದ್ದೆ. ಹಣ್ಣುಗಳನ್ನು ತಿನ್ನಲು ಹೋದರೂ ಯಾಕೋ ಮನಸಾಗತಿರಲಿಲ್ಲ. ಮಾವಿನಹಣ್ಣು ತಿನ್ನಬಾರದು. ಏಪ್ರಿಕಾಟ್ ಹಣ್ಣು ತಿನ್ನಬಾರದು ಅಂತೆಲ್ಲಾ ಹೇಳುತ್ತಿದ್ದರು

ಕಾಶ್ಮೀರ ಪ್ರದೇಶದಲ್ಲಿ ನಮ್ಮ ಪ್ರೀಪೇಡ್ ಸಿಮ್ಮುಗಳನ್ನು ಬ್ಲಾಕ್ ಮಾಡ್ತಾರೆ. ಪೋಸ್ಟ್ ಪೇಡ್ ಸಿಮ್ಮು ಮಾತ್ರ ಕೆಲಸ ಮಾಡುತ್ತೆ. ಕಂಪೆನಿಯವರು ನಮ್ಮ ಇಡೀ ತಂಡಕ್ಕೆ ಒಂದು ಪೋಸ್ಟ್ ಪೇಯ್ಡ್ ಮೊಬೈಲು ಕೊಟ್ಟಿದ್ದರು. ಅದರಲ್ಲಿ ಪರ್ಸನಲ್ ಕಾಲ್ ಮಾಡುವಂತೆ ಇಲ್ಲ. ಇನ್ನು ಹೋಟೆಲಿನ ಫೋನಿನಿಂದ ಖಾಸಗಿ ಕರೆ ಮಾಡಿದರೆ ಬಿಲ್ಲಿನಲ್ಲಿ ಅದು ದಾಖಲಾಗುತ್ತೆ ಅನ್ನೋದು ಒಂದು ಆತಂಕ. ಆದರೆ whatsapp ಮಾತ್ರ ಕೆಲಸ ಮಾಡ್ತಾ ಇತ್ತು. 

ಮನೆಯಾಕೆಯೊಂದಿಗೆ ಮಾತಾಡಿದ್ದರೆ ಮನೆವೈದ್ಯ ಹೇಳಿರುತ್ತಿದ್ದಳು. ಆದರೆ ಮನೆಯಿಂದ ಸಾವಿರಾರು ಮೈಲು ದೂರದಲ್ಲಿ ತನ್ನ ಗಂಡ ಆಸ್ಪತ್ರೆ ಸೇರಿದ್ದಾನೆಂದು ತಿಳಿದರೆ ಗಾಬರಿಯಾಗ್ತಾಳೆ ಎಂದು ಒಬ್ಬ ಆತ್ಮೀಯ ವೈದ್ಯರಿಗೆ ವಾಟ್ಸಾಪು ಸಂದೇಶ ಕಳಿಸಿ ಫೋನ್ ಮಾಡಲು ಕೇಳಿಕೊಂಡೆ. ನಮ್ಮ ದೇಹದ ನೋವನ್ನು ನಮ್ಮದೇ ಭಾಷೆಯಲ್ಲಿ ಹೇಳಿಕೊಳ್ಳುವುದಕ್ಕೂ ಇಂಗ್ಲಿಷು ಹಿಂದೀಯಂತ ಅಪರಿಚಿತ ಭಾಷೆಗಳಲ್ಲಿ ಹೇಳಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಆದರೆ ಯಾಕೋ ನನ್ನ ಅದೃಷ್ಟ ಚೆನ್ನಾಗಿರಲಿಲ್ಲ ಅನ್ಸುತ್ತೆ ಆಪ್ತವೈದ್ಯರು ತುಂಬಾ busy ಯಾಗಿದ್ದರು.

ಗರಿಗಳ ಭಾನುವಾರ ಚರ್ಚಿಗೆ ಹೋದೆ. ಇದ್ದ ಒಂದು ಹತ್ತಿಪ್ಪತ್ತು ಮಂದಿಯಲ್ಲಿ ನನ್ನ ಹೊಸಮುಖವನ್ನು ಗುರುತಿಸಿದ ಅಲ್ಲಿನ ಪಾದ್ರಿಗಳು ಹತ್ತಿರ ಬಂದು ಪರಿಚಯ ಮಾಡಿಕೊಂಡರು. ಜಗತ್ತಿನಲ್ಲಿ ಅತ್ಯಂತ ಎತ್ತರದಲ್ಲಿರುವ ಚರ್ಚು ಇದು ಎಂದರು. ಎತ್ತರದ ಬಲಿಪೀಠದಲ್ಲಿ ಪೂಜೆಯರ್ಪಿಸಿದರೆ ದೇವರಿಗೆ ಬಲುಬೇಗ ತಲಪುತ್ತದೆ ಅಲ್ಲವೇ ಎಂದು ಜೋಕ್ ಮಾಡಿದೆ. ಎತ್ತರದ ದೇವಾಲಯದಲ್ಲಿ ಪ್ರಾರ್ಥನೆ ಮಾಡಿದರೆ ಕೂಡ ದೇವರಿಗೆ ಬಹುಬೇಗ ಕೇಳಿಸುತ್ತದೆ ಎಂದರವರು. ಪ್ರಬೋಧನೆಯ ನಡುವೆ ಚರ್ಚಿನ ಸದಸ್ಯರ ಎಲ್ಲರ ಒಳಿತಿಗಾಗಿ, ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗಾಗಿ, ಕಾಯಿಲೆಯಿಂದ ಮಲಗಿರುವವರಿಗಾಗಿ, ಗಡಿಯಲ್ಲಿ ಕಾದಿರುವ ಸೈನಿಕರಿಗಾಗಿ ಪ್ರತಿಯೊಬ್ಬರ ಹೆಸರು ಹೇಳಿ ಪ್ರಾರ್ಥನೆ ಮಾಡಿದರು. ಕಾಯಿಲೆಯಿಂದ ಗುಣಹೊಂದಿ ಬಂದವರಿಗಾಗಿ ಶುಭಾಶಯ ಕೋರಿದರು. ಊರಿಗೆ ಹೊರಟಿರುವವರಿಗಾಗಿ ಶುಭ ಹಾರೈಸಿದರು. ನನ್ನ ಹೆಸರನ್ನೂ ಹೇಳಿ ನನಗೂ ನನ್ನ ಕುಟುಂಬಕ್ಕೂ ಶುಭ ಆಶಿಸಿದರು. ಬರುವ ಗುಡ್ ಫ್ರೈಡೇ ಹಾಗೂ ಈಸ್ಟರಿನ ಪಾಲುಗೊಳ್ಳುವಿಕೆಗೆ ನನ್ನನ್ನು ವಿಶೇಷವಾಗಿ ಆಮಂತ್ರಿಸಿದರು. ಅಪರಿಚಿತ ತಾಣದಲ್ಲಿ ಒಬ್ಬ ಸಾಮಾನ್ಯ ಭಕ್ತನಾದವನಿಗೆ ಅದೊಂದು ವಿಶೇಷ ಅನುಭವ. 

ಇನ್ನೂ ಕೆಲಸ ಇರುವಂತೆಯೇ ನನ್ನ ಪಾಲಿನದೆಲ್ಲ ಮುಗಿಸಿ ತಂಡದ ಪ್ರಯತ್ನಕ್ಕೆ ಕಾಯದೆ ಬುಧವಾರ ನಾನು ನವದೆಹಲಿ ಮಾರ್ಗವಾಗಿ ಬೆಂಗಳೂರಿಗೆ ವಿಮಾನ ಹತ್ತಿದೆ. ಉಳಿದವರಿಗೆ ಶುಭಶುಕ್ರವಾರದ ಮಹತ್ವದ ಬಗ್ಗೆ ಹೇಳಿ ಅಂದು ಸಂಪೂರ್ಣ ಉಪವಾಸದ ದಿನ, ಮನೆಯವರೊಂದಿಗೆ ಪ್ರತಿವರ್ಷ ದೋರನಹಳ್ಳಿಯಲ್ಲಿ ಕಳೆಯುತ್ತೇನೆ, ನನಗಾಗಿ ಅವರು ಕಾದಿರುತ್ತಾರೆ, ಇಲ್ಲಿ ನನ್ನ ಕೆಲಸವೆಲ್ಲ ಮುಗಿದಿದೆ ಎಂದು ಹೇಳಿ ಒಪ್ಪಿಸಿದ್ದೆ.

ಹೀಗೆ ತಂಡದ ಯಶಸ್ಸಿನಲ್ಲಿ ನಾನು ಆಬ್ಸೆಂಟು. ಚಳಿಯನ್ನು ಹೇಗೋ ತಡೆದುಕೊಳ್ಳಬಹುದಿತ್ತು ಆದರೆ ಹಾಳು ದೈಹಿಕ ಸುಸ್ತು ನನ್ನನ್ನು ನರಳಿಸಿಬಿಟ್ಟಿತ್ತು. ಅಲ್ಲಿ ಏರ್ ಫೋರ್ಸಿನ ಮುಖ್ಯಾಧಿಕಾರಿಗಳು ಬಂದು ತಂಡವನ್ನು ಅಭಿನಂದಿಸಿ ಬೀಳ್ಕೊಟ್ಟಾಗ ನಾನು ಬೆಂಗಳೂರಿನಲ್ಲಿದ್ದೆ. ನಮ್ಮ ಕಂಪೆನಿಯ -ಮ್ಯಾಗಝಿನ್ ನಲ್ಲಿ ತಂಡದ ಫೋಟೊ ಬಂದಾಗ ನಾನು ಅದರಲ್ಲಿರಲಿಲ್ಲ. ಪತ್ರಿಕೆಗಳಲ್ಲಿ The team has proved their sophisticated system in high altitude ಎಂಬ ಸುದ್ದಿಗಳು ಬಂದದ್ದನ್ನು ನಮ್ಮ ನೋಟೀಸ್ ಬೋರ್ಡುಗಳಲ್ಲಿ ವಾಟ್ಸಾಪ್ ಗ್ರೂಪುಗಳಲ್ಲಿ ಎಲ್ಲರೂ ಹಂಚಿಕೊಂಡರು. ಅಲ್ಲಿ ಇಲ್ಲಿ ಸಿಕ್ಕಿದವರೆಲ್ಲ ಅಭಿನಂದಿಸಿದಾಗ ನನಗೆ ಸಂತೋಷ ಎನಿಸಿದರೂ ಕರುಳು ಮತ್ತೆ ಹಿಂಡಿದಂತೆನಿಸುತ್ತಿತ್ತು.

ಕಾಮೆಂಟ್‌ಗಳಿಲ್ಲ: